ಪೀಠಿಕೆ

ಯಾವುದೇ ಒಂದು ರಾಷ್ಟ್ರದ ಅಭಿವೃದ್ದಿ ಆ ರಾಷ್ಟ್ರದ ಆರ್ಥಿಕ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಕೇವಲ ಬಂಡವಾಳ ಹೂಡಿಕೆ, ತಂತ್ರಜ್ಞಾನ ಹಾಗೂ ಶ್ರಮಶಕ್ತಿಯಿಂದ ಕೂಡಿದ ಉತ್ಪಾದನಾಂಗಗಳ ಪೂರೈಕೆಯ ಮೇಲೆ ಅವಲಂಬಿತ ವಾಗಿರುವುದಿಲ್ಲ. ಬದಲಾಗಿ ಸಾಮಾಜಿಕ-ಆರ್ಥಿಕ ಸಮಸ್ಯೆಗಳ ನಿವಾರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಆರ್ಥಿಕ ಸ್ಥಿತಿಗತಿ ಎನ್ನುವುದು ಜನರ ಜೀವನದ ಒಂದು ಸಾಮಾಜಿಕ ಸಮಷ್ಟಿಯಾಗಿದ್ದು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ ಮತ್ತು ಒಂದಕ್ಕೊಂದು ಅವಲಂಬಿತವಾಗಿರುತ್ತದೆ.

ಒಂದು ರಾಷ್ಟ್ರದ ಆರ್ಥಿಕ ಸ್ಥಿತಿ ಅಥವಾ ಬೆಳವಣಿಗೆ ಸಾಮಾನ್ಯವಾಗಿ ಬಂಡವಾಳ ಹೂಡಿಕೆ, ತಂತ್ರಜ್ಞಾನ ಹಾಗೂ ಶ್ರಮಶಕ್ತಿಯಿಂದ ಕೂಡಿದ ಉತ್ಪಾದನಾಂಗಗಳ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಬಡತನ, ನಿರುದ್ಯೋಗ, ಕೃಷಿ, ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿನ ಸಮಸ್ಯೆಗಳ ನಿವಾರಣೆಯ ಮೇಲೆ ಅವಲಂಬಿತವಾಗಿದೆ.  ರಾಷ್ಟ್ರದಲ್ಲಿ ಬಡತನ ಮತ್ತು ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಹಸ್ರಾರು ಯೋಜನೆಗಳ ಮೂಲಕ ಪ್ರಯತ್ನಗಳನ್ನು ನಡೆಸುತ್ತಲೇ ಬರಲಾಗಿದೆ. ಆದರೆ ಅದರಿಂದ ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವಂತಹ ಪ್ರಯತ್ನಗಳಾಗಿಲ್ಲ. ಯೋಜನಾ ಆಯೋಗದ ಪ್ರಕಾರ ಶೇಕಡಾ ೫೦.೮೨ರಷ್ಟು ಜನತೆ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ (U.N.D.P.Poverty Report, 2000) .

ನಮ್ಮ ರಾಷ್ಟ್ರದಲ್ಲಿ ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಗೆ ಮೂಲಕಾರಣವೆಂದರೆ, ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೯೦ರಷ್ಟು ಜನತೆ ಅಸಂಘಟಿತ ಅಥವಾ ಅನೌಪಚಾರಿಕ ಕ್ಷೇತ್ರಕ್ಕೆ ಅಂಟಿಕೊಂಡಿರುವುದು. ಈ ಕ್ಷೇತ್ರ ಬಹಳ ವ್ಯಾಪಕವಾಗಿದ್ದು ಕೃಷಿರಂಗ, ಗುಡಿಕೈಗಾರಿಕೆಗಳು ಮತ್ತು ಸಾಂಪ್ರದಾಯಿಕ ಗ್ರಾಮೀಣ ಕೃಷಿಯೇತರ ಕಲೆಗಳೂ ಇದರ ವ್ಯಾಪ್ತಿಗೊಳ್ಳಪಟ್ಟಿವೆ. ಇಂತಹ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುವ ಜನತೆ ಇನ್ನೂ ಸಂಕಷ್ಟದಲ್ಲಿದ್ದು ಅದನ್ನೇ ನಂಬಿಕೊಂಡಿವೆ. ಅಸಂಘಟಿತ ಕ್ಷೇತ್ರದಲ್ಲಿ ಎದ್ದು ಕಾಣುವ ಲಕ್ಷಣಗಳೆಂದರೆ ಇನ್ನೂ ಸಹ ಉತ್ಪಾದನಾ ಘಟಕಗಳಲ್ಲಿ ‘ಓಬಿರಾಯನ ಕಾಲದ ಅಪರಿಷ್ಕೃತ ತಂತ್ರಜ್ಞಾನದ ಬಳಕೆ’ ಅದರಿಂದಾಗಿ ಕೆಳಮಟ್ಟದ ಉತ್ಪಾದನೆ, ಬಂಡವಾಳ ಹೂಡಿಕೆಯ ಅಭಾವ, ಉತ್ಪಾದಿತ ವಸ್ತುಗಳಿಗೆ ವ್ಯವಸ್ಥಿತ ಮಾರುಕಟ್ಟೆಯ ಕೊರತೆ, ಸಾರಿಗೆ ಸಂಪರ್ಕದ ಕೊರತೆ, ಮಾರುಕಟ್ಟೆ ಮಾಹಿತಿ ಕೊರತೆ, ಉತ್ಪಾದನೆಯಲ್ಲಿ ಅಸ್ಥಿರತೆ, ಮುಕ್ತಮಾರುಕಟ್ಟೆಯಿಂದ ಉಂಟಾಗಿರುವ ಪೈಪೋಟಿ, ಉತ್ಪನ್ನಗಳಿಗೆ ಬೆಲೆ ಸಿಗದೆ ಇರುವುದು ಹಾಗೂ ಆ ಬೆಲೆಯಲ್ಲಿ ಕಂಡುಬರುವ ಅಸ್ಥಿರತೆ, ಇವೆಲ್ಲವುಗಳ ಪರಿಣಾಮವಾಗಿ ಅಸಂಘಟಿತ ಗೃಹ ಉದ್ಯೋಗಗಳಲ್ಲಿ ಆದಾಯದ ಮಟ್ಟ ಅತಿ ಕಡಿಮೆಯಾಗಿದ್ದು, ಈ ಉದ್ದಿಮೆಗಳ ಒಡೆಯರಷ್ಟೇ ಅಲ್ಲದೆ ಇಲ್ಲಿ ಉದ್ಯೋಗ ಮಾಡುವ ದಿನಗೂಲಿ ಕಾರ್ಮಿಕರು ಬಡತನದಲ್ಲಿ ಜೀವಿಸುತ್ತಿದ್ದಾರೆ.

ಭಾರತದಲ್ಲಿ ಅನೌಪಚಾರಿಕ ಉದ್ದಿಮೆಗಳಲ್ಲಿ ಅತಿದೊಡ್ಡ ಉದ್ದಿಮೆ ಎಂದರೆ ಕೃಷಿ. ಅದು ಬಹಳ ಕಾಲದಿಂದ ಒಂದು ಬೃಹತ್ ಅಸಂಘಟಿತ ಕ್ಷೇತ್ರವಾಗಿ ಮುಂದುವರಿದಿದೆ. ಕೃಷಿಕರು ಮತ್ತು ಕೃಷಿ ಕಾರ್ಮಿಕರು ಅಸಂಘಟಿತವಾಗಿ ಉಳಿಯಲು ನಾನಾ ಕಾರಣಗಳಿವೆ. ಈ ಕ್ಷೇತ್ರದಲ್ಲಿ ಅವುಗಳಲ್ಲಿ ಮುಖ್ಯವಾದವುಗಳೆಂದರೆ; ಬೇಸಾಯ ಕಾರ್ಯಾಚರಣೆಗಳ ಅನಿಯತಕಾಲಿಕತೆ, ನಿರಂತರವಾಗಿ ಏರುತ್ತಿರುವ ಉತ್ಪಾದನಾಂಗಗಳ ಬೆಲೆಗಳು, ಆಗಿಂದಾಗ್ಗೆ ಉಂಟಾಗುವ ಕೃಷಿ ಉತ್ಪನ್ನಗಳ ಬೆಲೆಗಳ ಅಸ್ಥಿರತೆ ಮತ್ತು ಅದರಿಂದಾಗುವ ಕೃಷಿಕರ ಆದಾಯದ ಅಸ್ಥಿರತೆ ಮತ್ತು ಗ್ರಾಮೀಣ ಕಾರ್ಮಿಕರ ಅನಕ್ಷರತೆ, ಗ್ರಾಮೀಣ ಕಾರ್ಮಿಕರು ಅದರಲ್ಲೂ ಕೃಷಿ ಕಾರ್ಮಿಕರು, ದಿನಗೂಲಿ ಮತ್ತು ಗುತ್ತಿಗೆ ಕೆಲಸಗಾರರು, ಬಡ ಕುಟುಂಬಗಳ, ಮಹಿಳಾ ಕಾರ್ಮಿಕರು ಹಾಗೂ ನಿಶ್ಚಿತ ಕೆಲಸ ಇಲ್ಲದವರು, ಬಡತನ ಮತ್ತು ಸಾಮಾಜಿಕ ಹಿಂದುಳಿಯುವಿಕೆಯ ಸ್ಥಿತಿಗೆ ಬೇಗ ಒಳಗಾಗುವಂತವರು, ಆಗಾಗ್ಗೆ ಬರಗಾಲ, ಪ್ರವಾಹ ಹಾಗೂ ಇತರೆ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವಂತಹ ಪ್ರದೇಶದ ಕೃಷಿಕರು ಮತ್ತು ಕಾರ್ಮಿಕರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.

ಭಾರತದಲ್ಲಿ ಕೃಷಿ ಅವಲಂಬಿತ ಕೈಗಾರಿಕೆಗಳ ಸ್ಥಿತಿ ಕೃಷಿಗಿಂತ ಭಿನ್ನವಾಗಿಲ್ಲ. ಸಕ್ಕರೆ ಕಾರ್ಖಾನೆಗಳು, ಹತ್ತಿಗಿರಣಿಗಳು, ಅಕ್ಕಿಮಿಲ್‌ಗಳು ಮೊದಲಾದ ಕಾರ್ಖಾನೆಗಳಲ್ಲಿ ದಿನಗೂಲಿಗಾಗಿ ದುಡಿಯುವ ವರ್ಗಗಳ ಸ್ಥಿತಿಯು ಕೃಷಿ ಕಾರ್ಮಿಕರ ಸ್ಥಿತಿಗಿಂತ ಹೆಚ್ಚು ಕಷ್ಟದಾಯಕವಾಗಿರುತ್ತದೆ. ಕೃಷಿ ಉತ್ಪಾದನೆಯ ಸಮಯದಲ್ಲಿ ಮಾತ್ರ ಉದ್ಯೋಗ ಪಡೆದುಕೊಳ್ಳುವ ವರ್ಗ, ಕಾರ್ಖಾನೆಗಳು ಮುಚ್ಚಿದಾಗ ಇತರೆ ಉದ್ಯೋಗ ಮಾಡಲು ಹೋಗಬೇಕಾಗುತ್ತದೆ. ಕಾರ್ಖಾನೆಗಳಲ್ಲಿ ಕೊಡುವ ಅಲ್ಪವೇತನದಲ್ಲಿ ಇಡೀ ಕುಟುಂಬದವರ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗಬೇಕಾಗುತ್ತದೆ. ಇನ್ನು ಕಾರ್ಖಾನೆಗಳಲ್ಲಿ ಸರಿಯಾದ ಬೆಳಕು, ಗಾಳಿ ಇಲ್ಲದ ಮಲಿನಯುಕ್ತ ವಾತಾವರಣದಲ್ಲಿ ಹೆಚ್ಚು ಸಮಯ ದುಡಿದು ಅನಾರೋಗ್ಯಕ್ಕೆ ತುತ್ತಾಗುತ್ತ,. ಇದರಿಂದ ಅತನ ಇಡೀ ಕುಟುಂಬ ಬೀದಿಪಾಲಾಗಬೇಕಾಗುತ್ತದೆ. ಕನಿಷ್ಠ ವೇತನ ಕಾಯ್ದೆ (೧೯೪೮)  ನೌಕರರ ರಾಜ್ಯ ವಿಮಾಕಾಯ್ದೆ (೧೯೪೮)  ಬೋನಸ್ ಪಾವತಿ ಕಾಯ್ದೆ (೧೯೬೫)  ನೌಕರರ ಭವಿಷ್ಯನಿಧಿ ಕಾಯ್ದೆ (೧೯೫೨)  ಮೊದಲಾದ ಕಾಯ್ದೆಗಳಿದ್ದರೂ ಇಲ್ಲಿ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗಗಳಿಗೆ ದೊರೆಯುವುದಿಲ್ಲ.

ಸಾಮಾಜಿಕ ಕ್ಷೇತ್ರ ನೋಡಿದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅತ್ಯಂತ ಹಿಂದುಳಿದ ಸಾಮಾಜಿಕ ಕೆಳಸ್ತರದಲ್ಲಿ ವಾಸಿಸುತ್ತಿರುವ ವರ್ಗಗಳ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಾ ಬರುತ್ತಿದೆ. ಆದರೆ ಜಾತೀಯತೆ, ತಿಳುವಳಿಕೆ ಇಲ್ಲದೆ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇನ್ನೂ ಮೊದಲಾದ ಕಾರಣಗಳಿಂದ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಥಣಿ ತಾಲ್ಲೂಕನ್ನು ಅಧ್ಯಯನ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಲೇಖನವನ್ನು ಸಿದ್ಧಪಡಿಸಲಾಗಿದೆ.

ಭೌಗೋಳಿಕ ಹಿನ್ನೆಲೆ

ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಬರುವ ಹತ್ತು ತಾಲೂಕುಗಳಲ್ಲಿ ಒಂದಾದ ಅಥಣಿ ತಾಲ್ಲೂಕು ೧೯೯೫.೭ ಚದರ ಕಿ.ಮೀ. ವಿಸ್ತ್ರೀರ್ಣವನ್ನು ಹೊಂದಿದ್ದು, ೧೦೮ ಹಳ್ಳಿಗಳಿಂದ ಕೂಡಿದೆ. ಒಟ್ಟು ಹಳ್ಳಿಗಳಲ್ಲಿ ೨೮ ಹಳ್ಳಿಗಳು ಕೃಷ್ಣಾನದಿ ದಂಡೆಯಲ್ಲಿ ಬರುತ್ತವೆ. ಇವು ನೀರಾವರಿಯನ್ನು ಹೊಂದಿದ್ದು ಕಬ್ಬು, ದ್ರಾಕ್ಷಿ, ಅರಿಶಿನ ಬೆಳೆಗಳಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಹಳ್ಳಿಗಳಾಗಿವೆ. ಉಳಿದ ಹಳ್ಳಿಗಳು ತೆರೆದ ಬಾವಿ ಮತ್ತು ಮಳೆ ಆಶ್ರಯದಿಂದ ಕಬ್ಬು, ದ್ರಾಕ್ಷಿ, ಅರಿಶಿನ, ದಾಳಿಂಬೆಗಳನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಿವೆ. ಇಷ್ಟು ಹಳ್ಳಿಗಳನ್ನು ಹೊಂದಿರುವ ತಾಲ್ಲೂಕಾದ ಅಥಣಿಯು ಮಹಾರಾಷ್ಟ್ರ ರಾಜ್ಯದ ಮೀರಜ ಮತ್ತು ಜತ್ತ ತಾಲ್ಲೂಕುಗಳು, ಕರ್ನಾಟಕದ ಬಿಜಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ರಾಯಭಾಗ ತಾಲ್ಲೂಕಿನಿಂದ ಸುತ್ತುವರಿದಿದ್ದು, ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ.

ಮೂಲಭೂತ ಸೌಲಭ್ಯಗಳು

ಅಥಣಿ ತಾಲೂಕಿನಲ್ಲಿ ಇರುವಷ್ಟು ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ಮತ್ತೆ ಯಾವ ತಾಲ್ಲೂಕಿನಲ್ಲೂ ಇಲ್ಲವೆಂದು ಹೇಳಬಹುದು. ಇಲ್ಲಿ ೯ ಬ್ಯಾಂಕುಗಳು (೫ ರಾಷ್ಟ್ರೀಕೃತ)  ೫೦ ಕ್ಕಿಂತ ಹೆಚ್ಚು ಸಹಕಾರಿ ಸಂಘಗಳು (Co-Societies)  ಇವೆ. ೪ ಸಕ್ಕರೆ ಕಾರ್ಖಾನೆಗಳು ಒಂದು ಖಾದಿ ಮತ್ತು ಗ್ರಾಮೋದ್ಯೋಗ ನಿಗಮ (KVIC)  ಒಂದು ಉಣ್ಣೆ ಕೈಮಗ್ಗವನ್ನು ಹೊಂದಿದೆ. ಅಲ್ಲದೆ ಅಥಣಿ ತಾಲ್ಲೂಕಿನಲ್ಲಿಯೇ ಕೃಷ್ಣಾನದಿ ಹರಿಯುತ್ತಿರು ವುದರಿಂದ ಅರ್ಧ ಪ್ರದೇಶ ನೀರಾವರಿಯಿಂದ ಆವೃತ್ತವಾಗಿದೆ. ಇಷ್ಟೆಲ್ಲಾ ಇದ್ದರೂ ಅತ್ಯಂತ ಹಿಂದುಳಿದ ತಾಲ್ಲೂಕಾಗಿದೆ.

ಜನಸಂಖ್ಯೆ

೨೦೦೧ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆ ೪,೨೧೪,೫೦೫ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೆ, ಅಥಣಿ ತಾಲ್ಲೂಕು ೪೧೬, ೮೬೨ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಅದು ಗ್ರಾಮೀಣ ಮತ್ತು ನಗರ ಪ್ರದೇಶ ಸ್ತ್ರೀ ಹಾಗೂ ಪುರುಷರ ನಡುವೆ ಹೆಚ್ಚು ಅಸಮಾನತೆ ಇದೆ. ಅದನ್ನು ಈ ಕೆಳಕಂಡ ಕೋಷ್ಠಕದಲ್ಲಿ ಕಾಣಬಹುದು.

ಕೋಷ್ಟಕ : ಜನಸಂಖ್ಯೆ

ಕ್ರ.ಸಂ. ವಿವರ ಕರ್ನಾಟಕ ಬೆಳಗಾವಿ ಅಥಣಿ
೦೧. ಪುರುಷರು ೨೬,೮೯೮,೯೧೮ ೨,೧೫೦,೦೯೦ ೨,೩೬,೮೭೮
ಮಹಿಳೆಯರು ೨೫,೯೫೧,೬೪೪ ೨,೦೬೪,೪೧೫ ೨,೨೪,೯೮೪
ಒಟ್ಟು ೫೨,೮೫೦,೫೬೨ ೪,೨೧೪,೫೦೫ ೪,೬೧,೮೬೨
೦೨. ಪುರುಷರು ೧೭,೬೪೮,೯೫೮ ೧,೬೩೦,೭೫೫ ೨,೧೬,೦೬೧
ಮಹಿಳೆಯರು ೧೭,೨೪೦,೭೦೫ ೧,೫೭೧,೦೫೮ ೨,೦೪,೮೫೧
ಗ್ರಾಮೀಣ ಒಟ್ಟು ೩೪,೮೮೯,೬೩೩ ೩,೨೦೧,೮೧೩ ೪೨೦,೯೧೨
೦೩ ಪುರುಷರು ೯,೨೪೯,೯೬೦ ೫,೧೯,೩೩೪ ೨೦,೮೧೭
ಮಹಿಳೆಯರು ೮,೭೧೧,೫೬೯ ೪,೯೩,೩೫೭ ೨೦,೧೩೩
ನಗರ ಒಟ್ಟು ೧೭,೯೬೧,೫೨೯ ೧,೦೭೨,೬೯೧ ೪೦,೯೫೦

ಆಕರ : ಸೆನ್ಸಸ್ ಆಫ್ ಇಂಡಿಯಾ ೨೦೦೧

ಕಾರ್ಮಿಕ ವರ್ಗ

ಅಥಣಿ ತಾಲ್ಲೂಕಿನಲ್ಲಿ ಜನಸಂಖ್ಯೆಯನ್ನು ನೋಡಿದಾಗ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗಗಳನ್ನು ಕಾಣಬಹುದು. ಪ್ರಮುಖ ಕಾರ್ಮಿಕರು ಶೇಕಡಾ ೫೦.೭ರಷ್ಟಿದೆ. ಇತರೆ ಕಾರ್ಮಿಕರ ವರ್ಗ ಶೇಕಡಾ ೪೮.೬ರಷ್ಟಿದೆ. ಇನ್ನು ಕೃಷಿ ಕ್ಷೇತ್ರಗಳಲ್ಲಿ ದುಡಿಯುವ ವರ್ಗಗಳ ಸಂಖ್ಯೆ ಶೇಕಡಾ ೪೭.೧ರಷ್ಟಿದೆ. ಅದನ್ನು ಕರ್ನಾಟಕ ಬೆಳಗಾವಿ ಜಿಲ್ಲೆಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬರುತ್ತದೆ. ಅದನ್ನು ಈ ಕೆಳಗಿನ ಕೋಷ್ಠಕದಲ್ಲಿ ಕಾಣಬಹುದು.

ಕೋಷ್ಠಕ : ಕಾರ್ಮಿಕರ ಶೇಕಡಾವಾರು ಪ್ರಮಾಣ

ಕ್ರ.ಸಂ.

ವಿವರ

 

ಕರ್ನಾಟಕ

ಬೆಳಗಾವಿ

ಅಥಣಿ

೦೧ ಪ್ರಮುಖ ಕಾರ್ಮಿಕರು ಪುರುಷರು ೫೧.೭ ೫೨.೦ ೫೩.೭
ಮಹಿಳೆಯರು ೨೧.೧ ೨೦.೪ ೨೨.೦೨
ಒಟ್ಟು ೩೬.೬ ೩೬.೫ ೩೮.೪
೦೨ ಅಂತಿಮ ವರ್ಗದ ಕಾರ್ಮಿಕರು ಪುರುಷರು ೫.೦ ೩.೯ ೫.೫
ಮಹಿಳೆಯರು ೧೦.೯ ೧೨.೪ ೨೦.೯
ಒಟ್ಟು ೭.೯ ೮.೧ ೧೩.೦
೦೩ ಇತರೆ ಕೆಲಸಗಾರರು ಪುರುಷರು ೪೩.೪ ೪೪.೧ ೪೦.೮
ಮಹಿಳೆಯರು ೧೦.೯ ೧೨.೪ ೨೦.೦೯
ಒಟ್ಟು ೫೫.೫ ೫೫.೪ ೪೮.೬
೦೪ ಕೃಷಿಕರು ಒಟ್ಟು ೫೫.೫ ೪೮.೬ ೪೪.೩
೪.೧.ಕೃಷಿಕಾರ್ಮಿಕರು ೨೬.೫ ೩೧.೩ ೩೫.೧
೪.೨.ಗೃಹಕೈಗಾರಿಕೆಗಳು ಒಟ್ಟು ೪.೧ ೩.೫ ೨.೦
೪.೩.ಇತರೆ ೪೦.೨ ೨೭.೬ ೧೫.೭

ಆಕರ : ಸೆನ್ಸಸ್ ಆಫ್ ಇಂಡಿಯಾ ೨೦೦೧

ಕೃಷಿ

೧,೯೯,೫೧೩ ಹೆಕ್ಟೇರ್ ಭೌಗೋಳಿಕ ಕ್ಷೇತ್ರವನ್ನು ಹೊಂದಿದೆ. ಇದರಿಂದ ೩೧೭೩ ಹೆಕ್ಟೇರ ಭೂಮಿ ಸಾಗುವಳಿಗೆ ಯೋಗ್ಯವಾದ ಬಂಜರು ಭೂಮಿಯಾಗಿದ್ದು, ೨೧೩೪ ಹೆಕ್ಟೇರ ಭೂಮಿ ಕಾಯಂ ಗೋಮಾಳವಾಗಿದೆ. ೬೪೬೮ ಹೆಕ್ಟೇರ್ ಭೂಮಿ ವ್ಯವಸಾಯೇತರ (ಬಿನ್ ಶೇತ್ಗಿ) , ೬೩೬೪ ಹೆಕ್ಟೇರ ಭೂಮಿ ಬಂಜರು ಭೂಮಿಯಾಗಿ ೧,೪೯,೯೬೪ ಹೆಕ್ಟೇರ್ ಭೂಮಿ ಬಿತ್ತನೆಗೆ ಯೋಗ್ಯವಾಗಿದೆ. ತಾಲ್ಲೂಕಿನಲ್ಲಿ ೧ ಹೆಕ್ಟೇರಗಿಂತ ಕಡಿಮೆ ಭೂಮಿ ಹೊಂದಿದ ಜನತೆ ಹೆಚ್ಚಿದೆ. ಹಿಡುವಳಿದಾರರೂ ೧,೬೫,೫೮೬ ಇದ್ದರೆ ೧ ರಿಂದ ೨ ಹೆಕ್ಟೇರ ಭೂ ಹೊಂದಿದವರು ೨೦೦೭ ಇದ್ದರೆ ೨ ರಿಂದ ೪ ಹೆಕ್ಟೇರ ಭೂಮಿ ಹೊಂದಿದವರು ೧೮,೫೯೬ ಜನರಿದ್ದಾರೆ. ೧೦ ಹೆಕ್ಟೇರಗಿಂತಲೂ ಹೆಚ್ಚು ಭೂಮಿ ಹೊಂದಿದ ಹಿಡುವಳಿದಾರರು ೧,೯೦೦ ಜನರಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ೧೭೮೪ ಹೆಕ್ಟೇರ್ ತೆರೆದ ಭಾವಿಗಳಿಂದ ೧೮,೧೦೯ ಹೆಕ್ಟೇರ್ ಕೊಳವೆ ಭಾವಿಗಳಿಂದ ೬,೨೮೧ ಹೆಕ್ಟೇರ್ ಏತ ನೀರಾವರಿಯಿಂದ ೪೩,೫೦೯ ಹೆಕ್ಟೇರ್ ಮತ್ತು ಇತರೆ ಮೂಲಗಳಿಂದ ೧೭,೫೮೧ ಹೆಕ್ಟೇರ್ ಭೂಮಿ ನೀರಾವರಿಗಾಗಿ ಬಳಕೆಯಾಗುತ್ತಿದೆ.

ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಹರಿಯುತ್ತಿರುವುದರಿಂದ ೧೦೯ ಹಳ್ಳಿಗಳಲ್ಲಿ ೩೯ ಹಳ್ಳಿಗಳು ನದಿ ತೀರದಲ್ಲಿದ್ದು ಹೆಚ್ಚು ಕಬ್ಬನ್ನು ಬೆಳೆಯುವ ಹಳ್ಳಿಗಳಾಗಿವೆ. ಇತರೆ ಹಳ್ಳಿಗಳು ಸಹ ಕಬ್ಬನ್ನು ಬೆಳೆಯುತ್ತಿದ್ದರೂ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಿವೆ. ಆದ್ದರಿಂದಲೇ ಅಥಣಿ ತಾಲ್ಲೂಕಿನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ಉಳಿದ ಹಳ್ಳಿಗಳು ತೆರೆದ ಬಾವಿ ಮತ್ತು ಮಳೆಯ ಆಶ್ರಯದಿಂದ ದ್ರಾಕ್ಷಿ, ಅರಿಶಿಣ, ಮಕ್ಕೆಜೋಳ, ಗೋಧಿ, ಜೋಳ, ಕಡಲೆಯಂತಹ ಬೆಳೆಗಳನ್ನು ಬೆಳೆಯುತ್ತಿವೆ. ಇಂತಹ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರೂ, ಹೆಚ್ಚು ಭೂಮಿಯಲ್ಲಿ ಕಬ್ಬು ಬೆಳೆಯುವ ಕಬ್ಬು ಬೆಳೆಗಾರರು ಮತ್ತು ದ್ರಾಕ್ಷಿ ಬೆಳೆಯುವ ಬೆಳೆಗಾರರ ಕುಟುಂಬಗಳ ಆರ್ಥಿಕ ಸ್ಥಿತಿ ಅತ್ಯಂತ ಉತ್ತಮ ಸ್ಥಿತಿಯಲ್ಲಿದೆ. ಆದರೆ ಅಲ್ಪ ಪ್ರಮಾಣದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಕಾರ್ಮಿಕರ ಆರ್ಥಿಕ ಸ್ಥಿತಿ ಸ್ವಲ್ಪ ಪ್ರಮಾಣದಲ್ಲಿದೆ. ಇನ್ನು ತೆರೆದ ಬಾವಿ ಮತ್ತು ಮಳೆಯ ಆಶ್ರಯದಿಂದ ಬೆಳೆ ಬೆಳೆಯುವ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ. ಏಕೆಂದರೆ ಇತರೆ ಬೆಳೆಗಳನ್ನು ಬೆಳೆದರೂ ಬೆಳೆಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸಲು ಮಾರುಕಟ್ಟೆ ಸೌಲಭ್ಯವಿದ್ದರೂ ಹಾಳು ಬಿದ್ದು ಹೋಗಿದ್ದು ಅಲ್ಲಿ ಇತರೆ ಸರ್ಕಾರಿ ಇಲಾಖೆಗಳು ಬಾಡಿಗೆಗಿವೆ.

ಆದರೆ ತಾಲ್ಲೂಕಿನ ಕಾರ್ಮಿಕರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ತಾಲ್ಲೂಕಿನಲ್ಲಿರುವ ಶೇಕಡಾ ೩೮.೪ರಷ್ಟು ಕಾರ್ಮಿಕರು ಶೇಕಡಾ ೩೯.೦ ಸೀಮಾಂತ ಕಾರ್ಮಿಕರು ಶೇಕಡಾ ೪೮.೬ರಷ್ಟು ಸಾಮಾನ್ಯ ಕಾರ್ಮಿಕರು ಮತ್ತು ೪೭.೧ರಷ್ಟು ಕೃಷಿ ಕಾರ್ಮಿಕರಿದ್ದಾರೆ. ಕೃಷಿ ಚಟುವಟಿಕೆಗಳು ನಡೆಯುತ್ತಿದ್ದಾಗ ಮಾತ್ರ ಇವರಿಗೆ ಉದ್ಯೋಗ ದೊರೆಯುತ್ತಿದ್ದು ಉಳಿದ ವೇಳೆ ಕೆಲಸವಿಲ್ಲದೆ ಕಾಲಹರಣ ಮಾಡುತ್ತಿದ್ದಾರೆ. ಅನಿಶ್ಚಿತ ಹಾಗೂ ಅನಿಯತಕಾಲಿಕ ಉದ್ಯೋಗ, ಅಭದ್ರತೆ, ಬಡತನ, ಸಾಲ, ಅನಕ್ಷರತೆ, ಅಪೌಷ್ಠಿಕತೆ ಮೊದಲಾದ ಪಿಡುಗುಗಳಿಗೆ ನಿರಂತರವಾಗಿ ತುತ್ತಾಗುತ್ತಿದ್ದಾರೆ. ಅದರಲ್ಲೂ ಕೃಷಿಯಲ್ಲಿ ಬಹುಪಾಲು ಸಣ್ಣ ರೈತರು ಹಾಗೂ ಈ ವರ್ಗದಲ್ಲೂ ದಿನಗೂಲಿಯನ್ನು ಆಶ್ರಯಿಸಿರುವ ರೈತರ ಆರ್ಥಿಕ ಸ್ಥಿತಿ ಭಿನ್ನವೇನಾಗಿಲ್ಲ. ಇವರಿಗೆ ತಮ್ಮ ಜೀವನದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ತಕ್ಕ ಕೂಲಿ ದೊರೆಯುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬೇಸಾಯಗಾರರ ಆದಾಯ ಹೆಚ್ಚಿರುವುದಿಲ್ಲ. ಅಲ್ಲದೆ ನದಿ ತೀರದ ರೈತರು ೨ ವರ್ಷಗಳಿಂದ ಸತತವಾಗಿ ನೆರೆಹಾವಳಿಗೆ ಬಲಿಯಾಗುತ್ತಿದ್ದಾರೆ. ಇನ್ನೊಂದು ಕಡೆ ಕಬ್ಬು ಬೆಳೆಗಾರರಿಗೆ ಕಬ್ಬಿಗೆ ಸರಿಯಾದ ಬೆಲೆಯೇ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿಕಾರ್ಮಿಕರಿಗೆ ಕನಿಷ್ಠ ವೇತನ ಕೊಡಲಾಗದ ರೈತರನ್ನು ದೂಷಿಸುವುದು ಸರಿಯಲ್ಲ. ೧೯೯೩-೯೪ರಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ೧೦೦೦ ಜನರಲ್ಲಿ ೪೪೪ ಜನಕ್ಕೆ ಕೆಲಸ ಸಿಗುತ್ತಿತ್ತು. ಆದರೆ ೧೯೯೩-೨೦೦೭ರಲ್ಲಿ ಈ ಸಂಖ್ಯೆ ೪೧೪ಕ್ಕೆ ಇಳಿದಿರುವುದು ಕೃಷಿ ರಂಗದಲ್ಲಿ ಉಲ್ಬಣಿಸುತ್ತಿರುವ ನಿರುದ್ಯೋಗಕ್ಕೆ ಸ್ಪಷ್ಟ ಪುರಾವೆಯಾಗಿದೆ. ಇತ್ತೀಚೆಗೆ ಕರಿಮಸೂತಿ ಏತ ನೀರಾವರಿ ಸೌಲಭ್ಯ ದೊರೆಯುತ್ತದೆ. ಇದರಿಂದ ೬ ಪ್ರದೇಶದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಆದರೆ ಮಂಗಸೂಳಿ, ಮುರುಗುಂಡಿ, ಕಕಮರಿ ಮೊದಲಾದ ೩೦ಕ್ಕಿಂತ ಹೆಚ್ಚು ಹಳ್ಳಿಗಳು ಇದರಿಂದ ವಂಚಿತವಾಗುವುದರಿಂದ ಅಲ್ಲಿನ ಜನತೆಯ ಜೀವನಮಟ್ಟ ಸುಧಾರಿಸುವು ದಿಲ್ಲವೆಂದೇ ಹೇಳಬಹುದು. ಇಷ್ಟೆಲ್ಲಾ ಆದರೂ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಯಾಗಿರುವುದಿಲ್ಲ.

ಹೈನುಗಾರಿಕೆ

ಅಥಣಿ ತಾಲ್ಲೂಕಿನ ನೀರಾವರಿ ಪ್ರದೇಶಗಳು ಮತ್ತು ನೀರಾವರಿಯಿಲ್ಲದೆ ಇರುವ ಪ್ರದೇಶಗಳಲ್ಲಿ ಹೈನುಗಾರಿಕೆ ಮೂಲ ಉಪಕಸುಬಾಗಿದೆ. ಇದರಿಂದ ಹಾಲಿನ ಉತ್ಪಾದನೆಯಲ್ಲಿ ಅಥಣಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಪ್ರತಿ ಹಳ್ಳಿಗೊಂದರಂತೆ ಹಾಲು ಸಂಗ್ರಹಣಾ ಕೇಂದ್ರ ತೆರೆಯುತ್ತಿರುವುದರಿಂದ ಚಿಲ್ಲರೆ ಹಾಲು ಸಂಗ್ರಾಹಕರ ಶೋಷಣೆಯಿಂದ ಮುಕ್ತರಾಗುತ್ತಿರುವಂತಾಗಿದೆ. ಪ್ರತಿ ಕುಟುಂಬವು ಒಂದಕ್ಕಿಂತ ಹೆಚ್ಚು ಹಸು ಅಥವಾ ಎಮ್ಮೆಗಳನ್ನು ಸಾಕಿದರೆ ಅವರ ಆರ್ಥಿಕ ಸ್ಥಿತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆಯಾಗಬಲ್ಲದು. ಒಂದು ವೇಳೆ ೨ಕ್ಕಿಂತ ಹೆಚ್ಚು ಕುಟುಂಬಗಳು ಸೇರಿ ಗೋಬರ್ ಗ್ಯಾಸ್‌ನ್ನು ಉತ್ಪಾದಿಸಿಕೊಳ್ಳಬಹುದು. ಇಲ್ಲವೇ ಸರ್ಕಾರದಿಂದ ಸೌಲಭ್ಯ ಪಡೆದು ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. ಅಂತಿಮವಾಗಿ ಸಾವಯವ ಗೊಬ್ಬರವನ್ನು ತಯಾರಿಸಿಕೊಂಡು ಆದಾಯ ಗಳಿಸಬಹುದು. ಇದರಿಂದ ಅತ್ಯಂತ ಬಡಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆಯಾಗಬಲ್ಲದು.

ಗೃಹ ಮತ್ತು ಬೃಹತ್ ಕೈಗಾರಿಕೆಗಳು

ಅಥಣಿ ತಾಲ್ಲೂಕು ೫೦ ರಿಂದ ೯೦ರ ದಶಕಗಳ ಅವಧಿಯಲ್ಲಿ ಎಣ್ಣೆ, ಹತ್ತಿ, ನೂಲು, ಖಾದಿ, ಗೋದಿ ಮಿಲ್‌ಗಳಿಂದ ಕೂಡಿದ್ದು ಆರ್ಥಿಕ ಕ್ಷೇತ್ರದಲ್ಲಿ ಸುಧಾರಿತ ತಾಲ್ಲೂಕಾಗಿತ್ತು. ಆದರೆ ನಂತರದ ದಶಕಗಳಲ್ಲಿ ಕಚ್ಚಾ ವಸ್ತುಗಳ ಕೊರತೆ, ಮಾರುಕಟ್ಟೆಯ ಕೊರತೆ, ಮಳೆಗಾಲ ಕಡಿಮೆಯಾಗಿದ್ದರಿಂದ ಎಲ್ಲ ಮಿಲ್‌ಗಳು ಮುಚ್ಚಿ ಹೋದವು. ಇದರಿಂದ ಅವುಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಕೃಷಿ ಮತ್ತು ದಿನಗೂಲಿಯನ್ನು ನಂಬಿ ಬದುಕುವ ಸ್ಥಿತಿ ನಿರ್ಮಾಣವಾಯಿತು. ಮತ್ತೊಂದು ಕಡೆ ರೈತರು ಹೆಚ್ಚು ಹೆಚ್ಚು ಕಬ್ಬನ್ನು ಬೆಳೆಯಲು ಪ್ರಾರಂಭಿಸಿದ್ದರಿಂದ ೨ ಸಹಕಾರಿ ಕಾರ್ಖಾನೆಗಳು ಎರಡು ಖಾಸಗಿ ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಗಳು ಹುಟ್ಟಿಕೊಂಡಿವೆ. ಈ ನಾಲ್ಕು ಕಾರ್ಖಾನೆಗಳಿಂದ ಸುಮಾರು ೨೦,೦೦೦ಕ್ಕಿಂತ ಹೆಚ್ಚು ಜನತೆ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಅವರಿಗೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ವಿದ್ಯುತ್, ಮಧ್ಯ, ಸಕ್ಕರೆ ಮೊದಲಾದ ಮೂಲಗಳಿಂದ ಹೆಚ್ಚು ಆದಾಯ ಗಳಿಸುತ್ತಿದ್ದರೂ ದಿನಗೂಲಿಯಲ್ಲಿ ಹೆಚ್ಚಳ ಮಾಡಿರುವುದಿಲ್ಲ. ರೈತರು ಬೆಳೆದ ಕಬ್ಬಿಗೆ ಟನ್ನಿಗೆ ೬೦೦ ರಿಂದ ೮೦೦ ರೂ.ಗಳನ್ನು ಮಾತ್ರ ನೀಡುತ್ತಿವೆ. ಇದರಿಂದ ಆರ್ಥಿಕ ಭದ್ರತೆ ಇಲ್ಲದ ದಿನಗೂಲಿ ವರ್ಗಗಳು ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಹೆಣಗಾಡುತ್ತಿವೆ. ೨ ಸಹಕಾರಿ ಕಾರ್ಖಾನೆಗಳ ಸ್ಥಿತಿ ಖಾಸಗಿ ಕಾರ್ಖಾನೆಗಳಿಗಿಂತ ಭಿನ್ನವಾಗಿದೆ. ಅಲ್ಲಿ ಸರಿಯಾದ ಆಡಳಿತವಿಲ್ಲದೆ ಇತರೆ ಆದಾಯಗಳ ಮೂಲವಿಲ್ಲದೆ ಶೇರುದಾರ ಮತ್ತು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೇ ಶೇರುದಾರರಿಗೆ ಒಂದು ಶೇರಿಗೆ ೧೦ ಕೆ.ಜಿ. ಸಕ್ಕರೆ ನೀಡಿ ಸುಮ್ಮನಾಗುತ್ತಿವೆ.

ಸಹಕಾರ ಕ್ಷೇತ್ರ

ಕರ್ನಾಟಕ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಅಥಣಿ ತಾಲ್ಲೂಕು ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು (೧೯೯೬ ಸೇ.ಮೀ)  ಪ್ರದೇಶ ಹೊಂದಿದ ಹಿಂದುಳಿದ ತಾಲ್ಲೂಕು. ಅದರಂತೆ ಅತೀ ಹೆಚ್ಚು (೯೧.೬೨)  ಗ್ರಾಮೀಣ ಪ್ರದೇಶ ಹೊಂದಿದ ತಾಲ್ಲೂಕು. ಇಂತಹ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಐನಾಪುರದಲ್ಲಿ ಕುಚೀರ ಸಹಕಾರಿ ಸಂಘ ಸ್ಥಾಪನೆಯಾಗಿ ಇಂದು ಹಲವಾರು ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ಅವುಗಳನ್ನು ಈ ಮುಂದಿನ ಕೋಷ್ಠಕದಲ್ಲಿ ಕಾಣಬಹುದು.

ಕೋಷ್ಟಕ : ಸಹಕಾರಿ ಸಂಘ/ಸಂಸ್ಥೆಗಳು

ಕ್ರ.ಸಂ.

ಸಹಕಾರಿ ಸಂಘ
ಸಂಸ್ಥೆಗಳ ಹೆಸರು

೧೯೯೦೯೧

೨೦೦೦೦೧

೨೦೦೫೦೬

೦೧. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳು ೬೭ ೬೭ ೭೦
೦೨ ಅರ್ಬನ್ ಸಹಕಾರಿ ಪತ್ತಿನ ಸಂಘಗಳು ೧೭ ೫೬ ೮೧
೦೩ ನೌಕರರ ಪತ್ತಿನ ಸಹಕಾರ ಸಂಘಗಳು ೧೨ ೧೩
೦೪ ಅರ್ಬನ್ ಸಹಕಾರ ಬ್ಯಾಂಕ್‌ಗಳು
೦೫ ಪ್ರಾಥರ್ಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ
ಅಭಿವೃದ್ದಿ ಬ್ಯಾಂಕು
೦೬ ಸಹಕಾರಿ ಸಕ್ಕರೆ ಕಾರ್ಖಾನೆ
೦೭ ಇತರ ವಿವಿಧ್ಯೋದ್ದೇಶ ಸಹಕಾರಿ ಸಂಘಗಳು ೬೭ ೧೨೯ ೧೩೧
ಒಟ್ಟು ೧೬೩ ೨೭೦ ೩೦೧

ಆಕರ : ಎ.ಆರ್.ಆಫೀಸ್, ಚಿಕ್ಕೋಡಿ

ಈ ಸಹಕಾರಿ ಪತ್ತಿನ ಸಂಘಗಳು ಸಣ್ಣ ಸಣ್ಣ ವರ್ತಕರಿಗೆ, ಉದ್ದಿಮೆದಾರರಿಗೆ, ಕೂಲಿಕಾರರಿಗೆ, ಕುಶಲಕರ್ಮಿಗಳಿಗೆ, ಹಿಂದುಳಿದ ಜನರಿಗೆ ಅಲ್ಪಸಂಖ್ಯಾತರು ಮುಂತಾದ ವರಿಗೆ ಹಣಕಾಸಿನ ನೆರವು ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಚಪ್ಪಲಿ ಉದ್ದಿಮೆ

ಅಥಣಿ ತಾಲ್ಲೂಕು ಚಪ್ಪಲಿ ತಯಾರಿಕೆಯಲ್ಲಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ತಯಾರಾಗುವ ಕೊಲ್ಲಾಪುರಿ ಚಪ್ಪಲಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅನಂತಪೂರ, ಮದಭಾವಿ, ಐನಾಪೂರ, ಸತ್ತಿ, ಮೊದಲಾದ ಹಳ್ಳಿಗಳಲ್ಲಿನ ಪರಿಶಿಷ್ಟ ಜಾತಿಯ ವರ್ಗಗಳು ಚಪ್ಪಲಿ ತಯಾರಿಕೆಯೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡಿವೆ. ಅತಿಯಾದ ಜಾತೀಯತೆ ಇನ್ನೂ ಅಸ್ತಿತ್ವದಲ್ಲಿರುವುದರಿಂದ ಅದು ಅನಿವಾರ್ಯವೂ ಆಗಿದೆ. ಆದರೆ ಇದೇ ವೃತ್ತಿಯ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿರುವ ೨೦,೦೦೦ ಜನತೆ ಹಲವಾರು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗಿದ್ದಾರೆ. ಪ್ರಾರಂಭದಲ್ಲಿ ಒಂದು ಕೆ.ಜಿ. ಚರ್ಮದ ಬೆಲೆ ೩೦ ರೂಪಾಯಿಗಳನ್ನು ಮತ್ತು ಚಪ್ಪಲಿಯ ಬೆಲೆ ೪೫ ರೂ.ಗಳಿಗಿತ್ತು. ಇತ್ತೀಚೆಗೆ ಒಂದು ಕೆ.ಜಿ. ಚರ್ಮದ ಬೆಲೆ ೧೬೦ ರೂ.ಗಳಿಗೆ ತಲುಪಿದೆ. ಇದಕ್ಕೆ ತಕ್ಕಂತೆ ಚಪ್ಪಲಿಯ ಬೆಲೆ ಏರಿಸಿದರೆ ಅವುಗಳಿಗೆ ಮಾರುಕಟ್ಟೆಯೇ ಇಲ್ಲದಂತಾಗುತ್ತದೆ. ಹಿಂದೆ ಇದ್ದ ಚಪ್ಪಲಿಯ ಗುಣಮಟ್ಟ ಇಲ್ಲವಾಗಿದೆ. ಚರ್ಮದ ಅಭಾವ ಹೆಚ್ಚಾಗಿದೆ. ಇತರೆ ಮಾದರಿಯ ಚಪ್ಪಲಿಗಳು ಸ್ಪರ್ಧೆಯನ್ನು ಒಡ್ಡಿವೆ. ಈಗಾಗಲೇ ಬ್ಯಾಂಕುಗಳಿಂದ ಉದ್ಯೋಗಕ್ಕಾಗಿ ಪಡೆದ ಸಾಲವನ್ನು ಮರುಪಾವತಿಸಲಾಗದ ಸ್ಥಿತಿ ತಲುಪಿದ್ದಾರೆ. ಇದಕ್ಕೆ ಕೇವಲ ಜಾತಿಯತೆ ಮಾತ್ರ ಕಾರಣವಲ್ಲ. ಸಾಮಾಜಿಕ ಕಾರಣವೂ ಇದೆ. ಮದಭಾವಿಯ ಇಡೀ ಗ್ರಾಮ ಚಪ್ಪಲಿ ತಯಾರಿಸುತ್ತದೆ. ಆದರೆ ಈ ಗ್ರಾಮದ ಪ್ರತಿಯೊಂದು ಮನೆಯವರು ಬ್ಯಾಂಕ್ ಸಾಲವನ್ನು ತೀರಿಸಿಲ್ಲ. ಕಾರಣ ಕುಡಿತವನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದಾರೆ. ಇಡೀ ದಿನ ದುಡಿದು ಬಂದ ಹಣದಿಂದ ಸಂಪೂರ್ಣ ಕುಡಿದು ಮನೆ ತಲುಪುತ್ತಾರೆ. ಈ ವರ್ಗಗಳಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿರುವುದರಿಂದ ವಿವಿಧ ಇಲಾಖೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡರೂ ಅವುಗಳ ಸದುಪಯೋಗವಾಗಿಲ್ಲ. ಇಲ್ಲಿ ಕರ್ನಾಟಕ ಚರ್ಮಾಲಯ ಇಲಾಖೆ ಇದ್ದು ಮಂದಗತಿಯಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ವಸಹಾಯ ಸಂಘಗಳು

ರಾಷ್ಟ್ರದ ಅಭಿವೃದ್ದಿಯಲ್ಲಿ ಮತ್ತು ಆರ್ಥಿಕ ಸ್ಥಿತಿಗತಿಯ ಸುಧಾರಣೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ಅತ್ಯಂತ ಮಹತ್ವವಾದುದು. ಈಗಾಗಲೇ ಕರ್ನಾಟಕದಲ್ಲಿ ಸರ್ಕಾರಗಳಿಂದ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ರೂಪಿತವಾಗಿರುವ ಸ್ವಸಹಾಯ ಸಂಘಗಳು ಉಳಿತಾಯ ಮತ್ತು ಉದ್ಯೋಗದ ಮೂಲಕ ತಮ್ಮದೇ ಆದ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ ಅದು ಇನ್ನೂ ಸಂಪೂರ್ಣವಾಗಿ ಆಗಬೇಕಾಗಿದೆ..

ಅಥಣಿ ತಾಲ್ಲೂಕಿನ ರುಪದಿ, ಕರ್ಡ, ಟ್ರೀ, ಮದರ್ ತೆರೆಸ್, ವಿಮೋಚನಾ, ವಿಶ್ವೇಶ್ವರಯ್ಯ ಹಾಗೂ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ವತಿಯಿಂದ ೧೬೦೦ ಸ್ವಸಹಾಯ ಸಂಘಗಳು ರಚನೆಯಾಗಿವೆ. ಸರ್ಕಾರದಿಂದ ಸುತ್ತು ನಿಧಿಯನ್ನು ಪಡೆದುಕೊಳ್ಳುತ್ತಿವೆ. ಬ್ಯಾಂಕಗಳಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಈ ಸಂಘಗಳಿಗೆ ಸರಿಯಾದ ತರಭೇತಿಯನ್ನು ನೀಡಿ ಉದ್ಯೋಗದಲ್ಲಿ ತೊಡಗಿಸಿದೆ. ಆದರೆ ಇಡೀ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಿಸುತ್ತದೆಯಲ್ಲದೆ, ಸರ್ಕಾರ ವಿವಿಧ ಯೋಜನೆಗಳಿಗೆ ಖರ್ಚು ಮಾಡುವ ಹಣವು ಉಳಿತಾಯವಾಗುತ್ತದೆ. ಆದರೆ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕೇವಲ ಉಳಿತಾಯ ಮತ್ತು ಸಾಲಕ್ಕೆ ಮಾತ್ರ ತರಬೇತಿ ನೀಡಿವೆ. ರುಪದಿ, ವಿಮೋಚನಾ ಸಂಸ್ಥೆಗಳು ಕರ್ನಾಟಕ ಸಣ್ಣ ಉದ್ಯೋಗ ಇಲಾಖೆಯಿಂದ ಉದ್ಯೋಗ ತರಬೇತಿ ನೀಡಿ ತಮ್ಮ ಕರ್ತವ್ಯ ಮುಗಿಯಿತೆಂದು ಸುಮ್ಮನಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಅರೆಬರೆ ತರಬೇತಿ ನೀಡುತ್ತಿವೆ.

ಇಲ್ಲಿನ ಸ್ವ-ಸಹಾಯ ಸಂಘಗಳ ರಚನೆಯಲ್ಲಿ ವೈವಿಧ್ಯತೆಯಿಲ್ಲ (ಆದರೆ ನಿರುದ್ಯೋಗಿಗಳು, ಕೂಲಿ ಕಾರ್ಮಿಕರು, ರೈತರು, ಇತ್ಯಾದಿ ವರ್ಗಗಳ ಬೇರೆ ಬೇರೆ ಸಂಘಗಳ ರಚನೆ) . ಒಂದು ವೇಳೆ ಸಂಘಗಳನ್ನು ರಚಿಸುವಾಗ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಮೇಲೆ ರಚಿಸಿ ಅವುಗಳಿಗೆ ಉದ್ಯೋಗ ತರಬೇತಿ, ಕಚ್ಚಾವಸ್ತು ಮತ್ತು ಮಾರುಕಟ್ಟೆ ವ್ಯವಸ್ಥೆ ಮತ್ತು ಮೂಲ ಉದ್ಯೋಗವನ್ನು ಕಲ್ಪಿಸಿದರೆ ಇಡೀ ಬಡಕುಟುಂಬಗಳು ಆರ್ಥಿಕವಾಗಿ ಬಲಿಷ್ಠವಾಗಬಲ್ಲವು.

ಸಾಮಾಜಿಕ ವ್ಯವಸ್ಥೆ

ರಾಷ್ಟ್ರದ ಆರ್ಥಿಕ ಸ್ಥಿತಿಯ ಸುಧಾರಣೆಗೆ ಸಾಮಾಜಿಕ ವ್ಯವಸ್ಥೆಯು ಪ್ರಮುಖ ಕಾರಣವಾಗಿರುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಸಮಸ್ಯೆಗಳು ನಿವಾರಣೆಯಾದಾಗ ಮಾತ್ರ ಆರ್ಥಿಕ ಸ್ಥಿತಿಗತಿಯಲ್ಲಿ ಸುಧಾರಣೆ ಕಾಣಲು ಸಾಧ್ಯ. ಆದ್ದರಿಂದ ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿ ವ್ಯವಸ್ಥೆಯನ್ನು ಮೊದಲು ನಿವಾರಣೆ ಮಾಡಬೇಕಾಗಿದೆ. ಈ ಅಂಶವನ್ನು ನೋಡಿದಾಗ ಅಥಣಿ ತಾಲ್ಲೂಕಿನ ಇನ್ನೂ ಹಲವಾರು ಸಾಮಾಜಿಕ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಅವು ನಿವಾರಣೆಯಾದಾಗ ಮಾತ್ರ ಆರ್ಥಿಕ ಸ್ಥಿತಿಯ ಸುಧಾರಣೆ ಸುಲಭ ಸಾಧ್ಯವಾಗುತ್ತದೆ.

ಜಾತಿ ವ್ಯವಸ್ಥೆ

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಎದ್ದುಕಾಣುವ ಲಕ್ಷಣವೇನೆಂದರೆ ಜಾತಿ ಪದ್ಧತಿ. ಅದು ೨೧ನೇ ಶತಮಾನದಲ್ಲಿಯೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಭಾರತ ಸಾಂಪ್ರದಾಯಿಕ ಹಳ್ಳಿಗಳಿಂದ ಕೂಡಿರುವುದು ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಜಾತಿ ವ್ಯವಸ್ಥೆಯಿಂದ ಕೆಲವು ವರ್ಗಗಳು ಶೋಷಣೆಯಲ್ಲಿಯೇ, ಸಾಮಾಜಿಕ ಕಟ್ಟುಪಾಡುಗಳ ಚೌಕಟ್ಟಿನ ಒಳಗಡೆಯೇ ಜೀವನ ನಡೆಸುತ್ತಿರುವುದರಿಂದ ಅವುಗಳ ಆರ್ಥಿಕ ಸ್ಥಿತಿಗತಿಯಲ್ಲಿ ಸಂಪೂರ್ಣವಾಗಿ ಸುಧಾರಣೆಯಾಗುತ್ತಿಲ್ಲವೆಂದೇ ಹೇಳಬಹುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಅಥಣಿ ತಾಲ್ಲೂಕಿನಲ್ಲಿ ಬೇಡ ಜನಾಂಗ, ಜಂಗಮ, ಗೊಲ್ಲ, ಕೊಂಚಿಕೊರವರ, ಪರಿಶಿಷ್ಟ ಜಾತಿ, ಲಿಂಗಾಯತ, ಜೈನ, ಬ್ರಾಹ್ಮಣ ಮೊದಲಾದ ವರ್ಗಗಳಿವೆ. ಶಿರಹಟ್ಟಿ, ನಂದಗಾವ, ಶಂಕರಟ್ಟಿ, ಮೊಳೆ, ಐನಾಪುರ ಮೊದಲಾದ ಗ್ರಾಮಗಳಲ್ಲಿ ಜೈನ ಮತ್ತು ಬ್ರಾಹ್ಮಣ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಂತಹ ವರ್ಗಗಳ ನಡುವೆ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಜನತೆ ಸಾಮಾಜಿಕ ಕಟ್ಟಳೆಗಳಲ್ಲಿ ಬದುಕುತ್ತಿದ್ದಾರೆ. ಇದರಲ್ಲಿ ಕೆಲವೇ ಕೆಲವು ವರ್ಗಗಳು ಅಲ್ಪ ಪ್ರಮಾಣದಲ್ಲಿ ಆಸ್ತಿಯನ್ನು ಹೊಂದಿವೆ. ಉಳಿದ ವರ್ಗಗಗಳು ದಿನಗೂಲಿಗಾಗಿ ದುಡಿಯುತ್ತಿವೆ. ಅಥಣಿ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಇತರೇ ಹಿಂದುಳಿದ ವರ್ಗಗಳು ತಮ್ಮ ಮೂಲ ವೃತ್ತಿ ಮತ್ತು ದಿನಗೂಲಿಯನ್ನು ಅವಲಂಬಿಸಿರುವುದರಿಂದ ಇತರೆ ವೃತ್ತಿಗಳನ್ನು ಕೈಗೊಂಡರೆ ಸಮಾಜದ ನಿಂದನೆಗೆ ಗುರಿಮಾಡಬೇಕೆಂಬ ಭಯದಿಂದ ಇತರೆ ವೃತ್ತಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ೨೦೦೧ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ ೧೧.೦ರಷ್ಟು ಪರಿಶಿಷ್ಟ ಜಾತಿ ಇದ್ದು ಅದರಲ್ಲಿ ಶೇಕಡಾ ೭೦.೩ಕ್ಕಿಂತ ಕಡಿಮೆ ವರ್ಗ ಭೂಮಿಯನ್ನು ಹೊಂದಿದೆ. ೨೦೦೧ರ ಜನಗಣತಿಯ ಪ್ರಕಾರ ಅತ್ಯಂತ ಕಡಿಮೆ ವೇತನ ಸಿಗುವಂತಹ ಕೃಷಿ ಕ್ಷೇತ್ರದಲ್ಲಿಯೇ ದುಡಿಯುತ್ತಿದ್ದಾರೆ. ಅದು ೧೯೯೪ರಲ್ಲಿ ಕೃಷಿ ಕೂಲಿಗಾಗಿ ೨೦.೧ ದುಡಿಯುವ ಪುರುಷರ ಪ್ರಮಾಣದ ೨೦.೯ರಷ್ಟಿದ್ದರೆ ಡಿಸೆಂಬರ್ ೨೦೦೪ಕ್ಕೆ ೫೦.೬೨ ರಷ್ಟಾಗಿದ್ದರೆ, ಮಹಿಳೆಯರ ಪ್ರಮಾಣ ೧೮.೦ ದಿಂದ ೩೪.೯೪ಕ್ಕೆ ಹೆಚ್ಚಾಗಿದೆ. (Directorate and Economics and Statistics, Karnataka)

ಸಮಸ್ಯೆಗಳು

ಈ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನೋಡಿದರೆ ಗ್ರಾಮೀಣ ವರ್ಗವು ಆರ್ಥಿಕವಾಗಿ ಸುಧಾರಿಸಬೇಕಾದರೆ ಇಡೀ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ. ನಮ್ಮ ರಾಷ್ಟ್ರದಲ್ಲಿ ಇದುವರೆಗೆ ಹಮ್ಮಿಕೊಂಡಿರುವ ಅನೇಕ ಕೃಷಿ, ಕೈಗಾರಿಕೆ, ಉದ್ಯೋಗ, ಮೊದಲಾದ ಕಲ್ಯಾಣದ ಗುರಿಮಟ್ಟ, ನೀತಿ/ಪ್ರಯೋಜನಗಳನ್ನು ಒಂದು ಕಟು ಸತ್ಯದ ಗಮನದಲ್ಲಿಟ್ಟುಕೊಂಡು ಗುರುತಿಸಲಾಗಿಲ್ಲ. ಆರ್ಥಿಕ ವ್ಯವಸ್ಥೆಯ ಎಲ್ಲ ರಂಗಗಳಲ್ಲಿ ಪರಸ್ಪರ ಸಂಬಂಧ ಕಲ್ಪಿಸಿದ ವಾತಾವರಣದಲ್ಲಿ ವಿಕಾಸ ಪ್ರಯೋಜನಗಳನ್ನು ಹಮ್ಮಿಕೊಂಡರೆ ಮಾತ್ರ ನಮ್ಮ ಮೂಲಭೂತ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಮತ್ತು ಆರ್ಥಿಕ ಶಿಸ್ತು ಸುಧಾರಣೆಗಳು ಸಾಧ್ಯ.

ಗ್ರಾಮೀಣ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಸರ್ಕಾರಗಳು ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಈ ಯೋಜನೆಗಳಲ್ಲಿ ಕೆಲವು ಸ್ವಯಂ ಉದ್ಯೋಗವನ್ನು ಕಲ್ಪಿಸುವ ಕಾರ್ಯಕ್ರಮಗಳಾಗಿವೆ. ಉದಾಹರಣೆಗೆ : ಸ್ವರ್ಣ ಜಯಂತಿ, ರೋಜಗಾರ ಯೋಜನೆ, ಇದು ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆ. ಇಂತಹ ಹಲವಾರು ಯೋಜನೆಗಳ ಮೂಲಕ ಗ್ರಾಮೀಣ ಬಡಕುಟುಂಬಗಳಿಗೆ ತಮ್ಮ ಬಡತನವನ್ನು ಶಾಶ್ವತವಾಗಿ ನಿವಾರಿಸುವ ಸಲುವಾಗಿ ಉತ್ಪಾದಕ ಆಸ್ತಿಗಳನ್ನು ಹೊಂದಲು ಅನುವು ಮಾಡಿಕೊಡಲಾಗುತ್ತಿದೆ. ಆದರೆ ಈ ಪ್ರಯೋಜನಗಳಲ್ಲಿ ಹಲವಾರು ನ್ಯೂನ್ಯತೆಗಳಿವೆ. ಅಲ್ಪ ಪ್ರಮಾಣದ ಕೆಲವೇ ವ್ಯಕ್ತಿಗಳಿಗೆ ಸಿಗುತ್ತವೆ. ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಲೋಪದೋಷಗಳಿವೆ. ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯಗಳ ಸಮರ್ಪಕ ಬಳಕೆಯ ಬಗ್ಗೆ ತಕ್ಕ ಉಸ್ತುವಾರಿಯ ಕೊರತೆ ಇದೆ. ಇದ್ದರೂ ಭ್ರಷ್ಟಾಚಾರ ದಿಂದ ಉಸ್ತುವಾರಿಕೆಯನ್ನು ಮಾಡದೇ ಇರುವ ಪ್ರಸಂಗವೂ ಉಂಟು. ಹೀಗಾಗಿ ನೀಡಿದ ಸೌಲಭ್ಯಗಳು ತಾಳಿಕೆ ಇಲ್ಲದಾಗುತ್ತಿವೆ. ಅವುಗಳ ಮೇಲೆ ಸರ್ಕಾರ ಚೆಲ್ಲಿದ ಹಣ ಪೋಲಾಗುತ್ತಿದೆ. ಇದರಿಂದಾಗಿ ಬಡವರ ಕೂಲಿಕಾರ್ಮಿಕರ ಬವಣೆಯೂ ನೀಗುವುದಿಲ್ಲ.

ಈ ಕಾರಣಕ್ಕಾಗಿ ದಿನಗೂಲಿ ಪ್ರಯೋಜನಗಳು ಸ್ವಯಂ ಉದ್ಯೋಗ ಪ್ರಾಯೋಜನೆಗಿಂತ ಲೇಸು ಎಂಬುದು ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಪರಿಷ್ಕೃತ ರೀತಿಯಲ್ಲಿ ಹಮ್ಮಿಕೊಳ್ಳಲಾದ ‘ಕೂಲಿಗಾಗಿ ಕಾಳು’ ಯೋಜನೆಯಡಿಯಲ್ಲಿ ಕಾರ್ಮಿಕರ ಶ್ರಮಕ್ಕೆ ತಕ್ಕ ಫಲವಾಗಿ ಭಾಗಶಃ ನಗದು ಮತ್ತು ಭಾಗಶಃ ನೀಡುವ ಯೋಜನೆಯು ಔಚಿತ್ಯಪೂರ್ಣ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಆದರೆ ಯಾರು ನಿರಾಶ್ರಿತರು ಕೂಲಿಯಿಂದಲೇ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ಗುರುತಿಸುವುದು ಕಷ್ಟವಾಯಿತು. ಕೆಲವು ಪ್ರಭಾವಿ ವ್ಯಕ್ತಿಗಳ ಮೂಲಕ ಬಂದವರಿಗೆ ಉದ್ಯೋಗ ನೀಡುವ ಪ್ರಯತ್ನಗಳಾಗಿವೆ. ಅಲ್ಲದೇ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅಧಿಕಾರಿ ವರ್ಗಗಳು ಕೂಲಿಗಾಗಿ ಕಾಳು ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಕೊಡಲು ಬಂದ ಅಕ್ಕಿಯನ್ನು ಕೆಲವೇ ಕಾರ್ಮಿಕರಿಗೆ ನೀಡಿದಂತೆ ಮಾಡಿ ಉಳಿದ ಅಕ್ಕಿಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟಮಾಡಿ ಅಧಿಕಾರಿಗಳು ಮಧ್ಯವರ್ತಿಗಳು ಲಾಭಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಯೋಜನೆಯನ್ನು ದಕ್ಷವಾಗಿ ರೂಪಿಸಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರೆ, ಗ್ರಾಮೀಣ ಕಾರ್ಮಿಕರಿಗೆ ಸತತ ಉದ್ಯೋಗ ದೊರೆಯುತ್ತಿತ್ತಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ರಸ್ತೆ, ಶಾಲಾಕಟ್ಟಡ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿದಂತೆಯೂ ಆಗುತ್ತಿತ್ತು.

ಸಲಹೆಗಳು

  • ಗ್ರಾಮೀಣ ಬಡಜನರ ಆರ್ಥಿಕ ಸ್ಥಿತಿ ಉತ್ತಮವಾಗಬೇಕಾದರೆ ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು.
  • ಸ್ವಸಹಾಯ ಸಂಘಗಳಿಗೆ ಹೆಚ್ಚು ಒತ್ತುಕೊಡುವ ಮೂಲಕ ಆರ್ಥಿಕ ಸಾಮಾಜಿಕ ಸಮಸ್ಯೆಗಳ ನಿವಾರಣೆಯ ಸಾಧನಗಳನ್ನಾಗಿ ಮಾಡಬೇಕು.
  • ಬಡತನದಲ್ಲಿರುವ ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು  ಬಡತನ ದಿಂದ ಮೇಲೆತ್ತಲು ಒತ್ತು ನೀಡಬೇಕು.
  • ಕೃಷಿ ಮೇಲಿನ ಅವಲಂಬನೆ ಕಡಿಮೆ ಮಾಡಿ ಸ್ವ ಉದ್ಯೋಗಕ್ಕೆ ಒತ್ತು ನೀಡಬೇಕು.
  • ಶೈಕ್ಷಣಿಕ ಅಂಶಕ್ಕೆ ಹೆಚ್ಚು ಒತ್ತು ನೀಡಬೇಕು. ಇದರಿಂದ ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ತಿಳಿದುಕೊಂಡು ಆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನಗಳಾಗುತ್ತವೆ. ಇದರಿಂದ ಉದಾರೀಕರಣ, ಖಾಸಗೀಕರಣದಂತಹ ವ್ಯವಸ್ಥೆಯಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

 

Reference

1. Najundappa.D.M. and M.B.Goud’’Development of backward areas’’ uppal, New Delhi, 1987.

2. Dadubgavi, R.V.’’Disparities in Social Inftrastructure development in India’”, 197-71 to 198-85, The Asian Economic Review, 1991, Vol, XXXIII.

3. Ajit Kumar, Singh,’’Pattern of Regional Development, New Delhi, Sterling publishers Pvt, Ltd, 1981.

4. Pralhadachar.M’’ Regional Desparities in Industry in Karnataka : Current Status and F uture Outlook’’ A Paper presented at the seminar orgafnised by PA and ISEC, Bangalore, 1994.

5. Puttasomaiah.K, ‘‘Economic Development of Karnataka’’, New Delhi, oxford and IBH Publishing Co, Vol.II 1980.

6. Sarlar.P.C., ‘‘Regional Imbalance in Indian Economy over Period’’ Economic and Political weekly, Vol.XXIX, No.11, 1994.

7. Dr.Sreenivas Gouda, Economic Status of Agricultural Labourar, Gramachetana Abhinandana Grantha, Laxmi Mudranalaya, Bangalore, 2005

8. Sample Survey, Directorate of Economics and Statistics, Karnataka, 2004.

9. Gazatter of Belgaum, 2004.