ಸುಮಾರು ಒಂದು ನೂರು ವರ್ಷಗಳ ಹಿಂದೆ ಈ ದೇಶದಲ್ಲೊಂದು ಅದ್ಭುತ ಪ್ರಸಂಗ ನಡೆದುಹೋಯಿತು. ನೆನಸಿಕೊಂಡರೆ ಇಂದಿಗೂ ಮೈನವಿರೇಳುವಂತಹ ರೋಮಾಂಚಕಾರಿ ಕಥೆ ಅದು. ಕಪಟ ಕಾರಾಸ್ಥಾನದ ಮೂಲಕ ಇಲ್ಲಿ ತಮ್ಮ ರಾಜ್ಯಕಟ್ಟಿದ ಇಂಗ್ಲೀಷ್ ದಬ್ಬಾಳೀಕೆಯ ವಿರುದ್ಧ ಗುಂಡಿನೆದೆಯ ದೇಶಭಕ್ತನೊಬ್ಬ ಬಂಡಾಯ ಹೂಡಿದ್ದ. ಆತನ ಹೆಸರೇ ವಾಸುದೇವ ಬಲವಂತ ಫಡಕೆ. ದೇಶದ ಎಲ್ಲಾ ರಾಜ ಮಹಾರಾಜರು ಸೋತು ದುರ್ಬಲರಾಗಿ ಇಂಗ್ಲೀಷರ ಸೇವಕರಾಗಿ ಕುಳಿತಾಗ ಒಬ್ಬಂಟಿಗನಾದರೂ ಎಳ್ಳಷ್ಟೂ ಎದೆಗೆಡೆದೆ ತೊಡೆ ತಟ್ಟಿ ನಿಂತಿದ್ದ ಇಂಗ್ಲೀಷರು ತತ್ತರಿಸುವಂತೆ ಮಾಡಿದ ಕ್ರಾಂತಿಕಾರಿಗಳಲ್ಲಿ ವಾಸುದೇವ ಬಲವಂತ ಫಡಕೆ ಮೊಟ್ಟ ಮೊದಲಿಗ. ತನ್ನನ್ನೇ ಬಲಿಕೊಟ್ಟು ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು  ಹಚ್ಚಿದ ಆದ್ಯ ಕ್ರಾಂತಿಕಾರಿ !

ಬಾಲ್ಯ :

ಮುಂಬಯಿಯ ಬಳೀಯ ಶಿರಡೋಣ ಎಂಬ ಊರಿನ ಬಲವಂತ ರಾವ್ ಫಡಕೆ ಮತ್ತು ಸರಸ್ವತಿಬಾಯಿ ಎನ್ನುವ ದಂಪತಿಗಳಿಗೆ ೧೮೪೫ರ ನವೆಂಬರ ೪ ರಂದು ಒಬ್ಬ ಮಗ ಹುಟ್ಟಿದ. ಆತನೇ ವಾಸುದೇವ .

ವಾಸುದೇವ ಮನೆಯವರಿಗೆಲ್ಲಾ ಮುದ್ದಿನ ಮಗುವಾಗಿದ್ದ.  ಗಟ್ಟಿಮುಟ್ಟಾಗಿ ಶರೀರ ಬೆಳೆಯಿತು. ಇವನ ತುಂಟತನದ ಕುರಿತು ದಿನದಿನವೂ ದೂರು ತರುತ್ತಿದ್ದ. ನೆರೆಯಹೊರೆಯವರನ್ನು ಸಮಾಧನಪಡಿಸುವುದರಲ್ಲಿಯೇ ಸರಸ್ವತಿಬಾಯಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಏಳೂವರ್ಷ ತುಂಬಿದರೂ ಕಾಗುಣಿತ ಸಹ ಕಲಿಯದೇ ತುಂಟತನದಿಂದ ತಿರುಗುತ್ತಿದ್ದ ಈ ವಾಸುದೇವನನ್ನು ಕಂಡು ತಂದೆ-ತಾಯಿಗಳಿಗೆ ಚಿಂತೆಯಾಗುತ್ತಿತ್ತು.

ಕ್ರಾಂತಿಯ ಕರೆ :

ಈ ಹೊತ್ತಿಗೆ ೧೮೫೭ರ ಮೇ ೧೦ನೆಯ  ದಿವಸ ಬಂದಿತು. ಇಂಗ್ಲೀಷ ಗುಲಾಮಗಿರಿಯ ವಿರುದ್ಧ ಭಾರತದಲ್ಲಿ ಜನ ಸ್ವಾತಂತ್ರ್ಯ ಯುದ್ಧವನ್ನು ಸಾರಿದರು. ಇಂಗ್ಲೀಷರು ಜೀವ ಉಳಿಸಿಕೊಳ್ಳಲೆಂದು ಅತ್ತಿಂದಿತ್ತ ಓಡಹತ್ತಿದರು. ಈ ಸ್ವಾತಂತ್ರ್ಯ ಸಮರದ ಮುಂದಾಳುಗಳಾದ ನಾನಾಸಾಹೇಬ ಪೇಶ್ವೆ, ತಾತ್ಯಾ ಟೋಪಿ, ಝಾನ್ಸಿ ಲಕ್ಷ್ಮೀಬಾಯಿ ಇಂತಹ ಸಾಹಸಿಗಳ ಪರಾಕ್ರಮದ ಕಥೆಗಳು ದೇಶದ ಮೂಲೆ ಮೂಲೆಯನ್ನು ಮುಟ್ಟಿದವು.

೧೮೫೭ರ ಮೊದಲನೆಯ ಸ್ವಾತಂತ್ರ್ಯ ಯುದ್ಧ ವಿಫಲವಾಯಿತು. ಆಧರೆ ಅದರ ರೊಮಾಂಚಕಾರಕ ನೆನಪುಗಳು ಉಳಿದಿದ್ದವು. ಅಲ್ಲಲ್ಲಿ ಕೆಲವರು ಪಶ್ಚಿಮ ಘಟ್ಟಗಳ ಕಾಡು ಪ್ರದೇಶಗಳಲ್ಲಿ ಉಳಿದು ಲೂಟಿ, ಆಕ್ರಮಣ ಇವುಗಳಲ್ಲಿ ತೊಡಗುತ್ತಿದ್ದರು. ಇವರಲ್ಲಿ ಹಲವರು ಮುಂದೆ ವಾಸುದೇವ ಬಲವಂತ ಫಡಕೆಯ ಹಿಂಬಾಲಕರಾದರು.

ಬಲವಂತರಾವ್ ಫಡಕೆಯವರು ೧೮೫೭ರ ಹೋರಾಟದ ಕಥೆಗಳನ್ನು ಹನ್ನೆರಡು ವರ್ಷದ ತಮ್ಮ ಮಗ ವಾಸುದೆವನಿಗೆ ಬಣ್ಣಿಸಿ ಬಣ್ಣಿಸಿ ಹೇಳುತ್ತಿದ್ದರು. ಯುದ್ಧದ ಕಥೆ ಕೇಳಿ ಹೆದರುವ ಹುಡುಗನಾಗಿರಲಿಲ್ಲ ವಾಸುದೇವ. ಕಥೆಗಳನ್ನು ಕೇಳುತ್ತ ಅವನ ಉತ್ಸಾಹ ತುಂಬಿ ತುಳುಕಿತು.  ತಾನೂ ಅವರಂತೆ ಹೋರಾಡಬೇಕೆಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಕಾಣುವುದು ಅಲ್ಲವೇ?

ಮದುವೆನೌಕರಿ :

ಕಲ್ಯಾಣದಲ್ಲಿನ ಪ್ರಾಥಮಿಕ  ವಿಧ್ಯಾಭ್ಯಾಸ ಮುಗಿದಿತ್ತು. ಅನಂತರ ಕೆಲವು ಕಾಲ ಮುಂಬಯಿಯಲ್ಲಿ ಅನಂತರ ಪೂನಾ ನಗರದಲ್ಲಿ ತನ್ನ ವ್ಯಾಸಂಗವನ್ನು ಮುಂದುವರೆಸಿದ.  ಇವನ ಹುಂಬ ಸ್ವಭಾವವನ್ನು ಕಡಿಮೆ ಮಾಡಲು ಮದುವೆ ಮಾಡುವುದೊಂದೇ ಉಪಾಯವೆಂದು ಭಾವಿಸಿದರು ತಂದೆ ತಾಯಿಗಳು. ಹದಿನೈದು ವರ್ಷದ ವಾಸುದೇವನಿಗೆ ಲಗ್ನದ ಬೇಡಿ ತೊಡಿಸಿಬಿಟ್ಟರು.  ಇವನಹೆಂಡತಿಯ ಹೆಸರು ಸಯೀಬಾಯಿ.

ಮದುವೆಯಾಯಿತು. ಮಡದಿ ಮನೆಗೆ ಬಂದಳು. ನೌಕರಿ ಹುಡುಕುವುದು ಅನಿವಾರ್ಯವಾಯಿತು. ಅಂತೂ ಮುಂಬೈಯಯಲ್ಲಿ ಜಿ.ಐ.ಇ.ರೈಲ್ವೆಯ ಅಯ-ವ್ಯಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡ.

ನೌಕರಿಗೆ ಸೇರಿಕೊಂಡರೂ ಮಹಾ ಅಭಿಮಾನಿ ಆತ. ಇನ್ನೊಬ್ಬರ ದರ್ಪಕ್ಕೆ ಸೊಪ್ಪು ಹಾಕುವ ಕಾಲಾಳಲ್ಲ. ನಾಲ್ಕು ತಿಂಗಳೊಳಗಾಗಿ ತನ್ನಹಿರಿಯ ಅಧಿಕಾರಿಗಳೊಡನೆ ಜಗಳ ಅಡಿ ಕೆಲಸ ಬಿಡುವ ಪ್ರಸಂಗ ಬಂದಿತು.

ಒಂದು ದಿನ ಹಿರಿಯ ಗುಮಾಸ್ತನು “ಐದು ರೂಪಾಯಿ ಸಂಬಳ ಪಡೆಯುವ ಯೋಗ್ಯತೆಯೂ ಇವನಿಗಿಲ್ಲ” ಎಂದೂ ಹೀಯಾಳಿಸಿದನು. ವಾಸುದೇವನಿಗೆ ಮುಳ್ಳೂ ಚುಚ್ಚಿದಂತಾಯಿತು. ಅಂದಿನಿಂದ ಬೇರೊಂದು ಕೆಲಸಕ್ಕಾಗಿ ಓಡಾಟ ಪ್ರಾರಂಭವಾಯಿತು. ಅಂತೂ ಕಡೆಗೆ ಹೊಸ ನೌಕರಿ ಸಿಕ್ಕುತ್ತಲೇ ತನ್ನ ಮೇಲಾಧಿಕಾರಿಗೆ “ಎಲ್ಲರೂ ನಿನ್ನಂತೆ ನಾಚಿಕೆ ಕೆಟ್ಟವರಲ್ಲ. ಇಪ್ಪತ್ತು ರೂಪಾಯಿ ನೌಕರಿಯು ಕಾದಿರುವಾಗ ನಿನ್ನ ಐದು ರೂಪಾಯಿ ಚಾಕರಿ ಯಾರಿಗೆ ಬೇಕು? ನಮಸ್ಕಾರ ಎಂದು ಮುಖದ ಮೇಲೆ ಹೊಡೆದವನಂತೆ ನುಡಿದು ಅಲ್ಲಿಂದ ಹೊರಬಿದ್ದನು. ಇಂತಹ ಅನೇಕ ಪ್ರಸಂಗಗಳನ್ನು ಮುಂದಿನ ತನ್ನ ಜೀವನದಲ್ಲಿ ವಾಸುದೇವನು ಎದುರಿಸಬೇಕಾಗಿಬಂದಿತು. ಕಡೆಗೆ ಮಿಲಿಟರಿಯ ಸರಬರಾಜು ಇಲಾಖೆಯಲ್ಲಿ ಸರಕಾರಿ ನೌಕರಿ ಸಿಕ್ಕಿತ್ತು. ಕೆಲವೇ ದಿನಗಳಲ್ಲಿ ಮುಂಬೈಯಿಂದ ಅವನಿಗೆ ವರ್ಗವಾಯಿತು. ೧೮೬೫ರಲ್ಲಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಇತಿಹಾಸ ಪ್ರಸಿದ್ಧ ಪೂನಾ ನಗರಕ್ಕೆ ಬಂದು ಸೇರಿದನು.

ಮಾತೃ ವಿಯೋಗ :

ಪೂನಾದಲ್ಲಿ ವಾಸುದೇವನ ಸಂಸಾರ ಸುಖವಾಗಿ ಸಾಗಿತ್ತು. ಮನಮೆಚ್ಚಿದ ಮಡದಿ ಇದ್ದಳು.  ಕಾಲಕ್ರಮೇಣ ಒಬ್ಬ ಮಗಳು ಹುಟ್ಟಿದಳು. ಮಥು ಎಂದು ಹೆಸರಿಟ್ಟರು. ಕೈತುಂಬ ಸಂಬಳ ಬರುತ್ತಿತ್ತು.  ಆದರೆ ವಾಸುದೆವನ ಮನಸ್ಸಿಗೆ ಸಂತೋಷವಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯವಿಲ್ಲ, ಅದು ಇಂಗ್ಲೀಷರ ಮುಷ್ಠಿಯಲ್ಲಿ!  ದೇಶದ ದುರವಸ್ಥೆಯನ್ನು ನೆನೆದು  ಆತನಿಗೆ ಅನ್ನ ನೀರು ಸಹ ರುಚಿಸುತ್ತಿರಲಿಲ್ಲ.

ಈ ವೇಳೆಗೆ ಸರಿಯಾಗಿ ಅವನ ಜೀವನದಲ್ಲಿ ವಿಚಿತ್ರ ಶೋಕ ಪ್ರಸಂಗವೊಂದುಂಟಾಗಿ ಅವನ ಸ್ವಾಭಿಮಾನ ಸಿಡಿದೆದಿತ್ತು. ಜೀವನದ ದಿಕ್ಕನ್ನೇ ಬದಲಾಯಿಸಿತು. ಮಮತೆಯ ಮೂರ್ತಿಯಾದ ಆತನ ತಾಯಿ ಕಾಯಿಲೆ ಬಿದ್ದಿದ್ದರು.

ತಾಯಿ ಕಾಯಿಲೆಯಿಂದ ಕೊನೆಯ ಗಳಿಗೆಯಲ್ಲಿ ಮಗನನ್ನು ಕಾಣಲು ಹಂಬಲಿಸುತ್ತಿರುವಳೆಂದು ವಾಸುದೆವನಿಗೆ ಕರೆ ಬಂದಿತು. ಕರುಳಿನ ಕರೆ ಅಂತಃಕರಣವನ್ನು ಕಲಕಿತ್ತು. ತಾಯಿಯನ್ನು ಕಾಣಲು ವಾಸುದೇವ ಚಡಪಡಿಸಿದ. ಆದರೆ ಇಂಗ್ಲೀಷ್ ಅಧಿಕಾರಿಯ ಅಪ್ಪಣೆಯಿಲ್ಲದೆ ಕೆಲಸ ಬಿಟ್ಟುಹೋಗುವಂತಿರಲಿಲ್ಲ. ನಾಲ್ಕಾರು ದಿನ ರಜೆ ನೀಡಿದರೆಂದು ಅಂಗಲಾಚಿ ಕೋರಿದ. ಇವನ ಸುಖದುಃಖ ಕಟ್ಟಿಕೊಂಡು ಆ ವಿದೇಶಿ ಅಧಿಕಾರಿಗಾಗಬೇಕಾದ್ದೇನು? ನಾಲ್ಕು ದಿನ ಕಾಯಿಸಿದರು. ಅನಂತರ ರಜೆ ಕೊಡಲು ಸಾಧ್ಯವಿಲ್ಲ ಎಂದುಬಿಟ್ಟರು.  ವಾಸುದೇವನ ಸಿಟ್ಟು ನೆತ್ತಿಗೇರಿತು. ಮತ್ತೊಂದು ಅರ್ಜಿ ಸಲ್ಲಿಸಿದ. ತಾಯಿಯನ್ನು ಕಾಣಬೇಕೆಂದು ತವಕದಿಂದ ಹಳ್ಳಕೊಳ್ಳ ಬೆಟ್ಟಗುಡ್ಡಗಳನ್ನು ಒಂದೇ ಸಮನೆ ದಾಟುತ್ತ ಶಿರಢೋಣಕ್ಕೆ ಬಂದು ಮುಟ್ಟಿದ.

ಸೇಡಿನ ಸಂಕಲ್ಪ:

ಆದರೆ ಸಮಯ ಮಿಂಚಿಹೋಗಿತ್ತು. ತಾಯಿ ತೀರಿಹೋಗಿದ್ದಳು. ದಹನ ಕ್ರಿಯೆ ಸಹ ಮುಗಿದುಹೋಗಿತ್ತು. ಇವನಿಗೆ ಕಂಡದ್ದು ತಾಯಿಯನ್ನು ಸುಟ್ಟು ಉಳಿದ ಬೂದಿ ಮಾತ್ರ.  ದುಃಖ ಉಕ್ಕಿ ಬಂದಿತು. ತಾಯಿಯ ಅಂತ್ಯದರ್ಶನ ಸಹ ಆಗಗೊಡದ ಇಂಗ್ಲೀಷ್ ಅಧಿಕಾರಿಯ ಕುರಿತು ಸಿಟ್ಟು ಹತ್ತಿತ್ತು. ಮುಂಚೆಯೇ ಇಂಗ್ಲೀಷರೆಂದರೆ ಉರಿದು ಬೀಳುತ್ತಿದ್ದ. ಈಗಂತೂ ಉರಿಯುವ ಗಾಯಕ್ಕೆ ಉಪ್ಪು ಸವರಿದಂತಾಯಿತು. ಕೈ ಹಿಸುಕಿ ಕೊಡುವ ಜಾಯಮಾನದವನಾಗಿರಲಿಲ್ಲ. ಮನಸ್ಸಿನಲ್ಲಿ ಒಂದು ಭಾವನೆ ಬೇರೂರಿ ಬೆಳೆಯಿತು. ಸೇಡು! ಉಕ್ಕಿ ಬರುತ್ತಿದ್ದ ತನ್ನ ದುಃಖವನ್ನು ತೋಡಿಕೊಳ್ಳುತ್ತಾ ತನ್ನ ಮಿತ್ರನೊಬ್ಬನ ಮುಂದೆ, “ನೋಡುತ್ತಿರು! ಸೊಕ್ಕಿರುವ ಈ ಇಂಗ್ಲೀಷರ ಮಗ್ಗಲು ಮುರಿಯದೇ ನಾನು  ಸುಮ್ಮನೆ ಕುಳಿತುಕೊಳ್ಳಲಾರೆ. ನ್ನ ಈ ಚಾಕರಿಗೆ ಬೆಂಕಿ ಹಚ್ಚು!” ಎಂದನು. ಇವನ ರೋಷವನ್ನು ಕಂಡು, ಸೇಡಿನ, ಮಾತುಗಳನ್ನು ಕೇಳಿ ಸ್ನೇಹಿತನಿಗೆ ಕಳವಳವಾಯಿತು. ಈ ಉಗ್ರ ಕೋಪದಲ್ಲಿ ಏನು ಮಾಡಿಬಿಡುವನೋ! ಸ್ನೇಹಿತನು “ಶಾಂತವಾಗಿರು; ಹಾಗೆಲ್ಲ ದುಡಕಬೇಡ” ಎಂದು ತಿಳುವಳಿಕೆ ಹೇಳಿದ. ಆದರೆ ಇನ್ನಷ್ಟು ಕೆರಳಿದ ವಾಸುದೇವ, “ನಿನಗೇನು ಗೊತ್ತು ನನ್ನ ದುಃಖ! ಈ ಜಗತ್ತಿನಲ್ಲಿ ಇನ್ನೇನಾದರೂ ಸಿಕ್ಕೀತು. ಆದರೆ ತಾಯಿ ಸಿಕ್ಕಾಳೆ? ಈ ನೀಚ ಇಂಗ್ಲೀಷರಿಂದಾಗಿ ನನ್ನ ತಾಯಿಯನ್ನು ಸಹ ನಾ ಕಾಣದಾದೆ. ನನ್ನಂತೆ ಅದೆಷ್ಟು ಜನರಿಗೆ ಇವರು ಅನ್ಯಾಯವೆಸಗುತ್ತಿರಬಹುದು? ಈ ಅನ್ಯಾಯ ನಾನು ಸಹಿಸಲಾರೆ. ಸೇಡು ತೀರಿಸದೇ ಬಿಡಲಾರೆ” ಎಂದು ಗುಡುಗಿದರು.

ಸ್ವದೇಶಿ ವ್ರತ :

ಪೂನಾದಲ್ಲಿ ರಾಜಕೀಯ ವಾತಾವರಣ ಈತನ ವಿಚಾರವನ್ನು ಇನ್ನೂ ಪುಷ್ಪಗೊಳೀಸಿತು. ದೇಶಧ ಸಮಸ್ಯಗಳ ಕುರಿತು ಚರ್ಚೆ ಭಾಷಣಗಳ ಮೂಲಕ ಜನಜಾಗೃತಿ ಮಾಡಲೆಂದು “ಸಾರ್ವಜನಿಕ  ಸಭಾ” ಎನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿತ್ತು.  ಗಣೇಶ ವಾಸುದೇವ ಜೋಷಿ ಎನ್ನುವ ವಕೀಲರು ಅದರ ಕಾರ್ಯಕಲಾಪ ನಡೆಸುತ್ತಿದ್ದರು. “ಸಾರ್ವಜನಿಕ ಕಾಕಾ” ಎಂದೇ ಜನತೆ ಅವರನ್ನು ಅಕ್ಕರೆಯಿಂದ ಕರೆಯುತ್ತಿತ್ತು.  ಪ್ರಸಿದ್ಧ ದೇಶಭಕ್ತರೂ ಮತ್ತು ಪ್ರಕಾಂಡ ಪಂಡಿತರೂ ಆಗಿದ್ದ ನ್ಯಾಯಮೂರ್ತಿ ರಾನಡೆ ಎನ್ನುವವರು ಈ ಸಭೆಯ  ಆಶ್ರಯದಲ್ಲಿ ದೇಶದ ದುಃಖ ದಾರಿದ್ಯ್ರದ ಬಗ್ಗೆ ಭಾಷಣ ಮಾಡುತ್ತಿದ್ದರು. ಅವರ ಭಾಷಣಗಳನ್ನು ಕೇಳುತ್ತಿದ್ದ ವಾಸುದೇವನ ಮನಸ್ಸಿನಲ್ಲಿ ವಿಚಾರದ ಬಿರುಗಾಳಿ ಎದ್ದಿತು. ಭಾರತದ ದುರವಸ್ಥೆಗೆ ಗುಲಾಮಗಿರಿಯೇ ಕಾರಣ ಎಂದು ಮನದಟ್ಟಾಗಿತ್ತು.

ಪರದೇಶೀ ವಸ್ತವಿನ ಮೋಹಕ್ಕೆ ಬಲಿಬಿದ್ದು, ಸ್ವದೇಶಕ್ಕುಂಟಾಗುತ್ತಿದ್ದ ಹಾನಿ ನೆನೆದು ಎಂದೆಂದಿಗೂ ಸ್ವದೇಶೀ ಮಾಲನ್ನೆ ಉಪಯೋಗಿಸುವ ಪ್ರತಿಜ್ಞೆ ಮಾಡಿದ. ಆಫೀಸಿನ ಮೇಜಿನ ಮೇಲಿದ್ದ ವಿದೇಶಿ ಲೇಖನಿಯನ್ನು ಮುರಿದು ಹಾಕಿ ಹಳೆಯ ಕಾಲದ ಹಕ್ಕಿಗರಿಯ ಲೇಖನಿಯಿಂದ ಬರೆಯಲಾರಂಭಿಸಿದರು.ಅಡಿಯಿಂದ ಮುಡಿಯವರೆಗೆ ಶುಭ್ರ ಬಿಳಿಯ ಖಾದಿ ಅವನ ವೇಷವಾಯಿತು.

ಭಾರತೀಯರ ಎಲ್ಲ ಕಷ್ಟಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮಗಿರಿಯ ಜೊತೆಗೆ ದೇಶಬಾಂಧವ ಅಗತ್ಯವೆಂಬುವುದನ್ನು ಗುರುತಿಸಿ “ಪೂಣಾ ನೇಟಿವ ಇನಿಸ್ಟೂಷನ್” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ” ಎಂಬ ಹೆಸರಿನಿಂದ ಭವ್ಯ ಸ್ವರೂಪ ತಾಳಿತು.

ಇನ್ನೂ ಸರ್ಕಾರಿ ನೌಕರಿಯನ್ನು ವಾಸುದೇವ ಬಿಟ್ಟಿರಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ನೌಕರಿಯಲ್ಲಿ ಮುಂದುವರೆದಿದ್ದ. ಆಗಿಂದ್ದಾಗೆ ರಜ ತೆಗೆದುಕೊಂಡು ಅಕ್ಕಪಕ್ಕದ ಊರುಗಳಿಗೆ ಹೋಗಿ ಜನಜಾಗೃತಿ ಮಾಡಿ ಬರುತಿದ್ದ.  ಇವನ ಓಡಾಟ ಹೆಚ್ಚತ್ತಲೇ ಇತ್ತು. ಕ್ರಾಂತಿಕಾರಿಗಳ ಚಟುವಟಿಕೆಗಳು ಬೆಳೆಯತೊಡಗಿತು. ಸರಕಾರಕ್ಕೂ ಇವನ ವಿಷಯದಲ್ಲಿ ಸಂಶಯ ಬರಲು ಪ್ರಾರಂಭವಾಯಿತು. ವಾಸುದೇವನನ್ನು ಸೆರೆಹಿಡಿಯುವ ಯೋಚನೆಯನ್ನು ಅಧಿಕಾರಿಗಳು ಮಾಡಿದರು.  ವಾಸುದೆವನೇ ಕೆಲಸವನ್ನು ಬಿಟ್ಟು ಇಂಗ್ಲೀಷರ ಕಚೇರಿಯ ಧೂಳನ್ನು ಕಾಲಿನಿಂದ ಝಾಡಿಸಿಬಿಟ್ಟ.

ಸಾಹಸಹುಚ್ಚು ಸಾಹಸವೇ?

ಇಂಗ್ಲೀಷರನ್ನೋಡಿಸಿ ದೇಶವನ್ನು ಸ್ವತಂತ್ರ ಮಾಡುವುದು ಹೇಗೆ  ಎಂಬುವುದೇ ವಾಸುದೇವನ ಯೋಚನೆ. ಅದಕ್ಕಾಗಿ ಸಭೇ ಸಮ್ಮೇಳನಗಳನ್ನು ಸೇರಿಸಿದ. ಭಾಷಣದ ಮೂಲಕ ಜನರಿಗೆ ಕರೆ ನೀಡಿದ. ಊರೂರು ಅಲೆದಾಡಿದ. ವೀರಾವೇಶದ ಮಾತು. ಕಲ್ಲು ಕರಗಿಸುವ ಕಳಕಳಿಯ ವಿನಂತಿ. ಸದಾ ಸರ್ವದಾ ನಾಡಿನದೇ ಚಿಂತೆ. ಪೂನಾ ನಗರದಲ್ಲಿ ಮೊದ ಮೊದಲು ಸಂಗಡಿಗರಾದರೂ ಇಲ್ಲದ್ದರಿಂದ ತನ್ನ ಭಾಷಣದ ಜಾಹಿರಾತು ತಾನೇ ಮಾಡಿ ಸಭೆ ಸೇರಿಸುತ್ತಿದ್ದ. ಕೈಯಲ್ಲಿ ತಮಟೆ ಹಿಡಿದು ಡಂಗುರು ಸಾರುತ್ತ, ಚೌಕಗಳಲ್ಲಿ ನಿಂತು ಕೂಗಿ ಹೇಳುತ್ತಿದ್ದ:

“ಈ ದಿನ ಸಂಜೆ ನನ್ನ ಭಾಷಣವಿದೆ. ಊರಿನ ಮೈದಾನಕ್ಕೆ ಎಲ್ಲರೂ ಬನ್ನಿ. ಇಂಗ್ಲೀಷರನ್ನೊಡಿಸಿ, ಸ್ವರಾಜ್ಯ ತರಲೇಬೇಕು. ಅದು ಹೇಗೆ ಎಂಬುವುದನ್ನು ಹೇಳಲಿದ್ದೇ”. ಡಂ ಡಂ ಡಂ ….. !

ಜನರಂತೂ ಈತನ ಸಾಹಸ ಕಂಡು ಬೆರಗಾದರು. ಸ್ವರಾಜ್ಯದ ಹೆಸರೆತ್ತಲೂ ಹೆದರುತ್ತಿದ್ದ ಕಾಲದಲ್ಲಿ ಇಂಗ್ಲೀಷರನ್ನು ಹೊಡೆದೊಡಿಸುವ ಬಹಿರಂಗ  ಘೋಷಣೆ ಮಾಢುತ್ತಿದ್ದ ವಾಸುದೇವ ಬಲವಂತ ಫಡಕೆ. ಹುಚ್ಚು ಸಾಹಸ ಎಂದರು ಹೆದರಿದ ಜನ.

 

“ಈ ದಿನ ಸಂಜೆ ನನ್ನ ಭಾಷಣವಿದೆ"

ಎರಡನೆಯ ವಿವಾಹ :

ಈ  ಹೊತ್ತಿಗೆ ಆಕಸ್ಮಾತ್ತಾಗಿ ವಾಸುದೇವನ ಕುಟುಂಬದ ಮೇಲೊಂದು ಅಘಾತವಾಯಿತು. ಅವನಹೆಂಡತಿಯಾದ ಸಯೀಬಾಯಿಯು ಅಲ್ಪಕಾಲ ಕಾಯಿಲೆ ಬಿದ್ದುದೇ ನೆಪವಾಗಿ ಇದ್ದಕ್ಕಿದ್ದಂತೆಯೇ ತೀರಿಕೊಂಡಳು.  ಸಯೀಬಾಯಿಗೆ ಚಿಕ್ಕ ವಯಸ್ಸು. ವಾಸುದೇವನಿಗೆ ಗರ ಬಡಿದಂತಾಯಿತು.

ಆಗಿನ್ನೂ ಆತನ ವಯಸ್ಸು ಕೇವಲ ಇಪ್ಪತ್ತೆಂಟು. ತಾಯಿಯನ್ನು ಕಳೆದುಕೊಂಡಿದ್ದ ಮಥು ತಬ್ಬಲಿಯಾಗಿದ್ದಳೂ.  ಅವಳನ್ನು ನೋಡಿಕೊಳ್ಳುವವರಾರು? ಆದ್ದರಿಂದ ಎರಡನೆಯ ಮದುವೆಗೆ ಮನೆಯವರು ಒತ್ತಾಯ ಮಾಡಿದರು. ವಾಸುದೇವನು ಒಪ್ಪಿಗೆ ಕೊಟ್ಟನು. ಅದೇ ವರ್ಷ ಮದುವೆಯಾಯಿತು.

ಇವನ ಎರಡನೆಯ ಹೆಂಡತಿ ಗೋಪಿಕಾಬಾಯಿ. ಶಾಂತ ಸ್ವಭಾವದವಳೂ. ಧೈರ್ಯ ಮನಸ್ಸಿನವಳೂ. ಉಗ್ರಕ್ರಾಂತಿಕಾರಿಯಾದ ಈ ಗಂಡನಿಗೆ ಹೇಳಿಸಿಮಾಡಿಸಿದಂತಿದ್ದ ಹೆಂಡತಿ ಆಕೆ. ಉಡಿಗೆ ತೊಡಿಗೆ ಆಭರಣಗಳ ಆಸೆಯನ್ನು ತೊರೆದು ಗಂಡನ ಕ್ರಾಂತಿಕಾರ್ಯದಲ್ಲಿ ಸಹಕಾರಿಯಾಗಿ ಕಡುಕಷ್ಟದ ಬಾಳ್ವೆ ನಡೆಸಿದ ವೀರ ಪತ್ನಿ ಆಕೆ.

೧೮೫೭ರಲ್ಲಿ ಸ್ಪೋಟಗೊಂಡಿದ್ದ ಕ್ರಾಂತಿಯನ್ನು ಇಂಗ್ಲೀಷರು ಅದೇ ತಾನೇ ಅಡಗಿಸಿದ್ದರು. ಕ್ರಾಂತಿಕಾರಿ ದೇಶಭಕ್ತರನ್ನು ಗಲ್ಲಿಗೇರಿಸಿದ್ದರು. ಇಂಗ್ಲೀಷರ ದರ್ಪ ಕಂಡು ಜನ ಗಡಗಡನೆ ನಡುಗುತ್ತಿದ್ದರು. ಅವರ ವೈಭವ ಭಾರತೀಯರ ಕಣ್ಣು ಕೋರೈಸಿತ್ತು. ಇಂಗ್ಲೀಷರ ಗುಣಗಾನ ಮಾಡುವುದರಲ್ಲಿ ಮಗ್ನವಾಗಿದ್ದರು ಬಹು ಮಂದಿ. ಆದರೆ ವಾಸುದೇವ ಬಲವಂತ ಫಡಕೆ ಮಾತ್ರ ಜಗ್ಗಲಿಲ್ಲ. ಗುಲಾಮಗಿರಿಯ ಗುಂಗಿನಲ್ಲಿ ಮೈ ಮರೆತು ಮಲಗಿರುವ ದೇಶಬಾಂಧವರನ್ನು ಹೊಡೆದೆಬ್ಬಿಸುವ ಹಟ ತೊಟ್ಟು ನಿಂತಿದ್ದ. ಅದಕ್ಕಾಗಿ ಅವನು ಪಟ್ಟ ಕಷ್ಟ ಎಷ್ಟೊಂದು!

ಕ್ರಾಂತಿಯ ಕರೆ :

ಆದರೆ ವಾಸುದೇವನಿಗೆ ದೇಶದ ಜನರ ಸಹಕಾರ ಸಾಕಷ್ಟು ಸಿಕ್ಕದಾಯಿತು. ದೇಶಭಕ್ತರಿಗೆ ಬಡತನ ಬಂದಿತ್ತು. ಇವನ ಕರೆಯನ್ನು ಕೇಳಿಯೂ ಕಿವುಡರಮತೆ ಕುಳಿತ್ತಿದ್ದರೆ ಹೊರತು ಕಾರ್ಯರಂಗಕ್ಕೆ ಇಳೀಯಲಿಲ್ಲ. ಇನ್ನು ಕೆಲವರಂತೂ “ಇಂಗ್ಲೀಷರ ತಂಟೆಗೆ ಹೋಗಬೇಡ, ನಿನಗೆ ಅಪಾಯ” ಎಂದು ವಾಸುದೇವನಿಗೆ ಉಪದೇಶ ಮಾಡಿದರು ಗರ್ಜಿಸಬೇಡ ಎಂದು ಸಿಂಹಕ್ಕೆ ಹೇಳಿದಂತೆ!

ವಾಸುದೇವ ಬಲವಂತ ಫಡಕೆಗೆ ಹಗಲು ರಾತ್ರಿ “ಬ್ರಿಟಿಷರನ್ನು ಓಡಿಸುವುದು ಹೇಗೆ?” ಎಂಬುವುದೇ ಚಿಂತೆಯಾಯಿತು. ಅವನ ದಿನಚರಿಯಲ್ಲಿ ಆತ ಹೀಗೆ ಬರೆದಿದ್ದಾನೆ. ಬೆಳಗಿನಿಂದ ರಾತ್ರಿಯವರೆಗೆ ಸ್ನಾನ ಮಾಡುತ್ತಿರಲಿ, ಊಟ ಮಾಡುತ್ತಿರಲಿ ನಿದ್ರೆ ಮಾಡತ್ತಿರಲಿಲ್ಲ. ನನಗೆ ಒಂದೇ ಚಿಂತೆಯಾಯಿತು-ಈ ಬ್ರಿಟಿಷರನ್ನು ನಾಶಮಾಡುವುದು ಹೇಗೆ?  ನನಗೆ ಮನಸ್ಸಿನ ಸಮಾಧಾನವೇ ಇಲ್ಲವಾಯಿತು.

ಕಾನೂನು ಕಟ್ಟಳೆಯ ಮಾರ್ಗವನ್ನು ಅವಲಂಬಿಸಿ ಇಂಗ್ಲೀಷರಂತಹ ಬಲಾಢ್ಯರನ್ನು ಸೋಲಿಸುವುದು ಅಸಾಧ್ಯವೆಂಬುವುದು ವಾಸುದೇವನಿಗೆ ಮನದಟ್ಟಾಯಿತು. ಶಾಸನಗಳನ್ನು  ಮಾಢಿದವರು ಇಂಗ್ಲೀಷರು, ನ್ಯಾಲಯಗಳು ಅವರವು. ಮನಸ್ವಿ ಯಾವಾಗೆಂದರೆ ಆವಾಗ ಯಾರನ್ನು ಬೇಕಾದರೂ ಸೆರಮನೆಗೆ ಕರೆದೊಯ್ಯುವ  ಇಂಗ್ಲೀಷರು. ಪೋಲಿಸರು ವಿಚಾರಣೆಯೇ ಇಲ್ಲದೆ ಅವರನ್ನು ಸೆರೆಯಲ್ಲಿ ತೊಲಗಿಸಲು ಇರುವ ಮಾರ್ಗವೆಂದರೆ ಒಂದೇ, ಕ್ರಾಂತಿ -ಸಶಸ್ತ್ರ ಕ್ರಾಂತಿ. ನಾಡಿಗಾಗಿ ನೆತ್ತರು ಚೆಲ್ಲಲು  ಹಿಂದು ಮುಂದು ನೋಡದ ರಾಮೋಶಿ ಎನ್ನುವ ಜನರನ್ನು ಕಲೆಹಾಕಿದ.

ಈ ರಾಮೋಶಿಗಳು ಗುಡ್ಡಗಾಡಿನ ಜನರು, ಅಶಿಕ್ಷಿತರಾದರೂ ಸ್ವಾಭಿಮಾನಿಗಳೂ. ಕೊಟ್ಟ ಮಾತಿಗಾಗಿ ಕುತ್ತಿಗೆ ಕೊಡುವ ಪ್ರಮಾಣಿಕರು. ಕಿರುಕುಳ ಯುದ್ಧದಲ್ಲಂತೂ ನಿಪುಣರು. ಇವರು ಅನೇಕ ವರ್ಷಗಳ ಮೊದಲ ಮರಾಠ ಸೈನ್ಯದಲ್ಲಿ ಕೆಲಸ ಮಾಡಿದವರು. ೧೮೨೬ರಲ್ಲಿಯ ಬ್ರಿಟಿಷರ ವಿರುದ್ಧ ದಂಗೆ ಎದಿದ್ದರು.  ಈ ರಾಮೋಶಿಯ ಜನರ ಒಕ್ಕೂಟದ ಬಲದ ಮೇಲೆ ಬ್ರಿಟಿಷರ ಬೆನ್ನು ಮುರಿಯುವ ವಜ್ರ ನಿರ್ಧಾರ ಮಾಡಿದ್ದ ವಾಸುದೇವ.

ತಾನೂ ಊರು ಬಿಟ್ಟು ಗುಡ್ಡ ಗಾಡಿನಲ್ಲಿ ಅವರ  ಜೊತೆಗೆ ಸೇರಿದ. ಉಡಿಗೆ ತೊಡಿಗೆ ಸಹ ರಾಮೋಶಿಯವರಂತೆ ತೊಟ್ಟ. ಗಡ್ಡ ಮೀಸೆ ಬಿಟ್ಟ. ಅವರಿಗೆ ದೇಶದ ದುರವಸ್ಥೆ ಹೇಳೀದ. ನಾಡಿನ  ಕರೆ ಏನೆಂಬುವುದನ್ನು ತಿಳಿಸಿದ.ಕ್ರಾಂತಿಯ ಕಂಕಣ ತೊಡಿಸಿದ.  ಯುದ್ಧವಿದ್ಯೆಯ ಅಭ್ಯಾಸ ಆರಂಭಿಸಿದ. ಗುಡ್ಡ ಗಾಡುಗಳೂ ಸೈನಿಕರ ಶಿಬಿರಗಳಾದವು. ಕುದುರೆಸವಾರಿ, ಕತ್ತಿವರಸೆ, ಕುಸ್ತಿ, ಗುಂಡು ಹಾರಿಸುವಿಕೆಯಲ್ಲಿ ರಾಮೋಶಿಗಳು ಸಹ ನಿಷ್ಣಾತರಾದರು. ೧೮೨೯ರ ಹೊತ್ತಿಗೆ ಈ ಸೈನ್ಯ ಸಜ್ಜಾಗಿ ನಿಂತಿತು.

ಇದೇ ಕಾಲದಲ್ಲಿ ಗುಟ್ಟಾಗಿ ತರುಣರ ಸಂಘವೊಂದನ್ನು ಸ್ಥಾಪಿಸಲು ವಾಸುದೇವ ಶ್ರಮಿಸಿದ. ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪಣ ತೊಟ್ಟರು. ಹಲವರು ಯುವಕರನ್ನು ಸೇರಿಸಿದ. ನಾಡಸೇವೆಯಲ್ಲಿ ಎಲ್ಲ ಸುಖ ಸಂತೋಷಗಳನ್ನೂ ಬಲಿಕೊಟ್ಟು ಪ್ರಾಣವನ್ನೂ ಅರ್ಪಿಸಲು ಸಿದ್ಧರಾಗಬೇಕೆಂದು ಹುರಿದುಂಬಿಸಿದ. ಅವರಿಗ ಫರ್ಗ್ಯುಸನ್ ಮತ್ತು ಗುತ್ತಿಕಡಿ ಗುಡ್ಡಗಾಡುಗಳಲ್ಲಿ ಸಯಣಿಕ ಶಿಕ್ಷಣ ಕೊಡಲು ಏರ್ಪಾಡು ಮಾಡಿದ.

ಬರಗಾಲದ ಹಾಹಾಕಾರ :

ಈ ಹೊತ್ತಿಗೆ ಸರಿಯಾಗಿ ದೇಶದಲ್ಲಿ ಬರಗಾಲ ಬಂದಿತು. ತಿನ್ನಲು ಅನ್ನವಿಲ್ಲ, ಕುಡಿಯಲು ನೀರಿಲ್ಲ. ಎಲ್ಲೆಡೆ ಹಹಾಕಾರ ಎದ್ದಿತುತ. ಜನ ಇಲಿಗಳಂತೆಯೇ ಸಾಯಲಾರಂಭಿಸಿದರು.  ಕೈ ಹಿಡಿಯಷ್ಟು ಕೂಳಿಗಾಗಿ ಜನ ಮತಾಂತರ ಮಾಡಿ ಕ್ರಿಶ್ಚೀಯನ್ನರಾಗಲಾರಂಭಿಸಿದರು. ಕ್ರೈಸ್ತ ಮಿಷನರಿಗಳಿಗಂತೂ ಸುಗ್ಗಿಯ ಕಾಲ. ಇಂಗ್ಲೀಷರ ಬೆಂಬಲ ಬೇರೆ.

ಪರಿಸ್ಥಿತಿಯನ್ನು ಕಣ್ಣಾರೆ ನೋಡಲೆಂದು ವಾಸುದೇವನು ನಾಡೆಲ್ಲಾ ಸುತ್ತಾಡಿ ಬಂದ. ದೇಶದ ವೈನಾವ್ಯವಸ್ಥೆಯನ್ನು ಕಂಡು ಅಂತಃಕರಣ ಕಳವಳಿಸಿತು. ಜನ ಸತ್ತರೇನು ಬದುಕಿದರೇನು  ಎಂಬಂತ ಸುಖದ ಸಿಂಹಾಸನದ ಮೇಲೆ ಸುಮ್ಮನೆ ಕುಳಿತ್ತಿದ್ದ ಇಂಗ್ಲೀಷರ ಮೇಲೆ ಬೆಂಖಿ ಕಾರಿದ. ಇನ್ನು ತಡ ಮಾಡುವುದು ಹಾನಿಕರ ಎಂದು ಕ್ರಾಂತಿಯ ಸಂದೇಶ ಕಳುಹಿಸಿದ.

ಫಡಕೆ ಬಗ್ಗಿ ನೆಲ ಮುಟ್ಟಿ ತನ್ನ ತಾಯ್ನಾಡಿನ ಒಂದು ಹಿಡಿ ಮಣ್ಣನ್ನು ತನ್ನೊಡನೆ ಕಟ್ಟಿಕೊಂಡ:

ಅಪಾಯದ ಅಂಚಿನಲ್ಲಿ ಆತನ ಹೆಂಡತಿ ಮಕ್ಕಳಿದ್ದರು. ಮೊದಲು ಅವರನ್ನು ತವರು ಮನೆಗೆ ಕಳುಹಿಸಿಕೊಟ್ಟ. ಗಂಡ ಹೆಂಡತಿಯರದು ಅದೇ ಕಡೆಯ ಭೇಟಿ.  ಕಣ್ಣಲ್ಲಿ ನೀರು ತುಂಗಬಿದ ಹೆಂಡತಿಗೆ ಮತ್ತೇ ಭೇಟಿ ಮಾಡುವ ಅಶ್ವಾಸನೆ ಕೊಟ್ಟಿದ್ದರೂ ಅದೊಂದು ಟೊಳ್ಳೂ ಸಮಾಧಾನವಾಗಿತ್ತು.  ದೇಶಧ ಸ್ವಾತಂತ್ರ್ಯಕ್ಕಾಗಿ ಸುಖದ ಸಂಸಾರ ಬಲಿಕೊಟ್ಟಾಗಿತ್ತು. ಬಂಡಾಯದ ಹೊತ್ತಿ ಹತ್ತಿರ ಬಂದಿತ್ತು.

ಬಂಡಾಯ :

ಅಂದು ೧೮೭೯ರ ಶಿವರಾತ್ರಿಯ ಕತ್ತಲು ರಾತ್ರಿ. ಪೂನಾದ ಬಳೀ ಲೋಣಿ ಎನ್ನುವ ಹಳ್ಳಿಯ ಬಳಿ. ಆರಿಸಿದ ಇನ್ನೂರು ರಾಮೋಶಿಗಳ ತಂಡದೊಡನೆ ವಾಸುದೆವ ಬಲವಂತ ಫಡಕೆಯ  ಗುಪ್ತಾಲೋಚನೆ ನಡೆಯಿತು. ಪ್ರತಿಯೊಬ್ಬನೂ ಪ್ರತಿಜ್ಞೆ ತೊಟ್ಟನು. “ಮಾಡುವ ಅಥವಾ ಮುಡಿಯುವ” ಎನ್ನುವ ಭೀಕರ ಪ್ರತಿಜ್ಞೆ ಅದು. ಕ್ರಾಂತಿಯ ಕಹಳೆಯನ್ನೂದೀದ್ದಾಯಿತು. ಗುಂಡು ಹಾರಿತು. ನಾಡ ಬಂಡಾಯವೆದ್ದಿತು.

ಕುರಿಮಂದೆಯಂತೆ ಕಾಣುತ್ತಿದ್ದ ಜನರೀಗ ಇಂಗ್ಲೀಷರ ವಿರುದ್ಧ ಉರಿದೆದ್ದಿದ್ದರು. ಇದಕ್ಕಿದ್ದಂತೆ ಹೊಡಿ ಬಡಿ ಕಡಿ ಎಂದು ರಭಸದಿಂದ ಮೈಮೇಲೆ ಬರುತ್ತಿದ್ದ ವಾಸುದೇವನ ಸೈನ್ಯವನ್ನು ನೋಡಿ ಇಂಗ್ಲೀಷರು ದಿಕ್ಕು ಕಾಣದಂತಾದರು. ಬದುಕಿದರೆ ಸಾಕು ಬಡಜೀವವೇ ಎಂದು ಕೈಯಲ್ಲಿ ಪ್ರಾಣ ಹಿಡಿದು ಕಂಡ ಕಡೆ ಓಟಕಿತ್ತಿದ್ದರು. ಮನೆ ಮನೆಯ ಮಾತಾಗಿದ್ದನು ವಾಸುದೇವ ಬಲವಂತ ಫಡಕೆ. ಆಳರಸರ ಅಮಲನ್ನು ಕ್ಷಣಾರ್ಥದಲ್ಲಿ ಕೆಳಗಿಳಿಸಿದ್ದನು. ಆದರೆ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಾದವರಿಗೆ ಕೈಯಲ್ಲಿ ಕಾಸಿರಲಿಲ್ಲ. ಸಾವಿಗೆ ಸಹ ಸವಾಲು ಹಾಕಿದ ಬಂಡಾಯ ಹೂಡಿದ್ದ ಶೂರ ಸೈನಿಕರು ಕಷ್ಟ ಕಾರ್ಪಣ್ಯಕ್ಕೆ ಸಿಲುಕಿರುವುದನ್ನು ವಾಸುದೇವ ಕಂಡ. ಹೊಟ್ಟೆಗೆ ಹಿಟ್ಟಿಲ್ಲ. ಮೈಗೆ ಬಟ್ಟೆಯಿಲ್ಲ. ಕೈಯಲ್ಲಿ ಶಸ್ತ್ರವಿಲ್ಲ. ಕೊಂಡೊ ಕೊಳ್ಳಲು ಕಾಸಿಲ್ಲ. ತಾನಾದರೂ ಬರಿಗೈ ಬಂಟ . ಹಣಕ್ಕಾಗಿ ಶ್ರೀಮಂತರನ್ನು ಕಂಡು ಗುಪ್ತಸಂಧಾನ ನಡೆಸಿದದ. ಸ್ವಾತಂತ್ರ್ಯ ಯುದ್ಧಕ್ಕಾಗಿ ಸಾಲ ಕೊಡಲು ಕೋರಿದ. ಕಾಸಿಗೆ ಕಾಸು ಸಾಲ ತೀರಿಸುವ ಭರವಸೆ ನೀಡಿದ. ಆದರೆ ದುಡ್ಡಿದ್ದ ದೊಡ್ಡಪ್ಪಂದಿರಾರೂ ಈತನ ಸಹಾಯಕ್ಕೆ ಧಾವಿಸಿ ಬರಲಿಲ್ಲ. ಇನ್ನು ಮಾಡುವುದಾದರೂ ಏನು? ಹಣವಿಲ್ಲವೆಂಬ ಒಂದೇ ಕಾರಣದಿಂದಾಗಿ ಮಹಾನ್ ಕಾರ್ಯವೊಂದು ಮಣ್ಣೂಗೂಡಬಾರದಷ್ಟೆ? ಉಳಿದಿರುವ ಮಾರ್ಗ ಒಂದೇ – ಲೂಟಿ ! ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದರೋಡೆ! ಬ್ರಟಿಷರ ಬಾಲಬಡುಕರಾದ ಎಲ್ಲಾ ಶ್ರೀಮಂತರ ಮನೆಗೆ ದಾಳಿ ಇಟ್ಟು ಹಣ ದೋಚುವ ಹಂಚಿಕೆ ಹಾಕಿದ ವಾಸುದೇ ಬಲವಂತೆ ಫಡಕೆ.

ಸ್ವರಾಜ್ಯಕ್ಕಾಗಿ ದರೋಡೆ :

ಮೊದಲನೆಯ ಮುತ್ತಿಗೆ ಪೂಣಾದ ಬಳಿ ಇರುವ ಧಾಮಾರಿ ಎನ್ನುವ  ಊರಿನ ಮೇಲಾಯಿತು. ಒಂದರ ಮೇಲೊಂದರಂತೆ ಫಡಕೆಯ ರಾಮೋಶಿಗಳು ಊರುಗಳನ್ನು ಮುತ್ತಿ ದರೋಡೆ ಮಾಡಲು ಪ್ರಾರಂಭಿಸಿದನು. ಆಗಾಧ ಸಂಪತ್ತು ಕೈವಶವಾಯಿತು. ದೇಶದ ಪ್ರೇಮಿಗಳಾರಿಗೂ ತೊಂದರೆಯಾಗದಂತೆ ವಾಸುದೇವ ಎಚ್ಚರಿಕೆ ವಹಿಸಿದ್ದ.  ಹೆಂಗಸರ ಹಣಕಾಸಿಗೆ ಕೈ ಹಚ್ಚಲಿಲ್ಲ. ಬಡವರ ಜೋಳಿಗೆಯನ್ನು ಬರಿದಾಗಿಸಲಿಲ್ಲ. ಹಳ್ಳಿ ಹಳ್ಳಿಯ ರೈತರನ್ನು ದಂಗೆ ಏಳಲು ಉತ್ತೇಜಿಸುತ್ತಾ ಇಂಗ್ಲೀಷರ ವಿರುದ್ಧ ಯುದ್ಧಹೂಡಿದ. ಹೋದ ಹೋದ ಹಳ್ಳಿಗಳಲ್ಲಿ ಇವನಿಗೆ ಸ್ವಾಗತ ಕಾದಿತ್ತು. ತಮ್ಮ ಕಲ್ಯಾಣಕ್ಕಾಗಿ ಜೀವನವನ್ನೂ ಮುಡಿಪಾಗಿಟ್ಟ ದೇಶಭಕ್ತನೆಂದು ಹಳ್ಳೀಗರು ಬರಮಾಡಿಕೊಂಡಿದ್ದರು. ಈತನ ಸೈನ್ಯಕ್ಕೆ  ಬೇಕಾಗಿದ್ದ ದವಸಧಾನ್ಯಗಳನ್ನು ತಾವೇ ಒದಗಿಸಿದ್ದದರು. ನೋಡ ನೋಡುತ್ತಿದ್ದಂತೆಯೆ  ದಂಗೆಯ ಬೆಂಕಿ ಎಲ್ಲೆಡೆ ಹಬ್ಬಿತು. ಇಂಗ್ಲೀಷರು ದಿಕ್ಕು ಕಾಣದಂತಾದರು.  ವಾಸುದೇವನೆಂದರೆ ಸಾಕು,. ಭಯಪಡುತ್ತಿದ್ದರು. ಮುಂಬಯಿಯ ಗವರ್ನರನಪ್ರಾಣ ರಕ್ಷಣೆಗಾಗಿ ವಿಶೇಷ ಕಾವಲುಗಾರನನ್ನು ನೇಮಿಸಿದರು.  ವಾಸುದೇವನನ್ನು ಹಿಡಿಯುವುದೆಂದರೆ ಅದೇನು ಆಟವೇ? ಸಿಂಹದ ಗುಹೆ ಹೊಕ್ಕಂತೆ, ಹಾವಿನ ಹುತ್ತದಲ್ಲಿ ಕೈ ಹಾಕಿದಂತೆ. ತಮ್ಮ ಕೈಲಾಗದ ಕೆಲಸವೆಂದು ಅಧಿಕಾರಿಗಳು ಆತನನ್ನು ಹಿಡಿದುಕೊಡಲು ಜನರಿಗೆ ಆಸೆ ತೋರಿಸಿದರು.  ವಾಸುದೇವ ಬಲವಂತ ಫಡಕೆಯನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ ಸಾರಿದರು.

ಅದಕ್ಕೆ ಪ್ರತಿಯಾಗಿ ವಾಸುದೇವನು  ಘೋಷಣೆ ಹೊರಡಿಸಿದ- ಇಂಗ್ಲೀಷ್ ಗವರ‍್ನರ ಮತ್ತು ಕಲೆಕ್ಟರರ ತಲೆ ತಂದುಕೊಟ್ಟವರಿಗೆ ಅದಕ್ಕೂ ಹೆಚ್ಚಿನ ಬಹುಮಾನ ಎಂದು !

ಈತನಿಂದ ಇಂಗ್ಲೀಷ ರಾಜ್ಯಕ್ಕೆ ಸಂಚಕಾರ ಬಂದಿದೆ. ಎಂಬುವುದನ್ನು ಗುರುತಿಸಿ ಅವನನ್ನು ಹಿಡಿಯಲೆಂದು ರಾಜ್ಯದಲ್ಲೆಲ್ಲ ರಾಜ್ಯದಲ್ಲೆಲ್ಲ ಗುಪ್ತಚಾರರು ಬಲೆ ಬೀಸಿದರು.  ಆದರೆ ಇವನ ಬಂಡಾಯ ಮಾತ್ರ ಹರಡುತ್ತಲೇ ಇತ್ತು.

ಫಡಕೆಯ ಯೋಜನೆ ದೊಡ್ಡದಾಗಿಯೇ ಇತ್ತು. ಸರಕಾರಕ್ಕೆ ಸೇರಿದ ಅಂಚೆ ಕಚೇರಿಗಳು, ರೇಲ್ವೆ ಕಚೇರಿಗಳು ಮೊದಲಾದವುಗಳ ಮೇಲೆ ದಾಳಿ ಮಾಡಬೇಕು. ಹೀಗೆ ದಾಳಿ ಮಾಡುವುದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಮಚಾರ ಕಳೂಹಿಸುವುದು, ಸೈನಿಕರನ್ನು ಕಳೂಹಿಸುವುದು-ಎಲ್ಲ ಸರಕಾರಕ್ಕೆ ಕಷ್ಟವಾಗುತ್ತಿತ್ತು. ಸೆರೆಮನೆಯಿಂದ ಸೆರೆಯಾಳುಗಳನ್ನು ಸ್ವತಂತ್ರ್ಯ ಗೊಳಿಸಿ ಅವರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳಬೇಕು; ಹಲವಾರು ಸ್ಥಳಗಳಲ್ಲಿ ಒಮ್ಮೆಗೆ ದಾಳಿಯಾದರೆ ಸರಕಾರಕ್ಕೂ ಗೊಂದಲವಾಗುತ್ತದೆ. ಜನರಿಗೂ ಫಡಕೆಯ ಬಳಿ ದೊಡ್ಡ ಶಕ್ತಿಯುತವಾದ ಸೈನ್ಯವಿದೆ ಎಂಬ ಭಾವನೆ ಬರುತ್ತದೆ, ಅವರು ಧೈರ್ಯವಾಗಿ ಬೆಂಬಲ ಕೊಡುತ್ತಾ- ಇವೆಲ್ಲ ಅವನ ಯೋಚನೆಗಳು.

ಹಿಮಾಲಯದಷ್ಟು ಉತ್ತುಂಗ :

ಇದುವರೆವಿಗೆ ಚಿಕ್ಕಪುಟ್ಟ ಊರುಗಳ ಮೇಲೆ ದಾಳಿ ಮಾಡುತ್ತಿದ್ದ ಆತ. ರಾಜ್ಯದ ಎಲ್ಲ ಕಡೆಯಿಂದ ಹೆದರಿದ ಯೂರೋಪಿಯನ್ನರು ಬಂದು ಪೂನಾನಗರ ಸೇರಿದರು. ಪೂನಾದಲ್ಲಿ ಇಂಗ್ಲೀಷರ ಸರ್ಪಗಾವಲಿತ್ತು.

೧೮೭೯ರ ಮೇ ೧೩ ರಂದು ಮಧ್ಯರಾತ್ರಿ ಪೂನಾದಲ್ಲಿ ದೊಡ್ಡ ಕೋಲಾಹಲವೆದ್ದಿತ್ತು ! ಒಂದಾದ ಮೇಲೊಂದರಂತೆ ಇಂಗ್ಲೀಷರ ಎರಡು ಕೇಂದ್ರ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ನೋಡ ನೋಡುತ್ತಿದ್ದಂತೆಯೇ ಎರಡು ಕಚೇರಿಗಳೂ ಸುಟ್ಟ ಬೂದಿಯದವು.

ಊರಿನಲ್ಲೆಲ್ಲ ಇಂಗ್ಲೀಷರ ಸೈನಿಕರು, ಗೂಢಚಾರರು ತುಂಬಿದ ಪೂನಾದಲ್ಲಿ ವಾಸುದೇವ ಅವರ ಎರಡು ಕಚೇರಿಗಳನ್ನು ಸುಟ್ಟಿದ್ದ.

ಪೂನಾದ ಅಗ್ನಿ ಕಾಂಡದ ನಂತರ ವಾಸುದೇವ ಬಲವಂತ ಫಡಕೆಯ ಹೆಸರು ಇಂಗ್ಲೀಷ ಸಾಮ್ರಾಜ್ಯದ ಮೂಲೆ ಮೂಲೆಗೆ ಹರಡಿತ್ತು. ಹಲವು ವರ್ತಮಾನ ಪತ್ರಿಕೆಗಳಲ್ಲಿ ಈ ಕ್ರಾಂತಿಯ ಕಥೆ ಪ್ರಕಟವಾಯಿತು. “ಅಮೃತ ಬಜಾರ ಪತ್ರಿಕೆ”ಯು ಈತನನ್ನು “ಹಿಮಾಲಯದಷ್ಟು ಉತ್ತುಂಗ ಪತ್ರಿಕೆ” ಯು ಈತನನ್ನು “ಹಿಮಾಲಯದಷ್ಟು ಉತ್ತುಂಗ ಪುರುಷ” ಎಂದು ಗೌರವಿಸಿತು. ಇಂಗ್ಲೆಂಡಿನಲ್ಲಿ ಬಹು ಪ್ರಸಿದ್ಧವಾದ ವೃತ್ತಪತ್ರಿಕೆ “ಲಂಡನ್ ಟೈರ್ಮ್ಸ:. ಇದರಲ್ಲಿಯೂ ಫಡಕೆಯ ಪ್ರತಾಪದ ವರ್ಣನೆಯಾಯಿತು. ಇಂಗ್ಲೀಷ, ಪಾರ್ಲಿಮೆಂಟಿನಲ್ಲಿ ಈತನ ಚಟುವಟಿಕೆಗಳ ಬಗ್ಗೆ, ಕೂಲಂಕುಷವಾಗಿ ಚರ್ಚಿಸಲಾಯಿತು. ಹೇಗಾದರೂ ಮಾಡಿ ಇವನನ್ನು ಹಿಡಿದು ಶಿಕ್ಷಿಸಬೇಕೆಂದು ಬ್ರಿಟಿಷ ಸರಕಾರದ ಕಟ್ಟಪ್ಪಣೆಯಾಯಿತು.

ಸೋಲು :

ದೊಡ್ಡ ಸೈನ್ಯವೊಂದನ್ನು ತೆಗೆದುಕೊಂಡು ಇಂಗ್ಲೀಷ್ ಸೇನಾಪತಿ ಮೇಜರ ಡೇನಿಯಲ್ ವಾಸುದೇವನ ಬೆನ್ನು ಹತ್ತಿದನು. ಅದೇ ತಾನೆ ಕೊಂಕಣ ಪ್ರಾಂತದಲ್ಲಿ ಲೂಟಿ ಮಾಡಿ ಹಿಂದಿರುಗುತ್ತಿದ್ದ ರಾಮೋಶಿ ಸೈನ್ಯಕ್ಕೆ ಎದುರಾದರು. ಭೀಕರ ಕಾಳಗ ಜರುಗಿತು. ಶಸ್ತ್ರಸಜ್ಜಿತವಾದ ಶಿಸ್ತು ಬದ್ಧ ಇಂಗ್ಲಷ ಸೈನ್ಯಕ್ಕೆ ವಾಸುದೆವನ ಗುಡ್ಡಗಾಡು ಜನರ ಸೈನ್ಯ ಈಡಾಗಲಿಲ್ಲ ಸೋಲು ಕಾದಿತ್ತು. ದೋಚಿ ತಂದಿದ್ದ ಹಣವೆಲ್ಲ ಡೇನಿಯಲನ ಕೈವಶವಾಯಿತು. ವಾಸುದೇವ ಬಲವಂತ ಫಡಕೆಯ ಬಲಗೈಯುಂತಿದ್ದ ದೌಲತರಾವ ನಾಯಕ್ ಎನ್ನುವ ರಾಮೋಶಿ ಮುಖಂಡನು ಸಾವಿಗೀಡಾದನು. ಸೈನ್ಯ ಚೆಲ್ಲಾಪಿಲ್ಲಿಯಾಯಿತು.

ಪರಾಭವದ ಪರಿಣಾಮ ಬಹು ಕಹಿಯಾಯಿತು. ರಾಮೋಶಿಗಳು ನಿರಶರಾದರು. ವಾಸುದೆವನ ಬ್ರಿಟಿಷರ ಕಣ್ಣುತಪ್ಪಿಸುತ್ತಾ ನೈಜಾಮನ ರಾಜ್ಯ  ಹೊಕ್ಕನ್ನು. ತಲೆ ಮರೆಸಿಕೊಂಡು ಐದು ನೂರು ರೋಹಿಲ್ ಸೈನಿಕರನ್ನು ಕಲೆಹಾಕುವ ಸಂಧಾನ ನಡೆಸಿದನು. ಗಾಣಗಾಪುರದ ಮಿತ್ರ ಮನೆಯಲ್ಲಿ ಗುಪ್ತ ಅಶ್ರಯ ಪಡೆದಿದ್ದನು.

ಸಿಂಹ ಬಲೆಯೊಳಗೆ ಸಿಲುಕಿತು :

ಆದರೆ ಇವನನ್ನು ಹಿಡಿದು ಹೊರತು ಇಂಗ್ಲೀಷರಿಗೆ ನಿದ್ರ ಬರುವಂತಿರಲಿಲ್ಲ. ಸಾವಿರದ ಎಂಟುನೂರು ಪಳಗಿದ ಸೈನಿಕರನ್ನು ಕಟ್ಟಿಕೊಂಡು ಡೇನಿಯಲ್ ಈತನ ಬೆನ್ನು ಹತ್ತಿದ್ದನು,. ಅದಕ್ಕಿಂತ ಹೆಚ್ಚಾಗಿ ದುರ್ದೈವ ಆತನ ಬೆನ್ನು ಹತ್ತಿದ್ದಿತು. ವಾಸುದೆವನ ವಸತಿಯ ವಿಷಯ ತಿಳಿದಿದ್ದ ಹೆಂಗಸೊಬ್ಬಳು ಪೂನಾದ ತನ್ನ ಗೆಳತಿಯೊಬ್ಬಲೀಗೆ ಹೆಳಿದಳು. ಯಾರಿಗು ಗೊತ್ತಿಲ್ಲದ ಆತನ ಇರುವಿಕೆ ತನಗೆ ಗೊತ್ತಿದೆ ಎಂಬ ಉತ್ಸಾಹ ಅವಳದು. ಅವಳ ಆ ಗೆಳತಿಯ ಈ ಸಂಗತಿಯನ್ನು ಗಂಡನಿಗೆ ಹೇಳಿದಳೂ. ವಾಸುದೇವನನ್ನು ಹಿಡಿದುಕೊಟ್ಟವರಿಗೆ ಸಿಕ್ಕಬಹುದಾದ ಬಹುಮಾನದ ವಿಷಯ ಅವನಿಗೆ ತಿಳಿದಿತ್ತು.  ಹಣದ ಅಸೆಗೆ ದೇಶದ ಹೆಮ್ಮೆಯಾಗಿದ್ದ ವೀರನನ್ನು ಮಾರಿದ. ಡೇನಿಯಲ್‌ಗೆ ಗುಟ್ಟನ್ನು ರಟ್ಟು ಮಾಡಿದ.

ನೂರಾರು ಮೈಲಿ ದೂರದಲ್ಲಿ ನೈಜಾಮನ ರಾಜ್ಯದಲ್ಲಿ ಒಬ್ಬಂಟಿಗನಾಗಿ ವಾಸುದೇವನಿರುವ ಸಂಗತಿ ತಿಳಿಯುತ್ತಲೇ ಆ ಮೇಜರನು ಸೈನ್ಯ ಕಲೆಹಾಕಿಕೊಂಡು ಗುಟ್ಟಾಗಿ ಹೊರಟನು. ಒಂದೇ ಸಮನೆ ಪ್ರಯಾಣ ಮಾಡುತ್ತಾ, ೧೮೭೯ರ ಜುಲೈ ೧೬ ರಂದು ಭಾಗಾನಗರವನ್ನು ಸೇರಿದನು. ನೈಜಾಮನ ರಾಜ್ಯದಲ್ಲಿದ್ದ ಇಂಗ್ಲೀಷ ರಾಜ್ಯಪ್ರತಿನಿಧಿಯ ಹೆಸರನ್ನು ರಿಚರ್ಡಮಿಡ್. ಹಿಂದೆ ತಾತ್ಯಾಟೊಪಿಯನ್ನು ಹಿಡಿದು ಗಲ್ಲಿಗೇರಿಸಿದ ಅಧಿಕಾರಿ ಆತ, ಇಬ್ಬರೂ ವಾಸುದೇವನನ್ನು ಹೇಗ ಹಿಡಿಯುವುದೆಂದು ಮಸಲತ್ತು ಮಾಡಿದರು.  ಅದರಂತೆ ನೈಜಾಮನ ಪೋಲಿಸರ ತಂಡದೊಡನೆ ಹೊರಟು ಜುಲೈ ೨೦ ರಂದು ಮಧ್ಯರಾತ್ರಿ ವಾಸುದೇವನು ಶಾಂತವಾಗಿ ಮಲಗಿದ್ದ ದೇವರನಾಡಗಿ ಎನ್ನುವ ಊರಿನ ದೇವಸ್ಥಾನವನ್ನು ಡೇನಿಯಲ್ ಮುತ್ತಿದನು.

ಡೇನಿಯಲ್  ಮುತ್ತಿಗೆ ಹಾಕಿದಾಗ ವಾಸುದೇವನು ಅತಿಯಾಗಿ ದಣಿದು ಮಲಗಿದ್ದನು. ಮೈಯಲ್ಲಿ ಜ್ವರ ಕಾಯುತ್ತಿತ್ತು. ಒಬ್ಬಂಟಿಗನಾಗಿ ದೇವಾಲಯವೊಂದರಲ್ಲಿ ಮಲಗಿ ನಿದ್ರಿಸುತ್ತಿದ್ದ  ಆ ಕ್ರಾಂತಿಸಿಂಹವನ್ನು ಕೈಸೆರೆ ಹಿಡಿದರು.  ಕಣ್ಣೂ ಬಿಡುತ್ತಿದ್ದಂತೆ ತಾನೂ ಸೆರೆಯಾಳಾಗಿರುವುದನ್ನು ಕಂಡನು.

ಸೆರೆಸಿಕ್ಕರೂ ಶರಣಾಗತನಾಗಲಿಲ್ಲ ವಾಸುದೆವ. ಮಲಗಿದ್ದವನನ್ನು ಬಂಧಿಸುವುದು ಹೇಡಿತನವೆಂದು ಹೇಳೀ ತನ್ನೊಡನೆ ದ್ವಂದ್ವ ಯುದ್ಧ ಅಡಿ ಗೆಲ್ಲಲು ಸವಾಲು ಹಾಕಿದ. ಆದರೆ ಡೇನಿಯಲ್ ಅವರನ ಆಹ್ವಾನವನ್ನೊಪ್ಪದೇ ಸೈನಿಕರ ಸಹಾಯದಿಂದ ಅವನನ್ನು ಬಂಧಿಸಿದ.  ಅವನಿಗೆ ಸಹಾಯ ಮಾಡಿದ್ದ ಆತನ ಸಂಗಡಿಗರನ್ನು ಸೆರೆಹಿಡಿದು ಸಶಸ್ತ್ರ ಕಾವಲಿನಲ್ಲಿ ಪೂನಾಕ್ಕೆ ಕರೆತಂದ.

ನ್ಯಾಯಾಸನದ ಮುಂದೆ :

ವಾಸುದೇವ ಬಲವಂತ ಫಡಕೆಯು ಸೆರೆಸಿಕ್ಕ ಸಂಗತಿ ಕಾಳ್ಗಿಚ್ಚಿನಂತೆ ನಾಡೆಲ್ಲಾ ಹಬ್ಬಿತು. ಇಂಗ್ಲೀಷ್ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಕಠೋರ ಶಿಕ್ಷೆ ಕಾದಿದೆ ಎಂಬುವುದು ಎಲ್ಲರಿಗೂ ಅರಿವಾಯಿತು.

ಆತನನ್ನು ಪೂನಾದ ಸೆರೆಮನೆಯಲ್ಲಿ ಬಂಧಿಸಿಟ್ಟರು. ಕೈಕಾಲುಗಳಿಗೆ ಕಬ್ಬಿಣದ ಸರಪಳಿ. ಹಗಲಿರುಳು ಸರ್ಪಗಾವಲು ಇವನ ಮೇಲೆ ಅನೇಕ ಆರೋಪಗಳನೆಗಳನ್ನು ಸರ್ಕಾರ ಹೊರಿಸಿತ್ತು. ಎಲ್ಲಾ ಸಿದ್ದತೆಯಾದ ಮೇಲೆ ಅಲ್ ಫ್ರೆಂಡ್ ಕೇಸರ‍್ ಎನ್ನುವ ಇಂಗ್ಲೀಷ್  ನ್ಯಾಯಾಧಿಪತಿಯ ಸಮುಖದಲ್ಲಿ ಪೂನಾದ ನ್ಯಾಲಯದಲ್ಲಿ ಅಪಾದನೆ ದಾಖಲಾಯಿತು.

೧೮೭೯ರ ಅಕ್ಟೋಬರ ೨೨ ರಂದು ವಾಸುದೇವ ಬಲವಂತ ಫಡಕೆಯ ವಿಚಾರಣೆಯ ದಿವಸ. ಮಹನ್ ದೇಶಭಕ್ತನಿಗೆ ಇಂಗ್ಲೀಷರು ಯಾವ ಕಠೋರ ಶಿಕ್ಷೆ ವಿಧಿಸುವರೋ ಎಂದು ಎಲ್ಲರಿಗೆ ತಳಮಳ.

ನ್ಯಾಯಾಲಯಕ್ಕೆ ಕೊಂಡೊಯ್ಯಲು ವಾಸುದೇವನನ್ನು ಜೈಲಿನಿಂದ ಹೊರತಂದರು. ಕೈಕಾಲುಗಳೀಗೆ ಕಬ್ಬಿನದ ಬೇಡಿ. ಸುತ್ತಲು ಪಹರೆ. ಆತನನ್ನು ನೋಡಲೆಂದು ಜನತೆ ಕಕ್ಕಿರಿದು ನೆರೆದಿತ್ತು. ಈ ಪ್ರಚಂಡ ಪರಾಕ್ರಮಿಯನ್ನೊಮ್ಮೆ ನೋಡಲೆಂದು ಯೂರೋಪಿಯನ್ ಸ್ತ್ರೀ ಪುರುಷರು ಸಹ ಬಂದಿದ್ದರು.

ದಿಟ್ಟ ನಡಿಗೆಯಿಂದ ಕೋರ್ಟಿನೊಳಗೆ ವಾಸುದೇವ ಪ್ರವೇಶಿಕಸಿದ್ದ. ಮೃತ್ಯು ಕಾದಿದ್ರೂ ಮುಖದ ಮೇಲಿನ ಮುಗುಳ್ನಗೆ ಮಾಯವಾಗಿರಲಿಲ್ಲ. ಹೆದರಿಯ ಹೆಸರಿಲ್ಲ. ಪಶ್ಚಾತಾಪದ ಸುಳಿವಿಲ್ಲ.

ನಾಡಿನ ಸ್ವಾಭಿಮಾನ ಸತ್ತಿರಲಿಲ್ಲ:

ಆದರೆ ಎಲ್ಲರ ಮುಂದೊಂದು ದೊಡ್ಡ ಪ್ರಶ್ನೆ ಎದ್ದಿತ್ತು. ಬ್ರೀಟಿಷರ ಬದ್ಧ ವೈರಿಯಾದ ಈತನ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸುವವರಾರು?  ಇಂಗ್ಲೀಷರ  ರೋಷಕ್ಕೆ ತುತ್ತಾಗಲು ಹೆದರದ ವಕೀಲರು ಯಾರು?  ಆದರೆ ನಾಡಿನ ಸ್ವಾಭಿಮಾನ ಸತ್ತಿರಲಿಲ್ಲ. “ಇವನ ಪರವಾಗಿ ವಕೀಲನಾರು? ಎಂದು ನ್ಯಾಯಾಧೀಶರು ಕೇಳುತ್ತಿದ್ದಂತೆ “ನಾನು” ಎಂದು ಎದೆತಟ್ಟಿ ಮುಂದೆ ಬಂದರು. “ಸಾರ್ವಜನಿಕಾ ಕಾಕಾ” ಎಂದು ಪ್ರಸಿದ್ಧರಾದ ಗಣೇಶ ವಾಸುದೇವ ಜೋಶಿ. ನೆರೆದಿದ್ದ ಜನರೆಲ್ಲಾ ಅವಕ್ಕಾದರು. ವಾಸುದೇವನ ಪರ ವಕೀಲರಾಗುವ ಯೋಜನೆಯನ್ನು ಅವರು ಮಾಡಿದಾಗ, “ಇಂಗ್ಲೀಷರ ಕಡು ಹಗೆಯ ಪರವಾಗಿ ವಕಾಲತ್ತು ವಹಿಸಿದರೆ ಎಂತಹ ವಿಪತ್ತು ಕಾದಿದೆ  ತಿಳಿದಿದೆಯೆ?” ಎಂದು ಎಚ್ಚರಿಸಿದರು ಅವರ ಮಿತ್ರರು. “ಎಂತಹ ವಿಪತ್ತಾದರೂ ಬರಲಿ,  ವಾಸುದೇವ ಬಲವಂತ ಜೊತೆಗೆ ಗಣೇಶ ವಾಸುದೇವನನ್ನು ಸಹ ಬೇಕಾದರೆ ಗಲ್ಲಿಗೇರಿಸಲಿ. ನನ್ನಗದರ ಪರಿವೇ ಇಲ್ಲ” ಎಂದು ಗುಡುಗಿದ್ದರು ಆ ವಕೀಲ- ಕಾಕಾ.

ಕಠೋರ ಶಿಕ್ಷೆಜೀವಾವಧಿ:

ವಿಚಾರಣೆ ಆರಂಭವಾಯಿತು ಒಂದಲ್ಲ, ಎಡರಲ್ಲ, ಅನೇಕ  ಭಯಂಕರ ಆರೋಪಗಳನ್ನು ವಾಸುದೇವನ ಮೇಲೆ ಹೊರಿಸಲಾಗಿತ್ತು. ಅವನ ವಿರುದ್ಧ ಭಾರತೀಯರೇ ಸಾಕ್ಷ್ಯ ಹೇಳಿದರು! ಕಡೆಗೆ ವಿಚಾರಣೆ  ಮುಗಿದು ಆತನಿಗೆ ಶಿಕ್ಷೆ ವಿಧಿಸಿದರು. ಜೀವಾವಧಿ ಶಿಕ್ಷೆ ! ಸಾಯುವವರೆಗೆ  ಕಾಣದ ನಾಡೊಂದರ ಜೈಲಿನಲ್ಲಿ ಆಯುಸ್ಸ ಸವೆಸುವುದು! ನ್ಯಾಯಾಸ್ಥಾನದಲ್ಲಿ ವಾಸುದೇವನು ತನ್ನ ಕಡೆಯ ಹೇಳಿಕೆಯನ್ನು ಕೊಟ್ಟನು. ಇಂಗ್ಲೀಷ ರಾಜ್ಯದ ಅನ್ಯಾಯವನ್ನು ವರ್ಣೀಸಿದನು.  ಲಾವಾರಸದಂತೆ ಮಾತು ಹರಿಯುತ್ತಿತ್ತು. ಕಣ್ಣು ಬೆಂಕಿಯ ಕಿಡಿಯನ್ನು ಸಿಡಿಸಿತ್ತು. ಜನರನ್ನುದ್ದೇಶಿಸಿ, “ದೇಶಬಾಂಧವರೇ! ನಾಡಿಗಾಗಿ ದುಡಿದೆ. ಆದರೆ ಸೋಲು ಕಾದಿತ್ತು.ಸ್ವರಾಜ್ಯ ತರಲಾರದಾದ ನನ್ನನ್ನು ಕ್ಷಮಿಸಿ ?” ಎಂದು ಕೈಮುಗಿದು ಆ ಉಜ್ವಲ ಕ್ರಾಂತಿಕಾರ.

ಅವನನ್ನು ಪೂನಾದಿಂದ ಠಾಣೆಗೆ, ಅಲ್ಲಿಂದ ಎಡನಿಗೆ ಕರೆದೊಯ್ದರು. ತನ್ನನ್ನು ಬೀಳ್ಕೊಡಲು ಬಂದಿದ್ದ ನಾಡಜನತೆಗೆ ಕಡೆಯ ನಮಸ್ಕಾರ ಮಾಡಿದ. ಎಂದೆಂದಿಗೂ ಮರಳಿ ಬರದಂತೆ ಇಂದಾತ ಹೊರಟಿದ್ದ. ಬಿಳ್ಕೋಡುವ ಮುನ್ನ ಅವನು ಬಗ್ಗಿ ನೆಲ ಮುಟ್ಟಿ ತನ್ನ ತಾಯ್ನಾಡಿನ ಒಂದು ಹಿಡಿ ಮಣ್ಣನ್ನು ತನ್ನೊಡನೆ ಕಟ್ಟಿಕೊಂಡ ಎಂದೆಂದಿಗೂ ಜೊತೆಗಿರಲೆಂದು. ತಾಯ್ನೆಲದ ಮಣ್ಣಿಗಿಂತ ಮಂಗಳಕರವಾದುದು ಮತ್ತಾವುದು ? ವಾಸುದೇವನನ್ನು ಅರೇಬಿಯಾದ ದಕ್ಷಿಣದ ತುದಿಯಲ್ಲಿರುವ ಏಡನಿನ್ನಲಿಟ್ಟರು.

ಏಡನಿನ್ನ ನರಕವಾಸ :

ಏಡನ್ ! ವಾಸುದೇವನ ಪಾಲಿಗೆ ಅದೊಂದು ನರಕ! ಹುಟ್ಟಿ ಬೆಳದದ ಹಳ್ಳೀ ಶಿರಢೋಣ ಎಲ್ಲಿ? ಕಂಡರಿಯದ ಆ ಏಡನ್ ಎಲ್ಲಿ? ಸಾವಿರಾರು ಮೈಲಿ ದೂರದ ಸಮುದ್ರದಾಚೆ. ಮರಳುಗಾಡಿನಲ್ಲಿ ಕಾವಲುಗಾರರ ಕೈದಿಯಲ್ಲಿ. ಕತ್ತಲೆಯ ಕೋಣೆಯೊಂದರಲ್ಲಿ ಒಬ್ಬಂಟಿಗ. ಬಲೆಯೊಳಗೆ ಬಿದ್ದಿರುವ ಪುರುಷ ಸಿಂಹನ ಮೇಲೆ ಇಂಗ್ಲೀಷರ ಸೇಡು ತೀರಿಸಿದ್ದರು. ಅದೆಷ್ಟು ಚಿತ್ರಹಿಂಸೆ! ನಾಡಿಗಾಗಿ ಹೋರಾಡಿದ್ದು, ದೊಡ್ಡ ಅಪರಾಧವಾಗಿತ್ತು.

ರಾಜದ್ರೋಹದ ಅರೊಫಕ್ಕೆ ಗುರಿಯಾಗಿ ಜೀವಾವಧಿ ಶಿಕ್ಷೆಯನ್ನು ತಲೆಯ ಮೇಲೆ ಹೊತ್ತು ಏಡನ್ನಿನ ತುರಂಗಕ್ಕೆ ಬಂದವರಲ್ಲಿ ಮೊದಲನೆಯ ಕೈದಿ  ವಾಸುದೇವ. ಅಂತಹ ಕೈದಿಗಳು ಮುಂಜಾನೆಯಿಂದ ಸಂಝೆಯವರೆಗೆ ಮೈಮುರಿಯಗವಂತಹ ಕೆಲಸ ಮಾಡಬೇಕಾಗುತ್ತಿತ್ತು. ಎಣ್ಣೆಯ ಗಾಣ-ಬೀಸುವ ಕಲ್ಲುಗಳು   ಈ ಕೈದಿಗಳೀಗೆ ಕಾದಿರುತ್ತಿದ್ದವು.  ಹೆಜ್ಜೆ ಹೆಜ್ಜೆಗೆ ಅಪಮಾನ- ಚಿತ್ರಹಿಂಸೆಗಳಿಗೆ ಈಡಾಗಬೇಕಾಗುತ್ತಿತ್ತು. ಕೂಲಿಯ ಆಳಿಗಿಂತಲೂ ಕಡೆಯಾಗಿ ವಾಸುದೇವ ಬಲವಂತನು ಆ ಸೆರೆಯಲ್ಲಿ ಸವೆಯಲಾರಂಭಿಸಿದನು. ಎಳ್ಳು ಹಾಕಿದ ಗಾಣಕ್ಕೆ ಎತ್ತಿನಂತೆ ಕಟ್ಟಿ ತಿರುಗಿಸುವರು ಬೆಳಿಗ್ಗೆಯಿಂದ ಸಂಜೆಯವರೆಗೆ: ಬಳಲಿ ಬಾಯಾರಿಕೆಯಾಗಿ ನೀರು ಬೇಕೆಂದರೆ ತೊಲಿನ ಚೀಳದಲ್ಲಿ ಕುಡಿಯಲು ಕೊಡುತ್ತಿದ್ದರು. -ಕೊಳಚೆಯ ನೀರನ್ನು, ಭಾರತವೀರನ ದೇಶಭಕ್ತಿಗೆ ಇಂಗ್ಲೇಂಡ ಕೊಟ್ಟ ಕಾಣೀಕೆ- ಏಡನ್ ಸೆರೆಮನೆ.

ಏಡನಿಗೆ ಬಂದು ಏಳೆಂಟು ತಿಂಳಾಗಿತ್ತು. ಸೆರೆಯವಾಸ ಅಸಹ್ಯವಾಗಿತ್ತು. ಈ ನರಕದಲ್ಲಿ ಕೋಳೆತು ಸಾಯುವುದಕ್ಕಿಂತ ಓಡಿ ಹೋಗಬಾರದೇಕೆ ಎನ್ನುವ ವಿಚಾರ ತಲೆಯಲ್ಲಿ ಸುಳಿಯಿತು. ಒಂದು ವೇಳೆ ಸಿಕ್ಕಿ ಬಿದ್ದು ಸತ್ತರೂ, ಈ ನರಕವಾಸಕ್ಕಿಂತ ಅದೇ ಉತ್ತಮ. ಜೈಲಿನಿಂದ ಪರಾರಿಯಾಗುವ ಹಂಚಿಕೆ ಹಾಕತೊಡಗಿದ.

ಪಂಜರದಿಂದ ಪರಾರಿ:

೧೮೮೦ರ ಅಕ್ಟೋಬರ ೧೨ನೆಯ ದಿನ, ಮಂಗಳವಾರ ಸಾಯಂಕಾಲದ ಹೊತ್ತು. ಎಂದಿನಂತೆ ಬೆನ್ನು ಮುರಿಯುವಂತೆ ದುಡಿದ ನಂತರ ದಣಿದಿದ್ದ ಈ ಕೈದಿಯನ್ನು ಜೈಲಿನಲ್ಲಿ ಸೆರೆಹಾಕಿ ಕಾವಲುಗಾರರು ತೆರಳಿದ್ದರು. ಕತ್ತಲು ಕವಿಯುವುದನ್ನೇ ಈ ಕೈದಿ ಕಾಯುತ್ತಿದ್ದನು. ಮೈಯೆಲ್ಲಾ ದಣಿದು ದಂಟಾಗಿತ್ತು. ಆದರೆ ಮನಸ್ಸಿನ ಸಂಕಲ್ಪ ಅಚಲವಾಗಿತ್ತು. ದೇಶದ ನೆನಪಾಯಿತು.  ದೇವರ ಸ್ಮರಣೆ ಮಾಡಿದ. ಮೈಮೇಲಿನ ಕೈದಿಯ ವೇಷ ಬದಲಾಯಿಸಿದನು. ದಿನವಿಡೀ ಶಕ್ತಿ ಬತ್ತಿಹೋಗುವಂತೆ ದುಡಿದಿದ್ದವನು, ಕೊಠಡಿಯ ಬಾಗಿಲುಗಳನ್ನು ಬುಡಸಹಿತ ಎತ್ತಿ ಕಿತ್ತಿದ! ಆ ಬಾಗಿಗಳನ್ನೇ  ಗೋಡೆಯ ಏರುವ ಏಣಿಯಾಗಿಸಿದನು, ಕಾವಲುಗಾರರು ಮಲಗಿದ ಸಂಧಿ ಸಾಧಿಸಿ  ಸೆರೆಮನೆಯ ಗೋಡೆಯನ್ನು ಧುಮುಕಿ ಓಟಕ್ಕಿತ್ತನು. ಪಂಜರದಲ್ಲಿನ ಸಿಂಹ ಪರಾರಿಯಾಯಿತು !

 

ಕೊಠಡಿಯ ಬಾಗಿಲನ್ನು ಬುಡಸಮೇತ ಎತ್ತಿ ಕಿತ್ತಿದನು

ಇಡೀ ರಾತ್ರಿ ೧೨ ಮೈಲಿ ಒಂದೇ ಸಮನೆ ಓಡಿದನು. ಆದರೆ ಎಲ್ಲಿಗೆ ಓಡುವುದು? ಒಂದು ಕಡೆ ಅಗಾಧ ಸಮುದ್ರ, ಮತ್ತೊಂದು ಕಡೆ ಮರಳುಗಾಡು. ಗೊತ್ತಿಲ್ಲದ ದೇಶ, ಬಾರದ ಭಾಷೆ. ದಾರಿ ಗೊತ್ತಿಲ್ಲ, ದಿಕ್ಕು ಗೊತ್ತಿಲ್ಲ. ಹೇಗಾದರೂ ಸಮುದ್ರ ದಂಡೆಯನ್ನು ಮುಟ್ಟುವುದೆಂದು ಓಡುತ್ತಿದ್ದ.

ಇತ್ತ ಸೆರೆಮನೆಯಲ್ಲಿ ಈ ಪ್ರಚಂಡ ಕೈದಿ ಓಡಿ ಹೋಗಿರುವುದು ಗೊತ್ತಾಗುತ್ತಲೇ ದೊಡ್ಡ ಕೋಲಾಹಲವೆದ್ದಿತ್ತು. ಜೈಲು ಅಧಿಕಾರಿಗಳು ಗಡಗಡನೆ ನಡುಗಿದರು. ಪ್ರಮುಖ ಅಧಿಕಾರಿಯಾದ ಡಾ. ಕೋಲ್ಸನ್ ಕೈದಿಯನ್ನು ಹುಡುಕಲೆಂದು ಕುದುರೆ ಸವಾರರನ್ನು ಅಟ್ಟಿದನು. ಏಡನಿನಲ್ಲಿ ಎಲ್ಲರ ಮನೆಯ ಝಡತಿಯಾಯಿತು. ಹಿಡಿದುಕೊಟ್ಟವರಿಗೆ ಇನ್ನೂರು ರೂಪಾಯಿ ಬಹುಮಾನ ಕೊಡುವುದಾಗಿ ಸಾರಿದ್ದಾಯಿತು. ಬಹುಮಾನದ ಆಸೆಯಿಂದ ಅರಬ್ ಜನರು ಕುದುರೆ ಹತ್ತಿ ನಾಲ್ಕು ಕಡೆಗೆ ವಾಸುದೆವ ಬಲವಂತನ ಬೇಟೆಗೆ ಹೊರಟರು.

ದುರ್ದೈವ ವಾಸುದೇವನ ಬೆನ್ನು ಬಿಟ್ಟಿರಲಿಲ್ಲ. ಹಸಿವೆ ಹೊಟ್ಟೆಯಿಂದ ಹನಿ ನೀರು ಸಹ ಕುಡಿಯದೇ ಓಡಿ ಓಡಿ ಬಂದು ಬೆಂಡಾಗಿದ್ದ ವಾಸುದೇವನನ್ನು ಈ ಅರಬ್ ಸವಾರರ ಎಡನಿನಿಂದ ೧೨ ಮೈಲಿ ದೂರದಲ್ಲಿರುವ ಬೀರ ಓಬೆದ್ ಎನ್ನುವ ಹಳ್ಳಿಯ ಬಡಿ ಹಿಡಿದೇ ಬಿಟ್ಟರು. ಬಹುಮಾನಕ್ಕಾಗಿ ಬಾಯಿ ಬಿಟ್ಟು ಇಂಗ್ಲೀಷರಿಗೆ ಒಪ್ಪಿಸಿದರು.

ಮತ್ತೇ ಎಡನ್ :

ಮಾರನೆಯ ಸಾಯಂಕಾಲದ ಹೊತ್ತಿಗೆ ಆತನನ್ನು ಮತ್ತೇ ಹಿಡಿದು ಏಡನಿಗೆ ತಂದರು. ಕೈಕಾಲಿಗೆ ದಪ್ಪನಾದ ಬೇಡಿ ಹಾಕಿ ಕೂಡಿಹಾಕಿದರು. ಓಡಿ ಹೋದ ಅಪರಾಧಕ್ಕಾಗಿ ಮತ್ತೊಂದು ವಿಚಾರಣೇ ನಡೆಸಿದರು. ಇನ್ನೊಮ್ಮೆ ತಪ್ಪಿಸಿಕೊಳ್ಳದಿರಲೆಂದು ಯಮಯಾತನೆ ಕೊಟ್ಟರು. ಜೀವವೇ ಬೇಡವಾಯಿತು. ಇನ್ನು ಬದುಕಿ ಫಲವೇನು ಎಂದು ವಾಸುದೇವ ಅನ್ನತ್ಯಾಗ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲೆತ್ನಿಸಿದನು.

ಆದರೆ ಆ ನರಕದಲ್ಲಿ ಸಹ ಸ್ನೇಹದ ನುಡಿಯೊಂದಿತ್ತು.

ಡಾ|| ಮನೋಹರ ಪಂತ ಬರ್ವೆ ಎನ್ನುವವರು ಆ ಎಡನ್ ತುರಂಗದ ಅರೋಗ್ಯಾಧಿಕಾರಿಗಳಾಗಿದ್ದರು. ಅವರೂ ಭಾರತೀಯರು. ವಾಸುದೇವ ಬಲವಂತನು ದರೋಡೆಕೋರನಲ್ಲ, ದಂಗೆಕೋರನಲ್ಲ, ಅವನೊಬ್ಬ ದೇವಭಕ್ತರ ಮಕಟಮಣಿ ಎನ್ನುವುದನ್ನು ಅರಿತವರು. ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಅವರು ಇವರ ಆತ್ಮಹತ್ಯೆಯ ವಿಚಾರವನ್ನು ತಡೆದರು. ಸಮಾಧಾನ ಹೇಳಿ ಸೌಲಭ್ಯ  ಒದಗಿಸುವ ಪ್ರಯತ್ನ ಮಾಡಿದರು. ಆದರೆ ಅದೆಷ್ಟು ದಿನ ಯಾತನೆಯನ್ನು ಸಹಿಸಲಾದೀತು?

ಶಾಂತವಾದ ಜ್ವಾಲಮುಖಿ:

ಆತನ ವಜ್ರ ಶರೀರ ಜರ್ಜರವಾಯಿತು. ಶಕ್ತಿ ಅಡಗಿತು. ಕಣ್ಣು ಗುಳಿಬಿದ್ದವು. ಶರೀರ ಅಸ್ಥಿ ಪಂಜವಾಯಿತು. ಮೂರು ವರ್ಷದ ಎಡನ್ ವಾಸ ಮೂವತ್ತೆಂಟು ವಯಸ್ಸಿನ ಸಾಹಸಿಗೆ ಮುಪ್ಪು ತಂದಿತು. ಆ ಮಹಾನ್ ಕ್ರಾಂತಿಕಾರಿಯ ದಿವ್ಯ ದೇಹಕ್ಕೆ ರಕ್ತಕ್ಷಯ ಹತ್ತಿತ್ತು. ದಿನದಿವೂ ಕೊರಗುತ್ತಾ ಕಡೆಗೆ ೧೮೮೩ನೆಯ ಇಸವಿ ಫೆಬ್ರವರಿ ೧೭ ರಂದು ಸಾಯಂಕಾಲ ೪.೨೦ ಕ್ಕೆ ಶತ್ರು ಶಿಬಿರದಲ್ಲಿಯೇ ಕೊನೆಯುಸಿರೆಳೆದನು. ಧಗಧಗಿಸಿದ ಆ ಜ್ವಾಲಾಮುಖಿ ಶಾಂತವಾಯಿತು. ಆಗ ಇನ್ನೂ ಈ ವೀರನಿಗೆ ಕೇವಲ ೩೮ ವರ್ಷ ವಯಸ್ಸು.

ಉತ್ತರ ಕ್ರೀಯೆ ಮಾಡಲು ಹತ್ತಿರದವರಾರೂ ಇರಲಿಲ್ಲ. ಹಾಜರಿದ್ದ ನಾಡಬಂಧುವೆಂದರೆ ಜೈಲಿನ ಆರೋಗ್ಯಾಧಿಕಾರಿ ಡಾ. ಬರ್ವೆ. ಸಮುದ್ರದ ಮರಳು ದಂಡೆಯ ಮೇಲೆ ವಾಸುದೇವನ ಶರೀರ ಸುಟ್ಟು ಬೂದಿಯಾಯಿತು.

ಗಂಡನಿಗಾಗಿ ಕಾದಿದ್ದ ಸಾಧ್ವಿ :

ಇಂದಲ್ಲ ನಾಳೆ ಗಂಡನ ಭೇಟಿ ಆದೀತು ಎಂದು ಒಂದೇ ಸಮನೆ ಹಾದಿ ಕಾಯುತ್ತ ಕುಳಿತ್ತಿದ್ದ ಗೋಪಿಕಾಬಾಯಿಗೆ ಗಂಡ ತೀರಿಕೊಂಡ ಸುದಿಧ ಮೂರು ದಿನಗಳ ನಂತರ ಬಂದು ಮುಟ್ಟಿತ್ತು. ತಲೆಯ ಮೇಲೆ ಆಕಾಶವೇ ಕಳಚಿದಂತಾಯಿತು. ಕಣ್ಣೀರಿನ ಕಟ್ಟೆ ಒಡೆಯಿತು. ಪತಿಯ ನೆನಪೊಂದೇ ಬದುಕಿನ ಉರುಗೋಲಾಯಿತು.

ಅಂದಿನಿಂದ ಆಕೆಯ ವಾಸಸ್ಥಾನ ಪ್ರತಿಯೊಬ್ಬ ದೇಶಭಕ್ತನ ಯಾತ್ರಸ್ಥಾನವಾಯಿತು! ಮುಂದೊಮ್ಮೆ ಆ ವೀರ ಪತಿನಯ್ನು ಕಂಡು ಚರಣಸ್ಪರ್ಶ ಮಾಡುತ್ತಾ, ಪ್ರಸಿದ್ಧ ಕ್ರಾಂತಿಕಾರಿ ಸ್ವಾತಂತ್ರ್ಯವೀರ ಸಾವರಕರರು “ನಿಮ್ಮ ಪತಿ ಎಂದರೆ ನಾಡಿನ ಸ್ವಾತಂತ್ರ್ಯದ ಸ್ಪೂರ್ತಿ ಸ್ಥಾನ. ಆತನು ಮಡಿದಿದ್ದರೂ ಆತನ ಧ್ಯೇಯವನ್ನು ನಾವು ಸಾಕಾಋಗೊಳಿಸಿಯೇ ತೀರುವೆವು” ಎಂದು ಅಭಿವಚನ ಹೇಳಿದರು. ಆ ಸಾಧ್ವಿಯು ೫೭ ವರ್ಷ ವೈಧವ್ಯದ ಬಾಳ್ವೆ ನಡೆಸಿ ಕಡೆಗೆ ೧೯೪೦ನೆಯ ಫೆಬ್ರವರಿ ೧೯ ರಂದು ಇಹಲೋಕ ಬಿಟ್ಟಳೂ.

ವಾಸುದೇವ ಬಲವಂತನ ನೆನಪು ಮಾತ್ರ ಎಂದೆಂದಿಗೂ ಉಳಿಯಿತು. ನಾಡಿಗಾಗಿ  ಮಡಿದು ಮಣ್ಣಾದ ಹುತಾತ್ಮರ ಸಾಲಿಗೆ ಸೇರಿತು. ಕ್ರಾಂತಿಪರ್ವದ ಪ್ರಥಮ ಪಂಕ್ತಿಯಾಯಿತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು.