ನಮ್ಮ ದೇಶದಲ್ಲಿ ಅನೇಕ ನಗರಗಳಲ್ಲಿ ವಾಸವಾಂಬಾ ದೇವಾಲಯಗಳಿವೆ. (‘ವಾಸವಾಂಬಾ’ ‘ಕನ್ಯಕಾ ಪರಮೇಶ್ವರಿ’ಗೆ ಮತ್ತೊಂದು ಹೆಸರು).

ವಾಸವಿ ಆತ್ಮಗೌರವದ ಸಂಕೇತವಾಗಿದ್ದಾಳೆ. ಆತ್ಮಗೌರವವನ್ನು ಉಳಿಸಿಕೊಳ್ಳು ಅನ್ಯಾಯವನ್ನು ವಿರೋಧಿಸಿ ಬಲಿದಾನ ಮಾಡಿದ ವೀರ ಕನ್ಯೆ ಎಂದು ವಾಸವಿಗೆ ಇಂದೂ ಪೂಜೆ ಸಲ್ಲುತ್ತದೆ.

ಪೆನುಗೊಂಡೆ ಆಂಧ್ರ ದೇಶದಲ್ಲಿ ಪ್ರಸಿದ್ಧವಾದ ಒಂದು ಪಟ್ಟಣ. ಇದು ಸುತ್ತಲಿನ ವಿಶಾಖಪಟ್ಟಣ, ನರಸಾಪುರ ಮೊದಲಾದ ಹದಿನೆಂಟು ನಗರಗಳ ರಾಜಧಾನಿಯಾಗಿತ್ತು.

ಕುಸುಮ ಶ್ರೇಷ್ಠಿ

ಅದನ್ನು ಕಲ್ಹಾರ ಎಂಬುವನು ಆಳುತ್ತಿದ್ದನು. ಕಲ್ಹಾರನಿಗೆ ಒಬ್ಬ ಮಗ; ಅವನ ಹೆಸರು ಕುಸುಮ ಶ್ರೇಷ್ಠಿ. ಅವನು ಪ್ರಾಪ್ತ ವಯಸ್ಕನಾದನು. ಚೆನ್ನಾಗಿ ವಿದ್ಯೆ ಪಡೆದಿದ್ದ. ಅವನಿಗೆ ಮಣಿಕುಂಡಲನ ಮಗಳಾದ ಕುಸುಮಾಂಬೆಯನ್ನು ತಂದು ಮದುವೆ ಮಾಡಿದರು. ಕಲ್ಹಾರನು ಅನೇಕ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿದ. ಮುಪ್ಪು ಬಂದಾಗ ವಾನಪ್ರಸ್ಥಾ ಶ್ರಮವನ್ನು ಬಯಸಿದ . ಕುಸುಮ ಶ್ರೇಷ್ಠಿಗೆ ಪಟ್ಟಾಭಿಷೇಕ ಮಾಡಿದ. ಕುಸುಮ ಶ್ರೇಷ್ಠಿಗೆ ಜೊತೆಗೆ ಏಳುನೂರ ಹದಿನಾಲ್ಕು ಗೋತ್ರಜರ ಮುಖಂಡತ್ವವೂ ಪ್ರಾಪ್ತವಾಯಿತು.

ಕಲ್ಹಾರನು ತಪಸ್ಸು ಮಾಡಲು ಕಾಡಿಗೆ ಹೊರಟು ಹೋದನು.

ಕಲುಸುಮ ಶ್ರೇಷ್ಠಿಯು ಒಳ್ಳೆಯ ರಾಜನಾದ. ಕುಸುಮಾಂಬೆಯು ರಾಜನಿಗೆ ತಕ್ಕ ಪತ್ನಿಯಾಗಿದ್ದಳು. ತನ್ನ ಸರ್ವಸ್ವವನ್ನೂ ಪರಾರ್ಥಕ್ಕಾಗಿ ವಿನಿಯೋಗಿಸಿದ್ದ ಸಾಧ್ವಿ, ಸದಾ ಪತಿಕಾರ್ಯದಲ್ಲಿ ನೆರವಾಗಿ ನಿಂತಳು.

ಚಿಂತೆ ಬೇಡ, ಮಹಾರಾಜ

ಅನೇಕ ವರ್ಷಗಳಾದರೂ ರಾಜದಂಪತಿಗಳಿಗೆ ಮಕ್ಕಳಾಗಲಿಲ್ಲ. ರಾಣಿ ಕುಸುಮಾಂಬೆ ಅನೇಕ ವ್ರತ-ಪೂಜೆಗಳನ್ನು ಭಕ್ತಿಯಿಂದ ನಡೆಸಿದಳು. ರಾಜರಾಣಿಯರು ಹಲವು ಯಾತ್ರಸ್ಥಳಗಳಿಗೆ ಹೋಗಿ ಪೂಜೆ ಸಲ್ಲಿಸಿದರು. ಅಪಾರವಾಗಿ ಧನಕನಕ, ಗೋ, ಭೂ, ವಾಹನಾದಿ ದಾನಗಳನ್ನು ಮಾಡಿದರು. ದೀನರು, ಅನಾಥರು ಆದವರಿಗೆ ಗೃಹ, ಭೂಮಿಗಳನ್ನು ಇತ್ತರು . ಆದರೂ ಅವರ ಆಸೆ ಫಲಿಸಲಿಲ್ಲ.

ಒಂದು ದಿನ ರಾಜಗುರುಗಳಾದ ಭಾಸ್ಕರಾ ಚಾರ್ಯರು ಕುಸುಮ ಶ್ರೇಷ್ಠಿಯಲ್ಲಿಗೆ ಬಂದರು. ರಾಜನು ಅವರನ್ನು ಬಹಳ ಗೌರವದಿಂದ ಬರಮಾಡಿಕೊಂಡು ಉಚಿತಾಸನದಲ್ಲಿ ಕುಳ್ಳಿರಿಸಿದನು. ಸುಪ್ರೀತರಾಗಿದ್ದ ಗುರುಗಳು ಅವನನ್ನು ವಾತ್ಸಲ್ಯದಿಂದ ಮಾತನಾಡಿಸಿ ಹೀಗೆ ಕೇಳಿದರು:

“ಅಯ್ಯಾ ಕುಸುಮ ಶ್ರೇಷ್ಠಿ, ನೀನು ಮಕ್ಕಳಾಗಲಿಲ್ಲ ಎಂದು ತುಂಬಾ ಚಿಂತಿಸುತ್ತಿರುವೆಯಲ್ಲವೆ?”

“ಹೌದು ಗುರುಗಳೆ. ನನ್ನ ಹೆಂಡತಿಯೂ ಸಹ ಅದನ್ನೇ ಮನಸ್ಸಿಗೆ ಬಹಳವಾಗಿ ಹಚ್ಚಿಕೊಂಡು ಖಿನ್ನಳಾಗಿದ್ದಾಳೆ. ನಮ್ಮ ಚಿಂತೆಗೆ ಯಾವುದು ಪರಿಹಾರ ಎಂದು ನೀವೇ ತೋರಿಸಿಕೊಡಬೇಕು”.

“ನಾನು ಬಂದುದೇ ಅದಕ್ಕಾಗಿ. ತ್ರೇತಾಯುಗದಲ್ಲಿ ದಶರಥ ಮಹಾರಾಜನು ಪುತ್ರಕಾಮೇಷ್ಠಿ ಯಾಗವನ್ನು ಮಾಡಿ, ಆ ಮಹಾವಿಷ್ಣುವನ್ನೇ ಮಗನಾಗಿ ಪಡೆದ ಎಂದು ಕೇಳಿದ್ದಿ ಅಲ್ಲವೆ. ನೀನು ಏಕೆ ಆ ಯಾಗವನ್ನು ಮಾಡಬಾರದು?”

“ತಾವು ಏನು ಹೇಳುತ್ತಿದ್ದೀರಿ ಗುರುದೇವ! ಅಂತಹ ಯಾಗವನ್ನು ನನ್ನಂಥವನಿಂದ ಮಾಡಲಾದೀತೆ? ದೇವರು ನನ್ನ ಭಕ್ತಿಗೆ ಒಲಿಯುವನೆ?”

“ನಿಸ್ಸಂಶಯವಾದ ಮನಸ್ಸಿನಿಂದ ಮಾಡು. ನಿನಗೇನು ಅಸಾಧ್ಯವಲ್ಲ”.

“ತಮ್ಮ ಅಪ್ಪಣೆಯಂತೆಯೇ ಆಗಲಿ. ಗುರುವಾಕ್ಯ ಅನುಲ್ಲಂಘನೀಯವಾದುದು. ಆದರೆ ನನ್ನದೊಂದು ಪ್ರಾರ್ಥನೆ. ಮುಂದೆ ನಿಮತು ಯಾವುದೂ ಲೋಪವಾಗದಂತೆ ಯಾಗವನ್ನು ಮಾಡಿಸುವ ಜವಾಬ್ದಾರಿ ನಿಮ್ಮದು . ಇಂದಿನಿಂದ ನಾನು, ನನ್ನ ಅಧಿಕಾರಿಗಳು ನಿಮ್ಮ ಅಧೀನ. ನನ್ನ ಸಕಲ ಸಂಪತ್ತನ್ನು ನಿಮಗೆ ಒಪ್ಪಿಸಿದ್ದೇನೆ”.

“ಹಾಗೆಯೇ ಆಗಲಿ. ಲೋಕಕಲ್ಯಾಣಾರ್ಥವಾಗಿ ನಡೆಯಿಸುವ  ಈ ಯಜ್ಞ ಕಾರ್ಯದ ಹೊಣೆಯನ್ನು ನಾನೇ ವಹಿಸುತ್ತೇನೆ. ನಿನಗೆ ಸಕಲ ಸನ್ಮಂಗಳಗಳಾಗಲಿ” ಎಂದು ಹರಸಿ ಗುರುಗಳು ಮೇಲೆದ್ದರು.

ಭಾಸ್ಕರಾಚಾರ್ಯರ ಮಾರ್ಗದರ್ಶನದಲ್ಲಿ ಯಾಗ ವಿಧಿವತ್ತಾಗಿ ನಡೆಯಿತು. ವಿದ್ವಾಂಸರಿಗೆ ಗೌರವ ಸಂದಿತು. ಬಡಬಗ್ಗರಿಗೆ ರಾಜನು ಬಿಡುಗೈಯಿಂದ ದಾನ ಮಾಡಿದ. ಪ್ರಜೆಗಳೆಲ್ಲ ನಲಿದರು. ರಾಜದಂಪತಿಗಳಿಗೆ ಮಕ್ಕಳಾಗಲಿ ಎಂದು ಹಾರೈಸಿದರು.

ಸ್ವಲ್ಪ ಕಾಲ ಕಳೆಯಿತು. ಕುಸುಮಾಂಬೆ ಗರ್ಭವತಿಯಾದಳು. ರಾಜನಿಗೆ ತುಂಬಾ ಸಂತೋಷವಾಯಿತು. ತಮ್ಮ ಪ್ರೀತಿಯ ರಾಜರಾಣಿಯರಿಗೆ ಸಂತೋಷವಾಯಿತು ಎಂದು ಪ್ರಜೆಗಳಿಗೆ ಸಂತೋಷ. ಜೊತೆಗೆ ತಮ್ಮ ರಾಜ್ಯದ ಸಿಂಹಾಸನದ ಮೇಲೆ ಮುಂದೆ ಕುಳಿತುಕೊಳ್ಳುವ ಮಗು ಬರಲಿದೆ ಎಂದು ಸಂತೋಷ.

ತಂದೆತಾಯಿರ ಭಾಗ್ಯ

ವೈಶಾಖ ಮಾಸದ ಶುಕ್ಲ ಪಕ್ಷ ದಶಮಿ ಶುಕ್ರವಾರ ಸಂಜೆ ಉತ್ತರಾ ನಕ್ಷತ್ರ ಕನ್ಯಾ ಲಗ್ನದಲ್ಲಿ ಕುಸುಮಾಂಬೆಯು ಅವಳಿ ಮಕ್ಕಳಿಗೆ ಜನ್ಮವಿತ್ತಳು; ಒಂದು ಗಂಡು, ಮತ್ತೊಂದು ಹೆಣ್ಣು, ಗಂಡು ಮಗುವಿಗೆ ವಿರೂಪಾಕ್ಷ ಶ್ರೇಷ್ಠಿ ಎಂದೂ ಹೆಣ್ಣು ಮಗುವಿಗೆ ವಾಸವಿ ಎಂದೂ ನಾಮಕರಣ ಮಾಡಿದರು.

ಮಕ್ಕಳಿಬ್ಬರೂ ಹುಣ್ಣಿಮೆಯ ಚಂದ್ರನಂತೆ ಬೆಳೆಯುತ್ತಾ ನಾಡಿಗೆ ಬೆಳಕಾಗತೊಡಗಿದರು.

ಭಾಸ್ಕರಾಚಾರ್ಯರು ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು. ಆ ಮಕ್ಕಳ ಗ್ರಹಣ ಶಕ್ತಿಯನ್ನು ಕಂಡು ಬೆಕ್ಕಸ ಬೆರಗಾದರು. ಬಹುಬೇಗ ಅವರು ಹೇಳಿಕೊಟ್ಟಿದ್ದನ್ನು ಕಲಿತು ವಿದ್ಯಾವಂತರಾದರು.

ವಾಸವಿಯ ಮನಸ್ಸು ಅರಳಿದಂತೆ, ವಿದ್ಯೆ ಬೆಳೆದಂತೆ ಅವಳ ಚೆಲುವೂ ಹೆಚ್ಚಿತು.

ಮಗಳು ಇಷ್ಟು ಸುಂದರಿಯಾಗಿ, ವಿದ್ಯಾವತಿಯಾಗಿ ಸದ್ಗುಣಶೀಲೆಯಾಗಿ ಬೆಳೆಯುತ್ತಿರುವುದನ್ನು ಕಂಡು ತಂದೆತಾಯಿಯರಿಗೆ ಸಂತೋಷ ಉಕ್ಕಿತು. ಅವಳಿಗೆ ಉತ್ತಮನಾದ ವರನನ್ನು ಹುಡುಕಿ ಕನ್ಯಾದಾನ ಮಾಡಿ ಕೃತಾರ್ಥರಾಗಬೇಕೆಂದು ಆಲೋಚಿಸತೊಡಗಿದರು. ಕುಸುಮಶ್ರೇಷ್ಠಿಯು ಮಂತ್ರಿಗಳನ್ನೂ ಗುರುಹಿರಿಯರನ್ನೂ ಕರೆಸಿ ಮಗಳ ಮದುವೆಯ ಬಗೆಗೆ ಆಲೋಚಿಸಿದನು. ವರನನ್ನು ಹುಡುಕಲು ಬೇರೆ ಬೇರೆ ನಾಡುಗಳಿಗೆ ದೂತರನ್ನು ಕಳಿಸಿದನು.

ಚಿಂತೆ ಏನು, ವಾಸವಿ?’

ಆದರೆ ವಿದ್ಯಾಭ್ಯಾಸ ಮುಂದುವರಿದಂತೆ, ಚೆಲುವು ಹೆಚ್ಚಿದಂತೆ ವಾಸವಿ ಅಂತರ್ಮುಖಿಯಾಗತೊಡಗಿದಳು. ಯಾವಾಗಲೂ ಗಂಭೀರವಾದ ಆಲೋಚನೆಯಲ್ಲಿರುವಳು.

ಕುಸುಮ ಶ್ರೇಷ್ಠಿಯು ಹತ್ತಿರ ಬಂದು ತಲೆಯನ್ನು ನೇವರಿಸುತ್ತಾ ಪ್ರೀತಿಯಿಂದ, “ಮಗೂ, ನಿನಗೆ ಅನುರೂಪನಾದ ವರನನ್ನು ಹುಡುಕಿಕೊಂಡು ಬರಲು ನಾನಾ ಊರುಗಳಿಗೆ ಹಿರಿಯರನ್ನು ಕಳಿಸಿದ್ದೇವೆ. ನೀನು ನಿನ್ನ ಮನಸ್ಸಿಗೆ ಒಲಿದವರನ್ನು ಆರಿಸಿಕೋ. ಸಂತೋಷದಿಂದ ಮದುವೆ ಮಾಡುತ್ತೇವೆ. ನಿನ್ನ ಮದುವೆಯನ್ನೆ ನಾವು ಸಡಗರದಿಂದ ಎದುರು ನೋಡುತ್ತಿದ್ದೇವೆ. ಆದರೆ ಈಚೆಗೆ ನಿನ್ನ ಮುಖದಲ್ಲಿ ಕಾಂತಿಯೇ ಕುಂದುತ್ತಿದೆಯಲ್ಲಾ! ನಿನಗೇನಾದರೂ ಚಿಂತೆಯೆ? ಸಂಕೋಚವನ್ನು ಬಿಟ್ಟು ಹೇಳು” ಎಂದನು.

“ಅಪ್ಪಾಜಿ!” ವಾಸವಿ ಹೇಳಿದಳು, “ನಿಮ್ಮ ಮಗಳಾಗಿ ಹುಟ್ಟಿದ ನನಗೆ ಯಾವ ಕೊರತೆ ತಾನೆ ಉಂಟಾಗಲು ಸಾಧ್ಯ? ಆದರೆ….”

“ಆದರೆ ಏನು ಮಗೂ? ನಿನ್ನ ಮನಸ್ಸಿನಲ್ಲಿರುವುದನ್ನು ಹೇಳು. ನೀನು ನಗುನಗುತ್ತ ಇರುವುದು ನಮಗೆ ಮುಖ್ಯ. ನಿನಗೇನು ಬೇಕು ಹೇಳು. ನನ್ನಿಂದಾದ ಪ್ರಯತ್ನವನ್ನೆಲ್ಲ ಮಾಡಿ, ಪ್ರಾಣವನ್ನು ಒತ್ತೆಯಾಗಿಟ್ಟಾದರೂ ನಿನ್ನ ಆಸೆಯನ್ನು ಪೂರೈಸುತ್ತೇನೆ”.

ಈಶ್ವರನೇ ನನ್ನ ಗಂಡ

ಅಪ್ಪಾ, ನಾನು ಮದುವೆಯಾಗಬಾರದೆಂದು ನಿಶ್ಚಯಿಸಿದ್ದೇನೆ.

ಮಗಳ ಮಾತನ್ನು ಕೇಳಿ ತಂದೆತಾಯಿಗೆ ದಿಗ್ಭ್ರಮೆಯಾಯಿತು. ಒಂದು ಕ್ಷಣ ಮಾತೇ ಆಡಲು ತೋರಲಿಲ್ಲ. ಅನಂತರ ತಂದೆ ಹೇಳಿದ: “ಮಗೂ ವಾಸವಿ, ಅದು ಹೇಗೆ ಸಾಧ್ಯವಮ್ಮ? ಯೋಚನೆ ಮಾಡಿನೋಡು. ನೀನು ಮದುವೆಯೇ ಇಲ್ಲದೆ ಇರುವುದು ಸಾಧ್ಯವೆ? ಹಿರಿಯರು ಒಪ್ಪುವರೆ? ನಮ್ಮ ಧರ್ಮ ಒಪ್ಪುತ್ತದೆಯೆ?”

“ಅಪ್ಪಾಜಿ, ನೀವು ಯಾಗಮಾಡಿ ನನ್ನನ್ನು ಪಡೆದಿರಿ, ಅಲ್ಲವೆ?”

“ಹೌದು ಮಗು”.

“ಈ ಜಗತ್ತಿನಲ್ಲಿ ಇನ್ನು ಯಾರಾದರೂ ಹಾಗೆ ಯಜ್ಞ ಮುಖದಿಂದ ಬಂದವನ ಕೈಯನ್ನು ತಾನೇ ನಾನು ಹಿಡಿದು ಬಾಳಬೆಕಾದುದು?”

“ಅಂದರೆ?”

“ಅಂದರೆ, ಈ ಲೋಕದಲ್ಲಿ ನನ್ನ ಕೈ ಹಿಡಿಯುವಂತಹರು ಯಾರೂ ಇಲ್ಲ. ನನ್ನ ಪತಿಯಾಗಬಲ್ಲವನು ಒಬ್ಬನೇ-ಈಶ್ವರ. ನನ್ನ ಅಂತರ್ವಾಣಿಯು ಸಹ ಸದಾ ‘ಅವನನ್ನೇ ಮದುವೆಯಾಗು , ಅವನೇ ನಿನ್ನ ಗಂಢ, ಅವನನ್ನೇ ನೀನು ಭಕ್ತಿ, ಶ್ರದ್ಧೆ, ತಪಸ್ಸುಗಳಿಂದ ಒಲಿಸಿಕೋ, ಎಂಬುದಾಗಿ ಹೇಳುತ್ತಿದೆ”.

‘ನನ್ನ ಪತಿಯಾಗಬಲ್ಲವನು ಒಬ್ಬನೇ….. ಈಶ್ವರ.’

ತಂದೆತಾಯಿಗಳಿಗೆ ಮತ್ತೆ ದಿಗ್ಭ್ರಮೆ. ಏನು ಹೇಳಬೇಕೆಂದೇ ತೋರಲಿಲ್ಲ. ವಿಗ್ರಹಗಳಂತೆ ನಿಂತಿದ್ದರು.

ವಾಸವಿ ಮಾತನ್ನು ಮುಂದುವರಿಸಿದಳು. ನನಗೆ ಈಗ ಈ ಲೋಕದ ಯಾವುದರಲ್ಲಿಯೂ ಆಸಕ್ತಿಯಿಲ್ಲ. ನೀವು ದಯಮಾಡಿ ಅಪ್ಪಣೆ ಕೊಡಿ. ಆ ಕೈಲಾಸಪತಿಯನ್ನು ಭಕ್ತಿಯಿಂದ ಆರಾಧಿಸಿ ಗಂಡನನ್ನಾಗಿ ಪಡೆಯುತ್ತೇನೆ. ಇದೊಂದೇ ನನ್ನ ಆಸೆ, ನಡೆಸಿಕೊಡಿ.

ಅವಳ ಆಸೆ ನಡೆಸಿ

ಕುಸುಮ ಶ್ರೇಷ್ಠಿ ಕುಸುಮಾಂಬೆಯರಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಮನುಷ್ಯರಾದ ನಾವೆಲ್ಲಿ; ದೇವದೇವನಾದ ಶಿವನೆಲ್ಲಿ! ವಾಸವಿಗೆ ಬುದ್ಧಿ ಭ್ರಮಣೇಯಾಗಿರಬಹುದೇ ಎಂದು ಸಂದೇಹವಾಯಿತು. ಆದರೆ ಶಾಂತವಾದ ಅವಳ ಮುಖಭಾವವನ್ನು ನೋಡಿ ಅವರಿಗೆ ಏನೂಂದೂ ತೋರದಾಯಿತು.

ಆ ಹೊತ್ತಿಗೆ ರಾಜಗುರುಗಳಾದ ಭಾಸ್ಕರಾ ಚಾರ್ಯರು ಅಲ್ಲಿಗೆ ಬಂದರು. ಕುಸುಮ ಶ್ರೇಷ್ಠಿ ಕುಸುಮಾಂಬೆಯರು ಚಿಂತೆಯಲ್ಲಿ ಮುಳುಗಿದ್ದರು. ಗುರುಗಳು ಬಂದುದೂ ಅವರಿಗೆ ಅರಿವಿಲ್ಲ. ಭಾಸ್ಕರಾಚಾರ್ಯರು ‘ರಾಜದಂಪತಿಗಳಿಗೆ ಶುಭವಾಗಲಿ’ ಎಂದಾಗಲೇ ಅವರು ಎಚ್ಚೆತ್ತದ್ದು.

ಕುಸುಮ ಶ್ರೇಷ್ಠಿಯು ಗುರುಗಳನ್ನು ಉಚಿತವಾಗಿ ಬರಮಾಡಿಕೊಳ್ಳದಿದ್ದುದಕ್ಕೆ ನಾಚಿದನು. ಅವರನ್ನು ಸ್ವಾಗತಿಸಿ ಉಪಚರಿಸಿ, ಕ್ಷಮೆ ಬೇಡಿದನು. ಅನಂತರ ಮಗಳ ಇಚ್ಛೆಯನ್ನು ಗುರುಗಳಿಗೆ ನಿವೇದಿಸಿ, “ನಾವೆಲ್ಲಿ, ಈಶ್ವರನೆಲ್ಲಿ? ತಾವೇ ಯಾಗ ಮಾಡಲು ನಮಗೆ ಮಾರ್ಗದರ್ಶನ ಮಾಡಿದಿರಿ, ವಾಸವಿ ಜನಿಸಿದಳು. ಈಗಲೂ ತಾವೇ ದಾರಿ ತೋರಬೇಕು” ಎಂದನು.

ಭಾಸ್ಕರಾಚಾರ್ಯರು ಒಂದು ಸಲ ವಾಸವಿಯ ಕಡೆಗೂ ಮತ್ತೊಂದು ಸಲ ರಾಜರಾಣಿಯರ ಕಡೆಗೂ ಗಂಭೀರವಾಗಿ ದೃಷ್ಟಿ ಹಾಯಿಸಿದರು. ಅನಂತರ ಅವರು, “ರಾಜ, ವಾಸವಿ ಕೇವಲ ನಿಮ್ಮ ಮಗಳು ಎಂದು ಕೊಂಡೆಯಾ? ಹಾಗೆ ಭಾವಿಸಿದ್ದರಿಂದಲೇ ನಿಮಗೀಗ ಈ ಚಿಂತೆ ಉಂಟಾಗಿದೆ. ಆಕೆ ಯಾರೆಂದು ತಿಳಿದೆ? ಸಾಕ್ಷಾತ್‌ ಪಾರ್ವತಿಯಲ್ಲವೆ! ಮೋಹವನ್ನು ಬಿಡು. ಅವಳ ಕೋರಿಕೆಯು ಸಹಜವಾಗಿಯೇ ಇದೆ. ಅವಳು ಉಮೆಯಂತೆ ತಪಸ್ಸು ಮಾಡಿ ಶಂಕರನನ್ನು ಮೆಚ್ಚಿಸಲಿ; ಗಂಡನನ್ನಾಗಿ ಪಡೆಯಲಿ.  ಅವಳ ಇಷ್ಟಕ್ಕೆ ವಿರುದ್ಧವಾಗಿ ನಡೆಯಬೇಡ. ಅವಳ ಸಾಧನೆಗೆ ಬೇಕಾದ ಸೌಕರ್ಯಗಳನ್ನು ಒದಗಿಸು. ನಿಮಗೆಲ್ಲ ಮಂಗಳವಾಗುತ್ತದೆ ಎಂದು ಹೇಳಿದರು. ಅನಂತರ ವಾಸವಿಯ ಕಡೆ ತಿರುಗಿ,“ಅಮ್ಮಾ ವಾಸವಿ, ನೀನು ತಮ್ಮ ಮಗಳೆಂದು ಮೋಹ, ಮಮತೆಗಳು ಇವರ ಮನಸ್ಸನ್ನು ಮುಸುಕಿವೆ.ಇವರು ನಿನ್ನನ್ನು ಸರಿಯಾಗಿ ತಿಳಿಯಲಾರರು. ನಿನ್ನ ಇಷ್ಟದಂತೆಯೇ ಮಾಡು ತಾಯಿ. ನಿನಗೆ ಸರ್ವಸಿದ್ಧಿಗಳು ಲಭಿಸಲಿ” ಎಂದರು. ಎಲ್ಲರನ್ನೂ ಹರಸಿ ಅಲ್ಲಿಂದ ಹೊರಟು ಹೋದರು.

ಮಗಳೆಂಬ ಅಭಿಮಾನವನ್ನು ಬಿಡಿ

ಗುರುಗಳ ಮಾತುಗಳು ರಾಜರಾಣಿಯರ ಮನಸ್ಸಿನಲ್ಲಿ ನೆಟ್ಟವು. ವಾಸವಿಯ ನಿರ್ಧಾರ ಸರಿಯಾದದ್ದು ಎಂದು ಅವರಿಗೂ ತೋರಿತು. ಆದರೂ ಅವಳು ಮಗಳು ಎಂಬ ಮಮತೆಯನ್ನೂ ಸಂಪೂರ್ಣವಾಗಿ ಬಿಡಲು ಸಾಧ್ಯವಾಗಲಿಲ್ಲ. ಅವರು ವಾಸವಿಗೆ ಹೀಗೆ ಹೇಳಿದರು:

“ಮಗಳೇ, ಗುರುಗಳ ಮಾತಿನಂತೆಯೇ ನಾವು ನಡೆಯುವವರು. ನೀನು ನಿನಗೆ ಇಷ್ಟ ಬಂದ ರೀತಿಯಲ್ಲಿ ನಿನ್ನ ಆರಾಧ್ಯ ದೈವವಾದ ಈಶ್ವರನನ್ನು ಪೂಜಿಸು. ಆರಾಧಿಸುವವಳಾಗು. ಆದರೆ ನಮ್ಮ ಒಂದು ಪ್ರಾರ್ಥನೆಯನ್ನು ನಡೆಸಿಕೊಡು. ತಪಸ್ಸು ಮಾಡುತ್ತೇನೆಂದು ಹೇಳಿ ಭಯಂಕರವಾದ ಕಾಡನ್ನು ಹುಡುಕಿಕೊಂಡು ಹೋಗಬೇಡಮ್ಮ. ಸುಕುಮಾರಿಯಾದ ನೀನು ಕಷ್ಟ ಪಡುವುದನ್ನು ಯೋಚಿಸಿದರೂ ನಮ್ಮ ಮನಸ್ಸು ತಲ್ಲಣಿಸುತ್ತದೆ. ನಮ್ಮ ಕಣ್ಣಿಗೆ ಮರೆಯಾಗಬೇಡ. ರಾಜಧಾನಿಯಿಂದ ದೂರವಾಗದಂತೆ ಎಲ್ಲಿ ಬೇಕಾದರೂ ಇರು, ಹೇಗೆ ಬೇಕಾದರೂ ಇರು. ನಾವು ಬೇಡ ಎನ್ನುವುದಿಲ್ಲ”.

ರಾಜರಾಣಿಯರ ಕಣ್ಣುಗಳಲ್ಲಿ ನೀರು ತುಂಬಿತ್ತು. ಆದರೆ ವಾಸವಿ ದೃಢ ಮನಸ್ಸಿನಿಂದ, ದೃಢವಾದ ಧ್ವನಿಯಲ್ಲಿ ಹೇಳಿದಳು:

“ನೀವು ನನ್ನ ಮೇಲಿನ ಮೋಹದಿಂದ ಹೀಗೆ ಹೇಳುತ್ತಿದ್ದೀರಿ. ನೀವು ನನಗೆ ಹಿರಿಯರು. ಯೋಚಿಸಿನೋಡಿ. ನಿಮ್ಮಿಂದ ಸಾಕಷ್ಟು ದೂರವಾಗದೆ ತಪಸ್ಸು ಮಾಡಲು ಸಾಧ್ಯವೆ? ಮಗಳೆನ್ನುವ ಮಮತೆಯಿಂದ ನೀವು ಆರೈಕೆ ಮಾಡತೊಡಗಿದರೆ ನಾನು ತಪಸ್ಸಿನ ನಿಯಮಗಳನ್ನು ಪಾಲಿಸುವುದು ಹೇಗೆ? ಆಗಿಂದಾಗ ನೀವು ನನ್ನನ್ನು ನೋಡುವುದಕ್ಕೆ ಬರುತ್ತಿದ್ದರೆ ನನ್ನ ಮನಸ್ಸಿನ ಮೋಹ ಹರಿಯುವುದು ಕಷ್ಟವಾಗುವುದಿಲ್ಲವೆ? ಪರಶಿವನಲ್ಲಿ ಮನಸ್ಸನ್ನು ನಿಲ್ಲಿಸಲು ಆಗುತ್ತದೆಯೇ? ನನ್ನ ಮೈ ಮನಸ್ಸುಗಳೆಲ್ಲ ಶಿವನಲ್ಲಿ ಸಂಪೂರ್ಣವಾಗಿ ಅರ್ಪಿತವಾಗಬೇಕು, ಇಲ್ಲವಾದರೆ ಅವನು ಒಲಿಯುವನೆ, ನನ್ನ ಕೈ ಹಿಡಿಯುವನೆ, ಅಪ್ಪಾ ?”

“ಹಾಗಾದರೆ ನಿನ್ನ ಅಭಿಪ್ರಾಯವೇನು ವಾಸವಿ?”

“ನಾನು ಕೆಲವು ಕಾಲ ನಿಮ್ಮಿಂದ ದೂರವಾಗಿರಲು ಅವಕಾಶ ಕೊಡಿ. ಮಗಳು ತಪಸ್ಸು ಮಾಡಿ ಸವೆದು ಹೋಗುತ್ತಾಳೆಂಬ ಚಿಂತೆಯನ್ನು ಬಿಡಿ. ನನ್ನಂತೆಯೇ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ. ಈ ಊರಿನ ಹೊರಗಿರುವ ವನವನ್ನೇ ನನ್ನ ತಪಸ್ಸಾಧನೆಯ ಸ್ಥಳವನ್ನಾಗಿ ಮಾಡಿಕೊಳ್ಳುತ್ತೇನೆ. ಅಲ್ಲಿನ ಪದ್ಮ ಸರೋವರದಲ್ಲಿ ಮಿಂದು, ಶಿವಮಂದಿರದಲ್ಲಿ ಆರಾಧನೆಯನ್ನು ಪ್ರಾರಂಭಿಸುತ್ತೇನೆ. ನನ್ನ ಶುಶ್ರೂಷೆಗೆ ರಾಜ ಪರಿವಾರ ಬೇಡ. ರಾಜಕುಮಾರಿಯ ಉಡುಪು, ಆಹಾರ, ದಾಸದಾಸಿಯರು ಬೇಡ. ದಯವಿಟ್ಟು ಇಷ್ಟನ್ನು ನಡೆಸಿಕೊಡಿ” .

ಚಿಕ್ಕವಯಸ್ಸಿನ ವಾಸವಿಯ ದೃಢ ಮನಸ್ಸು ಮತ್ತು ವೈರಾಗ್ಯಗಳನ್ನು ಕಂಡು ಅವಳ ತಂದೆತಾಯಿ ಬೆಕ್ಕಸ ಬೆರಗಾದರು.

ಶಿವನಿಗಾಗಿ

ರಾಜಾಜ್ಞೆಯಾಯಿತು. ರಾಜಭಟರು ಊರ ಹೊರಗಿನ ವನವನ್ನೆಲ್ಲಾ ವ್ಯವಸ್ಥೆ ಮಾಡಿದರು. ಪದ್ಮಪುಷ್ಕರಣಿ, ಶಿವಾಲಯ, ಬಳ್ಳಿಕಾವಣ, ಅಮೃತಶಿಲಾ ಪೀಠಗಳು, ಶಿಥಿಲ ಮಂಟಪಗಳು ವ್ಯವಸ್ಥೆಗೊಂಡವು.

ವಾಸವಿಯು ಮನೆದೇವರನ್ನು ಪೂಜಿಸಿದಳು. ತಂದೆತಾಯಿಗಳ ಪಾದಪೂಜೆ ಮಾಡಿದಳು. ಗುರುಗಳನ್ನು ಪೂಜಿಸಿ ಅವರ ಪಾದಗಳಿಗೆ ನಮಸ್ಕರಿಸಿದಳು. ಅರಮನೆಯಲ್ಲಿ ತನ್ನ ಜೊತೆಗಿದ್ದ ದಾಸಿಯರಿಗೆಲ್ಲಾ ತನ್ನ ರತ್ನಾಭರಣಗಳನ್ನು ಕಳಚಿಕೊಟ್ಟಳು. ಪೀತಾಂಬರವನ್ನು ಬಿಟ್ಟು, ಶುಭ್ರ ಬಿಳಿಯ ಬಟ್ಟೆಯನ್ನು ಉಟ್ಟುಕೊಂಡಳು. ತಲೆಗೂದಲನ್ನು ನೀಳವಾಗಿ ಬಿಟ್ಟಳು. ಮೊಣಕೈ, ಭುಜ, ಕೊರಳುಗಳಲ್ಲಿ ಭದ್ರಾಕ್ಷಿಗಳನ್ನು ಧಾರಣೆ ಮಾಡಿದಳು. ಕರ್ಣಕುಂಡಲವಾಗಿ ರುದ್ರಾಕ್ಷಿಗಳು ತೂಗಿದವು. ಕೃಷ್ಣಾಜಿನ ಕಮಂಡಲುಗಳನ್ನು ಹಿಡಿದು ಭಸ್ಮಪರಾಗ ಧಾರಣೆ ಮಾಡಿಕೊಂಡು ವನಪ್ರಯಾಣ ಮಾಡಿದಳು.

ವಾಸವಿಯು ಸಖಿಯರಿಗೆ ತನ್ನ ಕಣ್ಣಿಗೆ ಬೀಳದಂತೆ ಕಟ್ಟಪ್ಪಣೆ ಮಾಡಿದಳು. ಅವರು ಪ್ರತಿನಿತ್ಯದಲ್ಲೂ ಸೂರ್ಯೋದಯಕ್ಕೆ ಮುಂಚೆ ಎದ್ದು ವಾಸವಿಯು ಮಿಂದು ಮಡಿಯುಟ್ಟು ಶಿವಾಲಯಕ್ಕೆ ಬರುವುದರೊಳಗಾಗಿಯೇ ಭವ್ಯ ಶಿವಲಿಂಗದ ಮುಂದೆ ಪೂಜೆಗೋಸ್ಕರವಾಗಿ, ಬಿಲ್ವ, ನಾಗಸಂಪಿಗೆ ಮೊದಲಾದ ಪತ್ರಪುಪ್ಪಗಳ”ನ್ನು ಶೇಖರಿಸಿಡುತ್ತಿದ್ದರು. ಅಭಿಷೇಕಕ್ಕೆ ನೀರನ್ನೂ ನೈವೇದ್ಯಕ್ಕೆ ಫಲಗಳನ್ನೂ ಅಣಿಮಾಡಿಟ್ಟು ಕಣ್ಣಿಗೆ ಬೀಳದಂತೆ ದೂರ ಸರಿದುಬಿಡುತ್ತಿದ್ದರು.

ವಾಸವಿಯು ಪದ್ಮ ಸರೋವರದಲ್ಲಿ ಮಿಂದು ಬರುವಳು. ಒಂದೇ ಮನಸ್ಸಿನಿಂದ ಶಿವನನ್ನು ಪೂಜಿಸುವಳು. ಮಂಗಳಾರತಿ ಮಾಡುವಳು. ಆನಂದದಿಂದ ಮೈಮರೆತು ಹಾಡುವಳು. ಮಧ್ಯಾಹ್ನದವರೆಗೆ ಜಪದಲ್ಲಿ ಲೀನವಾಗಿ ಬಿಡುವಳು. ದಿನವೆಲ್ಲ ಶಿವನ ಧ್ಯಾನ. ಬಹು ಕಟ್ಟುನಿಟ್ಟಿನ ಜೀವನ, ಕುಸುಮ ಶ್ರೇಷ್ಠಿ ಮತ್ತು ಕುಸುಮಾಂಬೆಯರು ಆಗಾಗ ಬಂದು ಮಗಳನ್ನು ನೋಡಿ ಹೋಗುತ್ತಿದ್ದರು. ಮರೆಯಲ್ಲಿ ನಿಂತು ಅವಳನ್ನು ನೋಡುವರು. ಮಗಳ ಸ್ಥಿತಿಗೆ ಮರುಗುವರು. ಅವಳ ದೃಢ ಮನಸ್ಸನ್ನೂ ಸತತ ಸಾಧನೆಯನ್ನೂ ಕಠೋರ ಸಂಯಮವನ್ನೂ ಕಂಡು ವಾತ್ಸಲ್ಯ ಭಾವವು ಹೋಗಿ ಆಕೆಯ ಬಗೆಗೆ ಪೂಜ್ಯ ಭಾವನೆ ಮೊಳೆಯತೊಡಗಿತು.

ಸ್ವಲ್ಪಕಾಲದಲ್ಲಿ ಹದಿನೆಂಟು ಪಟ್ಟಣಗಳಲ್ಲಿಯೂ ವಾಸವಿಯ ಕೀರ್ತಿ ಹಬ್ಬಿತು. ಯಾಗ ಮಾಡಿ ಅವಳ ತಂದೆ ತಾಯಿ ಅವಳನ್ನು ಪಡೆದರು. ಶಿವನಲ್ಲಿ ಹೇಗೆ ಮನಸ್ಸನ್ನು ನಿಲ್ಲಿಸಿರುವ ಅವಳು ಪಾರ್ವತಿಯೇ ಸರಿ ಎಂದು ಜನ ಮೆಚ್ಚಿಗೆಯಿಂದ ಸ್ಮರಿಸಿ ಕೈ ಮುಗಿಯುತ್ತಿದ್ದರು.

ಏನು ಚೆಲುವಿನ ಊರು!’

ಆಂಧ್ರ ದೇಶದ ಅಧಿರಾಜ ವಿಮಲಾದಿತ್ಯ ವಿಷ್ಣುವರ್ಧನ. ಬಹಳ ಬಲಶಾಲಿ. ರಾಜಮಹೇಂದ್ರಾವರ ಅವನ ರಾಜಧಾನಿ. ಕುಸುಮ ಶ್ರೇಷ್ಠಿ ಅವನ ಸಾಮಂತ ರಾಜರಲ್ಲಿ ಒಬ್ಬ.

ಒಂದು ಸಲ ವಿಷ್ಣುವರ್ಧನ ತನ್ನ ಅಪಾರ ಸೈನ್ಯದೊಡನೆ ವಿಜಯಯಾತ್ರೆಗೆ ಹೊರಟನು. ಬಹಳ ಕಾಲ ಹೊರನಾಡುಗಳಲ್ಲಿದ್ದು ಯುದ್ಧ ಮಾಡಿದನು. ಅನಂತರ ಒಳನಾಡುಗಳಲ್ಲಿ ಸಂಚಾರ ಮಾಡುತ್ತಾ ಬಂದನು. ಎಲ್ಲೆಲ್ಲಿಯೂ ತನ್ನ ಶೌರ್ಯ ಪ್ರತಾಪಗಳನ್ನು ಮೆರೆದು ಅಜೇಯನಾದ ವಿಷ್ಣುವರ್ಧನನು ಬಹಳ ಅಟ್ಟಹಾಸದಿಂದ ಪ್ರವಾಸ ನಡೆಸಿದ್ದ. ಸಾಮಂಥ ಪ್ರಭುಗಳು ಗೌರವಾದರಗಳಿಂದ ಇದಿರುಗೊಂಡು ಕಪ್ಪ ಕಾಣಿಕೆಗಳನ್ನಿತ್ತು ಸತ್ಕರಿಸಿ ಬೀಳ್ಕೊಡುತ್ತಿದ್ದರು.

ಬಲಿದಾನ

ವಿಷ್ಣುವರ್ಧನನು ರಾಜಧಾನಿಗೆ ಹಿಂತಿರುಗುವಾಗ ಮಾರ್ಗಮಧ್ಯದಲ್ಲಿದ್ದ ಪೆನುಗೊಂಡೆಗೆ ಬಂದನು. ಪೆನುಗೊಂಡೆಯ ಸೌಂದರ್ಯ, ವೈಭವಗಳು, ಕುಸುಮ ಶ್ರೇಷ್ಠಿಯ ಹಿರಿಮೆ- ಇವುಗಳ ಕೀರ್ತಿ ಆಗಲೆ ಅವನನ್ನು ಮುಟ್ಟಿತ್ತು. ಕುತೂಹಲದಿಂದಲೇ ಪೆನುಗೊಂಡೆಯತ್ತ ಪ್ರಯಾಣ ಮಾಡಿದ.

ಊರಿಗೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ಕೋಟೆ ಕೊತ್ತಲಗಳೂ ಉನ್ನತ ಸೌಧಗಳೂ ಗುಡಿಗೋಪುರಗಳೂ ಕಣ್ಣನ್ನು ಸೆಳೆದವು. ಏನು ಚೆಲುವಿನ ಊರು! ಎಂದುಕೊಳ್ಳುತ್ತ ಇನ್ನೂ ಸಮೀಪಕ್ಕೆ ಬಂದಾಗ ನಗರದ ಅಂಚಿನಲ್ಲಿದ್ದ ವನ ಉಪವನಗಳ ರಮಣೀಯತೆಯು ಅರಸನ ಮನಸ್ಸನ್ನು ತಣಿಸಿದವು. ವಿಷ್ಣುವರ್ಧನ ಆ ನಗರದ ಸೌಂದರ್ಯಕ್ಕೆ ಮಾರುಹೋದ. ತಾನು ಬಂದ ಸುದ್ದಿ ತಿಳಿದು ಕುಸುಮ ಶ್ರೇಷ್ಠಿಯೂ ಪುರಜನರೂ ಬರಮಾಡಿಕೊಳ್ಳಲು ಬಂದುಬಿಟ್ಟರೆ, ಊರಿನ ಸೌಂದರ್ಯವನ್ನು ಮನಸ್ಸು ತೃಪ್ತಿಯಾಗುವಂತೆ ಸವಿಯಲು ಸಾಧ್ಯವಾಗುವುದಿಲ್ಲ ಎನ್ನಿಸಿತು. ತನ್ನ ಸೈನ್ಯವನ್ನು ದೂರದಲ್ಲಿಯೇ ಇರಲು ಹೇಳಿ ಒಬ್ಬನೇ ಹೊರಟನು.

ಯಾರಿವಳು ತೇಜೋರಾಶಿ?’

ಮೊದಲು ಊರಿನ ಹೊರವಲಯದಲ್ಲಿದ್ದ ಅತ್ಯಂತ ದಟ್ಟವಾದ, ಆದರೂ ವ್ಯವಸ್ಥಿತವಾದ ವನಕ್ಕೆ ಬಂದನು. ಹಾಗೆಯೇ ವನದ ಸೊಬಗನ್ನು ಸವಿಯುತ್ತ ನಡೆದು ಅಮೃತ ಪುಷ್ಕರಣಿಯ ಬಳಿಗೆ ಬಂದನು. ದಡದಲ್ಲಿ ಬಳ್ಳಿಕಾವಣದ ಬುಡದಲ್ಲಿದ್ದ ಹಾಲುಗಲ್ಲಿನ ಪೀಠದ ಮೇಲೆ ಕುಳಿತನು. ಉಲ್ಲಾಸ ತುಂಬಿದ ಮನಸ್ಸಿನಿಂದ ಸುತ್ತಲೂ ನೋಡತೊಡಗಿದನು.

ಇದ್ದಕ್ಕಿದ್ದ ಹಾಗೆಯೇ ಸ್ವಲ್ಪ ದೂರದಲ್ಲಿ ಇಬ್ಬರು ಸುಂದರಿಯರು ಕೈಯಲ್ಲಿ ಹಣ್ಣುಗಳನ್ನು ಹಿಡಿದು ಹೋಗುತ್ತಿರುವುದು ಕಂಡಿತು. ನೋಡು ನೋಡುತ್ತಿದ್ದಂತೆಯೇ ಅವರು ಮರಗಳ ಮಧ್ಯೆ ಮರೆಯಾದರು.

ವಿಷ್ಣುವರ್ಧನನ ಕುತೂಹಲ ಇನ್ನಷ್ಟು ಹೆಚ್ಚಿತು. ದಿಗ್ಗನೆದ್ದು ಅವರು ಹೊರಟ ದಿಕ್ಕಿಗೇ ಬೇಗ ಬೇಗ ಹೆಜ್ಜೆ ಹಾಕಿದನು. ದಾರಿ ಕೊನೆಯಾಗುತ್ತಿದ್ದ ಹಾಗೆಯೇ ಒಂದು ಭವ್ಯ ದೇವಾಲಯ ಕಣ್ಣಿಗೆ ಬಿದ್ದಿತು. ಆಕಾಶವನ್ನು ಮುತ್ತಿಡುತ್ತಿದ್ದ ಗೋಪುರದ ಬಂಗಾರದ ಕಳಶಗಳು ಸೂರ್ಯರಶ್ಮಿಯಿಂದ ಥಳ ಥಳ ಹೊಳೆಯುತ್ತಿದ್ದವು. ಆ ಸುತ್ತಿನಲ್ಲಿ ಎಲ್ಲಿ ನೋಡಿದರೂ ಜನರ ಸುಳಿವಿಲ್ಲ. ಆದರೂ ಆ ಸ್ಥಳವು ಅವರ್ಣನೀಯ ಪರಿಶುದ್ಧತೆಯಿಂದ ಕೂಡಿತ್ತು. ಮೊದಲ ನೋಟದಲ್ಲಿಯೇ ಭಕ್ತಿಯನ್ನು ಉಕ್ಕಿಸುತ್ತಿತ್ತು. ವಿಷ್ಣುವರ್ಧನನು ರೆಪ್ಪೆ ಹಾಕದೆ ನೋಡುತ್ತಿದ್ದನು. ಮೊದಲು ಕಂಡ ಆ ಇಬ್ಬರು ಸುಂದರಿಯರು ದೇವಾಲಯದಿಂದ ಹೊರಕ್ಕೆ ಬಂದು ವನದಲ್ಲಿ ಮರೆಯಾದರು.

ವಿಷ್ಣುವರ್ಧನನ ಕುತೂಹಲ ತಡೆಯಲಾಗದಂತಾಯಿತು. ‘ಇಂತಹ ಸುಂದರ ವನದಲ್ಲಿ ಜನರೇ ಇಲ್ಲವಲ್ಲ! ಈ ಸುಂದರಿಯರು ಯಾರು? ಇಂತಹ ಸುಂದರ ದೇವಾಲಯ ಯಾವ ದೇವರದು? ಜನರಿಲ್ಲದ ಈ ವನದಲ್ಲಿ ಪೂಜೆ ಮಾಡುವವರು ಯಾರು?’ ಎಂದು ದೇವಾಲಯದತ್ತ ಒಂದು ಹೆಜ್ಜೆ ಇಟ್ಟ.

ಆ ಹೊತ್ತಿಗೆ ಸರಿಯಾಗಿ ವಾಸವಿ ಅವನ ಕಣ್ಣಿಗೆ ಕಂಡಳು.

ಆಗತಾನೆ ಅವಳು ಮಿಂದಿದ್ದಳು. ಅವಳ ಕೂದಲಿನಿಂದ ಮುತ್ತಿನಂಥೆ ನೀರಹನಿಗಳು ಉದುರುತ್ತಿದ್ದವು. ಅಚ್ಚ ಬಿಳಿಯ ಉಡುಪಿನ ವಾಸವಿ ಜಾಜಿ, ಮಲ್ಲಿಕಾಲತೆಗಳ ಮಂಟಪದಿಂದ ಹೊರಕ್ಕೆ ಹೆಜ್ಜೆ ಇಟ್ಟಾಗ ವಿಷ್ಣುವರ್ಧನ ತನ್ನ ಕಣ್ಣನ್ನೆ ನಂಬಲಾರದಾದ. ಗಂಭೀರವಾದ ಹೆಜ್ಜೆಗಳನ್ನಿಟ್ಟು ದೇವಾಲಯದತ್ತ ನಡೆಯುತ್ತಿದ್ದ ಆ ಸುಂದರಿಯನ್ನೆ ದಿಟ್ಟಿಸಿ ನೋಡಿದ.

ಆ ರೂಪರಾಶಿಯಾದ ವಾಸವಿಯನ್ನು ಕಂಡು ವಿಷ್ಣುವರ್ಧನನು ವಿಗ್ರಹದಂತೆ ನಿಂತನು. ಮುಂದಿಡಲು ಎತ್ತಿದ ಹೆಜ್ಜೆ ಹಾಗೇ ನಿಂತುಹೋಯಿತು. ಅಂತಹ ಪರಮಸುಂದರಿಯನ್ನು ತಾನು ಇದುವರೆವಿಗೂ ಎಲ್ಲಿಯೂ ಕಂಡಿಲ್ಲ ಎನಿಸಿತು. ‘ಆಕೆ ಯಾರಿರಬಹುದು?. ಇಲ್ಲಿ ಏನು ಮಾಡುತ್ತಿದ್ದಾಳೆ? ಮುಖದಲ್ಲಿ ಏನು ತೇಜಸ್ಸು! ನಡಿಗೆಯಲ್ಲಿ ಎಂತಹ ಗಾಂಭೀರ್ಯ!’

ಅವನ ಮನಸ್ಸಿನ ಸ್ತಿಮಿತ ತಪ್ಪಿತು. ಅವನ ಅಧಿಕಾರ ಅಂತಸ್ತುಗಳು ಮರೆಯಾದವು. ಅವಳ ರೂಪವನ್ನೇ ಮನಸ್ಸಿನಲ್ಲಿ ಮೆಲಕು ಹಾಕುತ್ತ ಅಲ್ಲಿಯೇ ಇದ್ದ ಶಿಲಾಮಂಟಪದಲ್ಲಿ ಕುಳಿತು ಕಂಭವೊಂದನ್ನು ಒರಗಿದನು. ದೇವಾಲಯದ ಬಾಗಿಲಿನಲ್ಲಿಯೇ ಕಣ್ಣುಗಳು ನೆಟ್ಟಿದ್ದವು. ಅಷ್ಟರಲ್ಲಿ ವಾಸವಿಯು ಚಂದ್ರಶೇಖರನಿಗೆ ಶೋಡಷ ಪೂಜೆಯನ್ನು ಮಾಡಿ ಹಾಡತೊಡಗಿದಳು. ಅವಳ ರೂಪವನ್ನು ಕಂಡು ಮಾರುಹೋಗಿದ್ದ ರಾಜನು ಅವಳ ಇಂಪಾದ ಗಾನವನ್ನು ಕೇಳುತ್ತ ಮೈಮರೆತನು. ವನದಲ್ಲಿ ಅಲೆದಾಡಿದ್ದ ಅವನಿಗೆ ಹಾಗೆಯೇ ನಿದ್ರೆ ಹತ್ತಿತ್ತು.

ಅರಮನೆಗೆ

ಇಷ್ಟು ಹೊತ್ತಿಗೆ ಕುಸುಮ ಶ್ರೇಷ್ಠಿಗೆ ವಿಷ್ಣುವರ್ಧನನು ತನ್ನ ರಾಜಧಾನಿಯ ಬಳಿಗೆ ಬಂದ ಸುದ್ದಿ ತಲುಪಿತು. ಅವನನ್ನು ರಾಜಮರ್ಯಾದೆಗಳೊಂದಿಗೆ ಬರಮಾಡಿಕೊಳ್ಳಲು ಮಂತ್ರಿಗಳು ಮತ್ತು ಪರಿವಾರದೊಡನೆ ಹೊರಟ. ವಿಷ್ಣುವರ್ಧನನು ಪಾಳೆಯವನ್ನು ಬಿಟ್ಟು ಒಬ್ಬನೇ ಅವನಿಗಾಗಿ ಹುಡುಕಿದರು. ವನದಲ್ಲಿ ಮಲಗಿದ್ದ ವಿಷ್ಣುವರ್ಧನನನ್ನು ಕಂಡು ಕುಸುಮ ಶ್ರೇಷ್ಠಿಗೆ ತಿಳಿಸಿದರು. ಅವನು ಮಂಗಳವಾದ್ಯಗಳ ಸಹಿತವಾಗಿ ವನಕ್ಕೆ ಬಂದ.

ಅನಿರೀಕ್ಷಿತವಾಗಿ ಉಂಟಾದ ಘೋಷಮೇಳದಿಂದ ವಾಸವಿಯ  ಏಕಾಗ್ರತೆಗೆ ಭಂಗವಾಯಿತು. ಹೊರಕ್ಕೆ ಬಂದು ನೋಡಿದಳು. ಸಕಲ ಪರಿವಾರದೊಡನೆ ತಂದೆ ಬರುತ್ತಿರುವುದನ್ನು ಕಂಡಳು. ಅಧಿರಾಜನು ಬಂದಿರುವ ವಿಷಯ ತಿಳಿಯಿತು. ತಂದೆಯೊಡೆನ ಅಲ್ಲಿಯೆ ನಿಂತಳು.

ವಿಷ್ಣುವರ್ಧನನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡಿದನು. ಪೆನುಗೊಂಡೆಯ ಪ್ರಭುವೂ ಪುರಪ್ರಮುಖರೂ ತನ್ನನ್ನು ಇದಿರುಗೊಳ್ಳಲು ಬಂದಿರುವುದನ್ನು ಕಂಡ. ತನ್ನ ಸ್ಥಿತಿಗೆ ನಾಚಿಕೆಯಾಗಿ ತಲೆ ತಗ್ಗಿಸಿದನು. ಸುಹಾಸಿನಿಯರು ಆರತಿ ಎತ್ತಿ ಹಣೆಗೆ ರಕ್ಷೆಯನ್ನಿಡಲು ಹೋದಾಗ ಅಧಿರಾಜನು ತಲೆ ಎತ್ತಿದನು. ಹೆಂಗಸರ ನಡುವೆ ಕೌಸ್ತು ಭರತ್ನದಂತೆ ಇದ್ದ ವಾಸವಿಯು ಕಣ್ಣಿಗೆ ಬಿದ್ದಳು.

ಮತ್ತೆ ವಿಷ್ಣುವರ್ಧನನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ವಾಸವಿಯನ್ನು ಮದುವೆಯಾಗಬೇಕು ಎಂಬ ಆಸೆ ಮನಸ್ಸಿನಲ್ಲಿ ತಲೆ ಎತ್ತಿತು. ಅವಳು ಯಾರು ಎಂದು ಬಳಿ ಇದ್ದವರನ್ನು ಕೇಳಿ ತಿಳಿದುಕೊಂಡನು. ಯಾವ ಉಪಚಾರವೂ ಅವನಿಗೆ ಬೇಕಾಗಲಿಲ್ಲ. ನೆಪಮಾತ್ರಕ್ಕೆ ಎಲ್ಲವನ್ನೂ ಸ್ವೀಕರಿಸಿ ಕುಸುಮ ಶ್ರೇಷ್ಠಿ ತನಗಾಗಿ ಗೊತ್ತುಮಾಡಿದ ದಿವ್ಯ ಭವನಕ್ಕೆ ಹೋದನು.

ವಾಸವಿ ನನ್ನ ಕೈಹಿಡಿಯಬೇಕು

ವಿಷ್ಣುವರ್ಧನನ ಮಂತ್ರಿಗಳು ಸೂಕ್ಷ್ಮ ಬುದ್ಧಿಯವರು. ತಮ್ಮ ಪ್ರಭುವಿಗೆ ಮನಸ್ಸು ಸಮಾಧಾನವಿಲ್ಲ ಎಂಬುದನ್ನು ಗ್ರಹಿಸಿದರು. ಬಿಡಾರದಲ್ಲಿಯೂ ಅವನಿಗೆ ಮನಶ್ಯಾಂತಿ ಇಲ್ಲದುದನ್ನು ಕಂಡರು. ತಾವೇ ಅವನ ಬಳಿಗೆ ಹೋಗಿ ಕಾರಣವನ್ನು ಕೇಳಿದರು.

ವಿಷ್ಣುವರ್ಧನನು ಅವರ ಮುಂದೆ ತನ್ನ ಮನಸ್ಸನ್ನು ಬಿಚ್ಚಿಟ್ಟನು. “ಕುಸುಮ ಶ್ರೇಷ್ಠಿಯ ಮಗಳು ವಾಸವಿ ನನ್ನ ಹೆಂಡತಿಯಾಗಬೇಕೆಂದೇ ನನ್ನ ಆಸೆ. ಅವಳನ್ನು ಮದುವೆಯಾಗದಿದ್ದರೆ ನನಗೆ ಸಂತೋಷವೇ ಇಲ್ಲ. ಅವಳಿಗಾಗಿ ನನ್ನ ರಾಜ್ಯವನ್ನೆ ಕುಸುಮ ಶ್ರೇಷ್ಠಿಗೆ ಕೊಡಲು ನಾನು ಸಿದ್ಧ!” ಎಂದನು.

ವಿಷ್ಣುವರ್ಧನನ ಮುಖ್ಯಮಂತ್ರಿಯು ಕುಸುಮ ಶ್ರೇಷ್ಠಿಯ ಅರಮನೆಗೆ ಬಂದನು. ತಮ್ಮ ರಾಜನು ವಾಸವಿಯನ್ನು ಮದುವೆಯಾಗಲು ಬಯಸಿರುವುದನ್ನು ತಿಳಿಸಿದನು. “ನೀವು ಈ ಸಂಬಂಧಕ್ಕೆ ಒಪ್ಪಿ ನಮ್ಮ ರಾಜರ ಅಪೇಕ್ಷೆಯನ್ನು ನಡೆಸಿಕೊಡಬೇಕು” ಎಂದು ಪ್ರಾರ್ಥಿಸಿದನು.

ಕುಸುಮ ಶ್ರೇಷ್ಠಿಗೆ ಪರೀಕ್ಷೆ

ಕುಸುಮ ಶ್ರೇಷ್ಠಿಯು ಆ ಮಾತನ್ನು ಕೇಳಿ ಹೌಹಾರಿದನು. ಆದರೂ ತೋರಗೊಡದೆ ವಿಷ್ಣುವರ್ಧನನ ಮುಖ್ಯಮಂತ್ರಿಯನ್ನು ಗೌರವದಿಂದ ಕಳುಹಿಸಿಕೊಟ್ಟನು. ಅನಂತರ ಸಚಿವರೊಡನೆ ಚರ್ಚಿಸಿದನು. ಪ್ರಶ್ನೆ ಜಟಿಲವಾದದ್ದು. ಎಲ್ಲರಿಗೂ ತೊಡಕೇ. ಅವರೆಲ್ಲ ಬಹುಕಾಲ ಚರ್ಚೆ ಮಾಡಿದರು.

“ಈ ಕೂಡಲೇ ದುಡುಕಿ ಉತ್ತರ ಕೊಡುವುದು ಸರಿಯಲ್ಲ. ಏಕೆಂದರೆ ವಿಷ್ಣುವರ್ಧನನು ಅಜೇಯವಾದ ಸೈನ್ಯದೊಡನೆ ಬಂದು ಊರಿನ ಹೊರವಲಯದಲ್ಲಿದ್ದಾನೆ. ಅವನ ಮನಸ್ಸೀಗ ಸ್ತಿಮಿತದಲ್ಲಿಲ್ಲ. ಕಾಲ ತಳ್ಳುವುದೇ ಇದಕ್ಕೆ ತಕ್ಕ ಉಪಾಯ. ಅದೂ ಅಲ್ಲದೆ ರಾಜನಿಗೆ ಹೆಣ್ಣು ಕೊಡುವ ವಿಷಯ ಕುಲಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ನಿಮ್ಮ ಏಳುನೂರ ಹದಿನಾಲ್ಕು ಗೋತ್ರ ಬಾಂಧವರನ್ನೆಲ್ಲಾ ಕರೆಸಿ ಅವರ ಅಭಿಪ್ರಾಯದಂತೆ ನಡೆಯುವುದೇ ವಿಹಿತ”  ಎಂದು ರಾಜನಿಗೆ ಸಲಹೆಯಿತ್ತರು.

ಕುಸುಮ ಶ್ರೇಷ್ಠಿಯು ವಿಷ್ಣುವರ್ಧನನ ಮುಖ್ಯಮಂತ್ರಿಯನ್ನು ಬರಮಾಡಿಕೊಂಡನು. ಅಧಿರಾಜನಿಗೆ ಅತ್ಯಮೂಲ್ಯವಾದ ರತ್ನಾಭರಣಗಳನ್ನೂ ವಸ್ತ್ರಭೂಷಣಗಳನ್ನೂ ಕಾಣಿಕೆಯಾಗಿ ಕೊಟ್ಟನು. “ಸಾಮ್ರಾಟರು ನನ್ನ ಕುಮಾರಿಯನ್ನು ಬಯಸಿದುದು ನಮ್ಮ ಪುಣ್ಯವೇ ಸರಿ. ಆದರೆ ಇದು ಮತಧರ್ಮದ ಪ್ರಶ್ನೆಯಾಗಿದೆ. ಬಂಧು ಬಾಂಧವರನ್ನೆಲ್ಲಾ ಕರೆಸಿ ವಿಚಾರ ಮಾಡಿ ನಿರ್ಧರಿಸಬೇಕಾಗಿದೆ. ಆದುದರಿಂದ ಪ್ರಭುಗಳಲ್ಲಿ ನಮ್ಮ ಪರವಾಗಿ ಸ್ವಲ್ಪ ಕಾಲಾವಕಾಶವನ್ನು ಕೊಡುವಂತೆ ಪ್ರಾರ್ಥಿಸಬೇಕು” ಎಂದು ಬೇಡಿದನು.

ಇಂತಹ ಗಹನವಾದ ವಿಷಯಗಳಲ್ಲಿ ಆತುರ ಸಲ್ಲದು ಎಂದು ಮಂತ್ರಿಗೂ ತಿಳಿದಿತ್ತು. ಅವನು ವಿಷ್ಣುವರ್ಧನನ ಸಾಹಸ, ಪರಾಕ್ರಮ ಮತ್ತು ವೈಭವಗಳನ್ನು ಹೊಗಳಿ, “ಅಂತಹವನು ವಾಸವಿಯನ್ನು ಬೇಡುತ್ತಿರುವುದು ನಿಮ್ಮ ಪೂರ್ವಪೂಣ್ಯವೇ ಸರಿ. ಅದರಂತೆ ನಡೆದುಕೊಳ್ಳಿ. ಇಲ್ಲವಾದರೆ ನೀವು ನಿಮ್ಮ ನಾಡಿಗೆ ವಿನಾಶವನ್ನು ಆಮಂತ್ರಿಸಿದಂತೆಯೇ ಸರಿ ಎಂಬುದನ್ನು ಮರೆಯಬಾರದು”  ಎಂದು ಎಚ್ಚರಿಸಿ ಹೋದನು.

ಶಿಬಿರಕ್ಕೆ ಬಂದು ಮುಖ್ಯಮಂತ್ರಿ ವಿಷ್ಣುವರ್ಧನನಿಗೆ ನಡೆದ ಸಮಾಚಾರವನ್ನೆಲ್ಲಾ ತಿಳಿಸಿದನು. ಮಂತ್ರಿ ಹೇಳಿದುದನ್ನು ವಿಷ್ಣುವರ್ಧನನು ಕೇಳಿ ಕಿಡಿಕಿಡಿಯಾದನು. “ಈಗಲೇ ಸೈನ್ಯ ಸಮೇತರಾಗಿ ಹೋಗಿ ಎದುರಾದವರನ್ನು ತುಂಡರಿಸಿ ಆ ಕನ್ಯಾರತ್ನವನ್ನು ಬಲಾತ್ಕಾರವಾಗಿ ಎಳೆದು ತನ್ನಿರಿ” ಎಂದು ಅಪ್ಪಣೆ ಮಾಡಿದನು.

ಅವನ ಮಂತ್ರಿಗಳು ಅವನಿಗೆ ಬುದ್ಧಿವಾದವನ್ನು ಹೇಳಿದರು. ದುಡುಕಿದರೆ ಧರ್ಮಚ್ಯುತಿ, ವಿಶ್ವಾಸದ್ರೋಹ, ಬಂಧುತ್ವಕ್ಕೆ ನಾಶ ಮಿಗಿಲಾಗಿ ವಾಸವಿ ಕೈಬಿಟ್ಟು ಹೋಗಬಹುದೆಂದರು.

ವಿಷ್ಣುವರ್ಧನನಿಗೂ ಅವರ ಮಾತು ಸರಿ ಎಂದು ತೋರಿತು. ರಾಜ್ಯದ ವಿಷಯವಾಗಿ ಸಮಾಲೋಚನೆ ಎಂಬ ನೆಪದಿಂದ ಕುಸುಮ ಶ್ರೇಷ್ಠಿಯನ್ನು ಬರಮಾಡಿಕೊಂಡ. ಮಾತುಕತೆಗಳ ಮಧ್ಯೆ ತನ್ನ ಅಪೇಕ್ಷೆಯನ್ನು ತಿಳಿಸಿ ವಾಸವಿಯನ್ನು ತನಗೆ ಕೊಟ್ಟು ಮದುವೆ ಮಾಡಬೇಕು ಎಂದು  ಸೂಚಿಸಿದ.

ಕುಸುಮ ಶ್ರೇಷ್ಠಿಯು ಬಹು ಎಚ್ಚರಿಕೆಯಿಂದ, ನಯವಾಗಿ ಮಾತನಾಡಿ ಅರಮನೆಗೆ ಹಿಂತಿರುಗಿದ.

ವಿಷ್ಣುವರ್ಧನನು ವಾಸವಿಯನ್ನು ಕುರಿತು ಚಿಂತಿಸುತ್ತಲೇ ತನ್ನ ರಾಜಧಾನಿಗೆ ಪ್ರಯಾಣ ಮಾಡಿದ.

ಎರಡು ಅಭಿಪ್ರಾಯಗಳು

ಇತ್ತ ಕುಸುಮ ಶ್ರೇಷ್ಠಿಯು ತನಗೆ ಒದಗಿ ಬಂದ ಅಗ್ನಿಪರೀಕ್ಷೆಗೆ ಬಹುವಾಗಿ ಮರುಗಿದನು. ಮೃತ್ಯುಂಜಯನನ್ನು ಮದುವೆಯಾಗಬೇಕೆಂದು ಬಯಸಿದ ಮಗಳನ್ನು ವಿಷ್ಣುವರ್ಧನನಿಗೆ ಕೊಡುವುದೆ? ಹದಿನೆಂಟು ನಗರಗಳಲ್ಲಿ ವಾಸವಾಗಿದ್ದ ಏಳುನೂರ ಹದಿನಾಲ್ಕು ಗೋತ್ರ ಜನರನ್ನೆಲ್ಲಾ ಕರೆಸಿ ಸಭೆ ಸೇರಿಸಿದನು. ಸಭೆಯಲ್ಲಿ ಅಧಿರಾಜನು ವಾಸವಿಯನ್ನು ಕೇಳಿದ ವಿಷಯವನ್ನು ವಿವರಿಸಿದನು.

ಕುಲಬಾಂಧವರು ಬಹಳವಾಗಿ ಆಲೋಚಿಸಿದರು. ಬಹಳ ಕಾಲ ಸಾಧಕ-ಬಾಧಕಗಳನ್ನು ಕುರಿತು ಚರ್ಚಿಸಿದರು.

ಚರ್ಚೆಯು ಮುಂದುವರಿದಂತೆ ಸಭೆಯಲ್ಲಿ ಇದ್ದವರಲ್ಲಿಯೇ ಎರಡು ಪಂಗಡಗಳಾದವು; ಎರಡು ಅಭಿಪ್ರಾಯಗಳು ವ್ಯಕ್ತವಾದವು. ಮೊದಲ ಗುಂಪಿನಲ್ಲಿ ಆರುನೂರು ಹನ್ನೆರಡು ಗೋತ್ರದವರು ಲೌಕಿಕ ದೃಷ್ಟಿಯುಳ್ಳವರಾಗಿ, ‘ಅನೂಚಾನವಾಗಿ ಬಂದ ಧರ್ಮವನ್ನು ಬಿಡಬಾರದು. ಅಧಿರಾಜನಿಗೆ ವಾಸವಿಯನ್ನು ಕೊಟ್ಟು ಮದುವೆ ಮಾಡಬೇಕು ಎಂದರು. ಎರಡನೆಯ ಗುಂಪಿನ ನೂರ ಎಂಟು ಗೋತ್ರದವರು ವಾಸವಿಯನ್ನು ಕೊಟ್ಟು ಮದುವೆ ಮಾಡಬಾರದು’ ಎಂದರು.

‘ಬಹುಸಂಖ್ಯಾತ ಗೋತ್ರದವರ ಮಾತಿಗೆ ಮನ್ನಣೆ ಬರಲಿಲ್ಲ. ಅವರಿಗೆ ಕೋಪ ಬಂದಿತು. ಸಭೆಯನ್ನು ಬಿಟ್ಟುಹೋದರು. ಅಷ್ಟೇ ಅಲ್ಲ, ನಡೆದುಬಂದ ಧರ್ಮದಂತೆ ನಡೆಯದಿರುವ ರಾಜನ ಸಂಬಂಧವೇ ನಮಗೆ ಬೇಡ’ ಎಂದು ಹೇಳಿ ಕುಸುಮ ಶ್ರೇಷ್ಠಿಯ ರಾಜ್ಯವನ್ನು ಬಿಟ್ಟು ಹೊರಟುಹೋದರು.

ಧರ್ಮರಕ್ಷಣೆ ನಿನ್ನ ಕರ್ತವ್ಯ

ಪೆನುಗೊಂಡೆಯಲ್ಲಿ ಏನೇನು ನಡೆಯಿತೆಂಬುದು ಚಾರರ ಮೂಲಕ ವಿಷ್ಣುವರ್ಧನನಿಗೆ ತಿಳಿಯಿತು. ಅವನಿಗೆ ಬಹು ಕೋಪ ಬಂದಿತು. ‘ತನ್ನ ಇಷ್ಟಕ್ಕೆ ವಿರುದ್ಧವಾಗಿ ನಡೆಯುವ ಇವರಿಗೆ ಎಷ್ಟು ಧೈರ್ಯ! ನನ್ನ ಶಕ್ತಿಯನ್ನು ಇವರಿಗೆ ಅರ್ಥ ಮಾಡಿಸುತ್ತೇನೆ’ ಎಂದು ಗುಡುಗಿದನು. ಕೂಡಲೇ ಸೈನ್ಯವನ್ನು ಸಿದ್ಧಪಡಿಸಿ ಪೆನುಗೊಂಡೆಯ ಮೇಲೆ ಹೊರಡಲು ಅಪ್ಪಣೆ ಇತ್ತನು. ಅವರ ನಾಯಕತ್ವವನ್ನು ತಾನೇ ವಹಿಸಿದನು. ಪಟ್ಟದ ರಾಣಿಯಾಗಲೀ, ಮಂತ್ರಿಯಾಗಲೀ ಅವನನ್ನು ತಡೆಯಲಾಗಲಿಲ್ಲ.

ವಿಷ್ಣುವರ್ಧನನು ಬಿರುಗಾಳಿಯಂತೆ ಬರುತ್ತಿರುವ ಸಮಾಚಾರವು ಕುಸುಮ ಶ್ರೇಷ್ಠಿಗೆ ತಿಳಿಯಿತು. ಕೂಡಲೇ ಮಂತ್ರಿಗಳ ಮತ್ತು ಸೈನ್ಯಾಧಿಕಾರಿಗಳ ಸಭೆ ಕರೆದು ಸಮಾಲೋಚನೆ ಮಾಡಿದನು. ಸೈನ್ಯವನ್ನು ಸಜ್ಜಾಗಿಸಿ ಊರ ಹೊರಗೆ ವಿಷ್ಣುವರ್ಧನನನ್ನು ತಡೆಯುವ ಏರ್ಪಾಟು ಮಾಡಿದನು. ಕುಸುಮ ಶ್ರೇಷ್ಠಿಗೆ ಮಗಳ ಅಭಿಪ್ರಾಯವನ್ನು ಕೇಳುವುದು ಸೂಕ್ತ ಎನ್ನಿಸಿತು. ಅವಳನ್ನು ಅರಮನೆಗೆ ಬರಮಾಡಿಕೊಂಡು ನಡೆದುದನ್ನೆಲ್ಲ ವಿವರಿಸಿ ಹೇಳಿದನು.

ವಾಸವಿ ಎಲ್ಲವನ್ನೂ ಕೇಳಿದಳು. ಬಹುಕಾಲ ಆಳವಾಗಿ ಯೋಚಿಸಿದಳು. ಅನಂತರ ತಂದೆಗೆ ಹೇಳಿದಳು: “ಬಹುಸಂಖ್ಯಾತ ಗೋತ್ರಜರು ರಾಜ್ಯ ಬಿಟ್ಟು ಹೋದುದರಲ್ಲಿ ತಪ್ಪಿಲ್ಲ. ಬದಲಾಗುತ್ತಿರುವ ಕಾಲಕ್ಕೆ ಹೊಂದಲಾರದವರು ಅವರು. ಅವರಿಗೆ ಅದೇ ಸರಿ ಎನ್ನಿಸಿದೆ. ಅಡ್ಡಿಮಾಡಬೇಡಿ. ಭಾರತದಲ್ಲಿ ಎಲ್ಲಿಯಾದರೂ ಸುಖವಾಗಿರಲಿ”.

ಕುಸುಮ ಶ್ರೇಷ್ಠಿಯು, “ರಾಜ್ಯದ ಮೇಲೆ ದಂಡೆತ್ತಿ ಬರುತ್ತಿರುವ ಅಧಿರಾಜನ ಮೇಲೆ ಸಾಮಂತರಾಜನು ಕೈ ಮಾಡಬಹುದೆ? ಆದರೆ ನಿನಗೆ ಒಪ್ಪಿಗೆ ಇರದಿರುವಾಗ ಬಲಾತ್ಕಾರವಾಗಿ ನಿನ್ನನ್ನು ಅವನಿಗೆ ಒಪ್ಪಿಸುವುದೆ? ಏನು ಮಾಡಲು ತಿಳಿಯದವನಾಗಿದ್ದೇನೆ” ಎಂದು ಮರುಗಿದನು.

ವಾಸವಿಯು ಮುಗುಳುನಗೆ ಸೂಸುತ್ತ, “ನೀನೇನು ಅಜ್ಞಾನಿಯಲ್ಲ. ದೇಶರಕ್ಷಣೆ, ಧರ್ಮರಕ್ಷಣೆ ಮತ್ತು ಪ್ರಜಾಹಿತವೇ ರಾಜನ ಕರ್ತವ್ಯಗಳಲ್ಲವೆ?  ವಿಷ್ಣುವರ್ಧನನು ಮಾಡುತ್ತಿರುವುದು ತಪ್ಪು ಕೆಲಸ. ತಾನು ಒಂದು ಹೆಣ್ಣನ್ನು ಮದುವೆಯಾಗಬೇಕೆಂಬ ಆಸೆಗೆ ಯುದ್ಧವನ್ನೇ ಮಾಡಿ ಸಾವಿರಾರು ಜನರಿಗೆ ಸಾವು-ನೋವು ಬಡಿಸಲು ಸಿದ್ಧನಾಗಿದ್ದಾನೆ. ತಾನು ಮದುವೆಯಾಗಬೇಕೆಂದು ಬಯಸಿದ ಹುಡುಗಿಗೆ, ತನ್ನನ್ನು ಮದುವೆಯಾಗಲು ಒಪ್ಪಿಗೆ ಇದೆಯೆ ಎಂದು ತಿಳಿಯುವಷ್ಟು ಅವನಿಗೆ ಸೌಜನ್ಯವಿಲ್ಲ” ಎಂದು ಹೇಳಿದಳು. ದಿಕ್ಕು ತೋಚದೆ ನಿಂತಿದ್ದ ಅಣ್ಣ ವಿರೂಪಾಕ್ಷನಿಗೂ, “ನೀನು ಸುಮ್ಮನಿರುವುದೇ? ನಿನ್ನ ಕರ್ತವ್ಯವನ್ನು ಮಾಡು. ನನ್ನ ಬಗೆಗೆ ಆಲೋಚನೆ ಬೇಡ” ಎಂದು ಸಮಾಧಾನ ಪಡಿಸಿದಳು.

ಕುಸುಮ ಶ್ರೇಷ್ಠಿ ತನ್ನ ಸೈನ್ಯವನ್ನು ಎರಡು ಭಾಗ ಮಾಡಿದ; ಒಂದಕ್ಕೆ ತಾನೂ ಮತ್ತೊಂದು ಭಾಗಕ್ಕೆ ವಿರೂಪಾಕ್ಷನೂ ಅಧಿಪತಿಗಳಾದರು.

ವಿಷ್ಣುವರ್ಧನನು ಸಾಮಾನ್ಯ ಸಾಮಂತನೊಬ್ಬನು ತನ್ನ ಮಾತನ್ನು ಮೀರಿ ಯುದ್ಧಕ್ಕೆ ಬಂದನೆಂದು ಹಲ್ಲು ಕಡಿದನು. “ಪೆನುಗೊಂಡೆಯ ಸೈನ್ಯವನ್ನು ಹೊಸಕಿಹಾಕಿರಿ. ಪಟ್ಟಣವನ್ನು ಸೂರೆ ಮಾಡಿರಿ. ವಾಸವಿಯನ್ನು ಎಳೆದು ತನ್ನಿರಿ” ಎಂದು ಆಜ್ಞೆ ಮಾಡಿದನು.

ಎರಡೂ ಸೈನ್ಯಗಳಿಗೆ ಯುದ್ಧ ಪ್ರಾರಂಭವಾಯಿತು.

ಬಲಿದಾನ

ವಾಸವಿಯು ತಾಯಿಯನ್ನು ಒಪ್ಪಿಸಿ, ಅರಮನೆಯ ಮುಂದೆ ಇದ್ದ ವಿಶಾಲವಾದ ಬಯಲಿನಲ್ಲಿ ದೊಡ್ಡದೊಂದು ಅಗ್ನಿಕುಂಡವನ್ನು ಮಾಡಿಸಿದಳು. ಭಾಸ್ಕರಾಚಾರ್ಯರ ನೇತೃತ್ವದಲ್ಲಿ ಒಂದುನೂರ ಎರಡು ಗೋತ್ರಜರ ಸಮ್ಮುಖದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹವನ ಹೋಮಗಳು ನಡೆಯತೊಡಗಿದವು.

ಗುರುಗಳು ಪೂರ್ಣಾಹುತಿಯನ್ನು ಅಗ್ನಿಗೆ ಅರ್ಪಿಸುವಂತೆ ವಾಸವಿಯ ಕೈಗಿತ್ತರು. ವಾಸವಿ ಸರ್ವಾಲಂಕಾರ ಭೂಷಿತೆಯಾಗಿದ್ದಳು. ಗುರುಗಳು ಕೊಟ್ಟ ಪೂರ್ಣಾಹುತಿಯನ್ನು ಕೈಯಲ್ಲಿ ಹಿಡಿದುಕೊಂಡು ಅಗ್ನಿ ಸಮ್ಮುಖಕ್ಕೆ ಬಂದಳು. ಆಗ ಅವಳು ಅಪೂರ್ವವಾದ ಕಾಂತಿಯಿಂದ ಬೆಳಗುತ್ತಿದ್ದಳು. ಎಲ್ಲರೂ ಆ ದಿವ್ಯ ಮಂಗಳ ರೂಪವನ್ನು ರೆಪ್ಪೆ ಹಾಕದೆ ನೋಡುತ್ತಿದ್ದರು.

ವಾಸವಿಯು ಎಲ್ಲರನ್ನೂ ಒಮ್ಮೆ ನೋಡಿದಳು. ಆಮೇಲೆ, “ಕುಲಬಾಂಧವರೇ, ಕೇಳಿರಿ. ಧರ್ಮವು ನಿಂತ ನೀರಿನಂತಲ್ಲ, ಹರಿಯುವ ನದಿಯಂತೆ ನಿತ್ಯ ನೂತನವಾದುದು. ಹಿಂದಿನಿಂದ ಬಂದುದೆಲ್ಲಾ ಸರಿ ಎಂದು ಗಂಟು ಬೀಳಬಾರದು. ಒಂದು ಕಾಲಕ್ಕೆ ಸರಿಯಾದುದು ಮತ್ತೊಂದು ಕಾಲಕ್ಕೆ ಸರಿಯಾಗಲಾರದು. ಉಚ್ಛ ವರ್ಣದವರು ಕೆಳಗಿನ ವರ್ಣದವರನ್ನು ಮದುವೆಯಾಗಬೇಕೆಂಬ ಧರ್ಮವನ್ನು ನಾನಿಂದು ಪ್ರತಿಭಟಿಸುತ್ತೇನೆ. ಇಂದಿನಿಂದ ಅದು ಅಂತ್ಯವಾಗಲಿ, ಧರ್ಮವನ್ನು ರಕ್ಷಿಸಬೇಕಾದ ಅಧಿರಾಜನು ಧರ್ಮನಾಶಕ್ಕಿಳಿದಿದ್ದಾನೆ. ಅವನು ಹತನಾಗಲಿ, ಅವನ ಸಾಮ್ರಾಜ್ಯ ನಾಶವಾಗಲಿ. ನಾನೀಗ ಎಲ್ಲಿಂದ ಬಂದೆನೋ ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಶಿವನ ವಧು. ನೀವು ಯಾರೂ ದುಃಖಿಸಬಾರದು. ನಿಮಗೆಲ್ಲ ಮಂಗಳವಾಗಲಿ” ಎನ್ನುತ್ತಾ ಅಗ್ನಿಕುಂಡದಲ್ಲಿ ಧುಮುಕಿದಳು.

‘ನಿನ್ನ ಕರ್ತವ್ಯವನ್ನು ಮಾಡು’.

ಅನಿರೀಕ್ಷಿತವಾದ ಈ ಘಟನೆಯಿಂದ ನೆರೆದಿದ್ದವರಿಗೆಲ್ಲ ದಿಗ್ಭ್ರಮೆಯಾಯಿತು. ಗರ ಬಡಿದವರಂತೆ ನಿಂತರು. ತೇಜೋರಾಶಿಯಾಗಿದ್ದ ವಾಸವಿ ಅಗ್ನಿಯ ತೇಜಸ್ಸಿನಲ್ಲಿ ಸೇರಿಹೋದಳು.

ವಿಷ್ಣುವರ್ಧನನ ಸಾವು

ರಣರಂಗದಲ್ಲಿ ಪೆನುಗೊಂಡೆಯ ಸೈನಿಕರು ವೀರಾವೇಶದಿಂದ ಹೋರಾಡಿದರು. ಕುಸುಮ ಶ್ರೇಷ್ಠಿಯು ತನ್ನ ಆಸೆಯನ್ನು ವಿಷ್ಣುವರ್ಧನನ ಆನೆಯ ಮುಂದಕ್ಕೆ ನಡೆಯಿಸಿದನು.

ಕುಸುಮ ಶ್ರೇಷ್ಠಿಯ ಮನಸ್ಸು ವಿಷ್ಣುವರ್ಧನನ ಅನ್ಯಾಯದ ವರ್ತನೆಗೆ ಕುದಿಯುತ್ತಿತ್ತು. ಅವನು ತನ್ನ ಕತ್ತಿಯನ್ನು ಗುರಿ ಇಟ್ಟು ಬೀಸಿದನು. ವಿಷ್ಣುವರ್ಧನನ ರುಂಡವು ಕತ್ತರಿಸಿ ನೆಲಕ್ಕೆ ಬಿದ್ದಿತು.

ವಿಷ್ಣುವರ್ಧನನು ಸತ್ತ ಮೇಲೆ ಅವನ ಸೈನ್ಯ ಯುದ್ಧವನ್ನು ನಿಲ್ಲಿಸಿತು. ಕುಸುಮ ಶ್ರೇಷ್ಠಿಯು ನಿರಪರಾಧಿ ಸೈನಿಕರನ್ನು ಕೊಲ್ಲುವುದು ಬೇಡವೆಂದನು. ಯುದ್ಧ ನಿಂತಿತು. ಕುಸುಮ ಶ್ರೇಷ್ಠಿಯು ವಿಷ್ಣುವರ್ಧನನ ಮಗನಾದ ರಾಜರಾಜೇಂದ್ರನನ್ನು ಕ್ಷಮಿಸಿದನು. ವಿಜಯಿಯಾಗಿ ವಿರೂಪಾಕ್ಷನೊಡನೆ ಪಟ್ಟಣಕ್ಕೆ ಹಿಂತಿರುಗಿದನು.

ಕುಸುಮ ಶ್ರೇಷ್ಠಿಗೆ ಸಂತೋಷ, ಸಂಭ್ರಮ ಮಗಳನ್ನು ಕಂಡು, ‘ವಿಷ್ಣುವರ್ಧನ ಸತ್ತ. ನಿನಗಿನ್ನು ಅವನಿಂದ ಪೀಡೆ ಇಲ್ಲ’ ಎಂದು ಹೇಳಬೇಕು ಎಂದು ಕಾತುರ. ಆದಷ್ಟು ಶೀಘ್ರವಾಗಿ ಅರಮನೆಗೆ ಹೊರಟ.

ಕುಸುಮ ಶ್ರೇಷ್ಠಿ ಅರಮನೆಯ ಬಳಿಗೆ ಬಂದನು. ಅವನು ಕಂಡದ್ದು-ಮುಂಭಾಗದಲ್ಲಿದ್ದ ದೊಡ್ಡ ಅಗ್ನಿಕುಂಡ, ಅದರ ಸುತ್ತಲೂ ಮೌನವಾಗಿ ಕಣ್ಣೀರು ಸುರಿಸುತ್ತ ನಿಂತಿದ್ದ ರಾಣಿ ಮತ್ತು ಕುಲಬಾಂಧವರು!

ಕುಸುಮ ಶ್ರೇಷ್ಠಿಗೆ ಎದೆ ಒಡೆಯಿತು. ರಾಣಿ ಕುಸುಮಾಂಬೆಯು ಅಳುತ್ತಾ ಓಡಿ ಬಂದು ಮುದ್ದು ಮಗಳು ಬೆಂಕಿಯಲ್ಲಿ ಬಿದ್ದು ಸುಟ್ಟು ಹೋದಳೆಂದು ಗೋಳಾಡಿದಳು.

ಒಂದುನೂರ ಎರಡು ಗೋತ್ರಜರ ಬಲಿದಾನ

ಕುಸುಮ ಶ್ರೇಷ್ಠಿಗೆ ಎಲ್ಲವೂ ಅರ್ಥವಾಯಿತು. ಆಗಿಹೋದ ಅನರ್ಥವನ್ನು ಸರಿಪಡಿಸುವುದು ಹೇಗೆ ಎಂದು ಚಿಂತಿಸಿದನು. ವಾಸವಿಯಿಲ್ಲದೆ ಬದುಕುವುದು ಅವನ ಮನಸ್ಸಿಗೆ ಒಪ್ಪಲಿಲ್ಲ. ಅಲ್ಲಿ ನೆರೆದಿದ್ದ ನೂರ ಎರಡು ಗೋತ್ರದವರಿಗೂ ತನ್ನ ನಿರ್ಧಾರವನ್ನು ತಿಳಿಸಿದನು. ಕುಸುಮಾಂಬೆಯೂ ಅದೇ ಸರಿ ಎಂದಳು. ಉಳಿದವರೂ ರಾಜರಾಣಿಯರ ನಿರ್ಧಾರದಂತೆ ತಾವು ಅಗ್ನಿಪ್ರವೇಶ ಮಾಡುವುದಾಗಿ ಹೇಳಿದರು.

ಕುಸುಮ ಶ್ರೇಷ್ಠಿಯು ಮಂತ್ರಿಗಳನ್ನು, ಪುರಪ್ರಮುಖರನ್ನು ಕರೆಸಿದನು. ವಿಧಿವತ್ತಾಗಿ ಅಲ್ಲಿಯೇ ವಿರೂಪಾಕ್ಷನಿಗೆ ಪಟ್ಟಾಭಿಷೇಕ ಮಾಡಲು ಏರ್ಪಾಟು ಮಾಡಿದನು. ಅಷ್ಟರಲ್ಲಿ ವಾಸವಿಯ ಬಲಿದಾನ ಮತ್ತು ಒಂದುನೂರ ಎರಡು ಗೋತ್ರದವರ ಆತ್ಮಾರ್ಪಣೆಯ ಸುದ್ದಿ ಎಲ್ಲೆಲ್ಲಿಯೂ ಹರಡಿತು. ಜನರು ಕಣ್ಣೀರುಗರೆಯುತ್ತಾ ಅಲ್ಲಿ ಬಂದು ನೆರೆದರು.

ವಿಷ್ಣುವರ್ಧನನ ಮಗ ರಾಜರಾಜೇಂದ್ರನಿಗೆ ಈ ಸುದ್ದಿ ತಿಳಿಯಿತು. ಯುದ್ಧಭೂಮಿಯಿಂದ ಓಡಿ ಬಂದು ಕುಸುಮ ಶ್ರೇಷ್ಠಿಯ ಪಾದಗಳಲ್ಲಿ ಬಿದ್ದು, ತನ್ನ ತಂದಯು ಮಾಡಿದ ತಪ್ಪನ್ನು ಮನ್ನಿಸಬೇಕೆಂದೂ ಈ ಸಾಮೂಹಿಕ ಸಾವನ್ನು ನಿಲ್ಲಿಸಬೇಕೆಂದೂ ಬೇಡಿಕೊಂಡನು.

ಕುಸುಮ ಶ್ರೇಷ್ಠಿಯು ಅವನನ್ನು ಸಮಾಧಾನ ಪಡಿಸಿದನು. ಅವನ ಸಮ್ಮುಖದಲ್ಲಿಯೇ ವಿರೂಪಾಕ್ಷನಿಗೆ ಹದಿನೆಂಟು ನಗರಗಳ ಒಡೆತನವನ್ನು ಒಂದುನೂರ ಎರಡು ಗೋತ್ರದವರ ನಾಯಕತ್ವವನ್ನೂ ವಿಧಿವತ್ತಾಗಿ ವಹಿಸಿಕೊಟ್ಟನು. ಅನಂತರ ಒಂದುನೂರ ಎರಡು ಅಗ್ನಿಕುಂಡಗಳನ್ನು ಸ್ಥಾಪಿಸಿದರು. ನೂರ ಎರಡು ಗೋತ್ರದವರು ತಮ್ಮ ಪತ್ನಿಯರೊಡಗೂಡಿ ಪೂಜಿಸಿದರು. ಪೂರ್ಣಾಹುತಿಯನ್ನು ಕೈಯಲ್ಲಿ ಹಿಡಿದುಕೊಂಡು ನೂರ ಎರಡು ಗೋತ್ರದ ವೈಶ್ಯ ದಂಪತಿಗಳು ‘ವಾಸವಿಗೆ ಜಯವಾಗಲಿ’ ಎಂದು ಕೂಗುತ್ತ ಬೆಂಕಿಯಲ್ಲಿ ಧುಮುಕಿದರು.

ರಾಜರಾಜೇಂದ್ರನು ಆ ದೃಶ್ಯವನ್ನು ನೋಡಲಾರದೆ ವಿರೂಪಾಕ್ಷನನ್ನು ತಬ್ಬಿಕೊಂಡು ಅತ್ತನು. ಭಾಸ್ಕರಾಚಾರ್ಯರು, ಹಿರಿಯ ಮಂತ್ರಿಗಳು ಅವರನ್ನು ಸಮಾಧಾನಪಡಿಸಿ, “ವಾಸವಿಯ ಮತ್ತು ಒಂದುನೂರ ಎರಡು ಗೋತ್ರದವರ ಆತ್ಮಾರ್ಪಣೆ ನಷ್ಟವಾಗುವುದಿಲ್ಲ. ಅವಳನ್ನು ಭಯಭಕ್ತಿಗಳಿಂದ ನೀವು ಇನ್ನು ಮುಂದೆ ನಿಮ್ಮ ಕುಲದೇವತೆಯೆಂದು ಆರಾಧಿಸಿರಿ. ಅವಳ ಭೌತಿಕ ದೇಹ ಪಂಚಭೂತಗಳಲ್ಲಿ ಸೇರಿಹೋದರೂ ಅವಳ ಸೂಕ್ಷ್ಮ ದೇಹ ನಿಮ್ಮೆಲ್ಲರ ಹೃದಯಮಂದಿರಗಳಲ್ಲಿ ನಿಂತಿದೆ. ಆದಿಶಕ್ತಿಯೇ ಅವಳು. ಇನ್ನು ಮುಂದೆ ವಾಸವಿಯು ಕನ್ಯಕಾಪರಮೇಶ್ವರಿ ಎಂಬುದಾಗಿ ಪ್ರಸಿದ್ಧಳಾಗುತ್ತಾಳೆ. ಚಿಂತಿಸಬೇಡಿರಿ” ಎಂಬುದಾಗಿ ಸಮಾಧಾನ ಪಡಿಸಿದರು.

ವಿರೂಪಾಕ್ಷನಾದಿಯಾಗಿ ಒಂದುನೂರ ಎರಡು ಗೋತ್ರದವರ ಮಕ್ಕಳು ಗೋದಾವರೀ ನದಿಯ ತೀರದಲ್ಲಿ ಗತಿಸಿದ ತಂದೆತಾಯಿಗಳಿಗೆ ಉತ್ತರ ಕ್ರಿಯಾದಿಗಳನ್ನು ಮಾಡಿದರು. ದುಃಖಶಮನಾರ್ಥವಾಗಿ, ಪಿತೃಗಳ ಸದ್ಗತಿಯ ಸಲುವಾಗಿ ತೀರ್ಥಯಾತ್ರೆಯನ್ನು ಮಾಡಿ ಬಂದರು. ರಾಜ ಮತ್ತು ಅಧಿರಾಜರು ವಾಸವಿಯ ನೆನಪು ಶಾಶ್ವತವಾಗಿ ಉಳಿಯಲು ಕೃಷ್ಣಶಿಲಾ ಪ್ರತಿಮೆಯನ್ನು ಮಾಡಿಸಿ ಪ್ರತಿಷ್ಠಾಪಿಸಿದರು. ಅದಕ್ಕೆ ಒಂದು ಭವ್ಯ ದೇವಾಲಯವನ್ನು ನಿರ್ಮಿಸಿದರು. ರಾಜರಾಜೇಂದ್ರನು ‘ತನ್ನ ತಂದೆಯು ಮಾಡಿದ ಮಹಾಪರಾಧವನ್ನು ಮನ್ನಿಸು ತಾಯಿ’ ಎಂದು ಬೇಡಿದವನಾಗಿ ಅದರ ಶಾಶ್ವತ ಪೂಜೆಗಾಗಿ ಅನೇಕ ದತ್ತಿದಾನಗಳನ್ನು ಬಿಟ್ಟು ರಾಜ ಮಹೇಂದ್ರಾವರಕ್ಕೆ ಹೋದನು. ವಿರೂಪಾಕ್ಷನು ದೇವಿಯನ್ನು ಪ್ರತಿನಿತ್ಯದಲ್ಲೂ ಆರಾಧಿಸುತ್ತಾ ರಾಜ್ಯಭಾರ ಮಾಡುತ್ತಿದ್ದನು.

ನ್ಯಾಯ-ಅನ್ಯಾಯಗಳನ್ನು ಲೆಕ್ಕಿಸದೇ ಉನ್ಮತ್ತ ಶಕ್ತಿಯ ವಿರುದ್ಧ ಪ್ರತಿಭಟನೆ ಮಾಡಿದ ವೀರಕನ್ಯೆ ವಾಸವಿ. ಪರಮೇಶ್ವರನಲ್ಲೇ ಮನಸ್ಸನ್ನು ನಿಲ್ಲಿಸಿದ ಪವಿತ್ರ ಕನ್ಯೆ ಅವಳು. ಆತ್ಮಗೌರವಕ್ಕಾಗಿ, ನ್ಯಾಯಕ್ಕಾಗಿ ಬಲಿದಾನ ಮಾಡಿದ ಅವಳು ಎಲ್ಲ ಮಾನವರಿಗೆ ಸ್ಫೂರ್ತಿಯ ಸೆಲೆ.