ಭಾರತ ವಿವಿಧ ಜನಾಂಗ, ಧರ್ಮ, ಭಾಷೆ, ಸಂಸ್ಕೃತಿಗಳ ಬಹುರೂಪಿ ಸಮಾಜವಾಗಿದ್ದು ಇತರರೊಡನೆ ಅನ್ಯೋನ್ಯತೆಯಿಂದ ಬದುಕುವುದಿದ್ದರೂ ಸಾಮಾಜಿಕ ನಿರ್ಬಂಧನೆಗಳು ಇನ್ನೂ ಸಂಪೂರ್ಣವಾಗಿ ಸುಧಾರಣೆಯಾಗಿಲ್ಲ. ಆದರೆ ಮಾನವ ಸಮಾಜ ಜೀವಿಯಾಗಿರುವುದರಿಂದ ಮತ್ತು ಸಂಘ ಜೀವಿಯಾಗಿರುವುದರಿಂದ ಇತರರೊಡನೆ ಜೊತೆಗೂಡಿ ಬದುಕುವಾಗ ಮಾತ್ರ, ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಆಕಾಂಕ್ಷೆಗಳ ಈಡೇರಿಕೆಗಾಗಿಯೇ ಸಮಾಜವು ವೈವಿಧ್ಯತೆಯಿಂದ ಕೂಡಿದೆ. ಏಕೆಂದರೆ ಯಾವುದೇ ಒಂದು ಸಮಾಜದ ರಚನೆ ಅಲ್ಲಿಯ ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ. ಇಂತಹ ಸಂಸ್ಕೃತಿಯ ಮೇಲೆ ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳು ನಿರ್ಧಾರಿತವಾಗುತ್ತದೆ. ಅದರ ಮೇಲೆ ಅಲ್ಲಿನ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಅಂಶಗಳು ಪ್ರಭಾವ ಬೀರುತ್ತವೆ. ಆದ್ದರಿಂದ ಸಮಾಜದಲ್ಲಿ ವಾಸಿಸುವ ಮಾನವನ ಸಾಮಾಜಿಕ ಸ್ಥಿತಿಗತಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ.

ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡು ವೈವಿಧ್ಯಮಯವಾದ ಧರ್ಮಗಳ, ಪುರಾಣಗಳ, ಶಾಸ್ತ್ರ, ದರ್ಶನಗಳ ಜಲ ಸಮೃದ್ದಿ ನದಿಗಳಿಂದ ಪುನೀತಗೊಂಡ ಪಾವನ ಪವಿತ್ರ ಭೂಮಿ ಅಥಣಿ. ಆರ್ಥಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳಿಂದ ಇಂತಹ ಭೂಮಿಯನ್ನು ಕಟ್ಟಿ ಬೆಳೆಸಿದ್ದಾರೆ. ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಅಡಿಯಲ್ಲಿ ಸಮೃದ್ದಿ ನೆಮ್ಮದಿಯಿಂದ ಇಲ್ಲಿಯ ಜನರು ಬಾಳಿ ಬದುಕಿದ್ದಾರೆ. ನಮ್ಮ ಭಾರತ ಹಳ್ಳಿಗಳ ನಾಡು. ಇಲ್ಲಿನ ಗ್ರಾಮ ಸಮುದಾಯ ತನ್ನದೇ ಆದ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿಶ್ವದಲ್ಲಿಯೇ ಶ್ರೀಮಂತವಾದ ಸಂಸ್ಕೃತಿಯಿಂದ ಪ್ರಸಿದ್ಧವಾಗಿದೆ. ಈ ಸಂಸ್ಕೃತಿಯು ವೈವಿಧ್ಯತೆ ಹಾಗೂ ಐಕ್ಯತೆಯ ಎರಡೂ ಲಕ್ಷಣಗಳನ್ನು ಹೊಂದಿದೆ. ಆದರೂ ವಿವಿಧತೆಯಲ್ಲಿ ಏಕತೆಯನ್ನು ಮೆರೆದಿದೆ.

ಈ ಹಿನ್ನಲೆಯಲ್ಲಿ ಭಾರತದಲ್ಲಿನ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು, ನೂರಾರು ಹಳ್ಳಿಗಳನ್ನು ಹೊಂದಿದಂತಹ ಒಂದು ತಾಲೂಕು ಪ್ರದೇಶವಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಪ್ರದೇಶದಲ್ಲಿ ಬರುತ್ತದೆ. ಇಲ್ಲಿನ ಪ್ರತಿ ೪೦ ಕಿ.ಮೀ. ಜನರ ಭಾಷೆ, ವಿವಾಹ, ಕುಟುಂಬ ಪದ್ಧತಿ ಧಾರ್ಮಿಕ ಭಾವನೆಗಳು, ಸಂಪ್ರದಾಯ, ಉಡುಗೆ ತೊಡುಗೆ ಮುಂತಾದ ವಿಷಯಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಗಳಿರುತ್ತವೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಅಥಣಿ ಪರಿಸರವು ಕನ್ನಡ, ಮರಾಠಿ ಸಂಸ್ಕೃತಿಗಳ ಮಿಶ್ರಣವಾಗಿದೆ ಹಾಗೂ ಕನ್ನಡ ಮರಾಠಿ ಭಾಷೆಗಳ ಸಂಬಂಧ ವಿಶೇಷವಾಗಿದೆ.

ಈ ಆಧಾರದ ಮೇಲೆ ಅಥಣಿ ಪರಿಸರದ ಸಾಮಾಜಿಕ ಸ್ಥಿತಿಗತಿಯನ್ನು ಈ ಲೇಖನದ ಮೂಲಕ ವಿವರಿಸುವ ಪ್ರಯತ್ನ ಮಾಡಲಾಗಿದೆ.

೧. ಭಾಷೆ : ಅಥಣಿ ಪರಿಸರವು ಸಂಪೂರ್ಣ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯ ಸಮ್ಮಿಶ್ರಣ ಕಂಡುಬರುತ್ತದೆ. ಉದಾ: ಅಂಕಿ ಹಾಗು ಸಮಯ ಹೇಳುವಾಗ ನೂರು ರೂಪಾಯಿಗೆ ಶಂಭರ ರೂಪಾಯಿ ಹಾಗೂ ಸಮಯ ಹೇಳುವಾಗ ಒಂದುವರೆ ಘಂಟೆಗೆ ದೇಡ, ಪಾವನೆ ದೊನ, ಸವಾಬಾರ ಎಂದು ಹೇಳುತ್ತಾರೆ. ಬೀಗರಿಗೆ ಪೌಣೇರು ಬಂದಾರ, ಏನು ಅನ್ನುವುದಕ್ಕೆ ಯಾನ, ಏಕೆ ಅನ್ನುವುದಕೆ ಯಾಕ, ಸುಮ್ಮುಕುಂಡ್ರುನೆ ಅನ್ನುವುದಕ್ಕೆ ಗಪ್ಪಕೂಡ. ಅಂಗಡಿಗೆ ದುಕಾಣ ಅನ್ನುವುದು ಹೀಗೆ ಸ್ವಾಭಾವಿಕವಾಗಿ ಮಾತಾಡುವ ಭಾಷೆ ಕಂಡುಬರುತ್ತದೆ. ಇಂತಹ ಗ್ರಾಮೀಣ ಭಾಷೆಯೇ ನಮ್ಮ ಸಮಾಜದಲ್ಲಿನ ಶ್ರೀಮಂತ ಸಂಸ್ಕೃತಿಯು ಹಾಗೆಯೇ ಉಳಿದುಕೊಂಡು ಬರಲು ಕಾರಣವಾಗಿದೆ.

೨. ಉಡುಗೆತೊಡುಗೆ : ಇಲ್ಲಿಯ ಜನರು ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಾರೆ. ಸ್ತ್ರೀಯರು ಕಚ್ಚಿಹಾಕಿದ ಸೀರೆ, ಹಣೆ ತುಂಬ ಕುಂಕುಮ, ದೊಡ್ಡ ಕಾಲುಂಗುರ, ಕರಿಮಣಿಯ ಮಂಗಳ ಸೂತ್ರ ಧರಿಸಿದರೆ, ಪುರುಷರು ಸಾಮಾನ್ಯವಾಗಿ ಧೋತರ ಟೋಪ್ಪಿಗೆ ಹಾಗೂ ಟಾವೆಲನ್ನು ಹಾಕುತ್ತಾರೆ. ಹೆಣ್ಣುಮಕ್ಕಳು, ಪಂಜಾಬಿ ಡ್ರೆಸ್, ಮುಸ್ಲಿಂರಲ್ಲಿ ಬುರ್ಖಾ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇದನ್ನು ನೋಡಿದಾಗ ಭಾರತೀಯ ಸಮಾಜದಲ್ಲಿನ ಹಳೆಯ ಸಂಪ್ರದಾಯಗಳು, ಆಚರಣೆಗಳು ಹಾಗೆಯೇ ಉಳಿದುಕೊಂಡು ಬಂದಿವೆ.

೩. ಹಬ್ಬಗಳು : ಅಥಣಿ ಪರಿಸರದಲ್ಲಿ ವೀರಶೈವರು, ಬ್ರಾಹ್ಮಣರು, ಮರಾಠರು, ಅಂಬಿಗರು, ತಳವಾರರು, ವಡ್ಡರು, ಕುರುಬರು, ಬೇಡರು, ಸಮಗಾರರು, ಹೊಲೆಯ, ಮಾದಿಗ, ಮುಸ್ಲಿಂಮರು ವಾಸಿಸುತ್ತಾರೆ. ಇಲ್ಲಿ ಹಿಂದೂ ಜನರು ಸಂಕ್ರಮಣ, ಯುಗಾದಿ, ಪಂಚಮಿ, ಮಹಾನವಮಿ, ಶಿವರಾತ್ರಿ, ದೀಪಾವಳಿ ಮೊದಲಾದ ಹಬ್ಬಗಳನ್ನು ಆಚರಿಸುತ್ತಾರೆ. ಮುಸ್ಲಿಂಮರು ರಮಂಜಾನ, ಬಕ್ರೀದ್, ಮೋಹರಂ ಹಬ್ಬಗಳನ್ನು ಆಚರಿಸುತ್ತಾರೆ. ಈ ಹಬ್ಬಗಳಲ್ಲಿ ಹಿಂದೂಗಳು ಸಕ್ರಿಯವಾಗಿ ಭಾಗವಹಿಸುತ್ತಾರೆ. ಎಲ್ಲಾ ವರ್ಗದವರು ಸೌಹಾರ್ದತೆಯಿಂದ ಕೂಡಿ ಬಾಳುತ್ತಿರುವುದು ಇಲ್ಲಿ ಕಂಡುಬರುತ್ತದೆ.

ಅಥಣಿ ಪರಿಸರದಲ್ಲಿನ ದೇವಸ್ಥಾನಗಳ ಶಿಲ್ಪಕಲಾ ವೈಭವವನ್ನು ನೋಡಿದಾಗ ಈ ಪ್ರದೇಶವು ಗತಕಾಲದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕಂಗೊಳಿಸಿದೆ. ಅಥಣಿಯಲ್ಲಿನ ಅಮೃತ ಲಿಂಗೇಶ್ವರ ದೇವಸ್ಥಾನ, ರಾಮತೀರ್ಥದ ಉಮಾ ರಾಮೇಶ್ವರ ನಂದಗಾಂವದ ಶಿವಾಲಯ ಮಂಗಸೂಳಿಯ ಮಲ್ಲಯ್ಯ ಖಿಳೇಗಾಂವಿನ ಬಸವಣ್ಣ ಕೊಕಟನೂರಿನ ಎಲ್ಲಮ್ಮದೇವಿ ದೇವಸ್ಥಾನ, ಕಾಗವಾಡದ ಪದ್ಮಾವತಿ ದೇವಸ್ಥಾನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಅಥಣಿಯ ಗಚ್ಚಿನಮಠ ಮೋಟಗಿಮಠ, ಶೆಟ್ಟರ ಮಠ, ರಾಯರಮಠ, ಸವದಿಯ ಮಹಾಂತಮಠ ಈ ಮಠ ಮಂದಿರಗಳು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿವೆ.

ವಿವಾಹ ಪದ್ಧತಿ : ಈ ಪರಿಸರದಲ್ಲಿ ಕುಟುಂಬ ವ್ಯವಸ್ಥೆಯ ಅಡಿಯಲ್ಲಿ ಬರುವ ವೈವಾಹಿಕ ಪದ್ಧತಿಯಲ್ಲಿ ಇಂದಿಗೂ ಸೋದರ ಸಂಬಂಧಿಯೇತರ ಮದುವೆಗಳು ನಡೆಯುತ್ತವೆ. ಅಂದರೆ ಒಳಗಿನ ಸಂಬಂಧಗಳು ನಮ್ಮಲ್ಲಿ ಇಂದಿಗೂ ಕಾಣುತ್ತವೆ. ಹಾಗೆನೇ ಯಾದಿಮೆ ಶಾದಿ ಎಂಬ ವಿವಾಹ ಪದ್ಧತಿ ಬಹಳ ಪ್ರಚಲಿತವಾಗಿದೆ. ಯಾದಿಮೆ ಶಾದಿ ಅಂದರೆ ಹೆಣ್ಣು ಗಂಡು ಹಾಗೂ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದ ಮೇಲೆ ಕರಾರು ಪತ್ರ ಅಂದರೆ ಯಾದಿ ಬರೆದು ಅಲ್ಲಿಯೇ ಮದುವೆ ಮಾಡುವುದು. ಇದರಿಂದ ಹಣ ಹಾಗೂ ಸಮಯ ಎರಡೂ ಉಳಿತಾಯವಾಗುತ್ತವೆ. ಹಲವಾರು ಜನರು ಸಾಲ ಮಾಡಿ ಆದ್ದೂರಿಯಿಂದ ಮದುವೆ ಮಾಡುತ್ತಾರೆ. ಇದನ್ನು ತಡೆಯಬಹುದು. ಈ ಪದ್ಧತಿ ನಮ್ಮಲ್ಲಿ ಇದೆ ಎಂದು ಹೇಳಬಹುದು. ಅಂತರ್ ಜಾತೀಯ ವಿವಾಹ, ಪ್ರೇಮ ವಿವಾಹ, ವಿಧವೆಯ ಪುನರ್ ವಿವಾಹಕ್ಕೆ ಆಸ್ಪದ ಕಡಿಮೆ ಇದೆ. ಹಾಗೆ ಇಂದಿಗೂ ಕೂಡ ಅತಿ ಕಡಿಮೆ ವಯಸ್ಸಿನಲ್ಲಿ ವಿವಾಹ ಮಾಡುವ ಪರಂಪರೆ ಇದೆ. ಅದಕ್ಕೆ ಅನಕ್ಷರತೆಯೇ ಪ್ರಮುಖ ಕಾರಣವಾಗಿದೆ.

ಕುಟುಂಬ ಪದ್ಧತಿ : ಈ ಪರಿಸರದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಜೀವನ ಸಾಗಿಸುವ ಸಲುವಾಗಿ ಜನರು ಕೈಗಾರೀಕರಣ, ನಗರೀಕರಣ, ಶಿಕ್ಷಣ, ಉದ್ಯೋಗ ಇಂತಹ ಪ್ರಭಾವಕ್ಕೆ ಒಳಗಾಗುತ್ತಿರುವುದರಿಂದ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬದ ಸ್ವರೂಪವನ್ನು ಹೊಂದಿದೆ. ಮನುಷ್ಯನು ಪರಿಸರ ಹಾಗೂ ಪರಿಸ್ಥಿತಿಗೆ ಅನುಸಾರವಾಗಿ ಬದಲಾವಣೆ ಹೊಂದುತ್ತಾ ಹೋಗುತ್ತಾನೆ. ಅದಕ್ಕಾಗಿ ಅಥಣಿ ಪರಿಸರದಲ್ಲಿ ವಿಭಕ್ತ ಕುಟುಂಬ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಪಿತೃಪ್ರಧಾನ ಕುಟುಂಬದ ಸ್ವರೂಪ ಹೆಚ್ಚು ಪ್ರಮಾಣದಲ್ಲಿ ಕಾಣುತ್ತವೆ. ಪುರುಷನಿಗೆ ಆ ಕುಟುಂಬದ ಎಲ್ಲ ಸದಸ್ಯರ ಮೇಲೆ ಸಂಪೂರ್ಣ ಅಧಿಕಾರ ಇರುತ್ತದೆ. ಸ್ತ್ರೀಯರಿಗೆ ಎರಡನೆ ಸ್ಥಾನ ಕೊಡಲಾಗಿದೆ. ಸ್ತ್ರೀಯರು ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಹೆಣ್ಣುಮಕ್ಕಳು ‘‘house wife’’ ಆಗಿದ್ದರೂ ಕೂಡಾ ಮನೆಯ ಯಜಮಾನಿ ಆಗಿರುತ್ತಾರೆ ಎಂದು ಹೇಳಬಹುದು.

ಜಾತಿಯ ಸಂಬಂಧಗಳು : ಪ್ರಾಚೀನ ಕಾಲದಲ್ಲಿ ಜಾತಿಯ ಮೇಲೆ ಹಲವಾರು ನಿರ್ಬಧನೆಗಳು ಕಂಡುಬರುತ್ತವೆ. ಆದರೆ ಈ ಪರಿಸರದಲ್ಲಿ ಹಲವಾರು ಸಮುದಾಯದ ಜನರು ವಾಸಿಸುತ್ತಿದ್ದಾರೆ. ಮುಸ್ಲಿಂ, ಮರಾಠಾ, ಜೈನ, ಬ್ರಾಹ್ಮಣರು, ವೀರಶೈವರು ಅದರಲ್ಲಿ ಹಿಂದೂಗಳು ಎಂದು ಕರೆದುಕೊಳ್ಳುವ ಎಲ್ಲ ವೃತ್ತಿಯ ಜಾತಿಯ ಜನರನ್ನು ಕಾಣುತ್ತೇವೆ. ಅವುಗಳಲ್ಲಿ ಕಮ್ಮಾರರು, ಬಡಿಗೇರರು, ಚಮ್ಮಾರರು, ಕುರುಬರು, ನಾಯಕರು, ಗೊಲ್ಲರು ಮುಂತಾದ ಸಮುದಾಯಗಳು ಕಂಡುಬರುತ್ತವೆ. ಯಾವುದೇ ಕಲಹ, ಗೊಂದಲ, ಇಲ್ಲದೆ ಸಾಮರಸ್ಯದಿಂದ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಪರಿಶಿಷ್ಟ ಜಾತಿಯ ಜನರು ಹಾಗೂ ಇತರ ಜಾತಿಯ ಜನರ ನಡುವೆ ಸಂಬಂಧಗಳು ಸೀಮಿತವಾಗಿದೆ.

ಉದ್ಯೋಗಗಳು : ಅಥಣಿ ಪರಿಸರದಲ್ಲಿ ಶೇಕಡಾ ೭೫ ಜನರು ಒಕ್ಕಲುತನವನ್ನು ಅವಲಂಬಿಸಿದ್ದಾರೆ ಮತ್ತು ೪೭ ಜನರು ಕೃಷಿ ಕಾರ್ಮಿಕರಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ಮಾತ್ರ ಇವರಿಗೆ ಕೆಲಸ ದೊರೆಯುತ್ತದೆ. ಉಳಿದ ವೇಳೆ ನಿರುದ್ಯೋಗಿ ಆಗಿರುತ್ತಾರೆ. ಅನಿಶ್ಚಿತ ಹಾಗೂ ಅನಿಯಮಿತ ಉದ್ಯೋಗ, ಅಭದ್ರತೆ, ಬಡತನ, ಸಾಲ, ಅನಕ್ಷರತೆ ಮೊದಲಾದ ಸಮಸ್ಯೆಗಳಿಗೆ ನಿರಂತರವಾಗಿ ತುತ್ತಾಗುತ್ತಿದ್ದಾರೆ. ಕೃಷಿಯಲ್ಲಿ ರೈತರು ಹಾಗೂ ಈ ದಿನಗೂಲಿಯನ್ನು ಆಶ್ರಯಿಸುವ ರೈತರ ಆರ್ಥಿಕ ಸ್ಥಿತಿ ಭಿನ್ನವಾಗಿಲ್ಲ. ಇವರಿಗೆ ತಮ್ಮ ಜೀವನದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ತಕ್ಕ ಕೂಲಿ ದೊರೆಯುತ್ತಿಲ್ಲ. ಅಥಣಿಯಲ್ಲಿ ಕಚ್ಚಾಮಾಲಿನ ಕೊರತೆ, ಮಾರುಕಟ್ಟೆಯ ಕೊರತೆ, ಮಳೆಗಾಲ ಕಡಿಮೆಯಾಗಿದ್ದರಿಂದ ಎಲ್ಲಾ ಮಿಲ್ಲುಗಳು, ಕಾರ್ಖಾನೆಗಳು, ಮುಚ್ಚಿ ಹೋಗಿವೆ. ೨೦,೦೦೦ಕ್ಕೂ ಹೆಚ್ಚು ಜನರು ನಿರುದ್ಯೋಗಿದ್ದಾರೆ.

ಅಥಣಿ ತಾಲೂಕು ಚಪ್ಪಲಿ ತಯಾರಿಕೆಯಲ್ಲಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ತಯಾರಾಗುವ ಕೋಲ್ಹಾಪುರ ಚಪ್ಪಲಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪರಿಶಿಷ್ಟ ಜಾತಿಯ ಜನರು ಚಪ್ಪಲಿ ತಯಾರಿಕೆಯನ್ನು ತಮ್ಮ ಮೂಲ ಕಸುಬನ್ನಾಗಿಸಿ ಕೊಂಡಿದ್ದಾರೆ. ಅತಿಯಾದ ಜಾತೀಯತೆ ಇನ್ನೂ ಅಸ್ತಿತ್ವದಲ್ಲಿ ಇರುವುದರಿಂದ ಅದು ಅನಿವಾರ್ಯವಾಗಿದೆ. ಈ ವರ್ಗದಲ್ಲಿ ಅನಕ್ಷರತೆ, ಇರುವುದರಿಂದ ವಿವಿಧ ಸೌಲಭ್ಯಗಳು ಇದ್ದರೂ ಅದರ ಸದುಪಯೋಗ ಆಗುತ್ತಿಲ್ಲ. ಮಹಿಳೆಯರು ಕೂಡ ಈ ಚರ್ಮೋದ್ಯೋಗದಲ್ಲಿ ತೊಡಗಿ ತನ್ನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಇಲ್ಲಿ ಕರ್ನಾಟಕ ಚರ್ಮಾಲಯ ಇಲಾಖೆ ಇದ್ದರೂ ದಕ್ಷ ಅಧಿಕಾರಿಗಳಿಲ್ಲದೆ ಮುಚ್ಚುವ ಸ್ಥಿತಿಯಲ್ಲಿದೆ.

ಶಿಕ್ಷಣ : ಈ ಪರಿಸರದಲ್ಲಿ ಶಿಕ್ಷಣಕ್ಕೆ ಪ್ರಾಧ್ಯಾನತೆ ಮೊದಲು ಕೊಡುತ್ತಿರಲಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧ್ಯಾನ್ಯತೆ ಕೊಡುವುದಿಲ್ಲ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣದ ಸಂಖ್ಯೆ ಕಡಿಮೆ ಇದೆ. ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಬರುವುದರಿಂದ ಇಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜು ಸ್ಥಾಪಿಸಲಾಗಿದೆ.ಅಬ್ದುಲ್ ಕಲಾಮ ಪದವಿ ಪೂರ್ವ P.U.Girls College ಪಾತ್ರ ಮಹತ್ವದ್ದಾಗಿದೆ. ಬಡವಿದ್ಯಾರ್ಥಿಗಳ ಸಹಾಯಕ್ಕಾಗಿ ಈ ವರ್ಷ ಸರ್ಕಾರಿ ಪದವಿ ಕಾಲೇಜ್‌ನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಅಸಂಖ್ಯಾತ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಿದ್ದು ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿವೆ. ಈ ಪರಿಸರದ ಇನ್ನೊಂದು ವಿಶೇಷತೆ ಅಂದರೆ. ಇಲ್ಲಿ ಮರಾಠಿ, ಉರ್ದು, ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಮರಾಠಿ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಎಲ್ಲ ಭಾಷೆಯಲ್ಲಿ ಶಿಕ್ಷಣ ಕೊಡುವುದರಿಂದ ಇದು ವಿದ್ಯಾರ್ಥಿಗಳಿಗೆ ಯಾವ ರಾಜ್ಯದಲ್ಲಿ ಆದರೂ ಉದ್ಯೋಗ ಮತ್ತು ಶಿಕ್ಷಣ ಪಡೆಯಬಹುದಾಗಿದೆ.

ಜೀವನ ಮಟ್ಟ : ಕಾರ್ಮಿಕರು ಹಾಗೂ ರೈತರ ಜೀವನ ಮಟ್ಟ ಕೆಳಮಟ್ಟದ್ದೆ ಆಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿಯ ಜನರಿಗೆ ಮನೆಯ ವಸತಿ ಸೌಲಭ್ಯಗಳಿಲ್ಲ. ಈ ಜನರು ರಾಜೀವ್ ಗಾಂಧಿ ಯೋಜನೆ ಅಂರ್ತಗತ ಹಾಗೂ LIDAKAR ಮತ್ತು CHARMAYAYA ಈ ಕೇಂದ್ರಗಳು ಕಟ್ಟಿಸಿಕೊಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಕೂಲಿ ಇವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಣ ಉಳಿತಾಯ ಸಾಧ್ಯವಿಲ್ಲ.

ಸಮಸ್ಯೆಗಳು : ಈ ಪರಿಸರದಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ಇಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ, ಜನಸಂಖ್ಯಾಸ್ಪೋಟ, ಬಾಲಕಾರ್ಮಿಕ ಪದ್ಧತಿ, ಕಡಿಮೆ ವಯಸ್ಸಿನಲ್ಲಿ ಮದುವೆ, ಏಡ್ಸ್, ವೇಶ್ಯಾವಾಟಿಕೆ, ಬಾಲ್ಯ ವಿವಾಹ, ಮೂಢನಂಬಿಕೆ, ಅಜ್ಞಾನ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ.

ಸಲಹೆಗಳು

೧. ಆರ್ಥಿಕ ಸ್ಥಿತಿಗತಿ ಸುಧಾರಿಸಬೇಕು.

೨. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಒದಗಿಸಿಕೊಡಬೇಕು.

೩. ಕಾರ್ಮಿಕ ಹಾಗೂ ರೈತರ ಜೀವನ ಮಟ್ಟ ಸುಧಾರಿಸಲು ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡು. ಉದಾ : ಸ್ವರ್ಣ ಜಯಂತಿ ರೋಜಗಾರ್ ಯೋಜನೆ.

೪. ಮಹಿಳೆಯ ಶೈಕ್ಷಣಿಕ ಅಂಶಕ್ಕೆ ಒತ್ತು ಕೊಡಬೇಕು.

೫. ಬಡತನದಲ್ಲಿರುವ ಪರಿಶಿಷ್ಟ ಜಾತಿಯ ಜನರನ್ನು ಬಡತನದಿಂದ ಮೇಲೆತ್ತಲು ಪ್ರಯತ್ನ ಮಾಡಬೇಕು.