ಸರ್ವರಿಗೂ ನಮಸ್ಕಾರ:

ಡಾ. ನಾಯಕರು ಡಾ. ಉಪಾಧ್ಯೆಯವರ ಅಭಿನಂದನ ಮತ್ತು ಬೀಳ್ಕೊಡುಗೆಯ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ, ಅದಕ್ಕೆ ನೀವು ಅಧ್ಯಕ್ಷರಾಗಬೇಕೆಂದು ಕೇಳಿಕೊಳ್ಳಲು ಬಂದಾಗ ನಾನು ಅವರು ಈ ಲೇವಾದೇವಿ ಬುದ್ಧಿಯನ್ನು ಇಟ್ಟುಕೊಳ್ಳುತ್ತಾರೆಂದು ಭಾವಿಸಿರಲಿಲ್ಲ. ಅವರು ಕೇಳಿಕೊಂಡೊಡನೆಯೆ ನಾನು ಒಪ್ಪಿದೆ ಎಂದರು. ಒಂದು ದೃಷ್ಟಿಯಿಂದ ಹೌದು. ಇನ್ನೊಂದು ದೃಷ್ಟಿಯಿಂದ ನಾನು ಹಿಂಜರಿದೆ.

ಡಾ. ಉಪಾಧ್ಯೆ ಅವರ ವಿದ್ವತ್ತಿನ ಕ್ಷೇತ್ರದಲ್ಲಿ-ಸಂಪಾದನ, ಸಂಶೋಧನ, ಪಾಂಡಿತ್ಯ -ಈ ಕ್ಷೇತ್ರದಲ್ಲಿ ಅವರು ಸಮುದ್ರಪ್ರಾಯರು. ನಾನು ಸಮುದ್ರ ಎಂದು ಹೇಳುವ ಮಾತಿನ ಅರ್ಥ ನಿಮಗೆ ಈ ಹಿಂದೆ ಮಾತನಾಡಿದವರ ವಿಷಯಗಳನ್ನು ನೀವು ಗ್ರಹಿಸಿದ್ದ ಪಕ್ಷದಲ್ಲಿ ಗೊತ್ತಾಗುತ್ತದೆ. ಆ ಸಮುದ್ರದಲ್ಲಿ ಮುತ್ತು ರತ್ನಗಳಿಗಾಗಿ ಮುಳುಗಿದವರಿದ್ದಾರೆ. ಆ ಸಮುದ್ರದ ವಿಸ್ತಾರವನ್ನು ಕಾಣಲು ಅದನ್ನು ಪರ್ಯಟನ ಮಾಡಿದವರಿದ್ದಾರೆ. ಅದರೆ ನಾನು ಅದರ ಮಳಲು ದಂಡೆಯ ಮೇಲೆ ನಿಂತು ಆ ಸಮುದ್ರದ ವಿಸ್ತಾರವನ್ನೂ ತರಂಗಗಳ ರಮಣೀಯತೆಯನ್ನೂ ಅದರ ಘರ್ಜನೆಗಳನ್ನೂ ನೋಡಿ, ಕೇಳಿ, ಆನಂದಿಸಬಲ್ಲೆನೆ ಹೊರತು ಅದಕ್ಕೆ ಪ್ರವೇಶವಾಗಲಿ, ಅದನ್ನು ಪರ್ಯಟನ ಮಾಡುವುದಾಗಲಿ ಸಾಧ್ಯವಿಲ್ಲದ ಮಾತು. ಇಂತಹ ಮಹದ್ ವ್ಯಕ್ತಿಯನ್ನು ನಾಲ್ಕು ಔಪಚಾರಿಕ ಮಾತುಗಳಿಂದ ಅಭಿನಂದಿಸಿ ಬೀಳ್ಕೊಳ್ಳಬಹುದು. ಆದರೆ ಅದು ಸಾಕೆ? ಎಂಬ ಭಾವನೆ ಬಂದಾಗ ನನಗೆ ಮನಸ್ಸು ಹಿಂಜರಿಯುತ್ತದೆ.

ಡಾ. ಉಪಾಧ್ಯೆ ಅವರು ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ, ಅವರನ್ನು ಆದಿನಾಥ ನೇಮಿನಾಥ ಉಪಾಧ್ಯೆ ಆದ್ದರಿಂದ ಆನೇ ಉಪಾಧ್ಯೆ-ಇವರು ಆನೆಯಂತೆ ಗಜಪ್ರಾಯರು ಎಂದು ಯಾರೊ ಸ್ವಾಗತ ಸಮಯದಲ್ಲೋ ಏನೋ ಹೇಳಿದರಂತೆ, ಅದಕ್ಕೆ ಉತ್ತರವಾಗಿ ಉಪಾಧ್ಯೆಯವರು ಮಾತನಾಡುತ್ತಾ “ಕನ್ನಡದಲ್ಲಿ ನಾನು ಆನೇ ಹೌದು ಆದರೆ ಇಂಗ್ಲಿಷಿನಲ್ಲಿ (A.N. Upadhye-ANU) ಅಣು ಎಂದು ಅದಕ್ಕೆ ಉತ್ತರ ಕೊಟ್ಟರು. ವಾಸ್ತವವಾಗಿ ಅವರು ಆನೆಯೂ ಹೌದು, ಅಣುವೂ ಹೌದು. ವಿದ್ವತ್ತಿನಲ್ಲಿ ಅವರು ಆನೆ – ವಿನಯದಲ್ಲಿ ಅವರು ಅಣು.

ನನಗೂ ಡಾ. ಉಪಾಧ್ಯೆಯವರಿಗೂ ಯಾವ ಸಂಬಂಧವೂ ಇರಲಿಲ್ಲ ಎಂದು ಭಾವಿಸುತ್ತೇನೆ. ಆದರೆ ದೈವವಶದಿಂದ ಒಂದು ಘಟನೆ ನಡೆಯಿತು. ಆ ಸಂದರ್ಭದಲ್ಲಿ ಉಪಾಧ್ಯೆಯವರು ಮೈಸೂರಿನಿಂದ ದೆಹಲಿಗೆ ನನ್ನನ್ನು ಎಳೆದುಕೊಂಡು ಹೋಗುವ ಸಾಹಸ ಮಾಡಿದರು. ಆಗಲೆ ನಾನು ಉಪಾಧ್ಯೆಯವರನ್ನು ಮೊದಲು ಸಂಧಿಸಿದ್ದು. ಉಪಾಧ್ಯೆಯವರ ಯಶಸ್ಸಿನ ವಿಚಾರವಾಗಿ ಕೇಳಿದ್ದೆ. ಅವರ ವಿಚಾರವಾಗಿ ನಿಜವಾಗಿಯೂ ನನಗೆ ತುಂಬಾ ಗೌರವವಿತ್ತು. ಆದರೂ ವ್ಯಕ್ತಿಶಃ ನಾನವರನ್ನು ನೋಡಿರಲಿಲ್ಲ. ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಗೆ ಬಂದು ಸ್ವೀಕರಿಸಬೇಕು ಎಂದು ಕೇಳಿದಾಗ ನಾನು-ನನ್ನ ಸ್ವಭಾವ ಸ್ವಲ್ಪ ಸ್ಥಾವರ ಪ್ರಕೃತಿ ಎಂದು ಹೇಳುತ್ತೇನೆ-ನಾನು ದೆಹಲಿಗೆ ಹೋಗಲು ಒಪ್ಪಲಿಲ್ಲ. ಬೇಕಾದರೆ ಸಮಾರಂಭವನ್ನು ಮಾಡಿಯೆ ಮಾಡಬೇಕೆಂದರೆ ಮೈಸೂರಿನಲ್ಲಿಯೆ ಮಾಡಿ ಎಂದೆ. ನನಗೆ ಮೊತ್ತ ಮೊದಲ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗಲೂ ನಾನು ದೆಹಲಿಗೆ ಹೋಗಲಿಲ್ಲ. ನನಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಾಗಲೂ ನಾನು ದೆಹಲಿಗೆ ಹೋಗಲಿಲ್ಲ. ಬಹುಶಃ ಜ್ಞಾನಪೀಠ ಪ್ರಶಸ್ತಿಗೂ ದೆಹಲಿಗೆ ಹೋಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವರು ದೊಡ್ಡ ಆನೆಯನ್ನೆ ಮೈಸೂರಿಗೆ ಕಳುಹಿಸಿದರು, ನನ್ನನ್ನು ಹಿಡಿದೆತ್ತಿ ತರಲು! ಅದರ ಕಥೆ ವಿವರದಲ್ಲಿ ಬಹಳ ಸ್ವಾರಸ್ಯವಾಗಿದೆ, ಆದರೆ ಇಲ್ಲಿ ಅದು ಅನಾವಶ್ಯಕ. ಅಂತೂ ಉಪಾಧ್ಯೆಯವರು ಬಂದು ಎರಡುದಿನ ನನ್ನನ್ನು ಸೋಲಿಸಿ, ದೆಹಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದು ಬಿಟ್ಟರು.

ಅವರ ಈ ಜೈನಾಲಜಿಯ ಪ್ರಸ್ತಾಪ ನಾನು ವೈಸ್ ಛಾನ್ಸಲರ್ ಆಗಿದ್ದಾಗಲೆ ಸ್ವಲ್ಪಮಟ್ಟಿಗೆ ಬಂದಿತ್ತು. ಅದರ ವಿಚಾರದಲ್ಲಿ ಆಗ ಅವರ ನನ್ನ ಭೇಟಿಯೇನು ಆಗಲಿಲ್ಲ. ಆದರೆ, ಅವರು ಈ ಜೈನಶಾಸ್ತ್ರ ಪೀಠದ ಪ್ರಧಾನ ಅಧ್ಯಾಪಕರಾಗಿ ಬಂದಮೇಲೆ ನನ್ನ ಅವರ ಪರಿಚಯ ಬೇರೆ ರೀತಿಯಲ್ಲಿ ನಡೆಯತೊಡಗಿತು. ಅದು ನಾನೂ ಮಾನಸಗಂಗೋತ್ರಿಯಲ್ಲಿ ಬೆಳಗಿನ ಸಂಚಾರ ಮಾಡುವುದು, ಅವರೂ ಸಹ ಮಾಡುವರು. ಅವರು ಅಲ್ಲೆಲ್ಲೋ ದೂರದಲ್ಲಿ ಬರುವರು. ಅವರನ್ನು ಎಷ್ಟೇ ದೂರದಿಂದಲೂ ನಾನು ಕಂಡುಹಿಡಿಯಲು ಸಾಧ್ಯ. ಅವರ ರೀತಿಯಲ್ಲಿ ಪಂಚೆಯನ್ನು ಮೈಸೂರಿನಲ್ಲಿ ಬೇರಾರೂ ಉಡುವುದಿಲ್ಲ. ಅವರು ದೂರದಿಂದ ಬರುತ್ತಿರುವಾಗಲೆ, ನಾನು ಬರುವುದನ್ನು ಕಂಡು ನಾನು ಬಂದೊಡನೆಯೆ ‘ನಮಸ್ಕಾರ್ರೀ’ ಎಂದು ಕೈಮುಗಿದು ಸ್ವಾಗತಿಸುವರು. ಅವರು ಪ್ರತಿಯೊಂದಕ್ಕೂ ‘ರೀ’ ಸೇರಿಸಿಯೇ ಸೇರಿಸುತ್ತಾರೆ. ಹಾಗೆಯೆ ಲೋಕಾಭಿರಾಮವಾಗಿ ಎಷ್ಟೋ ಹೊತ್ತು ಮಾತನಾಡಿಕೊಂಡು ಸಂಚರಿಸಿ ಬರುತ್ತೇವೆ ನಾವು.

ಇಂಥವರನ್ನು ಮೈಸೂರು ವಿಶ್ವವಿದ್ಯಾನಿಲಯ ಕರೆಸಿ, ನಾಲ್ಕೂವರೆ ವರ್ಷ ಇಲ್ಲಿರಿಸಿಕೊಂಡು, ಇಂಥ ಅದ್ಭುತವಾದಂಥ ಒಂದು ಪೀಠವನ್ನು ಸಂಸ್ಥಾಪಿಸಿ, ಈಗ ಅವರನ್ನು ಬೀಳ್ಕೊಡುತ್ತಿದ್ದಾರೆ. ಹಿಂದಿನ ಉಪನ್ಯಾಸಕರು ಹೇಳಿದ ಮಾತುಗಳಿಂದ ನೀವು ಅವರ ಹಿರಿಮೆ ಏನು ಅನ್ನುವುದನ್ನು ಅರಿತಿದ್ದೀರಿ. ನಾನು ಹೇಳಿದ ಹಾಗೆ ಅವರ ದೊಡ್ಡ ಸಮುದ್ರದಂತೆ ಅಥವಾ ಮಹಾಪರ್ವತದಂತೆ. ಅದನ್ನು ನಾವು ಸ್ವಲ್ಪಮಟ್ಟಿಗೆ ಪ್ರದಕ್ಷಣೆ ಮಾಡಬಹುದೇ ಹೊರತು ಅದನ್ನು ಹತ್ತಿ ಆ ನೆತ್ತಿಯಲ್ಲಿ ಪರವಾಸಿಗಳಾಗಲೂ ಕೂಡ ಸಾಧ್ಯವಿಲ್ಲ. ಆ ಮಟ್ಟದ ವ್ಯಕ್ತಿ ಅವರು. ಬಹುಶಃ ಅವರು ತಮಗೊದಗಿದ ಆ ಸನ್ಮಾನ ಪ್ರಶಸ್ತಿಗಳು, ಬಹುಮಾನಗಳು ಈ ವಿಚಾರವಾಗಿ ತುಂಬಾ ವಿನಯದಿಂದ ಕೃತಜ್ಞತೆಯಿಂದ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಅಂಥವರಿಗೆ ಈ ಬಹುಮಾನ ಪ್ರಶಸ್ತಿಗಳೆಲ್ಲಾ ಅವರ ದೃಷ್ಟಿಯಿಂದ ಅಲ್ಲದೇ ಇದ್ದರೂ ನಮ್ಮ ದೃಷ್ಟಿಯಿಂದ ಇವು ಬಹಳ ಕೆಳಗಿನವು ಎಂದೇ ಹೇಳಬೇಕಾಗಿ ಬರುತ್ತದೆ. ಪಂಪ ತನ್ನ ಆದಿಪುರಾಣದಲ್ಲಿ ಆಧ್ಯಾತ್ಮಿಕ ಮಹೋನ್ನತಿಯನ್ನು ಮುಟ್ಟುವ ಒಂದು ಪದ್ಯ ರಚಿಸಿದ್ದಾನೆ. ಒಂದು ಪದ್ಯ ‘ಕವಿತೆಯೊಳಾಸೆಗೆಯ್ವ’ ಎಂದು ಆರಂಭವಾಗುತ್ತದೆ. ಆದರೆ, ಅದಕ್ಕಿಂತಲೂ ಮಹತ್ತರವಾದ ಮತ್ತೊಂದು ಪದ್ಯವಿದೆ. ಅದು:

ಅಮರೇಂದ್ರೋನ್ನತಿ ಖೇಚೆರೇಂದ್ರ ವಿಭವಂ
ಭೋಗೀಂದ್ರ, ಭೋಗಂ ಮಹೇಂದ್ರ ಮಹೈಶ್ವರ್ಯಂ
ಇವೆಲ್ಲಮಧ್ರುವಂ
ಇವಂ ಬೇಳ್ವಂತು ಬೆಳ್ಳಲ್ಲೆನ್
ಉತ್ತಮ ದೀಕ್ಷಾವಿಧಿಯುಂ ಸಮಾಧಿಮರಣಂ
ಕರ್ಮಕ್ಷಯಂ ಬೋಧಿಲಾಭಮಮೋಘಂ
ದೊರೆಕೊಳ್ವುದಕ್ಕೆಮಗೆ ಮುಕ್ತಿ ಶ್ರೀ ಮನೋವಲ್ಲಭಾ.

ಇದು ಸಾಧಾರಣ ಚೇತನಗಳಿಂದ ನಡೆಯುವ ಪ್ರಾರ್ಥನೆಯಲ್ಲ. ಇಂಥ ಪ್ರಾರ್ಥನೆ ಕರ್ಮಯೋಗಿಗಳಂತೆ ದುಡಿದ ಉಪಾಧ್ಯೆಯವರಂಥವರಿಗೆ ಮಾತ್ರ ಸಾಧ್ಯ. ಅವರನ್ನು ನಾವೆಲ್ಲರೂ ವಿದ್ವಾಂಸರು ಎನ್ನುವ ಭಾವದಿಂದ ಕಾಣುತ್ತಿದ್ದೇವೆ. ಆದರೆ ಅದರ ಹಿಂದೆ ಅವರ ವ್ಯಕ್ತಿತ್ವದಲ್ಲಿರುವ ಒಂದು ಮಹತ್ತಾದ ಆಧ್ಯಾತ್ಮಿಕ ಕ್ರಿಯೆ, ಅದು ಬಹುಶಃ ಹೊರಗಿನವರಿಗೆ ಅಗೋಚರ. ಆ ದೃಷ್ಟಿಯಿಂದಲೆ ನಾನು ಅವರನ್ನು ಸಮುದ್ರಕ್ಕೆ ಹೋಲಿಸಿದ್ದು. ಆ ಗಾಂಭೀರ್ಯ, ಆ ಗಭೀರತೆ ಆ ವಿಸ್ತಾರ ಇವುಗಳೆಲ್ಲವನ್ನೂ ಅವರಲ್ಲಿ ಕಾಣುತ್ತೇವೆ. ಅವರು ವಿದ್ವತ್ತಿನಲ್ಲಿ ಆನೆಯಾದರೂ ವಿನಯದಲ್ಲಿ ಅಣು. ಆದ್ದರಿಂದಲೆ ಸಾಮಾನ್ಯ ಜನಗಳಿಗೆ ಅವರ ವಿಭೂತಿತೇಜಸ್ಸು ಗೋಚರಿಸದೆ ಇರಬಹುದು. ಆದರೆ, ನಾನು ಆ ಪಕ್ಷದಲ್ಲಿ ಆ ಭಾಗದಿಂದ ಅವರನ್ನು ತುಂಬಾ ಗೌರವಿಸುತ್ತೇನೆ.

ನನ್ನನ್ನು ಆಶೀರ್ವದಿಸಿ ಎಂದು ಕೇಳಿಕೊಂಡರು ಅವರು. ಅದು ಹಾಗಲ್ಲ, ಅವರೇ ಆಶೀರ್ವದಿಸಬೇಕು ನನ್ನನ್ನು.

ಅವರು ಮೈಸೂರಿನಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದಾರೆ. ಆದರೆ ಅವರೆ ಹೇಳಿದಂತೆ ಸಾಧ್ಯವಿರುವಾಗಲೆಲ್ಲಾ ನಮ್ಮನ್ನು ನೆನೆದು, ನಮ್ಮಲ್ಲಿಗೆ ಬಂದು, ಮೈಸೂರು ವಿಶ್ವವಿದ್ಯಾನಿಲಯದ ಒಂದು ಸೇವೆಗೆ, ಕೀರ್ತಿಗೆ, ಅವರು ಯಾವಾಗಲೂ ಕಂಕಣಬದ್ಧರಾಗಿರುತ್ತಾರೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದರು. ಅವರನ್ನು ಬೀಳ್ಕೊಳ್ಳುವ ಸಮಾರಂಭಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಕರೆದು, ಅವರ ವಿಚಾರವಾದ ಈ ಅನೇಕ ಭಾಷಣಗಳನ್ನು ಕೇಳಿ, ಅವರ ಮಹತ್ತನ್ನು ಇನ್ನೂ ಹೆಚ್ಚಾಗಿ ಅರಿಯುವುದಕ್ಕೆ ಅವಕಾಶ ಮಾಡಿಕೊಟ್ಟುದಕ್ಕಾಗಿ ಡಾ. ನಾಯಕರನ್ನು ನಾನು ವಂದಿಸುತ್ತೇನೆ.