ಮೈಸೂರು ನಗರದ ಮಹಾರಾಜ ಸಂಸ್ಕೃತ ಪಾಠಶಾಲೆ. ಈ ಪಾಠಶಾಲೆಯ ಒಳಗಡೆ ಮಹಾಗಣಪತಿ ದೇವಸ್ಥಾನ.

ಅಂದು ಬೆಳಗ್ಗೆ ಮಹಾಗಣಪತಿಗೆ ವಿಶೇಷ ಪೂಜೋಪಚಾರಗಳು ಏರ್ಪಾಡಾಗಿದ್ದರು. ವಿದ್ಯಾರ್ಥಿಗಳ ಮುಂದಿನ ಸಾಲಿನಲ್ಲಿ ನಿಂತಿದ್ದ ವಾಸುವಿನ ಮುಖದಲ್ಲಿ ಆತುರ, ಆತಂಕ ತಾನೇತಾನಾಗಿ ಕಾಣಿಸುತ್ತಿದವು. “ನನ್ನ ಜೀವನದ ಹಿರಿಯ ಆಸೆ ನಿರ್ವಿಘ್ನವಾಗಿ ಕೈಗೂಡುವಂತೆ ಅನುಗ್ರಹಿಸಪ್ಪ, ವಿಘ್ನೇಶ್ವರ” ಎಂದು ಬೇಡುತ್ತಿದ್ದ.

ಪೂಜೆ ಮುಗಿಯಿತು. ದೇವರ ಮುಂದೆ ಸಣ್ಣಸಣ್ಣಗೆ ಸುತ್ತಿದ್ದ ಕಾಗದ ಸುರುಳಿಗಳ ಎರಡು ಗುಡ್ಡೆಗಳಿದ್ದವು. ಒಂದು ಪುಟ್ಟ ಮಗು ಈ ಗುಡ್ಡೆಯಿಂದ ಒಂದು, ಆ ಗುಡ್ಡೆಯಿಂದ ಒಂದು ಸುರುಳಿಯನ್ನು ಆಯ್ದು ಪಕ್ಕದಲ್ಲಿ ನಿಂತಿದ್ದ ಹಿರಿಯ ಉಪಾಧ್ಯಾಯರ ಕೈಗೆ ಕೊಡಬೇಕು, ಅವರು ಸುರುಳಿಗಳನ್ನು ಬಿಚ್ಚಿ ಹೇಳಬೇಕು. ಒಂದು ಸುರುಳಿಗಳನ್ನು ಬಿಚ್ಚಿ ಹೇಳಬೇಕು. ಒಂದು ಸುರುಳಿಯಲ್ಲಿ ವಿದ್ಯಾರ್ಥಿಯ ಹೆಸರು, ಇನ್ನೊಂದು ಸುರುಳಿಯಲ್ಲಿ ಅವನು ಓದಬೇಕಾದ ಎರಡು ಪಠ್ಯ ವಿಷಯಗಳು. ವಾಸು ತನ್ನ ಪಾಲಿಗೆ ಯಾವ ಪಠ್ಯ ವಿಷಯಗಳು ಬರುವವೋ ಎಂದು ಕಾತರತೆಯಿಂದ ಕಾದಿದ್ದ. ಹಣೆಯ ಮೇಲೆ ಬೆವರು ಹನಿ ಸಾಲುಗಟ್ಟಿತ್ತು. ಈ ಬಾರಿ ಸುರುಳಿಯನ್ನು ಬಿಚ್ಚಿ “ವಾಸುದೇವ” ಎಂದರು ಉಪಾಧ್ಯಾಯರು. ಇನ್ನೊಂದು ಸುರುಳಿಯನ್ನು ಬಿಚ್ಚಿ “ಸಂಗೀತ ಮತ್ತು ಸಾಹಿತ್ಯ” ಎಂದು ಘೋಷಿಸಿದರು. ವಾಸುವಿಗೂ ಸ್ವರ್ಗಕ್ಕೂ ಎರಡೇ ಬೆಟ್ಟುಗಳು ಉಳಿದಿದ್ದವು. ಅವನ ಬಾಳದೋಣಿಗೆ ವಿನಾಯಕನೇ ಹರಿಗೋಲಾದ.

ರಾಜಾಶ್ರಯ

ವಾಸುವಿನ ತಂದೆಯ ಹೆಸರು ಸುಬ್ರಹ್ಮಣ್ಯಾಚಾರ್ಯರು. ತಾಯಿ ಕೃಷ್ಣಾಬಾಯಿ. ಸುಬ್ರಹ್ಮಣ್ಯಾಚಾರ್ಯರು ಸುಪ್ರಸಿದ್ಧ ಸಂಸ್ಕೃತ ಪಂಡಿತರು; ಪೌರಾಣಿಕರು. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಆಚಾರ್ಯರನ್ನು ವಿಶೇಷವಾಗಿ ಸನ್ಮಾನಿಸಿ ತಮ್ಮ ಆಸ್ಥಾನದ ವಿದ್ವಾಂಸರನ್ನಾಗಿ ನೇಮಿಸಿ ಕೊಂಡಿದ್ದರು. ಆಚಾರ್ಯರು ಮೈಸೂರಿನಲ್ಲಿಯೇ ನೆಲೆಸಿದ್ದರು.

೧೮೬೫ ನೇಯ ಮೇ ೨೮ ರಂದು ಇವರಿಗೆ ಜನಿಸಿದ ಮಗನೇ ವಾಸುದೇವ.

ತೊದಲು ಮತು, ತಪ್ಪು ಹೆಜ್ಜೆ ಪ್ರಾರಂಭವಾಗುವುದಕ್ಕಿಲ್ಲ, ವಾಸುವನ್ನು ಅರಮನೆಗೂ ಕರೆದುಕೊಂಡು ಹೋಗಲು ಪ್ರಾರಂಭ ಮಾಡಿದರು ಆಚಾರ್ಯರು. ಹೀಗೆ ಇನ್ನೂ ಎರಡು ವರ್ಷದ ಮಗುವಾಗಿದ್ದಾಗಲೇ ವಾಸು ಅರಮನೆಯ ಹೊಸ್ತಿಲನ್ನು ದಾಟಿದ. ಇಷ್ಟೇ ಅಲ್ಲ, ಒಮ್ಮೆ ಮಹಾರಾಜರ ತೊಡೆಯನ್ನು ಸಹ ಏರಿ ಕುಳಿತ. ವಾತ್ಸಲ್ಯಪೂರ್ಣರಾದ ಪ್ರಭುಗಳು ಮಗುವನ್ನು ಮುದ್ದಾಡಿ ಆಶೀರ್ವದಿಸಿದ್ದರು. ಹೀಗೆ ಪ್ರಾರಂಭವಾದ ರಾಜಕಟಾಕ್ಷ ನಾಲ್ಕು ತಲೆಮಾರಿನವರೆಗೆ, ಶ್ರೀ ಜಯಚಾಮರಾಜ ಒಡೆಯರ ಕಾಲದವರೆಗೆ, ಸತತವಾಗಿ ಪ್ರಾಪ್ತವಾಯಿತು ವಾಸುದೇವಾಚಾರ್ಯರಿಗೆ.

‘ಸಂಗೀತ, ಸಾಹಿತ್ಯ’ ಎಂದು ಘೋಷಿಸಿದರು.

ಸಂಗೀತದ ಹಂಬಲ

ತನ್ನ ತಂದೆಯ ಪ್ರೀತಿ, ವಿಶ್ವಾಸಗಳನ್ನು ಬಹುಕಾಲ ಅನುಭವಿಸುವ ಯೋಗವನ್ನು ಪಡೆದು ಬಂದಿರಲಿಲ್ಲ ವಾಸು. ಅವನಿಗೆ ಮೂರು ವರ್ಷ ತುಂಬುವುದರೊಳಗೇ ಅವರು ದೇಹತ್ಯಾಗ ಮಾಡಿದರು. ಕೃಷ್ಣಾಬಾಯಿಯ ಒಡೆದ ಬಾಳನ್ನು ಕಂಡು ಅವಳ ತಂದೆ ಗೋಪಾಲಾಚಾರ್ಯರ ಜೀವ ಹಿಂಡಿದಂತಾಯಿತು. “ಏನೇ ಆಗಲಿ, ವಾಸುವನ್ನು ಅವನ ತಂದೆಯಂತೆಯೇ ದೊಡ್ಡ ಸಂಸ್ಕೃತ ವಿದ್ವಾಂಸನನ್ನಾಗಿ ಮಾಡುತ್ತೇನೆ. ನೀನೇನೂ ಹೆದರಬೇಡ” ಎಂದು ಮಗಳನ್ನು ಸಮಾಧಾನಪಡಿಸಿದರು.

ವಾಸು ಸ್ವಭಾವತಃ ಸ್ವಲ್ಪ ಸೋಮಾರಿ. ಆದರೂ ಓದುಬರಹದಲ್ಲಿ ಮಾತ್ರ ಯಾರಿಗೂ ಹಿಂದೆ ಬೀಳುತ್ತಿರಲಿಲ್ಲ. ಬಹು ಅಭಿಮಾನ ಬೇರೆ. ಎಲ್ಲರೆದುರು ಉಪಾಧ್ಯಾಯರಿಂದ ಒಂದು ಮಾತನ್ನೂ ಕೇಳಲೂ ಇಷ್ಟಪಡುತ್ತಿರಲಿಲ್ಲ. ಆದುದರಿಂದ ತುಂಬ ಆಸಕ್ತಿಯಿಂದ, ಶ್ರದ್ಧೆಯಿಂದ ವ್ಯಾಸಂಗಮಾಡುತ್ತಾ ಬಂದ ವಾಸು, ಅಧ್ಯಾಪಕರ ಪ್ರೀತ್ಯಾದಾರಗಳಿಗೆ ಪಾತ್ರನಾದ. ಆದರೆ ಅವನಿಗೆ ಸಂಸ್ಕೃತ ವ್ಯಾಸಂಗದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಅವನ ಅಂತರಂಗ ಸಂಗೀತವನ್ನು ಅರಸುತ್ತಿತ್ತು. ಆದರೆ ಇದಕ್ಕೆ ಗೋಪಾಲಾಚಾರ್ಯರು ಅವಕಾಶ ಕೊಡರು. ಕಾರಣ, ಸಂಗೀತ ವಿದ್ಯೆಗೆ ಈಗಿರುವ ಸ್ಥಾನಮಾನಗಳು ಅಂದಿನ ಸಮಾಜದಲ್ಲಿರಲಿಲ್ಲ. ಸಂಗೀತವಾಗಲಿ, ನಾಟ್ಯವಾಗಲಿ ಗೌರವಸ್ಥ ಮನೆತನದವರಿಗೆ ಸಲ್ಲುವುದಲ್ಲ ಎಂದು ಜನ ನಂಬಿದ್ದ ಕಾಲ ಅದು.

ವಾಸುವಿನ ಮನೆಯ ಬೀದಿಯಲ್ಲಿಯೇ ಸಂಗೀತ ವಿದ್ವಾನ್ ಸುಬ್ಬರಾಯರ ಮನೆ. ವಾಸು ಒಂದು ದಿನ ಸುಬ್ಬರಾಯರ ಬಳಿಗೆ ಹೋಗಿ ಸಾಷ್ಟಾಂಗ ಎರಗಿ ತನಗೂ ಸಂಗೀತ ವಿದ್ಯೆಯನ್ನು ದಾನ ಮಾಡುವ ಕೃಪೆ ಮಾಡಬೇಕೆಂದು ಬೇಡಿಕೊಂಡ. ’ತಥಾಸ್ತು’ ಎಂದರು ಸುಬ್ಬರಾಯರು. ಸುಬ್ಬರಾಯರು ವಾಸುವಿಗೆ ಸಂಗೀತದಲ್ಲಿ ಪ್ರಥಮ ವಿದ್ಯಾಗುರುಗಳಾದರು. ಪಾಠಗಳು ಪ್ರಾರಂಭವಾದವು. ಗುರುಗಳು ಹುಡುಗನ ಆಸಕ್ತಿಯನ್ನೂ ಸಾಮರ್ಥ್ಯವನ್ನೂ ಕಂಡು ಇವನಿಗೆ ಬಂಗಾರದ ಭವಿಷ್ಯ ಕಟ್ಟಿಟ್ಟಿದ್ದು ಎಂದುಕೊಂಡರು.

ವಾಸು ಸಂಗೀತವನ್ನು ಕಲಿಯುತ್ತಿದ್ದಾನೆಂದು ತಿಳಿದ ಗೋಪಾಲಾಚಾರ್ಯರು ಕಿಡಿಕಿಡಿಯಾದರು. ಸುಬ್ಬರಾಯರ ಮನೆಗೆ ಇನ್ನು ಮುಂದೆ ಕಾಲಿಡಕೂಡದು ಎಂದು ಕಟ್ಟಪ್ಪಣೆ ಮಾಡಿದರು. ತಾವೇ ವಾಸುವಿನ ಎದುರಿಗೆ ಕುಳಿತು ವ್ಯಾಕರಣ ಸೂತ್ರಗಳನ್ನು ಅರೆದು ಕುಡಿಸಲು ಪ್ರಾರಂಭಿಸಿದರು. ಪಾಪ, ಯತ್ನವಿಲ್ಲದೆ ವಾಸು ತನ್ನ ಆಸೆಯನ್ನೆಲ್ಲ ತನ್ನಲ್ಲಿಯೇ ಬಚ್ಚಿಟ್ಟುಕೊಳ್ಳುವ ಸ್ಥಿತಿ ಬಂದಿತು. ಸಮಯ ಸಂದರ್ಭ ಸಿಕ್ಕಂತೆ ವ್ಯಾಕರಣ ಸೂತ್ರಗಳನ್ನೇ ರಾಗವಾಗಿ ಹಾಡಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಅದನ್ನೂ ನಿಷೇಧಿಸಿದರು ಗೋಪಾಲಾಚಾರ್ಯರು.

ತಾತನ ಕಣ್ಣು ತಪ್ಪಿಸಿ ಸುಬ್ಬರಾಯರ ಮನೆಗೆ ಹೋಗುತ್ತಿದ್ದಂತೆ ವಾಸು ಒಂದು ದಿನ ಸಿಕ್ಕಿಬಿದ್ದ. ಈ ಸಲ ಗೋಪಾಲಾಚಾರ್ಯರ ಕೋಪಕ್ಕೆ ಇತಿಮಿತಿ ಇರಲಿಲ್ಲ. ಆ ಸಮಯದಲ್ಲಿ ಕೈಗೆ ಸಿಕ್ಕ ನೀರು ಸೇದುವ ಹಗ್ಗದಿಂದಲೇ ಬಾಸುಂಡೆ ಬರುವಂತೆ ಹಿಡಿದು ಬಾರಿಸಿದರು ಮೊಮ್ಮಗನನ್ನು.

ಹೀಗಿರುವಲ್ಲಿ ವಾಸುವಿನ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವ ಸನ್ನಿವೇಶವೊಂದು ತಾನಾಗಿಯೇ ಒದಗಿ ಬಂದಿತು. ಪಾಠ ಶಾಲೆಯ ಪಠ್ಯ ವಿಷಯಗಳಲ್ಲಿ ಕೆಲವೊಂದು ಬದಲಾವಣೆಗಳಾದವು. ಪ್ರತಿಯೊಬ್ಬ ವಿದ್ಯಾರ್ಥಿಯೂ ಎರಡೆರಡು ಶಾಸ್ತ್ರಗಳನ್ನು ಕಲಿಯಬೇಕೆಂದು ಗೊತ್ತಾಯಿತು.  ಪಠ್ಯ ವಿಷಯಗಳಲ್ಲಿ ಸಂಗೀತವು ಸೇರಿಕೊಂಡಿತು. ಆದರೆ ಯಾವ ಎರಡು ವಿಷಯಗಳನ್ನು ವಿದ್ಯಾರ್ಥಿ ಕಲಿಯಬೇಕು ಎಂಬುದನ್ನು ಚೀಟಿ ಎತ್ತಿ ನಿರ್ಣಯಿಸುವುದೆಂದು ಗೊತ್ತಾಗಿತ್ತು. ವಾಸುವಿನ ಮೊರೆ ವಿನಾಯಕನ ಕಿವಿ ಮುಟ್ಟಿತು. ಯಾರೊಬ್ಬರ ಅಡ್ಡಿ, ಆತಂಕಗಳಿಲ್ಲದೆ ವಾಸು ಈಗ ಸಂಗೀತವನ್ನು ಕಲಿತು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಸಮರ್ಥನಾದ.

ಎರಡನೆಯ ಗುರು

ಪಾಠಶಾಲೆಯಲ್ಲಿ ಸಂಗೀತದ ವಿಭಾಗಕ್ಕೆ ನೇಮಿಸಲ್ಪಟ್ಟ ವೀಣೆ ಪದ್ಮನಾಭಯ್ಯನವರು ವಾಸುವಿಗೆ ಎರಡನೆಯ ಗುರುಗಳಾದರು. ಪದ್ಮನಾಭಯ್ಯ ಸ್ವಲ್ಪ ಮುಂಗೋಪಿ. ಶ್ರುತಿ, ತಾಳ ಸ್ವಲ್ಪ ತಪ್ಪಿತಂದರು ಸಾಕು, ಅವರಿಗೆ ಸೈರಣೆ ಮೀರುತ್ತಿತ್ತು. ಶಿಷ್ಯರನ್ನು ಕಟುವಾಗಿ ಖಂಡಿಸುತ್ತಿದ್ದರು. ತಾವು ಹಾಡುವಾಗಲೂ ಅಷ್ಟೆ. ಅಪಸ್ವರ ಬಂದರೆ, ತಾಳ ತಪ್ಪಿದರೆ ಶಿಷ್ಯರನ್ನು ಕುರಿತು, “ಏನು ನೋಡುತ್ತಿದ್ದೀರಯ್ಯಾ? ಹೊಡೀರಯ್ಯ ಮೆಟ್ಟು ತೆಗೆದುಕೊಂಡು. ಕತ್ತೆಗೆ ಬಂದ ಹಾಗೆ ಬಂದಿತು ವಯಸ್ಸು. ಆದರೂ ಇನ್ನೂ ರಾಗಜ್ಞಾನವಿಲ್ಲ, ತಾಳಜ್ಞಾನವಿಲ್ಲ” ಎಂದು ತಮ್ಮನ್ನೇ ತಾವು ಖಂಡಿಸಿಕೊಳ್ಳುತ್ತಿದ್ದರು.

ಒಂದು ದಿನ ಅಪಸ್ವರ ಹಾಡಿದ ವಾಸು ಗುರುಗಳ ಆಶೀರ್ವಾದಕ್ಕೆ ಪಾತ್ರನಾದ! “ನಿಮಗೆ ಸಂಗೀತ ಬರೋಣ ಎಂದರೇನ್ರಯ್ಯ? ಎಲ್ಲಾದರೂ ಹೋಗಿ ಸ್ವಲ್ಪ ಮಣ್ಣು ತಿನ್ನಿ” ಎಂದು ಗೌರವಪೂರ್ವಕವಾಗಿಯೇ ಪ್ರಯೋಗ ಮಾಡಿದರು ಪದ್ಮನಾಭಯ್ಯ. ವಾಸು ಆತ್ಮಾಭಿಮಾನಿ. “ಈ ಹಾಳು ಸಂಗೀತದ ಗೋಜೇ ಬೇಡ. ಎಷ್ಟಾದರೂ ಇನ್ನೊಬ್ಬರ ಮುಂದೆ ಕುಳಿತು ಒಪ್ಪಿಸಬೇಕಾದ ವಿದ್ಯೆ ಇದು’ ಎಂದು ನೊಂದುಕೊಂಡು, ಮರುದಿನದಿಂದ ಪದ್ಮನಾಭಯ್ಯನವರ ಬಳಿಗೆ ಹೋಗುವುದನ್ನೇ ಬಿಟ್ಟ. ಪದ್ಮನಾಭಯ್ಯ ಎಷ್ಟು ಮುಂಗೋಪಿಗಳೋ ಅಷ್ಟೇ ಸರಳ ಹೃದಯರು ಹೌದು. ವಾಸುವಿನ ಮನೆಗೆ ತಾವೇ ಬಂದು ಕ್ಷಮೆ ಯಾಚಿಸಿದರು.

ವರ್ಣ, ಕೀರ್ತನೆ, ಅಲ್ಪಸ್ವಲ್ಪ ರಾಗಾಲಾಪಣೆ ಈ ಮಟ್ಟದವರೆಗೆ ಬಂದಿತು ಶಿಕ್ಷಣ. ಪದ್ಮನಾಭಯ್ಯನವರು ದೊಡ್ಡ ವಿದ್ವಾಂಸರು, ಶಾಸ್ತ್ರಜ್ಞರು ಎನ್ನಿಸಿದ್ದರು ಅವರ ಸಂಗೀತದಲ್ಲಿ ಯಾವುದೋ ಒಂದು ರೀತಿಯ ಕೊರತೆ ಇದೆ ಎನ್ನಿಸುತ್ತಿತ್ತು ವಾಸುವಿಗೆ. ಸಂಗಿತ ಹೃದಯ ಸ್ಪರ್ಶಿಯಾಗಬೇಕಾದರೆ ಶಾಸ್ತ್ರ ಸಮ್ಮತವಾಗಿದ್ದರಷ್ಟೇ ಸಾಲದು. ಜೊತೆಗೆ ಇನ್ನೂ ಏನೋ ಇರಬೇಕು ಎಂದು ನುಡಿಯುತ್ತಿತ್ತು ಅವನ ಅಂತರಾತ್ಮ.

ಕಲಿತರೆ ಇಂತಹ ಸಂಗೀತ ಕಲಿಯಬೇಕು!

ದಿವಾನ್ ಶೇಷಾದ್ರಿ ಅಯ್ಯರ್ ಅವರ ಮನೆಯಲ್ಲಿ ಯಾವುದೋ ಮದುವೆಯ ಸಮಾರಂಭ. ಮದುವೆ ಮನೆಯ ಸಂಗೀತ ಕಚೇರಿಗಳಿಗೆಂದು ವಿಖ್ಯಾತ ವಿದ್ವಾಂಸರಾಗಿದ್ದ ಪಟ್ಣಂ ಸುಬ್ರಹ್ಮಣ್ಯಯ್ಯರ್ ಮತ್ತು ಮಹಾವೈದ್ಯನಾಥಯ್ಯರ್ ಅವರುಗಳನ್ನು ತಿರುವಯ್ಯಾರಿನಿಂದ ಬರಮಾಡಿ ಕೊಂಡಿದ್ದರು ದಿವಾನರು. ವಾಸು ಆ ವಿದ್ವಾಂಸರನ್ನು ಎಡೆಬಿಡದೆ ಹಿಂಬಾಲಿಸುತ್ತ ಬಂದ. ಒಂದು ನಿಮಿಷವನ್ನೂ ಲೋಪ ಮಾಡದಂತೆ ವಿದ್ವಾಂಸರು ಅದೂ ಇದೂ ಹಾಡಿಕೊಂಡು ಸಾಧನೆ ಮಾಡಿಕೊಳ್ಳುತ್ತಲೆ ಇರುತ್ತಿದ್ದರು. ಕೊಠಡಿಯ ಹೊರಗಡೆಯೇ ನಿಂತು ವಾಸು ಅವರ ಸಾಧನೆಯ ಕ್ರಮವನ್ನೂ ಹಾಡುವ ರೀತಿಯನ್ನೂ ಗ್ರಹಿಸಿಕೊಂಡ. ತಾನು ಕಲಿಯುತ್ತಿದ್ದ ಸಂಗೀತದಲ್ಲಿ ಯಾವುದು ಲೋಪವಾಗಿದೆ ಎನ್ನುವುದು ಈಗ ಅರ್ಥವಾಗುತ್ತ ಬಂದಿತು. ಅದರಲ್ಲೂ ಪಟ್ಣಂ ಅವರ ಗಾಯನ ವಾಸುವಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು.

ಅಂದು ಸಂಜೆ ಮಹಾಗಣಪತಿಯ ಸನ್ನಿಧಿಯಲ್ಲಿ ಪಟ್ಣಂ ಸುಬ್ರಹ್ಮಣ್ಯಯ್ಯರ್ ಅವರ ಕಛೇರಿ. ವಾಸು ಮೈಯೆಲ್ಲ ಕಿವಿಯನ್ನಾಗಿ ಮಾಡಿಕೊಂಡು ಕಛೇರಿಯನ್ನು ಕೇಳಿದ. ಈ ವೇಳೆಗಾಗಲೇ ತನಗೆ ಪಾಠವಾಗಿದ್ದ ’ವಾತಾಪಿ ಗಣಪತಿಂ’, ’ಒಕಮಾಟ ಒಕಬಾಣಮು’ ಮುಂತಾದ ಒಂದೆರಡು ಕೀರ್ತನೆಗಳನ್ನು ವಿದ್ವಾಂಸರು ಅಂದಿನ ಕಛೇರಿಯಲ್ಲಿ ಹಾಡಿದಾಗ ವಾಸುವಿಗೆ ದಿಗ್ಭ್ರಮೆಯಾದಂತಾಯಿತು. ಅವನಿಗೆ ಪಾಠವಾಗಿದ್ದ ರೀತಿ ನೀತಿಗೂ ಈ ವಿದ್ವಾಂಸರು ಹಾಡಿದ್ದ ಕ್ರಮಕ್ಕೂ ಅಜಗಜಾಂತರ ಎನಿಸಿತು ವಾಸುವಿಗೆ. ’ಅದೆಷ್ಟು ಗಾಂಭೀರ್ಯ ಮಾಧುರ್ಯ, ಅದೆಷ್ಟು ಥಳಕು ಬೆಳಕು ಈ ಹಾಡಿಕೆಯಲ್ಲಿ! ಕಲಿತರೆ ಇಂತಹ ಸಂಗೀತವನ್ನು ಕಲಿಯಬೇಕು’ ಎನಿಸಿತು ವಾಸುವಿಗೆ.

ಸುಬ್ರಹ್ಮಣ್ಯಯ್ಯರ್ ಅವರು ಎರಡನೆಯ ತ್ಯಾಗರಾಜ ಎಂದು ಪ್ರಸಿದ್ಧರಾದವರು. ಮಾರನೆಯ ದಿನ ವಾಸು ಸಮಯ ಸಾಧಿಸಿ ಪಟ್ಣಂ ಅವರ ದರ್ಶನ ಪಡೆದ. ಸಾಷ್ಟಾಂಗವೆರಗಿ ತನ್ನ ಪ್ರಾರ್ಥನೆಯನ್ನು ಅವರ ಮುಂದಿಟ್ಟ. “ದೇವರ ದಯೆಯಿದ್ದರೆ ಯಾಕಾಗಬಾರದು ವಾಸು? ನೋಡೋಣ” ಎಂದರು ವಿದ್ವಾಂಸರು.

ಈ ವೇಳೆಗೆ ವಾಸುದೇವಾಚಾರ್ಯರಿಗೆ ಮದುವೆಯಾಗಿತ್ತು. ಅರಮನೆಯಿಂದ ಬರುತ್ತಿದ್ದ ಮಾಸಾಶನ ಬಿಟ್ಟರೆ ಸಂಸಾರ ನಿರ್ವಹಣೆಗೆ ಬೇರೆ ಮಾರ್ಗವೊಂದಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ತಿರುವಯ್ಯಾರಿಗೆ ಹೋಗಿ ಸಂಗೀತ ಕಲಿಯುವುದು ಎನ್ನುವುದು ಆಚಾರ್ಯರ ಪಾಲಿಗೆ ಗಗನಕುಸುಮವಾಯಿತು. ಆದರೆ ಹಿಡಿದ ಪಟ್ಟನ್ನು ಸುಲಭವಾಗಿ ಬಿಟ್ಟುಕೊಡುವ ಮನೋವೃತ್ತಿಯಲ್ಲ ಅವರದು. ಮಹಾರಾಜರನ್ನೇ ಕಂಡು, ತಮ್ಮ ಮನೋರಥವನ್ನು ನೆರವೇರಿಸಿಕೊಳ್ಳಲು ಸಂಕಲ್ಪಿಸಿದರು.

ನನ್ನದು ತಪ್ಪಾಯಿತು

’ಏನಾದರೂ ಆಗಲಿ, ನಾನು ಸಂಗೀತ ವಿದ್ಯೆಯನ್ನು ಕರಗತ ಮಾಡಿಕೊಳ್ಳಲೇಬೇಕು’ ಎಂಬ ಛಲವನ್ನು ಆಚಾರ್ಯರಲ್ಲಿ ಮೂಡಿಸಲು ಅನುವಾದ ಘಟನೆಯೊಂದು ಈ ಸಂದರ್ಭದಲ್ಲಿ ಒದಗಿಬಂದಿತು.

ವೈಣಿಕ ಶಿಖಾಮಣಿ ಶೇಷಣ್ಣನವರು ಬಹು ದೊಡ್ಡ ಸಂಗೀತ ವಿದ್ವಾಂಸರು. ಅವರ ವೀಣಾವಾದನವೊಂದು ಕೊಯಮತ್ತೂರಿನ ಧನಿಕರೊಬ್ಬರ ಮನೆಯಲ್ಲಿ ಏರ್ಪಾಡಾಗಿದ್ದಿತು. ಧನಿಕರೊಬ್ಬರ ಮನೆಯಲ್ಲಿ ಏರ್ಪಾಡಾಗಿದ್ದಿತು. ಶೇಷಣ್ಣ ಆಚಾರ್ಯರನ್ನು ಸಂಗಡ ಕರೆದುಕೊಂಡು ಹೋಗಿದ್ದರು.  ಶೇಷಣ್ಣನವರು ಆಚಾರ್ಯರನ್ನು ಪರಿಹಾಸ್ಯ ಮಾಡುವ ಉದ್ದೇಶದಿಂದ “ಇವರೂ ಸಂಗೀತದಲ್ಲಿ ದೊಡ್ಡ ವಿದ್ವಾಂಸರು; ತುಂಬ ಚೆನ್ನಾಗಿ ಹಾಡುತ್ತಾರೆ. ನೀವೆಲ್ಲ ಅಗತ್ಯವಾಗಿ ಕೇಳಲೇಬೇಕಾದ ಸಂಗೀತ” ಎಂದು ಅಲ್ಲಿದ್ದ ಜನರಿಗೆ ಆಚಾರ್ಯರನ್ನು ಪರಿಚಯಮಾಡಿಕೊಟ್ಟರು. ಆಚಾರ್ಯರು ತಾವು ಕಲಿತಿದ್ದ ಕೀರ್ತನೆಯೊಂದನ್ನು ಹಾಡಲು ಪ್ರಾರಂಭಿಸಿಯೇಬಿಟ್ಟರು! ಕೊರಳಿನ ನರಗಳು ಬಿಗಿದು ಕೊಲ್ಳುವಂತೆ ಅರಚುತ್ತ, ಕುತ್ತಿಗೆಯನ್ನು ವಾಲಿಸಿಕೊಂಡು ತೊಡೆಯ ಚರ್ಮ ಸುಲಿದುಬರುವಂತೆ ತಳವನ್ನು ಟಫಾ ಟಫಾ ಎಂದು ಬಡಿಯುತ್ತ ಹಾಡುತ್ತಿದ್ದ ಆಚಾರ್ಯರನ್ನು ಕಂಡು ಹೊಟ್ಟೆ ಬಿರಿಯುವಂತೆ ನಗಲಾರಂಭಿಸಿದರು ಜನ! ಆಚಾರ್ಯರು ಶೇಷಣ್ಣನವರ ಕಡೆ ನೋಡಿದರು. ಕರವಸ್ತ್ರದ ಮರೆಯಲ್ಲಿ ಶೇಷಣ್ಣ ಒಳಗೊಳಗೇ ನಗುತ್ತಿದ್ದರು. ಮೈಯೆಲ್ಲ ಬೆಂಕಿಯಾಯಿತು ಆಚಾರ್ಯರಿಗೆ. ಶೇಷಣ್ಣನವರ ಮಾತಿನ ಹಿಂದೆ ಅಡಗಿದ್ದ ಪರಿಹಾಸ್ಯ ಇದೀಗ ಅರ್ಥವಾಯಿತು ಅವರಿಗೆ. ಒಂದಲ್ಲ ಒಂದು ದಿನ ಸಂಗೀತ ವಿದ್ವಾಂಸನೆಂದೆ ಎಲ್ಲರಿಂದಲೂ ಸೈ ಎನಿಸಿಕೊಳ್ಳಬೇಕು ಎಂಬ ಹಠ ಆಚಾರ್ಯರಲ್ಲಿ ಬೇರೂರಿತು.

ಮೈಸೂರಿಗೆ ಹಿಂದಿರುಗುವ ಸಮಯ. “ಶೇಷಣ್ಣನವರೇ, ನೀವು ನನಗೆ ಮಾಡಿದ ಅವಮಾನವನ್ನು ನಾನು ಎಂದೂ ಮರೆಯುವಂತಿಲ್ಲ. ಚಿಂತೆಯಿಲ್ಲ, ನನಗೆ ಸಂಗೀತ ಬರುವುದಿಲ್ಲ ಎಂದಲ್ಲವೆ ನೀವು ತಿಳಿದಿರುವುದು? ನಿಮ್ಮ ಅಭಿಪ್ರಯ ಶುದ್ಧ ತಪ್ಪು ಎಂಬುದನ್ನು ನಿಮಗೇ ತೋರಿಸಿಕೊಡುತ್ತೇನೆ. ನನಗೆ ಯಾವುದಾದರೊಂದು ರಚನೆಯನ್ನು ನೀವೇ ಹೇಳಿಕೊಡಬೇಕು” ಎಂದರು ಆಚಾರ್ಯರು. ಮಾತಿಗೆ ಮಾತು ಬೆಳೆದು ಕೊನೆಗೆ ಇಬ್ಬರೂ ಈ ನಿರ್ಧಾರಕ್ಕೆ ಬಂದರು: ಶೇಷಣ್ಣ ಆ ಕ್ಷಣದಲ್ಲೇ ಶಂಕರಾಭರಣ ರಾಗದ ಅಟ್ಟತಾಳದ ವರ್ಣವನ್ನು ಹೇಳಿಕೊಡುವುದು. ಒಂದು ಸಲ ಹೇಳಿಕೊಟ್ಟದ್ದನ್ನು ಇನ್ನೊಂದು ಸಲ ಹೇಳಿಕೊಡುವಂತಿಲ್ಲ. ಪ್ರಯಾಣ ಮುಗಿಯುವಷ್ಟರಲ್ಲಿ ಆಚಾರ್ಯರು ವರ್ಣವನ್ನು ಕಲಿತು ಒಪ್ಪಿಸಬೇಕು. ಇಲ್ಲವಾದರೆ ಆಚಾರ್ಯರು ತಮ್ಮ ಯಜ್ಞೋಪವೀತವನ್ನೇ ಕಿತ್ತು ಬಿಸಾಡತಕ್ಕದ್ದು!

ವರ್ಣವನ್ನು ಕಲಿತು ಚಾಚೂ ತಪ್ಪಿಲ್ಲದೆ ಹಾಡಿಯೇ ಹಾಡಿದರು ಆಚಾರ್ಯರು. “ನನ್ನದು ತಪ್ಪಾಯಿತು ಆಚಾರ್ಯರೆ. ಸಂಗೀತ ಪ್ರಪಂಚದಲ್ಲಿ ನಿಮ್ಮ ಸ್ಥಾನ ಕಟ್ಟಿಟ್ಟದ್ದು” ಎಂದು ಆಚಾರ್ಯರನ್ನು ತಬ್ಬಿಕೊಂಡು ಆಶೀರ್ವದಿಸಿದರು ಶೇಷಣ್ಣ.

ಬಯಸಿದ ಗುರುವಿನ ಆಶ್ರಯದಲ್ಲಿ

ಮಹಾರಾಜ ಚಾಮರಾಜ ಒಡೆಯರು ಪ್ರತಿ ಮಂಗಳವಾರ, ಶುಕ್ರವಾರದಂದು ಕುದುರೆ ಸವಾರಿ ಮಾಡಿಕೊಂಡು ಚಾಮುಂಡಿ ಬೆಟ್ಟದ ತಪ್ಪಲವರೆಗೆ ಹೋಗಿ ಕುಲದೇವತೆ ಶ್ರೀ ಚಾಮುಂಡೇಶ್ವರಿಯನ್ನು ಪೂಜಿಸಿ ಬರುವುದು ಪದ್ಧತಿಯಾಗಿತ್ತು. ಪ್ರಭುಗಳು ಅಮ್ಮನವರ ಪಾದಗಳಿಗೆ ನಮಸ್ಕರಿಸಿ ಅರಮನೆಗೆ ಹಿಂದಿರುಗುವ ಸಮಯಕ್ಕೆ ಸರಿಯಾಗಿ ಆಚಾರ್ಯರು ಅವರೆದುರು ಕಾಣಿಸಿಕೊಳ್ಳುತ್ತಿದ್ದರು. ಹೀಗೆ ನಾಲ್ಕಾರು ಮಂಗಳವಾರ, ಶುಕ್ರವಾರಗಳು ನಡೆಯಿತು. ಒಂದು ದಿನ ಪ್ರಭುಗಳೇ ಆಚಾರ್ಯರನ್ನು ಉದ್ದೇಶಿಸಿ, “ಯಾರು ನೀವು? ಹೀಗೇಕೆ ಇಷ್ಟು ದಿನಗಳಿಂದ ನಮ್ಮ ಹಾದಿ ಕಾಯುತ್ತಿದ್ದೀರಿ? ಏನಾಗಬೇಕು ನಮ್ಮಿಂದ?” ಎಂದು ಕೇಳಿದರು. ಆಚಾರ್ಯರು ತಮ್ಮ ಪೂರ್ವೋತ್ತರವನ್ನೆಲ್ಲ ಸಂಗ್ರಹವಾಗಿ ಪ್ರಭುಗಳಲ್ಲಿ ನಿವೇದಿಸಿಕೊಂಡರು. “ಆಗಲಿ ನೋಡೋಣ, ನಾಳೆಯಿಂದ ಅರಮನೆಗೆ ಬಂದು ಹೋಗುತ್ತಿರಿ” ಎಂದು ಅಪ್ಪಣೆ ಕೊಡಿಸಿದರು ಪ್ರಭುಗಳು.

ಪ್ರಭು ಚಾಮರಾಜ ಒಡೆಯರು ಆಚಾರ್ಯರ ವಿಷಯದಲ್ಲಿ ವಿಶೇಷ ಪ್ರೀತಿ, ಗೌರವಗಳನ್ನು ತೋರುತ್ತ ಬಂದರು. ಒಂದು ವರ್ಷ ಕಳೆದ ನಂತರ ತಾವೇ ಅವರನ್ನು ಸುಬ್ರಹ್ಮಣ್ಯಯ್ಯರ್ ಬಳಿಗೆ ಕಳುಹಿಸಿಕೊಟ್ಟರು.

ಆಚಾರ್ಯರನ್ನು ನೋಡಿದೊಡನೆಯೇ ಪಟ್ಣಂ ಸುಬ್ರಹ್ಮಣ್ಯಯ್ಯರ್ ಅವರನ್ನು ಗುರುತಿಸಿದರು. “ವಾಸು, ತುಂಬ ಸಂತೋಷ. ನಿಮ್ಮ ಮಹಾರಾಜರ ಆಣತಿಯನ್ನು ನನ್ನ ಕೈಯಲ್ಲಾದ ಮಟ್ಟಿಗೂ ನಡೆಸಿಕೊಡುತ್ತೇನೆ” ಎಂದರು, ಸಾಷ್ಟಾಂಗವೆರಗಿದ್ದ ಆಚಾರ್ಯರನ್ನು ಆಶೀರ್ವದಿಸುತ್ತ.

ಗುರುಗಳ ಮನೆಯಲ್ಲಿ ಒಳಗಣ ಕೆಲಸ ಕಾರ್ಯಗಳೆಲ್ಲವನ್ನೂ ಆಚಾರ್ಯರು ನೋಡಿಕೊಳ್ಳಬೇಕಾಗಿತ್ತು. ಪಟ್ಣಂ ಅವರು ಬೆಳಗಿನ ಝಾವ ಮುಂಚಿತವಾಗಿ ಎದ್ದು ಸಾಧನೆ ಮಾಡುತ್ತಿದ್ದರು ಮತ್ತು ಹಿರಿಯ ಶಿಷ್ಯ ಪರಮೇಶ್ವರಯ್ಯರವರಿಗೆ ಪಾಠ ಹೇಳುತ್ತಿದ್ದರು. ಆ ಸಮಯದಲ್ಲಿ ತಂಬೂರಿಯ ಶ್ರುತಿ ಕೊಡುವುದ ಆಚಾರ್ಯರ ದಿನಚರಿಯಲ್ಲಿ ಮೊದಲನೆಯದು. ಆ ಬಳಿಕ ಗುರುಗಳು ಪೂಜೆಗೆ ಕುಳಿತಕೊಳ್ಳುವಷ್ಟರಲ್ಲಿ ದೇವರ ಮನೆಯನ್ನು ಸ್ವಚ್ಛಗೊಳಿಸಿ ಪೂಜಾಪಾತ್ರೆಗಳನ್ನು ಶುಭ್ರವಾಗಿ ತೊಳೆದು ತಂದಿಡಬೇಕು. ಪೂಜೆಗೆ ಹೂ, ತುಳಸಿ ತಂದಿರಿಸಬೇಕು. ಅನಂತರ ತಾಮ್ರದ ಕೊಡಗಳನ್ನು ನದಿಗೆ ಕೊಂಡೊಯ್ದು ಫಳಫಳ ಹೊಳೆಯುವಂತೆ ತೊಳೆದು ಕುಡಿಯುವ ನೀರನ್ನು ತುಂಬಿ ತಂದಿಡಬೇಕು. ಗುರುಗಳ ಧೋತ್ರ ಹಾಗೂ ಅವರ ಪತ್ನಿಯ ಸೀರೆಗಳನ್ನು ಒಗೆದು ಒಣ ಹಾಕಬೇಕು. ಫಲಾಹಾರವಾದ ಮೇಲೆ ಭೋಜನದ ವೇಳೆಯವರೆಗೂ ಗುರುಗಳು ಕಛೇರಿಯ ಕ್ರಮದಲ್ಲಿ ಹಾಡಿಕೊಳ್ಳುವರು. ಆ ಸಮಯದಲ್ಲಿ ಗುರುಗಳ ಬಳಿ ಕುಳಿತು ತಂಬೂರಿಯನ್ನು ಮೀಟಬೇಕು. ಭೋಜನದ ಮೇಲೆ ಬೀದಯ ಜಗುಲಿಯ ಮೇಲೆ ಆರಾಮ ಕುರ್ಚಿಯಲ್ಲಿ ಕುಳಿತು ಗುರುಗಳು ತಾಂಬೂಲ ಸೇವನೆಯನ್ನು ಮಾಡುತ್ತ ಕೃತಿ ರಚನೆಯಲ್ಲಿ ನಿರತರಾಗುವರು. ಆ ಸಮಯದಲ್ಲಿ ಆಚಾರ್ಯರು ಅಲ್ಲಿ ಸಿದ್ಧರಾಗಿರಬೇಕು. ಸಂಜೆ ಗುರುಗಳು ಗಾಳಿ ಸಂಚಾರ ಅಥವಾ ಕಚೇರಿಗಳಿಗೆ ಹೊರಟಾಗ ಜೊತೆಯಲ್ಲಿರಬೇಕು ಆಚಾರ್ಯರು. ರಾತ್ರಿ ಭೋಜನವಾದ ಮೇಲೆ ಮತ್ತೆ ಹಾಡಲು ಕುಳಿತುಕೊಳ್ಳುವರು ಗುರುಗಳು. ಆಚಾರ್ಯರು ಕೈಗೆ ತಂಬೂರಿ ತೆಗೆದುಕೊಳ್ಳಬೇಕು. ಗುರುಗಳು ಮಲಗುವ ವೇಳೆಗೆ ಅವರ ಹಾಸಿಗೆಯನ್ನು ಹಾಸಿ ಸಿದ್ಧಮಾಡಬೇಕು. ಕಣ್ಣಿಗೆ ನಿದ್ದೆ ಹತ್ತುವವರೆಗೂ ಗುರುಗಳ ಮೈ ಕೈ ಒತ್ತಬೇಕು.

ಗುರುಗಳನ್ನಾಶ್ರಯಿಸಿ ಸುಮಾರು ಆರು ತಿಂಗಳುಗಳಾಗುತ್ತ ಬಂದರೂ, ಪಾಠ ಪ್ರವಚನಗಳು ಪ್ರಾರಂಭವೇ ಆಗಿರಲಿಲ್ಲ. ಆಚಾರ್ಯರಿಗೆ ವಿದ್ಯೆ ಕಲಿಯಬೇಕೆಂಬ ಆತುರ. ಆದರೆ ’ಎಂದು ಪ್ರಾರಂಭಿಸುತ್ತೀರಿ ಗುರುಗಳೇ?’ ಎಂದು ಕೇಳಲು ಭಯ. ಒಂದು ದಿನ ಗುರುಗಳೇ ವಿಷಯವನ್ನು ಪ್ರಸ್ತಾಪಿಸಿದರು. “ವಾಸು, ವಿದ್ಯೆ ಕಲಿಯಲು ನಿನಗಿರುವ ಆಸಕ್ತಿ ಮತ್ತು ಆತುರ, ಎರಡೂ ನನಗೆ ಚೆನ್ನಾಗಿ ತಿಳಿದಿದೆ. ಮನೆ, ಮಠ ಎಲ್ಲವನ್ನೂ ಬಿಟ್ಟು ಬಂದು ಇಷ್ಟು ದಿನವೂ ಇಲ್ಲಿ ವೃಥಾ ಕಾಲಹರಣ ಮಾಡುತ್ತಿದ್ದೇನಲ್ಲ ಎಂದು ಕೊರಗಬೇಡ. ಮುಂದೆ ನಿನ್ನಿಂದ ನಿರ್ಮಾಣವಾಗ ಬೇಕಿರುವ ಸಂಗೀತ ಮಂದಿರಕ್ಕೆ ಈವರೆಗೆ ಅಸ್ತಿಭಾರವನ್ನು ಸಿದ್ಧಗೊಳಿಸುತ್ತಿದ್ದೆ. ನನ್ನ ಸಾಧನೆಯ ಕ್ರಮ, ನನ್ನ ಗಾಯನ ಶೈಲಿ, ನನ್ನ ರಚನೆಯ ಶೈಲಿ, ಎಲ್ಲವೂ ಈವಾಗಲೇ ನಿನ್ನ ಮನಸ್ಸಿನ ಮೇಲೆ ತನ್ನ ಮುದ್ರೆಯನ್ನೊತ್ತಿವೆ. ಅಚ್ಚು ಸಿದ್ಧವಾದ ಮೇಲೆ ಮೂರ್ತಿಯನ್ನು ಎರಕ ಹೊಯ್ಯುವುದು ಎಷ್ಟರ ಕೆಲಸ? ಗುರುವಿನ ಶೈಲಿ ಶಿಷ್ಯನಲ್ಲಿ ಪ್ರತಿಬಿಂಬಿಸಬೇಕಾದರೆ, ಶಿಷ್ಯ ಗುರುವಿನ ಗಾಯನವನ್ನು ಏಕಾಗ್ರಚಿತ್ತತೆಯಿಂದ ಗ್ರಹಿಸಬೇಕು, ಮನನ ಮಾಡಬೇಕು. ಇದೀಗ ಆ ಕೆಲಸ ಪೂರ್ಣಗೊಂಡಿದೆ. ನಾಳೆಯಿಂದಲೇ ಪಾಠ ಪ್ರಾರಂಭಿಸುತ್ತೇನೆ, ಯೋಚಿಸಬೇಡ” ಎಂದರು. ಗುರುವಿನ ಕಟಾಕ್ಷಕ್ಕೆ ಪಾತ್ರನಾದೆನಲ್ಲ ಎಂದು ಆಚಾರ್ಯರು ಹಿರಿಹಿರಿ ಹಿಗ್ಗಿದರು.

‘ಗರ್ಭಗುಡಿಯ ತೆರೆಯನ್ನು ಸರಿಸಲೇಬೇಕಾಗಿ ಬಂದಿತು

ಬೇಗಡೆ ರಾಗ

ಸುಬ್ರಹ್ಮಣ್ಯಯ್ಯರ್ ಅವರಿಗೆ ಬೇಗಡೆ ರಾಗದ ಮೇಲೆ ಎಂತಹ ಪ್ರಭುತ್ವ ಎಂದರೆ ’ಬೇಗಡೆ ಸುಬ್ರಹ್ಮಣ್ಯಯ್ಯರ್’ ಎಂದೇ ವಿದ್ವಾಂಸರಿಂದ ಕರೆಸಿಕೊಂಡಿದ್ದರು. ಆಚಾರ್ಯರ ಪಾಠ ಪ್ರಾರಂಭವಾಯಿತು. ಬೇಗಡೆ ರಾಗದಲ್ಲಿ ತಾವೇ ರಚಿಸಿದ ಅಟ್ಟತಾಳದ ವರ್ಣದ ನಾಲ್ಕು ಆವರ್ತಗಳನ್ನೂ ಹೇಳಿಕೊಟ್ಟರು ಗುರುಗಳು.

ಎರಡು ಮೂರು ದಿನಗಳಲ್ಲಿಯೇ ವರ್ಣದ ಪಾಠ ಮುಗಿಯಿತು. ಆದರೂ ಮುಂದೆ ಮೂರು ತಿಂಗಳ ತನಕ ಬೇರೆ ಯಾವ ಹೊಸ ಪಾಠವನ್ನೂ ಪ್ರಾರಂಭಿಸಲೇ ಇಲ್ಲ ಗುರುಗಳು. ಮೂರು ತಿಂಗಳ ಪರ್ಯಂತ, ಹಗಲೂ ರಾತ್ರಿ ಅದೇ ವರ್ಣದ ಸಾಧನೆ. ವರ್ಣವನ್ನು ಕಾಲ, ಮಧ್ಯಮಕಾಲ, ತ್ರಿಕಾಲ ಹೀಗೆ ಮೂರು ಕಾಲಗಳಲ್ಲಿ ಸಾಧನೆ ಮಾಡಿಸಿದರು. ಬಳಿಕ ವರ್ಣದ ಒಂದೊಂದೇ ಆವರ್ತನವನ್ನೆತ್ತಿಕೊಂಡು ಅದರ ಸ್ವರ ಚೌಕಟ್ಟಿನಲ್ಲಿಯೇ ರಾಗವನ್ನ ವಿಸ್ತರಿಸುವ ಕ್ರಮ ಹೇಗೆ ಎಂಬುದನ್ನು ವಿವರಿಸಿದರು. ಒಂದನೆಯ ಕಾಲದಿಂದ ಎರಡನೆಯ ಕಾಲ, ಎರಡರಿಂದ ಮೂರು, ಮತ್ತೆ ಮೂರರಿಂದ ಎರಡು, ಎರಡರಿಂದ ಒಂದನೆ ಕಾಲ – ಹೀಗೆ ವರ್ಣದ ಪ್ರತಿಯೊಂದಾವರ್ತವನ್ನೂ ಹಾಡಿಸುತ್ತ ಬಂದರು. “ವಾಸು, ಇದು ನನ್ನ ಪಾಠಕ್ರಮ. ಬೇಗಡೆ ರಾಗದ ಮರ್ಮವನ್ನೆಲ್ಲ ನಿನಗೆ ತಿಳಿಯಪಡಿಸಿದ್ದೇನೆ. ಇನ್ನು ಪ್ರತ್ಯೇಕವಾಗಿ ನಿನಗೆ ಬೇಗಡೆ ರಾಗಾಲಾಪನೆಯನ್ನು ಹೇಳಿಕೊಡುವ ಅಗತ್ಯವಿಲ್ಲ. ನಿನ್ನೆ ಬುದ್ಧಿಶಕ್ತಿ ಇದ್ದಷ್ಟು, ಕಲ್ಪನಾಸಾಮರ್ಥ್ಯವಿದ್ದಷ್ಟು, ನೀನು ಕಷ್ಟಪಟ್ಟು ಸಾಧನೆ ಮಾಡಿದಷ್ಟು ಆ ರಾಗವನ್ನು ನೀನು ಬೆಳೆಸಿಕೊಳ್ಳಬಹುದು” ಎಂದರು ಗುರುಗಳು.

“ಗುರುಗಳ ಮಾರ್ಗದರ್ಶನದಲ್ಲಿ ಆಗ ತಾನೆ ಮಾಡಿದ ಸಾಧನೆಯೇ ಈಗಲೂ ನನ್ನ ತಲೆ ಕಾಯುತ್ತಿರುವುದು” ಎಂದು ಆಚಾರ್ಯರು ಜ್ಞಾಪಿಸಿಕೊಳ್ಳುತ್ತಿದ್ದರು.

ಇದು ಸರಿಯಾದ ದಾರಿ!

ಆಚಾರ್ಯರ ಗುರುಕುಲವಾಸ ಸುಸೂತ್ರವಾಗಿ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ದಿನ ಗುರು ಶಿಷ್ಯರ ಋಣಾನುಬಂಧವೇ ಹರಿದುಹೋಯಿತೇನೋ ಎನ್ನುವ ಪರಿಸ್ಥಿತಿ ಬಂದಿತು.

ಪಟ್ಣಂ ಸುಬ್ರಹ್ಮಣ್ಯಯ್ಯರ್ ಅವರ ಸಮಕಾಲೀನರಲ್ಲಿ ಹೆಸರಾದವರೆಂದರೆ ಮಹಾವೈದ್ಯನಾಥಯ್ಯರ್ ಎಂಬ ವಿದ್ವಾಂಸರು. ಅವರ ಸಂಗೀತ ಶೈಲಿ ವಾಸುದೇವಾ ಚಾರ್ಯರ ಮನಸ್ಸನ್ನು ಸೂರೆಗೊಂಡಿತ್ತು. “ನನ್ನ ಗುರುಗಳ ಶೈಲಿ ಪಟ್ಟದ ಆನೆಯಂತೆ ಗಾಂಭೀರ್ಯದ ಗಣಿಯಾಗಿರುತ್ತಿದ್ದರೆ ಮಹಾವೈದ್ಯನಾಥಯ್ಯರ್ ಅವರ ಶೈಲಿ ಪಟ್ಟದ ಕುದುರೆಯಂತೆ ತೇಜಃಪುಂಜವಾಗಿರುತ್ತಿತ್ತು” ಎಂದು ಆಚಾರ್ಯರು ವರ್ಣಿಸುತ್ತಿದ್ದುದುಂಟು.

ಆಚಾರ್ಯರು ರಾತ್ರಿಯ ವೇಳೆ ಮಲಗಿಕೊಳ್ಳುತ್ತಿದ್ದುದು ಗುರುಗಳ ಮನೆಯ ಹೊರಗಿನ ಜಗುಲಿಯ ಮೇಲೆ. ರಾತ್ರಿಯೆಲ್ಲ ಜಾಗರಣೆ ಮಾಡುತ್ತ ಆ ದಿನದ ಪಾಠವನ್ನೆಲ್ಲ ಮೆಲುಕು ಹಾಕುತ್ತಿದ್ದರು ಆಚಾರ್ಯರು. ಸುಮಾರು ಒಂದು ಘಂಟೆಯ ಸಮಯದಲ್ಲಿ ಗುರುಗಳು ಬಂದು “ಹೊತ್ತಾಯಿತು, ನಿದ್ದೆಗೆಡಬೇಡ ಮಲಗಿಕೋ” ಎಂದು ಆಚಾರ್ಯವನ್ನು ಮಲಗುವಂತೆ ಬಲವಂತಪಡಿಸುವುದು ನಿತ್ಯನಿಯಮವಾಗಿತ್ತು.

ಒಂದು ರಾತ್ರಿ. ಪ್ರಣತಾರ್ತಿಹರ ದೇವಸ್ಥಾನದಲ್ಲಿ ಅಂದು ಮಹಾವೈದ್ಯನಾಥಯ್ಯರ್ ಅವರ ಸಂಗೀತ. ಹೇಗಿದ್ದರೂ ನಿದ್ದೆ ಬರುವುದಿಲ್ಲ, ದೇವಸ್ಥಾನಕ್ಕಾದರೂ ಹೋಗಿ ಆ ಗಂಧರ್ವಗಾನವನ್ನು ಕೇಳಿಬರಬಾರದೇಕೆ ಎನಿಸಿತು ಆಚಾರ್ಯರಿಗೆ. ಆದರೆ ಗುರುಗಳ ಅನುಮತಿ ಇಲ್ಲದೆ ಹೋಗುವುದು ಹೇಗೆ ಎಂದು ದಿಗಿಲು ಇನ್ನೊಂದೆಡೆ. ಕೊನೆಗೊಂದು ಉಪಾಯ ಮಾಡಿದರು. ತಲೆದಿಂಬನ್ನು ಹಾಸಿಗೆಯ ಮೇಲೆ ಉದ್ದವಾಗಿಟ್ಟು, ಮೇಲೆ ಹೊದಿಕೆಯನ್ನೆಳೆದು ಸದ್ದಿಲ್ಲದೆ ಹೊರಬಿದ್ದರು. ’ಸ್ವಲ್ಪ ಹೊತ್ತು ಕಛೇರಿಯನ್ನು ಕೇಳಿ ಬಂದುಬಿಟ್ಟರಾಯಿತು. ಅಷ್ಟರಲ್ಲಿ ಗುರುಗಳು ಹೊರಗೆ ಬಂದರೆ ಶಿಷ್ಯ ಮಗಲಿ ನಿದ್ರಿಸುತ್ತಿದ್ದಾನೆಂದು ತಿಳಿದುಕೊಳ್ಳುತ್ತಾರೆ’ ಎಂದು ಆಚಾರ್ಯರ ಯೋಚನೆ.

ಸ್ವಲ್ಪ ಕಾಲ ಸಂಗೀತವನ್ನು ಕೇಳಿ ಮನಸ್ಸಿಲ್ಲದ ಮನಸ್ಸಿನಿಂದ ಹಿಂದಿರುಗಿದರು ಆಚಾರ್ಯರು. ಅವರು ಕಂಡಿದ್ದೇನು? ದಿಂಬು ಎಲ್ಲಿರಬೇಕೋ ಅಲ್ಲಿದೆ! ಹೊದಿಕೆಯೂ ಅಷ್ಟೆ! ಅಚ್ಚುಕಟ್ಟಾಗಿ ಮಡಿಸಿಕೊಂಡು ಕಾಲ ಬಳಿ ಬಿದ್ದಿದೆ! ’ಸಿಕ್ಕಿಬಿದ್ದೆ. ನನ್ನ ಗತಿ ಆಯಿತು ಇನ್ನು!’ ಎಂದು ಥರಥರ ನಡುಗಿದರು ಆಚಾರ್ಯರು.

“ಕಟ್ಟು ನಿನ್ನ ಗಂಟುಮೂಟೆ. ಯಾರ ಸಂಗೀತ ನಿನಗೆ ಅಷ್ಟು ಆಕರ್ಷಕವಾಗಿ ಕಂಡಿತೋ ಆ ಸಂಗೀತವನ್ನೇ ಕಲಿಯಬಹುದು ನೀನು. ಹೊರಡು ಇಲ್ಲಿಂದ!” ಎಂದು ಪಟ್ಣಂ ಸುಬ್ರಹ್ಮಣ್ಯಯ್ಯರ್ ಕೆಂಡದ ಸುರಿಮಳೆಯನ್ನೇ ಕರೆದರು ವಾಸುವಿನ ಮೇಲೆ!

ವಾಸುದೇವಾಚಾರ್ಯರು ಗುರುಗಳ ಕಾಲನ್ನು ಹಿಡಿದು ಕಣ್ಣೀರು ಸುರಿಸಿದರು. ಆಚಾರ್ಯರ ಭುಜ ಹಿಡಿದು ಮೇಲೆಬ್ಬಿಸಿ ಗುರುಗಳು ನುಡಿದರು:

“ವಾಸು, ಮಹಾವೈದ್ಯನಾಥಯ್ಯರ್ ಅವರ ಸಂಗೀತವನ್ನು ಕೇಳಿದ್ದು ಮಹಾಪರಾಧ ಎಂದು ನಾನು ಹೇಳುವುದಿಲ್ಲ. ಅವರ ವಿಷಯದಲ್ಲಿ ನನಗೆ ಅತ್ಯಂತ ಗೌರವವಿದೆ. ಅವರು ಮಹಾ ವಿದ್ವಾಂಸರು. ಸರಿಯಾದ ಸಮಯ ಬಂದಾಗ ನಾನೇ ನಿನಗೆ ಹೇಳುತ್ತಿದ್ದೆ, ಅವರ ಸಂಗೀತವನ್ನೂ ತಿರುಕ್ಕೋಡಿಕಾವಲ್ ಕೃಷ್ಣಯ್ಯರ್ ಎಂಬ ಇನ್ನೊಬ್ಬ ಮಹಾ ವಿದ್ವಾಂಸರ ಸಂಗೀತವನ್ನೂ ಕೇಳಿ ಬಾ ಎಂದು. ವಿದ್ಯಾರ್ಥಿ ದೆಸೆಯಲ್ಲಿರುವಾಗ ವಿದ್ಯಾರ್ಥಿಯ ಸಾಥನೆ ಏಕಮುಖವಾಗಿರಬೇಕು. ಗುರು-ಶಿಷ್ಯರು ಬಿಂಬ-ಪ್ರತಿಬಿಂಬಗಳಂತಾದ ಮೇಲೆ, ಇಬ್ಬರ ಶೈಲಿಗಳೂ ಒಂದಾಗಿ ಬೆಸೆದುಕೊಂಡ ಮೇಲೆ, ಬೇರೆ ಯಾವ ಸಂಗೀತವನ್ನು ಕೇಳಿದರೂ ಅದರ ಪ್ರಭಾವದಿಂದ ಮೂಲ ಶೈಲಿಯ ರೂಪರೇಖೆ ಕದಡುವುದಿಲ್ಲ. ಹಾಗಿಲ್ಲದೆ ಪ್ರಾರಂಭದಲ್ಲಿಯೇ ಶಿಷ್ಯನ ಚಿತ್ತವೃತ್ತಿ ಹತ್ತಾರು ಕಡೆ ಹರಿದಾಡಿದರೆ ಅವನ ಶೈಲಿಯೂ ಭಿನ್ನಭಿನ್ನವಾಗುತ್ತದೆ. ಈ ಕಾರಣದಿಂದ ನನಗೆ ಅಸಮಾಧಾನ ಉಂಟಾಯಿತೇ ವಿನಾ ಬೇರೆ ಏನೂ ಇಲ್ಲ.”

ಬೆಟ್ಟದಂತೆ ಕವಿದು ಬಂದ ಕರಿಯ ಮೋಡ ಮಂಜಿನಂತೆ ಕರಗಿ ಮಾಯವಾಯಿತು. ಆಚಾರ್ಯರು ನೆಮ್ಮದಿಯಿಂದ ಉಸಿರಾಡಿದರು.

ರಾಜಸನ್ಮಾನ

ಕಾಲಕ್ರಮದಲ್ಲಿ ಗುರುಗಳ ಸಂಗಡ ಕಚೇರಿಯಲ್ಲಿ ಹಾಡುವ ಸುಯೋಗವು ಪ್ರಾಪ್ತವಾಯಿತು ಆಚಾರ್ಯರಿಗೆ. ಅವರ ಗುರುಕುಲವಾಸ ಯಶಸ್ವಿಯಾಗಿ ಕೊನೆಗೊಳ್ಳುತ್ತಿತ್ತು. ಬೇಕಾದ ಕಛೇರಿಯನ್ನು ಕೇಳಲು ಈಗ ಅನುಮತಿಯನ್ನಿತ್ತಿದ್ದರು ಗುರುಗಳು. ಆಚಾರ್ಯರು ತುಂಬ ಮೆಚ್ಚಿಕೊಂಡ ಮತ್ತೊಬ್ಬ ವಿದ್ವಾಂಸರೆಂದರೆ ತಿರುಕ್ಕೋಡಿಕಾವಲ್ ಕೃಷ್ಣಯ್ಯರ್. ಅಸಮಾನ ಪಿಟೀಲಿವಾದಕರು ಅವರು. ಕಚೇರಿಯ ಕಟ್ಟುನಿಟ್ಟುಗಳಿಗೆ ಒಳಗಾಗದೆ, ತಮ್ಮಷ್ಟಕ್ಕೆ ತಾವೇ ಸ್ವೇಚ್ಛೆಯಾಗಿ ಅವರು ನುಡಿಸಿಕೊಳ್ಳುವಾಗ ಕೇಳಿ ಕಿವಿಯ ತುಂಬ ಆ ನಾದಸುಧೆಯನ್ನು ತುಂಬಿಕೊಳ್ಳಬೇಕೆಂಬ ಹಂಬಲ ಆಚಾರ್ಯರಿಗೆ, ಪಂಜರದೊಳಗಿನ ಗಿಣಿಗೂ ಗನನ ವಿಲಾಸಿಯಾದ ಗಿಣಿಗೂ ವ್ಯತ್ಯಾಸವಿಲ್ಲವೇ?

ಆಚಾರ್ಯರು ಸಮಯ ದೊರೆತಾಗಲೆಲ್ಲ ಕೃಷ್ಣಯ್ಯರ್ ಅವರ ಮನೆಯ ಹೊರಗಡೆ ಕಿಟಕಿಯ ಕೆಳಗೆ ಗೋಪ್ಯವಾಗಿ ಕುಳಿತು ಕಾದಿರುತ್ತಿದ್ದರು. ಯಾಕೆ ಈ ಗುಟ್ಟು ಎಂದರೆ ಕೃಷ್ಣಯ್ಯರ್ ಅವ ಸಾಧನೆ ಅತಿಗೋಪ್ಯ. ಅವರ ಸಾಧನೆಯ ವೇಳೆಯಲ್ಲಿ ಯಾರಿಗೂ ಎದುರಿಗಿರಲು ಅವಕಾಶವಿರಲಿಲ್ಲ.

ಒಂದು ದಿನ ಬೆಳಗ್ಗೆ ಅಯ್ಯರ್ ಅವರು ಅಮೋಘವಾಗಿ ಕಾಂಬೋಧಿ ರಾಗವನ್ನು ನುಡಿಸುತ್ತಿದ್ದರು. ಆಚಾರ್ಯರು ತನ್ಮಯರಾಗಿ ಕೇಳುತ್ತಿದ್ದರು. ಅಷ್ಟರಲ್ಲಿ ಅಯ್ಯರ್ ಅವರು ಉಗುಳಿದ ಎಲೆಅಡಿಕೆಯ ಚರಟದಿಂದ ಆಚಾರ್ಯರಿಗೆ ಮಸ್ತಕಾಭಿಷೇಕವಾಯಿತು! ಒಡನೆಯೆ ಅಯ್ಯರ್ರವರು ದಡ ಬಡನೆ ಹೊರಗೆ ಬಂದು ಆಚಾರ್ಯರನ್ನು ಗುರುತಿಸಿ, “ಮಹಾಪರಾಧವಾಯಿತು ನನ್ನಿಂದ, ಕ್ಷಮಿಸಬೇಕು, ಹೊರಗಡೆ ಕುಳಿತು ಕೇಳಬೇಕೆ ನನ್ನ ವಾದನವನ್ನು? ನನ್ನ ಮನೆಯ ಬಾಗಿಲು ನಿಮಗೆ ಸದಾ ತೆರೆದದ್ದು” ಎಂದು ಹೇಳಿ ಅವರನ್ನು ಒಳಗೆ ಕರೆದುಕೊಂಡು ಹೋಗಿ, ಉಪಚರಿಸಿ, ನಾದಾಮೃತದ ಔತಣವನ್ನೇ ನೀಡಿದರು.

ಗುರು ಪಟ್ಣಂ ಸುಬ್ರಹ್ಮಣ್ಯಯ್ಯರ್, ಮಹಾ ವೈದ್ಯನಾಥಾಯ್ಯರ್ ಮತ್ತು ತಿರುಕ್ಕೋಡಿಕಾವಲ್ ಕೃಷ್ಣಯ್ಯರ್ ಅವರ ಶೈಲಿಗಳೆಲ್ಲ ಆಚಾರ್ಯರ ಹಾಡುವಿಕೆಯಲ್ಲಿ ಎರಕಗೊಂಡಿದ್ದವು. ಮೈಸೂರಿನ ಸಂಪ್ರದಾಯ ಬದ್ಧವಾದ ಸಂಗೀತಕ್ಕೆ ದಾಕ್ಷಿಣಾತ್ಯದ ಸೊಗಸು, ಸೊಬಗುಗಳನ್ನು ಬೆರೆಸಿ, ಸಂಗೀತಕ್ಷೇತ್ರದಲ್ಲಿ ಕರ್ನಾಟಕಕ್ಕೆ ಇಂದು ವಿಶಿಷ್ಟ ಸ್ಥಾನವನ್ನು ದೊರಕಿಸಿಕೊಟ್ಟ ಕೀರ್ತಿ ಆಚಾರ್ಯರದ್ದಾಯಿತು.

‘ವಿದ್ಯಾರ್ಥಿಯ ಸಾಧನೆ ಏಕಮುಖವಾಗಿರಬೇಕು’

ಪ್ರಭು ಚಾಮರಾಜ ಒಡೆಯರು ಆಚಾರ್ಯರ ಗಾನಪ್ರತಿಭೆಗೆ ಮನಸೋತು ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಅವರನ್ನು ಆಪ್ತ ಗೆಳೆಯರಂತೆ ಕಂಡರು.

ಆಚಾರ್ಯರು ಭಾರತಾದ್ಯಂತ ಸಂಚಾರ ಮಾಡಿ ಗುರುಮನೆ, ಅರಮನೆಗಳಲ್ಲಿ ತಮ್ಮ ವಿದ್ವತ್ ಪ್ರದರ್ಶನ ಮಾಡಿ ದೇಶವಿಖ್ಯಾತರಾದರು.

ವಾಗ್ಗೇಯಕಾರ ಸಾಹಿತಿ

೧೯೦೦ ರಲ್ಲಿ ಮೈಸೂರಿಗೆ ಪ್ರಬಲವಾಗಿ ಪ್ಲೇಗು ಮಾರಿ ಅಂಟಿತು. ಆಚಾರ್ಯರು ಮತ್ತು ಅವರ ಪಗಡೆಯ ಸ್ನೇಹಿತರಾಗಿದ್ದ ಗೋಪಾಲರಾಜೇ ಅರಸರು ಊರ ಹೊರಗಡೆ ಒಂದು ಡೇರೆ ಹಾಕಿಕೊಂಡು ವಾಸಿಸುತ್ತಿದ್ದರು. “ಪ್ಲೇಗಿನ ಉರಿನಾಲಗೆಗೆ ತುತ್ತಾಗುವುದಕ್ಕೆ ಮೊದಲೇ ನಾಲ್ಕಾರು ಕೀರ್ತನೆಗಳನ್ನು ರಚಿಸು ವಾಸು. ನಿನ್ನ ಹೆಸರು ಶಾಶ್ವತವಾಗಿರಬೇಕು ಎಂದು ನನ್ನ ಆಸೆ” ಎಂದು ಗೋಪಾಲರಾಜೇ ಅರಸರು ಆಚಾರ್ಯರನ್ನು ಬಲವಂತ ಪಡಿಸಿದರು. “ಇದೇನು ನಿಮ್ಮ ಪರಿಹಾಸ್ಯ? ನಾನು ಕೀರ್ತನೆ ರಚಿಸುವುದು ಎಂದರೇನು?” ಎಂದು ಆಚಾರ್ಯರ ವಾದ. ಉಹು, ಏನಾದರೂ ಬಿಡರು ಗೋಪಾಲರಾಜೇ ಅರಸರು. ಕೊನೆಗೆ ಆಚಾರ್ಯರೇ ಸೋಲಬೇಕಾಯಿತು. ಆದರೆ ಮುಂದೆ, ಈ ಸೋಲೇ ಆಚಾರ್ಯರ ಗೆಲುವಿಗೆ ಸೋಪಾನವಾಯಿತು.

ವಾಯಾಮಾಳವಗೌಳ ರಾಗದಲ್ಲಿ ’ಚಿಂತುಯೇಹಂ ಜಾನಕೀಕಾಂತಂ’ ಎಂಬುದು ಆಚಾರ್ಯರ ಮೊಟ್ಟ ಮೊದಲ ಕೃತಿ. ಕೃತಿಯನ್ನು ರಚಿಸಿದ ಮೇಲೆ ಆಚಾರ್ಯರು ಚಾಮರಾಜನಗರದ ರಾಮಾಶಾಸ್ತ್ರಿಗಳ ಬಳಿಗೆ ಬಂದು ಕೀರ್ತನೆಯನ್ನು ಹಾಡಿ, ಸಾಷ್ಟಾಂಗವೆರಗಿದರು. ಶಾಸ್ತ್ರಿಗಳು ಸುಪ್ರಸಿದ್ಧ ಸಾಹಿತ್ಯ ವಿದ್ವಾಂಸರಾಗಿದ್ದರು. ಆಚಾರ್ಯರ ರಚನೆಯನ್ನು ಕೇಳಿ ತಲೆದೂಗಿದರು. “ಅಪ್ಪಾ, ನಿನಗೆ ಶಾರದೆಯ ಅನುಗ್ರಹ ಸಂಪೂರ್ಣವಾಗಿದೆ. ಇಂತಹ ನೂರಾರು ರಚನೆಗಳನ್ನು ದೇವರು ನಿನ್ನಿಂದ ಮಾಡಿಸಬೇಕು” ಎಂದು ಆಶೀರ್ವದಿಸಿದರು.

ಆಚಾರ್ಯರ ಜೀವನದಲ್ಲಿ ಬೆಲ್ಲಕ್ಕಿಂತ ಬೇವಿನ ಭಾಗವೇ ಹೆಚ್ಚು ಎನ್ನಬೇಕು. ಚಿಕ್ಕ ವಯಸ್ಸಿನಲ್ಲಿಯೇ ಕೈಹಿಡಿದ ಹೆಂಡತಿ ಕಣ್ಮುಚ್ಚಿಕೊಂಡಳು. ಹುಟ್ಟಿದ ಮಕ್ಕಳಲ್ಲಿ ಸುಬ್ರಹ್ಮಣ್ಯನೆಂಬ ಮಗನನ್ನುಳಿದು ಉಳಿದವರೆಲ್ಲ ಮೃತ ಹೊಂದಿದ್ದರು. ವ್ಯವಹಾರ ಜ್ಞಾನ ಕಡಿಮೆಯಾಗಿದ್ದ ಆಚಾರ್ಯರ ಸರಳತೆಯನ್ನು ದುರುಪಯೋಗಪಡಿಸಿಕೊಂಡರು ದಾಯಾದಿಗಳು. ಹಿರಿಯರು ಬಿಟ್ಟು ಹೋಗಿದ್ದ ಅಲ್ಪಸ್ವಲ್ಪ ಭೂಮಿಕಾಣಿಗೂ ಸೊನ್ನೆಸುತ್ತಿದ್ದರು. ವೃತ್ತಿಜೀವನ ದಲ್ಲಂತೂ ಅವರ ಸುತ್ತಮುತ್ತ ಮಾತ್ಸರ್ಯದ ಬೇಲಿಯನ್ನೇ ಎಬ್ಬಿಸಿದ್ದರು. ಹೀಗಾಗಿ ಆಚಾರ್ಯರಿಗೆ ಬಾಳೇ ಭಾರವಾಗಿ ಕಂಡಿತು. ಜೀವನದ ಕಹಿಯನ್ನು ನುಂಗಲು ಸಂಗೀತಶ್ರೀಯನ್ನೇ ಮೊರೆಹೊಕ್ಕರು.

ಗೋಪಾಲರಾಜೇ ಅರಸರು ಹಚ್ಚಿಟ್ಟ ವಾತ್ಸಲ್ಯದ ಹಣತೆಗೆ ರಾಮಾಶಾಸ್ತ್ರಿಗಳು ಹರಕೆಯ ತೈಲವನ್ನು ಧಾರೆ ಎರೆದಿದ್ದರು.  ಹಣತೆ ಜ್ಯೋತಿಯನ್ನು ಪ್ರಾಜ್ವಲ್ಯಗೊಳಿಸಲು ಆಚಾರ್ಯರು ತಮ್ಮ ಜೀವನವನ್ನೇ ಮುಡಿಪಿಟ್ಟರು. ೧೯೦೦ ರಲ್ಲಿ ಪ್ರಾರಂಭವಾದ ರಚನಕಾರ್ಯ ೧೯೫೬ ರವರೆಗೆ, ಸುಮಾರು ಆರು ದಶಕಗಳ ಪರ್ಯಂತ ನಡೆದು ಈ ಶತಮಾನದ ಮಹಾನ್ ವಾಗ್ಗೇಯಕಾರರೆನಿಸಿಕೊಂಡರು ಆಚಾರ್ಯರು. ’ಅಭಿನವ ತ್ಯಾಗರಾಜ’ರೆಂದು ವಿದ್ವತ್ಲೋಕ ಅವರನ್ನು ಪೂಜಿಸಿ ಗೌರವಿಸಿತು. ಸ್ವರಜತಿ, ವರ್ಣ, ಕೀರ್ತನೆ, ತಿಲ್ಲಾನ, ದರು, ರಾಗಮಾಲಿಕೆಗಳನ್ನೊಳಗೊಂಡು ಸುಮಾರು ನಾಲ್ಕು ನೂರು ರಚನೆಗಳನ್ನು ನೀಡಿದ್ದಾರೆ ಆಚಾರ್ಯರು. ಶ್ರೀಚಾಮುಂಡೇಶ್ವರಿ ಪಾಲಯಮಾಂ, ಬ್ರೋಚೇವಾರೆವರುರ, ಪಲುಕವದೇಮಿರ, ರಾರಾ ರಾಜೀವಲೋಚನ, ದೇವಾದಿದೇವ, ಮಾಮವತು ಶ್ರೀ ಸರಸ್ವತಿ ಮುಂತಾದ ರಚನೆಗಳನ್ನು ಕೇಳದವರೇ ಇಲ್ಲ ಎನ್ನಬಹುದು. ಆಚಾರ್ಯರು ರಚಿಸಿದ ಕೊನೆಯ ಕೀರ್ತನೆಯೆಂದರೆ ’ಮಮಹೃದಯೇ ವಿಹರದಯಾಳೋ’ ಎಂಬುದು. ಇದು ರೀತಿಗೌಳ ರಾಗದಲ್ಲಿದೆ.

ಮಹಾರಾಜ ಜಯಚಾಮರಾಜ ಒಡೆಯರು ಆಚಾರ್ಯರಲ್ಲಿ ಕೆಲಕಾಲ ಸಂಗೀತವನ್ನು ಅಭ್ಯಾಸ ಮಾಡಿ ಸಂಗೀತಶಾಸ್ತ್ರದಲ್ಲಿ ಉತ್ತಮ ಜ್ಞಾನವನ್ನು ಸಂಪಾದಿಸಿ ಕೊಂಡರು. ಆಚಾರ್ಯರ ಮಾರ್ಗದರ್ಶನದಲ್ಲಿ ಸುಮಾರು ನೂರು ಕೀರ್ತನೆಗಳನ್ನು ರಚಿಸಿ ಖ್ಯಾತಿಗೊಂಡರು.

ತಮ್ಮ ೯೦ನೆಯ ಹುಟ್ಟು ಹಬ್ಬದಮದು ’ನಾ ಕಂಡ ಕಲಾವಿದರು’ ಎಂಬ ಪುಸ್ತಕವನ್ನು ಕನ್ನಡ ಬಂಧುಗಳಿಗೆ ನೀಡಿದರು ಆಚಾರ್ಯರು. ತಾವು ಕಂಡ ಹನ್ನೊಂದು ಮಂದಿ ಕಲಾವ್ಯಾಸಂಗಿಗಳ ಹೊರಪರಿಚಯವನ್ನೂ ಅಂತರಂಗದ ಚಿತ್ರವನ್ನೂ ವಿವರವಾಗಿ ಮಾಡಿಕೊಟಿದ್ದಾರೆ ಆಚಾರ್ಯರು ಈ ಪುಸ್ತಕದಲ್ಲಿ. ’ನೆನಪುಗಳು’ ಎಂಬ ಪುಸ್ತಕವನ್ನು ರಚಿಸಿದಾಗ ಆಚಾರ್ಯರ ವಯಸ್ಸು ೯೬, ಮೈಸೂರಿನ ರಾಜಮನೆತನ, ಜನಜೀವನ, ಸಂಗೀತಪ್ರಪಂಚ ಮುಂತಾದವುಗಳನ್ನು ಸಾಕ್ಷಾತ್ಕಾರ ಮಾಡಿಕೊಟ್ಟಿದ್ದಾರೆ ಆಚಾರ್ಯರು ಈ ಪುಟ್ಟ ಪುಸ್ತಕದಲ್ಲಿ.

ಕೀರ್ತನೆಗಳ ಕಥೆ

ಆಚಾರ್ಯರ ಕೆಲವೊಂದು ಕೀರ್ತನೆಗಳಿಗೆ ಸ್ವಾರಸ್ಯವಾದ ಹಿನ್ನೆಲೆಯಿದೆ. ಒಂದೆರಡು ಉದಾಹರಣೆಗಳು ಇವು:

’ದಾನಶೂರ ಕರ್ಣ’ ಎಂಬ ನಾಟಕವನ್ನು ಆಚಾರ್ಯರು ನೋಡಿ ಮನೆಗೆ ಹಿಂದಿರುಗಿದಾಗ ಅರ್ಧರಾತ್ರಿಯಾಗಿತ್ತು. ಆಚಾರ್ಯರು ಯೋಚನಾಪರರಾಗಿದ್ದರು. ಕರ್ಣನೂ ಅರ್ಜುನನೂ ಧನುರ್ವಿದ್ಯೆಯಲ್ಲಿ ಸರಿಸಮಾನರು; ಆದರೂ ಯುದ್ಧರಂಗದಲ್ಲಿ ಅರ್ಜುನನ ಕೈಮೇಲು, ಕರ್ಣನ ಕೈ ಕೆಳಗು. ಇದಕ್ಕೇನ ಕಾರಣ? ಅರ್ಜುನ ಗುರುವಿನ ಅನುಗ್ರಹಕ್ಕೆ ಪಾತ್ರನಾಗಿದ್ದವನು. ಗುರುವಿನ ಶಾಪಕ್ಕೀಡಗಿದ್ದವನು ಕರ್ಣ. ಗುರುವಿನ ಅನುಗ್ರಹವಿಲ್ಲದೆ ಭಗವಂತನ ಅನುಗ್ರಹವಿಲ್ಲ. ಈ ವಿಚಾರಮಂಥನದ ಪ್ರತೀಕವೇ ಆಚಾರ್ಯರು ಪುಷ್ಪಲತಾ ರಾಗದಲ್ಲಿ ರಚಿಸಿರುವ ಕೀರ್ತನೆ ’ಗುರುಕೃಪ ಲೇಕ ಶ್ರೀ ಹರಿಕೃಪಗಲ್ಗುನ’.

ಒಂದು ಸಂಜೆ ಅರಮನೆಯ ವಿದ್ವಾಂಸರು ಮಾತುಕತೆಯಾಡುತ್ತಿದ್ದಾಗ ’ಕದನ ಕುತೂಹಲ’ ಎಂಬ ರಾಗ ಪ್ರಸ್ತಾಪಕ್ಕೆ ಬಂದಿತು. “ಆ ರಾಗದಲ್ಲಿ ರಚನೆ ಮಾಡುವುದು ಕಷ್ಟ” ಎಂದರು ವಿದ್ವಾಂಸರೊಬ್ಬರು. “ನಿಮಗೆ ಕಷ್ಟವೆಂದು ತೋರಬಹುದು ಅಷ್ಟೆ” ಎಂದು ಆಚಾರ್ಯರು. “ಮಾತಾಡುವಷ್ಟು ಸುಲಭವಲ್ಲ ಕೆಲಸ ಮಾಡುವುದು” ಎಂದು ಆಚಾರ್ಯರನ್ನು ಕೆಣಕಿದರು ಆ ವಿದ್ವಾಂಸರು. “ಆಡಿದ್ದನ್ನು ಮಾಡಿಯೇ ತೋರಿಸುತ್ತೇನೆ” ಎಂದು ಆವೇಶಗೊಂಡರು ಆಚಾರ್ಯರು. ಒಂದಲ್ಲ, ಎರಡಲ್ಲ, ಮೂರು ರಚನೆಗಳು ಕದನ ಕುತೂಹಲ ರಾಗದಲ್ಲಿ ಮೂರ್ತಿವೆತ್ತಿದವು. ಒಂದು ಸ್ವರಜತಿ, ಒಂದು ವರ್ಣ ಮತ್ತು ಒಂದು ಕೀರ್ತನೆ. ದಿಗ್ಭ್ರಮೆಗೊಂಡ ವಿದ್ವಾಂಸರು ಆಚಾರ್ಯರಿಗೆ ಸಾಷ್ಟಾಂಗ ವೆರಗಿದರು.

“ಆಚಾರ್ಯರ ಕೀರ್ತನೆಗಳನ್ನು ಹಾಡುವುದಕ್ಕೆ ಸಾಧನೆ ಬೇರೆ ಬೇಕೆ?” ಎಂದು ಅದೇ ವಿದ್ವಾಂಸರು ಇನ್ನೊಮ್ಮೆ ಪರಿಹಾಸ್ಯದ ನುಡಿಗಳನ್ನಾಡಿದರಂತೆ. ಇದು ಆಚಾರ್ಯರಿಗೆ ಗೊತ್ತಾಯಿತು. ಆ ವಿದ್ವಾಂಸರಿಗಾಗಿಯೇ ಎಂದು ’ಹರಿನಿ  ಭಜಿಂಚಿ ಭಾಗ್ಯಮು’, ’ಮರಿ ಮರಿ ವಚ್ಚುನ ಮಾನವಜನ್ಮಮು’ ಎಂಬ ಒಂದೆರಡು ಕೀರ್ತನೆಗಳನ್ನು ರಚಿಸಿದರು. ಆ ರಚನೆಗಳನ್ನು ಸಾಧನೆ ಮಾಡಿ ವಶಪಡಿಸಿಕೊಳ್ಳುವಷ್ಟರಲ್ಲಿ ಆ ವಿದ್ವಾಂಸರು ಬೆವತು ನೀರಾಗಿ ಆಚಾರ್ಯರ ಕ್ಷಮಾಪಣೆ ಕೇಳಿದರು.

ಸರಳ ವ್ಯಕ್ತಿತ್ವ

ಕೀರ್ತಿಶ್ರೀ ಆಚಾರ್ಯರನ್ನು ಅರಸಿ ಅರಸಿ ಬಂದಿತು. ರಾಜಮಹಾರಾಜರೂ ಯತಿಶ್ರೇಷ್ಠರೂ ಆಚಾರ್ಯರಿಗೆ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿದರು. ’ಸಂಗೀತ ಶಾಸ್ತ್ರತ್ನ’, ’ಸಂಗೀತ ಶಾಸ್ತ್ರ ವಿಶಾರದ’, ’ಸಂಗೀತ ಸಾಹಿತ್ಯ ವಲ್ಲಭ’, ’ಅಭಿನವ ತ್ಯಾಗರಾಜ’, ’ಸಂಗೀತಭಾವಜ್ಞ ಶಿಖಾಮಣಿ’, ’ಗಾಯನಾಚಾರ್ಯ’ – ಹೀಗೆ ಒಂದೇ ಎರಡೇ ಅವರಿಗೆ ಬಂದ ಬಿರುದುಗಳು? ೧೯೫೯ ರಲ್ಲಿ ಅವರಿಗೆ ’ಪದ್ಮಭೂಷಣ’ ಪ್ರಶಸ್ತಿಯೂ ದೊರೆಯಿತು. ಇಷ್ಟಾದರೂ ನಿಜಜೀವನದಲ್ಲಿ ಆಚಾರ್ಯರದು ನಿರಾಡಂಬರ ಬದುಕು.

ಆಚಾರ್ಯರ ಕೆಲವು ವಿಚಿತ್ರ ಗುಣಗಳನ್ನು ಕೇಳಿದರೆ ಯಾರಿಗಾದರೂ ನಗು ಬರುತ್ತದೆ. ಮಧ್ಯಾಹ್ನದ ಊಟವಾದ ಮೇಲೆ ಅಗಸರವನ ಮನೆಯಿಂದ ಇಸ್ತ್ರಿಮಾಡಿ ಬಂದ ಪಂಚೆಯನ್ನುಟ್ಟು, ಜುಬ್ಬವನ್ನು ಹಾಕಿಕೊಂಡು ಹಾಯಾಗಿ ಮಲಗಿಬಿಡುತ್ತಿದ್ದರು! ಎದ್ದಮೇಲೆ, ಜುಬ್ಬವನ್ನು ತೆಗೆದೆಸೆದು ನಲುಗಿ ಸುಕ್ಕುಸುಕ್ಕಾದ ಎಂಟು ಮೊಳದ ಪಂಚೆಯನ್ನು ನಾಲ್ಕು ಭಾಗವಾಗಿ ಮಡಿಸಿ ಸೆರಗು ಕಾಲ ಕೆಳಗೆ ಬರುವಂತೆ ಸುತ್ತಿಕೊಳ್ಳುತ್ತಿದ್ದರು! ಮನೆಗೆ ಬಂದವರಿಗೆಲ್ಲ ಹಾಗೆಯೇ ಭೇಟಿ ದಯಪಾಲಿಸುತ್ತಿದ್ದರು!

ರಾತ್ರಿಯ ವೇಳೆ ಹಾಸಿಗೆಯ ಸ್ಥಳವನ್ನು ಘಳಿಗೆ ಘಳಿಗೆಗೆ ಬದಲಾಯಿಸುವುದು ಆಚಾರ್ಯರ ಸ್ವಭಾವ. “ಏಕೆ ಹೀಗೆ ತಾತ?” ಎಂದು ಅವರ ಮೊಮ್ಮಕ್ಕಳು ಕೇಳಿದರೆ, “ಎಲ್ಲಿ ಮಲಗಿದರೆ ಒಳ್ಳೆಯ ಸ್ವಪ್ನ ಬೀಳುತ್ತದೋ ನೋಡೋಣ ಎಂದು” ಎನ್ನುತ್ತಿದ್ದರು!

ಮನೆಯಿಂದ ಹೊರಗಡೆ ಹೋಗುವಾಗ ಶುಭಶಕುನ ಇದ್ದೇ ತೀರಬೇಕು ಆಚಾರ್ಯರಿಗೆ. ಇಲ್ಲವಾದರೆ ಹೊರಗೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ! ಮನೆಯ ಹೆಣ್ಣು ಮಕ್ಕಳನ್ನೇ ಹೊರಗಡೆ ಕಳುಹಿಸಿ ತಾವು ಹೊರಡುವ ಸಮಯಕ್ಕೆ ಸರಿಯಾಗಿ ಎದುರಿಗೆ ಬರ ಮಾಡಿಕೊಳ್ಳುತ್ತಿದ್ದುದೂ ಉಂಟು!

ಎಲ್ಲರಂತೆ ತಾವೂ ಕಿಸೆಯ ಗಡಿಯಾರವನ್ನು ಇಟ್ಟುಕೊಳ್ಳಬೇಕೆಂದು ಆಸೆ ಆಚಾರ್ಯರಿಗೆ. ಆದರೆ ಗಡಿಯಾರವನ್ನು ನೋಡಿ ಘಂಟೆ ಎಷ್ಟು ಎಂದು ಹೇಳಲು ಬಾರದು. ಯಾರಾದರೂ “ಘಂಟೆ ಎಷ್ಟು?” ಎಂದು ಕೇಳಿದರೆ ಗಡಿಯಾರವನ್ನು ತೆಗೆದು ಅವರ ಮುಖಕ್ಕೆ ಹಿಡಿಯುತ್ತಿದ್ದರು!

ಹೊಸ ಚಪ್ಪಲಿ ಕಚ್ಚಿತೆಂದು ನಡುರಸ್ತೆಯಲ್ಲಿ ಬಿಟ್ಟು ಬರಿಗಾಲಿನಲ್ಲಿ ಮನೆಗೆ ಬಂದರು ಒಮ್ಮೆ! “ಎಲ್ಲಿ ಚಪ್ಪಲಿ?” ಎಂದು ಕೇಳಿದರೆ ಮೊಮ್ಮಕ್ಕಳು. “ಅಲ್ಲೇ ಬಿಟ್ಟುಬಿಟ್ಟೆ” ಎಂದರು ಆಚಾರ್ಯರು. “ಅಲ್ಲೇ ಎಂದರೆ?” “ಎಲ್ಲಿ ಕಚ್ಚಿತೋ ಅಲ್ಲೇ” ಎಂದರು ಆಚಾರ್ಯರು!

ರೇಡಿಯೋ ಪ್ರಸಾರದಲ್ಲಿ ಕೇಳಿದ ಒಂದು ಹಿಂದಿ ಗೀತೆ ಆಚಾರ್ಯರಿಗೆ ಸೊಗಸೆನಿಸಿತು. ಇನ್ನೊಮ್ಮೆ ಕೇಳಬೇಕೆನ್ನಿಸಿತು. ಸೊಸೆಯನ್ನು ಕರೆದು, “ರುಕ್ಮಿಣಿ, ಸ್ವಲ್ಪ ರೇಡಿಯೋ ಹಿಂದಕ್ಕೆ ಹಾಕು ತಾಯಿ. ಆ ಹಾಡನ್ನು ಇನ್ನೊಮ್ಮೆ ಕೇಳೋಣ” ಎಂದರು. “ಮಾವ, ರೇಡಿಯೋವನ್ನು ಗ್ರಾಮಫೋನಿನಂತೆ ಹಿಂದೆ ಮುಂದೆ ಹಾಕಿಕೊಳ್ಳಲು ಬರುವುದಿಲ್ಲ” ಎಂದು ಸೊಸೆ ವಿವರಿಸಿದಾಗ “ಅಯ್ಯೋ ಬೆಪ್ಪುತಕ್ಕಡಿ” ಎಂದು ತಮ್ಮ ಮಂಕುತನವನ್ನು ತಿಳಿದು ತಾವೇ ನಕ್ಕರು.

ಮದರಾಸಿನಲ್ಲಿ

ಆಚಾರ್ಯರಿಗೂ ಮೈಸೂರಿಗೂ ೮೮ ವರ್ಷ ಕಾವಿದ್ದ ನಂಟು ೧೯೫೩ ರಲ್ಲಿ ಸಡಿಲಗೊಂಡಿತು. ತಮ್ಮ ೮೮ ನೆಯ ವಯಸ್ಸಿನಲ್ಲ ಆಚಾರ್ಯರ ಹುಟ್ಟಿಬೆಳೆದ ಊರನ್ನು ಬಿಟ್ಟು ಭರತನಾಟ್ಯ ವಿಶಾರದೆ ಶ್ರೀಮತಿ ರುಕ್ಮಿಣಿದೇವಿಯವರ ಆಮಂತ್ರಣವನ್ನು ಅಂಗೀಕರಿಸಿ ಮದರಾಸಿಗೆ ಬಂದು ನೆಲೆಸಿದರು. ಕಲಾಕ್ಷೇತ್ರ ಸಂಸ್ಥೆಯ ಉಪಾಧ್ಯಕ್ಷ ಪದವಿಯನ್ನು ವಹಿಸಿಕೊಂಡರು. ಆಚಾರ್ಯರ ವಿದ್ವತ್ಪ್ರಭೆಯ ದರ್ಶನಲಾಭ ಈಗ ಪ್ರಾಪ್ತವಾಯಿತು ಲೋಕಕ್ಕೆ. ಹತ್ತಾರು ಮಂದಿ ವಿದ್ವಾಂಸರೂ ವಿದ್ಯಾರ್ಥಿಗಳೂ ಆಚಾರ್ಯರಲ್ಲಿ ಶಿಷ್ಯವೃತ್ತಿ ಮಾಡಿ ಅವರ ಅಮೂಲವ್ಯವಾದ ಪಾಂಡಿತ್ಯದ ಪ್ರಯೋಜನ ಪಡೆದರು. ಅತ್ಯಂತ ಪ್ರೀತಿ ಗೌರವಗಳಿಂದ ಆಚಾರ್ಯರನ್ನು ಪೂಜಿಸಿ ಗೌರವಿಸಿದರು.

ಕಲಾಕ್ಷೇತ್ರದಲ್ಲಿದ್ದಾಗ ಆಚಾರ್ಯರು ಕೈಗೊಂಡ ಒಂದು ಮಹತ್ಕಾರ್ಯವೆಂದರೆ ರಾಮಾಯನ ನೃತ್ಯ ನಾಟಕ ರಚನೆ. ಆರು ಭಾಗಗಳಲ್ಲಿದೆ ಈ ರಚನೆ. ಹಿಂದೊಂದು ನೃತ್ಯ ನಾಟಕದ ಅವಧಿ ಮೂರು ಘಂಟೆಗಳು. ಭಾರತದ ಎಲ್ಲ ಪ್ರದೇಶಗಳಲ್ಲೂ ಪ್ರದರ್ಶಿತವಾಗಿವೆ ಈ ನೃತ್ಯನಾಟಕಗಳು. ಅಷ್ಟೇ ಅಲ್ಲ, ಪಾಶ್ಚಿಮಾತ್ಯ ದೇಶಗಳಲ್ಲಿ ಸಹ ಖ್ಯಾತಿ ಪಡೆದಿವೆ.

ಈ ರಾಮಾಯನ ನೃತ್ಯನಾಟಕ ಮಾಲಿಕೆಯಲ್ಲಿ ಮೊದಲನೆಯದದ ’ಸೀತಾ ಸ್ವಯಂವರ’ವನ್ನು ಮೊದು ತಿರುಪತಿಯ ಶ್ರೀನಿವಾಸನ ದಿವ್ಯ ಸನ್ನಿಧಿಯಲ್ಲಿ ಸಮರ್ಪಿಸಬೇಕೆಂದು ಆಚಾರ್ಯರ ಅಭಿಲಾಷೆ. ಗರ್ಭಗುಡಯ ತೆರೆಯನ್ನು ತೆರೆಯಿಸಿ ಶ್ರೀನಿವಾಸನ ಎದುರು ಕುಳಿತು ಸಂಗೀತ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಆಚಾರ್ಯರು ದೇವಸ್ಥಾನದ ವ್ಯವಸ್ಥಾಪಕರನ್ನು ಕೇಳಿಕೊಂಡರು. ಆದರೆ ಅವರ ಈ ಅಭಿಲಾಷೆಗೆ ದೇವಸ್ಥಾನದ ಸಂಪ್ರದಾಯ ಅಡ್ಡ ಬಂದಿತು. “ಕ್ಷಮಿಸಬೇಕು, ತ್ಯಾಗರಾಜರಿಗೂ ಸಹ ಈ ಸಂಪ್ರದಾಯ ಅಡ್ಡ ಬಂದ ವಿಷಯ ತಮಗೆ ತಿಳಿದೇ ಇದೆ” ಎಂದರು ಅರ್ಚಕರು. “ಸರಿ, ಶ್ರೀನಿವಾಸನ ಚಿತ್ತವಿದ್ದಂತಾಗಲಿ” ಎಂದು ಆಚಾರ್ಯರು ತೆಗೆಯ ಹೊರಗಡೆಯೇ ಕುಳಿತು ಶಿಷ್ಯರೊಡನೆ ಹಾಡಲು ಪ್ರಾರಂಭಿಸಿದರು. ಜನಕ ಮಹಾರಾಜ ತನ್ನ ಮಗಳಾದ ಸೀತೆಯನ್ನು ಕರೆತಂದು ಶ್ರೀರಾಮಚಂದ್ರನಿಗೆ ಧಾರೆಯೆರೆದುಕೊಡುವ ಸನ್ನಿವೇಶ ಬರುವ ಹೊತ್ತಿಗೂ, ದೇವಸ್ಥಾನದ ಹೊರ ಪ್ರಾಕಾರದಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ಮುಗಿಸಿಕೊಂಡು ಉತ್ಸವಮೂರ್ತಿ ಗರ್ಭಗುಡಿಗೆ ಬರುವ ವೇಳೆಗೂ ಸರಿಹೋಯಿತು. ಉತ್ಸವಮೂರ್ತಿಯನ್ನು ಒಳಗೆ ಬಿಜಯ ಮಾಡಿಸಿಕೊಳ್ಳಲು ಗರ್ಭಗುಡಿಯ ತೆರೆಯನ್ನು ಸರಿಸಲೇಬೇಕಾಗಿ ಬಂತು. ಆಚಾರ್ಯರು ಆನಂದ ಪರವಶರಾದರು. ಜನ್ಮ ಸಾರ್ಥಕವಾಯಿತೆಂದು ಕುಣಿದಾಡಿದರು!

೧೯೫೪ ರಲ್ಲಿ ಪ್ರಾರಂಭವಾದ ರಾಮಾಯಣ ಸಂಗೀತ ರಚನೆಯ ಕೆಲಸ ೧೯೬೧ ರವರೆಗೆ ಸಾಗಿತು. ’ಸೀತಾ ಸ್ವಯಂವರ’, ’ಶ್ರೀರಾಮವನಗಮನ’, ’ಪಾದುಕಾ ಪಟ್ಟಾಭಿಷೇಕ’ – ಈ ಮೂರು ನೃತ್ಯ ನಾಟಕಗಳು ಆಚಾರ್ಯರ ಜೀವಿತಕಾಲದಲ್ಲಿಯೇ ರಂಗಸ್ಥಳದ ಮೇಲೆ ಬಂದು ಸಹಸ್ರಾ ಜನರ ಮನಸ್ಸನ್ನು ಸೂರೆಗೊಂಡವು. ಉಳಿದ ಮೂರು ಭಾಗಗಳ ಸಂಗೀತ ನಿರ್ಮಾಣ ಕಾರ್ಯ ಮುಗಿಯುತ್ತಿದ್ದಂತೆಯೇ ೧೯೬೧ನೆಯ ಮೇ ೧೭ ರಂದು ಆಚಾರ್ಯರು ಶ್ರೀರಾಮನ ಸಾನ್ನಿಧ್ಯವನ್ನು ಸೆರಿದರು. ’ಶರಣರ ಜೀವನವನ್ನು ಮರಣದಲ್ಲಿ ಕಾಣು’ ಎಂಬಂತೆ ಆಚಾರ್ಯರು ತಮ್ಮ ಕೊನೆಯ ಉಸಿರಿನವರೆಗೂ ಇಷ್ಟಮಿತ್ರರೊಡನೆ ಮಾತುಕತೆಯಾಡುತ್ತ, ನಗೆಮಲ್ಲಿಗೆಯನ್ನು ಎರಚುತ್ತ, ತಂಬೂರಿಯ ಸುನಾದವನ್ನು ಕಿವಿಯ ತುಂಬಾ ತುಂಬಿಕೊಂಡು ಅನಾಯಾಸ ಮರಣ ಹೊಂದಿದರು. ಇನ್ನು ನಾಲ್ಕೇ ನಾಲ್ಕು ವರ್ಷಗಳ ಆಚಾರ್ಯರು ನಮ್ಮ ಮಧ್ಯೆ ಇದ್ದಿದ್ದರೆ ಇವರ ಶತಾಬ್ಧಿಯನ್ನು ಆಚರಿಸುವ ಸುಯೋಗ ನಮಗೆ ಲಭ್ಯವಾಗುತ್ತಿತ್ತು.