ಹಿರೇಹೆಗ್ಡಾಳ್‌ ಗ್ರಾಮವು ಕೂಡ್ಲಿಗಿ ಹೋಬಳಿ / ಫಿರ್ಕಾದ ಗ್ರಾಮಪಂಚಾಯತ್‌ ಆಗಿದೆ. ಹಿರೇಹೆಗ್ಡಾಳ್‌ ಗ್ರಾಮಕ್ಕೆ ಆ ಹೆಸರು ಹೇಗೆ ಬಂತೆಂದು ಊರ ಹಿರಿಯರೂ ಸುಮಾರು ೧೨ ವರ್ಷಗಳ ಕಾಲ ಪಂಚಾಯಿತಿ ಆಧ್ಯಕ್ಷರು ಆಗಿದ್ದ ಶ್ರೀ ಶೆಟ್ರಗುರುಸಿದ್ಧಪ್ಪ ಹೇಳುವಂತೆ ಹೆಗ್ಗಡೆ ಅಂದರೆ ದೊಡ್ಡ ‘ಗಡಿ’ ಎಂದರ್ಥ. ಇದು ಹಿಂದೆ ಜರಿಮಲೆ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತು. ಕೊಟ್ಟೂರು ಗುರುಬಸವಸ್ವಾಮಿ ಅಥವಾ ಕೊಟ್ಟೂರೇಶ್ವರ, ಹಿರೇಹೆಗ್ಡಾಳ್‌, ಕೆಂಪಯ್ಯ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ತೂಲಹಳ್ಳಿ ಗೋಣಿಬಸವೇಶ್ವರ ಮತ್ತು ಕೋಲ್‌ಶಾಂತಸ್ವಾಮಿ ಎಂಬ ಐದು ಮಂದಿ ಶರಣರು ಶಿವನ ಅನುಗ್ರದಿಂದ ಹುಟ್ಟಿದವರು ಎಂದು ಪ್ರತೀತಿ. ಹಿರೇಹೆಗ್ಡಾಳ್‌ನ ಕೆಂಪಯ್ಯ, ಗುಡಿಯ ಪಕ್ಕದ ಕೆರೆಯಲ್ಲಿ ವರ್ಷಕ್ಕೊಮ್ಮೆ ಕೆಂದಾವರೆ ಆರಳುತ್ತಿತ್ತು. ಇದನ್ನು ಕೆಂಪಯ್ಯ, ಗುಂಡಿ ಎನ್ನುತ್ತಾರೆ. ಇದು ಕೆಂಪಯ್ಯ, ದೇವರ ಮಾಹಾತ್ಮ್ಯೆಯಾಗಿದೆ. ಆದರೆ ಇತ್ತೀಚೆಗೆ ಹೂವು ಅರಳುವುದು ನಿಂತುಹೋಗಿದೆ ಎನ್ನುತ್ತಾರೆ ಸ್ಥಳೀಯರು.

ಹಿರೇಹೆಗ್ಡಾಳ್‌ ಗ್ರಾಮವು ಕೂಡ್ಲಿಗಿ ಪೇಟೆಯಿಂದ ಪಶ್ಚಿಮಕ್ಕೆ ಸುಮಾರು ಒಂಭತ್ತು ಕಿಲೋಮೀಟರ್ ದೂರದಲ್ಲಿದೆ. ಪೂರ್ವಕ್ಕೆ ಕೂಡ್ಲಿಗಿ, ಪಶ್ಚಿಮದಲ್ಲಿ ಹನಸಿ (ಹಗರಿಬೊಮ್ಮನಹಳ್ಳಿ ತಾಲ್ಲೂಕು), ಉತ್ತರಕ್ಕೆ ಜಂಗಮ ಸೋಮೇನ ಹಳ್ಳಿ (ಶಿವಪುರ ಗ್ರಾಮಪಂಚಾಯತ್‌ ) ಮತ್ತು ದಕ್ಷಿಣದಲ್ಲಿ ಬತ್ತನಹಳ್ಳಿ (ಕಂದಲ್ ಗ್ರಾಮಪಂಚಾಯತ್‌ ) ಇವು ಹಿರೇಹೆಗ್ಡಾಳ್‌ ಗ್ರಾಮ ಪಂಚಾಯತಿಯ ಮೇರೆಗಳಾಗಿವೆ. ಈ ಗ್ರಾಮಪಂಚಾಯತಿಯಲ್ಲಿ ಎರಡು ರೆವೆನ್ಯೂ ಗ್ರಾಮಗಳಿವೆ. ಅವುಗಳು ಹಿರೇಹೆಗ್ಡಾಳ್‌ ಮತ್ತು ಬೊಪ್ಪಲಾಪುರ. ಹಾಗೆಯೇ ಇನ್ನೆರೆಡು ಸಣ್ಣ ಹಳ್ಳಿಗಳಿವೆ. ಅವುಗಳು ಸಾಸಲವಾಡ ಮತ್ತು ಸಾಣೇಹಳ್ಳಿ. ಇದರಲ್ಲಿ ಸಾಸಲವಾಡ, ಹಿರೇಹೆಗ್ಡಾಳ್‌ ರೆವಿನ್ಯೂ ಗ್ರಾಮ ವ್ಯಾಪ್ತಿಗೂ, ಸಾಣೇಹಳ್ಳಿ, ಬೊಪ್ಪಲಾಪುರ ರೆವೆನ್ಯೂ ಗ್ರಾಮವ್ಯಾಪ್ತಿಗೆ ಸೇರರ್ಪಡೆಯಾಗಿವೆ. ಹೀಗೆ ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ ೨ ರೆವೆನ್ಯೂ ಗ್ರಾಮಗಳಿದ್ದು ಒಟ್ಟು ೪ ಹಳ್ಳಿಗಳಿವೆ. ಅವುಗಳು ಅನುಕ್ರಮವಾಗಿ ಹಿರೇಹೆಗ್ಡಾಳ್‌ ಸಾಸಲವಾಡ, ಬೊಪ್ಪಲಾಪುರ ಮತ್ತು ಸಾಣೇಹಳ್ಳಿ.

ಈ ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ನದಿ ಹರಿಯುವುದಿಲ್ಲ. ಇಲ್ಲಿ ಹಿರೇಹೆಗ್ಡಾಳ್‌ ಕೆರೆ, ಸಾಸಲವಾಡ ಕೆರೆ ಮತ್ತು ಬೊಪ್ಪಲಾಪುರ ಕೆರೆ ಎಂಬ ಮೂರು ಕೆರೆಗಳಿವೆ. ಹಿರೇಹೆಗ್ಡಾಳ್‌ ಮತ್ತು ಸಾಸಲವಾಡ ಕೆರೆಗಳು ದೊಡ್ದದಾಗಿದ್ದು ಇವೆರಡೂ ಸುಮಾರು ೨೩೯ ಹೇಕ್ಟೇರು ಜಲಾವೃತ ಪ್ರದೇಶದ ವ್ಯಾಪ್ತಿಯನ್ನೊಳಗೊಂಡಿದೆ. ಇವು ಹಳೆಯ ಕೆರೆಗಳಾಗಿವೆ. ಬೊಪ್ಪಲಾಪುರದಲ್ಲಿ ಒಂದು ಚಿಕ್ಕ ಕೆರೆ ಇದ್ದು ಅದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತಿಹೋಗುವುದು. ೧೦೦ ಎಕರೆ ಅಥವಾ ೪೦ ಹೆಕ್ಟೇರ್ಗಿಂತ ಕಡಿಮೆ ಜಲಾವೃತ ಪ್ರದೇಶದ ಕೆರೆಯು ಜಿಲ್ಲಾಪಂಚಾಯತ್‌ ಅಧಿಕಾರ ವ್ಯಾಪ್ತಿಗೆ ಒಳಪಟ್ಟರೆ ಇದಕ್ಕಿಂತ ಹೆಚ್ಚು ವಿಸ್ತಾರವಾದ ಕೆರೆಯು ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿಯ ಹವಾಮಾನವು ಹೆಚ್ಚಾಗಿ ಬಿಸಿಲಬೇಗೆಯಿಂದ ಕೂಡಿರುತ್ತದೆ. ಜೂನ್‌ನಿಂದ ಸೆಪ್ಟಂಬರ್ ವರೆಗೆ ಮಳೆಗಾಲ, ಅಕ್ಟೋಬರ್ ನಿಂದ ಜನವರಿ ತನಕ ಚಳಿಗಾಲವಾಗಿದ್ದು ಜನವರಿಯಿಂದ ಜೂನ್‌ವರೆಗೆ ಬೇಸಿಗೆಯಾಗಿರುತ್ತದೆ. ಹವಾಗುಣವು ಶುಷ್ಕವಾಗಿದ್ದು ಭೂಮಿಯು ಕೆಂಪು ಮತ್ತು ಕಪ್ಪು ಮಣ್ಣುಗಳಿಂದ ಕೂಡಿದೆ.

ಹಿಂದೂಗಳೇ ಇಲ್ಲಿನ ಪ್ರಮುಖ ಜನಸಮುದಾಯ. ಇವರಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಮರ ಐದು ಮನೆಗಳಿವೆ. ೧೯೯೧ ರ ಜನಗಣತಿಯ ವರದಿಯಂತೆ ಇಲ್ಲಿನ ಒಟ್ಟು ಜನಸಂಖ್ಯೆ ೩೭೫೬ ಆಗಿದೆ. ಇದರಲ್ಲಿ ಶೇ. ೫೪ ರಷ್ಟು ಲಿಂಗಾಯಿತರಿದ್ದಾರೆ. ಪರಿಶಿಷ್ಟ ಜಾತಿಯು ಎರಡನೇ ಪ್ರಮುಖ ಜನಸಮುದಾಯವಾಗಿದೆ. ನಂತರ ಕುರುಬರು, ವಾಲ್ಮೀಕಿ, ಉಪ್ಪಾರರು, ಬಾರಿಕರು, ಅಕ್ಕಸಾಲಿಗ, ಅಗಸ ಮತ್ತು ಕುಂಬಾರರು ಹಾಗೂ ಒಂದು ಬ್ರಾಹ್ಮಣರ ಮನೆ ಇದೆ ಈ ಗ್ರಾಮದಲ್ಲಿ. ಈ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು ೮೦೪ ಮನೆಗಳಿವೆ. ಇವೆಲ್ಲವುಗಳಿಂದ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿ ಒಟ್ಟು ೮ ಗುಡಿಗಳಿವೆ. ಊರ ಮುಂದಿನ ಈಶ್ವರ ದೇವಾಲಯ ಹಾಗೂ ಇತರ ೭ ಗುಡಿಗಳಿವೆ. ಒಂದು ಮುಸಲ್ಮಾನರ ಮಸೀದಿ ಇದೆ. ಹಿರೇಹೆಗ್ಡಾಳ್‌ನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆವರೆಗಿನ ಶಿಕ್ಷಣದ ವ್ಯವಸ್ಥೆ ಇದೆ.

ಪರಿಶಿಷ್ಟ ಜಾತಿಯವರಲ್ಲಿ ಇತರೆಡೆ ಹೇಗೆ ಹಲವಾರು ಉಪಜಾತಿಗಳಿವೆಯೋ ಹಾಗೆಯೇ ಇಲ್ಲಿ ಕೂಡಾ ಇವೆ. ಇವರಲ್ಲಿ ೧೫ ಆದಿ ದ್ರಾವಿಡ ಮನೆಗಳಿದ್ದರೆ ಸುಮಾರು ೧೦೦ ಆದಿಕರ್ನಾಟಕ ಉಪಜಾತಿಯ ಮನೆಗಳಿವೆ. ಸಾಣೇಹಳ್ಳಿಯಲ್ಲಿ ಪೂರ್ತಿಬೋವಿ (ಪರಿಶಿಷ್ಟ ಜಾತಿ) ಸಮುದಾಯದ ೫೮ ಮನೆಗಳಿವೆ. ಹೀಗೆ ಜನಸಮುದಾಯವನ್ನು ಗಣನೆಗೆ ತೆಗೆದುಕೊಂಡರೆ ವಿವಿಧ ಜಾತಿ ವರ್ಗಗಳು ನೆಲೆಸಿರುವುದನ್ನು ಕಾಣಬಹುದು. ಹಾಗೆಯೇ ಪರಿಶಿಷ್ಟ ಜಾತಿಗಳಲ್ಲಿ ಒಳ ಪಂಗಡಗಳಿರುವುದನ್ನು ಕಾಣಬಹುದು.

ಹಿರೇಹೆಗ್ಡಾಳ್‌ ಗ್ರಾಮ ಪಂಚಾಯತಿಯು ಒಟ್ಟು ನಾಲ್ಕು ಗ್ರಾಮ ಅಥವಾ ಹಳ್ಳಿಗಳನ್ನು ಒಳಗೊಂಡಿರುವುದರಿಂದ ಇವುಗಳ ಗ್ರಾಮವಾರು ಜನಸಮುದಾಯ ವ್ಯವಸ್ಥೆಯನ್ನು ವಿಶ್ಲೇಷಿಸುವುದು ನಮ್ಮ ಅಧ್ಯಯನಕ್ಕೆ ಅನುಕೂಲಕರವಾಗಿದೆ.

ಗ್ರಾಮ ಪಂಚಾಯತಿಯ ಕೆಂದ್ರ ಕಚೇರಿ ಇರುವ ಹಿರೇಹೆಗ್ಡಾಳ್‌‌ನಲ್ಲಿ ಲಿಂಗಾಯಿತರು, ನಂತರ ಪರಿಶಿಷ್ಟ ಜಾತಿ ಹಾಗೂ ವಾಲ್ಮೀಕಿಯವರು ಪ್ರಬಲರಾಗಿದ್ದಾರೆ. ಬೊಪ್ಪಲಾಪುರದಲ್ಲಿ ಲಿಂಗಾಯಿತ, ಕುರುಬ ಹಾಗೂ ವಾಲ್ಮೀಕಿಯವರು ಪ್ರಮುಖರಾಗಿದ್ದಾರೆ. ಸಾಸಲವಾಡದಲ್ಲಿ ಲಿಂಗಾಯಿತ, ಪರಿಶಿಷ್ಟ ಜಾತಿ ಹಾಗೂ ಉಪ್ಪಾರರು ಪ್ರಬಲರಾದರೆ ಸಾಣೇಹಳ್ಳಿಯಲ್ಲಿ ಕೇವಲ ಬೋವಿ ಜನರಿದ್ದಾರೆ. ಹೀಗೆ ಸಾಣೇಹಳ್ಳಿಯನ್ನು ಹೊರತುಪಡಿಸಿದರೆ ಉಳಿದೆಲ್ಲ ಗ್ರಾಮಗಳಲ್ಲೂ ಲಿಂಗಾಯಿತರ ಸಂಖ್ಯಾತ್ಮಕವಾಗಿ ಪ್ರಬಲರಾಗಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ, ಕುರುಬರು, ವಾಲ್ಮೀಕಿ ಮತ್ತು ಉಪ್ಪಾರರು ಸಂಖ್ಯಾತ್ಮಕವಾಗಿ ಮುಂದಿದ್ದಾರೆ. ಜನಸಂಖ್ಯೆ ಹಾಗೂ ಜಾತಿವಾರು ಮನೆಗಳ ಸಂಖ್ಯೆಗಳನ್ನು ಕೋಷ್ಟಕ ೧ ಮತ್ತು ೨ರಲ್ಲಿ ಕಾಣಬಹುದು. ಹಿರೇಹೆಗ್ಡಾಳ್‌ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್‌ವರೆಗೆ ಶಿಕ್ಷಣ ವ್ಯವಸ್ಥೆ ಇದ್ದರೆ, ಬೊಪ್ಪಲಾಪುರದಲ್ಲಿ ಒಂದರಿಂದ ಆರನೇ ತರಗತಿವರೆಗೆ ಮಾತ್ರ ಇದೆ. ಸಾಣೇಹಳ್ಳಿಯಲ್ಲಿ ಒಂದರಿಂದ ಐದನೆಯ ತರಗತಿವರೆಗೆ ಶಾಲಾ ವ್ಯವಸ್ಥೆ ಇದ್ದರೆ ಸಾಸಲವಾಡದಲ್ಲಿ ಒಂದರಿಂದ ಏಳನೆಯ ತರಗತಿವರೆಗಿನ ಶಿಕ್ಷಣ ವ್ಯವಸ್ಥೆ ಇದೆ.

ಆರ್ಥಿಕ ಜೀವನ :- ಹಿರೇಹೆಗ್ಡಾಳ್‌‌ ಗ್ರಾಮ ಪಂಚಾಯತಿಯ ಅರ್ಥಿಕ ಜೀವನವನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಯಾವುದೇ ಹಿಂದುಳಿದ ಹಳ್ಳಿಯಲ್ಲಿ ಕಂಡುಬರುವ ಗುಣಲಕ್ಷಣಗಳನ್ನು ಇಲ್ಲೂ ಕಾಣಬಹುದು. ದೇಶದ ಇಂದಿನ ಹಳ್ಳಿಗಳನ್ನು ಅವಲೋಕಿಸಿದಾಗ ಹೆಚ್ಚಾಗಿ ಅದು ಸ್ಥಿತ್ಯಂತರದ ಆದಿಯಲ್ಲಿರುವುದು ಕಂಡುಬರುತ್ತದೆ. ಸಾಂಪ್ರದಾಯಿಕವಾಗಿ ಹೆಚ್ಚಿನ ಹಳ್ಳಿಗಳು ಕೃಷಿ ಪ್ರಧಾನ ವ್ಯವಸ್ಥೆಯನ್ನು ಹೊಂದಿರುತ್ತವೆ; ಆದರೂ ತದನಂತರ ಅದು ಕೈಗಾರಿಕೆಯತ್ತ ಹೆಜ್ಜೆಹಾಕುತ್ತಿವೆ. ಹೀಗೆ ಕೃಷಿಯಿಂದ ಕೈಗಾರಿಕೆ, ಕೈಗಾರಿಕೆಯಿಂದ ಸೇವಾರಂಗಕ್ಕೆ ಆರ್ಥಿಕತೆಯು ಚಲಿಸುತ್ತಿರುತ್ತದೆ. ಹೀಗೆ ಕ್ರಮೇಣ ಹಳ್ಳಿಗಳು ಸ್ಥಿತ್ಯಂತರವನ್ನು ಹೊಂದುತ್ತಲಿರುತ್ತವೆ. ಅಥವಾ ಆರ್ಥಿಕತೆಯು ಏಕಮುಖವಾಗಿ ಅಥವಾ ವಿಮುಖವಾಗಿ ಬದಲಾವಣಾ ಪ್ರಕ್ರಿಯೆಗೆ ಒಳಗಾಗುತ್ತದೆ. ಇವನ್ನು ಹೊರತುಪಡಿಸಿದರೆ ಕೆಲವು ಹಳ್ಳಿಗಳು ಅಥವಾ ಅಲ್ಲಿನ ಆರ್ಥಿಕತೆಯು ಯಾವುದೇ ಸ್ಥಿತ್ಯಂತರಕ್ಕೆ ಒಳಗಾಗದೆ ಇರುವ ಸ್ಥಿತಿಯಲ್ಲಿಯೇ – ಅಂದರೆ ಕೃಷಿ ಪ್ರಧಾನ ವ್ಯವಸ್ಥೆಯಲ್ಲೇ – ತಟಸ್ಥವಾಗಿರುವುದು ಕಂಡುಬರುವುದು. ಇತ್ತೀಚಿನ ಜಾಗತೀಕರಣ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಈ ರೀತಿ ಇರುವುದು ತೀರಾ ವಿರಳ ಎನಿಸಿದರೂ ಹಿರೇಹೆಗ್ಡಾಳ್‌‌ ಗ್ರಾಮ ಪಂಚಾಯತ್‌ ಈ ವರ್ಣನೆಗೆ ಒಗ್ಗುತ್ತದೆ.

ಇದಕ್ಕೆ ಮುಖ್ಯ ಕಾರಣ ಅಲ್ಲಿನ ಆರ್ಥಿಕ ವ್ಯವಸ್ಥೆ ಅಥವಾ ಆರ್ಥಿಕ ಜೀವನ ಮತ್ತು ಅದರ ಏರುಪೇರುಗಳ ಮಟ್ಟ ಸಾಮಾನ್ಯವಾಗಿ ಯಾವುದೇ ಒಂದು ಹಳ್ಳಿಯ ಅಥವಾ ಪಟ್ಟಣದ ಅರ್ಥವ್ಯವಸ್ಥೆಯ ಬದಲಾವಣಾ ಪ್ರಕ್ರಿಯೆಗೆ ಒಳಗಾದರೆ ಹಿರೇಹೆಗ್ಡಾಳ್‌ ಅರ್ಥವ್ಯವಸ್ಥೆ ಒಂದು ತಟಸ್ಥ ಅಥವಾ ಮುಚ್ಚಿದ ವ್ಯವಸ್ಥೆಯ ಮಾದರಿಯನ್ನು ಹೋಲುತ್ತದೆ.

ಹಿರೇಹೆಗ್ಡಾಳ್‌ ಗ್ರಾಮವು ಒಂದು ಕೃಷಿ ಪ್ರಧಾನ ಕ್ರಮವಾಗಿದೆ. ಶೇಂಗಾ, ಹತ್ತಿ, ಭತ್ತ, ಮೆಕ್ಕೆಜೋಳ ಇವು ಇಲ್ಲಿನ ಮುಖ್ಯ ಬೆಳೆಗಳು. ಈ ಗ್ರಾಮದಲ್ಲಿ ಸುಮಾರು ೪೩೨೯.೨೭ ಹೆಕ್ಟೇರುಗಳಷ್ಟು ಸಾಗುವಳಿ ಭೂಮಿ ಇದೆ. ಒಟ್ಟು ೫೯೩.೯೧ ಹೆಕ್ಟೇರುಗಳಷ್ಟು ಭೂಮಿಯು ಕೆರೆ, ಬಾವಿ ಮೂಲಗಳಿಂದ ನೀರಾವರಿಗೊಳಪಟ್ಟಿದೆ. ಕೃಷಿಯನ್ನು ಬಿಟ್ಟರೆ ಕೃಷಿಯಾಧಾರಿತ ಚಟುವಟಿಕೆಗಳಾದ ಎಮ್ಮೆ, ಎತ್ತು ಮತ್ತು ಕುರಿಸಾಕಾಣಿಕೆ ತಕ್ಕ ಪ್ರಮಾಣದಲ್ಲಿ ಇವೆ. ಆದರೆ ಯಾವುದೇ ಗಣಿ ಅಥವಾ ಅರಣ್ಯಾಧಾರಿತ ಆರ್ಥಿಕ ಚಟುವಟಿಕೆಗಳು ಇಲ್ಲಿ ಕಂಡು ಬರುವುದಿಲ್ಲ (ಕೋಷ್ಟಕ -೩). ಸಾಂಪ್ರದಾಯಕವಾಗಿ ಮುಂದುವರಿದುಕೊಂಡು ಬಂದಿರುವ ಕಮ್ಮಾರಿಕೆ ಮಾತ್ರ ಇಲ್ಲಿನ ಕೌಶಲ್ಯಾಧಾರಿತ ಕಸಬಾಗಿದೆ. ಒಂದು ಸಬ್‌ಮರ್ಷಿಬಲ್‌ ವೈಂಡಿಂಗ್‌ ಅಂಗಡಿ ಇದೆ. ಇದು ಇಲ್ಲಿನ ಆರ್ಥಿಕ ಜೀವನದ ವಿವರ. ಇದರಿಂದ ಇಲ್ಲಿನ ಆರ್ಥಿಕ ಮಟ್ಟ ಹೇಗಿರಬಹುದೆಂದು ನಾವು ಊಹಿಸಬಹುದು.

ಭೂಹಿಡುವಳಿ :- ಕೃಷಿ ಅರ್ಥವ್ಯಸ್ಥೆಯಲ್ಲಿ ಕೃಷಿ ಭೂಮಿಯೇ ಸಾಗುವಳಿ ಮೂಲವಾಗಿದೆ. ಅದು ಸಾಮಾನ್ಯ ಕೃಷಿಯಿರಲಿ ಅಥವಾ ವಾಣಿಜ್ಯ ಕೃಷಿಯಿರಲಿ ಭೂ ಹಿಡುವಳಿ ಮತ್ತು ಅದರ ಒಡೆತನಾದ ಸ್ವರೂಪವನ್ನು ಹೊಂದಿಕೊಂಡಿದೆ. ಸಾಮಾನ್ಯವಾಗಿ ಮಲೆನಾಡು ಅತ್ವಾ ಕರಾವಳಿ ಪ್ರದೇಶದಲ್ಲಿರುವಂತೀ ಮೂರು ಬೆಳೆಗಳನ್ನು ಇಲ್ಲಿ ಬೆಳೆಯುವುದಿಲ್ಲ. ಇಲ್ಲ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಮಾಶ್ತ್ರ ಬೆರ್ಲೆಸುತ್ತಾರೆ. ಶೇಂಗಾ, ಹತ್ತಿ, ಭತ್ತ, ಮತ್ತು ಮೆಕ್ಕೆ ಜೋಳ ಮುಂಗಾರು ಬೆಳೆಗಳಾದರೆ ಮೆಕ್ಕೆ ಜೋಳ, ಭತ್ತ ಮತ್ತು ಶೇಂಗಾ ಪ್ರಮುಖ ಹಿಂಗಾರು ಬೆಳೆಗಳಾಗಿವೆ.

ಹಿರೇಹೆಗ್ಡಾಳ್‌‌ನಲ್ಲಿ ೨ ರೆವೆನ್ಯೂ ಗ್ರಾಮಗಳು ಇವೆ. ಅವುಗಳು ಹಿರೇಹೆಗ್ಡಾಳ್‌, ಮತ್ತು ಬೊಪ್ಪಲಾಪುರ (ಸಾಣೇಹಳ್ಳಿ ಮತ್ತು ಸಾಸಲವಾಡ ಹಳ್ಳಿಗಳು ಸೇರಿ). ಕೋಷ್ಟಕ ೪ರಲ್ಲಿ ಭೂ ಹಿಡುವಳಿಯ ಚಿತ್ರಣವನ್ನು ನೀಡಲಾಗಿದೆ. ಸಾಮಾನ್ಯವಾಗಿ ಭೂ ಹಿಡುವಳಿಯನ್ನು ಅತಿ ಸಣ್ಣ, ಸಣ್ಣ, ಆರೆ ಮಧ್ಯಮ ಮತ್ತು ದೊಡ್ಡ ಹಿಡುವಳಿಗಳೆಂದು ವರ್ಗಿಕರಿಸಲಾಗಿದೆ. ಅತಿ ಸಣ್ಣ ಹಿಡುವಳಿಯು ೧ ಹೆಕ್ಟೇರಿಗಿಂತ ಕಡಿಮೆ ಪ್ರದೇಶವನ್ನು ಒಳಗೊಂಡಿರುತ್ತದೆ. ಒಂದು ಹೆಕ್ಟೇರ್ ಭೂಮಿಯು ೨.೪೭೧೧ ಎಕರೆಗಳಿಗೆ ಸಮವಾಗಿದೆ. ಇಲ್ಲಿನ ಪರಿಶಿಷ್ಟ ಜಾತಿಯ ಭೂಹಿಡುವಳಿಗಳನ್ನು ಅವಲೋಕಿಸೋಣ. ಸಾಮಾನ್ಯವಾಗಿ ಅರ್ಧ ಹೆಕ್ಟೇರಿಗಿಂತ ಕಡಿಮೆ ಭೂಮಿಯುಳ್ಳವರು ೬ ಮಂದಿಯಾದರೆ, ಕೇವಲ ೫ ಮಂದಿ ಅರ್ಧ ಹೆಕ್ಟೇರಿನಿಂದ ಒಂದು ಹೆಕ್ಟೇರ್ ಒಳಗಿನ ಭೂಮಿ ಹೊಂದಿರುತ್ತಾರೆ. ಪರಿಶಿಷ್ಟ ವರ್ಗದ ಜನರಲ್ಲಿ ಇದು ಅನುಕ್ರಮವಾಗಿ ೫ ಮತ್ತು ೯. ಆದರೆ ಇತರೆ ವರ್ಗದ ಜನರಲ್ಲಿ ಇದು ಕ್ರಮವಾಗಿ ೧೩೮ ಮತ್ತು ೯೮ ಆಗಿರುತ್ತದೆ. ಇದೆ ಹಿರೇಹೆಗ್ಡಾಳ್‌‌, ಸಾಸಲವಾಡ ಗ್ರಾಮದ ಸ್ಥಿತಿಯಾದರೆ ಬೊಪ್ಪಲಾಪುರ, ಸಾಣೇಹಳ್ಳಿ ಗ್ರಾಮದಲ್ಲಿನ ಪರಿಸ್ಥಿತಿಯನ್ನು ನೋಡೋಣ. ಇಲ್ಲಿ ಇದೇ ವಿಸ್ತೀರ್ಣದ ಹಿಡುವಳಿಯ ಸಂಖ್ಯೆ ಪರಿಶಿಷ್ಟ ಜಾತಿಯವರಲ್ಲಿ ೯ ಮತ್ತು ೧೮ ಆದರೆ ಪರಿಶಿಷ್ಟ ವರ್ಗದವರಲ್ಲಿ ಕ್ರಮವಾಗಿ ೮ ಮತ್ತು ೩ ಆಗಿರುತ್ತದೆ. ಆದರೆ ಇತರ ಜನಗಳ ಹಿಡುವಳಿಗಳ ಸಂಖ್ಯೆ ಕ್ರಮವಾಗಿ ೩೫ ಮತ್ತು ೨೭ ಆಗಿರುತ್ತದೆ. ಇದರಿಂದ ಭೂ ಹಿಡುವಳಿ ವಿವರವನ್ನು ಪರಿಶೀಲಿಸಿದಾಗ ಭೂ ಹಂಚಿಕೆ ಆಥವಾ ಭೂಮಿಯನ್ನು ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ನಿಕೃಷ್ಟಕ್ಕೊಳಗಾಗಿರುವುದನ್ನು ಕಾಣಬಹುದು. ಸಣ್ಣ ಮತ್ತು ಅರೆಮಧ್ಯಮ ಗಾತ್ರದ ಭೂ ಹಿಡುವಳಿಯ ಸಂಖ್ಯೆಯು ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಬೊಪ್ಪಲಾಪುರ ರೆವೆನ್ಯೂ ಗ್ರಾಮದ ಸಾಣೇಹಳ್ಳಿಯಲ್ಲಿರುವ ಎಲ್ಲ ೫೮ ಕುಟುಂಬಗಳು ಪರಿಶಿಷ್ಟ ಜಾತಿಯವರಾಗಿರುವ ಕಾರಣ ಇಲ್ಲಿ ಸಣ್ಣ ಮತ್ತು ಅರೆಮಧ್ಯಮ ಗಾತ್ರದ ಭೂ ಹಿಡುವಳಿಗಳಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿಗೆ ಕಂಡುಬರುತ್ತಾರೆ. ಇನ್ನೊಂದೆಡೆ ಇತರೆ ಜಾತಿಯವರು ಈ ಭೂ ಹಿಡುವಳಿ ಪರಿಮಿತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸಮವಾಗಿಯೆ ಇದ್ದಾರೆ ಎಂಬುದೂ ಅಷ್ಟೇ ಸ್ಪಷ್ಟ. ಹಿರೇಹೆಗ್ಡಾಳ್‌‌ನಲ್ಲಿ ಮಧ್ಯಮ ಮತ್ತು ದೊಡ್ಡ ಗಾತ್ರದ ಭೂಹಿಡುವಳಿ ವರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಕಾಣಲು ಸಾಧ್ಯವಿಲ್ಲ. ಬೊಪ್ಪಲಾಪುರದಲ್ಲಿ ಮಾತ್ರ ನಾವು ಮಧ್ಯಮ ಮಿತಿಯ ಭೂಹಿಡುವಳಿಯನ್ನು ಪರಿಶಿಷ್ಟ ಜಾತಿ ಮತ್ತು ವರ್ಗದಲ್ಲಿ ಕಾಣಬಹುದು. ಹಾಗೇಯೇ ಮಧ್ಯಮ ಗಾತ್ರದ ಭೂಹಿಡುವಳಿದಾರರಲ್ಲಿ ಇತರ ವರ್ಗದವರ ಸಂಖ್ಯೆಯು ಪರಿಶಿಷ್ಟ ಜಾತಿ ವರ್ಗದವರಿಗೆ ಸರಿಸಮವಾಗಿಯೆ ಇದೆ. ಎರಡೂ ಗ್ರಾಮಗಳಲ್ಲಿ ದೊಡ್ಡ ಭೂಹಿಡುವಳಿಯ ಗಾತ್ರದ ಭೂಮಿಯನ್ನು ಹೊಂದಿರುವವರು ಇತರೆ ಜನಗಳು ಮಾತ್ರ. ಇದು ಬಹಳ ಅತಂಕಕಾರಿ ವಿಷಯವಾಗಿದೆ.

ಭೂಹಿಡುವಳಿ ಅಥವಾ ಒಡೆತನಕ್ಕೂ ಬಡತನ ರೇಖೆಗೂ ಸಾಪೇಕ್ಷ ಸಂಬಂಧವಿದೆ. ಹೆಚ್ಚಾಗಿ ಭೂಮಿಯನ್ನು ಹೊಂದಿರುವ ಜನ ಸಮುದಾಯವು ತಮ್ಮ ಕುಟುಂಬದ ಆದಾಯದ ಪರಿಮಿತಿಗೊಳಪಟ್ಟು ಉತ್ತಮವಾಗಿರುವುದು ಕಂಡುಬರುತ್ತದೆ. ಹಾಗೆಯೇ ಕಡಿಮೆ ಮಟ್ಟದ ಭೂಹಿಡುವಳಿಯನ್ನು ಹೊಂದಿದವರು ಬಡತನ ರೇಖೆಗಿಂತ ಕೆಳಗೆ ಜೀವಿಸುವುದನ್ನು ಕಾಣಬಹುದು. ಇದಕ್ಕೆ ಕಾರಣ ಭೂಮಿಗೆ ಅನುಗುಣವಾಗಿ ದೊರೆಯುವ ನೀರಾವರಿ, ಕೃಷಿ ಸಲಕರಣೆಗಳು ಹಾಗೂ ಕೃಷಿ ಭೂಮಿಯನ್ನು ಕೃಷಿ ಮಾಡಿದ ನಂತರ ದೊರೆಯುವ ಫಲ. ಅತಿ ಸಣ್ಣ ಭೂಮಿಯುಳ್ಳ ರೈತರು ಇವನ್ನೆಲ್ಲ ಹೊಂದಿಸಿಕೊಳ್ಳಲು ಪ್ರಯಾಸಪಡಬೇಕಾಗುತ್ತದೆ. ದೊಡ್ದಗಾತ್ರದ ಭೂಮಿ ಹೊಂದಿರುವ ರೈತರು ಕೃಷಿಗೆ ಪೂರಕವಾಗಿ ಹಾಗೂ ಪರ್ಯಾಯವಾಗಿ ಬೇಕಾಗುವ ವ್ಯವಸ್ಥೆಯನ್ನು ಮುಂಚಿತವಾಗಿಯೇ ಹೊಂದಿಸಿಕೊಳ್ಳುವುದರಿಂದ ಅವರಿಗೆ ಸಮಸ್ಯೆಯೇಳದು. ಇಂತಹ ಸಂದರ್ಭದಲ್ಲಿ ಅತಿ ಸಣ್ಣ ಭೂಮಿ ಹೊಂದಿರುವವರು ಶ್ರಮ ವಿಭಜನೆ ಅಥವಾ ವಿನಿಮಯದ ರೀತಿಯಲ್ಲಿ ಮಧ್ಯಮ ಹಾಗೂ ದೊಡ್ಡ ಭೂಮಿತಿ ಹೊಂದಿದ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೃಷಿಯನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಕೂಲಿ ಕೆಲಸವನ್ನು ಮಾಡಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾರೆ ಈ ಗ್ರಾಮವು ಕೃಷಿ ಅಥವಾ ಪ್ರಾಥಮಿಕ ವಲಯವನ್ನು ಹೊಂದಿರುವ ಗ್ರಾಮವಾಗಿದೆ. ದ್ವಿತೀಯ ಮತ್ತು ತೃತೀಯ ವಲಯ ಅಥವಾ ಕೈಗಾರಿಕೆ ಮತ್ತು ಸೇವಾಲಯಗಳು ಇನ್ನೂ ಈ ಗ್ರಾಮವನ್ನು ತಲುಪಿಲ್ಲ. ಆದ್ದರಿಂದ ಈ ಗ್ರಾಮವು ಕೃಷಿಗೆ ಪೂರಕವಾಗಿದ್ದುಕೊಂಡು ಅಭಿವೃದ್ಧಿ ದೃಷ್ಟಿಯಿಂದ ತಟಸ್ಥವಾಗಿದೆ. ಹಿರೇಹೆಗ್ಡಾಳ್ ಗ್ರಾಮವನ್ನು ಅಲೋಕಿಸಿದಾಗ ಮೊದಲನೆಯದಾಗಿ ಇದು ಒಣ ಬೇಸಾಯವನ್ನು ಹೊಂದಿರುವ ಗ್ರಾಮವಾಗಿದೆ. ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ದುಡಿಮೆಗಾರ ವರ್ಗದಲ್ಲಿ ಸುಮಾರು ಶೇ.೮೩ ರಷ್ಟು ದುಡಿಮೆಗಾರ ವರ್ಗದ ವರಮಾನ ಮತ್ತು ಉದ್ಯೋಗದ ಮೂಲ ಕೃಷಿಯನ್ನು ಅವಲಂಬಿಸಿದೆ. ಸಮಾಜೋ ಆರ್ಥಿಕ ಅನಿವಾರ್ಯತೆಗೆ ಅನುಗುಣವಾಗಿ ಕುಟುಂಬದ ಗಾತ್ರವೂ ದೊಡ್ದದಾಗಿರುತ್ತದೆ. ಕುಟುಂಬದ ಹೆಚ್ಚಿನ ಸದಸ್ಯರು ದುಡಿದರೂ ಹೊಟ್ಟೆ ತುಂಬದಿರುವ ಪರಿಸ್ಥಿತಿ ಇಲ್ಲೀಯೂ ಇದೆ.

ಈ ಗ್ರಾಮದ ಒಟ್ಟು ದುಡಿಮೆಗಾರರ ಸಂಖ್ಯೆ ೧೫೦೦. ಗ್ರಾಮದ ಒಟ್ಟು ದುಡಿಮೆಗಾರ ವರ್ಗದಲ್ಲಿ ಸಾಗುವಳಿದಾರರ ಪ್ರಮಾಣ ೮೧೫ (ಶೇ.೫೪.೩೩) ಮತ್ತು ಕೃಷಿ ಕಾರ್ಮಿಕರ ಸಂಖ್ಯೆ ೪೩೪. ಸಾಗುವಳಿದಾರರು ಮತ್ತು ಕೃಷಿ ಕಾರ್ಮಿಕರನ್ನು ಸೇರಿಸಿದರೆ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಸಂಖ್ಯೆಯು ಪ್ರಾಪ್ತವಾಗುತ್ತದೆ. ಹಿರೇಹೆಗ್ಡಾಳ್ ಗ್ರಾಮದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ಸಂಖ್ಯೆ ೧೨೪೯. ಗ್ರಾಮದ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿಯನ್ನು ಅವಲಂಬಿಸಿರುವವರ ಪ್ರಮಾಣ ಶೇ. ೮೩.೨೬. ಈ ಗ್ರಾಮವು ಕೃಷಿ ಪ್ರಧಾನ ಆರ್ಥಿಕತೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರರ ಪ್ರಮಾಣ ಕೇವಲ ಶೇ. ೧೬.೭೪. ಒಟ್ಟು ಜನಸಂಖ್ಯೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣ ಶೇ. ೩೯.೯೩. ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ. ೨೮.೯೩. ಇದು ರಾಜ್ಯಮಟ್ಟಕ್ಕೆ ಸಮಾನವಾಗಿರುವಂತಿದೆ. ಗ್ರಾಮದಲ್ಲಿ ಸಾಪೇಕ್ಷ್ಯವಾಗಿ ದುಡಿಮೆಯಲ್ಲಿ ನಿರತರಾಗಿರುವ ಜನರ ಪ್ರಮಾಣವು ರಾಜ್ಯಮಟ್ಟಕ್ಕಿಂತ ಅಧಿಕವಾಗಿದೆ.

ಮೇಲಿನ ವಿವರಗಳನ್ನು ಆಧರಿಸಿ ಗ್ರಾಮದಲ್ಲಿ ಕೃಷಿಯನ್ನು ಅವಲಂಬಿಸಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೮೩.೨೬ ಅಗಿದ್ದು ಇದು ಕೃಷಿಯ ಮೇಲೆ ವಿಪರೀತ ಒತ್ತಡವನ್ನು ಸೂಚಿಸುತ್ತದೆ. ಹಾಗೆಯೇ ಕೃಷಿ ಕಾರ್ಮಿಕರ ಪ್ರಮಾಣಕ್ಕಿಂತ ಸಾಗುವಾಳಿದಾರರ ಪ್ರಮಾಣವು ಹೆಚ್ಚಾಗಿರುವುದು ಇನ್ನೂ ಆತಂಕಾರಿ ವಿಷಯವಾಗಿದೆ. ಇದು ಗ್ರಾಮದಲ್ಲಿ ಕೃಷಿ ಭೂಮಿಯು ಕೆಲವೇ ಮಂದಿಯ ಕೈಯಲ್ಲಿ ಕೇಂದ್ರೀಕೃತವಾಗಿರುವುದನ್ನು ಸೂಚಿಸುತ್ತದೆ. ಇದು ವಿಲೋಮ ಅನುಪಾತದಂತೆ ಕಂಡುಬಂದರೂ ಅಭಿವೃದ್ಧಿಯ ಲಕ್ಷಣವಲ್ಲ ಎಂಬುದು ಸ್ಪಷ್ಟ. ಬಹಳ ಮುಂದುವರಿದ ಅದರಲ್ಲೂ ದಕ್ಷಿಣ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಸಾಗುವಳಿದಾರರಿಗಿಂತ ಕಡಿಮೆಯಿರುತ್ತದೆ. ಅದರರ್ಥ ಕೃಷಿ ಭೂಮಿಯು ತುಂಡು ತುಂಡಾಗಿ ವಿಭಜಿಸಲ್ಪಟ್ಟು ಹಿಡುವಳಿ ಚಿಕ್ಕದಾಗಿದ್ದು ಸಾಗುವಳಿದಾರರು ಹೆಚ್ಚಿರಬಹುದು. ಇಲ್ಲದೇ ಕೃಷಿ ಕಾರ್ಮಿಕರಿಗೆ ಕೃಷಿಯನ್ನು ಹೊರತುಪಡಿಸಿಯೂ ಇತರ ವಾಣಿಜ್ಯ ಕೃಷಿಗಳ ಶ್ರಮವು ದೊರೆಯುವ ಸಾಧ್ಯತೆಗಳಿವೆ. ಇದು ಒಂದು ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದ್ದು ಅಭಿವೃದ್ಧಿಗೆ ಪೂರಕವಾದಂತಿದೆ. ಆದರೆ ಹಿರೇಹೆಗ್ಡಾಳ್ ಗ್ರಾಮದ ಪರಿಸ್ಥಿತಿ ಭಿನ್ನವಾಗಿದ್ದು ವಿಷಮ ಸ್ಥಿತಿಯಲ್ಲಿದೆ. ಮೊದಲನೆಯದಾಗಿ ಕಂಡುಬರುವ ಕೃಷಿಗೆ ಅನುಕೂಲಕರವಾದ ಭೂಮಿಯು ಕೆಲವೇ ಜನರಲ್ಲಿದೆ. ಉಳಿದವರು ಕೃಷಿ ಕಾರ್ಮಿಕರಾಗಿರುತ್ತಾರೆ. ಇನ್ನೊಂದೆಡೆ ಈ ಸಾಗುವಾಳಿದಾರರಲ್ಲಿ ಮೇಲ್ಜಾತಿಯವರು ಹಾಗೂ ಕೆಲವೇ ಕೆಲವು ಮಂದಿ ಪರಿಶಿಷ್ಟ ಜಾತಿ ಮತ್ತು ವರ್ಗದವರು ಸೇರಿರುತ್ತಾರೆ. ಈ ಪರಿಶಿಷ್ಟ ಜಾತಿಯ ಸಾಗುವಾಳಿದಾರರ ಸ್ಥಿತಿಯು ಸಾಮಾನ್ಯ ಕೃಷಿ ಕಾರ್ಮಿಕರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು. ಹಿರೇಹೆಗ್ಡಾಳ್ ಒಂದು ಒಣಭೂಮಿಯಾಗಿದೆ.

ಕೃಷಿಯು ಹೆಚ್ಚಾಗಿ ಮಳೆ, ಕೆರೆ ಹಾಗೂ ಬಾವಿ ನೀರಾವರಿಯನ್ನು ಆಶ್ರಯಿಸಿದೆ. ಕೃಷಿ ಕಾರ್ಮಿಕರಿಗೆ ಸಾಕಾಗುವಷ್ಟು ಮಾನವ ದುಡಿಮೆ ದಿನಗಳು ಲಭ್ಯವಾಗುತ್ತಿಲ್ಲ. ಅತಿ ಸಣ್ಣ ಹಿಡುವಳಿದಾರರ ಪರಿಸ್ಥಿತಿ ನಿಕೃಷ್ಟವಾಗಿದ್ದು ಇವರ ಸ್ಥಿತಿ ಕೃಷಿ ಕಾರ್ಮಿಕರಿಗಿಂತ ಭಿನ್ನವಾಗಿಲ್ಲವೆಂಬುದು ಕಂಡು ಬರುತ್ತದೆ.

ಅತಿ ಸಣ್ಣ ಹಿಡುವಳಿದಾರನ ಭೂಮಿಯ ಸಾಗುವಾಳಿ ಮತ್ತು ಬೆಳೆಯ ಪರಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರ ಜೊತೆಗಿನ ಒಲವು ಹಾಗೂ ಸಂಬಂಧವನ್ನು ಅವಲಂಬಿಸಿದೆ. ಯಾಕೆಂದರೆ ಅತಿ ಸಣ್ಣ ಹಿಡುವಳಿದಾರನು ನೇಜಿ, ಉಳಿಮೆ ಹಾಗೂ ಬೆಳೆಗೆ ಬೇಕಾಗುವ ಹೆಚ್ಚಿನ ಪೂರಕ ವಸ್ತುಗಳಿಗೆ ದೊಡ್ಡ ರೈತರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಅಥವಾ ತಾನು ಮಧ್ಯಮ ಹಾಗೂ ದೊಡ್ದ ರೈತರ ಭೂಮಿಯಲ್ಲಿ ಕೆಲಸ ಮಾಡಿ ಅವರ ಬಿತ್ತನೆ ಹಾಗೂ ಬೆಳೆ ಕಾರ್ಯಕ್ಕೆ ಸಹಕರಿಸಿ ನಂತರ ಇದಕ್ಕೆ ಪ್ರತಿಫಲವಾಗಿ ತನ್ನ ಭೂಮಿಯನ್ನು ಉಳುಮೆ ಮಾಡಬೇಕಾದ ಪರಿಸ್ಥಿತಿ ಕಂಡುಬರುತ್ತಿದೆ.

ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು

ಮೊದಲೇ ತಿಳಿಸಿದಂತೆ ಹಿರೇಹೆಗ್ಡಾಳ್ ಗ್ರಾಮವು ಒಂದು ಮುಚ್ಚಿದ ಯಾ ಏಕರೂಪದ ಆರ್ಥಿಕ ರಚನೆಯನ್ನು ಹೊಂದಿದೆ. ಇದನ್ನು ತಾಟಸ್ಥ್ಯ ಸ್ವರೂಪದ ಆರ್ಥಿಕತೆಯೆನ್ನಲೂಬಹುದು. ರಾಜ್ಯಮಟ್ಟದಲ್ಲಿ ಕೃಷಿಯನ್ನು ಅವಲಂಬಿಸಿರುವ ದುಡಿಮೆಗಾರ ವರ್ಗದ ಪ್ರಮಾಣ ಶ್ರೇ.೬೩.೧೨, ಇದ್ದರೆ ಈ ಗ್ರಾಮದಲ್ಲಿ (ಗ್ರಾಮದ ಸಮೀಕರಣವು ರಾಜ್ಯದ ಹೋಲಿಕೆಗೆ ವಿಹಿತವಾಗುವುದು ಎಂದೆನಿಸುವುದಾರೆ ಬಳ್ಳಾರಿ ಜಿಲ್ಲೆ ಹಾಗೂ ಕೂಡ್ಲಿಗಿ ತಾಲ್ಲೂಕಿನ ಚಿತ್ರಣ ಇದಕ್ಕಿಂತ ಭಿನ್ನವಾಗಿಲ್ಲ) ಕೃಷಿಯನ್ನು ಅವಲಂಬಿಸಿರುವ ದುಡಿಮೆಗಾರರ ಪ್ರಮಾಣ ಶೇ.೮೩.೨೬. ಕೃಷಿಯೇತರ ಆರ್ಥಿಕ ಚಟುವಟಿಕೆಗಳು ಇಲ್ಲವೆ ಇಲ್ಲ ಎನ್ನವಷ್ಟು ಕಡಿಮೆ. ಕೃಷಿಯ ಮೇಲೆ ಹೆಚ್ಚಿನ ಒತ್ತಡವಿದೆ. ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರರ ಪ್ರಮಾಣ ಕೇವಲ ಶೇ.೧೬.೭೪. ಕೃಷಿ ಚಟುವಟಿಕೆಗಳನ್ನು ಬಿಟ್ಟರೆ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಅನ್ಯಮಾರ್ಗವೆ ಇಲ್ಲದಂತಾಗಿದೆ. ಅವಕಾಶಗಳ ವಿಸ್ತರಣೆಗೆ ಹಾಗೂ ಆಯ್ಕೆಗೆ ಸಾಧ್ಯವೇ ಇಲ್ಲದ ಬದುಕು ಈ ಗ್ರಾಮದಲ್ಲಿದೆ.

ಕೃಷಿಯೇತರ ಚಟುವಟಿಕೆಗಳನ್ನು ಕೂಡ್ಲಿಗಿ ತಾಲ್ಲೂಕಿನಲ್ಲಿ ಕಾಣುವುದು ತೀರಾ ದುರ್ಲಭವೆನ್ನಬಹುದು. ಪೇಟೆ, ಪಟ್ಟಣ ಪ್ರದೇಶಗಳಲ್ಲಿ ಸ್ಪಲ್ಪ ಮಟ್ಟಿಗೆ ನಿಯಮಿತ ಕೃಷಿಯೇತರ ಚಟುವಟಿಕೆಗಳನ್ನು ಕಾಣಬಹುದಾಗಿದೆ. ಸಾರಿಗೆ ಸಂಪರ್ಕದ ಸಾಧನಗಳಿಂದಾಗಿ ಹಲವಾರು ಸಣ್ಣ ಪುಟ್ಟ ತೃತೀಯ ವಲಯದ ಅದರಲ್ಲೂ ಮುಖ್ಯವಾಗಿ ಸಾರಿಗೆ ಸಲಕರಣೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ. ಇದೇನು ಹೇಳಿಕೊಳ್ಳುವಂತಹ ಬೆಳವಣಿಗೆಯೇನಲ್ಲ.

ಹಿರೇಹೆಗ್ಡಾಳ್‌ ಗ್ರಾಮದಲ್ಲಿ ಒಟ್ಟು ಸಾಗುವಾಳಿ ಭೂಮಿಯಲ್ಲಿ ಮೊದಲೇ ತಿಳಿಸಿದಂತೆ ಮಳೆಯನ್ನು ಹೊರತುಪಡಿಸಿ ಕೆರೆ ಮತ್ತು ಬಾವಿ ನೀರಾವರಿಯಿಂದ ಕೃಷಿಯನ್ನು ಮಾಡಲಾಗುತ್ತಿದೆ. ಈಗ ಸಣ್ಣ ಪ್ರಮಾಣದಲ್ಲಿ ಕೊಳವೆ ಬಾವಿಗಳು ಅಲ್ಲಲ್ಲಿ ಕಂಡುಬರುತ್ತವೆ. ಆದರೂ ಕೃಷಿಗೆ ಮಳೆ ಮತ್ತು ಕೆರೆ ನೀರಾವರಿಯೇ ಆಧಾರವಾಗಿದೆ. ಲಭ್ಯವಿರುವ ಮಾಹಿತಿಗೆ ಅನುಸಾರವಾಗಿ ಒಟ್ಟು ೫೯೩.೯೧ ಹೆಕ್ಟೇರುಗಳಷ್ಟು ಸಾಗುವಾಳಿ ಪ್ರದೇಶವು ಕೆರೆ ಮತ್ತು ಬಾವಿ ಮೂಲಗಳಿಂದ ಕೃಷಿಗೆ ನೀರಾವರಿಯನ್ನು ಪಡೆಯುತ್ತದೆ. ಸಾಮಾನ್ಯವಾಗಿ ಕೆರ ನೀರಾವರಿಯು ಅದರ ಸಮೀಪವಿರುವ ಭೂಮಿಗಳಿಗೆ ತುರ್ತಿನ ನೀರನ್ನುಣಿಸಿದರೆ ದೂರದ ಕೃಷಿ ಭೂಮಿಯು ಸಮೀಪದ ಭೂಮಿಗಳಿಂದ ಹರಿದ ನೀರಿನಿಂದ ಯಾ ಒಡ್ಡಿದ ನೀರಿನಿಂದ ನೀರಾವರಿಯನ್ನು ಪಡೆಯುತ್ತದೆ.

ಕೃಷಿಯಾಧಾರಿತ ಲಘು ಆರ್ಥಿಕ ಚಟುವಟಿಕೆಗಳಾದ ಎಮ್ಮೆ, ಕುರಿ ಮತ್ತು ಎತ್ತು ಸಾಗಾಣಿಕೆಯನ್ನು ಅಲ್ಪ ಪ್ರಮಾಣದಲ್ಲಿ ಈ ಗ್ರಾಮದಲ್ಲಿ ಕಾಣಬಹುದು. ಆದರೆ ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಲಾಭದಾಯಕವಾದ ಅಥವಾ ದೊಡ್ಡ ಮಟ್ಟದ ಈ ಘಟಕಗಳಾವುವು ಕಂಡುಬರುದಿಲ್ಲ. ಎತ್ತು ಸಾಕಣೆಯಿಂದ ಸಣ್ಣ ಯಾ ಅತೀ ಸಣ್ಣ ರೈತರು ಗದ್ದೆಯ ಉಳುಮೆಗೆ ಮತ್ತು ಎತ್ತಿನ ಬಂಡಿಗೆ ಅನುಕೂಲಕರವಾಗಲೆಂದು ಉಪಯೋಗಿಸುತ್ತಾರೆ. ಇದು ಸಾಮಾನು ಸರಂಜಾಮು ಸಾಗಾಟ ಮತ್ತು ಸಾರಿಗೆ ಸಂಪರ್ಕ ಸಾಧನವಾಗಿಯೂ ಬಳಸಲ್ಪಡುತ್ತದೆ. ಇದು ಹೆಚ್ಚಾಗಿ ಕೂಡ್ಲಿಗಿಯಿಂದ ಹನಸಿ ಮಾರ್ಗವಾಗಿ ಕೆಲವೊಮ್ಮೆ ಹಗರಿಬೊಮ್ಮನಹಳ್ಳಿಗೂ ಹಾಗೂ ಇನ್ನೊಂದೆಡೆಯಿಂದ ಕೂಡ್ಲಿಗಿ ಹಾಗೂ ಶಿವಪುರಕ್ಕೆ ಸಾಗಾಟ ಸಾಧನವಾಗಿ ಬಳಸಲ್ಪಡುತ್ತದೆ. ಗ್ರಾಮದಲ್ಲಿ ಕುರಿ, ಎಮ್ಮೆ, ಎತ್ತು ಮತ್ತು ಕೋಳಿ ಸಾಕಾಣಿಕೆಯನ್ನು ಇನ್ನಷ್ಟು ಉತ್ತೇಜಿಸಬಹುದಾಗಿದೆ ಮತ್ತು ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಲಾಭವನ್ನು ಪಡೆಯಬಹುದು. ಈ ಬಗ್ಗೆ ಗ್ರಾಮಪಂಚಾಯಿತಿಯು ಕಾರ್ಯೋನ್ಮುಖವಾಗಬೇಕಾಗಿದೆ. ಗ್ರಾಮದಲ್ಲಿ ಗಣಿಯಾಧಾರಿತ ಮತ್ತು ಅರಣ್ಯಾಧಾರಿತ ಆರ್ಥಿಕ ಚಟುವಟಿಕೆಗಳು ಇಲ್ಲ. ಗ್ರಾಮದಲ್ಲಿ ಸ್ವಲ್ಪ ಮಟ್ಟಿನ ಅರಣ್ಯ ಪ್ರದೇಶವಿದ್ದು ಅರಣ್ಯ ಭೂಮಿಯ ಉಸ್ತುವಾರಿಯು ಗ್ರಾಮ ಪಂಚಾಯತ್‌ ಅಧೀನಕ್ಕೆ ಬರುತ್ತದೆ. ಆದರೆ ಗ್ರಾಮದ ಕೆಲವು ನಿವಾಸಿಗಳು ತಿಳಿಸಿರುವಂತೆ ಕೃಷಿಗೆ ಪೂರಕವಾಗಿ ಅರಣ್ಯ ಭೂಮಿಯನ್ನು ತಾವು ಶ್ರಮಿಸಿ ಅದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದಾಗ ಇನ್ಯಾರದೊ ಕುಮ್ಮಕ್ಕಿನಿಂದ ಅರಣ್ಯಾಧಿಕಾರಿಗಳು ತಮ್ಮ ಮೇಲೆ ಅರಣ್ಯನಾಶ ಮತ್ತು ಮರಗಳ್ಳತನದ ಆಪಾದನೆ ಹೊರಿಸಿರುವುದರಿಂದ ಈ ಕುರಿತ ವ್ಯಾಜ್ಯವು ಇನ್ನೂ ನ್ಯಾಯಾಲದಲ್ಲಿರುವಾಗ ಈ ಅಪಾದಿತರು ಕೃಷಿ ಮಾಡುವ ಕನಸು ಹಾಗೂ ಭವಿಷ್ಯದ ದಿನಗಳ ಭಯಾನಕತೆಯನ್ನು ಎದುರಿಸಲಾಗದೆ ಖಿನ್ನರಾಗಿದ್ದಾರೆ.

ಇವರೆಲ್ಲರೂ ಕೃಷಿ ಕಾರ್ಮಿಕರಾಗಿದ್ದು ಬರೀ ಸಣ್ಣ ಪುಟ್ಟ ಜನತಾ ಮನೆಗಳನ್ನು ಮಾತ್ರ ಹೊಂದಿರುತ್ತಾರೆ. ಗ್ರಾಮದಲ್ಲಿ ಬಿದಿರು ಮತ್ತಿತರ ಬಹುಪಯೋಗಿ ಜೀವನಾಧಾರ ಮರಗಳು ಕಂಡುಬರುವುದಿಲ್ಲ. ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮಂದಿ ಕಮ್ಮಾರ ಮತ್ತು ಬಡಗಿ ಕೆಲಸಲದಲ್ಲಿ ನಿರತರಾಗಿರುತ್ತಾರೆ. ಇದು ಕೌಶಲ್ಯಾಧಾರಿತ ವೃತ್ತಿಯಾಗಿದ್ದು ವಂಶಪಾರಂಪರ್ಯವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿ ಒಂದು ಸಬ್‌ಮರ್ಸಿಬಲ್‌ ವೈಂಡಿಂಗ್‌ ಅಂಗಡಿ ಇದೆ. ಗ್ರಾಮಸ್ಥರು ತಿಳಿಸುವಂತೆ ಇನ್ನೆರಡು ಇಂತಹ ಅಂಗಡಿಗಳ ಅವಶ್ಯಕತೆ ಇದೆ. ಯಾಕೆಂದರೆ ಸುಮಾರು ೨೫೦ ರಷ್ಟು ಪಂಪುಸೆಟ್ಟುಗಳು ಈ ಗ್ರಾಮದಲ್ಲಿವೆ. ಸುಮಾರು ೨೬ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿಯು ಸಾಸಲವಾಡ ಗ್ರಾಮದಲ್ಲಿ ನಡೆಯುತ್ತಿವೆ. ಗ್ರಾಮದ ಎಲ್ಲ ಹಳ್ಳಿಗಳೂ ಸೇರಿ ಇಡೀ ಗ್ರಾಮಪಂಚಾಯಿತಿಯಲ್ಲಿ ೫ ಚಹಾದ ಅಂಗಡಿಗಳು, ಮತ್ತು ಸುಮಾರು ೧೦ ರಿಂದ ೧೫ ರಷ್ಟು ಇತರ ಸಣ್ಣ ಅಂಗಡಿಗಳಿವೆ. ಹಿರೇಹೆಗ್ಡಾಳ್‌ನಲ್ಲಿ ಒಂದು ಸಹಕಾರಿ ವ್ಯವಸಾಯ ಸೇವಾ ಸಂಘವೂ ಕಾರ್ಯ ನಿರ್ವಹಿಸುತ್ತಿದೆ. ಹುಣಸೆ ಮರದ ಫಸಲು ಕೆಲವೊಮ್ಮೆ ಹೇರಳವಾಗಿರುತ್ತದೆ.

ಮಜೂರಿ :- ಸಾಮಾನ್ಯವಾಗಿ ಕೃಷಿ ಕಾರ್ಮಿಕರು ಮತ್ತಿತರ ಕೆಲಸಗಾರರೇ ಅಧಿಕವಾಗಿರುವ ಹಿರೇಹೆಗ್ಡಾಳ್‌ ಗ್ರಾಮದಲ್ಲಿ ಕಾರ್ಮಿಕರ ಶ್ರಮಕ್ಕೆ ತಕ್ಕ ಕೂಲಿ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೂಲಿಯು ತೀರಾ ಕಡಿಮೆಯಾಗಿರುತ್ತದೆ.

ಸಿಮೆಂಟ್‌, ಮಣ್ಣು ಇದರ ಕೆಲಸಗಳಿಗೆ ಗಂಡಸರಿಗೆ ರೂ. ೪೦ ರಿಂದ ೬೦ ರೂಪಾಯಿವರೆಗೆ ಕೂಲಿ ನೀಡಲಾಗುತ್ತಿದೆ. ಒಳ್ಳೆಯ ತಾಂತ್ರಿಕ ಕೆಲಸಗಳಿಗೆ ೧೦೦ ರೂಪಾಯಿ ಮಜೂರಿ ನೀಡಲಾಗುತ್ತದೆ. ಸಿಮೆಂಟ್‌, ಮಣ್ಣು ಇತ್ಯಾದಿ ಕೆಲಸಗಳಿಗೆ ಹೆಣ್ಣುಮಕ್ಕಳಿಗೆ ರೂ. ೩೦ ರಿಂದ ೪೦ ರವರೆಗೆ ಕೂಲಿ ನೀಡಲಾಗುತ್ತದೆ. ಈ ಕೆಲಸವು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಇರುತ್ತದೆ. ಹುಣಸೆ ಮರದ ಬೆಳೆ ಹೊಡೆಯಲು ಸಾಮಾನ್ಯವಾಗಿ ಗಂಡಸರಿಗೆ ೨೫ ರೂಪಾಯಿ ಹಾಗೂ ಹೆಂಗಸರಿಗೆ ರೂ. ೨೦ ರ ಮಜೂರಿ ಕೊಡಲಾಗುತ್ತದೆ. ಹುಣಸೆ ಹಣ್ಣಿನ ಬೀಜ ತೆಗೆಯುವವರಿಗೆ ಬುಟ್ಟಿಗೆ ೬ ರೂಪಾಯಿ ಕೊಡಲಾಗುತ್ತದೆ. ಬುಟ್ಟಿಯಲ್ಲಿ ೬ ಕಿಲೋ ಗ್ರಾಂ ನಷ್ಟು ಹುಣಸೆ ಹಣ್ಣು ಇರುತ್ತದೆ. ಬೇಸಾಯದ ಕೆಲಸಕ್ಕೆ ಗಂಡಸರಿಗೆ ೨೦ ರೂಪಾಯಿ ಮತ್ತು ಹೆಣ್ಣುಮಕ್ಕಳಿಗೆ ೧೫ ರೂ. ಹಾಗೂ ರಸ್ತೆ ಕೆಲಸಕ್ಕೆ ರೂ. ೩೫ ರಿಂದ ೪೦ ರೂಪಾಯಿಗಳ ಕೂಲಿ ನೀಡಲಾಗುತ್ತಿದೆ. ದಿನಗೂಲಿ ಸಾಮಾನ್ಯವಾಗಿ ಗಂಡಸರಿಗೆ ರೂ. ೨೫ ಆದರೆ ಹೆಣ್ಣುಮಕ್ಕಳಿಗೆ ರೂ. ೧೫ ಆಗಿರುತ್ತದೆ.

ಹಿರೇಹೆಗ್ಡಾಳ್‌ ಗ್ರಾಮದ ಸಾಣೇಹಳ್ಳಿಯಲ್ಲಿ ಇಟ್ಟಿಗೆ ಕೆಲಸವನ್ನು ಸಹ ಮಾಡುತ್ತಾರೆ. ಸಾವಿರ ಇಟ್ಟಿಗೆ ನಿರ್ಮಾಣ ಮಾಡಿದರೆ ೨೦೦ ರೂಪಾಯಿಗಳ ಕೂಲಿ ದೊರೆಯುತ್ತದೆ. ೬ ಮಂದಿ ಕೆಲಸಗಾರರು ಒಂದು ದಿನಕ್ಕೆ ೩ ಸಾವಿರ ಇಟ್ಟಿಗೆ ಮಾಡಬಹುದಾಗಿದೆ. ಇದರಿಂದ ಒಬ್ಬೊಬ್ಬರು ದಿನಾ ನೂರು ರೂಪಾಯಿ ಕೂಲಿ ಪಡೆಯುತ್ತಾರೆ. ಹೊಲದೊಡೆಯನೆ ಸುಡಲು ಕಟ್ಟಿಗೆಯನ್ನು ಒದಗಿಸದರೂ, ಇಟ್ಟಿಗೆ ತಯಾರಿಸುವುದು ಬಹು ಕಷ್ಟದ ಕೆಲಸವಾಗಿದ್ದು, ದೈಹಿಕವಾಗಿ ಹೆಚ್ಚಿನ ದಣಿವಾಗುತ್ತದೆ ಎಂದು ಕೂಲಿಕಾರರ ಅಭಿಪ್ರಾಯ. ಮಳೆಗಾಲ ಹೊರತು ಪಡಿಸಿದರೆ ಉಳಿದೆಲ್ಲಾ ಕಾಲಮಾನದಲ್ಲೂ ಇಟ್ಟಿಗೆ ಸಿದ್ಧಪಡಿಸುವ ಅವಕಾಶಗಳಿದ್ದರೂ, ತೊಡಗಿಸಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ ಎನ್ನಬೇಕು.

ಪರ್ಯಾಯ ಉದ್ಯೋಗ :- ಹಿರೇಹೆಗ್ಡಾಳ್‌ ಕೃಷಿ ಪ್ರಧಾನ ಗ್ರಾಮವಾದುದರಿಂದ ಪ್ರಾಥಮಿಕ ವಲಯದಲ್ಲಿ ಹೆಚ್ಚಿನ ದುಡಿಯುವ ವರ್ಗ ಕೇಂದ್ರಿಕೃತವಾಗಿದೆ. ಆದರೆ ಪ್ರಾಥಮಿಕ ವಲಯದಿಂದ ಬರುವ ವರಮಾನ ಹಂಚಿಕೆ ಅಥವಾ ಪ್ರತಿಫಲ ಅದು ಸೇವೆಗೆ ತಕ್ಕ ಫಲ ಆಗಿರುತ್ತದೆಯೆ ಇಲ್ಲವೆ ಎಂಬುದರಲ್ಲಿ ಅನುಮಾನಗಳು ಇರುತ್ತವೆ. ಸಾಮಾನ್ಯವಾಗಿ ಕೃಷಿ ಪ್ರಧಾನ ಅರ್ಥ ವ್ಯವಸ್ತೆಯಲ್ಲಿ ಜೋಳ, ಭತ್ತ, ಶೇಂಗಾ, ಸೂರ್ಯಕಾಂತಿ ಇತ್ಯಾದಿ ಬೆಳೆಗಳು ನಗದು ಬೆಳೆಗಳು ಅಥವಾ ವಾಣಿಜ್ಯ ಬೆಳೆಗಳು ಅಲ್ಲದಿರುವುದರಿಂದ ಇವುಗಳ ಗ್ರಾಮದೊಳಗೆ ವಸ್ತು ವಿನಿಮಯದ ರೂಪದಲ್ಲೂ ಚಲಾವಣೆಯಾಗಬಹುದು. ಕೃಷಿ ಅಥವಾ ಪ್ರಾಥಮಿಕ ವಲಯದ ದುಡಿಮೆ ಬಿಟ್ಟರೆ ಹೇಳಿಕೊಳ್ಳುವಂತಹ ವಾಣಿಜ್ಯ ಬೆಳೆಗಳು ಮತ್ತು ಕೃಷಿಯೇತರ ಚಟುವಟಿಕೆಗಳು ಈ ಗ್ರಾಮದಲ್ಲಿ ಇಲ್ಲದ ಕಾರಣ ಜನರ ಬದುಕು ದುಸ್ತರವಾಗಿದೆ. ಗ್ರಾಮಸ್ಥರೊಬ್ಬರು ತಿಳಿಸುವಂತೆ ಒಕ್ಕಲುತನ ಬಿಟ್ಟರೆ ಊರು ಬಿಡಬೇಕು. ಏನೀ ಊರು ಬಿಡುವುದು ಎಂದ ಕೇಳಿದರೆ ಸಾಮಾನ್ಯವಾಗಿ ಕೊಯಿಲು ಅಥವಾ ನೇಜಿ ಸಂದರ್ಭದಲ್ಲಿ ಮಾತ್ರ ಭತ್ತದ ಅಥವಾ ಇತರ ಬೆಳೆಗಳ ಕೆಲಸ ಇರುವುದು ಇನ್ನುಳಿದಂತೆ ದಿನಗೂಲಿ ಕೆಲಸಗಳು ಕಡಿಮೆ ಅಥವಾ ಕೆಲವೊಮ್ಮೆ ಇಲ್ಲವೇ ಇಲ್ಲ ಎನ್ನಬಹುದಾದುದರಿಂದ ಊರಿನ ಗಂಡು ಹಾಗೂ ಹೆಣ್ಣುಮಕ್ಕಳು ಕೊಯಿಲು ಅಥವಾ ನೇಜಿಯ ನಂತರ ಕಾಫಿ ಸೀಮೆಗೆ ಅಥವಾ ಮಂಗಳೂರಿಗೆ ದುಡಿಯಲಿಕ್ಕೆ ಹೋಗುತ್ತಾರೆ. ಗದ್ದೆಗಳಿಗೆ ನೀರಿನ ಆಶ್ರಯ ಇರುವವರು ಮಾತ್ರ ತಮ್ಮ ಭುಮಿಯಲ್ಲಿ ಕೃಷಿ ಮಾಡುತ್ತಾರೆ.

ಸಾಮಾನ್ಯವಾಗಿ ಕೃಷಿ ಮತ್ತು ಕೃಷಿಯೇತರ ಉದ್ಯೋಗಗಳು ಕಾಫಿ ಸೀಮೆಯಲ್ಲಿ ಅಥವಾ ಮಂಗಳೂರಿನಲ್ಲಿ ದೊರೆಯುತ್ತವೆ. ಕಾಫಿಯು ವಾಣಿಜ್ಯ ಬೆಳೆ ಆಗಿರುತ್ತದೆ. ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣದ ಕೆಲಸ, ಕೈಗಾರಿಕೆಗಳು ಹಾಗೂ ರಸ್ತೆ ನಿರ್ಮಾಣದ ಕೆಲಸ ಕಾರ್ಯಗಳು ವ್ಯಾಪಕವಾಗಿ ದೊರೆಯುತ್ತವೆ. ಗ್ರಾಮಸ್ಥರೊಬ್ಬರು ಹೇಳುವಂತೆ ಕಾಫಿ ಸೀಮೆಯವರು ಒಬ್ಬನಿಗೆ ೨೦೦೦ ರೂಪಾಯಿಗಳನ್ನು ಕೊಟ್ಟರೆ ಅದನ್ನು ತೀರಿಸುವ ತನಕ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಮನೆಯ ಹೆಂಗಸರನ್ನು ಕೆಲಸಕ್ಕೆ ಹಾಗೂ ಆಡುಗೆ ಮಾಡುವುದಕ್ಕೂ ಸಹ ಕರೆದುಕೊಂಡು ಹೋಗುತ್ತಾರೆ. ಈ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನೋಡಿಕೊಳ್ಳಲು ಮತ್ತು ಕೆಲಸಗಾರರನ್ನು ಕರೆತರಲು ಕೆಲವು ಬ್ರೋಕರ್ ಅಥವಾ ಮಧ್ಯವರ್ತಿಗಳಿರುತ್ತಾರೆ. ಅವರು ಒಂದು ವಾಹನದಲ್ಲಿ ಬಂದು ಕೆಲಸಕ್ಕೆ ಆಳುಗಳನ್ನು ಕರೆದುಕೊಂಡು ಹೋಗುತ್ತಾರೆ. ಕೆಲಸ ಮುಗಿದ ಬಳಿಕ ಅಂದರೆ ಕೊಟ್ಟ ಹಣದ ಪ್ರತಿಫಲ ಅದಕ್ಕೆ ಸಮಾನವಾದ ದುಡಿಮೆ ಆದನಂತರ ಇವರನ್ನು ಬಿಟ್ಟುಬಿಡುತ್ತಾರೆ. ಇದು ಒಂದು ರೀತಿಯಲ್ಲಿ ಜೀತದಾಳು ಮಾದರಿಯನ್ನೆ ಹೋಲುವಂತಿದೆ. ಆದರೆ ದಿನಗೂಲಿಗಿಂತ ಹೆಚ್ಚಿನ ಮಜೂರಿ ದೊರೆಯುವುದರಿಂದ ಕೆಲವು ಮಂದಿ ಉತ್ತಮ ಉಳಿತಾಯವನ್ನು ಮಾಡುತ್ತಾರೆ ಎಂದು ಹಳ್ಳಿಗರು ಹೇಳುತ್ತಾರೆ.

ಸಾರಾಯಿ ಅಂಗಡಿ :- ಕೂಡ್ಲಿಗಿ ತಾಲ್ಲೂಕಿನ ಪೇಟೆಯ ಮದ್ಯಭಾಗದಲ್ಲಿ ಒಂದು ಸಾರಾಯಿ ಅಂಗಡಿ ಇರುವಂತೆ ಹಿರೇಹೆಗ್ಡಾಳ್ ಗ್ರಾಮದಲ್ಲೂ ಸಾರಾಯಿ ಅಂಗಡಿಗಳಿವೆ. ದಿನವಿಡೀ ದುಡಿತದ ದುಗುಡವನ್ನು ಮರೆಯಲು ಕೂಲಿಯಾಳು ಜನಗಳು ಹೆಚ್ಚಾಗಿ ಸಾರಾಯಿ ಅಂಗಡಿಯ ಮೊರೆ ಹೋಗುತ್ತಾರೆ. ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್‌ ಹತ್ತಿರದಲ್ಲಿ ಒಂದು ಸಾರಾಯಿ ಅಂಗಡಿ ಇದ್ದು ಒಂದು ಪ್ಯಾಕೆಟ್‌ಗೆ ೮.೫೦ ರೂಪಾಯಿ ದರ ಇದೆ. ಇಲ್ಲಿ ದಿನಾ ನೂರು ಪ್ಯಾಕೆಟ್‌ ಸಾರಾಯಿ ವ್ಯಾಪಾರ ಆಗುತ್ತದೆ. ಸಾಣೇಹಳ್ಳಿಯಲ್ಲಿಯೂ ಒಂದು ಸಾರಾಯಿ ಅಂಗಡಿ ಇದೆ. ಬೊಪ್ಪಲಾಪುರ ಮತ್ತು ಸಾಸಲವಾಡದಲಿ ಸಾರಾಯಿ ಅಂಗಡಿ ಇಲ್ಲದಿದ್ದರೂ ಅಲ್ಲಲ್ಲಿ ಸಾರಾಯಿ ದೊರೆಯುವುದೆಂದು ಗ್ರಾಮಸ್ಥರು ಹೇಳುತ್ತಾರೆ.

ಸಾರಾಯಿ ಅಂಗಡಿಗೆ ಸಂಬಂಧಿದಂತೆ ಕೆಲವು ಗ್ರಾಮಗಳು ಅವುಗಳದೇ ಆದ ಹಣಕಾಸಿನ ಮಾದರಿ ವಿನಿಮಯ ಟೋಕನ್‌ಗಳನ್ನು ಚಲಾಯಿಸುತ್ತವೆ. ಸಾಮಾನ್ಯವಾಗಿ ೧೦ ರೂಪಾಯಿ ನೀಡಿ ಒಂದು ಪ್ಯಾಕೆಟ್ ಸಾರಾಯಿ ಪಡೆದರೆ ೧.೫೦ ರೂಪಾಯಿ ಹಿಂದಕ್ಕೆ ಪಡೆಯಬೇಕಾಗುತ್ತದೆ. ಚಿಲ್ಲರೆಯ ಅಭಾವದ ಕಾರಣ ಸಾರಾಯಿ ಅಂಗಡಿಗಳು ೧.೫೦ ರೂಪಾಯಿ ಟೋಕನ್‌ಗಳನ್ನು ಗಿರಾಕಿಗಳಿಗೆ ನೀಡಿ ಮರುದಿನ ಇದನ್ನು ಪುನಃ ಸಾರಾಯಿ ಅಂಗಡಿಯಲ್ಲಿ ಸಾರಾಯಿಗೆ ವಿನಿಮಯ ಮಾಡುತ್ತಾರೆ. ಈ ಟೋಕನ್‌ ಆ ಊರಿನ ಸಾರಾಯಿ ಅಂಗಡಿಗೆ ಮಾತ್ರ ಸೀಮಿತವಾಗಿರುತ್ತದೆ. ಇಂತಹ ಹಲವಾರು ಉದಾಹರಣೆಗಳು ಒಂದೊಂದು ಗ್ರಾಮದಲ್ಲಿ ಕಂಡುಬರುತ್ತವೆ.

ರಾಜಕೀಯ ಚಿತ್ರಣ :- ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್‌ ಕೂಡ್ಲಿಗಿ ತಾಲ್ಲೂಕಿನ ಕೂಡ್ಲಿಗಿ ವಿಧಾನಸಭಾ ವ್ಯಾಪ್ತಿಗೆ ಒಳಪಡುತ್ತದೆ. ೧೯೮೩ ರ ಪಂಚಾಯತ್‌ ಕಾಯ್ದೆಯನ್ವಯ ಈ ಗ್ರಾಮವು ಶಿವಪುರ ಮಂಡಲ ಪಂಚಾಯತಿಗೆ ಒಳಪಟ್ಟಿತ್ತು.

ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್‌‌ ಮುಖ್ಯ ಕಚೇರಿಯು ಹಿರೇಹೆಗ್ಡಾಳ್‌ ಬಸ್‌ನಿಲ್ದಾಣದಿಂದ ಸುಮಾರು ಒಂದೂವರೆ ಫರ್ಲಾಂಗ್‌ ದೂರದಲ್ಲಿ ಪೂರ್ವಕ್ಕಿದೆ. ಬಸ್‌ನಿಲ್ದಾಣದಿಂದ ಕೂಡ್ಲಿಗಿ ಪೇಟೆಗೆ ೯ ಕಿ. ಮೀ. ದೂರವಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಂಚಾಯತ್‌ ರಾಜಕಾರಣವು ಬಹಳ ವಿಶಿಷ್ಟತೆಯಿಂದ ಕೂಡಿರುತ್ತದೆ. ಹಿಂದಿನಿಂದಲೂ ಇಲ್ಲಿ ಸ್ಥಳೀಯಾಡಳಿತೆಯು ಪ್ರಚಲಿತದಲ್ಲಿತ್ತು. ೧೯೫೯ ರ ಕಾಯ್ದೆಯನ್ವಯ ಗ್ರಾಮ ಪಂಚಾಯತ್‌ ವ್ಯವಸ್ಥೆ ಇತ್ತು ಎಂದು ಶ್ರೀ ಶೆಟ್ಟಿಗುರುಸಿದ್ಧಪ್ಪನವರು ಹೇಳುತ್ತಾರೆ. ಇವರು ಸುಮಾರು ೧೨ ವರ್ಷಗಳಿಗೂ ಹೆಚ್ಚು ಕಾಲ ಪಂಚಾಯತ್‌ ಅಧ್ಯಕ್ಷಾರಾಗಿದ್ದರು. ಅವರು ತಿಳಿಸುವಂತೆ ಸದಸ್ಯರು ವಿವಿಧ ಜಾತಿ ವರ್ಗಗಳಿಗೆ ಸೇರಿದ್ದರು ಹಾಗೂ ಮಹಿಳೆಗೆ ಮೀಸಲಾತಿ ಆಗಲೂ ಚಾಲ್ತಿಯಲ್ಲಿತ್ತು ಎನ್ನುತ್ತ್ತಾರೆ. ಸಾಮಾನ್ಯವಾಗಿ ಮಹಿಳೆಯನ್ನು ನೇಮಕಮಾಡುವುದರ ಮೂಲಕ ಸಹಕರಣಗೊಳಿಸಲಾಗುತ್ತಿತ್ತು.

೧೯೮೩ ಕಾಯ್ದೆ :- ೧೯೮೩ ರ ಕರ್ನಾಟಕ ಜಿಲ್ಲಾಪರಿಷತ್ತುಗಳು, ತಾಲ್ಲೂಕು ಪಂಚಾಯತ್‌‌ ಸಮಿತಿಗಳು, ಮಂಡಲ ಪಂಚಾಯತ್‌ಗಳು ಮತ್ತು ನ್ಯಾಯಪಂಚಾಯತ್‌‌‌ಗಳ‌ ಕಾಯ್ದೆಯನ್ವಯ ಈ ಗ್ರಾಮವು ಶಿವಪುರ ಮಂಡಲಕ್ಕೆ ಸೇರಿತ್ತು. ಮಹಿಳಾ ಸದ್ಯರು ಇದ್ದರು. ಗ್ರಾಸಭೆಯು ಆಗಾಗ ನಡೆಯುತ್ತಿತ್ತು. ಕೆಲವೊಮ್ಮೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೊಂದಾಣಿಕೆ ಪ್ರವೃತ್ತಿಗಿಂತಲೂ ಗಲಾಟೆ ವಾತಾವರಣ ಸೃಷ್ಟಿಯಾಗುತ್ತಿತ್ತು. ಸಮಜಾಯಿಸುವಿಕೆ ಹೆಚ್ಚಿನ ಅಸ್ಪದವಿರಲಿಲ್ಲ. ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯುಗಳು ಗ್ರಾಮದಲ್ಲಿ ಜರಗಲಿಲ್ಲವೆಂದು ತಿಳಿಯುತ್ತದೆ.

೧೯೮೩ನೇ ಪಂಚಾಯತ್‌ ಕಾಯ್ದೆಯ ನಿಯಮಾವಳಿಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲಿಲ್ಲ ಎಂದು ತಿಳಿದುಬರುತ್ತದೆ. ಅದು ಇರುತ್ತಿದ್ದರೆ ಕಾಯ್ದೆಯಲ್ಲಿ ಗ್ರಾಮಸಭೆ ಮತ್ತು ಅವುಗಳ ಅಸ್ತಿತ್ವದಿಂದಾಗುವ ಹಲವಾರು ರಚನಾತ್ಮಕ ಕಾರ್ಯಗಳು ಯಾವುದು ಅನುಷ್ಠಾನಗೊಳ್ಳಲಿಲ್ಲ. ಇದಕ್ಕೆ ಆಶ್ಚರ್ಯಪಡಬೇಕಾದ ಆಗತ್ಯವೂ ಇಲ್ಲ. ಯಾಕೆಂದರೆ ಜಿಲ್ಲಾಪರಿಷತ್ ಜಿಲೆಯಲ್ಲಿ ಉನ್ನತ ಕಾರ್ಯಾಂಗವಾಗಿದ್ದು ಅದು ಹೆಚ್ಚಿನ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತಿತ್ತು. ಮಧ್ಯೆ ಅಧಿಕಾರ ರಹಿತವಾಗಿದ್ದ ತಾಲ್ಲೂಕು ಪಂಚಾಯತ್‌ ಸಮಿತಿ ಹೆಚ್ಚಾಗಿ ನಾಮ ನಿರ್ದೇಶಿತ ಅಂಗವಾಗಿತ್ತು. ಮಂಡಲ ಪಂಚಾಯತ್‌ ಮಂಡಲ ವ್ಯಾಪ್ತಿಯಲ್ಲಿ ಹೆಚ್ಚು ಅಧಿಕಾರಯುತವಾಗಿತ್ತು. ಮಂಡಲ ಪ್ರಧಾನರೆಂದರೆ ಮಂಡಲ ಪಂಚಾಯತ್‌ನ ಕಾರ್ಯಾಂಗದ ಮುಖ್ಯಸ್ಥರಾಗಿದ್ದರು. ಗ್ರಾಮಸಭೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಹಾಗೂ ಇದು ಕರ್ನಾಟಕದಲ್ಲಿ ಪ್ರಾರಂಭಗೊಳ್ಳಲೇ ಇಲ್ಲ ಎಂದು ಡಾ. ಜೋಶಿಯವರು ತಮ್ಮ ಅಧ್ಯಯನದಲ್ಲಿ ತಿಳಿಸುತ್ತಾರೆ. ಆದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಥವಾ ಕೂಡ್ಲಿಗಿಯ ಹಿರೇಹೆಗ್ಡಾಳ್‌ನಲ್ಲಿ ಈ ಕೆಳಮಟ್ಟದ ವ್ಯವಸ್ಥೆ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲವೆಂದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಮುಂದುವರಿದ ಜಿಲ್ಲೆಗಳಲ್ಲಿನ ತಳಮಟ್ಟದ ಸಂಸ್ಥೆಯ ಸ್ಥಿತಿಯೂ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ ಎಂಬುದು ಸಹ ಗಮನಾರ್ಹ. ಆದರೂ ಒಂದು ಬದಲಾವಣಾ ಹಂತದ ಪ್ರಕ್ರಿಯೆ ಪ್ರಾರಂಭವಾಯಿತು ಅಥವಾ ತಳವೂರಲು ದಾಪುಗಾಲು ಹಾಕಿತು ಎನ್ನಬಹುದು. ೧೯೯೩ ರ ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮದನ್ವಯ ಗ್ರಾಮ ಪಂಚಾಯತ್‌ ಚುನಾವಣೆಗಳು ೧೯೯೩ ಡಿಸೆಂಬರ್ನಲ್ಲಿ ಜರಗಿದವು. ಹೊಸ ಗ್ರಾಮ ಪಂಚಾಯತ್‌ ವ್ಯವಸ್ಥೆ ೧೯೯೪ ಜನವರಿಯಿಂದ ಅನಿಷ್ಠಾನಕ್ಕೆ ಬಂದವು.

ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್ ಮತ್ತು ೧೯೯೩ರ ಕರ್ನಾಟಕ ಪಂಚಾಯತ್ರಾಜ್ಅಧಿನಿಯಮ

೧೯೯೩ರ ಪಂಚಾಯತ್‌ ಅಧಿನಿಯಮದಂತೆ ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್‌ಗೆ ಚುನಾವಣೆಗಳು ನಡೆದವು. ಈ ಗ್ರಾಮ ಪಂಚಾಯತ್‌ನಲ್ಲಿ ೧೦ ಮಂದಿ ಸದಸ್ಯರಿದ್ದಾರೆ. ಇವು ಹಿರೇಹೆಗ್ಡಾಳ್‌, ಸಾಸಲವಾಡ ಮತ್ತು ಬೊಪ್ಪಲಾಪುರ ಹಾಗೂ ಸಾಣೇಹಳ್ಳಿಗಳನ್ನೊಳಗೊಂಡ ಗ್ರಾಮ ಪಂಚಾಯತ್‌ ಆಗಿರುವುದರಿಂದ ಪ್ರತಿ ಗ್ರಾಮದಿಂದಲೂ ಸದಸ್ಯರನ್ನು ಆರಿಸಲಾಯಿತು. ಹಿರೇಹೆಗ್ಡಾಳ್ ಗ್ರಾಮದಿಂದ ೪ ಮಂದಿಯನ್ನು, ಸಾಸಲವಾಡದಿಂದ ೩ ಮಂದಿ, ಬೊಪ್ಪಲಾಪುರದಿಂದ ಇಬ್ಬರು ಹಾಗೂ ಸಾಣೇಹಳ್ಳಿಯಿಂದ ಒಬ್ಬರನ್ನು ಅಯ್ಕೆ ಮಾಡಲಾಯಿತು. ಇದರಲ್ಲಿ ಹಿರೇಹೆಗ್ಡಾಳ್‌, ಮತ್ತು ಸಾಸಲವಾಡ ಎಲ್ಲಾ ಅಭ್ಯರ್ಥಿಗಳು ಚುನಾಯಿತರಾದರೆ ಬೊಪ್ಪಲಾಪುರ ಮತ್ತು ಸಾಣೇಹಳ್ಳಿಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಬೊಪ್ಪಲಾಪುರದ ಇನ್ನೊಬ್ಬ ಅಭ್ಯರ್ಥಿ ಚುನಾಯಿತರಾದರು.

ಚುನಾವಣೆ :- ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ೧೯೫೧ ರಿಂದ ಭಾರತದ ಸಂವಿಧಾನ ಜಾರಿಗೆ ತಂದಿದೆ ಮತ್ತು ಇದು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಮೂಲ ಮಂತ್ರವೂ ಆಗಿದೆ. ಯಾಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಚುನಾವಣೆಗಳು ವ್ಯಾಪಕವಾಗಿ ಸಾರ್ವತ್ರಿಕವಾಗಿರದೆ ಸೀಮಿತ ಮತದಾನವಾಗಿತ್ತು. ಇದು ಕೆಲವು ಅರ್ಹತೆಗಳನ್ನು ಹೊಂದಿದವರಿಗೆ ಮಾತ್ರ ದೊರಕುತ್ತಿತ್ತು (ಉದಾಹರಣೆಗೆ ಆಸ್ತಿ, ಅಂತಸ್ತು, ಶಿಕ್ಷಣ ಮುಂತಾದ ಗಣ್ಯ ಲಕ್ಷಣಗಳು) ಅಂದರೆ ಚುನಾವಣೆ ಅಥವಾ ಮತದಾನವು ಹೆಚ್ಚಾಗಿ ಗಣ್ಯವರ್ಗದವರಿಗೆ ಮೀಸಲಿರಿಸಿದಂತಿತ್ತು. ಆದರೆ ಸಾರ್ವತ್ರಿಕ ವಯಸ್ಕ ಮತದಾನದಿಂದಾಗಿ ಈ ಅನಿಷ್ಟಗಳು ಕಳೆದು ಸರ್ವರಿಗೂ ಕೆಲವೊಂದು ಅನರ್ಹತೆಗಳನ್ನು ಹೊರತುಪಡಿಸಿ ಉಳಿದಂತೆ ಮತದಾನದ ಹಕ್ಕನ್ನು ನೀಡಲಾಯಿತು. ಮೊದಲಿಗೆ ಮತದಾನದ ವಯಸ್ಸು ೨೧ ಆಗಿತ್ತು. ಆದರೆ ಕೇಂದ್ರ ಸರಕಾರವು ಸಂವಿಧಾನಕ್ಕೆ ೬೧ ನೇ ತಿದ್ದುಪಡಿಯನ್ನು ತರುವುದರ ಮೂಲಕ ಮತದಾನದ ವಯಸ್ಸನ್ನು ೧೮ಕ್ಕೆ ಇಳಿಸಿ ಯುವಜನಾಂಗಕ್ಕೆ ಮತದಾನದ ಅವಕಾಶವನ್ನು ಇನ್ನಷ್ಟು ವಿಸ್ತರಿಸಿದೆ.

ಇದಕ್ಕೆ ಸ್ಪಂದಿಸಿ ಕರ್ನಾಟಕ ಸರಕಾರವು ದೇಶದಲ್ಲೆ ಪ್ರಥಮ ಬಾರಿಗೆ ಎಂಬಂತೆ ೧೯೮೭ ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯುವಾಗ ಮತದಾನದ ವಯಸ್ಸು ೨೧ ರಿಂದ ೧೮ ಕ್ಕೆ ಇಳಿಸಿ ಮತದಾನವನ್ನು ಯುವನಾಂಗಕ್ಕೆ ಇನ್ನಷ್ಟು ವಿಸ್ತರಿಸಿ ದೇಶದ ಹೆಗ್ಗಳಿಕೆಗೆ ಪ್ರಶಂಸನೀಯವಾಗಿದೆ. ಕರ್ನಾಟಕದ ಈ ಯಶಸ್ಸನ್ನು ಕಂಡು ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳು ಅದನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತಂದಿತು.

ಸಂವಿಧಾನದ ಈ ತಿದುಪಡಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಇವೆರಡೂ ಕರ್ನಾಟಕದಲ್ಲಿ ಏಕಕಾಲಕ್ಕೆ ವರದಾನವಾದಂತಾಯಿತು ಎಂಬುದು ಬಲ್ಲವರ ಅಭಿಪ್ರಾಯ. ೧೯೮೭ ರ ಚುನಾವಣೆಯಂತೆ ೧೯೯೩ ರ ಪಂಚಾಯತ್‌ ಚುನಾವಣೆಯು ವ್ಯಾಪಕಗೊಂಡು ಮಹತ್ತರವಾದ ಸ್ಥಾನವನ್ನು ಪಡೆದಿದೆ. ಇನ್ನಷ್ಟು ಯುವಜನರು ಪ್ರಜಾತಾಂತ್ರಿಕವಾಗಿ ಹಾಗೂ ರಾಜಕೀಯವಾಗಿ ಚುನಾವಣೆಯಲ್ಲಿ ಬಹಳಷ್ಟು ಉತ್ಸಾಹದಿಂದ ಈ ಕಾರ್ಯದಲ್ಲಿ ಭಾಗವಹಿಸಿದರು. ಇತ್ತೀಚೆಗೆ ನಡೆದ ೨೦೦೦ ನೇ ಸಾಲಿನ ಪಂಚಾಯತ್‌ ಚುನಾವಣೆಗಳು ಸಹ ಬಹಳಷ್ಟು ಆಸಕ್ತಿಯಿಂದ ಕೂಡಿದ್ದವು. ಇಲ್ಲಿ ಬಹಳ ಆಶ್ಚರ್ಯಕರ ಬೆಳವಣಿಗೆಯಿಂದ ಅಭ್ಯರ್ಥಿಗಳ ಅವಿರೋಧ ಆಯ್ಕೆ. ಇದರಲ್ಲಿ ಅವಿರೋಧ ಎಂಬುದಕ್ಕೆ ಭಾರೀ ಅರ್ಥ ಮತ್ತು ಬೆಲೆ ಇದೆ ಎಂಬುದಾಗಿ ತಿಳಿದಿರುವುದು ಸಾರ್ವತ್ರಿಕ ಸತ್ಯವಾಗಿದೆ. ಅವಿರೋಧವಾಗಿ ಆಯ್ಕೆ ಬಯಸುವ ಹೆಚ್ಚಿನ ಅಭ್ಯರ್ಥಿಗಳು ಒಂದಿ ನಿರ್ದಿಷ್ಟ ಮೊತ್ತವನ್ನು ಆ ಗ್ರಾಮದ ಅಭಿವೃದ್ಧಿಗೆ ತಾನು ನೀಡುವುದಾಗಿ ಹೇಳುತ್ತಾನೆ. ನಾಲ್ಕು ಅಥವಾ ಐದು ಮಂದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದಲ್ಲಿ ಬಹಳಷ್ಟು ಹಣವೂ ವ್ಯಯವಾಗುತ್ತದೆ. ಆದ್ದರಿಂದ ಈ ನಾಲ್ಕೈದು ಅಭ್ಯರ್ಥಿಗಳಲ್ಲಿ ಪ್ರಬಲನಾದವನು ಉಳಿದವರು ಖರ್ಚು ಮಾಡುವ ಹಣಕ್ಕಿಂತ ಸ್ವಲ್ಪ ಹೆಚ್ಚಿಗೆ ಸೇರಿಸಿ ತಾನು ಈ ಮೊತ್ತವನ್ನು ಗ್ರಾಮದ ಅಭಿವೃಧಿಗೆ ನೀಡುವುದರಿಂದ ತನ್ನನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಕೋರುವನು. ಇದಕ್ಕೆ ಗ್ರಾಮಸ್ಥರು ಮತ್ತಿತರ ಸ್ಪರ್ಧಾಕಾಂಕ್ಷಿಗಳು ಒಪ್ಪಿಗೆ ನೀಡುತ್ತಾರೆ. ಇದರಿಂದ ಚುನಾವಣಾ ವಿಷಯವು ಅತಿ ಸೂಕ್ಷ್ಮವಾಗಿ ಬಗೆಹರಿದು ಅವಿರೋಧ ಆಯ್ಕೆ ನಡೆಯುತ್ತದೆ. ಇದು ರಾಜ್ಯಾದ್ಯಂತ ನಡೆದಂತೆ ವರದಿಯಾಗಿದೆ. ಸ್ವತಃ ಮುಖ್ಯಮಂತ್ರಿಯವರ ಸ್ವಕ್ಷೇತ್ರದಲ್ಲಿ ನಡೆದಿದೆ ಎಂದರೆ ಇದರ ವ್ಯಾಪ್ತಿ ಮತ್ತು ಪರಿಣಾಮವನ್ನು ಊಹಿಸಬಹುದು.

ಒಂದರ್ಥದಲ್ಲಿ ಇದು ಗ್ರಾಮಸ್ಥರ ರಾಜಕೀಯ ಹಕ್ಕನ್ನು ಮೊಟಕುಗೊಳಿಸಿದಂತಿದೆ. ಪ್ರಜಾತಾಂತ್ರಿಕವಾದ ಮತದಾನದ ಹಕ್ಕು ಗ್ರಾಮಸ್ಥರ ಬರೀ ರಾಜಕೀಯ ಹಕ್ಕು ಮಾತ್ರವಲ್ಲ ಜನಾಭಿಪ್ರಾಯದ ಒಂದು ಪರಿಣಾಮಕಾರಿ ಆಯುಧವೂ ಆಗಿದೆ. ಅವಿರೋಧವಾಗಿ ಆಯ್ಕೆ ಆಗುವವರ ಸಾಮಾಜಿಕ ನೆಲೆಗಳನ್ನು ಆರಿತರೆ ಇದು ಜನಾದೇಶವೋ ಅಥವಾ ಸ್ಥಾಪಿತ ಹಿತಾಸಕ್ತಿಯ ಭದ್ರತೆಯೋ ಎಂಬುದು ಸ್ಪಷ್ಟವಾಗುತ್ತದೆ. ಸರ್ವಸಂಮತಿಯಿಂದ ಅಂದರೆ ಜನಾಭಿಪ್ರಾಯದ ಒಲವಿನಿಂದ ಅವಿರೋಧವಾಗಿ ಆಯ್ಕೆ ಆಗುವ ಅಭ್ಯರ್ಥಿ ಮತ್ತು ಈ ಮೇಲಿನ ರೀತಿಯಿಂದ ಅವಿರೋಧವಾಗಿ ಆಯ್ಕೆ ಯಾಗುವ ಆಭ್ಯರ್ಥಿಗೆ ಬಹಳ ವ್ಯತ್ಯಾಸಗಳಿವೆ ಎಂಬುದು ಅಷ್ಟೇ ಸತ್ಯ. ಜನಾದೇಶದ ಒಲವಿನಿಂದ ಆಯ್ಕೆಯಾಗುವ ಆಭ್ಯರ್ಥಿಯು ಜನಾಭಿಪ್ರಾಯವನ್ನು ಗೆದ್ದರೆ ಮೇಲಿನ ಪ್ರಕ್ರಿಯೆಯಿಂದ ಆಯ್ಕೆಯಾದ ಅಭ್ಯರ್ಥಿಯು ಜನಾದೇಶವನ್ನು ಕಗ್ಗೊಲೆ ಮಾಡಿದಂತಾಗುತ್ತದೆ ಎಂಬುದು ಉಲ್ಲೇಖನೀಯ. ಈ ರೀತಿಯಿಂದ ಆದ ಗ್ರಾಮ ಪಂಚಾಯತ್‌ನ ಗ್ರಾಮಸಭೆಯು ಹೇಗಿರಬಹುದು ಮತ್ತು ಆ ಗ್ರಾಮದ ಗ್ರಾಮಸಭೆ ಸದಸ್ಯರಿಗೆ ಈ ಅಭ್ಯರ್ಥಿಯು ಯಾವ ರೀತಿ ಉತ್ತರದಾಯಿಯಾಗಬಲ್ಲದು ಎಂಬುದು ಮಹತ್ತರವಾದ ಪ್ರಶ್ನೆ.

ಈ ರೀತಿಯ ಅವಿರೋಧ ಆಯ್ಕೆ ವಿಧಾನದಲ್ಲಿ ಒಮ್ಮತ ಎಂಬುದು ಒಂದು ಸಂದೆಹಾತ್ಮಕ ಕಲ್ಪನೆಯಾಗಿದೆ. ಯಾಕೆಂದರೆ ಇದು ಅವಿರೋಧವಾಗಿ ಸ್ಪರ್ಧಿಸುವ ಅಭ್ಯರ್ಥಿಯ ವ್ಯಕ್ತಿತ್ತವನ್ನು ಅಂದರೆ – ಜಾತಿ, ದುಡ್ಡಿನ ಬಲ, ಪ್ರಭಾವ, ಆಸ್ತಿ ಅಂತಸ್ತು ಮತ್ತು ರಾಜಕೀಯ ಲೆಕ್ಕಾಚಾರ ಇವುಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಹಳ್ಳಿಯ ಮೇಲ್ಜಾತಿ ಶ್ರೀಮಂತರು ತಮ್ಮ ಹಣ ಮತ್ತು ಅಂತಸ್ತಿನ ಮೂಲಕ ರಾಜಕೀಯ ಲೆಕ್ಕಾಚಾರ ಹಾಕಿ ಇತರರ ಮೇಲೆ ಆಮಿಷ ಇಲ್ಲವೇ ಒತ್ತಡ ಹೇರಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಜನಜನಿತವಾಗಿದೆ. ಗ್ರಾಮಸ್ಥರು ತಿಳಿದೂ ತಿಳಿಯದಿರುವಂತೆ ಇದನ್ನು ವ್ಯಾಪಕ ಪ್ರತಿರೋಧವಿದ್ದರೂ ಮೌನವಾಗಿ ಒಪ್ಪಿಕೊಳ್ಳುತ್ತಾರೆ. ಆಗ ಗ್ರಾಮಸ್ಥರ ಪಾತ್ರವೇ ನಗಣ್ಯವಾದಂತೆ. ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯೊಳಗೆ ಸಂವಿಧಾನ ದತ್ತವಾದ ತಳಮಟ್ಟದ ಸಂಸ್ಥೆಗಳ ಚುನಾವಣೆಗೆ ಚುನಾವಣಾ ಆಯೋಗ ಮತ್ತು ಪೂರಕವಾದ ನಿಯಾಮಾವಳಿಗಳು ಇರುವಾಗ ಒಬ್ಬನು ತನ್ನ ಪ್ರಭಾವದ ಮೂಲಕ ಇತರರ ಸ್ಪರ್ಧಾಕಾಂಕ್ಷಿ ಮನೋಭಾವನ್ನು ಕುಗ್ಗಿಸುವುದು ಇಲ್ಲವೇ ಅವರ ರಾಜಕೀಯ ಹಕ್ಕುಗಳನ್ನು ಮೊಟಕುಗೊಳಿಸುವುದು ಎಷ್ಟು ಸಮಂಜಸ ಎಂದು ಗ್ರಾಮಸ್ಥರಾದರೂ ಚಿಂತಿಸಬೇಕು. ಏಣಿಶ್ರೇಣಿ ಸಮಾಜವು ಹಳ್ಳಿಯಲ್ಲಿ ಅನಮ್ಯವಾಗಿ ತಳವೂರಿರುವಾಗ ಇದನ್ನು ಪ್ರತಿರೋಧಿಸುವ ಅರ್ಹತೆ ಗ್ರಾಮಸ್ಥರಿಗಿದೆಯೇ ಅಥವಾ ಸಬಲೀಕರಣ ಯಾ ಸಶಕ್ತೀಕರಣ ಪ್ರಕ್ರಿಯೆಯಲ್ಲಿ ಇದರ ಅಗತ್ಯವಿದೆಯೇ ಎಂಬುದನ್ನು ವಿವೇಚಿಸಬೇಕಾಗಿದೆ.

ಇದಕ್ಕೆ ವಿರುದ್ಧವಾಗಿ ಅಂದರೆ ಪ್ರಜಾತಾಂತ್ರಿಕ ವ್ಯವಸ್ಥೆಗೆ ಹಾಗೂ ಅಭಿವೃದ್ಧಿ ದೃಷ್ಟಿಕೋನಕ್ಕೆ ಈ ಪ್ರಕ್ರಿಯೆ ಪೂರಕವಾಗಿದೆ ಎಂದು ಆಯ್ಕೆಯಾದ ಪ್ರಭಾವೀ ಅಭ್ಯರ್ಥಿ ಹೇಳಬಹುದು. ಯಾಕೆಂದರೆ ಚುನಾವಣೆ ನಡೆದರೆ ಇತರ ಅಭ್ಯರ್ಥಿಗಳಿಗೆ ಓಟು ದೊರೆಯದಂತೆ ಹಾಗೂ ಆತನನ್ನು ಗ್ರಾಮಸ್ಥರು ಒಂದು ರೀತಿ ಬಹಿಷ್ಕೃತರಾಗಿ ಕಾಣುವಂತೆ ಮಾಡುವ ಸಾಮರ್ಥ್ಯ ಈ ಪ್ರಭಾವೀ ವ್ಯಕ್ತಿಗಿರುವಾಗ ಗ್ರಾಮಪಂಚಾಯತಿಯ ಕಾರ್ಯಕ್ಷಮತೆ ಹೇಗಿರಬಹುದೆಂದು ನಾವೂ ಊಹಿಸಬಹುದು. ಕಳೆದ ಮಾರ್ಚ್ ತಿಂಗಳಲ್ಲಿ ಕೂಡ್ಲಿಗಿ ತಾಲ್ಲೂಕಿನ ೩೩ ಗ್ರಾಮ ಪಂಚಾಯತ್‌ ಚುನಾವಣೆಗಳಲ್ಲಿ ಒಟ್ಟು ೪೭೫ ಸದಸ್ಯರ ಪೈಕಿ ೧೦೮ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ೩೬೭ ಸದಸ್ಯರು ಚುನಾವಣೆಯಲ್ಲಿ ಆರಿಸಿ ಬಂದಿದ್ದಾರೆ.

ಇನ್ನು ೧೯೯೩ರ ಹಿರೇಹೆಗ್ಡಾಳ್‌ ಗ್ರಾಮಪಂಚಾಯತಿಯ ಚುನಾವಣಾ ಪ್ರಕ್ರಿಯೆಯನ್ನು ನೋಡೋಣ. ಇಲ್ಲಿ ೮ ಮಂದಿ ಅಭ್ಯರ್ಥಿಗಳನ್ನು ಚುನಾಯಿಸಲಾದರೆ ಇಬರನ್ನು ಅವಿರೋಧವಾಗಿ ಆರಿಸಲಾಗಿದೆ. (ಕೋಷ್ಟಕ ೫) ಮೊದಲೆಯದಾಗಿ ಕಾಯ್ದೆಗನುಗುಣವಾಗಿ ಮೀಸಾಲಾತಿ ಪಾಲಿಸಬೇಕಾಗುತ್ತದೆ.ಇದರ ಉಲ್ಲಂಘನೆಯಾಗುವಂತಿಲ್ಲ. ಯಾಕೆಂದರೆ ಇವೆಲ್ಲ ಸಂವಿಧಾನದತ್ತವಾಗಿದೆ. ಆದ್ದರಿಂದ ಇಲ್ಲಿ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ಮತ್ತು ಮಹಿಳಾ ಮೀಸಲಾತಿ ಎಲ್ಲವೂ ಆನಿವಾರ್ಯ. ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ಮೇಲುನೋಟಕ್ಕೆ ಇದಕ್ಕೆ ಬದ್ಧವಾಗಿ ನಡೆದಿದೆ ಎಂದು ಕಂಡುಬಂದರೂ ನಿಜವಾದ ಚುನಾವಣಾ ಪ್ರಕ್ರಿಯೆ ರಾಜಕಾರಣವಿರುವುದು ಆಭ್ಯರ್ಥಿಯ ಅಯ್ಕೆಗೆ ಸಂಬಂಧಿಸಿದಂತೆ.

ಸಮಾನ್ಯವಾಗಿ ಪ್ರತಿ ಗ್ರಾಮಗಳಲ್ಲಿ ಹಿರಿಯರು ಅಥವಾ ಯಜಮಾನರು ಎಂದು ಗುರುತಿಸಿಕೊಳ್ಳುವ ಜನರು ಇರುತ್ತಾರೆ. ಇವರು ಪ್ರಭಾವಿ ವ್ಯಕ್ತಿಗಳು ಮತ್ತು ಇವರ ಮಾತನ್ನು ಚಾಚೂ ತಪ್ಪದೇ ಅನುಸರಿಸಬೇಕಾಗುತ್ತದೆ. ಪ್ರತಿ ಜಾತಿ ವರ್ಗದಲ್ಲಿ ಈ ಹಿರಿಯರು ಅಥವಾ ಯಜಮಾನರು ಇರುತ್ತಾರೆ. ಇವರು ಹಿರಿಯರು ಹಾಗೂ ವಯಸ್ಸಾದವರು ಆಗಿರುವುದರಿಂದ ಇವರ ಮಾತಿಗೆ ಊರಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ ಮತ್ತು ಜನರು ಹೆಚ್ಚಾಗಿ ಇವರು ವಿರುದ್ಧ ಯಾರೂ ಸ್ಪರ್ಧಿಸದಂತೆ ನೋಡಿಕೊಳ್ಳುತ್ತಾರೆ. ಹೆಚ್ಚಾಗಿ ಅವೊರೋಧ ಅಯ್ಕೆ ನಡೆಯಲು ಇವರು ಬಯಸುತ್ತಾರೆ. ಇವರ ಮಾತಿನ ವಿರುದ್ಧ ಯಾರಾದರೂ ಸ್ಪರ್ಧಿಸಿದಲ್ಲಿ ಆ ಅಭ್ಯರ್ಥಿಗೆ ಊರಲ್ಲಿ ಮತ ನೀಡದಂತೆ ನೋಡಿಕೊಳ್ಳುತ್ತಾರೆ. ಇದು ಊರಿನ ಯಜಮಾನರ ಚುನಾವಣಾ ಪ್ರಕ್ರಿಯೆ ರಾಜಕಾರಣ.

ಇನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿ ಇಲ್ಲೂ ಅದೇ ನಡಾವಳಿ ಕಂಡು ಬರುತ್ತದೆ ಮೇಲ್ವರ್ಗದವರ ತೆರೆಮರೆಯ ಹಸ್ತಕ್ಷೇಪವು ಇರುತ್ತದೆ. ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಥವಾ ದಲಿತ ಕ್ಷೇತ್ರವು ಒಂದು ಸೂಕ್ಷ್ಮ ಗ್ರಾಹಿ ಹಾಗೂ ನಿರ್ಣಾಯಕ ಕ್ಷೇತ್ರವಾಗಿರುವುದರಿಂದ ಪಂಚಾಯತ್‌‌ನ ಅಭಿವೃದ್ಧಿ ಅಥವಾ ವಿರೋಧ ಪ್ರತಿರೋಧಗಳು ಈ ಕ್ಷೇತ್ರವನ್ನು ಅವಲಂಬಿಸಿರುವುದರಿಂದ ಮೇಲ್ಜಾತಿಗಳು ತಮಗೆ ನಿಷ್ಠನಾಗಿರುವ ಈ ವರ್ಗದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡುವಂತೆ ಆ ವರ್ಗದ ಯಜಮಾನರಲ್ಲಿ ಪರೋಕ್ಷವಾಗಿ ಒತ್ತಡ ಹಾಕುತ್ತಾರೆ. ಹಾಗೂ ಸಫಲರಾಗುತ್ತಾರೆ. ಇವರೆಲ್ಲ ಹೆಬ್ಬೆಟ್ಟು ಒತ್ತುವ ಹಾಗೂ ಪ್ರತಿರೋಧವಿಲ್ಲದ ಅಭ್ಯರ್ಥಿಗಳಾಗಿರುತ್ತಾರೆ. ಇದರಿಂದ ಮೇಲ್ವವರ್ಗದವರ ಆಸೆ ಆಕಾಂಕ್ಷೆಗಳು ಯಾವುದೇ ವಿರೋಧವಿಲ್ಲದೆ ಈಡೇರುವುದು. ಹಿರೇಹೆಗ್ಡಾಳ್‌ ಗ್ರಾಮದ ಯಜಮಾನರು ಯಾ ಹಿರಿಯರು ಶೆಟ್ರ ಗುರುಸಿದ್ಧಪ್ಪ (ಹಿರೇಹೆಗ್ಡಾಳ್‌), ಬಣಕಾರ ಸಿದ್ಧಲಿಂಗಪ್ಪ, ತಳವಾರ ಮೂಗುಬಸಪ್ಪ, ಮೈದೂರು ಚೆನ್ನಬಸಪ್ಪಾ, ಪತ್ತಿರಾಜ, ಮತ್ತು ಶಂಕರಪ್ಪ (ಬೊಪ್ಪಲಾಪುರ), ಸಾಣೇಹಳ್ಳಿ ಯಾಜಮಾನರು ಮಲಕನಹಳ್ಳಿ ಚೌಡಪ್ಪ, ಗುಲುಗುಲು ಹನುಮಂತಪ್ಪ, ಕಾಳಿಂಗೇರಿ ಗೋವಿಂದಪ್ಪ, ಹೊನ್ನೂರಪ್ಪ ಮತ್ತು ಅರಗನಳ್ಳಿ ನಾಗಪ್ಪ.

ಅಭ್ಯರ್ಥಿಗಳ ಸಾಮಾಜಿಕ ನೆಲೆಗಳು :- ನಾವು ಹೇಗೆ ಒಂದು ಗ್ರಾಮ ಅಥವಾ ಗ್ರಾಮಪಂಚಾಯತಿಯ ಸಮಾಜೋ- ಅರ್ಥಿಕ ರಾಜಕೀಯ ನೆಲೆಗಳನ್ನು ಅಭ್ಯಸಿಸುತ್ತೇವೆಯೇ ಹಾಗೆಯೇ ಒಂದು ಗ್ರಾಮಪಂಚಾಯತಿಯ ಸದಸ್ಯರುಗಳ ಸಾಮಾಜಿಕ ನೆಲೆಗಳು ಅಗತ್ಯವಾಗಿವೆ. ಸಾಮಾಜಿಕ ನೆಲೆಗಳೆಂದರೆ ಕೇವಲ ಸಾಮಾಜಿಕ ಅಂಶವಾಗಿರದೆ ಅವರ ಅರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಇದು ಬಿಂಬಿಸುತ್ತದೆ. ಇದು ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲವರೇ ಹಾಗೂ ಸಂಘರ್ಷ ಸನ್ನಿವೇಶಗಳನ್ನು ನಿಭಾಯಿಸುವ, ಅದಷ್ಟು ಕಡಿಮೆಗೊಳಿಸಿ ಗ್ರಾಮದ ವಾತಾವರಣವನ್ನು ಸರಳೀಕರಿಸುವ ಮನೋಭಾವ ಅಥವಾ ಸಾಮರ್ಥ್ಯವನ್ನು ಹೊಂದಿರುವರೆ ಎಂಬುದಾಗಿ ತಿಳಿಯಲು ಸಹಕಾರಿಯಾಗುತ್ತದೆ. ಅದರೆ ಇಲ್ಲಿ ಒಂದು ವಿಷಯ ಸ್ಪಷ್ಟವಾಗಿದೆ. ಯಜಮಾನರ ಶಿಪಾರಸ್ಸಿನಿಂದ ಪ್ರೇರಿತರಾದ ಅಭ್ಯರ್ತಿಗಳು ಚುನಾವಣೆಯನ್ನೆದುರಿಸಿ ಆಯ್ಕೆಯಾದರೂ ಪ್ರತಿರೋಧಗಳಿದ್ದಾಗಲೂ ಅದನ್ನೆದುರಿಸಿ ಚುನಾಯಿತರಾಗಿದ್ದಾರೆ. ಇದಕ್ಕೆ ಮೂಲ ಪ್ರೇರಣೆ ಮತ್ತು ಗೆಲುವಿನ ಅಂಶ ಯಜಮಾನರ ಪ್ರಭಾವ ಎಂಬುದು ಗಮನಾರ್ಹ. ಇನ್ನೊಂದೆಡೆ ಸೋತ ಅಭ್ಯರ್ಥಿಗಳು ಯಜಮಾನರ, ಅಭ್ಯರ್ಥಿಗಳ ಮತ್ತು ಗ್ರಾಮಸ್ಥರ ಕೆಂಗಣ್ಣಿಗೂ ವಿರೋಧಕ್ಕೂ ಗುರಿಯಾಗುವುದು ಅಷ್ಟೇ ದುರದೃಷ್ಟಕರ ಬೆಳವಣಿಗೆಯಾಗಿದೆ. ಈ ಯಜಮಾನರ ಪ್ರಭಾವವು ಒಟ್ಟಾರೆಯಾಗಿ ಗ್ರಾಮಸ್ಥರ ಒಟ್ಟು ಜನಾಭಿಪ್ರಾಯವಾಗಿ ಮೂಡಿ ಬರುವುದಿದೆಯಲ್ಲ ಅದುವೇ ಬಹಳ ಆಶ್ಚರ್ಯ. ಇದೇ ತೋರಿಕೆಗೆ ಒಮ್ಮತ ಎಂದೆಣಿಸುತ್ತದೆ. ಯಾಕೆಂದರೆ ವಿರೋಧಿ ಅಭ್ಯರ್ಥಿಯು ಡೆಪಾಸಿಟ್ ಕಳೆದುಕೊಳ್ಳಲು ಯಜಮಾನ ಅಥವಾ ಗ್ರಾಮಸ್ಥರ ಜನಾದೇಶವು ಈ ರೀತಿ ಸಹಕಾರಿಯಾಗುವುದಾದರೆ ಜನತಾಂತ್ರಿಕ ವ್ಯವಸ್ಥೆಯನ್ನು ನಾವು ಪರಿಹಾಸ್ಯ ಮಾಡಿದಂತಾಗುತ್ತದೆ.

ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್ ಸದಸ್ಯರ ಸಮಾಜೋ ಆರ್ಥಿಕ ನೆಲೆಗಳನ್ನು ಪರಿಶೀಲಿಸಿದಾಗ ಚುನಾಯಿತ ಮತ್ತು ಅವಿರೋಧ ಆಯ್ಕೆಯ ಹಿಂದಿರುವ ಜಾಡು ಸ್ಪಷ್ಟವಾಗಿ ಕಾಣುತ್ತದೆ. ಅವಿರೋಧ ಆಯ್ಕೆಯಾದ ಒಬ್ಬ ಸದಸ್ಯ ಉಪ್ಪಾರ ಜಾತಿಯವರಾದರೆ ಇನ್ನೊಬ್ಬ ಬೋವಿ ಜಾತಿಯವರು. ಇಬ್ಬರೂ ಅಕ್ಷರಸ್ಥರೆ. ಚುನಾಯಿತರಾದವರಲ್ಲಿ ಇಬ್ಬರೂ ಪರಿಶಿಷ್ಟ ಜಾತಿಯ ಸದಸ್ಯರು ಅನಕ್ಷರರಾಗಿದ್ದಾರೆ ಎಂಬುದು ಗಮನಾರ್ಹ. ಇದರಲ್ಲಿ ಒಬ್ಬರು ಮಹಿಳೆ. ಒಟ್ಟು ೧೦ ಮಂದಿ ಸದಸ್ಯರಲ್ಲಿ ೪ ಮಂದಿ ಮಹಿಳೆಯರು. ಇತರರಲ್ಲಿ ಐದು ಮಂದಿ ಲಿಂಗಾಯಿತರು, ಒಬ್ಬ ನಾಯಕ ಮಹಿಳೆಯಿದ್ದಾರೆ. ಇಬ್ಬರು ಲಿಂಗಾಯಿತ ಮಹಿಳೆಯರಲ್ಲಿ ಒಬ್ಬರು ಅಧ್ಯಕ್ಷರಾಗಿದ್ದಾರೆ. ಸದಸ್ಯರ ಜಾತಿ ಇತ್ಯಾದಿ ವಿವರಗಳನ್ನು ಕೋಷ್ಟಕದಲ್ಲಿ ಕಾಣಬಹುದು.

ಸದಸ್ಯರುಗಳಲ್ಲಿ ಒಬ್ಬ ಪರಿಶಿಷ್ಟ ಜಾತಿಯ ಸದಸ್ಯನನ್ನು ಹೊರತುಪಡಿಸಿ ಎಲ್ಲರೂ ಭೂಮಿಯನ್ನು ಹೊಂದಿದ್ದಾರೆ. ಉಳಿದಿಬ್ಬರೂ ಅದೇ ಜಾತಿಯ ಸದಸ್ಯರಿಗೆ ಭೂಮಿ ಇದೆ.ಹಾಗೆಯೇ ನಾಯಕ ಜನಾಂಗದ ಸದಸ್ಯರು ಸಹ. ಒಟ್ಟಾರೆಯಾಗಿ ಸದಸ್ಯರುಗಳ ಭೂ ಹಿಡುವಳಿ ಪ್ರಮಾಣ ೨ ಎಕರೆಯಿಂದ ೩೦ ಎಕರೆವರೆಗೆ ಇರುತ್ತದೆ ಎಂದು ಲಭ್ಯವಿರುವ ಮಾಹಿತಿಗಳಿಂದ ತಿಳಿಯುತ್ತದೆ. ಒಟ್ಟು ಮೂರು ಮಂದಿ ಪರಿಶಿಷ್ಟ ಜಾತಿಯ ಸದಸ್ಯರಲ್ಲಿ ಒಬ್ಬರು ಭೂ ರಹಿತವಾದರೆ ಉಳಿದಿಬ್ಬರೂ ೭ ಮತ್ತು ಎರಡು ಎಕರೆ ಭೂಮಿ ಹೊಂದಿರುತ್ತಾರೆ. ನಾಯಕ ಪಂಗಡದ ಸದಸ್ಯರು ೮ ಎಕರೆ ಭೂಮಿ ಹೊಂದಿದ್ದಾರೆ. ಉಳಿದ ಐವರು ಮೇಲ್ಜಾತಿಯ ಸದಸ್ಯರಲ್ಲಿ ಒಬ್ಬರು ೨೦ ಎಕರೆ, ಇಬ್ಬರು ೧೦ ಎಕರೆ, ಒಬ್ಬರು ೧೨ ಎಕರೆ, ಮತ್ತು ಒಬ್ಬರು ೧೪ ಎಕರೆ ಭೂಮಿ ಹೊಂದಿದ್ದಾರೆ. ಇವುಗಳಲ್ಲಿ ಕೆಲವು ನೀರಾವರಿ ಭೂಮಿಯಾದರೆ ಕೆಲವು ಒಣ ಭೂಮಿಯಾಗಿರುತ್ತದೆ.

ಇದರಲ್ಲಿ ಒಬ್ಬ ಸದಸ್ಯರು ೧೯೭೮ ರಲ್ಲಿ ಗ್ರಾಮಪಂಚಾಯತ್ ಸದಸ್ಯರಾಗಿದ್ದರು. ಇವರು ಹೊಲವನ್ನು ಗುತ್ತಿಗೆ ಕೊಟ್ಟು ಅಂಗಡಿ ವ್ಯಾಪಾರ ನಡೆಸುತಿದ್ದಾರೆ. ಈ ಸದಸ್ಯರಿಗೆ ಪೂರ್ವ ರಾಜಕೀಯ ಅನುಭವವಿದ್ದರೂ ತಮ್ಮ ಸದಸ್ಯತ್ವವನ್ನು ಪರಿಣಾಮಕಾರಿಯಾಗಿ ತೊಡಗಿಸದಿರುವ ಹಾಗೆ ಕಾಣುತ್ತಾರೆ. ಇತರ ಸದಸ್ಯರೆಲ್ಲರೂ ಪೂರ್ವ ರಾಜಕೀಯಾ ಅನುಭವವಿಲ್ಲದವರು.