ಸುತ್ತ ಬೆಳೆದಿದೆ ಹುತ್ತ ; ನಾನಿರುವೆ
ತಳಾತಳದಲ್ಲಿ ನಿಡುಸುಯ್ಯುತ್ತ.
ಕತ್ತಲೋ ಕತ್ತಲು ; ಎತ್ತರದಲ್ಲಿ
ಎಲ್ಲೋ ಜಿನುಗುತಿದೆ ಒಂದಿಷ್ಟು
ಬೆಳಕು, ಬಿಲದ ಬೆಳಕಿಂಡಿಯಿಂದ,
ಹೇಗೆ ಬೆಳೆಯಿತೋ ನನ್ನ ಸುತ್ತ
ಈ ಹುತ್ತ ! ಮಲಗಿದವನೆಂದೋ
ಎದ್ದು ಕಣ್ತೆರೆದಾಗ ಮೂಳೆ ಮೂಳೆಯ
ತನಕ ಗೆದ್ದಲಿನ ಒಳಸಂಚು ;
ಬುದ್ಧಿ-ಮನಸ್ಸುಗಳ ಪದರ ಪದರ-
ಗಳೆಲ್ಲ ತೂತೋ ತೂತು. ಯಾವ
ಋಷಿ ಕಮಂಡಲುಜಲದ ತೀರ್ಥ
ಸಂಪ್ರೋಕ್ಷಣೆಗೆ ಕರಗಿ ಬೀಳುವುದೊ
ಸುತ್ತಲೂ ಮೆತ್ತಿರುವ ಕತ್ತಲೆಯ ಹುತ್ತ,
ತಳಾತಳದಲ್ಲಿ ನಾನಿರುವೆ ಹಗಲೂ
ಇರುಳು ಕಾಯುತ್ತ, ನಿಡುಸುಯ್ಯುತ್ತ.