ಬಾ, ಪಾಪೀ ಬಾ; ಕೈಕಟ್ಟಿ ನಿಂತುಕೋ
ಈ ಕಟಕಟೆಯೊಳಗೆ-
ಬೊಗಳು ಇದುವರೆಗು ಮಾಡಿದ್ದೆಲ್ಲವನು ಬಾಯ್ಬಿಟ್ಟು;
ಇಲ್ಲಿ ಗೆಲುವುದು ದಿಟವೆ, ಸಟೆ ಅಲ್ಲ,
ನೆನಪಿರಲಿ ನಿನಗೆ.

ಎದುರಿಗಿದೆ ವೇದ ಪುರಾಣ ಭಗವದ್ಗೀತೆ ಬೈಬಲ್ಲು-
ಯಾವುದರ ಮೇಲಾದರೂ ಸರಿ, ಆಣೆಯಿಡು, ಹೇಳು.
ಶೋಧಿಸು, ನರನರದ ಒಳಪದರದಲ್ಲೂ ಹುದುಗಿ-
ದಿತಿಹಾಸಗಳ ಹಳೆಯ ಸರುಕ.
ನೆನಪಿಲ್ಲವೇ ನಿನಗೆ? ಬರೆದಿಟ್ಟಿದಾನೆ
ಎಲ್ಲವನು ಈ ಗೂಢಚಾರ:
ಬೇರಿಂದ ತುದಿಯೆಲೆತನಕ ಗೊತ್ತಿದೆ ನಮಗೆ
ನಿನ್ನ ಅವತಾರ!

ಸಾಕು, ಇದುವರೆಗು ಅನುಭವಿಸಿದ್ದು,-
ಒಳಗು ಹೊರಗೂ ಸಾಮ್ಯವಿಲ್ಲದೆಯೆ ಮಿಡುಕಾಡಿದ್ದು,
ಮುಖವಾಡದೊಳಗೆ ನಿಜದ ಮುಖವನು ಕಂಡು
ಕಣ್ಣೀರ ಸುರಿಸಿದ್ದು,
ಅವರಿವರು ಬಯಲಿಗೆಳೆದಾರೆಂದು ಹೊದ್ದು ಮಲಗಿದ್ದು,
ಕಣಿವೆ ಕಗ್ಗಾಡಿನಲಿ ಗುಹೆಗುಹೆಯ ಕತ್ತಲಲಿ
ತಲೆಮರೆಸಿಕೊಂಡದ್ದು,
ಸಾಕೋ ಸಾಕು. ಆ ಎಲ್ಲ ವೇದನೆಗಳಿಗೆ ಈಗಿಲ್ಲಿ ಬಿಡುಗಡೆ.
ಹೇಳಿಬಿಡು, ಇನ್ನು ಏನೇನಿದೆಯೊ ಹೇಳಿಬಿಡು ಸುಮ್ಮನೆ;
ಹಗುರ ಮಾಡಿಕೊ ಎದೆಯ, ಹೊಸಹುಟ್ಟು ಇನ್ನುಮೇಲೆ.

ಅಳಬೇಡ, ಅಳಬೇಡವೋ ತಮ್ಮ,
ಅಳಬೇಡವೋ-
ಇಷ್ಟುದಿನ ಸುತ್ತಲೂ ಮುತ್ತಿದ್ದ ಪ್ರಶ್ನೆಗಳಿಗುತ್ತರಕೊಡದೆ
ಉಪವಾಸ ಸಾಯಿಸಿದೆ,
ಈಗಲೋ ಹಸಿದ ತೋಳಗಳಾಗಿ ಕಿತ್ತು ತಿನ್ನುತ್ತಲಿವೆ ಉತ್ತರವ;
ಚಾವಟಿಯೆಸೆದು ಬರಿಗೈಯಲ್ಲಿ ನಿಂತಿರುವೆ
ಮುಚ್ಚುಮರೆಯೆಲ್ಲವನು ಬಿಚ್ಚಿ ಎಸೆದು.
ಕಡೆಗೆ ಬಲು ದಿನಕ್ಕೆ ಬಂದಿದೆ ನಿನಗೆ,
ನೀನಾಗಿಯೇ ಬಂದು ಒಪ್ಪಿಸಿಕೊಳುವ
ಶುಭಘಳಿಗೆ.
ಹೇಳಿಬಿಡು ಎಲ್ಲವನು, ಹೇಳಿಬಿಡು ಮಗೂ,
‘ಶುಭಮಸ್ತು’ ನಿನಗೆ.