“ಶಕಪುರುಷ’

ಪ್ರಪಂಚದ ಚರಿತ್ರೆಯಲ್ಲಿ ಕೆಲವರನ್ನು ಮಾತ್ರ ಹೀಗೆ ವರ್ಣಿಸಬಹುದು. ಅಂತಹ ಕೆಲವರಲ್ಲಿ ಆರನೆಯ ವಿಕ್ರಮಾದಿತ್ಯ ಒಬ್ಬ.

ಶಕಪುರುಷಎಂದರೇನು?

ವರ್ಷಗಳನ್ನು ಎಣಿಸುವುದಕ್ಕೆ ಒಂದು ರೀತಿ ಬೇಕು, ಅಲ್ಲವೆ? ಇಲ್ಲದಿದ್ದರೆ ಯಾವುದಾದರೂ ಸಂಗತಿಯನ್ನು ಸ್ಮರಿಸಿದಾಗ, ಯಾವ ವರ್ಷ ಅದು ನಡೆಯಿತು ಎಂದು ಹೇಗೆ ಹೇಳುವುದು?

೧೮೬೩ರಲ್ಲಿ ವಿವೇಕಾನಂದರು ಹುಟ್ಟಿದರು, ೧೯೩೦ ರಲ್ಲಿ ಸರ್ ಸಿ.ವಿ. ರಾಮನ್‌ರಿಗೆ ನೊಬೆಲ್‌ ಬಹುಮಾನ ಬಂದಿತು, ೧೯೪೭ರಲ್ಲಿ ಭಾರತ ಸ್ವಾತಂತ್ಯ್ರವನ್ನು ಸಾಧಿಸಿತು. ಹೀಗೆ ಯಾವ ಸಂಗತಿಯನ್ನಾದರೂ ಹೇಳಬೇಕಾದರೆ ವರ್ಷವನ್ನು ಸೂಚಿಸುತ್ತೇವೆ. (೧೮೬೩, ೧೯೩೦, ೧೯೪೭ ಎಂಬಂತೆ). ಈ ರೀತಿ ಹೇಳಲು ಸಾಧ್ಯವಿಲ್ಲದೆ ಇದ್ದರೆ ಎಷ್ಟು ಕಷ್ಟವಾಗುತ್ತಿತ್ತು!

ಸಾಮಾನ್ಯವಾಗಿ ನಾವು ಬಳಸುವುದು ಕ್ರಿಸ್ತಶಕೆಯನ್ನು ೧೯೪೭ ಎಂದರೆ ಯೇಸುಕ್ರಿಸ್ತನು ಹುಟ್ಟಿ ೧೯೪೭ ವರ್ಷಗಳನಂತರ ಎಂದು. (ಕ್ರಿಸ್ತ ಶಕೆಯನ್ನು ಪಶ್ಚಿಮದ ದೇಶಗಳ ಕ್ರೈಸ್ತರು ಅನುಸರಿಸುತ್ತಿದ್ದರು . ಇಂಗ್ಲಿಷರು ಭಾರತವನ್ನು ಆಳಲು ಪ್ರಾರಂಭಿಸಿದನಂತರ ನಮ್ಮ ದೇಶದಲ್ಲಿಯೂ ಇದು ಆಚರಣೆಗೆ ಬಂದಿತು.) ಎಂದರೆ ಯೇಸುಕ್ರಿಸ್ತ ಒಬ್ಬ ಶಕಪುರುಷ.

ಭಾರತ ಸರ್ಕಾರ ಈಗ ಶಾಲಿವಾಹನ ಶಕೆಯನ್ನು ಅನುಸರಿಸುತ್ತಿದೆ. ಇದು ಕ್ರಿಸ್ತ ಶಕೆಗಿಂತ ೭೮ ವರ್ಷ ಈಚೆಗಿನದು. ಇದು ಶಾಲಿವಾಹನ ಎಂಬ ರಾಜನ ಹೆಸರಿನದು; ಅವನೊಬ್ಬ ಶಕಪುರುಷ.

ಒಬ್ಬ ಮನುಷ್ಯನ ಹುಟ್ಟು ಅಥವಾ ಪಟ್ಟಾಭಿಷೆಕ ಇಂತಹ ಘಟನೆಯಿಂದ ಒಂದು ದೇಶದ ವರ್ಷಗಳ ಎಣಿಕೆಯನ್ನು ಇಟ್ಟುಕೊಳ್ಳಬೇಕಾದರೆ, ಅವನೊಬ್ಬ ಮಹಾ ಪುರುಷನೇ ಆಗಬೇಕು.

ಶಕಪುರುಷ ವಿಕ್ರಮಾದಿತ್ಯ

ಸುಮಾರು ೮೫೦ ವರ್ಷಗಳ ಹಿಂದೆ ಕರ್ನಾಟಕದಲ್ಲಿ ‘ಚಾಲುಕ್ಯ -ವಿಕ್ರಮ ಶಕೆ’ ಬಳಕೆಯಲ್ಲಿತ್ತು. ಆರನೆಯ ವಿಕ್ರಮಾದಿತ್ಯ ಕ್ರಿಸ್ತಶಕ ೧೦೭೭ರ ಫೆಬ್ರವರತಿ ೨೬ ರಂದು ಸಿಂಹಾಸನವನ್ನು ಏರಿದ. ಅಲ್ಲಿಂದ ಚಾಲುಕ್ಯ-ವಿಕ್ರಮ ಶಕೆ ಪ್ರಾರಂಭವಾಯಿತು. ಈ ಸಂಗತಿಯೇ ಇವನು ಎಂತಹ ಪರಾಕ್ರಮಿ, ಎಂತಹ ಮಹಾಪುರುಷ ಎಂಬುದನ್ನು ತೋರಿಸುತ್ತದೆ. ಒಬ್ಬರಲ್ಲ, ಇಬ್ಬರಲ್ಲ, ಹಲವಾರು ರಾಜರನ್ನು ಸೋಲಿಸಿ ತನ್ನ ಶೌರ್ಯವನ್ನು ತೋರಿಸಿದವನು ಈತ.

ಆದರೆ, ಒಬ್ಬ ಮನುಷ್ಯನನ್ನು ದೊಡ್ಡವನು ಎಂದು ನಾವು ಗೌರವಿಸಬೇಕಾದರೆ ಅವನು ತುಂಬ ಶಕ್ತಿವಂತನಾಗಿದ್ದರೆ  ಸಾಲದು, ಅಲ್ಲವೆ? ರಾಕ್ಷಸರಿಗೆ ತುಂಬ ಶಕ್ತಿ ಇರುತ್ತಿತ್ತಂತೆ, ಎಲ್ಲರಿಗೂ ಅವರನ್ನು ಕಂಡರೆ ಹೆದರಿಕೆ. ಆದರೆ ಅವರಲ್ಲಿ ಗೌರವವಿರುತ್ತಿರಲಿಲ್ಲ; ದ್ವೇಷ, ಅಷ್ಟೇ. ಶಕ್ತಿಯನ್ನು ಇತರರಿಗೆ ಒಳ್ಳೆಯದನ್ನು ಮಾಡಲು ಉಪಯೋಗಿಸುವ ವಿವೇಕವೂ ಬೇಕು. ವಾಯುವೇಗದಲ್ಲಿ ಹೋಗುವ ಸೊಗಸಾದ ಕುದುರೆಗೆ ಕಡಿವಾಣ ಇದ್ದ ಹಾಗೆ ಶಕ್ತಿಗೆ ವಿವೇಕ. ವಿಕ್ರಮಾದಿತ್ಯನು ಎಷ್ಟು ಪರಾಕ್ರಮಿಯೋ ಅಷ್ಟೇ ಸಮರ್ಥನಾದ ರಾಜ. ಮತ್ತೆ ಮತ್ತೆ ಯುದ್ಧಗಳು ನಡೆಯುತ್ತಿದ್ದ ಕಾಲದಲ್ಲಿ ಇವನ ಪ್ರಜೆಗಳು ನಿರ್ಭಯವಾಗಿರಬಹುದಾಗಿತ್ತು. ಅಲ್ಲದೆ ಪ್ರಜೆಗಳಿಗೆ ಒಳ್ಳೆಯದಾಗಬೇಕು ಎಂದೇ ರಾಜ್ಯವಾಳಿದ ಅರಸ ಇವನು. ಜೊತೆಗೆ ಉದಾರ, ಸದ್ಗುಣಿ. ಜಗದ್ದೇವ ಎಂಬ ರಾಜನನ್ನು ಇವನು ಎಷ್ಟು ಪ್ರೀತಿಯಿಂದ ನಡೆಸಿಕೊಂಡ ಎಂದರೆ, ಅವನು ತನಗೆ ರಾಜ್ಯವೇ ಬೇಡ ಎಂದು ವಿಕ್ರಮಾದಿತ್ಯನ ಆಸ್ಥಾನಕ್ಕೆ ಬಂದು ಬಿಟ್ಟ.

ಅಸಮಾನ ಪರಾಕ್ರಮಿಯಾಗಿ ಹಲವು ರಾಜ್ಯಗಳನ್ನು ಅಂಗೈಯಲ್ಲಿಟ್ಟುಕೊಂಡಿದ್ದರೂ, ಶಕ್ತಿಯನ್ನು ಒಳ್ಳೆಯವರ ರಕ್ಷಣೆಗೆ-ದುಷ್ಟರ ಶಿಕ್ಷೆಗೆ ಉಪಯೋಗಿಸಿ, ಪ್ರಜೆಗಳಿಗಾಗಿ ಅಧಿಕಾರವನ್ನು ನಡೆಸಿದವನು ವಿಕ್ರಮಾದಿತ್ಯ.

ಶಕಪುರುಷನಾಗಲು ಎಲ್ಲ ರೀತಿಯಲ್ಲಿ ಯೋಗ್ಯತೆ ಪಡೆದಿದ್ದವನು ವಿಕ್ರಮಾದಿತ್ಯ.

ವೀರ ಚಾಳುಕ್ಯ ವಂಶ

ಕರ್ನಾಟಕಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದ ಚರಿತ್ರೆ ಇದೆ. ಈ ಕಾಲದಲ್ಲಿ ಎಷ್ಟೋ ರಾಜವಂಶಗಳು ಆಳಿದವು. ಇದರಲ್ಲಿ ‘ಚಾಳುಕ್ಯರು’ ಎಂಬ ವಂಶದವರು ಮುಖ್ಯವಾದ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ಚರಿತ್ರೆಯಲ್ಲಿ ಎರಡು ಬಾರಿ ಇವರು ಬಹುಹೆಚ್ಚಿನ ಅಧಿಕಾರವನ್ನು ಪಡೆದು ರಾಜ್ಯವಾಳಿದರು. ಮೊದಲನೆಯ ಸಲ ಇವರು ಪ್ರಬಲರಾದಾಗ ಇವರ ರಾಜಧಾನಿ ಬಾದಾಮಿ ಅಥವಾ ವಾತಾಪಿ; ಇಲ್ಲಿಂದ ಇವರು ಸುಮರು ೨೫೦ ವರ್ಷಗಳ ಕಾಲ ಆಳಿದರು. ಅನಂತರ ಮಾನ್ಯಖೇಟದ ರಾಷ್ಟ್ರಕೂಟರು ಎಂಬವರಿಗೆ ಸೋತರು. ಮತ್ತೆ ಒಂದು ಸಾವಿರ ವರ್ಷಗಳ ಹಿಂದೆ ಕ್ರಿ.ಶ. ೯೭೩ ರಲ್ಲಿ – ಚಾಳುಕ್ಯ ವಂಶದ ಎರಡನೆಯ ತೈಲಪ ಎಂಬಾತನು ಸ್ವಾತಂತ್ಯ್ರವನ್ನು ಪಡೆದ. ಕಲ್ಯಾಣ ಎಂಬ ನಗರ ರಾಜಧಾನಿಯಾಯಿತು . ಈ ಎರಡನೆಯ ತೈಲಪ ಬಹು ಪರಾಕ್ರಮಿ. ಇವನು ಹಲವಾರು ಶತ್ರುಗಳನ್ನು ಎದುರಿಸಬೇಕಾಯಿತು. ಎಲ್ಲರನ್ನೂ ಗೆದ್ದ. ಮುಂಜ ಎಂಬ ರಾಜನಿಗೂ ಇವನಿಗೂ ಅನೇಕ ಯುದ್ಧಗಳು ನಡೆದವು. ಕೊನೆಗೆ ಮುಂಜ ಸೋತ, ಸತ್ತುಹೋದ. ತೈಲಪ, ಮುಂಜ ಇಬ್ಬರ ಪರಾಕ್ರಮವನ್ನೂ ಹಾಡಿ ಅನೇಕ ಕವಿಗಳು ಕವನಗಳನ್ನು ಬರೆದರು. ಅಷ್ಟು ಘನಘೋರ ಯುದ್ಧ ಇವರದು. ತೈಲಪ ಪ್ರಜೆಗಳಿಗೆ ಒಳ್ಳೆಯದಾಗಲಿ ಎಂದು ಆಳಿದ ಪರಾಕ್ರಮಿ. ಕನ್ನಡದ ಒಬ್ಬ ದೊಡ್ಡ ಕವಿ, ರನ್ನ , ಇವನ ಆಸ್ಥಾನದಲ್ಲಿದ್ದ.

‘ಸಾಹಸಭೀಮ ವಿಜಯ’ ಎಂಬ ಹೆಸರನ್ನು ಕೇಳಿದ್ದೀರ? ಇದು ಕನ್ನಡ ಭಾಷೆಯ ಶ್ರೇಷ್ಠ ಕಾವ್ಯಗಳಲ್ಲಿ ಒಂದು. ಇದನ್ನು ‘ಗದಾಯುದ್ಧ’ ಎಂದೂ ಕರೆಯುತ್ತಾರೆ. ಮಹಾಭಾರತದ ಕಥೆಯ ಒಂದು ಭಾಗವನ್ನು ಆರಿಸಿಕೊಂಡು ಕವಿಯು ಭೀಮ-ದುರ್ಯೋಧನರ ಗದಾಯುದ್ಧ, ಭೀಮನ ವಿಜಯ – ದುರ್ಯೋಧನನ ಸೋಲು ಸಾವುಗಳ ಕಥೆಯನ್ನು ಶಕ್ತಿ ತುಂಬಿ ತುಳುಕಾಡುವ ಶೈಲಿಯಲ್ಲಿ ಹೇಳಿದ್ದಾನೆ. ಸತ್ಯಾಶ್ರಯ ಎಂಬ ರಾಜನನ್ನೆ ಭೀಮನಿಗೆ ಹೋಲಿಸಿ ಕಾವ್ಯವನ್ನು ಬರೆದಿದ್ದಾನೆ.

ಈ ಕಾವ್ಯವನ್ನು ಬರೆದ ಮಹಾಕವಿ ರನ್ನ. ಸತ್ಯಾಶ್ರಯ ಅವನ ರಾಜ, ಎರಡನೆಯ ತೈಲಪನ ಮಗ. ತಂದೆಯಂತೆಯೇ ಇವನೂ ಶೂರ. ತನ್ನನ್ನು ಎದುರಿಸಿದ ಶತ್ರುಗಳನ್ನು ನುಚ್ಚುನುರಿ ಮಾಡಿದ. ಸುಮರು ೨೨೫ ವರ್ಷಗಳ ಕಾಲ ಮತ್ತೆ ಚಾಳುಕ್ಯರು ಕರ್ನಾಟಕವನ್ನು ಆಳಿದರು. ಈ ವಂಶದಲ್ಲಿ ಹುಟ್ಟಿದವನು, ಹಲವು ರೀತಿಗಳಲ್ಲಿ ಪ್ರತಿಭೆಯನ್ನು ಬೆಳಗಿದವನು, ಆರನೆಯ ವಿಕ್ರಮಾದಿತ್ಯ.

ನನಗೆ ಯುವರಾಜ ಪದವಿ ಬೇಡ

ಚಿಕ್ಕ ವಯಸ್ಸಿನಲ್ಲಿಯೇ ಅವನ ಘನತೆ ಬೆಳಕಿಗೆ ಬಂತು. ತಾನಾಗಿ ಬಂದ ಯುವರಾಜ ಪದವಿಯನ್ನು ‘ಬೇಡ’ ಎಂದು ದೂರವಿಟ್ಟ ತರುಣ ವಿಕ್ರಮಾದಿತ್ಯ.

ವಿಕ್ರಮಾದಿತ್ಯನ ತಂದ ಮೊದಲನೆಯ ಸೋಮೇಶ್ವರ. ಅವನಿಗೆ ಮೂರು ಜನ ಗಂಡು ಮಕ್ಕಳು – ಎರಡನೆಯ ಸೋಮೇಶ್ವರ, ವಿಕ್ರಮಾದಿತ್ಯ, ನಾಲ್ಕನೆಯ ಜಯಸಿಂಹ.

ಚಿಕ್ಕ ವಯಸ್ಸಿನಿಂದ ವಿಕ್ರಮಾದಿತ್ಯ ತೇಜಸ್ವಿ, ಧೈರ್ಯವಂತ. ಅವನನ್ನು ನೋಡಿ ತಂದೆಗೆ ತುಂಬ ಸಂತೋಷ. ಸೋಮೇಶ್ವರನು ಸಿಂಹಾಸನಕ್ಕೆ ಬಂದಾಗಲೆ ಸುತ್ತ ಶತ್ರುಗಳ ರಾಜ್ಯಗಳಿದ್ದುವು. ಚೋಳ ರಾಜ್ಯದ ರಾಜಾಧಿರಾಜನಿಗಂತೂ ಸೋಮೇಶ್ವರ ಎಂಧರೆ ಬದ್ಧದ್ವೇಷ. ಸೋಮೇಶ್ವರ – ರಾಜಾಧಿರಾಜರ ಸೈನ್ಯಗಳಿಗೆ ಮತ್ತೆ ಮತ್ತೆ ಕದನಗಳಾಗಿ ಕೊನೆಗೆ ರಾಜಾಧಿರಾಜ ಯುದ್ಧದಲ್ಲಿ ಸತ್ತ. ಇದಲ್ಲದೆ ಇತರ ರಾಜ್ಯಗಳೂ ಚಾಳುಕ್ಯ ರಾಜ್ಯವನ್ನು ಮುತ್ತುತ್ತಿದ್ದವು. ಆದುದರಿಂದ ಚಾಳುಕ್ಯ ಸಿಂಹಾಸನವನ್ನು ಏರಿದವನು ಅದನ್ನು ಉಳಿಸಿಕೊಳ್ಳುವುದು ಸುಲಭವಲ್ಲ ಎಂದು ಸೋಮೇಶ್ವರನಿಗೆ ತಿಳಿದಿತ್ತು.

ಗಂಡುಗಲಿಯಾಗಬೇಕು ಈ ಸಿಂಹಾಸನವನ್ನು ಉಳಿಸಿಕೊಳ್ಳಬೇಕಾದರೆ ಎಂದು ಅವನು ಸದಾ ಯೋಚಿಸುತ್ತಿದ್ದ.

ತನ್ನ ಮೂವರು ಮಕ್ಕಳಲ್ಲಿ ಯಾರು ರಾಜನಾಗಲು ಯೋಗ್ಯ ಎಂದು ಸೋಮೇಶ್ವರ ಗಮನಿಸುತ್ತಲೇ ಇದ್ದ. ಹಿರಿಯ ಮಗ ಸೋಮೇಶ್ವರ ಅಂತಹ ಶೂರನೇನಲ್ಲ. ವಿಕ್ರಮಾದಿತ್ಯ ಸಿಂಹದ ಮರಿ. ಇವನಾದರೆ ರಾಜ್ಯವನ್ನು ಉಳಿಸಿಕೊಳ್ಳಬಲ್ಲ, ಪ್ರಜೆಗಳನ್ನು ಕಾಪಾಡಬಲ್ಲ ಎನ್ನಿಸಿತು ಮೊದಲನೆಯ ಸೋಮೇಶ್ವರನಿಗೆ.

ತನಗೆ ವಯಸ್ಸಾದಂತೆ, ಮಕ್ಕಳಲ್ಲಿ ಯಾರಾದರೂ ಯುವರಾಜ ಎಂದಾದರೆ ಒಳ್ಳೆಯದು ಎಂದು ತೋರಿತು ರಾಜನಿಗೆ. ತನಗೂ ದೇಶವನ್ನು ಕಾಪಾಡುವುದರಲ್ಲಿ, ಆಳುವುದರಲ್ಲಿ ನೆರವು ಸಿಕ್ಕುತ್ತದೆ; ಪ್ರಜೆಗಳಲ್ಲಿ “ಇವನು ತಮಗೆ ಮುಂದೆ ರಾಜನಾಗುವವನು”  ಎಂಬ ಭಕ್ತಿ ಮೂಡುತ್ತದೆ; ಹುಡುಗನಿಗೂ ರಾಜ್ಯವನ್ನು ಆಳುವುದಕ್ಕೆ ಶಿಕ್ಷಣ ಸಿಕ್ಕಂತಾಗುತ್ತದೆ.

ಮಕ್ಕಳ ವಿದ್ಯಾಭ್ಯಾಸ ಮುಗಿಯಿತು. ತಂದೆ ಸೋಮೇಶ್ವರ ವಿಕ್ರಮಾದಿತ್ಯನನ್ನು ಕರೆಕಳುಹಿಸಿದ.

“ಮಗೂ, ಮುಂದೆ ನೀನೇ ಈ ರಾಜ್ಯಕ್ಕೆ ರಾಜ. ನಾನಿರುವಾಗಲೇ ಯುವರಾಜನಾಗು. ನನಗೂ ಭಾರ ಕಡಿಮೆಯಾಗುತ್ತದೆ. ನಿನಗೂ ಅನುಭವ ಬರುತ್ತದೆ” ಎಂದ.

ಇನ್ನೂ ತಾರುಣ್ಯದ ಹೊಸ್ತಿಲ ಮೇಲೆ ನಿಂತ ಹುಡುಗ. ಯುವರಾಜ ಪದವಿ ತಾನಾಗಿ ಕೈಚಾಚಿ ಕರೆಯುತ್ತಿದೆ.

ಎಷ್ಟು ಆಸೆ, ಎಷ್ಟು ಸಂತೋಷ ಆಗಬೆಕು!

“ಯುವರಾಜ ಪದವಿ ನನಗೆ ಬೇಡ. ಸೋಮೇಶ್ವರ ನನಗಿಂತ ದೊಡ್ಡವನು. ಅವನಿಗೇ ಈ ಪೀಠ ಕೊಡಿ” ಎಂದುಬಿಟ್ಟ ಹುಡುಗ.

ರಾಜನಿಗೆ ಆಶ್ಚರ್ಯವಾಯಿತು, ಮೆಚ್ಚಿಕೆಯಾಯಿತು, ಸಂತೋಷವಾಯಿತು. ಮಗನನ್ನು ಹರಸಿದ.

ಹಿರಿಯ ಮಗ ಸೋಮೇಶ್ವರನೇ ಯುವರಾಜನಾದ.

ತರುಣವೀರ

ಆದರೆ ಯುವರಾಜನಾಗದಿದ್ದರೂ ವಿಕ್ರಮಾದಿತ್ಯನು ಹೊಣೆಗಾರಿಕೆಯ ಕಷ್ಟದ ಕೆಲಸಗಳನ್ನು ನಿರ್ವಹಿಸಬೇಕಾಯಿತು. ಭಾರತದಲ್ಲಿ ಹಲವು ರಾಜರಿದ್ದು, ಅವರ ನಡುವೆ ಆಗಾಗ ಯುದ್ಧಗಳಾಗುತ್ತಲೆ ಇದ್ದುವು. ಮಾಳವದ ಪರಮಾರ ರಾಜ ಭೋಜ ಎಂಬುವನು ತೀರಿಕೊಂಡ. ಸಿಂಹಾಸನಕ್ಕಾಗಿ ಉದಯಾದಿತ್ಯ ಮತ್ತು ಜಯಸಿಂಹ ಎಂಬವರಲ್ಲಿ ಜಗಳವಾಯಿತು. ಉದಯಾದಿತ್ಯ ಚೋಳ ರಾಜನ ಸಹಾಯವನ್ನು ಪಡೆದ; ಜಯಸಿಂಹ ಮೊದಲನೆಯ ಸೋಮೇಶ್ವರನ ಸಹಾಯವನ್ನು ಬೇಡಿದ. ಸೋಮೇಶ್ವರನು ವಿಕ್ರಮಾದಿತ್ಯನನ್ನು ಸೈನ್ಯದೊಡನೆ ಅವನ ಸಹಾಯಕ್ಕೆ ಕಳುಹಿಸಿದ. ಆಗ ವಿಕ್ರಮಾದಿತ್ಯನಿಗೆ ಇನ್ನೂ ಚಿಕ್ಕ ವಯಸ್ಸು. ಮಾಳವವನ್ನು ಪ್ರವೇಶಿಸಿ, ಉದಯಾದಿತ್ಯನನ್ನು ಸೋಲಿಸಿ, ಜಯಸಿಂಹನಿಗೆ ಸಿಂಹಾಸನವನ್ನು ದೊರಕಿಸಿಕೊಟ್ಟ. ಅಲ್ಲಿಂದ ಹಿಂದಿರುಗುತ್ತಿದ್ದಾಗ ಕೃಷ್ಣಾ ನದಿಯ ತೀರದಲ್ಲಿ ಬೀಡು ಬಿಟ್ಟಿದ್ದ; ತಂದೆ ಸೋಮೇಶ್ವರ ತುಂಗಭದ್ರಾ ನದಿಯಲ್ಲಿ ಮುಳುಗಿ ಸತ್ತನೆಂಬ ಸುದ್ದಿ ಅಲ್ಲಿಗೆ ಬಂದಿತು. ವಿಕ್ರಮಾದಿತ್ಯನಿಗೆ ಅಪಾರ ದುಃಖವಾಯಿತು. ತಂದೆಯ ಉತ್ತರಕ್ರಿಯೆಗಳನ್ನು ಮುಗಿಸಿ ಕಲ್ಯಾಣಕ್ಕೆ ಹಿಂತಿರುಗಿದ.

‘ನನಗೆ ಯುವರಾಜ ಪದವಿ ಬೇಡ, ಸೋಮೇಶ್ವರನಿಗೆ ಕೊಡಿ’ ಎಂದ ವಿಕ್ರಮಾದಿತ್ಯ.

ವಿಕ್ರಮಾದಿತ್ಯನ ಅಣ್ಣ ಎರಡನೆಯ ಸೋಮೇಶ್ವರನು ‘ಭುವನೈಕಮಲ್ಲ’ ಎಂಬ ಬಿರುದನ್ನು ಧರಿಸಿ ಪಟ್ಟಕ್ಕೆ ಬಂದ; ಇದು ೧೦೬೮ ರಲ್ಲಿ.

ಹಿರಿಯ ರಾಜ ತೀರಿಕೊಂಡಿದ್ದಾನೆ, ಹೊಸ ರಾಜನಿಗೆ ಇನ್ನೂ ಯುದ್ಧದ ಅನುಭವ ಇಲ್ಲ, ಚಾಳುಕ್ಯರ ಮೇಲೆ ಯುದ್ಧ ಮಾಡಲು ಇದೇ ಸರಿಯಾದ ಸಮಯ ಎಂದು ಶತ್ರುಗಳು ಯೋಚಿಸಿದರು. ಚೋಳರಾಜ ವೀರರಾಜೇಂದ್ರ ಚಾಳುಕ್ಯರ ಮೇಲೆ ಯುದ್ಧಕ್ಕೆ ಬಂದರು. ಚಾಳುಕ್ಯ ಸೇನೆ ಚೋಳರನ್ನು ಸೋಲಿಸಿ ಓಡಿಸಿತು; ವೀರರಾಜೇಂಧ್ರ ಓಡಿ ಹೋದ. ಇಮ್ಮಡಿ ಸೋಮೇಶ್ವರನು ದಕ್ಷಿಣ ರಾಜ್ಯವನ್ನು ಬೇರೆ ಬೇರೆ ಭಾಗಗಳನ್ನಾಗಿ ವಿಂಗಡಿಸಿದ; ಅವುಗಳ ಮೇಲ್ವಿಚಾರಣೆಗೆ ತಮ್ಮಂದಿರನ್ನು ನೇಮಿಸಿ ಕಳುಹಿಸಿದ. ಈಗ ಯುವರಾಜನಾಗಿದ್ದ ವಿಕ್ರಮಾದಿತ್ಯನು ಗಂಗವಾಡಿಗೂ ನಾಲ್ಕನೆಯ ಜಯಸಿಂಹನು ನೊಳಂಬಸಿಂದವಾಡಿಗೂ ರಾಜನ ಪ್ರತಿನಿಧಿಗಳಾದರು.

ತಮ್ಮನನ್ನು ನೆಚ್ಚದ ಅಣ್ಣ

ಮಾಳವದಲ್ಲಿ ವಿಕ್ರಮಾದಿತ್ಯನು ಜಯಸಿಂಹ ಎಂಬುವನಿಗೆ ಸಹಾಯ ಮಾಡಿ ರಾಜನನ್ನಾಗಿ ಮಾಡಿದ್ದ ಅಲ್ಲವೆ? ಜಯಸಿಂಹನ ಶತ್ರು ಉದಯಾದಿತ್ಯ ಅವನನ್ನು ಸೋಲಿಸಿ ರಾಜನಾದ. ಎರಡನೆಯ ಸೋಮೇಶ್ವರ ಜಯಸಿಂಹನಿಗೆ ಸಹಾಯ ಮಾಡಬೇಕಾಯಿತು. ಆದರೆ ಅವನಿಗೆ ತಮ್ಮ ವಿಕ್ರಮಾದಿತ್ಯನಲ್ಲಿ ನಂಬಿಕೆ ಸಾಲದು; ಅವನು ಮಾಳವದ ರಾಜನೊಡನೆ ಸ್ನೇಹ ಬೆಳೆಸಿ, ತುಂಬ ಬಲಶಾಲಿಯಾಗಬಹುದು, ತನಗೆ ತೊಂದರೆ ಮಾಡಬಹುದು ಎಂದು ಅನುಮಾನ. ತಾನೇ ಸೈನ್ಯ ತೆಗೆದುಕೊಂಡು ಜಯಸಿಂಹನ ಸಹಾಯಕ್ಕೆ ಹೋದ. ಆದರೆ ಉದಯಾದಿತ್ಯ ಅವನನ್ನು ಸೋಲಿಸಿದ . ರಾಜ ಅಪಮಾನದಿಂದ ಹಿಂದಕ್ಕೆ ಬಂದ.

ಚೋಳರಾಜನ ಅಳಿಯ

ಚೋಳರ ರಾಜ ವೀರರಾಜೇಂದ್ರ ಆಗಲೇ ಒಂದು ಬಾರಿ ಸೋತಿದ್ದ. ಸೋಮೇಶ್ವರ ಮಾಳವಕ್ಕೆ ಹೋಗಿದ್ದಾಗ ತಾನು ಚಾಳುಕ್ಯ ರಾಜ್ಯವನ್ನು ಗೆಲ್ಲಬಹುದೆಂದು ಮುತ್ತಿಗೆ ಹಾಕಿದ. ರಟ್ಟೆಪಾಡಿ ಎಂಬ ಸ್ಥಳವನ್ನು ಹಿಡಿದ. ಆದರೆ ಅವನು ಯುವರಾಜ ವಿಕ್ರಮಾದಿತ್ಯನ ಪರಾಕ್ರಮವನ್ನು ಮರೆತಿದ್ದ! ವಿಕ್ರಮಾದಿತ್ಯನು ಸೈನ್ಯವನ್ನು ತೆಗೆದುಕೊಂಡು ಅವನ ಮೇಲೆ ಬಿದ್ದ. ವೀರರಾಜೇಂದ್ರ ಯುದ್ಧ ಮಾಡದೆ, ಶಾಂತಿಯನ್ನು ಮಾಡಿಕೊಂಡ. ತನ್ನ ಮಗಳನ್ನು ವಿಕ್ರಮಾದಿತ್ಯನಿಗೆ ಕೊಟ್ಟು ಮದುವೆ ಮಾಡಿದ. ಚೋಳರ ವಶದಲ್ಲಿದ್ದ ಕರ್ನಾಟಕ ಪ್ರದೇಶವನ್ನೂ ಅವನಿಗೆ ಕೊಟ್ಟ.ವಿಕ್ರಮಾದಿತ್ಯನಿಗೂ ತನ್ನ ಅಣ್ಣನಿಗೆ ತನ್ನಲ್ಲಿ ನಂಬಿಕೆ ಇಲ್ಲ ಎಂಬುದು ತಿಳಿದಿತ್ತು. ಅಣ್ಣನ ಜೊತೆಗೆ ತುಂಬ ವಿರಸವಾದಾಗ ಚೋಳರ ರಾಜನ ಸಹಾಯ ತನಗಿರಲಿ ಎಂದು ಯೋಚಿಸಿ, ಅವನು ಮದುವೆಗೆ ಒಪ್ಪಿದ.

ಆದರೆ, ಅವನೊಂದು ಬಗೆದರೆ ವಿಧಿ ಬೇರೊಂದನ್ನು ಬಗೆಯಿತು. ಅವನಿಗೆ ಚೋಳರ ಸಹಾಯ ಸಿಕ್ಕುವುದಿರಲಿ, ಅವನೇ ಚೋಳರಾಜನ ಸಹಾಯಕ್ಕೆ ಹೋಗಬೇಕಾಯಿತು. ವೀರರಾಜೇಂದ್ರ ಮರಣ ಹೊಂದಿದ ಮೇಲೆ, ಜನರು ದಂಗೆ ಎದ್ದರು. ಅವನ ಮಗ, ವಿಕ್ರಮಾದಿತ್ಯನ ಭಾವ ಮೈದುನ, ಅಧಿರಾಜೇಂದ್ರನಿಗೆ ದಂಗೆಯನ್ನು ಅಡಗಿಸಲು ಸಾಧ್ಯವಾಗಲಿಲ್ಲ. ವಿಕ್ರಮಾದಿತ್ಯನೇ ಹೋಗಿ, ಅವನಿಗೆ ಸಹಾಯ ಮಾಡಿ, ಅವನಿಗೆ ಚೋಳ ಸಿಂಹಾಸನವನ್ನು ದೊರಕಿಸಿಕೊಟ್ಟ. (ಆದರೆ ಅಧಿರಾಜೇಂದ್ರ ಸಿಂಹಾಸನವನ್ನು ಬಹಳ ಕಾಲ ಉಳಿಸಿಕೊಳ್ಳಲಿಲ್ಲ. ಪೂರ್ವ ಚಾಳುಕ್ಯ ರಾಜ ಇಮ್ಮಡಿ ರಾಜೇಂದ್ರನು ಚೋಳರಾಜ್ಯವನ್ನು ಆಕ್ರಮಿಸಿಕೊಂಡ.)

ತ್ರಿಭುವನ ಮಲ್ಲ

ವಿಕ್ರಮಾದಿತ್ಯನ ಅಣ್ಣ ಎರಡನೆಯ ಸೋಮೇಶ್ವರ ರಾಜನಾಗಿದ್ದ, ಅಲ್ಲವೆ? ಅವನಿಗೆ ತಮ್ಮನ ವಿಷಯ ಅನುಮಾನವೇ, ಆದ್ದರಿಂದಲೇ ತಮ್ಮನನ್ನು ಕಳುಹಿಸದೆ ತಾನೇ ಮಾಳವದ ರಾಜನ ಸಹಾಯಕ್ಕೆ ಹೋದ, ಆದರೆ ಉದಯಾದಿತ್ಯನ ಕೈಯಲ್ಲಿ ಸೋತು ಬಂದ. ಪದೇ ಪದೇ ಯುದ್ಧಗಳು ನಡೆಯುತ್ತಿದ್ದ ಕಾಲ ಅದು. ಚಾಳುಕ್ಯ ರಾಜ್ಯವನ್ನು ನುಂಗುವುದಕ್ಕೆ ಕಾದು ಕುಳಿತವರು ಎಷ್ಟೋ ಜನ. ರಾಜ ಪರಾಕ್ರಮಿಯಲ್ಲದಿದ್ದರೆ ರಾಜ್ಯ ಕಳೆದುಕೊಳ್ಳುವ ಅಪಾಯ . ಅಷ್ಟೇ ಅಲ್ಲ, ಮತ್ತೆ ಮತ್ತೆ ಶತ್ರುಗಳು ಮುತ್ತುತ್ತಿದ್ದರೆ ಜನಗಳೂ ನೆಮ್ಮದಿಯಾಗಿ ಬದುಕುವ ಹಾಗಿಲ್ಲ. ಯಾವಾಗಲೂ ಗಂಡಾಂತರದ ನೆರಳಿನಲ್ಲೇ ಬಾಳಬೇಕು. ರಾಜ್ಯಕ್ಕೆ ಪರಾಕ್ರಮಶಾಲಿಯಾದ ರಾಜ, ಪ್ರಜೆಗಳಿಗೆ ರಕ್ಷಕನಾಗಬಲ್ಲ ರಾಜ ಬೇಕಾಗಿತ್ತು. ಎರಡನೆಯ ಸೋಮೇಶ್ವರನಿಗೆ ಆ ಶೌರ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿತ್ತು. ಅಲ್ಲದೆ ರಾಜ್ಯದ ಆಡಳಿತಕ್ಕೂ ತಕ್ಕಷ್ಟು ಗಮನ ಕೊಡುತ್ತಿರಲಿಲ್ಲ. ವಿಕ್ರಮಾದಿತ್ಯ ಹೆಸರಿಗೆ ತಕ್ಕಂತೆ ಪರಾಕ್ರಮಿ; ಪ್ರಜೆಗಳು ಚೆನ್ನಾಗಿ ಬದುಕಿ ಬಾಳಬೇಕು ಎಂದು ಅವನ ಆಸೆ. ರಾಜ್ಯದ ಪರಿಸ್ಥಿತಿ ಹದಗೆಡುತ್ತ ಬಂದಿತು. ತಾನೇ ಆಡಳಿತವನ್ನು ಕೈಯಲ್ಲಿ ತೆಗೆದುಕೊಳ್ಳಲು ಯೋಚಿಸಿದ.

ಆದರೆ ಇದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ಏನೆಂದರೂ ಸೋಮೇಶ್ವರನ ರಾಜ. ಅವನಿಗೆ ಬೇಕಾದಷ್ಟು ಬೆಂಬಲ ಇತ್ತು. ವಿಕ್ರಮಾದಿತ್ಯನು ಪ್ರತಿ ಹೆಜ್ಜೆಯನ್ನೂ ಯೋಚಿಸಿ ಎಚ್ಚರಿಕೆಯಿಂದ ಇಡಬೇಕಾಗಿತ್ತು.

ಹಲವಾರು ಸಣ್ಣ ರಾಜರಿಗೆ ಸೋಮೇಶ್ವರನಲ್ಲಿ ನಿಷ್ಠೆ ಇದ್ದಿತು. ಅವರನ್ನು ಒಲಿಸಿಕೊಂಡರೆ ಅಣ್ಣನನ್ನು ಸೋಲಿಸುವುದು ಸುಲಭವಾಗುತ್ತದೆ. ಎಂದು ವಿಕ್ರಮಾದಿತ್ಯ ಭಾವಿಸಿದ. ಗೋವೆಯ ರಾಜ ಕದಂಬ ಜಯಕೀರ್ತಿಯ ಮಗಳನ್ನು ಮದುವೆಯಾಗಿ, ಅವನ ಬೆಂಬಲ ಪಡೆದ. ಇನ್ನೂ ಹೊಲವರು ರಾಜರ ಸ್ನೇಹ ಬೆಳೆಸಿದೆ . ಕೊನೆಗೆ ‘ತ್ರಿಭುವನ ಮಲ್ಲ’ ಎಂಬ ಬಿರುದನ್ನು ಧರಿಸಿದ.

ಚಾಳುಕ್ಯವಿಕ್ರಮ ಶಕೆ

ಸಾಮಾನ್ಯವಾಗಿ ‘ತ್ರಿಭುವನ ಮಲ್ಲ’ ಎಂಬುದು ಚಕ್ರವರ್ತಿಗಳು ಉಪಯೋಗಿಸುತ್ತಿದ್ದ ಬಿರುದು.  ವಿಕ್ರಮಾದಿತ್ಯನು ಇದನ್ನು ಧರಿಸಿದಾಗ, ಅಣ್ಣ ಸೋಮೇಶ್ವರನಿಗೆ ಕಳವಳವಾಯಿತು. ವಿಕ್ರಮಾದಿತ್ಯನು ಹಲವರು ಸಾಮಂತ ರಾಜರ ಸ್ನೇಹವನ್ನು ಪಡೆದ. ಆದುದರಿಂದ ತನಗೆ ಅಪಾಯ ಎಂದು ಸೋಮೇಶ್ವರ ಭಾವಿಸಿದ . ತಾನೂ ಹಲವರ ಸ್ನೇಹವನ್ನು ಸಂಪಾದಿಸಿದ.

ತನ್ನ ವಂಶದ ವೈರಿಯಾದ ಚೋಳರಾಜ ಮೊದಲನೆಯ ಕುಲೋತ್ತುಂಗನೊಡನೆ ಸ್ನೇಹ ಮಾಡಿಕೊಂಡ. ಇದರಿಂದ ಯುದ್ಧವಾದರೆ ವಿಕ್ರಮಾದಿತ್ಯ ಒಂದು ಕಡೆ ಅಣ್ಣನೊಡನೆ, ಇನ್ನೊಂದು ಕಡೆ ಚೋಳರಾಜನೊಡನೆ ಹೋರಾಡಬೇಕಾಗುತ್ತಿತ್ತು.

ಕುಲೋತ್ತುಂಗ ವಿಕ್ರಮಾದಿತ್ಯನಿಗೆ ಸೇರಿದ ಕೋಲಾರ ಪ್ರಾಂತವನ್ನು ಮುತ್ತಿದ. ಯುದ್ಧ ಪ್ರಾರಂಭವಾಯಿತು. ವಿಕ್ರಮಾದಿತ್ಯ ಚೋಳ ಸೈನ್ಯವನ್ನು ಸೋಲಿಸಿ ಓಡಿಸಿದ . ಮತ್ತೆ ಕುಲೋತ್ತುಂಗ ಚೇತರಿಸಿಕೊಂಡು ಸೋಮೇಶ್ವರನಿಗೆ ಸಹಾಯ ಮಾಡುವ ಸ್ಥಿತಿಗೆ ಬರುವ ಮೊದಲೇ ತಾನು ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳಬೇಕು ಎಂದು ವಿಕ್ರಮಾದಿತ್ಯ ಯೋಚಿಸಿದ. ಅಣ್ಣನ ಮೇಲೆ ಯುದ್ಧಕ್ಕೆ ಹೊರಟ. ಸೋಮೇಶ್ವರ ಸೋತು ಸೆರೆಸಿಕ್ಕ. ಮುಂದೆ ಅವನಿಗೇನಾಯಿತು ಎಂಬುದು ತಿಳಿದಿಲ್ಲ.

ಈ ಹೊತ್ತಿಗಾಗಲೇ ವಿಕ್ರಮಾದಿತ್ಯ ಎಳೆಯ ವಯಸ್ಸಿನಿಂದ ಇಪ್ಪತ್ತು ವರ್ಷಗಳ ಕಾಲ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದ . ತಂದೆಗಾಗಿ, ಅಣ್ಣನಿಗಾಗಿ ರಾಜ್ಯವನ್ನು ರಕ್ಷಿಸಿದ್ದ. ಸೋಲು ಎಂಬುದು ಅವನ ಬಳಿ ಸುಳಿದದ್ದೇ ಇಲ್ಲ.

ಪುರುಷಸಿಂಹ, ದೈವಭಕ್ತ, ಪ್ರಜಾಹಿತೈಷಿ, ಸಂಸ್ಕೃತಿಯ ಆಶ್ರಯದಾತ-ಶಕಪುರುಷ ವಿಕ್ರಮಾದಿತ್ಯ.

ಈ ಅಸಮಾನ ಪರಾಕ್ರಮಿಯ ಪಟ್ಟಾಭಿಷೇಕ ಪಿಂಗಳ ನಾಮ ಸಂವತ್ಸರದ ಚೈತ್ರ ಶುದ್ಧ ಪಾಡ್ಯಮಿಯಂದು (೨೬-೨-೧೦೭೭) ನಡೆಯಿತು. ಅಂದಿನಿಂದ ‘ಚಾಳುಕ್ಯ ವಿಕ್ರಮ ಶಕೆ’ ಪ್ರಾರಂಭವಾಯಿತು.

ಕುಲೋತ್ತುಂಗ

ವಿಕ್ರಮಾದಿತ್ಯನ ಯುಗ ಭಾರತದಲ್ಲಿ ರಾಜ್ಯ-ರಾಜ್ಯಗಳ ನಡುವೆ ಮತ್ತೆ ಮತ್ತೆ ಯುದ್ಧಗಳಾಗುತ್ತಿದ್ದ ಯುಗ. ವಿಕ್ರಮಾದಿತ್ಯನಿಗೂ ಪ್ರಬಲವಾದ ಶತ್ರುಗಳಿದ್ದರು. ಅವನನ್ನು ಕಂಡು ಹಲವು ರಾಜರಿಗೆ ಅಸೂಯೆ . ಆದರೂ ವಿಕ್ರಮಾದಿತ್ಯನ ರಾಜ್ಯಭಾರದ ಬಹು ವರ್ಷಗಳಲ್ಲಿ ಚಾಳುಕ್ಯ ರಾಜ್ಯದಲ್ಲಿ ಸುಖಶಾಂತಿ ನೆಲೆಸಿದ್ದಿತು.  ಕುಲೋತ್ತುಂಗನು ವಿಕ್ರಮಾದಿತ್ಯನ ಏಳಿಗೆಯನ್ನು ಮೊಟಕು ಮಾಡಲು ಬಹು ಪ್ರಯತ್ನಪಟ್ಟ. ವಿಕ್ರಮಾದಿತ್ಯನೂ ಅವನ ಬಲವನ್ನು ಕುಗ್ಗಿಸಲು ಪ್ರಯತ್ನಿಸಿದ. ಹೀಗೆ ಕೆಲವು ಕಾಲ ನಡೆದನಂತರ ಇಬ್ಬರೂ ಇಂತಹ ಪ್ರಯತ್ನಗಳನ್ನು ಕೈಬಿಟ್ಟರು. ಈ ಸಮಸ್ಥಿತಿ ವಿಕ್ರಮಾದಿತ್ಯನ – ಕುಲೋತ್ತುಂಗ ಇವರ ಆಳ್ವಿಕೆಯ ಸುಮಾರು ನಲವತ್ತು ವರ್ಷಗಳ ಕಾಲ ಮುಂದುವರಿಯಿತು. ವಿಕ್ರಮನ ಆಳ್ವಿಕೆಯ ಕಡೆಯ ವರ್ಷಗಳಲ್ಲಿ ಶಾಂತಿಯು ಕದಡಿ ಮತ್ತೆ ಮತ್ತೆ ಬಲ ಪ್ರಯೋಗ ಮಾಡಲೇಬೇಕಾಯಿತು. ವೆಂಗಿ ಎಂಬ ರಾಜ್ಯವು ಚೋಳರ ಕುಲೋತ್ತುಂಗನ ಅಧೀನವಾಗಿತ್ತು. ಕುಲೋತ್ತುಂಗ ಸತ್ತಮೇಲೆ ವಿಕ್ರಮಾದಿತ್ಯನು ತನ್ನ ಸೈನ್ಯವನ್ನು ಕಳುಹಿಸಿ ವೆಂಗಿಯನ್ನು ವಶಮಾಡಿಕೊಂಡನು.

ನೆಚ್ಚಿನ ತಮ್ಮನೇ ಶತ್ರು!

ವಿಕ್ರಮಾದಿತ್ಯನ ತಮ್ಮ ನಾಲ್ವಡಿ ಜಯಸಿಂಹ ಎನ್ನುವವನು. ವಿಕ್ರಮಾದಿತ್ಯನು ಸಿಂಹಾಸನವನ್ನು ಏರಿದ ಮೇಲೆ ತಮ್ಮನನ್ನು ಪ್ರೀತಿಯಿಂದಲೇ ಕಂಡನು. ತಮ್ಮನೂ ಅಣ್ಣನಿಗೆ ಬೆಂಬಲವಾಗಿಯೇ ಇದ್ದನು. ವಿಕ್ರಮಾದಿತ್ಯನು ತಮ್ಮನಿಗೆ ಯುವರಾಜನ ಪದವಿಯನ್ನು ಕೊಟ್ಟು ಬನವಾಸಿ ಎಂಬ ಪ್ರದೇಶಕ್ಕೆ ತನ್ನ ಪ್ರತಿನಿಧಿ ಎಂದು ನೇಮಿಸಿದನು. ಅವನಲ್ಲಿ ಸಂಪೂರ್ಣ ನಂಬಿಕೆಯನ್ನು ಇಟ್ಟಿದ್ದನು. ತಾನು ಜಯಿಸಿದ ಹಲವು ಪ್ರದೇಶಗಳನ್ನು ತಮ್ಮನ ಪ್ರಾಂತಕ್ಕೆ ಸೇರಿಸಿ, ಅವನನ್ನು ದೊಡ್ಡ ಪ್ರಾಂತಕ್ಕೆ ಆಡಳಿತದ ಅಧಿಕಾರಿಯನ್ನಾಗಿ ಮಾಡಿದ.

ಅಧಿಕಾರ ಬಂದರೆ ಮನುಷ್ಯ ಕೆಡುತ್ತಾನೆ, ಸಂಪೂರ್ಣ ಅಧಿಕಾರ ಬಂದರೆ ಸಂಪೂರ್ಣವಾಗಿ ಕೆಡುತ್ತಾನೆ ಎನ್ನುತ್ತಾರೆ. ಜಯಸಿಂಹನ ವಿಷಯದಲ್ಲಿ ಹೀಗಾಯಿತು. ಅವನು ಒಳ್ಳೆಯವನಾಗಿದ್ದ. ಅಧಿಕಾರ ಹೆಚ್ಚುತ್ತ ಹೋದಂತೆ ದುರಾಸೆ ಹೆಚ್ಚಾಯಿತು. ಅಣ್ಣನನ್ನು ಕಂಡರೆ ಹೊಟ್ಟೆ ಕಿಚ್ಚು. ಅಣ್ಣನ ವಿರುದ್ಧ ಗುಟ್ಟಾಗಿ ಪಿತೂರಿ ಮಾಡಲು ಪ್ರಾರಂಭಿಸಿದ. ಅಷ್ಟೇ ಅಲ್ಲದೆ, ಜನಗಳ ಯೋಗಕ್ಷೇಮವನ್ನು ಸಂಪೂರ್ಣವಾಗಿ ಮರೆತ. ತಾನು ರಾಜನ ಪ್ರತಿನಿಧಿ, ಜನರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೋಸ್ಕರ ರಾಜ ತನ್ನನ್ನು ನೇಮಿಸಿದ್ದಾನೆ ಎಂಬುದನ್ನು ಮರೆತೇಬಿಟ್ಟ. ಪ್ರಜೆಗಳನ್ನು ಹಿಂಸಿಸಲು ಪ್ರಾರಂಭಿಸಿದ. ಐಶ್ವರ್ಯವಂತರನ್ನು ಕಾಡಿ ಅವರ ಹಣವನ್ನು ದೋಚಿಕೊಂಡ. ಅಣ್ಣನ ವಿರುದ್ಧ ಯುದ್ಧ ಮಾಡಲು ತನ್ನ ಸೈನ್ಯವನ್ನು ಹೆಚ್ಚಿಸಿದ. ಕಾಡಿನಲ್ಲಿ ವಾಸ ಮಾಡುತ್ತಿದ್ದ ಕ್ರೂರ ಪಂಗಡಗಳ ಜನರ ಸ್ನೇಹವನ್ನು ಬೆಳೆಸಿದ. ಅಣ್ಣನ ಕಡೆಯವರಲ್ಲಿ ಜಗಳವನ್ನು ತಂದುಹಾಕಲು ಪ್ರಯತ್ನಿಸಿದ.

ವಿಕ್ರಮಾದಿತ್ಯನಲ್ಲಿ ವಿಶ್ವಾಸ, ನಿಷ್ಠೆಗಳಿದ್ದವರು ಇದನ್ನು ರಾಜನಿಗೆ ತಿಳಿಸಿದರು.

ನಂಬಬಹುದೆ?

ತನ್ನ ಪ್ರೀತಿಯ ತಮ್ಮ, ತಾನು ನಂಬಿದ ತಮ್ಮ ಹೀಗೆ ನಡೆದುಕೊಳ್ಳುತ್ತಿದ್ದಾನೆ ಎಂದು ನಂಬುವುದಕ್ಕೆ ವಿಕ್ರಮಾದಿತ್ಯನಿಗೆ ಸಾಧ್ಯವಾಗಲಿಲ್ಲ. ವಿಕ್ರಮಾದಿತ್ಯ ಎಷ್ಟೇ ನಂಬಿಕೆಯಿಂದ ನಡೆದುಕೊಂಡಿದ್ದರೂ ಅವನ ಅಣ್ಣ ಸೋಮೇಶ್ವರ ಅವನನ್ನು ನಂಬಲಿಲ್ಲ. ಅಣ್ಣ ತಮ್ಮಂದಿರಿಗೆ ಯುದ್ಧವೇ ಆಯಿತು. ತನ್ನ ತಮ್ಮನೊಂದಿಗೂ ಯುದ್ಧ ಮಾಡುವುದು ಅವನಿಗೆ ಬೇಕಿರಲಿಲ್ಲ. ಸೋಮೇಶ್ವರ ವಿಕ್ರಮಾದಿತ್ಯನನ್ನು ತಪ್ಪು ತಿಳಿದುಕೊಂಡಿದ್ದ, ಹಾಗೆಯೇ ತಾನೂ ತನ್ನ ತಮ್ಮನನ್ನು ತಪ್ಪು ತಿಳಿದುಕೊಳ್ಳುತ್ತಿರಬಹುದೇ ಎಂದೂ ವಿಕ್ರಮಾದಿತ್ಯನಿಗೆ ಎನ್ನಿಸಿತು. ನಿಜವನ್ನು ಗುಟ್ಟಾಗಿ ತಿಳಿದು ಬರಲು ತನ್ನ ಕೆಲವರು ಅಧಿಕಾರಿಗಳನ್ನು ಕಳುಹಿಸಿದ.

ಆ ಗೂಢಚಾರರು ಹಿಂದಕ್ಕೆ ಬಂದು, ಜಯಸಿಂಹನು ವಿಕ್ರಮಾದಿತ್ಯನಿಗೆ ವಿರುದ್ಧವಾಗಿ  ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದರು.

ಪ್ರೀತಿಯನ್ನು ದೌರ್ಬಲ್ಯ ಎಂದುಕೊಂಡರೆ?

ಅರಸನಿಗೆ ತುಂಬ ವಿಷಾಧವಾಯಿತು. ತಮ್ಮನ ಮೇಲೆ ಬಲ ಉಪಯೋಗಿಸಲು ಇಷ್ಟ ಬರಲಿಲ್ಲ. ತಮ್ಮನಿಗೆ ಒಂದು ಸಂದೇಶವನ್ನು ಕಳುಹಿಸಿದ. ತಮ್ಮನಿಗೆ ‘ರಾಜ’ ಎಂಬ ಹೆಸರಿಲ್ಲದಿದ್ದರೂ ರಾಜನ ಕೆಲಸವನ್ನೆಲ್ಲ ಅವನೇ ಮಾಡುತ್ತಿದ್ದ ಎಂಬುದನ್ನು ಜ್ಞಾಪಿಸಿದ; ಅಣ್ಣ-ತಮ್ಮ ಜಗಳವಾಡುವುದರಿಂದ ಪ್ರಯೋಜನವಿಲ್ಲ, ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದು ಬುದ್ಧಿವಾದ ಹೇಳಿದ.

ಜಯಸಿಂಹ ಅಣ್ಣನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲ; ಅಣ್ಣನಿಗೆ ಶಕ್ತಿ ಸಾಲದು, ಆದುದರಿಂದ ಹೀಗೆ ಒಳ್ಳೆಯ ಮಾತನಾಡುತ್ತಿದ್ದಾನೆ ಎಂದುಕೊಂಡ. ಅಣ್ಣನನ್ನು ಯುದ್ಧದಲ್ಲಿ ಸೋಲಿಸಿಬಿಡುತ್ತೇನೆ ಎಂದು ಸೈನ್ಯವನ್ನು ತೆಗೆದುಕೊಂಡು ಹೊರಟ. ಕೃಷ್ಣಾನದಿಯವರೆಗೆ ಯಾವ ವಿರೋಧವಿಲ್ಲದೆ ಮುಂದಕ್ಕೆ ನುಗ್ಗಿದ. ವಿಕ್ರಮಾದಿತ್ಯನ ಕೈಕೆಳಗಿನ ಕೆಲವು ಸಣ್ಣ ಲಪುಟ್ಟ ರಾಜರು ಅವನ ಜೊತೆಗೆ ಸೇರಿಕೊಮಡರು. ಜಯಸಿಂಹನಿಗೆ ಇನ್ನೂ ಧೈರ್ಯ ಬಂದಿತು. ತನ್ನ ವಶವಾದ ಪ್ರದೇಶದಲ್ಲಿ ಜನರನ್ನು ಲೂಟಿ ಮಾಡಿದ. ಅವರಿಗೆ ಹಿಂಸೆ ಕೊಟ್ಟ. ಅಣ್ಣನಿಗೆ ಅವಮಾನವಾಗುವಂತೆ ಒಂದು ಸಂದೇಶವನ್ನು ಕಳುಹಿಸಿದ.

ವಿಕ್ರಮಾದಿತ್ಯನು ತಾನೇ ಸೈನ್ಯವನ್ನು ತೆಗೆದುಕೊಂಡು ಕೃಷ್ಣನದಿಯ ತೀರಕ್ಕೆ ಬಂದನು. ಆಗಲೂ ತಮ್ಮನೊಡನೆ ಯುದ್ಧ ಮಾಡಲು ಮನಸ್ಸಿರಲಿಲ್ಲ. ಅವನ ಜೊತೆಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿದ. ಪ್ರಯೋಜನವಾಗಲಿಲ್ಲ. ಜಯಸಿಂಹನು ಅಣ್ಣನಿಗೆ ಶಕ್ತಿ ಇಲ್ಲ ಎಂದು ನಂಬಿ ಹೆಮ್ಮೆಯಿಂದ ಬೀಗುತ್ತಿದ್ದ . ಯುದ್ಧ ಪ್ರಾರಂಭವಾಯಿತು . ಮೊದಮೊದಲು ಜಯಸಿಂಹನ ಸೈನ್ಯಕ್ಕೆ ಮೇಲುಗೈ ಆಯಿತು, ವಿಕ್ರಮಾದಿತ್ಯನ ಸೈನಿಕರು ಓಡಲಾರಂಭಿಸಿದರು. ವಿಕ್ರಮಾದಿತ್ಯನೇ ಒಂದು ಬಲಿಷ್ಠವಾದ ಆನೆಯನ್ನೇರಿ ಮುಂದಕ್ಕೆ ನಡೆದ; ಓಡುತ್ತಿದ್ದ ಸೈನಿಕರನ್ನು ಒಂದುಗೂಡಿಸಿ ಹುರಿದುಂಬಿಸಿದ . ಜಯಸಿಂಹನ ಸೈನ್ಯದ ಮೇಲೆ ಎರಗಿದ. ಜಯಸಿಂಹನ ಸೈನ್ಯ ಹೆದರಿತು. ಜಯಸಿಂಹ ಸೋತು ಯುದ್ಧರಂಗದಿಂದ ಓಡಿದ . ಹತ್ತಿರದ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಅವನ ಆನೆ ಮತ್ತು ಕುದುರೆಗಳು ವಿಕ್ರಮಾದಿತ್ಯನ ವಶವಾದುವು. ಅವನ ಹೆಂಡತಿಯರು ಸೆರೆಸಿಕ್ಕರು. ಕಡೆಗೆ ಜಯಸಿಂಹನೂ ವಿಕ್ರಮಾದಿತ್ಯನ ಸೈನಿಕರ ವಶವಾದ.

ಪುರುಷಸಿಂಹ ವಾತ್ಸಲ್ಯದ ಮೂರ್ತಿ

ಸೈನಿಕರು ಸರಪಳಿ ಹಾಕಿ ಜಯಸಿಂಹನನ್ನು ವಿಕ್ರಮಾದಿತ್ಯನ ಮುಂದೆ ತಂದು ನಿಲ್ಲಿಸಿದರು.

ಜಯಸಿಂಹ ತಲೆ ತಗ್ಗಿಸಿ ನಿಂತ. ಹಿಂದಿನದೆಲ್ಲ ಅವನಿಗೆ ನೆನಪಾಯಿತು. ಅಣ್ಣ ವಿಕ್ರಮಾದಿತ್ಯನು ಅವನಿಗೆ ಯುವರಾಜ ಪದವಿಯನ್ನು ಕೊಟ್ಟಿದ್ದ, ಅಣ್ಣನೇ ಗೆದ್ದ ಪ್ರದೇಶಗಳನ್ನು ತಮ್ಮನ ಆಡಳಿತಕ್ಕೆ ಸೇರಿಸಿದ್ದ. ತಮ್ಮ ಅಣ್ಣನಿಗೆ ವಿರುದ್ಧವಾಗಿ ಸಂಚು ಮಾಡಿದ, ಜನರಿಗೆ ಪೀಡೆಯಾದ – ಇಷ್ಟಾದರೂ ಅಣ್ಣ ಅವನಿಗೆ ಪ್ರೀತಿಯಿಂದ ಬುದ್ಧಿವಾದದ ಸಂದೇಶವನ್ನೇ ಕಳುಹಿಸಿದ. ತಾನು ಮಾಡಿದ್ದೇನು? ಅಣ್ಣನಿಗೇ ಅವಮಾನ ಮಾಡಿ ಉತ್ತರ ಕಳುಹಿಸಿದೆ, ಅಣ್ಣ ಕೈಯಲ್ಲಾಗದವನು ಎಂದೆ.  ಅಣ್ಣ ಏನು ಶಿಕ್ಷೆ ವಿಧಿಸಿದರೂ ನ್ಯಾಯವೇ. ಶಿಕ್ಷೆ ವಿಧಿಸದೆ ಬಿಡುತ್ತಾನೆಯೆ? ತಾನು ಮಾಡಿದ ತಪ್ಪುಗಳು ಒಂದೇ, ಎರಡೇ ?

ಜಯಸಿಂಹ ಅಪಮಾನದಿಂದ ತಲೆ ತಗ್ಗಿಸಿದ, ಭಯದಿಂದ ನಡುಗಿದ.

ವಿಕ್ರಮಾದಿತ್ಯನೂ ತಮ್ಮನನ್ನು ದೃಷ್ಟಿಸಿ ನೋಡಿದ ‘ಅಯ್ಯೋ’ ಎನ್ನಿಸಿತು. ಅವನ ಸರಪಳಿಯನ್ನು ತೆಗೆಸಿ ಹಾಕಿದ. ಪ್ರೀತಿಯ ಮಾತುಗಳನಾಡಿದ. “ಹೆದರಿಕೊಳ್ಳಬೇಡ, ನಿನಗೇನೂ ಅಪಾಯವಿಲ್ಲ” ಎಂದು ಅಭಯ ಕೊಟ್ಟ.

ಕೆಲವರಿಗೆ ಅಧಿಕಾರ ಎಂದರೆ ಮದ್ಯವಿದ್ದ ಹಾಗೆ. ಅದಿಲ್ಲದಿದ್ದಾಗ ವಿವೇಕವಂತರಾಗಿರುತ್ತಾರೆ, ಚೆನ್ನಾಗಿ ನಡೆಯುತ್ತಾರೆ. ಅಧಿಕಾರ ಸಿಕ್ಕಿದರೆ ಹುಚ್ಚರ ಹಾಗೆ ಆಡುತ್ತಾರೆ. ಜಯಸಿಂಹ ಅಂತಹವನು. ಮೊದಲು ಅಣ್ಣನಲ್ಲಿ ಪ್ರೀತಿಯಿಂದ, ನಿಷ್ಠೆಯಿಂದ ಇದ್ದ . ಅಧಿಕಾರ ಹೆಚ್ಚಿದಂತೆ ಮದ್ಯ ಕುಡಿದವನ ಹಾಗೆ ಆದ.

ದ್ರೋಹ ಮಾಡಿದ ತಮ್ಮನಿಗೆ ‘ಹೆದರಿಕೊಳ್ಳಬೇಡ’ ಎಂದ ವಿಕ್ರಮಾದಿತ್ಯ.

ವಿಕ್ರಮಾದಿತ್ಯ ಅವನನ್ನು ಕ್ಷಮಿಸಿದ. ಆದರೆ ಮತ್ತೆ ಅವನಿಗೆ ಅಧಿಕಾರದ ಮದ್ಯವನ್ನು ಕೊಡಲಿಲ್ಲ. ಜಯ ಸಿಂಹನ ಮಗ ಮಲ್ಲಿಕಾರ್ಜುನ ಎಂಬವನಿಗೆ ತಂದೆಯ ಸ್ಥಾನವನ್ನು ಕೊಟ್ಟ.

ಇದು ಆದದ್ದು ೧೦೮೨ರಲ್ಲಿ.

ನಿಜವಾಗಿ ತ್ರಿಭುವನಮಲ್ಲನೇ!

ವಿಕ್ರಮಾದಿತ್ಯನು ಅನೇಕ ಯುದ್ಧಗಳನ್ನು ಮಾಡಬೇಕಾಯಿತು. ಮಾಳವದ ರಾಜನಾಗಿದ್ದ ಉದಯಾದಿತ್ಯನ ಮಕ್ಕಳು ಜಗದ್ದೇವ, ಲಕ್ಷ್ಮಣದೇವ ಮತ್ತು ನರವರ್ಮ ಇವರಲ್ಲಿ ಜಗಳ ಪ್ರಾರಂಭವಾಯಿತು. ವಿಕ್ರಮಾದಿತ್ಯನು ಜಗದ್ದೇವನಿಗೆ ಸಹಾಯ ಮಾಡಿ ಅವನನ್ನು ರಾಜನನ್ನಾಗಿ ಮಾಡಿದ. ಅನಂತರ ನರವರ್ಮನು ಸಿಂಹಾಸನವನ್ನು ಕಸಿದುಕೊಂಡಾಗ ಮತ್ತೆ ದಂಡೆತ್ತಿ ಹೋಗಿ ಜಗದ್ದೇವನಿಗೆ ರಾಜ್ಯ ಕೊಡಿಸಿದ. ಜಗದ್ದೇವನನ್ನು ತನ್ನ ಮಗನಂತೆ ಪ್ರೀತಿಯಿಂದ ಕಂಡ. ಅವನ ಪ್ರೀತಿ ವಾತ್ಸಲ್ಯಕ್ಕೆ ಮನ ಸೋತ ಜಗದ್ದೇವ ತನ್ನ ಸಿಂಹಾಸನದ ಹಕ್ಕನ್ನು ಬಿಟ್ಟು ವಿಕ್ರಮಾದಿತ್ಯನ ಆಸ್ಥಾನವನ್ನೆ ಸೇರಿದ . ವಿಕ್ರಮಾದಿತ್ಯನು ಇವನನ್ನು ಪರಮಾರರಿಂದ ಗೆದ್ದ ಪ್ರದೇಶದ ಮೇಲ್ವಿಚಾರಣೆಗೆ ನೇಮಿಸಿದ. ಜಗದ್ದೇವನು ಅನೇಕ ಕದನಗಳಲ್ಲಿ ವಿಕ್ರಮಾದಿತ್ಯನ ಕಡೆ ಯುದ್ಧ ಮಾಡಿದ.

ವಿಕ್ರಮಾದಿತ್ಯನು ತನ್ನ ಮತ್ತಿತರ ಸಾಮಂತ ಅರಸರು ಹೊಯ್ಸಳರೊಂದಿಗೂ ಕಾದಬೇಕಾಯಿತು. ಹೊಯ್ಸಳರ ರಾಜವಂಶದಲ್ಲಿ ವಿಷ್ಣುವರ್ಧನ ಎಂಬವನೊಬ್ಬ ಅರಸ. ಈತನು ಸಿಂಹಾಸನಕ್ಕೆ ಬಂದ ಐದಾರು ವರ್ಷಗಳಲ್ಲಿ ರಾಜ್ಯವನ್ನು ವಿಸ್ತರಿಸಿ ‘ತ್ರಿಭುವನ ಮಲ್ಲ’ ಎಂಬ ಬಿರುದನ್ನೂ ಧರಿಸಿದ. ಕಡೆಗೆ ತನ್ನ ಸೈನ್ಯದೊಂದಿಗೆ ತುಂಗಭದ್ರ ನದಿಯನ್ನೂ ದಾಟಿದ. ಈ ಹೊತ್ತಿಗೆ ವಿಕ್ರಮಾದಿತ್ಯ ಆಗಲೇ ೪೫ ವರ್ಷಗಳ ರಾಜ್ಯವಾಳಿದ್ದು ಮುದುಕನಾಗಿದ್ದ. ಆದರೆ ರಾಜ್ಯಕ್ಕೆ ಅಪಾಯ ಬಂದಾಗ ಅವನು ತರುಣನೇ ಆದ. ೧೧೨೨ ರಲ್ಲಿ ವಿಷ್ಣುವರ್ಧನನನ್ನೂ ಅವನಿಗೆ ಸಹಾಯಕರಾಗಿದ್ದ ಇತರ ರಾಜರನ್ನೂ ಸೋಲಿಸಿದ; ತಾನೇ ‘ವಿಷ್ಣುವರ್ಧನ’ ಎಂಬ ಬಿರುದನ್ನು ಧರಿಸಿದ. ಇವಲ್ಲದೆ ಇನ್ನೂ ಹಲವು ಯುದ್ಧಗಳನ್ನು ವಿಕ್ರಮಾದಿತ್ಯ ನಿರ್ವಹಿಸಬೇಕಾಯಿತು.

ವಿಕ್ರಮಾದಿತ್ಯನ ಯುಗದಲ್ಲಿ ಪ್ರತಿ ರಾಜ್ಯಕ್ಕೆ ಎಷ್ಟೊಂದು ಅಪಾಯವಿರುತ್ತಿತ್ತು ಎಂಬುದು ಇವುಗಳಿಂದ ಗೊತ್ತಾಗುತ್ತದೆ. ವಿಕ್ರಮಾದಿತ್ಯ ವೀರರಲ್ಲಿ ವೀರ, ಸೋಲೆಂಬುದೇ ಇಲ್ಲದವನು. ಆದರೆ ಯುದ್ಧ ನಡೆಸಬೇಕು, ರಕ್ತ ಹರಿಸಬೇಕು ಎಂಬ ಆಸೆಯೇನೂ ಇರಲಿಲ್ಲ. ಆದರೂ ಚಿಕ್ಕ ವಯಸ್ಸಿನಿಂದ ಮುಪ್ಪಿನವರೆಗೆ ಯುದ್ಧ ಮಾಡುತ್ತಲೇ ಇರಬೇಕಾಯಿತು. ದಕ್ಷಿಣದಲ್ಲಿ ಹಾಸನ, ತುಮಕೂರು ಮತ್ತು ಕಡಪ ಪ್ರಾಂತಗಳವರೆಗೆ, ಉತ್ತರದಲ್ಲಿ ನರ್ಮದಾ ನದಿಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದ. ಸ್ವತಃ ಸೈನ್ಯದ ನಾಯಕನಾಗಿ, ಸೈನಿಕರಿಗೆ ಸ್ಫೂರ್ತಿ ಬರುವಂಥೆ ಹೋರಾಡಿ, ಸೈನ್ಯವನ್ನು ಬುದ್ಧಿವಂತಿಕೆಯಿಂದ ನಡೆಸಿದ. ‘ವಿಕ್ರಮಾದಿತ್ಯ’, ‘ತ್ರಿಭುವನ ಮಲ್ಲ’ ಎಂಬ ಬಿರುದುಗಳನ್ನು ಸಾರ್ಥಕಮಾಡಿಕೊಂಡ.

ಮಹಾರಾಜಹೃದಯಗಳ ರಾಜ

ರಾಜನಾದವನು ತುಂಬ ಬಲಶಾಲಿ ಮಾತ್ರ ಆಗಿದ್ದರೆ ಸಾಲದು, ಅಲ್ಲವೆ? ಅವನು ತುಂಬ ಬಲಶಾಲಿಯಾಗಿದ್ದು, ಶ್ರೀಮಂತನಾಗಿದ್ದು ಪ್ರಜೆಗಳ ಹಿತವನ್ನೇ ಮರೆತರೆ ಪ್ರಯೋಜನವೇನು? ರಾಜ್ಯದ ಆಡಳಿತವನ್ನು ನಡೆಸುವವರು ಜನರ ಸುಖ ಸಂತೋಷವನ್ನು ಮುಖ್ಯ ಗುರಿಯನ್ನಾಗಿ ಇಟ್ಟುಕೊಳ್ಳಬೇಕು. ಅಧಿಕಾರ, ಐಶ್ವರ್ಯ ಎಲ್ಲ ಇದ್ದಾಗಲೂ ತನ್ನ ಸುಖ-ವೈಭವ ಇವನ್ನೆ ಯಾರು ಯೋಚಿಸುವುದಿಲ್ಲವೋ, ಸಾಮಾನ್ಯ ಜನರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾರೋ, ಅವರು ನಿಜವಾಗಿ ದೊಡ್ಡವರು. ಅಧಿಕಾರ, ಹಣ ಸೇರುತ್ತ ಹೋದ ಹಾಗೆ ಮನುಷ್ಯನಿಗೆ ತನ್ನ ಸುಖ -ವೈಭವಗಳೇ ಮುಖ್ಯವಾಗಿ ಬಿಡಬಹುದು; ಹಾಗಾಗದೆ ಇದ್ದರೆ, ಅವನಿಗೆ ಗೌರವ ಕೊಡಬೇಕು. ಆಳುವವರು ಪ್ರಜೆಗಳ ಹೃದಯಗಳ ರಾಜರಾಗಬೇಕು.

ವಿಕ್ರಮಾದಿತ್ಯನು ಯುದ್ಧದ ಭಾರ ಹೊತ್ತಾಗಲೂ ಪ್ರಜೆಗಳ ಹಿತವನ್ನು ಮರೆತವನಲ್ಲ. ಯುದ್ಧ ಸಂಘಟಿಸಿತೆಂದರೆ ಸಹಜವಾಗಿ ದೇಶದ ಜನರಿಗೆ ಚಿಂತೆ, ಕಳವಳ, ಸೈನ್ಯ ಸ್ಥಳದಿಂದ ಸ್ಥಳಕ್ಕೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದ ಜನರಿಗೆ ತೊಂದರೆಯಾಗುತ್ತಿದ್ದುದು ಉಂಟು. ಸೈನಿಕರಿಗೆ ಆಹಾರ ಒದಗಿಸಬೇಕು. ಎಷ್ಟೋ ಬಾರಿ ಸೈನಿಕರು ಬೆಳೆಯನ್ನು ಹಾಳು ಮಾಡುವರು, ಬಡ ಹಳ್ಳಿಗರಿಗೆ ಸೇರಿದುದನ್ನು ಎತ್ತಿಕೊಂಡು ಹೋಗುವರು. ಗೆದ್ದ ಸೈನ್ಯವಂತೂ ಸೋತ ರಾಜ್ಯದ ಜನರ ಮನೆಗಳಿಗೆ ನುಗ್ಗಿ ಲೂಟಿ ಮಾಡುವುದು, ಮನೆಮಠಗಳಿಗೆ ಬೆಂಕಿ ಹಚ್ಚುವುದು, ಜನರನ್ನು ಕೊಲ್ಲುವುದು.

ವಿಕ್ರಮಾದಿತ್ಯ ತಾನು ಗೆದ್ದ ಪ್ರದೇಶಗಳ ಜನರಿಗೆ ತೊಂದರೆಯಾಗದಂತೆ ಸೈನ್ಯದಲ್ಲಿ ಬಿಗಿಯಾದ ಶಿಸ್ತನ್ನು ಕಾಪಾಡಿದ್ದ. ಸೈನ್ಯ ಸ್ಥಳದಿಂದ ಸ್ಥಳಕ್ಕೆ ಹೋಗುವಾಗ ಜನರಿಗೆ ಪೀಡೆಯಾಗದಂತೆ ನೋಡಿಕೊಳ್ಳುತ್ತಿದ್ದ . ಸೋತ ಪ್ರದೇಶಗಳ ಜನ ಗೆದ್ದ ಸೈನ್ಯಕ್ಕೆ ಹೆದರಿ ಮನೆ ಮಠ ಬಿಟ್ಟು ಓಡಿ ಹೋಗುವುದು, ಊರು ಸ್ಮಶಾನವಾಗುವುದು ಸಾಮಾನ್ಯ. ವಿಕ್ರಮಾದಿತ್ಯ ತಾನು ಗೆದ್ದ ಪ್ರದೇಶಗಳಲ್ಲಿ ಹೆಚ್ಚು ಗೊಂದಲ, ಗಲಭೆ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಜನ ತಮ್ಮ ಪಾಡಿಗೆ ತಾವು ಬೇಸಾಯ – ವ್ಯಾಪಾರ – ಓಡಾಟ- ವ್ಯವಹಾರಗಳಲ್ಲಿ ತೊಡಗುವ ಹಾಗೆ, ನಿತ್ಯ ಜೀವನವನ್ನು ಭಯವಿಲ್ಲದೆ ನಡೆಸಿಕೊಂಡು ಹೋಗುವ ಹಾಗೆ ಏರ್ಪಾಟು ಮಾಡುತ್ತಿದ್ದ. ಎಷ್ಟೋ ಬಾರಿ ಜನರಿಗೆ ವಿಕ್ರಮಾದಿತ್ಯನ ಸೈನ್ಯ ತಮ್ಮ ಪ್ರದೇಶದ ಮೂಲಕ ಹೋದದ್ದರಿಂದ ‘ಯುದ್ಧ ನಡೆಯುತ್ತಿದೆ’ ಎಂದು ತಿಳಿಯುತ್ತಿತ್ತು, ಅಷ್ಟೆ. ಬೇರಾವ ಗೊಂದಲ , ಕಳವಳ ಇವಕ್ಕೆ ಅವಕಾಶ ಇರುತ್ತಿರಲಿಲ್ಲ.

ಪ್ರಜೆಗಳು ಸುಲಭವಾಗಿ ಕಾಣಬಹುದಾದ ರಾಜ

ಪ್ರಜೆಗಳ ಹಿತವೇ ವಿಕ್ರಮಾದಿತ್ಯನ ಆಡಳಿತ ಪದ್ಧತಿಯ ಮುಖ್ಯ ತತ್ವವಾಗಿತ್ತು. ಸ್ವತಃ ಜನರ ಕಷ್ಟ ಸುಖಗಳನ್ನು ತಿಳಿದುಕೊಳ್ಳಲು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಭೇಟಿ ಕೊಡುತ್ತಿದ್ದ, ಅಲ್ಲಲ್ಲಿ ಕೆಲವು ದಿನಗಳಿದ್ದು ಪ್ರಜೆಗಳು ತನ್ನನ್ನು ಕಂಡು ಕಷ್ಟ ಸುಖಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿ ಕೊಡುತ್ತಿದ್ದ. ಅವನ ರಾಜಧಾನಿ ಕಲ್ಯಾಣ, ಎಡಗೇರಿ, ವಿಜಯಪುರ, ವಿಕ್ರಮಪುರ ಮೊದಲಾದ ಉಪರಾಜಧಾನಿಗಳಿದ್ದವು. ವಿಕ್ರಮಾದಿತ್ಯ ಸಂಚಾರ ಮಾಡುವಗ ಈ ನಗರಗಳಲ್ಲಿ ಕೆಲವು ದಿನಗಳು ಇರುತ್ತಿದ್ದ.

ಅಧಿಕಾರಿಗಳನ್ನು ಅಂಕೆಯಲ್ಲಿಟ್ಟ ರಾಜ

ರಾಜ್ಯವನ್ನು ಆಳುವ ಯಾರೇ ಆಗಲಿ, ಅವರು ಎಷ್ಟೇ ಸಮರ್ಥರಾಗಲಿ, ಎಲ್ಲ ಕೆಲಸವನ್ನೂ ತಾವೇ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಅಲ್ಲವೆ? ರಾಜ್ಯದ ಬೇರೆ ಬೇರೆ ಭಾಗಗಳನ್ನು  ನೋಡಿಕೊಳ್ಳಲು ಅಧಿಕಾರಿಗಳನ್ನು ಆರಿಸಬೇಕಾಗುತ್ತದೆ. ಬೇರೆ ಬೇರೆ ಕೆಲಸಗಳಿಗೆ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಇಂತಹ ಅಧಿಕಾರಿಗಳಿಗೆ ತಕ್ಕಷ್ಟು ಅಧಿಕಾರವನ್ನೂ ಕೊಡಬೇಕು. ಪ್ರತಿಯೊಂದಕ್ಕೂ ಅವರು ತಮ್ಮ ಮೇಲಿನವರನ್ನು ಕೇಳುತ್ತಿರಬೇಕಾದರೆ ಕೆಲಸ ನಡೆಯುವುದು ಹೇಗೆ? ಆದರೆ, ಅವರು ತಮ್ಮ ಅಧಿಕಾರವನ್ನು ಸರಿಯಾಗಿ ಉಪಯೋಗಿಸದೆ ಹೋದರೆ, ಜನರಿಗೆ ತೊಂದರೆಯಾದರೆ ತಮಗೆ ಶಿಕ್ಷೆಯಾಗುತ್ತದೆ ಎಂಬ ಭಯ ಅವರಿಗಿರಬೇಕು. ಎಂದರೆ, ನಾಯಕರಾದವರು (೧) ಅಧಿಕಾರಿಗಳನ್ನು ಎಚ್ಚರಿಕೆಯಿಂದ ಆರಿಸಬೇಕು, (೨) ಅವರಿಗೆ ತಕ್ಕಷ್ಟು ಅಧಿಕಾರ ಕೊಡಬೇಕು, (೩) ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂದು ನೋಡುತ್ತಿರಬೇಕು. ವಿಕ್ರಮಾದಿತ್ಯನ ಆಳ್ವಿಕೆಯ ಬಹುಕಾಲದಲ್ಲಿ ಪ್ರಾಮಾಣಿಕರೂ ಪ್ರತಿಭಾಶಾಲಿಗಳೂ ಸಮರ್ಥರೂ ಆದ ಮಂತ್ರಿಗಳು ಮತ್ತು ಸೈನ್ಯಾಧಿಕಾರಿಗಳೂ ಇದ್ದರು.

ಆಶ್ಚರ್ಯದ ಸಂಗತಿ ಎಂದರೆ ಇವನ ಅಧಿಕಾರಿಗಳಲ್ಲಿ ಎಷ್ಟೋ ಮಂದಿ ಸ್ವತಃ ವಿದ್ವಾಂಸರು, ಸಂಗೀತ-ಸಾಹಿತ್ಯ-ಕಲೆಗಳಲ್ಲಿ ಆಸಕ್ತಿ ಇದ್ದವರು, ಯುದ್ಧ ಮಾಡುವುದರಲ್ಲಿಯೂ ನಿಪುಣರು. ಅಗತ್ಯವಾದಾಗ ವೀರರಾಗಿ ಹೋರಾಡುತ್ತಿದ್ದರು , ರಾಜ್ಯದ ಆಡಳಿತದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದರು, ವಿದ್ಯೆ ಬೆಳೆಯಲು ಪ್ರೋತ್ಸಾಹ ಕೊಡುತ್ತಿದ್ದರು, ಒಳ್ಳೆಯ ಕವನಗಳನ್ನೂ ಪುಸ್ತಕಗಳನ್ನೂ ಬರೆದವರಿಗೆ ಸಹಾಯ ಮಾಡುತ್ತಿದ್ದರು. ವಿಕ್ರಮಾದಿತ್ಯನ ಕಾಲದಲ್ಲಿ ಚಕ್ರವರ್ತಿಯೇ ನೇರವಾಗಿ ಆಳುತ್ತಿದ್ದ ಪ್ರಾಂತಗಳು, ಅವನ ಕೈ ಕೆಳಗಿನ ರಾಜರು ಆಳುತ್ತಿದ್ದ ಪ್ರಾಂತಗಳು ಇದ್ದವು. ಚಕ್ರವರ್ತಿಯೇ ಆಳುತ್ತಿದ್ದ ಪ್ರಾಂತಗಳಲ್ಲಿ ಅವನ ತಮ್ಮಂದಿರು ಅಥವಾ ಮಕ್ಕಳು ಅವನ ಪ್ರತಿನಿಧಿಗಳಾಗಿರುತ್ತಿದ್ದರು. ಇವರೆಲ್ಲರಿಗೂ ರಾಜ ತಕ್ಕಷ್ಟು ಅಧಿಕಾರ ಕೊಟ್ಟಿದ್ದನು. ಸರಿಯಾಗಿ ಆಡಳಿತ ನಡೆಸದೆ ಇದ್ದವರನ್ನು ಶಿಕ್ಷೆ ಮಾಡುತ್ತಿದ್ದ. ಪ್ರಜೆಗಳಿಗೆ ಒಳ್ಳೆಯದಾಗುವಂತೆ ಅಧಿಕಾರ ನಡೆಸಿದವರಿಗೆ ಗೌರವ ಕೊಡುತ್ತಿದ್ದ. ವಿಕ್ರಮಾದಿತ್ಯನು ವೆಂಗಿ ಎಂಬ ರಾಜ್ಯಕ್ಕೆ ಅನಂತಪಾಲ ಎಂಬ ಪ್ರತಿನಿಧಿಯನ್ನು ಕಳುಹಿಸಿದ. ಈತ ರಾಜನಲ್ಲಿ ಭಕ್ತಿಯಿಂದ, ಪ್ರಜೆಗಳಲ್ಲಿ ಪ್ರೀತಿಯಿಂದ ರಾಜ್ಯದ ಆಡಳಿತವನ್ನು ನಡೆಸಿದ. ಇದನ್ನು ಮೆಚ್ಚಿ ವಿಕ್ರಮಾದಿತ್ಯ ಇವನಿಗೆ ಪುಲಿಗೆರೆ ಅಲಂ, ಬೆಳ್ವಲ ಅಲಂ ಮತ್ತು ಬನವಾಸಿ ೧೨,೦೦೦ ಪ್ರದೇಶಗಳನ್ನು ಕೊಟ್ಟ.

ಎಲ್ಲ ಧರ್ಮಗಳೂ ಒಂದೇ

ವಿಕ್ರಮಾದಿತ್ಯನ ರಾಜ್ಯದಲ್ಲಿ ಶೈವ, ವೈಷ್ಣ, ಜೈನ ಈ ಧರ್ಮಗಳಲ್ಲಿ ಅನುಸರಿಸುತ್ತಿದ್ದ ಜನರಿದ್ದರು. ರಾಜನು ವೈಷ್ಣ ಧರ್ಮದವನು. ಆದರೆ ಮೂರು ಧರ್ಮಗಳಿಗೂ ಗೌರವ ಕೊಡುತ್ತಿದ್ದ. ಪ್ರಜೆಗಳು ತಮಗೆ ಬೇಕಾದಂತೆ ಯಾವ ಧರ್ಮವನ್ನಾದರೂ ಆಚರಿಸಲು ಸಂಪೂರ್ಣ ಸ್ವಾತಂತ್ಯ್ರವಿತ್ತು. ರಾಜ ದೈವಭಕ್ತ, ದಾನ ಧರ್ಮಗಳನ್ನು  ಶ್ರದ್ಧೆಯಿಂದ ನಡೆಸುತ್ತಿದ್ದ.

ಹೆಂಗಸರಿಗೆ ಗೌರವದ ಸ್ಥಾನ

ವಿಕ್ರಮಾದಿತ್ಯನ ಕಾಲದಲ್ಲಿ ದೊಡ್ಡ ಪದವಿಗಳಿದ್ದು ಆಡಳಿತ ನಡೆಸುವವರಲ್ಲಿ ಸ್ತ್ರೀಯರೂ ಇದ್ದರು!

ಭಾರತದಲ್ಲಿ ಹೆಂಗಸರಿಗೆ ತಕ್ಕಷ್ಟು ಸ್ವಾತಂತ್ಯ್ರವಿರಲಿಲ್ಲ. ಅವರು ಅಡಿಗೆ ಮನೆಯ ಬಂಧಿಗಳಾಗಿದ್ದರು ಎಂಬ ಭಾವನೆ ಕೆಲವರಿಗೆ ಇರುವುದುಂಟು. ಆದರೆ ಇದು ನಿಜವಲ್ಲ. ಪ್ರಾಚೀನ ಭಾರತದಲ್ಲಿಯೇ ಪಾಂಡಿತ್ಯಕ್ಕೆ ಪ್ರಸಿದ್ಧರಾಗಿದ್ದವರಲ್ಲಿ ಹೆಂಗಸರಿದ್ದರು. ಭಾರತದ ಚರಿತ್ರೆಯಲ್ಲಿ ಸಮರ್ಥವಾಗಿ ರಾಜ್ಯವಾಳಿದ ಮಹಿಳೆಯರು, ಯುದ್ಧರಂಗದಲ್ಲಿ ಸೈನ್ಯದ ನಾಯಕತ್ವವಹಿಸಿ ಹೋರಾಡಿದ ಮಹಿಳೆಯರು ಎಷ್ಟೋ ಮಂದಿ.

ವಿಕ್ರಮಾದಿತ್ಯನ ರಾಜ್ಯದಲ್ಲಿ ಹೆಂಗಸರಿಗೆ ಎಂತಹ ಸ್ಥಾನವಿತ್ತು ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹೆಂಗಸರ ವಿದ್ಯಾಭ್ಯಾಸಕ್ಕೆ ಬೇಕಾದಷ್ಟು ಅನುಕೂಲವಿದ್ದಿತು. ಸಂಗೀತ, ನೃತ್ಯ ಮತ್ತು ಇತರ ಕಲೆಗಳಲ್ಲಿ ಅನೇಕ ಸ್ತ್ರೀಯರು ಪ್ರವೀಣರಾಗಿದ್ದರು. ಇಷ್ಟೇ ಅಲ್ಲ, ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದವರಲ್ಲಿ ಅನೇಕ ಮಂದಿ ಮಹಿಳೆಯರಿದ್ದರು. ವಿಕ್ರಮಾದಿತ್ಯನ ರಾಣಿಯರಾದ ಕೇಟಲದೇವಿ ಶಿರಗುಪ್ಪೆ, ಕೊಲನೂರು ಮೊದಲಾದ ಪಟ್ಟಣಗಳನ್ನೂ ಮತ್ತು ಲಕ್ಷ್ಮೀ ಮಹಾದೇವಿ ದ್ರೋಣಪುರದ ಆಡಳಿತವನ್ನೂ ನಡೆಸುತ್ತಿದ್ದರು. ಅವನ ಇನ್ನೊಬ್ಬ ರಾಣಿ ಚಂದಲದೇವಿ ಅಥವಾ ಚಂದ್ರಲೇಖ ವಿದ್ಯಾಭ್ಯಾಸಕ್ಕಾಗಿ ಧಾರಾಳವಾದ ದಾನ ಮಾಡಿದಳು. ಪಟ್ಟಮಹಾದೇವಿ ಮೈಳಲ ಮಹಾದೇವಿ ಅಥವಾ ಮಲಯಮತಿದೇವಿ ಮಲ್ಲೇಶ್ವರ ದೇವಸ್ಥಾನವನ್ನು ಕಟ್ಟಿಸಿದಳು.

ಕಲೆಗೆ ಆಶ್ರಯದಾತ

ಅಸಮಾನ ಪರಾಕ್ರಮಿಯಾದ ವಿಕ್ರಮಾದಿತ್ಯನು ವಿದ್ಯೆಗೂ ಕಲೆಗೂ ಬಿಡುಗೈಯಿಂದ ಸಹಾಯ ಮಾಡುತ್ತಿದ್ದ. ಇವನ ಆಸ್ಥಾನದಲ್ಲಿ ಅನೇಕ ಮಂದಿ ಕವಿಗಳೂ ವಿದ್ವಾಂಸರೂ ಇದ್ದರು. ಬಿಲ್ಹಣ ಎಂಬ ಕವಿಯು ಕಾಶ್ಮೀರದಿಂದ ಬಂದು ಇವನ ಆಸ್ಥಾನದಲ್ಲಿ ನೆಲೆಸಿದ. ಇವನಿಗೆ ರಾಜನು ‘ವಿದ್ಯಾಪತಿ’ ಎಂಬ ಪದವಿಯನ್ನೂ ಕೊಟ್ಟು ಸನ್ಮಾನಿಸಿದ. ಇವನು ‘ವಿಕ್ರಮಾಂಕದೇವ ಚರಿತ’ ಎಂಬ ಕಾವ್ಯವನ್ನು ಸಂಸ್ಕೃತದಲ್ಲಿ ಬರೆದ. ಈ ಕಾವ್ಯದಿಂದ ವಿಕ್ರಮಾದಿತ್ಯನ ವೈಭವ, ಅವನ ಆಡಳಿತ ರೀತಿ, ಅವನ ಕಾಲದ ಸಮಾಜ ಜೀವನ ಇವನ್ನು ಕುರಿತು ಎಷ್ಟೋ ವಿಷಯಗಳು ತಿಳಿದು ಬರುತ್ತವೆ. ವಿಜ್ಞಾನೇಶ್ವರ ಎಂಬ ದೊಡ್ಡ ವಿದ್ವಾಂಸ ಇವನ ಆಸ್ಥಾನದಲ್ಲಿದ್ದನು; ‘ಮಿತಾಕ್ಷರ’ ಎಂಬ ಪ್ರಸಿದ್ಧ ಗ್ರಂಥವನ್ನು ಬರೆದ. ವಿಕ್ರಮಾದಿತ್ಯನು ವಿಕ್ರಮಾಪುರ ಎಂಬ ಪಟ್ಟಣವನ್ನು ಕಟ್ಟಿ, ಅಲ್ಲಿ ಒಂದು ಭವ್ಯವಾದ ದೇವಾಲಯವನ್ನು ಕಟ್ಟಿಸಿದನು.

ಇಂತಹ ಅಸಮಾನ ಶೂರ, ಪ್ರಜಾಪ್ರೇಮಿಯ ರಾಜ್ಯದಲ್ಲಿ ಜನ ಸುಖ ಸಂತೋಷಗಳಿಂದ ಇದ್ದರು. ರಾಜಧಾನಿ ಕಲ್ಯಾಣನಗರ ಸಂಪತ್ತಿನಿಂದ ಕೂಡಿ, ಭವ್ಯವಾದ ಅರಮನೆಗಳು, ಸುಂದರ ದೇವಾಲಯಗಳು, ಸೊಗಸಾದ ರಾಜಮಾರ್ಗಗಳಿಂದ ಬೆಳಗುತ್ತಿತ್ತು. ರಾಜರಿಗೆ ಮಾತ್ರವಲ್ಲ, ಎಲ್ಲ ಕಾಲದಲ್ಲಿ ಎಲ್ಲ ದೇಶಗಳ ಆಡಳಿತಗಾರರಿಗೆ ಇವನು ಮೇಲ್ಪಂಕ್ತಿಯಾದ. ರಾಜ್ಯವನ್ನಾಳುವವರು ಎಷ್ಟು ಶಕ್ತವಾಗಿರಬೇಕು, ಶಕ್ತಿಯನ್ನು ಹೇಗೆ ಪ್ರಜೆಗಳಿಗಾಗಿ ಬಳಸಬೇಕು ಎಂದು ತೋರಿಸಿಕೊಟ್ಟ. ಕತ್ತಿಯನ್ನು  ಹಿಡಿಯುವ ಕೈ ಪ್ರಜೆಗಳಿಗೆ ನ್ಯಾಯವನ್ನೂ ದೊರಕಿಸಬೇಕು, ಒಳ್ಳೆಯವರ ರಕ್ಷಣೆ ಮಾಡಬೇಕು ಎಂಬುದನ್ನೂ ತೋರಿಸಿಕೊಟ್ಟ. ಎಲ್ಲ ಧರ್ಮಗಳಲ್ಲಿ ಗೌರವವನ್ನು ತೋರಿಸಿದ. ಕವಿಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ಕೊಟ್ಟ.ಹೆಂಗಸರ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ. ರಾಜ್ಯ ಶಾಂತಿ, ಸಮೃದ್ಧಿಗಳಿಂದ ನಲಿಯುವಂತೆ ಮಾಡಿದ. ಸುಮಾರು ಐವತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ ಇವನು ಭಾರತದ ಚರಿತ್ರೆಯಲ್ಲಿಯೆ ಗೌರವದ ಸ್ಥಾನ ಪಡೆದ. ಇಂತಹವನಲ್ಲದೆ ಬೇರೆ ಯಾರು ಶಕಪುರುಷರಾಗಬಲ್ಲರು?