ಭಾರತವು ವೈವಿಧ್ಯಮಯ ರಾಷ್ಟ್ರವಾಗಿದೆ. ಹಾಗೆಯೇ ಹಲವಾರು ಬುಡಕಟ್ಟು ಸಮುದಾಯಗಳ ನೈಸರ್ಗಿಕ ತವರು ಮನೆಯು ಕೂಡ. ಈ ಸಮುದಾಯಗಳು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ. ಅದರಲ್ಲಿಯೂ ಅರಣ್ಯದಲ್ಲಿ ವಾಸಿಸುವ ಅನೇಕ ಸಮುದಾಯಗಳು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿವೆ. ಇತರ ಸಮುದಾಯಗಳ ಆಚಾರ-ವಿಚಾರಗಳಿಗಿಂತ ತಮ್ಮ ನಂಬಿಕೆಗಳೇ ಶ್ರೇಷ್ಠವೆಂದು ಭಾವಿಸಿರುವ ಸಮುದಾಯಗಳು ಅವುಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ಇಂಥ ಸಂಸ್ಕೃತಿಯನ್ನು ಹೊಂದಿದ ಸಮುದಾಯಗಳು ಗುಂಪಾಗಿರಲು ಕಾರಣವೇನಿರಬಹುದು? ಅಲೆಮಾರಿಯಾಗಿದ್ದ ಮಾನವ ಕ್ರೂರ ಮೃಗಗಳ ಭಯದಿಂದಲೋ ಅಥವಾ ತಾನು ತನ್ನವರೆಂಬ ಅರಿವು ಬಂದಿದ್ದರಿಂದಲೋ ಒಂದು ಸಮೂಹದಲ್ಲಿ ವಾಸಿಸುತ್ತ ತನ್ನದೇ ಸಾಮಾಜಿಕ ಪರಿಸರವನ್ನು ನಿರ್ಮಿಸಿಕೊಂಡ. ಈ ಸಮೂಹ ಮುಂದೆ ಒಂದೊಂದು ಸಮುದಾಯಗಳಾಗಿವೆ.

ಪ್ರತಿಯೊಂದು ಬುಡಕಟ್ಟು ಸಮುದಾಯವು ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಢಿಸಿಕೊಂಡಿದ್ದು, ನಗರ ಸಂಸ್ಕೃತಿಗಿಂತ ಸಾಮಾಜಿಕ ಬಂಧನಕ್ಕೆ ಪುಷ್ಠಿಕೊಡುವ ಗುಣಗಳು ಇಲ್ಲಿ ಕಂಡುಬರುತ್ತವೆ. ಹೊಟ್ಟೆ ಹೊರೆದುಕೊಳ್ಳಲು ಆಹಾರಕ್ಕಾಗಿ ಅಲೆಮಾರಿಯಾಗಿದ್ದ ಮಾನವ ಅಲೆದಾಡುತ್ತ ಪ್ರಾಕೃತಿಕವಾಗಿ ದೊರೆಯುವ ಆಹಾರ ಗೆಡ್ಡೆ-ಗೆಣಸು, ಹಣ್ಣು-ಹಂಪಲು, ತಿಂದು ಬದುಕುವುದನ್ನು ಕಲಿತುಕೊಂಡನು. ಪ್ರಾಣಿಗಳ ಬೇಟೆಯನ್ನು ಆರಂಭಿಸಿದ. ಸುರಕ್ಷಿತ ವಾಸಕ್ಕೆ ಹಾಗೂ ಆಹಾರ ಸಂಗ್ರಹಣೆಗಾಗಿ ತನ್ನ ಬದುಕಿನ ಬಹುಭಾಗ ಸಮಯವನ್ನು ವ್ಯಯಿಸಿ, ಪ್ರಕೃತಿಯ ಕೂಸಾಗಿ ಬದುಕಿದ. ಜನಾಂಗ ನದಿ ತೀರಗಳಲ್ಲಿ ನೆಲೆ ಕಂಡುಕೊಂಡು ಕೃಷಿ ಚಟುವಟಿಕೆಯನ್ನು ತಮ್ಮ ಜೀವನ ಪ್ರಧಾನ ಅಂಗವನ್ನಾಗಿಸಿಕೊಂಡು ಜೊತೆ ಜೊತೆಗೆ ಪಶುಪಾಲನೆಯನ್ನು ಸಹ ಕೈಗೊಂಡಿತು. ಪರಿಣಾಮವಾಗಿ ನಾಗರಿಕತೆಯ ಒಡಲೊಳಗೆ ಬಂದದ್ದನ್ನು ಗಮನಿಸಬಹುದು. ಆರ್ಥಿಕ ಮೂಲಗಳಲ್ಲಿ ಈ ಎರಡು ಅಂಶಗಳು ಮುಖ್ಯವಾದವು. ಕಾಲ ಸರಿದಂತೆ ಆಧುನಿಕತೆಯ ಪ್ರಭಾವದಿಂದ ಈ ಸಮುದಾಯಗಳ ಚಟುವಟಿಕೆಯಲ್ಲಿ ಬದಲಾವಣೆಗಳು ಕಾಣತೊಡಗಿದವು. ಸಹಜವಾದ ಒಕ್ಕಲುತನವು ಅನೇಕ ಬದಲಾವಣೆಗಳಿಗೆ ಕಾರಣವಾಯಿತು.

ಪ್ರಾಚೀನ ಕಾಲದ ಒಂದು ಸಮುದಾಯ ಅಥವಾ ಜನಾಂಗದ ಚರಿತ್ರೆಯು ಮತ್ತು ಸಂಸ್ಕೃತಿಯು ಜೀವಂತವಾಗಿ ಉಳಿದು ಬಂದಿರುವಲ್ಲಿ ಅದರ ಮಾಧ್ಯಮವಾಗಿ ನಮಗೆ ದೊರಕುವುದು ಮೌಖಿಕ ಚರಿತೆ. ಈ ಮೌಖಿಕ ಚರಿತ್ರೆಯಿಂದ ಬೇಡ ಜನಾಂಗದ ಕೌಟುಂಬಿಕ, ಸಾಮಾಜಿಕ ನೆಲೆಯನ್ನು ಅರಿಯಬಹುದಾಗಿದೆ. ಈ ಸಮುದಾಯದ ಮೌಖಿಕ ಚರಿತ್ರೆಯನ್ನು ಗಮನಿಸಿದಾಗ ಪುರುಷ ಪ್ರಧಾನತೆಗಿಂತ, ಈ ಸಮುದಾಯದಲ್ಲಿ ಹೆಣ್ಣು ಸಮಾನ ಗೌರವ ಪಡೆದು ನೆಮ್ಮದಿಯಾಗಿಯೇ ಬದುಕುತ್ತಿದ್ದ ವಿವರಗಳು ದೊರೆಯುತ್ತದೆ. ಪುರುಷ ಪ್ರಾಧಾನ್ಯತೆಯೊಂದಿಗೆ ಮೊದಲಗೊಂಡ ಖಾಸಗಿ ಆಸ್ತಿಯ ಪರಿಕಲ್ಪನೆ, ಇದರೊಂದಿಗೆ ಪ್ರಾರಂಭವಾದ ಆಳುವ ಮನೋಭಾವದ ಪುರುಷನ ದಬ್ಬಾಳಿಕೆಗೆ ಒಳಗಾದ ಮಹಿಳೆಯ ಅತಂತ್ರ ಸ್ಥಿತಿಯು ಅಲ್ಲಲ್ಲಿ ದಾಖಲಾಗಿದೆ. ಈ ಹಂತದಲ್ಲಿ ಸಾಗಿಬಂದ ಸಮುದಾಯದಲ್ಲಿ ಇಂದು ಬೇಡ ಸಮುದಾಯದ ಮಹಿಳೆಯರ ಸ್ಥಿತಿಗತಿ ಅಧ್ಯಯನ ಅವಶ್ಯವಾಗಿದೆ. ಕೃಷಿ ಮತ್ತು ಕೈಗಾರಿಕೆಗಳಲ್ಲಿ ತೊಡಗಿರುವ ಈ ಸಮುದಾಯದ ಮಹಿಳೆಯ ಆರ್ಥಿಕ ಸ್ಥಾನಮಾನಗಳು ತುಂಬಾ ಕೆಳಸ್ತರದಲ್ಲಿವೆ. ಸಮಾಜದಲ್ಲಿ ಇಂತಹ ಅನೇಕ ಸಮುದಾಯಗಳ ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ದುರ್ಬಲರಾಗಿದ್ದಾರೆ ಎಂಬುದನ್ನು ನೋಡಬಹುದು. ಎಲ್ಲಾ ಸಮುದಾಯದಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವೆಂದು ಹೇಳಬಹುದು. ಹಾಗೆಯೇ ಬೇಡ ಸಮುದಾಯದಲ್ಲಿ ಮಹಿೆಯ ಪಾತ್ರ ತುಂಬಾ ಅವಶ್ಯವೆನಿಸುತ್ತದೆ. ಈ ಸಮುದಾಯದಲ್ಲಿ ಸ್ತ್ರೀಗೆ ಒಳ್ಳೆಯ ಸ್ಥಾನಮಾನ ದೊರಕಿಲ್ಲ. ಅದರೂ ತನ್ನ ದುಡಿಮೆ, ಶ್ರಮದ ಪರಿಣಾಮವಾಗಿ ಪುರುಷನಿಗಿಂತ ಶ್ರೇಷ್ಠ ಎಂದು ಗುರುತಿಸಬಹುದಾಗಿದೆ. ಸಂಸಾರದಿಂದ ಹಿಡಿದು ಕೃಷಿಯ ಚಟುವಟಿಕೆಗಳಾದ ಹೊಲ-ಗದ್ದೆ ಕೆಲಸಗಳಲ್ಲಿ ಬಿಡುವು ಇಲ್ಲದೆ ಈಕೆ ದುಡಿಯುತ್ತಿದ್ದಾಳೆ. ಕೃಷಿ ಕೆಲಸದಿಂದ ಕೌಟುಂಬಿಕ ಕೆಲಸಗಳಲ್ಲಿ ಭಾಗಿಯಾಗುತ್ತಾ ಶ್ರಮದಾಯಕವಾದ ಜೀವನ ಸಾಗಿಸುತ್ತಿದ್ದಾಳೆ.

ಭಾರತಕ್ಕೆ ಬ್ರಿಟೀಷರ ಪ್ರವೇಶದಿಂದಾಗಿ ಭಾರತದ ಎಲ್ಲಾ ಸಮುದಾಯಗಳು ಬದಲಾವಣೆಗೆ ಮಾರ್ಪಟ್ಟವು. ಇದಕ್ಕೆ ಬೇಡ ಸಮುದಾಯವೂ ಹೊರತಲ್ಲ. ತಮ್ಮ ಮೂಲ ವೃತ್ತಿಗಳನ್ನು ಬಿಟ್ಟು, ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಬೇಡ ಸಮುದಾಯವು ತಂದುಕೊಂಡಿತು. ನಂತರ ಈ ಸಮುದಾಯವು ಹೆಚ್ಚು ಕೃಷಿ ಕಾರ್ಮಿಕರಾಗಿ ಹಾಗೂ ಪಶುಪಾಲನೆಯಲ್ಲಿ ತೊಡಗಿಕೊಂಡಿತು. ಆದರೆ ಈ ಸಮುದಾಯದಲ್ಲಿ ಸ್ವಂತ ಕೃಷಿ ಭೂಮಿಯನ್ನು ಹೊಂದಿರುವಂತಹವರು ಕೇವಲ ಬೆರಳಣಿಕೆಯಷ್ಟು ಮಾತ್ರ. ಸ್ವಂತ ಭೂಮಿ ಇದ್ದರೂ ಸಹ ಮೂರು ಎಕರೆಯಿಂದ ನಾಲ್ಕು-ಐದು ಎಕರೆಯನ್ನು ಹೊಂದಿರುವುದನ್ನು ಕಾಣುತ್ತೇವೆ. ಇನ್ನೂ ನೂರಕ್ಕೆ ಎಂಭತ್ತರಷ್ಟು ಜನ ಕೃಷಿ ಕೂಲಿಯನ್ನು ಹಾಗೂ ಶ್ರೀಮಂತರ ಹೊಲಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಇದನ್ನು ಮುಂದಿಟ್ಟುಕೊಂಡು ಈ ಸಮುದಾಯದ ಮಹಿಳೆ ಹೇಗೆ ಸಮಾಜದಲ್ಲಿ ತನ್ನ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ರೀತಿಯಲ್ಲಿ ತೊಡಗಿಕೊಂಡಿದ್ದಾಳೆ ಎಂಬುದನ್ನು ನೋಡಬಹುದು. ಮುಖ್ಯವಾಗಿ ಮಹಿಳೆ ಪುರುಷನಂತೆ ಅಥವಾ ಪುರುಷನ ಸರಿಸಮಾನವಾಗಿ ದುಡಿಯುತ್ತಿರುವುದು ಗಮನಾರ್ಹ.

ಈ ಸಮುದಾಯದಲ್ಲಿ ಮಹಿಳೆಯು ಮನೆಯ ಒಳಗೆ ಹಾಗೂ ಮನೆಯಾಚೆಗಿನ ಕೆಲಸದಲ್ಲಿ ಅವಿರತವಾಗಿ ಶ್ರಮಪಟ್ಟು ದುಡಿಯುತ್ತಿದ್ದಾಳೆ. ಇಲ್ಲಿ ಮಹಿಳೆಯರು ಹೆಚ್ಚಾಗಿ ತಮ್ಮ ಕೌಟುಂಬಿಕ ಜೀವನವನ್ನು ಸಾಗಿಸಲು ಹಲವಾರು ಉಪಕಸುಬುಗಳಲ್ಲಿ ತೊಡಗಿ ಕೊಂಡಿದ್ದಾರೆ. ಆದರೆ ಅವಳ ಶ್ರಮ, ಕಷ್ಟ, ಕಣ್ಣೀರು, ದಣಿವು ಇವನ್ನು ಕೇಳುವವರು ಯಾರೂ ಇಲ್ಲದಂತೆ ಆಗಿದೆ. ಇಲ್ಲಿ ಮಹಿಳೆ ಕೃಷಿ ಚಟುವಟಿಕೆಗಳಿಂದ ಕೌಟುಂಬಿಕ ಕೆಲಸ ಗಳವರೆಗೂ ಬಿಡುವು ಇಲ್ಲದೇ ನಿರಂತರವಾಗಿ ದುಡಿಯುತ್ತಿದ್ದಾಳೆ. ಅಷ್ಟೇ ಅಲ್ಲದೇ ಮನೆಯಲ್ಲಿರುವ ಹಿರಿಯರು, ಮಕ್ಕಳು, ಪುರುಷರ ಯೋಗಕ್ಷೇಮವನ್ನು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮುದಾಯ ಮಹಿಳೆ ಸಾಮಾನ್ಯವಾಗಿ ಎಲ್ಲಾ ಕೆಲಸಗಳಲ್ಲೂ ಭಾಗಿಯಾದರೂ ಸಹ, ಇವಳ ಪರಿಶ್ರಮ ಆಧಿಕವಾಗಿದ್ದರೂ ಸಹ ಇಲ್ಲಿ ಮಹಿಳೆಗೆ ಯಾವುದೇ ರೀತಿಯ ನಿರ್ಣಯಾತ್ಮಕ ಹಕ್ಕುಗಳಿರುವುದು ತುಂಬಾ ಕಡಿಮೆ. ಏಕೆಂದರೆ ಕೃಷಿ ಚಟುವಟಿಕೆಗಳಾದ ಹೊಲ-ಗದ್ದೆಗಳ ಬಿತ್ತನೆಯಿಂದ, ಬೆಳೆದ ಕಾಳುಗಳನ್ನು ಹಸನುಗೊಳಿಸುವ ತನಕ ಇವಳ ಶ್ರಮ ತುಂಬಾ ಕಷ್ಟದಾಯಕವಾಗಿರುತ್ತದೆ. ಆದರೆ ಕೃಷಿ ಉತ್ಪನ್ನಗಳಿಂದ ಬಂದ ಹಣವನ್ನು ಪುರುಷ ಮಾತ್ರ ಖರ್ಚು ಮಾಡುವ ಸ್ವಾತಂತ್ರ ಪಡೆದಿದ್ದಾನೆ. ಆದರೆ ಮಹಿಳೆ ಇದನ್ನು ಕೇಳುವ ಅಥವಾ ಪ್ರಶ್ನಿಸುವ ಹಕ್ಕು ಇಲ್ಲದಂತೆ ಆಗಿಹೋಗಿದೆ. ಬೇಡ ಸಮುದಾಯದ ಬಹುತೇಕ ಮಹಿಳೆಯರು ಕೃಷಿ ಕೂಲಿಕಾರರು ಇಲ್ಲಿಯೂ ಸಹ ತಾರತಮ್ಯವನ್ನು ಕಾಣುತ್ತೇವೆ. ಕೂಲಿಯ ವಿತರಣೆಯಲ್ಲಿ ಪುರುಷನು ಮಹಿಳೆಗಿಂತ ಹೆಚ್ಚು ಹಣವನ್ನು ಪಡೆಯುತ್ತಾನೆ. ಪುರುಷ ಇಲ್ಲಿ ಮಹಿಳೆಗಿಂತ ಅಧಿಕ ಶ್ರಮ ಹಾಕದಿದ್ದರೂ ಸಹ ಹೆಚ್ಚು ಹಣವನ್ನು ಪಡೆಯುತ್ತಾನೆ. ಒಟ್ಟಿನಲ್ಲಿ ಕೃಷಿಯಿಂದ ಹಿಡಿದು ಕೌಟುಂಬಿಕ ಕೆಲಸದವರೆಗೂ ಮಹಿಳೆ ದುಡಿಯುತ್ತಿರುತ್ತಾಳೆ. ಆದರೆ ಸ್ತ್ರೀ ಇಲ್ಲಿ ಯಾವುದೇ ಪಾಲುದಾರಿಕೆಗೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಷ್ಟೆಲ್ಲ ಶ್ರಮ ಹಾಕಿ ದುಡಿದರು ಸಹ ಇವಳು ಶೋಷಣೆಯಿಂದ ಮುಕ್ತವಾದರೆ ಶೋಚನಿಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾಳೆ.

ಬೇಡ ಸಮುದಾಯದಲ್ಲಿ ಮಹಿಳೆಯರ ಸ್ಥಾನಮಾನ ಸಮುದಾಯಗಳಲ್ಲಿ ಇರುವಂತೆ ಇಲ್ಲಿಯೂ ಕಂಡುಬರುತ್ತದೆ. ಕೌಟುಂಬಿಕ ಜೀವನದಿಂದ ಹಿಡಿದು ಸಾಮಾಜಿಕವಾಗಿ, ರಾಜಕೀಯವಾಗಿ ಶೈಕ್ಷಣಿಕವಾಗಿ ವಂಚಿತಳಾಗಿ ಶೋಷಣೆಯನ್ನು ಅನುಭವಿಸುತ್ತಿದ್ದಾಳೆ. ಇಲ್ಲಿ ಸ್ತ್ರೀ ಪುರಷನ ಅಧೀನವಾಗಿ ಜೀವನ ಸಾಗಿಸುತ್ತಿದ್ದಾಳೆ. ಪುರುಷನ ವಿರುದ್ಧ ಸೊಲ್ಲು ಸಹ ಎತ್ತಲಾರದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾಳೆ. ಈ ಎಲ್ಲವನ್ನು ಗಮನಿಸಿದಾಗ, ನಗರ ಪ್ರದೇಶವನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪುರುಷನಿಗೆ ಸಿಗುವ ಸರಿಸಮಾನವಾದ ಸ್ಥಾನಮಾನಗಳು ಸಿಗುತ್ತಿಲ್ಲ ಎನ್ನಬಹುದು. ಸಮಾಜದಲ್ಲಿ ಅವಳ ಪ್ರದೇಶ ತುಂಬಾ ವಿರಳವಾಗಿರುತ್ತದೆ. ಕೇವಲ ಅಡುಗೆ ಮನೆ ಹಿತ್ತಲು, ಪಡಸಾಲೆ ಮತ್ತು ಹೊಲಗದ್ದೆಗಳಲ್ಲಿ ಮಾತ್ರ ಇವಳ ಪ್ರವೇಶವನ್ನು ಕಾಣಬಹುದು. ಇವರು ರಾಜಕೀಯದಿಂದ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ವಾಸ್ತವದಲ್ಲಿ ಈ ಸಮುದಾಯದ ಮಹಿಳೆಯರು ಸ್ಥಿತ್ಯಂತರಗಳಿಗೆ ಒಳಗಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಮಹಿಳೆ, ಶೋಷಣೆ, ಅನ್ಯಾಯ, ಆಕ್ರಮಗಳಿಗೆ ಒಳಗಾಗುತ್ತ ಬಂದಿದ್ದಾಳೆ. ಆಧುನಿಕತೆ ಕಾಲಿಟ್ಟ ನಂತರ ಸಮಾಜದಲ್ಲಿ ಸಮಾನತೆಯ ತತ್ವಗಳು ಬೆಳೆಯತೊಡಗಿದವು. ಈ ತಾತ್ವಿಕ ಜಗತ್ತು ಸೃಷ್ಟಿಯಾದಂತೆ ಪ್ರತಿಯೊಂದು ಸಮುದಾಯದಲ್ಲಿ ಮಾರ್ಪಾಡುಗಳು ಆಗಿರುವುದನ್ನು ಕಾಣಬಹುದು. ಸಾವಿರಾರು ವರ್ಷಗಳಿಂದಲೂ ಶಿಕ್ಷಣದಿಂದ ವಂಚಿತರಾಗಿದ್ದು, ಆಧುನಿಕತೆಯ ಪ್ರಭಾವದಿಂದ ಮಹಿಳೆಯ ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಅರಿತು, ಶಿಕ್ಷಣದ ಸೌಲಭ್ಯಗಳನ್ನು ಪಡೆಯುವಷ್ಟರ ಮಟ್ಟಿಗೆ ಬಂದಿದ್ದಾಳೆ. ಬೇಡ ಸಮುದಾಯದ ಮಹಿಳೆ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದ್ದಾಳೆ. ಇದಕ್ಕೆ ಪುರುಷನ ಸರ್ವಧಿಕಾರವೇ ಕಾರಣ ಎಂದು ಹೇಳಬಹುದು. ಇಲ್ಲಿ ಸ್ತ್ರೀ ಕೇವಲ ಆಡುಗೆ ಮನೆಗೆ ಸೀಮಿತವಾಗಿದ್ದಾಳೆ. ಇಲ್ಲಿ ಪುರುಷನಂತೆ ಸಮಾಜದಲ್ಲಿ ಭಾಗವಹಿಸುವ ಸ್ವಾತಂತ್ರ್ಯವಿಲ್ಲದಂತೆ ಆಗಿದೆ. ಮಹಿಳೆಯನ್ನು ಇಲ್ಲಿ ದುಡಿಯುವ ಪ್ರಾಣಿಯಂತೆ ನೋಡಲಾಗು ತ್ತದೆ. ನಮ್ಮಂತೆ ಒಂದು ಜೀವ ಎನ್ನುವುದನ್ನು ಮರೆತು, ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತೆ ಮಹಿಳೆಯರನ್ನು ಶೋಷಣೆಗೆ ಗುರಿಪಡಿಸುತ್ತಿದ್ದಾರೆ.

ಈ ಸಮುದಾಯದಲ್ಲಿ ಶಿಕ್ಷಣದ ಸೌಲಭ್ಯವನ್ನು ಇತ್ತೀಚೆಗೆ ಪಡೆಯುತ್ತಿದ್ದರೂ ಸಹ ಕೇವಲ ನೂರಕ್ಕೆ ೩೦ರಷ್ಟು ಮಹಿಳೆ ಶಿಕ್ಷಣವನ್ನು ಪಡೆಯುತ್ತಿದ್ದಾಳೆ. ಆದರೆ ಈ ಮಹಿಳೆಯು ಶಿಕ್ಷಣ ಪಡೆಯುವುದು ಹತ್ತನೇ ತರಗತಿಯಿಂದ ಪಿಯುಸಿವರೆಗೂ ಮಾತ್ರ. ಅನುಕೂಲದ ಮನೆತನದವರು ಪದವಿಯವರೆಗೂ ಓದಿಸುವುದನ್ನು ಕಾಣಬಹುದು. ಇಲ್ಲಿ ಪುರುಷನಿಗೆ ಸಿಕ್ಕಂತಹ ಶಿಕ್ಷಣದ ಸೌಲಭ್ಯ ಮಹಿಳೆಗೆ ದೊರೆಯುತ್ತಿಲ್ಲ. ಈ ಸಮುದಾಯದ ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಕೂಲಿ ಕೆಲಸ, ಮನೆಕೆಲಸ ಮಾಡುವುದರ ಜೊತೆಗೆ ತಮ್ಮ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಇವರೇ ಶಾಲೆಯ ರಜೆ ದಿನಗಳಲ್ಲಿ ಕೂಲಿ ಕೆಲಸಗಳಿಂದ ಪಡೆಯುತ್ತಿದ್ದಾರೆ. ಇಂತಹ ಅನಿವಾರ್ಯದ ಸ್ಥಿತಿಯಲ್ಲಿ ಈ ಮಹಿಳೆ ಬದುಕುತ್ತಿದ್ದಾಳೆ. ಈ ರೀತಿಯ ಪರಿಸ್ಥಿತಿಯು ಈ ಸಮುದಾಯದ ಮಹಿಳೆಯರಿಗೆ ಸಂಕೋಚದ ಮನಸ್ಥಿತಿಯನ್ನು ನಿರ್ಮಿಸುವಂತದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಸಮುದಾಯದ ಮಹಿಳೆ ತನ್ನ ವ್ಯವಹಾರ ಬುದ್ದಿಶಕ್ತಿಯಿಂದ ಅನೇಕ ಹೊಸ ಜೀವನೋಪಾಯ ಮಾರ್ಗಗಳನ್ನು ಕೈಗೊಂಡಿದ್ದಾಳೆ. ಇವರು ಆರ್ಥಿಕವಾಗಿ ಸ್ವಾವಲಂಬನೆ ಪಡೆಯಲು ಅನೇಕ ಉಪಕಸುಬುಗಳನ್ನು ಮಾಡಿಕೊಂಡಿದ್ದಾರೆ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಹಸುಗಳನ್ನು ಸಾಕುವಿಕೆ ಇದರಿಂದ ಬರುವಂತಹ ಆದಾಯವನ್ನು ಉಳಿತಾಯ ಮಾಡಿ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಸಮುದಾಯದ ಮಹಿಳೆ ತನ್ನ ಕಷ್ಟ ಕಾಲಗಳಲ್ಲಿ ಬೇರೆಯವರಲ್ಲಿ ಸಾಲವನ್ನು ಬೇಡುವುದಕ್ಕಿಂತ ತಮ್ಮ ತಮ್ಮಲ್ಲಿ ಸ್ವಸಹಾಯ ಸಂಘಗಳನ್ನು ಮಾಡಿಕೊಂಡಿದ್ದಾರೆ. ಈ ಸಂಘಗಳು ಮಹಿಳೆಯರ ಒಗ್ಗಟ್ಟು ಹಾಗೂ ಹಣ ಉಳಿತಾಯ, ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಈ ಮಹಿಳಾ ಸ್ವಸಹಾಯ ಸಂಘಗಳು ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಮಹಿಳೆ ಪುರುಷನನ್ನು ಕೇಳಿ ಹಣ ಪಡೆಯುವ ಪರಿಸ್ಥಿತಿಯಿತ್ತು. ಆದರೆ ಇಂದು ಪುರುಷನೇ ಮಹಿಳೆಯ ಎದುರು ಹಣಕ್ಕಾಗಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯಲ್ಲೂ ಅವರನ್ನು ಉತ್ತಮ ಜೀವನಕ್ಕೆ ಕೊಂಡೊಯ್ಯುತ್ತವೆ. ಇದರ ಜೊತೆಗೆ ಪ್ರಪಂಚದ ಅರಿವು ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆ, ಅನ್ಯಾಯ, ಅಕ್ರಮ ಇವುಗಳನ್ನು ಪ್ರಶ್ನಿಸುವ ಧೈರ್ಯ ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಸಮುದಾಯದ ಮಹಿಳೆ ಹಿಂದೆ ವಂಚಿತವಾಗಿದ್ದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಳೆೆ. ಸಾವಿರಾರು ವರ್ಷಗಳ ಕಾಲದಿಂದಲೂ ನಡೆದ ಶೋಷಣೆ, ದಬ್ಬಾಳಿಕೆ ಇಂದು ತೀರ ಗೌಣವಾಗಿದೆ. ಈಗ ಸ್ತ್ರೀಯು ಪ್ರಶ್ನಿಸುವ, ಹಕ್ಕು ಚಲಾಯಿಸುವ ಅಧಿಕಾರವನ್ನು ಪಡೆುಕೊಂಡಿದ್ದಾಳೆ. ಇಂದು ಈ ಸಮುದಾಯದ ಮಹಿಳೆಯರು ಶಿಕ್ಷಣ ಪಡೆದು ಮೇಲವರ್ಗದ ಮಹಿಳೆಯೊಂದಿಗೆ ಸ್ಪರ್ಧಿಸುವ ಹಂತ ತಲುಪಿರುವುದು ಸಂತಸದ ವಿಷಯ, ಆದರೆ ಇಂದಿನ ಪರಿಸ್ಥಿತಿಯಲ್ಲಿ ಬೇಡ ಜನಾಂಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಮುಂದಡಿ ಇಟ್ಟಿದ್ದಾಳೆ ಎಂದೇ ಹೇಳಬಹುದು. ತಾಂತ್ರಿಕವಾಗಿ ಅಭಿವೃದ್ದಿಯ ಯುಗದಲ್ಲಿ ಶಿಕ್ಷಣ ಮತ್ತು ಹುದ್ದೆಗಳಲ್ಲಿ ಭೇದಭಾವವನ್ನು ಮಾಡದೇ ಸಮಾನಶಿಕ್ಷಣ, ಸ್ಥಾನಮಾನ ನೀಡುವಂಥ ಕೆಲಸ ಸಾರ್ವಜನಿಕವಾಗಿ ಹಾಗೂ ಸರ್ಕಾರದಿಂದ ನಡೆಯಬೇಕಾಗಿರುವುದು ಅವಶ್ಯವಾಗಿದೆ.