ಐತಿಹ್ಯದ ಅರ್ಥ : ಯಾವುದನ್ನು ನಾವು ಐತಿಹ್ಯವೆಂದು ಕರೆಯುತ್ತೇವೆಯೋ ಅದು ‘‘ಸತ್ಯಾಸತ್ಯತೆಗಳನ್ನು ದೃಢೀಕರಿಸಲ್ಪಡದ ನಾಗ ಪರಂಪರೆಯ ಮೂಲಕವಾಗಿ ಬಂದ  ವಸ್ತುಸಂಗತಿಗಳ ಮೊತ್ತವಾಗಿದೆ. ಬಾವಿ, ಕೋಟೆ, ಕೆರೆ, ಗುಡಿ ಇತ್ಯಾದಿಗಳ ಹಿಂದೆ ಹುಟ್ಟಿಕೊಂಡ ಕಾಲ್ಪನಿಕ ಇಲ್ಲವೆ ಅರೆ ಸತ್ಯಕಥೆಗಳೇ ಸ್ಥಳವಾಗಿ ಐತಿಹ್ಯವೆನಿಸುತ್ತವೆ. ಜರ್ಮನ ಭಾಷೆಯಲ್ಲಿ ‘‘ಸಾಗೆ’’ ಎಂಬ ಹೆಸರಿನಿಂದ ಪ್ರಚಲಿತವಿರುವ ಈ ಐತಿಹ್ಯಗಳು ವಾಸ್ತವಿಕವಾದವುಗಳಾಗಿದ್ದು, ಐತಿಹಾಸಿಕ, ಪೌರಾಣಿಕ ಹಿನ್ನಲೆಗಳನ್ನು ಪಡೆದುಕೊಂಡು ಲಘುಕತೆಯ ವರ್ಗಕ್ಕೆ ಸೇರುತ್ತವೆ. ಅಮೇರಿಕಾ, ಆಫ್ರಿಕಾ ಮುಂತಾದ ದೇಶಗಳಲ್ಲಿಯೂ ಈ ಸ್ಥಳಕತೆ ಕಾಣಬಹುದು.

ಈ ಐತಿಹ್ಯಗಳು ಹುಟ್ಟಿಕೊಳ್ಳಲು ಕಾರಣ ಜನರಿಗೆ ಅದರ ಮೇಲಿದ್ದ ಪ್ರೀತಿ. ಈ ಐತಿಹ್ಯ ಇಂದಿನ ನಾಗರಿಕ ಜನಾಂಗಕ್ಕೆ ಹಾಸ್ಯಾಸ್ಪದವಾಗಿರಬಹುದು. ಸೂಕ್ಷ್ಮವಾಗಿ ವಿಮರ್ಶಿಸಿದಷ್ಟು ಹಿಂದೆ ಆಗಿ ಹೋದ ಪ್ರಾಚೀನ ಐತಿಹಾಸಿಕ ಘಟನೆಗಳಿಗೆ ಶಾಸನಾದಿಗಳಲ್ಲಿ ದೊರೆಯುವ ಆಧಾರಗಳು ಸ್ಥಳಗಳ ಹೆಸರಿನಲ್ಲಿ ಸಿಕ್ಕುತ್ತವೆ. ಇತಿಹಾಸ, ಪುರಾಣ, ಧರ್ಮ, ಸಂಸ್ಕೃತಿಗಳಷ್ಟೇ ಅಲ್ಲ ಈ ಸ್ಥಳನಾಮಗಳ ಹಿನ್ನೆಲೆಯಿಂದ ಜನರ ನೆಚ್ಚಿಗೆ ಮೆಚ್ಚಿಗೆ ಆ ನೆಲದ ಪಾಡು, ಅಲ್ಲಿಯ ಪ್ರಾಣಿ, ವನಸ್ಪತಿ, ಹೊಳೆ, ಕೆರೆ ಮುಂತಾದವುಗಳ ಇರುವುದನ್ನು ಭಾಷೆ ಅರಿತುಕೊಳ್ಳಬಹುದಾಗಿದೆ. ವ್ಯಾಕರಣ, ಶಾಸ್ತ್ರದಲ್ಲಿ ತಜ್ಞರು ಯಾವ ಸಂಗತಿಗಳನ್ನು ವಿಶೇಷವಾಗಿ ಗಮನಿಸಿಲ್ಲವೋ ಅಂತಹ ಹಲವು ಮಾತುಗಳು ಊರಿನ ಹೆಸರಿನ ಅಭ್ಯಾಸದಲ್ಲಿ ಚೆನ್ನಾಗಿ ತೋರುತ್ತವೆ.

ಹಾಗಾದರೆ ಈ ಐತಿಹ್ಯವು ಇತಿಹಾಸಕ್ಕೆ ಸಮೀಪವರ್ತಿಯಾದುದು. ಚರಿತ್ರೆಯ ನಿರ್ಮಿತಿಯಂತೆ ಇಲ್ಲಿಯೂ ಕೂಡಾ ಭೌತಿಕ ಆಧಾರವೊಂದನ್ನು, ಅದನ್ನು ಮೂಲ ಸ್ವರೂಪದಲ್ಲಿಯೇ ಹಿಡಿದಿಟ್ಟಿಕೊಳ್ಳುವುದು ಅನಂತರ ನಂಬಿಕೆಗಳ ಕಲ್ಪನೆಗಳ ಆಧಾರಗಳಿಂದ ಅದನ್ನು ಬೆಳಸಲಾಗುವುದು. ಮೂಲ ಘಟನೆಯೊಂದರ ಸುತ್ತ ರಮ್ಯವಾದ ವಿವರಣೆಯನ್ನು ಕಟ್ಟಲಾಗುವುದೆಂದು ಡಾ.ತಾಳ್ತಜೆ ವಸಂತಕುಮಾರ ಅವರು ಇದನ್ನು ಸರಿಯಾಗಿಯೇ ಗ್ರಹಿಸಿದ್ದಾರೆ.

ಭೌತಿಕ ಆಧಾರ ಅಥವಾ ಸತ್ಯಗಳೆಲ್ಲವೂ ಐತಿಹ್ಯಕ್ಕೆ ವಸ್ತುವಾಗಲಾರದು. ಅವು ಸಾಮಾನ್ಯ ಜೀವನ, ಶಿಷ್ಟಕ್ಕಿಂತ ಭಿನ್ನವಾಗಿದ್ದು ವಿಶಿಷ್ಟವಾಗಿರಬೇಕು ಅಥವಾ ಅಸಾಮಾನ್ಯ ವಾಗಿರಬೇಕು. ನಮ್ಮ ನಾಡಿನ ಸೊಲ್ಲಿನ ರೀತಿಯನ್ನು ಅದರಲ್ಲಾದ ಮಾರ್ಪಾಡನ್ನು ತಿಳಿಯಲು ಈ ಸ್ಥಳನಾಮದ ಅಭ್ಯಾಸ ಅತ್ಯಂತ ಮಹತ್ವದ್ದಾಗಿದೆ. ಈ ಊರುಗಳು ಶಿಲಾಶಾಸನಾದಿಗಳಿಗಿಂತಲೂ ಸಾವಿರಾರು ವರುಷ ಹಿಂದಿನವು ಎನ್ನುವುದರ ಸಂದೇಹವಿಲ್ಲ. ಕಲ್ಬರಹ ತಾಮ್ರಪಟಗಳಂತೆ ಸ್ಥಳದ ಹೆಸರುಗಳು ನಮ್ಮ ನಾಡಿನ ಇರುವನ್ನು ತೋರುವ ಮಹತ್ವದ ಸಾಧನಗಳಾಗಿವೆ ಎಂಬುದು ಪ್ರತಿಯೊಬ್ಬ ವಿದ್ವಾಂಸರು ಮನಗಂಡ ವಿಷಯವಾಗಿದೆ.

ಪ್ರಸ್ತುತ ಲೇಖನದಲ್ಲಿ ಅಥಣಿಯ ಹೆಸರಿನ ಬಗ್ಗೆ ಹೇಳಬೇಕೆಂದರೆ ಅಥಣಿ ಅಂದರೆ ಮಂಗಳಕರ ಅಂತಲೂ ಹೇಳಬಹುದು. ಇದರ ಹಿನ್ನಲೆಯನ್ನು ನೋಡಿದಾಗ ಅಥಣಿ ಅಂದರೆ ಇದಕ್ಕೆ ಮೊದಲು ಅಧನಿ ಎಂಬ ಹೆಸರಿತ್ತು ವಿಜಾಪುರದ ಆದಿಲ್‌ಶಾಹಿ ಭೇಟಿ ಕೊಟ್ಟಾಗ ಈ ಊರಿನ ಧಣಿ ಯಾರು? ಎಂದಾಗ ಯಾವ ಧಣಿಯೂ ಮುಂದೆ ಬರಲಿಲ್ಲ. ಆಗ ಹಾಗಾದರೆ ಈ ಊರು ಧಣಿಯಿಲ್ಲದ ಊರು ಎಂದು ಉದ್ಗಾರ ತೆಗೆದನು. ಅಂದಿನಿಂದ ಈ ಊರು ಅಧಣಿ ಎಂದಾಯಿತು ಎಂದು ಒಂದು ಕತೆಯನ್ನು ಸೃಷ್ಟಿಸಿದ್ದಾರೆ. ಅಥಣಿಯು ಸಾಂಸ್ಕೃತಿಕ ಹಾಗೂ ಧಾರ್ಮಿಕವಾದ ನೆಲೆಗಟ್ಟನ್ನು ಹೊಂದಿದ್ದು, ಒಂದು ವ್ಯಾಪಾರ ಸ್ಥಳವಾಗಿತ್ತು ಎಂದು ಹೇಳುವುದರ ಜೊತೆಗೆ ಇದು ೧೨೦ ಹಳ್ಳಿಗಳನ್ನೊಳಗೊಂಡ ಅತ್ಯಂತ ದೊಡ್ಡದಾದ ವಿಧಾನಸಭಾ ಕ್ಷೇತ್ರವಾಗಿದ್ದು, ಎಲ್ಲ ಧರ್ಮದವರು ಐಕ್ಯತೆಯಿಂದ ಬಾಳಿ, ಸರ್ವ ಧರ್ಮಗಳ ಜನರನ್ನು ಸಮಾನ ದೃಷ್ಟಿಯಿಂದ ಕಾಣುವ ಹೃದಯ ಶ್ರೀಮಂತಿಕೆಯಿಂದ ಕೂಡಿದ ಸ್ಥಳ.ಶಿವಯೋಗಿಗಳ ತಪೋಭೂಮಿ ಒಂದೆಡೆಯಾದರೆ ಇನ್ನೊಂದೆಡೆ ರಾಘವೇಂದ್ರ ಸ್ವಾಮಿಗಳ ನೆಲೆ. ಇವೆರಡರ ಮಧ್ಯ ಜನರ ಬದುಕು. ‘ಸಿದ್ದೇಶ್ವರ ದೇವಸ್ಥಾನ’ ವಿಶಿಷ್ಠ ದೇವಸ್ಥಾನ, ಗ್ರಾಮದೇವರು ಅಥಣಿಯ ಜನರಿಗೆ ಇದನ್ನು ಕಟ್ಟಿಸಿದವ ಹುಸೀನ ಶಾಯಿ ಎಂದು ಮೇಲ್ನೋಟಕ್ಕೆ ಇದರ ಕರ್ತ ಮುಸಲ್ಮಾನೆಂದು ಹೇಳುತ್ತಾರೆ. ಮುಸಲ್ಮಾನರ ಮಹಾಪುರುಷರಾದ ಹಸನ-ಹುಸೇನ ಅವರ ತಾಯಿ ಫಾತಿಮಾಳ ಗುಡಿ ಇದ್ದು ಅದು ದೇಸಾಯಿವಾಡಾದಲ್ಲಿದೆ. ದೇಸಾಯಿಯವರ ಮನೆಯಿಂದ ಅದು ಪೂಜೆಗೊಳ್ಳುತ್ತದೆ. ಇಲ್ಲಿ ಎಲ್ಲರೂ ಧಣಿಗಳೆ ಎಲ್ಲರೂ ಸಮಾನರೆ. ಆದ್ದರಿಂದಲೇ ಆದಿಲ್‌ಶಾಹಿಗೆ ಉತ್ತರ ಕೊಟ್ಟಿರಲಿಕ್ಕಿಲ್ಲ ಅಥವಾ ಅವನ ಹೆದರಿಕೆಯಿಂದ ಧ್ವನಿ ಎತ್ತಿರಲಿಕ್ಕಿಲ್ಲ. ಅದೇ ಅಧನಿ ಅಥಣಿಯಾಗಿದೆ.

ಸ್ಥಳನಾಮ ಶೂರಪಾಲಿ ಅಥವಾ ಮರನೂರು

ಶೂರ್ಪಾಲಿ ಅಥವಾ ಮರನೂರ : ‘‘ಶೂರ್ಪಾಲಯಂ ಗವಿಸ್ಯಾಮಿ ಕಾಶಿವಾಸ ಫಲಂ ಲಭೇತ ಎಂದು ಹೇಳುವ ಶೂರ್ಪಾಲಿ ಮುಂಬೈ ಕರ್ನಾಟಕ ಪ್ರಾಂತ್ಯವನ್ನಾಗಿ ರಚಿಸಿದಾಗ ಈ ಶೂರ್ಪಾಲಿ ಅಥಣಿ ತಾಲೂಕಿನಲ್ಲಿತ್ತು. ಈಗ ಇತ್ತೀಚಿಗಷ್ಟೇ ಅದನ್ನು ಜಮಖಂಡಿ ತಾಲೂಕಿಗೆ ಸೇರಿಸಲಾಗಿದೆ.

ಈ ಶೂರ್ಪಾಲಿಯು ಅಥಣಿಯಿಂದ ೨೭ ಕಿ.ಮೀ. ಅಂತರದಲ್ಲಿದೆ. ಇದು ಒಂದು ಕುಗ್ರಾಮ. ಈಗಲೂ ಕೂಡ ಶೂರ್ಪಾಲಿಗೆ ಒಂದು ಬಸ್ಸು ಇಲ್ಲ. ತುಬಚಿಯವರೆಗೆ ಬಸ್ಸಿದ್ದರೂ ಮತ್ತೆ ಎರಡು ಕಿ.ಮೀ. ನಡೆದುಕೊಂಡೇ ಹೋಗಬೇಕು.

ಶೂರ್ಪಾಲಿ ಬಹಳ ಸುಂದರವಾದ ತಾಣ. ಅಂದರೆ ಅಲ್ಲಿ ನಿಮಗೆ ಯಾವ ಸುಂದರ, ಕೃತ್ತಿಮ ಉದ್ಯಾನ ಕಣ್ಣಿಗೆ ಬೀಳದು. ಅಷ್ಟೇ ಅಲ್ಲ ಆಲಮಟ್ಟಿ ಜಲಾಶಯದ ನೀರು ೫೩೨ ಅಡಿ ಹಿಡಿದರೆ ಈ ಶೂರ್ಪಾಲಿಯೇ ಮುಳಿಗಿ ಹೋಗುವದು. ಈಗಾಗಲೇ ಸರಕಾರ ಮನೆಗಳಿಗೆ, ಮುಳುಗುವ ಗದ್ದೆಗಳಿಗೆ ಪರಿಹಾರ ಧನ ಕೊಟ್ಟಿದೆ. ಆದರೆ ನನಗೆ ಮಾತ್ರ ಈ ಸುಂದರ ಊರು ಕಣ್ಮರೆಯಾಗುವದೆಂಬ ಬೇಸರ. ಅಲ್ಲಿ ಹರಿಯುವ ಕೃಷ್ಣೆ ಸಮೃದ್ದಿಯಾಗಿ ನೀರನ್ನು ಕೊಡುತ್ತಾಳೆ. ನರಸಿಂಹನ ಸೇವೆಗಾಗಿ ಕಂಕಣಬದ್ದಳಾಗಿ ನಿಂತಿದ್ದಾಳೆ. ತನ್ನ ಸಂಗೀತ ಸುಧೆಯನ್ನು ತಾನೊಬ್ಬಳೇ ಸವಿಯಬೇಕೆಂಬ ಹಂಬಲದಿಂದ ಊರಿಂದ ದೂರದಲ್ಲಿ ಹರಿದಿದ್ದಾಳೆ. ನದಿಯ ಮಧ್ಯದಲ್ಲಿ ಕೋಟೇಶ್ವರನ ಗುಡಿ ಆ ಕೋಟೇಶ್ವರನ ಮುಂದೆ ಕೋಟಿ ತೀರ್ಥಗಳ ಸನ್ನಿಧಾನ, ಕಾಶಿಗಿಂತ ಪುಣ್ಯ ಜಾಸ್ತಿ ಕಾಶಿಗಿಂತಲೂ ಐದು ಗುಂಟಿ ಜಾಸ್ತಿ. ‘‘ಕೋಟೇಶ್ವರ, ಬಯಲೇಶ್ವರ, ಗುಹೇಶ್ವರ, ತ್ರಿಕಟೇಶ್ವರ ಹಾಗೂ ಕಂಕೇಶ್ವರ ಈ ಐದು ಜನ ಈಶ್ವರರು ಕಾಶಿಯಿಂದ ನಡೆದುಕೊಂಡು ಬಂದು ಇಲ್ಲಿ ನೆಲೆಸಿರುವರೆಂದು ಹೇಳುವುದುಂಟು.

ಸ್ಥಳದ ಐತಿಹ್ಯದ ಬಗ್ಗೆ ಈ ಕಥೆಯನ್ನು ಹೇಳುವುದು ವಾಡಿಕೆ. ಪರಶುರಾಮನ ತಂದೆ ಜಮದಗ್ನಿಯ ಹತ್ತಿರವಿದ್ದ ಕಾಮಧೇನುವನ್ನು ಕ್ಷತ್ರಿಯ ಅರಸ ಒಯ್ದದ್ದನ್ನು, ತಿಳಿದು ಕ್ರೋಧಗೊಂಡ ಪರಶುರಾಮನು ಇಡೀ ಕ್ಷತ್ರಿಯ ಕುಲವನ್ನೇ ಸಂಹರಿಸುವುದಾಗಿ ಪ್ರತಿಜ್ಞೆಗೈದು ಪೂರೈಸಿದ ಹಾಗೂ ಆ ಸಂಚಾರದಲ್ಲಿ ತನ್ನ ಪರಶುವಿಗೆ ಹತ್ತಿದ ರಕ್ತವನ್ನು ಎಲ್ಲ ತೀರ್ಥದಲ್ಲಿ ತೊಳೆದ. ಆದರೇನು? ಪರಶುವಿಗೆ ಹತ್ತಿದ ಎರಡು ಹನಿ ರಕ್ತ ಉಳಿದೇ ಬಿಟ್ಟಿತಲ್ಲಾ. ಅದಕ್ಕಾಗಿ ಎಲ್ಲೂ ಹೋಗದ ಆ ಗುರುತನ್ನು ಶೂರ್ಪಾಲಿಯ ಕೃಷ್ಣೆ ಹೋಗಲಾಡಿಸಿದ್ದು ಕಂಡು,ಇದೇನು ಇದೆಲ್ಲಿಯ ಅಶ್ರು, ಇದು ಆನಂದಾಶ್ರು ಪರಶುರಾಮರ ಕಣ್ಣಿಂದ ಎಂತಹ ಪುಣ್ಯಭೂಮಿಯೆಂದು, ಕಾಶಿಗಿಂತ ಐದು ಗುಂಟೆ ಹೆಚ್ಚಾದ ಪುಣ್ಯಕ್ಷೇತ್ರವೆಂದು ಅವರ ಆನಂದಾಶ್ರುಗಳು ಬಿದ್ದ ಸ್ಥಳದಲ್ಲಿಯೇ ಎರಡು ಅರಳಿ ವೃಕ್ಷಗಳು ಹುಟ್ಟಿ ಅಲ್ಲಿಯೇ ನರಸಿಂಹ ದೇವರ ಮೂರ್ತಿ ದೊರಕಿದ್ದು. ಅಂತಲೇ ಇರಬೇಕು ನರಸಿಂಹದೇವರಿಗೆ ಅರಳಿ ಮರದಪ್ಪ, ಅಳ್ಳಿ ಮರದಪ್ಪನೆಂದಾಗಿರಬೇಕು. ಜನಪದರ ಬಾಯಲ್ಲಿ ಹಾಗೂ ಪ್ರತಿಯೊಬ್ಬರ ಮನೆಯಲ್ಲಿಯೂ ಒಬ್ಬರ ಹೆಸರು ಅಳ್ಳಿಮರದಪ್ಪ ಇರುವುದು. ಆತ ಗ್ರಾಮದೇವ ಅದೇ ರೀತಿ ಈ ಊರಿಗೆ ಮರನೂರ ಎಂಬ ಹೆಸರು ಬರಲು ಕಾರಣ ಭಾಗೀರಥಿ. ಅಂದರೆ ಅದೇ ಕೃಷ್ಣೆ. ಒಬ್ಬ ಬಡವ ರಾಮತೀರ್ಥ ಬ್ರಾಹ್ಮಣನಿಗೆ, ಒಂದು ಮರದ ತುಂಬ ಮುತ್ತು ರತ್ನಗಳನ್ನಿಟ್ಟು ಬಾಗಿನ ಕೊಡುತ್ತಿದ್ದಳು. ಅದಕ್ಕಾಗಿ ಮರನೂರು ಶೂರ್ಪ ಅಂದರೆ ಮರ. ಈ ರೀತಿಯಾಗಿ ದಿನಾಲೂ ಮರದ ಬಾಗಿನ ಕೊಟ್ಟು ಇದನ್ನು ಯಾರಿಗೂ ಹೇಳಬೇಡ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದಳು. ಆದರೂ ಆತ ಬೇರೆಯವರಿಗೆ ಹೇಳಿ ಶಾಪಕ್ಕೆ ಗುರಿಯಾದನು. ಅಷ್ಟೇ ಅಲ್ಲ ಬ್ರಹ್ಮರಾಕ್ಷಸನಾಗಿ ಮರದಲ್ಲಿ ವಾಸವಾಗಿದ್ದ. ನಂತರ ಯಾದವಾರ್ಯರು ತಪಃ ಶಕ್ತಿಯಿಂದ ಆತನಿಗೆ ಮುಕ್ತಿಕೊಟ್ಟರೆಂದು ಹೇಳುವುದು ವಾಡಿಕೆ. ಅಷ್ಟೇ ಅಲ್ಲ ಗದುಗಿನ ನಾರಾಯಣಪ್ಪನಿಗೆ ಮಹಾಭಾರತ ಬರೆಯಲು ಸ್ಫೂರ್ತಿ ಸಿಕ್ಕದ್ದು ಈ ಶೂರ್ಪಾಲಿಯಲ್ಲಿಯೇ. ಮೊದಲಿನಿಂದಲೂ ಶೂರ್ಪಾಲಿಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಒಂದು ದಿನ ನಾರಾಯಣಪ್ಪ ಎಲ್ಲ ತೀರ್ಥಯಾತ್ರೆ ಮುಗಿಸಿ ಈ ಶೂರ್ಪಾಲಿಗೆ ಬಂದಿದ್ದ. ಊಟಕ್ಕಾಗಿ ಪಂಕ್ತಿಯಲ್ಲಿ ಕುಳಿತಾಗ ಇವನ ಎದುರುಗಡೆ ಸಾಲಿನಲ್ಲಿ ಒಬ್ಬ ಮುದುಕ ಕುಳಿತಿದ್ದ. ಊಟವನ್ನು ಮಾಡುತ್ತಾ ಇರುವಾಗ ಎದುರುಗಡೆ ಕುಳಿತ್ತಿದ್ದ ಒಬ್ಬ ವ್ಯಕ್ತಿ ತನ್ನ ಮೊಮ್ಮಗನಿಗೆ ‘‘ಏನು ದುಷ್ಟ ದುರ್ಯೋಧನ ಆಗಿದ್ದೀಯಾ’’ ಎಂದು ಬಯ್ದಗ ಆ ಮುದಕ ಊಟ ಬಿಟ್ಟು ಎದ್ದು ಬಿಟ್ಟ. ಇದನ್ನು ನೋಡಿದ ನಾರಾಯಣಪ್ಪ ಕೂಡ ಎದ್ದು ಆ ವ್ಯಕ್ತಿಯು ಎಲ್ಲಿ ಹೋಗುವನೆಂದು ಆತನ ಬೆನ್ನು ಹತ್ತಿದ. ಇದನ್ನು ಕಂಡು ಆತ ಓಡತೊಡಗಿದ. ಬೆನ್ನು ಹತ್ತಿದ ನಾರಾಯಣಪ್ಪ ಓಡಬೇಡಿ ಹಿರಿಯರೇ ಎಂದು ಆತನನ್ನು ನಿಲ್ಲಿಸಿ ‘‘ಏಕೆ ನೀವು ಊಟ ಬಿಟ್ಟು ಎದ್ದು ಹೊರಟಿರುವಿರಿ ಎಂದಾಗ ಆತ ಹೇಳಿದ ಅನ್ನ ಕೊಟ್ಟ ಧಣಿಯನ್ನು ಬಯ್ದರೇ ಇದೆಲ್ಲವನ್ನು ಕೇಳುವ, ಸಹಿಸುವ ಶಕ್ತಿ ನನಗಿಲ್ಲಾ. ಅಷ್ಟೇ ಅಲ್ಲ ಅವರನ್ನು ಎದುರಿಸುವ ಶಕ್ತಿ ಇಲ್ಲಾ ಎಂದಾಗ ನಾರಾಯಣಪ್ಪ ಆತನ ಕಾಲು ಹಿಡಿದು ಹಾಗಾದರೆ ನೀವು ಯಾರು ಹೇಳಿರಿ ಎಂದು ಕೇಳಿದ. ಆಗ ಆ ವ್ಯಕ್ತಿ ನೀನು ಯಾರ ಮುಂದೆ ಹೇಳದೆ ಇದ್ದಲ್ಲಿ ನಾನು ನನ್ನ ಪರಿಚಯವನ್ನು ಹೇಳುವೆ ಎಂದು ಹೇಳಿ ನಾನೇ ಅಶ್ವಥಾಮ ಎಂದು ಹೇಳಿದಾಗ ನಾರಾಯಣಪ್ಪನು ನನಗೆ ಮಹಾಭಾರತದ ಕಥೆಯನ್ನು ಬರೆಯಲು ಸಹಾಯ ಮಾಡು ಎಂದು ಕೇಳಿದಾಗ ಅಶ್ವಥಾಮರು ಒಪ್ಪಿದರು. ಆದರೆ ನಾನು ಬದುಕಿದ್ದು ಯಾರಿಗೂ ನೀನು ಹೇಳಬಾರದು ಎಂದಾಗ ಒಪ್ಪಿದ ನಾರಾಯಣಪ್ಪಾ. ಆದರೆ ಬರೆಯುತ್ತಾ ಹೋದಾಗ ಅಶ್ವಥಾಮೋ ಹತಃನ ಕುಂಜರಾಃ ಎಂದು ಹೇಳುವಾಗ ತಡೆಯದೇ ನಾರಾಯಣಪ್ಪ ಅವನು ಬದುಕಿದ್ದು ತನಗೆ ಭೇಟಿಯಾಗಿದ್ದುದನ್ನು ಉಲ್ಲೇಖಿಸಿದ. ಎಂತಲೇ ಮುಂದಿನ ಭಾರತವನ್ನು ಬರೆಯದೇ ನಂತರ ಉಳಿದ ಮಹಾಭಾರತವನ್ನು ತಿಮ್ಮರಸ ಕವಿ ಬರೆದಿದ್ದಾನೆ. ಇದು ೧೪ನೇ ಶತಮಾನದಲ್ಲಿ ಸ್ವತಃ ನಾರಾಯಣಪ್ಪನೆ ಇದನ್ನು ಉಲ್ಲೇಖಿಸಿ ದ್ದಾನೆ. ಕರ್ನಾಟಕ ಕಥಾ ಮಂಜರಿ ಅಥವಾ ಗದುಗಿನ ಭಾರತದಲ್ಲಿ ಹೀಗೆ ಹತ್ತಾರೂ ವಿಷಯಕ್ಕೆ ಪ್ರಸಿದ್ಧವಾದ ಶೂರ್ಪಾಲಿಯಲ್ಲಿ ಈಗ ಊರು ಮುಳುಗು ವುದೆಂದು ಗೊತ್ತಿದ್ದರೂ ಇನ್ನೂ ಜನ ಹೊಸ ಮನೆಗಳನ್ನು ಕಟ್ಟುತ್ತಾ ಇದ್ದಾರೆ. ಈ ಶೂರ್ಪಾಲಿಯು ಪದ್ಮ ಪುರಾಣದಲ್ಲಿ ಉಲ್ಲೇಖವಿದ್ದುದು ಕಂಡುಬರುತ್ತದೆ. ಶಿವಯೋಗಿಗಳು ತಪಸ್ಸು ಮಾಡಿದ ಸ್ಥಳ ಇಲ್ಲಿದೆ. ಎದುರಿಗೆ  ಗುಹೇಶ್ವರ ದೇವಸ್ಥಾನವಿದೆ.

ಕಕಮರಿೊ: ಇದು ಅಥಣಿಯಿಂದ ೧೯-೨೦ ಮೈಲು ದೂರದಲ್ಲಿದೆ. ಆದರೆ ದಿನಕ್ಕೆ ಹೋಗುವದು ಒಂದೇ ಬಸ್ಸು. ಅಥಣಿ ತಾಲೂಕಿನ ಗಡಿಯ ಗ್ರಾಮ.

ಈ ಕಕಮರಿ ಒಂದಾನೊಂದು ಕಾಲಕ್ಕೆ ಗೋ ಸಂಪತ್ತು ಸಮೃದ್ಧವಾದ ಊರು. ಊರಿನಾಚೆಗೆ ಕಾಣುವ ಗುಡ್ಡದಲ್ಲಿ ಹೋರಿಗಳಿಗೆ ಸಾಕಷ್ಟು ಹುಲ್ಲು ದೊರಕುತ್ತಿದ್ದ ಸಮೃದ್ದಿಯ ಕಾಲ. ಸುತ್ತಮುತ್ತಲಿನ ಪರಿಸರವು ಸುಂದರವಾದ ತಾಣವಾಗಿದೆ. ಶುಕ್ರ ಋಷಿಗಳ ಆಶ್ರಮವು ಹೋಗಿ ದಂಡಕಾರಣ್ಯವೆಂದು ಪ್ರಸಿದ್ಧವಾದ ಸ್ಥಳ. ಶೂದ್ರ ಋಷಿಗಳು ಕ್ರೋಧಗೊಂಡು, ‘ಆತನ’ ರಾಜ್ಯ ನಾಶವಾಗಬೇಕೆಂದು ದಂಡಕಾರಿಜನ ರಾಜ್ಯ ದಂಡಕಾರಣ್ಯವಾಗಲೆಂದು ಹಾಗೂ ಮಗಳಿಗೆ ಹುಲಿಯಾಗಲೆಂದು ಶಾಪಕೊಟ್ಟರು. ಅವಳು ಉಶ್ಯಾಪ ಕೇಳಿಕೊಂಡಾಗ ಇನ್ನು ಕೆಲವು ಕಾಲನಂತರ ವೇದಪಾರಂಗತನಾದ ಧರ್ಮನಿಷ್ಠ ಶ್ವೇತನೆಂಬ ಬ್ರಾಹ್ಮಣ ಸ್ನಾನಕ್ಕೆ ಬಂದಾಗ ಹುಲಿಯ ರೂಪದಲ್ಲಿದ್ದ ನೀನು ಅವನನ್ನು ತಿನ್ನಲು ಹೋಗುವಿ. ಆಗ ಬ್ರಾಹ್ಮಣ ಆ ವಿಶ್ವೇಶ್ವರನ ಸ್ತೋತ್ರ ಪಠಣ ಮಾಡಿದ.

ಶ್ರೀ ರಾಘವಸ್ಯ ದೇವ….. ಶ್ವೇತ ಬ್ರಾಹ್ಮಣೆನೆರು ಹೆಣ್ಣು ಹುಲಿಯ ಸ್ಥಳದಲ್ಲಿ ಒಂದು ಸುಂದರ ಸ್ತ್ರೀ ರೂಪ. ಅವಳೇ ಕಾಕುಮಾರಿ ಶುಕ್ರ ಋಷಿಗಳ ಮಗಳು. ಅಂದಿನಿಂದ ಅವಳ ಹೆಸರೇ ಆ ಗ್ರಾಮಕ್ಕೆ ಕಾಕುಮಾರಿ ಅಂತ. ಅದೇ ಜನರು ಬಾಯಲ್ಲಿ ಕಕಮರಿ ಕಕಮರಿ ಎಂದಾಗಿದೆ. ಆ ಕಾಕುಮಾರಿಯನ್ನೇ ಅಮ್ಮಾಜಿದೇವಿ ಎಂದು ಕರೆಯುತ್ತಾರೆ.

ಊರು ಚಿಕ್ಕದಾಗಿದ್ದರೂ ಅಮ್ಮಾಜಿ ದೇವಿಯ ಕೀರ್ತಿ ದೊಡ್ಡದಾಗಿದೆ. ಜನವಸತಿ ತೀರ ವಿರಳ, ಆದರೂ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ದಂಡಕಾರಣ್ಯವು ಅಂದಿನ ಆ ಸೊಬಗನ್ನು ಕಳೆದುಕೊಂಡರೂ ರಮಣೀಯವಾದ ಸ್ಥಾನವಾಗಿದೆ. ಗಿರಿ ಕಂದರಗಳಿಂದ ಸೃಷ್ಟಿಸೌಂದರ್ಯದಿಂದ ಕಂಗೊಳಿಸುತ್ತದೆ. ಪ್ರತಿಯೊಬ್ಬರು ಹುಟ್ಟಿದ ಮಗುವಿಗೆ ಅಮ್ಮಾಜಿ ಎಂತಲೇ ಕರೆಯುವದು ಇಂದಿಗೂ ಕಂಡುಬರುತ್ತದೆ.

ಕೋಹಳ್ಳಿೊ: ಅಥಣಿಯಿಂದ ಅತ್ಯಂತ ಸಮೀಪದ ಸಣ್ಣ ಗ್ರಾಮ. ಶಿವ ಸಾಯುಜ್ಯವನ್ನು ಪಡೆಯಬೇಕಾದರೆ, ಲಿಂಗದಲ್ಲಿ ಐಕ್ಯವಾಗಬೇಕಾದರೆ ಇದೊಂದು ಸುಲಭವಾದ ಮಾರ್ಗ. ‘‘ಪಂಚಕ್ರೋಣಿ ಯಾತ್ರೆ’’ ಅದಕ್ಕೆ ಬಹಳ ದುಡ್ಡು ತೆರಬೇಕಾಗಿಲ್ಲ ಬಿಸಿಲು, ಮಳೆಗಾಳಿಯನ್ನದೆ ಸಾವಿರಾರು ತೊಂದರೆಗಳನ್ನು ಹಾಗೂ ಕಷ್ಟ ಕಾರ್ಪಣ್ಯಗಳನ್ನೆದುರಿಸಿ ತಪಸ್ಸಾಚರಿಸಬೇಕಾಗಿಲ್ಲ. ಒಂದೇ ಒಂದು ದಿನ ಪಂಚಕ್ರೋಣಿ ಯಾತ್ರೆ ಮಾಡಬಹುದು.

ರಾಮತೀರ್ಥ – ಶ್ರೀ ಉಮಾರಾಮೇಶ್ವರ

ಕೋಹಳ್ಳಿ – ಸಂಗಮೇಶ್ವರ (ಮಹಮೃತ್ಯುಂಜಯೇಶ್ವರ)

ಕೊಟ್ಟಲಗಿ – ಸಿದ್ದೇಶ್ವರ

ಜತ್ತ – ಬಂಕೇಶ್ವರ

ಮುಚ್ಚಂಡೆ – ಮುಚಕುಂದೇಶ್ವರ

ಈ ಐದು ಗ್ರಾಮಗಳನ್ನು ಒಂದೇ ದಿನ ಕಾಲ್ನಡಿಗೆಯಲ್ಲಿ ಯಾತ್ರೆ ಪೂರೈಸಿ ಬಂದಲ್ಲಿ ಶಿವಸಾಯುಜ್ಯ ಪಡೆಯಬಹುದು.

ಮೊದಲು ರಾಮತೀರ್ಥದಲ್ಲಿ ಸ್ನಾನ ಮಾಡಿ ರಾಮೇಶ್ವರನನ್ನು ಪೂಜಿಸಿ ನಂತರ ಸಂಗಮೇಶ್ವರನನ್ನು ಕೋಹಳ್ಳಿಯಲ್ಲಿ ನಂತರ ಕೊಟ್ಟಲಗಿಯಲ್ಲಿ ಸಿದ್ದೇಶ್ವರನ ದರ್ಶನ ಪಡೆದು ಬಂಕೇಶ್ವರನನ್ನು ಮುಚಕುಂದೇಶ್ವರನನ್ನು ಆರಾಧಿಸಿ ಪುನಃ ರಾಮತೀರ್ಥಕ್ಕೆ ಬಂದು ರಾಮೇಶ್ವರನಿಗೆ ಅಭೀಕ್ಷ ಮಾಡಿದಲ್ಲಿ ಪಂಚಕ್ರೋಣಿ ಯಾತ್ರೆಯನ್ನು ಪೂರ್ಣ ಮಾಡಿದಂತೆ. ರಾಮತೀರ್ಥದಿಂದ ಈ ಪಂಚಕ್ರೋಣಿಗಳು ಸುಮಾರು ೩ ಹರದಾರಿ ಹರದಾರಿ ಅಂತರದಲ್ಲಿದೆ.

ಸ್ಥಳದ ಐತಿಹ್ಯ : ವಿಷ್ಣುವಿನ ಹತ್ತು ಅವತಾರಗಳಲ್ಲಿ ರಾಮನ ಅವತಾರವೂ ಒಂದು. ರಾವಣನಿಂದಾಗಿ ಸೀತೆಯನ್ನು ಕಳೆದುಕೊಂಡ ರಾಮ ಅವಳನ್ನು ಅರಸುತ್ತಾ ಅರಸುತ್ತಾ ಈ ಕಹೋಳ ಋಷಿಯ ಆಶ್ರಮಕ್ಕೆ ಬಂದ. ವೇದ ಪಾರಂಗತರೂ, ಅರಿಷಡ್ ವರ್ಗಗಳನ್ನು ಗೆದ್ದವರೂ, ದೇವರಲ್ಲಿ ಅಚಲ ನಿಷ್ಠೆಯನ್ನಿಟ್ಟ ಕಹೋಳ ಋಷಿಗಳನ್ನು ಕಂಡು ರಾಮ ತಾನು ಬಂದ ಕಾರ್ಯಕ್ಕೆ ಅರಿಕೆ ಮಾಡಿಕೊಂಡ ರಾಮನ ದರ್ಶನಕ್ಕಾಗಿಯೇ ಹಂಬಲಿಸಿದ ಋಷಿವರ್ಯರು ಆತನಿಗೆ ಸಂಗಮೇಶ್ವರನ್ನು ಪೂಜಿಸಲು ಹಾಗೂ ಇಷ್ಟಾರ್ಥಸಿದ್ದಿಯನ್ನು ಪಡೆಯಲು ಹೇಳಿದರು. ಅದರಂತೆ ರಾಮಚಂದ್ರನು, ಸಂಗಮೇಶ್ವರನ್ನು ಪೂಜಿಸಿ ತನ್ನ ಇಷ್ಟಾರ್ಥ ನೆರವೇರಿಸಿಕೊಂಡನೆಂದು ಹೇಳುತ್ತಾರೆ. ಅಂದಿನ ಕಹೋಳ ಋಷಿಗಳ ಆಶ್ರಮವೇ ಇಂದು ಕೋಹಳ್ಳಿ ಎಂದು ಕಹೋಳದಿಂದ ಕೋಹಳ್ಳಿ ಎಂಬ ರೂಪ ತಾಳಿದೆ.

ಜಯತೀರ್ಥ ಪುರವಾಸಾ | ಶಂಭೋ ಸರ್ವೇಶಾ |

ಕಾಶೀಪುರದಿಂದ ಬಂದಿಹ ಈಶಾ —– ಉಮಾ ಮಹೇಶ್ವರಾ ದಕ್ಷಿಣ ಕಾಶೀ ಎಂದು ಹೆಸರಾದ ರಾಮತೀರ್ಥ ಅಥಣಿಯಿಂದ ೩೫ ಕಿ.ಮೀ. ದೂರದಲ್ಲಿದೆ.

ದಿಮೋದಾಸನೆಂಬ ಬ್ರಾಹ್ಮಣ ಕಾಶಿ ಪಟ್ಟಣವನ್ನು ಆಳುತ್ತಿದ್ದ ಕಾಲ. ತ್ರೇತಾಯುಗಕ್ಕಿಂತ ಪೂರ್ವದಲ್ಲಿದ್ದು, ಕಾಶಿ ವಿಶ್ವೇಶ್ವರನೇ ಅಲ್ಲಿ ನೆಲಿಸಿದ್ದಾಗ ಅರಾಜಕತೆಯಿಂದಾಗಿ ವರ್ಣಾ ಶ್ರಮ ಧರ್ಮಗಳು ನಿಂತುಹೋಗಿ ಅರಾಜಕತೆಯುಂಟಾಯಿತು. ಚಿಂತಾ ಕ್ರಾಂತನಾದ ದೇವರು ದಿಮೋದಾಸನಿಗೆ ರಾಜ್ಯವಾಳಲು ಕೇಳಿಕೊಂಡಾಗ ‘‘ನೀನು ಕಾಶಿ ಬಿಟ್ಟರೆ ನಾನು ರಾಜ್ಯವಾಳುವೆನು’’ ಎಂದು ಹೇಳಿದ. ಅಷ್ಟೇ ಅಲ್ಲ ನಾನು ಕರೆದರೆ ದೇವರೆಲ್ಲರೂ ಪುನಃ ಕಾಶಿಗೆ ಬರಬೇಕು ಎಂದು ಕೇಳಿಕೊಂಡ. ಅದಕ್ಕೆ ಒಪ್ಪಿಕೊಂಡ ಈಶ್ವರ ಆತನಿಗೆ ಅಲ್ಲಿಯೇ ರಾಜ್ಯವಾಳಲು ಹೇಳಿ ತಮಗಾಗಿ ಹೊಸ ಸ್ಥಳ ಹುಡುಕಲು ನಂದಿಯನ್ನು ಕಳುಹಿಸಿದ. ಹುಡುಕುತ್ತಾ ಬಂದ ನಂದಿ ದಂಡಕಾರಣ್ಯದ ಈ ಸುಂದರವಾದ ತಾಣವನ್ನು ಕಂಡು ಎತ್ತರವಾದ ಗುಡ್ಡದ ಮೇಲೆ ತನ್ನ ಋಕಾರ ಮೂಡಿಸಿ ಆನಂದ ಪುರ ಎಂದು ಹೆಸರಿಟ್ಟು ತಿರುಗಿ ಹೋಗಿ ಈಶ್ವರ ಹಾಗೂ ಆತನ ಪರಿವಾರವನ್ನು ತಂದು ಅಲ್ಲಿಯೇ ಅಜ್ಞಾತವಾಗಿ ನೆಲೆಸಿದ.

ಕೆಲವು ಕಾಲಾನಂತರ ಸಂಪದ್ಭರಿತವಾದ ಗೋ ಸಂಪತ್ತು ಪಡೆದ ಕಕಮರಿ ಗೌಡನ ನಿದರ್ಶನಕ್ಕೆ ಆತನ ಗೋ ಹಿಂಡಿನಲ್ಲಿಯ ಆಕಳುಗಳು ಒಂದೆಡೆ ದಿನನಿತ್ಯ ಹಾಲು ಕರೆಯುವುದನ್ನು ನೋಡಿದ. ಅದನ್ನು ಕಂಡು ಆಶ್ಚರ್ಯಗೊಂಡು ಆ ಸ್ಥಳದ ವಿಶೇಷವೇನು? ಎಂಬುದನ್ನು ಅರಿಯಲೇಬೇಕೆಂಬ ಕುತೂಹಲಕ್ಕೆ ಗೆರೆ ಹಾಕಿದ ಅದನ್ನು ಅಗೆಯಿಸಲು ನಿರ್ಧರಿಸಿದ. ಆದರೆ ಅದೇ ದಿನ ಕನಸಿನಲ್ಲಿ ‘‘ಈ ಉಸಾಬರಿ ನಿನಗೆ ಬೇಡ’’ ಎಂದು ಹೇಳಿದಂತಾಯಿತು. ಆ ಮಾತನ್ನು ನಿರ್ಲಕ್ಷಿಸಿದ ಗೌಡ ಅದನ್ನು ಅಗೆಯಿಸಿದ. ಅದರಿಂದ ಆತನಿಗೆ ದೊರಕ್ಕಿದ್ದು ಈಶ್ವರನ ಗುಡಿ. ಆದರೆ ಈಶ್ವರನ ಸೇವೆಗೈಯುವ ಭಾಗ್ಯ ಪಡೆಯಲಿಲ್ಲ. ಇಲ್ಲಿನ ದೇವಸ್ಥಾನ ಅಪಾರ ದೊಡ್ಡದಿದ್ದು ಗುಡಿಯ ಒಳಭಾಗದಲ್ಲಿ ಕಲ್ಲಿನಲ್ಲಿ ಕೆತ್ತನೆಯ ಕೆಲಸ. ಅಷ್ಟದಿಕ್ಪಾಲಕರು, ದ್ವಾರಪಾಲಕರು, ಶಿಲ್ಪಕಲೆ ಶಿಲಾಲೇಖ ಎಲ್ಲವನ್ನು ನೋಡಬಹುದು. ಶಿಲಾಲೇಖವು ಭಿನ್ನವಾಗಿದ್ದು ಅದು ಕೂಡಿಸಲ್ಪಟ್ಟಿದೆ. ಈ ಕ್ಷೇತ್ರದ ಇತಿಹಾಸದ ಬಗ್ಗೆ ಇನ್ನು ಸಂಶೋಧನೆ ನಡೆಯಬೇಕಾಗಿದೆ.

ರಾಮಾಯಣದ ಕಾಲದ ರಾಮನು ಸೀತೆಯನ್ನು ಅರಸುತ್ತ ಈ ಕಹೋಳ ಋಷಿಯ ಆಶ್ರಮಕ್ಕೆ ಬಂದನಂತೆ ಕಹೋಳ ಋಷಿಯ ಸಲಹೆಯ ಮೇರೆಗೆ ಓಂಕಾರೇಶ್ವರನನ್ನು ಪೂಜಿಸಿದನಂತೆ ಹಾಗೂ ತಾನು ಪೂಜಿಸಿದ್ದಕ್ಕಾಗಿ ತನ್ನ ಹೆಸರು ಸಮ್ಮಿಲಿತವಾದ ರಾಮೇಶ್ವರ ಎಂಬ ಹೆಸರನ್ನು ಧರಿಸಬೇಕೆಂದು ಹಾಗೂ ಅಂದಿನಿಂದ ಆ ಗ್ರಾಮ ರಾಮತೀರ್ಥ ಎಂದು ನಾಮಕರಣವಾಗಬೇಕೆಂದು ಆ ಈಶ್ವರನನ್ನು ಕೇಳಿಕೊಂಡಂತೆ ಅರ್ಜುನನು ಪಾಶುಪತಾಸ್ತ್ರವನ್ನು ಪಡೆದಿದ್ದು ಈ ಈಶ್ವರನನ್ನು ಆರಾಧಿಸಿಯೇ ಎಂದು ಹೇಳುವುದುಂಟು.

ಸ್ಥಾನ ಮಹಿಮೆ – ಸಾತಾರ ಜಿಲ್ಲೆಯ ಪುಣೆಯ ಸರದಾರ ರಾಸ್ತೆಯವರ ಹೊಟ್ಟಿಶೂಲಿ ಯಾವ ಔಷಧೋಪಚಾರಕ್ಕೂ ಬಗ್ಗದೆ ಈ ರಾಮೇಶ್ವರನ ಸೇವೆ ಹಾಗೂ ಅನ್ನದಾನದಿಂದ ಕಡೆಮೆಯಾಯಿತಂತೆ ಅದಕ್ಕಾಗಿ ಅವರು ಮುಂದಿನ ದೊಡ್ಡ ಸಭಾಮಂಟಪವನ್ನು ಕಟ್ಟಿಸಿದ್ದಾರೆ. ಅಲ್ಲದೇ ವೇದಪಾರಂಗತನಾದ ಪಾರಿಚಾತನೆಂಬ ಬ್ರಾಹ್ಮಣನ ದುರ್ನಡತೆ ಯಿಂದಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತ ಈ ರಾಮೇಶ್ವರನ ಸನ್ನಿಧಿಗೆ ಬಂದು ಪಾಪನಾಶಿನಿಯಲ್ಲಿ ಸ್ನಾನ ಮಾಡಿ ರಾಮೇಶ್ವರನ ಪೂಜೆ, ಪಂಚಾಕ್ಷರಿ ಮಂತ್ರಜಪ ಪಂಚಕ್ರೋಣಿ ಯಾತ್ರೆ ಮಾಡಿ ಶಿವಸಾಯುಜ್ಯವನ್ನು ಪಡೆದನೆಂದು ಹೇಳುತ್ತಾರೆ.

ಹೀಗೆ ರಾಮತೀರ್ಥವು ರಾಮನಿಂದಲೂ, ಈಶ್ವರನಿಂದಲೂ ಪಾವನವಾದ ಕ್ಷೇತ್ರವಾಗಿದ್ದು ಇಂತಹ ಹಲವು ಐತಿಹ್ಯವನ್ನು ಹೊಂದಿದೆ. ಈ ಈಶ್ವರ ಮಂದಿರವನ್ನು ಜಕಣಾಚಾರ್ಯರು ಕಟ್ಟಿದ ದೇವಸ್ಥಾನವಾಗಿ ಭವ್ಯವಾಗಿದೆ.

ಇಲ್ಲಿ ಅಷ್ಟ ತೀರ್ಥಗಳ ಸನ್ನಿಧಾನವಿದೆ ಎಂದು ಹೇಳುತ್ತಾರೆ. ಇಲ್ಲಿ ಗಂಗೆ ಉತ್ತರ ವಾಹಿನಿಯಾಗಿ ಹರಿದಿದ್ದಾಳೆ ಎಂದು ವರುಣತೀರ್ಥ, ಅಕ್ಷಯತೀರ್ಥ, ಅನಂತತೀರ್ಥ, ವಟತೀರ್ಥ ಹೀಗೆ ತೀರ್ಥಗಳ ಹೆಸರನ್ನು ಹೇಳುವುದುಂಟು. ಅದರ ಜೊತೆಗೆ ಅಗ್ನಿಯನ್ನು ಉತ್ಪಾದನೆ ಮಾಡುವ ‘ಅರುಣಿ’ ಇಲ್ಲಿ ಇದೆ ಎಂದು ಹೇಳುವುದುಂಟು. ಇಲ್ಲಿಯ ಬ್ರಾಹ್ಮಣರು ವೇದ ಸಂಪನ್ನರು, ಪಂಡಿತರು, ವಿನಯವಂತರಿದ್ದು ಕಾಶಿ ಪಂಡಿತರನ್ನು ಸೋಲಿಸಿದವರು ಎಂಬ ಕೀರ್ತಿ ಪಡೆದಿದ್ದರು. ಪಾರ್ವತಿ ಮಂದಿರದ ಹಿಂದೆ ಒಂದು ಗುಪ್ತ ಮಾರ್ಗವಿದ್ದು ಅಲ್ಲಿಂದ ಬರೇ ಮೂರೇ ದಿನದಲ್ಲಿ ಕಾಶಿ ಮುಟ್ಟಿದರೆಂದು ಅಲ್ಲಿಯ ಜನ ಹೇಳುತ್ತಾರೆ.

ಪಾರ್ಥನಹಳ್ಳಿೊ:  ಅಥಣಿಯಿಂದ ಉತ್ತರ ದಿಕ್ಕಿಗೆ ೭ ಕಿ.ಮೀ. ಅಂತರದಲ್ಲಿದೆ. ಸ್ಥಳೀಯರು ಇದಕ್ಕೆ ಒಂದು ಕತೆಯನ್ನೇ ಹೇಳುತ್ತಾರೆ. ಪಾಂಡವರು ೧೨ ವರ್ಷ ವನವಾಸಕ್ಕಾಗಿ ದಂಡಕಾರಣ್ಯಕ್ಕೆ ಬಂದಿದ್ದರು. ಆಗ ಇಲ್ಲಿ ಒಂದು ದಿನ ವಾಸವಾಗಿದ್ದು, ಅಲ್ಲಿ ಅರ್ಜುನನು ಈಶ್ವರನನ್ನು ಪೂಜಿಸಿ ಪ್ರಾರ್ಥನೆ ಮಾಡಿ ಶಸ್ತ್ರವನ್ನು ಇಲ್ಲಿ ಪಡೆದುಕೊಂಡನೆಂದು, ಪಾರಮಾರ್ಥ ಸಾಧನೆಗಾಗಿ ಇಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆಯುತ್ತಿದ್ದರೆಂದು ಹೇಳುತ್ತಾರೆ. ಇಲ್ಲಿ ಶಿವದೇವಾಲಯವಿದೆ. ಪಾಂಡವರ ಕುರುಹು ಅದು ಎಂದು ಅಲ್ಲಿಯ ಜನ ಹೇಳುತ್ತಾರೆ.

ಇದೇ ರೀತಿಯಾಗಿ ಅಥಣಿಯ ತಾಲೂಕಿಗೆ ಸೇರ್ಪಡೆಯಾದ ಸುತ್ತಮುತ್ತಲು ಇರುವ ಸುಮಾರು ೧೨೦ ಹಳ್ಳಿಗಳ ಸ್ಥಳನಾಮಗಳನ್ನು ಅರಿಯುವ ಕೆಲಸ ಆಗಬೇಕಾಗಿದೆ. ಅಥಣಿಯಿಂದ ೧೫ ಕಿ.ಮೀ. ದೂರದಲ್ಲಿರುವ ಸಂಕ್ರಟ್ಟಿ. ಅದು ಶಂಕರನಹುಟ್ಟು ಎಂದು ಸಂಕೋನಟ್ಟಿಯನ್ನು ಸಖನಟ್ಟಿಯೆಂದು ಸ್ಥಳೀಯರು ಹೇಳುತ್ತಾರೆ. ಕಾಳಿಗುಡ್ಡ ಕೋಳಿಗುಡ್ಡವಾಗಿದೆ. ಅದರ ಅರ್ಧಭಾಗ ಅಥಣಿಯ ವ್ಯಾಪ್ತಿ ಪ್ರದೇಶಕ್ಕೆ ಒಳಪಟ್ಟಿದೆ.

ಇಲ್ಲಿಯ ಸಮೀಪಗ್ರಾಮ ಇನ್ನೊಂದು ‘ಸಪ್ತಸಾಗರ’ ಇದು ಅಥಣಿಯಿಂದ ೧೮ ಕಿ.ಮೀ. ದೂರದಲ್ಲಿದೆ. ‘ಜನಮೇಜಯ ರಾಜ’ ಸರ್ಪಯಾಗ ಮಾಡಿದ ಸ್ಥಳ. ಆ ಹೋಮಕುಂಡದಲ್ಲಿ ವಿಭೂತಿ ಇಂದಿಗೂ ದೊರೆಯುತ್ತದೆ ಎಂದು, ಮೊದಲು ಯಜ್ಞ ಮಾಡುವಾಗ ಜನಮೇಜಯ ರಾಜನು ಸ್ಥಳ ಶುದ್ದೀಕರಣಕ್ಕಾಗಿ ಏಳು ಸಮುದ್ರದ ನೀರನ್ನು ತರಿಸಿದ್ದನೆಂದು ತಂದೆ ಪರೀಕ್ಷಿತನಿಗೆ ಹಾವು ಕಚ್ಚಿ ಮಡಿದಿದ್ದರಿಂದ ಹಾವಿನ ವಂಶನಾಶಕ್ಕಾಗಿ ಈ ಸರ್ಪಯಾಗವನ್ನು ಈ ಸ್ಥಳದಲ್ಲಿ ಮಾಡಿದನೆಂಬುದು ಸ್ಥಳೀಯರ ನಂಬಿಕೆ. ಅಲ್ಲಿಯ ಈಶ್ವರ ದೇವಸ್ಥಾನ ಅತ್ಯಂತ ಪುರಾತನವಾಗಿದೆ. ಜನಮೇಜಯ ರಾಜ ಈಶ್ವರನನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂದು ಸರ್ಪಯಾಗ ದೋಷ ಪರಿಹಾರವಾಯಿತು ಎಂದು ಸರ್ಪಸಾಗರವೇ ಈಗ ಸಪ್ತಸಾಗರವಾಗಿ ಬದಲಾವಣೆ ಹೊಂದಿದೆ.

ಒಟ್ಟಿನಲ್ಲಿ ಸ್ಥಳನಾಮಗಳ ಹಿನ್ನೆಲೆಯ ಶೋಧನೆ ಅಗತ್ಯ. ನಿಜಗುಣ ಶಿವಯೋಗಿಗಳ ಅಭಿಪ್ರಾಯದಂತೆ ಲೋಕದ ವಾರ್ತೆಯೇ ಐತಿಹ್ಯಕ್ಕೆ ಪ್ರಮಾಣ ಕಿವಿಯಿಂದ ಕಿವಿಗೆ ಹರಿದುಬಂದಿರುವ ಜನಪ್ರಿಯವು ನಂಬುವಂತೆಯೂ ಇದ್ದಾಗ ಅದನ್ನು ಅಲ್ಲಿಯ ಜನ ಐತಿಹ್ಯವೆಂದು ಆಧಾರಗಳು ಜನರ ಸಾಕ್ಷಿ ಪ್ರಮಾಣಗಳು. ದಾಖಲೆಗಳು ಅಗೋಚರ ಆದ್ದರಿಂದ ಐತಿಹ್ಯಗಳೆಂದರೆ ಒಂದು ರೋಚಕ ಮಾತ್ರ, ಅರೆ ಐತಿಹಾಸಿಕ ದಾಖಲೆಗಳು ಸತ್ಯದ ಶೋಧಕ್ಕೆ ಇದು ಒಂದು ಪ್ರಮಾಣ. ಐತಿಹ್ಯ ಹಾಗೂ ಇತಿಹಾಸ ಇವೆರಡು ಒಂದೇ ಮೂಲದ ಸಂಸ್ಕೃತ ಪದಗಳು ಹೀಗೆ ಇತ್ತು ಎಂಬುದು ಸಾಮಾನ್ಯ ಅರ್ಥ.

ಹಾಗಾದರೆ ಐತಿಹ್ಯಗಳ ಹಿಂದೆಯೂ ಒಂದು ಚಿಂತನೆ ಇರುವುದು ಸ್ಪಷ್ಟವಾಯಿತು. ಭಾರತೀಯ ಚಿಂತನೆಯಲ್ಲಿ ಐತಿಹ್ಯವೇ ಇತಿಹಾಸ ಅಥವಾ ಆಧುನಿಕ ಪರಿಭಾಷೆಯಲ್ಲಿ ಚರಿತ್ರೆ. ‘ಇದು ಹೀಗೆಯೆ ಇತ್ತು’ ಎಂಬುದರ ನಿರೂಪಣೆ ಅದನ್ನು ನಿರೂಪಿಸುವವನ ದೃಷ್ಟಿಯಲ್ಲಿ ಇತಿಹಾಸವು ನಿಜವೇ ಆಗಿರುತ್ತದೆ. ಮೌಖಿಕ ಪರಂಪರೆಯಲ್ಲಿಯೇ ಮುಂದು ವರಿದುಕೊಂಡು ಬಂದರೂ ಇತಿಹಾಸ ತುಂಬ ಜಾಗೃತ ಸ್ಥಿತಿಯನ್ನು ಕಾದುಕೊಂಡಿರುತ್ತದೆ.

ಐತಿಹ್ಯ, ಇತಿಹಾಸದಿಂದ ಬಹುದೂರ ಸಾಗಿರುತ್ತದೆ. ಅದು ಪೂರ್ತಿ ಕಲ್ಪಿತ ದಂತಕತೆಯೂ ಅಲ್ಲ. ಯಾವಾಗಲೋ ಘಟಿಸಿದ ಒಂದು ಘಟನೆ ಅಥವಾ ಒಂದು ಸ್ಥಳದ ವೈಶಿಷ್ಟ್ಯ. ಹೀಗೆ ಒಂದು ಘಟನೆಗೆ ಅಥವಾ ಸ್ಥಳಕ್ಕೆ ಸಂಬಂಧಿಸಿದ ಐತಿಹ್ಯ. ಅಥಣಿಯು ಗಡಿನಾಡು ಪ್ರದೇಶವಾಗಿರುವುದರಿಂದ ಶಿವಾಜಿಯ ತಂದೆಯು ಬಿಜಾಪುರದ ಆದಿಲ್‌ಶಾಹಿಯ ಸಾಮಂತನಾಗಿದ್ದುದರಿಂದಲೂ ಅಥಣಿಯ ತಾಲೂಕಿನಲ್ಲಿಯ ಕೆಲವು ಹಳ್ಳಿಗಳ ಹೆಸರನ್ನು ಹೇಳಿದಾಗ ಮರಾಠಿಗರ ಪ್ರಭಾವ ಬಹಳಷ್ಟು ಆಗಿದೆ ಎನ್ನಲು ನಮ್ಮಲ್ಲಿಯ ಊರುಗಳ ಹೆಸರೆ ಸಾಕ್ಷಿ. ಗಾಂವ ಅಂದರೆ ಊರು ನಂದಗಾಂವ, ಖಿಳೇಗಾಂವ, ಪಾಂಡೆಗಾಂವ ಹೀಗೆ ಹೆಸರುಗಳನ್ನು ನಾವು ಕೇಳಬಹುದು.

ಇನ್ನು ಕೊನೆಯದಾಗಿ ಐತಿಹ್ಯ ಹೇಳಿದವರ ಪರಿಚಯ ಮತ್ತು ಮಾರ್ಗದರ್ಶನ ನೀಡಿ ಸಹಾಯ ಸಲ್ಲಿಸಿದವರನ್ನು ಸ್ಮರಿಸದೇ ಹೋದರೆ ಅನುಚಿತವಾದೀತು. ಈ ಐತಿಹ್ಯಗಳ ಸಂಗ್ರಹಣೆಯಲ್ಲಿ ನೆರವು ನೀಡಿದವರು ಪೂಜ್ಯ ತಂದೆ ತಾಯಿಯವರು. ತಂದೆ ಭೀಮಾಜಿ ಶ್ರೀನಿವಾಸ ಅಧ್ಯಾಪಕ ತಾಯಿ ಶಾಂತಾಬಾಯಿ ಭೀಮಾಜಿ ಅಧ್ಯಾಪಕ ಮನೆತನದ ಕುಲಪುರೋಹಿತರಾದ ಬಿ. ಇನಾಮದಾರರು ಕೂಡ ತಮಗೆ ಗೊತ್ತಿದ್ದ ಐತಿಹ್ಯ ಹೇಳಿ ಕಾರ್ಯ ಪೂರ್ತಿಯಾಗುವಲ್ಲಿ ನೆರವು ನೀಡಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಈ ರೀತಿಯಾಗಿ ಒಂದಿಲ್ಲೊಂದು ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿ.