ಕೊಂಬುಗಳು ಕಡೆದವಾ| ಕಾಳಿಗಳು ಊದ್ಯಾವ
ದಿಮ್ಮಿ, ಕರಡೆಲ್ಲ, ಕಣಿ ಕಣಿಸಿ, ನಿಬ್ಬಣದ
ಅಬ್ಬರ ಸಂಭ್ರಮ ಕೇಳ್ಯಾವ

ಜನಪದ ಕಲಾಪ್ರಪಂಚ ಜನಜೀವನದಷ್ಟೇ ವಿಶಾಲವಾದದ್ದು, ವ್ಯಾಪಕವಾದದ್ದು, ಪ್ರಾಚೀನವಾದದ್ದು. ಅಯಾ ಕಾಲದ ಮಾನವನ ಅಗತ್ಯಗಳಿಂದ ಕಲೆಗಳ ಉಗಮ ವಿಕಾಸ ವೈವಿಧ್ಯಗಳಿಗೆ ಕಾರಣವಾಗಿವೆ. ನಿಜವಾದ ಕಲೆ ಪುಸ್ತಕ ಜ್ಞಾನದಿಂದಾಗಲೀ ಶಾಲೆಯ ಕಲಿಕೆಯಿಂದಾಗಲೀ ಅವಿರ್ಭವಿಸುವಂಥದಲ್ಲ, ಅಂತಃಸ್ಫೂರ್ತಿಯಿಂದ, ಲೋಕಾನುಭವದಿಂದ ಉದಯವಾಗತಕ್ಕದ್ದು ಎಂಬುದಕ್ಕೆ ಇವು ನಿದರ್ಶನಗಳಾಗಿವೆ.

ಜನಪದ ಹಾಡು ಕುಣಿತಗಳ ಜಲಮೂಲ ನಮ್ಮ ಅನಕ್ಷರಸ್ಥ, ಗ್ರಾಮೀಣರ ಅಂತರಂಗ. ಅವು ಬೆಳೆದುದು ಲೋಕಕ್ಕೆ ಅನ್ನ ಬೆಳೆದುಕೊಡುವ ರೈತರ ಅಂಗಣದಲ್ಲಿ ನಮ್ಮ ಜನಪದ ಬದುಕಿಗೆ ಹುಟ್ಟಿದ ಪರಿಸರವೇ ಶಾಲೆ, ಪಟ್ಟ ಅನುಭವವೇ ಗುರು.

ದೈವಿ ಆರಾಧನೆಗಾಗಿ ಹುಟ್ಟಿಕೊಂಡ ಈ ಹಾಡು-ಕುಣಿತಗಳಲ್ಲಿ ಕೆಲವು ಕಾಲಗತಿಯಲ್ಲಿ ಮನರಂಜನೆಯ ಮಾಧ್ಯಮವಾದವು! ಮತ್ತೆ ಕೆಲವು ಉಪಜೀವನದ ಮಾರ್ಗವಾದವು. ದೇವರ ಆರಾಧನೆಗಿರಲಿ, ದುಡಿಮೆಯ ಬೇಸರ ಪರಿಹಾರಕ್ಕಿರಲಿ, ನಮ್ಮ ಜನ ಸೃಷ್ಟಿಸಿದ ಸಾಹಿತ್ಯ ಮತ್ತು ಕಲೆಗಳ ಮೌಲ್ಯ ಅನುಪಮವಾದುದು. ಅವುಗಳನ್ನು ಗಮನಿಸಿದಾಗ ನಮ್ಮ ಜನರ ಅಸಾಧರಣ ಪ್ರತಿಭೆಯ ವಿರಾಟ ದರ್ಶನವೇ ಆಗುತ್ತದೆ. ಅವರ ಒಂದೊಂದು ನುಡಿಗೂ, ಒಂದೊಂದು ಕಲೆಗೂ ಅರ್ಥಪೂರ್ಣ ಹಿನ್ನೆಲೆಯಿದೆ; ಸಮಷ್ಟಿ ಕ್ಷೇಮದ ಚಿಂತನೆಯಿದೆ.

‘ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ’ ಎಂದು ಕವಿರಾಜ ಮಾರ್ಗಕಾರನ ಮಾತು ಸಾಹಿತ್ಯಕ್ಕೂ ಜನಪದ ಕಲಾ ಪ್ರಪಂಚಕ್ಕೂ ಅತ್ಯುಚಿತವಾಗಿ ಅನ್ವಯಿಸುತ್ತದೆ. ಜನಪದ ಕಲಾವಿದರು, ವ್ಯವಸ್ಥಿತವಾದ ಯಾವ ಶಾಲೆಗೆ ಹೋಗದಿದ್ದರೂ ಅವರ ಸೃಜನ ಸಾಮರ್ಥ್ಯ ಹತ್ತಾರು ನೆಲೆಗಳ ಮೂಲಕ ತುಂಬು ಹೊಳೆಯಾಗಿ ಪ್ರವಹಿಸುವುದನ್ನು ಕಾಣಬಹುದು. ‘‘ಅಗತ್ಯವೇ ನಿರ್ಮಿತಿಯ ತಾಯಿ’’ ಎಂಬ ಆರ್ಷವಾಣಿಯನ್ನು ಜನಪದ ಕಲೆಗಳು ನೆನಪಿಗೆ ತಂದುಕೊಡುತ್ತವೆ.

ಇಂತಹ ಸೃಜನಾತ್ಮಕ ಸಾಹಿತ್ಯ ಮತ್ತು ಕಲೆಗಳ ಗತಿ ಕ್ರಮೇಣ ಏನಾಯಿತು? ಆಧುನಿಕ ನಾಗರೀಕತೆ ತಲೆಯೆತ್ತುತ್ತಿದ್ದಂತೆ, ಈ ಜನಪದ ಸಾಹಿತ್ಯ ಮತ್ತು ಕಲೆಗಳಿಗೆ ಗ್ರಹಣ ಬಡಿಯತೊಡಗಿತು. ಇದನ್ನು ಆರಾಧಿಸಿಕೊಂಡು ಬಂದ ಜನರಿಗೆ ಸಾರ್ವಜನಿಕ ಮನ್ನಣೆ ಕಡಿಮೆಯಾಯಿತು. ನವೀನ ನಾಟಕ, ಸಂಗೀತ, ಚಲನಚಿತ್ರಗಳ ಬಿರುಗಾಳಿಯಿಂದ ಎದ್ದ ದೂಳಿನಲ್ಲಿ ಬಹುಪಾಲು ಜನಪದ ಕಲೆಗಳು ಕೊಚ್ಚಿ ಹೋದವು.

ಇತ್ತೀಚಿನ ಪರಿಸ್ಥಿತಿಯಲ್ಲಿ ಒಂದು ಆಶಾಭಾವನೆ ಮೂಡುತ್ತಿದೆ. ಬತ್ತಿ ಹೋಗುತ್ತಿದ್ದ ಜಾನಪದ ಜ್ಯೋತಿಯನ್ನು ಮತ್ತೆ ಬೆಳಗಿಸುವ ಪ್ರಯತ್ನ ಆರಂಭವಾದಂತಿದೆ. ಕಳೆದ ಮೂರು ನಾಲ್ಕು ದಶಕಗಳಿಂದ ಜನಪದ ಸಾಹಿತ್ಯ ಸಂರಕ್ಷಣೆಗೆ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಇಟ್ಟಿರುವ ಹೆಜ್ಜೆ ಗಮನಾರ್ಹವಾದುದು. ಜನಪದ ಗೀತೆಗಳ ಒಳ್ಳೊಳ್ಳೆಯ ಸಂಗ್ರಹಗಳು, ವಿಮರ್ಶಾ ಲೇಖನಗಳು, ಕಥಾ ಸಂಗ್ರಹಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಬರುತ್ತಿವೆ.

ಮೊದಲ ಹೆಜ್ಜೆಯಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಜನಪದ ಕಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಜಾನಪದ ಪರಿಷತ್ತು ವ್ಯವಸ್ಥಿತ ಕಾರ್ಯಕ್ರಮವೊಂದನ್ನು ಹಾಕಿಕೊಂಡಿತು. ಇದಕ್ಕೆ ಜಾನಪದ ವಿಷಯವನ್ನೇ ವಿಶೇಷವಾಗಿ ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿ ಪಡೆದ ಕೆಲವು ಯುವಕರನ್ನು ನೇಮಿಸಿ ಪ್ರತಿ ಜಿಲ್ಲೆಗೆ ಇಬ್ಬರಂತೆ ಕಳುಹಿಸಿಕೊಡಲಾಯಿತು. ಸುಮಾರು ಮೂರು ನಾಲ್ಕು ತಿಂಗಳ ಕಾಲ ನಡೆದ ಈ ಕ್ಷೇತ್ರಕಾರ್ಯದಲ್ಲಿ ೩೨ ಜನ ಮಾಹಿತಿ ಸಂಗ್ರಹಕಾರರು ಗ್ರಾಮಾಂತರ ಪ್ರದೇಶದಲ್ಲಿ ಪ್ರವಾಸ ಮಾಡಿ ಸುಮಾರು ೧೦೦೦೦ಕ್ಕೂ ಹೆಚ್ಚು ಕಲಾತಂಡಗಳನ್ನು ಬೇಟಿ ಮಾಡಿ ೧೪೫ ಕಲೆಗಳ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.

ಗೀಗಿ ಮೇಳ

ಉತ್ತರ ಕರ್ನಾಟಕದ ಜನಪ್ರಿಯ ಕಲೆ ‘ಗೀಗಿ ಮೇಳ’ ಹಾಡಿನ ಪ್ರತಿ ಸಾಲಿನ ಕೊನೆಯಲ್ಲೂ ‘ಗೀಯ ಗೀಯ ಗೀಯ’ ಎಂದು ಹಾಡುವುದರಿಂದ ಇವರು ‘ಗೀಗಿ ಮೇಳ’ದವರೆಂದೇ ಹೆಸರಾಗಿದ್ದಾರೆ.

ಗೀಗಿ ಮೇಳದವರು ಹಾಡುಗಳ ಮೂಲಕ ಜನರಿಗೆ ಧರ್ಮ, ತತ್ವ ಮತ್ತು ನೀತಿ ಬೋಧಿಸುತ್ತಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದ ಇತಿಹಾಸದ ನೂರಾರು ಕತೆಗಳನ್ನು ವಿವಿಧ ಮಟ್ಟಗಳಲ್ಲಿ ಹಾಡುವ ಈ ಕಲಾವಿದರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಎಷ್ಟೋ ಗೀತೆಗಳನ್ನು ಹಾಡುತ್ತಾರೆ. ಅಷ್ಟೇ ಅಲ್ಲ, ಸಮಕಾಲೀನ ಜೀವನದ ರೀತಿ-ನೀತಿಗಳ ಬಗೆಗೂ ಸ್ವಾರಸ್ಯವಾದ ಪದಗಳನ್ನು ಕಟ್ಟಿ ಹಾಡುತ್ತಾರೆ. ಗೀಗೀ ಪದಗಳಲ್ಲಿ ಸುದೀರ್ಘ ಪದಗಳಿಗಿಂತ ಸಣ್ಣ ಹಾಡುಗಳೇ ಹೆಚ್ಚು.

ಗೀಗಿ ಮೇಳದಲ್ಲಿ ಸಾಮಾನ್ಯವಾಗಿ ಮೂರು ಜನ ಕಲಾವಿದರಿರುತ್ತಾರೆ. ತಲೆಗೊಂದು ರುಮಾಲು, ಕಾಸೆಯುಟ್ಟು ಬಿಳಿಯ ದೋತ್ರ, ಬಿಳಿಯ ನೀಲಿ ಜುಬ್ಬ, ಅದರ ಮೇಲೊಂದು ತೋಳಿಲ್ಲದ ಅಂಕೋಳ, ಸೊಂಟಕ್ಕೆ ಕೆಂಪು ವಸ್ತ್ರದ ಪಟ್ಟಿ ಇವು ಮೇಳದವರ ಸಾಮಾನ್ಯ ವೇಷ. ಪ್ರಧಾನ ಗಾಯಕ ಹಲಗೆ ಅಥವಾ ಡಪ್ಪು ಬಾರಿಸುತ್ತಾ ಹಾಡಿದರೆ, ಉಳಿದಿಬ್ಬರು ಏಕತಾರಿ ಅಥವಾ ತುಂತುಣಿ ಬಾರಿಸುತ್ತ ಹಿಮ್ಮೇಳ ಒದಗಿಸುತ್ತಾ, ಸಾಲಿಗೊಮ್ಮೆ ‘ಗೀಯ ಗೀಯ ಗೀಯ’ ಎಂದು ಹೇಳುತ್ತಾರೆ. ಮೇಳದ ಸೊಗಸಿರುವುದೇ ಈ ಅಂತ್ಯದ ಸೊಲ್ಲಿನಲ್ಲಿ, ಹಾಡಿನ ಮಧ್ಯೆ ನಾಯಕನನ್ನು ಪ್ರಚೋಧಿಸಲು ಸಹಾಯಕರು ‘ಹಾಂ, ಹೇಳಪ್ಪಾ’, ಇತ್ಯಾದಿ ಮಾತುಗಳನ್ನು ಹೇಳುತ್ತಾರೆ. ಗ್ರಾಮೀಣರು ಹಬ್ಬ ಹರಿದಿನಗಳಲ್ಲಿ ಜಾತ್ರೆ, ವಿಶೇಷಗಳಲ್ಲಿ ಗೀಗೀ ಮೇಳದವರನ್ನು ಊರಿಗೆ ಕರೆಯಿಸಿಕೊಂಡು ಅವರಿಂದ ಹಾಡನ್ನು ಹಾಡಿಸಿ ಕೇಳಿ ಸಂತೋಷಪಡುತ್ತಾರೆ. ಈ ಕಲೆಯನ್ನು ದಕ್ಷಿಣ ಕರ್ನಾಟಕದಲ್ಲಿ ಪ್ರಮುಖವಾಗಿ ಕಂಡರೂ, ಉತ್ತರ ಕರ್ನಾಟಕದ ಗಡಿಭಾಗವಾದ ಅಥಣಿ ತಾಲ್ಲೂಕಿನ ಶ್ರೀಮತಿ ಚೌರಮ್ಮ, ಕೊಟ್ಟಲಗಿಯವರು. ಪುರುಷರಿಗೆ ಏನು ಕಡಿಮೆ ಎನ್ನುವ ನಿಟ್ಟಿನಲ್ಲಿ ಒಂದು ತಂಡವನ್ನು ಕಟ್ಟಿಕೊಂಡು ಈ ಕಲೆಯನ್ನು ಇನ್ನೂ ಜೀವಂತವಾಗಿರಲು ಕಾರಣರಾಗಿದ್ದಾರೆ. ಪರಶುರಾಮ ಬಡಿಗೇರ ಹಾಗೂ ತಂಡದವರು ಮತ್ತು ಸುಖದೇವ ಸಾವಳಗಿ ನೇತೃತ್ವದಲ್ಲಿ ಒಂದು ತಂಡವನ್ನು ಕಟ್ಟಿಕೊಂಡು ಈ ಕಲೆಯನ್ನು ಬೆಳೆಸುತ್ತಾ ಸಾಗುತ್ತಿದ್ದಾರೆ.

ಕರಡಿ ಮಜಲು

ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುವ ಜನಪ್ರಿಯ ಕಲೆ ‘ಕರಡಿ ಮಜಲು’ ಇದನ್ನೇ ದಕ್ಷಿಣ ಕರ್ನಾಟಕದ ಕಡೆ ‘ಕರಡಿಮೇಳ’ ಎಂದು ಕರೆಯುತ್ತಾರೆ. ಇದು ಉದ್ಯೋಗಿ ಕಲೆಯಾಗಿ ಬೆಳೆದು ಬಂದಿದೆ.

ಜಾತ್ರೆ ಉತ್ಸವಗಳಲ್ಲಿ, ದೇವರ ಪೂಜಾ ಸಮಯದಲ್ಲಿ ಮತ್ತು ಧಾರ್ಮಿಕ ಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಾಗ ಕರಡಿ ವಾದ್ಯ ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮದುವೆ, ಹೂ ಮುಡಿಸುವ ಕಾರ್ಯ, ನಾಮಕರಣ ಮುಂತಾದ ಮಂಗಳ ಕಾರ್ಯಗಳಲ್ಲೂ ಬಳಕೆಯಲ್ಲಿದೆ. ಕರಡಿ ವಾದ್ಯದ ಜೊತೆಯಲ್ಲಿ ಸನಾದಿ, ಶೃತಿ, ತಾಳಗಳನ್ನು ಬಳಸಿದರೆ ಮತ್ತೆ ಕೆಲವು ಕಡೆ ದಿಮ್ಮು ಚೌಗಡಗಳನ್ನು ಬಳಸುತ್ತಾರೆ.

ಕರಡಿ ವಾದ್ಯದ ಕಲಾವಿದರೂ ಕಾಸೆಪಂಚೆ ಕಸೆ ಅಂಗಿ, ತಲೆಗೆ ಪೇಟ, ಹಣೆಗೆ ವಿಭೂತಿ ಧರಿಸಿರುತ್ತಾರೆ. ನಡುವಿಗೆ ಕೆಂಪು ವಸ್ತ್ರವನ್ನು ಕಟ್ಟಿರುತ್ತಾರೆ. ನಂದೀ ಧ್ವಜ ಕುಣಿತಕ್ಕೆ ಕರಡಿ ವಾದ್ಯದ ಮೇಳ ಬೇಕೇ ಬೇಕು. ನಿಧಾನವಾಗಿ ಪ್ರಾರಂಭವಾದ ಕರಡಿ ಮಜಲಿನ ಗತ್ತು-ಗತಿಗಳು ಹಂತ ಹಂತವಾಗಿ ಏರಿ ಕ್ರಮೇಣ ಅದೇ ಗತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ಇದರಲ್ಲಿ ಒಂದ್ಹೆಜ್ಜೆ ಕುಣಿತ, ಎರಡ್ಹೆಜ್ಜೆ ಕುಣಿತ, ಮೂರೆಜ್ಜೆ ಕುಣಿತ, ಮಂಡಲ ಕುಣಿತ ಮುಂತಾದ ಗತ್ತುಗಳಿವೆ.

ಈ ಕಲೆಯನ್ನು ನಾವು ಅಥಣಿ ಪರಿಸರದಲ್ಲೂ ಕೂಡ ಕಾಣುತ್ತೇವೆ. ಅಥಣಿ ತಾಲ್ಲೂಕಿನ ಸಂಕೋನಟ್ಟಿ ಗ್ರಾಮದ ರಾಯಪ್ಪಾ ಧರಿಗೌಡ ಇವರು ಪ್ರಸಿದ್ಧರು ಎಂದು ಹೇಳಬಹುದು. ಇಂತಹ ಇನ್ನೂ ಅನೇಕ ಕಲಾವಿದರು ಕರಡಿ ಮಜಲು ಕಲೆಯನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ ಮತ್ತು ಶಿವಪ್ಪ ಕುಂಬಾರ ಇವರ ನೇತೃತ್ವದಲ್ಲಿಯೂ ಕರಡಿ ಮಜಲು ಕಲೆಯನ್ನು ಪೋಷಿಸಿಕೊಂಡು ಸಾಗುತ್ತಿದ್ದಾರೆ.

ಡೊಳ್ಳು ಕುಣಿತ

ಜನಪದ ಕಲೆಗಳಲ್ಲಿಯೇ ‘ಗಂಡು ಕಲೆ’ ಎನಿಸಿರುವ ಡೊಳ್ಳುಕುಣಿತ ಪುರುಷರಿಗೆ ಮೀಸಲಾದ ಕಲೆ. ಆದರೆ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ತಂಡಗಳನ್ನು ನಾವಿಂದು ಕಾಣಬಹುದು. ಈ ಕಲೆಯನ್ನು ನಾವು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗಡಿಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಲ ತಲಾಂತರಗಳಿಂದ ದೈವೀ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲ ಅದರ ಅಭ್ಯಾಸವನ್ನು ಮಾಡುತ್ತಾರೆ.

ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿಂದ ಹಿಡಿದು ಹತ್ತು- ಹನ್ನೆರಡು ಜನರಿರುತ್ತಾರೆ. ಹಿನ್ನಲೆಯಲ್ಲಿ ತಾಳ, ತಪ್ಪಡಿ ನಿಪ್ಪರೆ (ಕಹಳೆ)  ಜಾಗಟೆಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಒಂದು ಗಾದೆಯಿದೆ. ‘ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು’ ಎಂದು ಹೇಳುತ್ತಾರೆ. ಡೊಳ್ಳು ಕುಣಿತದಲ್ಲಿ ನಾನಾ ರೀತಿಗಳಿವೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ, ಕುಳಿತು ಬಾರಿಸುವುದು, ಲಾಗ ಹಾಕುವುದು, ಹಾರಿ ಬಾರಿಸುವುದು, ಮಂಡಿಬಡಿತ, ಮರಗಾಲು ಬಡಿತ, ಗಾಡಿ ಚಕ್ರದ ಬಡಿತ ಮುಂತಾದ ವಿಧಗಳನ್ನು ಕಾಣಬಹುದು. ಕುರುಬರಿಗೆ ಡೊಳ್ಳು ಕುಣಿತ ‘ದೇವರ’ ಭಜನೆ ಇದ್ದಂತೆ ಎಂದು ಹೇಳುತ್ತಾರೆ. ಈ ಕಲೆಯಲ್ಲಿ ಕುಣಿತವಷ್ಟೇ ಅಲ್ಲ, ಒಳ್ಳೆಯ ಸಾಹಿತ್ಯವೂ ಇದೆ. ಈ ಹಾಡುಗಳಲ್ಲಿ ಹಾಲು ಮತ ಪುರಾಣ, ಅನಸೂಯಾ ಪದ, ಮಾರ್ಕಂಡೇಯ ಚರಿತ್ರೆ, ನಿಂಬಕ್ಕನ ಪದ, ಪಾಂಡವರ ಪದ, ಬೀರಲಿಂಗೇಶ್ವರನ ಪದ, ಇಂತಹ ಹಲವಾರು ಪ್ರಸಂಗಗಳು ಸೇರಿವೆ.

ಸ್ವಾಮಿ ನಮ್ಮ ದೇವರು ಬಂದಾರು ಬನ್ನಿರೋ

ಶಿವ ಶಿವ ನಮಃ ದೇವರು ಬಂದಾವ್ರ ಬನ್ನಿರೋ, ಹೀಗೆ ಸಾಮಾನ್ಯವಾಗಿ ಪ್ರತಿ ಪದ್ಯದ ಪ್ರಾರಂಭದಲ್ಲಿ ಬರುವ ಗಣಸ್ತುತಿಯ ನಂತರ ಕಥಾಭಾಗ ಪ್ರಾರಂಭವಾಗುವುದು. ಆರಂಭದಲ್ಲಿ ಡೊಳ್ಳಿನ ಗತ್ತು ‘ಬ್ರಹ್ಮ ದೊಡ್ಡಾವ’ ಎಂಬ ಘೋಷಣೆಯನ್ನು ಹುಟ್ಟಿಸಿದರೆ, ಮುಕ್ತಾಯಕ್ಕೆ ಬರುವ ಹೊತ್ತಿಗೆ ‘ಹಿಡಿದ್ಹ್ಯಾಂಗ ಬಿಟ್ಯಾಂಗ’ ಎಂಬಂತೆ ಕೇಳುವ ಪೆಟ್ಟು ಹಾಕುತ್ತಾ ‘ಡುಬ್ಬದಾರಿ ಡುಬ್ಬುದ್ಹುಂ ಡುಬ್ಬುಹ್ಹುರಿ’ ಎಂದು ತೀರ್ಮಾನ ಹೇಳುವಂತೆ ಗತ್ತನ್ನ ಮುಗಿಸುತ್ತಾರೆ.

ನಾವು ಅಥಣಿ ತಾಲ್ಲೂಕಿನಲ್ಲಿಯೇ ಈ ಡೊಳ್ಳಿನ ಅನೇಕ ಕಲಾವಿದರನ್ನು ಕಾಣುತ್ತೇವೆ. ಅಂತಹವರಲ್ಲಿ ಪ್ರಮುಖರೆಂದರೆ ಬೀರಪ್ಪಾ ಯಕ್ಕಂಚಿ ಹಾಗೂ ಅವರ ತಂಡದವರ ಕುಣಿತ ಬಹು ಸೊಗಸಾದ ರೀತಿಯಲ್ಲಿ ತಮ್ಮ ಕಲೆಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಮದಬಾವಿ, ಅರಟಾಳ, ಮುರಗುಂಡಿ, ಕಟಗೇರಿ, ಶಿವನೂರ, ಗ್ರಾಮಗಳಲ್ಲಿ ಅನೇಕ ಕಲಾವಿದರು ಈ ಡೊಳ್ಳು ಕುಣಿತ ಕಲೆಯನ್ನು ಉನ್ನತೀಕರಿಸುತ್ತಿದ್ದಾರೆ.

ಬಯಲಾಟ

ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯತೆಯಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯಗಳು ಮುಪ್ಪರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ.

ಬಯಲಾಟದಲ್ಲಿ ‘ದೊಡ್ಡಾಟ’ ಮತ್ತು ‘ಸಣ್ಣಾಟ’ಗಳೆಂದು ಸ್ಥೂಲವಾಗಿ ಎರಡು ಭಾಗ ಮಾಡಿಕೊಳ್ಳಬಹುದು. ಬಯಲಾಟದಲ್ಲಿ ‘ದೊಡ್ಡಾಟ’ವನ್ನು ‘ಮೂಡಲಪಾಯ’, ‘ಅಟ್ಟದಾಟ’, ‘ಬೈಲ್ಕತೆ’ ಎಂದು ಕರೆಯುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದಿರುವ ಈ ಆಟಗಳು ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತವೆ. ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು.

ಬಯಲಾಟದಲ್ಲಿ ಸಣ್ಣಾಟಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ದೊಡ್ಡಾಟದ ಮೂಲ ಅಂಶಗಳನ್ನಿಟ್ಟುಕೊಂಡು ಸಣ್ಣಾಟವನ್ನು ಆಡಲು ಪ್ರಾರಂಭಿಸಿದರು. ಈ ಸಣ್ಣಾಟವನ್ನು ಉತ್ತರ ಕರ್ನಾಟಕದಲ್ಲಿ ನಾವು ಕಾಣುತ್ತೇವೆ.

ಬಯಲಾಟಕ್ಕೆ ಹೆಸರುವಾಸಿಯಾಗಿರುವ ಕಲಾ ತಂಡಗಳಲ್ಲಿ ಅಥಣಿ ತಾಲ್ಲೂಕಿನಲ್ಲಿರುವ ಸಂಕೋನಟ್ಟಿಯ ಶ್ರೀ ಬಸವೇಶ್ವರ ನಾಟ್ಯ ಸಂಘವು ಒಂದು. ಮತ್ತು ಅಥಣಿ ತಾಲ್ಲೂಕಿ ನಲ್ಲಿರುವ ನಾಟಕ ಕಂಪನಿಗಳಿಂದ ಶ್ರೀಕೃಷ್ಣ ಪಾರಿಜಾತ, ದೇವಿ ನಾಟಕ ಮುಂತಾದ ನಾಟಕದ ತಂಡಗಳನ್ನು ನಾವು ಅಥಣಿ ಸುತ್ತಮುತ್ತಲಿನಲ್ಲಿ ಕಾಣುತ್ತೇವೆ. ಇಂತಹ ಕಲಾವಿದರಿರುವುದರಿಂದಲೇ ಇನ್ನೂ ಇಂತಹ ನಾಟಕಗಳು ಉಳಿದಿವೆ ಎಂದು ಹೇಳಬಹುದು.

ಚಮಕೇರಿ ಗ್ರಾಮದ ಶಿವಪ್ಪಾ ಕುಂಬಾರ ಹಾಗೂ ಸಂಗಡಿಗರು ನಡೆಸಿಕೊಡುವ ರಾಧಾ ನಾಟಕ ಬಹು ಪ್ರಸಿದ್ದಿಯನ್ನು ಪಡೆದಿದೆ. ಮಲ್ಲಯ್ಯ ಸ್ವಾಮಿಗಳು ಅಥಣಿ ಇವರ ಶ್ರೀಕೃಷ್ಣ ಪಾರಿಜಾತ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಕಟಗೇರಿಯಲ್ಲಿಯೂ ಕೂಡಾ ಶಿವಯೋಗಿ ಮುರುಘೇಂದ್ರ ಜನಪದ ಕಲಾಸಂಘ, ಜನಪದ ಕಲೆಯನ್ನು ಬೆಳೆಸಿಕೊಂಡು ಬರುವಲ್ಲಿ ಮಹತ್ವವನ್ನು ಪಡೆದಿದೆ. ಬಡಚಿ ಗ್ರಾಮದಲ್ಲಿಯ ಬಯಲಾಟ ಕಂಪನಿಗಳು ಸತ್ಯವಾನ ಸಾವಿತ್ರಿ, ಮಾರ್ಕಂಡೇಯ ಪುರಾಣ ಮುಂತಾದ ಪೌರಾಣಿಕ ನಾಟಕಗಳನ್ನಾಡುತ್ತಾರೆ.

ತಾಸೇವಾದನ

ಹಲ್ಯಾಳ ಗ್ರಾಮದ ಶ್ರೀ ಶಶಿಧರ ರಾಮಪ್ಪಾ ಭಜಂತ್ರಿ ಹಾಗೂ ಸಂಗಡಿಗರು ಈ ಕಲೆಯನ್ನು ಬೆಳೆಸುತ್ತಾ ಪೋಷಿಸಿಕೊಂಡು ಹೊರಟಿರುವರು. ಒಟ್ಟು ಈ ತಂಡದಲ್ಲಿ ೬ ಜನರಿದ್ದು ಈ ವಾದನವನ್ನು ಕೇಳುವವರಿಗೆ ಬಹಳ ಮನಮೋಹಕವಾಗಿ ಮನಸ್ಸಿಗೆ ಹಿತವೆನಿಸುತ್ತದೆ. ಈ ಕಲೆಯು ಈ ಭಾಗದಲ್ಲಿ ಬಹುವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಭಜನೆ

ದೈವಾರಾಧನೆಯಲ್ಲಿ ಭಜನೆಗೆ ಮಹತ್ವದ ಸ್ಥಾನವಿದೆ. ದೇವರನ್ನು ಕುರಿತು ಒಂಟಿಯಾಗಿಯೋ, ಗುಂಪಿನಲ್ಲೋ ಭಕ್ತಿಯಿಂದ ಕುರಿತು ಸ್ತುತಿಸುವ ಕ್ರಮಕ್ಕೆ ‘ಭಜನೆ’ ಎನ್ನುತ್ತಾರೆ. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಭಜನಾಮಂಡಳಿಗಳಿವೆ. ಭಜನೆಯಲ್ಲಿ ಮಕ್ಕಳಿಂದ ಮುದುಕನವರೆಗೆ ಎಲ್ಲಾ ವಯಸ್ಸಿನವರು ಸೇರಿಕೊಳ್ಳಬಹುದು. ಹಾರ್ಮೋನಿಯಂ, ತಾಳ, ತಬಲ, ದಮ್ಮಡಿ, ಏಕತಾರಿ ಮುಂತಾದ ವಾದ್ಯಗಳ ಹಿನ್ನಲೆ ಯಲ್ಲಿ ದೇವರ ಸ್ತುತಿ ತತ್ವಗೀತೆ, ವಚನ ಮೊದಲಾದವನ್ನು ಹಾಡುತ್ತಾರೆ.

ಭಜನೆ ಪ್ರಾರಂಭಿಸುವಾಗ ಮತ್ತು ಪ್ರತಿಯೊಂದು ಹಾಡು ಪದ ಮುಗಿದ ಕೂಡಲೇ ಶಿವಭಜನೆಯಲ್ಲಾದರೆ, ‘ಜಯಾ ಜಯ ನಮಃ ಪಾರ್ವತಿ ಪತೀ’ ಎಂದು ಮುಖಂಡನಾದವನು ಹೇಳಿದರೆ ಉಳಿದವರು ‘ಹರಹರ ಮಹಾದೇವ’ ಎಂದು ಒಟ್ಟಿಗೆ ಹೇಳುತ್ತಾರೆ.

ಅಥಣಿ ನಗರದಲ್ಲಿ ಮತ್ತು ಅಥಣಿ ತಾಲ್ಲೂಕಿನಲ್ಲಿ ಅನೇಕ ಭಜನಾ ಮಂಡಳಿಗಳನ್ನು ನಾವು ನೋಡುತ್ತೇವೆ. ಅಂತಹ ತಂಡಗಳಲ್ಲಿ ಪ್ರಮುಖರೆಂದರೆ ಸಭಾನಂದ ಶಿವಬಸು ಮಧಬಾವಿ ಹಾಗೂ ತಂಡದವರ ಶಿವಭಜನೆ ಅತ್ಯಂತ ಮನಸ್ಸಿಗೆ ಮುದ ನೀಡುವಂತ ಭಜನಾ ತಂಡ. ಶಿವನೂರ ಗ್ರಾಮದ ಭಜನಾ ಮಂಡಳಿ ಮತ್ತು ಕಟಗೇರಿ ಗ್ರಾಮದ ಭಜನಾ ಮಂಡಳಿಗಳು ಭಜನೆಯ ಮುಖಾಂತರ ಗ್ರಾಮೀಣ ಭಾಗದ ಜನರಿಗೆ ಆಧ್ಯಾತ್ಮಿಕ ರುಚಿಯನ್ನು ತೋರಿಸುತ್ತಾ ಮನರಂಜನೆಯನ್ನು ಒದಗಿಸುತ್ತಾ ಸಾಗುತ್ತಿದ್ದಾರೆ.

ಖಣಿ ವಾದನ

ಅನೇಕ ಕಲೆಗಳಲ್ಲಿ ಖಣಿ ವಾದನ ಕೂಡಾ ಒಂದು. ಅಥಣಿ ಪರಿಸರದಲ್ಲಿ ಈ ಖಣಿ ವಾದನ ಪ್ರಮುಖವಾದದ್ದು. ಈ ಖಣಿ ವಾದನವನ್ನು ತಮ್ಮಣ್ಣಪ್ಪ ಗಾಡಿವಡ್ಡರ ಹಾಗೂ ಸಂಗಡಿಗರು ಬಾರಿಸುತ್ತಾ ಜನರನ್ನು ಆಕರ್ಷಿಸುತ್ತಾ ಬಂದಿದ್ದಾರೆ. ತಮ್ಮಣ್ಣಪ್ಪ ಗಾಡಿವಡ್ಡರರವರು ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಕೂಡಾ ಈ ಕಲೆಯನ್ನು ಬೆಳೆಸಿಕೊಂಡು ಹೋಗುತ್ತಿರುವುದು ಒಂದು ವಿಶೇಷವೇ ಸರಿ ಎಂದು ಹೇಳಬಹುದು. ಈ ತಂಡದಲ್ಲಿ ೬ ಜನ ಕಲಾವಿದರಿರುತ್ತಾರೆ. ಈ ಕಲೆಯನ್ನು ಪೋಷಿಸುತ್ತಿರುವ ಶ್ರೀ ತಮ್ಮಣ್ಣಪ್ಪ ಗಾಡಿವಡ್ಡರರ ಕಾರ್ಯ ಶ್ಲಾಘನೀಯವಾದುದು.

ಚೌಡಿಕೆ

ಶಕ್ತಿ ದೇವತೆಯ ಆರಾಧನಾ ಸಂಪ್ರದಾಯದಲ್ಲಿ ಚೌಡಿಕೆಯೂ ಒಂದು. ದೇವಿಯ ಮಹಿಮಾವಳಿಗಳನ್ನು ಭಕ್ತಿಯಿಂದ ಸ್ತುತಿಸುವಾಗ ಹಿನ್ನಲೆಯಲ್ಲಿ ನುಡಿಸುವ ವಾದ್ಯವೇ ‘ಚೌಡಿಕೆ’. ಈ ಕಲೆಯನ್ನು ನಾವು ಹೆಚ್ಚಾಗಿ ಕಾಣುವುದು ಬೆಳಗಾವಿ ಜಿಲ್ಲೆಯಲ್ಲಿಯೇ. ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕೆಯನ್ನು ಕುರಿತು ಪದಗಳನ್ನು ರಚಿಸಿ ಅವುಗಳನ್ನು ಚೌಡಿಕೆ ವಾದ್ಯದೊಂದಿಗೆ ಹಾಡುತ್ತಾರೆ. ಚೌಡಿಕೆ ನುಡಿಸುವವರನ್ನು ‘ಜೋಗಿ’ ಜೋಗಿತಿ’ ಎಂದು ಕರೆಯುತ್ತಾರೆ. ಇವರು ಎಲ್ಲಮ್ಮ ದೇವಿಯ ಸೇವೆಗಾಗಿ ದೀಕ್ಷೆ ಪಡೆದವರು.

ಚೌಡಿಕೆಯವರು ರೇಣುಕೆಯ ಮಹಿಮಾವಳಿಗಳನ್ನು ಹಾಡುವುದರ ಜೊತೆಗೆ, ಜನಪದ ಕಥಾ ಪ್ರಸಂಗಗಳನ್ನು ನಡೆಸುತ್ತಾರೆ. ಪ್ರಧಾನ ಗಾಯಕನು ಚೌಡಿಕೆ ಹಿಡಿದು ಹಾಡಲು ಪ್ರಾರಂಭಿಸುತ್ತಾನೆ. ಅವನ ಅಕ್ಕಪಕ್ಕದಲ್ಲಿ ಶೃತಿಗಾಯಕ ಮತ್ತು ಹಿಮ್ಮೇಳಕ್ಕೆ ಇಬ್ಬರೂ ನಿಂತಿರುತ್ತಾರೆ. ಪ್ರಧಾನ ಗಾಯಕನು

‘‘ಆದಿಯಲ್ಲಿ ರೇಣುಕೆಯಾಗಿ
ತ್ರೇತದೊಳಗೆ ಜಾನಕಿಯಾಗಿ
ದ್ವಾಪರದಲ್ಲಿ ದ್ರೌಪದಿಯಾಗಿ
ಕಲಿಯುಗದಲ್ಲಿ ಎಲ್ಲಮ್ಮನೆನಿಸಿದೆ’’

-ಹೀಗೆ ಹಾಡಿದ ನಂತರ ಕತೆಯ ಮುಕ್ತಾಯದಲ್ಲಿ ‘ಉಧೋ’ ‘ಉಧೋ’ ಎಂದು ನುಡಿಯುತ್ತಾರೆ.

ಇಂತಹ ಚೌಡಿಕೆ ಪದಗಳನ್ನು ಹಾಡುವವರಲ್ಲಿ ಮಹಿಳೆಯರನ್ನು ಹೆಚ್ಚಾಗಿ ಕಾಣುತ್ತವೆ. ಅಥಣಿ ತಾಲ್ಲೂಕಿನ ಕೊಕಟನೂರ, ಎಲ್ಲಮ್ಮದೇವಿಯ ಪುಣ್ಯ ಸ್ಥಾನ. ಈ ಕೊಕಟನೂರ ಗ್ರಾಮದ ರಾಧಾಬಾಯಿ ಮಾದರ ಹಾಗೂ ಸಂಗಡಿಗರು ಚೌಡಿಕೆ ಪದವನ್ನು ತುಂಬಾ ಸೊಗಸಾಗಿ ಹಾಡುತ್ತಾರೆ. ಅದೇ ರೀತಿ ಮದಬಾವಿ ಗ್ರಾಮದ ಶ್ರೀಮತಿ ಕಮಲವ್ವ ಶಿವಪ್ಪ ಕಾಂಬಳೆ ಹಾಗೂ ಸಂಗಡಿಗರು ನಡೆಸಿಕೊಡುವ ಚೌಡಕಿ ಪದಗಳು ತುಂಬಾ ಪ್ರಸಿದ್ದಿಯನ್ನು ಪಡೆದಿವೆ ಮತ್ತು ಅಥಣಿ ತಾಲ್ಲೂಕಿನ ಅನಂತಪುರ, ಕೊಕಟನೂರ, ಮದಬಾವಿ ಮತ್ತು ಅಥಣಿ ನಗರದಲ್ಲಿಯೂ ಕೂಡಾ ಈ ಚೌಡಿಕೆಯವರನ್ನು ನಾವು ಕಾಣುತ್ತೇವೆ.

ಈ ಭಾಗದಲ್ಲಿ ಅಂದರೆ ಕಾಗವಾಡ ಭಾಗದಲ್ಲಿ ಚೌಡಿಕೆಯನ್ನು ತೆಗೆದುಕೊಂಡು ಬರುವ ಜೋಗತಿಯರ ಜೋಗತಿ ಕುಣಿತ ಅದೇ ಹೆಸರಿನಿಂದ ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಹಲಗೆ ವಾದನ

ಅಥಣಿ ತಾಲ್ಲೂಕಿನ ಮೇಳೆ ಗ್ರಾಮದ ಶ್ರೀ ಗೋಪಾಲಮಾದರ ಬಾರಿಸುವ ಹಲಗೆ ವಾದನ ಜನರ ಮೆಚ್ಚುಗೆಯನ್ನು ಪಡೆದಿದೆ. ಹಲಗೆಯ ನಾದಕ್ಕೆ ಎಂತವನ ಮನಸ್ಸಾದರೂ ಸೋಲಬೇಕು ಅಂತಹ ವಾದನವನ್ನು ಹಲಗೆ ಬಾರಿಸುವವರು ಬಾರಿಸುತ್ತಾರೆ.

ಸುಗಮ ಸಂಗೀತ

ಸುಮಗ ಸಂಗೀತದಲ್ಲಿ ತೇವರಟ್ಟಿ ಗ್ರಾಮದ ಕೈಲಾಸ ಮದಬಾವಿ ಇವರು ೫ ಜನರ ತಂಡವನ್ನು ಕಟ್ಟಿಕೊಂಡು ಆ ಕಲೆಯನ್ನು ಬೆಳೆಸುತ್ತಾ ಸಾಗುತ್ತಿದ್ದಾರೆ. ಕೈಲಾಸ ಮದಬಾವಿಯವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಈ ಕಲೆಯನ್ನು ಪೋಷಿಸಿಕೊಂಡು ಹೋಗುತ್ತಿರುವುದು ಸಂತೋಷವೇ ಸರಿ.

ಇಂತಹ ಅನೇಕ ಜನಪದ ಕಲೆಗಳನ್ನು ಅಥಣಿ ನಗರ ಮತ್ತು ಅಥಣಿ ತಾಲ್ಲೂಕಿನ ಅನೇಕ ಕಲಾವಿದರು ಕಲೆಯನ್ನು ಬೆಳೆಸುತ್ತಾ ಪೋಷಿಸುತ್ತಾ ಸಾಗುತ್ತಿದ್ದಾರೆ. ಅಥವಾ ತಾಲ್ಲೂಕಿನ ಕಟಗೇರಿ ಗ್ರಾಮದಲ್ಲಿ ಸ್ಥಾಪಿತವಾಗಿರುವ ಶ್ರೀಶೈಲ ಕಂಬಾಗಿಯವರ ನೇತೃತ್ವದಲ್ಲಿ ಸಾಗುತ್ತಿರುವ ಶಿವಯೋಗಿ ಮುರಘೇಂದ್ರ ಜನಪದ ಕಲಾ ಸಂಘವು ಕೂಡಾ ಜನಪದ ಕಲೆಗಳನ್ನು ಬೆಳೆಸಿಕೊಂಡು ಹೋಗುವಲ್ಲಿ ವಿಶಿಷ್ಟತೆಯನ್ನು ಪಡೆದುಕೊಂಡಿದೆ.