ಗ್ರಾಮಪಂಚಾಯತ್‌ನ ಗತಿಶೀಲತೆಯ ವಿವರಣಾತ್ಮಕ ಅಧ್ಯಯನದೊಂದಿಗೆ ಕೆಲವಾರು ತಥ್ಯಗಳನ್ನು ಈಗಾಗಲೇ ಗುರುತಿಸಲಾಗಿದೆ. ಇವುಗಳ ಅಧಾರದ ಮೇಲೆ ಈ ಪಂಚಾಯತ್‌ ವ್ಯವಸ್ಥೆಯ ಪುನಶ್ಚೇತನ ಅಥವಾ ಪಂಚಾಯತ್‌ ಚೌಕಟ್ಟಿನೊಳಗೆ ಕಾರ್ಯವೆಸಗಲು ಅನುವಾಗುವಂತಹ ವಾತಾವರಣ ನಿರ್ಮಾಣಕ್ಕೆ ಬೇಕಾಗುವ ಆದ್ಯತೆಗಳನ್ನು ಗುರುತಿಸಲಾಗಿದೆ.

ಅಧ್ಯಯನದ ಉದ್ದೇಶಗಳನ್ನು ದೃಷ್ಟಿಯಲಿಟ್ಟುಕೊಂಡು ಇದರ ವಿಶ್ಲೇಶಣೆ ಮಾಡಿ ಈ ತಥ್ಯಗಳನ್ನು ರೂಪಿಸಲಾಗಿದೆ. ಗ್ರಾಮಪಂಚಾಯತ್‌ನ ಕಾರ್ಯವೈಖರಿ, ಸದಸ್ಯರುಗಳ ಪಾತ್ರ ವಿಶ್ಲೇಷಣೆ, ಚುನಾವಣಾ ಪ್ರಕ್ರಿಯೆ ಹಾಗೂ ಊರಿನ ಯಜಮಾನರ ಪಾತ್ರ ಮತ್ತು ಮಹಿಳಾ ಸದಸ್ಯತ್ವ ಇವುಗಳು ಸಾಕಷ್ಟು ಸುಧಾರಿಸಬೇಕಾದ ಆಗತ್ಯವಿದೆ. ಗ್ರಾಮಸಭೆಯು ಸಮರ್ಪಕವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ನಡೆಯಬೇಕಾದ ಜರೂರತ್ತು ಇದೆ. ಯಾಕೆಂದರೆ ಇವು ಸರಿಯಾಗಿ ನಡೆಯದಿದ್ದರೆ ಗ್ರಾಮಪಂಚಾಯತ್‌ ವ್ಯವಸ್ಥೆಯ ಸ್ವಾಸ್ಥ್ಯದ ಬಗ್ಗೆ ಯಾರಿಗೂ ಏನು ಹೇಳಲಾಗದು, ಗ್ರಾಮಸಭೆಯು ರೋಗಗ್ರಸ್ಥ ಸ್ಥಿತಿಯಲ್ಲಿದ್ದರೆ ಗ್ರಾಮಪಂಚಾಯತ್‌ನ ಕಾರ್ಯವೈಖರಿ ಆರೋಗ್ಯದಾಯಕವಾಗಿರಲು ಸಾಧ್ಯವಿಲ್ಲ.

ಗ್ರಾಮಸಭೆಯನ್ನು ಕರೆಯುವಾಗ ಆದಷ್ಟು ಪೂರ್ಪಭಾವಿಯಾಗಿ ಜನರಿಗೆ ನೋಟಿಸು ಕಳುಹಿಸಿಸುವುದರ ಮೂಲಕ ಸಭೆ ನಡೆಯುವಿಕೆಯ ಖಚಿತತೆ ಮತ್ತು ಹೆಚ್ಚಿನ ಪ್ರಮಾಣದ ಹಾಜರಾತಿಯ ನಿರೀಕ್ಷೆಯನ್ನು ಇಟ್ಟುಕೊಂದಿರಬೇಕು. ಮಹಿಳಾ ಹಾಜರಾತಿಯ ಬಗ್ಗೆಯೂ ತೀವ್ರ ಆಸಕ್ತಿವಹಿಸಬೇಕು. ಅವರ ಉತ್ತಮ ಪಾತ್ರ ಮತ್ತದಕ್ಕೆ ಪೂರಕವಾದ ವಾತಾವರಣವನ್ನು ರೂಪಿಸಬೇಕು. ಗ್ರಾಮದ ಮುಖ್ಯ ಆದ್ಯತೆಗಳನ್ನು ಗುರುತಿಸುವುದರ ಮೂಲಕ ಆಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಬೇಕು. ಗ್ರಾಮಮಟ್ಟದಲ್ಲಿ ಯೋಜನಾ ಪ್ರಕ್ರಿಯೆಯನ್ನು ಜಾರಿಗೊಳಿಸಬೇಕು. ಇದು ಈಗಾಗಲೇ ಕೇರಳದಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಲಿದೆ. ಜಿಲ್ಲಾ ಪಂಚಾಯತ್‌ ಮತ್ತು ತಾಲ್ಲೂಕು ಪಂಚಾಯತ್‌ಗಳು ಉತ್ತಮ ಸಹಕಾರ ನೀಡಿ ಗ್ರಾಮದ ಯೋಜನೆ ರೂಪುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು.

ಕೆಂದ್ರ ಸರಕಾರವು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಎಂ. ಪಿ. ಲೋಕಲ್ ಫಂಡ್‌ ನೀಡುತ್ತದೆ. ಇದು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೂ ವಿಸ್ತರಿಸಲ್ಪಡುತ್ತವೆ. ಈ ಫಂಡ್‌ನಿಂದ ಒಂದು ಗ್ರಾಮದಲ್ಲಿ ಯೋಜನೆ ಅಥವಾ ಕಾಮಗಾರಿ ನಡೆಯುವಾಗ ಅದರ ಕುರಿತ ಎಳ್ಳಷ್ಟು ಮಾಹಿತಿಯು ಕೂಡ ಆ ಗ್ರಾಮದ ಸದಸ್ಯ ಅಥವಾ ಪಂಚಾಯತ್‌ ಅಧ್ಯಕ್ಷರಿಗೆ ಇರದಂಥ ಪರಿಸ್ಥಿತಿ ಇದೆ. ಇದರಿಂದ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳು ಅಥವಾ ಅಪೂರ್ಣವಾಗುವ ಸಂಭವಗಳೇ ಹೆಚ್ಚು. ಉದಾಹರಣೆಗೆ ಗ್ರಾಮದ ಹಳ್ಳಿಯಲ್ಲಿ ರಸ್ತೆ ಅಥವಾ ಇನ್ನಾವುದೆ ಕಾಮಗಾರಿಯು ಪಂಚಾಯತ್‌ನ ಸೀಮಿತ ಹಣದ ಕೊರತೆಯಿಂದ ಅಪೂರ್ಣವಾಗಿದ್ದರೆ ಅದು ಹಾಗೆ ನೆನೆಗುದಿಗೆ ಬೀಳುವುದು. ಇದು ಪೂರ್ಣವಾಗಬೇಕಾದರೆ ಮುಂದಿನ ವರ್ಷದ ಪಂಚಾಯತ್‌ ಬಜೆಟ್‌ನಲ್ಲಿ ಅನುಮಾನ ದೊರೆತಲ್ಲಿ ಆಗಬಹುದು ಇಲ್ಲವೇ ಹಣ ದೊರೆಯದೆ ಹಾಗೆ ಅಪೂರ್ಣವಾಗಿ ಉಳಿಯುತ್ತದೆ. ಇಂಥ ಸಂದರ್ಭದಲ್ಲಿ ಎಂ. ಫಿ. ಫಂಡ್‌ನಿಂದ ಆ ಗ್ರಾಮಕ್ಕೆ ಹಣ ವಿನಿಯೋಗಿಸಲ್ಪಡುವುದಿದ್ದರೆ ಅದರ ಮಾಹಿತಿಯು ಪಂಚಾಯತ್‌ ಅಧ್ಯಕ್ಷ ಯಾ ಸದರಿ ಸದಸ್ಯರಿಗೆ ತಿಳಿದಿದ್ದಲ್ಲಿ ಇಂತಹ ಅಪೂರ್ಣ ಕಾಮಗಾರಿಗಳನ್ನು ಪೂರ್ತಿಗೊಳಿಸಬಹುದು ಎಂದು ಜಿಲ್ಲಾ ಪಂಚಾಯತ್‌ ಸದಸ್ಯರೊಬ್ಬರು ಹೇಳಿರುವುದು ಅಭಿವೃದ್ಧಿ ದೃಷ್ಟಿಯಿಂದ ಸಮಯೋಚಿತವಾಗಿದೆ. ಇಂಥ ಸಂದರ್ಭದಲ್ಲಿ ಸಂಸದರು ಈ ಕುರಿತು ಗ್ರಾಮ ಪಂಚಾಯತ್‌ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ತರದ ಸೌಜನ್ಯದಿಂದ ಅಭಿವೃದ್ಧಿ ಕಾರ್ಯಗಳು ಉತ್ತಮಗೊಳ್ಳುವುವು. ಮತ್ತು ಜನಪ್ರತಿನಿಧಿಗಳೊಳಗೆ ಅಂದರೆ ಸಂಸದರಿಂದ ಹಿಡಿದು ತಳಮಟ್ಟದ ಗ್ರಾಮ ಪಂಚಾಯತ್‌ ಸದಸ್ಯರವರೆಗೂ ಉತ್ತಮ ಸೌಹರ್ದ ಸಂಬಂಧವಿರುವುದು.

ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು (ವಿಕೇಂದ್ರಿತ ಘಟಕ) ಮತ್ತು ಅಧಿಕಾರವರ್ಗದ ಮಧ್ಯೆ ತಾತ್ವಿಕ ಸೌಹಾರ್ದ ಸಂಬಂಧವಿರುವುದು ಮಾತ್ರವಲ್ಲ ಜನಪ್ರತಿನಿಧಿಗಳೊಳಗೂ ಸ್ಥಾನಮಾನದ ಕುರಿತಂತೆ ತಾರತಮ್ಯವಿದೆ. ಸಂಸದರು ಮತ್ತು ತಳಮಟ್ಟದ ಗ್ರಾಮ ಪಂಚಾಯತ್‌ ಸದಸ್ಯರ ಮಧ್ಯೆ ಬಹಳಷ್ಟು ಅಂತಸ್ತಿನ ಅಥವಾ ಸ್ಥಾನಮಾನದ ತಾರತಮ್ಯವಿದೆ. ಇದು ನಿವಾರಣೆಯಾಗದಿದ್ದಲ್ಲಿ ವಿಕೇಂದ್ರಿಕರಣದ ಆಶಯಗಳು ಸಂಪೂರ್ಣವಾಗಿ ಕಾರ್ಯಗತ ವಾಗಲಾರವು. ಯಾಕೆಂದರೆ ಪಂಚಾಯತ್‌ನ ಆದಾಯವು ಸೀಮಿತವಾಗಿರುವುದು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅದು ಹೆಚ್ಚಾಗಿ ಕೇಂದ್ರ ರಾಜ್ಯಗಳೆರಡನ್ನು ಅವಲಂಬಿಸಿರುವುದರಿಂದ ರಾಜ್ಯ ಮತ್ತು ಕೇಂದ್ರದ ಜನಪ್ರತಿನಿಧಿಗಳ ಪಾತ್ರವು ಪಂಚಾಯತ್‌ನ ಮುನ್ನಡೆಗೆ ಸಹಕಾರಿಯಾಗುವ ಸಂಭವಿದೆ. ಎಲ್ಲಿಯವರೆಗೆ ಪಂಚಾಯತ್‌ ತನ್ನ ವ್ಯಾಪ್ತಿಯ ಅಭಿವೃದ್ಧಿ ಮತ್ತಿತ್ತರ ಕಾರ್ಯಕ್ರಮಗಳಿಗೆ ಕೇಂದ್ರ/ರಾಜ್ಯದ ನೆರವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅವಲಂಬಿಸಿರುತ್ತದೋ ಅಥವಾ ಪಂಚಾಯತ್‌ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ವಂತಂತ್ರವಾಗಿ ಸಂಪನ್ಮೂಲಗಳನ್ನು ಕ್ರೋಢಿಕರಿಸುವಂತಹ ಸ್ಥಿತಿಯಲ್ಲಿರುವುದಿಲ್ಲವೋ ಅಲ್ಲಿಯವರೆಗೆ ಈ ಜಂಜಾಟ ಇದ್ದೇ ಇರುತ್ತದೆ. ಇದು ಹೊರನೋಟಕ್ಕೆ ಸರಳವಾಗಿ ಕಂಡರೂ ಸಾಂಸ್ಥಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಜಟಿಲವಾದ ಸಮಸ್ಯೆಯಾಗಿದೆ, ಕೇಂದ್ರ ರಾಜ್ಯಗಳ ಸಂಬಂಧದಂತೆಯೆ ಇದು ಸಹ ಉನ್ನತ ರಾಕಕೀಯ ಸಂಸ್ಥೆಗಳ ಅಂದರೆ ಸಂಸದರು, ವಿಧಾನಭೆ ಸದಸ್ಯರು ಮತ್ತು ಪಂಚಾಯತಿ ಸದಸ್ಯರುಗಳ ಸಂಬಂಧ ಕುರಿತಾಗಿರುತ್ತದೆ.

ಪ್ರಥಮವಾಗಿ ಮತ್ತು ಪ್ರಾಯೋಗಿಕವಾಗಿ ನಾವು ನೋಡಿರುವಂತೆ ಉನ್ನತ ರಾಜಕೀಯ ಅಥವಾ ಜನಪ್ರತಿನಿಧಿ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳಿಗಳ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧವಿಲ್ಲ. ಹಾಗೆಯೇ ಈ ಸಂಸ್ಥೆಗಳ ಮೇಲೆ ಅಧಿಕಾರಿಗಳ ನಿಯಂತ್ರಣವು ಅಧಿಕಗೊಂಡಿರುತ್ತದೆ. ಇದರಿಂದ ವಿಕೇಂದ್ರೀಕರಣದ ವೈಫಲ್ಯವನ್ನು ಸುಲಭವಾಗಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಮೇಲೆ ಹೇರುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದೆಂದರೆ ಮೇಲಿನ ಹಂತದ ಜನಪ್ರತಿನಿಧಿಗಳು ಇದು ತಮ್ಮ ಅಧಿಕಾರವನ್ನು ಕುಂಠಿತಗೊಳಿಸಿದಂತೆ ಎಂದು ಭಾವಿಸುತ್ತಾರೆ. ಇದಲ್ಲದೆ ಮೇಲಿನ ಹಂತದ ಜನಪ್ರತಿನಿಧಿಗಳು ಪಂಚಾಯತ್‌ ವ್ಯವಸ್ಥೆಯಲ್ಲಿ ಪದನಿಮಿತ್ತ ಸದಸ್ಯರು ಆಗಿರಬಾರದೆಂದು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇರಬಾರದೆಂದು ತಜ್ಞರ ಸಮಿತಿಯ ಶಿಫಾರಸ್ಸು ಮಾಡಿರುವುದರಿಂದ ಇವರುಗಳ ಸಂಬಂಧ ಇನ್ನಷ್ಟು ಜಟಿಲವಾಗುವ ಸಂಭವಿದೆ. ಇದಕ್ಕಾಗಿ ತಮಿಳುನಾಡಿನಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಸದಸ್ಯರು ಸಹ ಎಂ. ಪಿ, ಎಂ. ಎಲ್. ಎ, ಲೋಕಲ್‌ ಫಂಡ್‌ನಂತೆ ತಮಗೂ ಲೋಕಲ್‌ ಫಂಡ್‌ ಇರಬೇಕು ಎಂದು ವಾದ ಮಂಡಿಸಿದ್ದಾರೆ.

ಹಾಗೆಯೇ ಪಂಚಾಯತ್‌ಗಳಿಗೆ ಸೀಮಿತ ಅನುದಾನವಿರುತ್ತದೆ ಮತ್ತು ಹೆಚ್ಚಾಗಿ ಇದು ಕೇಂದ್ರ/ರಾಜ್ಯಗಳನ್ನೇ ಅವಲಂಬಿಸಿರುತ್ತದೆ. ಸ್ವಂತವಾಗಿ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಸ್ವತಂತ್ರವಾದ ಪಂಚಾಯತ್‌ಗಳಿಗೆ ಅವಕಾಶ ಮೂಲಗಳಿಲ್ಲ. ರಾಜ್ಯದ ಬಜೆಟ್‌ನಲ್ಲಿ ಸೀಮಿತ ಅನುದಾನವನ್ನು ನೀಡಲಾಗುತ್ತದೆ. ಆದರೆ ಕೇರಳ ಸರಕಾರವು ಬಜೆಟ್‌ನಲ್ಲಿ ಶೇಕಡಾ ೩೫ ರಿಂದ ೪೦ ರವರೆಗೆ ಪಂಚಾಯತ್‌ಗೆ ಅನುದಾನ ನೀಡಲು ಅವಕಾಶ ಒದಗಿಸಿದೆ. ಅದಲ್ಲದೆ ಅಲ್ಲಿನ ಪಂಚಾಯತ್‌ನ ಸಂಪನ್ಮೂಲ ಕ್ರೋಢಿಕರಣದ ಮೂಲವು ಹೆಚ್ಚಾಗಿರುತ್ತದೆ. ಇದರಿಂದ ಅಲ್ಲಿನ ಕೆಲ ಪಂಚಾಯತುಗಳ ವಾರ್ಷಿಕ ಸಂಪನ್ಮೂಲವು ೭೦ ಲಕ್ಷ ರೂ. ಗಳವರೆಗೆ ಇದೆ. ಇವೆಲ್ಲವನ್ನು ಪರಿಗಣಿಸಿದಾಗ ನಮ್ಮ ವ್ಯವಸ್ಥೆಯಲ್ಲಿ ಸೀಮಿತ ಅವಕಾಶಗಳಿವೆ ಎಂಬುದು ಸ್ಪಷ್ಟ.

ಕರ್ನಾಟಕ ಸರಕಾರವು ಈ ಅಂಶಗಳನ್ನು ಮನಗಂಡು ಹೆಚ್ಚಿನ ಸಂಪನ್ಮೂಲಗಳನ್ನು ಮತ್ತು ಅಧಿಕಾರಿಗಳನ್ನು ಪಂಚಾಯತ್‌ ಸಂಸ್ಥೆಗಳಿಗೆ ವರ್ಗಾಯಿಸಬೇಕು . ಹಾಗೆಯೇ ಜನಪ್ರತಿನಿಧಿಗಳೊಳಗೆ ಸ್ಥಾನಮಾನದ ಅಂತರವನ್ನು ನಿವಾರಿಸುವಲ್ಲಿ ಕಾರ್ಯೋನ್ಮುಖವಾದರೆ ಪಂಚಾಯತ್‌ ಮತ್ತು ಉನ್ನತ ಜನಪ್ರತಿನಿಧಿಗಳ ಮಧ್ಯೆ ಉತ್ತಮ ಸಂಬಂಧವೇರ್ಪಡುವಲ್ಲಿ ಸಂಶಯವಿಲ್ಲ.