‘‘ಸಾಹಿತ್ಯ ಮನಸ್ಸನ್ನು ನಲಿಸಿ, ಹೃದಯವನ್ನು ಹಿಗ್ಗಿಸಿ ಬುದ್ದಿಯನ್ನು ತಿದ್ದಿ ಬಾಳನ್ನು ಬೆಳಗಿಸುವ ಉತ್ತಮ ಸಾಧನ’’ ಎಂದಿದ್ದಾರೆ ಎಲ್ ಗುಂಡಪ್ಪ.

‘‘ಬದುಕು ಮತ್ತು ಸಾಹಿತ್ಯ ತೀರ ಹತ್ತಿರ ಹತ್ತಿರವಾದಂತೆ ಅವು ಅವಳಿ ಜವಳಿಯಿದ್ದಂತೆ ಎಂದಿದ್ದಾರೆ ಶಿವರಾಮ ಕಾರಂತ.

‘‘ಸಾಹಿತ್ಯ ಜೀವನದ ಪಡಿನೆಳಲು ವಿಧಾಯಕ ವಿಮರ್ಶೆ ಎಂದಿದ್ದಾರೆ.’’ ಮ್ಯಾಥೋ ಅರ್ನಲ್ಡ್. ಸಾಹಿತ್ಯವನ್ನು ಕುರಿತು ಹೇಳಿದ ಈ ಉಕ್ತಿಗಳು ತದ್ವತ್ತಾಗಿ ಛಾಯಾ ಯಂತ್ರದಂತೆ ನಿರೂಪಿಸಿದೆ. ಅದರ ಆದರ್ಶರೂಪವನ್ನು ಮಾತ್ರ ಚಿತ್ರಿಸುತ್ತದೆ. ಆದರೆ ಅದು ಶಿಷ್ಟ ಸಾಹಿತ್ಯವಾದೀತು. ತದ್ವತ್ತಾಗಿ ಚಿತ್ರಿಸುತ್ತದೆ. ಅದು ಜನಜೀವನಕ್ಕೆ ತೀರ ಹತ್ತಿರವಾಗಿದೆ. ಅದೇ ಜನಪದ ಸಾಹಿತ್ಯ ಜನಜೀವನದ ಜೀವನಾಡಿ ಇದ್ದಂತೆ. ಪಂಡಿತ ಮನ್ನಣೆಯನ್ನು ಆಶಿಸದೆ ಲೋಕಮಾನ್ಯವಾಗಿ ಬದುಕಿ ಮನೆಮನೆಗೂ ಸುಲಭವಾದ, ಸಹಜವಾದ ಸರಳ ಸುಲಲಿತ ನಿರ್ಮಿತ ಸಾಹಿತ್ಯ. ಈ ಜನಪದ ಸಾಹಿತ್ಯ ಅನುಭವವೆಂಬ ಮೂಸೆಯಲ್ಲಿಂದ ಹೊರಹೊಮ್ಮಿ ಅದ್ಭುತ ರಸಾಯನವಾದದ್ದು ಈ ಜನಪದ ಸಾಹಿತ್ಯ.

ಚತರರ್ ನಿಜದಿಂ ಕುರಿತೋದದೆಯಂ ಕಾವ್ಯಂ
ಶಾಸ್ತ್ರ ಪ್ರಯೋಗ ಪರಿಣಿತ ಮತಿಗಳ್ ಎಂದು

ಸಾಹಿತ್ಯವು ರಸಾನುಭವದ ಸುಂದರವಾದ ಅಭಿವ್ಯಕ್ತಿಯಾಗಿದೆ. ಜನಪದ ಸಾಹಿತ್ಯ ಗ್ರಂಥಸ್ಥ ಸಾಹಿತ್ಯವಲ್ಲ ಜನರ ಬಾಯಿಂದ ಬಾಯಿಗೆ ಹರಿಯುತ್ತಾ, ಜೀವನದ ಬದಲಾವಣೆಗಳಿಗನುಣವಾಗಿ ಬೆಳೆಯುತ್ತಾ ಬಂದುದು. ಇದು ಒಬ್ಬ ವ್ಯಕ್ತಿಯ ಕೃಷಿಯಾಗದೆ ಸಮಷ್ಟಿ ಮನಸ್ಸಿನ ಪ್ರತಿನಿಧಿಯಾಗಿ, ಸಮಷ್ಟಿ ಸಂಸ್ಕೃತಿಯ ನಿಧಿ ಎನಿಸಿದೆ. ಎಂತಲೇ ರಾಜ್ಯದ ಅಥವಾ ರಾಷ್ಟ್ರೀಯ ಜೀವನದ ದಾಖಲೆ ಇತಿಹಾಸವಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎಂದಿದ್ದಾರೆ ‘ಜೇಮ್ಸ ಹೇಸ್ಟಿಂಗ್ಸರು’.

ಜನಪದ ಸಾಹಿತ್ಯ ಸೃಷ್ಟಿಗೆ ಮುಖ್ಯವಾಗಿ ಹಿನ್ನೆಲೆಯಾದ ಪರಿಸರ ಅಂದರೆ ಹಳ್ಳಿಯ ಜೀವನ. ಆ ಜೀವನ ಏಕಮುಖವಾದುದಲ್ಲ. ಅನೇಕ ಮನೋಧರ್ಮಗಳ, ಸಂಸ್ಕಾರಗಳ ಜನ ಅಲ್ಲಿ ಕಾಣುತ್ತಾರೆ. ಅನೇಕ ಉದ್ಯೋಗಗಳನ್ನು ಕೈಕೊಂಡ ಜನ ಸಹಜೀವನದ ತತ್ವವನ್ನು ಅವಲಂಬಿಸಿ ಒಂದು ಕಡೆ ಬಾಳುತ್ತಾರೆ. ಈ ಎಲ್ಲ ವೈವಿಧ್ಯಗಳಿಗೆ ಅನುಗುಣ ವಾಗಿ ರೂಪುಗೊಳ್ಳುತ್ತದೆ ಜನಪದ ಸಾಹಿತ್ಯ. ಆದುದರಿಂದ ಜೀವನದಲ್ಲಿರುವಷ್ಟು ವಿಪುಲತೆ ವೈವಿಧ್ಯತೆಯನ್ನು ಕಾಣುತ್ತೇವೆ. ಆದುದರಿಂದಲೇ ‘‘ಒಂದು ಜನಾಂಗದ ಸಂಸ್ಕೃತಿಯ ಓರೆಗಲ್ಲು. ಕಲಿತ ನಾಲ್ಕಾರು ಜನ ಪಂಡಿತರಲ್ಲ. ಕಲಿಯದ ಸಾವಿರಾರು ಜನಸಾಮಾನ್ಯರು’’ ಎಂದು ಎಚ್. ತಿಪ್ಪೇರುದ್ರಸ್ವಾಮಿ ಹೇಳಿದ್ದಾರೆ.

ವೈವಿಧ್ಯತೆಯ ಆಗರವಾದ ಜನಪದ ಸಾಹಿತ್ಯದ ಕ್ಷೇತ್ರ ಸೀಮಿತವಾಗಿಲ್ಲ. ಅದು ಕೈಯಾಡಿಸದ ವಿಷಯವಿಲ್ಲ. ಹಾಯ್ದು ಬರದ ಕ್ಷೇತ್ರವಿಲ್ಲ. ಒಂದರೊಳು ಬಂದಿಲ್ಲ. ಒಂದರೊಳು ಕುಂದಿಲ್ಲ, ಎಲ್ಲವೂ ತಮ್ಮ ತಮ್ಮದೆ ಆದ ವೈಶಿಷ್ಟ್ಯವನ್ನು ಪಡೆದಿವೆ.

ಮೊಟ್ಟಮೊದಲು ಬಳಸಿಕೊಂಡ ನಾದರೂಪದ ಗೀತೆಗಳೇ ಜನಪದ ಸಾಹಿತ್ಯದ ಮೂಲರೂಪಗಳಾಗಿವೆ. ಎರಡನೆಯದಾಗಿ ಜನಪದ ಸಾಹಿತ್ಯ ಕತೆಗಳು, ಆಟಗಳು, ನಾಟಕಗಳು, ಒಡಪು, ಒಗಟು, ಗಾದೆ ಇತ್ಯಾದಿ ಎಲ್ಲ ಸಂಗತಿಗಳನ್ನೊಳಗೊಂಡಿದೆ. ಜಾನಪದ ಪ್ರಪಂಚ ದೊಡ್ಡದಾಗಿದೆ ಅದರ ಸಂಪತ್ತು ಅಪಾರ. ಭಾಷಾ ವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕ ವಿಜ್ಞಾನ, ಮನೋವಿಜ್ಞಾನ, ವೈದ್ಯವಿಜ್ಞಾನ, ತಾಂತ್ರಿಕ ವಿಜ್ಞಾನ, ಗೃಹ ವಿಜ್ಞಾನ, ಸಾಹಿತ್ಯ, ಕಲೆ, ಸಂಗೀತ, ವ್ಯಾಕರಣ, ಧರ್ಮ, ಕಾನೂನು ಮುಂತಾದವುಗಳು ಪುಷ್ಠಿಗೊಳ್ಳುವಷ್ಟು ಜೀವಂತ ಸಾಮಗ್ರಿ ಅದರಲ್ಲಿವೆ.

ಜಾನಪದ ಸಾಹಿತ್ಯದ ವರ್ಗೀಕರಣ

ಅಭ್ಯಾಸದ ದೃಷ್ಟಿಯಿಂದ ಇಡೀ ಜನಪದ ಸಾಹಿತ್ಯವನ್ನು ಪದ್ಯಗದ್ಯ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಅಲ್ಲದೆ ಗದ್ಯಪದ್ಯ ಸಮಿಶ್ರದಂತಿದ್ದುದು ಇವುಗಳಲ್ಲಿ ಹಲವು ಉಪವಿಭಾಗಗಳನ್ನು ಕಲ್ಪಿಸಲಾಗಿದೆ. ಅವುಗಳನ್ನು ಈ ರೀತಿ ವಿಂಗಡಿಸಬಹುದು.

೧. ಪದ್ಯ ಸಾಹಿತ್ಯ – ಗೀತೆಗಳು
೨. ಗದ್ಯ ಸಾಹಿತ್ಯ – ಕಥೆ ಗಾದೆ ಒಗಟು ಒಡಪು
ಗದ್ಯ ಪದ್ಯ ಸಮ್ಮಿಶ್ರಣ – ಬಯಲಾಟಗಳು
೩. ಸ್ಥಳ ಕಥೆಗಳು – ೧. ವಲಸೆ ಹೋಗುವ ಕಥೆಗಳು
೨. ಒಬ್ಬ ವೀರನ ಸಾಹಸವನ್ನೊಳಗೊಂಡ ಕಥೆ
೩. ಅನೇಕ ವೀರರ ಸಾಹಸದ ಕಥೆ.

ಒಗಟು-ಜನಪದ ಸಾಹಿತ್ಯದ ಸ್ವತಂತ್ರ ಪ್ರಕಾರಗಳಲ್ಲಿ ‘‘ಒಗಟುಗಳು ಸೇರ್ಪಡೆಯಾಗುತ್ತವೆ. ಇದರಲ್ಲಿ ಎಲ್ಲ ವಯಸ್ಸಿನ ಜನರು ಭಾಗವಹಿಸುತ್ತಾರೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಮುಡಿಗೆ, ಮುಂಡಿಗೆಗಳನ್ನು ಒಗಟಿನ ಸಂವಾದಿ ರೂಪಗಳೆಂದು ಭರಿಸಲಾಗುತ್ತದೆ. ಪುರಂದರದಾಸರು ಕೆಲವೊಂದು ಮುಂಡಿಗೆಗಳನ್ನು ಬರೆದಿದ್ದಾರೆ. ಈ ಜಾನಪದ, ದಾಸ ಸಾಹಿತ್ಯದಲ್ಲಿಯೂ ತನ್ನ ಪ್ರಭಾವವನ್ನು ಬೀರಿದೆ ಎಂದು ಹೇಳಬಹುದು. ಅದೇ ರೀತಿ ತತ್ವಪದಕಾರರು ಹೇಳುವ ಬೆಡಗಿನ ವಚನವನ್ನು ಒಗಟಿನ ವ್ಯಾಪ್ತಿಗೆ ತರುತ್ತಾರೆ. ಚಾತುರ್ಯದ, ಜಾಣತನವನ್ನೊಳಗೊಂಡ ಈ ಒಗಟು ಒಟ್ಟಾರೆ ಮನರಂಜನೆಯ ವಸ್ತುವಾಗಿತ್ತು.

ದಾಸರ ಮುಂಡಿಗೆ-

‘‘ಅತ್ತೆ ಕಾಲ ಮುರಿಲಿ, ಮಾವನ ಕಣ್ಣು ಹೋಗಲಿ

ಏನಾದರೊಂದಾಗಲಿ ಆಗಲಿ ಏನಾದರೊಂದಾಗಲಿ’’

-ಎಂದು ಸೊಸೆ ಹೇಳುವಲ್ಲಿ ಕೆಟ್ಟ ಬುದ್ದಿ ಇಲ್ಲ. ಇಲ್ಲಿ ಅವರ ಸೇವೆಯನ್ನು ಮಾಡುವ ಭಾಗ್ಯ ನನ್ನದಾಗಲಿ ಎಂದು ಸೊಸೆ ಹೇಳುತ್ತಾಳೆ. ಅದೇ ಪ್ರಕಾರ

‘‘ಸುಳ್ಳು ನಮ್ಮಲ್ಲಿಲ್ಲವಲ್ಲ, ಸುಳ್ಳೇ ನಮ್ಮನೇ ದೇವರು

ಇಲಿಯು ಒಲೆಯ ಚಾಚದ ಕಂಡೆ

ಬೆಕ್ಕು ಭಕ್ಕರಿ ಮಾಡುವುದ ಕಂಡೆ

ಮೆಣಸಿನಕಾಯಿ ಕಂಡೆನವ್ವಾ ಒನಕಿ ಘಡತರಾ’’

ಎಂದು ಹೇಳುವಾಗ ಇಲ್ಲಿ ನಾವು ಯಾವಾಗಲೂ ಬೆಕ್ಕು ಒಲೆಯ ಮುಂದೆ ಕುಳಿತಿರುವುದನ್ನು ಕಂಡು ದಾಸರು ಈ ರೀತಿಯಾಗಿ ಹೇಳುತ್ತಾರೆ. ಒಗಟು ಎಂದರೆ ಅರ್ಥೈಸಲು ಹೆಣಗಾಡ ಬೇಕಾದ ಒಂದು ಚತುರೋಕ್ತಿ ಅಥವಾ ಗೂಡೋಕ್ತಿ ಎಂದಾಗುವ, ಸಂಸ್ಕೃತದಲ್ಲಿ ಈ ಪ್ರಕಾರವನ್ನು ಪ್ರಹೇಳಿಕೆ ಎನ್ನುವರು. ಒಬ್ಬರು ಇನ್ನೊಬ್ಬರಿಗೆ ಒಡ್ಡುವ ಸವಾಲು.

ಒಗಟು ಕಟ್ಟುವವನು ಒಂದೇ ವಸ್ತುವನ್ನು ಆಧಾರವಾಗಿರಿಸಿಕೊಂಡು ತನ್ನ ರೂಪಕ ಸಾಮರ್ಥ್ಯದಿಂದ ಕೆಲವು ಬಾರಿ ಉಪಮಾ ಬಲದಿಂದ ಬಗೆ ಬಗೆಯ ಸುಂದರವಾದ ಶಬ್ದಗಳನ್ನು ಬಳಸಿಕೊಂಡು ವಾಕ್ಚತುರ್ಯದಿಂದ ಹಲವು ಒಗಟುಗಳನ್ನು ಕಟ್ಟಬಹುದು ಅದೇನೆ ಇದ್ದರೂ ಒಗಟಿನಲ್ಲಿ ಎರಡೂ ಸದೃಶ್ಯ ವಸ್ತುಗಳಿರಲೇಬೇಕು ಒಂದು ಉಪಮಾನ ಮತ್ತೊಂದು ಉಪಮೇಯವನ್ನು ಪತ್ತೆ ಮಾಡಬೇಕು.

ಒಗಟಿನಲ್ಲಿ ಪ್ರಶ್ನೆಯ ಭಾಗ ಮತ್ತು ಉತ್ತರದ ಭಾಗ ಎಂಬ ಎರಡು ಭಾಗಗಳಿರುತ್ತವೆ.

೧. ಗಿಡ್ಡ ಗಿಡಕ್ಕ ಗಿಣಿ ಮುಕರ್ಯಾವ ಏನು ಹೇಳಿ, ಉತ್ತರ-ಕಡಲೆ ಗಿಡ

೨. ಅಕಟಕ ಮಕಟಕ ಚಾಟಕ ಚೂಟಕ ಎಣ್ಣೆ ಕಂಡರೆ ಎನ್ನ ಮೈ ಚುಟುಚುಟು ಏನು ಹೇಳಿ, ಉತ್ತರ ಸಾಸುವೆ.

೩. ಒಬ್ಬನ್ನ ಕಟ್ಟಿದೆ ಒಬ್ಬನ್ನ ಬಿಟ್ಟಿದೆ ಒಬ್ಬನ್ನ ಕರಕೊಂಡು ಒಳಗೊದೆ (ಆಕಳು, ಕರು, ಹಾಲು) . ಹೀಗೆ ಒಗಟುಗಳು ಪ್ರಾಸವನ್ನೊಳಗೊಂಡಿದೆ.

ಒಡಪುಗಳು ಒಗಟುಗಳನ್ನು ಹೋಲುವ ಇನ್ನೊಂದು ಸಾಹಿತ್ಯ ಪ್ರಕಾರವಾಗಿದೆ. ಒಡಪುಗಳು ಮದುವೆಯ ಸಂದರ್ಭದಲ್ಲಿ ಮಾತ್ರ ಬಳಕೆಯಾಗುತ್ತವೆ. ಅಕ್ಷತೆಯ ಮುನ್ನಾದಿನ ವಧುವರರಿಗೆ ಅಭ್ಯಂಜನ ಮಾಡಿಸಿ ಅರಿಷಿಣ ಹಚ್ಚಿ ಆರತಿ ಎತ್ತುವುದರೊಂದಿಗೆ ಒಡಪು ಹೇಳುವ ಕಾರ್ಯಕ್ರಮ ಆರಂಭವಾಗುತ್ತದೆ. ಇಲ್ಲಿ ಗಂಡನು ಹೆಂಡತಿಯ ಹೆಸರು ಹೇಳುವುದರಿಂದ ಹೆಂಡತಿಯು ಗಂಡನ ಹೆಸರು ಹೇಳುವುದರಿಂದ ದಂಪತಿಗಳ ಸಂಕೋಚ ಕಡಿಮೆಯಾಗುತ್ತದೆ.

೧. ಕಾಲಲ್ಲಿ ಕಪ್ಪುನ ಬೂಟು, ಕೈಯಲ್ಲಿ ಹತ್ತರ ನೋಟು ಎಷ್ಟೊತ್ತಿದ್ದರು ಎಸ್ಟಿಗೆ ಬರ್ತಾರ—-

೨. ಅಪ್ಪ ಕೊಟ್ಟ ಸೀರೆ ಎಷ್ಟು ಉಟ್ಟರೂ ಹರಿವಲ್ತು ನೀರಾಗ ಹಾಕಿದರ ನೆನೆವಲ್ತು ಹತ್ತ ಎತ್ತಿಗೆ ಎಳವಲ್ತು. ಡಾಬಾ ಹಾಕ್ಯಾರ ಡೊಗ್ಗಲೆಂಗ, ನತ್ತ ಹಾಕ್ಯಾರ, ನಗಲೆಂಗ ಹತ್ತ ಮಂದ್ಯಾಗ ಕುಂತಾರ ಕರಿಲೆಂಗ ಇಲ್ಲಿ ಕಲ್ಪನಾ ರಮ್ಯತೆ, ಭಾಷಾ ಪ್ರಯೋಗ, ಸಾಹಿತ್ಯದ ಸೊಗಸು ಪ್ರಾಸದ ಸಹಜತೆ ಇಲ್ಲಿದೆ.

ಇನ್ನು ಮುಂದೆ ನಾವು ಪ್ರವೇಶಿಸುವ ವಿಷಯ ಅಥಣಿಯ ಸುತ್ತ ಮುತ್ತ ಆಚರಿಸತಕ್ಕ ಆಚರಣೆ, ನಂಬಿಕೆ. ಅಥಣಿಯ ಸಮೀಪದಲ್ಲಿರುವ ಸಂಕೋನಟ್ಟಿ ಗ್ರಾಮದಲ್ಲಿ ದಾಸ ಜನಾಂಗ ಎಂಬ ಜನಾಂಗವಿದೆ. ಹೆಳವ, ಬಹುರೂಪಿ, ಶಂಖದಯ್ಯ, ಶಕುನ ಹೇಳುವವರು ಇದ್ದಾರೆ. ಎಲ್ಲರೂ ಇಲ್ಲಿ ಕಾಣಬಹುದು.

ಕಣಿ – ಇದು ಇಂಗ್ಲೀಷಿನ divination ಎಂಬ ಪದಕ್ಕೆ ಕಣಿ ಎಂದು, prediction ಎಂಬ ಪದಕ್ಕೆ ಭವಿಷ್ಯ ಎಂಬ ಅರ್ಥವನ್ನು ಕನ್ನಡದಲ್ಲಿ ಬಳಸಲಾಗುತ್ತದೆ. ಇದು ಕಣಿ ಹೇಳುವ ಪ್ರಸಂಗವನ್ನು ನಾವು ೨೮ನೇ ಕಲಿಯುಗದ ಪ್ರಾರಂಭದಲ್ಲಿ ಕಾಣುತ್ತೇವೆ. ಶಿಷ್ಟ ಸಂಪ್ರದಾಯವನ್ನು ಹೇಳುವಂತಹ ವೆಂಕಟೇಶ ಮಹಾತ್ಮೆಯಲ್ಲಿ ಈ ಕಣಿ ಹೇಳುವ ಕೊರವಂಜಿಯ ಕಥೆಯನ್ನು ಕೇಳುತ್ತೇವೆ.

‘‘ಗಿರಿಯಿಂದಲೀ ನಾರಾಯಣಪುರಕೆ ಬಂದಿಹಳು
ಪುರದ ಬಾಗಿಲವೆಲ್ಲಾ ಕೊರವಿ ದಾಟಿದಳು

ಹಿಂದಾದುದು ಬಲ್ಲೇ ಮುಂದಾಗುದುಬಲ್ಲೇ ಎಂದು ಹೇಳುವ ಕೊರವಿ ಅದನ್ನೇ ಹೇಳುತ್ತ ಬರುವ ಕೊರವಿಗೆ ಯಾವ ವ್ಯತ್ಯಾಸವು ಕಾಣವು. ಕೊರವಿ ಹೇಳಲು ಕವಡಿ ಹಾಕುವ ವಿಧಾನ ಅಂದು ಇಂದು ಯಾವುದೇ ಬದಲಾವಣೆ ಇಲ್ಲ. ಅಷ್ಟೇ ಅಲ್ಲ ಅದರ ಜೊತೆಗೆ ಈಗ ಅವಳು ಸೂಜಿ ದಾರ ಡಬ್ಬಣವನ್ನು ಮಾರುತ್ತಿದ್ದಾಳೆ. ಕಾರಣ ಜೀವನ ನಿರ್ವಹಣೆಗೆ ಸ್ವಲ್ಪಮಟ್ಟಿಗೆ ವ್ಯಾಪಾರ ಮಾಡುತ್ತಿದ್ದಾಳೆ.

ಕಣಿ, ಭವಿಷ್ಯದ ಶಕುನ, ಹಸ್ತ ಸಾಮುದ್ರಿಕ, ನಾಡಿಫಲ ಇವೆಲ್ಲವನ್ನು ಹೇಳುತ್ತಾರೆ. ಅತೀಂದ್ರಿಯ ಶಕ್ತಿಯಿಂದ ಬೇರೊಂದು ವ್ಯಕ್ತಿಯ ಮನಸ್ಸಿನಲ್ಲಿರುವ ಆಲೋಚನೆಗಳನ್ನು ತಿಳಿಯುವುದು. ಕಳೆದು ಹೋಗಿರುವ ವಸ್ತುಗಳನ್ನು ಪತ್ತೆ ಹಚ್ಚುವುದು. ಮುಂದೆ ನಡೆಯುವುದನ್ನು ತಿಳಿದುಕೊಳ್ಳುವುದು ಈ ಎಲ್ಲವು ಕಣಿ ಹೇಳುವುದರಲ್ಲಿ ಸೇರಿ ಹೋಗುತ್ತದೆ. (ಶಂಕರ ನಾರಾಯಣ – ೧೯೮೨ ಪು.೧೭೪)

ಹಾಲಕ್ಕಿ ನುಡಿತಾವ ಕೇಳಣ್ಣ ಎಂದು ಹೇಳುತ್ತಾ ಬರುವರು ದೋಷಿಜ ಜನಾಂಗ. ಇವರು ಸಾಮಾನ್ಯವಾಗಿ ಸ್ಮಶಾನದಲ್ಲಿ ವಾಸಿಸುತ್ತಾರೆ. ಇವರಿಗೆ ಹಕ್ಕಿಯ ಭಾಷೆ ಗೊತ್ತಾಗುತ್ತದೆ. ಆ ಹಕ್ಕಿಗೆ ಪ್ರಶ್ನೆ ಕೇಳಿ ಅದರ ಉತ್ತರವನ್ನು ಮುಂಜಾನೆ ಕೇಳಿ ತಿಳಿದುಕೊಂಡು ಬೆಳಿಗ್ಗೆ ೬ ಗಂಟಗೆ ಮನೆ ಮನೆ ಮುಂದೆ ಬಂದು ಶಕುನ ನುಡಿಯುತ್ತಾರೆ. ಅದನ್ನು ಕಂಡ ಬೇಂದ್ರೆಯವರು ‘‘ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ’’ ಎಂದು ಹೇಳುವರು. ಅದೇ ರೀತಿ ಊರೂರು ಸುತ್ತುತ್ತಾ ಕುರ‌್ರುಕುರ‌್ರುಮಾಮರು ಭವಿಷ್ಯ ಹೇಳುವುದರಲ್ಲಿ ನಿಸ್ಸೀಮರು.

ಇನ್ನು ಅತ್ಯಂತ ಮಹತ್ವವಾದ ವಿಷಯ ಜನಪದ ನಂಬಿಕೆಗಳು ಹಾಗೂ ಆಚರಣೆಗಳು. ಇವು ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ಬಂದವುಗಳು. ನಂಬಿಕೆ ಅಂದರೆ ವಿಶ್ವಾಸ ಆದರೆ ಅಂಧ ಶ್ರದ್ಧೆ ಅಲ್ಲ. ಸ್ಥಾಯಿಯಾಗಿರುವ ದೈವ ಭಕ್ತಿ ಹಾಗೂ ಭಕ್ತಿಯ ಆಶ್ರಯದಲ್ಲಿ ಬೆಳೆದು ಬಂದ ಸಾಂಪ್ರದಾಯಿಕ ಆಚರಣೆಗಳು. ೨೧ನೇ ಶತಮಾನದ ಜನಕ್ಕೆ ಈ ಜನಪದರ ಆಚರಣೆಗಳ ಬಗ್ಗೆ ತಾತ್ಸಾರ, ಉಪೇಕ್ಷೆ. ಆದರೆ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಿದಾಗ ಅದು ಅಂಧ ಶ್ರದ್ಧೆಯಲ್ಲ ಎಂಬ ವಿಷಯ ವಿದಿತವಾಗುತ್ತದೆ. ಅದಕ್ಕೆ ಸಾಕ್ಷಿ ಅಥಣಿಯಲ್ಲಿ ನಡೆಯುವ ಓಕಳಿ ಸಂಭ್ರಮ. ಕಾರ ಹುಣ್ಣಿಮೆಗಿಂತ ಓಕಳಿ ಮೊದಲು ನಡೆಯುತ್ತದೆ.

ಅಥಣಿ, ಗ್ರಾಮವೂ ಅಲ್ಲ ಪಟ್ಟಣವು ಅಲ್ಲ ಎಂಬಂಥ ಸ್ಥಿತಿ. ಗ್ರಾಮೀಣ ಪ್ರದೇಶವೆಂದೇ ಗುರುತಿಸಲ್ಪಟ್ಟ ಈ ಪ್ರದೇಶ ಇಂದು ಪಟ್ಟಣದ ಪ್ರದೇಶವೆಂದು ಸರಕಾರದಿಂದ ಘೋಷಿಸಲ್ಪಪಟ್ಟಿದೆ. ಈ ಪ್ರದೇಶದಲ್ಲಿ ಹಲವು ದೇವರ ಜಾತ್ರೆ ಹಾಗೂ ಓಕಳಿಯಾಡುವುದು ಮೊದಲಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಓಕಳಿಯಾಡು ವಾಗ ತಾಳಿಕೋಟೆಯಿಂದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು. ಅವರಿಗೆ ಮಂಗಳ ಸೂತ್ರ ಹೊಸ ಸೀರೆ ಬಳೆಗಳನ್ನು (ಹಸಿರು)  ಕೊಟ್ಟು ಮರ್ಯಾದೆ ಮಾಡಿ ನಂತರ ಈ ಓಕಳಿ ಆಡಲು ಆಹ್ವಾನಿಸುತ್ತಿದ್ದರು. ಗಂಡಸರು ಆ ಸ್ತ್ರೀಯರಿಗೆ ನೀರನ್ನು ಉಗ್ಗುವುದು, ನೀರನ್ನು ಉಗ್ಗಿದ ಪುರುಷರಿಗೆ ಬಾರಿಕಟ್ಟಿಗೆಯಿಂದ ಹೊಡೆಯುವುದು. ಆ ಮೋಜು ನೋಡಲು ಊರಿಗೆ ಊರೇ ಸೇರುತ್ತಿತ್ತು. ಓಕಳಿಯ ನಂತರ ಮಳೆ ಧಾರಾಕಾರವಾಗಿ ಸುರಿಯುವುದು ಎಂಬುದು ಜನರಲ್ಲಿ ನಂಬಿಕೆ. ಆದರೆ ಸರಕಾರದ ಆದೇಶದ ಮೇರೆಗೆ ಈ ಓಕಳಿಯನ್ನು ನಿಷೇಧಿಸಿದರು. ಅಥಣಿಯ ಗ್ರಾಮಸ್ಥರು ಸರಕಾರದ ಈ ಆದೇಶವನ್ನು ಪಾಲನೆ ಮಾಡಿದರು, ಅದರ ಪರಿಣಾಮದಿಂದ ಅಥಣಿಯಲ್ಲಿ ಐದು -ಆರು ವರ್ಷ ಸರಿಯಾದ ಮಳೆ ಆಗಲಿಲ್ಲ ಎಂಬುದು ಜನರ ನಂಬಿಕೆ. ದೇವರ ಹೆಸರಿನಿಂದ ಸ್ತ್ರೀಯರಿಗೆ ಶೋಷಣೆ ಆಗುತ್ತಿದ್ದು ಅದನ್ನು ತಡೆಗಟ್ಟಲು ಸರಕಾರ ಈ ಕ್ರಮ ಕೈಕೊಂಡಿತ್ತು. ಆದರೆ ಸರಕಾರದ ಈ ಆಜ್ಞೆಯಿಂದ ಜನ ತಲ್ಲಣಗೊಳ್ಳುವ ಸ್ಥಿತಿ ತಲುಪಿತು. ಅಥಣಿಯಲ್ಲಿ ಮಳೆ ಅಷ್ಟಕಷ್ಟೆ. ಅಥಣಿಯ ಸುತ್ತಮುತ್ತ ಮಳೆ ಆಗುತ್ತಿದ್ದು, ಅಥಣಿಯಲ್ಲಿ ಮಾತ್ರ ಬರಗಾಲದ ಭೀತಿ ಇಣುಕುತ್ತಿತ್ತು. ಇದರ ಪರಿಣಾಮ ೨೦೦೬ ಹಾಗೂ ೨೦೦೭ರಲ್ಲಿ ಮತ್ತೆ ಓಕಳಿ ಪ್ರಾರಂಭವಾಯಿತು. ಆದರೆ ಐದು-ಆರು ವರ್ಷದಿಂದ ನಿಂತು ಹೋಗಿದ್ದ ಈ ಓಕಳಿ ಮತ್ತೆ ಪ್ರಾರಂಭವಾಗಿ ಅಥಣಿಯಲ್ಲಿ ಮಳೆಯಾಯಿತು ಎಂದು ಅಥಣಿಯ ಜನಪದರ ಹೇಳಿಕೆ. ಒಟ್ಟಿನಲ್ಲಿ ಆಚರಣೆಗೂ ನಂಬಿಕೆಗೂ ಇಲ್ಲಿ ಒಂದಕ್ಕೊಂದು ಸಂಬಂಧವಿದೆ ಎಂಬುದು ಸ್ಪಷ್ಟವಾಗುತ್ತದೆ. ಜನಪದರ ನಂಬಿಕೆ ಎಂದೂ ಮೂಢ ನಂಬಿಕೆಯಲ್ಲ.

ಅಥಣಿಯಲ್ಲಿ ಹಾಗೂ ಅಥಣಿಯ ಸುತ್ತಮುತ್ತ ಇನ್ನೊಂದು ಅತ್ಯಂತ ಮಹತ್ವವಾದ ಆಚರಣೆ ವಾರಾ ಬಿಡುವುದು. ದೇವಿ ಆರಾಧನೆ ಮಂಗಳವಾರ ಹಾಗೂ ಶುಕ್ರವಾರ ಕೂಡಿ ೫ ವಾರ, ಆ ದಿನ ಒಲೆಯ ಮೇಲೆ ಹಂಚು ಇಡುವುದಿಲ್ಲ. ಭಕ್ಕರಿ ಮಾಡುವುದಿಲ್ಲ. ತೆಂಗಿನಕಾಯಿ ಒಡೆಯುವುದಿಲ್ಲ. (ದೇವಸ್ಥಾನಗಳಲ್ಲಿ)  ಆ ದಿನ ವಾರದ ಕೊನೆಯವಾರ ದೇವಿಗೆ ನೈವೇದ್ಯ ಹಾಗೂ ಪ್ರಾಣಿಬಲಿ ಕೊಡುತ್ತಾರೆ. ಅದನ್ನು ನಿಲ್ಲಿಸಲು ಇಂದಿಗೂ ಸಾಧ್ಯವಿಲ್ಲ. ಜನಪದರ ನಂಬಿಕೆ ಮುಂದೆ ಯಾವ ಸರಕಾರದ ಕಾನೂನುಗಳು ನಡೆಯಲಾರವು. ಇದು ನಡೆಯುವುದು ಜೂನ್ ೭ಕ್ಕೆ. ಮಳೆ ಆಗಬೇಕು ಮಳೆ ಆಗದಿದ್ದರೆ ಈ ವಾರ ಬಿಡುವ ಕಾರ್ಯಕ್ರಮಕ್ಕೆ ಡಂಗುರವನ್ನು ಸಾರುತ್ತಾರೆ. ಎಂದ ಮೇಲೆ ಇದರಲ್ಲಿ ಎಲ್ಲರೂ ಭಾಗಿಗಳು. ಅಥಣಿಯ ಪೊಲೀಸ್ ಸ್ಟೇಷನ್ ಹತ್ತಿರವೇ ಮರಗವ್ವದೇವಿಯ ಗುಡಿ ಇದ್ದು ಅಲ್ಲಿ ಕೊನೆಯವಾರ ಪ್ರಾಣಿಬಲಿಕೊಡುತ್ತಾರೆ. ಅದನ್ನು ನಿಲ್ಲಿಸಲೂ ಇಂದಿಗೂ ಸಾಧ್ಯವಾಗಿಲ್ಲ.

ಅಥಣಿಯ ಸಮೀಪ ಒಂದು ಗ್ರಾಮದ ಹೆಸರು ಅವರಖೋಡ. ಅಥಣಿಯಿಂದ ೧೨ ಕಿ.ಮೀ. ಮಾತ್ರ ದೂರ ಇದೆ. ಆ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಇಲ್ಲ. ಅಲ್ಲಿ ಸಮಗಾರರು ಇಲ್ಲ, ಬಡಿಗರು ಇಲ್ಲ, ಪತ್ತಾರರು ಇಲ್ಲ, ಕುಂಬಾರರು ಕೂಡ ಇಲ್ಲ, ಅದಕ್ಕೆ ಅಲ್ಲಿಯ ಜನರ ಹೇಳಿಕೆ ಈ ರೀತಿಯಾಗಿದೆ. ಅಲ್ಲಿಯ ಗ್ರಾಮ ದೇವರು (ಹನುಮಂತ)  ಮಾರುತಿಗೆ ಗಿರಣಿಯ ಸಪ್ಪಳ ಆಗಿಬರುವುದಿಲ್ಲವಂತೆ. ಬಡಿಗೇರ ಕೆತ್ತುವಿಕೆ ಆಗುವುದಿಲ್ಲ. ಮಾರುತಿಗೆ ತಲೆ ನೋಯುತ್ತದೆ ಎಂದು ಅಲ್ಲಿಯ ಜನರ ಹೇಳಿಕೆ. ಒಟ್ಟಿನಲ್ಲಿ ಅಲ್ಲಿ ಜನ ಈ ಹೊತ್ತಿಗೂ ಪಕ್ಕದ ಊರಿಗೆ ಹೋಗಿ ಹಿಟ್ಟನ್ನು ಬೀಸಿಕೊಂಡು ಬರುವುದು ಹಾಗೂ ಖಾರಾ ಕುಟ್ಟಿಸಿಕೊಂಡು ಬರುತ್ತಾರೆ. ಪಕ್ಕದ ಊರಿನಿಂದ ಬಡಿಗರು ಬಂದು ಒಕ್ಕಲುತನ ಸಾಮಾನು ಮಾಡಿಕೊಟ್ಟು ಹೋಗುತ್ತಾರೆ. ಆದರೆ ರಾತ್ರಿ ವಸ್ತಿ ಮಾತ್ರ ಆ ಗ್ರಾಮದಲ್ಲಿ ಇರುವುದಿಲ್ಲ, ಎಂದು ಅಲ್ಲಿಯ ಗ್ರಾಮಸ್ಥರು ಹೇಳುತ್ತಾರೆ. ಇಂದಿಗೂ ಅದೇ ಪರಂಪರೆ ಮುಂದುವರೆದಿದೆ.

ಅಥಣಿಯ ಹಾಗೂ ಅಥಣಿಯ ಸುತ್ತ ಮುತ್ತ ಗ್ರಾಮಗಳಲ್ಲಿ ನಡೆಯುವ ಕರಿ ಹರಿಯುವುದು. ಇದು ಸರ್ವವ್ಯಾಪಿಯಾಗಿ ನಡೆಯುವ ಆಚರಣೆ. ಈ ಆಚರಣೆಯಿಂದ  ಮುಂಗಾರಿ ಹೆಚ್ಚೊ ಅಥವಾ ಹಿಂಗಾರಿ ಬೆಳೆ ಹೆಚ್ಚು ಬೆಳೆಯುವರೋ ಎಂದು ರೈತ ನಿರ್ಧರಿಸುತ್ತಾನೆ. ಆದರೆ ಇದರಲ್ಲಿಯೂ ಕೂಡ ಒಂದು ವೈಶಿಷ್ಟತೆ ಇದೆ. ಅಥಣಿಯ ಸಮೀಪದ ಒಂದು ಗ್ರಾಮ ಸುಮಾರು ೩೫ ಕಿ.ಮೀ. ದೂರ. ಅಲ್ಲಿ ಇತ್ತೀಚಿಗೆ ಕರಿ ಹರಿಯುವ ಪದ್ಧತಿ ಪ್ರಾರಂಭವಾಗಿದೆ. ಆ ಗ್ರಾಮಸ್ಥರು ಒಂದು ಕಥೆಯನ್ನು ಹೇಳುತ್ತಾರೆ. ಶೇಡಬಾಳದಲ್ಲಿ ಮೊದಲು ಕರಿಹರಿಯುತ್ತಿದ್ದರಂತೆ. ಈಗ ಅಲ್ಲಿ ನಿಂತು ಹೋಗಿದೆ. ಆ ಗ್ರಾಮದಿಂದ ಎತ್ತಿನ ಬಂಡಿ ಬಂದು ಶೇಡಬಾಳ ಸೀಮೆಯನ್ನು ದಾಟಿ ಕಾಗವಾಡಕ್ಕೆ ಬಂತು ಅಲ್ಲಿ ಎರಡು ಗ್ರಾಮಸ್ಥರ ಮಧ್ಯ ಜಗಳವಾಗಿ ರಕ್ತಪಾತವಾಯಿತು ಎಂದು ಹೇಳುತ್ತಾರೆ. ಅಂದಿನಿಂದ ಅಲ್ಲಿ ಕರಿ ಹರಿಯುವುದು ಪ್ರಾರಂಭವಾಯಿತಂತೆ. ಯಾರು ಹೊಡದಾಡಿ ಎತ್ತನ್ನು ಉಳಿಸಿಕೊಂಡರೋ ಆ ಮನೆತನಕ್ಕೆ ಇಂದಿಗೂ ಆ ಗ್ರಾಮದಲ್ಲಿ ಗೌರವವಿದ್ದು, ಗೌರವದ ಮನೆತನದೊಂದಿಗೆ ಈ ಸಂಪ್ರದಾಯ ಜನಪದ ಸಂಪ್ರದಾಯ-ನಂಬಿಕೆ ಬಲವಾಗಿದೆ. ಎತ್ತುಗಳಲ್ಲಿ ಒಂದು ವಾರ ದೇಸಾಯಿ ಮನೆತನದ್ದು, ಇನ್ನೊಂದು ಊರ ಗೌಡರದ್ದು ಇರುತ್ತದೆ. ಕರೋಲಿ ಯಾಗುವವನು ಕೂಡ ನಿರ್ದಿಷ್ಟ ಮನೆತನ ಎತ್ತಿನ ಮುಂದೆ ಇದ್ದು, ಎತ್ತಿನ ಜೊತೆ ಸ್ಪರ್ಧೆ ಮಾಡಬೇಕು. ಜೀವದ ಹಂಗು ಬಿಟ್ಟು ಓಡಬೇಕು ಎಂತಲೇ ಅಂದು ಪತ್ನಿಯ ಕೊರಳಿನಿಂದ ಮಂಗಳ ಸೂತ್ರ ತೆಗೆದುಕೊಂಡು ಬರುತ್ತಾನಂತೆ ಮತ್ತೆ ಸ್ಪರ್ಧೆ ಮುಗಿದ ಮೇಲೆ ಮನೆಗೆ ಹೋಗಿ ಮಂಗಳ ಸೂತ್ರ ಕಟ್ಟುತ್ತಾನೆ. ಇಂದಿಗೂ ಈ ಸಂಪ್ರದಾಯ ಹಾಗೂ ಆಚರಣೆಗಳು ನಡೆದುಕೊಂಡು ಬಂದಿವೆ. ಇದಕ್ಕೆ ಜನಪದರು ಎತ್ತಿಗೆ ಭಾಸಿಂಗ ಕಟ್ಟುವ ಹಬ್ಬ ಎಂತಲೂ ಕರೆಯುತ್ತಾರೆ. ಇದಾದ ನಂತರ ಜಾತ್ರೆಗಳು ಸ್ಥಗಿತಗೊಳ್ಳುತ್ತವೆ ಎನ್ನುತ್ತಾರೆ. ಮೊದಲು ಹಿಂದೂ-ಮುಸಲ್ಮಾನ ಧರ್ಮಗಳ ಜನರು ಕೂಡಿಕೊಂಡು ಆಚರಿಸುತ್ತಿದ್ದು, ಅದು ಧರ್ಮಗಳ ಐಕ್ಯತೆಯ ಸಂಕೇತವಾಗಿತ್ತು. ಇಂದು ಗ್ರಾಮಗಳಲ್ಲಿ ಅದೇ ವಾತಾವರಣ ಇದೆ ಆದರೂ ಪಟ್ಟಣಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಇಂದು ಇಸ್ಲಾಂ ಧರ್ಮದವರು ನಮ್ಮಲ್ಲಿ ಮೊಹರಂ ಹಬ್ಬವೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಆದ್ದರಿಂದ ಇಂದು ನಮ್ಮಲ್ಲಿ ಹಿಂದೂಗಳೇ ಆ ಹಬ್ಬವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಥಣಿಯಲ್ಲಿ ಒಂದು ವಿಶಿಷ್ಟತೆಯನ್ನು ಈ ಹಬ್ಬ ಪಡೆದುಕೊಂಡಿದೆ. ಹಬ್ಬದ ಕೇಂದ್ರ ಬಿಂದುಗಳು ‘ಹಸೇನ’-‘ಹುಸೇನ’ ಎಂಬ ಸಹೋದರರು. ಐದು ದಿನ ಹಬ್ಬ ನಡೆಯುತ್ತದೆ. ಬಿಜಾಪುರದಿಂದಲೇ ತುರಾಯಿ ಬರಬೇಕು ಕಿಚ್ಚು ಹಾಯಲು ತಗ್ಗು ತೆಗೆಯುತ್ತಾರೆ. ಆದರೆ ಗ್ರಾಮಗಳಲ್ಲಿ ಗುದ್ದಲಿ ಹಾಕುವುದು ಎಂದು ಗ್ರಾಮಸ್ಥರ ಹೇಳಿಕೆ ಯಾಕೆ? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ನಮ್ಮಲ್ಲಿ ಹಿರಿಯರು ಹೇಳಿದ್ದು ನಾವು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳುತ್ತಾರೆ. ಎಲ್ಲದಕ್ಕೂ ಕಾರಣವಿಲ್ಲದಿರಬಹುದು ಅಥವಾ ನಮ್ಮ ಜನಪದರು ಬಹಳ ವಿನಯವಂತರು ಹಿರಿಯರಿಗೆ ಯಾಕೆ? ಎಂದು ಕೇಳುವುದು ತಪ್ಪು ಎಂದು ಅಭಿಪ್ರಾಯ ಉಳ್ಳವರು. ಮೋಹರಂ ಹಬ್ಬದಲ್ಲಿ ಹಾಡುವ ಹಾಡುಗಳಿಗೆ ಕರಬಲ ಪದಗಳೆಂದು ಕರೆಯುತ್ತಾರೆ.

ಅಥಣಿಯಲ್ಲಿಯ ಇನ್ನೊಂದು ವೈಶಿಷ್ಟತೆಯ ಆಚರಣೆ ‘ಹದಗಾ’ ಹಾಕುವುದು ಇದನ್ನು ಆಚರಣೆ ಮಾಡುವುದರಿಂದ ‘ಹಸ್ತಾಮಳೆ’ ಸಾಕಷ್ಟು ಸಮರ್ಥವಾಗುವುದೆಂದು ಹೇಳುತ್ತಾರೆ. ಮಕ್ಕಳೆಲ್ಲರೂ ಕೂಡಿ ಮನೆ ಮನೆಗೆ ಹೋಗುತ್ತಾರೆ. ಮನೆಯ ಯಜಮಾನಿ ಮಕ್ಕಳಿಗೋಸ್ಕರ ತಿಂಡಿ ಮಾಡಿಟ್ಟುಕೊಂಡು ಮನೆಯ ಮೇಲೆ ಆನೆ ಚಿತ್ರ ಬರೆಯುತ್ತಾಳೆ. ನಂತರ ಮಕ್ಕಳೆಲ್ಲರೂ ಕೈಗೆ ಕೈ ಕೂಡಿಸಿಕೊಂಡು ಆ ಮನೆಯ ಮೇಲಿನ ಆನೆಯ ಸುತ್ತ ತಿರುಗುತ್ತಾ ‘ಎಕ ನಿಂಬು ಜಿಲುಬಾಯಿ ದೋ ನಿಂಬು ಜೀಲು ದೊನ ಲಿಂಬು ಜೀಳು ಬಾಯಿ ತಿನ ನಿಂಬು ಜೀಲು’ ಎಂದು ನಾಲ್ಕರವರೆಗೆ ಹೇಳುತ್ತ ಬಾರ ಲಿಂಬು ಜಾರೋಟ್ಯಾ ಮಾಳ ಬಾಲಿನ ಹನುಮಂತ ಹೀಗೆ ಹಾಡು ಮುಂದುವರೆಯುತ್ತದೆ. ಹಾಡು ಹಾಡಿ ಕುಣಿದ ನಂತರ ಯಜಮಾನಿ ಮಕ್ಕಳ ಕೂಡ ಸರಸ – ಸಂಭಾಷಣೆ ನಡೆಸುತ್ತಾಳೆ. ನಾನು ತಿಂಡಿ ಮಾಡಿದ್ದೇನೆ ಅದರ ಹೆಸರು ಹೇಳಿ ಎಂದು ಮಕ್ಕಳನ್ನು ಕೇಳುತ್ತಾಳೆ. ಆಗ ಮಕ್ಕಳು ಒಂದೊಂದು ತಿಂಡಿಯ ಹೆಸರು ಹೇಳುತ್ತಾರೆ. ಕೆಲವೊಂದು ಸಲ ಯಜಮಾನಿ ಗೆಲ್ಲುತ್ತಾಳೆ. ಕೆಲವೊಂದು ಸಲ ಮಕ್ಕಳು ಗೆಲ್ಲುತ್ತಾರೆ. ಇದು ಏಳು ದಿನ ನಡೆಯುವ ಕಾರ್ಯಕ್ರಮ. ಅದು ಇಂದಿಗೂ ನನಗೆ ನೆನಪು, ನಾನು ಚಿಕ್ಕಂದಿನಲ್ಲಿ ಮನೆ ಮನೆಗೆ ಹೋಗಿದ್ದು ಅಲ್ಲಿ ತಿಂಡಿಯ ಹೆಸರು ಹೇಳಿದ್ದು ಇತ್ಯಾದಿ.

ಅದರಂತೆ ಮಳೆದೇವನನ್ನು ಒಲಿಸಲು ಗುಳ್ಳವ್ವನ ಆರಾಧನೆ ಕೂಡ ಒಂದು. ಇದು ಉತ್ತರ ಕರ್ನಾಟಕದ ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಶೃಂಗ ಖುಷಿಯನ್ನು ಕೊಡಿಸಿ ಅವನನ್ನು ಪೂಜಿಸುವ ವಿಧಾನ ಶಿವನಿಗೆ ಸತತ ಧಾರೆ ಇಟ್ಟರೆ ಮಳೆ ಆಗುವುದು ಎಂಬ ನಂಬಿಕೆ ಇಂದಿಗೂ ನಮ್ಮಲ್ಲಿ ಇದೆ. ಆಚರಣೆಯು ಕೂಡ ಇದೆ. ನಂಬಿಕೆಗೆ ದೈವ ಎಂದು ದ್ರೋಹ ಮಾಡಿಲ್ಲ. ಎಂತಲೇ ಜನಪದರ ನಂಬಿಕೆ ಮೂಢನಂಬಿಕೆಯಾಗಿಲ್ಲ.

ಇಲ್ಲಿ ಗುರ್ಜಿ ಬರುತ್ತಾಳೆ. ನಮ್ಮ ಜನಪದರಲ್ಲಿ ‘ಗುರ್ಜಿ’ ಬಂದಳು. ಮಳೆ ತಂದಳು ಎಂದು ನುಡಿ ಪ್ರಚಲಿತದಲ್ಲಿದೆ. ಮೈ ಮೇಲೆ ಬುಟ್ಟಿ ಇಲ್ಲದೆ ತಲೆಯ ಮೇಲೆ ಗುರ್ಜಿಯನ್ನು ಹೊತ್ತುಕೊಂಡು ಚಿಕ್ಕ ಮಕ್ಕಳು ಓಣಿ ಓಣಿಯಲ್ಲಿ ಹಾಡು ಹೇಳುತ್ತ ಬರುತ್ತಾರೆ. ‘‘ಗುರ್ಜಿ ಗುರ್ಜಿ ಎಲ್ಲಾಡಿ ಬಂದಿ ಹಳ್ಳಾ ಕೊಳ್ಳಾ ಹರಿದಾಡಿಬಂದಿ ಸುರಿ ಮಳೆಯೋ ಸುರಿಮಳೆಯೋ’’ ಎಂದು ಹೇಳುತ್ತಾರೆ. ಗುಂಡಗೆ ತಿರುಗುವ ಆ ಗುರ್ಜಿಯ ಮೇಲೆ ನೀರು ಸುರಿಯುವುದು ನೋಡುವವರಿಗೆ ಅದೊಂದು ರೀತಿಯ ಶೋಷಣೆ ಎನಿಸಬಹುದು. ಆದರೆ ಅದು ಶೋಷಣೆ ಎನಿಸುವುದಿಲ್ಲ. ಯಾಕೆಂದರೆ ಗುರ್ಜಿಯನ್ನು ಹೊತ್ತುಕೊಂಡು ಬಂದವರಿಗೆ ಮೊರದ ತುಂಬ ಕಾಳು ಸಿಗುತ್ತವೆ. ಅವರ ಹೊಟ್ಟೆ ತುಂಬುತ್ತಾಳೆ ಈ ಗುರ್ಜಿ. ಈ ಗುರ್ಜಿಯನ್ನು ಹೊತ್ತುಕೊಂಡು ಅಡ್ಡಾಡುವವರು ಕೊರಗ ಬುಡಕಟ್ಟಿಗೆ ಸೇರಿದವರು ಎಂದು ಹೇಳುತ್ತಾರೆ.

ಗಣಪನ ಬೆನ್ನ ಹಿಂದೆಯೇ ಬರುತ್ತಾನೆ ಜೋಕುಮಾರ. ಜೋಕುಮಾರ ಬಂದರೆ ಗಣಪನ ಹೊಟ್ಟೆ ಒಡೆಯುತ್ತದೆ ಎಂಬ ನಂಬಿಕೆಯಿದೆ. ಎಂತಲೇ ಜೋಕುಮಾರ ಊರೊಳಗೆ ಬಂದರೆ ಗಣಪನನ್ನು ಮುಚ್ಚಿಡುವ ಸಂಪ್ರದಾಯ ಇಂದಿಗೂ ಇದೆ. ಅಂದ ಹಾಗೆ ಜೋಕುಮಾರನಿಗೆ ನೆಲೆಯು ಇರುವುದಿಲ್ಲ. ಆತನ ಬಗ್ಗೆ ಒಂದು ಕಥೆ ಕುಂಬಾರ ಮನೆಯಲ್ಲಿ ಹುಟ್ಟಿದನೆಂದು, ತಳವಾರನ ಮನೆಯಲ್ಲಿ ಬೆಳೆದೆನೆಂದು, ಹರಿಜನರ ಕೇರಿಯಲ್ಲಿ ಆತನನ್ನು ಕೊಂದು, ನಂತರ ಅಗಸರ ಒಗೆಯುವ ಕಲ್ಲ ಕೆಳಗೆ ಇಟ್ಟು ಹೋದರೆಂದು, ಇದರಿಂದ ಅಗಸರು ಮೂರು ದಿನ ಮೈಲಿಗೆ ಮಾಡಿ ನಾಲ್ಕನೇ ದಿನ ಶುದ್ಧರಾಗುತ್ತಾರೆಂದು, ಎರಡೂ ದಿನಗಳವರೆಗೆ ಯಾರ ಮನೆಗೂ ಅಗಸರು ಒಗೆಯಲು ಹೊಗುವುದಿಲ್ಲವೆಂದು ಹೇಳುತ್ತಾರೆ. ಇಂದಿಗೂ ಆ ಸಂಪ್ರದಾಯ ನಡೆದುಕೊಂಡು ಬಂದಿದೆ.

ಪುರವಂತರು ಎಂದು ಪ್ರತ್ಯೇಕ ಜನಾಂಗವಿಲ್ಲ. ಅವರು ವಿಶ್ವಕರ್ಮ ಸಮಾಜಕ್ಕೆ ಸೇರಿದವರು. ವೀರಭದ್ರ ಅವರ ಆರಾಧ್ಯ ದೇವರು. ಮದುವೆ ಆಗುವ ಮುಂದಿನ ದಿನ ಅಥವಾ ಮದುವೆಯ ದಿನ ಗುಗ್ಗಳ ಹಾಕುವ ಸಂಪ್ರದಾಯ ಕೆಲವು ಮನೆಗಳಲ್ಲಿ ಇಂದಿಗೂ ಇದೆ. ಅಂತಹ ಮನೆಯವರು ಪುರವಂತರಿಗೆ ಬಂದು ವೀಳ್ಯೆ ಕೊಟ್ಟು ಆತನಿಗೆ ಬೋಜನಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಕೊಡುತ್ತಾರೆ. ಈ ಗುಗ್ಗಳ ಸಂಪ್ರದಾಯ ಕೆಲವೇ ಕೆಲವು ಮನೆತನಗಳಿಗೆ ಸೇರಿದವುಗಳು. ಪುರವಂತರಾಗಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ವಿಶ್ವಕರ್ಮ ಸಮಾಜಕ್ಕೆ ಸೇರಿದ ಮುಖಂಡರೊಬ್ಬರ ಹೇಳಿಕೆ.

ಒಂದು ಸಂದರ್ಭದಲ್ಲಿ ನಿಂತುಕೊಂಡು ನೋಡಿದರೆ ನಾವೆಲ್ಲಾ ಜನಪದರೇ, ನಾಗರೀಕ ವೇಷ ತೊಟ್ಟಿರಬಹುದು. ಮುಂದುವರಿದ ಸಂಸ್ಕೃತಿ ಎಂಬ ಸೋಗು ಹಾಕಬಹುದು. ಶಿಷ್ಟ ಸಂಸ್ಕೃತಿಯರೆಂದು ಕಂಡುಬಂದರೂ ಜನಪದ ನೆಲೆಗಳಲ್ಲಿ ಹುಟ್ಟಿ ಬೆಳೆದ ನಾವುಗಳು ಅವುಗಳನ್ನು ಬಿಟ್ಟು ಬದುಕಲಾದೀತೆ. ಕುಲದೇವತಾ ಆರಾಧನೆ, ಗ್ರಾಮ ದೇವತೆಗಳ ಆರಾಧನೆಗಳು ಮದುವೆ ಮುಂಜಿಗಳಲ್ಲಿ ಅಷ್ಟೇ ಏಕೆ ಹೆಚ್ಚು ಹೆಚ್ಚಾಗಿ ವಿಶೇಷ ಸಮಾರಂಭಗಳಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಸಂಸ್ಕೃತದ ಮಂತ್ರಗಳೆಲ್ಲ ಮೊದಲು ಹೇಳುವುದು ಗ್ರಾಮದೇವತಾ ಭ್ಯೋನಮಃ ಕುಲದೇವತಾ ಬ್ಯೋನಂ ಎಂದು. ಹೀಗಾಗಿ ದಿಲ್ಲಿಯಲ್ಲಿದ್ದರು ಒಂದಲ್ಲಾ ಒಂದು ದಿನ ಹಳ್ಳಿಗೆ ಬರಬೇಕಲ್ಲವೇ ಇಂದಿನ ವಿಜ್ಞಾನ ಯುಗದಲ್ಲಿಯೂ ಕೂಡ. ಒಟ್ಟಿನಲ್ಲಿ ಜಾನಪದ ಅಧ್ಯಯನಕ್ಕೆ ಪ್ರೇರಣೆ ದೊರತದ್ದು ಜರ್ಮನ್ ತತ್ವಶಾಸ್ತ್ರಜ್ಞ ಹರ್ಡರ್‌ನಿಂದ ಹಾಗೂ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣದಿಂದ ಗ್ರಾಮೀಣ ಪ್ರದೇಶದ ಜನ ನಗರಗಳಿಗೆ ವಲಸೆ ಹೋಗಲು ಆರಂಭಿಸಿದ ಮೇಲೆ ಹೊಸ ನಗರ, ವಾತಾವರಣದ ಒತ್ತಡಗಳಿಗೆ ಒಳಗಾಗಿ ಗ್ರಾಮಗಳಲ್ಲಿ ಪರಂಪರಾನುಗತವಾಗಿ ಆಚರಿಸುತ್ತಿದ್ದ ನಂಬಿಕೆಗಳು, ಸಂಪ್ರದಾಯಗಳು, ಸಾಹಿತ್ಯ, ಕಲೆ, ಆಟ, ಊಟೋಪಚಾರಗಳನ್ನು ಕೈಬಿಡಲಾರಂಭಿಸಿದರು. ಅವರ ನೆಲೆಗಟ್ಟುಗಳನ್ನು ವಿಶೇಷವಾಗಿ ಕಂಡುಹಿಡಿದು ಅವರ ಆಚರಣೆಗಳನ್ನು, ಸಂಪ್ರದಾಯವನ್ನು ಅಭ್ಯಾಸಿಸುವುದು ಇಂದಿನ ಈ ವೈಜ್ಞಾನಿಕ ಯುಗದಲ್ಲಿ ಅತ್ಯಂತ ಅವಶ್ಯವಾದುದು ಮತ್ತು ಯೋಗ್ಯ ವಾದುದಾಗಿದೆ.

ಒಟ್ಟಿನಲ್ಲಿ ಜನಪದ ಸಾಹಿತ್ಯ, ಜನರ ಜೀವನದ ಜೀವನಾಡಿ ಇದ್ದಂತೆ. ನೇರವಾಗಿ ಭಟ್ಟಿ ಇಳಿದ ಸಾಹಿತ್ಯ ಅನುಭವದ ಮೂಸೆಯಲ್ಲಿಂದ ಹೊರಬಂದದ್ದು. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸರ್ವವ್ಯಾಪಿಯಾದದ್ದು. ಈ ಜನಪದ ಸಾಹಿತ್ಯ ಪ್ರಾಚೀನ- ಅರ್ವಾಚೀನ ಗಳೆರಡೂ ಇಲ್ಲಿ ಪರಸ್ಪರ ಸಂಧಿಸಿ ಕೈ ಕುಲುಕುತ್ತವೆ. ಹರಿಯ ಬಾಯಲ್ಲಿ ಬ್ರಹ್ಮಾಂಡ ಅಡಗಿದಂತೆ ಜನಪದ ಕಕ್ಷೆಯಲ್ಲಿ ಎಲ್ಲವು ಅಡಗಿದೆ. ಆದರೆ ಅದರ ಅರಿವು ನಮಗಿರದೆ ಹೋದಾಗ ಅದನ್ನು ಮರೆತಾಗ ಅದನ್ನು ನೆನಪಿಸಿದ ಶ್ರೇಯಸ್ಸು ಪಾಶ್ಚಾತ್ಯ ವಿದ್ವಾಂಸರಿಗೆ ಮೊದಲು ಸೇರಬೇಕು. ಅದರ ನಂತರ ನಮ್ಮಲ್ಲಿ ಬೇಟಗೇರಿ ಕೃಷ್ಣಶರ್ಮ, ಹಲಸಂಗಿ ಸಹೋದರರು, ಮಾಸ್ತಿ, ಬಿ.ಎಂ.ಶ್ರೀ ಹಾಗೂ ಇನ್ನಿತರರ ದುಡುಮೆಯ ಫಲವಾಗಿ ಜನಪದ ಸಾಹಿತ್ಯದ ಸತ್ವ, ಸಂಪನ್ನತೆಯನ್ನು ವಿದ್ವತ್ ಲೋಕಕ್ಕೆ ಪರಿಚಯಿಸಿದವರು. ಪಾಮರರ ಸಾಹಿತ್ಯವನ್ನು ಉದಾಸೀನ ಮಾಡಬೇಡಿ ಎಂದು ವಿಶ್ವ ಕರ್ನಾಟಕ ಪತ್ರಿಕೆ ಮೂಲಕ ಮನವಿ ಮಾಡಬೇಕಾಯಿತು ಎಂಬ ಹೇಳಿಕೆ ಗಣನೀಯವಾದುದು. ಆದರೆ ಜನಪದ ಸಾಹಿತ್ಯ ಅಳಿಸಿ ಹೋಗಿರಲಿಲ್ಲ, ಮರೆತು ಹೋಗಿತ್ತು. ಆದರೆ ಅಲ್ಲಲ್ಲಿ ಜನಪದ ಸಾಹಿತ್ಯದ ಸೊಗಡನ್ನು ತಮ್ಮ ಕಾವ್ಯಗಳಲ್ಲಿ, ಬರಹಗಳಲ್ಲಿ, ಕೀರ್ತನ ಸಾಹಿತ್ಯದಲ್ಲಿ ಬಳಸಿಕೊಂಡು ತಮ್ಮ ತಮ್ಮ ಕಾವ್ಯದ ಸತ್ವವನ್ನು ಬೆಳೆಸಿಕೊಂಡು ಜನಪದ ಸಾಹಿತ್ಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದ ಶಿಷ್ಟಕವಿಗಳಿಗೆ, ಹರಿದಾಸರಿಗೆ, ವಚನಕಾರರಿಗೆ, ಅವರೆಲ್ಲರಿಗೂ ನಮ್ಮ ನಮನಗಳನ್ನು ಸಲ್ಲಿಸಬೇಕು.

ಜಾನಪದ ನೆಲೆ

ನಮ್ಮ ಮನೆತನದ ಮೂಲ ಇತಿಹಾಸ ತಿಳಿಯಬೇಕಾದರೆ ನಾವು ಹೆಳವರನ್ನು ಹುಡುಕಿಕೊಂಡು ಹೋಗಬೇಕು. ಆತ ಮನೆಗೆ ಭಾರವಾಗಿ ಬದುಕಲಾರದ ಬುದ್ದಿವಂತ. ಒಂದು ಕುಟುಂಬದ ಆಗು-ಹೋಗುಗಳನ್ನು ತನ್ನ ಕಡತದಲ್ಲಿ ಬರೆದುಕೊಂಡು ಅಂದಿನಿಂದ ಇಂದಿನವರೆಗೂ ಬಂದು ಓದಿ ಹೇಳುತ್ತಾ ಈತ ಧಾನ್ಯಗಳನ್ನು ಮಾತ್ರವಲ್ಲ ಸಾಕು ಪ್ರಾಣಿಗಳನ್ನು ಕೂಡ ಬೇಡುತ್ತಾನೆ.

ಇನ್ನು ಯಾವುದೇ ಶುಭ ಕಾರ್ಯವಾದ ಮೇಲೆ ಕೆಲವು ಮನೆತನಗಳಲ್ಲಿ ಶಕ್ತಿ ಆರಾಧನೆ ಇದ್ದವರ ಮನೆಗಳಲ್ಲಿ ಗೊಂದಲ ಹಾಕುವುದು ಸಂಪ್ರದಾಯ. ಗೊಂದಲಿಗರು ಹಾಡುವುದನ್ನೇ ಕಸುಬನ್ನಾಗಿ ಮಾಡಿಕೊಂಡವರು. ಜನಪದ ಹಾಡುಗಳನ್ನು ಇವರು ಹಾಡುತ್ತಾರೆ. ಗೊಂದಲೊಂದು ಪೂಜಾ ವಿಧಾನ. ಗೊಂದಲಿಗರ ಆರಾಧ್ಯ ದೈವ ಅಂಬಾ ಭವಾನಿ ತಮ್ಮ ದೈವದ ಮುಂದೆ ಬೆಳಕು ಹರಿಯುವವರೆಗೆ ಕಥೆಯನ್ನು ಹಾಡುತ್ತಾ, ಕುಣಿಯುತ್ತಾ ಇರುವುದೇ ಪೂಜಾ ವಿಧಾನ ಇದನ್ನು ಗೊಂದಲ ಹಾಕುವುದು ಎಂದು ಕರೆಯುತ್ತಾರೆ.

ಮರಾಠ, ಶಿಂಪಿ, ಸೋವಾರ ಹಾಗೂ ಡೆಕ್ಕನ್ ಪ್ರದೇಶದ ಇತರ ಜಾತಿಯವರು ಶುಭ ಸಂದರ್ಭಗಳಲ್ಲಿ ಗೊಂದಲವನ್ನು ಏರ್ಪಡಿಸುವ ಸಂಪ್ರದಾಯವಿದೆ. ಗೊಂದಲ ಹಾಕುವ ಸಮಯದಲ್ಲಿ ಗಂಡಸರು ಮುಂಡಾಸು ಬೆಟ್ಟಿನಿಂದ ಕಪ್ಪಾದ ಅಂಗಿ, ಝಗ ಕೊರಳಲ್ಲಿ ಕವಡೆಸರ, ನಡುಪಟ್ಟಿ ಹಿತ್ತಾಳೆ ಅಥವಾ ಬೆಳ್ಳಿ ಕೆತ್ತನೆಯ ವಿಗ್ರಹ, ಕಾಲುಗೆಜ್ಜೆ ಹಾಗೂ ಹೆಂಗಸರು ಸೀರೆ ರವಿಕೆ ಆಭರಣಗಳನ್ನು ಧರಿಸುತ್ತಾರೆ. ಇವರಲ್ಲಿ ಬಾಲ್ಯ ವಿವಾಹ ಪದ್ಧತಿ ಇತ್ತು. ಮಾಂಸಹಾರಿಗಳಾದ ಇವರು ಹಿಂದೂ ಮುಸ್ಲಿಂ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ಇಲ್ಲಿ ಅಥಣಿಯ ಸಮೀಪ ಇರುವ ನಂದಗಾಂವ ಗ್ರಾಮದಲ್ಲಿ ಏನಾದರು ಗೊಂದಲ ಹಾಕುವವರಿದ್ದರೆ ಬಿಜ್ಜರಿಗೆ ಹಾಗೂ ಬಾಬಾನಗರದಿಂದ ಬರಬೇಕಾಗುತ್ತಿತ್ತು, ಕಾಲ ಬದಲಾದಂತೆ ಈ ಗೊಂದಲಿಗರು ಕಡಿಮೆಯಾಗುತ್ತಿದ್ದು, ಈ ಸಂಪ್ರದಾಯ ನಶಿಸಿ ಹೋಗತೊಡಗಿದೆ. ಕೇವಲ ಸಂಪ್ರದಾಯದ ದೃಷ್ಠಿಯಿಂದ ಊರಿನಲ್ಲಿಯ ಕೀರ್ತನಕಾರರು ಈ ಗೊಂದಲ ಹಾಕುವುದನ್ನು, ಹಾಡುವುದನ್ನು ನಾವು ಈಗ ಕಾಣುತ್ತಿದ್ದೇವೆ.

ಅಂದಿನ ಆಚರಣೆಗಳು ಇಂದಿಗೂ ಉಳಿದುಕೊಂಡಿವೆ. ಅದರ ಬೇರುಗಳನ್ನು ಹುಡುಕಿಕೊಂಡು ಹೋದಾಗ ನಮಗೆ ಕಾಣುವುದು ನಿರಾಶೆ. ಕಾರಣ ಏನು? ಎಂಬ ಪ್ರಶ್ನೆಗೆ ಉತ್ತರಿಸುವವರಾರು? ಶಿಕ್ಷಣದ ಗಾಳಿ ಜನಪದರ ಮೂಲ ಬೇರುಗಳನ್ನೇ ಅಲಗಿಸತೊಡಗಿ ಅವರಿಗೆ ನೆಲೆ ಕಾಣದಾಗಿದೆ. ಕನಕದಾಸರ ಕೀರ್ತನೆಯಂತೆ ಕುಲದ ನೆಲೆಯನ್ನೇನಾದರು ಬಲ್ಲಿರಾ? ಎಂಬಂತಾಗಿದೆ.

‘ಸರ್ವೆಜನಾ ಸುಖಿನೋ ಭವಂತು, ಎಂಬ ಸಂಸ್ಕೃತದ ಉಕ್ತಿಯಂತೆ ತಮ್ಮನ್ನು ಮಮತೆಯಿಂದ, ಗೌರವದಿಂದ, ಅಭಿಮಾನದಿಂದ ಕಾಣುವ ಜನರಿಗೆ ನಮ್ಮ ಜನಪದರು ಕೊಡುವ ಹರಕೆ ಏನು ಗೊತ್ತೇ

ಆಡೋ ಮಕ್ಕಳಾಗಲಿ, ತೂಗೋ ತೊಟ್ಟಿಲಾಗಲಿ
ಪಾಂಡವರ ಬಳಗಾಗಲಿ ಹತ್ತು ಮಂದ್ಯಾಗ
ಅವರ ದೇಮತ್ತು ಎಂಬುದಾಗಿದೆ.

ಕರಬಲ ಹಾಡು

೧.     ಹಸೇನಿ ಹುಸೇನಿ ಹಸಗುಸಾ
ಏನ ಹೇಳಲಿ ವನವಾಸ

೨.     ಅಭಯ ಮೌಲಾಲಿ ತಂದಿ ಕಾಸ
ಮೂರು ಲೋಕದ ಹುಸೇನಿ ಅರಸ ||೧||

೩.     ಹಸೇನಿ ಹುಸೇನಿ ಹೋಗುವ ಮುಂದ
ತಂದಿ ಮೌಲಾಲಿ ತೀರಿದರು

೪.     ಪಾತಿಮಾಗೆ ಹೇಳತಾರ ಕೈಮುಗುದಿ
ತಾಯಿಗೆ ಹೇಳತಾರಿ ಮಕ್ಕಳ ಮುಂದ
ಮತನ ಬ್ಯಾಡರಿ ಸಣ್ಣ ಕಂದ

೫.     ಅವರಿಗೆ ಹೇಳತ್ತಾಳ ಕೈಯ ಮುಗಿದ
ಧರಣಿ ಅಳುತ್ತಾ ನೆಲಕ ಬಿದ್ದ ಅಳ್ತಾಳ

೬.     ಅವರ ಹೊಂಟರೋ ಮಾತಮುರದ
ಕುದರಿ ಬೆಗಸ್ಯಾರ ಜಿನ್ ಹೊಡದ

೭.     ಹೋಗಿ ಇಳದಾರೊ ಕರಬಲ ಮ್ಯಾಯಿ
ಹತ್ತ ದಿನ ಮೊಹರಮ ತಿಂಗಳು

೮.     ಡಂಗರ ಹೊಡೆಸ್ಯಾರು ಕಾಸಿಬಾ
ಲಡಾಯಿ ಮಾಡ್ಯಾರು ಖಾಯಂ

೯.     ಮೈಯಲ್ಲಾ ಕಡತ ಹತ್ಯಾವ ಘಾನೆ
ರುಂಡ ಹಾರಾಯವ ಲಲ್ಲು ಕಲಮ

೧೦.   ರಗತ ಹರಸ್ಯಾರ ಭೂಮಿಗೆ
ಮುಂದ ಹಾರ್ಯಾವ ಲುಲ್ಲುಕಲ
ಹಸೇನಿ ಹುಸೇನಿ ಅಣ್ಣ ತಮ್ಮ
ನಿಂತು ಮಾಡ್ಯಾರು ದಾನ ಧರ್ಮ
ನಬಿಯ ಹೇಳಿದ ಬಯಾನಾ

ಅಲಕಟ ಮಲಕಟ ಸಲಕಟ ನಡಕಟ
ನಟಕಟಿದೇವರು ಧರ್ಮರು
ನಟಕಟಿದೇವರು ಧರ್ಮರು ಹೊಲದಾಗ
ಹಣೆಪಟ್ಟಿ ದೆಟ್ಟ ಹದಿನಾರು ||೧||

ಎಂಟೆತ್ತ ಹೊಡಕೊಂಡು ಕಂಟ್ಯಾಗಿಂದ ಬರುವಾಗ
ಗಂಟಬಿದ್ದಾಳೊ ಗೋಪಿತಾಯಿ |
ಗಂಟಬಿದ್ದಾಳೊ ಗೋಪಿತಾಯಿ ಹೊಟ್ಟೆಲಿ
ಆಗ ಹುಟ್ಟ್ಯಾನೋ ಬಸವಣ್ಣ

ಗೋಪಿತಾಯಿ ಹೊಟ್ಟೆಲಿ ಆಗ
ಹುಟ್ಟ್ಯಾರು ಬಸವಣ್ಣ ಆಗ ಆದ್ಯಾವೂ ಹೊಸಪೇಟೆ
ಜನಕರಾಜನ ಮಗಳು
ಬನಕ ತೊಟ್ಟಿಲಿ ಕಟ್ಟಿ

ಲವ ಕುಶ ಅಂತ ಹೆಸರಿಟ್ಟು
ಹಾದಿಯ ಹೊಲ ನೋಡಿ
ಅಣ್ಣ ತಮ್ಮರ ನಗೆ ನೋಡು
ಸಕ್ಕರಿ ಮುಕ್ಕುರಿ ಜೋಳ ಅಕ್ಕರತಿ ಶಿವಬಿತ್ತೆ

ಮಾನ ತುಂಬಕಟಲಿ ಶಿವ ಬಿದ್ದು ರಜನೀನ
ಅಕ್ಕತಂಗೇರ ನಾವ ರೊಕ್ಕ ಬಾರಿಸಿದಾಂಗ
ಉಕ್ಕೇರಿ ನವಲಿ ಕುಣಿದ್ದಾಂಗ ರೋಹಿಣಿ
ಎಳಕಾಳಪ್ಪ ಕಸರಿಲ್ಲ ಅಕ್ಕಾ ನಿನ್ನ ಮಕ್ಕಳ ಮ್ಯಾಲ ಎರಡಿಲ್ಲ.