ಯಾರಾದರೂ ಪ್ರಮುಖ ವ್ಯಕ್ತಿ ನಿಧನ ಹೊಂದಿದಾಗ ಇತರರು ಕೇಳುವ ಪ್ರಶ್ನೆ: “ಅವರ ನಂತರು ಯಾರು?”

ಸಾಮಾನ್ಯವಾಗಿ ಈ ಪ್ರಶ್ನೆ ಬಹಳ ದಿನ ಇರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಬಹಳ ದಿನ ಇರಬೇಕಾಗುತ್ತದೆ. ಏಕೆಂದರೆ ಮರಣ ಹೊಂದಿದ ವ್ಯಕ್ತಿಗೆ ಸರಿಸಮನವಾಗಿರುವವರನ್ನು ಆರಿಸಲು ಕಷ್ಟವಾಗುತ್ತದೆ. ನಿಜವಾಗಿಯೂ ಇದು ಮರಣ ಹೊಂದಿದ ವ್ಯಕ್ತಿಯ ಪ್ರತಿಭೆಯನ್ನು ತೋರಿಸುತ್ತದೆ.

ಹೋಮಿ ಜಹಾಂಗೀರ್ ಭಾಭಾ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದ ಭೌತ ವಿಜ್ಞಾನಿ. ಭಾರತದ ಅಣುಶಕ್ತಿ ಕಮಿಷನ್ನಿನ ಅಧ್ಯಕ್ಷ. ಪ್ರಪಂಚದ ಅನೇಕ ದೇಶಗಳು ಅಣುಬಾಂಬುಗಳನ್ನು ತಯಾರಿಸುತ್ತಿದ್ದವು. ಭಾರತವೂ ತಯಾರಿಸಬೇಕೆ? ಈ ಪ್ರಶ್ನೆ ಬಂದಾಗ ಕೆಲವರು ಅನುಬಾಂಬು ತಯಾರಿಸಲು ಬಹಳ ಹಣ ಬೇಕು, ಭಾರತ ಬಡದೇಶ, ಬಾಂಬಿಗಾಗಿ ಅಷ್ಟು ಖರ್ಚು ಮಾಡಿದರೆ ಭಾರತದ ಹಣಕಾಸಿನ ಸ್ಥಿತಿ ಕೆಟ್ಟುಹೋಗುತ್ತದೆ ಎಂದರು. ಆಗ ಭಾಭಾ ಸರಿಯಾಗಿ ಲೆಕ್ಕಾಚಾರ ಮಾಡಿ ಅಣು ಬಾಂಬು ತಯಾರಿಸಲು ಬೇಕಾಗುವ ಹಣ ಅತ್ಯಲ್ಪ, ಭಾರತಕ್ಕೆ ಅಣುಬಾಂಬುಗಳನ್ನು ತಯಾರಿಸುವ ಸಾಮರ್ಥ್ಯ ಇದೆ ಎಂದು ತೋರಿಸಿಕೊಟ್ಟರು. ಇಂತಹ ಮಹಾ ವಿಜ್ಞಾನಿ ೧೯೬೬ರಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ, ವಿಮಾನ ಉರುಳಿ ಅಕಾಲ ಮರಣ ಹೊಂದಿದರು. ಆಗ-

“ಅವರ ನಂತರ ಯಾರು?” ಈ ಪ್ರಶ್ನೆ ಬೃಹದಾಕಾರವಾಗಿ ಎದ್ದು ನಿಂತಿತು. ಭಾಭಾ ಅಂತಹ ಬಹು ದೊಡ್ಡ ಭೌತ ವಿಜ್ಞಾನಿಯ ಸ್ಥಳಕ್ಕೆ ಬೇರೆ ಯಾರು ಬರಬಹುದು?

ಇದಾದ ನಾಲ್ಕು ತಿಂಗಳ ಅನಂತರ ಎಲ್ಲರೂ “ವಿಕ್ರಮ ಅಂಬಾಲಾಲ್ ಸಾರಾಭಾಯ್” ಅನ್ನುವಂತಾಯಿತು.

ಹೀಗೆ ೧೯೬೬ರಲ್ಲಿ ವಿಕ್ರಮ ಸಾರಾಭಾಯ್ ಭಾರತ ಅಣುಶಕ್ತಿ ಕಮಿಷನ್ನಿನ ಅಧ್ಯಕ್ಷರಾದರು.

ಎಂತಹ ಗುರು!

“ಅವರು ಬಂಧರು, ಅವರಿಗೆ ಹೇಳು.”

“ನಾನು ಕೆಡಿಸಲಿಲ್ಲ. ನೀನೇ ಹೇಳು”.

“ಇಲ್ಲ, ನೀನೇ ಹೇಳು. ನನಗೆ ಹೆದರಿಕೆ ಆಗುತ್ತೆ”

ಇಬ್ಬರು ಮಾತನಾಡಿಕೊಳ್ಳುತ್ತಿದ್ದರು. ಆ ಹೊತ್ತಿಗೆ ಅವರ ಹತ್ತಿರ ಬಂದವರು,

“ಕಾಣೆ, ಏನು ವಿಷಯ?” ಎಂದು ಕೇಳಿದರು.

“ವಿದ್ಯುತ್‌ಮಾಪಕ ಕೆಟ್ಟುಹೋಯಿತು, ಸರ್. ನಾವು ಹೆಚ್ಚು ವಿದ್ಯುತ್ತನ್ನು ಹರಿಸಿಬಿಟ್ಟೆವು”.

“ಓಹ್ ಅಷ್ಟೇ ತಾನೆ! ಅದನ್ನೇ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ವಿದ್ಯಾರ್ಥಿಗಳು ಕಲಿತುಕೊಳ್ಳುವುದು ಹೇಗೆ? ಇನ್ನು ಮುಂದೆ ಎಚ್ಚರಿಕೆಯಿಂದಿದ್ದರೆ ಆಯಿತು”.

ಮೇಲಿನ ಸಂಭಾಷಣೆ ನಡೆದದ್ದು ಅಹಮದಾಬಾದಿನ ಒಂದು ಸಣ್ಣ ಸಂಶೋಧನಾ ಪ್ರಯೋಗಾಲಯದಲ್ಲಿ. ೧೯೪೮ರ ಸಮಯ. ಅಹಮದಾಬಾದಿನ ಮಹಾತ್ಮಾ ಗಾಂಧಿ ಸೈನ್ಸ್ ಇನ್‌ಸ್ಟಿಟ್ಯೂಟ್ ಎನ್ನುವ ವಿದ್ಯಾಲಯದ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಆರ್. ಪಿ. ಕಾಣೆ ಮತ್ತು ಇನ್ನೊಬ್ಬ ವಿದ್ಯಾರ್ಥಿ ಪ್ರಯೋಗಗಳನ್ನು ನಡೆಸುತ್ತಿದ್ದರು. ಒಂದು ಪ್ರಯೋಗದಲ್ಲಿ ಹೆಚ್ಚು ವಿದ್ಯುತ್ತನ್ನು ಹರಿಸಿದುದರಿಂದ ವಿದ್ಯುತ್ ಮಾಪಕವು ಕೆಟ್ಟು ಹೋಯಿತು. ಆಗಿನ ಕಾಲದಲ್ಲಿ ವಿದ್ಯುತ್ ಮಾಪಕವು ಕೆಟ್ಟು ಹೊಯಿತು. ಆಗಿನ ಕಾಲದಲ್ಲಿ ವಿದ್ಯುತ್ ಮಾಪಕಗಳು ದೊರಕುವುದೇ ಕಷ್ಟವಾಗಿತ್ತು. ಒಂದು ಮಾಪಕಕ್ಕಾಗಿ ಅನೇಕ ತಿಂಗಳು ಪ್ರಯೋಗಗಳನ್ನೇ ನಿಲ್ಲಿಸಬೇಕಾಗುತ್ತಿತ್ತು. ವಿಕ್ರಮ ಅಂಬಾಲಾಲ್ ಸಾರಾಭಾಯ್ ಈ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯವನ್ನು ಆಗ ತಾನೆ ಪ್ರಾರಂಭಿಸಿದ್ದರು. ವಿದ್ಯುತ್ ಮಾಪಕ ಕೆಟ್ಟು ಹೋದುದರಿಂದ ವಿದ್ಯಾರ್ಥಿಗಳಿಗೆ ಹೆದರಿಕೆ ಆಗಿತ್ತು. ಈ ವಿಷಯ ಅವರಿಗೆ ತಿಳಿಸಿದರೆ ಏನನ್ನುವರೋ ಎಂಬ ಭಯ ಆವರಿಸಿತ್ತು. ಅವರಿಗೆ ವಿಷಯ ತಿಳಿಸುವುದಕ್ಕೆ ತಮ್ಮಿಬ್ಬರಲ್ಲೇ ವಾದಿಸಿ ಕೊಳ್ಳುತ್ತಿದ್ದರು. ಅಷ್ಟರಲ್ಲಿ ಸಾರಾಭಾಯ್ ಅವರು ಬಂದು ಏನೆಂದು ವಿಚಾರಿಸಿದರು. ವಿಷಯ ತಿಳಿದ ಮೇಲೆ ವಿದ್ಯಾರ್ಥಿಗಳನ್ನು ಗದರಿಸುವುದಿರಲಿ, ಮುಖದಲ್ಲೂ ಸಹ ಅಸಹನೆ ಅಶಾಂತಿ ಕಂಡುಬರಲಿಲ್ಲ. ಸಮಾಧಾನದ ಮಾತನ್ನು ಆಡಿದರು.

‘ವಿದ್ಯಾರ್ಥಿಗಳು ಕಲಿಯುವಾಗ ಹೀಗೆ ಆಗುತ್ತದೆ....ಇನ್ನು ಮುಂದೆ ಎಚ್ಚರಿಕೆಯಿಂದಿದ್ದರೆ ಆಯಿತು.’

ಪ್ರಫುಲ್ ಡಿ. ಭಾವಸಾರ ಬಿ.ಎಸ್.ಸಿ. ಪದವೀಧರ. ೧೯೪೮ರಲ್ಲಿ ಭೌತಶಾಸ್ತ್ರದಲ್ಲಿ ಎಂ.ಎಸ್.ಸಿ. ಓದಲು ಪೂನಾಗೆ ಹೋಗಿ ಯಾವುದದಾದರೂ ಕಾಲೆಜಿಗೆ ಸೇರಲು ಪ್ರಯತ್ನಪಟ್ಟರು. ಅದು ಸಾಧ್ಯವಾಗಲಿಲ್ಲ. ಡಾ. ಎಲ್. ಎ. ರಾಮದಾಸ್ ಎಂಬುವರು, ಅಹಮದಾಬಾದಿನಲ್ಲಿ ವಿಕ್ರಮ ಸಾರಾಭಾಯ್ ಅವರು ಹೊಸದಾಗಿ ಒಂದ ಪ್ರಯೋಗಾಲಯವನ್ನು ಪ್ರಾರಂಭಿಸಿದ್ದಾರೆ, ಅವರನ್ನು ಕಂಡರೆ ಸಮಸ್ಯೆಗೆ ಪರಿಹಾರ ಸಿಕ್ಕುತ್ತದೆ ಎಂದು ಹೇಳಿದರು. ಭಾವಸಾರ್ ವಿಕ್ರಮ ಸಾರಾಭಾಯ್ ಅವರನ್ನು ಸಂಧಿಸಿದರು.

ಸಾರಾಭಾಯ್ ಅವರು ಒಂದು ಸಣ್ಣ ಕೋಣೆಯಲ್ಲಿ ಗಾಜು ಊದುವ ಕೆಲಸದಲ್ಲಿ ನಿರತರಾಗಿದ್ದರು. ಬಿಳಿಯ ಖದ್ದರ್ ಷರಾಯಿ ಮತ್ತು ಹೊಳೆಯುವ ಹಸಿರು ಬಣ್ಣದ ಅಂಗಿಯನ್ನು ತೊಟ್ಟಿದ್ದರು. ಭಾವಸಾರ್ ಅವರನ್ನು ನಗುಮುಖದಿಂದ ಬರಮಾಡಿಕೊಂಡು, ತಮ್ಮ ಕೆಲಸ ಮುಗಿಯುವವರೆಗು ಕಾಯುವಂತೆ ತಿಳಿಸಿದರು. ಅವರು ಅತ್ಯಂತ ಸರಳವಾಗಿಯೂ ನಿಗರ್ವಿಯಾಗಿಯೂ ಕಂಡರು. ಭಾವಸಾರರು ಮನಸ್ಸಿನಲ್ಲಿ ಹಿರಿಯ ಪ್ರಾಯೋಗಿಕ ಭೌತಶಾಸ್ತ್ರಜ್ಞರೆಂದರೆ ಹೀಗಿರಬೇಕು ಎಂದು ಚಿತ್ರಿಸಿಕೊಂಡಿದ್ದರು. ಆ ಕಲ್ಪನೆಯೇ ರೂಪತಾಳಿ ಬಂದಿದೆಯೋ ಎನ್ನುವ ಹಾಗಿದ್ದರು ಸಾರಾಭಾಯ್. ಭಾವಸಾರ್ ಅವರು ತಕ್ಷಣ ಸಾರಾಭಾಯ್ ಅವರನ್ನು ತಮ್ಮ ಗುರುಗಳಾಗಿ ಸ್ವೀಕರಿಸಲು ಸಿದ್ಧರಾದರು. ಸಾರಾಭಾಯ್ ಅವರಿಗೆ ಅನೇಕ ಪ್ರಶ್ನೆಗಳನ್ನು ಹಾಕಿದರು; ಅವರು ಏಕೆ ಈ ಶಾಸ್ತ್ರವನ್ನು ಅಭ್ಯಾಸ ಮಾಡಬೇಕೆಂದಿದ್ದಾರೆ, ಅವರಿಗೆ ಇದರಲ್ಲಿ ಎಷ್ಟು ಆಸಕ್ತಿ ಇದೆ ಮುಂತಾದ ವಿಷಯಗಳನ್ನು ತಿಳಿದುಕೊಂಡ ಮೇಲೆ ತಮ್ಮ ಪ್ರಯೋಗಶಾಲೆಗೆ ಸೇರಿಸಿಕೊಂಡರು.

ಈ ಘಟನೆಗಳಿಂದ ವಿಕ್ರಮ ಸಾರಾಭಾಯ್ ವಿದ್ಯಾರ್ಥಿಗಳ ಮೇಲೆ ಎಂತಹ ಪ್ರಭಾವ ಬೀರುತ್ತಿದ್ದರು ಎನ್ನುವುದು ಅರ್ಥವಾಗುತ್ತದೆ.

ಭಾರತವು ಸ್ವತಂತ್ರವಾದ ಮೇಲೆ ವಿಜ್ಞಾನದ ಪ್ರಗತಿಗಾಗಿ ತಮ್ಮ ಜೀವಮಾನವೆಲ್ಲ ದುಡಿದ ಕೆಲವೇ ವಿಜ್ಞಾನಿಗಳಲ್ಲಿ ವಿಕ್ರಮ ಅಂಬಾಲಾಲ್ ಸಾರಾಭಾಯ್ ಒಬ್ಬರು.

ಪ್ರಾರಂಭದ ವಿದ್ಯಾಭ್ಯಾಸ

ಗುಜರಾತ್ ರಾಜ್ಯದ ಮುಖ್ಯಪಟ್ಟಣ ಅಹಮದಾಬಾದ್. ಆ ಪಟ್ಟಣದಲ್ಲಿ ಬಟ್ಟೆಯ ಕಾರ್ಖಾನೆಗಳು ಹೆಚ್ಚು. ಅಲ್ಲಿ ಸಾರಾಭಾಯ್ ಕುಟುಂಬದವರು ಐಶ್ವರ್ಯವಂತರು, ಕೈಗಾರಿಕೋದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಎಂದು ಪ್ರಸಿದ್ಧರಾಗಿದ್ದರು. ಆ ಕುಟುಂಬದಲ್ಲಿ ವಿಕ್ರಮ ಸಾರಾಭಾಯ್ ೧೯೧೯ನೆಯ ಇಸವಿ ಆಗಸ್ಟ್ ೧೨ನೇ ತಾರೀಖು, ಅಕ್ಕತಂಗಿಯರು ಅಣ್ಣತಮ್ಮಂದಿರಿಗೆ ಶುಭಕೋರುವ ಗರುಡಪಂಚಮಿ ಹಬ್ಬದ ದಿನ ಹುಟ್ಟಿದರು. ಅಂಬಾಲಾಲ್ ಸಾರಾಭಾಯ್ ಅವರ ತಂದೆ; ಸರಳಾದೇವಿ ತಾಯಿ; ಇವರಿಗೆ ಎಂಟು ಜನ ಮಕ್ಕಳು.

ಸಾರಾಭಾಯ್ ದಂಪತಿಗಳ ಮೊದಲನೆಯ ಮಗಳು ಮೃದುಳಾಬೆನ್ ಮೂರು ವರ್ಷದವಳಿದ್ದಾಗ, ಅವಳ ವಿದ್ಯಾಭ್ಯಾಸ ಹೇಗೆ ನಡೆಯಬೇಕೆಂಬ ಯೋಚನೆ ಬಂತು. ಯಾವ ಪಾಠಶಾಲೆಯೂ ಸಾರಾಭಾಯ್ ದಂಪತಿಗಳಿಗೆ ಒಪ್ಪಿಗೆಯಾಗಲಿಲ್ಲ. ಮಾಂಟೆಸೋರಿ ಎಂಬ ರೀತಿಯ ವಿದ್ಯಾಭ್ಯಾಸ ಆಗ ತಾನೆ ಪ್ರಸಿದ್ಧವಾಗುತ್ತಿತ್ತು. ಆದರೆ ಆ ಕ್ರಮದ ಶಾಲೆಗಳಿರಲಿಲ್ಲ. ತಮ್ಮ ಮನೆಯಲ್ಲೇ ಇಂತಹ ಶಾಲೆ ಪ್ರಾರಂಭಿಸುವುದೆಂದು ತೀರ್ಮಾನಿಸಿದರು. ಮಕ್ಕಳು ದೊಡ್ಡವರಾದಂತೆಲ್ಲ ಶಾಲೆಯ ಅವಶ್ಯಕತೆಗಳೂ ಹೆಚ್ಚಾದವು. ಈ ಶಾಲೆಯಲ್ಲಿ ಭಾಷೆಗಳು, ವಿಜ್ಞಾನ, ಕಲೆಗಳು, ಜೀವಶಾಸ್ತ್ರ ತೋಟಗಾರಿಕೆ, ತಾಂತ್ರಿಕ ಜ್ಞಾನ ಮುಂತಾದ ಎಲ್ಲ ವಿಷಯಗಳನ್ನು ಕಲಿಸಲು ಉಪಾಧ್ಯಾಯರಿದ್ದರು. ಪ್ರಯೋಗಶಾಲೆಗಳು, ವರ್ಕ್‌ಷಾಪ್‌ಗಳ ಸೌಲಭ್ಯವನ್ನೂ ಸಹ ಒದಗಿಸಿದ್ದರು. ಸಾರಾಭಾಯ್ ದಂಪತಿಗಳ ಎಂಟು ಮಕ್ಕಳಿಗಾಗಿ ಒಂದು ಕಾಲದಲ್ಲಿ ಹದಿಮೂರು ಅಧ್ಯಾಪಕರುಗಳಿದ್ದರು. ಅವರಲ್ಲಿ ಯುರೋಪಿನ ವಿಶ್ವವಿದ್ಯಾಲಯಗಳಲ್ಲಿ ಓದಿದ ಮೂವರು ಪಿ.ಹೆಚ್.ಡಿ. ಪದವೀಧರರು ಮತ್ತು ಮೂವರು ಸಾಮಾನ್ಯ ಪದವೀಧರರು, ಕಲಾವಿಭಾಗಕ್ಕೆ ಆಂಧ್ರ, ಬಂಗಾಲಗಳಿಂದ ಬಂದ ವಿದ್ವಾಂಸರುಗಳು ಉಪಾಧ್ಯಾಯರಾಗಿದ್ದರು. ನೃತ್ಯಶಿಕ್ಷಣಕ್ಕೆ ಗುರುದೇವ ರವೀಂದ್ರನಾಥ ಠಾಕೂರರೇ ಆರಿಸಿದ್ದ ಶಿಕ್ಷಕರು ಇದ್ದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯವರೆಗೂ ಇದೇ ಪಾಠಶಾಲೆಯಲ್ಲಿ ಓದಿ, ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಮಾತ್ರ ಸರ್ಕಾರಿ ಹೈಸ್ಕೂಲಿಗೆ ಹೋಗುತ್ತಿದ್ದರು.

ಶಾಲೆಯ ಪ್ರಭಾವವೇ ಅಲ್ಲದೆ ಸಾರಾಭಾಯ್ ಕುಟುಂಬಕ್ಕೆ ಪರಿಚಿತರಾದ ಅನೇಕ ಪ್ರಖ್ಯಾತ ಮಹನೀಯರ ಸಾನಿಧ್ಯವೂ ವಿಕ್ರಮ ಅವರ ಮೇಲೆ ಪ್ರಭಾವ ಬೀರುತ್ತಿದ್ದಿತು. ಗುರುದೇವ ರವೀಂದ್ರರು, ಜೆ. ಕೃಷ್ಣಮೂರ್ತಿ, ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಮೌಲಾನಾ ಆಜಾದ್, ಸರೋಜಿನಿ ನಾಯ್ಡು, ಶ್ರೀನಿವಾಸ ಶಾಸ್ತ್ರ, ಸಿ.ಎಫ್. ಆಂಡ್ರೂಸ್ ಮತ್ತು ಸಿ.ವಿ. ರಾಮನ್ ಇಂತಹ ಹಿರಿಯರು ಅಹಮದಾಬಾದಿಗೆ ಬಂದಾಗ ಸಾರಾಭಾಯ್ ಅವರ ಮನೆಯಲ್ಲೇ ಅನೇಕ ಸಲ ಇಳಿದುಕೊಳ್ಳುತ್ತಿದ್ದರು. ಇವರಿಗೆಲ್ಲ ಕಲಶಪ್ರಯರಾದಂತೆ ಮಹಾತ್ಮಾ ಗಾಂಧೀಜಿಯವರು, ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ ಇವರ ಮನೆಯಲ್ಲೇ ಇದ್ದರು. ಇಂತಹ ಮಹನೀಯರ ಸಾನ್ನಿಧ್ಯ ಸಹವಾಸಗಳು ವಿಕ್ರಮ ಅವರ ಮೇಲೆ ಪ್ರಭಾವ ಬೀರಿದುವೆಂಬುದರಲ್ಲಿ ಸಂಶಯವೇ ಇಲ್ಲ. ಆದುದರಿಂದಲೇ ವಿಕ್ರಮರ ಬುದ್ಧಿ ಶಕ್ತಿಯೂ ಬೆಳೆಯಿತು. ಆಧ್ಯಾತ್ಮ ವಿಷಯಗಳಲ್ಲಿಯೂ ಶ್ರದ್ಧೆ ಬೆಳೆಯಿತು. ಅವರ ಅಧ್ಯಾಪಕರಾಗಿ ಬಾದಾಮಿ ಅವರು, “ವಿಕ್ರಮ ತನ್ನ ಸಂಯಮವನ್ನು ಕಳೆದುಕೊಂಡು ರೇಗಾಡಿದುದನ್ನು ಯಾವ ಸಂದರ್ಭದಲ್ಲಿಯೂ ನಾನು ನೊಡಿಲ್ಲ” ಎಂದು ಹೇಳಿದ್ದಾರೆ.

ವಿಕ್ರಮ ಐದಾರು ವರ್ಷದವನಿದ್ದಾಗ ಇಡೀ ಕುಟುಂಬ ಬೇಸಿಗೆಯಲ್ಲಿ ಸಿಮ್ಲಾಗೆ ಹೋಗಿತ್ತು. ಅಲ್ಲಿ ಅವರ ತಂದೆಗೆ ಪ್ರತಿನಿತ್ಯ ಅನೇಕ ಪತ್ರಗಳು ಬರುವುದನ್ನು ನೋಡಿದ ವಿಕ್ರಮ ತನಗೂ ಯಾರಾದರು ಪತ್ರ ಬರೆಯಬಾರದೇ ಎಂದು ಯೋಚಿಸಿದ. ಅದಕ್ಕಾಗಿ ತಂದೆಯ ಕಚೇರಿಯಿಂದ ಹಲವು ಕವರುಗಳನ್ನು ತಂದು ಅಂಚೆಚೀಟಿ ಹಚ್ಚಿ ತನ್ನ ವಿಳಾಸವನ್ನೇ ಬರೆದು ಡಬ್ಬಿಗೆ ಹಾಕುತ್ತಿದ್ದ. ವಿಕ್ರಮನ ಹೆಸರಿಗೆ ಪ್ರತಿದಿನವೂ ತಪ್ಪದೆ ಕವರು ಬರುತ್ತಿರುವುದನ್ನು ನೋಡಿ ಅವರ ತಂದೆ ಪತ್ರ ಎಲ್ಲಿಂದ ಬರುತ್ತಿದೆ ಎಂದು ಕೇಳಿದರು. ವಿಕ್ರಮ ನಗುನಗುತ್ತ “ನಾನೇ ನನಗೆ ಪತ್ರ ಬರೆದು ಕೊಳ್ಳುತ್ತಿದ್ದೇನೆ” ಎಂದ.

ಬಾಲ್ಯದಿಂದ ವಿಕ್ರಮ ಸಾಹಸಪ್ರಿಯ. ಸುಮಾರು ಎಂಟು ವರ್ಷದವನಿದ್ದಾಗ ಸೈಕಲ್ ಸವಾರಿ ಕಲಿತಿದ್ದ. ಸೈಕಲ್ ಮೇಲೆ ಹೋಗುವಾಗ ಅನೇಕ ಚಮತ್ಕಾರಗಳನ್ನು ಮಾಡಿ ಎಲ್ಲರನ್ನೂ ದಂಗು ಮಾಡುತ್ತಿದ್ದ. ವೇಗವಾಗಿ ಚಲಿಸುತ್ತಿರುವ ಸೈಕಲ್ ಮೇಲೆ ಕೈಗಳನ್ನು ಮೇಲೆತ್ತಿ, ಕಾಲುಗಳನ್ನು ಮುಂದಕ್ಕೆ ಚಾಚಿ, ಕಣ್ಣು ಮುಚ್ಚಿಕೊಂಡು ನೇರವಾಗಿ ಹೋಗುತ್ತಿದ್ದ. ಯಾರು ಎಷ್ಟು ಬೇಡವೆಂದು ಆಕ್ಷೇಪವೆತ್ತಿದರೂ ಕೇಳುತ್ತಿರಲಿಲ್ಲ.

ಅವರ ಮನೆಯ ಆವರಣದಲ್ಲೇ ಒಂದು ಕೊಳವಿತ್ತು. ಅಲ್ಲಿ ಒಂದು ದೋಣಿಯೂ ಇತ್ತು. ದೋಣಿಯಲ್ಲಿ ಒಬ್ಬ ಸೇವಕನನ್ನೂ ಒಂದಿಬ್ಬರು ಮಕ್ಕಳನ್ನು ಕೂಡಿಸಿ ಕೊಂಡು ವಿಕ್ರಮ ಕೊಳದಲ್ಲಿ ವಿಹಾರಕ್ಕೆ ಹೋಗುತ್ತಿದ್ದ. ಒಂದು ಸಲ ದೋಣಿ ಮಗುಚಿಕೊಂಡು ಎಲ್ಲರೂ ನೀರು ಪಾಲಾದರು. ಸಹಾಯಕ್ಕಾಗಿ ಕೂಗಲಾರಂಭಿಸಿದರು. ತಕ್ಷಣ ಅಲ್ಲೇ ಕೆಲಸ ಮಾಡುತ್ತಿದ್ದ ಮಾಲಿಗಳು ನೀರಿಗೆ ಧುಮುಕಿ ಅವರೆಲ್ಲರನ್ನೂ ಉಳಿಸಿದರು.

ಅಭ್ಯಾಸದಲ್ಲಿಯೂ ಸಹ ಎಲ್ಲರಿಗಿಂತ ಹೆಚ್ಚಾದ ಶ್ರದ್ಧೆ ಆಸಕ್ತಿಗಳನ್ನು ವಿಕ್ರಮ ತೋರಿಸುತ್ತಿದ್ದ. ಗಣಿತ ಮತ್ತು ವಿಜ್ಞಾನಗಳಲ್ಲಿ ಎಲ್ಲಿಲ್ಲದ ಉತ್ಸಾಹವಿತ್ತು. ರಜಾದಿನಗಳಲ್ಲಿ ಬಿಡುವಿಲ್ಲದೆ ಓದಿ ಶಾಲೆ ತೆರೆದ ನಂತರ ಇತರ ವಿದ್ಯಾರ್ಥಿಗಳಿಗಿಂತ ಮುಂದಿರುತ್ತಿದ್ದ ಎಂದು ಅವರ ಅಧ್ಯಾಪಕರು ಹೇಳಿದ್ದಾರೆ.

ವಿಕ್ರಮ ಎರಡು ವರ್ಷದವನಿದ್ದಾಗ ಕವಿ ರವೀಂದ್ರನಾಥರು ಅವರ ಮನೆಗೆ ಬಂದಿದ್ದರು. ಅವರು ಈ ಸಣ್ಣ ಬಾಲಕನನ್ನು ನೋಡಿ ಅವನು ಜೀವನದಲ್ಲಿ ಖ್ಯಾತಿವಂತನಾಗುತ್ತಾನೆ ಎಂದು ಹೇಳಿದ್ದರಂತೆ.

ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ವಿಕ್ರಮ ಸಾರಾಭಾಯ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಹೋದರು.

ಇಂಗ್ಲೆಂಡಿನಲ್ಲಿ ಮೊದಲಿನಿಂದಲು ಪ್ರಖ್ಯಾತವಾದ ವಿಶ್ವವಿದ್ಯಾಲಯಗಳು ಎರಡು-ಕೇಂಬ್ರಿಜ್ ಮತ್ತು ಆಕ್ಸ್‌ಫರ್ಡ್. ಈ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆಯುವುದೆಂದರೆ ಹೆಮ್ಮೆಯ ವಿಷಯ. ವಿಕ್ರಮ ಸಾರಾಭಾಯ್ ಅವರು ೧೯೩೯ರಲ್ಲಿ, ಅಂದರೆ ಇಪ್ಪತ್ತನೆಯ ವಯಸ್ಸಿನಲ್ಲಿ, ಪ್ರಕೃತಿ ವಿಜ್ಞಾನದಲ್ಲಿ ‘ಟ್ರೈಪಾಸ್’ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಸಿ.ವಿ. ರಾಮನ್, ಭಾಭಾ ಅವರ ಜೊತೆ

೧೯೩೯ರಲ್ಲಿಯೇ ಎರಡನೆಯ ಪ್ರಪಂಚ ಯುದ್ಧ ಪ್ರಾರಂಭವಾದದ್ದು. ಯುದ್ಧದ ಪ್ರಾರಂಭದಲ್ಲೇ ವಿಕ್ರಮ ಭಾರತಕ್ಕೆ ಹಿಂತಿರುಗಿದರು. ಅವರಿಗೆ ಮೊದಲಿನಿಂದಲೂ ಭೌತಶಾಸ್ತ್ರದ ಮೇಲೆ ವಿಶೇಷವಾದ ಪ್ರೀತಿ. ಭಾರತದಲ್ಲಿ ಆಗಿನ ಕಾಲದಲ್ಲಿ ಸಂಶೋಧನೆಗೆ ಪ್ರಖ್ಯಾತವಾದ ಪ್ರಯೋಗಾಲಯವೆಂದರೆ ಬೆಂಗಳೂರಿನಲ್ಲಿ ರುವ ಭಾರತೀಯ ವಿಜ್ಞಾನ ಮಂದಿರ-ಇಂಡಿಯನ್ ಇನ್ಸ್‌ಟಿಟ್ಯೂಟ ಆಫ್ ಸೈನ್ಸ್. (ಇದಕ್ಕೆ ತಾತಾ ವಿಜ್ಞಾನ ಮಂದಿರ ಎಂದೂ ಹೆಸರು.) ಇಲ್ಲಿ ಜಗತ್ ವಿಖ್ಯಾತರಾಗಿದ್ದ ಸಿ.ವಿ. ರಾಮನ್ ಅವರು ಭೌತಶಾಸ್ತ್ರದ ಮುಖ್ಯಸ್ಥರಾಗಿದ್ದರು. ವಿಜ್ಞಾನದಲ್ಲಿ ಅದ್ವಿತೀಯವಾದ  ಬಉಮಾನವೆಂದರೆ ನೊಬೆಲ್ ಬಹುಮಾನ. ವಿಜ್ಞಾನ ಸಂಶೋಧನೆಗಾಗಿ ನೊಬೆಲ್ ಬಹುಮನವನ್ನು ೧೯೩೦ರಲ್ಲೇ ಸಿ.ವಿ. ರಾಮನ್ ರವರು ಪಡೆದಿದ್ದರು. ಸಾರಾಭಾಯ್ ಭಾರತಕ್ಕೆ ಹಿಂತಿರುಗಿದವರು ಭಾರತೀಯ ವಿಜ್ಞಾನ ಮಂದಿರಕ್ಕೆ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆ ನಡೆಸಲು ಬಂದರು. ಪ್ರಖ್ಯಾತ ಭೌತವಿಜ್ಞಾನಿ ಡಾ. ಹೋಮಿ ಜಹಾಂಗೀರ್ ಭಾಭಾ ಸಹ ಅಲ್ಲೇ ಸಂಶೋಧನೆಯಲ್ಲಿ ನಿರತರಾಗಿದ್ದರು. ‘ಮೆಸಾನುಗಳು ಮತ್ತು ವಿಶ್ವಕಿರಣ’ಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು.

ವಿಶ್ವಕಿರಣಗಳ ಅಧ್ಯಯನ

ಮೆಸಾನುಗಳು ಮತ್ತು ವಿಶ್ವಕಿರಣಗಳು ಎಂದರೆ ಏನು? ಪ್ರಪಂಚದಲ್ಲಿರುವ ಎಲ್ಲ ವಸ್ತುಗಳನ್ನೂ ಒಡೆದು ನೋಡಿದಾಗ ನಮಗೆ ದೊರೆಯುವುದು ಮೂರೇ ಮೂರು ಮೂಲ ಕಣಗಳು-ಋಣವಿದ್ಯುತ್ಕಣ, ಧನ ವಿದ್ಯುತ್ಕಣ ಮತ್ತು ವಿದ್ಯುತ್ತಿಲ್ಲದ ಕಣ. ಋಣವಿದ್ಯುತ್ಕಣದ ತೂಕ ಒಂದು ಎಂದಿಟ್ಟುಕೊಂಡರೆ ಧನ ವಿದ್ಯುತ್ಕಣದ ಮತ್ತು ವಿದ್ಯುತ್ತಿಲ್ಲದ ಕಣಗಳ ತೂಕ ೧೮೩೬ ಇರುತ್ತದೆ. ಆದರೆ ಪ್ರಪಂಚದ ವಾತಾವರಣದಲ್ಲಿ ಈ ಮೂರು ಮೂಲ ಕಣಗಳಿಗಿಂತ ಬೇರೆಯಾದ ಅನೇಕ ಕಣಗಳಿವೆಯೆಂದು ತಿಳಿದುಬಂದಿದೆ. ಈ ಭಿನ್ನ ಕಣಗಳ ತೂಕ ಮೇಲೆ ತಿಳಿಸಿದ ಕಣಗಳ ತೂಕಕ್ಕೆ ಸಮನಾಗಿರುವುದಿಲ್ಲ. ಇಂತಹ ಭಿನ್ನ ಕಣಗಳನ್ನು ‘ಮೆಸಾನು’ಗಳೆಂದು ಕರೆಯುತ್ತಾರೆ ಇವುಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ; ಇವು ವಿಶ್ವಕಿರಣಗಳಿಂದ ಉತ್ಪತ್ತಿಯಾಗಿವೆ ಎಂದು ಅವರ ಅಭಿಪ್ರಾಯ. ಪ್ರಪಂಚದ ವಾತಾವರಣದಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಅತ್ಯಂತ ಶಕ್ತಿಯುತವಾದ ಒಂದು ಬಗೆಯ ಕಿರಣಗಳನ್ನು ಕಂಡು ಹಿಡಿದಿದ್ದಾರೆ. ಈ ಕಿರಣಗಳ ಉತ್ಪತ್ತಿ ಭೂಮಿಯ ಹೊರಗಡೆಯೇ ಆಗುತ್ತದೆ. ಆದರೆ ಅವು ಭೂಮಿಯ ಕಡೆಗೆ ಎಲ್ಲ ದಿಕ್ಕುಗಳಿಂದಲೂ ನುಗ್ಗಿ ಬರುತ್ತಿವೆ. ವಿಶ್ವದ ಇತರ ಭಾಗಗಳಿಂದ ಬರುತ್ತಿರುವುದರಿಂದ ಇವಕ್ಕೆ ವಿಶ್ವಕಿರಣ (ಕಾಸ್ಮಿಕ್ ರೇ) ಗಳೆಂದು ಹೆಸರಿಟ್ಟಿದ್ದಾರೆ.

ಹಗಲಿರುಳೆನ್ನದೆ ಪ್ರತಿ ನಿಮಿಷವೂ ಸುಮಾರು ೬೦೦ ವಿಶ್ವಕಿರಣಗಳು ಪ್ರತಿಯೊಬ್ಬ ಮನುಷ್ಯನ ಮೈಯನ್ನು ಹಾದುಹೋಗುತ್ತವೆ. ಕೆಲವು ಶಕ್ತಿಯುತ ಕಣಗಳು ಕಲ್ಲಿನಲ್ಲೂ ನೂರಾರು ಮೀಟರು ದೂರವನ್ನು ಸುಲಭವಾಗಿ ಕ್ರಮಿಸುತ್ತದೆ.

ವಿಕ್ರಮ ಸಾರಾಭಾಯ್ ಅವರು ವಿಶ್ವಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು. ಇವರ ಮೊಟ್ಟ ಮೊದಲನೆಯ ವೈಜ್ಞಾನಿಕ ಪ್ರಬಂಧ ‘ವಿಶ್ವಕಿರಣಗಲ ಕಾಲತೀಕ್ಷ್ಣತೆ’. ಇದು ೧೯೪೨ರಲ್ಲಿ ಬೆಂಗಳೂರಿನ ಒಂದು ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಸಂಶೋಧನೆಯೇ ಮುಂದೆ ಅವರು ಅಂತರಗ್ರಹ ಆಕಾಶ, ಸೂರ‍್ಯ-ಭೂಮಿಯ ಸಂಬಂಧ ಮತ್ತು ಭೂಕಾಂತತ್ವಗಳ ಬಗ್ಗೆ ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟಿತು.

ಈ ಸಮದಯಲ್ಲೇ ಅವರು ಪೂನಾದ ಹವಾಮಾನ ಇಲಾಖೆಯಲ್ಲಿ ಸ್ವಲ್ಪ ಕಾಲ ಸಂಶೋಧನೆ ನಡೆಸುತ್ತಿದ್ದರು. ಆಗ ವಿಶ್ವಕಿರಣಗಳು ಮತ್ತು ವಾತಾವರಣ ಭೌತಶಾಸ್ತ್ರದಲ್ಲಿ ಒಂದು ಸಂಶೋಧನ ಪ್ರಯೋಗಾಲಯವನ್ನು ಸ್ಥಾಪಿಸಬೇಕೆಂಬ ಯೋಚನೆ ಬಂದಿತ್ತು. ೧೯೪೩ರಲ್ಲಿ ಕಾಶ್ಮೀರದಲ್ಲಿ ಹಿಮಾಲಯದ ಶಿಖರಗಳಲ್ಲಿ ವಿಶ್ವಕಿರಣಗಳ ಸಂಶೋಧನೆಗಾಗಿ ಹೋಗಿದ್ದರು. ಅಲ್ಲಿ ಪಡೆದ ಅನುಭವದಿಂದ ಅವರಿಗೆ ಒಂದು ಸ್ಫೂರ್ತಿ ಬಂತು. “ಭೂಮಿಯ ಮೇಲ್ಮೈಗಿಂತ ಅತಿ ಹೆಚ್ಚಿನ ಎತ್ತರದಲ್ಲಿ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕು” ಎಂದು ಅವರಿಗೆ ಎನ್ನಿಸಿತು.

೧೯೪೫ರಲ್ಲಿ ಪ್ರಪಂಚ ಯುದ್ಧ ನಿಂತಿತು. ಅನಂತರ ಸಾರಾಭಾಯ್ ವಿಶ್ವಕಿರಣಗಳ ಬಗ್ಗೆ ಸಂಶೋಧನೆ ಮುಂದುವರಿಸಲು ಮತ್ತೆ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಹೋದರು. ೧೯೪೭ರಲ್ಲಿ ಪಿ.ಹೆಚ್.ಡಿ. ಪದವಿ ಗಿಟ್ಟಿಸಿದರು.

ಪಿ.ಹೆಚ್.ಡಿ. ಪರೀಕ್ಷೆಗೆ ಕೂತು ಪಡೆಯುವ ಪದವಿಯಲ್ಲ. ಯಾರಾದರೊಬ್ಬ ಪ್ರಾಧ್ಯಾಪಕರನ್ನು ಮಾರ್ಗದರ್ಶಕರನ್ನಾಗಿ ಆರಿಸಿಕೊಳ್ಳಬೇಕು. ಹೇಗೆ ಕೆಲಸ ಮಾಡಬೇಕು ಎಂದು ಅವರು ಹೇಳಿಕೊಡುತ್ತಾರೆ. ಅವರು ಸೂಚಿಸಿದ ವಿಷಯವಾಗಿ ಆಳವಾದ ಅಧ್ಯಯನ ಮಾಡಬೇಕು. ತಾನೇ ಪ್ರಯೋಗಗಳಿಂದ ಕಂಡುಹಿಡಿದ ವಿಷಯಗಳನ್ನು ಸರಿಯಾಗಿ ಹೊಂದಿಸಬೇಕು. ಇದನ್ನೆಲ್ಲಾ ಚೆನ್ನಾಗಿ ಅಭ್ಯಾಸ ಮಾಡಿ, ತಾನೇ ಸ್ವತಂತ್ರವಾಗಿ ಯೊಚಿಸಿ ಹೊಸ ತೀರ್ಮಾನಗಳಿಗೆ ಬರಬೇಕು. ಅವೆಲ್ಲವನ್ನೂ ಸೇರಿಸಿ ಪುಸ್ತಕರೂಪದ ಒಂದು ಪ್ರಬಂಧವನ್ನು ಬರೆಯಬೇಕು. ವಿಶ್ವವಿದ್ಯಾಲಯಕ್ಕೆ ಕಳುಹಿಸಬೇಕು. ವಿಷಯವನ್ನು ಚೆನ್ನಾಗಿ ತಿಳಿದ ನಾಲ್ವರು ವಿದ್ಯಾಂಸರಿಗೆ ಅವರು ಆ ಪ್ರಬಂಧವನ್ನು ಕಳುಹಿಸುತ್ತಾರೆ. ‘ಈ ಪ್ರಬಂಧ ಪಿ.ಹೆಚ್.ಡಿ. ಪದವಿಗೆ ಯೋಗ್ಯವಾಗಿದೆ’ ಎಂದು ಅವರು ಹೇಳಿದರೆ ಮಾತ್ರ ಪಿ.ಹೆಚ್.ಡಿ. ಪದವಿ ದೊರಕುತ್ತದೆ. ಆದುದರಿಂದ ಇದನ್ನು ಪಡೆಯುವುದು ಸುಲಭವಲ್ಲ.

ವಿಕ್ರಮ ಸಾರಾಭಾಯ್ ೧೯೪೫ರಲ್ಲಿ ಕೇಂಬ್ರಿಜ್‌ಗೆ ಹೋದರೂ ಸಹ ತಮ್ಮ ಪಿ.ಹೆಚ್.ಡಿ. ಕೆಲಸವನ್ನು ೧೯೪೨ರಲ್ಲೇ ಪ್ರಾರಂಭಿಸಿದ್ದರು. ಅವರ ಪರಿವಾರ ಬೇಸಿಗೆಯಲ್ಲಿಕಾಶ್ಮೀರಕ್ಕೆ ಭೇಟಿ ಕೊಡುತ್ತಿದ್ದುದು ಸಾಮಾನ್ಯ. ಆ ಸಂದರ್ಭಗಳಲ್ಲಿ ವಿಶ್ವಕಿರಣಗಳ ಸಂಶೋಧನೆಗೆ ಸಂಬಂಧಪಟ್ಟ ವೈಜ್ಞಾನಿಕ ಸಲಕರಣೆಗಳನ್ನು ಅಲ್ಲಿಗೆ ಕೊಂಡುಹೋಗುತ್ತಿದ್ದರು. ಗುಲ್ಮಾರ್ಗ್‌ಗಿಂತ ಎತ್ತರದಲ್ಲಿರುವ ‘ಅಲ್ಪತರಿ’ ಸರೋವರದ ದಡದಲ್ಲಿರುವ ‘ಅಪರ್ವತ್’ ಎಂಬ ಸ್ಥಳ ಸಮುದ್ರಮಟ್ಟಕ್ಕಿಂತ ಹದಿಮುರು ಸಾವಿರ ಅಡಿ ಎತ್ತರದಲ್ಲಿದೆ. ಆ ಸ್ಥಳದಲ್ಲಿ ಸಂಶೋಧನೆ ನಡೆಸುತ್ತಿದ್ದರು. ಅವರ ಪಿ.ಹೆಚ್.ಡಿ. ಪ್ರಬಂಧದಲ್ಲಿ ಈ ಸಂಶೋಧನೆಯನ್ನೇ ಅಲ್ಲದೆ ತಮ್ಮ ಮತ್ತು ತಮ್ಮ ಸಲಕರಣೆಗಳ ಚಿತ್ರಗಳೆಲ್ಲವನ್ನೂ ಸೇರಿಸಿದ್ದರು.

ಚಂದ್ರಗ್ರಹದ ಶಿಲೆಯ ಒಂದು ಮಾದರಿಯನ್ನು ಸಾರಾಭಾಯ್ ಪರೀಕ್ಷಿಸುತ್ತಿರುವುದು.

ಕೇಂಬ್ರಿಜ್‌ನಿಂದ ಹಿಂದಿರುಗಿದ ಸ್ವಲ್ಪ ಸಮಯದಲ್ಲಿ ಅಹಮದಾಬಾದಿನಲ್ಲಿ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿದರು. ಡಾ. ಕೆ.ಆರ್. ರಾಮನಾಥನ್ ಎಂಬುವರು ೧೯೪೮ರಲ್ಲಿ ಅದರ ಪ್ರಥಮ ಡೈರೆಕ್ಟರ್ ಆದರು. ಕೆಲವೇ ಸಂಶೋಧನಾ ವಿದ್ಯಾರ್ಥಿಗಳು ಮತ್ತು  ಸಹಾಯಕರಿಂದ ಈ ಸಂಸ್ಥೆ ಪ್ರಾರಂಭವಾಯಿತು. ಆದರೆ ಬಹುಬೇಗ ಇಲ್ಲಿ ಶ್ರದ್ದಾವಂತ ಸಂಶೋಧನಾ ವಿದ್ವಾಂಸರ ಒಂದು ದೊಡ್ಡ ತಂಡವೇ ತಯಾರಾಯಿತು. ತಮ್ಮ ಅನೇಕ ಕೆಲಸ ಕಾರ್ಯಗಳ ಮಧ್ಯೆ ಸಾರಾಭಾಯ್ ಈ ಪ್ರಯೋಗಾಲಯದ ಸಂಬಂಧವನ್ನೂ ಇಟ್ಟುಕೊಂಡಿದ್ದರು. ಮೊದಲು ವಿಶ್ವಕಿರಣಗಳ ಪ್ರಾಧ್ಯಪಕರಾಗಿಯೂ ೧೯೬೫ರಿಂದ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದರು. ಇದೇ ಪ್ರಯೋಗಾಲಯದ ವತಿಯಿಂದ ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್ ಎಂಬಲ್ಲಿ ವಿಶ್ವಕಿರಣಗಳ ಒಂದು ಸಂಶೋಧನಾ ಕೇಮದ್ರವನ್ನು ಸ್ಥಾಪಿಸಿದರು. ಈ ಕೇಂದ್ರ ಮಾಡುತ್ತಿದ್ದ ಒಳ್ಳೆಯ ಕೆಲಸವು ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯನ್ನೂ ಮೆಚ್ಚಿಸಿತು. ಈ ಇಲಾಖೆಯು ೧೯೬೩ ರಲ್ಲಿ ಅದೇ ಸ್ಥಳದಲ್ಲಿ ಒಂದು ಪರಿಪೂರ್ಣವಾದ ಅತಿ ಎತ್ತರದ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿತು. ಸಾರಾಭಾಯ್ ಅವರ ಬಹಳ ದಿನಗಳ ಕನಸು ಅಂದು ನನಸಾಯಿತು. ಮುಂದೆ ತಮಿಳುನಾಡಿನ ಕೊಡೈಕೆನಾಲ್ ಮತ್ತು ತಿರುವನಂತಪುರಗಳಲ್ಲೂ ಇದೇ ರೀತಿಯ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಿದರು.

ಆದಿ ಶಂಕರಾಚಾರ್ಯರು ಸುಮಾರು ೧,೨೦೦ ವರ್ಷಗಳ ಹಿಂದೆ ಧರ್ಮ ಸಂಸ್ಥಾಪನೆಗಾಗಿ ಭಾರತದ ನಾಲ್ಕು ಮೂಲೆಗಳಲ್ಲಿ -ಶೃಂಗೇರಿ, ಪುರಿ, ದ್ವಾರಕ ಮತ್ತು ಬದರಿ-ಮಠಗಳನ್ನು ಸ್ಥಾಪಿಸಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಸಾರಾಭಾಯ್ ವಿಜ್ಞಾನ ಸಂಶೋಧನೆಗಾಗಿ ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ಅನೇಕ ಸಂಸ್ಥೆಗಳು ಮತ್ತು ಪ್ರಯೋಗಲಯಗಳನ್ನು ಸ್ಥಾಪಿಸಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.

ಭಾಭಾರವರ ಉತ್ತರಾಧಿ

೧೯೬೬ರಲ್ಲಿ ಡಾ.ಹೋಮಿ ಭಾಭಾ ಅವರು ಮರಣ ಹೊಂದಿದರು. ಅವರು ಅಣುಶಕ್ತಿ ಕಮಿಷನ್ನಿನ ಅಧ್ಯಕ್ಷರಾಗಿದ್ದರು. ಅವರು ಬಹು ಸಮರ್ಥರು. ಅವರ ಸ್ಥಾನಕ್ಕೆ ಬರಬಲ್ಲವರು ಭಾರತದಲ್ಲಿ ಇಲ್ಲವೋ ಎನ್ನಿಸಿತು ಕೆಲವರಿಗೆ. ಇಂತಹ ನಿರಾಶೆಯ ಪರಿಸ್ಥಿತಿಯಲ್ಲಿ ಅಣುಶಕ್ತಿ ಕಮಿಷನ್ನಿನ ಕೆಲಸ ಮುಂದುವರಿಸಬಲ್ಲವರು ಎಂದು ಕಂಡ ವ್ಯಕ್ತಿ-ವಿಕ್ರಮ ಸಾರಾಭಾಯ್. ಅವರು ಯಶಸ್ವಿಯಾಗಿ ಈ ಕೆಲಸವನ್ನು ನಿರ್ವಹಿಸಿದರು. ಕೆಲವೇ ವರ್ಷಗಳಲ್ಲಿ ಅಣುಶಕ್ತಿ ಕಮಿಷನ್ನಿನ ಕೆಲಸವನ್ನು ಜಯಪ್ರದವಾಗಿ ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ತೋರಿಸಿದರು.

೧೯೭೧ರ ಡಿಸೆಂಬರ್ ೨೯ರಂದು ಸಾರಾಭಾಯ್ ತಿರುವನಂತಪುರದಲ್ಲಿದ್ದರು. ಅಲ್ಲಿ ಒಂದು ಹೋಟೆಲಿನಲ್ಲಿ ತಂಗಿದ್ದರು. ರಾತ್ರಿ ಎಲ್ಲರೊಂದಿಗೆ ಪ್ರತಿದಿನದಂತೆ ಮಾತುಕತೆಯಾಡಿ ಮಲಗಿದರು. ಆದರೆ ಬೆಳಿಗ್ಗೆ ಏಳಲೆ ಇಲ್ಲ. ಲಕ್ಷ್ಮಿಯ ಮಡಿಲಲ್ಲಿ ಹುಟ್ಟಿ ಸರಸ್ವತಿಯ ಆರಾಧಕರಾಗಿದ್ದ ಸಾರಾಭಾಯ್ ಅವರು ಸಂಶೋಧನಾ ಕಾರ್ಯದಲ್ಲಿ ಮಗ್ನರಾಗಿದ್ದಾಗಲೆ ತೀರಿಕೊಂಡರು. ಅವರಿಗೆ ೫೨ ವರ್ಷ ವಯಸ್ಸಾಗಿತ್ತು.

೧೯೪೨ರಲ್ಲಿ ವಿಕ್ರಮ ಸಾರಾಭಾಯ್ ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನ ಸ್ವಾಮಿನಾಥನ್‌ರನ್ನು ಮದುವೆಯಾಗಿದ್ದರು. ಅವರಿಗೆ ಕಾರ್ತಿಕೇಯ ಎಂಬ ಮಗ ಮತ್ತು ಮಲ್ಲಿಕಾ ಎಂಬ ಮಗಳು ಇದ್ದಾರೆ.

ವೈಜ್ಞಾನಿಕ ಸಾಧನೆಗಳು

ಬಹು ಕಾಲದಿಂದ ವಿಜ್ಞಾನವು ವ್ಯಕ್ತಿಗತವಾದ ವಿಷಯವಾಗಿತ್ತು. ವಿಜ್ಞಾನವು ಮುಖ್ಯ, ಇಡೀ ದೇಶ ಅದರಲ್ಲಿ ಆಸಕ್ತಿ ವಹಿಸಬೇಕು, ವಿಜ್ಞಾನವನ್ನು ಅಭ್ಯಾಸ ಮಾಡುವವರಿಗೆ ದೇಶ ಸಹಾಯ ಮಾಡಬೇಕು- ಇಂತಹ ಭಾವನೆ ಕಾಣುತ್ತಿರಲಿಲ್ಲ. ಯಾರಾದರೂ ಒಬ್ಬ ವ್ಯಕ್ತಿಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿದಾಗ, ಅನ್ನ ನೀರು ಬಿಟ್ಟು ಸಂಸಾರ, ಪ್ರಪಂಚಗಳನ್ನೂ ಮರೆತು ಸಂಶೋಧನೆಯಲ್ಲಿ ತೊಡಗುತ್ತಿದ್ದರು. ಆರ್ಕಿಮಿಡೇಸ್, ನ್ಯೂಟನ್, ಫ್ಯಾರಡೆ ಮುಂತಾದವರನ್ನು ಉದಾಹರಣೆಯಾಗಿ ಹೆಸರಿಸಬಹುದು. ವಿಜ್ಞಾನ ವ್ಯಕ್ತಿಗತವಾದ ವಿಚಾರವಾಗಿದ್ದ ದ್ದು ಬದಲಾಗಿ, ದೇಶವೇ ವಿಜ್ಞಾನ ಬಹುಮುಖ್ಯ ಎಂದು ತಿಳಿದುಕೊಳ್ಳಲು ಪ್ರಾರಂಭವಾದದ್ದು, ದೇಶ  ವಿಜ್ಞಾನಿಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದು, ಸುಮಾರು ಒಂದು ನೂರು ವರ್ಷಗಳ ಕೆಳಗೆ. ಪರಮಾಣು ವಿಜ್ಞಾನ ಪ್ರಾರಂಭವಾದ ಮೇಲೆ ಒಬ್ಬ ವ್ಯಕ್ತಿ ಇತರರ ಸಹಾಯವಿಲ್ಲದೆ ಸಂಶೋಧನೆ ನಡೆಸುವುದು ಕಷ್ಟವಾಯಿತು. ಆಗ ವಿಜ್ಞಾನಿಗಳ ಗುಂಪುಗಳು ಸಂಶೋಧನೆಯಲ್ಲಿ ತೊಡಗಿದ್ದವು. ಅಲ್ಲದೆ ನಾಲ್ಕಾರು ಸಂಶೋಧನಾಲಯಗಳ ಸಹಕಾರದಿಂದ ಸಂಶೋಧನೆ ಮುಂದುವರಿಯಬೇಕಾಯಿತು. ಅಂದರೆ ವಿಜ್ಞಾನವು ವ್ಯಕ್ತಿಯ ಮಟ್ಟದಿಂದ ರಾಷ್ಟ್ರದ ಮಟ್ಟಕ್ಕೆ ಬಂತು.

ಈಗ ವಿಜ್ಞಾನವು ರಾಷ್ಟ್ರೀಯ ಎಲ್ಲೆಯನ್ನು ಮೀರಿ ಅಂತರರಾಷ್ಟ್ರೀಯ ಸ್ಥಾನಮಾನವನ್ನು ಹೊಂದಿದೆ. ಎಂದರೆ, ಹಲವು ದೇಶಗಳ ವಿಜ್ಞಾನಿಗಳು ತಾವು ಕಂಡು ಹಿಡಿದಿದ್ದನ್ನು ಹಂಚಿಕೊಳ್ಳಬೇಕು, ಒಬ್ಬರು ಇನ್ನೊಬ್ಬರಿಗೆ ನೆರವಾಗಬೇಕು. ಇದಕ್ಕೆಕಾರಣ ೧೯೫೭ರಲ್ಲಿ ಪ್ರಾರಂಭವಾದ ಬಾಹ್ಯಾಕಾಶ ಅಥವಾ ವ್ಯೋಮ ಸಂಶೋಧನೆ. ಈ ಸಂಶೋಧನೆಯಲ್ಲಿ ಒಂದು ದೇಶದವರು ತೊಡಗಿದ್ದರೂ ಮಿಕ್ಕ ದೇಶಗಳ ಸಹಕಾರವಿಲ್ಲದಿದ್ದರೆ ಅದು ಮುಮದುವರಿಯುವುದು ಕಷ್ಟವಾಗುತ್ತದೆ. ಅಮೆರಿಕದವರೇ ಕೃತಕ ಉಪಗ್ರಹಗಳನ್ನು ಹಾರಿಸಬಹುದು. ಅದು ಹೇಗೆ ಸಾಗಿಹೋಗುತ್ತೆ ಎಂದು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ನೋಡಿ ಅಭ್ಯಾಸ ಮಾಡಬೇಕು. ಎಂದರೆ, ಇತರ ರಾಷ್ಟ್ರಗಳಲ್ಲಿ ಅದರ ವೀಕ್ಷಣಾಲಯಗಳನ್ನು ಕಟ್ಟಲೇಬೇಕು. ಸಂಪರ್ಕ ಉಪಗ್ರಹಗಳನ್ನು ಹಾರಿಸಿದಾಗಲಂತೂ ವಾರ್ತೆಯನ್ನಾಗಲೀ ದೃಶ್ಯವನ್ನಾಗಲಿ ಒಂದು ದೇಶದಿಂದ ಸಹಸ್ರಾರು ಮೈಲಿ ದೂರವಿರುವ ಇನ್ನೊಂದು ದೇಶಕ್ಕೆ ಉಪಗ್ರಹಗಳ ಮೂಲಕ ತಲುಪಿಸುತ್ತಾರೆ. ಆ ಇನ್ನೊಂದು ದೇಶದ ಸಹಕಾರವಿಲ್ಲದಿದ್ದರೆ ಸಂಶೋಧನೆ ಮುಂದುವರಿಸಲು ಅಸಾಧ್ಯ.

ವಿಕ್ರಮ ಸಾರಾಭಾಯ್ ಅವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖರಾಗಿದ್ದರು. ಅವರು ವಿಶ್ವಕಿರಣಗಳ ಬಗ್ಗೆ ಸಂಶೋಧನೆ ನಡೆಸಿ ಒಂದು ಮುಖ್ಯ ಫಲಿತಾಂಶವನ್ನು ಕಂಡು ಹಿಡಿದರು: ‘ವಿಶ್ವಕಿರಣಗಳ ತೀಕ್ಷ್ಣತೆ ದಿನಕ್ಕೆ ಎರಡು ಬಾರಿ ವ್ಯತ್ಯಾಸವಾಗುತ್ತದೆ.’ ಈ ಫಲಿತಾಂಶದಿಂದ ಅಂತರಗ್ರಹ ಆಕಾಶದ ಸ್ವರೂಪ ತಿಳಿಯಲು ಸಹಾಯವಾಯಿತು. ಹಾಗೆಯೇ ಅದರ ವಿದ್ಯುತ್‌ಕಾಂತ ಗುಣಗಳನ್ನು ಕಂಡುಹಿಡಿಯಲು ಸಹಾಯವಾಯಿತು.

(ಒಂದು ಕಬ್ಬಿಣದ ತುಂಡಿನ ಸುತ್ತ ತಂತಿಯನ್ನು ಹಾಯಿಸಿ ವಿದ್ಯುತ್ತನ್ನು ಹರಿಸಿದರೆ, ಕಬ್ಬಿಣದ ತುಂಡು ಅಯಸ್ಕಾತವಾಗುತ್ತದೆ. ಒಂದು ತಂತಿಯ ಬಳಿ ಆ ಅಯಸ್ಕಾಂತವನ್ನು ಅತ್ತಿತ್ತ ಸರಿಸಿದರೆ ತಂತಿಯಲ್ಲಿ ವಿದ್ಯುತ್ತು ಉತ್ಪತ್ತಿಯಾಗುತ್ತದೆ. ಹೀಗೆ ವಿದ್ಯುತ್ತಿನಿಂದ ಅಯಸ್ಕಾಂತವನ್ನು, ಅಯಸ್ಕಾಂತದಿಂದ ವಿದ್ಯುತ್ತನ್ನು ಪಡೆಯುವುದಕ್ಕೆ ವಿದ್ಯುತ್‌ಕಾಂತ ಗುಣ ಎಂದು ಹೆಸರು.)

೧೯೫೭ರಲ್ಲಿ ಬಾಹ್ಯಾಕಾಶ ಸಂಶೋಧನೆ ಪ್ರಾರಂಭವಾಯಿತು. ಸಾರಾಭಾಯ್ ಆಗ ತಾವು ಕಂಡುಹಿಡಿದಿದ್ದ ವೈಜ್ಞಾನಿಕ ಫಲಿತಾಂಶಗಳು ಸರಿಯೋ ಅಲ್ಲವೋ ಎಂದು ತಿಳಿಯಲು ಬಾಹ್ಯಾಕಾಶ ಪ್ರಯೋಗಗಳನ್ನು ಉಪಯೋಗಿಸಿಕೊಂಡರು. ಅಮೆರಿಕ ಮತ್ತು ಜಪಾನ್ ದೇಶಗಳವರು ಒಟ್ಟು ಗೂಡಿ ಬೊಲಿವಿಯದ ಚಕಲ್ಪಯ ಎನ್ನುವ ಸ್ಥಳದಲ್ಲಿ ಎತ್ತರದ ಪ್ರಯೋಗಾಲಯದಲ್ಲಿ ಮೆಸಾನುಗಳನ್ನು ಕಂಡು ಹಿಡಿಯುವ ಸಾಧನವೊಂದನ್ನು ಸ್ಥಾಪಿಸಿದ್ದರು. ಸಾರಾಭಾಯ್ ಅವರು ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ಅಲ್ಲಿಗೆ ಕಳಹಿಸಿ ಪ್ರಯೋಗಗಳನ್ನು ನಡೆಸಿದರು. ಇದರಿಂದ ಒಳ್ಳೆಯ ಫಲಿತಾಂಶಗಳು ದೊರೆತವು.

ಭೂಕಾಂತತ್ವದ ಬಗ್ಗೆ ತಿರುವನಂತಪುರ, ಅಲಿಬಾಗ್, ಹೊನಲೂಲು ಮತ್ತು ಗೌಆಮ್‌ಗಳಲ್ಲಿ ಸಂಶೋಧನೆ ನಡೆಸಿ ಭೂಕಾಂತತ್ವದ ಏರಿಳಿತಗಳು ಇಲ್ಲಿಯವರೆಗೂ ನಂಬಿದ್ದ ಕಾರಣಗಳಿಗಿಂತ ಭಿನ್ನವಾಗಿವೆಯೆಂದು ಸ್ಥಿರಪಡಿಸಿದರು. (ಭೂಮಿಯು ಒಂದು ಅಯಸ್ಕಾಂತದಂತೆ ವರ್ತಿಸುತ್ತದೆ. ಭೂಮಿಯ ಅಯಸ್ಕಾಂತ ಗುಣಗಳಿಗೆ ಭೂಕಾಂತತ್ವ ಎನ್ನುತ್ತಾರೆ.)

ವ್ಯಕ್ತಿತ್ವ

ಸಾರಾಭಾಯ್ ಅವರು ಪ್ರತಿಭಾವಂತರು. ಹಲವು ದೇಶಗಳಲ್ಲಿ ಅವರು ಕೀರ್ತಿ ಹಬ್ಬಿತ್ತು. ಅವರು ವಿಶ್ವಕಿರಣ ಮತ್ತು ಅಣುಶಕ್ತಿ ರಂಗಗಳಲ್ಲಿ ಸಂಶೋಧನೆ ನಡೆಸಿದ್ದರು ಎಂದು ನಾವು ಅವರನ್ನು ಸ್ಮರಿಸಬೇಕು. ಅವರನ್ನು ನೆನೆಸಿಕೊಳ್ಳಲು ಇನ್ನೊಂದು ಮಹತ್ತರ ಕಾರಣವಿದೆ. ನಮ್ಮ ರಾಷ್ಟ್ರಕ್ಕೆ, ಪ್ರಪಂಚದಲ್ಲಿ ಹೊಸ ಸ್ಥಾನವನ್ನು ಕೊಡಲು ಪ್ರಯತ್ನಿಸಿದರು. ವಿಜ್ಞಾನದ ಮೂಲಕ ಜೀವನದ ಉದ್ದೇಶಗಳ ಸಾಧನೆ ಹೇಗೆಂಬುದರ ಬಗ್ಗೆ ಅವರು ಯಾವಾಗಲೂ ಕಳಕಳಿಯಿಂದ ಚಿಂತಿಸುತ್ತಿದ್ದರು.

ವಿಕ್ರಮ ಸಾರಾಭಾಯ್ ಬಹು ನಿಗರ್ವಿ ಮತ್ತು ಸರಳ ಸ್ವಭಾವದವರು. ಯಾವಾಗಲೂ ಮೃದುವಾಗಿ ಮಾತನಾಡುತ್ತಿದ್ದರು. ವಿನಯಶೀಲರಾಗಿದ್ದರು. ಅವರು ಒಳ್ಳೆಯ ವಿಜ್ಞಾನಿ, ಸಮರ್ಥ ಆಡಳಿತಗಾರ, ಜೊತೆಗೆ ಇತರರನ್ನು ಸ್ನೇಹದಿಂದ, ಸಹಾನುಭೂತಿಯಿಂದ ಕಾಣಬಲ್ಲ ಮನುಷ್ಯ. ಅವರಿಗೆ ಕೆಲಸದ ಒತ್ತಡ ಬಹಳ; ಜೊತೆಗೆ ಕೆಲಸದ ಜವಾಬ್ದಾರಿಯೂ ಹೆಚ್ಚು. ಬಿಡುವೆಂಬುದೇ ಇಲ್ಲ.ಆದರೂ ಕೊನೆಯವರೆಗೂ ಜೀವನದಲ್ಲಿ ಸೌಂದರ್ಯಕ್ಕೆ ಬೆಲೆಯನ್ನು ಕೊಡುವಂತಹ ವ್ಯಕ್ತಿಯಾಗಿಯೇ ಉಳಿದಿದ್ದರು. ಅವರು ನಿಜ ಜೀವನಕ್ಕೆ ದೂರವಾಗಿ ಬೆಟ್ಟದ ತುದಿಯಲ್ಲಿ ಕುಳಿತ ವಿಜ್ಞಾನಿಯಾಗಿರಲಿಲ್ಲ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅವರ ಕುಟುಂಬದ ಗುಂಪಿಗೆ ಸೇರಿದ ಕೈಗಾರಿಕೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಅಸಾಧಾರಣ ವಿದ್ಯೆ, ಕೈಗಾರಿಕಾ ಅನುಭವ ಮತ್ತು ಅಪಾರ ಹಣ ಎಲ್ಲವನ್ನೂ ಅಂಗೈಯಲ್ಲಿಟ್ಟುಕೊಳ್ಳುವ ಅದೃಷ್ಟ ಅವರಿಗಿತ್ತು. ಇವೆಲ್ಲ ದೊರೆತವರಲ್ಲಿ ವಿನಯ, ಸ್ನೇಹ ಸ್ವಭಾವ ಸಾಮಾನ್ಯವಾಗಿ ಇರುವುದಿಲ್ಲ ಆದರೆ ವಿದ್ಯೆ, ಅಧಿಕಾರ, ಹಣ ಎಲ್ಲ ಕೈಯಲ್ಲಿದ್ದರೂ ಸಾರಾಭಾಯ್ ವಿನಯವಂತರು, ಸ್ನೇಹಪರರು. ಅನೇಕ ಸಲ ಯಾರಾದರೂ ತಿಳಿಯದವರು ಬಂದು ಬಹಳ ಹೊತ್ತು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳುತ್ತಿದ್ದರೂ ಸಹ ಸಾರಾಭಾಯ್ ಸಾವಧಾನದಿಂದ ಕೇಳುತ್ತಿದ್ದರು. ಕೊನೆಯಲ್ಲಿ ಅವರಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದರು. “ಇದರಿಂದ ನಿಮ್ಮ ಸಮಯ ಹಾಳಲ್ಲವೆ?” ಎಂದು ಯಾರಾದರೂ ಪ್ರಶ್ನಿಸಿದರೆ ಅವರ ಉತ್ತರ: “ವಿಶಾಲವಾದ ಭಾರತದಲ್ಲಿ ಜನ ಅನೇಕ ಹಿನ್ನೆಲೆಗಳಿಂದ ಬಂದಿರುತ್ತಾರೆ. ಪ್ರತಿಯೊಬ್ಬರಿಗೂ ನಮ್ಮಂತೆ ಒಳ್ಳೆಯ ಶಿಕ್ಷಣದ ಸುಯೋಗ ಇರುವುದಿಲ್ಲ. ಆದುದರಿಂದ ಅವರು ಹೇಳಿದ್ದೆಲ್ಲ ಕೇಳಿ ಅವರ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ.”


ಸಾರಾಭಾಯ್ ಅವರ ಜೊತೆಯಲ್ಲಿದ್ದರೇ ಇತರರಿಗೆ ಸಂತೋಷ, ಸಮಾಧಾನ; ಅಂತಹ ವ್ಯಕ್ತಿ ಅವರು. ಒಂದು ಮಾತನಾಡದಿದ್ದರೂ ಸಹ, ಅವರ ಮುಗುಳ್ನಗೆಯೇ ಅವರ ಸಹೋದ್ಯೋಗಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದಿತು. ಅನೇಕ ಸಮಸ್ಯೆಗಳನ್ನು ಹೊತ್ತು ಅವರಲ್ಲಿಗೆ ಹೋದಾಗಲೂ ಅವರ ಕಣ್ಣಿನ ಕಾಂತಿ ಮತ್ತು ಭರವಸೆ ತುಂಬಿದ ಮುಗುಳ್ನಗೆ ಇವುಗಳಿಂದ ಹೋದವರಿಗೆ ‘ಆ ಸಮಸ್ಯೆಗಳಿಗೆ ಪರಿಹಾರ ನಾವೇ ಕಂಡುಕೊಳ್ಳಬಹುದು’ ಎಂಬ ನಂಬಿಕೆ ಬರುತ್ತಿತ್ತು. ಯಾರೇ ಆಗಲಿ ತೊಂದರೆಯಲ್ಲಿದ್ದರೆ ಅವರಿಗೆ ಸಹಾಯ ಮಾಡಲು ಅವರು ಸದಾಸಿದ್ಧರಾಗಿರುತ್ತಿದ್ದರು. ಒಂದು ದಿನ ಒಬ್ಬ ಕೂಲಿ ಭಾರವಾದ ಪೆಟ್ಟಿಗೆಗಳನ್ನು ಕೈಗಾಡಿಯಲ್ಲಿ ತರುತ್ತಿದ್ದ. ಪ್ರಯೋಗಾಲಯದ ಒಳಕ್ಕೆ ಹೋಗುವಾಗ ಗಾಡಿಯನ್ನು ತಳ್ಳಲು ಕಷ್ಟಪಡುತ್ತಿದ್ದ. ಇದನ್ನು ನೋಡಿದ ಸಾರಾಭಾಯ್ ಗಾಡಿಯನ್ನು ಒಳಕ್ಕೆ ತಳ್ಳಲು ಸಹಾಯ ಮಾಡಿದರು. ಪ್ರಯೋಗಾಲಯದ ಮೊದಲ ದಿನಗಳಲ್ಲಿ ಭಾರವಾದ ಉಪಕರಣಗಳನ್ನು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತೆಗೆದುಕೊಂಡು ಹೋಗಬೇಕಾದರೆ ಯಾರನ್ನೂ ಕರೆಯುತ್ತಿರಲಿಲ್ಲ. ಅವರೇ ಸ್ವತಃ ತರುತ್ತಿದ್ದರು.

ಎಲ್ಲ ಮನುಷ್ಯರನ್ನು ಸಮಾನವಾಗಿ ನೋಡುವ ದೃಷ್ಟಿ ಅವರಲ್ಲಿತ್ತು. ಒಬ್ಬ ಸೇವಕನೇ ಆಗಲಿ, ತಾನು ಕೀಳುಎಂಬ ಭಾವನೆಯಿಲ್ಲದೆ ಅವರನ್ನು ಕಾಣಬಹುದಾಗಿತ್ತು. ಅವರು ಸಹ ಬಂದವನಿಗೆ ಕೂಡಲು ಹೇಳಿ ಯಾವ ಸಂಕೋಚವೂ ಇಲ್ಲದೆ ಮಾತನಾಡುವಂತೆ ತಿಳಿಸುತ್ತಿದ್ದರು. ಎಲ್ಲ ವ್ಯಕ್ತಿಗಳಿಗೂ ಗೌರವ ಕೊಡಬೇಕು ಎಂದು ಅವರು ನಂಬಿಕೆ ಇಟ್ಟಿದ್ದರು. ಬಡವರು ಎಂದಾಗಲಿ, ತಿಳಿಯದವರು ಎಂದಾಗಲಿ ಯಾರನ್ನು ಅಲಕ್ಷ್ಯ ಮಾಡುತ್ತಿರಲಿಲ್ಲ. ಯಾವ ಸಂಸ್ಥೆಯಲ್ಲೇ ಆಗಲಿ, ವ್ಯಕ್ತಿಯ ಸ್ಥಾನವನ್ನು ಅವನ ಕೆಲಸ ಮತ್ತು ಜವಾಬ್ದಾರಿಯಿಂದ ಅಳೆಯಬೇಕೇ ವಿನಹ ಅವನ ಸಂಬಳದಿಂದಲ್ಲ ಎನ್ನುವುದು ಅವರ ನಂಬಿಕೆಯಾಗಿದ್ದಿತು. ಸಂಸ್ಥೆಯ ಒಳಿತಿಗಾಗಿ ಎಲ್ಲರೂ ದುಡಿಯಬೇಕೆಂಬುದೇ ಅವರ ಧ್ಯೇಯ.

ಉಡುಪು ಧರಿಸುವುದರಲ್ಲೂ ಸಹ ಅವರು ಯಾವಾಗಲೂ ಸರಳವಾಗಿಯೇ ಇದ್ದರು. ಮೊದಮೊದಲು ಬಣ್ಣ ಬಣ್ಣದ ಶರಟುಗಳನ್ನು ಹಾಕಿಕೊಳ್ಳುವುದರಲ್ಲಿ ಆಸಕ್ತಿಯಿತ್ತು. ಇಂದು ಹಸಿರು, ನಾಳೆ ಹೊಳೆಯುವ ನೀಲಿ, ಮತ್ತೊಂದು ದಿನ ಕೆಂಪು, ಹೀಗೆ ಬಣ್ಣಗಳನ್ನು ಬದಲಾಯಿಸುತ್ತಿದ್ದರು. ಅನಂತರದಲ್ಲಿ ಸಾಮಾನ್ಯವಾದ ಜುಬ್ಬ, ಪಾಯಿಜಾಮ, ಕಾಲಿಗೆ ಚಪ್ಪಲಿ ಇಷ್ಟೇ ಅವರ ಉಡುಪು.

ವಿದ್ಯಾರ್ಥಿಗಳೊಂದಿಗೆ

ಯುವಕ ವಿಜ್ಞಾನಿಗಳಿಗೆ ತರಬೇತಿ ನೀಡುವುದು ಭೌತಸಂಶೋಧನಾ ಪ್ರಯೋಗಾಲಯದ ಮುಖ್ಯ ಉದ್ದೇಶಗಳಲ್ಲಿ ಒಂದು. ಸಾರಾಭಾಯ್ ಅವರ ಚಟುವಟಿಕೆಗಳು ಹಲವಾರು ಇದ್ದರೂ ಸಹ ವಿದ್ಯಾರ್ಥಿಗಳ ಶಿಕ್ಷಣವನ್ನು ಮಾತ್ರ ಯಾವಾಗಲೂ ಕಡೆಗಣಿಸಲಿಲ್ಲ. ಸುಮಾರು ಇಪ್ಪತ್ತು ವಿದ್ಯಾರ್ಥಿಗಳಿಗೆ ಅವರು ಉತ್ತಮ ರೀತಿಯ ಸಂಶೋಧನೆ ನಡೆಸಲು ಪ್ರೋತ್ಸಾಹಿಸಿ ಡಾಕ್ಟರೇಟ್ ಪದವಿಗೆ ಅರ್ಹರನ್ನಾಗಿ ಮಾಡಿದರು.

ಮಧ್ಯರಾತ್ರಿಯಲ್ಲಿ ಅವರನ್ನು ಪ್ರಯೋಗಾಲಯದಲ್ಲಿ ಕಾಣುವುದು ಸರ್ವೇ ಸಾಮಾನ್ಯವಾದ ವಿಷಯವಾಗಿತ್ತು. ಅಂತಹ ಹೊತ್ತಿನಲ್ಲೂ ವಿದ್ಯಾರ್ಥಿಗಳ ಸಂಶೋಧನೆಯೇ ಅವರ ಮನಸ್ಸಿನಲ್ಲಿರುತ್ತಿತ್ತು. ಅನೇಕ ವೇಳೆ, ಬೇರೆ ಕಡೆಗೆ ಹೋಗಲು ವಿಮಾನ ನಿಲ್ದಾಣವನ್ನು ತಲುಪಿದಾಗ ವಿಮಾನ ಹೊರಡುವವರೆಗೂ ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಶೋಧನಾ ಸಮಸ್ಯೆಗಳ ಬಗ್ಗೆ ಚರ್ಚೆಮಾಡುತ್ತಿರುವುದನ್ನು ಕಾಣಬಹುದಿತ್ತು.

ಬರೋಡದಲ್ಲಿ ಸಾರಾಭಾಯ್ ಕುಟುಂಬದವರ ಒಂದು ಔಷಧ ತಯಾರಿಕಾ ಕಾರ್ಖಾನೆ ಇತ್ತು. ಪ್ರತಿ ಶುಕ್ರವಾರ ವಿಕ್ರಮ ಸಾರಾಭಾಯ್ ಬರೋಡಕ್ಕೆ ಹೋಗಿ ಅದರ ಮೇಲ್ವಿಚಾರಣೆ ನಡೆಸಿ ಬರುತ್ತಿದ್ದರು. ರೈಲು ಪ್ರಯಾಣದಲ್ಲಿ ವ್ಯರ್ಥವಾಗಿ ಕಾಲ ಕಳೆಯುವುದು ಅವರಿಗೆ ಇಷ್ಟವಿರಲಿಲ್ಲ. ಆದುದರಿಂದ ಯಾರಾದರೂ ಒಬ್ಬ ವಿದ್ಯಾರ್ಥಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ರೈಲು ಪ್ರಯಾಣದಲ್ಲಿ ದಾರಿಯುದ್ದದಕ್ಕೂ ಸಂಶೋಧನೆ ಬಗ್ಗೆ ಅಥವಾ ಸಂಶೋಧನಾ ಪ್ರಕಟಣೆಯಲ್ಲಿ ಬಗ್ಗೆ ವಿಮರ್ಶೆ ಮಾಡುತ್ತಿದ್ದರು.

ಅವರು ಅನೇಕ ಸಲ ವಿದೇಶಗಳಿಗೆ ಹೋಗಿದ್ದರು. ಅವರಿಗೆ ಎಷ್ಟೇ ಕೆಲಸ ಕಾರ್ಯಗಳಿದ್ದರೂ ನೋಡಲು ಬಂದ ಭಾರತೀಯ ವಿದ್ಯಾರ್ಥಿಯನ್ನು ಭೇಟಿ ಮಾಡುತ್ತಿದ್ದರು. ಭಾರತಕ್ಕೆ ಹಿಂತಿರುಗಿ ಇಲ್ಲೇ ಸಂಶೋಧನೆ ನಡೆಸಲು ಪ್ರೇರೇಪಿಸುತ್ತಿದ್ದರು.

ವಿದೇಶಗಳಿಗೆ ಹೋಗ ಬಯಸುವ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಬಯಕೆ ಇಷ್ಟೆ-ವಿದೇಶಗಳಲ್ಲಿ ಹೊಸ ವಿಜ್ಞಾನ ಮತ್ತು ಹೊಸ ತಾಂತ್ರಿಕ ಜ್ಞಾನವನ್ನು ಪಡೆದು ಭಾರತಕ್ಕೆ ಹಿಂದಿರುಗಿ ಮಾತೃಭೂಮಿಯ ಸೇವೆಯಲ್ಲಿ ತೊಡಗಬೇಕು. ಯುವಕ ವಿಜ್ಞಾನಿಗಳ ಆಸೆ-ಆಕಾಂಕ್ಷೆಗಳನ್ನು ಪೂರೈಸುವ ವಾತಾವರಣವನ್ನು ಕಲ್ಪಿಸಿದರೆ ಅವರಾಗಿ ಮಾತೃಭೂಮಿಗೆ ಹಿಂತಿರುಗವರೆಂಬ ಭರವಸೆ ಅವರಿಗಿತ್ತು. ನಮ್ಮ ಯುವಕರಲ್ಲಿ ಅವರಿಗೆ ಇಂತಹ ಅದಮ್ಯ ವಿಶ್ವಾಸವಿತ್ತು.

ಸಾರಾಭಾಯ್ ಅವರ ಆಸೆಆಕಾಂಕ್ಷೆಗಳು, ವಿಚಾರಗಳು

ಹೋಮಿ ಭಾಭಾ ಅಣುಶಕ್ತಿ ಸಂಶೋಧನೆಯ ಶೈಶವಾವಸ್ಥೆಯಲ್ಲೇ ಒಂದು ಕನಸನ್ನು ಕಂಡಿದ್ದರು. ಭಾರತ ತನ್ನ ನಿಪುಣರಿಗಾಗಿ ವಿದೇಶಗಳ ಕಡೆ ನೋಡಬಾರದು. ಬೇಕೆಂದಾಗ ನಮ್ಮಲ್ಲೇ ಪಡೆಯುವಂತಾಬೇಕು. ಈ ಉದ್ದೇಶಕ್ಕಾಗಿ ಅಗತ್ಯವಾದ ಸಂಸ್ಥೆಗಳನ್ನೂ ಪ್ರಯೋಗಾಲಯಗಳನ್ನೂ ಸ್ಥಾಪಿಸಿದರು. ವಿಕ್ರಮ ಸಾರಾಭಾಯ್ ಸಹ ಒಂದು ಕನಸು ಕಂಡಿದ್ದರು. ಮುಂದಿನ ವರ್ಷಗಳಲ್ಲಿ ವ್ಯವಸಾಯ, ಕೈಗಾರಿಕೆ, ಜನತಾ ಸಂಪರ್ಕದ ಉಪಗ್ರಹಗಳು, ರಾಷ್ಟ್ರೀಯ-ಏಕತೆಯ ವೃದ್ಧಿ, ಅಕ್ಷರಜ್ಞಾನ ಪ್ರಸಾರ, ಹವಾಮಾನ ವೀಕ್ಷಣೆ ಮತ್ತು ಖನಿಜ ಶೋಧನೆ ಇವೆಲ್ಲವುಗಳಿಗೂ ಅಣುಶಕ್ತಿ ಕೇಂದ್ರಗಳ ಸೇವೆಯನ್ನು ಉಪಯೋಗಿಸಿಕೊಳ್ಳುವಂತಾಗಬೇಕು. ಇದಕ್ಕಾಗಿಯೇ ಅವರು ತಮ್ಮ ಕೊನೆಯುಸಿರಿನ ತನಕ ಕೆಲಸ ಮಾಡಿದರು.

ಸಂಪೂರ್ಣ ನಮ್ಮದೇ ಆದ ಜ್ಞಾನ, ಯಂತ್ರಗಳು ಮತ್ತು ಸಲಕರಣೆಗಳಿಂದಲೇ ಅಣುಶಕ್ತಿಯನ್ನು ಉತ್ಪಾದಿಸಲು ಸಾಧ್ಯ. ಆದ್ದರಿಂದ ಭಾರವಾದ ನೀರಿನ ಕಾರ್ಖಾನೆ, ನ್ಯೂಕ್ಲಿಯರ್ ಇಂಧನದ ಕಾರ್ಖಾನೆ ಮುಂತಾದವುಗಳೆಲ್ಲವನ್ನೂ ಸ್ಥಳೀಯ ಸಂಪನ್ಮೂಲ ಗಳಿಂದಲೇ ನಡೆಸಬೇಕೆಂಬುದು ಅವರ ಆಸೆ. ಅದಕ್ಕಾಗಿ ಈ ಕಾರ್ಖಾನೆಗಳೆಲ್ಲವನ್ನೂ ಪ್ರಾರಂಭಿಸಿದರು. ಅವು ಪೂರ್ತಿಗೊಳ್ಳುವ ಹೊತ್ತಿಗೆ ಅವರೇ ಇಲ್ಲದಂತಾದರು.

ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ಜನ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನವನ್ನು ಹೇಗೆ ಉಪಯೋಗಿಸಿಕೊಳ್ಳುವರೆಂಬುದರ ಮೇಲೆ ಅವಲಂಬಿಸಿದೆ. ಆರ್ಥಿಕ ಪ್ರಗತಿಯನ್ನು ಹೊಂದಬೇಕಾದರೆ ಮೂಲ ವಿಜ್ಞಾನಗಳು, ತಾಂತ್ರಿಕತೆ ಮತ್ತು ಕೈಗಾರಿಕಾ ಅನುಭವ ಇವುಗಳ ಪರಸ್ಪರ ಪ್ರಭಾವಗಳಿಂದಲೇ ಸಾಧ್ಯ. ಸಂಪನ್ಮೂಲಗಳನ್ನು ಕೂಡಿಸುವುದಕ್ಕೆ ಮುಂಚಿತವಾಗಿ ಹಣ ಕೂಡಿಸಬೇಕು. ಪ್ರತಿಭಾವಂತ ಯುವಕ ಯುವತಿಯರಿಗೆ ಒಳ್ಳೆಯ ಶಿಕ್ಷಣ ಕೊಟ್ಟು, ಶ್ರೇಷ್ಠ ವಿಜ್ಞಾನಿಗಳನ್ನು ಸಿದ್ದಗೊಳಿಸಬೇಕು. ನಮ್ಮ ದೇಶಕ್ಕೆ ಏನೇನು ಬೇಕು ಎಂದು ತಿಳಿದು ತಾಂತ್ರಿಕ ಯೋಜನೆಯನ್ನು ಸಿದ್ಧಪಡಿಸಬೇಕು, ಈ ಯೋಜನೆ ತುಂಬ ಕಾಲವನ್ನು ತೆಗೆದುಕೊಳ್ಳಬಾರದು. ಅತ್ಯಂತ ಮುಂದುವರಿದ ಮತ್ತು ಹೊ ಸ ಹೊಸ ಪ್ರಯೋಗ ವಿಧಾನಗಳನ್ನು ಪ್ರಪಂಚದೆಲ್ಲ ಕಡೆಗಳಿಂದಲೂ ಕಲಿಯಬೇಕು. ಅಲ್ಲದೆ ಅವು ಭಾರತದಲ್ಲಿ ಬೆಳೆಯುವಂತೆ ಮಾಡಬೇಕು ಎಂದು ಅವರ ಅಭಿಪ್ರಾಯ.

ಗೌರವಗಳ ಸುರಿಮಳೆ

ಭಾರತದ ಟೆಕ್ಸ್‌ಟೈಲ್ಸ್ ಟೆಕ್ನೀಷಿಯನ್ಸ್ ಅಸೋಷಿಯೇಷನ್‌ಗೆ ಸಾಮಾನ್ಯವಾಗಿ ಮಿಲ್ ಮಾಲೀಕರು ಅಧ್ಯಕ್ಷರಾಗುತ್ತಿರಲಿಲ್ಲ. ಸಾರಾಭಾಯ್ ಮಾಲೀಕರ ಗುಂಪಿಗೆ ಸೇರಿದರು. ಆದರೂ ಸಂಘದ ಸದಸ್ಯರು ಅವರನ್ನು ತಮ್ಮ ಸಂಘಕ್ಕೆ ಅಧ್ಯಕ್ಷರಾಗಬೇಕೆಂದು ೧೯೫೫ರಲ್ಲಿ ಕೇಲಿಕೊಂಡರು.

೧೯೫೬ರಲ್ಲಿ ಜಪಾನಿನಲ್ಲಿ ಪ್ರೊಡಕ್ಟಿವಿಟಿಕಾಂಗ್ರೆಸ್‌ ಸಮ್ಮೇಳನ ಸೇರಿತ್ತು. ಭಾರತ ಸರ್ಕಾರವು ಇವರನ್ನು ಭಾರತೀಯ ನಿಯೋಗದ ಮುಖಂಡರಾಗಿ ಅರಿಸಿತು. ಈ ಸಮ್ಮೇಳನದಲ್ಲಿ ಭಾಗವಹಿಸಿದವರಲ್ಲಿ ಇವರೇ ಮೊಟ್ಟ ಮೊದಲ ಭಾರತೀಯರು.

ಭಾರತದಲ್ಲಿ ವಿಜ್ಞಾನದ ಪ್ರಗತಿಯನ್ನು ಸಮೀಕ್ಷಿಸುವ ಏಕೈಕ ಅಖಿಲ ಭಾರತೀಯ ಸಂಸ್ಥೆ ಎಂದರೆ ಭಾರತೀಯ ವಿಜ್ಞಾನ ಕಾಂಗ್ರೆಸ್. ೧೯೬೧-೬೨ರ ಸಮ್ಮೇಳನದಲ್ಲಿ ಭೌತ ವಿಜ್ಞಾನ ಭಾಗದ ಅಧ್ಯಕ್ಷತೆಯನ್ನು ಸಾರಾಭಾಯ್ ವಹಿಸಿದ್ದರು. ನಲವತ್ತನೇ ವಯಸ್ಸಿನಲ್ಲೇ ಈ ಗೌರವ ಪಡೆದವರು ಅತಿ ವಿರಳ.

ಇವರಿಗೆ ಭಾರತ ಸರ್ಕಾರವು ೧೯೬೨ರಲ್ಲಿ ಭೌತಶಾಸ್ತ್ರದಲ್ಲಿ ಭಾಟ್ನಗರ್ ಸ್ಮಾರಕ ಪಾರಿತೋಷಕವನ್ನು, ೧೯೬೬ರಲ್ಲಿ ‘ಪದ್ಮಭೂಷಣ’ ಬಿರುದನ್ನು ಕೊಟ್ಟಿತು. ಅದೇ ವರ್ಷ ಅಣುಶಕ್ತಿ ಕಮಿಷನ್ನಿನ ಅಧ್ಯಕ್ಷರನ್ನಾಗಿ ಮಾಡಿತು. ಆ ೧೯೭೦-೮೦ರ ಹತ್ತು ವರ್ಷಗಳಲ್ಲಿ ಅಣುಶಕ್ತಿ ಮತ್ತು ಬಾಹ್ಯಾಕಾಶ ಸಂಶೋಧನೆಯ ಅಭಿವೃದ್ಧಿಗಾಗಿ ಒಂದು ದಿಟ್ಟ ಯೋಜನೆಯನ್ನು ತಯಾರುಮಾಡಿದರು.

೧೯೬೮ರಲ್ಲಿ ವಿಶ್ವಸಂಸ್ಥೆಯು ‘ಶಾಂತಿಕಾಲದಲ್ಲಿ ಬಾಹ್ಯಾಕಾಶ ಉಪಯೋಗಗಳು’ ಎಂಬ ಒಂದು ಸಮ್ಮೇಳನವನ್ನು ಏರ್ಪಡಿಸಿತು. ಈ ಸಮ್ಮೇಳನಕ್ಕೆ ಸಾರಾಭಾಯ್ ಅಧ್ಯಕ್ಷತೆ ವಹಿಸಿದ್ದರು. ಅವರ ಮರಣಾ ನಂತರ ೧೯೭೨ರಲ್ಲಿ ಭಾರತ ಸರ್ಕಾರ ‘ಪದ್ಮವಿಭೂಷಣ’ ಬಿರುದು ಕೊಟ್ಟು ಗೌರವಿಸಿತು.

ಸಂಸ್ಥೆಗಳ ಸ್ಥಾಪಕ

ಸಾರಾಭಾಯ್ ಸ್ವತಃ ವಿಜ್ಞಾನ ಸಂಶೋಧನೆಯಲ್ಲಿ ಮುಳುಗಿದ್ದವರು. ಆದರೆ ದೇಶದಲ್ಲಿ ವಿಜ್ಞಾನ,ತಂತ್ರಜ್ಞಾನ ಬೆಳೆಯಬೇಕು, ಬುದ್ದಿವಂತರಾದ ತರುಣರಿಗೆ ವಿಜ್ಞಾನ, ತಂತ್ರಜ್ಞಾನಗಳ ಅಭ್ಯಾಸಕ್ಕೆ ಅವಕಾಶ ಇರಬೇಕು, ಅವರು ಕೆಲಸ ಮಾಡಲು ಸಂತೋಷವಾಗುವಂತಹ ವಾತಾವರಣ ಇರಬೇಕು-ಈ ಗುರಿಯಿಂದ ಅನೇಕ ಸಂಸ್ಥೆಗಳನ್ನು ಕಟ್ಟಿದರು.

ಇವರು ಸ್ಥಾಪಿಸಿದ ಮೊಟ್ಟ ಮೊದಲನೆಯ ಸಂಸ್ಥೆ ಭೌತಶಾಸ್ತ್ರ ಸಂಶೋಧನ ಪ್ರಯೋಗಾಲಯ. ಈ ಸಂಸ್ಥೆಯಲ್ಲೇ ‘ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ’ ಎಂಬ ಸಂಘವನ್ನು ೧೯೬೩ರಲ್ಲಿ ಪ್ರಾರಂಭಿಸಿದರು.

೧೯೪೭ರಲ್ಲೇ ಕೇವಲ ೨೮ ವರ್ಷ ವಯಸ್ಸಿನವರಾಗಿದ್ದಾಗ ಅಹಮದಾಬಾದ್ ಬಟ್ಟೆ ಕೈಗಾರಿಕೆ ಸಂಶೋಧನಾ ಸಂಸ್ಥೆಯನ್ನು ಕಟ್ಟುವ ಕೆಲಸವನ್ನು ಇವರಿಗೆ ವಹಿಸಲಾಯಿತು. ಆಗ ಬಟ್ಟೆ ಗಿರಣಿಗಳ ಅನುಭವವಾಗಲಿ, ಬಟ್ಟೆಯ ತಾಂತ್ರಿಕ ಜ್ಞಾನವಾಗಲಿ ಇವರಿಗೆ ಇರಲಿಲ್ಲ. ಆದರೂ ದೃಢ ವಿಶ್ವಾಸದಿಂದ ಈ ಸಂಸ್ಥೆಯನ್ನು ಕಟ್ಟಿದರು.

೧೯೬೩ರ ಸುಮಾರಿನಲ್ಲಿ ಸಾಮಾಜಿಕ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ವಿಶಾಲ ದೃಷ್ಟಿಯಲ್ಲಿ ತುಲನೆ ಮಾಡಲು ‘ನೆಹರೂ ಫೌಂಡೇಷನ್’ ಸ್ಥಾಪಿಸಿದರು. ಇದರ ಆಶ್ರಯದಲ್ಲಿ ೧೯೬೬ರಲ್ಲಿ ‘ಕಮ್ಯೂನಿಟಿ ಸೈನ್ಸ್ ಸೆಂಟರ್’ಎಂಬ ಕೇಂದ್ರವನ್ನು ಸ್ಥಾಪಿಸಿದರು. ವಿದ್ಯಾರ್ಥಿಗಲು, ಅಧ್ಯಾಪಕರು ಮತ್ತು ಜನಸಾಮಾನ್ಯರ ಮಧ್ಯೆ ವೈಜ್ಞಾನಿಕ ತಿಳುವಳಿಕೆ ಕೊಡುವುದು, ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿ ಪ್ರಯೋಗಗಳನ್ನು ಮಾಡುವಂತೆ ಪ್ರೋತ್ಸಾಹಿಸುವುದು ಅದರ ಕೆಲಸವಾಗಿತ್ತು. ಒಳ್ಳೆಯ ಆಡಳಿತಗಾರರನ್ನು ತಯಾರು ಮಾಡಲು ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.

ಇವರು ಪ್ರಾರಂಭಿಸಿದ ಸಂಸ್ಥೆಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದುದೆಂದರೆ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ ತಿರುವನಂತಪುರ, ಅದರ ಹತ್ತಿರವಿರುವ ತುಂಬಾ, ಅಹಮದಾಬಾದ್, ಮದರಾಸಿಗೆ ಉತ್ತರದಲ್ಲಿರುವ ಶ್ರೀ ಹರಿಕೋಟ ಮತ್ತು ಆರ್ವಿ-ಈ ಸ್ಥಳಗಳಲ್ಲಿ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಮಾಡಿದರು. ತುಂಬಾ ಮತ್ತು ಶ್ರೀಹರಿಕೋಟಗಳಲ್ಲಿ ಕ್ಷಿಪಣಿ ಉಡಾಯಿಸುವ ಕೇಂದ್ರಗಳನ್ನೂ ಪ್ರಾರಂಬ ಮಾಡಿದರು.

ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು, ಎಲ್ಲ ದೇಶಗಳವರೂ ಅಪಾಯಕರವಾದ ಶಸ್ತ್ರಗಳನ್ನು ಬಿಡಬೇಕು ಎಂಬ ಗುರಿಗಾಗಿ ಕೆಲಸ ಮಾಡುವ ‘ಪುಗ್‌ವಾಷ್ ಕಂಟಿನ್ಯೂಯಿಂಗ್‌ ಕಮಿಟಿ’ ಎಂಬ ಒಂದು ಸಂಸ್ಥೆಯಿದೆ. ಸಾರಾಭಾಯ್ ಅವರು ಅದರ ಭಾರತೀಯ ಶಾಖೆಯನ್ನು ಸ್ಥಾಪಿಸಿದರು.

ಇಷ್ಟೆಲ್ಲ ಕೆಲಸಗಳ ಮಧ್ಯೆ ಔಷಧಿ ತಯಾರಿಕಾ ಕೈಗಾರಿಕೆಗಾಗಿ ಸಾಕಷ್ಟು ಸಮಯ ಮುಡುಪಾಗಿಟ್ಟಿದ್ದರು. ಈ ಕೈಗಾರಿಕೆಯಲ್ಲಿ ಅತ್ಯಂತ ಉತ್ತಮ ಗುಣಮಟ್ಟವನ್ನು ಕಾಪಾಡಬೇಕೆಂಬುದನ್ನು ಒಪ್ಪಿಕೊಂಡಿದ್ದವರಲ್ಲಿ ಇವರು ಪ್ರಮುಖರಾಗಿದ್ದರು.

ಸೂತ್ರ ವಾಕ್ಯಗಳು

ವಿಕ್ರಮ ಸಾರಾಭಾಯ್ ಮತ್ತೆ ಮತ್ತೆ ಎರಡು ವಾಕ್ಯಗಳನ್ನು ಹೇಳುತ್ತಿದ್ದರು. ಇವು ಸೂತ್ರಗಳಂತಿವೆ. ಎಲ್ಲರೂ ನೆನಪಿಟ್ಟು ಮತ್ತೆ ಮತ್ತೆ ಯೋಚಿಸಬೇಕಾದ ವಾಕ್ಯಗಳು-

“ಬರಿಯ ಅನುಭವಕ್ಕೆ ತುಂಬ ಪ್ರಾಶಸ್ತ್ಯ ಕೊಡಬಾರದು”.

“ಗದ್ದಲದ ಮಧ್ಯೆಯೂ ಸಂಗೀತವನ್ನು ಕೇಳಿಸಿಕೊಳ್ಳಬಲ್ಲವನು ದೊಡ್ಡ ಕೆಲಸ ಮಾಡಬಲ್ಲ”.