ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎಂಟು ಗುಡಿಗಳಿವೆ. ಅವುಗಳಲ್ಲಿ ಈಶ್ವರ ದೇವರ ಗುಡಿ (ವೀರಶೈವರು), ಕೋಡಿ ಬಸವನ ಗುಡಿ, ಊರಮ್ಮನ ಗುಡಿ, ಹನುಮಪ್ಪ ಗುಡಿ (ವಾಲ್ಮ್ಕೀಕಿ), ಹುನಗಮ್ಮ ಗುಡಿ (ಬಡಿಗೇರರು), ಮತಗಮ್ಮ ಮತ್ತು ಸಮಾದೆಮ್ಮನ ಗುಡಿ (ಹರಿಜನರು) ಮತ್ತು ಫಕೀರ್ಸ್ವಾಮಿಯ ಗುಡಿಗಳಿವೆ. ಊರಮ್ಮ, ಹುನಗಮ್ಮ, ಮತಗಮ್ಮ ಮತ್ತು ಸಮಾದೆಮ್ಮ ಇವು ಹೆಣ್ಣು ದೇವರ ಗುಡಿಗಳಾಗಿವೆ. ಸಮಾದೆಮ್ಮ ಜಾತ್ರೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಸಮಾದೆಮ್ಮನ ಪೂಜೆಯನ್ನು ಹರಿಜನರೇ ಮಾಡುತ್ತಾರೆ. ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಈ ಜಾತ್ರೆಯು ನಡೆಯುತ್ತದೆ. ಈ ಉತ್ಸವವು ಮಂಗಳವಾರ ಪ್ರಾರಂಭಗೊಂಡು ಶುಕ್ರವಾರದಂದು ಕೊನೆಗೊಳ್ಳುತ್ತವೆ. ಈ ಜಾತ್ರೆಯ ಪ್ರಯುಕ್ತ ಊರಿನಲ್ಲಿ ನಾಲ್ಕು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಮೊದಲ ದಿನ ಪೂಜಾರಿಯವರು ಸ್ನಾನ, ಇತ್ಯಾದಿ ಮುಗಿಸಿಕೊಂಡು ಅಲ್ಲಿಯ ದೇವತೆಗೆ ಪೂಜೆಯನ್ನು ಸಲ್ಲಿಸಿ ವಾದ್ಯಗಳ ಸಮೇತ ಸಮಾದೆಮ್ಮನನ್ನು ಗುಡಿಯವರೆಗೆ ಮೆರವಣಿಗೆಯಲ್ಲಿ ತಂದು ದೇವಿಯನ್ನು ಗರ್ಭಗುಡಿಯಲ್ಲಿ ಕೂರಿಸುತ್ತಾರೆ. ಪೂರ್ಣಕುಂಭವೇ ದೇವತೆಯ ಪ್ರತೀಕವಾಗಿರುತ್ತದೆ. ಇಲ್ಲಿಗೆ ಮೊದಲ ದಿನದ ಕಾರ್ಯಕ್ರಮ ಮುಗಿಯುತ್ತದೆ. ಎರಡನೆಯ ದಿನ ದೇವಿಯ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಉತ್ಸವಕ್ಕೆ ಸ್ಥಳೀಯರು, ಮುಖ್ಯವಾಗಿ ಕೆಳವರ್ಗದವರು, ತಮ್ಮ ಬಂಧು ಬಳಗದವರನ್ನೆಲ್ಲ ಆಮಂತ್ರಿಸುತ್ತಾರೆ. ಈ ಜಾತ್ರೆಗೆ ಸೇರಿದಷ್ಟು ಜನ ಬೇರೆ ಯಾವ ಜಾತ್ರೆಗೂ ಸೇರುವುದಿಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ. ಈ ಜಾತ್ರೋತ್ಸವದಲ್ಲಿ ಸಮಾಜದ ಎಲ್ಲಾ ವರ್ಗದವರು ಪಾಲ್ಗೊಳ್ಳುತ್ತಾರೆ. ಸುತ್ತಮುತ್ತಲಿನ ಹಳ್ಳಿಗರು ಸಹ ಈ ಜಾತ್ರೆಯ ಸೊಬಗನ್ನು ಸವಿಯಲು ಹಿರೇಹೆಗ್ಡಾಳ್‌ಗೆ ಬರುತ್ತಾರೆ. ಜಾತ್ರೆಯ ಉಸ್ತುವಾರಿ ಜವಾಬ್ದಾರಿಗಳೆಲ್ಲವನ್ನು ಹರಿಜನರೇ ನಡೆಸುತ್ತಾರೆ.

ಮೂರನೆಯ ದಿನ ದೇವಿಗೆ ಹೂವುಕಾಯಿ, ಹರಕೆ ಸಲ್ಲಿಸುವ ಆಚರಣೆಗಳು ನಡೆಯುತ್ತವೆ. ಪ್ರಥಮವಾಗಿ ಹಳ್ಳಿಯ ಮೇಲ್ವರ್ಗದವರು ಮುಖ್ಯವಾಗಿ ಲಿಂಗಾಯಿತರು ದೇವಿಗೆ ಹೂವು ಕಾಯಿಗಳನ್ನು ಅರ್ಪಿಸುವುದರ ಮೂಲಕ ತಮ್ಮ ಪೂಜೆ ಮತ್ತು ಸೇವೆಯನ್ನು ಸಲ್ಲಿಸುತ್ತಾರೆ. ಇವರು ದೇವಿಗೆ ಹರಕೆಯೇನಾದರೂ ಹೇಳಿಕೊಂಡಿದ್ದಲ್ಲಿ ದೇವಿಗೆ ಬೇಟೆ ಸಲ್ಲಿಸುವುದಿಲ್ಲ. ಬದಲಾಗಿ ತಮ್ಮ ದನಕರುಗಳನ್ನು ದೇವಿಯ ಗುಡಿಯ ಸುತ್ತಲೂ ಪ್ರದಕ್ಷಿಣೆ ಮಾಡುವುದರ ಮೂಲಕ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಕೆಲವರು ದೇವಿಗೆ ಸೀರೆ, ಕುಪ್ಪಸ, ಹಣವನ್ನು ನೀಡುವುದರ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.

ಎರಡನೆಯದಾಗಿ ಪರಿಶಿಷ್ಟ ಪಂಗಡದವರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಇವರು ಗುಡಿಗೆ ಬರುವಾಗ ಡೊಳ್ಳು ತಮಟೆಗಳ ಸದ್ದು ಮುಗಿಲು ಮುಟ್ಟುವಂತಿರುತ್ತದೆ. ಯಾವುದೇ ರೀತಿಯ ಹರಕೆಯನ್ನು ಹೊರದೆ ಇರುವವರು ದೇವಿಗೆ ಕೇವಲ ಹೂವು ಕಾಯಿಗಳನ್ನು ಮಾತ್ರ ಅರ್ಪಿಸುತ್ತಾರೆ. ಹರಕೆ ಹೊತ್ತವರು ವಿಭಿನ್ನ ರೀತಿಯಲ್ಲಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಹರಕೆ ಹೊತ್ತವರು ಮನೆಯಿಂದ ದೇವಿಯ ಗುಡಿಯವರೆಗೆ ಬೆತ್ತಲೆ ಬರಬೇಕೆಂದು ವಾಡಿಕೆ. ಆದರೆ ಈಗ ಈ ಆಚರಣೆ ನಡೆಯುತ್ತಿಲ್ಲ. ಈಗ ಬಟ್ಟೆಯ ಬದಲಾಗಿ ಲಕ್ಕಿ ಗಿಡದ ಎಲೆಗಳಿಂದ ತಮ್ಮ ಶರೀರವನ್ನು ಮುಚ್ಚಿಕೊಳ್ಳುತ್ತಾರೆ. ಮನೆಯಿಂದ ಗುಡಿಯವರೆಗೆ ಲಕ್ಕಿ ಎಲೆಗಳನ್ನು ತೊಟ್ಟು ಬರಿಗಾಲಲ್ಲಿ ನಡೆದು ಬಂದರೆ ಹರಕೆಯನ್ನು ತೀರಿಸಿದಂತೆಯೆ. ಗುಡಿಗೆ ಬಂದ ನಂತರ ಹೊಸಬಟ್ಟೆಗಳನ್ನು ಧರಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಪರಿಶಿಷ್ಟರೆಲ್ಲ ಕೂಡಿ ದೇವಿಗೆ ಹರಕೆ ಮತ್ತು ಪೂಜೆ ಸಲ್ಲಿಸಿದ ಉದಾಹರಣೆಗಳಿವೆ.

ಕೊನೆಯದಾಗಿ ಹರಿಜನರು ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಇವರ ಆಚರಣೆಗಳು ಪರಿಶಿಷ್ಟ ಪಂಗಡದವರ ಆಚರಣೆಯನ್ನು ಹೋಲುತ್ತದೆ. ಮೂರನೆಯ ದಿನ ದೇವಿಗೆ ಹರಕೆ ಹೊತ್ತವರು, ಕುರಿ, ಕೋಳಿ, ಕೋಣಗಳನ್ನು ದೇವಿಗೆ ಬೇಟೆಯಾಗಿ ಅರ್ಪಿಸುತ್ತಾರೆ. ಪರಿಶಿಷ್ಟ ಪಂಗಡ ಮತ್ತು ಬಾರೀಕರು ಸಹ ದೇವಿಗೆ ಬೇಟೆಯನ್ನು ನೀಡುತ್ತಾರೆ.

ನಾಲ್ಕನೆಯ ದಿನ ಅಗ್ನಿಕುಂಡ ಹಾಯುವ ಕಾರ್ಯಕ್ರಮವಿರುತ್ತದೆ. ಗುಡಿಯ ಪೂಜಾರಿ ಅಗ್ನಿಕುಂಡವನ್ನು ದಾಟುತ್ತಾರೆ. ಅಂದು ದೇವಿಗೆ ಪೂಜಾ ವಿಧಿವಿಧಾನಗಳು ಮುಗಿದ ಬಳಿಕ ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಹೊರಟು ದೇವಿಯನ್ನು ನಾಲ್ಕು ಹಳ್ಳಿಗಳಿಗೆ (ಸಾಸಲವಾಡ, ಬೊಪ್ಪಲಾಪುರ, ಹನಸಿ, ಮತ್ತು ಸಾಣೇಹಳ್ಳಿ) ಮೆರವಣಿಗೆಯಲ್ಲಿ ಕೊಂಡೊಯ್ದು, ರಾತ್ರಿ ೧೧ ಗಂಟೆಯ ವೇಳೆಗೆ ಬಂದು ಗುಡಿಯನ್ನು ತಲುಪುತ್ತಾರೆ. ಮೇಲಿನ ಹಳ್ಳಿಗಳಿಗೆ ದೇವಿಯ ಮೆರವಣಿಗೆ ಬಂದಾಗ ಹಳ್ಳಿಗರು ಪೂಜೆಯನ್ನು ಸಲ್ಲಿಸುತ್ತಾರೆ. ಹಳ್ಳಿಗಳಿಂದ ಮೆರವಣಿಗೆ ಮುಗಿದು ದೇವಿಯು ಗರ್ಭಗುಡಿ ಸೇರುವುದರ ಮೂಲಕ ಒಟ್ಟು ನಾಲ್ಕು ದಿನಗಳ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತವೆ.

ಹಿರೇಹೆಗ್ಡಾಳ್‌ನಲ್ಲಿನ ಸಮಾದೆಮ್ಮ ಜಾತ್ರೆಯ ಆಚರಣೆ, ಅದರಲ್ಲಿ ಪಾಲ್ಗೊಳ್ಳುವ ಸಮಾಜದ ವಿವಿಧ ವರ್ಗದ ಜನತೆ ಇವುಗಳನ್ನು ನೋಡುವಾಗ ನಮಗೆ ಕೆಲ ಅಂಶಗಳು ಗೋಚರಿಸುತ್ತವೆ. ಸಮಾದೆಮ್ಮ ಮುಖ್ಯವಾಗಿ ಕೆಳವರ್ಗದ ದೇವತೆ. ಆ ದೇವತೆಯ ಪೂಜೆ-ಸೇವೆ ಮೊದಲಾದ ಹಕ್ಕುಗಳೆಲ್ಲವೂ ಸಹ ಈ ಜನಾಂಗಕ್ಕೆ ಸೇರಿವೆ. ಹಲವಾರು ಹಳ್ಳಿಗಳಲ್ಲಿ ಗುಡಿಯಲ್ಲಿ ಪೂಜೆ ಸಲ್ಲಿಸುವ ಹಕ್ಕು ಪರಿಶಿಷ್ಟರಿಗೆ ಇರುವುದಿಲ್ಲ. ಈ ದೃಷ್ಟಿಯಲಿ ಈ ಹಳ್ಳಿಯ ಜನತೆ ದೇವತೆಯ ಪೂಜೆಯ ಹಕ್ಕನ್ನು ತಮ್ಮದಾಗಿಸಿಕೊಂಡಿರುವುದರಿಂದ ಈ ವರ್ಗ ಇಲ್ಲಿ ಅಷ್ಟೇನೂ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲವೇನೊ ಅನಿಸುತ್ತದೆ. ಆದರೆ ಜಾತ್ರೆಯ ದಿನ ಪೂಜೆ ಸಲ್ಲಿಸುವುದರಲ್ಲಿ ಜಾತಿ ತಾರತಮ್ಯತೆಗಳಿರುವುದನ್ನು ಕಾಣಬಹುದಾಗಿದೆ. ಸಮಾದೆಮ್ಮ ಪೂಜೆ, ಗುಡಿಯ ಉಸ್ತುವಾರಿ ಎಲ್ಲವೂ ಸಮಾಜದ ಕೆಳವರ್ಗದವರ ಕೈಯಲ್ಲಿದ್ದರೂ ಜಾತ್ರೆಯ ದಿನ ಮೊದಲು ಪೂಜೆ ಸಲ್ಲಿಸುವರು ಸಮಾಜದ ಮೇಲ್ವರ್ಗದ ಜನರಾದ ಲಿಂಗಾಯಿತರು. ಈ ಸಂದರ್ಭದಲ್ಲಿ ಪೂಜೆ ಮಾಡುವವರು ಸಹ ಅವರೇ ಆಗಿರುತ್ತಾರೆ. ಇವರಾದ ನಂತರವೆ ಇತರರು ತಮ್ಮ ಸೇವೆಯನ್ನು ಸಲ್ಲಿಸಬೇಕು. ಈ ಅಂಶವನ್ನು ಕಂಡಾಗ ಸಮಾಜದ ಮೇಲ್ವರ್ಗಕ್ಕೆ ಸೇರಿದ ಜನ ಪರೋಕ್ಷವಾಗಿಯೂ, ಸೂಕ್ಷ್ಮವಾಗಿಯಾದರೂ ಕೆಳವರ್ಗದವರಿಂದ ಬೇರೆಯಾಗಿರಲು ಇಷ್ಟಪಡುತ್ತಾರೆ ಎಂಬ ಅಂಶ ತಿಳಿಯುತ್ತದೆ. ಕೆಳವರ್ಗದವರಿಗೆ ಮೊದಲ ಪೂಜೆ ಸಲ್ಲಿಸಬಹುದಿತ್ತಲ್ಲ ಎಂದು ಸ್ಥಳೀಯರನ್ನು ಪ್ರಶ್ನಿಸಿದಾಗ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವನ್ನೇ ಆನುಸರಿಸುವುದು ಒಳಿತು ಎಂಬುದು ಅವರ ಉತ್ತರವಾಗಿದೆ. ಒಂದು ಮೇಳೆ ಮೇಲ್ವರ್ಗದವರು ಕೇಳವರ್ಗದ ಜನರ ಅಧೀನದಲ್ಲಿರುವ ಸಮಾದೆಮ್ಮ ಜಾತ್ರೆಯ ದಿನ ಮೊದಲು ಸೇವೆ ಸಲ್ಲಿಸುವ ಅವಕಾಶ ಇಲ್ಲವೇ ಅನುಮತಿ ನೀಡಿದರೂ, ಕೇಳವರ್ಗದರು ಇಲ್ಲಿಯವರೆಗೂ ನಂಬಿಕೊಂಡು ಬಂದಿರುವ ರೂಢಿ-ಸಂಪ್ರಾದಾಯಗಳು ಅದಕ್ಕೆ ತಡೆಯನ್ನುಂಟು ಮಾಡುತ್ತವೆ.

ಸಮಾದೆಮ್ಮನ ಪೂಜೆ ಜಾತ್ರೆಗಳಂತಹ ಆಚರಣೆಗಳು ಹಳ್ಳಿಗಳಲ್ಲಿ ಜಾತಿ ತಾರತಮ್ಯಗಳು ಹೇಗೆ ಬೇರುಬಿಟ್ಟಿವೆ ಎಂಬುದನ್ನು ತಿಳಿಸುವ ಜೀವಂತ ಉದಾಹರಣೆಗಳು. ಸರಕಾರದ ನೀತಿಗಳಿಂದಾಗಿ ಹೊರನೋಟಕ್ಕೆ ಹಳ್ಳಿಗಳಲ್ಲಿ ಜಾತಿ ಜಾತಿಗಳಲ್ಲಿ ಸಮಾನತೆಯನ್ನು ಕಾಣಬಹುದಾರೂ ಧಾರ್ಮಿಕ ಸಂಗತಿ ಆಚರಣೆಗಳಿಗೆ ಸಂಬಂಧಿಸಿದಂತೆ ಜಾತಿಯ ತಾರತಮ್ಯಗಳ ಕರಾಳ ರೂಪ ನಮಗೇ ಗೋಚರವಾಗುತ್ತದೆ.

ಗುಳೇಲಕ್ಕಮ್ಮ : ದನಕರುಗಳ ವಿಚಾರವಾಗಿ ಅವುಗಳಿಗೆ ರೋಗರುಜಿನಗಳು ಬಾರದಂತೆ ತಡೆಯುವ ಭಾವನೆ ಜನರಲ್ಲಿ ಇರುವುದರಿಂದ ಈ ಹಬ್ಬದ ಆಚರಣೆ ನಡೆಯುತ್ತದೆ. ಪ್ರತೀ ವರ್ಷ ಒಂದು ದಿನ ಈ ಹಬ್ಬ ನಡೆಯುತ್ತದೆ. ಇದು ಸಾಮಾನ್ಯವಾಗಿ ಪ್ರತೀ ಜನವರಿ ಅಮವಾಸ್ಯೆಯ ಒಳಗೆ ಒಂದು ಮಂಗಳವಾರದ ದಿನ ನಡೆಯುತ್ತದೆ. ಜಾತ್ರೆ ಇದೆ ಎಂದು ೫ ದಿನಗಳ ಮುಂಚಿತವಾಗಿ ಗುರಿಕಾರರು ಅಂದರೆ ಚಲವಾದಿಗಳು ಸಾರು ಹಾಕುತ್ತಾರೆ. ಗುಳೇ ಎಂದರೆ ಕಿತ್ತುಕೊಂಡು ಹೋಗುವುದು ಎಂದರ್ಥ. ಸಾಮಾನ್ಯವಾಗಿ ಗೋಧಿ ಹಿಟ್ಟಿನಲ್ಲಿ ದೇವಿಯ ಅಂದರೆ ಗುಳೇ ಲಕ್ಕಮ್ಮನ ಮೂರ್ತಿಯನ್ನು ಬಾರಿಕರು ಮನೆಯಲ್ಲಿ ಮಾಡುತ್ತಾರೆ. ನಂತರ ಅದನ್ನು ತಂದು ಪಂಚಾಯತ್‌ ಕಟ್ಟೆಯಲ್ಲಿ ಮುಂಜಾನೆ ಸುಮಾರು ೯ ಗಂಟೆಗೆ ಇಡುತ್ತಾರೆ. ಊರಿನ ಸಮಸ್ತ ಭಕ್ತಾದಿಗಳು ಹಣ್ಣು ಕಾಯಿ ಪೂಜೆ ಸಲ್ಲಿಸುತ್ತಾರೆ. ಬಾರಿಕರು ಗುಳೇ ಲಕ್ಕಮ್ಮನ ಮರದ ಹತ್ತಿರ ದೇವರನ್ನು ಇಡುತ್ತಾರೆ. ನಂತರ ದೇವಿಗೆ ಕುರಿಬಲಿ ಕೊಡುತ್ತಾರೆ. ಇದಾದ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಸಂಜೆಯವರೆಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಹೊಯ್ದು ಊರಿನಲ್ಲಿ ಒಂದು ನರಪಿಳ್ಳೆಯೂ ಉಳಿಯದಂತೆ ಊರಾಚೆಗಿನ ಹೊಲಗಳಿಗೆ ಹೋಗುತ್ತಾರೆ. ಬೆಕ್ಕು, ಕೋಳಿ, ದನ, ನಾಯಿ, ಇತ್ಯಾದಿ ಯಾವುದೇ ಪ್ರಾಣಿಗಳು ಸಹ ಅಂದು ಊರಲ್ಲಿರದೆ ಮೆನೆ ಒಡೆಯರ ಸಮೇತ ಸಂಜೆಯವರೆಗೆ ಸಮಯವನ್ನು ಹೊಲದಲ್ಲಿ ಕಳೆಯಬೇಕು. ಸಂಜೆ ಪುನಃ ಊರಿಗೆ ಪ್ರವೇಶಿಸಬೇಕು. ಹೀಗೆ ಬೆಳಗಿನಿಂದ ಸಂಜೆಯವರೆಗೆ ಜನರು ತಮ್ಮ ತಮ್ಮ ಹೊಲಗಳಲ್ಲೆ ಕಾಲ ಕಳೆಯುತ್ತಾರೆ ಯಾರೂ ಈ ಹೊತ್ತಿನಲ್ಲಿ ಊರೊಳಗೆ ಪ್ರವೇಶಿಸುವಂತಿಲ್ಲ.

ಕೋಡಿ ಬಸವನ ಜಾತ್ರೆ : ಕೋಡಿ ಬಸವನ ಜಾತ್ರೆಗೆ ಕಳಸ ಬೆಳಗಿದ ನಂತರ ತೇರು ಎಳೆಯಲಾಗುತ್ತದೆ. ಕೋಡಿ ಬಸವೇಶ್ವರ ಜಾತ್ರೆಯ ಹಿಂದಿನ ದಿನ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಇತ್ತೀಚಿನಿಂದ ನಡೆಸುತ್ತಿದ್ದಾರೆ. ಇದರಲ್ಲಿ ಉಜ್ಜಿನಿ ಸ್ವಾಮಿಗಳು ಹಾಗೂ ರಂಭಾಪುರಿ ಸ್ವಾಮಿಗಳು ಭಾಗವಹಿಸುತ್ತಾರೆ. ೧೯೯೮ – ೯೯ ರಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೨೫ ಜೋಡಿ ವಧೂ-ವರರಿದ್ದರೆ, ೯೯ – ೨೦೦೦ ರಲ್ಲಿ ೪೧ ಜೋಡಿಗಳಿದ್ದರು. ಈ ವರ್ಷ ೨೦೦೦ – ೨೦೦೧ರಲ್ಲಿ ೬೧ ಜೋಡಿ ವಧೂ-ವರರಿದ್ದರು. ವಧೂ-ವರರಿಗೆ ಚಿನ್ನದ ತಾಳಿ, ಬಟ್ಟೆ, ಕಡಗ, ಕಾಲುಂಗುರ ಇತ್ಯಾದಿಗಳನ್ನು ಊರವರ ವತಿಯಿಂದ ನೀಡಲಾಗುವುದು. ಹಾಗೂ ಅನ್ನಸಂತರ್ಪಣೆ ಮಾಡಲಾಗುವುದು. ಇದಕ್ಕಾಗಿ ಪ್ರತಿ ಜೋಡಿಯು ಕಳೆದ ಬಾರಿ ರೂ. ೫೦೧ ನೀಡಿದ್ದರೆ ಈ ಬಾರಿ ರೂ. ೬೦೧ ನೀಡಿದ್ದಾರೆ.

ಈ ಜಾತ್ರೆಗೆ ಸ್ವಾಮಿಗಳು ಬಂದಾಗ ಅಡ್ಡಪಲ್ಲಕ್ಕಿ ಕಾರ್ಯಕ್ರಮ ನಡೆಯುತ್ತದೆ. ಉಜ್ಜಿನಿ ಮಠಕ್ಕೆ ಸೇರಿದ ಓರ್ವ ಸ್ವಾಮಿಗಳ ಒಂದು ಗದ್ದುಗೆ ಸಹ ಇಲ್ಲಿದೆ.

ಮೊಹರಂ ಹಬ್ಬ : ಇದು ಮುಸ್ಲಿಮರ ಹಬ್ಬವಾದರು ಹಿಂದೂಗಳು ಭಾಗವಹಿಸುತ್ತಾರೆ. ಹನ್ನೆರಡು ಅಮವಾಸ್ಯೆ, ಹನ್ನೆರಡು ಹುಣ್ಣಿಮೆ ನಂತರ ಈ ಹಬ್ಬದ ಆಚರಣೆ ಪ್ರಾರಂಭವಾಗುತ್ತದೆ. ಈ ಹಬ್ಬದ ಐತಿಹ್ಯವೆಂದರೆ ಹುಸೇನ್‌ ಒಬ್ಬ ಮಹಾವೀರ. ಯುದ್ಧದಲ್ಲಿ ಮರಣಹೊಂದಿದನು ಮತ್ತು ಅವನ ಸ್ಮರಣೆಗಾಗಿ ಈ ಹಬ್ಬವನ್ನು ದುಃಖ ಸೂಚಕವಾಗಿ ಆಚರಸಬೇಕೆಂಬುದು ನಿಯಮ. ಆದರೆ ಇತ್ತೀಚೆಗೆ ಹೆಚ್ಚಾಗಿ ಜನ ಈ ಹಬ್ಬದಲ್ಲಿ ಕುಣಿಯುವುದು ಕಂಡುಬರುತ್ತದೆ. ಮೊಹರಂ ತಿಂಗಳ ಮೊದಲ ದಿನ ಅಂದರೆ ಪಾಡ್ಯದಂದು ಕುಣಿ ತೋಡುತ್ತಾರೆ. ಅಂದರೆ ಆಲಿ ಕುಣಿಗಾಗಿ ಪೂಜೆ ರೀತಿಯ ಆಚರಣೆ ಅಥವಾ ಗುದ್ದಲಿ ಹಾಕುವುದು ನಡೆಯುತ್ತದೆ. ಗುದ್ದಲಿ ಹಾಕಿದ ೩ ಅಥವಾ ೫ ದಿನಗಳ ಬಳಿಕ ದೇವರುಗಳನ್ನು ಮಸೀದಿಯಲ್ಲಿ ಕೂಡಿಸಲಾಗುವುದು. ಇದರಲ್ಲಿ ಒಟ್ಟು ೫ ದೇವರುಗಳಿವೆ. ದೂರದ ಹನಸಿಯಿಂದಲೂ ಮುಸ್ಲಿಂ ಬಾಂಧವರು ಈ ಹಬ್ಬಕ್ಕಾಗಿ ಹೆಗ್ಡಾಳ್‌ಗೆ ಬರುತ್ತಾರೆ. ೯ ನೇ ರಾತ್ರಿ ಮುಚ್ಚಿ ಬಿಡುತ್ತಾರೆ. ೧೦ ನೇ ದಿನ ಶವವನ್ನು ಬಾವಿಗೆ ಹಾಕುತ್ತಾರೆ.

ಗ್ರಾಮಸ್ಥರ ಅರಿವು : ಗ್ರಾಮಪಂಚಾಯತ್‌ನ ಅಧ್ಯಯನಕ್ಕೆ ಪೂರಕವಾಗಿ ಮಾದರಿ ಪ್ರಶ್ನಾವಳಿಗಳನ್ನು ರೂಪಿಸಿ ಗ್ರಾಮನಿವಾಸಿಗಳು ಮತ್ತ ಪಂಚಾಯತ್‌ ಪ್ರತಿನಿಧಿಗಳನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ಗ್ರಾಮಪಂಚಾಯತ್‌ನ ಒಟ್ಟು ಹತ್ತು ಮಂದಿ ಸದಸ್ಯರಲ್ಲಿ ೮ ಮಂದಿಯನ್ನು ಸಂದರ್ಶಿಸಿ ಮಾಹಿತಿ ಪಡೆಯಲಾಯಿತು. ಇದರಲ್ಲಿ ಪಂಚಾಯತ್‌ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದ್ದಾರೆ. ಮುಕ್ತ ಪ್ರಶ್ನಾವಳಿಯ ಮೂಲಕ ಅವರ ಅಭಿಪ್ರಾಯಗಳನ್ನು ಪಡೆಯಲಾಯಿತು. ಜೊತೆಗೆ ಕಾರ್ಯದರ್ಶಿ, ಕರಸಂಗ್ರಹಕಾರ ಹಾಗೂ ನೀರುಗಂಟಿ ಮತ್ತಿತರ ಸಿಬ್ಬಂದಿಗಳನ್ನು ಸಂದರ್ಶಿಸಿ ಮಾಹಿತಿ ಪಡೆಯಲಾಯಿತು.

ಪಂಚಾಯತ್‌ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನೊಳಗೊಂಡು ಸದಸ್ಯರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಲಾಯಿತು. ಇದರಲ್ಲಿ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾದವರು ಮತ್ತು ಇಬ್ಬರು ಪರಿಶಿಷ್ಟ ಜಾತಿಯ ಸದಸ್ಯರಿದ್ದಾರೆ. ಇವರಲ್ಲಿ ಒಬ್ಬಳು ಮಹಿಳೆ ಇದ್ದಾರೆ. ಇವರಿಬ್ಬರೂ ಅನಕ್ಷರಸ್ಥರು. ಎಲ್ಲ ಸದಸ್ಯರಿಗೂ ಗ್ರಾಮಪಂಚಾಯತ್‌ ಮತ್ತು ಅದರ ವ್ಯಾಪ್ತಿಯ ಗ್ರಾಮ ಯಾ ಹಳ್ಳಿಗಳ ಪರಿಚಯವಿದೆ. ಪ್ರತಿಯೊಬ್ಬರೂ ತಾವು ಗ್ರಾಮಸಭೆಯಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರೆ. ಗ್ರಾಮಸಭೆಯನ್ನು ನಿಯಾಮಾನುಸಾರವಾಗಿ ಕರೆಯಲಾಗುತ್ತದೆ ಮತ್ತು ಗ್ರಾಮದ ಜನರು ಸಭೆ ಸೇರುತ್ತಾರೆ ಎಂಬುದಾಗಿ ಸದಸ್ಯರು ತಿಳಿಸುತ್ತಾರೆ. ಗ್ರಾಮಸಭೆಯನ್ನು ಪಂಚಾಯತ್‌ ಕಚೇರಿಯಲ್ಲಿ ಬಾಗಿಲು ಹಾಕಿ ಸಭೆ ಕರೆಯುತ್ತಾರೆ ಎಂಬ ಸುದ್ಧಿಗಳಿವೆ ಎಂದು ಕುತೂಹಲಕ್ಕಾಗಿ ಇಬ್ಬರು ಸದಸ್ಯರಲ್ಲಿ ಕೇಳಿದಾಗ ಅವರು ನಿರುತ್ತರಿಗಳಾಗುತ್ತಾರೆ. ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ ಎಂದು ಎಲ್ಲ ಸದಸ್ಯರಿಗೂ ತಿಳಿದಿರುತ್ತದೆ. ಆಯವ್ಯಯ ಪಟ್ಟಿ ಕುರಿತು ತಿಳಿಸಿದರೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮೂವರು ಸದಸ್ಯರು ಇದರ ಅರಿವು ಇದೆ ಎಂದಿದ್ದಾರೆ. ಉಳಿದವರು ಉತ್ತರಿಸಿಲ್ಲ. ವಿಶೇಷವಾಗಿ ಸಮಿತಿಗಳ ಬಗ್ಗೆ ಯಾರೂ ಉತ್ತರಿಸಿಲ್ಲ. ಕೇಳಿದಾಗ ಸುಮ್ಮನೆ ಸಮಿತಿ ಇದೆ ಎಂದು ಪಂಚಾಯತ್‌ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ನಿಜವಾಗಿಯೂ ಸಮಿತಿ ಅಸ್ತಿತ್ವದಲ್ಲಿಲ್ಲ ಮತ್ತು ಇದರ ಕಾರ್ಯಕಲಾಪಗಳು, ರಚನೆ, ಇವು ಯಾವುವು ಎಂಬುದರ ಕುರಿತು ಮಾಹಿತಿ ಒಬ್ಬನೇ ಒಬ್ಬ ಸದಸ್ಯನಿಗೂ ತಿಳಿದಿಲ್ಲ. ಇದರ ಬಗ್ಗೆ ಯಾವುದೇ ಸದಸ್ಯನಿಗಾಗಲಿ ಪ್ರಾಥಮಿಕ ಜ್ಞಾನವಿದ್ದಂತಿಲ್ಲ. ಈ ಸಮಿತಿಗಳ ಮೂಲಕ ಗ್ರಾಮಪಂಚಾಯತ್‌ ತನ್ನ ಅಧಿಕಾರ ಪ್ರಕಾರ್ಯಗಳನ್ನು ನಿರ್ವಹಿಸಬೇಕೆಂಬ ಅರಿವು ಇವರಿಗಿಲ್ಲ ಎಂಬುದು ಸ್ಪಷ್ಟವಾಗಿದೆ. ವಾರ್ಷಿಕ ಯೋಜನೆ ಬಗ್ಗೆ ವಿವರಿಸಿ ತಿಳಿಸಿದಾಗ ಕೆಲವು ಆ ರೀತಿಯ ಕಾರ್ಯಕ್ರ ಇದೆ ಎಂದೂ, ಇನ್ನು ಕೆಲವರು ಇಲ್ಲವೆಂದೂ ತಿಳಿಸಿರುತ್ತಾರೆ. ಇದರ ಅರಿವು ಯಾಕಿಲ್ಲ ಎಂದು ಕೇಳಿದರೆ ಯಾರೂ ಸಮರ್ಪಕವಾಗಿ ಉತ್ತರಿಸಿಲ್ಲ. ಪಂಚಾಯತ್‌ ಸದಸ್ಯರಾಗಿ ಇದನ್ನು ಅರಿತುಕೊಳ್ಳುವುದು ನಿಮ್ಮ ಕರ್ತವ್ಯವಲ್ಲವೇ ಎಂದು ಕೇಳಿದರೆ ಅದಕ್ಕೂ ಉತ್ತರವಿಲ್ಲ. ಹಾಗೆಯೇ ಕೃಷಿ ಅಭಿವೃದ್ಧಿ ಯೋಜನೆಗಳು, ಕೃಷಿಯೇತರ ಅಭಿವೃದ್ಧಿ ಯೋಜನೆಗಳು ಮತ್ತು ಪರಿಸರ ಕಾಳಜಿಯ ಬಗ್ಗೆ ಯಾರಿಗೂ ಒಲವಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹೆಚ್ಚಿನ ಸದಸ್ಯರು ಕೃಷಿಕರಾದರೂ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಲ್ಲಿ ಕೃಷಿ ಇನ್ನಷ್ಟು ಸುಧಾರಣೆಗೊಳ್ಳುವುದು ಎಂಬ ದೃಷ್ಟಿಕೋನವನ್ನು ಅಲ್ಲಗಳೆದಿರುವಂತೆ ಭಾಸವಾಗುತ್ತದೆ. ಕೃಷಿ ಅಭಿವೃದ್ಧಿ ಯೋಜನೆಗಳನ್ನು ಯಾಕೆ ಮಾಡುವುದಿಲ್ಲವೆಂದರೆ ಇದು ಒಣಭೂಮಿ ಎಂಬುದಾಗಿ ಕೆಲವರ ಉತ್ತರ. ಗ್ರಾಮಪಂಚಾಯತ್‌ ಪೂರೈಸಿದಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಂಡೆಹಾಸಿರುವುದನ್ನೆ ಅವರು ಮೊದಲು ತಿಳಿಸುತ್ತಾರೆ. ಹಾಗೆಯೇ ಜನತಾ ಮನೆ, ಅಂಬೇಡ್ಕರ್ ಭವನ, ಭಜನಾ ಮಂದಿರ, ಅಂಗನವಾಡಿ, ಚರಂಡಿ ವ್ಯವಸ್ಥೆ ಮತ್ತು ಭಾಗ್ಯಜ್ಯೋತಿ ಮುಂತಾದ ಯೋಜನೆಗಳನ್ನು ಜನರಿಗೆ ಒದಗಿಸಿದ್ದೇವೆ ಎಂದು ಹೇಳುತ್ತಾರೆ. ಹೆಚ್ಚಿನ ಕೆಲಸಕಾರ್ಯಗಳನ್ನು ಗುತ್ತಿಗೆದಾರರು ಮಾಡಿದ್ದಾರೆ ಎಂದು ತಿಳಿಸುತ್ತಾರೆ. ಆದರೆ ಆ ಕೆಲಸಗಳು ತೃಪ್ತಿಕರವಾಗಬೇಕಿದ್ದರೆ ಈ ಸದಸ್ಯರು ಅಲ್ಲೇ ನಿಂತು ಮಾಡಿಸಬೇಕೆಂಬ ದೃಢಸಂಕಲ್ಪ ಇವರ್ಯಾರಿಗೂ ಇದ್ದಂತಿಲ್ಲ.

ಇನ್ನೊಂದು ವಿಷಯವೆಂದರೆ ಸಾಮಾನ್ಯವಾಗಿ ಗ್ರಾಮಪಂಚಾಯತ್‌ಗೆ ವಾರ್ಷಿಕ ಅನುದಾನ ಮತ್ತು ಜವಾಹರ್ ರೋಜ್‌ಗಾರ್ ಯೋಜನೆ (ಜೆ. ಆರ್. ವೈ.) ಅನುದಾನ ಬರುವಾಗ ಹೆಚ್ಚಿನ ಗ್ರಾಮಪಂಚಾಯತ್‌ಗಳಲ್ಲಿ ಸದಸ್ಯರುಗಳು ತಮ್ಮ ಪಾಲಿನ ಹಣ (ಅನುದಾನದ ಪಾಲು) ದ ಮೊತ್ತವೆಷ್ಟು ಎಂದು ಗ್ರಾಮಪಂಚಾಯತಿಯಲ್ಲಿ ನಿರ್ಧರಿಸಿ ಅದರ ಆಧಾರದ ಮೇಲೆ ಹಳ್ಳಿಯ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹೆಚ್ಚಿನ ಸದಸ್ಯರು ತಮಗೆ ಸಂಪರ್ಕವಿರುವ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುತ್ತಾರೆ. ಇದು ಹೆಚ್ಚಾಗಿ ಈಗ ನಡೆಯುತ್ತಿದೆ. ಕೆಲವು ಪ್ರಬಲ ಸದಸ್ಯರು ತಮ್ಮ ಪಾಲಿನ ಹಣವನ್ನು ಯಥಾವತ್ತಾಗಿ ಹೆಚ್ಚಿಗೆ ಸಿಗುವಂತೆ ಅಧಿಕಾರಯುತವಾಗಿ ಪಡೆಯುತ್ತಾರೆ. ಉಳಿದವರು ತಮಗೆ ಸಿಕ್ಕಿದ ಹಣದಲ್ಲಿ ಇರುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇದು ಹೆಚ್ಚಿನ ಮಟ್ಟದಲ್ಲಿ ಗ್ರಾಮಪಂಚಾಯತ್‌ನಲ್ಲಿ ನಡೆಯುವ ಪರಿಪಾಠವಾಗಿದೆ. ಆದರೆ ಹಿರೇಹೆಗ್ಡಾಳ್‌ ಇದಕ್ಕೆ ಸ್ವಲ್ಪ ಮಟ್ಟಿಗೆ ಪೂರಕವಾಗಿದ್ದರೂ ಎಲ್ಲ ಸದಸ್ಯರಿಗೂ ಈ ರೀತಿ ಕೇಳಿ ಪಡೆಯುವಷ್ಟು ಸ್ವಾತಂತ್ರ್ಯ ಅಥವಾ ಅದಕ್ಕೆ ಬೇಕಾದಂತಹ ಚಾಕಚಕ್ಯತೆ ಇಲ್ಲವೆಂಬಂತೆ ಕಂಡುಬರುತ್ತದೆ.

ಹೆಚ್ಚಿನ ಗ್ರಾಮಸ್ಥರಿಗೆ ಗ್ರಾಮಸಭೆಯ ಬಗೆಗೆ ಮತ್ತು ಗ್ರಾಮಸಭೆಯಲ್ಲಿ ಫಲಾನುಭವಿ ಆಯ್ಕೆ ನಡೆಯುತ್ತದೆ ಎಂಬುದು ಗೊತ್ತಿದೆ. ಯಾಕೆಂದರೆ ಒಂದಲ್ಲ ಒಂದು ವಿಧದಲ್ಲಾದರೂ ಆ ಹಳ್ಳಿಯು ಸರಕಾರದ ಯೋಜನೆಗಳ ಲಾಭವನ್ನು ಪಡೆದಿರುತ್ತದೆ. ಉದಾಹರಣೆಗೆ ನಮ್ಮ ಮಾದರಿ ಗ್ರಾಮದ ಹಳ್ಳಿಗಳಾದ ಸಾಸಲವಾಡ ಮತ್ತು ಸಾಣೇಹಳ್ಳಿಯಲ್ಲಿ ಈ ವರೆಗೆ ಗ್ರಾಮಸಭೆಗಳು ನಡೆದೇ ಇಲ್ಲ. ಬರೀ ಹೆರೇಹೆಗ್ಡಾಳ್‌ ಮತ್ತು ಒಮ್ಮೆ ಬೊಪ್ಪಲಾಪುರದಲ್ಲಿ ನಡೆದಿತ್ತು. ಆದರೂ ಹಳ್ಳಿಗರು ಗ್ರಾಮಸಭೆಗೆ ಹೋಗದಿದ್ದರೂ ಅಥವಾ ಗ್ರಾಮಸಭೆ ನಡೆಯುವ ಕುರಿತು ಮಾಹಿತಿ ಇರದೆ/ಸಿಗದೆ ಇದ್ದರೂ ಗ್ರಾಮಸಭೆ ಎಂಬ ಒಂದು ಸಂಸ್ಥೆ ಇದೆಯೆಂದೂ ಅದು ಫಲಾನುಭವಿ ಕೇಂದ್ರ ಎಂಬುದಾಗಿಯೂ ಗೊತ್ತಿದೆ. ಹೆಚ್ಚಿನ ಗ್ರಾಮಸ್ಥರಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಗೊತ್ತು. ಆದರೆ ಉಳಿದ ಪಂಚಾಯತ್‌ ಸದಸ್ಯರು ಯಾರ್ಯಾರು, ಅವರಲ್ಲಿ ಮಹಿಳೆಯರೆಷ್ಟು ಎಂಬುದು ನಿಖರವಾಗಿ ಗೊತ್ತಿಲ್ಲ. ಪಂಚಾಯತ್‌ನ ಇತರ ಸಿಬ್ಬಂದಿಗಳ ಬಗ್ಗೆಯೂ ಅಷ್ಟೇನು ತಿಳಿದಿಲ್ಲ. ಅಂದರೆ ಒಟ್ಟು ಪಂಚಾಯತ್‌ ಸದಸ್ಯರೆಷ್ಟು ಮತ್ತು ಅದರಲ್ಲಿ ಮಹಿಳಾ ಸದಸ್ಯರು ಎಷ್ಟು ಎಂದು ಕೇಳಿದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.

ಇನ್ನು ಪಂಚಾಯ್‌ ಸಮಿತಿಗಳ ಬಗ್ಗೆ ಸದಸ್ಯರಿಗೆ ಗೊತ್ತಿಲ್ಲದಿರುವಾಗ ಗ್ರಾಮಸ್ಥರಿಗೆ ಹೇಗೆ ಗೊತ್ತಾಗುತ್ತದೆ? ಏಕೆಂದರೆ ಪಂಚಾಯತ್‌ ಸಮಿತಿಯೆಂಬುದು ಈ ಊರಲ್ಲಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ವಾರ್ಷಿಕ ಯೋಜನೆ ಮತ್ತು ಆಯವ್ಯಯ ಪಟ್ಟಿಯ ಕುರಿತು ಶೇ. ೯೦ ರಷ್ಟು ನಿವಾಸಿಗಳಿಗೆ ಗೊತ್ತೇ ಇಲ್ಲ. ಹಾಗೆಯೇ ಪಂಚಾಯತ್‌ ಪೂರೈಸಿದ ಕಾಮಗಾರಿಗಳ ಬಗ್ಗೆ ಕೇಳಿದರೆ ಮೊತ್ತಮೊದಲಾಗಿ ಅವರು ಬಂಡೆಹಾಸುವುದನ್ನೆ ತಿಳಿಸುತ್ತಾರೆ. ಇನ್ನೆಲ್ಲವೂ ಅವರಿಗೆ ಆನುಷಂಗಿಕವಾಗಿದೆ. ಉದಾಹರಣೆಗೆ ಅಂಗನವಾಡಿ ಆಗಬೇಕೆಂಬುದರ ಕುರಿತು ಯಾರೂ ಆಸಕ್ತಿಯಿಂದ ಹೇಳುವುದಿಲ್ಲ. ಸಂಶೋಧನಾ ತಂಡವು ನಿಮ್ಮಲ್ಲಿ ಅಂಗನವಾಡಿ ಸಮಸ್ಯೆ ಇದೆಯಲ್ಲವೆ ಎಂದಾಗ ಹೌದು ನಮಗೂ ಅಂಗನವಾಡಿ ಅವಶ್ಯಕ ಎಂದು ತಿಳಿಸುತ್ತಾರೆ. ಪಂಚಾಯತ್‌ ಕಾಮಗಾರಿಗಳನ್ನು ಇಂಜಿನಿಯರ್ ಅಥವಾ ಗುತ್ತಿಗೆದಾರರು ಮಾಡಿರುತ್ತಾರೆ ಎನ್ನುವರು. ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳನ್ನು ಗುತ್ತಿಗೆದಾರರು ಮಾಡಿಸುವಾಗಲೂ ಸದಸ್ಯರು ಅದರ ಉಸ್ತುವಾರಿ ಸಹ ಮಾಡುವುದಿಲ್ಲವೆನ್ನುತ್ತಾರೆ ನಿವಾಸಿಗಳು. ಇದರಿಂದ ನಮಗೆ ತಿಳಿಯುವ ಮುಖ್ಯ ಅಂಶವೆಂದರೆ ಹೆಚ್ಚಿನ ಕಾಮಗಾರಿಗಳನ್ನು ತಮ್ಮ ಸಮೀಪದ ಗುತ್ತಿಗೆದಾರರು ಅಥವಾ ಇಂಜಿನಿಯರ್ ಮಾಡಿಸುವುದರಿಂದ, ಅದರ ಮೇಲ್ವಿಚಾರಣೆಯನ್ನು ನೋಡುವಷ್ಟು ಆಸಕ್ತಿ ಸಹ ಇಲ್ಲದಿರುವುದರಿಂದ ಈ ಸದಸ್ಯರುಗಳ ಪಾತ್ರದ ಬಗ್ಗೆ ನಾವು ಅಥವಾ ಹಳ್ಳಿಗರಾದರೂ ವಿವೇಚನೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ದುರ್ಬಲ ವರ್ಗದ ಸದಸ್ಯರು ಅಥವಾ ಮಹಿಳಾ ಸದಸ್ಯರು ವ್ಯವಸ್ಥೆಯೊಳಗೆ ಇದನ್ನು ಎದರುಸುವಂತಹ ಚಾಕಚಕ್ಯತೆ ಇಲ್ಲದಿದ್ದಲ್ಲಿ ಅಥವಾ ಹಿಂಜರಿಯುವಿಕೆ ಇದ್ದರೆ ದುರ್ಭಲ ವರ್ಗದವರು ತಾವು ಇವರಿಂದ ದೂರ ಇದ್ದೇವೆ ಎನ್ನುವಷ್ಟರ ಮಟ್ಟಿಗೆ ಇರುತ್ತಾರೆ. ಹಾಗೆಯೇ ಪ್ರಬಲ ಸದಸ್ಯರು ಸಹ ತಮ್ಮ ಬೇಳೆ ಅಥವಾ ಆಸಕ್ತಿ ಉಳಿಸಿಕೊಳ್ಳುವುದರಿಂದ ಮತ್ತು ಇದು ಇತರ ಸದಸ್ಯರ ಮುಖಾಂತರವಾಗುವುದರಿಂದ ಅಥವಾ ಅವರ ಹೆಸರಿನಲ್ಲಿ ಯಾ ಅನುಮೋದನೆಯೊಂದಿಗೆ ನಡೆಯುವುದರಿಂದ ಒಟ್ಟಾರೆಯಾಗಿ ಕಾಮಗಾರಿಯನ್ನು ಪರಿಶೀಲಿಸುವುದು ತಮ್ಮ ಕರ್ತವ್ಯವೆಂದೂ ಸಹ ಭಾವಿಸುವುದಿಲ್ಲ. ಇದು ಇಡೀ ಗ್ರಾಮದ ಪಂಚಾಯತಿನ ಅನಾರೋಗ್ಯಕರ ಬೆಳವಣಿಗೆ.

ಹಳ್ಳಿಗರು ಆ ಗ್ರಾಮದಲ್ಲಿ ಆಗಬೇಕಾದ ಯೋಜನೆಗಳ ಬಗ್ಗೆ ಬಹಳಷ್ಟು ವಿವರಿಸುತ್ತಾರಾದರೂ ಶೇ. ೯೫ ರಷ್ಟು ಮಂದಿ ತಮ್ಮ ಹಳ್ಳಿಯಲ್ಲಿ ಶೌಚಾಲಯ ಆಗಬೇಕೆಂದು ತಿಳಿಸುವುದಿಲ್ಲ. ಯಾಕೆಂದರೆ ಶೌಚಾಲಯ ಅವರಿಗೆ ಆದ್ಯತೆಯ ವಿಷಯ ಆಗುವುದಿಲ್ಲ. ಸಂದರ್ಶಿಸಿದ ಹೆಚ್ಚಿನ ಹಳ್ಳಿಗರು ಪಶುವೈದ್ಯಕೀಯ ಆಸ್ಪತ್ರೆ ಅಥವಾ ಇನ್ನಿತರ ಆದ್ಯತೆಗಳನ್ನೇ ವಿವರಿಸುತ್ತಾರೆ. ಹೆಚ್ಚಿನವರು ಇದಕ್ಕೂ ಸರಿಯಾಗಿ ಉತ್ತರಿಸುವುದಿಲ್ಲ. ಇನ್ನೂ ಒತ್ತಾಯಿಸದರೆ ಇದೆಲ್ಲ ನಮಗ್ಯಾಕೆ ಸಾರ್, ನಾವು ಬೇಕೆಂದರೂ ಅವರು ಮಾಡುತ್ತಾರೆಯೆ, ಒಂದು ವೇಳೆ ಮಾಡುವುದಿದ್ದರೂ ಅವರ ಜೊತೆ ಹೊಂದಾಣಿಕೆ ಇರುವವರಿಗೆ ಮಾತ್ರ ಮಾಡುತ್ತಾರೆ ಎಂದು ಹೇಳುತ್ತಾರೆ. ಇಡೀ ಗ್ರಾಮ ಪಂಚಾಯತ್‌ ಕ್ಷೇತ್ರದಲ್ಲಿ ಕೇವಲ ೧೬ ಶೌಚಾಲಯಗಳಿವೆ. ನಾಲ್ಕು ಗ್ರಾಮ ಯಾ ಹಳ್ಳಿಗಳಿರುವ ಈ ಗ್ರಾಮ ಪಂಚಾಯತಿಯಲ್ಲಿ ಒಟ್ಟು ೧೬ ಶೌಚಾಲಯಗಳಿವೆಯೆಂದರೆ ಇವರಿಗೆ ಶೌಚಾಲಯದ ಮಹತ್ವ ಮತ್ತು ಆರೋಗ್ಯದ ಕಳಕಳಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಮುಕ್ತ ಬಯಲು ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ – ಅದರಲ್ಲೂ ಮಹಿಳೆಯರಿಗೆ – ಬಹಿರ್ದೆಸೆಗೆ ಹೋಗಲು ಕಷ್ಟವಾಗುತ್ತದೆ ಎಂಬ ಕಾಳಜಿಯೂ ಇಲ್ಲ. ಹಿರೇಹೆಗ್ಡಾಳ್‌ದ ಪರಿಸ್ಥಿತಿ ಹೀಗದ್ದರೆ, ಕೂಡ್ಲಿಗಿ ತಾಲ್ಲೂಕು ಪಂಚಾಯತ್‌ ಕಾರ್ಯಾಲಯದಲ್ಲೂ ಒಂದು ವ್ಯವಸ್ಥಿತವಾದ ಶೌಚಾಲಯವಿಲ್ಲ. ಅಂದ ಮೇಲೆ ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ನಲ್ಲಿ ಶೌಚಾಲಯಗಳಿಲ್ಲದಿರುವುದು ಏನು ಮಹಾ!