ಈ ಸಮಾರಂಭವನ್ನು ಉದ್ಘಾಟಿಸಲು ನನ್ನನ್ನು ಒಪ್ಪಿಸಿದ ಡಾ. ನಾಯಕರಿಗೆ ನನ್ನ ವಿಶೇಷ ಕೃತಜ್ಞತೆ. ಸಾಮಾನ್ಯವಾಗಿ ಪ್ರಾತಃಸಂಚಾರ ವಿನಾ ಮೈಸೂರಿನಲ್ಲಿ ಹೊರಗೆಲ್ಲಿಯೂ ಹೋಗದಿದ್ದ ನನ್ನನ್ನು ವರ್ಷಕ್ಕೊಮ್ಮೆ ಈ ತರದ ಗೋಷ್ಠಿಗಳ, ಸಮ್ಮೇಳನಗಳ ಸಮ್ಮೋಹನಾಸ್ತ್ರವನ್ನು ಒಡ್ಡಿ ಎಳೆತರುತ್ತಾರೆ. ಸ್ನೇಹಿತರ ಮುಖಾಂತರ, ಪತ್ರಿಕೆಗಳ ಮುಖಾಂತರ, ರೇಡಿಯೋ ಮುಖಾಂತರ ಮತ್ತು ದೈವದತ್ತವಾದ ಕಲ್ಪನಾ ವ್ಯಾಪಾರದ ಮುಖಾಂತರ ಜಗತ್ತಿನ ಮತ್ತು ನಮ್ಮ ರಾಷ್ಟ್ರದ ನಾನಾ ಭಾಗಗಳಲ್ಲಿ ನಡೆಯುವ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಆಂದೋಳನಗಳ ಒಂದು ರಸಾನುಭವವನ್ನು ನಾನು ಪಡೆಯುತ್ತಿರುತ್ತೇನೆ. ಆದರೆ ವರ್ಷಕ್ಕೊಮ್ಮೆ ಈ ತರದ ಗೋಷ್ಠಿಯಲ್ಲಿ ಪ್ರತ್ಯಕ್ಷ ಭಾಗವಹಿಸಿ, ಭಾವಾನುಭವವನ್ನೂ ಪಡೆಯುವ ಒಂದು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಆಧುನಿಕ ಸಾಹಿತ್ಯ ಎಂದರೆ ಸ್ವಲ್ಪ ಹೆಚ್ಚುಕಡಿಮೆ ೨೦ನೇ ಶತಮಾನದ ಸಾಹಿತ್ಯ. ಸ್ವಾತಂತ್ರ್ಯಪೂರ್ವ ಸಾಹಿತ್ಯ, ಸ್ವಾತಂತ್ರ್ಯೋತ್ತರ ಸಾಹಿತ್ಯ ಎಂದು ನಾವು ವಿಭಾಗಿಸಿಕೊಂಡಿದ್ದೇವೆ. ಅಷ್ಟೆ. ಈ ಶತಮಾನ ಭರತಖಂಡದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೆ ಒಂದು ವಿಶೇಷ ಶತಮಾನ, ಅಸಾಧಾರಣ ಘಟ್ಟದ ಶತಮಾನ. ಹಿಂದಿನ ಶತಮಾನಗಳು ಅನೇಕ ಶತಮಾನಗಳಲ್ಲಿ ಸಾಧಿಸದ ಮತ್ತು ಸಾಧಿಸಲಾರದಿದ್ದದ್ದನ್ನೆಲ್ಲ ಕೇವಲ ಅರ್ಧ ಶತಮಾನದಲ್ಲಿ ಅದ್ಭುತವಾಗಿ, ಪವಾಡಸ್ವರೂಪವಾಗಿ, ಆಶ್ಚರ್ಯಕರವಾಗುವಂತೆ ಜಗತ್ತು ಸಾಧಿಸುತ್ತಿದೆ. ಸುಖವನ್ನೆಂತೊ ಅಂತೆಯೆ ದುಃಖವನ್ನೂ ಸಾಧಿಸುತ್ತಿದೆ, ಕಷ್ಟವನ್ನೂ ಸಾಧಿಸುತ್ತಿದೆ. ಅರಿಷಡ್ವರ್ಗಗಳನ್ನೂ ಸಮಪ್ರಮಾಣವಾಗಿ ಪ್ರಚೋದಿಸುತ್ತಲೂ ಇದೆ. ಆದರೆ ಇದು ಜಗಜ್ಜೀವನದ ಮೂಲಭೂತ ಲಕ್ಷಣ. ಆ ಲಕ್ಷಣಗಳನ್ನೆಲ್ಲ ಪರಿವರ್ತಿಸಬೇಕು ಎಂದು ಮಹಾತಪಸ್ವಿಗಳು, ಯೋಗೀಶ್ವರರು, ಶ್ರೀ ಅರವಿಂದರಂಥ ಮಹಾ ದಾರ್ಶನಿಕ ಸಿದ್ಧರು-ಇವರೆಲ್ಲರೂ ಪ್ರಯತ್ನಿಸಿದ್ದಾರೆ; ಅಥವಾ ಬಹುಶಃ ಅವರು ಹೇಳಿದಂತೆ ಪ್ರಯತ್ನಿಸುತ್ತಲೂ ಇದ್ದಾರೆ. ಆದರೆ ಅವರ ಆ ಆದರ್ಶಗಳು ಇಂದಲ್ಲ ನಾಳೆ ನೆರವೇರುತ್ತವೆ ಎಂಬ ಒಂದು ಆಶಾಭಾವನೆಯಿಂದ ನಾವು ಮುಂದುವರಿಯ ಬೇಕಾಗುತ್ತದೆ. ಏಕೆಂದರೆ, ನಾವು-ಸ್ವಾಗತ ಭಾಷಣ ಮಾಡುತ್ತ ಡಾ. ನಾಯಕ್ ಅವರು ಹೇಳಿದಂತೆ- ಎಷ್ಟೋ ಕಾಲ ಪಾರತಂತ್ರ್ಯವನ್ನು ಅನುಭವಿಸಿ, ಇನ್ನೆಷ್ಟೋ ಕಾಲ ಸ್ವಾತಂತ್ರ್ಯಕ್ಕಾಗಿ ಭಯಂಕರವಾದ ಸಂಗ್ರಾಮವನ್ನು ಕೂಡ ನಡೆಸಿ, ಕಡೆಗೆ ಈ ಸ್ವಾತಂತ್ರ್ಯವನ್ನು ಸಂಪಾದಿಸಿದೆವು. ಇವತ್ತು ೨೭ನೆಯ ಹುಟ್ಟುಹಬ್ಬ, ಸ್ವಾತಂತ್ರ್ಯ ಸಿಕ್ಕಿ. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು, ಹುಡುಗರು, ಈಗ ಎಷ್ಟೋ ಜನ ವಿಶ್ವವಿದ್ಯಾನಿಲಯಗಳಲ್ಲಿ ಇದ್ದಾರೆ. ಈ ೫೦ ವರ್ಷಗಳು ಈ ಒಂದು ಭಯಂಕರವಾದ ಸೈನ್ಯ ಸಾಮರ್ಥ್ಯವುಳ್ಳ ಬ್ರಿಟಿಷ್ ಸಾಮ್ರಾಜ್ಯದಿಂದ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾ ರೀತಿಯಿಂದ ಹೋರಾಡಿ ಆ ಸಂಗ್ರಾಮವನ್ನು ಹೇಗೆ ಗೆದ್ದೆವು ಎಂಬ ಅರಿವು ಅವರಲ್ಲಿ ಅನೇಕರಿಗೆ ಆಗಿಲ್ಲ. ಆಗದೆ ಇರುವುದಕ್ಕೆ ಕಾರಣ ಅವರು ಮಾತ್ರವೆ ಅಲ್ಲ, ಅವರ ಹಿರಿಯರೂ ಕಾರಣ.

ನಾನು ಸೋವಿಯತ್ ನಾಡಿನಿಂದ ಹೊರಡುವ ಅನೇಕ ಪತ್ರಿಕೆಗಳನ್ನು, ಮಾಸ ಪತ್ರಿಕೆಗಳನ್ನು ಇವುಗಳನ್ನೆಲ್ಲ ನೋಡುತ್ತಾ ಇರುತ್ತೇನೆ. ಅವರ ಸಾಹಿತ್ಯದ ಪರಿಚಯವನ್ನೂ ನಾನು ಮಾಡಿಕೊಳ್ಳುತ್ತಾ ಇರುತ್ತೇನೆ. ಅವರು ಮಾಡತಕ್ಕ ಕೆಲಸವೇನು, ಆ ವಿಚಾರದಲ್ಲಿ ಅವರು ಏನು ಮಾಡುತ್ತಾ ಇದ್ದಾರೆ ಎನ್ನುವುದನ್ನೂ ನಾನು ತಿಳಿದುಕೊಳ್ಳುತ್ತಿರುತ್ತೇನೆ. ಈಗಿನ ಯುವಕರಿಗೆ-೧೯೧೭ರಲ್ಲಿ ಅವರು ಮಹಾಕ್ರಾಂತಿಯನ್ನು ನಡೆಸಿ, ತರುವಾಯ ನಾಲ್ಕೈದು ವರ್ಷ ಅಂತರ್ಯುದ್ಧದಲ್ಲಿ ಭಾಗಿಗಳಾಗಿ ಹೋರಾಡಿ ಕಡೆಗೆ ಸೋವಿಯತ್ ದೇಶವನ್ನು ನಿರ್ಮಿಸಿದರು, ಮತ್ತು ನಿರ್ಮಿಸುತ್ತಾ ಇದ್ದಾರೆ-ಎಂಬುದನ್ನು ರಸವತ್ತಾಗಿ ತಿಳಿಸುತ್ತಿದ್ದಾರೆ. ಅವರೇನೊ ದೇವರು ಧರ್ಮ ಮೊದಲಾದುವನ್ನೆಲ್ಲ ಬಿಟ್ಟಿದ್ದಾರೆ ಎಂದು ಹೇಳುತ್ತೀರಿ. ಆದರೆ ವಾಸ್ತವವಾಗಿ ಅವರು ದೇವರನ್ನು ಹೆಸರಿನಲ್ಲಿ ಮಾತ್ರವಲ್ಲ ಉಸಿರಿನಲ್ಲಿ ನಿಜವಾಗಿಯೂ ಆರಾಧಿಸುತ್ತಿದ್ದಾರೆ. ಅನುಸರಿಸುತ್ತಿದ್ದಾರೆ. ತಮ್ಮ ಯುವಕರಿಗೆ ೧೯೧೭ರ ತರುವಾಯ ಹುಟ್ಟಿದ ಎಷ್ಟೋ ಯುವಕರಿಗೆ ತಾವು ಏನಾಗಿದ್ದೆವು, ಎಷ್ಟು ಕಷ್ಟಪಟ್ಟು ಇದನ್ನು ಸಂಪಾದಿಸಿದೆವು ಎನ್ನುವುದನ್ನು ಮರೆಯಲಾಗದಂತೆ, ಯಾವ ಸಾಹಿತಿಗಳನ್ನು ನೋಡಿ, ಯಾವ ಪುಸ್ತಕಗಳನ್ನು ನೋಡಿ, ಅದರ ನೆನಪನ್ನು ಸದಾ ಹಸಿಯಾಗಿ ಇಟ್ಟಿರುವಂತೆ ಬರೆಯುತ್ತಾ ಇರುತ್ತಾರೆ. ಎರಡನೆ ಮಹಾಯುದ್ಧದಲ್ಲಿ ಯಾವುದೊ ಒಂದು ಕದನವನ್ನು ಗೆದ್ದರು, ಸೋವಿಯತ್ ದೇಶದವರು, ಅದರ ವಾರ್ಷಿಕ ಉತ್ಸವವನ್ನು ಏರ್ಪಡಿಸುತ್ತಾರೆ. ಅದರ ವಿಚಾರವಾಗಿ ಕತೆಗಳನ್ನು ಬರೆದು ಭಾಗವಹಿಸಿದವರನ್ನೂ ಪ್ರತಿಯೊಬ್ಬರನ್ನೂ ಚೆನ್ನಾಗಿ ಪರಿಚಯ ಮಾಡಿಕೊಡುತ್ತಾರೆ. ಸಾಹಿತಿಗಳಂತೂ ಆ ಯುದ್ಧಗಳ, ಆ ವಿಜಯಗಳ, ಆ ಸಾಹಸ ನೋವು ಸಂಕಷ್ಟಗಳ, ಅದಕ್ಕಾಗಿ ಜನತೆ ಎಸಗಿದ ಬಲಿದಾನಗಳ ಮತ್ತು ತ್ಯಾಗಗಳ ಜೀವಂತ ಸ್ಮೃತಿಯನ್ನು ಮರೆಯಲಾಗದಂತೆ ಮಹಾಕಾದಂಬರಿಗಳನ್ನು ರಚಿಸಿ ಸ್ಮಾರಕಸ್ತೂಪಗಳನ್ನೆ ನಿರ್ಮಿಸಿದ್ದಾರೆ ಮತ್ತು ನಿರ್ಮಿಸುತ್ತಿದ್ದಾರೆ. ಮೊದಲನೆ ಮಹಾ ಯುದ್ಧದ ತರುವಾಯ ನಡೆದ ಕ್ರಾಂತಿಯ ಮತ್ತು ಅಂತರ್ಯುದ್ಧದ ಮಹದ್ ವಿಭವಗಳನ್ನೆಲ್ಲ ಹಿಡಿದಿಟ್ಟಿದೆ ಅಲೆಕ್ಸಿ ಟಾಲ್‌ಸ್ಟಾಯ್ ಅವರ ಮಹಾಕಾದಂಬರಿ ‘ದಿ ಆರ್ಡಿಯಲ್’, ‘ಆನಂದ’ ಕಾವ್ಯನಾಮದ ಎ. ಸೀತಾರಾಮ್ ಅದನ್ನು ಭಾಷಾಂತರಿಸಿದ್ದಾರೆ ‘ಅ‌ಗ್ನಿ ಪರೀಕ್ಷೆ’ ಎಂಬ ಹೆಸರಿನಲ್ಲಿ. ಎರಡನೆಯ ಮಹಾ ಯುದ್ಧದಲ್ಲಿ ಸೋವಿಯತ್ ರಾಷ್ಟ್ರ ಹಿಟ್ಲರನ ರಾಕ್ಷಸೀಯ ಆಕ್ರಮಣವನ್ನು ಎದುರಿಸಿ ಜಯಗಳಿಸಿದ ದೈತ್ಯ ಸಾಹಸದ ದಿವ್ಯ ಕಥೆಯನನ್‌ಉ ಚಿತ್ರಿಸಿದೆ, ಎರನ್‌ಬರ್ಗ್ ಅವರ ಮಹಾಕಾದಂಬರಿ ‘ದಿ ಸ್ಟಾರ್ಮ್‌.’ ಇತ್ತೀಚೆಗೆ ಷೋಲೊಕೊವ್ ಅವರ ಅದ್ಭುತ ಕಾದಂಬರಿ ‘ಕ್ವಯಟ್ ಫ್ಲೋಸ್ ದಿ ದೋನ್’ ನೋಬೆಲ್ ಬಹುಮಾನವನ್ನೆ ಗಳಿಸಿದೆ-ಇವು ದೊಡ್ಡ ದೊಡ್ಡ ಕಾದಂಬರಿಗಳು. ಹಾಗೆಯೆ ಸಣ್ಣ ಕತೆಗಳು, ಸಣ್ಣ ಕಾದಂಬರಿಗಳು ಕೂಡ ಅವರು ಪಟ್ಟ ಕಷ್ಟವನ್ನೂ ಅವರ ತ್ಯಾಗವನ್ನೂ ತರುಣರು ಮರೆಯದಂತೆ ಚಿತ್ರಿಸುತ್ತ ಹೋಗುತ್ತವೆ.

ಬೇರೆ ಎಲ್ಲಿಯೂ ನಿಮಗೆ ಸಿಗದಿರುವಷ್ಟು ಮಟ್ಟಿಗೆ ವಸ್ತುನಿಷ್ಠವಾಗಿ ಕಾಣಬರುತ್ತದೆ, ಸೋವಿಯತ್ ಜನತೆಯ ದೃಢ ನಿಷ್ಠುರ ದೇಶಾಭಿಮಾನ. ಹೀಗೆ ನಮ್ಮಲ್ಲಿಯೂ ಹಿಂದೆ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಜನಜೀವನವನ್ನು ಮುಂದೆ ಬರುವ ಕಾದಂಬರಿಕಾರರು ವಸ್ತುನಿಷ್ಠವಾಗಿ ಚಿತ್ರಿಸುತ್ತ ಹೋಗಬೇಕು. ನಮ್ಮಲ್ಲಿಯೂ ಅಂತಹ ಕೆಲವು ಪ್ರಯತ್ನಗಳು ನಡೆದಿಲ್ಲದೆ ಇಲ್ಲ. ಬಸವರಾಜ ಕಟ್ಟೀಮನಿ, ಮಿರ್ಜಿ ಅಣ್ಣಾರಾಯ, ತ.ರಾ.ಸು., ಕಾರಂತ ಮೊದಲಾದವರನ್ನು ಹೆಸರಿಸಬಹುದು. ಆದರೆ ರಷ್ಯನ್ ಕಾದಂಬರಿಗಳಲ್ಲಿರುವ ಒಂದು ಬೃಹದ್ ವ್ಯಾಪ್ತಿ, ದೊಡ್ಡ ವ್ಯಕ್ತಿಗಳ ಮತ್ತು ಸಾಧಾರಣ ವ್ಯಕ್ತಿಗಳ ಚಿತ್ರಣದ ಆ ವಿವರ ವಿಸ್ತಾರ ವಿಸ್ಮಯಕರವಾಗಿರುತ್ತದೆ. ಅವು ದೈತ್ಯ ಕಾದಂಬರಿಗಳು ಅಂತ ಅನ್ನಿಸುತ್ತದೆ. ಅಂತವು ನಮ್ಮಲ್ಲೂ ಖಂಡಿತ ಸಾಧ್ಯವಾಗಬೇಕು. ಆದರೆ ಅದಕ್ಕೆ ವರ್ಷಕ್ಕೆ ಹತ್ತು ಕಾದಂಬರಿ ಬರೆಯುವ ಚಪಲತೆ ಇರಬಾರದು. ಒಬ್ಬನ ಜೀವಮಾನದಲ್ಲೆಲ್ಲ ಅಂತಹ ಒಂದು ಅಥವಾ ಎರಡು ಕಾದಂಬರಿಯನ್ನು ಬರೆದರೂ ಸಾಕು. ಟಾಲ್‌ಸ್ಟಾಯ್ ತನ್ನ ಜೀವಮಾನದಲ್ಲಿ ಬರೆದದ್ದು ಮೂರು ಕಾದಂಬರಿಗಳು-ಮೊದಲನೆಯದು ದೊಡ್ಡದು, ಎರಡನೆಯದು ಅದಕ್ಕಿಂತ ಚಿಕ್ಕದು, ಮೂರನೆಯದು ಇನ್ನೂ ಚಿಕ್ಕದು. ಹಾಗೆ ಅಲ್ಲದೆ ನಾನು ನೂರು ಕಾದಂಬರಿ ಬರೆದೆ, ಅದರ ಶತಮಾನೋತ್ಸವ ಮಾಡುತ್ತೇನೆ ಎಂದು ಹೊರಟರೆ ಅದು ಆಗುವುದಿಲ್ಲ. ಅದಕ್ಕೆ ಬೇಕಾದಷ್ಟು ಶ್ರಮ ಬೇಕಾಗುತ್ತದೆ. ತಪಸ್ಸು ಬೇಕಾಗುತ್ತದೆ. ಎಲ್ಲ ರೆಕಾರ್ಡುಗಳನ್ನೂ ನೋಡಬೇಕಾಗುತ್ತದೆ. ಘಟನೆಗಳು ನಡೆದಂಥ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಎಲ್ಲಿ ಲಾಠಿ ಚಾರ್ಜ್ ಆಯಿತು, ಎಲ್ಲಿ ಯಾವ ಈಸೂರಿನಲ್ಲಿ ಮನೆಗಳನ್ನು ಸುಟ್ಟರು, ಅಲ್ಲಿ ಇರುವ ಮುದುಕ ಮುದುಕಿಯರನ್ನೆಲ್ಲಾ ನೋಡಬೇಕಾಗುತ್ತದೆ. ಕೇಳಿ ತಿಳಿಯಬೇಕಾಗುತ್ತದೆ. ಹೀಗೆ ತುಂಬಾ ಕೆಲಸ ಮಾಡಬೇಕು. ಆದರೆ ಯಾರು ಕೆಲಸ ಮಾಡಿ ಅಂಥ ಒಂದೇ ಒಂದಾದರೂ ಕಾದಂಬರಿಯನ್ನು ಸೃಷ್ಟಿಸುವನೋ ಅವನಿಗೆ ಶಾಶ್ವತವಾದ ಕೀರ್ತಿ ಲಭ್ಯ. ಅಷ್ಟೇ ಅಲ್ಲ, ಅಂಥ ಕಾದಂಬರಿಗಳನ್ನು ಕಡೆಗೆ – ಈಗಲ್ಲದಿರಬಹುದು, ಇನ್ನು ಮುಂದಾದರೂ – ಬೇರೆ ಭಾಷೆಗಳಿಗೆ ಭಾಷಾಂತರಿಸಿ ಅದನ್ನು ಪ್ರಚಾರ ಮಾಡಿಯೆ ಮಾಡುತ್ತಾರೆ.

ನಮ್ಮಲ್ಲಿ ನಡೆಯುತ್ತಿರುವ ಕೆಲಸ ಕಡಮೆಯೆಂದು ಭಾವಿಸಿಕೊಳ್ಳಬೇಡಿ. ನನ್ನ ಎದುರುಗಡೆ ಇಲ್ಲಿ ಕುಳಿತಿರುವ ಒಂದು ಸಾಲನ್ನಷ್ಟೇನೇ ನೋಡಿದರೂ ಸಾಕು. ಎಂಥೆಂಥ ಮೇಧಾವಿಗಳು, ವಿಚಾರವಂತರು, ಭಾವುಕರು ಸಾಹಿತ್ಯದ ಕೆಲಸ ಮಾಡಿಕೊಂಡು ಹೋಗಿದ್ದಾರೆ! ಒಬ್ಬ ಡಿ.ವಿ.ಜಿ., ಒಬ್ಬ ಮಾಸ್ತಿ, ಒಬ್ಬ ಬೇಂದ್ರೆ-ಇನ್ನು ಉಳಿದವರ ಹೆಸರುಗಳನ್ನು ನಾನು ಹೇಳುವುದಕ್ಕೆ ಹೋಗುವುದಿಲ್ಲ-ಕಾರಂತರ ಹೆಸರನ್ನೂ ಬರೆದಿದ್ದೆ (ಇಲ್ಲಿ ಬರುವುದಿಲ್ಲ ಎಂದು ತಿಳಿದುಕೊಂಡು). ಪ್ರಪಂಚದ ಯಾವ ಮಹಾ ಲೇಖಕನಿಗೂ ಕವಿಗೂ ನಮ್ಮವರೇನೂ ಕಡಮೆಯಿಲ್ಲ. ಅಷ್ಟೇ ಅಲ್ಲ, ವಸ್ತುನಿಷ್ಠವಾಗಿ ಸರಿಯಾಗಿ ವಿಚಾರಿಸಿದರೆ, ಅವರಿಗಿಂತಲೂ ಮೇಲ್ಮಟ್ಟದವರು ನಮ್ಮಲ್ಲಿ ಬೇಕಾದಷ್ಟು ಇದ್ದಾರೆ. ಆದ್ದರಿಂದ ನಮ್ಮಲ್ಲಿ ಏನೂ ಇಲ್ಲ, ಏನೂ ಇಲ್ಲ ಎಂದು ಹೇಳುತ್ತಾ ಬರಿ ಅತೃಪ್ತಿ ಅಸೂಯೆಗಳನ್ನು ಪ್ರದರ್ಶಿಸುತ್ತಾ ಕುಳಿತುಕೊಳ್ಳಬೇಡಿ. ಅದ್ಭುತವಾದ ಕೆಲಸ ನಡೆದಿದೆ, ನಡೆಯುತ್ತಾ ಇದೆ. ಆದರೆ ಇನ್ನೂ ನಡೆಯಬೇಕಾದದ್ದು ಇದೆ ಎನ್ನುವುದನ್ನು ಯಾರೂ ಹೇಳಬೇಕಾಗಿಲ್ಲ.

ಇದು ಸೃಜನಶೀಲ ಸಾಹಿತ್ಯದ ವಿಚಾರವಾಯಿತು. ಇನ್ನು ವಿಚಾರ ಸಾಹಿತ್ಯ. ವಿಜ್ಞಾನ ಸಾಹಿತ್ಯದಲ್ಲಿ ಮೂರೂ ವಿಶ್ವವಿದ್ಯಾನಿಲಯಗಳು ಕೆಲಸ ಮಾಡುತ್ತಾ ಇವೆ. ಒಂದು ವಿಶ್ವಕೋಶ, ಜ್ಞಾನಗಂಗೋತ್ರಿ ಇಂಥವೆಲ್ಲ ಬರುತ್ತಿವೆ. ಎಷ್ಟೋ ಮೇಧಾವಿಗಳಾದಂಥ ಮಹಾ ಮಹಾ ವ್ಯಕ್ತಿಗಳೆಲ್ಲ ನಮ್ಮ ಸಾಹಿತ್ಯಕ್ಕೆ ಕೆಲಸ ಮಾಡುತ್ತ ಇದ್ದಾರೆ. ದೊಡ್ಡ ದೊಡ್ಡ ಸಂಸ್ಥೆಗಳು ಕೆಲಸ ಮಾಡುತ್ತಾ ಇವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೇಂದ್ರ ಸರ್ಕಾರವು ದೇಶಭಾಷೆಗಳಿಗೆ ಬೇಕಾದಷ್ಟು ನೆರವನ್ನು ನೀಡುತ್ತಾ ಇದೆ. ಆದರೆ ಆ ನೆರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಕ್ಕೆ ನಮಗೆ ಶಕ್ತಿ ಬೇಕು. ಬಿ.ಎಂ.ಶ್ರೀಕಂಠಯ್ಯನವರು ಹೇಳುತ್ತಿದ್ದರು: “ಬೆಳೆಯೇನೋ ಬೇಕಾದಷ್ಟಿದೆ. ಆದರೆ ಕೊಯ್ಯುವವರು ಕಡಮೆ………” ಆ ರೀತಿ ಆಗುತ್ತೆ. ಕೆಲಸ ಮಾಡುವವರೆ ಸಾಲದು, ಪುಸ್ತಕ ಪ್ರಕಟಣೆಗೆ ದುಡ್ಡು ಕೊಡುತ್ತೇವೆಂದು ಹೇಳಿದ್ದಾರೆ. ಆದ್ದರಿಂದ ಇಷ್ಟೆಲ್ಲ ಇರುವಾಗ, ಇಷ್ಟೆಲ್ಲ ಕೆಲಸ ನಡೆಯುತ್ತಿರುವಾಗ ಕುಬ್ಜರಂತೆ ರಿಕ್ತಹಸ್ತರಂತೆ ಮಾತನಾಡುತ್ತಾ ವರ್ತಿಸಬಾರದು.

ಈ ಬರಹಗಳೆಲ್ಲ ಸರ್ವಶ್ರೇಷ್ಠವಾಗಿವೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಯಾವ ಬರಹಗಾರನ ಎಲ್ಲ ಕೃತಿಗಳೂ ಸರ್ವಶ್ರೇಷ್ಠವಾಗಿ ಎಲ್ಲ ಕಾಲಕ್ಕೂ ಇರುವುದಿಲ್ಲ. ಆದರೆ ಉತ್ತಮವಾದುದನ್ನು ಗುರುತಿಸಬೇಕು. ನನಗನಿಸುತ್ತದೆ, ಈಗಿನ ಮತ್ತು ಈ ಮುಂದಿನ ವಿಮರ್ಶೆ ಸ್ವಲ್ಪ ಕಾಲ ಈ ಖಂಡನೆಯ ಭಾಗವನ್ನು ಎಷ್ಟೆಷ್ಟು ಕಡಮೆ ಮಾಡಿದರೆ ಅಷ್ಟಷ್ಟೂ ವಾಸಿ. ಉತ್ತಮವಾದುದು ಇದ್ದರೆ ಅದನ್ನು ಹೊಗಳಿ; ಇಲ್ಲದಿದ್ದರೆ ತೆಪ್ಪಗಿರಿ. ಬರಿಯ ತೆಗಳುವ ಕೆಲಸವನ್ನೇ ಮಾಡಬೇಡಿ. ಶಲ್ಯ ಕರ್ಣನನ್ನು ಬಯ್ದು ಬಯ್ದು ಅವನ ಶಕ್ತಿಯನ್ನೆ ಕುಂದಿಸಿದಂತೆ, ಬರಿಯ ಖಂಡನೆಯ ಕೆಲಸ ಮಾಡಬಾರದು. ಏಕೆಂದರೆ, ಅನೇಕ ಚೇತನಗಳಿಗೆ ಒಂದು ಒಳ್ಳೆಯ ಮಾತು (ಸಲಹೆ) ಪ್ರೋತ್ಸಾಹಕವಾಗುತ್ತದೆ. ಇವತ್ತು ಚೆನ್ನಾಗಿ ಬರೆಯದೆ ಇರಬಹುದು, ನಾಳೆ ಚೆನ್ನಾಗಿ ಬರೆಯುತ್ತಾನೆ. ಆದ್ದರಿಂದ ಈ ನಿಂದೆಯ ಕೆಲಸ ಆದಷ್ಟು ಕಡಮೆಯಾದರೆ ಲೇಸು. ಉತ್ತಮವಾದುದು ಇದ್ದರೆ ಅದನ್ನು ಪ್ರಶಂಸಿಸಿ. ಒಂದುವೇಳೆ ಉತ್ತಮವಾದುದನ್ನು ಸರ್ವೋತ್ತಮ ಎಂದು ಕೀರ್ತಿಸಿದರೆ ಅದು ಎಲ್ಲ ಕಾಲಕ್ಕೂ ನಿಲ್ಲುವುದಿಲ್ಲ. ಕ್ರಮೇಣ ನಿಧಾನವಾಗಿಯಾದರೂ ಅದರ ಬೆಲೆ ನಿರ್ಣಯವಾಗುತ್ತದೆ. ಆದರೆ ಸರ್ವೋತ್ತಮವಾದುದನ್ನು ಈಗಲೆ ಈರ್ಷ್ಯೆಯಿಂದ ಖಂಡಿಸಿಬಿಟ್ಟರೆ ಅದು ಮೂಲೆಗೆ ಬಿದ್ದು ಸೊರಗಿ ಸತ್ತೇಹೋಗುತ್ತದೆ. ಅದಕ್ಕೆ ಮತ್ತೆ ಬೆಲೆ ಕಟ್ಟಿಸಿಕೊಳ್ಳುವ ಅವಕಾಶವೆ ಇರುವುದಿಲ್ಲ. ಆದ್ದರಿಂದ ಆದಷ್ಟು ಈ ರೀತಿಯ ಖಂಡನೆ- ಏಕೆಂದರೆ ಖಂಡನೆ ಕೂಡ ಅದನ್ನು ಮಾಡುವ ರೀತಿಯಲ್ಲಿದೆ-ನಿಲ್ಲಬೇಕು.

ಅದರಲ್ಲೂ ನವ್ಯರೆಂದು ಹೇಳಿಕೊಳ್ಳುವವರ ಕೆಲವು ವಿಮರ್ಶೆಗಳನ್ನು ಓದಿದರೆ,- ಅವರ ಕೆಲವು ಕಾವ್ಯಗಳನ್ನು ಓದಿದರೆ ಅರ್ಥವಾಗುವುದಿಲ್ಲವಲ್ಲಾ ಹಾಗೆ-ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ. ಮಾತೆತ್ತಿದರೆ “ಇಲ್ಲಿ ಭಾಷೆ ಸೋಲುತ್ತದೆ”-ಎಂದುಬಿಡುತ್ತಾರೆ. ಹಾಗೆಂದರೇನಪ್ಪಾ, “ಇಲ್ಲಿ ಭಾಷೆ ಸೋಲುತ್ತದೆ” ಅಂತ ಅಂದರೆ? ವಿಮರ್ಶೆ ಎಂದರೆ ಏನು? ಸಂಪೂರ್ಣವಾಗಿ ವೈಯಕ್ತಿಕವಾದ ಒಬ್ಬನ ಅನುಭವ, ನನಗೆ ಹಾಗೆ ಅನಿಸುತ್ತದೆ. ಅಂದ ಮಾತ್ರಕ್ಕೆ, ಭಾಷೆ ಸೋಲುತ್ತದೆ ಅಂದರೇನು? ಎಲ್ಲರಿಗೂ ಭಾಷೆ ಸೋಲುತ್ತದೆಯೆ? ಇವೆಲ್ಲ ಬರಿಯ slogan ‘ಎಂಜಲು ಮಾತು’ ಅಷ್ಟೆ. “ಇದು ಸಂಸ್ಕೃತಭೂಯಿಷ್ಠವಾಗಿದೆ” ಎನ್ನುವುದು ಮತ್ತೊಂದು ಎಂಜಲು ಮಾತು. ಸಂಸ್ಕೃತಭೂಯಿಷ್ಠವಿರಬಹುದು. ಇರಬಾರದೇಕೆ? ಭಾವಾಭಿವ್ಯಕ್ತಿಗೆ ಸಂಸ್ಕೃತಭೂಯಿಷ್ಠತೆಯೆ ಅತ್ಯಾವಶ್ಯಕವಾಗಬಹುದಲ್ಲಾ?

[2] ಹೀಗೆ ಸಣ್ಣ ಸಣ್ಣ ಸವಕಲು ಮಾತುಗಳನ್ನು ಉಪಯೋಗಿಸಿ, ನಿಂದಿಸಿ, ಬೆಳೆಯಲಿರುವ ಚೇತನಗಳನ್ನು ನಿರುತ್ಸಾಹಗೊಳಿಸಬಾರದು, ಅವಹೇಳನ ಮಾಡಬಾರದು. ಅದಕ್ಕಿಂತಲೂ ಅಪೇಕ್ಷಣೀಯವಾದದ್ದು ಮೆಚ್ಚಿಗೆಯ ಕೆಲಸ, ಪ್ರೋತ್ಸಾಹದ ಕೆಲಸ, ಧೈರ್ಯ ಹೇಳುವ ಕೆಲಸ ಮಾಡಬೇಕಾಗುತ್ತದೆ. ಆ ರೀತಿ ನಮ್ಮ ಮನೋಧರ್ಮ ಮುಂದುವರಿಯಬೇಕೆಂಬುದು ನನ್ನ ಆಸೆ. ವಿಮರ್ಶೆಯ ಸೋಗುಹಾಕಿಕೊಂಡ ಪರಸ್ಪರ ನಿಂದೆ, ಅಸೂಯೆ ಮತ್ತು ದ್ವೇಷ ತೊಲಗಬೇಕು.

ಸಾಹಿತ್ಯದಿಂದ ಸ್ವಲ್ಪ ಧನ ಲಭ್ಯವಾಗುತ್ತದೆ ಎಂದು ತೋರುವುದಕ್ಕೆ ಪ್ರಾರಂಭವಾದೊಡನೆಯೆ ಪರಸ್ಪರ ಅಸೂಯೆಗೆ, ಪರಸ್ಪರ ನಿಂದೆಗೆ ಶುರು ಆಗುತ್ತದೆ. ಇದೇನು ಸಾಹಿತ್ಯಕ್ಕೆ ಮಾತ್ರ ವಿಶೇಷವಲ್ಲ, ಜೀವನದ ಇತರ ಕ್ಷೇತ್ರಗಳಲ್ಲಿಯೂ ಇದು ಕಂಡುಬರುತ್ತದೆ. ಪಕ್ಕದವನು ಸ್ವಲ್ಪ ಮೇಲಕ್ಕೇರಿದ ಅಂದರೆ ಅವನನ್ನು ನೋಡಿ ಸಂತೋಷಪಡುವಂತೆ ಭಗವಂತನ ಅನುಗ್ರಹವನ್ನು ಪಡೆದರೆ, ಅವನ ಸಂತೋಷದ ಜೊತೆಗೆ ನಮ್ಮ ಸಂತೋಷವೂ ಸೇರಿ, ಇಬ್ಬರ ಸಂತೋಷವೂ ಇಮ್ಮಡಿಗೊಳ್ಳುತ್ತದೆ.[3] ಹಾಗಲ್ಲದಿದ್ದರೆ, ನನಗೂ ಸಂತೋಷ ಇಲ್ಲ, ಅವನಿಗೂ ಸಂತೋಷವಿಲ್ಲ; ಬರಿಯ ಕರುಬು ಬದುಕನ್ನೆ ಬೇಯಿಸುತ್ತದೆ. ಅದರಿಂದ, ಕರುಬುವ ನಾನೇ ಕುಬ್ಜನಾದ ಹಾಗಾಗುತ್ತದೆ.

ಬೇರೆ ಖಾಯಿಲೆಗಳು ಬಂದರೆ ಡಾಕ್ಟರ ಹತ್ತಿರ ಹೋಗುತ್ತೇವೆ. ಔಷಧ ಕೊಡುತ್ತಾನೆ. ಆದರೆ ಈ ಕರುಬಿನ ಕಾರಣದ ಖಾಯಿಲೆಗೆ ಅವನೇನು ಮದ್ದು ಕೊಟ್ಟಾನು? ರೋಗಕಾರಣವಾದ ಒಳಗಿನ ಅಸೂಯೆ ಅವನಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಕರುಬುವ ನಾವು ನಿತ್ಯ ರೋಗಿಷ್ಠರಾಗಿಬಿಡುತ್ತೇವೆ. ಅದನ್ನೆ ಹೇಳಿದ್ದಾನೆ ಹರಿಹರ: ‘ಸುಖದೂರನ್ ಅಸೂಯಾಪರನ್’ ಎಂದು. ಒಂದೊಂದೂ ಗುಂಪಿನವರು ತಮ್ಮ ತಮ್ಮ ಪರವಾಗಿ ಒಂದೊಂದು ಪತ್ರಿಕೆಯನ್ನು ಹೊರಡಿಸುವುದಕ್ಕೆ ಶುರು ಮಾಡುತ್ತಾರೆ. ನಾಲ್ಕೇ ದಿವಸ ನಡೆದರೂ ಪರವಾಯಿಲ್ಲ. ಕ್ರಮವಾಗಿ ನಡೆಯುವುದಿಲ್ಲ ಎಂದು ಗೊಣಗಿಯೆ ಅವಕ್ಕೆ ಅಲ್ಪಾಯುಗಳು ಎಂದು ಕರೆಯುವುದಕ್ಕೆ ಬದಲಾಗಿ ‘ಅನಿಯತ ಕಾಲಿಕೆ’ಗಳು ಎಂದು ಹೆಸರಿಡುತ್ತಾರೆ. ಹೀಗೆ ಬಯ್ಗುಳಗಳು ಚೆನ್ನಾಗಿ ಒಂದು ಕಡೆ ಸೇರಿದ ಮೇಲೆ, ಒಂದಾದರೂ ಆಯಿತು ಎರಡಾದರೂ ಆಯಿತು, ಪ್ರಕಟಿಸುತ್ತಾರೆ. ಹೀಗೆ ವಿಜೃಂಬಿಸಿದೆ ಗುಂಪುಗುಳಿತನ!

ಆಮೇಲೆ ಯಾವ ಸಾಹಿತ್ಯವನ್ನಾದರೂ ಹೊಗಳುವುದಕ್ಕಾಗಲಿ ತೆಗಳುವುದಕ್ಕಾಗಲಿ ಮನಸ್ಸು ಬಂದುಬಿಟ್ಟರೆ ಸಾಕು, ಅದಕ್ಕೆ ಬೇಕಾದಂಥ ವಾದಗಳನ್ನು ಮನಸ್ಸು ಸೃಷ್ಟಿಸಿಕೊಳ್ಳುತ್ತದೆ. ಮನಸ್ಸು, ಬುದ್ಧಿ ಇರುವುದೇ ಅದಕ್ಕೆ. ನಾವು ಏನನ್ನಾದರೂ ಅಪೇಕ್ಷಿಸಿ ಅದರ ಕಡೆ ಒಲಿದರೆ ಅದನ್ನು ಚೆನ್ನಾಗಿ ಪ್ರಚಾರ ಮಾಡುವುದಕ್ಕೆ ಅದಕ್ಕೆ ಬಹಳ ಶಕ್ತಿ ಇದೆ. ಉದಾಹರಣೆಯಾಗಿ ನಿಮಗೆ ಒಂದು ನಿದರ್ಶನ ಕೊಡುತ್ತೇನೆ: ಟಿ.ಎಸ್. ಈಲಿಯಟ್ ನ ‘ವೇಸ್ಟ್‌ ಲ್ಯಾಂಡ್’ ಎಂಬ ಒಂದು ದೀರ್ಘ ಕವನವನ್ನು-(ಕೆಲವರು ಅದನ್ನು ಕಾವ್ಯವೆಂದು ಕರೆದರು, ಮತ್ತೆ ಕೆಲವರು ಅದು ಕಾವ್ಯವೇ ಅಲ್ಲ ಎಂದೂ ಹೇಳಿದರು.) ಹೊಸಪೀಳಿಗೆಯ ವಿಮರ್ಶಕರು ನವ್ಯಕಾವ್ಯವೆಂದು ಶ್ಲಾಘಿಸಿದರು. ಅದು ಬಹಳ ಪ್ರಸಿದ್ಧವೂ ಆಯಿತು. ಆದರೆ ಆ ಪದ್ಯ ಹೊರಗೆ ಬಂದಾಗ ಆಗಿನ ಕಾಲದ ವಿಮರ್ಶಕವರೇಣ್ಯರಲ್ಲಿ ಅತಿ ಶ್ರೇಷ್ಠನೆಂದು ಪರಿಗಣಿತನಾಗಿದ್ದ ಮಿಡಲ್‌ಟನ್ ಮರ್ರೇ – ಮರ್ರೇ ಅಂದರೆ, ನಮ್ಮಲ್ಲಿ ನಾವು ರಂಗಣ್ಣನವರನ್ನು ಹೇಗೋ ಹಾಗೆ ಅವರು ಮಿಡಲ್‌ಟನ್ ಮರ್ರೇಯವರನ್ನು ಭಾವಿಸಿದ್ದಾರೆ – ಅದನ್ನು ಕುರಿತು ಹೀಗೆ ಬರೆದರು: “The reader is compelled in the mere effort to understand, to adopt an attitude of intellectual suspicion, which makes impossible the communication of feeling. The work offends against the most elementary canon of good writing: that the immediate effect should be unambiguous.” ಕವಿ ಏನು ಬರೆದಿದ್ದಾನೆ? ಕವನದ ವಿಷಯ ಏನು? ಎನ್ನುವುದನ್ನು ತಿಳಿಯುದಕ್ಕೇ ಆಗುವುದಿಲ್ಲ, ಪ್ರಯತ್ನ ಮಾಡಿದರೂ ಒಂದಕ್ಕೊಂದು ಸಂಬಂಧವಿಲ್ಲದ ಅಸಂಬದ್ಧತೆಗೆ ದಿಕ್ಕುಗೆಟ್ಟು ಸೋತು ಹೋಗುವಂತಾಗುತ್ತದೆ….to adopt an attitude of intellectual suspicion ಎಂದು ಬಹಳ ಗಂಭೀರವಾಗಿ ಹೇಳಿದ್ದಾರೆ, ನಾವು ಕನ್ನಡದಲ್ಲಿ ಹೇಳಬೇಕಾದರೆ, ಇಲ್ಲಿ ಏನೋ ಬೌದ್ಧಿಕವಂಚನೆ ನಡೆದಿದೆ ಎನ್ನಬೇಕಾಗುತ್ತದೆ. which makes impossible the communication of feeling ಯಾವುದನ್ನು ನೀವು ‘ಸಂವೇದನೆ’ ಅಂತ ಹೇಳುತ್ತೀರೊ ಅದರ ಸಂವಹನವೆ ಅಸಾಧ್ಯವಾಗುತ್ತದೆ; The work offends against the most elementary canon of good writing” ಸಾರ್ಥಕ ಬರವಣಿಗೆಯ ಒಂದು ಮೂಲಭೂತ ತತ್ವಕ್ಕೇ ಭಂಗವುಂಟಾಗುತ್ತದೆ. ಯಾವ ‘ವೇಸ್ಟ್‌ಲ್ಯಾಂಡ್’ ಟಿ.ಎಸ್. ಈಲಿಯಟ್ಟನನ್ನು ಜಗತ್ಪ್ರಸಿದ್ಧನನ್ನಾಗಿಸಿತೋ, ಅದರ ವಿಷಯವಾಗಿ, ಮಿಡಲ್ ಟನ್ ಮರ್ರೇ ಬರೆಯುತ್ತ, “…. elementary canon of good writing: that the immediate effect should be unambiguous” ಎಂದಿದ್ದಾರೆ. ವಿಷಯ ವಾಚ್ಯವಂತೂ ಅಲ್ಲ, ವ್ಯಂಗ್ಯವಿಲ್ಲ, ಲಕ್ಷ್ಯವೆಂದು ಹೇಳಿದರೆ ಏನು ಬೇಕಾದರೂ ಲಕ್ಷಿಸಬಹುದು. ನಿಮ್ಮ ಇಷ್ಟ ಬಂದ ಹಾಗೆ ಏನು ಬೇಕಾದರೂ ಆಲೋಚನೆ ಮಾಡಬಹುದು. ಈ ವಿಡಲ್‌ಟನ್ ಮರ್ರೆಯ ವಿಮರ್ಶೆಯನ್ನು ಉಲ್ಲೇಖಿಸಿ ಐ.ಎ.ರಿಚರ್ಡ್ಸ್ ‘ಸಾಹಿತ್ಯ ವಿಮರ್ಶೆಯ ಮೂಲತತ್ವಗಳು’ ಎಂಬ ಆತನ ಪುಸ್ತಕದಲ್ಲಿ ಒಂದು ಪರಿಶಿಷ್ಟ ಹಾಕಿ, ಅದರಲ್ಲಿ ತನ್ನ ವಿಮರ್ಶೆಯ ಜಾಣ್ಮೆಯ ಸಾಮರ್ಥ್ಯವನ್ನೆಲ್ಲ ಈಲಿಯಟ್ ಅನ್ನು ಸಮರ್ಥಿಸಲು ಉಪಯೋಗಿಸಿದ್ದಾನೆ. ಮಿಡಲ್‌ಟನ್ ಮರ್ರೆ ಬಹಳ hasty (ಆತುರವಾಗಿ) ವಿಮರ್ಶೆ ಮಾಡಿಬಿಟ್ಟಿದ್ದಾರೆ ಎಂದು. ಅಂದರೆ, ಅಸಾವಧಾನವಾಗಿ ಎಂದು ಅರ್ಥ. ನಮ್ಮ ತರುಣ ವಿಮರ್ಶಕರು ಮಾಡುವ ಹಾಗೆ, ಬಯ್ಯುವುದಕ್ಕೆ ಹೋಗಿಲ್ಲ, ಗಂಭೀರ ಭಾಷೆಯಲ್ಲಿ ಆ ಕೆಲಸ ನಿರ್ವಹಿಸಿದ್ದಾನೆ! ೨ – ೩ ಪುಟದಷ್ಟು ಶಕ್ತಿಯಿರುವಷ್ಟೂ ಸಮರ್ಥಿಸಿ, defend ಮಾಡಿದ್ದಾನೆ. ಪರವಾಗಿ ವಾದಿಸಿದ್ದಾನೆ.

ಬುದ್ಧಿ ಏನನ್ನು ಬೇಕಾದರೂ ಮಾಡುತ್ತದೆ – ನಾಯಿಯನ್ನು ಸಿಂಹವಾಗಿ ತೋರಿಸುತ್ತದೆ; ಸಿಂಹವನ್ನು ಇನ್ನೆಂಥದೋ ಪ್ರಾಣಿ ಎಂದು ತೋರಿಸುತ್ತದೆ. ನಾವು ಎಚ್ಚರಿಕೆಯಿಂದ ಓದಿದಾಗ ಮಾತ್ರವೆ ಗೊತ್ತಾಗುತ್ತದೆ ಇದು ಏನು ಕಸರತ್ತು ಎಂದು. ಈ ವಾದದಲ್ಲಿ ನಾನಂತೂ ಮಿಡಲ್‌ಟನ್ ಮರ್ರೆಯ ಪಕ್ಷದಲ್ಲಿ ನಿಲ್ಲುತ್ತೇನೆಯೆ ಹೊರತು ಐ.ಏ.ರಿಚರ್ಡ್ಸ್ ಪರವಾಗಿ ಅಲ್ಲ. ನಾನೂ ‘ವೇಸ್ಟ್‌ಲ್ಯಾಂಡ್‌’ ಅನ್ನು ಇದಕ್ಕೋಸ್ಕರವೆ ನಾಲ್ಕಾರು ಸಾರಿ ಓದಿ, ಅದಕ್ಕೆ ಬೇಕಾದ ರೆಫರೆನ್ಸ್ ಪುಸ್ತಕಗಳನ್ನೂ ಎಲ್ಲ ನೋಡಿದೆ. ಕೊನೆಗೂ ‘ವೇಸ್ಟ್‌ಲ್ಯಾಂಡ್’ ಕುರಿತು ಇಷ್ಟು ಹೇಳಬಹುದು: ಒಂದು ಒಗಟನ್ನು ಬಿಡಿಸಿದರೆ ನಮಗೆ ಒದಗಬಹುದಾದ ಸಂತೋಷ ಉಂಟಾಗುತ್ತದೆ-ಎಂದು ಮಾತ್ರ ಒಪ್ಪಿಕೊಳ್ಳಬಹುದು. ಅಷ್ಟೆ. ಒಂದು ಸಾಧಾರಣ ಕವನವನ್ನು ಚತುರ ಪ್ರಕಟಣೆ ಮತ್ತು ಪ್ರಚಾರಚಾತುರ್ಯ ಯಾವ ಮಟ್ಟಕ್ಕೆ ಏರಿಸಿ ಜಗತ್ತನ್ನೆ ಭ್ರಮೆಗೊಳಿಸಬಹುದು ಎನ್ನುವುದಕ್ಕೆ ಈ ರಿಚರ್ಡ್ಸ್‌ನ ‘ವೇಸ್ಟ್‌ಲ್ಯಾಂಡ್‌’ನ ವಿಮರ್ಶೆ ಒಂದು ಉತ್ತಮ ನಿದರ್ಶನ ಒದಗಿಸುತ್ತದೆ.

ಒಂದು ದಿನ ರೇಡಿಯೊ ಕೇಳುತ್ತಾ ಇದ್ದೆ. ಯಾರೋ ಒಬ್ಬರು ನವ್ಯ ಕಾವ್ಯದ ವಿಚಾರವಾಗಿ ಭಾಷಣ ಮಾಡುತ್ತಿದ್ದರು. ಅವರು ಯಾವುದೋ ನವ್ಯ ಕವನ ಒಂದರಲ್ಲಿ ಅಲ್ಲೆಲ್ಲೋ ಬರುವ ‘ಚಾಪೆ ಬಿಚ್ಚಿತು’ ಎಂಬ ಮಾತಿನ ಧ್ವನ್ಯರ್ಥ ವಿವರಿಸುತ್ತಿದ್ದರು. ಆ ‘ಚಾಪೆ ಬಿಚ್ಚಿತು’ ಎಂಬ ಒಂದು ಮಾತಿಗೆ ಅವರು ಕೊಟ್ಟ ವಿವರಣೆ ಏನು ಅಂದರೆ, (ಅದನ್ನು ಕೇಳಿ ನನಗೆ ದಿಗ್ಭ್ರಮೆ ಆಯಿತು.) ಅವರು ಹೇಳಿದ್ದನ್ನೆ ಹೇಳಿದಂತೆಯೆ ನಾನು ಹೇಳಲಾರೆ; ನಾನು ಹೇಳುವುದು ಅದಕ್ಕೆ ಸಂವಾದಿಯಾಗಿ ಮಾತ್ರ. ‘ಚಾಪೆ ಬಿಚ್ಚಿತು’ ಎಂಬ ಉಕ್ತಿಗೆ involve ಆಗಿದ್ದುದು evolve ಆಯಿತು ಎಂಬ ಅರ್ಥವನ್ನು ನಾವು ಗ್ರಹಿಸಬೇಕಂತೆ! ಆಪೂರಣವಾಗಿದ್ದುದು ಪರಿಣಾಮ ಹೊಂದಿತು ಎಂಬ ಅರ್ಥದಲ್ಲಿ! ಅವರೋಹಣವಾಗಿದ್ದ ಚಿಚ್ಛಕ್ತಿ ಆರೋಹಣದ ಕ್ರಮವಾಗಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯಗಳಿಗೆ ಏರುತ್ತದೆಯಲ್ಲಾ ಹಾಗೆ! ಇದಿಷ್ಟೂ ‘ಚಾಪೆ ಬಿಚ್ಚಿತು’ ಅನ್ನುವುದರಲ್ಲಿ ಅಡಕವಾಗಿದೆಯಂತೆ!

ಹೀಗೆ ವಿಮರ್ಶಕನಾದವನು ಬುದ್ಧಿವಂತನಾಗಿದ್ದರೆ ಏನನ್ನೂ ಏನು ಬೇಕಾದರೂ ಮಾಡಿ ತೋರಿಸಬಲ್ಲ. ಆದರೆ ನಿಜವಾದ ಸಾಹಿತ್ಯ-ಅದಕ್ಕೆ ನೀವು ಪ್ರಗತಿಶೀಲ ಎಂದಾದರೂ ಹೆಸರು ಕೊಡ, ನವೋದಯ ಎಂದಾದರೂ ಹೆಸರು ಕೊಡಿ-ಯಾವುದಾಗಿದ್ದರೂ ಅದು ಶಾಶ್ವತವಾಗಿ ನಿಲ್ಲುತ್ತದೆ. ಏಕೆಂದರೆ, ಅದು ಮನುಷ್ಯನ ಜೀವನಕ್ಕೆ ಸಂಬಂಧಪಟ್ಟು, ಅದರ ಉತ್ಥಾನಕ್ಕೆ ಸಂಬಂಧಪಟ್ಟು, ಭಾವರಸಗಳಿಂದ ಕೂಡಿದ್ದ ಪಕ್ಷದಲ್ಲಿ- (ನಾವು ಬೇಕಾದರೆ ಆ ಸಾಹಿತ್ಯ ಈ ಸಾಹಿತ್ಯ ಎಂದು ವಿಭಜನೆ ಮಾಡಬಹುದು) – ಅದನ್ನು ಖಂಡಿತವಾಗಿಯೂ ಸಾಹಿತ್ಯ ಎನ್ನಬಹುದು.

ನಾನೇನೋ ಹೇಳಿದೆ, ಕ್ರಾಂತಿಯ ತರುವಾಯದ ರಷ್ಯನ್ ಸಾಹಿತ್ಯಕೃತಿಗಳಲ್ಲಿ ದೇವರು ಧರ್ಮ ಮೊದಲಾದ ಆದರ್ಶಗಳು ಇಲ್ಲ ಎಂದು. ಅವು ಇರದೆ ಇರಬಹುದು. ಆದರೆ ಅವರು ವಾಸ್ತವ ಜೀವನ ವ್ಯಾಪಾರವನ್ನು ಸಾಹಿತ್ಯ ಸಾಮಗ್ರಿಯನ್ನಾಗಿ ಪರಿಗಣಿಸಿ ಉತ್ತಮವಾದ ಸಾಹಿತ್ಯ ಸೃಷ್ಟಿಮಾಡಿದ್ದಾರೆ. ಕಾವ್ಯದಲ್ಲಿ ಮಾಡಿದ್ದಾರೆ. ಕಾದಂಬರಿ ಕಥೆ ಮೊದಲಾದುವುಗಳಲ್ಲಿ ಮಾಡಿದ್ದಾರೆ. ನಮ್ಮ ತರುಣ ವರ್ಗದವರಲ್ಲಿ ಕೆಲವರು ತಮ್ಮನ್ನು ತಾವು ನಾಸ್ತಿಕರು ಎಂದು ಕರೆದುಕೊಳ್ಳುತ್ತಾರೆ. ಇಲ್ಲಿ  ಆಸ್ತಿಕರು ನಾಸ್ತಿಕರು ಅಷ್ಟೇನೂ ಮುಖ್ಯವಾಗಿ ಇಲ್ಲ. ಈ ಜಗಳ ಈಗ ಸೃಷ್ಟಿಯಾದುದಲ್ಲ. ಇದು ೩-೪ ಸಾವಿರ ವರ್ಷಗಳಿಂದಲೂ ನಡೆದುಕೊಂಡು ಬರುತ್ತಾ ಇದೆ. ಜೇಬಿನಲ್ಲಿ ಹಣ – ಗಿಣ ಎಲ್ಲ ಇದ್ದಾಗ, ನಾವು ಗಟ್ಟಿಮುಟ್ಟಾಗಿ ಇರುವಾಗ ನಾಸ್ತಿಕರು ಅಂದುಕೊಳ್ಳುತ್ತೇವೆ; ಅಂದುಕೊಂಡರೂ ಪರವಾಗಿಲ್ಲ. ಆಮೇಲೆ ಖಾಯಿಲೆ – ಕಸಾಲೆ ಬಂದಾಗ, ಬಂಧು ಬಾಂಧವರು ದೂರವಾದಾಗ ಇದ್ದಕಿದ್ದ ಹಾಗೆ ಮೇಲಕ್ಕೆ ಬರುತ್ತದೆ, ಆಸ್ತಿಕತೆ! ಅದನ್ನೇನೂ ಹೊರಗಡೆಯಿಂದ ತರುವುದು ಬೇಡ. ಆದ್ದರಿಂದಲೆ ಸಾಮಾನ್ಯವಾಗಿ ತರುಣರಾದಾಗ ಬರೆದ ಬರವಣಿಗೆಗಳಲ್ಲಿ ಈ ತರಹದ ಮನೋಧರ್ಮ ವಿಶೇಷವಾಗಿ ಇರುತ್ತದೆ. ಹಿಂದಿನ ಕಾಲದಲ್ಲಿ ಇಂತಹ ಈ ಅಪಕ್ವ ಮನಸ್ಸಿನ ಬರವಣಿಗೆಗೆ ಪ್ರಕಟಣಾವಕಾಶವೆ ಇರುತ್ತಿರಲಿಲ್ಲ. ಆಧುನಿಕ ಸೌಕರ್ಯಗಳಾದ ಕಾಗದ ಮುದ್ರಣ ರೇಡಿಯೊ ಪತ್ರಿಕೆ ಇವುಗಳಿರದಿದ್ದ ಕಾಲದಲ್ಲಿ ತರುಣರು ಬರೆದುದಕ್ಕೆ ಇಂದಿನಂತಹ ಸುಲಭ ಮತ್ತು ಶೀಘ್ರ ಪ್ರಚಾರಕ್ಕೆ ಅವಕಾಶವೆ ಇರುತ್ತಿರಲಿಲ್ಲ. ಈಗೇನಾಗಿದೆ ಅಂದರೆ, ಅಪಕ್ವದ ಸುಲಭ ಮತ್ತು ಶೀಘ್ರ ಪ್ರಕಾಶನಕ್ಕೆ ನಾ ಮುಂದೆ ತಾ ಮುಂದೆ ಎಂದು ಪ್ರಕಾಶಕರು, ಪತ್ರಿಕೆಗಳು, ರೇಡಿಯೊ ಮುಂತಾದುವು ಹಸಿದು ಹಾತೊರೆಯುತ್ತವೆ. ಹಸಿವೆಯ ದಾರಿರ್ದ್ಯತೆಯಲ್ಲಿ ತಿನ್ನುವ ಸಾಮಗ್ರಿಯ ಅರ್ಹತೆ ಅನರ್ಹತೆಯ ಮೀನಮೇಷಕ್ಕೆ ಸಮಯವೆ ಇರುವುದಿಲ್ಲ. ಪತ್ರಿಕೆಗಳಲ್ಲಿ ನವ್ಯಕಾವ್ಯದ ಹೆಸರಿನಲ್ಲಿ ಏನೇನೊ ಪ್ರಕಟವಾಗುತ್ತಿವೆ. ಅರ್ಥಸ್ಪಷ್ಟತೆ ಹುಡುಕಿದರೂ ಸಿಗುವುದಿಲ್ಲ. ಗದ್ಯವೋ ಪದ್ಯವೋ ಏನೋ ಆಗುತ್ತದೆ. ಚಿತ್ರಗಳನ್ನೂ ಹಾಕಿರುತ್ತಾರೆ. ಅದರಲ್ಲೂ ವಿಶೇಷವಾಗಿ ಲೈಂಗಿಕ ಪ್ರಚೋದನೆಯೆ ಪ್ರಧಾನವಾಗಿರುತ್ತದೆ ಎಂಬುದು ಆ ಚಿತ್ರದ ಅಂತರಂಗ ಹೊಕ್ಕು ನೋಡಿದರೆ ಗೊತ್ತಾಗುತ್ತದೆ. ಅನಿಯತಕಾಲ ಪತ್ರಿಕೆ ವಾರಪತ್ರಿಕೆ ಮಾಸಪತ್ರಿಕೆ ಹೀಗೆ ಈಗ ಬೇಕಾದಷ್ಟು ಪತ್ರಿಕೆಗಳು ಹೊರಡುತ್ತಿವೆ. ಅವುಗಳಿಗೂ ಕೂಡ ಸಾಮಗ್ರಿ ಬೇಕು. ಏನೋ ಒಂದು ಆದರೆ ಸರಿ, ತೆಗೆದುಕೊಳ್ಳುತ್ತಾರೆ, ಹಾಕುತ್ತಾರೆ. ಅದರ ಜೊತೆಗೆ, ‘ವಾಚಕರ ವಾಣಿ’ಗಳು ಬರುತ್ತವೆ. ಅದರಲ್ಲಿ ಇವರ ಸ್ನೇಹಿತರು ಯಾರೋ ಅದನ್ನು ಹೊಗಳುತ್ತಾರೆ. ಅದ್ಭುತವಾಗಿದೆ ಎಂದು. ಪಾಪ, ಸಾಮಾನ್ಯ ಜನಕ್ಕೆ “ಅದೇ ನಿಜ, ಇರಬಹುದು” ಎನಿಸುತ್ತದೆ. ಇತರರು ಅಷ್ಟೇನೂ ಅದ್ಭುತವಾಗಿಲ್ಲ, ಸ್ವಲ್ಪ ತಿದ್ದಿಕೊಳ್ಳಬೇಕಾಗುತ್ತದೆ ಎಂದರೆ, ಇವರು ಬೇರೆ ಪಂಗಡಕ್ಕೆ ಸೇರಿದವರು, ಬೇರೆ ಪಂಥಕ್ಕೆ ಸೇರಿದವರು, ನಮ್ಮ ವಿಚಾರದಲ್ಲಿ ಕೆಟ್ಟ ಮಾತು ಹೇಳುತ್ತಾ ಇದ್ದಾರೆ ಎಂದು ದೂರುತ್ತಾರೆ. ಹೀಗೆ ಇಂಥಾದ್ದೆಲ್ಲಾ ಏನೇನೊ ನಡೆಯುತ್ತಿದೆ. ‘ಅಕಾವ್ಯ’ ಎಂದು ಒಂದು ಪಂಥವಂತೆ; ತೆಲುಗಿನ ಕಡೆ ‘ದಿಗಂಬರ ಕಾವ್ಯ’ ಎಂಬ ಹೆಸರಿನ ಒಂದು ಬೀದಿಯ ಸಾಹಿತ್ಯಪಂಥ ಹುಟ್ಟಿದೆಯಂತೆ. ‘ಅನರ್ಥ ಕಾವ್ಯ’ ಎಂದೂ ನಮ್ಮಲ್ಲಿ ಒಂದು ಪಂಥ ಹುಟ್ಟಬಹುದೇನೊ! – ಹೀಗೆ ಎಷ್ಟೆಷ್ಟೋ ಹೆಸರುಗಳು ಹುಟ್ಟುತ್ತಿವೆ. ಅಣಬೆಗಳಂತೆ! ಕಡೆಕಡೆಗೆ ಯಾವುದು ಕಾವ್ಯ, ಯಾವುದು ಅಲ್ಲ ಎನ್ನುವ ಗೊಂದಲಕ್ಕೆ ಈಡಾಗುತ್ತೇವೆ. ಇಂತಹ ವಿಚಾರ ಗೋಷ್ಠಿಗಳನ್ನು ನಡೆಸಿದಾಗ, ನಮ್ಮ ಸಾಹಿತ್ಯವನ್ನು ಸಿಂಹಾವಲೋಕನ ಕ್ರಮದಿಂದ ನೋಡುವುದಕ್ಕೆ ಅವಕಾಶ ಒದಗುತ್ತದೆ. ಆ ಸಾಹಿತ್ಯ ಎಷ್ಟರಮಟ್ಟಿಗೆ ಜನಮನದಲ್ಲಿ ಬೇರೂರಿದೆ, ಪರಂಪರೆಯ ಸತ್ವವನ್ನು ಹೀರಿಕೊಂಡಿದೆ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಪರಂಪರೆಯನ್ನೆ ಅನುಸರಿಸಬೇಕೆಂದು ನನ್ನ ಅಭಿಪ್ರಾಯವಲ್ಲ; ಪ್ರಾಚೀನದ ಸತ್ತ್ವದ ಮೇಲೆ ನಿಂತು ಅರ್ವಾಚೀನವನ್ನು ಸೃಜಿಸುತ್ತಾ ಭವಿಷತ್ತಿನ ನೂತನ ಆಗಾಮಿಕದತ್ತ ಮುಂದುವರಿಯಬೇಕು ಎಂಬುದು ನನ್ನ ಆದರ್ಶ.[4]

ಇಲ್ಲಿ, ನಮ್ಮ ನೆಲದಲ್ಲಿ ಬೇರೂರಲಾರದ ವಿದೇಶೀಯ ಸಸ್ಯವೊಂದನ್ನು ತಂದು ಇಟ್ಟುಕೊಳ್ಳಬಹುದು. ನೆಲಕ್ಕೆ ಹಾಕುವುದಕ್ಕೆ ಆಗುವುದಿಲ್ಲ. ಕುಂಡದಲ್ಲಿ ಅದನ್ನು ಬೇಕುಬೇಕಾದ ಕಡೆಗೆ ಸಾಗಿಸಿ ಅದನ್ನು ಪ್ರದರ್ಶಿಸಬಹುದು. ಅದಕ್ಕೆ ಶೀಘ್ರಪ್ರಸಿದ್ಧಿ ದೊರೆಯುವಂತೆಯೂ ಮಾಡಬಹುದು. ಕ್ಷಣಿಕ ಮನೋರಂಜನೆಯೊದಗಿಸಬಹುದು. ಆದರೆ ಅದು ಬೆಳೆಯುವುದು ಮಾತ್ರ ಕುಂಡದಲ್ಲಿಯೆ, ನೆಲದಲ್ಲಲ್ಲ. ಯೂರೋಪಿಯನ್ ಜನಾಂಗ ಎರಡು ಮಹಾಯುದ್ಧಗಳ ಅನಂತರ ಯಾವುದೋ ಒಂದು ಹತಾಶಾ ಮನಃಸ್ಥಿತಿಗೆ ಸಿಕ್ಕಿ ಅವರ ಸಾಹಿತ್ಯ ಆ ರೀತಿ ಸೃಷ್ಟಿಯಾಗುತ್ತಾ ಹೋಯಿತು. ನಮ್ಮ ಸಂಸ್ಕೃತಿಯ ಅಳವಿಲ್ಲದ ಅಪಕ್ವಾನುಭವದ ತರುಣರು ಕಾಫ್ಕ, ಕಾಮು, ಸಾರ್ತ್ರೆ, ಕಿರ್ಕೆಗಾರ್ಡ್‌ ಎಂದೆಲ್ಲ ಹೆಸರು ಹೇಳಿ ಬೆರಗುಗೊಳಿಸಲು ಯತ್ನಿಸುತ್ತಿದ್ದಾರೆ. ಅವಿವೇಕದಿಂದಲೊ ಅಸೂಯೆಯಿಂದಲೊ ಅಜ್ಞಾನದಿಂದಲೊ ನಮ್ಮಲ್ಲಿರುವ ಉತ್ತಮತೆಯನ್ನು ನಿರ್ಲಕ್ಷಿಸಿ ತಿರಸ್ಕರಿಸಿ ವಿದೇಶೀಯ ಬೇಗಡೆಗೆ ಮಾರು ಹೋಗುತ್ತಾರೆ. ಅದನ್ನೋದದ, ಅದೇನು ಎಂದು ಗೊತ್ತಿರದ, ಗೊತ್ತಾಗಲೂ ಅವಕಾಶವಿಲ್ಲದ ನಮ್ಮ ಜನ ಸಾಮಾನ್ಯರ ಮುಂದೆ, ಹಿಂದೆ ಸಂಸ್ಕೃತ ಶ್ಲೋಕಗಳನ್ನು ಹೇಳಿ ಸಂಸ್ಕೃತ ತಿಳಿಯದ ನಮ್ಮ ಜನರನ್ನು ಬೆರಗುಗೊಳಿಸುತ್ತಿದ್ದ ನಮ್ಮ ಪುರೋಹಿತ ವರ್ಗದವರಂತೆ ತಮ್ಮ ವಿದೇಶೀ ಹೆಸರುಗಳನ್ನು ಝಳಪಿಸುತ್ತಾರೆ! ನೋಡೋಣ ಎಂದು ಅವರ ಆ ಕೃತಿಗಳನ್ನು ಓದಿದರೆ, ಅಲ್ಲಿ ದೊರೆಯುವುದು ಅಂತಹ ಪ್ರಥಮವರ್ಗದ್ದೇನಲ್ಲ. ಅದನ್ನೆ ಆದರ್ಶವನ್ನಾಗಿ ತೆಗೆದುಕೊಂಡು ಅನುಕರಿಸುವುದಕ್ಕೆ ಹೋಗುತ್ತಾರೆ ನಮ್ಮ ತರುಣರು. ನಮ್ಮಲ್ಲಿಯೂ ಇವರು ಹೆಸರಿಸುತ್ತಿರುವ ವ್ಯಕ್ತಿಗಳಿಗಿಂತಲೂ ಅತ್ಯಂತ ಮಹತ್ತರವಾದ ವ್ಯಕ್ತಿಗಳು ಬಂದಿದ್ದಾರೆ, ಬರುತ್ತಿದ್ದಾರೆ. ಆಗಿಯೂ ಇದ್ದಾರೆ. ಅವರ ಕಡೆ ಗಮನ ಸಹ ಕೊಡುವುದಿಲ್ಲ. ಹೊರಗಡೆಯ ಹೆಸರುಗಳನ್ನು ಹೇಳಿಕೊಂಡು ಮೆರೆಯುತ್ತಾರೆ. ಆ ವಿದೇಶೀಯರಿಗೆ ಸಂಬಂಧಿಸಿದ ಬದುಕಿನ ಪರಿಸ್ಥಿತಿ ನಮಗೆ ಸಂಭವಿಸಿಲ್ಲ. ಅವರು ತಮ್ಮ ಪರಿಸರದ ಒತ್ತಡದಿಂದ ಆವಶ್ಯಕವಾಗಿ ಹೊಮ್ಮುವ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ನಾವು ಅವರನ್ನು ಅನುಕರಿಸಿದರೆ ಅದು ಕೃತಕ ಸೃಷ್ಟಿಯಾಗುತ್ತದೆ; ನಮ್ಮ ಪರಂಪರೆಯಲ್ಲಾಗಲಿ, ನಮ್ಮ ಸದ್ಯದ ಜನಜೀವನದಲ್ಲಾಗಲಿ ಆ ನೆಲಗಾಣದೆ ನೆಲೆದಪ್ಪಿದ ತ್ರಿಶಂಕು ಸೃಷ್ಟಿಯಾಗುತ್ತದೆ. ಅದರಿಂದ ಯಾರಿಗೂ ಅರ್ಥವಾಗುವುದಿಲ್ಲ. ಜೊತೆಗೆ ನಮ್ಮ ನವೋದಯ ಸಾಹಿತ್ಯವನ್ನು Romantic (ರೋಮ್ಯಾಂಟಿಕ್) ಎಂದು ತಪ್ಪಾಗಿ ಕರೆದು ಖಂಡಿಸುತ್ತಾರೆ. ರೋಮ್ಯಾಂಟಿಕ್ ಎನ್ನುವ ಹೆಸರೇ ಅವರಿಗೆ ಒಂದು ನಿಂದೆಯ ಹೆಸರಾಗಿದೆ-ವರ್ಡ್ಸ್‌ವರ್ಥ್, ಶೆಲ್ಲಿ, ಕೀಟ್ಸ್ ಇವರನ್ನೆಲ್ಲ ಭಾವುಕ ಭ್ರಾಂತರೆಂದು ಹಳಿಯುತ್ತಾರೆ. ಹೊಸತನ್ನು ಮೇಲೆತ್ತಿ ಹೊಗಳುವ ಹುಮ್ಮಸ್ಸಿನಲ್ಲಿ ಹಿಂದಿನದನ್ನೆಲ್ಲ ತೆಗಳುತ್ತಾರೆ. ಅದನ್ನು ಓದಿಯೂ ಇರುವುದಿಲ್ಲ. ಇದು, ಒಬ್ಬ ಹೊಸ ಕಾರು ತಯಾರು ಮಾಡುವವನು ತನ್ನ ಅಡ್ವರ್ಟೈಸ್‌ಮೆಂಟಿನಲ್ಲಿ ಹಳೆಯ ಕಾರುಗಳಲ್ಲಿ ದೋಷಗಳು ತುಂಬಿವೆ ಎಂದೂ ಹೊಸದು ಬಹಳ ಉತ್ಕೃಷ್ಟವಾಗಿದೆ ಎಂದೂ ಘೋಷಿಸುತ್ತಾನಲ್ಲಾ ಹಾಗೆ! ಈ ಮಟ್ಟಕ್ಕೆ ಇಳಿದಿದೆ ಸಾಹಿತ್ಯ ಪ್ರಚಾರ. ಹಾಗಾಗಬಾರದು.

ಇಂಥ ಗೋಷ್ಠಿಗಳನ್ನು ಏರ್ಪಡಿಸುವುದರಿಂದ ಒಂದು ನಿರ್ಮಲವಾದ ವಾತಾವರಣ ಉಂಟಾಗುವಂತಾಗಬೇಕು. ಸಾಹಿತ್ಯವೆಲ್ಲಾ ಒಂದೇ ಮಟ್ಟದಲ್ಲಿರಲು ಸಾಧ್ಯವಿಲ್ಲ. ಎಲ್ಲರೂ ಯಾವಾಗಲೂ ಮೇರುಕೃತಿಗಳನ್ನು ರಚಿಸುತ್ತಾ ಹೋಗುವುದಿಲ್ಲ. ಯಾರೋ ಹೇಳುತ್ತಿದ್ದರು – ಅದು ನಿಜವೋ ಸುಳ್ಳೋ ಗೊತ್ತಿಲ್ಲ- ಪಿಕಾಸೋ ಚಿತ್ರ ಅಂದುಬಿಟ್ಟರೆ ಅದನ್ನು ಟೀಕಿಸುವುದಕ್ಕೆ ಅವಕಾಶವೇ ಇಲ್ಲವಷ್ಟೆ? ಅದನ್ನು ಹೊಗಳಬೇಕು ತಾನೆ. ಟೀಕಿಸಿದರೆ ಅವನೇ ಅವಿವೇಕಿಯಾಗುತ್ತಾನಷ್ಟೆ! ಅವನ ಯಾವುದೋ ಒಂದು ಚಿತ್ರವನ್ನು ಪ್ರದರ್ಶಿಸಿದ್ದರಂತೆ. ನಿಜವೋ ಸುಳ್ಳೋ-ಕತೆಯೇ ಇದ್ದರೂ ಇರಬಹುದು- ಯಾಕೆಂದರೆ ಅದನ್ನು ನಂಬುವುದಕ್ಕೇ ಸಾಧ್ಯವಿಲ್ಲದಂತಿದೆ – ವಿಮರ್ಶಕರು, ಆರ್ಟ್ಸ್ ಕ್ರಿಟಿಕ್ಸ್ ಬಂದರು, ಹೊಗಳಿದರು, ಅರ್ಥೈಸಿದರು, ಎಲ್ಲಾ ಆಯಿತು. ಕಡೆಗೆ ನೋಡಿದರೆ ಆ ಚಿತ್ರ ಒಂದು ಕತ್ತೆಯ ಬಾಲಕ್ಕೆ ಬಣ್ಣ ಹಚ್ಚಿ ಕ್ಯಾನ್ವಾಸ್ ಮೇಲೆ ಬಿಟ್ಟಿದ್ದರಿಂದ ಮೂಡಿದ ಬಣ್ಣಗಳ ಸಂತೆಯಾಗಿತ್ತಂತೆ. ಅದು ತಿರುಗಾಡಿದೆಡೆಯಲ್ಲೆಲ್ಲ ಬಣ್ಣ ಹೆಚ್ಚು ಹೆಚ್ಚಾಗಿ ಬಿದ್ದಿತ್ತು, ರಂಗುರಂಗಾಗಿ ನಾನಾ ಆಕೃತಿಗಳಲ್ಲಿ! ಅರ್ಥ ಏನು? ಎಂದರೆ ನಾವು ಕಲ್ಪಿಸಬೇಕಷ್ಟೆ! ಮೋಡಗಳು ಚಲಿಸುತ್ತಿರುತ್ತವೆ, ನಾನಾ ಆಕಾರ ವಿನ್ಯಾಸಗಳಲ್ಲಿ. ಅಲ್ಲಿಯೂ ನಮ್ಮ ಕಲ್ಪನೆ ತರತರದ ರಚನೆಗಳನ್ನು ಕಾಣಬಹುದಷ್ಟೆ! ಅಂಥ ಚಿತ್ರಗಳನ್ನಾಗಲಿ ಕವನಗಳನ್ನಾಗಲಿ ಒಂದೋ ಎರಡೋ ಬರೆದರೆ ನಾವು ಮೆಚ್ಚಿಕೊಳ್ಳಬಹುದು. ಆದರೆ ಅವುಗಳನ್ನೆ ಒಂದು ಪಂಥ ಮಾಡಿಬಿಟ್ಟು ರಚಿಸಲು ಹೊರಟರೆ ಗತಿಯೇನು? ಜನಜೀವನಕ್ಕೂ (ಸಾಮಾನ್ಯರಿಗೂ) ಏನೂ ಪ್ರಯೋಜನವಾಗುವುದಿಲ್ಲ. ಏನೋ ನಾವು ನಾವೇ ನಾಲ್ಕು ಜನ ಕೂತುಕೊಂಡು ಅದನ್ನು ಪರಸ್ಪರ ಮೆಚ್ಚಿಕೊಳ್ಳುತ್ತ ಹೋಗಬಹುದು. ಸ್ವಾತಂತ್ರ್ಯೋತ್ತರದಲ್ಲಿ ನಮ್ಮ ದೇಶದ ಸಾಹಿತ್ಯ ಎಲ್ಲವೂ ಹೀಗಾಗಿದೆಯೆಂದು ನೀವು ಭಾವಿಸಿಕೊಂಡರೆ ಅದು ಬಹಳ ತಪ್ಪು. ಏಕೆಂದರೆ ಈ ‘ನವ್ಯ’ ಎಂದು ಬರೆಯುತ್ತಿರುವವರಲ್ಲಿ ನಿಜವಾಗಿಯೂ ಬಹಳ ಮೇಲ್ಮಟ್ಟದ ಕೃತಿಗಳೂ ಇವೆ; ಇಲ್ಲ ಎಂದು ನಾನು ಹೇಳುತ್ತಾ ಇಲ್ಲ. ಆದರೆ ಇವುಗಳನ್ನು ನೆವಯೋಗಿಸಿಕೊಂಡು ದುರುಪಯೋಗ ಆಗುತ್ತಾ ಇದೆ. ಹೆಸರು ಏನಾದರೂ ಇಟ್ಟುಕೊಳ್ಳಿ ನೀವು. ಆದರೆ ಅದು ಜನಜೀವನಕ್ಕೆ ಸಂಬಂಧಪಟ್ಟಿರಬೇಕು ಅಷ್ಟೆ.

ಈಗ ಮತದ ಸಮಸ್ಯೆ. ಸ್ವಾತಂತ್ರ್ಯ ಬಂತು, ಆದರೆ ನಮ್ಮಲ್ಲಿ ಎಷ್ಟೋ ಸಮಸ್ಯೆಗಳು ಇವೆ. ಆ ಸಮಸ್ಯೆಗಳನ್ನು ಕುರಿತು ಬರೆದರೆ ಸಾಹಿತ್ಯವಾಗುವುದಿಲ್ಲವೆ? ಯಾಕೆ ಸಾಹಿತ್ಯವಾಗುವುದಿಲ್ಲ? ಕಲೆಗಾಗಿ ಕಲೆ, ಜೀವನಕ್ಕಾಗಿ ಅಲ್ಲ, ಅಂತ ತಿಳಿದುಕೊಂಡಿರುವುದರಿಂದಲೆ ಸಾಹಿತ್ಯ ಬದುಕಿನಿಂದ ದೂರ ದೂರ ಸರಿಯುತ್ತದೆ. ಸಾಹಿತ್ಯ ಪರಂಪರೆಯಲ್ಲಿ ಬೇರೂರಲೇಬೇಕು. ಜನಜೀವನದಲ್ಲಿ ಅದು ನೆಲೆಸಬೇಕು. ಜನಜೀವನವನ್ನು ಮೇಲಕ್ಕೆ ಎತ್ತಬೇಕು. ಜನಜೀವನವನ್ನು ಮೇಲಕ್ಕೆ ಎತ್ತುವುದು ಅಂತ ಹೇಳಿದರೆ, ಲೇಖಕ ಮೊದಲು ತನ್ನ ಜೀವನವನ್ನು ಮೇಲಕ್ಕೆ ಎತ್ತಿಕೊಳ್ಳಬೇಕು. ತನ್ನ ಜೀವನವನ್ನು ಮೇಲಕ್ಕೆ ಎತ್ತಿಕೊಳ್ಳದೆ ಜನಜೀವನವನ್ನು ಮೇಲಕ್ಕೆ ಎತ್ತುವುದು ಸಾಧ್ಯವಾಗುವುದಿಲ್ಲ. ನಾನು ಹೇಳಿದೆ, ಸೋವಿಯತ್ ಲೇಖಕರ ಹಾಗೆ ನಮ್ಮವರೂ ಬರೆಯಬೇಕು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಂಥೆಂಥ ಮಹಾವ್ಯಕ್ತಿಗಳು ಭಾಗವಹಿಸಿದ್ದಾರೆ! ಮದ್ದು ಗುಂಡು ಫಿರಂಗಿಗಳು ಇವುಗಳೇನೋ ಇಲ್ಲ, ಹೌದು. ಆದರೆ, ಅವಕ್ಕಿಂತಲೂ ಅದ್ಭುತವಾದ ತ್ಯಾಗ ತಪಶ್ಶಕ್ತಿಗಳಿಂದ ಕೂಡಿದ ಜನ ರಾಶಿರಾಶಿಯಾಗಿದ್ದಾರೆ. ಈಗ ೨೭ ವರ್ಷಗಳಾದ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಮ್ರಪತ್ರ ಮತ್ತು ಮಾಸಿಕ ವೇತನ ಇವನ್ನು ಕೊಡುವುದಕ್ಕೆ ಶುರುಮಾಡಿದ್ದಾರೆ. ಆದರೆ ಸರ್ಕಾರ ತಾಮ್ರಪತ್ರ ಮತ್ತು ಮಾಸಿಕ ವೇತನ ಕೊಡುವುದರ ಜೊತೆಗೆ, ಸಾಹಿತಿಗಳೂ ಕೂಡ ಕೊಡಬೇಕಾಗುತ್ತದೆ. ಏಕೆಂದರೆ, ನಿಮ್ಮ ನಿಮ್ಮ ಹಳ್ಳಿಗಳಲ್ಲಿ ತ್ಯಾಗ ಮಾಡಿದವರ, ಪ್ರಾಣ ಬಿಟ್ಟವರ ಅಂಥ ದಾರುಣ ಸನ್ನಿವೇಶಗಳು, ಅತ್ಯಂತ ಕರುಣಾಮಯವಾದ ಸನ್ನಿವೇಶಗಳು ನಿಮಗೆ ಗೊತ್ತಿರುತ್ತವೆ. ಆ ಸಾಮಗ್ರಿಗಳನ್ನೆ ಆರಿಸಿಕೊಳ್ಳಿ, ನೀವು, ಮತ್ತೆ, ಏನಾದರೂ ಹೆದರಿಕೊಳ್ಳಬಾರದು. ಏನು, ಈ ಸಾಹಿತ್ಯ ಏಕೆ ಉತ್ತಮ ಸಾಹಿತ್ಯವಾಗುವುದಿಲ್ಲ? ಗೊರೂರು ರಾಮಸ್ವಾಮಿ ಅಯ್ಯಂಗಾರ್ ‘ಮೆರವಣಿಗೆ’ ಅಂತ ಒಂದು ಕಾದಂಬರಿ ಬರೆದಿದ್ದಾರೆ. ಶುದ್ಧ ಸಾಹಿತ್ಯ ದೃಷ್ಟಿಯಿಂದ, ಶುದ್ಧ ಕಾದಂಬರಿಯ ತಂತ್ರದ ದೃಷ್ಟಿಯಿಂದ, ಪಾತ್ರರಚನೆಯ ದೃಷ್ಟಿಯಿಂದ, ಅದರಲ್ಲಿ ದೋಷಗಳನ್ನು ಹುಡುಕಿ ಟೀಕೆ ಮಾಡಬಹುದು, ಇಲ್ಲ ಎಂದಲ್ಲ. ಆದರೆ ಅವ ಕಾಲದಲ್ಲಿ ಅವರು ಮತ್ತು ಅವರ ಸುತ್ತಮುತ್ತಲಿನ ಜನಗಳು ಹೇಗಿದ್ದರು, ಏನು ಮಾಡಿದರು, ಹೇಗೆ ಭಾಗವಹಿಸಿದರು ಎನ್ನುವುದನ್ನು ಮತ್ತೆ ಬೇರೆ ಎಲ್ಲಿಯೂ ಸಿಗದಿರುವಷ್ಟು ಮಟ್ಟಿಗೆ ವಸ್ತುನಿಷ್ಠವಾಗಿ ಚಿತ್ರಿಸಿರುವುದನ್ನು ನಾವು ಅಲ್ಲಿ ಕಾಣುತ್ತೇವೆ. ಹೀಗೆ ಹಿಂದೆ ನಡೆದ ಆ ಸ್ವಾತಂತ್ರ್ಯ ಸಂಗ್ರಾಮದ ಜೀವನವನ್ನು ಮುಂದೆ ಬರುವ ಕಾದಂಬರಿಕಾರರು, ಕತೆಗಾರರು, ನಾಟಕಕಾರರು ಮತ್ತು ಕವಿಗಳು ತಮ್ಮ ತಮ್ಮ ಕೃತಿವಸ್ತುವನ್ನಾಗಿ ಆರಿಸಿಕೊಂಡು ಚಿತ್ರಿಸಬೇಕು. ಖಂಡಿತ ಚಿತ್ರಿಸುತ್ತಾರೆ ಎಂಬ ಭರವಸೆ ನನಗಿದೆ. ಅಲ್ಲಿ ಸಾಹಿತ್ಯಕ್ಕೆ ಸಾಮಗ್ರಿ ಬೇಕಾದಷ್ಟಿದೆ.

ನಾನು ಒಂದೆರಡು ನನ್ನ ಕವನ ಭಾಗಗಳನ್ನು ಓದಬೇಕೆಂದು ತಂದೆ. ಆದರೆ ಈಗಾಗಲೆ ಬಹಳ ಹೊತ್ತಾಗಿದೆ. ಆದರೂ ನವೋದಯ ಸಾಹಿತ್ಯ ಜನ ಜೀವನದಿಂದಲೆ ಹೊಮ್ಮಿ ಅದರಿಂದಲೆ ಸ್ಫೂರ್ತಿಗೊಂಡು ಅದಕ್ಕೆ ಸ್ಫೂರ್ತಿದಾಯಕವಾಯಿತೆಂಬುದನ್ನು ನಿದರ್ಶಿಸಲು ಒಂದೆರಡು ತುಣುಕುಗಳನ್ನು ಓದುತ್ತೇನೆ. ಹಿಂದೆಯೆ, ನಾವು ಕಾವ್ಯ ಬರೆಯುತ್ತಾ ಇರುವಾಗಲೆ, ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ, ೧೯೩೫ರಲ್ಲಿ, ನಮಗೂ ಕೂಡ ಈ ‘ಮಣ್ಣಿನ ವಾಸನೆ’ಯ ಕರೆ ಇತ್ತು. ‘ಮಣ್ಣಿನ ವಾಸನೆ’ ಎಂಬುದು ಹೊಸದಾಗಿ ಏನೂ ಸೃಷ್ಟಿಯಾದುದಲ್ಲ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಉಚ್ಚಜಾತಿಯ ಮಡಿಯ ಮಕ್ಕಳಿಗೆ ‘ಮಣ್ಣಿನ ವಾಸನೆ’ ಎಲ್ಲಿಂದ ಬರಬೇಕು? ಹೇಗೆ ಗೊತ್ತಾಗಬೇಕು? ಅವರಿಗೆ ವಿಶೇಷವಾಗಿ ನಶ್ಯದ ವಾಸನೆ, ಸಿಗರೇಟ್ ವಾಸನೆ, ಸಾರಾಯಿ ವಾಸನೆ, ಹೆಣ್ಣಿನ ವಾಸನೆಗಳು ಮೂಗಿಗೆ ಬೀಳುವುದು! ಅವರಿಗೆ ನಿಜವಾಗಿಯೂ ಅವೇ ಪ್ರಮುಖ! ಅವರಿಗೆ ನಿಜವಾದ ಮಣ್ಣಿನ ವಾಸನೆ ಬಂದೂ ಇಲ್ಲ, ಗೊತ್ತೂ ಇಲ್ಲ. ಈ ‘ಮಣ್ಣಿನ ವಾಸನೆ’ ಮತ್ತು ಈ ಕ್ರಾಂತಿಯ ಭಾವನೆ ಇವರೆಲ್ಲ ಕಣ್ಣು ಬಿಡುವುದಕ್ಕೆ ಮುನ್ನವೆ ಸಾಹಿತ್ಯರಂಗ ಪ್ರವೇಶ ಮಾಡಿ ಸಿಂಹಾಸನವೇರಿದ್ದುವು. ‘ಮರಳಿ ಮಣ್ಣಿಗೆ’ ಎಂಬ ಹೆಸರು ಹೊತ್ತು ಒಂದು ಕಾದಂಬರಿಯೆ ಹುಟ್ಟಿತ್ತು!

ಕವಿಗೆ ಎಚ್ಚರಿಕೆ ನೀಡಿತ್ತು ‘ಕ್ರಾಂತಿಕಾಳಿ’ ಎಂಬ ಈ ಸಾನೆಟ್:

ಕ್ರಾಂತಿಕಾಳಿ ಕಠಾರಿಯಂ ನನ್ನೆದೆಗೆ ಕುರಿತು
ಝಳಪಿಸುತೆ, ಬದ್ಧಭ್ರುಕುಟಿ ಕೋಪದಲಿ ನಿಂತು,
ದಂಷ್ಟ್ರಘರ್ಷಣರವಂ ಪೊಣ್ಮೆ ಗಜರಿದಳಿಂತು:
“ಓ ದ್ರೋಹಿ ಕವಿಯೆ, ನಿನಗಿತ್ತಾಣತಿಯ ಮರೆತು
ಕ್ಲೀಬತನದಲಿ ಹೆಣ್ಣು ಸೋಬಾನೆಗಳ ಹಾಡಿ
ಪಾಳ್ಗೆಯ್ದೆ ಕಜ್ಜಮಂ! ಶುಕ, ಪಿಕ, ವಸಂತ, ಲತೆ,
ಮುಂಗುರುಳು, ತಂಗಾಳಿ, ದೊರೆಗಿರೆಗಳಜ್ಜಿ ಕಥೆ
ಬೆಳ್ದಿಂಗಳೆಂಬುವಂ ನೂಕಾಚೆ, ಹೆಂಬೇಡಿ!

ಬಡತನಂ, ಗೊಬ್ಬರಂ, ಕತ್ತಿ ಗುದ್ದಲಿ, ಹಾರೆ,
ಬೆವರು, ನೆತ್ತರ್ಗಳಂ ಗಾನಗೈವುದು ನಿನ್ನ
ಕರ್ತವ್ಯವಿಂದು. ಹಾ! ಹೊಟ್ಟೆಗಿಲ್ಲದೆ ಅನ್ನ
ಬಡಜನರು ಸಾಯುತಿರೆ, ರಸಗಂಧವನು ತೋರೆ
ತಣಿವಹುದೆ? ಕ್ರಾಂತಿಕಾಳಿಯು ನಾನು, ಕೈಬೀಸಿ
ಕರೆಯೆ, ಬಾ ಪೂಜೆಗೈ ಹೃದಯ ರಕ್ತವ ಸೂಸಿ!”

ಅಂದು ಕವಿತೆ ಮಣ್ಣಿನ ವಾಸನೆಯನ್ನು ಮಾತ್ರವಲ್ಲ, ಅದಕ್ಕೂ ಮುಂದೆ ಹೋಗಿ ಗೊಬ್ಬರದ ವಾಸನೆಯನ್ನೂ ಆಘ್ರಾಣಿಸಿತ್ತು:

ಗೊಬ್ಬರ

“ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ? ಹಾ
ಕಡುಕಷ್ಟ! ಕಲಿಕಾಲಕೇನೇನು ಬಂದಪುದೊ?
ಸಾಲದೇಂ ಪ್ರಲಯಕಿದೆ ಪೀಠಿಕೆ? ಇನ್ನೇನು
ಕಾರಣಂ ಬೇಕಯ್ಯ ನಿನಗೆ, ತಾಂಡವ ಮೂರ್ತಿ,
ಕಲ್ಕ್ಯಾವತಾರವನ್ನೆತ್ತಿಬರೆ? ಇದಕಿಂತ
ಧರ್ಮವಧೆ ಬೇರುಂಟೆ? ನಿರ್ಮಲ ಸರಸ್ವತಿಯ
ವೀಣೆಯಂ ಶೂದ್ರಂ ಕಸಿದುಕೊಂಡು, ಗೊಬ್ಬರದ
ಗುಂಡಿಯನ್ನಗೆಯೆ ಗುದ್ದಲಿಯ ಮಾಡಿಹನಲ್ಲ!
ಶಿವನೆ, ಭೈರವನಾಗಿ ಬಂದು ಹಣೆಗಣ್ಣಿನಿಂ
ಕಿಡಿಗೆದರಿ ಬೂದಿ ಮಾಡದೆ ಸುಮ್ಮನಿಹೆಯಲ್ಲ!”

“ಕವಿತೆ, ಭೂಪಾಲರರಮನೆಯಲ್ಲಿ ಕೈ ಕೆಸರು
ಮಾಡಿಕೊಳದೆಯೆ ಮೊಸರನುಣುತಿರ್ದ ಪಂಡಿತರ
ದಿವ್ಯ ಜಿಹ್ವಾ ಲಸದ್ರಂಗದಲಿ ಕುಣಿದಾಡಿ
ಸುಳಿದಾಡಿ ನಲಿದಾಡಿದಾ ನೀನು, ಹಾ! ಇಂದು
ಕೊಳೆತು ನಾರುವ ರೈತನೊಡಗೂಡಿ ಒದ್ದಾಡಿ,
ಗಂಧ ಪುನುಗು ಜವಾದಿ ಕಸ್ತೂರಿಗಳನುಳಿದು
ಸೆಗಣಿಗಂಪಾಘ್ರಾಣಿಪಂತಾಯ್ತೆ? ಕೋಕಿಲೆಯ
ಸ್ತೋತ್ರಗೈದಾ ನೀನು ಪಾಳು ಗೂಬೆಯ ಕುರಿತು
ಪಾಡುವಂತಾಯ್ತೆ? ಪೆರೆನೊಸಲು, ಕೆಂದುಟಿ, ಕೆನ್ನೆ,
ಚಂದ್ರಾನನಂ, ಕಮಲನಯನಂ, ಲಸನ್ನೀಲ
ಕುಂತಳಂ, ಚಾರು ವಕ್ಷಸ್ಥಳಂ, ನುಣ್ಪು ತೊಡೆ,
ಜಘನಂ ನಿತಂಬಂಗಳಲ್ಲಿ, ಕೆಂದಾವರೆಯ
ಮೆಲ್ಲಡಿಗಳಲಿ ವಿಹರಿಸಿದ ಕಾವ್ಯ ಪಂಕಜೆಯೆ,
ನಿನಗಿಂದು ಕೆಸರೆ ಮನೆಯಾಗಿದೆಯೆ? ನಂದನಂ
ಮರುಭೂಮಿಯಾದುದೇ? ರಣವೀರ ಪಾರ್ಥಿವರ
ರಕ್ತತೃಷ್ಣೆಯ ಕರ್ಮಮಂ, ಖಡ್ಗಧನುಗಳಂ,
ಬಾಣ ಪ್ರಯೋಗ ಕೌಶಲಮಂ, ಕಿರೀಟಾದಿ
ವಸನ ಭೂಷಣ ತನುತ್ರ ಶಿರತ್ರ ವಿಭವಮಂ
ವರ್ಣಿಸಿದ ನೀನಿಂದು ನೇಗಿಲಂ ಹಾರೆಯಂ
ಮಣ್ಣಗೆವ ಕಜ್ಜಮಂ ನೆರೆ ವರ್ಣಿಪಂತಾಯ್ತೆ?
ದುಷ್ಯಂತ ದಶರಥ ಶ್ರೀರಾಮನರ್ಜುನಂ
ಕೌಶಿಕ ಪರಶುರಾಮ ಭೀಷ್ಮದ್ರೋಣಾದ್ಯರಂ
ಬಣ್ಣಿಸಿದ ನೀನು-ಕರಿಸಿದ್ದ ಕಿಟ್ಟಯ್ಯರಂ,
ದುರ್ದಮ ಕುರುಕ್ಷೇತ್ರಮಂ ಮೇಣ್ ಪುರಾಣದಾ
ಲಂಕೆಯನ್ನುಳಿದು ಹಾ! ಒಂಟಿಕೊಪ್ಪಲಿನಾಚೆ
ಬೋಡಾದ ಬೋರೆಯಂ, ಮಲೆನಾಡ ಕೊಂಪೆಯಾ
ಕಾಡು ಮೇಡುಗಳಂ ಕುರಿತ್ತುಲಿವ ಗತಿಯಾಯ್ತೆ?

“ಕಬ್ಬಿಲರು ಕಬ್ಬಿಗರು ತಾವೆನುತ್ತಬ್ಬರಿಸಿ
ಬೊಬ್ಬಿರಿಯೆ ಕಬ್ಬವಾದುದೆ? ಗೊಬ್ಬರದ ಮೇಲೆ
ಕಬ್ಬವಪ್ಪೊಡೆ ಗಂಡು ಗಬ್ಬವಾದಂತಲ್ತೆ?
ಅಬ್ಬಬ್ಬ, ಕಲಿಕಾಲಕೇನಾದರಾಗುತ್ತದೆ!”

“ಗೊಬ್ಬರವನಲ್ಲಗೆಳೆಯುವೆ ಏಕೆ ಮರದ ತುದಿ
ನಲ್ಗಂಪುವೆತ್ತು ತಂಗಾಳಿಗೊಲೆಯುವ ಹೂವೆ?
ಬೇರುಗಳಿಗಿಲ್ಲದಿರೆ ಗೊಬ್ಬರಂ, ಹೇಳೆನಗೆ,
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ
ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ
ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ
ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು?
ಹಳಿಯದಿರೊ; ಇಂದೊ ನಾಳೆಯೊ ನೀನು ಕೆಳಗುರುಳಿ
ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು!

“ಹಚ್ಚಿಕೊಳ್ಳಿರೊ ಹಚ್ಚಿಕೊಳ್ಳಿ ಪರಿಮಳಗಳಂ,
ಗಂಧ ಅತ್ತರು ಪುನುಗು ಕಸ್ತೂರಿ ಇತ್ಯಾದಿ
ತರತರದ ಭೋಗಮಂ! ಇನ್ನೇಸು ದಿನ ತಾನೆ
ಹಚ್ಚಿಕೊಳ್ಳುವಿರದನು ನಾ ಕಣ್ಣಿನಲಿ ಕಾಂಬೆ!
ನಾಮ ಮುದ್ರೆ ವಿಭೂತಿಗಳ ಬಳಿದುಕೊಂಬವರು
ಕತ್ತೆಯಂದದಿ ಗದ್ದೆಯಲಿ ಗೆಯ್ದು ಮೈಬೆವರು
ಸುರಿಸಿ ಗೊಬ್ಬರ ಮಣ್ಣು ಬಳಿದುಕೊಂಬರಿಗಿಂತ
ಮೇಲೆಂಬ ಭಾವ ತಲೆಕೆಳಗಾಗಿ ಹೋಗುತಿದೆ!
ನೇಗಿಲ ಕುಳಂ ದೊರೆಯ ಕತ್ತಿಯಂ ಕಿತ್ತೆಸೆದು,
ಮುತ್ತಿನುಂಡೆಯ ಮುಡಿವ ಸಿರಿನೆತ್ತಿಯನ್ನುತ್ತು
ಬತ್ತಮಂ ಬಿತ್ತಿ ಬೆಳೆಯುವ ಉತ್ತಮದ ಹೊತ್ತು
ಹತ್ತಿರಕೆ ಹತ್ತಿರಕೆ ಬರುತಿರುವುದೊತ್ತೊತ್ತಿ!

ಗೊಬ್ಬರಂ ಸಿಂಹಾಸನಕ್ಕೇರಿದಾ ದಿನಂ
ತನ್ನ ಹೊಗಳಿದ ಕಬ್ಬಿಲನ ಕಬ್ಬಿಗನ ಮಾಡಿ
ಮೆರೆಯುವುದು! ಅಂದು ಗೊಬ್ಬರದ ಕಂಪೆಲ್ಲರ್ಗೆ
ಪರಿಮಳದ್ರವ್ಯ ತಾನಾದಪುದು! ಏತಕೆನೆ,
ಸಿರಿವರಸು ಶಕ್ತಿಯಿರೆ ಗೊಬ್ಬರವೆ ಪರಿಮಳಂ;
ಇಲ್ಲದಿರೆ ಪುನುಗು ತಾನಾದೊಡಂ ಗೊಬ್ಬರಂ!”


[1]       ಕನ್ನಡ ಅಧ್ಯಯನ ಸಂಸ್ಥೆ ೧೫-೮-೧೯೭೩ರಂದು ಮಾನಸಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಲೇಖಕರ ಗೋಷ್ಠಿಯಲ್ಲಿ ಮಾಡಿದ ಉದ್ಘಾಟನಾ ಭಾಷಣ.

[2]       ನನ್ನ ‘ದ್ರೌಪದಿಯ ಶ್ರೀಮುಡಿ’ ಎಂಬ ಲೇಖನ ನೋಡಿ.

[3]       ನನ್ನ ‘ಪ್ರೇಮಗಣಿತ’ ಕವನ ನೋಡಿ.

[4]       ‘ಸಾಹಿತ್ಯ ಪ್ರಚಾರ’ ಗ್ರಂಥದಲ್ಲಿರುವ ‘ಹೊಸ ಸಾಹಿತ್ಯ ಮತ್ತು ಹೊಸ ದೃಷ್ಟಿ’ ಎಂಬ ಭಾಷಣ ನೋಡಿ.