ಪಂಚಾಯತ್‌ ರಾಜ್‌ ಅಥವಾ ಗ್ರಾಮಿಣ ಸ್ಥಳೀಯಾಡಳಿತ ಚರಿತ್ರೆಯನ್ನು ಅವಲೋಕಿಸಿದಾಗ ಗ್ರಾಮಸಭೆ ಪರಿಕ್ಪನೆಯು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಅದರ ಕಾರ್ಯನಿರ್ವಹಣೆಯ ಕುರಿತು ಕೆಲವು ಅಧ್ಯಯನಗಳು ಬೆಳಕು ಚೆಲ್ಲಿವೆ. ಬ್ರಿಟಿಷರ ಕಾಲದಲ್ಲಿ ಲಾರ್ಡ್ ರಿಪ್ಪನ್‌ನು ಸ್ಥಳೀಯಾಡಳಿತೆಯ ಕಾರ್ಯಸುಗಮತೆಗಾಗಿ ಕೆಲವೊಂದು ಕಾರ್ಯಕ್ರಮಗಳನ್ನು ರೂಪಿಸಿ ಅನಿಷ್ಥಾನಗೊಳಿಸಿದನು. ಆದರೆ ಇದನ್ನು ಅಧಿಕಾರಿವರ್ಗದವರೇ ನಿಭಾಯಿಸುತ್ತಿದ್ದರು ಮತ್ತು ಜನ ಪ್ರತಿನಿಧಿಗಳು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಬದಲಾಗಿ ಬೆರಣಿಕೆ ಮಂದಿಯಷ್ಟು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬದಲು ಸಹಕರಣಗೊಳಿಸಲಾಗುತ್ತಿತ್ತು. ಇವರು ನಾಮ ಮಾತ್ರ ಪ್ರತಿನಿಧಿಗಳಾಗಿದ್ದರು. ಆನಂತರ ಹಲವಾರು ಕಾಯ್ದೆ ಕಾನೂನುಗಳು ಜಾರಿಗೊಂಡರೂ ಇವು ನಿರೀಕ್ಷಿತ ಪ್ರಮಾಣದಲ್ಲಿ ಜನ ಪ್ರತಿನಿಧಿಗಳನ್ನು ಚುನಾಯಿಸಿಲ್ಲ. ಹಾಗೆಯೇ ಮಹಿಳಾ ಪ್ರತಿನಿಧಿಗಳಿಗೂ ಅವಕಾಶವಿರಲಿಲ್ಲ. ೧೯೫೯ರ ಮೈಸೂರು ಗ್ರಾಮ ಪಂಚಾಯತ್‌‌ ಮತ್ತು ಸ್ಥಳೀಯ ಬೋರ್ಡ್ ಕಾಯ್ದೆಯಲ್ಲಿ ಗ್ರಾಮಸಭೆಯ ಸ್ಪಷ್ಟ ಉಲ್ಲೇಖನವಿರಲಿಲ್ಲ. ಆದರೆ ಗ್ರಾಮಸ್ಥರು ಸಭೆಸೇರಿ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್‌ಗೆ ಸಲಹೆ ಸೂಚನೆಗಳನ್ನು ನೀಡಲು ಅಸ್ಪದವಿತ್ತು. ಅಲ್ಲದೆ ಗ್ರಾಮದ ಆಡಳಿತ ಮತ್ತು ಆಯವ್ಯಯದ ವರದಿಯನ್ನು ಗ್ರಾಮ ಪಂಚಾಯತ್‌ ಗ್ರಾಮಸ್ಥರಿಗೆ ತಿಳಿಸಬೇಕಾಗಿತ್ತು. ಗ್ರಾಮ ಪಂಚಾಯತ್‌ ಈ ಸಲಹೆಗಳನ್ನು ಒಪ್ಪುಬಹುದು ಇಲ್ಲವೇ ಬಿಡಬಹುದಿತ್ತು. ಹೀಗೆ ಗ್ರಾಮಸಭೆ ಪರಿಕ್ಪನೆಯು ಯಾವುದೇ ನಿಶ್ಚಿತ ಕಾರ್ಯಗಳಿಲ್ಲದೆ ಅಸ್ತಿತ್ವದಲ್ಲಿತ್ತು.

ಕರ್ನಾಟಕದಲ್ಲಿ ಗ್ರಾಮಸಭೆ ಕಾರ್ಯಕ್ಷಮತೆಯ ಪ್ರಾಯೋಗಿಕ ನೆಲೆಯನ್ನು ಐತಿಹಾಸಿಕವಾದ ‘೧೯೮೩ ರ ಕರ್ನಾಟಕ ಜಿಲ್ಲಾಪರಿಷತ್ತುಗಳು. ತಾಲ್ಲೂಕು ಪಂಚಾಯತ್‌ ಸಮಿತಿಗಳು, ಮಂಡಲ ಪಂಚಾಯತಿಗಳು ಮತ್ತು ನ್ಯಾಯಪಂಚಾಯತ್‌ಗಳ ಕಾಯ್ದೆ’ ಯು ಒದಗಿಸಿತು. ಈ ಕಾಯ್ದೆಯು ಗ್ರಾಮಸಭೆಯನ್ನು ಶಾಸನಾತ್ಮಕವಾಗಿ ಜಾರಿಗೊಳಿಸಿ ಕೆಲವು ನಿರ್ದಿಷ್ಟ ಅಧಿಕಾರ ಪ್ರಕಾರ್ಯಗಳನ್ನು ಸ್ಪಷ್ಟಪಡಿಸಿತು. ಇದು ಮಂಡಲ ಪಂಚಾಯತಿಯ ಕಾರ್ಯುನಿರ್ವಹಣೆಯ ಮೇಲೆ ವಿಶೇಷ ಪ್ರಭಾವ ಬೀರಿದವು. ಮಂಡಲ ಪಂಚಾಯತಿಯ ಕಾರ್ಯಂಗ ಮುಖ್ಯಸ್ಥನಾದ ಮಂಡಲ ಪ್ರಧಾನರ ಬಗೆಗೂ ಇವು ಕೆಲವೊಂದು ಅಧಿಕಾರ ಸಂಬಂಧಿ ಸಲಹೆ ಸೂಚನೆಗಳನ್ನು ನೀಡಿತು. ಮಂಡಲವು ಗ್ರಾಮ ಸಂಕುಲವನ್ನು ಒಳಗೊಂಡಿರುವುದರಿಂದ ಸಾಮಾನ್ಯವಾಗಿ ಗ್ರಾಮಸಭೆಯು ಬೃಹತ್ ಅಂಗವಾಗಿ ಕೆಲಸಮಾಡುತ್ತಿತ್ತು. ಕೆಲವೊಮ್ಮೆ ಇದು ಮಂಡಲ ಪಂಚಾಯತು ಕಚೇರಿ ಅಥವಾ ಸಂಬಂಧಿಸಿದ ಗ್ರಾಮಗಳಲ್ಲೂ ನಡೆಯುತ್ತಿತ್ತು. ಗ್ರಾಮಸಭೆಯ ಸಲಹೆ ಶಿಫಾರಸ್ಸುಗಳಿಗೆ ಮಂಡಲ ಪಂಚಾಯತು ಮನ್ನಣೆ ನೀಡುತಿತ್ತು.

೧೯೯೨ರಲ್ಲಿ ಸಂವಿಧಾನ ೭೮ ನೇ ತಿದ್ದುಪಡಿಯಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳು ಸಾಂವಿಧಾನಿಕ ಮನ್ನಣೆ ಪಡೆದವು. ಇದರೊಂದಿಗೆ ಗ್ರಾಮಸಭೆಯು ಸಾಂವಿಧಾನಿಕ ಸ್ಥಾನಮಾನ ಪಡೆಯಿತು. ತತ್ಪರಿಣಾಮವಾಗಿ ಕರ್ನಾಟಕ ಸರಕಾರವು ೧೯೯೩ ರ ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿತು. ಇದರಂತೆ ಸರಕಾರದ ಸಾಮನ್ಯ ಆದೇಶಗಳಿಗೆ ಒಳಪಟ್ಟು ಗ್ರಾಮಸಭೆಯು ಕಾಲಕಾಲಕ್ಕೆ ಸೇರತಕ್ಕದು. ಆದರೆ ಯಾವುದೇ ಎರಡು ಸಭೆಗಳ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರ ಇರತಕ್ಕದ್ದಲ್ಲ. ಗ್ರಾಸಭೆಯು ಕಾಯ್ದೆಯಲ್ಲಿ ರೂಪಿಸುವ ವಿಷಯಗಳನ್ನು ಪರಿಶೀಲಿಸತಕ್ಕದ್ದು ಮತ್ತು ಗ್ರಾಮಪಂಚಾಯತಿಗೆ ಶಿಫಾರಸ್ಸುಗಳನ್ನು ಮತ್ತು ಸಲಹೆಗಳನ್ನು ನೀಡಬಹುದು. ಗ್ರಾಮ ಪಂಚಾಯತಿಯು ಗ್ರಾಮಸಭೆಯ ಶಿಫಾರಸ್ಸುಗಳನ್ನು ಮತ್ತು ಸಲಹೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸತಕದ್ದು.

ಹಿರೇಹೆಗ್ಡಾಳ್‌ ಗ್ರಾಮ ಪಂಚಾಯತಿಯ ಲಭ್ಯವಿರುವ ವರದಿಗಳಿಂದ ಗ್ರಾಮಸಭೆಗಳು ನಡೆದಿವೆ ಎಂಬುದನ್ನು ತೋರಿಸುತ್ತವೆ. ೧೯೯೫ ರಿಂದ ೯೯ ರವರೆಗೆ ಒಟ್ಟು ೧೦ ಬಾರಿ ಗ್ರಾಮಸಭೆಗಳು ನಡೆದಿವೆ. ಕಾಯ್ದೆಯಂತೆ ಗ್ರಾಮಸಭೆಗಳು ಕಾಲಕಾಲಕ್ಕೆ ನಡೆದರೂ ಎರಡು ಸಭೆಗಳ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರ ಕಂಡುಬಂದಿದೆ. ಇದು ಗ್ರಾಮ ಪಂಚಾಯತಿಯ ಇಷ್ಟಕ್ಕನುಸಾರವಾಗಿಯೇ ಅಥವಾ ಗ್ರಾಮಸ್ಥರ ಒತ್ತಾಯದ ಮೇರೆಗೆ ನಡೆದಿದೆಯೆ ಎಂಬುದು ತಿಳಿದಿಲ್ಲ. ೯೫ನೇ ಸಾಲಿನಲ್ಲಿ ಎರಡು ಗ್ರಾಮ ಗ್ರಾಮಸಭೆಗಳು ನಡೆದರೆ ೯೬ ನೇ ಸಾಲಿನಲ್ಲಿ ೩ ಗ್ರಾಮಸಭೆಗಳು ನಡೆದಿರುವುದನ್ನು ವರದಿಗಳು ತೋರಿಸುತ್ತವೆ. ಆದರೆ ೯೯ ನೇ ಸಾಲಿನಲ್ಲಿ ಕೇವಲ ಒಂದೇ ಗ್ರಾಸಭೆ ನಡೆದಿದೆ. ಒಟ್ಟಾರೆ ನಡೆದ ೧೦ ಗ್ರಾಮಸಭೆಗಳಲ್ಲಿ ಕೇವಲ ೪ ಗ್ರಾಮಸಭೆಗಳಲ್ಲಿ ಮಾತ್ರ ಒಟ್ಟು ೮೦ ಜನರ ಸಹಿಯನ್ನು ಹಾಜರಾತಿಗಾಗಿ ಸಂಗ್ರಹಿಸಲಾಗಿದೆ. ಇವುಗಳಲ್ಲಿ ೩ ಗ್ರಾಮ ಸಭೆಗಳಲ್ಲಿ ಇಂದಿರಾ ಆವಾಸ್‌ ಫಲಾನುಭವಿಗಳ ಅಯ್ಕೆ ನಡೆದರೆ, ೩ ಗ್ರಾಮಸಭೆಗಳಲ್ಲಿ ಐ. ಆರ್. ಡಿ.ಪಿ. ಫಲಾನುಭವಿಗಳನ್ನು ಗುರುತಿಸಲಾಗಿದೆ. ಒಂದು ಗ್ರಾಮಸಭೆಯಲ್ಲಿ ಹಸಿರು ಕಾರ್ಡು ಪಡಿತರದಾರರನ್ನು ಆಯ್ಕೆ ಮಾಡಿದರೆ, ಇನ್ನೊಂದರಲ್ಲಿ ಗ್ರಾಮೀಣ ಗುಂಪು ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಅಯ್ಕೆ ಮಾಡಲಾಗಿದೆ. ವಿಶೇಷ ಘಟಕ ಯೋಜನೆ ಕುರಿತಂತೆ ಫಲಾನುಭವಿಗಳನ್ನು ಇನೊಂದು ಗ್ರಾಮಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ೯೮ ರಲ್ಲಿ ನಡೆದ ಗ್ರಾಮಸಭೆಯಲ್ಲಿ ೫ ಮಂದಿ ವಿವಿಧ ಇಲಾಖಾ ಅಧಿಕಾರಿಗಳು ಬಾಗವಹಿಸಿದ್ದರು ಎಂದು ವರದಿಗಳು ತಿಳಿಸುತ್ತವೆ. ವಿಶೇಷ ಘಟಕ ಯೋಜನೆ ಮತ್ತು ಗ್ರಾಮೀಣ ಗುಂಪು ಯೋಜನೆಯಡಿ ಪರಿಶಿಷ್ಟ ಜಾತಿ, ವರ್ಗದ ಸಣ್ಣ ರೈತರಿಗೆ ಪ್ರಯೋಜನ ನೀಡಲಾಗಿದೆ.

ಆಯ್ದ ಪ್ರಶ್ನಾವಳಿಯ ಮೂಲಕ ಗ್ರಾಮ ಪಂಚಾಯತ್‌ನ ಜನರನ್ನು ಹಾಗೂ ಜನ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಂದರ್ಶನ ನಡೆಸಿ ಮಾಹಿತಿ ಪಡೆಯಲಾಯಿತು. ಚುನಾಯಿತ ಪ್ರತಿನಿಧಿಗಳೆಲ್ಲರಿಗೂ ಗ್ರಾಮಸಭೆ ನಡೆದಿದೆ ಮತ್ತು ಅಂತಹ ಒಂದು ಸಂಸ್ಥೆ ಅಸ್ತಿತ್ವದಲ್ಲಿ ಇದೆ ಎಂಬ ಜ್ಞಾನವಿದೆ. ಗ್ರಾಮಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ ಎಂಬುದು ಗೊತ್ತಿದೆ. ಆದರೆ ಆಯವ್ಯಯ ಪಟ್ಟಿ, ಸಮಿತಿ ಮುಂತಾದವುಗಳ ಬಗ್ಗೆ ಹೆಚ್ಚಿನ ವಿವರ ಸದಸ್ಯರಿಂದಾಗಲೀ ಅಥವಾ ಗ್ರಾಮಸ್ಥರಿಂದಲೂ ದೊರೆತಿಲ್ಲ.

ಗ್ರಾಮಸಭೆ ಮತ್ತು ಅದರಲ್ಲಿ ಯೋಜಿಸಲಾದ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಹಿರೇಹೆಗ್ಡಾಳ್‌ ಗ್ರಾಮಪಂಚಾಯಿತಿಯ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಮೊದಲೆನೆಯದಾಗಿ ಗ್ರಾಮಸಭೆಗಳನ್ನು ಕಾಯ್ದೆಗನುಗುಣವಾಗಿ ಕಾಲಾನುಕಾಲಕ್ಕೆ ನಡೆಸಿರುತ್ತಾರೆ ಎಂದು ತಿಳಿಸಿದರೂ ಪ್ರತಿ ಗ್ರಾಮಸಭೆಯ ಮಧ್ಯೆ ಕಾಯ್ದೆ ತಿಳಿಸಿದಂತೆ ಕಾಲದ ಅಂತರ ಸ್ಪಷ್ಟವಾಗಿಲ್ಲ. ಇನ್ನು ಕೆಲವೆಡೆ ಗ್ರಾಮಸಭೆ ನಡೆಸುವ ಕರಿತು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದಿರುವುದು. ಕೆಲವು ಜನಪ್ರತಿನಿಧಿಗಳು, ಕಾರ್ಯದರ್ಶಿ ಹಾಗೂ ಬಿಲ್‌ಕಲೆಕ್ಟರ್ ರವರು ತಾವು ಟಾಂ ಟಾಂ ಹೊರಡಿಸಿಯೂ ಜನ ಗ್ರಾಮಸಭೆಗೆ ಬರುವುದಿಲ್ಲ ಎಂದು ತಿಳಿಸಿರುತ್ತಾರೆ. ಹೆಚ್ಚಿನ ಗ್ರಾಮಸ್ಥರು ತಮಗೆ ಟಾಂ ಟಾಂ ಹೊರಡಿಸಿದ್ದೆ ಗೊತ್ತಿಲ್ಲವೆನ್ನುತ್ತಾರೆ. ಹೀಗಾಗಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಗ್ರಾಮಸಭೆಗೆ ಬೇಕಾದ ಪೂರ್ವಸಿದ್ಧತೆಯನ್ನು ಸರಿಯಾಗಿ ಮಾಡಿರುವುದಿಲ್ಲ. ಮಾಡಿದರೂ ಗ್ರಾಮಸ್ಥರು ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿಲ್ಲದಿರುವುದು ಕಂಡುಬರುತ್ತದೆ. ಗ್ರಾಮಸ್ಥರು ಗ್ರಾಮಸಭೆಗೆ ಹೋಗುವಾಗ ತಾವು ಯಾವ ರೀತಿ ಸಿದ್ಧತೆಗೊಳ್ಳಬೇಕು ಇಲ್ಲವೇ ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತು ತಮ್ಮ ಪಾತ್ರವೇನು ಎಂಬುದರ ಬಗ್ಗೆ ಯಾವುದೇ ಅರಿವಿಲ್ಲದಿರುವುದು ಸಹ ಅಷ್ಟೇ ಸ್ಪಷ್ಟವಾಗಿದೆ. ಗ್ರಾಮಸ್ಥರು, ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಈ ಬಗ್ಗೆ ಉದಾಸೀನ ಮನೋಭವ ಹೊಂದಿದ್ದಾರೆ ಎಂಬುದು ಖಚಿತವಾಗುತ್ತದೆ. ಆದರೆ ಗ್ರಾಮಸಭೆ ನಡೆದ ವರದಿಯ ನಡಾವಳಿಗಳಲ್ಲಿ ನಮೂದಿಸಿರುವ ಸಹಿಗಳ ಸಂಖ್ಯೆಯನ್ನು ನೋಡಿದಾಗ ಅದರ ಬಗ್ಗೆ ನಮಗೆ ಯಾವುದೇ ಅಭಿಪ್ರಾಯವನ್ನು ನೀಡಲಾಗುವುದಿಲ್ಲ. ಯಾಕೆಂದರೆ ನಿಜವಾಗಿ ಅಷ್ಟು ಮಂದಿ ಸಹಿಯಿರುವ ಸದಸ್ಯರುಗಳು ಭಾಗವಹಿಸಿದ್ದಾರೋ ಇಲ್ಲವೋ ಎಂದು ಹೇಳುವುದು ಕಷ್ಟದ ಮಾತು. ಯಾಕೆಂದರೆ ಕೆಲವೊಮ್ಮೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಿಳಿಸಿರುವಂತೆ ಹಳ್ಳಿಯಲ್ಲಿ ಗ್ರಾಮಸಭೆಯನ್ನು ನಡೆಸುವುದು ಕಷ್ಟ. ಸರಕಾರ ಕೊಡುವ ಯೋಜನೆಗಳು ೩ ಅಥವಾ ೪ ಮಂದಿಗೆ ಮಾತ್ರ ಉಪಯೋಗವಾಗಲು ಆಸ್ಪದವಿದ್ದರೆ ಸುಮಾರು ೫೦ ಅಥವಾ ೧೦೦ ಮಂದಿ ಅರ್ಜಿ ಸಲ್ಲಿಸಿರುತ್ತಾರೆ ಮತ್ತು ಅಷ್ಟೂ ಮಂದಿ ಗ್ರಾಮಸಭೆಗೆ ಬಂದರೆ ಅವರನ್ನು ನಿಯಂತ್ರಿಸುವುದು ಕಷ್ಟ. ಜನಗಳು ಕುಡಿದು ಬರುತ್ತಾರೆ. ಇದರಿಂದ ಹೊಡೆದಾಟಗಳಾಗುವ ಸಂಭವವೇ ಹೆಚ್ಚು. ಫಲಾನುಭವಿ ಆಯ್ಕೆಯೇನೇ ಕಷ್ಟವಾಗುತ್ತದೆ ಎಂದು ಅವರು ತಿಳಿಸುತ್ತಾರೆ. ಇದು ಬಹಳ ಮುಖ್ಯವಾದ ಸಮಸ್ಯೆಯಾಗಿದೆ. ಇಲ್ಲಿ ನಮಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಗ್ರಾಮಸಭೆ ಎಂದರೆ ಏನು, ಅದರ ಕಾರ್ಯಸ್ವರೂಗಳು ಏನು, ಅದು ಒಂದು ಬರೀ ಫಲಾನುಭವಿ ಆಯ್ಕೆಯ ವೇದಿಕೆಯ ಅಥವಾ ಅದಕ್ಕಿಂತ ಭಿನ್ನವಾದ ಪಾತ್ರ ಈ ಗ್ರಾಮ ಸಭೆಗಿದೆಯೆ ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ.

ಇದಕ್ಕೆ ಸುಲಭವಾಗಿ ಉತ್ತರಿಸಲು ಸಾಧ್ಯ. ಇಲ್ಲವೆ ಉತ್ತರಿಸದಿರಲು ಸಾಧ್ಯ. ಉತ್ತರಿಸ ಬೇಕಾದರೆ ಕಾಯ್ದೆಯಲ್ಲೇ ನಮಗೆ ಉತ್ತರ ಸಿಗುತ್ತದೆ. ಉತ್ತರಿಸಲಾಗದಿದ್ದರೆ ಇದಕ್ಕೆ ಎಲ್ಲರೂ – ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖ್ಯವಾಗಿ ಗ್ರಾಮಸ್ಥರು ಸಹ ಹೊಣೆಗಾರರಾಗಿರುತ್ತಾರೆ.

ಹಿರೇಹೆಗ್ಡಾಳ್‌ ಈ ಸ್ಥಿತಿಯನ್ನು ಗಮನಿಸಿದಾಗ ಇದು ಕೇವಲ ಈ ಗ್ರಾಮಕ್ಕೆ ಸೀಮಿತವಾದ ಪ್ರಶ್ನೆಯಲ್ಲ ಇದು ಎಲ್ಲ ಗ್ರಾಮಪಂಚಾಯತ್‌ಗಳಿಗೂ ಅನ್ವಯವಾಗುತ್ತದೆ. ಮೊದಲನೆಯದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಯ್ದೆಯನ್ನು ಸರಿಯಾಗಿ ಉಪಯೋಗಿಸದೆ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಅಧ್ಯಕ್ಷನಾದವನು ಇಲ್ಲವೇ ಇತರ ಪ್ರಬಲ ಸದಸ್ಯನು ಅಧ್ಯಕ್ಷರ ಜತೆಗೂಡಿ ಕಾರ್ಯದರ್ಶಿಯೊಂದಿಗೆ ಯೋಜನೆಗಳ ವಿವರಗಳನ್ನು ಪಡೆದು ಅವರೊಳಗೆ ಒಂದು ರೀತಿಯ ತಿಳುವಳಿಕೆ ಏರ್ಪಟ್ಟಂತೆ ಗ್ರಾಮಸಭೆ ಅಥವಾ ಪಂಚಾಯತ್‌ ಸಭೆಯ ಕಾರ್ಯಕಲಾಪಗಳನ್ನು ನಡೆಸಿ ಕೊಂಡು ಹೋಗುತ್ತಾರೆ. ಇದರಿಂದ ಅವರ ಲೆಕ್ಕಾಚಾರಗಳಿಗೆ ಅನುಕೂಲವಾಗುವುದು. ಕೆಲವೆಡೆ ಉತ್ತಮ ಅಧ್ಯಕ್ಷರಿದ್ದರೆ ಕಾರ್ಯದರ್ಶಿ ದುರ್ಬಲನಾಗಿರಬಹುದು. ಇನ್ನೊಂದೆಡೆ ಕಾರ್ಯದರ್ಶಿ ಪ್ರಬಲನಾಗಿದ್ದರೆ ಅಧ್ಯಕ್ಷ ಸ್ವಲ್ಪ ಮೃದು ಹಾಗೂ ದುರ್ಬಲನಾಗಿರುವನು. ಇನ್ನೂ ಕೆಲವೆಡೆ ವರದಾನವೆಂಬಂತೆ ಏನೋ ಅಧ್ಯಕ್ಷರು ಮಹಿಳೆಯಾಗಿದ್ದರೆ ಮತ್ತು ಅವರಿಗೆ ಗ್ರಾಮಪಂಚಾಯತು ಮತ್ತು ಗ್ರಾಮಸಭೆಯನ್ನು ನಿಬಾಯಿಸುವ ಅವಶ್ಯಕ ಸಾಮರ್ಥ್ಯ ಅಥವಾ ನೈಪುಣ್ಯತೆ ಇಲ್ಲದಿದ್ದರೆ ಒಂದೋ ಇತರ ಪ್ರಬಲ ಸದಸ್ಯರು ಇದನ್ನು ಮಾಡುತ್ತಾರೆ. ಇಲ್ಲವೇ ಕಾರ್ಯದರ್ಶಿ ಇದನ್ನು ನಿಭಾಯಿಸುತ್ತಾನೆ. ಅಥವಾ ಒಂದಿಬ್ಬರು ಪ್ರಬಲ ಸದಸ್ಯರು ಮತ್ತು ಕಾರ್ಯದರ್ಶಿಯೂ ಸೇರಿ ನಿಭಾಯಿಸುವ ಹುನ್ನಾರದೊಳಗೆ ಸಿಲುಕಿರುತ್ತಾರೆ. ಹಿರೇಹೆಗ್ದಾಳ್‌ ಗ್ರಾಮಪಂಚಾಯತನ್ನು ಈ ಕೊನೆಯ ಗುಂಪಿನಲ್ಲಿ ಸೇರಿಸಿದರೆ ತಪ್ಪಗಲಾರದೆಂದು ಮೇಲು ನೋಟಕ್ಕೆ ಕಂಡುಬರುತ್ತದೆ. ಇನ್ನೂ ಕೆಲವೆಡೆ ಅದು ಮಹಿಳೆ ಅಥವಾ ಪುರುಷನೇ ಇರಲಿ ಪಂಚಾಯತ್ ಅಧ್ಯಕ್ಷನಾಗಿದ್ದರೆ ಮತ್ತು ಆತ ಸ್ಪಲ್ಪ ದುರ್ಬಲನಾಗಿದ್ದರೆ ಇಲ್ಲಿ ಮೂರನೆಯವರೆಗೆ ಅವಕಾಶವೇ ಹೆಚ್ಚು. ಇಲ್ಲಿ ದುರ್ಬಲ ಎಂದರೆ ಅಧಕ್ಷ ಎನ್ನಲಾಗದು ಆದರೆ ಆ ದೌರ್ಬಲ್ಯಕ್ಕೆ ಅವರದ್ದೆ ಕಾರಣಗಳಿರಬಹುದು. ನಿಬಾಯಿಸುವ ನೈಪುಣ್ಯತೆ ಇರದಿದ್ದಲ್ಲಿ ಪ್ರಬಲ ಸದಸ್ಯರು ಇಲ್ಲವೇ ಕಾರ್ಯದರ್ಶಿ ಅಥವಾ ಇವರಿಬ್ಬರೂ ಜಂಟಿಯಾಗಿ ತಮ್ಮ ಕಾರ್ಯ ನಿರ್ವಹಿಸಲು ಅಣಿಯಾಗುತ್ತಾರೆ. ಹೆಚ್ಚಾಗಿ ಈ ಅಧ್ಯಕ್ಷರು (ಮಹಿಳಾ ಅಥವಾ ಪುರುಷ) ಮೇಲೆ ತಿಳಿಸಿದಂತೆ ತಮಗೆ ಏನೋ ತಿಂಗಳಿಗೆ ಸ್ಪಲ್ಪ ಹಣ ಸಿಗುವುದರಿಂದ (೩೦೦ ರೂಪಾಯಿ) ಅದರಲ್ಲೆ ತೃಪ್ತಿ ಪಡೆಯುವ ಸಾಧ್ಯತೆ ಇರಲೂಬಹುದು. ಯಾಕೆಂದರೆ ತೀರಾ ಹಿಂದುಳಿದ ಹಳ್ಳಿ ಪ್ರದೇಶದ ಗ್ರಾಮಪಂಚಾಯತಿಯು ಒಬ್ಬ ಅಧ್ಯಕ್ಷನಾದರೆ ಈ ಮೊತ್ತ ದೊರೆಯುವುದೆಂದರೆ ಅದು ಒಂದು ವರದಾನ ಎಂದೆಣಿಸುವುದರಲ್ಲೂ ಸಂಶಯವಿಲ್ಲ. ಇದು ಸಾರ್ವತ್ರಿಕ ಸತ್ಯವಲ್ಲವಾದರೂ ಕೆಲವು ನಿರ್ದಿಷ್ಟತೆಗಳಿಗೆ ಈ ಮಾದರಿ ಉಪಯೋಗವಾಗಬಹುದು. ನಮ್ಮ ಈ ಪ್ರದೇಶ ಹಳ್ಳಿಗರಿಗೆ ಈ ಮೊತ್ತ ಸಿಗುವುದೆಂದರೆ ಒಂದು ದೊಡ್ಡ ಅವಕಾಶವೆ. ಹಾಗಾಗಿ ಅವರೂ ಸುಮ್ಮನಾಗಿ ಬಿಡುವ ಪ್ರಮೇಯವೂ ಇರಬಹುದು. ನೈಪುಣ್ಯತೆ ಇದ್ದರೂ ಸಹ ಪ್ರಬಲ ಸಹ ಸದಸ್ಯರ ಪ್ರಭಾವ, ಒತ್ತಡ ಇತ್ಯಾದಿ ಇದ್ದರೆ ಇವರುಗಳು ಸುಮ್ಮನಾಗಲೂಬಹುದು. ಇಂತಹ ಸಂದರ್ಭದಲ್ಲಿ ಈ ಪ್ರಬಲ ಸದಸ್ಯರ ಮಾತೇ ಅಂತಿಮವಾಗಿರುತ್ತದೆ. ಅಧ್ಯಕ್ಷರು ಎಲ್ಲದಕ್ಕೂ ಸಹಿಹಾಕುತ್ತಾರೆ. ಇದಕೆ ಪೂರಕವಾಗಿ ಹೆಚ್ಚಿನ ಕಾರ್ಯದರ್ಶಿಗಳು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ.

ಹೀಗಿರುವಾಗ ಗ್ರಾಮಸಭೆಯನ್ನು ಯಾವ ರೀತಿ ಸುಧಾರಿಸಬಹುದು ಎಂಬುದನ್ನು ವಿವರಿಸುವುದು ಕಷ್ಟಸಾಧ್ಯ. ಇದಕ್ಕೆ ಪೂರಕವಾಗಿ ಈ ಹಳ್ಳಿಯ ಜನಜೀವನವು ಹೊಂದಿಕೊಂಡಿರುವಾಗ ಅಲ್ಲಿ ವಿರೋಧ-ಪ್ರತಿರೋಧದ ಮಾತೇ ಬರುವುದಿಲ್ಲ. ಹಳ್ಳಿಯಲ್ಲಿರುವ ಹೆಚ್ಚಿನ ಅಕ್ಷರಸ್ಥರು ಹಾಗೂ ಇತರ ಉದ್ಯೋಗಿಗಳು ತಮಗೇಕೆ ತೊಂದರೆ ಎಂದು ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಪಂಚಾಯತು ವ್ಯವಸ್ಥೆ ಪ್ರತಿರೋಧವಿದ್ದಲ್ಲಿ ಅದಕ್ಕೆ ಪೂರಕವಾದ ಮಾರ್ಗೋಪಾಯಗಳನ್ನು ಅನುಸರಿಸಿಕೊಳ್ಳುವುದರಿಂದ ಇಂಥವುಗಳನ್ನು ನೇರವಾಗಿ ಪರಶ್ನಿಸುವುದು ಹಳ್ಳಿಗರಿಗೆ ಕಷ್ಟವಾಗುತ್ತದೆ. ಇಂಥ ಸಂದಿಗ್ಧತೆಯಲ್ಲಿ ಪಂಚಾಯತ್‌ ಸದಸ್ಯರೆಂದರೆ ಕೇವಲ ಪ್ರಬಲ ಸದಸ್ಯರು ಮಾತ್ರ. ಇವರು ಜಾರಿ ಮಾಡುವ ತೀರ್ಮಾನಗಳೇ ಕಾಯ್ದೆಗಳಾಗುತ್ತವೆ. ಇದು ನಮ್ಮ ಗ್ರಾಮದ ಕಿರು ಗಣರಾಜ್ಯದ ಒಂದು ಮಾದರಿಯಾಗಿರುತ್ತದೆ. ಇದು ತೀರಾ ಹಳ್ಳಿ ಪ್ರದೇಶದ ಗ್ರಾಮಪಂಚಾಯತ್‌ನಲ್ಲಿ ಮಾತ್ರ ಇರುವುದು ಎಂದು ನಿಖರವಾಗಿ ಹೇಳಲಾಗದು. ಪೇಟೆ ಪಟ್ಟಣಕ್ಕೆ ತಾಗಿಕೊಂಡಿರುವ ಪ್ರದೇಶಗಳ ಗ್ರಾಮಪಂಚಾಯತ್‌ಗಳಲ್ಲಿ ಸಾಕ್ಷರತೆ, ತಕ್ಕಮಟ್ಟಿನ ಸುಧಾರಿತ ಆರ್ಥಿಕ ಪರಿಸ್ಥಿತಿ, ಅರಿವು, ಇತ್ಯಾದಿ ಇರುವಲ್ಲಿ ಈ ತರದ ಪ್ರಕ್ರಿಯೆ ಕಂಡು ಬರುವುದಿಲ್ಲವೆನ್ನಲಾಗದು. ಗ್ರಾಮಪಂಚಾಯತ್‌ ಅಥವಾ ಗ್ರಾಮಸಭೆಯ ಕಾರ್ಯಕ್ಷಮತೆಯು ಆ ಗ್ರಾಮದ ಗ್ರಾಮಸ್ಥರು ಮತ್ತು ತಾವು ಆರಿಸಿ ಕಳುಹಿಸುವ ಜನಪ್ರತಿನಿಧಿಗಳನ್ನು ಅವಲಂಬಿಸಿರುತ್ತದೆ. ಬದಲಾಗಿ ಅಧಿಕಾರಿಗಳ ಮೇಲಲ್ಲ ಎಂಬುದನ್ನು ಸಹ ತಿಳಿದುಕೊಳ್ಳಬೇಕು. ಪಂಚಾಯತ್‌ನ ದಾಖಲೆಗಳಲ್ಲಿ ವರದಿಗೊಂಡಂತೆ ನಡೆದಿರುವ ಗ್ರಾಮಸಭೆಯ ವಿವರಗಳನ್ನು ನೀಡಲಾಗಿದೆ.

ಹಿರೇಹೆಗ್ಡಾಳ್ಗ್ರಾಮಸಭೆ

೦೧) ಸೆಪ್ಟೆಂಬರ್‌ ೯೫ – ಇಂದಿರಾ ಆವಾಸ್‌ ಫಲಾನುಭವಿಗಳ ಗುರುತಿಸುವಿಕೆ, ೧೪ ಮನೆಗಳು, ೨೮ ಜನರ ಸಹಿ ಇದೆ (ಹಾರಾತಿ).
೦೨) ೪.೧೦.೯೬ ಹಸಿರು ಕಾರ್ಡು ಪಡಿತರದಾರರನ್ನು ಆಯ್ಕೆ ಮಾಡುವುದರ ಕುರಿತಂತೆ.
೦೩) ೩೦.೭.೯೬ ಐ.ಆರ್.ಡಿ.ಪಿ. ಫಲಾನುಭವಿಗಳನ್ನು ಗುರುತಿಸುವುದಕ್ಕಾಗಿ ೨೫ ಜನರ ಸಹಿ ಇದೆ. ೨೮ ಫಲಾನುಭವಿಗಳನ್ನು ಗುರುತಿಸಿದ್ದಾರೆ.
೦೪) ೧೩.೮.೯೬. ಇಂದಿರಾ ಆವಾಸ್‌ ಯೋಜನೆಯಡಿ ೧೪ ಫಲಾನುಭವಿಗಳ ಆಯ್ಕೆ, ೧೭ ಜನರ ಸಹಿ ಇದೆ.
೦೫) ೨.೧೨.೯೬ ಹೆಚ್ಚುವರಿ ಇಂದಿರಾ ಆವಾಸ್‌ ಯೋಜನೆಯ ಫಲಾನುಭವಿಗಳ ಆಯ್ಕೆ, ೧೦ ಮಂದಿ ಫಲಾನುಭವಿಗಳ ಆಯ್ಕೆ ೧೦ ಜನರ ಸಹಿ ಇದೆ.
೦೬) ೨.೬.೯೭ ಐ.ಆರ್.ಡಿ.ಪಿ. ಫಲಾನುಭವಿಗಳನ್ನು ಗುರುತಿಸಲು.
೦೭) ೨೮.೭.೯೭ ಗ್ರಾಮೀಣ ಗುಂಪು ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ರೈತರಿಗೆ ಪ್ರಯೋಜನ ನೀಡುವ ಕುರಿತು ಸಭೆ. ೧೮ ಇಲಾಖೆಯಿಂದ ಫಲಾನುಭವಿ ಆಯ್ಕೆ.
೦೮) ೧೭.೬.೯೮ ಐ.ಆರ್.ಡಿ.ಪಿ. ಯೋಜನೆಯ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
೦೯) ೩.೯.೯೮ ವಿಶೇಷ ಘಟಕ ಯೋಜನೆ ಉಪಯೋಗದ ಅನ್ವಯ ಗುಂಪು ಗ್ರಾಮದ ಪ. ಜಾತಿ ಹಾಗೂ ಪ. ಪಂಗಡದ ಸಣ್ಣ ರೈತರಿಗೆ ಪ್ರಯೋಜನ ನೀಡುವ ಕುರಿತು ಫಲಾನುಭವಿಗಳ ಆಯ್ಕೆ. ೫ ಮಂದಿ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
೧೦) ೧೮.೯.೯೯

ಜವಾಹರ್ ರೋಜ್ಗಾರ್ ಯೋಜನೆ

ಗ್ರಾಮೀಣ ನಿರುದ್ಯೋಗ ಮತ್ತು ಅರೆ ಯದ್ಯೋಗವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹಿಂದಿನ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ ಮತ್ತು ಗ್ರಾಮೀಣ ಭೂ ರಹಿತ ಉದ್ಯೋಗ ಭರವಸೆ ಯೋಜನೆಗಳನ್ನು ವಿಲೀನಗೊಳಿಸಿ ಭಾರತ ಸರಕಾರವು ೧.೪.೮೯ ರಿಂದ ಜವಾಹರ್ ರೋಜ್‌ಗಾರ್ ಯೋಜನೆಯನ್ನು ಪ್ರಾರಂಭಿಸಿತು. ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಅರೆ ಉದ್ಯೋಗಿ ಪರುಷರು ಮತ್ತು ಮಹಿಳೆಯರಿಗೆ ಹೆಚ್ಚುವರಿ ಲಾಭದಾಯಕ ಉದ್ಯೋಗವನ್ನು ಸೃಷ್ಟಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಅತ್ಯಾವಶ್ಯಕವಾದ ಸೌಲಭ್ಯಗಳನ್ನು ಬಲಪಡಿಸಿ ನಿರಂತರ ಉದ್ಯೋಗವನ್ನು ಸೃಜಿಸುವುದು, ಪ್ರತ್ಯಕ್ಷ ಮತ್ತು ಪರೋಕ್ಷ ಸೌಲಭ್ಯಗಳಿಗೆ ಕಾರಣವಾಗುವ ಸಮುದಾಯ ಮತ್ತು ಸಾಮಾಜಿಕ ಸ್ವತ್ತುಗಳು ಮತ್ತು ಇತರ ಆಸ್ತಿಗಳನ್ನು ಸೃಜಿಸುವುದು ಮತ್ತು ಗ್ರಾಮೀಣ ಪ್ರದೇಶ ದಲ್ಲಿರುವ ಜನರ ಗುಣಮಟ್ಟದಲ್ಲಿ ಒಟ್ಟಾರೆ ಸುಧಾರಣೆ ತರುವುದು ಯೋಜನೆಯ ಇತರ ಉದ್ದೇಶಗಳಾಗಿರುತ್ತವೆ.

ಬಡತನ ರೇಖೆಯಿಂದ ಕೆಳಗಿರುವ ಗ್ರಾಮೀಣ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಪರಿಶಿಷ್ಟ ಜಾತಿ, ವರ್ಗ ಮತ್ತು ಜೀತಮುಕ್ತ ಕೂಲಿಕಾರರಿಗೆ ಆದ್ಯತೆ ನೀಡಲಾಗುವುದು. ಶೇ. ೩೦ ರಷ್ಟು ಉದ್ಯೋಗಾವಕಾಶಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಈ ಯೋಜನೆಯು ಕೇಂದ್ರ ಪುರಸ್ಕೃತವಾಗಿದ್ದು ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಕ್ರಮವಾಗಿ ೮೦:೨೦ರ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದೆ. ಇಂದಿರಾ ಆವಾಸ್‌ ಯೋಜನೆ ಹಾಗೂ ದಶಲಕ್ಷ ಬಾವಿ ಯೋಜನೆಗಳು ಜವಾಹರ್ ರೋಜ್‌ಗಾರ್ ಯೋಜನೆಯ ಉಪಯೋಜನೆಗಳಾಗಿರುತ್ತವೆ. ಜಿಲ್ಲೆಗೆ ಬಿಡುಗಡೆ ಮಾಡಿದ ಜವಾಹರ್ ರೋಜ್‌ಗಾರ್ ಯೋಜನೆಯ ಒಟ್ಟು ಅನುದಾನದಲ್ಲಿ ಶೇ. ೧೦ರಷ್ಟನ್ನು ಇಂದಿರಾ ಆವಾಸ್‌ ಯೋಜನೆಗಾಗಿಯೂ, ಶೇ. ೩೦ ರಷ್ಟನ್ನು ದಶಲಕ್ಷ ಬಾವಿ ಯೋಜನೆಗಾಗಿಯೂ ತೆಗೆದಿರಿಸಿ ಉಳಿದ ಹಣದಲ್ಲಿ ಶೇ. ೮೦ ರಷ್ಟನ್ನು ಗ್ರಾಮ ಪಂಚಾಯತ್‌ಗಳ ಮೂಲಕ ಹಾಗೂ ಶೇ. ೨೦ ರಷ್ಟನ್ನು ಜಿಲ್ಲಾ ಪಂಚಾಯತ್‌ ಮೂಲಕ ಖರ್ಚು ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಜಿಲ್ಲಾ ಪಂಚಾಯತ್‌ ಮತ್ತು ಗ್ರಾಮಪಂಚಾಯತ್‌ ಮಟ್ಟದಲ್ಲಿ ಕನಿಷ್ಟ ಶೇ. ೨೨.೫ ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನೇರವಾದ ಸೌಕರ್ಯಗಳನ್ನು ಒದಗಿಸತಕ್ಕಂಥ ಕಾಮಗಾರಿಗಳಿಗೆ ಮೀಸಲಾಗಿಡಲಾಗುತ್ತದೆ. ಎಲ್ಲಾ ಕಾಮಗಾರಿಗಳಿಗೂ ಕೂಲಿ ಬಟವಾಡೆ ಮತ್ತು ಕೂಲಿಯೇತರ ಬಟವಾಡೆಯ ಪ್ರಮಾಣವನ್ನು ೬೦:೪೦ ರ ಪ್ರಮಾಣದಲ್ಲಿ ನಿರ್ವಹಿಸಲಾಗುವುದು. ಆಹಾರ ಧಾನ್ಯವನ್ನು ರಿಯಾಯಿತಿ ದರದಲ್ಲಿ ವೇತನದ ಅಂಗವಾಗಿ ಒಂದು ಮಾನವ ದಿನಕ್ಕೆ ೨ ಕೆ. ಜಿ. ಯಂತೆ ವಿತರಿಸಲಾಗುವುದು. ಕನಿಷ್ಟ ಮಜೂರಿ ರೂ. ೨೬ ಆಗಿದೆ. ೧೯೯೩ ರ ಜವಾಹರ್ ರೋಜ್‌ಗಾರ್ ಯೋಜನೆಯ ಎರಡನೆ ವಾಹಿನಿಯಂತೆ ಸಾಮಗ್ರಿ ವೆಚ್ಚವು ಶೇ. ೪೦ ಕ್ಕಿಂತ ಹೆಚ್ಚಾಗಿರುವಲ್ಲಿ ಜೆ. ಆರ್. ವೈಯ (ಜ. ರೋ. ಯೋ.) ಅನುದಾನವನ್ನು ಕೂಲಿಯಾಗಿ ಶೇ. ೬೦ನ್ನು ಪಾವತಿಸಿರುವುದರ ಖಚಿತತೆಗಾಗಿ ರಾಜ್ಯ ಘಟಕದ ಇತರ ಯೋಜನೆ ಯೋಜನೇತರ ಹಂಚಿಕೆ ವಿಭಾಗದಲ್ಲಿಯ ಅನುದಾನವನ್ನು ಕೂಡಿಸಿಕೊಳ್ಳಬಹುದು.

ಪಂಚಾಯತ್‌ಗಳು ಜೆ. ಆರ್. ವೈಯ ಅನುದಾನದಲ್ಲಿ ಶಾಲಾ ಕೋಣೆಗಳ ನಿರ್ಮಾಣ, ಅಂಗನವಾಡಿ ಕೇಂದ್ರದ ಕಟ್ಟಡಗಳ ನಿರ್ಮಾಣ, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಒದಗಿಸುವ ಲಿಂಕ್‌ ರಸ್ತೆಗಳ ಅಭಿವೃದ್ಧಿ, ಗ್ರಾಮ ನೈರ್ಮಲ್ಲೀಕರಣ, ಸಸಿನೆಟ್ಟು ಮರ ಬೆಳೆಸುವುದು ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು. ಕೇಂದ್ರ ಸರಕಾರವು ೧೯೯೯ ರ ಏಪ್ರಿಲ್‌ ೧ ರಿಂದ ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನು ಸಂಯೋಜಿಸಿ ಹೊಸತಾಗಿ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ (ಎಸ್‌. ಜಿ. ಎಸ್‌. ವೈ.)ಯನ್ನು ಪ್ರಾರಂಭಿಸಿದೆ.

ಪ್ರತಿ ಗ್ರಾಮಪಂಚಾಯತ್‌ ಜೆ. ಆರ್. ವೈ. ನ ವಾರ್ಷಿಕ ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ. ಇದರ ಜೊತೆಗೆ ಸರಕಾರವು ಪಂಚಾಯತ್‌ಗೆ ತಲಾನುದಾನವನ್ನು ನೀಡುತ್ತದೆ ಮತ್ತು ಪಂಚಾಯತ್‌ ಕರ ಸಂಗ್ರಹವನ್ನು ಮಾಡುತ್ತದೆ. ಇದೆಲ್ಲವನ್ನು ಒಟ್ಟು ಸೇರಿಸಿ ಅಂದರೆ ಖರ್ಚು ವೆಚ್ಚವನ್ನು ಲೆಕ್ಕಹಾಕಿ ಪಂಚಾಯತ್‌ ಆಯವ್ಯಯ ಪಟ್ಟಿಯನ್ನು ರೂಪಿಸುತ್ತದೆ.

ಜೆ. ಆರ್. ವೈ. ಕ್ರಿಯಾ ಯೋಜನೆಯನ್ವಯದ ಹಣವನ್ನು ಈ ನಾಲ್ಕು ಘಟಕಗಳಿಗೆ ವಿನಿಯೋಗಿಸಲಾಗುವುದು.

೧. ಘಟಕ ಒಂದು – ಮಿತ ಉತ್ಪಾದನಾ ಕಾಮಗಾರಿ – ಇದಕ್ಕೆ ಶೇ. ೩೫ ರಷ್ಟನ್ನು ವಿನಿಯೋಗಿಸಲಾಗುವುದು.
೨. ಘಟಕ ಎರಡು – ಸಾಮಾಜಿಕ ಅರಣ್ಯ ಕಾಮಗಾರಿ – ಇದಕ್ಕೆ ಶೇ. ೨೫.
೩. ಘಟಕ ಮೂರು – ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾಮಗಾರಿ – ಇದಕ್ಕೆ ಶೇ. ೨೨.೫.
೪. ಘಟಕ ನಾಲ್ಕು – ಇತರ ಕಾಮಗಾರಿ – ಇದಕ್ಕೆ ಶೇ. ೧೭.೫ ರಷ್ಟನ್ನು ವಿನಿಯೋಗಿಲಾಗುವುದು.

ಘಟಕ ಒಂದರಲ್ಲಿ ಕಲ್ಲು ಬಂಡೆ ಹಾಸುವುದು, ಚರಂಡಿ ನಿರ್ಮಾಣ, ಗ್ರಾಮನೈರ್ಮಲ್ಯ ಇತ್ಯಾದಿ. ಪ್ರಮುಖ ಕಾಮಗಾರಿಗಳಾಗಿವೆ. ಘಟಕ ನಾಲ್ಕರಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಮಾಡಬಹುದು.

ಹಿರೇಹೆಗ್ಡಾಳ್‌ ಗ್ರಾಮಪಂಚಾಯತಿಯ ಜವಾಹರ್ ರೋಜ್‌ಗಾರ್ ಯೋನನೆಯ ೧೯೯೪ – ೯೫ ರಿಂದ ೧೯೯೮ – ೯೯ ರವರೆಗಿನ ೫ ವರ್ಷದ ಅಂದಾಜು ಪ್ರಸ್ತಾಪ, ಮತ್ತು ಘಟಕವಾರು ಖರ್ಚಿನ ವಿವರಗಳನ್ನು ಮುಂದೆ ಕೋಷ್ಟಕ ೬ರಲ್ಲಿ ಕಾಣಬಹುದು. ಹಿರೇಹೆಗ್ಡಾಳ್‌ ಗ್ರಾಮಪಂಚಾಯತಿಯ ೧೯೯೪ – ೯೫ ನೇ ಸಾಲಿನ ಅಂದರೆ ಗ್ರಾಮಪಂಚಾಯತ್‌ ವ್ಯವಸ್ಥೆ ಕಾರ್ಯರೂಪಕ್ಕೆ ಬಂದ ಪ್ರಥಮ ವರ್ಷದ ಯೋಜನೆಯ ಅಂದಾಜು ಪ್ರಸ್ತಾಪ ರೂ. ೧,೨೫,೮೦೦ ಇದ್ದರೆ ಲೆಕ್ಕಾ ತನಿಖಾ ವರದಿಯಲ್ಲಿ ರೂ. ೧,೬೯,೭೦೦ ಇವೆ. ಇನ್ನುಳಿದಂತೆ ೯೫ – ೯೬ ರಿಂದ ೯೯ ರವರೆಗಿನ ಯೋಜನೆಯ ಅಂದಾಜು ಪ್ರಸ್ತಾಪ ಮತ್ತು ಲೆಕ್ಕ ತನಿಖಾ ವರದಿಯು ಸರಿಸಮವಾಗಿರುವುದನ್ನು ಕಾಣಬಹುದು.

ಗ್ರಾಮಪಂಚಾಯತ್‌ ಪ್ರತಿ ವರ್ಷ ತನ್ನ ಜೆ. ಆರ್. ವೈ. ಕ್ರಿಯಾ ಯೋಜನೆ ಅಂದಾಜು ಪ್ರಸ್ತಾಪವನ್ನು ರೂಪಿಸಿ ಅದನ್ನು ತಾಲ್ಲೂಕು ಪಂಚಾಯತಿಗೆ ಸಲ್ಲಿಸುತ್ತದೆ. ಪ್ರತಿವರ್ಷ ಹಿಂದಿನ ಸಾಲಿನ ಕ್ರಿಯಾ ಯೋಜನೆಯ ಮೊತ್ತಕ್ಕೆ ಶೇ.೨೫ ರಷ್ಟು ಹೆಚ್ಚಿಗೆ ಅಂದಾಜು ಮೊತ್ತದ ಪ್ರಸ್ತಾಪ ತೋರಿಸಿ ಪ್ರಸ್ತುತ ಸಾಲಿನ ಕ್ರಿಯಾಯೋಜನೆಯನ್ನು ರೂಪಿಸುತ್ತದೆ. ಸರಕಾರವು ಇದಕ್ಕೆ ಸಮವಾದ ಮೊತ್ತವನ್ನು ನೀಡಬಹುದು ಇಲ್ಲವೇ ಕಡಿತಗೊಳಿಸಬಹುದು. ಆದರೆ ಗ್ರಾಮಪಂಚಾಯತ್‌ ಇದ್ದುದರಲ್ಲಿ ಮುಂದುವರೆಸಿಕೊಂಡು ಹೋಗುತ್ತದೆ. ಆದರೆ ಕ್ರಿಯಾ ಯೋಜನೆಯ ಅಂದಾಜು ಪ್ರಸ್ತಾಪಕ್ಕೆ ಹೋಲಿಸಿದರೆ ದೊರೆಯುವ ಅನುದಾನವು ಪ್ರಸ್ತಾಪದ ಮೊತ್ತಕ್ಕಿಂತ ತೀರಾ ಕಡಿಮೆಯಾಗಿರುವುದು ಕಂಡುಬರುತ್ತದೆ. ೧೯೯೪ ರಿಂದ ೯೯ ರವರೆಗಿನ ೫ ವರ್ಷದ ಯೋಜನೆಯ ಅನುದಾನ, ಒಟ್ಟು ಜಮಾ, ಖರ್ಚು ಮತ್ತಿತರ ವಿವರಗಳನ್ನು ಮುಂದೆ ಕೋಷ್ಟಕ ೭ರಲ್ಲಿ ತೋರಿಸಲಾಗಿದೆ. ಒಟ್ಟು ಜೆ. ಆರ್. ವೈ. ತಲಾನುದಾನ ರೂ. ೫,೬೫,೧೦೦ ಆದರೆ ಒಟ್ಟು ಜಮಾ ರೂ. ೫,೭೦,೩೫೯ ಆಗಿವೆ. ಒಟ್ಟು ಖರ್ಚು ರೂ. ೫,೬೭,೫೪೩ ಆಗಿವೆ. ಪ್ರಸ್ತುತ ವರ್ಷದ ಅನುದಾನ, ಹಿಂದಿನ ವರ್ಷದಲ್ಲಿ ಖರ್ಚಾಗಿ ಉಳಿದ ಹಣ ಮತ್ತು ಅದರ ಅಂತ್ಯ ಶಿಲ್ಕು ಹಾಗೂ ಬ್ಯಾಂಕ್‌ ಬಡ್ದಿ ಸೇರಿ ಒಟ್ಟು ಜಮಾ ಆಗುತ್ತದೆ. ಇದರಲ್ಲಿ ಪ್ರಸ್ತುತ ವರ್ಷದ ಖರ್ಚು ಕಳೆದು ಉಳಿದ ಅಂತ್ಯ ಶಿಲ್ಕು ಮತ್ತದರ ಬಡ್ಡಿ ದರ ಸೇರಿ ಮುಂದಿನ ವರ್ಷದ ಒಟ್ಟು ಜಮಾ ಮೊತ್ತವಾಗುತ್ತದೆ. ಶೇ. ೭.೫ ರಷ್ಟನ್ನು ಗ್ರಾಮಪಂಚಾಯತ್‌ ಆಡಳಿತ ವೆಚ್ಚಕ್ಕೆ ವಿನಿಯೋಗಿಸಬಹುದು.

ಸಮಾನ್ಯವಾಗಿ ಕ್ರಿಯಾಯೋಜನೆಯ ಪ್ರತಿ ವರ್ಷದ ಕಾರ್ಯು ಅನುಷ್ಠಾನವು ಗ್ರಾಸಭೆಯ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಾಗಿ ಐ. ಆರ್. ಡಿ. ಪಿ. ಫಲಾನುಭವಿಗಳನ್ನು, ಇಂದಿರಾ ಆವಾಸ್‌ ಮನೆ, ಹಸಿರು ಕಾರ್ಡ್‌, ಪಡಿತರ ಚೀಟಿ ಫಲಾನುಭವಿಗಳ ಆಯ್ಕೆ ಗ್ರಾಸಭೆಯಲ್ಲಿ ನಡೆಯುತ್ತದೆ ಇದು ಗ್ರಾಸಭೆಯಯಲ್ಲಿ ಅನುಮೋದನೆಯು ಆಗಬೇಕಾಗುತ್ತದೆ. ಆದರೆ ಹಿರೇಹೆಗ್ಡಾಳ್‌ನಲ್ಲಿ ಈ ಪ್ರಕ್ರಿಯೆಗಳು ಗ್ರಾಸಭೆಯಯಲ್ಲಿ ಅನುಮೋದನೆಯಾಗಿದೆಯೆ ಎಂಬುದನ್ನು ನಿಖರವಾಗಿ ಹೇಳಲಾಗದು. ಹಾಗೆಯೇ ಜೆ. ಆರ್. ವೈ ಯೋಜನೆಯಡಿ ಘಟಕವಾರು ಮೊತ್ತವನ್ನು ವಿನಿಯೋಗಿಸುತ್ತಾರೆ. ಹೆಚ್ಚಾಗಿ ಘಟಕ ೩ ರ ಮೊತ್ತ ಶೇ. ೨೨.೫ ಅಂದರೆ ಪರಿಶಿಷ್ಟ ಜಾತಿ ವರ್ಗಗಳಿಗೆ ಮೀಸಲಿರಿಸಿದ ಹಣವನ್ನು ಖರ್ಚು ಮಾಡುತ್ತಾರೆ. ಇಲ್ಲವಾದಲ್ಲಿ ಆ ಹಣ ಯಾಕೆ ವಿನಿಯೋಗವಾಗಿಲ್ಲ ಎಂದು ವಿವರಿಸಬೇಕಾಗುತ್ತದೆ ಮತ್ತು ಸ್ಪಷ್ಟೀಕರಣ ನೀಡದಿದ್ದಲ್ಲಿ ಅನುದಾನವು ತಡೆಹಿಡಿಯಲ್ಪಡುತ್ತದೆ ಹಾಗೇಯೇ ಪರಿಶಿಷ್ಟ ಜಾತಿ ಮತ್ತು ವರ್ಗದ ಜನಸಂಖ್ಯೆಯು ಗ್ರಾಮದಲ್ಲಿ ಹೆಚ್ಚಾಗಿದ್ದರೆ ಅನುದಾನವು ಹೆಚ್ಚಿಗ ದೊರೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಘಟಕ ೨ ರ ಅನುದಾನವನ್ನು ಸಸಿನೆಡುವ ಬದಲು ಇತರ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ.

೧೯೯೭ – ೯೮ ರಿಂದ ಈ ಗ್ರಾಮಪಂಚಾಯತ್‌ಗೆ ಹತ್ತನೇ ಹಣಕಾಸು ಯೋಜನೆ ಅನುದಾನವನ್ನು ನೀಡಲಾಗಿದೆ. ಎರಡು ವರ್ಷಗಳಲಿ ಒಟ್ಟು ರೂ. ೧,೧೮,೫೦೦ ನ್ನು ನೀಡಲಾಗಿದೆ.

೧೯೯೭ – ೯೬ ರ ಜೆ. ಆರ್.ವೈ. ಯ ಕ್ರಿಯಾ ಯೋಜನೆಯಲ್ಲಿ ರೂಪಿಸಿದ ೨,೭೩೦ ಮಾನವ ದಿನಗಳಲ್ಲಿ ಕೇವಲ ೪೧೪ ಮಾನವ ದಿನಗಳನ್ನು ಉತ್ಪಾದನೆ ಮಾಡಲಾಗಿದೆ. ಉಳಿದವುಗಳನ್ನು ಮಾಡಲಾಗಿಲ್ಲ. ೧೯೯೬ – ೯೭ ರಲ್ಲಿ ಒಟ್ಟು ೮,೮೦೦ ಮಾನವ ದಿನಗಳನ್ನು ತೋರಿಸಲಾಗಿ ಅದರಲ್ಲಿ ಕೇವಲ ೧,೩೫೦ ಮಾನವ ದಿನಗಳು ಉತ್ಪನ್ನವಾಗಿದ್ದು ಉಳಿದ ೭,೪೫೦ ಮಾನವ ದಿನಗಳನ್ನು ಉತ್ಪಾದಿಸಲಾಗಿಲ್ಲ. ಹಾಗೆಯೇ ಹೆಣ್ಣು ಮಕ್ಕಳಿಗೆ ಶೇ. ೩೦ ರಷ್ಟು ಮಾನವ ದಿನಗಳನ್ನು ಒದಗಿಸಿಲ್ಲ. ೧೯೯೭ – ೯೮ ರಲ್ಲೂ ಮಾನವ ದಿನಗಳ ಉತ್ಪಾದನೆಯಲ್ಲಿ ನಿಗದಿತ ಗುರಿ ಸಾಧಿಸಿಲ್ಲ. ಮಹಿಳೆಯರಿಗೂ ಶೇ. ೩೦ ರಷ್ಟು ಮಾನವ ದಿನಗಳನ್ನು ಒದಗಿಸಿಲ್ಲ. ಇವೆಲ್ಲಾ ಲೆಕ್ಕ ತನಿಖಾ ವರದಿಯ ಸಂದರ್ಭದಲ್ಲಿ ಕಂಡುಬರುವ ನ್ಯೂನತೆಗಳಾಗಿವೆ.

ಬಂಡೆ ಹಾಸುವುದು

ಹಿರೇಹೆಗ್ಡಾಳ್‌ ಗ್ರಾಮಪಂಚಾಯತಿಯ ಜೆ. ಆರ್.ವೈ. ಯ ಕಾಮಗಾರಿಗಳ ವರದಿ ಹಾಗೂ ಇದರ ಭೌತಿಕ ಕಾರ್ಯಗಳನ್ನು ನೋಡಿದಾಗ ೫ ವರ್ಷಗಳಲ್ಲಿ ಸುಮಾರು ರೂ. ೩,೫೮,೯೫೫ನ್ನು ಬಂಡೆ ಹಾಸುವುದಕ್ಕಾಗಿ ಖರ್ಚು ಮಾಡಿದ್ದಾರೆ. ಅಂದರೆ ಜೆ. ಆರ್.ವೈ. ತಲಾನುದಾನ ಒಟ್ಟು ರೂ. ೫,೬೫,೧೦೦ ಆದರೆ ಇದರಲ್ಲಿ ರೂ. ೩,೫೮,೯೫೫ ನ್ನು ಬಂಡೆಹಾಸುವಿಕೆಗೆ ವಿನಿಯೋಗಿಸಲಾಗಿದೆ. ಈ ಮೊತ್ತವು ಯೋಜನೆಯ ೪ ಘಟಕಗಳನ್ನು ಸೇರಿರುತ್ತದೆ . ಹೆಚ್ಚಿನ ಕಾಮಗಾರಿಗಳು ಪಂಚಾಯತ್‌ನ ಮುಖ್ಯ ಭಾಗದಲ್ಲಿ ಅಂದರೆ ಪ್ರಬಲ ವರ್ಗದವರ ಮನೆಗಳ ಮುಂದಿನ ಓಣಿಗಳಲ್ಲಿ ಮಾಡಲಾಗಿದೆ. ಇನ್ನು ಕೆಲವು ಹರಿಜನ ಕೇರಿ ಹಾಗೂ ಕೇರಿಯಲ್ಲಿನ ದೇವಸ್ಥಾನದ ಮುಂಭಾಗದಲ್ಲಿ ಹಾಸಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಹಾಸಿರುವುದರ ಹಿಂದೆ ಆ ಸಮಾಜದವರ ಸಕ್ರಿಯ ಸಹಭಾಗಿತ್ವವಿದೆ. ಇಲ್ಲದಿದ್ದಲ್ಲಿ ಆ ಕಾಮಗಾರಿಯು ಇನ್ನೆಲ್ಲೊ ಆಗುತ್ತಿತ್ತು ಮತ್ತು ಇದರ ಹಿಂದೆ ದೊಡ್ಡ ರಾಜಕೀಯವಿದೆ ಎನ್ನುತ್ತಾರೆ ಕೇರಿ ನಿವಾಸಿಗಳು, ಕಾಮಗಾರಿಯು ೪ ಹಳ್ಳಿಗಳಲ್ಲೂ ಕಾರ್ಯಗತವಾಗಿದೆ. ಆದರೆ ಇಷ್ಟೊಂದು ಹಣವನ್ನು ಬಂಡೆ ಹಾಸುವುದಕ್ಕಾಗಿ ಇನಿಯೋಗಿಸಿದರೆ ಅಂದರೆ ಅನುದಾನದ ಶೇ.೬೩ ರಷ್ಟನ್ನು ಇದೊಂದೆ ಕಾಮಗಾರಿಗೆ ಬಳಸಿದರೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಯಾರು ಹೇಗೆ ಮತ್ತು ಯಾವ ಆದ್ಯತೆಗಳನಿಟ್ಟುಕೊಂಡು ಮಾಡಬೇಕಾಗಿದೆ ಎಂದು ವಿವೇಚಿಸಬೇಕು. ಸಾಮಾನ್ಯವಾಗಿ ಈ ಪ್ರದೇಶದ ಎಲ್ಲಾ ಗ್ರಾಮ ಪಂಚಾಯತ್‌ಗಳು ಹೆಚ್ಚಿನ ಹಣವನ್ನು ಕೇವಲ ಬಂಡೆ ಹಾಸುವುದಕ್ಕಾಗಿ ವಿನಿಯೋಗಿಸಿವೆ. ಆದರೆ ಇದರ ಉಪಯುಕ್ತತೆ, ಇದರ ಗುಣ ಮಟ್ಟ ಮತ್ತು ಇದು ಯಾರ ಅಭಿವೃದ್ಧಿಗೆ ಅಂದರೆ ಸಮಾಜದ ಯಾವ ವರ್ಗದವರ ಬೀದಿಯಲ್ಲಿ ಇದನ್ನು ಹಾಸಲಾಗುತ್ತದೆ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಸಾಮಾನ್ಯವಾಗಿ ಪಂಚಾಯತಿಯ ಅಧ್ಯಕ್ಷನಾದವನು ತನ್ನ ಮನೆ ಮುಂದಿನ ಓಣಿಯಲ್ಲಿ ಇದನ್ನು ಮಾಡಿಸುತ್ತಾನೆ. ಮತ್ತು ಇದು ಇನ್ನೊಬ್ಬ ಅಧ್ಯಕ್ಷ ಬಂದಾಗ ಅವನ ಮನೆ ಮುಂದೆ ನಡೆಯುತ್ತದೆ. ಆದರೆ ಅದು ಕೇವಲ ಕೆಲವರ ಒಳಿತಿಗೆ ಮೀಸಲು. ಅಪೂರ್ಣವಾಗಿ ಉಳಿದರೆ ಎಲ್ಲರಿಗೂ ಉಪಯೋಗವಾಗುವ ಕಾಮಗಾರಿ ಯಾವಾಗ ಮುಗಿಯುವುದು ಎಂಬ ಪ್ರಶ್ನೆ ಏಳುತ್ತದೆ. ಹಳ್ಳಿಯ ಎಲ್ಲಾ ಜನವರ್ಗ ವಾಸಿಸುವ ಓಣಿಗಳಲ್ಲಿ ಆದ್ಯತೆಗನುಗುಣವಾಗಿ ಮಾಡಿದರೆ ಇಂಥ ಕಾಮಗಾರಿ ಪರಿಣಾಮಕಾರಿಯಾದೀತು. ಇಲ್ಲವಾದಲ್ಲಿ ಅಧ್ಯಕ್ಷರು ಮತ್ತಿತರ ಸದಸ್ಯರು ಮುಂತಾದ ಸ್ಥಾಪಿತ ಹಿತಾಸಕ್ತಿಗಳ ಕಾರ್ಯವನ್ನು ಪೂರೈಸಿದಂತಾಗುತ್ತದೆ. ಸರಕಾರ ಅಥವಾ ಗ್ರಾಮಪಂಚಾಯತ್ ಸಾಧ್ಯವಾದಲ್ಲಿ ಬಂಡೆ ಹಾಸುವುದನ್ನು ತಪ್ಪಿಸಿ ಅದಕ್ಕೆ ಪೂರಕವಾಗಿ ಬೇರೆ ಶಾಶ್ವತವಾಗಿ ಲಾಭಕೊಡುವ ಇತರ ಕಾಮಗಾರಿ ಮಾಡಿದಲ್ಲಿ ಇದರ ವೆಚ್ಚದ ಹಣವನ್ನು ಅಭಿವೃಧಿ ಕಾರ್ಯಗಳಿಗೆ ಇನ್ನಷ್ಟು ಬಳಸಬಹುದಾಗಿದೆ. ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ ಅಭಿವೃದ್ಧಿ ದೃಷ್ಟಿಯಿಂದ ಸಾಧ್ಯವಾದಲ್ಲಿ ಇದನ್ನು ಜಾರಿಗೊಳಿಸಿದರೆ ಇನ್ನಷ್ಟು ಉತ್ತಮ.

ಸರಕಾರವು ಗ್ರಾಮಪಂಚಾಯತ್‌ ಗಳಿಗೆ ಪ್ರತೀ ವರ್ಷ ರೂ. ಒಂದು ಲಕ್ಷ ತಲಾನುದಾನವನ್ನು ನೀಡುತ್ತಿದೆ. (ನಂತರ ಇದು ರೂ. ೧.೨೫ ಲಕ್ಷ ಆಗಿ ಈಗ ರೂ. ಎರಡು ಲಕ್ಷ ಅನುದಾನಾ ನೀಡುತ್ತದೆ). ಪಂಚಾಯತ್‌ಗಳು ಕರಗಳನ್ನು ಸಂಗ್ರಹಿಸುತ್ತವೆ. ಇವುಗಳು ಪಂಚಾಯತ್‌ನ ಪ್ರಮುಖ ಆದಾಯ ಮೂಲವಾಗಿವೆ. ಪಂಚಾಯತ್‌ ಈ ಮೊತ್ತವನ್ನು ತನ್ನ ದೈನಂದಿನ ಚಟುವಟಿಕೆಗಳಿಗೆ ಹಾಗೂ ಸಿಬ್ಬಂದಿ ಮತ್ತಿತರ ವೆಚ್ಚಗಳಿಗೆ ಖರ್ಚು ಮಾಡುತ್ತದೆ. ಕಲ್ಯಾಣ ಚಟುವಟಿಕೆಗಳ ಉದ್ದೇಶದ ನಿಧಿಯಲಿ ಶೇ. ೨೦ ರಷ್ತನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಅಭಿವೃದ್ಧಿಗಾಗಿ ವಿನಿಯೋಗಿಸಬೇಕೆಂಬ ನಿಯಮವಿದೆ.

ಕರಗಳು : ಪ್ರತೀ ಗ್ರಾಮ ಪಂಚಾಯತ್‌ ಗ್ರಾಮಸ್ಥರಿಂದ ತೆರಿಗೆಯನ್ನು ಸಂಗ್ರಹಿಸುತ್ತದೆ. ಹಾಗೆಯೇ ಪಂಚಾಯತ್‌ ಕಟ್ಟಡಗಳು, ಅಂಗಡಿ, ಮಾರ್ಕೆಟ್, ಜಾತ್ರೆ, ಸಂತೆ, ಇತ್ಯಾದಿಗಳಿಂದ ಕರ ವಸೂಲಿ ಮಾಡುತ್ತದೆ. ೧೦ ಹೆಕ್ಟೇರ್ ಒಳಗಿನ ಕೆರೆಗಳನ್ನು ಗ್ರಾಮ ಪಂಚಾಯತ್‌‌ ಮೀನುಗಾರಿಕೆಗೆ ಪರಭಾರೆಗೆ ನೀಡುತ್ತದೆ. ೧೯೯೪ – ೯೫ ರಲ್ಲಿ ಹಿರೇಹೆಗ್ಡಾಳ್‌ ಗ್ರಾಮಪಂಚಾಯತ್‌ನಲ್ಲಿ ಒಟ್ಟು ರೂ. ೧೧,೭೫೪ ಕರ ಸಂಗ್ರಹ ಮಾಡಿದರೆ ರೂ. ೧೩,೭೨೮ ಬಾಕಿ ಸಂಗ್ರಹ ಆಗಬೇಕಾದ ಮೊತ್ತವಾಗಿದೆ. ಇದರಲ್ಲಿ ಹುಣಸೆ ಮರದ ಏಲಂ ಹಣ ರೂ. ೩,೮೨೫ ಸೇರಿರುತ್ತದೆ. ೧೯೯೫ – ೯೬ ರಲ್ಲಿ ರೂ.೩೪,೭೩೮ ಕರ ಸಂಗ್ರಹವಾದರೆ (ಇದು ಕಳೆದ ವರ್ಷದ ಬಾಕಿ ಮೊತ್ತ ಸೇರಿ ಸಂಗ್ರಹವಾದದ್ದು ) ರೂ.೧೩,೩೮೮ ಬಾಕಿ ಸಂಗ್ರಹ ಆಗಬೇಕಾಗಿದೆ. ಹುಣಸೆ ಮರ ಏಲಂ ಹಣ ರೂ.೧೨,೧೨೫ ಆಗಿದೆ. ೧೯೯೬ – ೯೭ ರಲ್ಲಿ ರೂ. ೨೭,೩೪೮ ಕರ ಸಂಗ್ರಹವಾದರೆ ಬಾಕಿ ಸಂಗ್ರಹ ವಾಗಬೇಕಾದ ಮೊತ್ತ ರೂ. ೧೧,೪೩೬ ಆಗಿದೆ. ಹುಣಸೆ ಮರ ಏಲಂ ಹಣ ರೂ.೨,೩೫೦ ಆಗಿದೆ. ೧೯೯೭- ೯೮ ರಲ್ಲಿ ರೂ.೪೧,೩೧೮ ಕರ ವಸೂಲಿಯಾದರೆ ಕರ ವಸೂಲಿ ಆಗಬೇಕಾದ ಬಾಕಿ ಮೊತ್ತ ರೂ. ೧೦,೧೦೩ ಆಗಿದೆ. ಹುಣಸೆ ಮರ ಏಲಂ ಹಣ ರೂ.೧೯,೧೭೫ ಆಗಿದೆ. ೧೯೯೮ – ೯೯ ರಲ್ಲಿ ಕರ ವಸೂಲಿ ರೂ. ೨೯,೩೯೨ ಆಗಿದ್ದರೆ ಬಾಕಿ ಕರ ವಸೂಲಿ ಮೊತ್ತ ರೂ. ೨೧,೨೩೬ ಆಗಿದೆ. ಇದು ೫ ವರ್ಷಗಳಲ್ಲಿ ಹೋಲಿಸಿದಾಗ ಸಂಗ್ರಹ ಆಗಬೇಕಾದ ಅತೀ ದೊಡ್ಡ ಮೊತ್ತವಾಗಿದೆ. ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯ ತಲಾನುದಾನ ಕರಸಂಗ್ರಹ, ಒಟ್ಟು ಜಮಾ ಮತ್ತು ಖರ್ಚು ವಿವರಗಳನ್ನು ಕೋಷ್ಟಕ ೮ ರಲ್ಲಿ ತೋರಿಸಲಾಗಿದೆ.

ಈ ಗ್ರಾಮ ಪಂಚಾಯತ್‌ನಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಕರ ಸಂಗ್ರಹವು ನಿರೀಕ್ಷಿತ ಮಟ್ಟದಲಿ ಆಗುತ್ತಿಲ್ಲ. ಪ್ರತಿ ವರ್ಷ ಕರ ಸಂಗ್ರಹ ಹಿಂದೆ ಉಳಿಯುತ್ತ ಬಂದಿದೆ. ಇದಕ್ಕಾಗಿ ಒಂದು ವ್ಯವಸ್ತಿತವಾದ ಕರ ಸಂಗ್ರಹ ಸಪ್ತಾಹ ಅಥವಾ ಮಾಸವನ್ನು ಆಚರಿಸುವುದರ ಮೂಲಕ ಪಂಚಾಯತ್‌ ಕರ ಸಂಗ್ರಹವನ್ನು ಸರಿಯಾಗಿ ಮಾಡಬಹುದು. ಇದರಲ್ಲಿ ಪಂಚಾಯತ್‌ ಸದಸ್ಯರು ಹಾಗೂ ಸಿಬ್ಬಂದಿಗಳ ಮುಖ್ಯ ಪಾತ್ರವಿದೆ. ಅವರು ಗ್ರಾಮಸ್ಥರ ಒಲವನ್ನು ಅವಲಂಬಿಸಬೇಕು. ಇದಕ್ಕೆ ಪೂರಕವಾಗಿ ಜನಹಿತವಾಗುವಂಥ ಕಾರ್ಯಗಳನ್ನು ಮಾಡಬೇಕು. ಯಾಕೆಂದರೆ ತಾವು ತುಂಬುವ ತೆರಿಗೆಯ ಸದುಪಯೋಗವಾಗಿದೆ. ಜನರಿಗೆ ಲಾಭವಿದೆ ಎಂದು ಜನರಿಗೆ ಮನವರಿಕೆ ಆದರೆ ತೆರಿಗೆ ನೀಡಲು ಹಿಂದೇಟು ಹಾಕುವುದಿಲ್ಲ. ಇವತ್ತು ಯಾರೊಬ್ಬರು ಕರನೀಡಲಾಗದಂತ ಕಷ್ಟ ಪರಿಸ್ಥಿಯಲ್ಲಿ ಇಲ್ಲ. ದುಡಿಮೆಗೆ ಪ್ರತಿಫಲ ಇರುವಾಗ ಸ್ವಲ್ಪ ಭಾಗವನ್ನಾದರೂ ಕರ ಸಂಗ್ರಹಣೆಗೆ ಮೀಸಲಿಡಬಹುದು ಅಥವಾ ಕ್ಲುಪ್ತ ಸಮಯಕ್ಕೆ ಒಮ್ಮೆಗೆ ಕರ ನೀಡಬಹುದು ಇದರಿಂದ ಪಂಚಾಯತ್‌ನ ವರಮಾನ ಹೆಚ್ಚುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬಹುದು.