ಗ್ರಾಮಪಂಚಾಯತ್‌ ವ್ಯಾಪ್ತಿಯ ಗ್ರಾಮದ ಜನಜೀವನ ಮತ್ತು ಪಂಚಾಯತ್‌ ಕಾರ್ಯಕ್ಷಮತೆಯನ್ನು ಅಭ್ಯಸಿಸಿದಾಗ ಈ ಕೆಳಗಿನ ತಥ್ಯಗಳನ್ನು ನಾವು ಗುರುತಿಸಬಹುದು.

ಗ್ರಾಮ ಜೀವನವು ಸಂಘರ್ಷಣಾತ್ಮವಾಗಿರದೆ, ಇರುವ ವ್ಯವಸ್ಥೆ ಹಾಗೂ ವ್ಯವಸ್ಥೆಯ ಉತ್ಪಾದನಾ ಸಂಬಂಧಗಳೊಳಗೆ ನೇರ ಅಲ್ಲದಿದ್ದರೂ ಪರಸ್ಪರ ಹೊಂದಾಣಿಕೆಯ ಲಕ್ಷಣ ವಿರುವುದನ್ನು ಕಾಣಬಹುದು. ಹಳ್ಳಿಯ ಜನಜೀವನವು ಇದಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಪಂಚಾಯತ್‌ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮೀಸಲಾತಿಯು ಇನ್ನಷ್ಟು ಸ್ತರೀಕೃತವಾಗಿ ವಿಸ್ತೃತಗೊಂಡರೂ ಮೀಸಲಾತಿಯು ಅದರ ಆಶಯಗಳಿಗೆ ಪೂರಕವಾಗಿ ವಿಸ್ತರಿಸಿಲ್ಲ. ವಿಸ್ತರಿಸಿದರೂ ಹಳ್ಳಿಯಲ್ಲಿ ಪ್ರಚಲಿತವಿರುವ ಉತ್ಪಾದನಾ ಸಂಬಂಧಗಳ ನೆಲೆಯಲ್ಲಿ ಹಾಗೂ ಒದಗಿದ ಅಧಿಕಾರ ಸಮೀಕರಣದಲ್ಲಿ ಗಣನೀಯ ಬದಲಾವಣೆಯನ್ನು ಮಾಡುವಷ್ಟರ ಮಟ್ಟಿಗೆ ಇದು ಶಕ್ತವಾಗಿಲ್ಲ. ಆದ್ದರಿಂದ ಹೊಂದಾಣಿಕೆ ಅಥವಾ ಸಮಜಾಯಿಸುವಿಕೆ ಪ್ರವೃತ್ತಿ ಪರಂಪರಾಗತವಾಗಿ ಸಾಂಸ್ಥಿಕವಾಗಿರುವ ಜೊತೆಗೆ ಇನ್ನೂ ಅದು ಬದಲಾವಣಾ ಮೌಲ್ಯಕ್ಕನುಗುಣವಾಗಿ ಮತ್ತು ಸ್ಥಿತ್ಯಂತರ ಪ್ರಕ್ರಿಯೆಗೆ ಒಳಪಡುವಂತೆ ಕಂಡುಬಂದರೂ ನಿಜವಾಗಿ ಹಾಗಿಲ್ಲ. ಬೇರೆ ಯಾವುದೇ ಈ ವ್ಯವಸ್ಥೆ ಇರುವ ಅಥವಾ ಇದ್ದ ಸಮಜಾಯಿಸುವಿಕೆ ಪ್ರವೃತ್ತಿ ಪರಂಪರಾಗತವಾಗಿ ಸಾಂಸ್ಥಿಕವಾಗಿರುವ ಜೊತೆಗೆ ಇನ್ನೂ ಅದು ಬದಲಾವಣಾ ಮೌಲ್ಯಕ್ಕನುಗುಣವಾಗಿ ಮತ್ತು ಸ್ಥಿತ್ಯಂತರ ಪ್ರಕ್ರಿಯೆಗೆ ಒಳಪಡುವಂತೆ ಕಂಡುಬಂದರೂ ನಿಜವಾಗಿ ಹಾಗಿಲ್ಲ. ಬೇರೆ ಯಾವುದೇ ಈ ವ್ಯವಸ್ಥೆ ಇರುವ ಅಥವಾ ಇದ್ದ ಇಂತಹ ಹಳ್ಳಿಗಳಲ್ಲಿ ತಕ್ಷಣ ಅಧಿಕಾರ ಸಮೀಕರಣದ ಹಿನ್ನೆಲೆಯಲ್ಲಿ ಇದಕ್ಕೆ ಒದಗಿ ಬರುವ ಮೀಸಲಾತಿ ಚೌಕಟ್ಟು ಮತ್ತು ಸ್ತರಗಳ ಸ್ಥಿತ್ಯಂತರದಿಂದ ಹಳ್ಳಿಯ ಪರಿಸ್ಥಿತಿ ಪ್ರಕ್ಷುಬ್ಧವಾಗುವ ರೀತಿಯಲ್ಲಿ ಇರಲೂಬಹುದು. ಅಂದರೆ ಅದು ಒಂದು ರೀತಿ ಆರದ ಬೆಂಕಿಯಂತಿರುತ್ತದೆ. ಹಳ್ಳಿಯ ಸಾಮಾಜಿಕ ಜನಜೀವನವು ಏರುಪೇರಾಗುತ್ತದೆ. ಆದರೆ ಹಿರೇಹೆಗ್ಡಾಳ್‌ನ ಪರಿಸ್ಥಿತಿ ಹಾಗಾಗಿಲ್ಲ.

ಹಳ್ಳಿಯಲ್ಲಿ ಅಥವಾ ಈ ಪಂಚಾಯತ್‌ನಲ್ಲಿ ಲಿಂಗಾಯಿತರನ್ನು ಬಿಟ್ಟರೆ ಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ವಾಸಸ್ಥಾನಗಳು ಸಹ ಎರಡನೇ ಸ್ಥಾನಪಡೆದಿದೆ. ಹಾಗೆಯೇ ಬೊಪ್ಪಲಾಪುರ ಗ್ರಾಮದ ಸಾಣೇಹಳ್ಳಿಯಲ್ಲಿ ಇರುವ ಎಲ್ಲ ಮನೆಗಳು ಪರಿಶಿಷ್ಟ ಜಾತಿಯವರದೆ. ಈ ಜನಾಂಗದ ಹೆಚ್ಚಿನ ಜನರ ಹೆಚ್ಚಾಗಿ ಅತೀ ಸಣ್ಣ ಮತ್ತು ಸಣ್ಣ ಭೂಹಿಡುವಳಿಯನ್ನು ಹೊಂದಿರುತ್ತಾರೆ. ಇವರು ಕೃಷಿಯ ಕೆಲಸ ಇಲ್ಲದ ಸಂದರ್ಭದಲ್ಲಿ ಕಾಫಿ ಸೀಮೆಗೆ ವಲಸೆ ಹೋಗುವುದರಿಂದ ಪರ್ಯಾಯ ಉದ್ಯೋಗದ ಪ್ರಕ್ರಿಯೆಗೆ ಒಳಗಾಗಿರುವುದು ಸಹ ಕಂಡು ಬರುತ್ತದೆ. ಇದರಿಂದ ಅವರಿಗೆ ಅನುಭವ, ಜ್ಞಾನ ಹಾಗೂ ಹಣದ ಭದ್ರತೆ ತಕ್ಕಮಟ್ಟಿಗೆ ಒದಗಿಸದಂತಾಗುತ್ತದೆ. ಹೀಗೆ ವ್ಯಕ್ತಿಗತವಾಗಿ ಸ್ವಾವಲಂಬಿ ಬದುಕು ಒಂದೆಡೆಯಾದರೆ, ಸಮುದಾಯದ ಸಂದರ್ಭದಲ್ಲಿ ಆಧುನಿಕತೆಯ ಅನಿವಾರ್ಯತೆಗೆ ಸ್ಪಂದಿಸುವ ಸಹಜೀವನ ಈ ಹಳ್ಳಿಗರಿಗೆ ಇದೆ ಎನ್ನಬೇಕು. ಅಂತೆಯೇ, ಮೀಸಲಾತಿ ಪ್ರಕ್ರಿಯೆಯು ಬಹುಮಟ್ಟಿಗೆ ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಸಾಮರಸ್ಯ ಭಾವವನ್ನು ತಾಳುವಲ್ಲಿ ಯಶಸ್ವಿಯಾಗಿದೆ. ಯಜಮಾನದ ಪಾತ್ರವು ಇದ್ದರೂ ಸಹ ಹೊಂದಾಣಿಕೆಯ ಮನೋಭಾವ ಗ್ರಾಮಸ್ಥರಲ್ಲಿ ವ್ಯಕ್ತವಾಗುವಂತಹದು.

ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳು ಸಹ ಮೀಸಲಾತಿಯಿಂದ ಅಧಿಕಾರ ಸಮೀಕರಣ ಪ್ರಕ್ರಿಯೆಯಲ್ಲಿ ಪಾಲುಪಡೆದರೂ ಗ್ರಾಮಜೀವನವು ಹೊಂದಾಣಿಕೆಯಿಂದೊಡಗೂಡಿದೆ. ಇನ್ನಿತರ ಕೆಲವು ಅನಮ್ಯ ಗ್ರಾಮಗಳನ್ನು ವೀಕ್ಷಿಸಿದರೆ ಅಧಿಕಾರ ಸಮೀಕರಣವು ಸಂಘರ್ಷದಿಂದ ಕೂಡಿದ್ದು ಗ್ರಾಮದ ನಾಯಕತ್ವಕ್ಕೆ ಸಂಬಂಧಿಸಿ ಹೊಯೈಕೈ ನಡೆಯುವುದನ್ನು ಕಾಣಬಹುದು ಮತ್ತು ಇಂದಿನ ಅಧಿಕಾರ ಸಮೀಕರಣ ರಾಜಕೀಯದಲ್ಲಿ ಇದು ದಿನ ಮಾತಾಗಿರುತ್ತದೆ. ಒಳ ರಾಜಕೀಯ ಏನೇ ಇರಲಿ ಹಿರೇಹೆಗ್ಡಾಳ್‌ ಗ್ರಾಮಜೀವನವು ಶಾಂತಿಯುತವಾಗಿ ಹೊಂದಾಣಿಕೆಯಿಂದೊಡಗೂಡಿದೆ.

ಹಳ್ಳಿಯಲ್ಲಿನ ಸಾಂಪ್ರದಾಯಿಕ ಯಜಮಾನರ ಪಾತ್ರವು ಈಗಿನ ಆಧುನಿಕ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಮುಂದುವರಿದಿರುವುದು ಈ ಗ್ರಾಮದ ಇನ್ನೊಂದು ವೈಶಿಷ್ಟವಾಗಿದೆ. ಸಾಮಾನ್ಯವಾಗಿ ಇಲ್ಲಿನ ನಾಲ್ಕು ಹಳ್ಳಿಗಳಲ್ಲೂ ಪ್ರತಿ ಜಾತಿ ವರ್ಗಗಳಲ್ಲಿ ಅವರವರ ಜಾತಿ ಹಿರಿಯರು ಅಥವಾ ಯಜಮಾನರಿರುತ್ತಾರೆ. ಇವರ ಮಾತನ್ನು ಅಲಕ್ಷಿಸಿ ಈಗಿನ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಿಸಿದರೂ ಈತನು ಸೋಲುವುದೆಂದರೆ ಯಜಮಾನರ ಯಜಮಾನಿಕೆಯ ಪ್ರಭಾವವನ್ನು ತೋರಿಸುತ್ತದೆ. ಮತ್ತು ಇದೇ ಜನಾದೇಶವಾಗಿ ರೂಪುಗೊಳ್ಳುವುದು ಇಲ್ಲಿನ ವಿಶೇಷತೆ. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತಿಯು ಪ್ರಬಲ ಪ್ರಭಾವಿಗಳಿಂದ ಹಾಗೂ ಮೀಸಲಾತಿಯನ್ವಯ ಬದಲಿ ಪ್ರತಿನಿಧಿಗಳಿಂದ ಕೂಡಿರುವುದು ಕಂಡುಬರುತ್ತದೆ.

ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಗ್ರಾಮಪಂಚಾಯತ್‌ ಹೊಂದಾಣಿಕೆ ಪ್ರವೃತ್ತಿಯಿಂದ ಕೂಡಿದ್ದು ಜಾತ್ರೆ ಉತ್ಸವಗಳು ಯಾವುದೇ ಆಡೆತಡೆ ಇಲ್ಲದೆ, ಸಮುದಾಯಗಳೊಡನೆ ದ್ವೇಷಗಳಿಲ್ಲದೆ ನಡೆಯುವುದು ಸಹ ಅಷ್ಟೇ ಪ್ರಾಮುಖ್ಯವಾಗಿದೆ. ಊರಿನ ಮುಖ್ಯ ದೇವತೆಯಾದ ಪರಿಶಿಷ್ಟರ ಸಮಾದೆಮ್ಮನ ಜಾತ್ರೆ ಗ್ರಾಮದ ಸಮಸ್ತ ಸಮುದಾಯದಂತೆ ಆಚರಣೆಗೊಳಪಡುತ್ತದೆ. ಇವಳ ಆರ್ಚಕರು ಕೂಡ ಪರಿಶಿಷ್ಟ ಜಾತಿಯವರೆ, ಮೇಲ್ವರ್ಗದವರೂ ಇಲ್ಲಿ ಪ್ರಥಮವಾಗಿ ಪೂಜೆ ಸಲ್ಲಿಸಿ ತೃಪ್ತಿಪಡುತ್ತರಾದರೂ ಇನ್ನುಳಿದಂತೆ ಆಚರಣೆಗಳು ಯಥಾಪ್ರಕಾರ ನಡೆಯುತ್ತವೆ.

ಪಂಚಾಯತ್‌ ಸದಸ್ಯರಲ್ಲಿ ಮಹಿಳೆಯರ ಪಾತ್ರವು ತೀರಾ ಗೌಣವಾಗಿದೆ. ಅಧ್ಯಕ್ಷರು ಪ್ರಬಲ ವರ್ಗಕ್ಕೆ ಸೇರಿದ ಅಕ್ಷರಸ್ಥ ಮಹಿಳೆಯಾದರೂ ಪರಿಣಾಮಕಾರಿಯಾಗಿ ಪಾತ್ರ ನಿರ್ವಹಿಸಲು ಅವರಿಗೆ ಆಗುತ್ತಿಲ. ಅಂತಹ ನೈಪುಣ್ಯತೆ ಮತ್ತು ಪಂಚಾಯತ್‌ ಕಾರ್ಯಗಳು ಹಾಗೂ ಅಧಿಕಾರಿಗಳ ಬಗ್ಗೆ ಅರಿವು ಇಲ್ಲದಿರುವುದು ಕೂಡಾ ಇದಕ್ಕೆ ಪೂರಕವಾಗಿದೆ. ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ವರ್ಗದವರ ಪಾತ್ರವೂ ಇದಕ್ಕಿಂತ ಭಿನ್ನವೇನಲ್ಲ. ಈ ಗ್ರಾಮಪಂಚಾಯತಿಯಲ್ಲಿ ಪಂಚಾಯತ್‌ ರಾಜ್‌ ಕಾಯ್ದೆ ಉಲ್ಲಂಘನೆಯ ಬಗ್ಗೆ ಪ್ರಾಸ್ತಾಪಿಸಿದರೆ ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಅತೀ ಮುಖ್ಯವಾಗಿ ಪಂಚಾಯತ್‌‌ನಲ್ಲಿ ಸಮಿತಿಗಳ ಅಸ್ತಿತ್ವವಿಲ್ಲದಿರುವುದು ಕಾಯಿದೆಯ ಮಹಾ ಉಲ್ಲಂಘನೆಯಾಗಿದೆ. ಸಾಮಾನ್ಯವಾಗಿ ಪ್ರತೀ ಪಂಚಾಯತ್‌ನ ಗೋಡೆ ಅಥವಾ ಕರಿಹಲಗೆಯಲ್ಲಿ ಸಮಿತಿ ಕುರಿತು ವಿವರಗಳಿರುತ್ತವೆ. ಆದರೆ ಇಲ್ಲಿಲ್ಲ. ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರಿಗೂ ಈ ಕುರಿತು ಜ್ಞಾನವೇ ಇಲ್ಲ. ಕಾರ್ಯದರ್ಶಿಯು ಈ ಕುರಿತು ಮೌನವಾಗಿದ್ದರೆ. ಹಾಗೆಯೇ ಪಂಚಾಯತ್‌ನ ಕಾರ್ಯಕ್ಷಮತೆಯನ್ನು ನೋಡಿದರೆ ಉಲ್ಲಂಘನೆ ಇನ್ನಷ್ಟು ಕಂಡುಬರುತ್ತದೆ. ಗ್ರಾಮಸಭೆಗಳನ್ನು ಸರಿಯಾಗಿ ಕರೆಯದಿರುವುದು, ಎರಡು ಸಭೆಗಳ ಮಧ್ಯೆ ನಿಗದಿತ ಅಂತರವನ್ನು ಸರಿಯಾಗಿ ಪಾಲಿಸದಿರುವುದು, ಕೆಲವೊಮ್ಮೆ ಗ್ರಾಮಸಭೆಯನ್ನು ಪಂಚಾಯತ್‌ ಕಾರ್ಯಾಲಯದ ಬಾಗಿಲು ಹಾಕಿ ನಡೆಸುವುದು, ಸಭೆ ನಡೆಯುವುದಕ್ಕೆ ಪೂರಕವಾಗಿ ವ್ಯಾಪಕವಾದ ಪ್ರಚಾರ ಮಾಡದಿರುವುದು, ಪಂಚಾಯತ್‌ ಕಾಮಗಾರಿಯನ್ನು ಕಾಂಟ್ರಾಕ್ಟರ್ ಮೂಲಕ ಮಾಡಿಸುವುದು ಮತ್ತು ಗ್ರಾಮಸಭೆಗೆ ಇರಬೇಕಾದ ಅಧಿಕಾರ ಮತ್ತು ಕಾರ್ಯಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರದಿರುವುದು ಇವೆಲ್ಲಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಆದ್ದರಿಂದ ಬಹು ಮುಖ್ಯವಾಗಿ ಪಂಚಾಯತ್‌ ಸದಸ್ಯರೆಲ್ಲರಿಗೂ ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆಯ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಮತ್ತು ಸದಸ್ಯರಾಗಿ ಕಾರ್ಯವಿರ್ವಹಿಸುವ ಮೊದಲು ಕಾಯ್ದೆಯ ಪ್ರಾಥಮಿಕ ಪರಿಜ್ಞಾನವನ್ನು ಅಂತರ್ಗತ ಮಾಡಿಕೊಳ್ಳುವುದು ಇವರ ಪ್ರಮುಖ ಆದ್ಯತೆಯಾಗಬೇಕು. ಹಾಗೆಯೇ ಗ್ರಾಮಸ್ಥರಿಗೆ ಗ್ರಾಮಸಭೆ ಇದರ ಅಧಿಕಾರ ಮತ್ತು ಕಾರ್ಯಗಳನ್ನು ತಿಳಿಹೇಳುವುದು ಅತೀ ಅಗತ್ಯವಾಗಿದೆ. ಕೃಷಿ ಈ ಗ್ರಾಮದ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಕೃಷಿಯಿಂದ ಕೈಗಾರಿಕೆಗೆ ಇಲ್ಲವೇ ಸೇವಾರಂಗಕ್ಕೆ ಹೊಂದಿಕೊಳ್ಳುವಂತೆ ಇಲ್ಲಿನ ವ್ಯವಸ್ಥೆ ಪೂರಕವಾಗಿಲ್ಲ. ಆರ್ಥಿಕತೆಯು ಯಾವುಡೇ ಸ್ಥಿತ್ಯಂತರಕ್ಕೆ ಒಳಗಾಗದೇ ತಟಸ್ಥವಾಗಿದ್ದು ಹೊಸ ಬದಲಾವಣಾ ಹಂತದ ಸ್ವರೂಪಕ್ಕೆ ಇನ್ನೂ ತೆರೆದು ಕೊಂಡಿಲ್ಲ; ಮತ್ತು ಆ ದಿಕ್ಕಿನತ್ತ ಪಯಣಿಸುವುದನ್ನು ಗ್ರಾಮವು ಊಹಿಸಲು ಪ್ರಸ್ತುತ ಪರಿಸ್ಥಿಯಲ್ಲಿ ಸಾಧ್ಯವಾಗದು.

ಗ್ರಾಮದಲ್ಲಿ ಸಾಗುವಾಳಿದಾರರ ಪ್ರಮಾಣ ಹೆಚ್ಚಾದರೆ ಕೃಷಿ ಕಾರ್ಮಿಕರ ಪ್ರಮಾಣ ಕಡಿಮೆ. ಇವು ಸೇರಿ ಗ್ರಾಮದ ಒಟ್ಟು ದುಡಿಯುವ ವರ್ಗದಲ್ಲಿ ಶೇ.೮೩ ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಕುರಿ, ಎಮ್ಮೆ. ಎತ್ತು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಮುಂತಾದ ಕೃಷಿಯಾಧಾರಿತ ಆರ್ಹಿಕ ಚಟುವಟಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಗ್ರಾಮದಲ್ಲಿ ಕೃಷಿಯು ಮುಖ್ಯ ಆರ್ಥಿಕ ಚಟುವಟಿಕೆಯಾದುದರಿಂದ ಆಧುನಿಕ ಕೃಷಿ ಹಾಗೂ ತಾಂತ್ರಿಕತೆಯ ಕುರಿತು ಯೋಜಿಸಬೇಕಾಗಿದೆ. ಗ್ರಾಮಸ್ಥರಾಗಲಿ, ಸದ್ಯರಾಗಲಿ ಕೃಷಿ ಅಭಿವೃದ್ಧಿ ಯೋಜನೆಗಳ ಕುರಿತು ಯೋಚನೆ ಮಾಡುವುದಿಲ್ಲ. ಇಲ್ಲಿ ಬೇರೆ ಆರ್ಥಿಕ ಚಟುವಟಿಕೆ ಅಥವಾ ಪರ್ಯಾಯ ರಚನಾತ್ಮಕವಾದ ಉದ್ಯೋಗದ ಬದಲಾವಣೆಗೆ ಆದ್ಯತೆ ಕಂಡುಬರುವುದಿಲ್ಲ. ಯಾಕೆಂದರೆ ಪ್ರಾಥಮಿಕ ರಂಗದಲ್ಲಿ ಹೆಚ್ಚಿನ ಒತ್ತಡವಿರುವುದರಿಂದ ಕೃಷಿಯ ಆಧುನಿಕರಣ ಆಗಬೇಕಾಗಿದೆ.

ಸಾಮಾನ್ಯವಾಗಿ ಇತರ ಮುಂದುವರಿದ ಗ್ರಾಮಗಳಲ್ಲಿ ಸಣ್ಣ ಭೂ ಹಿಡುವಳಿಗಳು, ಉದ್ಯೋಗವಾಕಾಶದ ಕೊರತೆ, ಕೃಷಿ ವ್ಯವಸ್ಥೆಯಲ್ಲಿನ ಏರುಪೇರು ಮತ್ತು ಹೆಚ್ಚಿನ ಭೂಮಿ ಇಲ್ಲದಿರುವುದರಿಂದ ಹೊರಗಡೆಗೆ ಪರ್ಯಾಯ ಉದ್ಯೋಗವನ್ನರಸುತ್ತಾ ವಲಸೆ ಹೋಗುತ್ತಾರೆ. ಅವರ ವಲಸೆಯ ಚಲನೆ ನಗರಾಭಿಮುಖವಾಗಿದ್ದು ಅದು ಲಾಭದಾಯಕವಾದ ವೃತ್ತಿಯ ಚಲನೆಯಾಗಿದೆ. ಅದಕ್ಕಿರಬೇಕಾದ ಕೌಶಲ್ಯಗಳನ್ನು ಅವರು ಪಡೆದಿರುತ್ತಾರೆ. ಆದರೆ ಈ ಅಂಶಗಳು ಹಿರೇಹೆಗ್ಡಾಳ್‌ ಪೂರಕವಾಗಿಲ್ಲ. ಮುಂದುವರಿದ ಗ್ರಾಮದ ಸಮಸ್ಯೆಗೂ ಈ ಗ್ರಾಮಕ್ಕೂ ತುಂಬಾ ವ್ಯತ್ಯಾಸವಿದೆ. ಇಲ್ಲಿನ ಗ್ರಾಮಸ್ಥರು ಮೇಲಿನ ಸಂದರ್ಭಗಳಲ್ಲಿ ಕಾಫಿಸೀಮೆಗೆ ಮಾತ್ರ ಕೆಲಕ್ಕೆ ಹೋಗುತ್ತಾರೆ. ಅದು ತಾತ್ಕಾಲಿಕ ವಲಸೆ. ನೀರಾವರಿ ಚೆನ್ನಾಗಿದ್ದ ಪಕ್ಷದಲ್ಲಿ ಊರಲ್ಲಿ ಕೃಷಿ ಮಾಡಿದರೆ ಇನ್ನುಳಿದಂತೆ ಕೆಲವರು ಮಾತ್ರ ಭೂರಹಿತರು ಖಾಯಂ ಆಗಿ ಕಾಫಿ ಸೀಮೆಯಲ್ಲಿ ದುಡಿಯುವ ಸಂಭವ ಇರಬಹುದು. ಇವರಿಗೆ ಅವಶ್ಯವಿರುವ ತಾಂತ್ರಿಕ ಕೌಶಲ್ಯಗಳು ದೊರೆತಲ್ಲಿ ನಗರಾಭಿಮುಖ ವಲಸೆಯ ವೃತ್ತಿ ಚಲನೆಯನ್ನು ಒದಗಿಸಬಹುದು. ಇವು ಹಳ್ಳಿಗೂ ಮತ್ತು ಅವರಿಗೂ ಉತ್ತಮ ಆದಾಯವನ್ನು ತರಬಲ್ಲದು.

ಗ್ರಾಮದಲ್ಲಿ ಕೆಲವರು ಉತ್ತಮ ಉದ್ಯೋಗಗಳಲ್ಲಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪ್ರಬಲವರ್ಗಕ್ಕೆ ಸೇರಿದ್ದಾರೆ. ಹಿಂದುಳಿದ ಹಾಗೂ ಪರಿಶಿಷ್ಟರು ಮೀಸಲಾತಿಯಿಂದ ಅವಕಾಶಗಳನ್ನು ಉಪಯೋಗಿಸಿಕೊಂಡು ಒಂದು ಹಂತಕ್ಕೆ ಬರಬಹುದು. ಈ ರೀತಿ ವರ್ಗಗಳ ವ್ಯವಸ್ಥೆಯೊಳಗೆ ಮೀಸಲಾತಿ ಪ್ರಕ್ರಿಯೆಯಿಂದ ಮುಂದೆ ಬರುವುದಕ್ಕೆ ಜಾತಿಯ ಅಡ್ಡಗೋಡೆಗಳು ಏನೂ ತಡೆಯನ್ನುಂಟುಮಾಡಲಾರವು.

ಸಾಕ್ಷರತೆ ಇನ್ನೂ ಮುಂದುವರಿದು ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳನ್ನು ಹೆಚ್ಚು ಹೆಚ್ಚಾಗಿ ಅಕ್ಷರ್ಥರನ್ನಾಗಿ ಮಾಡಬೇಕಾಗಿದೆ. ಹಿರೇಹೆಗ್ಡಾಳ್‌ನ ಸಾಕ್ಷರತೆಯ ಮಟ್ಟ ತೃಪ್ತಿದಾಯಕವಾದುದೇನಲ್ಲ. ಅರಣ್ಯ ಭೂಮಿಗಳ ಒತ್ತುವರಿ ನಿಲ್ಲಬೇಕು. ಸಾಮಾನ್ಯವಾಗಿ ಸಣ್ಣ ಭೂ ಹಿಡುವಳಿ ಇರುವುದರಿಂದ ಕೃಷಿ ಭೂಮಿಯ ಮೇಲೆ ಒತ್ತಡ ಬೀಳುತ್ತದೆ. ಇದಕ್ಕೆ ಅರಣ್ಯ ಭೂಮಿಗಳು ಸುಲಭವಾಗಿ ತುತ್ತಾಗುತ್ತಿವೆ. ಇದನ್ನು ತಪ್ಪಿಸಿ ಅರಣ್ಯ ಬೆಳೆಸಲು ಯೋಜನೆಯನ್ನು ಕೈಗೊಳ್ಳಬೇಕು. ಜೆ. ಆರ್. ವೈ. ಕಾಮಗಾರಿಯಡಿ ಶೇ. ೨೫ರಷ್ಟು ಹಣವನ್ನು ಸಾಮಾಜಿಕ ಅರಣ್ಯ ಯೋಜನೆಗೆ ಮೀಸಲಿಟ್ಟು ಖರ್ಚು ಮಾಡಬೇಕೆಂದಿದ್ದರೂ ಈ ಗ್ರಾಮಪಂಚಾಯತಿಯಲ್ಲಿ ಈ ಮೊತ್ತವನ್ನು ಅರಣ್ಯ ಯೋಜನೆಗೆ ವಿನಿಯೋಗಿಸದೆ ಇನ್ನಿತರ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ಈಗಗಾಲೇ ಹೇಳಿದೆ. ಜೆ. ಆರ್. ವೈ. ಯಡಿ ಅನುದಾನದ ಹೆಚ್ಚಿನ ಮೊತ್ತವನ್ನು ಬಂಡೆಹಾಸುವುದಕ್ಕಾಗಿ ವಿನಿಯೋಗಿಸಲಾಗಿದೆ. ಈ ಹಣವನ್ನು ಬದಲಿ ಅಭಿವೃದ್ಧಿ ಯೋಜನೆಗೆ ವಿನಿಯೋಗಿಸಿದರೆ ಆದ್ಯತಾನುಸಾರದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ತ್ವರಿತಗತಿಯಲ್ಲಿ ನಡೆಯುವುದು ಎಂದು ಆಶಿಸಲಾಗಿದೆ. ಸಾಧ್ಯವಾದಲ್ಲಿ ಬಂಡೆಹಾಸುವುದರ ಬದಲಿಗೆ ಅಥವಾ ಯಥಾಸ್ಥಿಯಲ್ಲಿ ಒಂದು ಶಾಶ್ವತ ರೀತಿಯಲ್ಲಿರುವ ಯಾವುದಾರು ಕಡಿಮೆ ವೆಚ್ಚದ ಕಾಮಗಾರಿ ಬಗ್ಗೆಯೂ ಯೋಚಿಸಬಹುದಾಗಿದೆ.

ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ತುಂಬಾ ಮುಂದಾಲೋಚನೆಯಿಂದ ಇರಬೇಕಾಗುತ್ತದೆ. ಪ್ರತೀ ವರ್ಷವೂ ಬಹಳಷ್ಟು ತೆರಿಗೆ ಸಂಗ್ರಹ ಬಾಕಿ ಇರುವುದು ಕಂಡುಬರುತ್ತದೆ. ಪ್ರತೀ ವರ್ಷವೂ ಹತ್ತು ಸಾವಿರ ರೂಪಾಯಿಗೂ ಮಿಕ್ಕಿ ತೆರಿಗೆ ಸಂಗ್ರಹ ಬಾಕಿ ಉಳಿದಿರುತ್ತದೆ. ೯೮-೯೯ ನೇ ಸಾಲಿನಲ್ಲಿ ಅದು ಗರಿಷ್ಟ ಅಂದರೆ ೨೧,೨೩೬ ರೂಪಾಯಿಗಳಷ್ಟು ಬಾಕಿ ಇತ್ತು. ಬಾಕಿ ಉಳಿದ ತೆರಿಗೆ ಸಂಗ್ರಹ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಗ್ರಾಮಸ್ಥರು, ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಗ್ರಾಮಪಂಚಾಯತ್‌ ಸದಸ್ಯ ಅಥವಾ ಸದಸ್ಯೆಯರು ತೆರಿಗೆ ಬಾಕಿಯಿದ್ದಲ್ಲಿ, ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಉಅಮದ ೧೯೯೩ ರ ೧೨ (ಜಿ) ಪ್ರಕಾರ ಅಂತಹ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕಾಗುತ್ತದೆ. ಗ್ರಾಮಪಂಚಾಯತ್‌ ಸದಸ್ಯರು ಕಾಯ್ದಿದೆಯ ಇನ್ಯಾವುದೆ ನಿಯಾಮವಳಿಗಳು ಗೊತ್ತಿಲ್ಲದಿದ್ದರೂ ಈ ನಿಯಾಮವಳಿಯನ್ನು ಅವರು ಚೆನ್ನಾಗಿ ತಿಳಿದುಕೊಂಡಿರುವ ಹಾಗಿದೆ. ಯಾಕೆಂದರೆ ಇಂತಹ ಸಂದರ್ಭದಲ್ಲಿ ಪಂಚಾಯತ್‌ನ ಸರ್ವ ಸದಸ್ಯರು ಒಟ್ಟಾಗುತ್ತಾರೆ. ಇದರರ್ಥ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವುದೇ ಅಥವಾ ತಮ್ಮ ಸದಸ್ಯತ್ವವನ್ನು ಮಾತ್ರ ಭದ್ರಪಡಿಸುವುದೇ ಎಂಬ ಸಂಶಯವು ಕಾದುತ್ತದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವುದೇ ಆದರೆ, ಆ ಸದಸ್ಯರು ತನ್ನ ಗ್ರಾಮ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಸರಿಯಾಗಿ ತೆರಿಗೆ ನೀಡುವಂತೆ ಮನವೊಲಿಸಲು ಯಾಕೆ ಸಾಧ್ಯವಾಗುವುದಿಲ್ಲ? ಹಿರೇಹೆಗ್ಡಾಳ್‌ನಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ತೆರಿಗೆ ಅಂದರೆ ಹುಲ್ಲು ಗುಡಿಸಲು ಮನೆಗೆ ೩೦ ರೂಪಾಯಿ, ಇತರ ಮಳಿಗೆ ಮನೆಗಳಿಗೆ ೪೦ ರೂಪಾಯಿ ಆಗಿರುತದೆ. ಇವತ್ತಿನ ಪರಿಸ್ಥಿಯಲ್ಲಿ ವರ್ಷಕ್ಕೆ ೩೦ ಅಥವಾ ೪೦ ರೂಪಾಯಿ ನೀಡಲಾಗದ ಗ್ರಾಮ ನಿವಾಸಿ ಇರುತ್ತಾನೆಂದರೆ ನಂಬುವುದೇ ಕಷ್ಟ. ಆದ್ದರಿಂದ ಗ್ರಾಮಸ್ಥರಿಗೆ ಸರಿಯಾಗಿ ತೆರಿಗೆ ನೀಡುವಂತೆ ಮನವೊಲಿಸುವುದು ಪ್ರತಿನಿಧಿಗಳ ಆದ್ಯಕರ್ತವ್ಯ. ಅಧಿಕಾರಿಗಳು ಸಹ ಅಷ್ಟೇ ಕ್ರಿಯಾಶೀಲರಾಗಿರಬೇಕು. ಇದರಲ್ಲಿ ಕರ ಸಂಗ್ರಹಕಾರನ ಪ್ರಮುಖ ಪ್ರಾತ್ರವಿದೆ. ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ವ್ಯವಸ್ಥೆಯಿಂದ ಹಲವಾರು ಕಾರ್ಯಕ್ರಮಗಳು ಅಥವಾ ಅಭಿವೃದ್ಧಿ ಯೋಜನೆಗಳು ನಡೆದರೂ ಇದರಿಂದ ಹೇಳಿಕೊಳ್ಳುವಂತಹ ಪ್ರಗತಿ ಏನು ಕಂಡುಬಂದಿಲ್ಲ.

ಇನ್ನೊಂದು ಆತಂಕಕಾರಿ ವಿಷಯವೆಂದರೆ ಶೌಚಾಲಯದ್ದು. ಹಿರೇಹೆಗ್ದಾಳ್‌ ಗ್ರಾಮಪಂಚಾಯತ್‌ ವ್ಯಾಪ್ತಿಯ ೪ ಹಳ್ಳಿಗಳಲ್ಲಿ ೮೦೪ ಮನೆಗಳಿದ್ದರೆ ೯೭-೯೮ ನೇ ಸಾಲಿಗೆ ಅನ್ವಯವಾಗುವಂತೆ ಶೌಚಾಲಯವನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ಕೇವಲ ೧೬ ಇನ್ನುಳಿದಂತೆ ಬಹಿರ್ದೆಸೆಗೆ ವಿಶಾಲ ಬಯಲು ಉಪಯೋಗಿಸಲಾಗುತ್ತದೆ. ಆದರೆ ಇಲ್ಲಿ ಮನೆಗಳು ಹತ್ತಿರ ಹತ್ತಿರ ಇರುವುದರಿಂದ ಬಯಲು ತುಂಬಾ ದೂರದಲ್ಲಿದೆ. ಇದರಿಂದ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಕಷ್ಟವಾಗುವ ಸಾಧ್ಯೆತೆಯಿರುವುದರಿಂದ ಶೌಚಾಲಯ ಕಟ್ಟಡಗಳನ್ನಾದರೂ ಕಟ್ಟುವಂತೆ ಗ್ರಾಮಸ್ಥರು ಹಾಗು ಗ್ರಾಮಪಂಚಾಯತ್‌ ಕಾರ್ಯೊನ್ಮುಖವಾಗಬೇಕಾಗಿದೆ. ಆದರೆ ಇದಾವುದು ಪಂಚಾಯತ್‌ ಯಾ ಗ್ರಾಮಸ್ಥರ ಆದ್ಯತೆ ಆಗದಿರುವುದು ಅಷ್ಟೇ ಸ್ಪಷ್ಟವಾಗಿದೆ.

ಹಿರೇಹೆಗ್ದಾಳ್‌ ಗ್ರಾಮಪಂಚಾಯತಿಯಲ್ಲಿ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯು ತೃಪ್ತಿಕರವಾಗಿಲ್ಲ (ಕೋಷ್ಟಕ ೯.) ಆದರಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳ ಹೈಸ್ಕೂಲು ಶಿಕ್ಷಣ ಏನೇನೂ ಸಾಲದು. ೮ ನೇ ತರಗತಿಯಿಂದ ೧೦ ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಈ ಸಮುದಾಯದಿಂದ ಕೇವಲ ೫ ಗಂಡು ಮತ್ತು ೩ ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. ಇದರಿಂದ ತಿಳಿದುಬಂದ ಅಂಶವೇನೆಂದರೆ ಸರಕಾರದಿಂದ ಸವಲತ್ತುಗಳು ದೊರೆಯುತ್ತಿದ್ದರೂ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯದೆ ಈ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಸಮುದಾಯದ ಹಿರಿಯರು ಹಾಗೂ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪ್ರಯತ್ನ ಮಾಡಬೇಕು. ನಾಲ್ಕನೇ ತರಗತಿವರೆಗಿನ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳ ಪ್ರಥಮ ವಾರದಲ್ಲಿ ಮಾತ್ರ ಶಾಲೆಗೆ ಸರಿಯಾಗಿ ಹಾಜರಾಗುತ್ತಾರೆ. ಇದರಿಂದ ಆ ವಿದ್ಯಾರ್ಥಿಗಳಿಗೆ ಅವರ ಹಾಜರಾತಿಗನುಗುಣವಾಗಿ ಸೊಸೈಟಿಯಲ್ಲಿ ಉಚಿತ ಅಕ್ಕಿ ದೊರೆಯುತ್ತದೆ. ಅದು ದೊರೆತ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಬರುವುದಿಲ್ಲ ಎಂದು ಅಧ್ಯಾಪಕರು ಹೇಳುತ್ತಾರೆ. ಬಹುಶಃ ಇದರಲ್ಲಿ ವಿದ್ಯಾರ್ಥಿಗಳ ಹೆತ್ತವರ ಬೇಜವಾಬ್ದಾರಿ ಇರಬಹುದು. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು.

ಅರೋಗ್ಯ ಕುರಿತಂತೆ ಈ ಗ್ರಾಮಪಂಚಾಯತಿಯು ಇನ್ನೂ ಕ್ರಿಯಾಶೀಲವಾಗಬೇಕಾಗಿದೆ. ಹಳ್ಳಿಯಲ್ಲಿ ಒಬ್ಬ ಪ್ರಾಥಮಿಕ ಅರೋಗ್ಯ ಕೆಂದ್ರದ ವೈದ್ಯರಿದ್ದಾರೆ. ಆದರೆ ಹಳ್ಳಿಗರಿಗೆ ನಿರೀಕ್ಷಿತ ವೈದ್ಯಕೀಯ ಸೌಲಭ್ಯಗಳು ಕ್ಲಪ್ತವಾಗಿ ದೊರೆಯುವುದಿಲ್ಲ. ಕೆಲವೊಮ್ಮೆ ದೊಡ್ಡ ಖಾಯಿಲೆಗಳು ಬಂದಾಗ ಸರಿಯಾದ ಔಷಧೊಪಚಾರವಿಲ್ಲದಿದ್ದರಿಂದ ದೂರದ ಊರಿಗೆ ಹೋಗಬೇಕಾಗುವ ಪರಿಸ್ಥಿತಿ ಇಲ್ಲಿದೆ. ಹೆಣ್ಣು ಮಕ್ಕಳ ಮದುವೆ ವಯಸ್ಸು ಸಾಮಾನ್ಯವಾಗಿ ೧೮ ವರ್ಷವೆಂದಿದ್ದರೂ ೧೫ ವರ್ಷ ಮೇಲ್ಪಟ್ಟು ಮದುವೆ ಮಾಡಿಸುವುದು ಅಲ್ಲಲ್ಲಿ ರೂಢಿಯಲ್ಲಿದೆ. ಇದು ಪಕ್ಕದ ಸಾಣೇಹಳ್ಳಿಯಲ್ಲಿ ಬಹಳ ರೂಢಿಯಲ್ಲಿದೆ. ಇದನ್ನು ತಡೆಯಬೇಕು. ಗ್ರಾಮಪಂಚಾಯತ್‌ ವ್ಯಾಪ್ತಿಯ ಜನಜೀವನವನ್ನು ನೋಡಿದಾಗ ಹಿರೇಹೆಗ್ದಾಳ್‌ ಮತ್ತು ಸಾಸಲವಾಡದಲ್ಲಿ ಪರಿಶಿಷ್ಟರ ಬದುಕು ದುಸ್ತರವಾಗಿದೆ. ಹಾಗೆ ಕೆಲವು ತೀರಾ ಹಿಂದುಳಿದ ವರ್ಗಗಳ ಕುಟುಂಬಗಳು ಸಹ. ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಬರೀ ಬಡತನ ಎಂದರೆ ತಪ್ಪಾದೀತು. ಪರಿಶಿಷ್ಟರು ಸಾಮಾನ್ಯವಾಗಿ ಉಪಜಾತಿಗಳೊಳಗೆ ಬಡಿದಾಡುವುದು ಅಥವಾ ಅಂತರವನ್ನು ನಿರ್ಮಿಸಿರುವುದು ಇತ್ತೀಚಿನ ಹಳ್ಳಿ ಹಾಗೂ ಪಟ್ಟಣದ ಸಾಮಾಜಿಕ ರಾಜಕೀಯ ಜೀವನದ ಪರಿ ಎಂದೆನಿಸಿದರೂ, ಅಲ್ಲಿ ಆಜಾತಿಯ ಕೆಲವೊಂದು ಗಣ್ಯರುಗಳು ಅದನ್ನು ತಮ್ಮ ಲಾಭಗೋಸ್ಕರ ದುರುಪಯೋಗ ಪಡಿಸಿಕೊಳ್ಳತ್ತವೆ. ವಿಚಾರಧಾರೆಯ ಹಿಂದೆ ರಾಜಕೀಯ ಲೆಕ್ಕಚಾರವೆ ಅತಿಯಾಗಿದೆ. ಆದರೆ ಹಿರೇಹೆಗ್ದಾಳ್‌ನಲ್ಲಿ ಈ ರೀತಿಯ ದೊಡ್ಡ ಲೆಕ್ಕಚಾರಗಳು ಇಲ್ಲದಿದ್ದರೂ ಉಪಜಾತಿಗಳ ಮಧ್ಯೆ ಅಂತರವನ್ನು ಕಾಣಬಹುದು. ಹಿರೇಹೆಗ್ದಾಳ್‌ನಲ್ಲಿ ಸುಮಾರು ೧೫ ಆದಿದ್ರಾವಿಡ ಕುಟುಂಬಗಳಿದ್ದರೆ ೧೦೦ ರಷ್ಟು ಆದಿ ಕರ್ನಾಟಕ ಕುಟುಂಬಗಳಿವೆ. ಇವರೊಳಗೆ ಯಾವಾಗಲೂ ಭಿನ್ನಭಿಪ್ರಾಯ ಇದ್ದೇ ಇದೆ. ಆದಿ ದ್ರಾವಿಡ ಜಾತಿಯ ಒಬ್ಬ ಪಂಚಾಯತ್‌ ಜವಾನ ಗ್ರಾಮಸಭೆಯ ಬಗ್ಗೆ ಟಾಂ ಟಾಂ ಹೊಡೆಸಿದರೂ ಆದಿ ಕರ್ನಾಟಕ ಕುಟುಂಬಗಳು ಟಾಂ ಟಾಂ ಹೊಡೆಸಿಲ್ಲ ಎನ್ನುತ್ತಾರೆ. ಇದರ ಕುರಿತು ಜವಾನನಲ್ಲಿ ವಿಚಾರಿಸಿದರೆ ತಾನು ಬೀದಿಯಲ್ಲಿ ಟಾಂ ಟಾಂ ಹೊಡೆಸಿದರೆ ಸಾಲದು ಅವರ ಮನೆ ಮುಡೆಯೂ ಹೊಡೆಸಬೇಕೆನ್ನುತ್ತಾರೆ ಎನ್ನುವನು. ಈ ವಿವಾದ ಇನ್ನ್ಯಾವ ರೀತಿಯಲ್ಲೋ ಮುಂದುವರಿಯುತ್ತದೆ. ಸಾಣೇಹಳ್ಳಿಯಲ್ಲಿರುವ ಎಲ್ಲಾ ೫೮ ಕುಟುಂಬಗಳು ಬರೀ ಬೋವಿಗಳದ್ದೆ. ಆದರೆ ಇಲ್ಲಿ ಯಾರೊಬ್ಬರೂ ೧೦ ನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಹಳ್ಳಿಯು ತೀರಾ ನಿರ್ಲಕ್ಷ್ಯ ವಾದ ಸ್ಥಿತಿಯಲಿಲ್ಲ. ಆದರೆ ನಿವಾಸಿಗಳು ಅವಕಾಶಗಳ ಸದುಪಯೋಗಪಡಿಸಿಕೊಂಡಿಲ್ಲ ಎನ್ನಬಹುದು.

ಸಾಮಾನ್ಯವಾಗಿ ಈ ಪ್ರದೇಶಗಳ ಹಳ್ಳಿ ಜೀವನ ಹಾಗೂ ಪರಿಶಿಷ್ಟರ ಬದುಕು ನೋಡಿದಾಗಬಡತನ, ದುಡಿಮೆ ಇಲ್ಲದಿರುವ ಪರಿಸ್ಥಿತಿ, ತೀರಾ ಕಡಿಮೆ ಸಂಬಳ ಹಾಗೂ ಅತಿಯಾದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಇವರ ಬದುಕನ್ನು ಇನ್ನಷ್ಟು ನಿಕೃಷ್ಟಗೊಳಿಸಿವೆಯೇನೊ ಅನ್ನಿಸುತ್ತದೆ. ಆದರೆ ಹಿರೇಹೆಗ್ದಾಳ್‌ನ ಪರಿಸ್ಥಿತಿ ಹೇಳುವಷ್ಟು ಗಂಭೀರದ್ದಲ. ಸಾಮಾನ್ಯವಾಗಿ ಹೆಚ್ಚಿನ ಹಳ್ಳಿಗಳಲ್ಲಿ ಬಡತನ ಸ್ಥಿತಿಯಿದ್ದರೂ ಅದನ್ನು ಮೀರಿಸಬಹುದಾದ ಅಥವಾ ಅದರಿಂದ ಮುಕ್ತವಾಗುವ ದಿಕ್ಕಿನತ್ತ ಮಾರ್ಗೋಪಾಯಗಳಿವೆ. ಇಲ್ಲಿನ ಹಳ್ಳಿಯಲ್ಲಿ ದುಡಿಮೆ ಇಲ್ಲವೆಂದರೆ ಪಕ್ಕದೂರಿಗೆ ಅಥವಾ ಕಾಫಿಸೀಮೆಗೆ ವಲಸೆ ಹೋಗುತ್ತರೆ. ಜೊತೆಗೆ ಕುಡಿತಕ್ಕು ದುಡ್ಡು ವ್ಯಯಿಸುತ್ತಾರೆ. ಇಲ್ಲಿನ ಸಾಂಸ್ಕೃತಿಕ ಆಚರಣೆಗಳು ಬಿಗಿಯಾದ ಸಂಕೋಲೆಗಳಿಂದ ಆವರಿಸಿಲ್ಲ, ಹೇಳುವಷ್ಟರ ಮಟ್ಟಿಗಿನ ಸ್ವಾತಂತ್ರ್ಯವಿದೆ. ಅನಮ್ಯವಾದ ಸಾಮಾಜಿಕ ಬಂಧನಗಳಿಲ್ಲ, ಹೋಟೆಲುಗಳಿಗೂ ಪ್ರವೇಶವಿದೆ. ಆದರೂ ಇವರ ಬದುಕು ದುಸ್ತರವಾಗಿದೆ. ಇದನ್ನು ತಪ್ಪಿಸಲು ಈ ಸಮುದಾಯವು ಪೂರಕವಾಗಿ ಮೀಸಲಾತಿಯ ಅವಕಾಶವನ್ನು ದಕ್ಕಿಸಿಕೊಳ್ಳಬೇಕು. ಅಕ್ಷರಸ್ಥರಾಗಿ ಬದುಕಿನ ಮಾರ್ಗೋಪಾಯಗಳನ್ನು ಕೇಳಿ ಪಡೆದು ರೂಪಿಸಿಕೊಳ್ಳಬೇಕು. ಸಾಂಸ್ಕೃತಿಕ ಆಚರಣೆಯು ಇವರಿಗೆ ವಿಶಿಷ್ಟವಾದ ಅನನ್ಯತೆಯನ್ನು ನೀಡುವುದಿದ್ದರೆ ಅದರ ಮುಂದುವರಿಕೆ ಏನೂ ತಪ್ಪಲ್ಲ. ಆದರೆ ಇದರ ಹೆಸರಿನಲಿ ಶೋಷಣೆ ಸಲ್ಲದು. ಯಾರ ಬಂಧನವೂ ಇಲ್ಲವೇ ತಾವೇ ಪ್ರತ್ಯೇಕವಾಗಿ ಒಂದು ಹಳ್ಲೀಯಲ್ಲಿದ್ದು ಅವಕಾಶಗಳನ್ನು ಕೇಳಿ ಪಡೆಯುವಷ್ಟು ಸಾಮರ್ಥ್ಯ ಸಾಣೇಹಳ್ಳಿಯ ನಿವಾಸಿಗಳಿಗೆ ಇನ್ನೂ ಒದಗಿಬಂದಿಲ್ಲ ಎಂದರೆ ಇದಕ್ಕೇ ಬರೀ ಸರಕಾರ ಕಾರಣವೇ ಅಥವಾ ಅಲ್ಲಿನ ನಿವಾಸಿಗಳೇ ಅಥವಾ ಪಕ್ಕದ ಹಳ್ಳಿಯ ಉತ್ಪಾದನಾ ಸಂಬಂಧಗಳ ವ್ಯವಸ್ಥೆಯೇ? ಇವುಗಳಲ್ಲಿ ಯಾವುದು ಮುಖ್ಯ ಎಂದು ಸಾಣೇಹಳ್ಳಿಯ ಜನರು ವಿವೇಚಿಸಬೇಕಾದ ಆಗತ್ಯವಿದೆ.