ಇಂಡಿಯಾದ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದರೆ, ಹಿಂದೂ ಧರ್ಮದ ಮನುಸ್ಮೃತಿಯ ವರ್ಣಾಶ್ರಮದಿಂದ, ಜಾತಿಪದ್ಧತಿಯಿಂದ ಜನತೆ ಸಾವಿರಾರು ಜಾತಿಗಳ ಹೋಳಾಗಿ, ಐಕ್ಯತೆ ಇಲ್ಲದೆ ದೇಶವು ಪರಕೀಯರ ಆಳ್ವಿಕೆಗೆ ಒಳಗಾಗಿ ಗುಲಾಮಗಿರಿಯಿಂದ ಕುಸಿದಿರುವುದು ಕಂಡುಬರುತ್ತದೆ. ನಾಗರಿಕತೆಯ ಹುಟ್ಟಿನಿಂದಲೂ ದೇಶವನ್ನು ಹಲವಾರು ಪ್ರಬಲ ರಾಜರುಗಳು ಆಳಿದ್ದಾರೆ. ವರ್ಣವ್ಯವಸ್ಥೆ ಕಾಲದಿಂದಲೂ ಇಂದಿನ ಜಾತಿ ಪದ್ಧತಿ ಯವರೆಗೆ ಉನ್ನತ ವರ್ಗದವರು ಅಥವಾ ಬಹುಸಂಖ್ಯಾತರೇ ಉನ್ನತ ಅಧಿಕಾರಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಈ ನಮ್ಮ ಭಾರತ ದೇಶದಲ್ಲಿ ಹಿಂದಿನಿಂದಲೂ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಯವರು ಶ್ರೇಷ್ಠರು, ಪವಿತ್ರರು ಹಾಗೆಯೇ ಕೆಳಜಾತಿಯವರು ಕನಿಷ್ಠರು, ಅಪವಿತ್ರರು, ಅಸ್ಪೃಶ್ಯರು ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ಉನ್ನತ ವರ್ಗದವರು ತಳವರ್ಗದವರನ್ನು ಹಿಂದಿನ ಕಾಲದಿಂದಲೂ ಶೋಷಿಸುತ್ತಾ ಕೆಳವರ್ಗದವರಿಗೆ ಅನಿಷ್ಟ ವೃತ್ತಿಗಳಾದ ಬೀದಿ ಗುಡಿಸುವುದು, ಚರಂಡಿ ತೊಳೆಯುವುದು, ಶೌಚಾಲಯಗಳನ್ನು ತೊಳೆಯುವುದು, ಸತ್ತ ಪ್ರಾಣಿಗಳನ್ನು ಹೊತ್ತು ಹಾಕುವುದು ಇತ್ಯಾದಿ ಕೆಲಸಗಳನ್ನು  ಮೀಸಲಿಟ್ಟರು. ಒಟ್ಟಾರೆ ಸಾಮಾಜಿಕ, ಆರ್ಥಿಕ ಅಸಮಾನತೆ ಉಲ್ಭಣಗೊಂಡು, ಅಸ್ಪೃಶ್ಯತೆ ಆಚರಣೆಯಿಂದ ದುರ್ಬಲ ಜನತೆಯ ಶೋಷಣೆಯಾಗಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ , ಲೋಹಿಾ, ಜ್ಯೋತಿಬಾಫುಲೆ, ಪೆರಿಯಾರ್ ಮುಂತಾದ ಮಹನೀಯರು ಇತಿಹಾಸದುದ್ದಕ್ಕೂ ಜಾತಿ ಪದ್ಧತಿ ವಿರುದ್ಧ ಹೋರಾಡಿದ್ದಾರೆ. ಅಂದು ಸಂತ ಕವಿ ಕನಕದಾಸರು ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಜಾತಿಯ ನೆಲೆಯನ್ನೇ ಪ್ರಶ್ನಿಸಿ ಜಾತಿ ವಿನಾಶಕ್ಕೆ ನಾಂದಿ ಹಾಡಿದರು. ಅಂತೆಯೇ ಜಾತಿ ವಿನಾಶವಾಗದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಈ ದಿಕ್ಕಿನಲ್ಲಿ ಇಡುವ ಮೊದಲ ಹೆಜ್ಜೆ ಎಂದರೆ ಮುಂದುವರಿದ ಮತ್ತು ತಳಸಮುದಾಯಗಳ ನಡುವಣ ಅಸಮಾನತೆಯನ್ನು ನಿವಾರಿಸುವುದು.

ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಈ ತಳಸಮುದಾಯಗಳು ಇಂದು ಒಂದುಗೂಡುವುದು ಅನಿವಾರ್ಯವಾಗಿದೆ. ಹೀಗೆ ಒಂದುಗೂಡುವ ಮೂಲಕ ಸಮಾಜದಲ್ಲಿನ ಎಲ್ಲಾ ರೀತಿಯ ಹಕ್ಕು ಬಾಧ್ಯತೆಗಳನ್ನು ಅವರು ದೊರಕಿಸಿಕೊಳ್ಳಬೇಕಾಗಿದೆ. ಸಮಾನ ಅವಕಾಶಗಳು ಲಭ್ಯವಾಗಬೇಕಾದರೆ ಅವರ ಐಕ್ಯತೆ ಬಹಳ ಮುಖ್ಯವಾದುದು. ಆಸ್ತಿ ಮತ್ತು ಅಧಿಕಾರ ಎಲ್ಲಾ ತಳ ಸಮುದಾಯಗಳಿಗೆ ಸಮಾನವಾಗಿ ಹಂಚಿಕೆಯಾಗದಿರುವ, ಅನಕ್ಷರತೆ ಮತ್ತು ಬಡತನದ ಕಾರಣದಿಂದಲೂ ಎಲ್ಲಾ ರೀತಿಯ ಅಸಮಾನತೆಗಳನ್ನು ಒಳಗೊಂಡಿರುವ ಸಮಾಜ ನಮ್ಮದು. ಜಾತಿ ಆಧಾರಿತ ಆರ್ಥಿಕ ಹಾಗೂ ರಾಜಕೀಯ ಅಸಮಾನತೆಗಳ ವಿರುದ್ಧ ನಿರಂತರವಾಗಿ ಕಾಲಕಾಲಕ್ಕೆ ನಡೆಯುತ್ತಿದ್ದ ಹೋರಾಟಗಳಿಂದ ಅಸಮಾನತೆ, ಅನಕ್ಷರತೆ, ಬಡತನಗಳು ನಿರ್ಮೂಲನೆಯಾಗಿಲ್ಲ. ಹೀಗಾಗಿ ಲಿಂಗಾಧಾರಿತ ತಾರತಮ್ಯಕ್ಕೆ ಒಳಗಾದ ಸ್ತ್ರೀಯರು ಆರ್ಥಿಕ ಮತ್ತು ಜಾತಿ ಹೆಸರಿನಲ್ಲಿ ಅವಮಾನಿತರಾದವರು. ಆರ್ಥಿಕ ಮತ್ತು ರಾಜಕೀಯ ಅವಕಾಶಗಳಿಂದ ವಂಚಿತರಾದ ದುರ್ಬಲ ವರ್ಗದವರು ಮತ್ತು ಅಲ್ಪಸಂಖ್ಯಾತರು ಜೊತೆಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವುದು ಅವರ ಸಂವಿಧಾನಿಕ ಹಕ್ಕು.

ಈ ಹಿನ್ನೆಲೆಯಲ್ಲಿ ಕ್ರಿಯಾಶೀಲರಾಗುವವರಿಗೆ ಹಲವಾರು ಅಡೆತಡೆಗಳಿವೆ. ಬಹಳ ಮುಖ್ಯವಾಗಿ ಪುರೋಹಿತಶಾಹಿಯು ತನ್ನ ಜಾಣ್ಮೆಯಿಂದ ಮಿಕ್ಕೆಲ್ಲ ಸಮುದಾಯಗಳಲ್ಲಿ ಒಗ್ಗಟ್ಟಿಲ್ಲದಂತೆ ನೋಡಿಕೊಂಡು ತನ್ನ ಪ್ರತಿಷ್ಠೆಯನ್ನು ಮುಂದುವರಿಸಿಕೊಂಡು ಹೋಗುವುದು ಅದರ ಕುತಂತ್ರವಾಗಿದೆ. ಸಮುದಾಯ ಪದ್ಧತಿಯಿಂದಾಗಿ ಸಮುದಾಯ ಸಮುದಾಯಗಳಲ್ಲಿ ತಾರಮತ್ಯ ಭಾವನೆ ತೀವ್ರವಾಗಿ ಮಡುಗಟ್ಟಿ ನಿಂತಿದೆ. ನನ್ನ ಸಮುದಾಯ ಮೇಲು ಅವರ ಸಮುದಾಯ ಕೀಳು ಎಂಬ ಭಾವನೆಯಿಂದಾಗಿ ಪರಸ್ಪರ ದೂರವಾಗಿ ಉಳಿದಿದ್ದಾರೆ.

ಇದು ಒಂದು ರೀತಿಯಲ್ಲಿ ಪ್ರಬಲ ಸಮುದಾಯಗಳು ಹಾಗೂ ಹಣ ಬಲದ ರಾಜಕೀಯದ ಎದುರು ಇವತ್ತು ತಳಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಿಲ್ಲ ದಂತಾಗಿದೆ. ಮೊದಲನೆಯದಾಗಿ ಈ ಐಕ್ಯತೆಯಲ್ಲಿ ಯಾವುದೇ ಒಂದು ಸಮುದಾಯದ ಪ್ರಬಲತೆ ಇಲ್ಲದಂತೆ ಗಮನಹರಿಸುವುದು ಮುಖ್ಯ ತಾತ್ವಿಕತೆಯಾಗಿರಬೇಕು. ಹಾಗೆಯೇ ಎಲ್ಲಾ ಸಮುದಾಯದವರಿಗೂ ಐಕ್ಯತೆಯಿಂದಾಗುವ ಪ್ರಯೋಜನ ಕುರಿತಂತೆ ವೈಚಾರಿಕ ನೆಲೆಗಟ್ಟಿನ ಶಿಕ್ಷಣ ಕೊಡುವುದು ಅಗತ್ಯವಾದುದು. ಸಮುದಾಯದ ಪ್ರತ್ಯೇಕತೆಯನ್ನು ಮಾನಸಿಕ ಮಟ್ಟದಲ್ಲಿ ಕಡಿಮೆಗೊಳಿಸುತ್ತಿರುವಾಗಲೇ ಎಲ್ಲಾ ಸಮುದಾಯಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಒಗ್ಗೂಡಿಸುವ ಹಾಗೂ ಪ್ರಸ್ತುತದಲ್ಲಿರುವ ಸವಾಲು ಗಳನ್ನು ಎದುರಿಸಲು ಬೇಕಾಗಿರುವ ಆರ್ಥಿಕ ಪ್ರಗತಿಯ ಕಾರ್ಯ ನೀತಿಗಳನ್ನು ರೂಪಿಸುವ ಅಗತ್ಯವಿದೆ.

ಇಂಡಿಯಾದ ಈ ತಳಸಮುದಾಯಗಳಲ್ಲಿ ಹಾಗೂ ಮೇಲು ಸಮುದಾಯಗಳಲ್ಲಿ ತನಗಿಂತ ತಳಸಮುದಾಯದವರು ಬಳಸುವ ಯಾವುದೇ ಬಗೆಯ ಆಹಾರ ಹಾಗೂ ಅವರು ತಯಾರಿಸಿದ ಆಹಾರ ಅಪವಿತ್ರ, ಅದನ್ನು ಸೇವಿಸಬಾರದೆಂಬ ನಂಬಿಕೆ ತೀವ್ರವಾಗಿದೆ. ಎಸ್ .ಎಂ.ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಜಾರಿಗೆ ತಂದ ಬಿಸಿಯೂಟ ಯೋಜನೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಇಡೀ ಕರ್ನಾಟಕದಾದ್ಯಂತ ಗ್ರಾಮ ಜಗತ್ತು ಇದರಿಂದ ತಲ್ಲಣಗೊಂಡಿತು. ದಲಿತ ಮಹಿಳೆ ಅಡುಗೆ ಮಾಡುತ್ತಾಳೆ ಎಂಬುದೇ ಇದಕ್ಕೆ ಮುಖ್ಯ ಕಾರಣ. ಮೇಲು ಸಮುದಾಯ ಭ್ರಮೆಯ ಜನರು ತಾವು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೇ ಇದ್ದರೂ ಪರವಾಗಿಲ್ಲ, ಶಾಲೆಯಲ್ಲಿ ಮಾತ್ರ ಅವರು ಊಟ ಮಾಡಬಾರದು ಎಂದೂ, ದಲಿತ ಮಹಿಳೆ ಅಡುಗೆ ಮಾಡಬಾರದು ಎಂಬುದಾಗಿ ಆಗ್ರಹಿಸಿದ್ದು ಅತ್ಯಂತ ಕ್ರೂರ ಹಾಗೂ ಅಮಾನವೀಯ. ಸಂವಿಧಾನಾತ್ಮಕವಾಗಿ ಅಸ್ಪೃಶ್ಯತೆ ನಿಷೇಧಿಸಲ್ಪಟ್ಟಿದ್ದರೂ ಜನಜೀವನದಲ್ಲಿ ಇನ್ನೂ ಹೇಗೆ ಹಾಸು ಹೊಕ್ಕಾಗಿದೆ ಎಂಬುದು ಇದರಿಂದ ಸ್ಫೋಟಗೊಂಡಿತು. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಹೇಗೆ ಜಾತಿಪ್ರಜ್ಞೆಯನ್ನು ಉದ್ದೀಪ ಗೊಳಿಸು ತ್ತಾರೆ ಎಂಬುದು ಗೊತ್ತಾಯಿತು. ಸಾಮಾಜಿಕ ಅಸಮಾನತೆಯನ್ನು ಉಣ್ಣುವ ಆಹಾರದ ಮೇಲೂ ಆರೋಪಿಸಿರುವುದು ಈ ಮನಸ್ಥಿತಿಯೇ. ಮೇಲೆ ಹೇಳಿದ ಆಹಾರದ ಅಪವಿತ್ರತೆ ಕೂಡ ಒಂದು ರೀತಿಯಲ್ಲಿ ಸಂಕುಚಿತ ಮನೋಭಾವವೇ ಆಗಿದೆ. ಏಕೆಂದರೆ ಆಹಾರ ಪದ್ಧತಿ ಒಂದು ಸಂಸ್ಕೃತಿಯ ಅಂಗವಾಗಿದ್ದು, ಆಯಾ ಪ್ರದೇಶ-ಪರಿಸರ-ಹವಾಗುಣಕ್ಕೆ ಅನುಗುಣವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ, ಅವರವರ ದೇಹ ಹಾಗೂ ಶ್ರಮಕ್ಕೆ ಅನುಸಾರವಾಗಿ ಇರುತ್ತದೆ. ಆಹಾರದ ಬಗೆಗಿನ ಅಸ್ಪೃಶ್ಯತೆಯ ತಲ್ಲಣವನ್ನು ಬಸವಣ್ಣ ಎಂಟು ನೂರು ವರ್ಷಗಳ ಹಿಂದೆಯೇ ಕಟ್ಟಿಕೊಟ್ಟಿರುವುದು ಹೀಗೆ:

ವೇದ ನಡುನಡುಗಿತ್ತು. ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯ
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಿ
ಆಗಮ ಹೆರತೊಲಗಿ, ಅಗಲಿದ್ದಿತಯ್ಯ
ನಮ್ಮ ಕೂಡಲ ಸಂಗಯ್ಯನು
ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ|

ಸಸ್ಯಾಹಾರದಂತೆ ಮಾಂಸಾಹಾರದ ಸಂದರ್ಭದಲ್ಲಿಯೂ ಇಂತಹುದೇ ಅಸಮಾನತೆ ಇರುವುದನ್ನು ಕಾಣಬಹುದು. ಇದೇ ಕಾಲಘಟ್ಟದ ಶರಣ ಅಂಬಿಗರ ಚೌಡಯ್ಯ ಮಾಂಸಹಾರಿಗಳಲ್ಲಿ ಇರುವ ತಾರತಮ್ಯ ಕುರಿತು ಕಠೋರವಾಗಿ ವಿರೋಧಿಸಿರುವುದು ಹೀಗೆ:

ಕುರಿಕೋಳಿ ಕಿರುಮೀನ ತಿಂಬವರ ಊರೊಳಗೆ ಇರು ಎಂಬರು.
ಅಮೃತಾನ್ನವ ಕರೆವ ಗೋವ ತಿಂಬವರ ಊರಿಂದ ಹೊರಗಿರು ಎಂಬರು.
ಆಕಳು ಹರಿಗೋಲಾಯಿತ್ತು. ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆಯಾಗಿತ್ತು.
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಗಿತ್ತು
ಈ ಬದ್ದಲಿಕೆಯೊಳಗಣ ತುಪ್ಪವ ಶುದ್ಧ ಮಾಡಿ ತಿಂಬವರ ಕಂಡಡೆ
ಉದ್ದನೆಯ ಚೆಮ್ಮಾಳಿಕೆಯ ತೆಕ್ಕೊಂಡು ಬಾಯಕೊಯ್ಯುವೆನು
-ಅಂಬಿಗರ ಚೌಡಯ್ಯ

ಈ ಆಹಾರ ಪದ್ಧತಿಯಾಗಲಿ, ಸಾಂಸ್ಕೃತಿಕ ಆಚರಣೆಗಳಾಗಲಿ, ದೇವರುಗಳ ಬಗೆಗಿರುವ ಮೇಲು ಕೀಳು ಎಂಬ ಮನೋಭಾವನೆಗಳಾಗಲೀ ಮೂಲತಃ ಆಯಾ ಕಾಲ ಘಟ್ಟದ ಪರಿಸರ, ಬೌದ್ದಿಕತೆ, ಸ್ಥಳೀಯತೆ, ಭೌಗೋಳಿಕತೆ ಹಾಗೂ ಮನಸ್ಸಿನ ಸ್ಥಿತಿಗತಿಗಳ ಮೇಲಿಂದಾದುವೇ ಹೊರತು ನೈಸರ್ಗಿಕವಲ್ಲ. ಹಾಗಾಗಿ ಈ ಅಂಶಗಳನ್ನೇ ಮುಂದು ಮಾಡುತ್ತಾ ಪುರೋಹಿತಶಾಹಿ, ತಳಸಮುದಾಯಗಳ ಮನಸ್ಸಿನಲ್ಲಿ ಎಂದಿಗೂ ಒಂದಾಗದಿರು ವಂತಹ ಭಾವನೆಯನ್ನು ಹುಟ್ಟು ಹಾಕಿದೆ. ಹಾಗಾಗಿ ತಳ ಸಮುದಾಯದವರಲ್ಲಿ ಈ ಮನೋಭಾವನೆಯನ್ನು ಹೊಡೆದು ಹಾಕುವಂತಹ ಶಿಕ್ಷಣ ಕೊಡುವ ಮೂಲಕ ಐಕ್ಯಗೊಳಿಸಬೇಕಾಗಿದೆ.

ತಳಸಮುದಾಯಗಳನ್ನು ಐಕ್ಯಗೊಳಿಸುವ ಜೊತೆ ಜೊತೆಯಲ್ಲಿಯೇ ತಮ್ಮ ಸಮುದಾಯದ ಮೂಲ ಗುಣವಾದ ನೀಚತನ ಹಾಗೂ ಅವ್ಯಕ್ತ ಸಮುದಾಯ ಮೂಲ ವರ್ತನೆಗಳನ್ನು ಸಹ ಕಟ್ಟು ನಿಟ್ಟಾಗಿ ಗಮನಿಸಬೇಕಾಗುತ್ತದೆ. ಜೊತೆಗೆ ಅದಕ್ಕೆ ಪರಿಹಾರ ವನ್ನು ಹುಡುಕಬೇಕಾಗುತ್ತದೆ. ಇಲ್ಲದಿದ್ದರೆ ಮಾತು ಬಲ್ಲ ಕೆಲವೇ ಸಮುದಾಯಗಳು ಎಲ್ಲಾ ಬಗೆಯ ಅವಕಾಶಗಳನ್ನು ಪಡೆಯುತ್ತಲೇ ಇರುತ್ತವೆ. ಜೊತೆಗೆ ಈ ತಳ ಸಮುದಾಯಗಳ ಐಕ್ಯತೆ ಎನ್ನುವುದು ಕೇವಲ ಸೀಮಿತ ಉದ್ದೇಶ ಮತ್ತು ಅವಧಿಗೆ ಮಾತ್ರ ಉಪಯೋಗಿಸಬಾರದು. ಏಕೆಂದರೆ ಆ ಉದ್ದೇಶ ಮತ್ತು ಅವಧಿ ಮುಗಿದ ತಕ್ಷಣ ತಂತಮ್ಮ ಸಮುದಾಯ ಚಿಪ್ಪುಗಳಿಗೆ ಮರಳಿ ನಿಷ್ಕ್ರಿಯವಾಗುತ್ತಾ ಹೋಗುತ್ತಾರೆ. ಸಾಂಸ್ಕೃತಿಕವಾಗಿ ಪರಸ್ಪರ ತೀರ ಹತ್ತಿರವಿರುವ ಸಮುದಾಯಗಳು ಸಾಮಾಜಿಕವಾಗಿ ಒಟ್ಟಿಗೆ ಬರಬಲ್ಲವು. ಕೆಲವೊಮ್ಮೆ ಇಂತಹ ಅದ್ಭುತವಾದ ಸಾಧ್ಯತೆಯನ್ನು ವಿವಿಧ ರಾಜಕೀಯ ವ್ಯಕ್ತಿಗಳು, ಪಕ್ಷಗಳು, ಸಮುದಾಯದ ನೀಚತನಗಳು ಹಾಗೂ ಸ್ಥಳೀಯ ರಾಜಕಾರಣದಲ್ಲಿನ ಚಿಲ್ಲರೆ ನಾಯಕತ್ವದ ಪ್ರಶ್ನೆಗಳು ನಾಶ ಮಾಡುತ್ತಾ ಬಂದಿವೆ. ಡಾ.ರಾಮಮನೋಹರ ಲೋಹಿಯಾ ಅವರು ಗುರುತಿಸುವಂತೆ, ‘ಶೂದ್ರರಲ್ಲಿ ಹೊಟ್ಟೆಕಿಚ್ಚಿನ ಪ್ರವೃತ್ತಿ ಹಾಗೂ ಪರಸ್ಪರರ ಕಾಲೆಳೆಯುವ ಸಣ್ಣತನ ಹೆಚ್ಚು ಇರುವುದು’ ಕೂಡ ತಳ ಸಮುದಾಯಗಳ ಐಕ್ಯತೆ ಹೆಚ್ಚು ಕಾಲ ನಡೆಯದಿರಲು ಕಾರಣವಾಗಿದೆ. ಒಂದು ಸಭೆಯಲ್ಲಿ ಯಾರು ಪ್ರಧಾನ ಪಾತ್ರವಹಿಸುತ್ತಾರೆ, ಯಾರು ವೇದಿಕೆಯ ಮೇಲೆ ಕೂರುತ್ತಾರೆ, ಯಾರು ಸಭೆಯಲ್ಲಿ ಹಣಕಾಸಿನ ನಿರ್ವಹಣೆ ಮಾಡುತ್ತಾರೆ ಎಂಬಂತಹ ಕ್ಷುಲ್ಲಕ ಕಾರಣಗಳಿಗಾಗಿ ಐಕ್ಯತೆ ಒಡೆದು ಹೋಗುವುದುಂಟು. ಇಂತಹ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಇವನ್ನೆಲ್ಲಾ ಮೀರಿ, ಉದಾರತೆ ಹಾಗೂ ಘನತೆಗಳಿಂದ ನಡೆದುಕೊಳ್ಳುವ ಮುಖಾಂತರ ಸಣ್ಣತನಗಳನ್ನು ಮೀರಬೇಕಾಗಿದೆ.

ಸಮುದಾಯ ವ್ಯವಸ್ಥೆಯನ್ನು ಬಾಯಿಮಾತಿನ ಹೊರತಾಗಿ ತಮ್ಮ ಮಿಕ್ಕೆಲ್ಲ ಚಟುವಟಿಕೆಗಳ ನೆಲೆಯಲ್ಲಿ ಒಪ್ಪಿಕೊಂಡಿರುವ (ಇದು ಎಲ್ಲಾ ಸಮುದಾಯಗಳಿಗೂ ಅನ್ವಯಿಸುತ್ತದೆ)  ಬಹುದೊಡ್ಡ ಜನ ವರ್ಗವನ್ನು ಒಳಗೊಂಡಿರುವ ಇಂಡಿಯಾದ ಸಮಾಜದಲ್ಲಿ ಅಸಮಾನತೆ ಅಂತರ್ಗತವಾಗಿದೆ. ಮೀಸಲಾತಿ ಈ ಅಸಮಾನತೆಯನ್ನು ತೊಡೆದು ಹಾಕಿ ಸಮಾಜವನ್ನು ಸಮುದಾಯ ವ್ಯವಸ್ಥೆಯ ಬಂಧನದಿಂದ ಬಿಡುಗಡೆಗೊಳಿಸುವ ಆಶಯ ಹೊಂದಿದೆ. ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಪರಿಶಿಷ್ಟಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಕ್ಷೇತ್ರ ಮತ್ತು ಸರ್ಕಾರಿ ಸೇವೆಯ ಹುದ್ದೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವಂತೆ ಮೀಸಲಾತಿ ತತ್ವವನ್ನು ಅಳವಡಿಸಿ ಸಾಮಾಜಿಕ ನ್ಯಾಯವನ್ನು ನೀಡುವುದು ಸರ್ಕಾರದ ಜವಾಬ್ದಾರಿ ಎಂಬ ವಿಧಿಯನ್ನು ಸೇರ್ಪಡೆ ಮಾಡಿದರು.

ಸಂವಿಧಾನದ ಆಶಯದಂತೆ ಸರ್ಕಾರವು ಪರಿಶಿಷ್ಠ ಜಾತಿಗಳಿಗೆ ಮೀಸಲಾತಿಯನ್ನು ಆರಂಭಿಸಿತು. ೧೯೬೨ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಕ್ಷಿಣ ರೈಲ್ವೆ v/s ರಂಗಾಚಾರಿ ಪ್ರಕರಣದ ತೀರ್ಪು ಹೊರಬಿದ್ದ ನಂತರ ಪರಿಶಿಷ್ಟ ಸಮುದಾಯ ಪರಿಶಿಷ್ಟ ವರ್ಗದವರಿಗೆ ಸಂವಿಧಾನದತ್ತವಾಗಿ ಹುದ್ದೆಗಳ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡಬೇಕಾಯಿತು. ಆದರೆ ಇತರೇ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರಿಗೆ ಮೀಸಲಾತಿಯನ್ನು ಒದಗಿಸುವ ಕಾರ್ಯ, ಸರ್ಕಾರಗಳಿಂದ ವಿಳಂಬವಾಗಿದೆ.

ಮೀಸಲಾತಿ ಸೌಲಭ್ಯಗಳಿಂದ ವಂಚಿತವಾಗಿರುವ ಹಿಂದುಳಿದ ವರ್ಗಗಳಿಗೆ ಆ ಸೌಲಭ್ಯಗಳನ್ನು ನೀಡುವ ಸಲುವಾಗಿ ೧೯೭೯ರಲ್ಲಿ ಜನತಾ ಸರ್ಕಾರವು ಮಂಡಲ್ ಆಯೋಗವನ್ನು ರಚಿಸಿತು. ೧೯೯೦ರಲ್ಲಿ ಜನತಾದಳ ಸರ್ಕಾರವು ಮಂಡಲ್ ಆಯೋಗದ ಶಿಫಾರಸ್ಸಿನಂತೆ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯ ಹುದ್ದೆಗಳಲ್ಲಿ ಶೇ:೨೭ ರಷ್ಟು ಮೀಸಲಾತಿಯನ್ನು (ಪರಿಶಿಷ್ಟ ಜಾತಿ : ಪರಿಶಿಷ್ಠ ವರ್ಗಗಳಿಗೆ ಮೀಸಲಾದ ಶೇ : ೨೨ ೧/೨ ಹೊರತುಪಡಿಸಿ)  ನೀಡುವ ಸರ್ಕಾರಿ ಆದೇಶವನ್ನು ಹೊರಡಿಸಿತು. ಜಾತಿವಾದಿ ಶಕ್ತಿಗಳು ಮಂಡಲ್ ವರದಿಯನ್ನು ವಿರೋಧಿಸಿ ದೇಶಾದ್ಯಂತ ದೊಂಬಿ, ಹಿಂಸೆ ನಡೆಸಿದರು. ೧೯೯೧ರಲ್ಲಿ ಕಾಂಗ್ರೆಸ್ ಸರ್ಕಾರವು ಮೇಲು ಜಾತಿ ಬಡವರಿಗೆ ಶೇ:೧೦ ಮೀಸಲಾತಿ ನೀಡಿ ಮಂಡಲ್ ವರದಿ ಜಾರಿಗೊಳಿಸುವ ಆದೇಶವನ್ನು ಹೊರಡಿಸಿತು. ಮಂಡಲ್ ವಿರೋಧಿಗಳು ಈ ಆದೇಶಗಳ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದರು. ೧೬-೧೧-೯೨ರಂದು ಸುಪ್ರೀಂ ಕೋರ್ಟ್ ಮಂಡಲ್ ವರದಿ ಪ್ರಕರಣದ ತೀರ್ಪನ್ನು ನೀಡಿ ಶೇ : ೨೭ ಮೀಸಲಾತಿ ಸೌಲಭ್ಯವನ್ನು ಎತ್ತಿ ಹಿಡಿದಿದೆ.

ಇದಕ್ಕೂ ಮೊದಲು ಪುರೋಹಿತಶಾಹಿ ಮಾಡಿದ ಕುಟಿಲತೆಯು ಇಂದಿಗೂ ಜಾತಿ (ಸಮುದಾಯ)  ಪದ್ಧತಿ ಇರುವಂತೆ ಮಾಡಿದೆ. ಮಿಕ್ಕೆಲ್ಲ ಸಮುದಾಯಗಳಲ್ಲಿ ಒಗ್ಗಟ್ಟಿಲ್ಲದಂತೆ ನೋಡಿಕೊಂಡು ತನ್ನ ಪ್ರತಿಷ್ಠೆಯನ್ನು ಮುಂದುವರೆಸಿಕೊಂಡು ಹೋಗುವ ಪುರೋಹಿತ ಶಾಹಿಯ ಕುತಂತ್ರವೇ ಸಮುದಾಯಪದ್ಧತಿ. ಶೂದ್ರರಲ್ಲಿ ಹರಿಜನರನ್ನು ಮತ್ತು ಇತರ ಶೂದ್ರರನ್ನು ಒಡೆಯಲುೊಹಾಗೂ ಡಾ. ಅಂಬೇಡ್ಕರರ ಬೆಂಬಲ ಸಹಾನುಭೂತಿ ಪಡೆಯಲು ಮಾಡಿದ ಮೊದಲ ಕುತಂತ್ರ ಅವರಿಗೆ ಮಾತ್ರ ಮೀಸಲು ಸ್ಥಾನ ಕೊಟ್ಟಿದ್ದು. ಅನಂತರ ಈ ಗೊಂದಲದಿಂದ ತನ್ನ ವರ್ಗ ತಪ್ಪಿಸಿಕೊಂಡು ಹಾಯಾಗಿರಲು ಸಾಮರ್ಥ್ಯ-ಕ್ಷೇತ್ರದ ಜಾಲವನ್ನು ಸೃಷ್ಟಿಸಿದ್ದು, ಆ ವರ್ಗದ ಎರಡನೇ ಕುತಂತ್ರ. ಇದಕ್ಕಿಂತ ಹೆಚ್ಚಿನ ಪರಿಣಾಮಕಾರಿಯಾದ ಕುತಂತ್ರವನ್ನು ಕೂಡ ಶ್ರೇಷ್ಠ ನ್ಯಾಯಾಲಯ ಮಾಡಿದೆ. ಇದೇನೆಂದರೆ ನಿಜವಾಗಿಯೂ ಹಿಂದುಳಿದ ವರ್ಗಗಳನ್ನು ಮುಂದುವರೆದ ವರ್ಗವೆಂದು ಪರಿಗಣಿಸುವಂತೆ ಅದು ಒತ್ತಾಯಿಸಿರುವುದು.

ಉದಾಹರಣೆಗೆ, ನಾಗನಗೌಡ ಸಮಿತಿಯವರು ೧೦೦೦ಕ್ಕೆ ೬.೯ ಜನರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳಲ್ಲಿರುವುದನ್ನು ರಾಜ್ಯ ಸರಾಸರಿ (State Average)  ಎಂದು ಗುಣಿಸಿ ಯಾವುದೇ ಸಮುದಾಯ ಜನಸಂಖ್ಯೆಯಲ್ಲಿ ೬.೯ಕ್ಕಿಂತ ಸ್ವಲ್ಪ ಕಡಿಮೆ ಜನರು ಹೈಸ್ಕೂಲು ತರಗತಿಗಳಲ್ಲಿದ್ದರೆ ಆ ಜಾತಿ ಹಿಂದುಳಿದದ್ದು ಎನ್ನುವ ಸೂತ್ರವನ್ನು ಅಳವಡಿಸಿದ್ದನ್ನು ವಿಶ್ಲೇಷಿಸುತ್ತಾ ಶ್ರೇಷ್ಠ ನ್ಯಾಯಾಲಯವು ೬.೯ಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ ಆ ಸಮುದಾಯನ್ನು ಹಿಂದುಳಿದದ್ದೆಂದು ಹೇಳಲು ಸಾಧ್ಯವಿಲ್ಲವೆಂದೂ ೬.೯ರ ಅರ್ಧ ಕ್ಕಿಂತಲೂ ಕಡಿಮೆಯಿರುವ ಅಂದರೆ ಜಾತಿಯ ೧೦೦೦ ಜನರಲ್ಲಿ ೩.೪೫ ಜನರು ಹೈಸ್ಕೂಲಿನಲ್ಲಿದ್ದರೆ ಅಂತಹ ಸಮುದಾಯನ್ನು ಹಿಂದುಳಿದದ್ದೆಂದು ಪರಿಗಣಿಸಬಹುದೆಂದೂ ಹೇಳಿದೆ.

ಶ್ರೇಷ್ಠ ನ್ಯಾಯಾಲಯದ ಕುತಂತ್ರಗಳ ಜೊತೆಗೆ ಕೇಂದ್ರ ಸರಕಾರ ಕೂಡ ತನ್ನದೊಂದು ಕುತಂತ್ರದೊಂದಿಗೆ ಶಾಮೀಲಾಗಿದೆ. ಸಂವಿಧಾನದ ಮೀಸಲು ಸ್ಥಾನಗಳ ವಿವರಣೆಗೆ ಅವಶ್ಯಕವಾಗಿ ಬೇಕಾದ ಅಂಕಿ ಅಂಶಗಳೇ ಸಿಗದಂತೆ ತನ್ನ ಜನಗಣತಿ (census)  ಕೆಲಸದಲ್ಲಿ ಅದು ಜಾತಿ ವಿವರಗಳನ್ನು ಶೇಖರಿಸುವುದನ್ನೇ ಸಂಪೂರ್ಣ ಕೈಬಿಟ್ಟಿದೆ. ಜಾತ್ಯತೀತತೆಯ ಪ್ರವರ್ತಕ ಎಂಬ ಸೋಗಿನಲ್ಲಿ ಕೇಂದ್ರ ಸರ್ಕಾರ ಇಡೀ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅಂಕಿ ಅಂಶಗಳೇ ದುರ್ಲಭವಾಗುವಂತೆ ಮಾಡಿದೆ.

ಇದಕ್ಕಿಂತ ಮುಖ್ಯವಾಗಿ ಉತ್ತಮ ಸಮುದಾಯದವರು ಮಾಡಿರುವ ಕುತಂತ್ರ ಮತ್ತೊಂದಿದೆ. ರಾಜ್ಯ ಮಟ್ಟದಲ್ಲಿ ಹಿಂದುಳಿದ ವರ್ಗಗಳು ಬಡಿದಾಡಿಕೊಳ್ಳುವಂತೆ ಮಾಡಿ ಕೇಂದ್ರ ಸೇವಾ ಕ್ಷೇತ್ರ (Central Services) ಗಳಲ್ಲಿ ಅವರಿಗೆ ಯಾವ ಮೀಸಲು ಸ್ಥಾನವನ್ನೂ ಕೊಡದೇ ೨೭ ವರ್ಷಗಳು ಕಾಲಹರಣ ಮಾಡಿ ಅಲ್ಲಿನ ಎಲ್ಲ ಅವಕಾಶ ಗಳನ್ನೂ ತಾನೇ ತೆಗೆದುಕೊಂಡಿದೆ. ಕಾಲೇಲ್ಕರ್ ಆಯೋಗದ ವರದಿಯನ್ನು ಮೂಲೆಗೆಸೆದಿದೆ. ಈ ಬಗ್ಗೆ ವೀರಶೈವರಾಗಲೀ ಯಾವುದೇ ಹಿಂದುಳಿದ ವರ್ಗವಾಗಲೀ ಪ್ರತಿಭಟನೆ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳ ಹಿಂದುಳಿದ ವರ್ಗಗಳ ಯುವಜನರು ನಿರುದ್ಯೋಗಿಗಳಾಗಿರುವುದಕ್ಕೆ ಇದೊಂದು ಬಹುದೊಡ್ಡ ಕಾರಣ.

ಇದರ ಜೊತೆಗೇ, ಖಾಸಗಿ ಉದ್ಯಮ (Private Sector) ಗಳೂ ಉತ್ತಮ ಸಮುದಾಯದವರ ಪೂರ್ಣ ಸ್ವಾಮ್ಯವಾಗಿರುವುದರ ಬಗ್ಗೆ ಕೂಡ ಹಿಂದುಳಿದ ವರ್ಗಗಳು ಎಚ್ಚರಗೊಳ್ಳಬೇಕು. ಕೇಂದ್ರ ಸೇವಾಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಜನಸಂಖ್ಯಾ ಪ್ರಮಾಣದ ಮೀಸಲು ಸ್ಥಾನಕ್ಕೆ ಹೋರಾಡಬೇಕು.

ಮೇಲೆ ಹೇಳಿದ ವಿಷಯಗಳೆಲ್ಲ ಮೇಲ್ಮೈಯಲ್ಲಿ ಕಾಣುವ ಸತ್ಯಗಳು. ಇವುಗಳಿಗೆಲ್ಲ ಮೂಲಕಾರಣಗಳಾದ ಆರ್ಥಿಕ-ರಾಜಕೀಯ ವ್ಯವಸ್ಥೆ ಸಮುದಾಯ ಪದ್ಧತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಅವಕಾಶಗಳನ್ನು ಸೀಮಿತಗೊಳಿಸುವ ಶಕ್ತಿಯಾಗಿದೆ. ವಿವರಿಸಿದಲ್ಲಿ ಇವು ಬಂಡವಾಳಶಾಹಿ, ಆಸ್ತಿ ಸಂಬಂಧಗಳು, ಜನರಿಗೆ ತಿಳಿಯದ ಭಾಷೆ ಯಲ್ಲಿ ರಾಜ್ಯ ವ್ಯವಹಾರ, ನಿರುದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕಾ ಯಂತ್ರಗಳು, ಬಹುಸಂಖ್ಯಾತರು ಮೇಲೇಳದಂತೆ ಮಾಡುವ ಕೃಷಿಕ್ಷೇತ್ರದ ನಿರ್ಲಕ್ಷ್ಯ, ಬಹುಸಂಖ್ಯಾತ ಕೃಷಿಕರು ಯಥಾಸ್ಥಿತಿಯಲ್ಲಿರುವಂತೆ ಮಾಡುವ ಬೆಲೆ ನೀತಿ, ಬಹುಸಂಖ್ಯಾತರನ್ನು ಕೇವಲ ಪ್ರೇಕ್ಷಕರನ್ನಾಗಿಸುವ ರಾಜಕೀಯ ಕೇಂದ್ರೀಕರಣ, ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮಕ್ಕಿರುವ ಮೌಲ್ಯದ ವ್ಯತ್ಯಾಸ ಇತ್ಯಾದಿ ಕಾರಣಗಳು ಸಮುದಾಯಗಳು ಜಡವಾಗಿಯೇ ಇರುವಂತೆ ಹಾಗೂ ದೇಶ ಮುಂದೆ ಹೋಗದಂತೆ ಹಿಡಿದಿಟ್ಟಿವೆ. ಸಾಮಾಜಿಕ ಕ್ರಾಂತಿಗಾಗಿ ಹೋರಾಡುವವರು ಅದಕ್ಕೆ ಪೂರಕವಾದ ಆರ್ಥಿಕ-ರಾಜಕೀಯ ಕ್ರಾಂತಿಗೂ ಶ್ರಮಿಸದಿದ್ದಲ್ಲಿ ಐಕ್ಯತೆ ಸಾಧ್ಯವಿಲ್ಲ.

ಭಾರತದಲ್ಲಿ ವಸಾಹತುಶಾಹಿ ಸಂದರ್ಭದಿಂದಲೂ ಈ ತಳಸಮುದಾಯಗಳ ಉದ್ಯೋಗದ ಮೇಲೆ ಗಧಾಪ್ರಹಾರ ನಡೆಯುತ್ತಲೇ ಇದೆ. ಇದರಿಂದಾಗಿ ತಳಸಮುದಾಯಗಳು ಇಂದಿಗೂ ತಮ್ಮ ದಿನದ ಹೊಟ್ಟೆಪಾಡಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಹೀಗಿರುವಾಗ ಐಕ್ಯತೆಯ ಬಗೆಗೆ ಯೋಚಿಸುವುದು ಸಹ ಕಷ್ಟಕರವಾಗಿದೆ. ೧೮ನೇ ಶತಮಾನದಿಂದ ಪ್ರಾರಂಭವಾಗಿದ್ದ ವಸಾಹತುಶಾಹಿ ಆಕ್ರಮಣವು ನಂತರ ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ೧೯ನೇ ಶತಮಾನದ ಕೊನೆಯ ಹೊತ್ತಿಗೆ ಶ್ರೀಮಂತ ಬಂಡವಾಳಶಾಹಿ ದೇಶಗಳಲ್ಲಿನ ಬಂಡವಾಳವು ಇನ್ನಿತರ ದೇಶದೊಳಗೆ ಪ್ರವೇಶಿಸಿ ನಿಯಂತ್ರಣ ಮಾಡಲು ಪ್ರಾರಂಭಿಸಿತ್ತು. ಇದು ವಿಶ್ವಾದ್ಯಂತ ಮಾರುಕಟ್ಟೆಗಾಗಿ ಎರಡು ಪ್ರಪಂಚ ಯುದ್ಧಗಳಿಗೂ ಕಾರಣವಾಯಿತು. ಈ ಸ್ವರೂಪದ ಬಂಡವಾಳಶಾಹಿಯನ್ನೇ ಸಾಮ್ರಾಜ್ಯಶಾಹಿ ಎನ್ನಲಾಗುತ್ತದೆ. ಈ ಸಾಮ್ರಾಜ್ಯಶಾಹಿಯ ಮೂರನೇ ಹಂತವೇ ೮೦ ರ ದಶಕದಲ್ಲಿ ಪ್ರಾರಂಭವಾದ ಆಕ್ರಮಣದ ಜಾಗತೀಕರಣವಾಗಿದೆ.

ಜಗತ್ತಿನ ವಿವಿಧೆಡೆಗಳಲ್ಲಿ ಸಮಾನತೆ ಹಾಗೂ ಐಕ್ಯತೆಯನ್ನು ತರುವ ವಿದ್ಯಮಾನವು ಜಾಗತೀಕರಣದಲ್ಲಿಲ್ಲ. ಏಕೆಂದರೆ ಅದು ತನ್ನ ಬಂಡವಾಳದಿಂದ ವಿಶ್ವದಾದ್ಯಂತ ತನ್ನ ಲೂಟಿಗಾಗಿ ನಡೆಸುವ ಕಸರತ್ತಾಗಿದೆ. ಒಂದರ್ಥದಲ್ಲಿ ಅದು ಸಾಮ್ರಾಜ್ಯಶಾಹಿ ಜಾಗತೀಕರಣವಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ಲಾಭಕ್ಕಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ, ಅದರಲ್ಲೂ ಬಡರಾಷ್ಟ್ರಗಳಲ್ಲಿ, ಸಂಪತ್ತು, ಬದುಕು, ಆರ್ಥಿಕತೆ ಎಲ್ಲವೂ ಪುನರ್ ರೂಪಿತವಾಗುವುದಾಗಿದೆ. ಹಾಗಾಗಿ ದೇಶಗಳ ಸಾರ್ವಭೌಮತೆ, ಜನರ ಬದುಕು ಕಳೆದುಹೋಗುತ್ತವೆ. ಈ ಬಕಾಸುರ ಕಂಪೆನಿಗಳ ಹೊಟ್ಟೆ ತುಂಬಿಸಲು ನೆಲ, ಜಲ, ನೈಸರ್ಗಿಕ ಸಂಪತ್ತೆಲ್ಲವನ್ನೂ ಧಾರೆ ಎರೆಯಬೇಕಾಗಿದೆ. ಜೊತೆಗೆ ಮೂಲ ನಿವಾಸಿಗಳ ಎತ್ತಂಗಡಿ, ಕಡಿಮೆ ಕೂಲಿಗಾಗಿ ಮಾನವ ಸಂಪತ್ತನ್ನು ನಿಯೋಜಿಸಬೇಕಾಗಿದೆ. ಕಡಿಮೆ ಕೂಲಿಯ ಈ ಮಾನವ ಸಂಪನ್ಮೂಲವನ್ನು ಬೇಡವೆಂದಾಗ ನಿರ್ದಾಕ್ಷಿಣ್ಯವಾಗಿ ಅವರು ಹೊರಗೆ ಕಳುಹಿಸುತ್ತಾರೆ. ಇಂತಹ ಕಡೆ ಮಹಿಳೆಯರು ಜಾಹೀರಾತಿನ ಸರಕುಗಳಾಗುತ್ತಾರೆ. ಪಾರಂಪರಿಕವಾಗಿ ಅವಕಾಶ ವಂಚಿತರಾದ ದಲಿತ ಹಿಂದುಳಿದ ಸಮುದಾಯಗಳು ಈ ಹುಚ್ಚು ಸ್ಪರ್ಧೆಯಲ್ಲಿ ಹೊರಗುಳಿವ ಅಸ್ಪೃಶ್ಯರಾಗುತ್ತಾರೆ. ಹೀಗಿರುವಾಗ ಈ ತಳಸಮುದಾಯ ಗಳ ಐಕ್ಯತೆ ಕಷ್ಟಕರವಾದುದಾಗಿದೆ. ಆದರೂ ಇಂತಹ ಸಂದರ್ಭದಲ್ಲಿ ಹಳೆ ಅನುಭವಗಳ ಜೊತೆಗೆ ಸಮಕಾಲೀನ ತುರ್ತಿನ ಅಗತ್ಯದಿಂದಾಗಿ ಮುನ್ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯಗಳ ‘ಅಸ್ಮಿತೆ’ ಕುರಿತ ಚರ್ಚೆಗಳು ನಮಗೆ ಫಲಪ್ರದವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

ಕಳೆದ ಎರಡು ದಶಕಗಳಲ್ಲಿ ‘ಅಸ್ಮಿತೆ’ಯ ರಾಜಕೀಯ ಎಂಬುದು ಅತ್ಯಂತ ಪ್ರಚಲಿತ ಗೊಂಡಿರುವ ವಿದ್ಯಮಾನವಾಗಿದೆ. ಹಾಗೆ ನೋಡಿದರೆ ಈ ‘ಅಸ್ಮಿತೆ’ಯ ರಾಜಕಾರಣದ ಆರಂಭವನ್ನು ಸ್ವಾತಂತ್ರ್ಯಪೂರ್ವದಲ್ಲೇ ಗುರುತಿಸಬಹುದು. ಡಾ.ಬಿ.ಆರ್ .ಅಂಬೇಡ್ಕರ್ ಆರಂಭಿಸಿದ ದಲಿತ ಸಮಾನತೆಯ ಚಳವಳಿಯಲ್ಲಿ ಇದರ ಮೊದಲ ಮೊಳಕೆಗಳನ್ನು ನಾವು ಕಾಣಬಹುದು. ಆವರೆಗೆ ಭಾರತೀಯ ಸಮಾಜದಲ್ಲಿ ಮುಖ್ಯ ಪ್ರವಾಹದಿಂದ ಹೊರಗುಳಿಸಲ್ಪಟ್ಟಿದ್ದ ಸಮುದಾಯಗಳನ್ನು ಸಂಘಟಿಸಿ, ಅವುಗಳಿಗೆ ಸಿಗಬೇಕಾದ ಸಾಮಾಜಿಕ, ರಾಜಕೀಯ ಮಾನ್ಯತೆಗಾಗಿ ಆಗ ಆಗ್ರಹಿಸಲಾಯಿತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ರಾಜಕೀಯ ಸ್ವಾತಂತ್ರ್ಯ ಮೊದಲೋ ಅಥವಾ ಸಾಮಾಜಿಕ ಸಮಾನತೆ ಮೊದಲೋ ಎಂಬ ವಾದ ವಿವಾದಗಳೂ ಕೂಡ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದವು. ಅಂತಿಮವಾಗಿ ಸಾಮಾಜಿಕ ಸಮಾನತೆಯನ್ನು ಸಾಧಿಸುವುದಕ್ಕಾಗಿ ರಾಜಕೀಯ ಸ್ವಾತಂತ್ರ್ಯವನ್ನು ಬಳಸಲಾಗುವುದು ಎಂಬ ಭರವಸೆಯೊಂದಿಗೆ ಭಾರತದ ಸ್ವಾತಂತ್ರ್ಯ ಚಳವಳಿ ಒಂದು ಹಂತವನ್ನು ತಲುಪಿತು. ಸಂವಿಧಾನದ ಕರಡು ರಚನೆಯ ಹೊಣೆಗಾರಿಕೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ವಹಿಸಿಕೊಟ್ಟದ್ದು ಈ ಅಂಶಗಳ ಈಡೇರಿಕೆಗಾಗಿ ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಅದಕ್ಕೆ ಪುರಾವೆಯೆಂಬಂತೆ ಭಾರತೀಯ ಸಮಾಜದಲ್ಲಿ ಅನಾಚೂನವಾಗಿ ಜಾರಿಯಲ್ಲಿದ್ದ ಅಸೃಶ್ಯತೆ ಸಂಬಂಧಿತ ಆಚರಣೆಗಳನ್ನು ಕಾನೂನು ಪ್ರಕಾರ ಅಮಾನ್ಯಗೊಳಿಸಲಾಯಿತು. ಅಸ್ಪೃಶ್ಯತೆ ಆಚರಣೆ ಹಾಗೂ ಅದಕ್ಕೆ ಸಂಬಂಧಪಟ್ಟ ನಡವಳಿಕೆಯನ್ನು ಶಿಕ್ಷಾರ್ಹ ಅಪರಾಧಗಳೆಂದು ಘೋಷಿಸಲಾಯಿತು. ಜೊತೆಗೆ ಸಾಮಾಜಿಕವಾಗಿ ಅಸಮಾನತೆಯನ್ನು ಅನುಭವಿಸಿದ್ದ ಅಸ್ಪಶ್ಯ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹಲವಾರು ಅವಕಾಶಗಳನ್ನು ಮೀಸಲಾತಿಯ ಮುಖಾಂತರ ಒದಗಿಸಲಾಯಿತು.

ಮೀಸಲಾತಿ ಸೌಲಭ್ಯಗಳು ಪರಿಪೂರ್ಣವಾಗಿ ಜಾರಿಗೊಳ್ಳದೇ ಹೋದಾಗಲೂ ಅದು ಒದಗಿಸಿಕೊಟ್ಟ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಪರಿಶಿಷ್ಟ ಸಮುದಾಯ ಹಾಗೂ ಪರಿಶಿಷ್ಟ ವರ್ಗಗಳ ಸ್ವಾಭಿಮಾನ ನಿರ್ಮಾಣಕ್ಕೆ ಅಗತ್ಯವಾದ ವೇದಿಕೆಯನ್ನಂತೂ ಒದಗಿಸಿತು.

ಮೀಸಲಾತಿ ಸವಲತ್ತಿನಡಿ ಬಂದ ಪರಿಶಿಷ್ಟ ಸಮುದಾಯ ಹಾಗೂ ವರ್ಗಗಳು ಕ್ರಮೇಣ ಶಕ್ತಿ ಗಳಿಸಿಕೊಳ್ಳುತ್ತಾ ಭಾರತೀಯ ಸಮಾಜದೊಳಗೆ ತಮ್ಮ ನ್ಯಾಯಬದ್ಧ ಆಸ್ಮಿತೆಯನ್ನು ಎತ್ತಿ ಹಿಡಿಯತೊಡಗಿದವು. ಒಂದು ಕಡೆ ಮತ ಬ್ಯಾಂಕಾಗಿ ರಾಜಕೀಯ ರಂಗದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಗಳಿಸಿಕೊಂಡ ಈ ಸಮುದಾಯಗಳು ಸಾಮಾಜಿಕವಾಗಿ ಅವಹೇಳನಕ್ಕೊಳಗಾಗಿದ್ದ ತಮ್ಮ ಅಸ್ತಿತ್ವದ ಹಿರಿಮೆಯನ್ನು ರುಜುವಾತುಪಡಿಸುವುದಕ್ಕಾಗಿ ಸಾಂಸ್ಕೃತಿಕ ಸ್ಮೃತಿಯ ಪುನರ್‌ನಿರ್ಮಾಣಕ್ಕೆ ತೊಡಗಿದವು.

ಅವಕಾಶವಿರುವೆಡೆಯಲ್ಲಿ ಚರಿತ್ರೆಯ ಸಹಾಯದಿಂದ, ಅವಕಾಶವಿಲ್ಲದೆಡೆಯಲ್ಲಿ ಪುರಾಣ, ದಂತಕತೆ, ಜಾನಪದ ಮುಂತಾದ ಆಕರಗಳನ್ನು ಶೋಧಿಸಿ, ‘ತಮ್ಮತನ’ವನ್ನು ಅನಾವರಣಗೊಳಿಸತೊಡಗಿದವು. ಈವರೆಗೆ ಶಿಷ್ಟ ಸಾಂಸ್ಕೃತಿಕ ದಾಖಲಾತಿಗಳು ‘ತಲೆಕೆಳಗಾಗಿ’ ಬಿಂಬಿಸಿದ್ದ ತಮ್ಮ ಸಾಮುದಾಯಿಕ ಅಸ್ತಿತ್ವದ ವಿಧಿವಿಧಾನಗಳನ್ನು ಸಮರ್ಪಕ ವಿಶ್ಲೇಷಣೆ, ವಾದ ಮಂಡನೆ ಮುಂತಾದವುಗಳ ಮುಖಾಂತರ ಅವುಗಳ ಕಾಲ ಮೇಲೆ ನೆಟ್ಟಗೆ ನಿಲ್ಲಿಸತೊಡಗಿದವು.

ದಶಕಗಳುರುಳಿದಂತೆ ಇದೊಂದು ವಿಸ್ತೃತವಾದ ಅಧ್ಯಯನ ಕ್ರಮವಾಗಿ ರೂಪುಗೊಳ್ಳ ತೊಡಗಿದ್ದು, ಈವರೆಗಿನ ಸಂಸ್ಕೃತಿ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಇದನ್ನು ಆರೋಗ್ಯಕಾರಿ ಬೆಳವಣಿಗೆ ಎಂದು ನಾವು ಕರೆಯಬಹುದು. ಭಾರತೀಯ ಸಮುದಾಯಗಳು ಹಾಗೂ ಪ್ರಾದೇಶಿಕ ಸಮುದಾಯಗಳು ಮುಂತಾದವುಗಳೆಲ್ಲ ಈ ‘ಅಸ್ಮಿತೆ’ ನಿರ್ಮಾಣದ ಹೋರಾಟದಲ್ಲಿ ತೊಡಗಿಕೊಂಡಿವೆ.

‘ಅಸ್ಮಿತೆ’ ನಿರ್ಮಾಣ ಹಾಗೂ ಅದರ ಮಹತ್ವದ ಪ್ರತಿಪಾದನೆಗಳು ಒಂದು ಹಂತದಲ್ಲಿ ಆಯಾ ಸಮುದಾಯಗಳು ಮೈಗೂಡಿಸಿಕೊಳ್ಳುತ್ತಿರುವ ಸಾಮಾಜಿಕ ಚೈತನ್ಯದ ಅಂಗವಾಗಿದ್ದರೆ, ಮತ್ತೊಂದು ಹಂತದಲ್ಲಿ ಅವು ನಿಜಕ್ಕೂ ಪಡೆಯಬಯಸುತ್ತಿರುವ ಸಾಮಾಜಿಕ ಪಾಲುದಾರಿಕೆಯ ಹಂಬಲಕ್ಕೆ ನಿದರ್ಶನವಾಗಿರುತ್ತವೆ. ಅದಕ್ಕೆ ಪೂರಕವಾಗಿ ‘ಅಸ್ಮಿತೆ’ ನಿರ್ಮಾಣದ ವಿವರಗಳು ದ್ವಿಮುಖಿ ಚಲನೆಯನ್ನು ಒಳಗೊಂಡಿರುತ್ತವೆ. ತನ್ನ ಸ್ವಾಭಿಮಾನವನ್ನು ಪ್ರಕಟಗೊಳಿಸಿಕೊಳ್ಳುವುದು ಒಂದು ಮುಖವಾದರೆ, ಸಮಾನತೆಗಾಗಿ ಅಗ್ರಹಿಸುವುದು ಇನ್ನೊಂದು ಮುಖ.

ಇದನ್ನು ವಿಂಗಡಿಸಿ ಹೇಳಬೇಕೆಂದರೆ, ಸ್ವಾಭಿಮಾನವೆಂಬುದು ಸಾಂಸ್ಕೃತಿಕ ಹೆಗ್ಗಳಿಕೆಗಳನ್ನು ಪ್ರಸ್ತುತಪಡಿಸುತ್ತದೆಯಾದರೆ, ಸಮಾನತೆಯ ಹಂಬಲ ತನ್ನ ಸಾಮಾಜಿಕ ಹಿಂದುಳಿದಿರುವಿಕೆ ಯನ್ನು ಪ್ರಸ್ತುತಪಡಿಸುತ್ತದೆ. ತಾನು ಯಾರಿಗಿಂತಲೂ ಕಡಿಮೆಯಲ್ಲ ಹಾಗೂ ತಾನು ಈ ಸಮಾಜದೊನಿರ್ಮಾಣದಲ್ಲಿ ಪ್ರಶಂಸಾರ್ಹ ಕೊಡುಗೆಯನ್ನು ನೀಡಿದ್ದಿದೆ ಎಂದು ಸಾಂಸ್ಕೃತಿಕ ವಾಗಿ ರುಜುವಾತುಪಡಿಸಲು ಪ್ರಯತ್ನಿಸುವಾಗಲೇ ಪ್ರಸ್ತುತದಲ್ಲಿ ತಾನು ಇರಿಸಲ್ಪಟ್ಟಿರುವ ವಾಸ್ತವಿಕ ಪರಿಸ್ಥಿತಿಯೇನು ಎಂಬುದನ್ನು ಸಾಮಾಜಿಕವಾಗಿ ಪ್ರತಿಪಾದಿಸಲಾಗಿರುತ್ತದೆ.

ಇವೆರಡೂ ಬಗೆಯ ವಾದಾಂಶಗಳು ಕೂಡಿಯೇ ‘ಅಸ್ತಿತ್ವ’ ನಿರ್ಮಾಣದ ಪ್ರಯತ್ನಗಳು ಮುನ್ನಡೆಯುತ್ತವೆ. ಹಾಗಾಗಿ ‘ಅಸ್ಮಿತೆ’ಯ ಪ್ರತಿಪಾದನೆಯೆಂಬುದು ಇಂದು ಪ್ರತಿಯೊಂದು ಸಾಮಾಜಿಕ ಪಂಗಡಕ್ಕೂ ಒಂದು ಮಹತ್ವದ ಕರ್ತವ್ಯವಾಗಿದೆ. ಈ ಬಗೆಯ ‘ಅಸ್ಮಿತೆ’ ನಿರ್ಮಾಣಗಳು ಬಹುಮುಖಿಯಾಗಿರುವುದರಿಂದ ಒಂದು ಸಮಾಜದ ಸಾಮುದಾಯಿಕ ಸ್ಮೃತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ನೆರವಾಗುತ್ತದೆ.

ಯಾವುದೇ ‘ಅಸ್ಮಿತೆ’ಯೆಂಬುದು ಸಾಮಾಜಿಕವಾಗಿ ‘ನಿರ್ವಾತ’ ವಲಯದಲ್ಲಿ ತನ್ನ ಪ್ರತಿಪಾದನೆಯನ್ನು ಮಂಡಿಸಲಿಕ್ಕಾಗುವುದಿಲ್ಲವಾದ್ದರಿಂದ ಒಂದು ‘ಅಸ್ಮಿತೆ’ಯ ಪ್ರತಿಪಾದನೆಯು ಮತ್ತೊಂದು ‘ಅಸ್ಮಿತೆ’ಯ ಪ್ರತಿಪಾದನೆಯೊಂದಿಗೆ ಸಂಘರ್ಷಕ್ಕೆ ಅಥವಾ ಸಹಕಾರಕ್ಕೆ ತೊಡಗಲೇಬೇಕಾಗುತ್ತದೆ. ಇದರಿಂದಾಗಿ ಒಂದು ಮಟ್ಟಿಗಿನ ಸಂದಿಗ್ಧಕರ ಸನ್ನಿವೇಶ ಅನಿವಾರ್ಯವಾಗಿ ನಿರ್ಮಾಣವಾಗುತ್ತದೆ. ಅದರಿಂದಾಗಿ ಸಾಮಾಜಿಕ ಸಂಘರ್ಷದ ಸಂದರ್ಭಗಳು ಏರ್ಪಡುವುದು ಕೂಡ ಸಂಭವನೀಯ.

ಈ ಸಂಭವನೀಯತೆಗಳ ನಕಾರಾತ್ಮಕ ಗುಣಗಳು ಯಾವ ರೀತಿ ನಿವಾರಿಸಲ್ಪಡಬೇಕು ಹಾಗೂ ಸಾಮಾಜಿಕ ಸಂದರ್ಭವೊಂದರಲ್ಲಿ ಇಲ್ಲಿ ಯಾರೂ ಕೂಡ ಅಮುಖ್ಯರಲ್ಲ ಎಂಬಂತಹ ಧೋರಣೆಯೊಂದು ನೆಲೆಗೊಳ್ಳುವಂತಾಗಬೇಕು ಎಂಬಂತಹ ಮುಂಜಾಗರೂಕತೆ ಯನ್ನು ಈ ‘ಅಸ್ಮಿತೆ’ ಪ್ರತಿಪಾದನೆಗಳು ಒಳಗೊಂಡಿರಬೇಕಾಗುತ್ತದೆ. ಯಾಕೆಂದರೆ ಅಂತಿಮ ಲಕ್ಷ್ಯದಲ್ಲಿ ‘ಅಸ್ಮಿತೆ’ ಪ್ರತಿಪಾದನೆಯೆಂಬುದು ತಾನು ಮಾತ್ರವೇ ಶ್ರೇಷ್ಠ ಎಂಬ ನೆಲೆಗಟ್ಟಿನಲ್ಲಿ ನಿಲ್ಲುವಂತಾಗಬಾರದು. ತಾನೂ ಎಲ್ಲರಂತೆಯೇ ಶ್ರೇಷ್ಠ ಎಂಬ ಹೊಂದಾಣಿಕೆಗೆ ತಲುಪುವಲ್ಲಿಗೆ ಇದು ಮುನ್ನಡೆಯಬೇಕು.

ಜಾತಿ, ಸಮುದಾಯ, ಧರ್ಮ, ಪಂಗಡ, ಭಾಷೆ ಇವುಗಳ ‘ಅಸ್ಮಿತೆ’ ನಿರ್ಮಾಣದ ಪ್ರಯತ್ನಗಳಲ್ಲಿ ಫ್ಯಾಸಿಸ್ಟ್ ಆದ, ಫೆನೆಟಿಕ್ ಆದ ನಿಲುವುಗಳು ವ್ಯಕ್ತಗೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ಇರಬೇಕು. ಇಲ್ಲದಿದ್ದರೆ ಯಾವ ದಮನಕಾರಿ ಮೌಲ್ಯಗಳಿಂದಾಗಿ ತಮ್ಮ ‘ಅಸ್ಮಿತೆ’ಯ ನಿರಾಕರಣೆ ಸಂಭವಿಸಿದ್ದಿತೋ ಅಂತಹದೇ ದಮನಕಾರಿ ಧೋರಣೆಯೊಂದರ ನೆಲೆಗಟ್ಟಿನ ಮೇಲೆ ದಮನಿತರ ‘ಅಸ್ಮಿತೆ’ಯ ಸೌಧ ನಿರ್ಮಾಣವಾಗುತ್ತದೆ. ಹಾಗೆ ನಿರ್ಮಾಣಗೊಂಡ ‘ಅಸ್ಮಿತೆ’ ಇತರರಿಂದ ತೀವ್ರ ನಿರಾಕರಣೆಗೊಳಪಡುತ್ತದೆ. ಅಷ್ಟು ಮಾತ್ರವಲ್ಲದೆ, ಆ ಧೋರಣಾತ್ಮಕ ನೆಲೆಗಟ್ಟು ಅಪಾಯಕಾರಿಯಾದುದರಿಂದ ಆ ‘ಅಸ್ಮಿತೆ’ಯ ಪ್ರತಿಪಾದನೆಯಲ್ಲಿ ತೊಡಗಿರುವ ಸಮುದಾಯಕ್ಕೇ ಅದು ಮುಳುವಾಗುತ್ತದೆ.

ವಸ್ತುನಿಷ್ಠತೆ ಹಾಗೂ ಅಂದಂದಿನ ವಾಸ್ತವಿಕ ಸಂದರ್ಭಗಳನ್ನು ಆಯಾ ಕಾಲಘಟ್ಟದ ಹಿನ್ನೆಲೆಯಲ್ಲಿ ಗ್ರಹಿಸಿಕೊಳ್ಳುವಿಕೆ ಮತ್ತು ಚರಿತ್ರೆಯನ್ನು ವರ್ತಮಾನಕ್ಕೆ ತಂದು ಜೀವಂತ ಗೊಳಿಸಲು ಪ್ರಯತ್ನಿಸದಿರುವಿಕೆ ಎಂಬ ಜೀವಪರವಾದ ಮಾರ್ಗದರ್ಶಕ ಸೂತ್ರಗಳು ಸದಾ ಕಾಲ ನಮ್ಮ ನಡುವೆ ಕ್ರಿಯಾಶೀಲವಾಗಿರಬೇಕು. ಇದು ಯಾಕೆಂದರೆ ನಮ್ಮನ್ನು ನಾವು ಪರಿಗಣಿಸಿಕೊಳ್ಳುವಾಗ ಇತರರ ಹಿತವನ್ನು ನಿರ್ಲಕ್ಷಿಸಬಾರದು. ಪ್ರಜಾತಾಂತ್ರಿಕ ದೃಷ್ಟಿಕೋನವಿಲ್ಲದಿದ್ದರೆ ‘ಅಸ್ಮಿತೆ’ ನಿರ್ಮಾಣವೆಂಬುದು ಒಂದು ಕಡೆ ರೊಮ್ಯಾಂಟಿಕ್ ಹಳಹಳಿಕೆಯಾಗಿಯೂ, ಮತ್ತೊಂದು ಕಡೆ ಇತರರ ಮೇಲೆ ಮೇಲುಗೈ ಸಾಧಿಸಲು ರಚಿಸಿದ ಹುನ್ನಾರವಾಗಿಯೂ ಮಾರ್ಪಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ತಳ ಸಮುದಾಯದ ಯಾವುದೇ ಒಂದು ವರ್ಗದ ವ್ಯಕ್ತಿಗಳು ಈಗಿನ ರಾಜಕಾರಣದಲ್ಲಿ ಇದ್ದರೂ ಅವರು ಉನ್ನತ ವರ್ಗದವರ ಅಧೀನದಲ್ಲಿ ಗುಲಾಮರಂತೆ ಇರುತ್ತಾರೆ. ಒಟ್ಟಿನಲ್ಲಿ ಉನ್ನತ ವರ್ಗದವರಿಗೆ ಎಲ್ಲಾ ಸಮಾನ ಹಕ್ಕುಗಳು, ತಳಸಮುದಾಯದವರಿಗೂ ಲಭ್ಯವಾಗಿ ಅವರೂ ಸಹ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಬೇಕೆಂದರೆ, ಈ ವರ್ಗದವರು ಐಕ್ಯ ಮನೋಭಾವದಿಂದ ಒಗ್ಗೂಡಿ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಯಾರ ಅಧೀನಕ್ಕೂ ಒಳಗಾಗದಂತೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಬೇಕು. ಆದ್ದರಿಂದ ‘ತಳಸಮುದಾಯಗಳ ಐಕ್ಯತೆ’ ಎನ್ನುವುದು ಒಂದು ರೀತಿಯಲ್ಲಿ ಈ ಸಮುದಾಯಗಳನ್ನು ಒಗ್ಗೂಡಿಸಲು ಇರುವ ಸಂಘಟನಾತ್ಮಕ ಅಸ್ತ್ರವಾಗಿ ಬಳಕೆಯಾಗಬೇಕಾಗಿದೆ. ಹಾಗೆಯೇ ಅದು ತಳ ಸಮುದಾಯವಲ್ಲದವರ ವಿರುದ್ಧ ಶಕ್ತಿ ಪ್ರದರ್ಶಿಸುವಂತಾಗಬಾರದು.