ಸಂಸರ ನಾಟಕಗಳಲ್ಲಿಯೇ ಹೆಚ್ಚು ಪ್ರಸಿದ್ಧವಾದುದು ಮತ್ತು ಶ್ರೇಷ್ಠವಾದುದು. ಇದರಲ್ಲಿಯೇ ನಾಟಕೀಯ ಅಂಶ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತವಾಗಿದೆ. ಪ್ರತಿನಾಯಕನಾದ ವಿಕ್ರಮರಾಯನೇ ಈ ನಾಟಕದ ಕೇಂದ್ರ ವ್ಯಕ್ತಿ. ರಾಜನನ್ನೂ ಲೆಕ್ಕಿಸದ ನಿರಂಕುಶ ಸರ್ವಾಧಿಕಾರಿಯಾಗಿ ಅವನು ಚಿತ್ರಿತನಾಗಿದ್ದಾನೆ. ತನಗೆ ವಿರೋಧಿಯಾದ ಇಮ್ಮಡಿ ರಾಜ ಒಡೆಯನನ್ನು ಪಂಡಿತ ಬೊಮ್ಮರಸನ ಸಹಾಯದಿಂದ ಕೊಲ್ಲಿಸಿದ ವಿಕ್ರಮರಾಯ, ರಾಜ ಚಿಹ್ನೆಗಳನ್ನೆಲ್ಲ ಕಸಿದುಕೊಂಡು ತಾನೇ ಸರ್ವಾಧಿಕಾರಿಯಾಗಿ ಮೆರೆಯುತ್ತಾನೆ. ರಣಧೀರನನ್ನು ನೆಪಕ್ಕೆ ಮಾತ್ರ ರಾಜಗದ್ದುಗೆಯ ಮೇಲೆ ಕೂರಿಸಿ, ರಾಜ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಆಳಬೇಕೆಂದು ಆಲೋಚಿಸುತ್ತಾನೆ. ರಣಧೀರನ ಆಪ್ತರಾದ ನಿರೀಶ, ಸಕ್ಕ ಮುಂತಾದವರು ವೇಷ ಮರೆಯಿಸಿಕೊಂಡು ಬಂದು ಗೆಳೆಯನ ರಕ್ಷಣೆ ಮಾಡುತ್ತಾರೆ. ನಿರೀಶ, ವಿಕ್ರಮರಾಯನ ವಿರುದ್ಧ ಪ್ರಜಾಭಿಪ್ರಾಯವನ್ನು ರೂಪಿಸುಲ್ಲಿ ಯಶಸ್ವಿಯಾಗುತ್ತಾನೆ. ತನ್ನ ಬಲೆಯಲ್ಲಿ ಬೀಳದ ರಣಧೀರನನ್ನು ಮುಗಿಸಬೇಕೆಂದು ವಿಕ್ರಮರಾಯ ಆಲೋಚಿಸುತ್ತಾನೆ . ಅಷ್ಟರಲ್ಲಿ ರಾಜಮಾತೆಯ ಪ್ರೋತ್ಸಾಹದಿಂದಾಗಿ ಕಾವಲುಗಾರರಾದ ಚೆನ್ನ, ರಂಗರು ವಿಕ್ರಮರಾಯನನ್ನು ಕೊಲ್ಲಲು ಹೊಂಚು ಹಾಕುತ್ತಾರೆ. ಕತ್ತಲೆಯಲ್ಲಿ ಅವನ ಕಗ್ಗೊಲೆಯಾಗುತ್ತದೆ. ರಣಧೀರ ಮರುದಿನ ಪಟ್ಟವೇರುವ ಪ್ರಸ್ತಾಪದೊಂದಿಗೆ ನಾಟಕ ಮುಗಿಯುತ್ತದೆ. ೧೨ ಪ್ರವೇಶಗಳ ಈ ನಾಟಕ ಬಹಳ ಅಚ್ಚುಕಟ್ಟಾಗಿ ಯೋಜಿಸಲ್ಪಟ್ಟಿದೆ. ಒಂದು ಪ್ರವೇಶದಿಂದ ಮತ್ತೊಂದು ಪ್ರವೇಶಕ್ಕೆ ನಾಟಕದ ಕ್ರಿಯೆ ತ್ವರಿತಗತಿಯಲ್ಲಿ ಸಾಗಿ, ಉದ್ದೇಶಿತ ಗುರಿ ತಲುಪುವಲ್ಲಿ ಯಶಸ್ವಿಯಾಗುತ್ತದೆ. ವಿಕ್ರಮರಾಯನ ಉತ್ಕರ್ಷ ಹಾಗೂ ಪತನ ಎರಡೂ ಸಮರ್ಥವಾಗಿ ಇಲ್ಲಿ ಚಿತ್ರಿತವಾಗಿದೆ. ಅದೇ ರೀತಿ ರಣಧೀರನ ಉದಯವೂ ಇಲ್ಲಿದೆ. ವಿಕ್ರಮನ ಕುತಂತ್ರ ಒಳಸಂಚುಗಳನ್ನು ನಿವಾರಿಸಿ ಮೈಸೂರಿನ ಅರಸೊತ್ತಿಗೆಯನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಇರುವವನು ರಣಧೀರನೊಬ್ಬನೇ ಎಂಬ ಆಶಯವನ್ನು ಸಂಸರು ಈ ನಾಟಕದಲ್ಲಿ ಸೂಚಿಸುತ್ತಾರೆ.