ಮ್ಯಾಸಬೇಡರ ಬುಡಕಟ್ಟು ಮೂಲತಃ ಮಾತೃಮೂಲೀಯವಾಗಿದ್ದು ಮಹಿಳಾ ಪ್ರಧಾನವಾಗಿದ್ದ ಬುಡಕಟ್ಟು. ಈ ಕಾರಣದಿಂದಾಗಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾದುದಾಗಿದೆ. ಈ ವಿಶಿಷ್ಟ ಮಹಿಳೆಯರನ್ನು ಮ್ಯಾಸಬೇಡರ ಸಾಂಸ್ಕೃತಿಕ ನಾಯಕಿಯರು ಎಂದು ಕರೆಯಲಾಗಿದೆ.

ಸಮುದಾಯದ ಮೌಖಿಕ ಚರಿತ್ರೆ ಕಟ್ಟಿಕೊಡುವ ‘ಸ್ತ್ರೀ’ ವಿನ್ಯಾಸವನ್ನು ಗಮನಿಸಿದಾಗ ಪಿತೃ ಪ್ರಾಧಾನ್ಯತೆಗಿಂತ ಸಹಜವಾದ ಸಾಮುದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಸಮಾನ ಗೌರವ ಪಡೆದು ನೆಮ್ಮದಿಯಾಗಿಯೇ ಬಾಳುತ್ತಿದ್ದ ವಿವರಗಳು ದೊರೆಯುತ್ತವೆ. ಹಾಗೆಯೇ ಪಿತೃಪ್ರಾಧಾನ್ಯತೆಯೊಂದಿಗೆ ಮೊದಲುಗೊಂಡ ಖಾಸಗೀ ಆಸ್ತಿಯ ಪರಿಕಲ್ಪನೆ, ಇದರೊಂದಿಗೆ ಪ್ರಾರಂಭವಾದ ಆಳುವ ಮನೋಭಾವದ ಪುರುಷನ ದಬ್ಬಾಳಿಕೆಗೆ ಒಳಗಾದ ಮಹಿಳೆಯ ಸ್ಥಿತಿ ಹೇಗಿದೆ ಎಂದು ವಿಚಾರ ಮಾಡ ಹೊರಟಾಗ ಕಂಡುಬರುವ ಸಂಗತಿಗಳು ಅನೇಕ. ಕಾರಣ ಪರಿಣಾಮಗಳ ಹಿನ್ನೆಲೆಯಲ್ಲಿಯೇ ಇದನ್ನು ಗ್ರಹಿಸಬೇಕಾದ ಅಗತ್ಯವೂ ಇದೆ. ಕಾಡಿನ ನೆಲೆ ಕಳೆದುಕೊಂಡು ಆ ಮೂಲಕ ಪಶುಪಾಲನೆಯನ್ನು ಕಳೆದುಕೊಂಡು ಸಮುದಾಯ ಅತಂತ್ರ ಸ್ಥಿತಿಗೆ ತಲುಪಿತು. ಹಿಂದೆ ಸಮುದಾಯದ ಪುರುಷರು ಪಶುಪಾಲನೆ ಮಾಡುತ್ತಿದ್ದಾಗ ಹೈನುಗಾರಿಕೆಯ ಸಂಪೂರ್ಣ ಹೊಣೆಗಾರಿಕೆ ಮಹಿಳೆಯದೇ ಆಗಿರುತ್ತಿತ್ತು. ಉತ್ಪಾದನಾ ಬದುಕನ್ನು ಮಹಿಳೆ ಇಲ್ಲಿ ಕಳೆದುಕೊಂಡಳು. ಸ್ವಾಯತ್ತವಾಗಿ ಬದುಕುತ್ತಿದ್ದ ಸ್ವಾಭಿಮಾನಿ ಮಹಿಳೆಯರು ಪರರ ಹೊಲಗದ್ದೆಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯಲೇಬೇಕಾದ ಅನಿವಾರ್ಯಕ್ಕೆ ತಲೆಬಾಗಿದರು. ತೀರಾ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಗಳ ಮಹಿಳೆಯರು ಕಾಡಿನ ಉತ್ಪನ್ನಗಳನ್ನು ಅಂದರೆ ಎಲೆ, ಕಟ್ಟಿಗೆ, ಕವಳೆ, ಕಾರೆಯ ಹಣ್ಣುಗಳನ್ನು ತಂದು ಊರಲ್ಲಿ ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದದ್ದೂ ಉಂಟು.

ಹಟ್ಟಿಗಳ ವಾಸದಿಂದ ಕ್ರಮೇಣ ಊರಿನಲ್ಲಿಯೂ ವಾಸ ಮೊದಲಾಯಿತು. ಕೆಲವು ಪ್ರತಿಷ್ಠಿತ ‘ಪಾಳೆಗಾರಿಕೆ’ ಮನೋಭಾವದ ಪುರುಷರು ಪರರ ಹೊಲಗದ್ದೆಗಳಲ್ಲಿ ದುಡಿಯಲಾರದೆ ಹೋದಾಗ ಬದುಕಿನ ಬಂಡಿಯನ್ನು ಹೆಣ್ಣೇ ಎಳೆದಂತಹ ಎಷ್ಟೋ ಉದಾಹರಣೆಗಳು ಕಣ್ಣಿಗೆ ಕಟ್ಟಿದಂತಿವೆ.

ರಾಜಾರಾಮ್ ಮೋಹನರಾಯರು, ದಯಾನಂದ ಸರಸ್ವತಿ ಮುಂತಾದವರ ಸ್ತ್ರೀ ಪರ ಕಾಳಜಿಗಳು, ಪ್ರಯತ್ನಗಳು ಯೋಜನೆ ಮಾಡಿದ್ದು ಯಾವ ಸ್ತ್ರೀಯರ ಬಗ್ಗೆ ಎಂಬ ಪ್ರಶ್ನೆ ಮೂಡುತ್ತದೆ. ನಾಗರಿಕ ಎಂದು ಕರೆಸಿಕೊಂಡ ಮಹಿಳೆಯರೇ ಅವರ ಆಲೋಚನೆಗೆ ಸಿಕ್ಕಿದ್ದು ಇಲ್ಲಿ ವಾಸ್ತವ. ಬಾಲ್ಯವಿವಾಹ ತಪ್ಪಿಸುವ, ವಿಧವೆಯರ ಪರಿಸ್ಥಿತಿ ಸುಧಾರಿಸುವ, ಸತಿಪದ್ಧತಿಯನ್ನು ತಡೆಯುವ ಬಗೆಯಲ್ಲಿ ಮುಂದುವರಿದ ವರ್ಗದ ಮಹಿಳೆಯರ ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ಗಮನ ಇವರು ಹರಿಸಿದ್ದರು. ಸರ್ಕಾರ ಇಲ್ಲಿ ಯೋಜನೆ, ನಿಯಮ ಎಂದು ರೂಪಿಸುವಾಗಲೂ ಈ ನೆಲೆಯ ಮಹಿಳೆಯರನ್ನು ಕುರಿತೇ ಆಲೋಚಿಸಿತು. ಆದರೆ ಅತ್ಯಂತ ದಯನೀಯ ಸ್ಥಿತಿಯಲ್ಲಿ ನಾಗರಿಕ ಸಮಾಜದ ಯಾವ ಸೌಲಭ್ಯಗಳನ್ನೂ ಪಡೆಯದ ಅತಂತ್ರ ಮಹಿಳೆಯರ ಬಗ್ಗೆ ಯೋಜನೆ ಮಾಡಿದ್ದು ಇಲ್ಲವೇ ಇಲ್ಲ ಎನ್ನಿಸುವಷ್ಟು ಕಡಿಮೆ ಪ್ರಮಾಣದಲ್ಲಿ.

ಶೈಕ್ಷಣಿಕ

ಈ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಅಕ್ಷರದ ಅರಿವಿನ ಮೂಲಕವೇ ಜ್ಞಾನದ ಪರಿಧಿಯನ್ನು ಅಳೆಯುವ ಮತ್ತು ಅವರಿಗೆ ಉದ್ಯೋಗ ನೀಡುವ ವ್ಯವಸ್ಥೆಯಡಿಯಲ್ಲಿ ಅಕ್ಷರದ ಅರಿವನ್ನೇ ಪಡೆಯದವರು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವುದು ಸಹಜವೇ ಆಗಿಬಿಟ್ಟಿತ್ತು. ದೈಹಿಕ ಶ್ರಮವನ್ನು ಬಂಡವಾಳವನ್ನಾಗಿ ಹೂಡಿ ದುಡಿಯುವ ಶ್ರಮಜೀವಿಗಳಿಗೆ ಇಂದಿಗೂ ನಮ್ಮಲ್ಲಿ ಸಲ್ಲುತ್ತಿರುವ ಮಾನ್ಯತೆ ಯಾವ ನೆಲೆಯದು ಎನ್ನುವ ಸತ್ಯ ನಮಗೆಲ್ಲಾ ತಿಳಿದಿರುವುದೇ ಆಗಿದೆ.

‘‘ಬೌದ್ದಿಕ ಹಸಿವಿನಿಂದ ಸಾಯುವುದೂ ಮಹಿಳೆಯ ವಿಧಿ’’. ವ್ಯವಸ್ಥೆಯೊಂದು ಒದಗಿಸಿಕೊಡುವ ಯಾವುದೇ ಅನುಕೂಲವನ್ನು ಮೊದಲು ಅನುಭವಿಸುವವನೇ ಪುರುಷ. ಪುರುಷರೇ ಅಪರೂಪಕ್ಕೆಂಬಂತೆ ಅಕ್ಷರಸ್ಥನಾಗುತ್ತಿದ್ದ ಪರಿಸ್ಥಿತಿಯಲ್ಲಿ ಮಹಿಳೆಯರ ಶಿಕ್ಷಣದ ಗುಣಮಟ್ಟ ದೂರದ ಮಾತೇ ಆಗಿದ್ದುದರಲ್ಲಿ ಅಚ್ಚರಿಯೇನೂ ಇಲ್ಲ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ರಾಕಿ ಬೋರನ ಹಟ್ಟಿಯ  ಜನಸಂಖ್ಯೆ ೪೧೯. ಇದರಲ್ಲಿ ೨೦೯ ಮಂದಿ ಗಂಡಸರು; ೨೧೦ ಮಂದಿ ಹೆಂಗಸರು. ಇಪ್ಪತ್ತೈದು ವರ್ಷದ ಹಿಂದೆ ಇಲ್ಲಿ ಯಾರೂ ವಿದ್ಯಾವಂತರೇ ಇರಲಿಲ್ಲ. ಎಸ್.ಎಸ್.ಎಲ್.ಸಿ.ಯವರೆಗೆ ಕಲಿತ ಐದು ಮಂದಿ ಗಂಡಸರು, ಇಬ್ಬರು ಮಹಿಳೆ ಯರಿದ್ದಾರೆ.

ಒಟ್ಟು ಸಮುದಾಯದಲ್ಲಿ ಕಲಿಕೆಯ ಪ್ರಮಾಣ ಕಡಿಮೆ. ಅದರಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆ ಇನ್ನೂ ಕಡಿಮೆ. ಒಟ್ಟು ಸಮುದಾಯದಲ್ಲಿ ಕೆಲವು ಕಡೆ ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಸ್ನಾತಕೋತ್ತರ ಶಿಕ್ಷಣ ಪಡೆದು ಸಂಬಂಧಿಸಿದ ಕ್ಷೇತ್ರದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಪುರುಷರಿಗಿಂತ ಮಿಗಿಲಾಗಿ ಯಾವುದೇ ಕ್ಷೇತ್ರದಲ್ಲೂ ಸಹ ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವ ಹಾಗೆ ಕಾರ್ಯವನ್ನು ನಿರ್ವಹಿಸುವ ಮನೋವೃತ್ತಿ ಮಹಿಳೆಯರಲ್ಲಿ ಕಂಡುಬರುತ್ತದೆ. ಮಹಿಳೆ ದುರ್ಬಲಳಲ್ಲ. ಅವಕಾಶವನ್ನು ನಿರೀಕ್ಷಿಸಿ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಎದೆಗಾರಿಕೆ ಉಳ್ಳ ದಿಟ್ಟ, ಧೀರ, ಧೀಮಂತ ಮಹಿಳೆಯಾಗಿ ಸಮಾಜದ ಮುಂದೆ ನಿಲ್ಲುತ್ತಾಳೆ.

ರಾಜಕೀಯವಾಗಿ : ಗ್ರಾಮಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಸರ್ಕಾರದ ಮೀಸಲಾತಿ ನೀತಿಯ ಅನ್ವಯ ಅನಿವಾರ್ಯವಾಗಿ ಮಹಿಳೆಯರನ್ನು ಪುರುಷರು ಕಣಕ್ಕಿಳಿಸಬೇಕಾಯಿತು. ಅವರ ಹಿಂದಿರುವ ಚಾಲಕ ಶಕ್ತಿಯಾಗಿ ಕೆಲಸ ನಿರ್ವಹಿಸುವವರು ಪುರುಷರು. ಅಕೆ ನೆಪಮಾತ್ರಕ್ಕೆ ಆಡಳಿತವನ್ನು ನಡೆಸುವ ಯಂತ್ರವಾಗುತ್ತಾಳೆ. ಸರ್ವ ಅಧಿಕಾರವೆಲ್ಲವೂ ಗಂಡನ ಅಥವಾ ಪುರುಷನ ಕೈಯಲ್ಲಿ ನಿಯಂತ್ರಿಸಲ್ಪಟ್ಟಿದೆ. ಆಡಳಿತ ನಡೆಸಲು ಬೇಕಾದ ಪೂರ್ವ ಸಿದ್ಧತೆಯನ್ನು ವ್ಯವಸ್ಥೆ ಒದಗಿಸಬೇಕು. ಬಹುಶಃ ಆಕೆಗೂ ಆಗ ಪರಾವಲಂಬಿತನ ಇರದು. ಆಡಳಿತವನ್ನು ಸಮರ್ಥವಾಗಿ ನಿರ್ವಹಿಸುವ ಜವಾಬ್ದಾರಿ ಆಕೆಯಲ್ಲಿದೆ. ಅದನ್ನು ಸರ್ಕಾರ ಅಥವಾ ವ್ಯವಸ್ಥೆ ಶಿಕ್ಷಣದ ಮೂಲಕ ಆ ಕೊರತೆಯನ್ನು ನೀಗಿಸಲು ಸಹಕರಿಸಬೇಕು.

ಸಾಮಾಜಿಕವಾಗಿ : ಶ್ರಮ ಜೀವನಕ್ಕೆ ಮತ್ತೊಂದು ಹೆಸರೇ ಸಮುದಾಯದ ಮಹಿಳೆಯರು ಎಂದು ಹೇಳಬಹುದು. ಕುಟುಂಬ ನಿರ್ವಹಣೆಗಾಗಿ ದುಡಿಮೆ ಅನಿವಾರ್ಯವಾಗಿದೆ. ಪರಂಪರಾನುಗತವಾಗಿ ಬಂದ ದುಡಿದು ಉಣ್ಣುವ ಸ್ವಾವಲಂಬಿತನವೂ ಇದಕ್ಕೆ ಹಿನ್ನೆಲೆಯಾಗಿದೆ. ಕುಟುಂಬದ ಆದಾಯಕ್ಕೆ ತನ್ನ ಶ್ರಮವನ್ನು ಬಳಕೆ ಮಾಡುತ್ತಿರುವ ಮಹಿಳೆಗೆ ಆಯಾ ಕುಟುಂಬದಲ್ಲಿ ಯಾವ ಬಗೆಯ ಮಾನ್ಯತೆ ಇದೆ ಎಂದರೆ ಆಕೆಯ ಬಗ್ಗೆ ಇರುವ ತಿರಸ್ಕಾರದಿಂದಾಗಿ ಆಕೆ ಅವಮಾನದಿಂದ ಮೂಲೆಗುಂಪಾಗಿರುವ ಪರಿಸ್ಥಿತಿಯಿದೆ. ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಿತಿಯಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಸಹಿತ, ಜೀವನದ ರಥವನ್ನು ಸಾಗಿಸುತ್ತಲೇ ಬಂದಿದ್ದಾಳೆ.

ಸುಶಿಕ್ಷಿತ ಮಹಿಳೆ

ಸಮುದಾಯದಲ್ಲಿ ಸಾಕ್ಷರತೆಯ ಬಗ್ಗೆ ಇತ್ತೀಚೆಗೆ ವ್ಯಾಪಕ ತಿಳುವಳಿಕೆ ಮೂಡುತ್ತಿದೆ. ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯೇ. ಇಂತಹ ಮಹಿಳೆಯರು ಔದ್ಯೋಗಿಕ ನೆಲೆ ಮತ್ತು ಆರ್ಥಿಕ ಸಬಲೀಕರಣದ ಕಾರಣವಾಗಿ ಕುಟುಂಬ ಹಾಗೂ ಸಮುದಾಯದಲ್ಲಿ ಮಾನ್ಯತೆಯನ್ನು ಪಡೆದಿದ್ದಾರೆ. ಆದಾಗ್ಯೂ ಅವರ ಸ್ಥಾನ ಎರಡನೆಯದೇ ಹೊರತು ಸಮಾನವಾದದ್ದಲ್ಲ. ಜೊತೆಗೆ ಇವರು ಸಮುದಾಯದ ಸಂಪರ್ಕವನ್ನೂ ಉಳಿಸಿಕೊಂಡು ಮುಖ್ಯವಾಹಿನಿಯೊಂದಿಗೆ ಬೆರೆಯುವ ಪ್ರಯತ್ನ ಮಾಡಿದ್ದಾರೆ.

ಬುಡಕಟ್ಟಿನ ಅನಕ್ಷರಸ್ಥ ಮಹಿಳೆಯರ ಸೃಜನಶೀಲತೆ, ಕಟ್ಟುವ ಜಾಣ್ಮೆ, ಕಲ್ಪನಾ ಚಾತುರ್ಯವಿರುವ ಮನಸ್ಸು ಭಾಷಿಕ ಮಾಧ್ಯಮದ ಮೂಲಕ ಅನಾವರಣ ಗೊಂಡಾಗ ಅದು ಸಾಹಿತ್ಯ ಎನಿಸಿಕೊಳ್ಳುತ್ತದೆ. ಇದರಿಂದ ಓದುಗನಿಗೆ ತಾನು ಅದುವರೆಗೂ ಕಾಣದ ಲೋಕದ ಪರಿಚಯವಾಗುತ್ತದೆ.

ಬುಡಕಟ್ಟಿನ ಸಾಹಿತ್ಯ ಶ್ರೀಮಂತ ಸಂಸ್ಕೃತಿಯಲ್ಲಿ ಸೃಷ್ಟಿಯಾದುದಲ್ಲ, ಬದಲಾಗಿ ಶ್ರಮಿಕ ನೆಲೆಯಲ್ಲಿ ಹುಟ್ಟಿದ್ದು. ಹಾಗೆಯೇ ಆರಾಧನಾ ನೆಲೆಯಲ್ಲಿ ಪೋಷಿಸಲ್ಪಟ್ಟಿದ್ದು. ಒಟ್ಟು ಸಮಾಜದ ವಿನ್ಯಾಸವನ್ನೇ ಕಥನಗಳ ಮೂಲಕ ಕಟ್ಟಿಕೊಡುತ್ತಾರೆ.

ಒಟ್ಟಾರೆಯಾಗಿ ಶಿಷ್ಟ ಮಹಿಳೆ ತನಗೆ ದಕ್ಕುವ ಆಧುನಿಕ ಶಿಕ್ಷಣ, ಹೊರ ಜಗತ್ತಿನ ಸಂಪರ್ಕಗಳಿಂದ ಗಳಿಸುವ ತಿಳುವಳಿಕೆಯಿಂದ ತನ್ನ ಬರವಣಿಗೆಯನ್ನು ಶಕ್ತಿಯುತಗೊಳಿಸಿ ಕೊಳ್ಳಬಲ್ಲಳು. ಒಂದು ಸಮುದಾಯದ ಇತಿಹಾಸ, ಸಂಸ್ಕೃತಿ ಇಂದು ಉಳಿದು ಬಂದಿರುವುದೇ ಇವರ ಮೂಲಕ. ಇದನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರು ವವರು ಅನಕ್ಷರಸ್ಥ ಮಹಿಳೆಯರೇ ಎಂದು ಹೇಳಬಹುದು.

ದೇವದಾಸಿ ಪದ್ಧತಿ

ಸಮುದಾಯದಾದ್ಯಂತ ಈ ಪದ್ಧತಿ ಇಲ್ಲ. ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಈ ಸಮಸ್ಯೆಯಿದೆ. ಇದೊಂದು ಅತ್ಯಂತ ವಿಷಾದನೀಯ ಸ್ಥಿತಿ. ದೇವರು, ಧರ್ಮದ ಹೆಸರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಹೆಣ್ಣನ್ನು ತನ್ನ ಉಪಭೋಗಕ್ಕಾಗಿ ಬಳಸಿಕೊಳ್ಳಲು ವ್ಯವಸ್ಥಿತವಾಗಿ ಅಮಾನವೀಯ ಗುಣದ ಕೆಲ ಪುರುಷರು ರೂಪಿಸಿದ ಸಂಚಿದು. ದುರಂತ ವೆಂದರೆ ಇದಕ್ಕೆ ಬಲಿಯಾಗುವ ಮಹಿಳೆಯರು ಕೆಳಜಾತಿಯವರು. ಅಜ್ಞಾನ, ಮೌಢ್ಯ, ಬಡತನದ ಸುಳಿಯಲ್ಲಿ ಸಿಲುಕಿರುವವರೇ ಹೊರತು ಈ ಸ್ತರದಿಂದ ಮೇಲಿರುವವರು ಅಲ್ಲವೇ ಅಲ್ಲ. ಆಳುವ ಶಕ್ತಿಗಳ ಯಾವುದೇ ಬಗೆಯ ಶೋಷಣೆಗೆ ತಮ್ಮ ದೇಹವನ್ನು ಬಾಗಿಸಬೇಕಾದವರು ಕೆಳ ಸಮುದಾಯದ ಜನರೇ ಹೊರತು ಬೇರೆ ಯಾರೂ ಅಲ್ಲ. ದೇವರ ಹೆಸರಿನಲ್ಲಿ ಹೆಣ್ಣು ತನ್ನನ್ನು ಆಳುವ ಬಲಿಷ್ಠ ಶಕ್ತಿಗಳಿಗೆ ಒಪ್ಪಿಸಿಕೊಂಡು ಬದುಕಿನ ಉದ್ದಕ್ಕೂೊಅತಂತ್ರ ಸ್ಥಿತಿಯಲ್ಲಿ ಬಾಳಬೇಕಲ್ಲದೆ ಸಾಮಾಜಿಕ ಅಪಮಾನವನ್ನು ಅನುಭವಿಸ ಬೇಕಾಯಿತು.

ಸಾಮಾನ್ಯವಾಗಿ ಕಾಡಿನಲ್ಲಿ ತಮ್ಮದೇ ಆದ ಸಾಂಸ್ಕೃತಿಕ ವಿಧಾನಗಳಡಿಯಲ್ಲಿ ಬಾಳು ತ್ತಿದ್ದ ಬುಡಕಟ್ಟು ಸಮುದಾಯಗಳಲ್ಲಿ ಈ ಬಗೆಯ ಪದ್ಧತಿ ಇರುವ ಸಾಧ್ಯತೆಗಳೇ ಕಡಿಮೆ.ವಿಷಾದಕರ ಸಂಗತಿ ಎಂದರೆ ಚಾರಿತ್ರಿಕ ಕಾರಣಗಳಿಂದ ಮ್ಯಾಸಬೇಡ ಸಮುದಾಯದ ಕೆಲವು ಮಹಿಳೆಯರು ಇದಕ್ಕೆ ಬಲಿಯಾಗಬೇಕಾದುದು. ಬುಡಕಟ್ಟು ಸಮುದಾಯಗಳು ಊರಿನ ಸಂಪರ್ಕಕ್ಕೆ ಬಂದಾಗ ಪಡೆದ ಸೌಲಭ್ಯಗಳೊಂದಿಗೆ ಕಳೆದುಕೊಂಡದ್ದು ಬಹಳಷ್ಟು. ಹೀಗೆ ತಮ್ಮನ್ನು ಕಳೆದುಕೊಂಡವರೇ ಈ ದೇವದಾಸಿಯರು.

ಪವಿತ್ರ ಸಮುದಾಯ ತಮ್ಮನ್ನು ಸ್ವೀಕರಿಸದೆ ಇದ್ದಾಗ ಬದುಕಲು ಬೇರೆ ವಿಧಾನವಿಲ್ಲದೆ ಇದ್ದಾಗ ನರಕದ ಕೂಪದಲ್ಲಿ ನಿರಂತರವಾಗಿ ಬಾಳಬೇಕಾಯಿತು. ಮೂಲತಃ ತಮ್ಮಲ್ಲಿ ದೇವದಾಸಿ ಪದ್ಧತಿ ಇರಲಿಲ್ಲವಾದರೂ ತಮ್ಮ ಪರಿಸರದ ಒಂದು ಪದ್ಧತಿಯ ಹೆಸರಿನಲ್ಲಿ ಲಾಂಛನದ ಮೂಲಕ ಕಳೆದುಕೊಳ್ಳುತ್ತಿದ್ದ ಪಾವಿತ್ರ್ಯಕ್ಕೆ ಧಾರ್ಮಿಕ ಮೊಹರನ್ನು ಹಾಕಿಸಿಕೊಳ್ಳಬೇಕಾಯಿತು. ಅವರ ಅತಂತ್ರಸ್ಥಿತಿ ವಿಷಾದನೀಯವಾದುದು. ಸಮುದಾಯ ಅವರನ್ನು ಸಹೃದಯತೆಯಿಂದ ಕಂಡು ಅವರನ್ನು ಈ ಸಾಮಾಜಿಕ ಅಪಮಾನದಿಂದ ಬಿಡುಗಡೆಗೊಳಿಸಬೇಕಾದ ಅವಶ್ಯಕತೆಯಿದೆ.

ಸಮುದಾಯದ ಪ್ರತಿಯೊಂದು ಆಗು-ಹೋಗುಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದು, ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಸ್ತ್ರೀ ಶಕ್ತಿಗಳಾಗಿ ಇವರು ಕಂಡುಬರುತ್ತಾರೆ. ಭಾರತೀಯ ಮಹಿಳೆಯೆಂದರೆ ಅಬಲೆ, ದುರ್ಬಲೆ ಎಂಬ ವಾದವಿದ್ದು ಸಬಲಳಾಗಲು ಮುಂದಾಗಿದ್ದಾಳೆ.

 

ಆಧಾರ ಗ್ರಂಥಗಳು

೧.ಶ್ರೀಮತಿ ಎಚ್.ಎಸ್. (ಕನ್ನಡಕ್ಕೆ), ಆಧುನಿಕ ಭಾರತದಲ್ಲಿ ಮಹಿಳೆ, ೨೦೦೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಉಲ್ಲೇಖ, ಪು.೨೦

೨.ಅನ್ನಪೂರ್ಣಮ್ಮ ಸಿ.ಬಿ., ಮ್ಯಾಸಬೇಡರ ಸಾಂಸ್ಕೃತಿಕ ನಾಯಕಿಯರು : ಒಂದು ಅಧ್ಯಯನ, ಪಿಎಚ್.ಡಿ., ಪ್ರಬಂಧ, ದಿನಾಂಕ ೪-೪-೦೭, ವಿದ್ಯಾರಣ್ಯ