ಅಥಣಿ ಪಟ್ಟಣವು ತಾಲೂಕು ಸ್ಥಳವಾಗಿದ್ದು ಸಾಹಿತ್ಯಿಕ, ಭಾಷಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಕರ್ಮ ಭೂಮಿ ಹಾಗೂ ತಪೋ ಭೂಮಿಯಾಗಿ ನಗರದ ಪೂರ್ವ ದಿಕ್ಕಿನಲ್ಲಿ ಪುಣ್ಯಕ್ಷೇತ್ರವಾದ ಗಚ್ಚಿನ ಮಠವಿದೆ. ಇಲ್ಲಿ ತಪೋ ನಿಧಿಗಳ ಗದ್ದುಗೆ ಇದ್ದು, ಆಧ್ಯಾತ್ಮಿಕ ಕ್ಷೇತ್ರದಲ್ಲೂ ಮಹತ್ತರವಾದ ಸ್ಥಾನವನ್ನು ಒಳಗೊಂಡಿದೆ. ಅಥಣಿ ತಾಲೂಕಿನಲ್ಲಿ ಬರುವ ಕೆಲವು ಊರುಗಳ ಹೆಸರುಗಳನ್ನು ಭಾಷಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ನೋಡುವ, ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಅಥಣಿ ತಾಲೂಕಿನ ಸ್ಥಳ ನಾಮಗಳನ್ನು ನೋಡುವುದಕ್ಕಿಂತ ಮೊದಲು ಸ್ಥಳ ನಾಮವೆಂದರೇನು? ಈ ಅಧ್ಯಯನದ ಕ್ರಮಗಳನ್ನು, ಮಹತ್ವದ ಅಂಶಗಳನ್ನು ನೋಡೋಣ.

ಸ್ಥಳ ನಾಮವೆಂದರೆ ಊರ ಹೆಸರು ಎಂದರ್ಥ. ಗ್ರೀಕ್ ಭಾಷೆಯಲ್ಲಿ Topos ಎಂದರೆ ಸ್ಥಳಗಳು Nomos ಎಂದರೆ ಹೆಸರುಗಳು. ಆದ್ದರಿಂದ ಸ್ಥಳಗಳ ಹೆಸರುಗಳನ್ನು ಅಧ್ಯಯನ ಮಾಡುವ ವಿಜ್ಞಾನಕ್ಕೆ Toponomy ಎಂದು ಕರೆಯಲಾಗಿದೆ.

ಮಾನವ ವಿಕಾಸದ ಹಂತಗಳನ್ನು ಗಮನಿಸಿದಾಗ ಆದಿ ಮಾನವ ಅಲೆಮಾರಿಯಾಗಿದ್ದ. ಆಗ ಆಹಾರದ ಅನ್ವೇಷಣೆ ಮುಖ್ಯವಾಗಿತ್ತು. ಪ್ರಾಣಿ ಪಕ್ಷಿಗಳ ಬೇಟೆಯಿಂದಲೇ ತನ್ನ ಆಹಾರ ಗಳಿಸುತ್ತಿದ್ದ. ವಾಸಕ್ಕೆ ವಿಶಿಷ್ಟವಾದ ಯಾವುದೇ ಸ್ಥಳವಿರಲಿಲ್ಲ. ವ್ಯವಸಾಯವನ್ನು ಕಲಿತ ನಂತರ ಆಹಾರ ಗಳಿಕೆಯ ಮಾರ್ಗ ಬೇರೆಯಾಯಿತು. ತನ್ನ ನೆನಪಿನ ಶಕ್ತಿಯ ಮೂಲಕ ಅಥವಾ ಗುರುತಿಸುವ ಮೂಲಕ ತನ್ನ ಬದುಕಿನ ಅಂಶಗಳನ್ನು ದಾಖಲಿಸುವ ಪರಿಪಾಠವನ್ನು ಬೆಳೆಸಿಕೊಂಡ. ಸಾಮೂಹಿಕವಾಗಿ ಜನ ತಳವೂರಿದ ಸ್ಥಳ ಊರಾಯಿತು. ಎಡೆ, ತಾಣ, ಹಳ್ಳಿ, ಗ್ರಾಮ ಮೊದಲಾದ ಹೆಸರುಗಳು ಕ್ರಮೇಣ ಬಳಕೆಗೊಂಡವು. ವ್ಯವಹಾರದ ಅನುಕೂಲಕ್ಕಾಗಿ ತನ್ನ ಸಂತಾನಕ್ಕೆ ಹೆಸರಿಟ್ಟಂತೆ, ತಾನು ಕಾಲೂರಿದ ಸ್ಥಳಗಳಿಗೂ ಹೆಸರಿಟ್ಟ. ಅಂಥ ಹೆಸರುಗಳಿಗೆ ಪ್ರಕೃತಿಯ ಮೂಲ, ಗಿಡ, ಮರ, ನದಿ, ಪ್ರಾಣಿ, ಪಕ್ಷಿ, ಬೆಟ್ಟ, ಐತಿಹ್ಯ, ಇತಿಹಾಸದ ಘಟನೆಗಳು ಮತ್ತು ಪೌರಾಣಿಕ ಪುರುಷರಿಗೆ ಸಂಬಂಧಿಸಿದ ಘಟನೆಗಳು ಪ್ರೇರಕವಾದವು. ಹೀಗೆ ಹುಟ್ಟಿಕೊಂಡ ಗ್ರಾಮ, ಸ್ಥಳನಾಮಗಳು ಕೇವಲ ಸ್ಥಳನಾಮಗಳಾಗಿ ಉಳಿಯದೇ ಮಾನವ ಸಂಸ್ಕೃತಿಯ ಕುರುಹುಗಳಾಗಿ ಉಳಿದಿವೆ. ಸ್ಥಳನಾಮಗಳು ಹಿಂದಿನಂತೆ ಹುಟ್ಟುತ್ತವೆ. ಈಗಲೂ ಹುಟ್ಟುತ್ತವೆ, ಬೆಳೆಯುತ್ತವೆ, ಬದಲಾಗುತ್ತಿವೆ. ಹುಟ್ಟಿದ ಸಂದರ್ಭದ ಅರ್ಥವನ್ನು ಗ್ರಹಿಸುವುದೇ ಸ್ಥಳನಾಮ ಅಧ್ಯಯನದ ಗುರಿ.

ಸ್ಥಳನಾಮಗಳ ಅಧ್ಯಯನದಿಂದ ಒಂದು ಜನಾಂಗದ ಅಭಿರುಚಿ, ಅನುಭವ, ಸೃಜನಶೀಲ ಶಕ್ತಿಗಳನ್ನು ಅರಿಯಬಹುದು. ಸ್ಥಳನಾಮಗಳಿಗೆ ಅವುಗಳದೇ ಆದ ಅರ್ಥ ವಿರುತ್ತದೆ. ಅರ್ಥ ರಹಿತವಾದ ಸ್ಥಳನಾಮಗಳು ಇರುವುದಿಲ್ಲ. ಊರುಗಳಿಗೆ ಆಯಾ ಹೆಸರುಗಳು ಪ್ರಾಪ್ತವಾಗಲು ಇಂಥವೇ ಕಾರಣಗಳು ಇವೆಯೆಂದು ಖಚಿತವಾಗಿ ಬೊಟ್ಟು ಮಾಡಿ ಹೇಳಲಿಕ್ಕೆ ಬಾರದು. ಆದರೂ ಕೆಲವಾದರೂ ಊರುಗಳಿಗೆ ಹೆಸರು ಬರಲು ಇರುವ ಕಾರಣಗಳನ್ನು ಗುರುತು ಮಾಡಬಹುದು. ಆಯಾ ಊರುಗಳಿಗೆ ಆಯಾ ಹೆಸರುಗಳು ಹೇಗೆ ಬಂದವು? ಎಂಬುದನ್ನು ಅಧ್ಯಯನ ಮಾಡಿದರೆ ಅದೊಂದು ರೀತಿಯಲ್ಲಿ ಊರಿನ ಹಿನ್ನಲೆಯನ್ನು, ಸಂಸ್ಕೃತಿಯನ್ನು ಅಭ್ಯಸಿಸಿದಂತಾಗುತ್ತದೆ.

ಅಥಣಿ ತಾಲೂಕಿನಲ್ಲಿ ಜನ ವಸತಿ ಇರುವ ಒಟ್ಟು ಗ್ರಾಮಗಳು ೧೦೮. ಅವುಗಳಲ್ಲಿ ಕೆಲವು ಊರುಗಳ ಹೆಸರುಗಳನ್ನು ಅಂದರೆ ಸ್ಥಳ ನಾಮಗಳನ್ನು ಇಲ್ಲಿ ಭಾಷಿಕ ಹಾಗೂ ಸಾಂಸ್ಕೃತಿಕ ಅಧ್ಯಯನಕ್ಕೆ ಈ ರೀತಿ ಅಳವಡಿಸಲಾಗಿದೆ.

ಭಾಷಿಕ ಅಧ್ಯಯನ

ಭಾಷಾ ವಿಜ್ಞಾನಿಗಳು ಊರ ಹೆಸರುಗಳನ್ನು ನಿರ್ದಿಷ್ಟ ಹಾಗೂ ವಾರ್ಗಿಕ ಎಂಬ ಘಟಕಗಳಲ್ಲಿ ವಿಭಜಿಸಿ ಅಧ್ಯಯನ ಮಾಡುವುದುಂಟು. ಕೆಲವು ಊರ ಹೆಸರುಗಳು ಎರಡಕ್ಕಿಂತ ಹೆಚ್ಚು ಘಟಕಗಳನ್ನು ಹೊಂದಿರಲೂಬಹುದು. ಅವು ವಿಶಿಷ್ಟದ ಹಿಂದೆ ವಿಶೇಷಣ ಅಥವಾ ಯಾವುದೋ ವಿಷಯ ಸೂಚಕ ಪದಗಳಾಗಿ ಸೇರಿಕೊಂಡಿರುತ್ತವೆ. ಹೀಗೆ ಸೇರಿಕೊಂಡಂಥವುಗಳನ್ನು ನಿರ್ದಿಷ್ಟವೆಂದೇ ಪರಿಗಣಿಸುವುದುಂಟು ಇಂಥ ಕ್ರಮವನ್ನೇ ಇಲ್ಲಿ ಪರಿಗಣಿಸಲಾಗಿದೆ. ನಿರ್ದಿಷ್ಟವೆಂದರೆ ವಿಶಿಷ್ಟ ಎಂದರ್ಥ. ಅಂದರೆ ಯಾವುದಾದರೂ ವಿಷಯವನ್ನು ಒಳಗೊಂಡಂಥದ್ದು. ವಾರ್ಗಿಕ ಎಂದರೆ ಊರುಗಳ ಹೆಸರುಗಳ ಉತ್ತರಾರ್ಧ ಘಟಕ ಇದರಲ್ಲಿ ವಿಷಯ ಪ್ರಸ್ತಾಪವಿರದು ಉದಾ : ಊರು, ಹಳ್ಳಿ, ಪುರ, ಗ್ರಾಮ, ಆಬಾದ, ಹಾಳ, ವಾಡ, ಕೆರೆ, ಕೊಪ್ಪ, ಹಟ್ಟಿ ಈ ಮೊದಲಾದ ಘಟಕಗಳಲ್ಲಿ ಒಂದನ್ನೊಳಗೊಂಡು ಕೊನೆಗೊಳ್ಳುವಂಥವು. ನಿರ್ದಿಷ್ಟ ಮತ್ತು ವಾರ್ಗಿಕ ಘಟಕಗಳು ಕೂಡುವಾಗ ಧ್ವನಿ ವ್ಯತ್ಯಾಸವೂ ಆಗುತ್ತದೆ. ಭಾಷಿಕ ದೃಷ್ಟಿಯಿಂದ ಅಥಣಿ ತಾಲೂಕಿನಲ್ಲಿ ಬರುವ ಕೆಲವು ಊರುಗಳನ್ನು ಈ ಘಟಕಗಳನ್ವಯ ವಿಂಗಡಿಸಿ ಅವುಗಳ ರೂಪ ಮತ್ತು ಧ್ವನಿ ವ್ಯತ್ಯಾಸ ಪಡೆದುದನ್ನು ಇಲ್ಲಿ ಕೆಲವು ಉದಾಹರಣೆಗಳನ್ನು ನೋಡುವುದರ ಮೂಲಕ ತಿಳಿಯಬಹುದಾಗಿದೆ.

೧. ಊರು : ಇದು ಅಚ್ಚ ದ್ರಾವಿಡ ಪದ. ಊರುಗಳಿಂದ ಕೊನೆಗೊಳ್ಳುವ ಸ್ಥಳಗಳು ಗಾತ್ರಗಳು ಚಿಕ್ಕದಾಗಿರುತ್ತವೆ. ಅಂಥ ವಿಶೇಷತೆಯನ್ನೇನು ಇವು ಒಳಗೊಂಡಿರುವುದಿಲ್ಲ. ಇಲ್ಲಿ ನಿರ್ದಿಷ್ಟ ಮತ್ತು ವಾರ್ಗಿಕ ಘಟಕಗಳು ಸೇರುವಾಗ ಸ್ವರೈಕ್ಯ ಹೊಂದುವುದನ್ನು ಗುರುತಿಸಬಹುದು. ಉದಾ : ನಾಗನ + ಊರು = ನಾಗನೂರ, ಕೊಕಟನ + ಊರು = ಕೊಕಟನೂರ, ಲೋಕ + ಊರು = ಲೋಕೂರ, ಶಿದ+ಊರು=ಶಿರೂರ, ಬೇವಿನ> ಬೇವನ+ಊರು=ಬೆವನೂರ, ಶಿವನ + ಊರು = ಶಿವನೂರ, ಆಜು+ಊರು=ಆಜೂರ, ದರು+ಊರು=ದರೂರ, ಇಲ್ಲಿನ ‘‘ಊರ’’ ಶಬ್ದವನ್ನು ಮೈಸೂರು ಕನ್ನಡಕ್ಕಿರುವ ಮತ್ತು ಧಾರವಾಡ ಕನ್ನಡಕ್ಕಿರುವ ಧ್ವನಿ ವ್ಯತ್ಯಾಸವನ್ನು ಗಮನಿಸಬಹುದು. ಉಕಾರಾಂತ ಅ ಕಾರಾಂತಗಳಿಂದ ಕೂಡಿವೆ.

೨. ಪುರ : ಪುರದಿಂದ ಕೊನೆಗೊಳ್ಳುವ ಸ್ಥಳಗಳು ಊರುಗಳಿಂದ ಗಾತ್ರದಲ್ಲಿ ದೊಡ್ಡವು. ಸಾಮಾನ್ಯವಾಗಿ ಇವುಗಳ ಮಧ್ಯೆ ದೇವಾಲಯಗಳಿರುವುದುಂಟು. ಅನಂತಪುರ=ಅನಂತಪುರ > ಅನಂತಪೂರ. ಉ ಕಾರಂತ ದೀರ್ಘೋಕ್ತಿಯನ್ನು ಪಡೆದು ಸಂಬೋಧಿಸಲ್ಪಡುತ್ತಿದೆ.

೩. ಹಳ್ಳಿ : ಹಳ್ಳಿಯಿಂದ ಕೊನೆಗೊಳ್ಳುವ ಸ್ಥಳಗಳು ಊರುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಹತ್ತಾರು ಮನೆಗಳು ಇರುವುದುಂಟು. ಅಡಹಳ್ಳಿ=ಅಡಹಳ್ಳಿ, ಪಾರ್ಥನಹಳ್ಳಿ=ಪಾರ್ಥನಹಳ್ಳಿ, ಕೋವಳ>ಕೋ+ಹಳ್ಳಿ=ಕೋಹಳ್ಳಿ

೪. ಗ್ರಾಮ : ‘‘ಗ್ರಾಮ’’ ಪದ ಸಂಸ್ಕೃತದ್ದು. ಇದು ಸಾಮಾನ್ಯವಾಗಿ ಊರುಗಳ ಹೆಸರಿನ ಕೊನೆಗೆ ಬರುವಂಥದು. ಈ ಗ್ರಾಮ ‘‘ಗಾವ್ ’’ ಆಗುತ್ತದೆ. ಇಲ್ಲಿಯ ಅರ್ಧಸ್ವರವಾದ ‘‘ವ್ ’’ ಆಡು ಮಾತಿನಲ್ಲಿ ಬಿಟ್ಟು ಹೋಗುತ್ತದೆ. ಆಗ ಉಳಿಯುವ ಗಾ>ಗೆ ಆಗುವುದು. ಇದು ಭಾಷೆಯಲ್ಲಿ ಜರುಗುವ ಸಹಜ ಕ್ರಿಯೆಯಾಗಿದೆ. ಹೀಗೆ ರೂಪುಗೊಂಡ ಕೆಲ ಊರುಗಳನ್ನು ಉದಾಹರಿಸಬಹುದು. ಗೆ>ಗೀ ಆಗವುದು.

ಕಿರಣಗ್ರಾಮ – ಗಿರಣಗಾವ್ > ಕಿರಣಗಾ > ಕಿರಣಗಿ, ಸಂಬರ + ಗ್ರಾಮ = ಸಂಬರಗಾವ್ > ಸಂಬರಗಾ > ಸಂಬರಗಿ, ಸಾವಳ + ಗ್ರಾಮ – ಸಾವಳಗಾವ್ > ಸಾವಳಗಾ > ಸಾವಳಗಿ ಹೀಗೆ ಊರ ಹೆಸರಿನ ಕೊನೆಗೆ ಬರುವ ‘‘ಗ್ರಾಮ’’ ‘‘ಗಾವ್ ’’ ಅದುದನ್ನು ಗಾ>ಗಿ ಆದುದ್ದನ್ನು ನೋಡಿದೆವು. ಜೊತೆಗೆ ಮರಾಠಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಗ್ರಾಮ>ಗಾವ್ >ಗಾಂವ ಆಗಿರುವುದನ್ನು ನೋಡಬಹುದು. ಉದಾ : ಖಿಳೇಗಾಂವ.

೫. ಹಾಳ : ಇದು ‘‘ಪೊಳಲು’’ದಿಂದ ಬಂದಿದೆ. ಪೊಳಲು ಎಂದರೆ ಪಟ್ಟಣ. ಕಾಲಾಂತರದಲ್ಲಿ ಪ>ಹ ವ್ಯತ್ಯಾಸವಾಗಿ ಹೊಳಲು ಆಗಿದೆ. ಹೊಳಲು ಬರಬರುತ್ತ ಜನತೆಯ ಸೌಲಭ್ಯಾಕಾಂಕ್ಷೆ ಹಾಗೂ ಪರಿಹಾರಾತ್ಮಕ ದೀರ್ಘೀಕರಣಕ್ಕೊಳಗಾಗಿ ‘‘ಹಾಳ’’ವಾದಂತಿದೆ.

ಕುಸನ+ಹೊಳಲು (ಪ>ಹ)  ಕುಸನಹೊಳಲು>ಕುಸನೊಳಲು>ಕುಸನಾಳ, ನವಲಿನ + ಹೊಳಲು (ಪ>ಹ)  ನವಲಿನ ಹೊಳಲು > ನವಲೊಳಲು > ನವಲಿಹಾಳ, ಅರಟಿನ+ ಹೊಳಲು (ಪ>ಹ)  ಅರಟುಹೊಳಲು> ಅರಟೊಳಲು>ಅರಟಾಳ, ರಾಜನ+ಹೊಳಲು (ಪ>ಹ)  ರಾಜನ ಹೊಳಲು > ರಾಜಹೊಳಲು > ರಾಜನಾಳ.

೬. ವಾಡ, ವಾಡಿ : ‘‘ವಾಡ’’ ಎಂದರೆ ಜನ ವಸತಿ ಸ್ಥಳ. ವಾಡಿ ಎಂದರೆ ಬಿಡಾರ. ವಾಸಸ್ಥಳವೆಂಬರ್ಥಗಳಿವೆ. ವಾಡ, ವಾಡಿ ವಾರ್ಗಿಕವನ್ನುಳ್ಳ ಊರುಗಳು ಇಂತಿವೆ. ಯಲ್ಲಮ್ಮನ + ವಾಡಿ = ಯಲ್ಲಮ್ಮನವಾಡಿ, ಗುಂಡೆಯ+ವಾಡಿ = ಗುಂಡೆವಾಡಿ. ಕೆಂಪನ + ವಾಡ = ಕೆಂಪವಾಡ, ಕಾಗನ + ವಾಡ = ಕಾಗವಾಡ.

೭. ಕೆರೆ : ಕೆರೆ ಸಮೀಪದಲ್ಲಿರುವ ಊರುಗಳು ಸಾಮಾನ್ಯವಾಗಿ ಕೆರೆ, ಗೆರೆ, ಗೇರಾ ವಾರ್ಗಿಕಗಳನ್ನು ಹೊಂದುವುದುಂಟು. ಇದಕ್ಕೆ ಜಲವಾಚಿ ಸ್ಥಳನಾಮಗಳೆಂದು ಕರೆಯುವರು. ಬಳ್ಳಿಯ + ಕೆರೆ = ಬಳ್ಳಿಗೆರೆ (ಕೆ>ಗೆ)  ಬಳ್ಳಿಗೇರಿ (ರೆ>ರಿ) , ಕಟ+ಕೆರೆ=ಕಟಗೆರೆ (ಕೆ>ಗೆ)  ಕಟಗೇರಿ (ರೆ>ರಿ)  ಚಮ+ಕೆರೆ = ಚಮಕೆರೆ > ಚಮಕೇರಿ (ರೆ > ರಿ) . ಜನರ ಬಾಯಲ್ಲಿ ಈ ಊರುಗಳ ಹೆಸರಿನ ಕೊನೆಗಿರುವ ರೆ > ರಿ ಆಗಿದೆ. ಕೆರೆ ನಿರ್ಮಾಣಗೊಂಡ ಪ್ರಯುಕ್ತ ಕೆಲ ಕಾಲದ ಮೇಲೆ ಕೆರೆ ನಿರ್ಮಿಸಲ್ಪಟ್ಟಿದ್ದರೂ ಕೆರೆಯ ಪ್ರಸಿದ್ದಿಯಿಂದ ಮೂಲ ಗ್ರಾಮನಾಮ ಬಂದಿರಬಹುದು.

೮. ಆಬಾದ : ಇದು ಪರ್ಷಿಯನ್ ಪದ. ಉರ್ದುವಿನ ಪ್ರಭಾವದಿಂದ ಕನ್ನಡಕ್ಕೆ ಬಂದಂಥದ್ದು. ಆಬಾದ ಎಂದರೆ ಜನರು ವಾಸಿಸಲು ಯೋಗ್ಯವಾದ ಸ್ಥಳ ಎಂದರ್ಥ. ಉದಾ : ಮಲೆ>ಮಲಾ+ಅಬಾದ = ಮಲಾಬಾದ ಆಗಿದೆ.

.ಹಟ್ಟಿ : ಈ ಊರು ಪಶುಪಾಲನಾ ಕಾಲದಲ್ಲಿ ಹುಟ್ಟಿಕೊಂಡಿದೆ. ಗ್ರಾಮ ರಚನೆಯಾಗುವ ಪೂರ್ವದಲ್ಲಿ ಜನ ಹಟ್ಟಿಯಲ್ಲಿ ವಾಸಮಾಡುತ್ತಿದ್ದರು. ಅದಕ್ಕಾಗಿ ಈಗಲೂ ರಡ್ಡೇರಹಟ್ಟಿ, ಬ್ಯಾಡರಹಟ್ಟಿ, ದೇವರಾನಟ್ಟಿ, ತುಕಾನಟ್ಟಿ, ಶಂಕರಹಟ್ಟಿ, ಶಿರಹಟ್ಟಿ, ಸಂಕೋನಟ್ಟಿ ಎಂದು ಕರೆಯುವ ಪ್ರದೇಶಗಳುಂಟು ಇದೇ ರೀತಿ ಭೌಗೋಳಿಕ ಪ್ರದೇಶದ ಹಿನ್ನೆಲೆಯಲ್ಲಿ ಬಂದ ಸ್ಥಳನಾಮಗಳು ಉಂಟು ಉದಾ : ಕರ್ಲಟ್ಟಿ (ಕಪ್ಪಾದ ಭೂ ಪ್ರದೇಶ ಹೊಂದಿರುವ ಸ್ಥಳ)  ಚಿಕ್ಕಟ್ಟಿ (ಕಡಿಮೆ ಜನ ವಸತಿ ಇರುವ ಭೂಪ್ರದೇಶ) .

ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ ಆದರೆ ಮಹಾಪ್ರಾಣ ಯುಕ್ತ ಸ್ಥಳನಾಮಗಳಿವೆ. ಉದಾ : ಖವಟಕೊಪ್ಪ, ಖಿಳೇಗಾಂವ, ಅಢಾಳಹಟ್ಟಿ ಇಂತ ಹಲವಾರು ಸ್ಥಳ ನಾಮಗಳಲ್ಲಿ ಮಹಾ ಪ್ರಾಣಾಕ್ಷರ ಬಳಕೆಯಾಗಿರುವುದು ಒಂದು ವಿಶೇಷ.

ಸಾಂಸ್ಕೃತಿಕ ಅಧ್ಯಯನ

ಸಂಸ್ಕೃತಿ ಜನತೆಯ ಜೀವನ ವಿಧಾನವೇ ಆಗಿದ್ದು, ಅವರವರ ಸಂಸ್ಕಾರಗಳಿಂದ ಹುಟ್ಟಿಕೊಂಡಂಥದ್ದು. ಒಂದು ಕಾಲಕ್ಕೆ ತನ್ನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿದ ವಸ್ತು ವ್ಯಕ್ತಿ ಘಟನೆಗಳನ್ನು, ಧರ್ಮ, ಸಂಸ್ಕೃತಿಯ ಹಿನ್ನಲೆಯಲ್ಲಿ ತಾನು ವಾಸಿಸುವ ಸ್ಥಳಗಳಿಗೆ ಹೆಸರಿಸಿ, ಮಾನವನು ತನ್ನ ಉತ್ಕಟಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ. ಈ ಮಾತು ಅಥಣಿ ತಾಲೂಕಿನ ಸ್ಥಳ ನಾಮಗಳಿಗೂ ಅನ್ವಯಿಸುವಂಥದ್ದಾಗಿದೆ. ಈ ತಾಲೂಕಿನ ಹಲವಾರು ಹಿಂದೂ ದೇವಾಲಯಗಳು, ಮಠಗಳು, ಜೈನ ಬಸದಿಗಳು, ಮಸೀದಿಯಾಕಾರದ ಗುಂಬಾಜಗಳನ್ನು ಹೊಂದಿರುವುದನ್ನು ಕಾಣಬಹುದು. ಧಾರ್ಮಿಕ ವ್ಯಕ್ತಿಗಳ ಹೆಸರನ್ನು, ಭೌಗೋಳಿಕ, ಐತಿಹಾಸಿಕ, ಪ್ರಾಕೃತಿಕ ವಸ್ತುಗಳ ಹೆಸರನ್ನು ಹಾಗೂ ಜಾತ್ರೆ, ಉತ್ಸವ, ಹಬ್ಬಗಳ ಸ್ಮರಣೆಗಾಗಿ ವಿಶೇಷ ಹೆಸರನ್ನು ಹಲವಾರು ಊರುಗಳು ಪಡೆದಿರುವುದುಂಟು.

ಐನಾಪೂರ : ಐನಾಪೂರ ಗ್ರಾಮವು ಆದಿನಾಥ ತೀರ್ಥಕರ ಬಸದಿ ಹಾಗೂ ಪಾರ್ಶ್ವನಾಥ ತೀರ್ಥಂಕರ ಬಸದಿಗಳು, ನಾಲ್ಕು ಶಿಲಾ ಶಾಸನಗಳು ಎಂಟು ಹಿತ್ತಾಳೆ ಮೂರ್ತಿಗಳ ಮೇಲಿನ ಬರಹಗಳು, ಒಂದು ತಾಮ್ರ ಪತ್ರ ಶಾಸನದ ಮೇಲಿನ ಬರಹವನ್ನು ಒಳಗೊಂಡ ಜೈನರ ಅತಿಶಯ ಕೇಂದ್ರಗಳಲ್ಲಿ ಒಂದು. ೧೨ನೇ ಶತಮಾನದಲ್ಲಿ ಯತಬರಪುರ> ಯತಬಾರಪುರ ಎಂದು ಕರೆಯಿಸಿಕೊಂಡ ಈ ಊರು ನಂತರದ ದಿನಗಳಲ್ಲಿ ಅಇನಾಪುರ> ಅ್ಯನಾಪುರ>ಐನಾಪುರ ಎಂದು ಕರೆಸಿಕೊಂಡಿದೆ.

ಅಥಣೊ: ಆಧ್ಯಾತ್ಮಿಕ ಕ್ಷೇತ್ರವಾದ ಅಥಣಿಯ ಸ್ಥಳನಾಮದ ಪರಿಶೀಲನೆಯಲ್ಲಿ ತೊಡಗಿದಾಗ ಕ್ರಿ.ಶ.೧೬೩೯ರಲ್ಲಿ ಜರ್ಮನ್ ಪ್ರವಾಸಿಗ ಮಂಡೆಲ್ ಸ್ಲೂ ಎಂಬುವವನು ‘ಅಟ್ಟನಿ’ ಎಂದು, ಕ್ರಿ.ಶ.೧೬೭೫ರಲ್ಲಿ ಆಂಗ್ಲ ಪ್ರವಾಸಿಗ ಪ್ಲೇಯರ್ ಹಟ್ಟೇನಿ ಎಂದು ಕರೆದಿದ್ದಾರೆ.

ಅಟನಿ > ಅಟ್ಟನಿ > ಹಟ್ಟೇನಿ > ಹಸ್ತಿನಿ (ಹೆಣ್ಣಾನೆ)  > ಅಸ್ತಿನಿ > ಅಥನಿ > ಅಥಣಿ ಎಂದು ಪದನಿಷ್ಪತ್ತಿ. ‘ಅಟ್ಟ’ ಎಂದರೆ ಸ್ಥಳ ‘ಣಿ’ ಎಂದರೆ ನಿರಂಜನ. ಅಥಣಿ  ಎಂದರೆ ನಿರಂಜನ ಸ್ಥಳವೆಂದು ನಿರ್ಧರಿಸಬಹುದು. ಇದಕ್ಕೆ ಪೂರಕವಾಗಿ ಪಂಚ ಮಠಗಳು ಇಲ್ಲಿವೆ. ಈ ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಕರಿ ಮಸೂತಿ ಶಾಹಿ ಹಾಗೂ ಮರಾಠ ಗಡಿ ಸೀಮೆಯಾಗಿತ್ತು. ಈ ‘ಹಾಥಿ’ ಎಂಬ ಶಬ್ದವು ಅಪಭ್ರಂಶವಾಗಿ ಹತ್ತಿ >ಹತಿಣಿ> ಅಥಣಿ ಎಂದಾಗಿರಬಹುದೆಂದು ಅಭಿಪ್ರಾಯವಿದೆ. ಅಥಣಿ ಎಂದರೆ ಸಂಸ್ಕೃತದಲ್ಲಿ ‘ಅಥ’ ಎಂದರೆ ಪ್ರಾರಂಭ ‘ಣಿ’ ಎಂದರೆ ನಿರಂಜನ ಎಂದಾಗುತ್ತದೆ. ನಿರಂಜನರು ಯಾವಾಗಲೂ ಈ ನೆಲದಲ್ಲಿ ನೆಲೆಸುತ್ತಾರೆಂಬುದು ಈ ಶಬ್ದದ ಇನ್ನೊಂದು ನಿಷ್ಪತ್ತಿ. ಇದಕ್ಕೆ ಪೂರಕವಾಗಿ ಇಂದಿಗೂ ಶಿವಯೋಗಿ ಮುರುಘೇಂದ್ರಸ್ವಾಮಿಗಳ ದಿವ್ಯ ಕ್ಷೇತ್ರವಾಗಿ ಆಧ್ಯಾತ್ಮಿಕ ಭೂಮಿಯಾಗಿದೆ.

ಮಂಗಸೂಳಿೊ: ಮಂಗಸೂಳಿಯಲ್ಲಿ ಮಲ್ಲಯ್ಯಯನ ಸುಪ್ರಸಿದ್ಧ ದೇವಾಲಯವಿದೆ. ಪೌರಾಣಿಕವಾದ ಹಿನ್ನೆಲೆಯುಳ್ಳ ಪುಣ್ಯಕ್ಷೇತ್ರವಾಗಿದೆ. ಮಣಿ-ಮಲ್ಲರ ದೈತ್ಯರ ಉಪಟಳ ಭೂಲೋಕದಲ್ಲಿ ವಿಪರೀತವಾದಾಗ ಕೈಲಾಸಪತಿ, ಮಲ್ಲಯ್ಯನ ಅವತಾರ ಧರಿಸಿ ಬಂದು ಮಲ್ಲಾಸುರನನನ್ನು ವಧೆ ಮಾಡಿದ ನಂತರ ಮಣಿ ದೈತ್ಯನನ್ನು ತ್ರಿಶೂಲದಿಂದ ಇರಿದು ಕೊಂದನು. ಈ ವಧಾಸ್ಥಾನ ಮಣಿ-ಶೂಲ ಮನ್ಸೂಳಿಯಾಗಿ, ಮಂಗಸೂಲಿಯಾಗಿದೆ ಎಂದು ಸ್ಥಳ ಪುರಾಣಗಳು ತಿಳಿಸುತ್ತವೆ.

ರಾಮತೀರ್ಥೊ: ಚಾಲುಕ್ಯಶೈಲಿಯಿಂದ ಕೂಡಿದ ಉಮಾಮಹೇಶ್ವರರ ದೇವಾಲಯ ಇಲ್ಲಿದೆ. ‘ದಕ್ಷಿಣಕಾಶಿ’ ಎಂದೇ ಹೆಸರನ್ನು ಪಡೆದಿದೆ. ವನವಾಸದಲ್ಲಿದ್ದ ಶ್ರೀರಾಮ ಇಲ್ಲಿಗೆ ಬಂದು ಪೂಜೆ ಮಾಡಿದನಂತೆ. ಈಶ್ವರನೊಂದಿಗೆ ತನ್ನ ಹೆಸರು ಚಿರಸ್ಥಾಯಿಯಾಗಲೆಂದು ರಾಮೇಶ್ವರ ಎಂದು ನಾಮಕರಣ ಮಾಡಿದನೆಂದು ‘ರಾಮೇಶ್ವರ ಮಹಾತ್ಮೆ’ ಕೃತಿಯಲ್ಲಿ ಉಲ್ಲೇಖವಿದೆ. ಮುಖ್ಯ ದೇವಾಲಯದ ಹಿಂಭಾಗದಲ್ಲಿ ನಿಸರ್ಗದತ್ತವಾದ ಗುಹೆ ಇದ್ದು,  ಅದರಲ್ಲಿ ಆನಂದ ನಾಯಕಿ (ಪಾರ್ವತಿ) ಯ ಚಿಕ್ಕ ದೇವಾಲಯವಿದೆ. ಈ ಪರ್ವತಕ್ಕೆ ಅಕ್ಷಯ ಪರ್ವತವೆಂದು ಹೆಸರಿದೆ. ಗಂಗಾನದಿಯು ಎಂಟು ತೀರ್ಥಗಳಾಗಿ ಹರಿದು ‘ಪಾಪ ನಾಶಿನಿ’ ಎಂದು ಹೆಸರು ಪಡೆದಿದೆ. ಈ ಹಿನ್ನೆಲೆಯಲ್ಲಿಯೇ ಶ್ರೀ ಕ್ಷೇತ್ರಕ್ಕೆ ರಾಮತೀರ್ಥವೆಂದು ಹೆಸರು ಬಂದಿದೆ.

ತೆಲಸಂಗೊ: ತೆಲಸಂಗದಲ್ಲಿ ವಿರಕ್ತಮಠವಿದೆ. ೧೨ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರಿಗೆ ತೈಲವನ್ನು ಪೂರೈಸುವ ಜನಗಳು ಈ ಊರಿನಲ್ಲಿ ವಾಸಿಸುತ್ತಿದ್ದರಿಂದ ಈ ಊರಿಗೆ ಈ ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ.

ಸಪ್ತಸಾಗರ : ಸಪ್ತಸಾಗರವು ತಾಮ್ರ ಶಿಲಾಯುಗದ ನೆಲೆಯಾಗಿದೆ. ಧರ್ಮಗ್ರಂಥವಾದ ಮಹಾಭಾರತದ ಕೊನೆಯ ಅರಸ ಪಾಂಡವ ಕುಲ ಸಂತಾನವಾದ ಜನಮೇಜಯನು ಸರ್ಪಯಾಗವನ್ನು ಕೈಗೊಳ್ಳುವ ಸಂಕಲ್ಪಮಾಡಿದನಂತೆ. ಆ ಯಾಗಕ್ಕೆ ವಿಘ್ನ ಉಂಟಾಗಿ ಪೂರ್ತಿಯಾಗದೆ, ಅರಸ ಮನನೊಂದು ತೀರ್ಥಯಾತ್ರೆಗೆ ಹೊರಟು ಈ ಗ್ರಾಮದ ಮೂಲಕ ಪ್ರಯಾಣಿಸುತ್ತಿದ್ದಾಗ ಅಲ್ಲಿದ್ದ ಬಕಾಲ ಮಹರ್ಷಿಗಳು ಸರ್ಪಯಾಗ ಪೂರ್ಣಗೊಳ್ಳುವಂತೆ ಆಶೀರ್ವದಿಸಿದರಂತೆ, ಜನಮೇಜಯ ಸರ್ಪಯಾಗ ಕೈಗೊಂಡನಂತೆ ಅದಕ್ಕೆ ಸಾಕ್ಷಿಯಾಗುವಂತೆ ಈ ಗ್ರಾಮದ ಸುತ್ತಲೂ ಕರಿ ಮಣ್ಣಿನ ಭೂಮಿ ಇದೆ.

ಇದರ ಪೂರ್ವಭಾಗದ ಒಂದು ಸ್ಥಳದಲ್ಲಿ ಶುಭ್ರವಾದ ಬೂದಿ ಗುಡ್ಡವಿದೆ. ಸಪ್ತರ್ಷಿಗಳು ಸಪ್ತಸಾಗರಗಳಿಂದ ತರಿಸಿದ ನೀರನ್ನು ಇಲ್ಲಿ ಯಜ್ಞಕ್ಕಾಗಿ ಬಳಸಿದರಂತೆ ಅದಕ್ಕೆ ಸ್ಥಳೀಯರು ಈ ಗ್ರಾಮಕ್ಕೆ ಸಪ್ತಸಾಗರ ಎಂದು ಹೆಸರು ಬಂದಿದೆ ಎನ್ನುತ್ತಾರೆ.

ಮಹಿಷವಾಡಗಿ : ಈ ಗ್ರಾಮದಲ್ಲಿ ದುಷ್ಟರು ಗೋವುಗಳನ್ನು ಅಪಹರಿಸುತ್ತಿರುವುದನ್ನು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಷನೆಂಬ ಜಟ್ಟಿ ನೋಡಿ ಆ ಹಸುವಿನ ಬಿಡುಗಡೆಗಾಗಿ ‘‘ಹಸು ಇಲ್ಲವೆ ಅಸು’’ ಎಂದು ಹೋರಾಡಿ ಪ್ರಾಣ ತೆತ್ತನು. ಮಹಿಷನೆಂಬ ವೀರನಿಂದ ಊರಿಗೆ ಈ ಹೆಸರು ಬಂದಿತು.

ಮದಭಾವಿ : ಮದಭಾವಿಗೆ ಹಿಂದೆ ಮಧುರಭಾವಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಮಧುಕೇಶ್ವರ ದೇವಾಲಯ ಇದುವುದರಿಂದಲೇ ಈ ಊರಿಗೆ ಮದಭಾವಿ ಎಂದು ಕರೆಲ್ಪಡುತ್ತಿದೆ.

ಉಗಾರ ಬುದುಕ : ಇಲ್ಲಿ ಅತಿ ಪ್ರಾಚೀನವಾದ ಪದ್ಮಾವತಿ ದೇವಾಲಯವಿದೆ ಹಾಗೂ ಉಗ್ರೇಶ್ವರ ಅಥವಾ ಮಹಾದೇವ ದೇವಾಲಯವಿದೆ. ಉಗ್ರೇಶ್ವರನಿಂದಲೇ ಈ ಗ್ರಾಮಕ್ಕೆ ಉಗಾರವೆಂದು ಹೆಸರು ಬಂದಿದೆ.

ಸ್ಥಳನಾಮಗಳೆಂದರೆ ಕೇವಲ ಊರ ಹೆಸರುಗಳಲ್ಲ, ಅವು ಆಯಾ ಪ್ರದೇಶಗಳ ಭೌಗೋಳಿಕ, ಐತಿಹಾಸಿಕ ಹಾಗೂ ಸಾಮಾಜಿಕ ವಿಷಯಗಳನ್ನೊಳಗೊಂಡ ಜೀವಂತ ಪಳೆಯುಳಿಕೆಗಳು, ಸಾಂಸ್ಕೃತಿಕ ಘಟಕಗಳು ಎಂಬುದನ್ನು ಇಲ್ಲಿ ನೋಡಬಹುದು. ಈ ತಾಲೂಕಿನ ಹಲವಾರು ಗ್ರಾಮನಾಮಗಳು ಐತಿಹಾಸಿಕ ಘಟನೆಗಳನ್ನು, ಸಾಂಸ್ಕೃತಿಕ ವಿವರಗಳನ್ನು ಧಾರ್ಮಿಕ ಮಹಾಪುರುಷರನ್ನು ದಾಖಲೆಯ ರೂಪದಲ್ಲಿ ಉಳಿಸಿಕೊಂಡು ಬಂದಿವೆ. ಆದ್ದರಿಂದ ಇವು ಸಾಂಸ್ಕೃತಿಕ ಅಧ್ಯಯನಕ್ಕೆ ಅಮೂಲ್ಯ ಆಕರವಾಗಬಲ್ಲವು.