ಯಾವುದೇ ಸಂಸ್ಥಾನ, ರಾಜ್ಯ, ಸಾಮ್ರಾಜ್ಯಕ್ಕೆ ಅರಸರಿರುವಮತೆ, ಅರಸಿಯರೂ ಇರುತ್ತಿದ್ದರು. ಅರಸು ಮನೆತನಗಳಲ್ಲಿ ಅರಸನಾದವನು ಹಲವಾರು ಹೆಣ್ಣುಗಳನ್ನು ವಿವಾಹವಾಗಬಹುದಾಗಿತ್ತು ಎಂಬುದನ್ನು ಇತಿಹಾಸದಿಂದ ಅರಿಯಬಹುದು. ಅರಸನನ್ನು ವಿವಾಹವಾದ ಅಂತಹ ಹೆಣ್ಣುಗಳನ್ನೆಲ್ಲಾ ಅರಸಿಯರೆಂದು ಕರೆಯಲಾಗುತ್ತಿತ್ತು. ಅದರಲ್ಲಿ ಹಿರಿಯಳಾದವಳು ಮತ್ತು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿದವಳು ಅರಸಿಯಾಗುತ್ತಿದ್ದಳು. ಇವಳಿಗಿರುವ ಅಧಿಕಾರ ಇತರೇ ಅರಸಿಯರಿಗೆ ಇರುತ್ತಿರಲಿಲ್ಲ.

ಕರ್ನಾಟಕ ನಾಯಕ ಅರಸು ಮನೆತನಗಳಲ್ಲಿ ಪಟ್ಟದ ರಾಣಿಯಾಗುವವರು ಹಲವು ಪ್ರಮುಖ ಲಕ್ಷಣಗಳನ್ನು ಉಳ್ಳವರಾಗಿರಬೇಕೆಂಬ ನಿಯಮ ಇದ್ದಿತು. ಮುಖ್ಯವಾಗಿ ಪಟ್ಟದರಸಿಯಾಗುವವಳು ಸ್ವಜಾತಿಯವಳಾಗಿರಬೇಕು. ಹಾಗೂ ವಿಜಾತಿ ಬೆಡಗಿನವಳಾಗಿರ ಬೇಕು. ಅಂಗ ಊನತೆಯುಳ್ಳವಳಾಗಿರಬಾರದು, ಎಲ್ಲಾ ರೀತಿಯಿಂದಲೂ ಸುಲಕ್ಷಣವುಳ್ಳ ವಳಾಗಿರಬೇಕು. ಅಂದರೆ ಆಚಾರ-ವಿಚಾರಗಳಲ್ಲಿ ರೂಪ ಲಾವಣ್ಯಗಳಲ್ಲಿ ಎತ್ತರದ ಸ್ಥಾನದಲ್ಲಿರಬೇಕು. ಅರಸನಿಗೆ ಸಮಾನವಾದ ಅಂತಸ್ತಿನ ಇಲ್ಲವೆ ಗೌರವಯುತ ಮನೆತನದವಳಾಗಿರಬೇಕು. ವಿವೇಕವುಳ್ಳವಳು, ಕಲೆಯ ಜ್ಞಾನವನ್ನು ಅರಿತವಳು, ಧಾರ್ಮಿಕ-ಸಹಿಷ್ಣುತೆಯುಳ್ಳವಳೂ ಆಗಿರಬೇಕಿತ್ತು. ಈ ಎಲ್ಲಾ ನಿಯಮಗಳನ್ನು ಕಡ್ಡಾಯ ವಾಗಿ ಪಾಲಿಸಲಾಗುತ್ತಿತ್ತು. ಇವರನ್ನು ‘ರಾಣಿಯರು’ ‘ನಾಗತಿಯರು’ ಎಂದು ಕರೆಯುತ್ತಿದ್ದರು.

ಪಟ್ಟದ ರಾಣಿಯು ರಾಜ್ಯಕಾರ್ಯಗಳಲ್ಲಿ ಭಾಗವಹಿಸುವ ಗುಣವುಳ್ಳವಳಾ ಗಿರುತ್ತಿದ್ದಳಲ್ಲದೇ, ಮುಖ್ಯವಾದ ರಾಜ ತಂತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಾಗೂ ಪ್ರಮುಖ ಹಬ್ಬ-ಉತ್ಸವಗಳಿಗೆ ಸಂಬಂಧಿಸಿದ ವಿಷಯಗಳನ್ನು ಸ್ವತಃ ಅರಸನು ಪಟ್ಟದರಸಿಯರೊಂದಿಗೆ ಸಮಾಲೋಚಿಸುತ್ತಿದ್ದನು. ರಾಜ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸುವ ಹಕ್ಕು ಪಟ್ಟದರಸಿಗೆ ಇತ್ತು. ದತ್ತು ಸ್ವೀಕಾರದ ಸಂದರ್ಭದಲ್ಲಿ ಈಕೆಯ ಪಾತ್ರವು ಪ್ರಮುಖವಾಗಿರುತ್ತಿತ್ತು.

ಚಿಕ್ಕವಯಸ್ಸಿನಲ್ಲಿ ಅರಸರು ಅಧಿಕಾರಕ್ಕೆ ಬಂದಾಗ ಅವರ ಆಡಳಿತದಲ್ಲಿ ಸಹಭಾಗಿಯಾಗಿ ಆಡಳಿತವನ್ನು ಮುಂದುವರೆಸಿಕೊಂಡು ಹೋದ ಅನೇಕ ಜನ ಪಟ್ಟದರಾಣಿಯರು ನಾಯಕ-ಅರಸು ಮನೆತನಗಳಲ್ಲಿ ಆಗಿ ಹೋಗಿದ್ದಾರೆ. ಅವರಲ್ಲಿ ಚಿತ್ರದುರ್ಗ, ಸುರಪುರ, ಕನಕಗಿರಿ, ಗುಡಗುಂಟಿ ಅರಸು ಮನೆತನದ ರಾಣಿಯರು ಪ್ರಮುಖರಾಗಿದ್ದಾರೆ.

೧. ಚಿತ್ರದುರ್ಗದ ಓಬಳಮ್ಮ ನಾಗತಿ

ರಾಜಾ ಮದಕರಿ ನಾಯಕ (ಕ್ರಿ.ಶ.೧೭೫೪-೧೭೭೯) ನು ಚಿತ್ರದುರ್ಗದ ಸಿಂಹಾಸನ ಏರಿದಾಗ ಆತನಿಗೆ ೧೨ ವರ್ಷ ವಯಸ್ಸಾಗಿತ್ತು. ರಾಜ್ಯಭಾರ ಹೊರುವ ಸಾಮರ್ಥ್ಯ, ಆತನಲ್ಲಿ ಇರಲಿಲ್ಲ. ಹೀಗಾಗಿ ಆತನ ಪರವಾಗಿ ಹಿರಿಯ ಮದಕರಿ ನಾಯಕ (ಕ್ರಿ.ಶ.೧೭೨೧-೧೭೪೮) ನ ಪಟ್ಟದರಾಣಿ, ಇಮ್ಮಡಿ ಕಸ್ತೂರಿ ರಂಗಪ್ಪನಾಯಕ (ಕ್ರಿ.ಶ.೧೭೪೮-೧೭೫೪) ನ ತಾಯಿ ಓಬಳಮ್ಮ ನಾಗತಿ ಎರಡು ವರ್ಷಗಳವರೆಗೆ ಚಿತ್ರದುರ್ಗದ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದಳು. ಈ ನಾಗತಿಯನ್ನು ವಂಶಾವಳಿ ಮತ್ತು ಬಖೈರ್‌ನ ಕೆಲವು ಪ್ರತಿಗಳಲ್ಲಿ ಓಬವ್ವ ನಾಗತಿ, ಓಬಳವ್ವ ನಾಗತಿ, ಓಬಕ್ಕ ನಾಗತಿ ಮುಂತಾಗಿ ಸಂಬೋಧಿಸಿದೆ.

[1] ರಾಜಾ ಮದಕರಿ ನಾಯಕನಿಗೆ ಪಟ್ಟ ನೀಡಿದವಳು ಈಕೆಯೇ. ಈಕೆಯ ಮಗ ಮೃತಪಟ್ಟಾಗ, ಮುಂದಿನ ಪಟ್ಟಾಭೀಷೇಕದ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದವು. ಆಗ ಓಬಳಮ್ಮ ನಾಗತಿಯವರು, ರಾಜಗುರು ಮುರುಘರಾಜೇಂದ್ರ ಮಹಾಸ್ವಾಮಿಗಳವರು, ಸಮಸ್ತ ದಳವಾಯಿಗಳು, ಪ್ರಧಾನಿಗಳು, ಬಲನಾಯಕರು, ಗುರಿಕಾರರು, ರಾಹುತರು ಠಾಣ್ಯದ ಸೇರುವೆಗಾರರು, ಪೇಟೆಶೆಟ್ಟಿ, ಪಟ್ಟಣಶೆಟ್ಟಿ ಪ್ರಮುಖ ವರ್ತಕರು ಮುಂತಾದವರು ಹೊಸದುರ್ಗದ ಸೇನಾಪತಿ ಹಾಗೂ ಹಿರೇ ಮದಕರಿನಾಯಕನ ಸೋದರನಾದ ದಂಡಿನ ಜಂಪಣ್ಣ ನಾಯಕನ ಪುತ್ರ ಭರಮಪ್ಪ ನಾಯಕನಿಗೆ ಪಟ್ಟಾಭಿಷೇಕ ಮಾಡಬೇಕೆಂದು ನಿಶ್ಚಯಿಸಿದರು.

ಆದರೆ ಹಿಂದಿನ ರಾತ್ರಿಯೇ ಓಬಳಮ್ಮ ನಾಗತಿಯ ಸ್ವಪ್ನದಲ್ಲಿ ಹಿರೇಮದಕರಿ ನಾಯಕನು ಕಾಣಿಸಿಕೊಂಡು ಜಾನಕಲ್ಲು ತೊದಲು ಭರಮಪ್ಪ ನಾಯಕರ ಪುತ್ರ ಮದಕರಿನಾಯಕರಿಗೆ ಪಟ್ಟ ಆಗಬೇಕು ಎಂಬುದಾಗಿ ಹೇಳಿದರೆಂದು ಮಾರನೆಯ ದಿನ ಓಬಳಮ್ಮ ನಾಗತಿ-ಸ್ವಜನರನ್ನು ಬರಮಾಡಿಕೊಂಡು ವೀರ ಚಿಕ್ಕ ಮದಕರಿ ನಾಯಕನನ್ನು ಪಟ್ಟಗಟ್ಟುವಂತೆ ಮಾಡಿದ ಸಂಗತಿ ಆಕೆಯ ರಾಜಕೀಯ ಜಾಣ್ಮೆಯನ್ನು ತೋರಿಸುತ್ತದೆ. ಈಕೆ ಅಧಿಕಾರದಲ್ಲಿದ್ದಾಗ ರಾಯದುರ್ಗದ ಸಂಸ್ಥಾನಿಕರು ಚಿತ್ರದುರ್ಗದ ಪ್ರಾಬಲ್ಯವನ್ನು ನೋಡಿ ಸಹಿಸಲಾರದೆ ಈ ಸೀಮೆ ಬಿದ್ದಾಗ, ಗಂಡೋಬಳವ್ವ ನಾಗತಿ- ವೃದ್ಧಾಪ್ಯದಲ್ಲೂ ರಾಯದುರ್ಗ ಕೃಷ್ಣಪ್ಪನೊಡನೆ ಹೋರಾಡಿದಳು[2] ಎಂಬುದು ಗಮನಿಸಬೇಕಾದ ಅಂಶ.

ಹೀಗೆ ಚಿತ್ರದುರ್ಗ ಇತಿಹಾಸದಲ್ಲಿ ರಾಜಕೀಯ ಮುತ್ಸದ್ದಿತನ ತೋರಿ ಅಧಿಕಾರ ಮಾಡಿದ ಕೀರ್ತಿ, ಈಕೆಗೆ ಸಲ್ಲುತ್ತದೆ. ತನ್ನ ಎರಡು ವರ್ಷದ ಆಡಳಿತದಲ್ಲಿ ಸುಧಾರಣೆ ಗಾಗಿ ತನ್ನ ನಿಷ್ಠುರ ಮತ್ತು ಕಠೋರ ವಾದವನ್ನು ಆಡಳಿತದಲ್ಲಿ ತೋರಿಸಿಕೊಟ್ಟಿದ್ದಲ್ಲದೆ ರಾಜ್ಯಾಡಳಿತ ಹಿಡಿತಕ್ಕೆ ಬಾರದಿದ್ದಾಗ ಕಟ್ಟಾಜ್ಞೆ, ಜಾರಿಗೆ ತರುತ್ತಾಳೆ.

೨. ಸುರಪುರದ ರಾಣಿ ಅಮ್ಮಾನಾಗತಿ (ಅವ್ವ ನಾಗತಿ)

ಪಾಮನಾಯಕನು ಕ್ರಿ.ಶ.೧೬೮೭ರಲ್ಲಿ ನಿಧನನಾದ ಮೇಲೆ ಅವನ ಅಣ್ಣನ ಮಗನಾದ ಪೀತಾಂಬರ ಬಹರಿ ಪಿಡ್ಡನಾಯಕನು ಅಧಿಕಾರಕ್ಕೆ ಬಂದನು. ಈತನ ಪ್ರಾರಂಭದ ಆಳ್ವಿಕೆಯ ಅವಧಿಯಲ್ಲಿ ಅಮ್ಮಾನಾಗತಿಯು ಸುಮಾರು ಎರಡು ವರ್ಷಗಳ ಕಾಲ ಆಡಳಿತ ಮಾಡಿದಳೆಂದು ಕೈಫಿಯತ್ತುಗಳಿಂದ ತಿಳಿದುಬರುತ್ತದೆ.[3] ಈ ರಾಣಿಯು ಸೌಂದರ್ಯದ ಖಣಿಯಾಗಿದ್ದಳೆಂದೂ, ಚತುರ ಬುದ್ದಿಯುಳ್ಳವಳೂ ಆಗಿದ್ದಳೆಂದು ತಿಳಿಯುತ್ತದೆ. ಈಕೆಯ ಅಧಿಕಾರಾವಧಿಯಲ್ಲಿ ಸುರಪುರ ಸಂಸ್ಥಾನದ ಬೇಡ ಸೈನಿಕರ ಗುಂಪು ಈಕೆಯನ್ನು ಆರಾಧ್ಯದೈವ ಹಾಗೂ ತಾಯಿಯ ಸಮಾನವೆಂದು ಭಾವಿಸಿದ್ದರು.

೩. ರಾಣಿ ಕಾಂತಮ್ಮ (ಕ್ರಿ.ಶ.೧೮೦೧೧೮೦೩)

ರಾಜಾ ಇಮ್ಮಡಿ ವೆಂಕಟಪ್ಪ ನಾಯಕನ ಪತ್ನಿ ರಾಣಿ ಕಾಂತಮ್ಮ ತನ್ನ ಮಗ ಬಾಪು ಸಾಹೇಬನ ಮಗಳಾದ ವೆಂಕಟರಂಗಮ್ಮಳನ್ನು ಸಿಂಹಾಸನದ ಮೇಲೆ ಕೂಡಿಸಿ ರಾಜ್ಯಭಾರವನ್ನು ತಾನೇ ವಹಿಸಿಕೊಂಡಿದ್ದಳು. ಆಗ ರಾಜಪರಿವಾರ ಮತ್ತು ಸೈನಿಕ ಸರದಾರರು ಸುತ್ತ ಮುತ್ತ ವೈರಿಗಳಿರುವಾಗ, ಸ್ತ್ರೀ ಸಂಸ್ಥಾನದ ಗದ್ದುಗೆಯೇರುವುದರಿಂದ ತೊಂದರೆಯಾಗುತ್ತದೆಂದು ತಿಳಿದು ಸುರಪುರದಿಂದ ಹೋಗಿ ಕರ್ನೂಲದಲ್ಲಿ ನೆಲೆಸಿದ್ದ ಮಗ ರಮಣಪ್ಪ ನಾಯಕನ ಮಗ ಪಿಡ್ಡನಾಯಕನಿಗೆ ಪಟ್ಟಕಟ್ಟಲು ಎಲ್ಲರೂ ಒಪ್ಪಿದ ಮೇಲೆ, ರಾಜಾಪಿಡ್ಡ ನಾಯಕ ಅಧಿಕಾರಕ್ಕೆ ಬಂದು ರಾಣಿ ಕಾಂತಮ್ಮಳ ಅನುಮತಿಯಂತೆ ರಾಜ್ಯಭಾರವನ್ನು ಪ್ರಾರಂಭಿಸಿದನು.

೪. ರಾಣಿ ಈಶ್ವರಮ್ಮ

ಕೃಷ್ಣಪ್ಪ ನಾಯಕನು ಕ್ರಿ.ಶ.೧೮೪೩ರಲ್ಲಿ ಅನಾರೋಗ್ಯ ಹಾಗೂ ಚಿಂತೆಯಿಂದ ತೀರಿಕೊಂಡಾಗ, ಮಗ ನಾಲ್ವಡಿ ವೆಂಕಟಪ್ಪ ನಾಯಕನಿಗೆ ಕೇವಲ ಏಳು ವರ್ಷ. ಆಗ ಸಂಸ್ಥಾನದ ಆಡಳಿತವನ್ನು ರಾಣಿ ಈಶ್ವರಮ್ಮ ವಹಿಸಿಕೊಂಡಳು. ಆಕೆಯ ಪತಿ ಕೃಷ್ಣಪ್ಪ ನಾಯಕನು ಕ್ಯಾ.ಗ್ರಿಸ್ಲೆಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದ. ಕೃಷ್ಣಪ್ಪ ನಾಯಕ ನಿಜಾಮ ಮತ್ತು ಇತರರೊಂದಿಗೆ ಹಣದ ವ್ಯವಹಾರ ಮಾಡಿದ್ದನು. ಬಹಳಷ್ಟು ಒತ್ತಡ ಕ್ಕೊಳಗಾಗಿದ್ದ. ಆಗ ನಿಜಾಮ ಪ್ರತಿವರ್ಷ ರೆಸಿಡೆಂಟ್‌ನ ದ್ವಾರ ರೂ. ೪೦,೦೦೦ ಕೊಡ ತಕ್ಕದ್ದು. ಇದರ ಜಮಾನತಿಗಾಗಿ ನೆಲೋಗಿ ಹಾಗೂ ಅಂದೋಲಾ ಒತ್ತಿ ಇಡ ತಕ್ಕದ್ದು. ಹಣಮಪ್ಪ ನಾಯಕನಿಗೆ ತಿಂಗಳ ರೂ.೫೦೦ ಕೊಡತಕ್ಕದ್ದು. ಝಲ್ಲಿಪಾಳಿ ಅಂಕಪ್ಪ ನಾಯಕನಿಗೆ ಆತನ ಜಹಗೀರು ಕೊನೆಯವರೆಗೂ ನಡೆಸಬೇಕು. ಸುರಪುರವನ್ನು ನಿಜಾಮ ಹಾಗೂ ಬ್ರಿಟಿಷ್ ಸರಕಾರದ ಮಾಂಡಲೀಕರೆಂದೂ ಒಪ್ಪಿಕೊಳ್ಳತಕ್ಕದ್ದು ಎಂದು ಠರಾವಾಗಿತ್ತು.[4] ಈ ಒಪ್ಪಂದವನ್ನು ಈಕೆ ಧಿಕ್ಕರಿಸಿದಳು. ರೆಸಿಡೆಂಟನಾದ ಗ್ರಿಸ್ಲೆಯ ವಿರುದ್ಧ ತನ್ನ ೧೨೦೦೦ ಬೇಡರ ಪಡೆಯನ್ನು ಸಜ್ಜುಗೊಳಿಸಿದಾಗ, ಗ್ರಿಸ್ಲೆ ಸುರಪುರದಿಂದ ನಿರ್ಗಮಿಸಿದ.

ನಂತರ ಮೆಡೋಸ್ ಟೇಲರ್ ಸುರಪುರಕ್ಕೆ ಆಗಮಿಸುತ್ತಾನೆ. ನಯವಿನಯದಿಂದ ರಾಣಿ ಈಶ್ವರಮ್ಮನೊಂದಿಗೆ ನಡೆದುಕೊಳ್ಳುತ್ತಾನೆ. ಮಗ ನಾಲ್ವಡಿ ವೆಂಕಟಪ್ಪ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆಂದು ಹೇಳುತ್ತಾನೆ. ಜೊತೆಗೆ ಆಕೆಯನ್ನು ತನ್ನ ತವರು ಮನೆಯಾದ ರತ್ನಗಿರಿಗೆ ಹೋಗುವಂತೆ ಮಾಡುತ್ತಾನೆ. ನಂತರ ಆಕೆ ಸುರಪುರಕ್ಕೆ ಮರಳಿ ಆಗಮಿಸುವ ಹೊತ್ತಿಗೆ ಟೇಲರ್ ನಾಲ್ವಡಿ ವೆಂಕಟಪ್ಪ ನಾಯಕನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ಮರಳಿ ಬಂದ ರಾಣಿ ಈಶ್ವರಮ್ಮ ರಾಜಕೀಯ ಅಧಿಕಾರದಲ್ಲಿ ಕೈಹಾಕಕೂಡದೆಂದು, ಆಕೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ಖರ್ಚುವೆಚ್ಚಕ್ಕಾಗಿ ಕೊಡುವುದಾಗಿ ಹೇಳಿದಾಗ, ಸಿಡಿಮಿಡಿಗೊಂಡ ಆಕೆ ತನ್ನ ಮಗನಲ್ಲಿ ಸ್ವಾತಂತ್ರ್ಯದ ಕಿಡಿ ಪ್ರಜ್ವಲಿಸುವಂತೆ ಮಾಡಿದಳು. ತಾಯಿಯ ಪ್ರಭಾವವೇ ಮುಂದೆ ನಾಲ್ವಡಿ ವೆಂಕಟಪ್ಪ ನಾಯಕನಿಗೆ ಪ್ರೇರಣೆಯಾಗಿ ದಕ್ಷಿಣ ಭಾರತದಲ್ಲಿಯೇ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿದ ಅರಸನೆಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಹೀಗೆ ತನ್ನ ಜೀವನದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ ಈಕೆ ಮೇ ೨೭, ೧೮೫೨ರಲ್ಲಿ ತೀರ್ಥಯಾತ್ರೆಗೆ ತೆರಳುವಾಗ ಲಿಂಗಸುಗೂರಿನಲ್ಲಿ ನಿಧನ ಹೊಂದುತ್ತಾಳೆ. ನಿಜಾಮ ಹಾಗೂ ಬ್ರಿಟಿಷರ ಅಧಿಕಾರವನ್ನು ಧಿಕ್ಕರಿಸಿದ್ದ ಈ ಮಹಿಳೆಯ ಚಾಣಾಕ್ಷತೆಯನ್ನು ಮೆಚ್ಚಲೇಬೇಕು. ಈಕೆಯ ವ್ಯಕ್ತಿತ್ವವನ್ನು, ಸಾರುವ ಜನಪದ ನುಡಿಯೊಂದು ‘ವೈಗಜಾತಿ ಶೂರ, ಅವ್ವಾ ಈಶ್ವರಮ್ಮನ ವರವೀರ ಪುತ್ರ’[5] ಎನ್ನುತ್ತಿದೆ. ಎಲ್ಲರ ಬಾಯಲ್ಲೂ ರಾಣಿ ಈಶ್ವರಮ್ಮ ಅವ್ವ ಆಗಿದ್ದಳು. ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡಿದ್ದಳು.

೫. ರಾಣಿ ವೆಂಕಟಮ್ಮ

ಕನಕಗಿರಿಯನ್ನು ಹೈದರಾಬಾದ್ ನಿಜಾಮನು ಕ್ರಿ.ಶ.೧೮೩೩ರಲ್ಲಿ ವಶಪಡಿಸಿಕೊಂಡನು. ಆಗ ಕನಕಗಿರಿ ಅರಸರು ಹುಲಿಹೈದರ್‌ಗೆ ಬಂದು ಇಲ್ಲಿಂದ ಆಡಳಿತ ಪ್ರಾರಂಭಿಸಿದರು. ಅರಸ ರಂಗಪ್ಪ ನಾಯಕನಿಗೆ ೪ ಜನ ರಾಣಿಯರಿದ್ದರೂ ಸಂತಾನವಿರಲಿಲ್ಲ. ಆಗ ರಾಣಿ ವೆಂಕಟಮ್ಮ ಸಂಸ್ಥಾನದ ಹಿರಿಯರನ್ನೆಲ್ಲಾ ಕರೆಯಿಸಿ ಮೈದುನ ಸೋಮಸಾಗರದ ಕನಕಪ್ಪ ನಾಯಕನ ಮಗ ವುಡಸಿನಾಯಕನನ್ನು ದತ್ತು ತೆಗೆದುಕೊಂಡಳು.[6] ಈತ ಚಿಕ್ಕವನಿದ್ದ ಕಾರಣ ಈಕೆಯೇ ಆಡಳಿತ ನಡೆಸಿದಳು. ಆ ಸಂದರ್ಭದಲ್ಲಿ ತನ್ನ ಆಡಳಿತದ ಹಳ್ಳಿಗಳ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸಿದಳು.

೬. ಕನಕಗಿರಿಯ ರಾಣಿ ಗೌರಮ್ಮ

ವುಡಸಿನಾಯಕ (ಕ್ರಿ.ಶ.೧೭೦೮-೧೭೫೨)ನ ಮರಣಾನಂತರ ಆತನ ಮಗ ರಾಜಾ ರಂಗಪ್ಪ ನಾಯಕ ಅಪ್ರಾಪ್ತನಾಗಿದ್ದ, ಆಗ ರಾಣಿ ಗೌರಮ್ಮ ತಾನೇ ಅಧಿಕಾರವಹಿಸಿ ಕೊಂಡಳು. ನಂತರ ಮಗ ಅಧಿಕಾರಕ್ಕೆ ಬರುವ ಮೊದಲೇ ತೀರಿಕೊಂಡನು. ಆಗ ರಾಣಿ ಗೌರಮ್ಮ ಅಧಿಕಾರ ವಹಿಸಿಕೊಂಡಳು. ತನ್ನ ಮೈದುನನ ಮಗನಾದ ರಂಗಪ್ಪ ನಾಯಕ ನನ್ನು ದತ್ತು ತೆಗೆದುಕೊಂಡಳು. ಈತ ಇನ್ನೂ ಸಣ್ಣವನಿದ್ದುದರಿಂದ ಆಡಳಿತವನ್ನೆಲ್ಲಾ ರಾಣಿ ಗೌರಮ್ಮ ನಡೆಸುತ್ತಿದ್ದಳು. ಆಗ ಹೈದರಾಬಾದ್ ನಿಜಾಮನು ಸಂಸ್ಥಾನದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲವೆಂದು ತಮ್ಮ ಸ್ವಾಧೀನಕ್ಕೆ ಒಳಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಈಕೆ ತನ್ನ ಬಂಧುಗಳಾದ ಸುರಪುರ, ಗುಂಡಗುಂಟಿ, ದೇವದುರ್ಗದವರ ಸಹಾಯವನ್ನು ಬೇಡಿದಳು. ಅವರಾರೂ ಸಹಾಯ ಮಾಡದಿದ್ದಕ್ಕಾಗಿ ಈಕೆಯನ್ನು ಮತ್ತು ದತ್ತುಪುತ್ರ ರಾಜಾ ರಂಗಪ್ಪನಾಯಕನನ್ನು ವರ್ಷಾಸನ ಗೊತ್ತುಪಡಿಸಿ ಹೈದರಾಬಾದ್‌ನಲ್ಲಿ ಇಟ್ಟರು. ರಾಣಿ ಅಲ್ಲಿಯೇ ಮರಣ ಹೊಂದಿದಳು.[7]

. ಗುಡಗುಂಟಿಯ ರಾಣಿ ಗೌರಮ್ಮ

ಗುಡಗುಂಟಿಯ ರಾಜಾ ಜಡಿಸೋಮಪ್ಪ ನಾಯಕ ತೀರಿಕೊಂಡ ನಂತರ ಮಗ ತಿಪ್ಪರಾಜ ಜಡಿಸೋಮಪ್ಪನಾಯಕ ಚಿಕ್ಕವನಿದ್ದರಿಂದ ರಾಣಿ ಗೌರಮ್ಮ ಆಡಳಿತದ ಸೂತ್ರ ಹಿಡಿದಳು. ಈಕೆ ತನ್ನ ಅಧಿಕಾರಾವಧಿಯಲ್ಲಿ ರಾಯದುರ್ಗದ ಸಮೀಪದಲ್ಲಿ ಒಂದು ಕೆರೆಯನ್ನು ಕಟ್ಟಿಸಿದ್ದಾಳೆ. ಅದನ್ನು ರಾಣಿ ಗೌರಮ್ಮನ ಕೆರೆ ಎಂದು ಕರೆಯುತ್ತಾರೆ.

ಹೀಗೆ ಅಲ್ಪಾವಧಿಯವರೆಗೆ ಅಧಿಕಾರದಲ್ಲಿದ್ದ ನಾಯಕ ಅರಸುಮನೆತನದ ರಾಣಿಯರು ತಮ್ಮ ಸಾಮರ್ಥ್ಯಕ್ಕೆ ಸಿಲುಕಿದಷ್ಟು ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ, ಅಧಿಕಾರದ ಮುಂದುವರಿಕೆಗಾಗಿ ಅನುಕೂಲ ಮಾಡಿಕೊಟ್ಟರು.

ಕೆಲವು ಮನೆತನದ ರಾಣಿಯರು ರಾಜಕೀಯ ಅಧಿಕಾರದಲ್ಲಿರದಿದ್ದರೂ ದೇವಾಲಯ, ಮಠ, ಮಂದಿರ, ಬಾವಿ, ಕೆರೆಗಳನ್ನು ನಿರ್ಮಿಸಿದ್ದುಂಟು. ಅನೇಕ ದೇವಾಲಯಗಳಿಗೆ ಕಾಣಿಕೆಗಳನ್ನು ಅರ್ಪಿಸಿದ್ದುಂಟು. ಉಚ್ಚಂಗಿ ದುರ್ಗದ ಕೋಟೆಯಲ್ಲಿರುವ ಉಚ್ಚಂಗಮ್ಮನ ದೇವಾಲಯದಲ್ಲಿರುವ ಗಂಟೆಗಳಲ್ಲಿ ಕೆಲವನ್ನು  ಹರಪನಹಳ್ಳಿ ಪಾಳೇಯಗಾರರು ಕಾಣಿಕೆಯಾಗಿ ನೀಡಿದ್ದಾರೆ. ಅದರಲ್ಲಿಯ ಒಂದು ಗಂಟೆಯನ್ನು ಚಿತ್ರದುರ್ಗದ ಹೊನ್ನಮ್ಮ ನಾಗತಿಯು ಉಚ್ಚಂಗಮ್ಮನಿಗೆ ಭಕ್ತಿಯ ಕಾಣಿಕೆಯಾಗಿ ಅರ್ಪಿಸಿದಂತೆ[8] ತಿಳಿದುಬರುತ್ತದೆ.

ಚಿತ್ರದುರ್ಗದ ೧ನೇ ಕಸ್ತೂರಿ ರಂಗಪ್ಪ (ಕ್ರಿ.ಶ.೧೬೦೨-೧೬೫೨) ನ ನಾಗತಿ-ಕಾಟವ್ವ ನಾಗತಿ ಎಂಬುವಳು ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಹಿಂದೆ ತನ್ನ ಹೆಸರಿನಲ್ಲಿ ‘ಕಾಟಿ ಮಠ’ ಮತ್ತು ಒಂದು ತೋಪನ್ನು ನಿರ್ಮಿಸಿದಳು.[9] ಓಬಣ್ಣ ನಾಯಕನ ಸೊಸೆ, ತನ್ನ ಗಂಡ ನರಸಿಂಹನು ಮರಣ ಹೊಂದಿದ್ದಕ್ಕಾಗಿ ಅವನ ಹೆಸರಿನಲ್ಲಿ ‘ನರಸಪುರ’ ಎಂಬ ಗ್ರಾಮವನ್ನು ನಿರ್ಮಿಸಿ ಅವನ ನೆನಪಿಗಾಗಿ ಆಂಜನೇಯನ ಗುಡಿಯನ್ನು ನಿರ್ಮಿಸಿದಳು.

ಕನಕಗಿರಿಯ ನಾಯಕ ಅರಸರು ವೈಷ್ಣವರಾಗಿದ್ದರೂ, ಶೈವ ಧರ್ಮಕ್ಕೆ ಆದ್ಯತೆಯನ್ನು ನೀಡಿದ್ದರು. ಈ ಮನೆತನದ ರಾಣಿಯರೂ ಶೈವಧರ್ಮಕ್ಕೆ ಪ್ರೋನೀಡಿದ್ದರು. ಕೆಲವಡಿ ಉಡಚನಾಯಕ (ಕ್ರಿ.ಶ.೧೫೩೩-೧೫೭೮) ನ ರಾಣಿ ಕೋನಾಟಮ್ಮ (ಕಾಟಮ್ಮ)ಳು ಕನಕಗಿರಿಯ ಮೌನೇಶ್ವರ ಮಠವನ್ನು ನಿರ್ಮಿಸಿದರೆ, ಇದೇ ಮನೆತನದ ಇಮ್ಮಡಿ ಉಡಚನಾಯಕ (ಕ್ರಿ.ಶ.೧೬೧೮-೧೭೦೮) ನ ಪಟ್ಟದರಾಣಿ ಚೆನ್ನಮ್ಮ ಕನಕಾಚಲಪತಿ ದೇವಾಲಯದ ಪ್ರಾಕಾರದಲ್ಲಿ ನೆಲಕ್ಕೆ ಕಲ್ಲುಗಳನ್ನು ಹಾಕಿಸಿದಳು. ಅಲ್ಲದೇ ಕ್ರಿ.ಶ.೧೬೭೯ರಲ್ಲಿ ಪೇಟೆ ಬಸವಣ್ಣ ದೇವಾಲಯವನ್ನು ಕಟ್ಟಿಸಿದ ಕುರಿತಾಗಿ ಆ ಗುಡಿಯ ಗರ್ಭಗೃಹದ ಬಾಗಿಲ ಎಡಪಟ್ಟಿಯ ಮೇಲಿನ ಶಾಸನ ಈ ವಿವರವನ್ನು ಒದಗಿಸುತ್ತದೆ. ಅಲ್ಲದೆ ಈಕೆ ಊರ ಹೊರಗೆ ಕೆರೆಯನ್ನು ನಿರ್ಮಿಸಿದಳು. ಈಗಲೂ ಈ ಕೆರೆಗೆ ‘ಚಿನ್ನಾದೇವಿಕೆರೆ’ ಎಂದು ಕರೆಯುತ್ತಾರೆ. ಈತನ ಇನ್ನೊಬ್ಬ ರಾಣಿ ಕನಕಮ್ಮ ಲಕ್ಷ್ಮಿದೇವಿ ಗುಡ್ಡದ ಬುಡದಲ್ಲಿ ದೊಡ್ಡ ಬಾವಿಯೊಂದನ್ನು ತೋಡಿಸಿ ಅದನ್ನು ಆಕರ್ಷಕವಾದ ಕಲ್ಲಿನಿಂದ ಕಟ್ಟಿಸಿದಳು. ಇನ್ನೊಬ್ಬರಾಣಿ ಅಚ್ಚಮ್ಮ ಕನ್ನೇರುಮಡು ಗ್ರಾಮದ ದಾರಿಯಲ್ಲಿ ಸುಂದರವಾದ ಬಾವಿಯನ್ನು ನಿರ್ಮಿಸಿದ್ದಾಳೆ. ಈ ಬಾವಿಯನ್ನು ಈಗಲೂ ರಾಣಿ ಅಚ್ಚಮ್ಮನ ಬಾವಿ ಎಂದು ಕರೆಯುತ್ತಾರೆ.

ಈ ರೀತಿ ರಾಣಿಯರು ಆಡಳಿತದಲ್ಲಿ ಹಾಗೂ ಸಾರ್ವಜನಿಕ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು. ಇದಕ್ಕೆ ಅರಸರು ರಾಣಿಯರಿಗೆ ಇಂಥ ಕೆಲಸಗಳಿಗೆ ಸ್ವಾತಂತ್ರ್ಯವನ್ನು ನೀಡಿದ್ದರಿಂದ, ಕೆರೆಗಳನ್ನು, ಬಾವಿಗಳನ್ನು, ದೇವಾಲಯಗಳನ್ನು ನಿರ್ಮಿಸಿದ್ದಲ್ಲದೇ, ದಾನದತ್ತಿ ನೀಡಿ, ಸಾರ್ವಜನಿಕ ಕೆಲಸಗಳಲ್ಲಿ ರಾಣಿಯರು ತೊಡಗಿಸಿಕೊಳ್ಳಲು ಸಾಧ್ಯ ವಾಯಿತು. ಅಲ್ಲದೇ ಧಾರ್ಮಿಕ ವಿಷಯಗಳಲ್ಲಿಯೂ ಇವರು ಯಾವುದೇ ಅಡ್ಡಿ ಆತಂಕಗಳನ್ನು ಒಡ್ಡುತ್ತಿರಲಿಲ್ಲ ಎಂಬುದಕ್ಕೆ ಚಿಕ್ಕಣ್ಣ ನಾಯಕ (ಕ್ರಿ.ಶ.೧೬೭೫-೧೬೮೬) ನು ವೀರಶೈವ ಧರ್ಮಕ್ಕೆ ಮತಾಂತರ ಹೊಂದಿ ಕೆಲವು ದಿನಗಳ ನಂತರ ಮೂಲ ಜಾತಿಗೆ ಹಿಂದಿರುಗಿದುದನ್ನು ಗಮನಿಸಬಹುದು. ಆದರೆ ಆತನ ರಾಣಿ ನಾಯಕನ ಹಟ್ಟಿ ಮಲ್ಲವ್ವನಾಗತಿ ಮಾತ್ರ ತಾನು ಧರಿಸಿದ ಲಿಂಗವನ್ನು ತೆಗೆಯದೇ ವೀರಶೈವ ಧರ್ಮದಲ್ಲಿಯೇ ಉಳಿದುಕೊಂಡಳು.[10] ತಮ್ಮ ಹೆಸರಿನಲ್ಲಿ ಮತ್ತು ರಾಣಿಯರ ಹೆಸರಿನಲ್ಲಿ, ಮಕ್ಕಳ ಹೆಸರಿನಲ್ಲಿ ಈ ಅರಸರು ಅನೇಕ ಗ್ರಾಮಗಳನ್ನು, ಕೋಟೆಗಳನ್ನು ಕೋಟೆ ಬಾಗಿಲುಗಳನ್ನು ನಿರ್ಮಿಸಿದ್ದಾರೆ. ಓಬನಹಳ್ಳಿ, ಕಸ್ತೂರಿರಂಗಪ್ಪನ ಹಳ್ಳಿ, ವೀರ ಮದಕೇರಿ ಪುರ, ಮದಕೇರಿ ಹಳ್ಳಿ, ಮದಕರಿನಾಯಕನ ಹಳ್ಳಿ, ಮದಕರಿನಾಯಕನ ಕೋಟೆ, ಭರಮಣ್ಣ ನಾಯಕನ ದುರ್ಗ, ಭರಮನಹಳ್ಳಿ, ಪರಶುರಾಮಪುರ, ಓಬವ್ವ ನಾಗತಿಹಳ್ಳಿ, ವೀರನಾಗತಿಹಳ್ಳಿ, ಲಿಂಗವ್ವ ನಾಗತಿಹಳ್ಳಿ, ರಂಗಮ್ಮನಹಳ್ಳಿ, ಬೊಮ್ಮವ್ವ ನಾಗತಿಹಳ್ಳಿ, ಕೆಂಚವ್ವ ನಾಗತಿಹಳ್ಳಿ, ಬಸವ್ವ ನಾಗತಿಹಳ್ಳಿ, ರಂಗವ್ವ ನಾಗತಿಹಳ್ಳಿ, ಕಲ್ಲವ್ವನಾಗತಿಹಳ್ಳಿ, ಚಿಕ್ಕವ್ವ ನಾಗತಿಹಳ್ಳಿ, ದ್ವಾಮವ್ವ ನಾಗತಿಹಳ್ಳಿ, ಯರ‌್ರವ್ವ ನಾಗತಿಹಳ್ಳಿ, ಚಿಕ್ಕಸಿದ್ದವ್ವ ನಾಗತಿಹಳ್ಳಿ, ದೊಡ್ಡ ಸಿದ್ದವ್ವನಹಳ್ಳಿ, ಚಿಕ್ಕ ಪಾಲವ್ವನಹಳ್ಳಿ, ಕೊಮಾರನ ಹಳ್ಳಿ, ಕೊಮಾರ ಮದಕರಿ ನಾಯಕನ ಕೋಟೆ[11] ಹೀಗೆ ಅವುಗಳನ್ನು ನಿರ್ಮಿಸಿದ್ದಾರೆ.

ಇಮ್ಮಡಿ ಮದಕರಿ ನಾಯಕ (ಕ್ರಿ.ಶ.೧೬೫೨-೧೬೭೪) ನು ತನ್ನ ಪಟ್ಟದ ನಾಗತಿ ಚಿಕ್ಕಮ್ಮ ಎಂಬುವಳ ಹೆಸರಿನಲ್ಲಿ ಕಟ್ಟೆ ಬಸವಯ್ಯನ ಮಗ ಕೆಂಚಯ್ಯನ ಮುಖಾಂತರ ನೆಲ್ಲಿಕಟ್ಟೆಯಲ್ಲಿ ಕೆರೆಯೊಂದನ್ನು ಕಟ್ಟಿಸಿದನು.[12]

ಸಿದ್ದವ್ವನ ದುರ್ಗ ಚಿತ್ರದುರ್ಗದಿಂದ ಜಗಳೂರಿಗೆ ಹೋಗುವ ರಸ್ತೆಯಲ್ಲಿ ೧೫ ಕಿ.ಮೀ. ಅಂತರದಲ್ಲಿದೆ. ಚಿತ್ರದುರ್ಗದ ಅರಸರು ತಮ್ಮ ರಾಣಿಯ ಹೆಸರಿನಲ್ಲಿ ನಿರ್ಮಿಸಿರುವ ದುರ್ಗಗಳಲ್ಲಿ ಇದೂ ಒಂದಾಗಿದೆ. ಹಾಗೆಯೇ ಚಿತ್ರದುರ್ಗದ ಕೋಟೆಯ ಒಂದು ಬಾಗಿಲಿಗೆ ‘ನಾಗತಿಯ ಬಾಗಿಲು’ ಎಂದಿದೆ.

ಸುರಪುರದ ರಾಜಧಾನಿಯ ಸುತ್ತಲಿನ ಹಳ್ಳಿಗಳು ಅರಸರ ಮಾತೆ ಮತ್ತು ರಾಣಿಯರ ಹೆಸರಿನಲ್ಲಿಯೇ ನಿರ್ಮಿಸಲ್ಪಟ್ಟಿವೆ. ಅವುಗಳಲ್ಲಿ ಹಸರಂಗಿ ಪಾಮನಾಯಕನು ತನ್ನ ರಾಣಿ ‘ಅಮ್ಮಾನಾಗತಿ’ ನೆನಪಿಗಾಗಿ, ಅಮ್ಮಾಪುರವನ್ನೂ, ಪೀತಾಂಬರ ಬಹರಿ ಪಿಡ್ಡನಾಯಕನು ತನ್ನ ತಾಯಿ ಲಕ್ಷ್ಮಮ್ಮನ ಸ್ಮರಣೆಗಾಗಿ ಲಕ್ಷ್ಮೀಪುರವನ್ನು, ಮೊಂಡಗೈ ವೆಂಕಟಪ್ಪನಾಯಕ ತನ್ನ ತಾಯಿ ರುಕ್ಮಣಿಯಮ್ಮನ ಹೆಸರಿನಲ್ಲಿ ರುಕ್ಮಾಪುರವನ್ನು ಹಾಗೂ ಅತ್ತಿಗೆ ಸತ್ಯಮ್ಮನ ಹೆಸರಿನಲ್ಲಿ ಸತ್ಯಂಪೇಟೆಯನ್ನು, ಮುಮ್ಮಡಿ ವೆಂಕಟಪ್ಪನಾಯಕನು ತನ್ನ ರಾಣಿ ರಂಗಮ್ಮನ ಸವಿನೆನಪಿಗಾಗಿ ರಂಗಂಪೇಟೆ ಗ್ರಾಮವನ್ನು ಅಲ್ಲದೇ ಪಿಡ್ಡನಾಯಕನು ವೆಂಕಮಾಂಬಳ ಮನವಿಯ ಮೇರೆಗೆ ವನದುರ್ಗ ಕೋಟೆಯನ್ನು[13] ನಿರ್ಮಾಣ ಮಾಡಿದನು.

ಹೀಗೆ ಕರ್ನಾಟಕದ ನಾಯಕ ಅರಸು ಮನೆತನದ ರಾಣಿಯರು ತಮ್ಮದೇ ಆದ ಸ್ಥಾನ-ಮಾನಗಳನ್ನು ಪಡೆದಿದ್ದರು. ಅವರ ಕೆಲಸ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿವೆ. ಅವರುಗಳ ಕುರಿತಾಗಿ ಯಥೇಚ್ಛವಾಗಿ ಜನಪದ ಸಾಹಿತ್ಯ ಹುಟ್ಟಿಕೊಂಡಿದೆ.

 

 

 [1]      ಲಕ್ಷ್ಮಣ್ ತೆಲಗಾವಿ, ಕಾಮಗೇತಿ ಅರಸರು; ಕೆಲವು ವಿಚಾರಗಳು, ಪ್ರತಿಕ್ರಿಯೆ, ಮಾನವಿಕ ಕರ್ನಾಟಕ, ೧೯೮೭ ಪುಟ ೧೦

[2]      ಪುಟ್ಟಣ್ಣ ಎಂ.ಎಸ್., ಚಿತ್ರದುರ್ಗದ ಪಾಳಯಗಾರರು, ೧೯೯೭, ಪು.೭೬

[3]      ಗುಲಬರ್ಗಾ ಜಿಲ್ಲಾ ಗೆಜೆಟಿಯರ್, ಪು.೭೮

[4]      ಅಮರೇಶ ಯತಗಲ್ (ಸಂ) , ಏಕಲವ್ಯ, ಸ್ಮರಣ ಸಂಚಿಕೆ, ೨೦೦೫, ಪು.೧೭

[5]      ಜೆ. ಅಗಸ್ಟೀನ್ ನ್ಯಾಯವಾದಿಗಳು ಸುರಪುರ ಇವರ ಹೇಳಿಕೆಯಿಂದ

[6]      ಶರಣಬಸ್ಸಪ್ಪ ಪಿ.ಕೋಲ್ಕಾರ, ಕನಕಗಿರಿ ಪಾಳೆಯಗಾರರು, ಪ್ರಜಾಪ್ರಪಂಚ, ಪತ್ರಿಕೆ, ದೀಪಾವಳಿ ವಿಶೇಷಾಂಕ, ೨೦೦೧, ಪು.೧೦೩

[7]      ಅದೇ, ಪು.೧೦೫

[8]      ಲಕ್ಷ್ಮಣ್ ತೆಲಗಾವಿ, ಶ್ರೀನಿವಾಸ ಎಂ.ವಿ. (ಸಂ)  ಹುಲ್ಲೂರು ಶ್ರೀನಿವಾಸ ಜೋಯಿಸರ ಸಂಶೋಧನ ಲೇಖನಗಳು, ೧೯೯೫, ಪು.೪೨೫

[9]      ಲಕ್ಷ್ಮಣ್ ತೆಲಗಾವಿ, ಶ್ರೀ ಬೃಹನ್ಮಠ ಮತ್ತು ಚಿತ್ರದುರ್ಗ ನಾಯಕ ಅರಸರ ಸಂಬಂಧ, ೨೦೦೩, ಪು.೨೦೩

[10]     ಪುಟ್ಟಣ್ಣ ಎಂ.ಎಸ್., ಪೂರ್ವೋಕ್ತ, ೧೯೯೭, ಪು.೪೧

[11]     ಲಕ್ಷ್ಮಣ್ ತೆಲಗಾವಿ, ಕಾಮಗೇತಿ ಅರಸರು; ಕೆಲವು ವಿಚಾರಗಳು-ಪ್ರತಿಕ್ರಿಯೆ, ಮಾನವಿಕ ಕರ್ನಾಟಕ, ೧೯೮೭, ಪು.೫೬

[12]     Epigraphia Carnatica I-chitradurga 7-1640

[13]     ರಂಗರಾಜ ದೇವೇಂದ್ರಪ್ಪ, ಸುರಪುರ ಸಂಸ್ಥಾನ : ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಕ್ಕೆ ಸಾದರಪಡಿಸಿದ ಪಿ.ಎಚ್ .ಡಿ ಮಹಾಪ್ರಬಂಧ, ೧೯೯೫, ಪು.೩೦೪