ಹಲವಾರು ಅಲೆಮಾರಿ, ಬುಡಕಟ್ಟು ಸಮುದಾಯಗಳಲ್ಲಿ ವಾಲ್ಮೀಕಿ ಸಮುದಾಯವು ಒಂದು. ಇಂದಿನ ಪ್ರಸ್ತುತ ದಿನಗಳಲ್ಲಿ ಜಾಗತೀಕರಣದ ಪ್ರಭಾವದಿಂದ ದಿನದಿಂದ ದಿನಕ್ಕೆ ಸ್ಫೋಟಗೊಳ್ಳುತ್ತಾ ಯಾಂತ್ರಿಕ ಬದುಕಿನ ಅನುಸಂಧಾನದ ಮಧ್ಯ ನಮ್ಮನ್ನು ನಾವು ಕಂಡುಕೊಳ್ಳುವ ಪರಿಮಿತಿಯಿದ್ದರೂ ನಶಿಸುವ ಸಮಾಜ ಮತ್ತು ಪ್ರಬಲಗೊಳ್ಳುವ ಸಮುದಾಯದಲ್ಲಿಯ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ವಿಡಂಬನೆಯಾಗಿ ಉಳಿದಿದೆ.  ಆಲೋಚನೆಗೆ ತೆರೆದುಕೊಂಡಾಗ ಒಂದಕ್ಕೊಂದು ಪೂರಕ ಎನ್ನುವಂತೆ ಸಮಸ್ಯೆಯ ನಡುವೆ ಚಿಂತನೆಗಳು ನಡೆಯುತ್ತರುವುದು ಸಹಜ. ಇದಕ್ಕೆ ಅನುಗುಣವಾಗಿ ನಾನಿಲ್ಲಿ ವಾಲ್ಮೀಕಿ ಮಹಿಳೆಯ ಮೇಲೆ ಬೀರಿದ ಪ್ರಭಾವಗಳ ಕುರಿತ ಲೇಖನವನ್ನು (ವಾಲ್ಮೀಕಿ ಸಮುದಾಯದ ಸ್ತ್ರೀ)  ವಿಮರ್ಶಕರು ಮತ್ತು ಚಿಂತಕರ ಮುಂದಿಡಲು ಪ್ರಯತ್ನಿಸುತ್ತೇನೆ.

ನಾನು ಉದ್ದೇಶಪೂರಕವಾಗಿ ಜಾತಿಯ ಅನುಗುಣದ ಕುರುಹಕ್ಕಾಗಿ ಈ ಲೇಖನವನ್ನು ಮಂಡಿಸುತ್ತಿಲ್ಲ ಅಂದಿನ ಸಹಸ್ರಾರು ಇತಿಹಾಸವನ್ನು ಹೆಕ್ಕಿ ತೆಗೆಯುತ್ತ ಬಂದರೆ, ಅದು ಕೇವಲ ಪುರುಷ ಪ್ರಾಧಾನ್ಯತೆಯ ರಾಜಕೀಯದಲ್ಲಿ ಪುರುಷ ಪ್ರಭುತ್ವದ ಬಗ್ಗೆ ಚಿಂತನೆ, ಆಲೋಚನೆ ಮತ್ತು ಚಟುವಟಿಕೆ ಇವುಗಳನ್ನೇ ಕೆಲವರು ಪ್ರಸ್ಥಾಪಿಸಿದ್ದಾರೆ. ಇನ್ನೂ ಕೆಲವರು ‘‘ಮಹಿಳೆ’’ಯ ಬಗ್ಗೆಯೂ ಪ್ರಸ್ಥಾಪಿಸಿದ್ದು ಕಡಿಮೆ ಪ್ರಮಾಣ. ಆದ್ದರಿಂದ ಈ ಲೇಖನದಲ್ಲಿ ಸಂಕ್ಷಿಪ್ತ ಮತ್ತು ಕೂಲಂಕೂಷವಾಗಿ ಈ ನಾಡಿನ ನೀರಾವರಿ ಸೀಮೆಯಲ್ಲಿ (ನಾನು ಗಮನಿಸಿದ ಗಂಗಾವತಿ ತಾಲೂಕಿನಲ್ಲಿ)  ವಾಲ್ಮೀಕಿ ಮಹಿಳೆಯ (ಸ್ತ್ರೀ)  ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ಥಿತಿಗತಿ ಮತ್ತು ಶೋಷಣೆಯ ಬಗ್ಗೆ ನನ್ನ ಪ್ರಬಂಧವನ್ನು ಇಲ್ಲಿ ಮಂಡಿಸುತ್ತೇನೆ.

ಈ ನನ್ನ ಪ್ರಬಂಧದಿಂದ ಮಾತ್ರ ವಸ್ತುಸ್ಥಿತಿ ಚಿತ್ರಣ ತಮಗೆ ಅರಿತುಕೊಳ್ಳಲಿಕ್ಕೆ ಸಾಧ್ಯವೆಂದು ಬಯಸುವವನಲ್ಲ. ನಾನು ಕಂಡ ನೈಜ ಹಾಗೂ ಅಪರೂಪ ಸಂಗತಿಗಳ ಬಗ್ಗೆ ಚಿಂತನೆಯ ಅವಲೋಕನಕ್ಕೆ ಹೆಕ್ಕಿ ತೆಗೆದುಕೊಂಡು ಈ ಪ್ರಶ್ನಾತೀತ ವಿರೋಧದ ನಾಡಿನಲ್ಲಿ ಅಪ್ರಸಂಗ ರೂಪಿತ ಜಗದೊಳಗೆ ಯಾವುದು ಸತ್ಯತೆ? ಯಾವುದು ನಿತ್ಯತೆ? ಯಾವುದು ಪರಿಭ್ರಮಣೆ? ಯಾವ ಮೂಲ ಸಂಗತಿ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಆದಾಗ್ಯೂ ಈ ಸಮುದಾಯ ಅಂದರೆ, ವಾಲ್ಮೀಕಿ ಮಹಿಳೆಯೂ ತಮ್ಮ ಸಾಮಾಜಿಕ ಹಾಗು ಪುರುಷ ಪ್ರಧಾನತೆಯ ಮುಂದಾಳತ್ವದಲ್ಲಿ ಆಕೆಯ ಬಲವೃತ್ತಿಯೂ ಪ್ರಬಲ ಸಮೃದ್ದಿಯಾಗಿದ್ದರೂ ಸಹಿತ ಅವಳನ್ನು ಇನ್ನೂ ಹೊರಬೆಳಕಿಗೆ ತೆರೆದುಕೊಂಡಿಲ್ಲವೆಂಬ ಸಂಗತಿ ಸತ್ಯಕ್ಕೆ ಸಮೀಪವಾಗಿದೆ. ಈ ನಿಟ್ಟಿನಲ್ಲಿಯೇ ಪೂರಕವಾಗುವ ಕೆಲವು ಮಹತ್ವದ ಚಹರೆಯಿಂದ ತಿಳಿಯಲ್ಪಡುತ್ತದೆ. ಪ್ರಸಕ್ತ ದಿನಗಳಲ್ಲಿ ನಾವು ಗಮನಿಸುವುದಾದರೆ ಸರಕಾರದಿಂದ ಮೀಸಲಾತಿ ಇದ್ದರೂ ಸಹ ಅದು ಕೇವಲ ಆರ್ಥಿಕವಾಗಿ ಪ್ರಬಲವಾಗಿರುವ ಮೇಲ್ವರ್ಗದ ಮಹಿಳೆಯರ ಪಾಲಾಗಿದೆ. (ಮಹಿಳಾ ಮೀಸಲಾತಿ)  ಆದರೂ ಸಹ ವಾಲ್ಮೀಕಿ ಸಮುದಾಯದ ಮಹಿಳೆಯರು ಈ ದಿನಮಾನದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ವಿರಳ. ಒಂದು ವೇಳೆ ಕಂಡುಬಂದರೆ ಅದು ಜಾತಿ ಮೀಸಲಾತಿಯಿಂದ ಬಂದಿರುತ್ತಾಳೆ ವಿನಃ ಮಹಿಳಾ ಮೀಸಲಾತಿಯಿಂದಲ್ಲ. ಕಾರಣ ಅವಳ ಆರ್ಥಿಕ, ಶೈಕ್ಷಣಿಕ ಸ್ಥಿತಿ ಎಂದರೆ ತಪ್ಪಾಗಲಾರದು.

೧. ಆರ್ಥಿಕ ಪ್ರಗತಿ ಮತ್ತು ವಾಲ್ಮೀಕಿ ಸಮುದಾಯದ ಮಹಿಳೆ

ಒಂದು ನಿಗೂಢ ಸ್ಥಿತಿಯನ್ನು ಈ ವಿಚಾರ ಮಂಥನದಲ್ಲಿ ಎದುರಿಸುವ ಸಂಗತಿ ಇದ್ದರು ಸಹಿತ. ವಾಲ್ಮೀಕಿ ಮಹಿಳೆರೂ ನಿರ್ಗತಿಕವಲ್ಲದೆ ಪಯಣಿಸುವ ಸ್ವರೂಪಿ  ಆಗಿದ್ದಾಳೆಂದರೆ ಆಶ್ಚರ್ಯಕರವಲ್ಲವೆ? ಎಂಬ ನನ್ನ ಪ್ರಶ್ನೆ ಯಾವ ಪ್ರಶ್ನೆಗಳು ನಮ್ಮಲ್ಲಿ ಉದಯಿಸಿಕೊಂಡು ಮೇಲೆರಗಿ ಬರುತ್ತವೆಂಬುದನ್ನು ಒರೆಗಲ್ಲಿಗೆ ತಿಕ್ಕಿ ನೋಡಿದಾಗ ಆ ಸತ್ಯತೆ ಪರಿಪೂರ್ಣವಾಗಿ ಕಂಡುಬರುತ್ತದೆ. ಅಂತಹ ಸ್ಥಿತಿಪ್ರಜ್ಞೆಯಲ್ಲಿ ವಾಲ್ಮೀಕಿ ಜನಾಂಗದ ಪುರುಷರು ಕುಡಿತ ಅಥವಾ ದುಶ್ಚಟಕ್ಕೆ ಬಲಿಯಾಗಿ, ಹಲವಾರು ಗ್ರಾಮಗಳಲ್ಲಿ ಮಹಿಳೆಯೂ ಕೂಲಿಕಾರ್ಮಿಕಳಾಗಿ, ದುಡಿದು ಸಂಪಾದಿಸುವ ಒಂದು ಜೀವಂತ ವೃತ್ತಿಯಾಗಿಬಿಟ್ಟಿದೆ. ಹಾಗಂತ ನಾನಿಲ್ಲಿ ವರ್ಣರೂಪಿತವಾಗಿ ಹೇಳುವಂಥದ್ದಲ್ಲ. ಅವರ ದಿನ ನಿತ್ಯ ರೈಸ್ ಮಿಲ್ ಗಳಿಗೆ, ಜಮೀನುದಾರರ ಹೊಲಗಳಿಗೆ ಹೋಗಿ ಅವರ ಜಮೀನಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಟೊಂಕಕ್ಕೆ ಮಡಿಯುಟ್ಟು ಗದ್ದೆಗಳಲ್ಲಿ ದುಡಿಯುವ ಕೈಗಳಿಗೆ, ದುಶ್ಚಟಕ್ಕೆ ಬಲಿಯಾದ ಪುರುಷರಿಂದ ಅಥವಾ ದುಡಿಯಿದೆ. ಇರುವ, ಕುರುಡುತನ, ಜೂಜಾಟ ಆಡುವ ಹಾಗೂ ಮಟ್ಕಾ ಇನ್ನಿತರ ಆಮಿಶಗಳ ಕೈ ತುತ್ತಿಗೆ ಬಲಿಯಾಗಿ ಅವರ ಬದುಕಿ ನುದ್ದಕ್ಕೂ ಎಣಿಸುವ ಮಾತ್ರ.

ಹಾಗಾದರೇ ಈ ಕೊರಗತನ ಈ ಸಮುದಾಯದ ಮಹಿಳೆಯರಲ್ಲಿ ಮಾತ್ರವೇ? ಬೇರೆ ಯಾವ ಸಮುದಾಯದಲ್ಲಿ ಕಂಡುಬರುವುದಿಲ್ಲವೆ? ಸರಿ ಹಾಗಾದರೆ ತಾವು ಹೇಗೆ ತೌಲನಿಕವಾಗಿ ಪರಿಷ್ಕರಿಸಿರಿ? ಎಂಬ ಇತ್ಯಾದಿ ಮೂಲ ಅನುಸಂಧಾನದ ಪ್ರಶ್ನೆಗಳು ಒಮ್ಮಿಂದೊಮ್ಮೆಲೆ ಗೂಢಾಕರವಾಗಿ ನಿಲ್ಲುವುದು ಸಹಜ. ಆದರೆ ಎಷ್ಟೇ ಗಾಢವಾಗಿ ಕಂಡುಬಂದರೂ ಸಹಿತ ಅತಿ ಹೆಚ್ಚು ಶೇಕಡ ೧೦೦ಕ್ಕೆ ೭೫ರಷ್ಟು ಮಾತ್ರ ಪುರುಷರು ಮಹಿಳೆರಿಂದ ಬಳುವಳಿಯಾಗಿರುವ ಪದ್ಧತಿಯಲ್ಲಿ ಬದುಕು ಗೈಯುವರು. ಇನ್ನೂ ನಮ್ಮ ಗ್ರಾಮಾಂತರ ಜೀವನ ಬದುಕಿನಲ್ಲಿ ನಾವು ಕಾಣುವುದನ್ನು ಎಂದು ಮರೆಯುವಂತಿಲ್ಲ. ಅದಕ್ಕಾಗಿ ಆಂತರಿಕವಾಗಿ ಈ ಅಪಕೃತ್ಯಕ್ಕೆ ಬಲಿಯಾಗಿ ತಮ್ಮ ಜೀವನ ಅಡಿಪಾಯದಲ್ಲಿ ಜಿಗುಪ್ಸೆಗೊಳ್ಳುತ್ತಾ ಮುರಿಯುವ ಕೈಗಳಂತೆ ಹವಳಿಸಿ ಆರ್ಥಿಕ ಚಿಂತಾಜನಕದ ನೈಜವಲ್ಲದ ನ್ಯೂನತೆಯ ಪೂರ್ಣಕಳಾಗಿ ಕಂಡುಬರುತ್ತಾಳೆ.

ವಾಲ್ಮೀಕಿ ಸಮುದಾಯದ ಮಹಿಳೆಯು ತನ್ನ ಕುಟುಂಬದ ಶ್ರೇಯಸ್ಸಿಗೆ ಹೆಚ್ಚು ದುಡಿಯುತ್ತಾಳೆ. ಗ್ರಾಮೀಣ ಸಮಾಜದ ಮಹಿಳೆಯು ಹೊಲ-ಮನೆ ಎನ್ನದೆ ನಿರಂತರವಾಗಿ ತನ್ನನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಅವಳು ಅಡಿಗೆ ಮಾಡುವ ಕೆಲಸದಿಂದ ಹಿಡಿದು ಮಕ್ಕಳ ಆರೈಕೆ- ಲಾಲನೆಪಾಲನೆ ನೋಡಿಕೊಳ್ಳುತ್ತಾಳೆ. ಜೊತೆಗೆ ಪುರುಷನ ಸರಿಸಮಾನ ಕೃಷಿಕ್ಷೇತ್ರವಾದ ಭತ್ತ ಕೊಯ್ಯುವುದರಲ್ಲಿ, ಅಲ್ಲದೇ ಭತ್ತ ನಾಟಿ ಮಾಡುವುದು, ಕಳೆ ತೆಗೆಯುವುದರಲ್ಲಿಯೂ ಶ್ರಮಿಸುತ್ತಾಳೆ. ಅಷ್ಟೇ ಅಲ್ಲ ಪಶುಪಾಲನೆ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ತೋಟಗಾರಿಕೆ, ಕುರಿಸಾಗಣೆ, ಹೈನುಗಾರಿಕೆ ಕೆಲವು ಕೈಗಾರಿಕೆಗಳಲ್ಲಿಯೂ ನಿರಂತರವಾಗಿ ಕೆಲಸ ಮಾಡಿ ತನ್ನ ವ್ಯವಹಾರ ಮತ್ತು ಶ್ರಮದ ಬದುಕು ಪ್ರಾದೇಶಿಕವಾಗಿ ತುಂಬಾ ವಿಶಿಷ್ಟತೆಯಲ್ಲಿ ತೊಡಗಿಕೊಂಡು ತನ್ನ ಕುಟುಂಬದ ಆರ್ಥಿಕತೆಯ ಪ್ರಗತಿಗಾಗಿ ದುಡಿಯುತ್ತಿದ್ದಾಳೆ.

೨. ಸಮಾಜ ಮತ್ತು ವಾಲ್ಮೀಕಿ ಸಮುದಾಯದ ಮಹಿಳೆ

ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ವಾಲ್ಮೀಕಿ ಸಮುದಾಯದ ಮಹಿಳೆಯು ಸೂಲ ಗಿತ್ತಿಯಾಗಿ ಸಮಾಜದಲ್ಲಿ ಕಂಡುಬರುತ್ತಾಳೆ. ಇವರ ಸಂಖ್ಯೆ ಕಡಿಮೆಯಾಗಿರಬಹುದು. ಇಂದಿನ ಸೌಲಭ್ಯಗಳ ಫಲವಾಗಿ. ಆದ್ದರಿಂದ ಒಂದು ಕಾಲದಲ್ಲಿ ಕೊಡುತ್ತಿದ್ದ ಗೌರವ ಇಂದೂ ಯಾಂತ್ರಿಕ ಔಷಧಿಗಳ ಆಸ್ಪತ್ರೆಗಳ ಪ್ರಭಾವದಿಂದ ಸೂಲಗಿತ್ತಿಯರು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ವಾಲ್ಮೀಕಿ ಸಮುದಾಯದ  ಮಹಿಳೆಯರಲ್ಲಿ ವಿವಾಹ ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ತಮ್ಮ ಕುಲದ ಪ್ರಮುಖ ಯಜಮಾನರು ಸೇರಿ ಗಂಡು-ಹೆಣ್ಣಿನ ಮದುವೆಯ ಕಾರ್ಯವನ್ನು ಮಾಡುತ್ತಾರೆ. ಇಲ್ಲಿ ಈ ಸಮುದಾಯದ ಬೆಡಗುಗಳಲ್ಲಿ ಹೆಣ್ಣು-ಗಂಡಿನ ಬೆಡಗು ಒಂದೇಯಾದರೆ ಮದುವೆಯಾಗಲು ಬರುವುದಿಲ್ಲ. ಬೇರೆ ಬೇರೆಯಾಗಿದ್ದರೆ ಮಾತ್ರ ಮದುವೆಯಾಗಬಹುದು. ಉದಾ. ಬಂಟಲಾರ-ಮಿನಗಲಾರ. ಇಲ್ಲಿನ ಹೆಂಗಸು ಮದುವೆಯಾದ ಮೇಲೆ ಹೆಚ್ಚಿನ ಜವಾಬ್ದಾರಿ ಮತ್ತು ಮುಂದಿನ ದಿನಗಳನ್ನು ಸಾವಲಾಗಿ ತೆಗೆದುಕೊಂಡು, ಕೂಡಿ ಬಾಳುವುದರಲ್ಲಿ ಸ್ವರ್ಗಸುಖವನ್ನು ಈ ಸಾಮಾಜಿಕ ಸ್ಥಿತಿಯಲ್ಲಿ ಕಾಣುತ್ತಾರೆ. ಹೀಗೆ ಸಾಮಾಜಿಕವಾಗಿ ಅವರಲ್ಲಿ ಕಟ್ಟಿಮನೆ, ಮನೆದೇವರು ಇವುಗಳೆಲ್ಲವು ಮದುವೆ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೆಣ್ಣಿಗೆ ಸ್ವತಂತ್ರ ಆಯ್ಕೆ ಇರುವುದು ವಿರಳ. ತಂದೆ-ತಾಯಿ ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ.

ಇವರ ಬದುಕು ಸಾಮಾಜಿಕವಾಗಿ ಮೇಲ್‌ಸ್ಥರದ ಮನೆಗಳಲ್ಲಿ ಇರುವುದಿಲ್ಲ. ಬದಲಾಗಿ ಚಿಕ್ಕಪುಟ್ಟ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದರಿಂದ ಅವರಿಗೆ ಕಟ್ಟಡದ ನಿವಾಸದಿಂದ ನಿರ್ಗತಿಕರಾಗಿ ಬದುಕುತ್ತಿದ್ದುದು ಕಂಡುಬರುತ್ತದೆ. ಕಾರಣ ಆಳುವವರ ಕುಟಿಲತನದ ಬುದ್ದಿಯಿಂದ. ಆದರೆ ಇಷ್ಟೆಲ್ಲ ಸಾಮಾಜಿಕ ನೈಜ ಚಿತ್ರಣ ಕಂಡುಕೊಂಡರೂ ಸಹಿತ ವಾಲ್ಮೀಕಿ ಮಹಿಳೆಯು ಆಂತರಿಕ ಮತ್ತು ಬಾಹ್ಯವಾಗಿ ಶೋಷಣೆಗೆ ಒಳಪಡುವುದನ್ನು ನಾವು ಎಂದು ಮರೆಯುವಂತಿಲ್ಲ. ಒಂದು ಆಂತರಿಕವಾಗಿ ಎಂದರೆ ಗಂಡನ ಕುಡುಕತನ,  ಉಪಟಳ ದಿನದಿಂದ-ದಿನಕ್ಕೆ ಹೆಚ್ಚುತ್ತಾ ಕಣ್ಣೀರು ಹಾಕಿ ತನ್ನನ್ನು ತಾನೇ ಸುಡುವ ಕಾಲಕ್ಕೆ ಬಂದಿಯಾಗಿದ್ದಾಳೆ. ಆದುದರಿಂದ ಇಂದಿಗೂ ಆತ್ಮಹತ್ಯೆಗೆ ಶರಣಾಗಿರುವವರಲ್ಲಿ ಸಹಸ್ರಾರು ಕುಟುಂಬದ ವಾಲ್ಮೀಕಿ ಸಮುದಾಯದ ಮಹಿಳೆಯರಾಗಿದ್ದಾರೆ. ಆದ್ದರಿಂದ ಸಮಾಜದ ಚಿಂತಕರಿಗೆ ಇಲ್ಲಿ ಆಕೆಯ ಕಾಳಜಿ ಅಧ್ಯಯನಗಳು ಅವಶ್ಯಕ. ಅದೇ ತರನಾಗಿ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಆಕೆಯನ್ನು ಸಾಮಾಜಿಕವಾಗಿ ಬಾಹ್ಯರೂಪಕ ಸಂಕೋಲೆಯಾದ ‘ದೇವದಾಸಿ ಪದ್ಧತಿ’, ‘ಚೌಡಿ ಪದ್ಧತಿ’, ‘ಹರಮರಗಿ ಪದ್ಧತಿ’ ಹೀಗೆ ಹಲವಾರು ಗಂಡಾಂತರವನ್ನು ಅಂದಿನ ಹಿರಿಯರ ಸಂಪ್ರದಾಯದಂತೆ, ಇಂದಿಗೂ ನಡೆಯುವ ಕಲಾಂತರ ಘಟನೆಗಳಿಂದ ಬೇಡ ಮಹಿಳೆಯೂ ಸಾಮಾಜಿಕ ದುಃಸ್ಥಿತಿಗೆ ಕಾರಣವಾಗಿರುವುದನ್ನು ನಾವು ಕಾಣುತ್ತಿದ್ದೇವೆ.

೩.ರಾಜಕೀಯ ಮತ್ತು ವಾಲ್ಮೀಕಿ ಮಹಿಳೆ

ಈ ಕ್ಷೇತ್ರದಲ್ಲಿಯಂತೂ ವಾಲ್ಮೀಕಿ ಸಮುದಾಯದ ಮಹಿಳೆ ಆಕಾರದಲ್ಲಿ ರಾತ್ರಿ ಬೆಳಗುವ ಚುಕ್ಕೆಯಂತೆ ಕ್ಷಣಾರ್ಧದಲ್ಲಿ ಬಂದು ಹೋಗುವ ಪರಿಮಿತಿಯಿಲ್ಲದೆ ಜೀವನದ ಅನುಸಂಧಾನದ ಬದುಕಿನಲ್ಲಿಯೇ ಅವರು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಶೋಷಣೆಗೆ ಒಳಪಡಿಸಿರುವಂತಹ ಕ್ಷೇತ್ರವೆಂದರೆ ರಾಜಕೀಯ ತಪ್ಪಾಗಲಾರದು. ಏಕೆ? ಈ ಮಾತನ್ನು ಹೇಳಲಿಕ್ಕೆ ಇಷ್ಟಪಡುತ್ತೇನೆಂದರೆ, ಇಂದಿನ ಆಧುನಿಕ ತಾಂತ್ರಿಕ ಕಾಲದಲ್ಲಿ ಪುರುಷ ಅಧಿಕಾರತ್ವದಿಂದ, ಸಾಮಾಜಿಕ ಪ್ರಭುತ್ವದಿಂದ ವಾಲ್ಮೀಕಿ ಸಮುದಾಯದ ಮಹಿಳೆಯನ್ನು ನಾವು ಇಂದಿಗೂ ದೂರವಿಟ್ಟ ಸಂಗತಿ ನಾವು ಯಾರೂ ಮನವರಿಕೆ ಮಾಡಿಕೊಳ್ಳುತ್ತಿಲ್ಲ.

ಅದಕ್ಕಾಗಿ ಸಮಾಜವರ್ಗ ಹಾಗೂ ಕುಲವರ್ಗ ಇವುಗಳ ಅನುಸಂಧಾನದ ಪರಿಮಿತಿಗಳ ಸಂಗಮದ ಅಭಿಲಾಷೆಯ ಮಧ್ಯ. ನಾವು ಆಲೋಚನೆಗೆ ತೆಗೆದುಕೊಂಡಾಗ ಎಲ್ಲಾ ರಂಗದಲ್ಲಿಯೂ ಆಂತರಿಕ ಮತ್ತು ಬಾಹ್ಯವಾಗಿ ಆಕೆಯನ್ನು ತರಾಟಗೆ ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಹಾಗೆಯೇ ಪುರುಷ ಪ್ರಾಧಾನ್ಯತೆಗೆ ಒಳಗಾಗಿ ಮತ್ತು ಕೌಟುಂಬಿಕ ಯಜಮಾನನ ಗುರಿಗೆ ಒಳಪಟ್ಟಿದ್ದಾಳೆ. ಆಕೆಯನ್ನು ರಾಜಕೀಯ ಕ್ಷೇತ್ರದಲ್ಲಿ ಸೂಕ್ಷ್ಮದರ್ಶನಕ್ಕೆ ಕಾಣದಂತೆ ಈ ಕ್ಷೇತ್ರದಲ್ಲಿ ದಡಪಾಯಿಸಿದ್ದೇವೆ ಎಂದು ಹೇಳುವಲ್ಲಿ ಖಚಿತತೆ ಇದೆ.

೪. ಧಾರ್ಮಿಕ ಸಂಸ್ಕೃತಿ ಮತ್ತು ವಾಲ್ಮೀಕಿ ಸಮುದಾಯದ ಮಹಿಳೆ

ಈ ಸಮುದಾಯದ ಮಹಿಳೆಯರಲ್ಲಿ ದೇವರು ಮತ್ತು ಧರ್ಮಗಳು ಜೀವನದ ಉಸಿರಾಗಿವೆ. ಇವರು ತಮ್ಮ ಕುಲದೇವರ ಬಗ್ಗೆ ಅಪಾರವಾದ ಭಕ್ತಿ ಇಟ್ಟುಕೊಂಡಿದ್ದಾರೆ. ಹಾಗೆಯೇ ಮೂಢನಂಬಿಕೆ-ಸಂಪ್ರದಾಯ-ಆಚರಣೆ-ವಿಧಿ ನಿಯಮಗಳು, ಹಬ್ಬಹರಿದಿನ ಜಾತ್ರೆ ಇನ್ನೂ ಮುಂತಾದ ಸಾಂಸ್ಕೃತಿಕ ಸಂದರ್ಭದಲ್ಲಿ ಮಹಿಳೆ ಪಾಲ್ಗೊಳ್ಳುತ್ತಾಳೆ. ಇಲ್ಲಿನ ಮುಗ್ಧ ಅನಕ್ಷರಸ್ಥ ಬಡಪಾಯಿ ಹೆಂಗಸರು ದೇವರ ಹೆಸರಿನಲ್ಲಿಯೇ ನೆಮ್ಮದಿ ಕಾಣುತ್ತಾರೆ. ವಾಲ್ಮೀಕಿ ಸಮುದಾಯದ ಮಹಿಳೆಗೂ ಹಾಗೂ ದೇವರು ಮತ್ತು ಧರ್ಮಕ್ಕೂ ತುಂಬಾ ಅವಿನಾಭಾವ ಸಂಬಂಧವಿದೆ.

ಆದರೆ ವಾಲ್ಮೀಕಿ ಸಮುದಾಯದ ಮಹಿಳೆಯೂ ಋತಿಮತಿಯಾದಾಗ ಅವಳನ್ನು ೯-೧೧ ದಿನ ತಮ್ಮಿಂದ ದೂರವಿಟ್ಟು, ಹಸಿರಿನ ಗುಡಿಸಲುಗಳನ್ನು ಹೆಣ್ಣಿನ ಸೋದರ ಮಾವ ಅಥವಾ ಸೋದರ ಅತ್ತೆಯಿಂದ ಹಾಕಿಸಿ ಅದರಲ್ಲಿ ವಾಸಿಸುವಂತೆ ಬಿಡುತ್ತಾರೆ. ನಾವು ಈ ಸಂಗತಿಯನ್ನು ಕಂಡಾಗ ಇದು ಅವನತಿಗೆ ಕಾರಣಳಾಗುವುದಿಲ್ಲವೆ? ಎಂಬ ನನ್ನ ಪ್ರಶ್ನೆ. ಅದೇ ತರನಾಗಿ ವಿಧವೆಯಾದ ಆಕೆಯೂ ಜೀವನ ಪೂರ್ತಿಯಾಗಿ ವಿಧವೆಯಾಗಿರಬೇಕು. ಆಕೆ ಯಾವ ಸಂಸ್ಕೃತಿ ಹಬ್ಬಗಳಲ್ಲಿ ಭಾಗವಹಿಸಿದರೂ ಕೂಡಾ ಆ ಮತ್ತೈದತನದಲ್ಲಿ ಅವಳು ಭಾಗವಹಿಸುವಂತಿಲ್ಲ ಎಂಬುದು ನಾವು ಚಿಂತಕರಾದವರಿಗೆ ಈ ನುಡಿಯೂ ಸರಿದೂಗುತ್ತದೆ? ಎಂಬ ಇನ್ನೊಂದು ಪ್ರಶ್ನೆ.

ಹಾಗೆಯೇ ಅವಳು ಊರಿನ ಎಲ್ಲಾ ಗುಡಿಗುಂಡಾರಗಳಿಗೆ ಹೋಗಿ ದೀಕ್ಷೆ ಪಡೆಯ ಬಹುದು. ಆದರೆ ಮೇಲ್ವರ್ಗದವರ ದೇವಸ್ಥಾನಗಳಾದ ವೀರಭದ್ರ, ಈಶ್ವರ, ನರಹರಿ ಇವೇ ಮುಂತಾದ ದೇವಾಲಯಗಳಲ್ಲಿ ಪ್ರವೇಶ ಪೂರಕವಾಗಿ ದೀಕ್ಷೆ ಪಡೆಯುವಂತಿಲ್ಲ ಎಂಬ ಸಂಗತಿ ಇದು ಸರಿಯೇ? ಎಂಬುದು ನನ್ನ ಮೂರನೇ ಪ್ರಶ್ನೆಯಾಗಿದೆ. ಇಂತಹ ಪ್ರಶ್ನೆಗಳನ್ನು ನಾವು ಓರೆಗಲ್ಲಿಗೆ ಹಚ್ಚಿ ತಿಕ್ಕಿದಾಗ ಆಕೆ ಇಲ್ಲಿಯೂ ಕೂಡಾ ಬೃಹದಾಕಾರವಾಗಿ ಜಾತಿಯ ನಿಂದನೆ ಮೇಲೆ ಮತ್ತು ಕಸುಬು ದತ್ತಾಂಸ ಆಧಾರದ ಮೇಲೆ ಆಂತರಿಕ ಮತ್ತು ಬಾಹ್ಯವಾಗಿ ಶೋಷಣೆ ಪಡುವಂತದ್ದನ್ನು ನಾವು ಎಂದಿಗೂ ಮರೆ ಮಾಚುವಂತದ್ದಲ್ಲ.

೫. ಶೈಕ್ಷಣಿಕ ಮತ್ತು ವಾಲ್ಮೀಕಿ ಸಮುದಾಯದ ಮಹಿಳೆ

ಇಂದು ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾಳೆಂದು ಎಷ್ಟೇ ಹೇಳಿದರೂ ಸಹಿತ, ಮೂಲಭೂತವಾಗಿ ಸಾಕ್ಷರತ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆ ತುಂಬಾ ಹಿಂದೆ ಬಿದ್ದಿದ್ದಾಳೆ. ಆದರೆ ತೀರ ಇತ್ತೀಚಿಗೆ ಸರ್ಕಾರದ ಮಹಿಳಾ ಮೀಸಲಾತಿಯ ಪ್ರಭಾವದಿಂದ ಸ್ವಲ್ಪ ಮಟ್ಟಿಗಾದರೂ ಅನುಕೂಲ ಪಡೆಯುತ್ತಿದ್ದಾಳೆಂದರೂ ಸಹ. ಪ್ರಾಥಮಿಕ ಶಿಕ್ಷಣದಲ್ಲಿ ಈ ಸಮುದಾಯದ ಹುಡುಗಿಯರು ತುಂಬಾ ಸಿಗುತ್ತಾರೆ. ಕ್ರಮೇಣ ಮಾಧ್ಯಮಿಕ, ಪ್ರೌಢಶಾಲೆ, ಕಾಲೇಜು ಇಂಥ ಕಡೆ ಇನ್ನೂ ಸುಧಾರಣೆಯಾಗ ಬೇಕಾಗಿದೆ. ಇಂದಿನ ಯಾಂತ್ರೀಕತೆಯ ಜೀವನದಲ್ಲಿ ಆಕೆಯ ಚಿಕ್ಕವಯಸ್ಸಿನಲ್ಲಿ ಕಲಿಸದೆ ಮದುವೆಯ ನೆಪಮಾಡಿ ಶಿಕ್ಷಣದಿಂದ ನಿರ್ಗತಿಕಳನ್ನಾಗಿ ಮಾಡುತ್ತಿದ್ದೇವೆ.

ಆದ್ದರಿಂದ ಇಂದಿನ ಆಧುನಿಕ ಗಣಕಯಂತ್ರದಲ್ಲಿ ಬದುಕಿ ಕಾಲ ಕಳೆಯುವ ಯುಗಾಂತರದಲ್ಲಿ ಆಕೆಯನ್ನು ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಪೂರ್ಣ ನೆನೆಗುಂದಿಸುತ್ತಾ ಬಂದರೆ ನಮ್ಮ ಆಲೋಚನೆಗೆ ನಾವೇ ಕನ್ನಡಿಯಿಲ್ಲದೆ ಬಿಂಬ ಕಂಡಂತೆ ಆಗಿರುವುದರಿಂದ ಆಕೆಯನ್ನು ಶೋಷಣೆಯಿಂದ ಮುಕ್ತಗೊಳಿಸಿದರೆ ಅವಳು ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.