ಭಾರತದಲ್ಲಿ ಭಾಷಾಭಿಮಾನದ ಅತೀರೇಕದಿಂದ ಉಂಟಾಗಬಹುದಾದ ಗೊಂದಲವನ್ನು ಪರಿಹರಿಸಲು ಜನರು ಮೂರು ಭಾಷೆಗಳನ್ನು ಕಲಿಯಬೇಕು ಎಂದು ‘ತ್ರಿಭಾಷಾ ಸೂತ್ರ’ವನ್ನು ಘೋಷಿಸಲಾಗಿದೆ. ಇಂಗ್ಲಿಷನ್ನು ಅಂತರ್ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಹಿಂದಿಯನ್ನು ಭಾರತ ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಕನ್ನಡವನ್ನು (ಇತರ ದೇಶಭಾಷೆಗಳಲ್ಲಿ ಒಂದನ್ನು) ಕರ್ನಾಟಕ ರಾಜ್ಯದ ಮಾಧ್ಯಮಕ್ಕಾಗಿಯೂ ಎಂಬರ್ಥದಲ್ಲಿ. ಮೇಲು ನೋಟಕ್ಕೆ ಇದು ಸಾಧುವಾಗಿ ತೋರುತ್ತಿದೆಯಾದರೂ ಸ್ವಲ್ಪ ವಿಚಾರಿಸಿದರೆ ಗೊತ್ತಾಗುತ್ತದೆ ಮಹಾ ಅಪಾಯಕಾರಿ ಎಂದು.

ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ.

ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಆವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ ಕಲಿಯಬೇಕು.

ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ವೈಭವವನ್ನು ಏನೂ ಅರಿಯದ ನಮ್ಮ ಹಸುಳೆಗಳ ಮುಂದೆ ವರ್ಣಿಸಿ ಅವರ ಮನಸ್ಸನ್ನು ಅವುಗಳ ಕಡೆಗೇ ಎಳೆದು ದೇಶಭಾಷೆಗಳ ಅಧ್ಯಯನವನ್ನು ಹಿಂದಕ್ಕೊತ್ತರಿಸುವ ಪ್ರಯತ್ನವನ್ನೂ ಮಾಡುತ್ತಿರುವವರು ಅನೇಕರಿದ್ದಾರೆ.

ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆಬಹುಭಾಷೆಗಳಲ್ಲಿ ದ್ವಿಭಾಷೆಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ಭರತಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ತಮ್ಮ ಆವಶ್ಯಕತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ; ಆರಿಸಿಕೊಳ್ಳುವ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕವಾಗುತ್ತದೆ.

ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ‘ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.

ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳಬಹುದು ಎನ್ನುವುದರಿಂದ ಹಿಂದಿ ಬೇಡ ಎನ್ನುವವರಿಗೆ, ಇಂಗ್ಲಿಷ್ ಬೇಡ ಎನ್ನುವವರಿಗೆ, ಅವುಗಳನ್ನು ಬಲಾತ್ಕಾರವಾಗಿ ಹೇರಿದಂತಾಗುವುದಿಲ್ಲ; ನಿಷೇಧಿಸಿದಂತೆಯೂ ಆಗುವುದಿಲ್ಲ. ಮಹಾಜನರೇ ಕಾಲಕ್ರಮೇಣ, ತಮ್ಮ ತಮ್ಮ ಅಭಿರುಚಿ ಆವಶ್ಯಕತೆಗಳಿಗೆ ತಕ್ಕಂತೆ ಹಿಂದಿ, ಇಂಗ್ಲಿಷ್, ರಷ್ಯನ್, ಸಂಸ್ಕೃತ ಮೊದಲಾದ ಭಾಷೆಗಳನ್ನು ಯಾವ ಶೇಕಡಾವಾರು ಪ್ರಮಾಣದಲ್ಲಿ ಕಲಿಯಬೇಕೆಂಬುದನ್ನು ತಮಗೆ ತಾವೇ ಗೊತ್ತುಮಾಡಿಕೊಳ್ಳುತ್ತಾರೆ.

ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?

ತ್ರಿಭಾಷಾ ಸೂತ್ರ ಎಂಬುದು, ನಾನು ಹಿಂದೆಯೆ ಅನೇಕ ಕಡೆ ಹೇಳಿರುವಂತೆ, ಭಾರತೀಯರಿಗೊ ತ್ರಿಶೂಲಪ್ರಾಯವಾಗುತ್ತದೆ. ಎಲ್ಲರಿಗೂ ಎಲ್ಲ ಭಾಷೆಗಳೂ ಬೇಕಾಗಿಲ್ಲ ಎಂದರೆ, ಎಲ್ಲರೂ ಇಂಗ್ಲಿಷನ್ನಾಗಲಿ ಹಿಂದಿಯನ್ನಾಗಲಿ ಕಲಿಯಬೇಕಾದದ್ದು ಏಕೆ? ಯಾರಿಗೆ ಅಗತ್ಯವಿದೆಯೋ ಅಂಥವರು ಅವರಿಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಇಂತಹ ಭಾಷೆಗಳನ್ನು ಶೀಘ್ರವಾಗಿ ಸಾಹಿತ್ಯದೃಷ್ಟಿಯಿಂದಲ್ಲದೆ ಭಾಷಾದೃಷ್ಟಿಯಿಂದ ಬೋಧಿಸುವ ಕಾರ್ಯಕ್ಕಾಗಿ ಭಾಷಾ ಸಂಸ್ಥೆಗಳ ಸ್ಥಾಪನೆಯಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಲಿದೆ, ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ?

ಆದ್ದರಿಂದ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬುದೇ ನಮಗಿಂದು ಕ್ಷೇಮಕರ ಸೂತ್ರವಾಗಿದೆ.

ಒಂದುವೇಳೆ ಮೂರು ಭಾಷೆಗಳನ್ನೂ ಕಲಿಯಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರುಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕು. ‘ಬಹುಭಾಷೆಗಳಲ್ಲಿ ತ್ರಿಭಾಷೆ’ ಆಗಬೇಕೇ ಹೊರತೂ ಬರಿಯ ‘ತ್ರಿಭಾಷೆ’ಯಾಗಬಾರದು. ಬರಿಯ ‘ತ್ರಿಭಾಷೆ’ಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ. ಕನ್ನಡ ತೆಲುಗು ತಮಿಳು ಮಲೆಯಾಳ ಭಾಷೆಗಳು ತಮ್ಮ ರಾಜ್ಯಗಳಲ್ಲಿಯೆ ಐಚ್ಛಿಕ ಭಾಷೆಗಳಾಗಿ ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ‘ಓಲೈಸುವ ಅಡಿಯಾಳುಗಳಂತಾಗಿ ತೊತ್ತುಗಳಾಗುತ್ತವೆ.’


[1]       ಒಂದು ವಿಶೇಷ ಸಂಚಿಕೆಗೆ ಬರೆದ ಲೇಖನ.