ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಕುರಿತಂತೆ ಆಗಾಗ ಚರ್ಚೆಗಳು ಕೇಳಿಬರುತ್ತಿವೆ. ಈ ಪ್ರಕ್ರಿಯೆಯು ಹಂತ ನಿರ್ದಿಷ್ಟ ಮೂರ್ತರೂಪವನ್ನು ಪಡೆದುಕೊಂಡಿದೆ. ಇಂದು ವಿಕೇಂದ್ರೀಕರಣ ವ್ಯವಸ್ಥೆ ಪಂಚಾಯತ್‌ಗಳು ಸಾಂವಿಧಾನಿಕ ಗುರುತ್ವವನ್ನು ಪಡೆದಿವೆ. ಇದರಿಂದಾಗಿ ವಿಕೇಂದ್ರೀಕರಣದ ಆಶಯವು ಹೆಚ್ಚು ಗಟ್ಟಿಗೊಳ್ಳುತ್ತಿದೆ.

ಎಲ್ಲ ವಿಧದ ವಿಕೇಂದ್ರೀಕರಣವು ಪ್ರಜಾತಾಂತ್ರಿಕವಲ್ಲ. ಪ್ರಜಾಪ್ರಭುತ್ವವಿಲ್ಲದ ವ್ಯವಸ್ಥೆಯಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸುವ ವಿಕೇಂದ್ರೀಕೃತ ಯೋಜನೆಗಳಿವೆ. ವಿಕೇಂದ್ರೀಕರಣವು ರಾಜಕೀಯ, ಆಡಳಿತ ಅಥವಾ ಹಣಕಾಸಿನದಿರಬಹುದು. ಇವು ಮೂರು ಜೊತೆ ಜೊತೆಯಲ್ಲಿ ಕಾರ್ಯ ನಿರ್ವಹಿಸಬೇಕೆಂದಿಲ್ಲ.

ಉದಾರವಾದಿ ರಾಜಕೀಯ ಪಂಥದ ಪ್ರಮುಖ ಅಂಶವಾಗಿರುವ ವಿಕೇಂದ್ರೀಕರಣವು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ಸ್ಥಳೀಯ ಮಟ್ಟದಲ್ಲಿ ಸಹಕಾರಿಯಾಗಿದೆ ಎನ್ನಬೇಕು. ಕೇಂದ್ರಮಟ್ಟದಲ್ಲಿ ಇದು ರಾಜಕೀಯ ಶಿಕ್ಷಣ, ನಾಯಕತ್ವ ತರಬೇತಿ ಮತ್ತು ರಾಜಕೀಯ ಸ್ಥಿರತೆ ನೀಡಿದರೆ ಸ್ಥಳೀಯ ಹಂತದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ ಮುಂತಾದ ಮೌಲ್ಯಗಳನ್ನು ಇದು ನೀಡಬಹುದಾಗಿದೆ. ಹೀಗೆ (ಚುನಾಯಿತ ಮತ್ತು ಪ್ರಾತಿನಿಧ್ಯರೂಪದ) ಪ್ರಜಾತಾಂತ್ರಿಕ ವಿಕೇಂದ್ರೀಕರಣವು ಹೆಚ್ಚು ಪಾರದರ್ಶಕತೆ, ಉತ್ತರದಾಯಿತ್ವ, ಹೊಣೆಗಾರಿಕೆ, ಆಡಳಿತ ವೆಚ್ಚದ ಮೇಲೆ ಕಡಿವಾಣ, ಪರಿಶೀಲನೆ, ದಕ್ಷತೆ, ಸಮಾನತೆ ಮತ್ತು ಜನಸಹಭಾಗಿತ್ವಕ್ಕೆ ಅವಕಾಶವನ್ನೊದಗಿಸುತ್ತದೆ.

ವಿಕೇಂದ್ರೀಕರಣವು ಪದವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಇದಕ್ಕೆ ಒಂದು ಸಾರ್ವತ್ರಿಕವಾಗಿ ಒಪ್ಪುವಂತಹ ಅರ್ಥ ವಿವವರಣೆಯನ್ನು ನೀಡುವುದು ಕಷ್ಟ ಸಾದ್ಯ. ‘ಡಿಸೆಂಟ್ರಲೈಸೇಶನ್’ ಎಂಬ ಅಂಗ್ಲ ಪದದ ಮೂಲರೂಪವು ಲ್ಯಾಟಿನ್‌ನಿಂದ ಬಂದಂತಹದು. ಇದಕ್ಕೆ ಹಲವಾರು ಆರ್ಥವಿವರಣೆಗಳಿದ್ದರೂ ಎಲ್ಲವೂ ‘ಕೇಂದ್ರದಿಂದ ದೂರವಾಗುವುದು’ (away from the centre) ಎಂಬುದನ್ನು ಸೂಚಿಸುತ್ತದೆ. ವಿಕೇಂದ್ರೀಕರಣವೆಂದರೆ ಮೇಲಿನ ಹಂತದ ಸರಕಾರದಿಂದ ಕೆಳಹಂತದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅಥವಾ ಆಡಳಿತಾಂಗಗಳಿಗೆ ಆಧಿಕಾರದ ವರ್ಗಾವಣೆಯಾಗುವಂತಹುದು. ಅಧಿಕಾರ ವಿಕೇಂದ್ರೀಕರಣವನ್ನು ವ್ಯವಸ್ಥೆಯ ಒಳಗೂ ಅಥವಾ ಹೊರಗಿನ ಸಂಘಟನೆಗಳೊಂದಿಗೂ ಮಾಡಬಹುದು. ಅಭಿವೃದ್ಧಿಶೀಲ ದೇಶಗಳಲ್ಲಿ ಯೋಜನೆ ಮತ್ತು ಆಡಳಿತವನ್ನು ವಿಕೇಂದ್ರಿತಗೊಳಿಸುವುದರ ಹಿಂದೆ ಹಲವು ಚಾಲಕ ಶಕ್ತಿಗಳು ಕೆಲಸಮಾಡಿವೆ ಎಂದು ಚೀಮಾ ಮತ್ತು ರೊಂಡಿನೆಲ್ಲಿ ತಿಳಿಸುತ್ತಾರೆ. ಅಂದರೆ ಕೇಂದ್ರ ಸರಕಾರದಿಂದ ಅದರ ಸಹಸಂಸ್ಥೆಗಳಿಗೆ, ಸ್ಥಳೀಯಾಡಳಿತ ಘಟಕಗಳಿಗೆ, ಅರೆಸ್ವಾಯತ್ತ ಮತ್ತಿತರ ಸಂಸ್ಥೆಗಳಿಗೆ, ಸ್ಥಳೀಯ ಸರಕಾರ ಮತ್ತು ಸರಕಾರೇತರ ಸಂಘಟನೆಗಳಿಗೆ ನಿರ್ಣಯ ನಿರೂಪಣಾ ಅಥವಾ ಯೋಜನೆಯ ವರ್ಗಾವಣೆಯೂ ಆಗಬಹುದು. ವಿಕೇಂದ್ರೀಕರಣವು ಯೋಜನೆ ರೂಪಿಸುವ ಅಧಿಕಾರ ಮತ್ತು ನಿರ್ಣಯ ನಿರೂಪಿಸುವ ಹಾಗೂ ಮುಖ್ಯವಾಗಿ ಸ್ವಾಯತ್ತತೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. (ಚೀಮಾ ಮತ್ತು ರೊಂಡಿನೆಲ್ಲಿ, ೧೯೮೪) ಅಮಿತಾವ್ ಮುಖರ್ಜಿಯವರು ಸಹ ಇದನ್ನೇ ಪ್ರತಿಪಾದಿಸಿದ್ದಾರೆ, ಒಟ್ಟಿನಲ್ಲಿ ವಿಕೇಂದ್ರಿತ ಸಂಸ್ಥೆಯ ಸ್ವಾಯತ್ತತೆಯೇ ಇದರ ಮೂಲ ತತ್ವ.

ಚೀಮಾ ಮತ್ತು ರೊಂಡಿನಲ್ಲಿ ನಾಲ್ಕು ವಿಧದ ವಿಕೇಂದ್ರೀಕರಣವನ್ನು ವಿವರಿಸುತ್ತಾರೆ:

. (ಡಿಕಾನ್ಸಂಟ್ರೇಶನ್) :- ಸರಕಾರದ ಮಂತ್ರಿಮಂಡಲ ಅಥವಾ ಪಾರುಪತ್ಯದಲ್ಲಿ ಇರುವ ಕೆಲವೊಂದು ಆಡಳಿತಾಂಗ ಪ್ರಾಧಿಕಾರ ಅಥವಾ ಹೊಣೆಗಾರಿಕೆಯನ್ನು ಕೆಳಗಿನ ಹಂತಗಳಿಗೆ ನೀಡುವುದು.

. ಡೆಲಿಗೇಶನ್ (ನಿಯೋಜನೆ) :- ನಿರ್ದಿಷ್ಟ ವಿವವರಣೆಯುಳ್ಳ ಕಾರ್ಯಗಳನ್ನು ದೈನಂದಿನ ಆಡಳಿತಾಶಾಹಿಯಿಂದ ಹೊರತುಪಡಿಸಿ ಪರೋಕ್ಷವಾಗಿ ಕೇಂದ್ರ ಸರಕಾರದಿಂದ ಮಾತ್ರ ನಿಯಂತ್ರಿಸಲ್ಪಡುವ ಸಂಘಟನೆಗಳಿಗೆ ಹಸ್ತಾಂತರಿಸುವುದು.

. ಡಿವಲೂಷನ್ (ಅವತರಣ) :- ಸರಕಾರದ ಉಪರಾಷ್ಟ್ರೀಯ ಘಟಕಗಳನ್ನು ರಚಸಿ ಬಲಪಡಿಸುವುದು ಮತ್ತು ಅವುಗಳ ಕಾರ್ಯಗಳನ್ನು ಹೆಚ್ಚಾಗಿ ಕೆಂದ್ರ ಸರಕಾರದ ನೇರ ನಿಯಂತ್ರಣದಿಂದ ಹೊರಗಿಡುವುದು.

. ಪ್ರೈವೇಟೈಸೇಶನ್ (ಖಾಸಗೀಕರಣ) :- ಸರಕಾರೇತರ ಸಂಘಟನೆಗಳು ಅಥವಾ ಸರಕಾರದಿಂದ ಸ್ವತಂತ್ರವಾದ ಖಾಸಗಿ ಉದ್ಯಮಗಳಿಗೆ ಕೆಲಸಕಾರ್ಯದ ಹೊಣೆಗಾರಿಕೆ ನೀಡುವುದು.

ಇದರಲ್ಲಿ ಮೂರನೇ ವಿಧವನ್ನು ಹೊರತುಪಡಿಸಿದರೆ ಉಳಿದವುಗಳಲ್ಲಿ ಸರಿಯಾದ ರೀತಿಯ ಅಧಿಕಾರದ ವರ್ಗಾವಣೆಯಿಲ್ಲದಿರುವುದನ್ನು ಕಾಣಬಹುದು. ಡಿವಲೂಷನ್ ಎಂದರೆ ಔಪಚಾರಿಕವಾಗಿ ರಚಿತವಾದ ಸ್ಥಳೀಯ ಪ್ರಾಧಿಕಾರಕ್ಕೆ ಶಾಸನಾತ್ಮಕ ಅಥವಾ ಕಾನೂನಿನನ್ವಯ ನಿಶ್ವಿತವಾದ ಅಥವಾ ವಿವೇಚನಾಧಿಕಾರಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವುದಾಗಿದೆ. ವಿಕೇಂದ್ರೀಕರಣವು ಈ ಅರ್ಥದಲ್ಲಿ ಡಿವಲೂಷನ್ ಅಥವಾ ಅಧಿಕಾರದ ಅವತರಣಕ್ಕೆ ಸಮವಾಗಿದೆ (ಚೀಮಾ ಮತ್ತು ರೊಂಡಿನೆಲ್ಲಿ, ೧೯೮೪.) ಇದರಂತೆ ಸ್ಥಳೀಯ ಸರಕಾರ ಘಟಕಗಳು ಸ್ವಾಯತ್ತ ಹಾಗೂ ಸ್ವತಂತ್ರವಾಗಿದ್ದು ಕೇಂದ್ರ ಸರಕಾರಕ್ಕೆ ಇದರ ಮೇಲೆ ನೇರ ನಿಯಂತ್ರಣವಿಲ್ಲ. ಸ್ಥಳೀಯ ಸರಕಾರಗಳು ಕಾನೂನುಬದ್ಧವಾದ ಭೌಗೋಳಿಕ ಪರಿಮಿತಿಯೊಳಗೆ ತಮ್ಮ ಅಧಿಕಾರವನ್ನು ಚಲಾಯಿಸುವುವು ಮತ್ತು ಇವುಗಳು ಪ್ರಕಾರ್ಯಗಳನ್ನು ನಿರ್ವಹಿಸಲು ಸಂಪನೂಲಗಳನ್ನು ಕ್ರೋಢಿಕರಿಸುವ ಸಾಮುದಾಯಿಕ ಸಂಸ್ಥೆಗಳಾಗಿವೆ ಎಂದು ಚೀಮಾ ಮತ್ತು ರೊಂಡಿನೆಲ್ಲಿ ತಿಳಿಸುತ್ತಾರೆ. ಸ್ಥಳೀಯ ಪ್ರಾಧಿಕಾರವು ನಿಯಮಿತವಾದರೂ ತನ್ನ ವ್ಯಾಪ್ತಿಯಲ್ಲಿ ಅದು ನಿರ್ಧಾರಗಳನ್ನು ಕೈಗೊಳ್ಳಲು ಸಮರ್ಥವಾಗಿದೆ ಮತ್ತು ಹೊಸ ಶಾಸನಾತ್ಮಕ ಕ್ರಮಗಳಿಂದ ಮಾತ್ರ ಬದಲಾವಣೆಗಳನ್ನು ಮಾಡಬಹುದಾಗಿದೆ. ನಿಯಮಿತ ಸಂಪನ್ಮೂಲಗಳಿದ್ದು ಇವುಗಳ ನಿರ್ವಹಣೆಯು ಈ ಪ್ರಾಧಿಕಾರದ ವಿವೇಚನೆಗೆಗೊಳಪಟ್ಟಿದೆ (ಮಹೂದ್, 1983). ಹೀಗೆ ವಿಕೇಂದ್ರಿತ ಸ್ಥಳೀಯ ಗಟಕವೆಂದರೆ ಅದಕ್ಕೆ ತನ್ನದೇ ಆದ ಕಾನೂನಿನ ಚೌಕಟ್ಟು, ಆಯವ್ಯಯ ಪ್ರಾವಧಾನವಿದ್ದು ಅದು ತನ್ನ ವಿವಿಧ ಕಾರ್ಯಗಳನ್ನು ಈ ಸಂಪನ್ಮೂಲ ಮಿತಿಯೊಳಗೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ನಿರ್ವಹಿಸುತ್ತದೆ.

೧೯೯೨ ರಲ್ಲಿ ಸಂವಿಧಾನಕ್ಕೆ ಮಾಡಿದ ೭೩ ಮತ್ತು ೭೪ ನೆಯ ತಿದ್ದುಪಡಿಗಳು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಐದು ಸ್ತರದ ರಚನೆಯನ್ನಾಗಿ ಮಾಡಿವೆ. ಜಿಲ್ಲಾ ಮಟ್ಟದಲ್ಲಿನ ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಮತ್ತು ಗ್ರಾಮಪಂಚಾಯತ್‌ ಇವುಗಳನ್ನು ಸ್ಥಳೀಯ ಸರಕಾರಗಳು ಅಥವಾ ಮೂರನೇ ಸ್ತರದ ಸರಕಾರ ವ್ಯವಸ್ಥೆ (ಪೀಟರ್ ಡಿ, ಸೋಜಾ, ೨೦೦೧) ಎಂದು ಕರೆಯಲಾಗುತ್ತಿದೆ. ಇನ್ನೊಂದರ್ಥದಲ್ಲಿ ಇದು ನಮ್ಮ ವಿಕೇಂದ್ರೀಕರಣ ವ್ಯವಸ್ಥೆಯ ಘಟಕಗಳಾಗಿವೆ. ಜಿಲ್ಲಾ ಸರಕಾರ ಅಥವಾ ಜಿಲ್ಲಾಭಿವೃದ್ಧಿ ಆಡಳಿತ ಘಟಕವೆಂಬಂತೆಯೂ ಇದು ಕಾರ್ಯ ನಿರ್ವಹಿಸುತ್ತದೆ. ಗ್ರಾಮಪಂಚಾಯತ್‌ ಮಟ್ಟದಲಿ ‘ಗ್ರಾಮಸಭೆ’ ಎಂಬ ಸಂಸ್ಥೆ ಇದೆ. ಗ್ರಾಮಸಭೆಯು ನೇರ ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ.

ನಮ್ಮ ಸಮಾಜವು ಬಹುಳಕಾರಿಯಾಗಿದೆ ಅಂದರೆ ಬಹುರೂಪಿ ಸಮಾಜ. ಇಲ್ಲಿ ಹಲವಾರು ಜಾತಿಗಳು, ಅನೇಕ ಭಾಷೆಗಳು ಹಾಗೂ ವೈವಿಧ್ಯತೆಗಳಿವೆ. ನಮ್ಮ ಶ್ರೇಣೀಕೃತ ಸಮಾಜವು ಸಮಾನತೆಯನ್ನು ಸಾರಿದರೂ ಮೂಲತಃ ಇದೊಂದು ಅಂತಸ್ತನ್ನಾಧರಿಸಿದ ಏಣಿಶ್ರೇಣಿ ಮಾದರಿಯ ಸಮಾಜ ವ್ಯವಸ್ಥೆಯಾಗಿದೆ.

ಸಾಂವಿಧಾನಿಕ ತಿದ್ದುಪಡಿಯಿಂದಾಗಿ ಇಂದು ಗ್ರಾಮಪಂಚಾಯತ್‌ಗಳು ಪ್ರತಿನಿಧಿ ಸಂಸ್ಥೆಗಳಾಗಿವೆ. ೭೩ ನೇ ತಿದ್ದುಪಡಿ ಕಾಯ್ದೆಯ ವಿವರಗಳು ತಿಳಿಸುವಂತೆ ಸಮಾಜದ ಅಂಚಿನಲ್ಲಿರುವ ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ ಹಾಗೂ ಪರಿಶಿಷ್ಟರಿಗೆ ಮೀಸಲಾತಿಯನ್ವಯ ಪಂಚಾಯತ್‌ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಿವೆ. ಪಂಚಾಯತ್‌ ಸದಸ್ಯತ್ವ ಮತ್ತು ಹುದ್ದೆಗಳಲ್ಲೂ ಮೀಸಲಾತಿಯನ್ನು ವಿಸ್ತರಿಸಿದೆ. ಆದರೆ ಗ್ರಾಮಪಂಚಾಯತಿ ಮಟ್ಟದಲ್ಲಿ ಇವುಗಳು ಹೇಗೆ ಅನುಷ್ಠಾನಗೊಳ್ಳುತ್ತಿವೆ. ಇಲ್ಲಿಯವರೆಗೆ ತಮ್ಮ ಹಿಡಿತದಲ್ಲಿದ್ದ ಅಧಿಕಾರದ ಧ್ರುವೀಕರಾಣವನ್ನು ಬಲಾಡ್ಯ ಜಾತಿಗಳು ಕಾಯ್ದೆ ಕಟ್ಟಳೆಗಳು ತಿಳಿಸಿರುವಂತೆ ಸುಲಭವಾಗಿ ಬಿಟ್ಟುಕೊಡುವುದೇ ಎಂಬುದು ಪ್ರಸ್ತುತ ಸಂದರ್ಭದಲ್ಲಿನ ಬಹುದೊಡ್ಡ ಸಮಸ್ಯೆಯಾಗಿವೆ. ರಾಜಕೀಯ ವಿಕೇಂದ್ರೀಕರಣ ಪಂಚಾಯತ್‌ ಸಂಸ್ಥೆಗಳಲ್ಲಿ ಕಾಯ್ದೆಗನುಸಾರವಾಗಿ ಜಾರಿಗೆ ತಂದರೂ ಇವು ವಿಕೇಂದ್ರೀಕರಣದ ಮೂಲ ಆಶಯಕ್ಕೆ ಅನುಗುಣವಾಗಿರುವುದೇ?. ವಂಚಿತ ವರ್ಗಗಳಿಗೆ ಈ ಪ್ರಾತಿನಿಧ್ಯ ಸಂಸ್ಥೆಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ವಾತವರಣ ನಿರ್ಮಾಣವಾಗಿರುವುದೇ? ಮುಂತಾದ ಪ್ರಶ್ನೆಗಳು ಇಂದು ನಮ್ಮನ್ನು ಕಾಡುತ್ತಿವೆ. ೧೯೯೦ ರ ದಶಕದಿಂದೀಚೆಗೆ ಜಾಗತೀಕರಣ ಪ್ರಕ್ರಿಯೆ ಸಂದರ್ಭದಲ್ಲಿ ವಿಕೇಂದ್ರೀಕರಣವು ಜೊತೆ ಜೊತೆಗೆ ಸಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಈ ಎರಡು ಬಗೆಯ ಪ್ರಕ್ರಿಯೆಗಳನ್ನು ಅವಲೋಕಿಸಬೇಕಾದ ಆಗತ್ಯವೂ ಇದೆ. ರಜನಿ ಕೊಥಾರಿಯವರು ವಿಕೇಂದ್ರೀಕರಣವು ಜಾಗತೀಕರಣ ಪ್ರಕ್ರಿಯೆ ಹಾಗೂ ಸ್ಥಳೀಯ ಸ್ವಯಮಾಡಳಿತ ಇವೆರಡರ ನಡುವೆ ಸಿಲುಕಿದೆ ಎನ್ನುತ್ತಾರೆ. ಜಾಗತೀಕರಣದಿಂದ ಜಾಗತಿಕ ಬಂಡವಾಳ ಮಾರುಕಟ್ಟೆಯು ಕೇಂದ್ರ ಹಾಗೂ ವಿಕೇಂದ್ರೀತ ಆಡಳಿತದ ಮೇಲೆ ನೇರ ಪರಿಣಾಮವನ್ನು ಬೀರಿದೆ. ವಿಕೇಂದ್ರೀತ ಆಡಳಿತಕ್ಕೂ ಕೆಲವು ರೀತಿಯ ನಿಯಮ ಅಥವಾ ಬದ್ಧತೆಗಳಿರಬೇಕಾಗುತ್ತದೆ. ಈ ಒಡಮೂಡುತ್ತಿರುವ ನಿಯಮವನ್ನು ಚಾರಿತ್ರಿಕ ಪ್ರಕ್ರಿಯೆಯ ಆಧಾರದ ವ್ಯುತ್ಪನ್ನವೆಂದು ನೋಡಬೇಕಾಗುತ್ತದೆ. ಇದನ್ನು ರಾಜಕೀಯ ಪಕ್ಷಗಳು, ಅವುಗಳ ಸೈದ್ಧಾಂತಿಕ ನಿಲುವುಗಳು, ಜನರ ಭಿನ್ನತೆ ಗೊಂದಲಗಳು ಮತ್ತು ಸಾದೃಶವಾದ ನಿರಂತರ ಅಸಮತೋಲನಗಳು, ಕೇಂದ್ರ ಮತ್ತು ಪರಿಧಿಯ ಸಮಸ್ಯೆ ಮತ್ತು ಬೆಳೆಯುತ್ತಿರುವ ಪರಿಸರ ಕಾಳಜಿಯ ಅರಿವುಗಳಲ್ಲಿ ಇದನ್ನು ಗ್ರಹಿಸಬೇಕಾದ ಆಗತ್ಯವಿದೆ (ಕೊಥಾರಿ, ೧೯೯೦).

ವಿಕೇಂದ್ರೀಕರಣದ ಜೊತೆಗೆ ಸಬಲೀಕರಣದ ಮಾತುಗಳು ಸಹ ಕೇಳಿಬರುತ್ತಿವೆ. ವಿಕೇಂದ್ರೀಕರಣವು ಪರಿಣಾಮಕಾರಿಯಾಗಿ ಜಾರಿಗೆ ಬರಲು ಮತ್ತು ಪಂಚಾಯತ್‌ರಾಜ್‌ ಸಂಸ್ಥೆಗಳು ಸ್ವಯಾಮಾಡಳಿತ ಸಂಸ್ಥೆಗಳಾಗಿ ರೂಪುಗೊಳ್ಳಲು ಜನರ ಸಬಲೀಕರಣವು ಅಗತ್ಯವಾಗಿದೆ. ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ನಿರ್ಬಂಧಗಳಿಂದ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳು ಸಬಲೀಕರಣ ಅಥವಾ ಸಶಕ್ತೀಕರಣಗೊಳ್ಳಬೇಕಾದ ಆಗತ್ಯವಿದೆ. ಸವಿಸ್ತರವಾಗಿ ಹೇಳುವುದಾರೆ ಪ್ರಬಲ ಗುಂಪುಗಳ ಏಕಸ್ವಾಮ್ಯವನ್ನು ಪ್ರಶ್ನಿಸುವ, ಜನಜ್ಞಾನವನ್ನು ಉಂಟುಮಾಡುವ ಮತ್ತು ಹೆಚ್ಚಿನ ಸಾದೃಸ ರಾಜಕೀಯ ಮತ್ತು ಸಾಮಾಜಿಕ ನಿರ್ಬಂಧಿ ಅಂಶಗಳ ವಿರುದ್ಧ ಜನಸಾಮಾನ್ಯರ ಅಸಮಾಧಾನವನ್ನು ಜಾಗೃತಗೊಳಿಸುವುದೇ ಸಬಲೀಕರಣವಾಗಿದೆ (ರೆನೆಮಾ, ೧೯೯೭), ಇನ್ನೊಂದರ್ಥದಲ್ಲಿ ಇದು ವಂಚಿತ ಗುಂಪುಗಳಿಗೆ ಸ್ಥಳೀಯ ಚುನಾಯಿತ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ದೃಢೀಕರಿಸುವ ಅವಕಾಶವಾಗಿದೆ.

ಜಾಗತೀಕರಣ ಪರ್ವದಲ್ಲಿ ವಿಕೇಂದ್ರೀಕರಣ, ಸಬಲೀಕರಣ ಮುಂತಾದ ಅಂಶಗಳನ್ನು ಗ್ರಾಮಪಂಚಾಯತ್‌‌ ಮಟ್ಟದಲ್ಲಿ ನಾವು ಅಭ್ಯಸಿಸುತ್ತೇವೆ. ಒಂದೆಡೆ ಗ್ರಾಮವು ಗ್ಲೋಬಲ್‌ ವಿಲೇಜ್‌ ಎಂದು ಕರೆಯಲ್ಪಡುವುದರ ಜೊತೆಗೆ ಗ್ರಾಮದ ಯಥಾಸ್ಥಿತಿಯು ನಮ್ಮ ಕಣ್ಣ ಮುಂದಿದೆ. ಈ ಗ್ರಾಮಪಂಚಾಯತ್‌‌ ವ್ಯವಸ್ಥೆಯಲ್ಲಿ ಹಲವಾರು ಪ್ರಶ್ನೆಗಳು ಈ ಸಂಧಿಗ್ಧ ಪರಿಸ್ಥಿತಿಯಲ್ಲಿವೆ. ಗ್ರಾಮದಲ್ಲಿ ಹಲವಾರು ಜಾತಿ, ವರ್ಗ ಮತ್ತು ಬಣಗಳು ಅಸ್ತಿತ್ವದಲ್ಲಿವೆ. ಸಾಂಪ್ರದಾಯಿಕ ಭೂಮಾಲೀಕ ಕುಟುಂಬಗಳು ಮತ್ತು ಸಾಂಪ್ರದಾಯಿಕ ಗೇಣಿದಾರ ಕುಟುಂಬಗಳ ಮಧ್ಯೆ ಸಮಾನರೂಪದ ಹೊಂದಾಣಿಕೆಗಳಿಲ್ಲ. ಇದರಿಂದ ಏಣಿಶ್ರೇಣಿಯು ಯಥಾಸ್ಥಿಯಲ್ಲಿ ಮುಂದುವರಿಯುತ್ತದೆ. ಹೀಗಾಗಿ ಗ್ರಾಮಜೀವನ ವ್ಯವಸ್ಥೆಯು ರಚನಾತ್ಮಕವಾಗುವ ಬದಲು ಸ್ಪರ್ಧಾತ್ಮಕ ಅಥವಾ ಸಂಘರ್ಷಾತ್ಮಕವಾಗುವ ಸಂಭವವಿದೆ. ಹಾಗೆಯೇ ವ್ಯವ್ಯಸ್ಥೆಯಲ್ಲಿ ಯಾವುದೇ ವಿಚಾರಧಾರೆ ಪ್ರಣಾಳಿಕೆ ಮತ್ತು ಮೌಲ್ಯಗಳ ಬದಲು ಅಧಿಕಾರವೇ ಮುಖ್ಯವಾಗುತ್ತವೆ. ಹೀಗಾಗಿ ಗ್ರಾಮಜೀವನದಲ್ಲಿ ನಿರ್ಣಯ ನಿರೂಪಣೆಗೆ ತಕ್ಕುದಾದ ವ್ಯವಸ್ಥೆಯ ಕೊರತೆಯು ಮತ್ತು ಸಮರ್ಪಕವಾದ ನಾಯಕತ್ವವು ಸಮಸ್ಯೆಯಾಗುವುದು.

ಆಧ್ಯಯನದ ಉದ್ದೇಶ

ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಇಂದು ಪಂಚಾಯತ್‌‌, ಸಂಸ್ಥೆಗಳು ಸ್ವಯಮಾಡಳಿತ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ೭೩ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಸರಕಾರವು ೧೯೯೩ರ ಪಂಚಾಯತ್‌‌‌‍ರಾಜ್‌ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಇದರಂತೆ ಜಿಲ್ಲಾಪಂಚಾಯತ್‌, ತಾಲ್ಲೂಕು ಪಂಚಾಯತ್‌‌ ಮತ್ತು ಗ್ರಾಮಪಂಚಾಯತ್‌‌ ಚುನಾವಣೆಗಳು ನಡೆದು ಕಾಯ್ದೆಗನುಸಾರವಾಗಿ ಇವುಗಳು ಕಾರ್ಯನಿರ್ವಹಿಸುತ್ತಿವೆ. ಸರಕಾರ ಆಡಳಿತಶಾಹಿ ಮತ್ತಿತರ ಘಟಕಗಳು ನೀತಿ ನಿರೂಪಣೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದರ ಹಿಂದೆ ಕೆಲವು ವಿಚಾರಧಾರೆಗಳು ಕೆಲಸ ಮಾಡುತ್ತಿವೆ. ಉದಾಹರಣೆಗೆ ಗ್ರಾಮಪಂಚಾಯತ್‌‌ ಮಟ್ಟದಲ್ಲಿ ಸ್ವಯಮಾಡಿಳಿತ ವ್ಯವಸ್ಥೆ ಇರುವಂತೆ ಅನುವು ಮಾಡುವಾಗ ಗ್ರಾಮದಲ್ಲಿನ ಜನಜೀವನ ವ್ಯವಸ್ಥೆ, ಮಹಿಳೆಯರ ಸ್ಥಿತಿಗತಿಗಳು, ಸ್ಥಾಪಿತಹಿತಾಸಕ್ತಿಗಳು, ಪರಿಶಿಷ್ಟರ ಬದುಕು ಮತ್ತು ಮೀಸಲಾತಿ, ಹಳ್ಳಿಯಲ್ಲಿನ ಭೂ ಸ್ವಾಮ್ಯದ ಪರಿಸ್ಥಿತಿ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ನೈಜಸ್ಥಿತಿ ಹೇಗಿರುತ್ತದೆ ಎಂಬುದರ ಅರಿವು ಇರಬೇಕು. ಸರಕಾರಿ ಯಂತ್ರ ಇಲ್ಲವೇ ಆಡಳಿತ ಘಟಕಗಳನ್ನು ಇನ್ನಷ್ಟು ಹೆಚ್ಚಿಸಿ ಗ್ರಾಮಗಳಿಗೆ ವಿಸ್ತರಿಸುವುದರಿಂದ ಆಡಳಿತವು ಸರಿಯಾಗಿ ನಡೆಯುವುದೆಂದು ತಿಳಿಯಲಾಗುತ್ತದೆ.

ಗ್ರಾಮ ಪಂಚಾಯತ್‌‌ ವ್ಯವಸ್ಥೆಯಲ್ಲಿ ಗ್ರಾಮದ ವಿವಿಧ ಜಾತಿಯ ಸದಸ್ಯರು ಮತ್ತು ಮಹಿಳೆಯರು ಮೀಸಲಾತಿಯಿಂದ ಅಧಿಕಾರ ಪಡೆಯುತ್ತಾರೆ. ಆದರೆ ಇವುಗಳ ನಿಜಸ್ಥಿತಿ ಗ್ರಾಮದಲ್ಲಿ ಹೇಗಿದೆ. ಕೆಳಜಾತಿಗಳು ತಮ್ಮ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಹ ವಾತಾವರಣ ಸೃಷ್ಟಿಯಾಗಿದೆಯೆ, ಮಹಿಳೆಯರು ಹಾಗೂ ಪರಿಶಿಷ್ಟ ಮಹಿಳೆಯರ ಪರಿಸ್ಥಿತಿ ಹೇಗಿವೆ, ಯಾವ ಅಂಶಗಳು ವಿಕೇಂದ್ರೀಕರಣವು ತಳಮಟ್ಟದಲ್ಲಿ ಜಾರಿಗೊಳ್ಳುವಲ್ಲಿ ಅಡ್ಡಿಯಾಗಿವೆ. ವಿಕೇಂದ್ರೀಕರಣಕ್ಕೆ ಪೂರಕವಾಗುವ ಪರಿಸರವೇನು ಮತ್ತು ಜನರ ಸಶಕ್ತಿಕರಣಕ್ಕೆ ಯಾವ ರೀತಿಯ ತೊಡಕುಗಳಿವೆ? ಗ್ರಾಮದ ಸಾಮಾಜಿಕ – ಆರ್ಥಿಕ – ರಾಜಕೀಯ ಪರಿಸರದ ನೆಲೆ ಯಾವ ರೀತಿ ಇದೆ ಎಂಬುದನ್ನು ಆಭ್ಯಸಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ಅಧ್ಯಯನ ಮಾಡುವುದರ ಮೂಲಕ ಈ ಮೇಲಿನ ಸಮಸ್ಯೆಗಳ ನೈಜ ಚಿತ್ರಣವನ್ನು ಅರಿಯಲು ಪ್ರಯತ್ನಿಸಲಾಗಿದೆ. ಅಧ್ಯಯನವು ಗ್ರಾಮದ ಸಾಮಾಜಿಕ – ಆರ್ಥಿಕ – ರಾಜಕೀಯ ಮತ್ತಿತರ ಅಂಶಗಳನ್ನು ತಿಳಿಸುವುದರೊಂದಿಗೆ ಗ್ರಾಮಪಂಚಾಯತ್‌ ಸ್ವರೂಪ ಹಾಗೂ ಅದರ ಕಾರ್ಯವೈಖರಿ, ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಅಂಶಗಳು ಮತ್ತು ಗ್ರಾಮದಲ್ಲಿನ ಯಜಮಾನಿಕೆ ಮುಂತಾದವುಗಳ ಬಗ್ಗೆ ಅರಿಯಲು ಪ್ರಯತ್ನಿಸಲಾಗಿದೆ.

ಅಧ್ಯಯನ ವಿಧಾನ

ಇದೊಂದು ಎಂಪಿರಿಕಲ್‌ ಅಧ್ಯಯನವಾಗಿದೆ. ಅಧ್ಯಯನಕ್ಕೆ ಪೂರಕವಾಗಿ ಕ್ಷೇತ್ರಕಾರ್ಯವನ್ನು ಹಮ್ಮಿಕೊಂಡು ಗ್ರಾಮದ ಪಂಚಾಯತ್‌ ವ್ಯವಸ್ಥೆ ಮತ್ತು ಜನಜೀವನವನ್ನು ಅವಲೋಕಿಸಲಾಗಿದೆ.

ಅಧ್ಯಯನಕ್ಕೆ ಆಗತ್ಯವಾದ ಮಾಹಿತಿಯನ್ನು ಪ್ರಾಥಮಿಕ ಮತ್ತು ಆನುಷಂಗಿಕ ಮೂಲಗಳಿಂದ ಸಂಗ್ರಹಿಸಲಾಗಿದೆ. ಪ್ರಾಥಮಿಕ ಸಂಗ್ರಹಣೆಗೆ ಕ್ಷೇತ್ರ ಕಾರ್ಯವನ್ನು ಕೈಗೊಂಡು ಗ್ರಾಮದ ಪಂಚಾಯತ್‌ ಸದಸ್ಯರುಗಳು, ಹಳ್ಳಿಯ ನಿವಾಸಿಗಳು, ಪಂಚಾಯತ್‌ ಅಧಿಕಾರಿಗಳು, ಕೂಡ್ಲಿಗಿ ತಾಲ್ಲೂಕು ಪಂಚಾಯತ್‌ ಉಪಾಧ್ಯಕ್ಷರು, ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಸದಸ್ಯರಿಂದಲೂ ಮಾಹಿತಿಯನ್ನು ಕಲೆ ಹಾಕಲಾಗಿದೆ. ಇದಕ್ಕಾಗಿ ಮುಕ್ತ ಪ್ರಶ್ನಾವಳಿಗಳನ್ನು ರೂಪಿಸಿ ಸಂದರ್ಶನದ ಮೂಲಕ ಮಾಹಿತಿ ಪಡೆಯಲಾಗಿದೆ. ಹಿರೇಹೆಗ್ಡಾಳ್ ಗ್ರಾಮ ಪಂಚಾಯತ್‌‌ನ ನಾಲ್ಕು ಹಳ್ಳಿಗಳಲ್ಲಿ ಉದ್ದೇಶಿತ ನಮೂನೆ ವಿಧಾನ ಆಧಾರದ ಮೇಲೆ ಕೆಲವು ಗ್ರಾಮಸ್ಥರನ್ನು ಸಂದರ್ಶಿಸಿ ಮಾಹಿತಿ ಕೆಲೆ ಹಾಕಾಲಾಗಿದೆ. ಗ್ರಾಮ ಪಂಚಾಯತ್‌‌ನ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದಲೂ ಮಾಹಿತಿ ಪಡೆಯಲಾಗಿದೆ. ಗ್ರಾಮ ಪಂಚಾಯತ್‌‌ ಪ್ರತಿನಿಧಿಗಳು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಎರಡು ವಿಧದ ಪ್ರಶ್ನಾವಳಿಗಳನ್ನು ರೂಪಿಸಲಾಗಿದೆ. ಅಧಿಕಾರಿವರ್ಗದಲ್ಲಿ – ಮುಖ್ಯವಾಗಿ ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್‌‌ ವಿಸ್ತರಣಾ ಅಧಿಕಾರಿ, ಗ್ರಾಮಪಂಚಾಯತ್‌‌ ಕಾರ್ಯದರ್ಶಿ, ಕರಸಂಗ್ರಹಕಾರ, ನೀರುಗಂಟಿ, ಮೊದಲಾದವರಿಂದ – ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲಾಗಿದೆ.

ಆನುಷಂಗಿಕ ಮೂಲಗಳಾದ ಜಿಲ್ಲಾ ಜನಗಣತಿಯ ವರದಿ, ಲಭ್ಯವಿರುವ ಪುಸ್ತಕಗಳು ಹಾಗೂ ಪರಾಮರ್ಶನ ಗ್ರಂಥಗಳನ್ನು, ಜಿಲ್ಲಾ ಪಂಚಾಯತ್‌‌ನವರು ಪ್ರಕಟಿಸುತ್ತಿರುವ ಪ್ರಗತಿ ವರದಿಗಳು, ತಾಲ್ಲೂಕ್‌ ಪಂಚಾಯತ್‌‌, ಗ್ರಾಮಪಂಚಾಯತ್‌‌, ಕೂಡ್ಲಿಗಿ ತಾಲ್ಲೂಕು ಕಚೇರಿ, ಸಣ್ಣನೀರಾವರಿ – ಇಲಾಖೆ, ಗ್ರಾಮದಲ್ಲಿರುವ ಶಾಲೆಗಳು, ಅಂಗನವಾಡಿಗಳು ಮತ್ತು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಇಲ್ಲಿ ಲಭ್ಯವಿರುವ ದಾಖಲೆ ಮತ್ತು ವರದಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಆದಾಗ್ಯೂ ಈ ಅಧ್ಯಯನಕ್ಕೆ ಕೆಲವು ಮಿತಿಗಳಿವೆ ಎಂಬುದನ್ನು ತಿಳಿಸುವುದು ಆಗತ್ಯ. ಕ್ಷೇತ್ರಕಾರ್ಯವನ್ನು ನಿರೀಕ್ಷಿತ ಮಟ್ಟಕ್ಕೆ ಯಶಸ್ವಿಯಾಗಿ ಮಾಡಲಾಗಲಿಲ್ಲ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ. ಆದರೂ ಆಧ್ಯಯನಕ್ಕೆ ಪೂರಕವಾಗುವ ರೀತಿಯಲ್ಲಿ ವಿವವರಣೆಗಳನ್ನು ಸಂಗ್ರಹಿಸಲಾಗಿದೆ.

ಪುಸ್ತಕದಲ್ಲಿ ಬರುವ ಅಧ್ಯಾಯಗಳನ್ನು ಈ ಕೆಳಗಿನಂತೆ ಜೋಡಿಸಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಹಿರೇಹೆಗ್ಡಾಳ್ ಗ್ರಾಮಪಂಚಾಯತ್‌ ಮತ್ತು ಜನಜೀವನದ ಕಿರುಪರಿಚಯ ನೀಡಲಾಗಿದೆ. ಗ್ರಾಮಪಂಚಾಯತ್‌‌ – ಗ್ರಾಮಸಭೆ ಮತ್ತು ಜವಾಹರ್ ರೋಜ್‌ಗಾರ್ ಯೋಜನೆಯ ಕುರಿತ ಮಾಹಿತಿಯನ್ನು ಅಧ್ಯಾಯ ಎರಡರಲ್ಲಿ ವಿವರಿಸಲಾಗಿದೆ. ಮೂರನೆಯ ಆಧ್ಯಾಯದಲ್ಲಿ ಗ್ರಾಮದಲ್ಲಿನ ಹಬ್ಬ ಆಚರಣೆಗಳು ಮತ್ತು ಗ್ರಾಮಸ್ಥರು ಮತ್ತು ಪಂಚಾಯತ್‌‌ ಪ್ರತಿನಿಧಿಗಳಿಂದ ಸಂಗ್ರಹಿಸಿದ ವಿವರಗಳ ಮಾಹಿತಿಯನ್ನೊದಗಿಸಲಾಗಿದೆ. ಅಧ್ಯಾಯ ನಾಲ್ಕರಲ್ಲಿ ಈ ಅಧ್ಯಯನದ ಕೆಲವು ತಥ್ಯಗಳನ್ನು ವಿವರಿಸಲಾಗಿದೆ. ಅಧ್ಯಾಯ ಐದರಲ್ಲಿ ಉಪಸಂಹಾರವನ್ನು ಕೊಡಲಾಗಿದೆ. ಕೋಷ್ಟಕಗಳು ಮತ್ತು ಪರಾಮರ್ಶನ ಗ್ರಂಥಗಳ ಪಟ್ಟಿಯನ್ನು ಕೊಡಲಾಗಿದೆ.