ಮಹಾಪುರುಷ ಸ್ವಾಮಿ ಶಿವಾನಂದರು ಯುಗಾವತಾರ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸದೇವರ ಅತ್ಯಂತ ಅಂತರಂಗದ ಸನ್ಯಾಸಿ ಶಿಷ್ಯರಲ್ಲಿ ಒಬ್ಬರಾಗಿ ಅವರ ಸುಸಮೀಪ ಸಂಗಿಗಳೂ ಆಗಿದ್ದರು. ಅವರು ತಮ್ಮ ಜೀವನ ಸಮಸ್ತವನ್ನೂ ಶ್ರೀ ಗುರುದೇವನ ಪದತಲಕ್ಕೆ ಸಮರ್ಪಿಸಿ, ಆತನ ದಿವ್ಯಸಂದೇಶ ಪ್ರಸಾರ ಮಾಡುವ ಮಹಾಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿದ್ದವರಲ್ಲಿಯೂ ಒಬ್ಬರಾಗಿದ್ದರು. ಜಾತಿ, ವರ್ಣ, ಮತ, ಜನಾಂಗ ಭೇದವಿಲ್ಲದೆ ಮಾನವಕುಲವನ್ನೆ ಉದ್ಧಾರ ಮಾಡಲೆಂದು ಅತೀತ ಸ್ವರ್ಗದಿಂದ ಅವನತ ಪೃಥ್ವಿಗೆ ಶ್ರೀ ರಾಮಕೃಷ್ಣರು ಎಳೆತಂದ ಅಧ್ಯಾತ್ಮ ಭಾಗೀರಥಿಯು ಅವರ ಶಿಷ್ಯಪಾತ್ರಗಳ ಮುಖಾಂತರ ಯಥೇಚ್ಛವಾಗಿ ಪ್ರವಹಿಸಿದಳು. ಪ್ರತಿಯೊಬ್ಬ ಶಿಷ್ಯನೂ ಆಧ್ಯಾತ್ಮಿಕ ತಪಶ್ಶಕ್ತಿಯ ಬೃಹದಾಗಾರವಾಗಿದ್ದನು; ಒಬ್ಬೊಬ್ಬನೂ ಒಂದೊಂದು ಮಾರ್ಗದರ್ಶಕ ಗೋಪುರಾಗ್ರ ಜ್ಯೋತಿಯೋಪಾದಿಯಲ್ಲಿ ಸಹಸ್ರಾರು ಸಾಧಕರಿಗೆ ದಾರಿದೀಪವಾಗಿದ್ದನು. ಹಿಮಾದ್ರಿ ಸದೃಶ ಆಧ್ಯಾತ್ಮಿಕ ವ್ಯಕ್ತಿತ್ವವನ್ನೂ ಅನ್ಯಾದೃಶ ಚಾರಿತ್ರ್ಯ ಶುದ್ಧಿಯನ್ನೂ ಭಗವನ್ಮಯ ಕೃಪಾನುಗ್ರಹ ಸಾಮರ್ಥ್ಯವನ್ನೂ ಪಡೆದು ಒಬ್ಬೊಬ್ಬರೂ ‘ಮಾನವ ಕುಲರಕ್ಷಕ’ರಾಗಿ ತಮ್ಮ ಅಸ್ತಿತ್ವ ಮಾತ್ರದಿಂದಲೆ ಪೃಥ್ವಿಗೆ ಪರಮ ವರಸ್ವರೂಪರಾಗಿದ್ದರು. ಶ್ರೀ ರಾಮಕೃಷ್ಣರು ತಮ್ಮ ಶಿಷ್ಯರಿಗೆ ತಮ್ಮೆಲ್ಲ ತಪಶ್ಶಕ್ತಿಯನ್ನೂ ಧಾರ್ಮಿಕ ತೇಜಸ್ಸನ್ನೂ ಧಾರೆಯೆರೆದು ಅವರೆಲ್ಲರನ್ನೂ ತಮ್ಮಂತೆಯೆ ಅಧ್ಯಾತ್ಮ ತ್ರಿವಿಕ್ರಮರನ್ನಾಗಿ ಮಾಡಿದರು. ಈ ಶಿಷ್ಯಕೋಟಿಯ ವಿಚಾರವಾಗಿ ಶ್ರೀ ರೊಮಾರೋಲಾ ಅವರು ಯಥಾರ್ಥವಾಗಿಯೆ ಹೀಗೆ ಹೇಳಿದ್ದಾರೆ: “ಒಬ್ಬೊಬ್ಬ ಶಿಷ್ಯನೂ ಶ್ರೀ ರಾಮಕೃಷ್ಣರ ಬಹುಮುಖ ವ್ಯಕ್ತಿತ್ವದ ಒಂದೊಂದು ಮುಖಕ್ಕೆ ಪ್ರತಿನಿಧಿಯಾಗುತ್ತಾನೆ, ಮತ್ತು ಅವರೆಲ್ಲರೂ ಒಟ್ಟಾದಾಗ ಸಾಕ್ಷಾತ್ ಆತನೆ ಪ್ರತ್ಯಕ್ಷನಾಗುತ್ತಾನೆ, ತನ್ನ ಸಮಗ್ರ ಪರಿಪೂರ್ಣತೆಯಲ್ಲಿ.”

ಸ್ವಾಮಿ ಶಿವಾನಂದರು ಶ್ರೀ ರಾಮಕೃಷ್ಣರನ್ನು ಸಂಧಿಸಿದ್ದು ೧೮೮೦ರಲ್ಲಿ; ೧೮೮೬ರಲ್ಲಿ ಶ್ರೀ ಗುರುದೇವನ ಮಹಾಸಮಾಧಿಯ ಪರ್ಯಂತವೂ ಅವರು ಆತನ ಪದತಲದಲ್ಲಿ ಕುಳಿತು ಸೇವೆ ಸಲ್ಲಿಸಿದರು. ಪ್ರಥಮ ಸಂದರ್ಶನದಲ್ಲಿಯೆ ಶ್ರೀ ರಾಮಕೃಷ್ಣರು ಅವರಲ್ಲಿ ತೀವ್ರ ವೈರಾಗ್ಯವನ್ನೂ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಮಹದಭೀಪ್ಸೆಯನ್ನೂ ಹೊತ್ತಿಸಿದರು. ಆ ದಿವ್ಯ ಗುರುವಿನ ನೇತೃತ್ವದಲ್ಲಿ ಶಿವಾನಂದರು ಮಹೋಗ್ರ ತಪಶ್ಚರ್ಯೆಯ ಅಗ್ನಿಕುಂಡದಲ್ಲಿ ನಿಮಗ್ನರಾದರು; ಮತ್ತು ಕ್ರಮೇಣ ಬ್ರಹ್ಮಸಾಕ್ಷಾತ್ಕಾರ ಸಿದ್ಧರಾದರು.

ಶ್ರೀ ರಾಮಕೃಷ್ಣರ ನಿಧನಾಂತರ ಶಿವಾನಂದರು ಪೂರ್ಣ ತ್ಯಾಗದ, ಪವಿತ್ರ ಪರಿಶುದ್ಧಿಯ ಮತ್ತು ಕಠೋರ ತಪಸ್ಯೆಯ ಜೀವನವನ್ನು ಕೈಕೊಂಡು, ತಮ್ಮ ಇನ್ನೊಬ್ಬ ಗುರುಭಾಯಿಯೊಡನೆ ಶ್ರೀ ರಾಮಕೃಷ್ಣ ಮಹಾಸಂಘಕ್ಕೆ ಬೀಜರೂಪವಾಗಿ ಪ್ರಾರಂಭವಾದ ವರಾಹನಗರದ ಮಠವನ್ನು ಸ್ಥಾಪಿಸಿದರು. ವಿವೇಕಾನಂದರು ಬ್ರಹ್ಮಾನಂದರು ಮೊದಲಾದ ಇತರ ಸೋದರ ಸನ್ಯಾಸಿಗಳು ತರುವಾಯ ಅದನ್ನು ಕೂಡಿಕೊಂಡರು.

ಸ್ವಾಮಿ ಶಿವಾನಂದರ ಅದ್ಭುತ ತ್ಯಾಗವನ್ನೂ ಇಂದ್ರಿಯ ನಿಗ್ರಹ ರೂಪದ ಸಂಯಮವನ್ನೂ ಕಂಡು ಬೆರಗಾಗಿ ಶ್ಲಾಘಿಸುತ್ತಾ ಅವರನ್ನು ‘ಮಹಾಪುರುಷ’ ಎಂದು ಕರೆದು ಸ್ವಾಮಿ ವಿವೇಕಾನಂದರು ಅವರಿಗೆ ತಮ್ಮ ಗೌರವ ತೋರಿದರು. ಆ ಕಾರಣದಿಂದಲೆ ಅವರ ಇತರ ಗುರುಭಾಯಿಯರೂ ಶಿವಾನಂದರನ್ನು ಅದೇ ಹೆಸರಿನಿಂದಲೆ ಕರೆಯತೊಡಗಿದರು. ತರುವಾಯ ಶ್ರೀ ರಾಮಕೃಷ್ಣ ಮಹಾಸಂಘದಲ್ಲಿ ಸರ್ವರಿಗೂ ಅವರು ‘ಮಹಾಪುರುಷಜಿ’ ಎಂದೇ ಸುಪೂಜ್ಯರಾಗಿದ್ದರು.

ಪಶ್ಚಿಮ ಬಂಗಾಳಕ್ಕೆ ಸೇರಿದ ಬರಾಸತ್ ಜಿಲ್ಲೆಯ ಒಂದು ಹಿರಿಯ ಸಾತ್ತ್ವಿಕ ಮನೆತನದಲ್ಲಿ ಸ್ವಾಮಿ ಶಿವಾನಂದರು ಹುಟ್ಟಿದರು. ಅವರ ಪೂರ್ವಾಶ್ರಮದ ಹೆಸರು ತಾರಕನಾಥ ಘೋಷಾಲ್. ಅವರ ತಂದೆ ತಾಯಿಯರಿಗೆ-ರಾಮಕನೈ ಘೋಷಾಲ್ ಮತ್ತು ಬನಸುಂದರೀ ದೇವಿ-ಅವರು ಮೊದಲ ಮಗ. ಬಹುಕಾಲ ಮಕ್ಕಳಿಲ್ಲದೆ ಮಹಾದೇವ ತಾರಕನಾಥ ಶಿವನಿಗೆ ಹರಕೆ ಸಲ್ಲಿಸಿದ ಮೇಲೆ ಆತನ ಅನುಗ್ರಹದಿಂದ ಅವರು ಹುಟ್ಟಿದರೆಂದು ತಾಯಿ ತಂದೆಯರ ನಂಬಿಕೆಯಾಗಿತ್ತು. ವಾಸ್ತವವಾಗಿಯೂ ಸ್ವಾಮಿ ಶಿವಾನಂದರಲ್ಲಿ ಶಿವನಿಗೆ ಆರೋಪಿಸಿರುವ ಲಕ್ಷಣಗಳ ಇದ್ದುವು; ಚಿಕ್ಕಂದಿನಿಂದಲೂ ಅವರಿಗೆ ಧ್ಯಾನದಲ್ಲಿ ಪ್ರೀತಿ; ಆಧ್ಯಾತ್ಮಿಕ ಜೀವನದ ಕಡೆಗೆ ಸ್ವಭಾವಜನ್ಯ ಆಸಕ್ತಿ; ಬದುಕಿನ ಗುರಿ ಭೋಗಜೀವನವಲ್ಲ ಎಂಬ ಒಂದು ಹುಟ್ಟುಶ್ರದ್ಧೆ. ತ್ಯಾಗಭಾವವಂತೂ ಅವರಿಗೆ ಉಸಿರಿನೊಡನೆಯೆ ಹುಟ್ಟಿಬಂದಿತ್ತು. ಹುಡುಗನಾಗಿದ್ದಾಗ, ದುಡ್ಡನ್ನು ಕಾಣಿಕೆಯೆಂದು ಮುಷ್ಟಿ ಹಿಡಿದು ಪಕ್ಕದಲ್ಲಿದ್ದ ಒಂದು ಕೊಳಕ್ಕೆ ಎಸೆಯುವುದು ಅವರಿಗೆ ಬಾಲಕ್ರೀಡೆಯಾಗಿತ್ತಂತೆ. ತಾರುಣ್ಯದಲ್ಲಿ ತಮ್ಮ ಧಾರ್ಮಿಕ ತೃಷ್ಣೆಯನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅವರು ಬ್ರಾಹ್ಮಸಮಾಜಕ್ಕೆ ಸೇರಿ ಕೇಶವಚಂದ್ರಸೇನರ ಬರವಣಿಗೆಗಳಿಂದ ಶ್ರೀ ರಾಮಕೃಷ್ಣರ ವಿಚಾರ ತಿಳಿದರು.

ತಮ್ಮ ಜೀವನದ ಧ್ಯೇಯ ತ್ಯಾಗ ಮತ್ತು ಸೇವೆಗಳಾಗಿದ್ದು ಭಗವತ್ ಸಾಕ್ಷಾತ್ಕಾರವೆ ಪರಮೋಚ್ಚಗಮ್ಯವಾಗಿದ್ದುದರಿಂದ ಅವರಿಗೆ ವಿವಾಹಬಂಧನಕ್ಕೆ ಒಳಗಾಗಲು ಇಷ್ಟವಿರದಿದ್ದರೂ ಅನಿವಾರ್ಯ ಕೌಟುಂಬಿಕ ಒತ್ತಡದ ದೆಸೆಯಿಂದ ಶ್ರೀ ರಾಮಕೃಷ್ಣರನ್ನು ಸಂಧಿಸುವುದಕ್ಕೆ ಪೂರ್ವದಲ್ಲಿಯೆ ತಾರಕನಾಥನು ಮದುವೆಯಾಗಿದ್ದನು. ಆದರೆ ಆತನ ಹೆಂಡತಿ ಅತ್ಯಲ್ಪ ಕಾಲದಲ್ಲಿಯೆ ತೀರಿಕೊಂಡಳು. ಆತನ ವೈವಾಹಿತ ಜೀವನಾವಧಿಯಲ್ಲಿ ತಾರಕನಾಥನು ಅಖಂಡ ಬ್ರಹ್ಮಚರ್ಯ ವ್ರತಧಾರಿಯಾಗಿಯೆ ಇದ್ದನು. ಹೆಂಡತಿ ಸತ್ತುದರಿಂದ ತರುಣಸಾಧಕನಿಗೆ ದಾರಿ ಸುಗಮವಾಯಿತು; ಸಂಸಾರ ತ್ಯಾಗಿಯಾಗಿ ಸನ್ಯಾಸ ಸ್ವೀಕಾರಮಾಡಿದನು.

ದಕ್ಷಿಣೇಶ್ವರದಲ್ಲಿ ಸಂಭವಿಸಿದ ಪ್ರಪ್ರಥಮ ದರ್ಶನದಲ್ಲಿಯೆ (೧೮೮೦ರಲ್ಲಿ) ಶ್ರೀ ರಾಮಕೃಷ್ಣರು ತಾರಕನಾಥನ ಮೇಲೆ ಎಂತಹ ಪ್ರಭಾವ ಬೀರಿದರು ಎಂದರೆ, ಅವರನ್ನು ಒಡನೆಯೆ ಗುರುದೇವನೆಂದು ಸ್ವೀಕರಿಸಿ, ಆ ಭವತಾರಿಣಿಯ ಪೂಜಾರಿಯ ಪದತಲದ ಸೇವೆಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡನು. ಶ್ರೀ ರಾಮಕೃಷ್ಣರೂ ಕೂಡ ಮೊದಲ ನೋಟದಲ್ಲಿಯೆ ತಾರಕನಾಥನು ಸಾಧಾರಣ ‘ಆಧಾರ’ವಲ್ಲ ಎಂಬುದನ್ನು ತಮ್ಮ ದಿವ್ಯದೃಷ್ಟಿಯಿಂದ ತಿಳಿಯಬಲ್ಲವರಾದರು; ಅಷ್ಟೇ ಅಲ್ಲದೆ, ತಾರಕನಾಥನು ತಮ್ಮ ಅಂತರಂಗದ ಶಿಷ್ಯಕೋಟಿಗೆ ಸೇರಿದವನೆಂದೂ, ಜಗತ್ತಿಗೆ ಸರ್ವದರ್ಮ ಸಮನ್ವಯವನ್ನು ಬೋಧಿಸಲು ಜನ್ಮವೆತ್ತಿರುವನೆಂದೂ, ಸನ್ಯಾಸಿಯಾಗಿಯೇ ಆ ಕರ್ತವ್ಯವನ್ನು ನೆರವೇರಿಸುತ್ತಾನೆ ಎಂಬುದನ್ನೂ ಅರಿತರು. ಆ ಅರಿವಿಗೆ ಅನುಗುಣವಾಗಿಯೆ ಆತನಿಗೆ ತಕ್ಕ ಜ್ಞಾನಬೋಧೆಯನ್ನು ನೀಡಿ, ಸಾಧನಮಾರ್ಗದಲ್ಲಿ ಮುಂದುವರಿಯುವಂತೆ ದಾರಿ ತೋರಿದರು. ತಮ್ಮ ಚಿತ್ತಪಶ್ಶಕ್ತಿಯಿಂದ ಆತನಲ್ಲಿ ಚೈತನ್ಯೋದ್ಭೋಧನವಾಗುವಂತೆ ಮಾಡಿ, ತಾರಕನಾಥನ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ತಿದ್ದಿ ಕಡೆದರು. ವಾಸ್ತವವಾಗಿ, ಮೊದಲ ಸಂದರ್ಶನ ಸಮಯದಲ್ಲಿಯೆ ಅವರು ತಾರಕನಾಥನ ಮನಸ್ಸನ್ನು ಅಸಾಧಾರಣ ಅತೀತಸ್ತರಕ್ಕೆ ಎತ್ತಿ, ಆತನಿಗೆ ಭಗವಂತನ ಸರ್ವ ವ್ಯಾಪಿತ್ವವೂ ಮತ್ತು ಸಾಕಾರ ನಿರಾಕಾರತ್ವವೂ ಏಕಕಾಲದಲ್ಲಿ ಸ್ಫುರಿಸುವಂತೆ ಮಾಡಿದರು.

ಆರು ವರ್ಷಗಳ ದೀರ್ಘಕಾಲ ತಾರಕನಾಥನು ಶ್ರೀ ಗುರುವಿನ ಪದತಲದಲ್ಲಿ ಕುಳಿತು ಸಾಧನೆಗಳಲ್ಲಿ ಶಿಕ್ಷಣ ಪಡೆದನು. ಶ್ರೀ ರಾಮಕೃಷ್ಣರು ಸನ್ಯಾಸದೀಕ್ಷೆ ಕೊಟ್ಟ ಹನ್ನೊಂದು ಅಂತರಂಗ ಶಿಷ್ಯರಲ್ಲಿ ಆತನೂ ಒಬ್ಬನಾಗಿದ್ದು, ಗುರುದೇವನ ಮಹಾಸಂದೇಶವನ್ನು ಜಗತ್ತಿಗೆ ಸಾರುವ ಸಮರ್ಥ ಪಾತ್ರನಾದನು. ಶ್ರೀ ರಾಮಕೃಷ್ಣರ ಭಗವತ್ ಸ್ಪರ್ಶವು ತರುಣ ತಾರಕನ ಬದುಕನ್ನೆ ಕ್ರಮೇಣ ಪರಿವರ್ತಿಸಿತು; ಆಧ್ಯಾತ್ಮಿಕ ಅನುಭವ ಸಿದ್ಧಿಗಾಗಿ ಆತನನ್ನು ದಿವ್ಯೋನ್ಮತ್ತನನ್ನಾಗಿ ಮಾಡಿತು; ಆತನ ಹೃದಯವನ್ನು ವಿವೇಕ, ತ್ಯಾಗ ಮತ್ತು ವೈರಾಗ್ಯಗಳ ಅಗ್ನಿಕುಂಡವನ್ನಾಗಿ ದೀಪ್ತಗೊಳಿಸಿತು. ಶ್ರೀ ರಾಮಕೃಷ್ಣರು ವಿಶ್ವವ್ಯಾಪಿಯಾಗಿ ಜ್ಯೋತಿಯನ್ನು ಬೀರುವ ಸೂರ್ಯಮಂಡಲದಂತಿದ್ದರೆ, ಅವರ ಶಿಷ್ಯರು ಅದರ ಕಿರಣಕೋಟಿಗೆ ಪ್ರತೀಕವಾಗಿದ್ದರು. ಶ್ರೀ ರಾಮಕೃಷ್ಣರಂತೆಯೆ ತಾರಕನಾಥನೂ ಧರ್ಮಪಿಪಾಸುಗಳಲ್ಲಿ ಚೈತನ್ಯೋದ್ಭೋದನ ಮಾಡುವ ಸಾಮರ್ಥ್ಯ ಪಡೆದಿದ್ದನು; ಆತನು ಚಿಚ್ಛಕ್ತಿಯಿಂದಾಗಲಿ, ಇಚ್ಛಾಶಕ್ತಿಯಿಂದಾಗಲಿ ಅಥವಾ ಪ್ರಾರ್ಥನಾ ಶಕ್ತಿಯಿಂದಾಗಲಿ ಪರರ ಮನಸ್ಸನ್ನು ಉನ್ನತತರ ಪ್ರಜ್ಞಾಸ್ತರಗಳಿಗೆ ಎತ್ತ ಬಲ್ಲವನಾಗಿದ್ದನು.

ಗುರುದೇವನ ನಿಧನಾನಂತರ ತಾರಕನಾಥನು ಭಗವತ್ ಸಾಕ್ಷಾತ್ಕಾರಕ್ಕಾಗಿ ಅತೀವ ವ್ಯಾಕುಲಚಿತ್ತನಾದನು. ಅಂತಹ ಮಹಾ ಅಭೀಪ್ಸೆಯನ್ನು ಹೃದಯದಲ್ಲಿ ಹೊತ್ತು ಆತನು ತಪಸ್ಯೆಯನ್ನು ಆಚರಿಸುತ್ತಾ ಪರಿವ್ರಾಜಕನಾಗಿ ಕೇದಾರನಾಥ, ಬದರೀನಾರಾಯಣ, ಉತ್ತರ ಕಾಶಿ, ಹರಿದ್ವಾರ ಮತ್ತು ಇತರ ಹಿಮಾಲಯ ಪವಿತ್ರ ಕ್ಷೇತ್ರಗಳಲ್ಲಿ ಯಾತ್ರಾತಪಸ್ವಿಯಾಗಿದ್ದನು. ವಾರಣಾಸಿಯಲ್ಲಿ ಅನೇಕ ವರ್ಷಗಳ ಕಾಲ ಉಗ್ರತಪಸ್ಯೆಯನ್ನಾಚರಿಸುತ್ತಾ ಎಲ್ಲಿಯೊ ಆಗೊಮ್ಮೆ ಈಗೊಮ್ಮೆ ಮಾತ್ರ ಕೇಂದ್ರ ಮಠಕ್ಕೆ ಬಂದು ಹೋಗುತ್ತಿದ್ದನು. ಆ ಉಗ್ರ ತಪಸ್ಸು ಆತನಿಗಾಗಿ ಮಾತ್ರವೆ ಅಲ್ಲದೆ ಸಮಗ್ರ ಲೋಕಕಲ್ಯಾಣಕ್ಕೋಸ್ಕರವಾಗಿಯೂ ಕೈಕೊಂಡುದಾಗಿತ್ತು. ೧೯೧೦ರಲ್ಲಿ ಭಕ್ತನೊಬ್ಬನು ಕೇಳಿದ ಪ್ರಶ್ನೆಗೆ ಆಲ್ಮೋರದಿಂದ ಉತ್ತರ ಬರೆಯುತ್ತಾ ಹೀಗೆಂದು ಬರೆದಿದ್ದಾರೆ: “ಹಿಮಾಲಯದಲ್ಲಿ ನಾವು ಮಾಡುವ ತಪಸ್ಯೆ ನಮ್ಮ ಸ್ವಂತ ಮುಕ್ತಿಗಾಗಿ ಅಲ್ಲ. ಭಗವಂತನಿಗೆ ನಾವು ಸಲ್ಲಿಸುವ ಏಕಮಾತ್ರ ಪ್ರಾರ್ಥನೆಯೆಂದರೆ ಲೋಕಕ್ಕೆ ಕಲ್ಯಾಣವಾಗಲಿ ಎಂದು.”

ತಾರಕನಾಥನು ೧೮೮೭ರಲ್ಲಿ ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ವಿರಜಾ ಹೋಮವನ್ನಾಚರಿಸಿದ ಅನಂತರ ವಿಧಿಬದ್ಧವಾಗಿ ಸನ್ಯಾಸ ಸ್ವೀಕಾರ ಮಾಡಿದನು. ಆತನಿಗೆ ಸ್ವಾಮಿ ಶಿವಾನಂದ ಎಂಬ ಹೆಸರಾಯಿತು. ಏಕೆಂದರೆ ಆತನ ತಂದೆತಾಯಿಯರು ಶಿವನಿಗೆ ಹರಕೆ ಹೊತ್ತು ಆತನನ್ನು ಪಡೆದಿದ್ದರು, ಮತ್ತು ಸ್ವಭಾವತಃ ಆತನದು ಶಿವಪ್ರಕೃತಿಯಾಗಿತ್ತು. ನವ ಸನ್ಯಾಸಿ ವರಾಹ ನಗರದ ಮಠದಲ್ಲಿ ಸುಗಭೀರ ಅಂತರ್ಮುಖಿಯಾಗಿ ಅಧ್ಯಾತ್ಮ ಸೀಮೆಯ ಮಹೋನ್ನತ ಅನುಭವಗಳ ಸಾಧನಾನ್ವೇಷಣೆಯಲ್ಲಿ ಮಗ್ನನಾದನು. ಆ ಕಾಲದಲ್ಲಿ ತೃಪ್ತಿಯನ್ನೆ ಕಾಣದ ಆಧ್ಯಾತ್ಮಿಕ ತೃಷ್ಣೆಯೊಂದು ಆತನನ್ನು ದಹಿಸುತ್ತಿರುವಂತೆ ತೋರುತಿತ್ತು.

ಸುಮಾರು ಎರಡೂವರೆ ವರ್ಷಗಳ ಕಾಲ ಸ್ವಾಮಿ ಶಿವಾನಂದರು ವರಾಹ ನಗರದ ಮಠದಲ್ಲಿ ಉಗ್ರ ತಪಶ್ಚರ್ಯೆಯಲ್ಲಿದ್ದುಕೊಂಡು ತಮ್ಮ ಸ್ವಂತ ಆತ್ಮದ ಸಿದ್ಧಿಗಾಗಿ ಧ್ಯಾನಾದಿಗಳಲ್ಲಿ ತೊಡಗಿದ್ದುದಲ್ಲದೆ, ಶ್ರೀ ರಾಮಕೃಷ್ಣ ಮಹಾಸಂಘದ ಸುಸ್ಥಾಪನಾ ಕಾರ್ಯದಲ್ಲಿಯೂ ಬಹಳ ಶ್ರಮಿಷ್ಣುವಾಗಿದ್ದರು. ಸೇವಾ ಕಾರ್ಯದಲ್ಲಿರಲಿ ಪೂಜಾ ಕಾರ್ಯದಲ್ಲಿರಲಿ ಅವರ ಆತ್ಮಿಕಪ್ರಜ್ಞೆ ಸದಾ ಸುಸ್ಥಿರವಾಗಿರುತ್ತಿತ್ತು. ‘ಅಖಂಡ ಸಚ್ಚಿದಾನಂದ!’ ಎಂಬ ಘೋಷಣೆಯನ್ನು ಅವರ ಜಿಹ್ವೆ ಸದಾ ಉಚ್ಚರಿಸುತ್ತಲೆ ಇರುತ್ತಿದ್ದುದನ್ನು ಆಲಿಸಬಹುದಾಗಿತ್ತು.

ಒಂದು ವಿಶ್ವಾವಿಶಾಲದೃಷ್ಟಿ ಮತ್ತು ಒಂದು ಸರ್ವಧರ್ಮಸಮನ್ವಯಭಾವ ಎರಡೂ ವಿಶೇಷ ಲಕ್ಷಣಗಳಾಗಿದ್ದುವು ಶ್ರೀರಾಮಕೃಷ್ಣರ ಶಿಷ್ಯವರ್ಗಕ್ಕೆ. “ಎಲ್ಲ ಮತಗಳೂ ಭಗವತ್ ಸಾಕ್ಷಾತ್ಕಾರಕ್ಕೆ ನಮ್ಮನ್ನು ಕರೆದೊಯ್ಯುವ ವಿವಿಧ ಪಥಗಳು” ಎಂಬ ಬೋಧನೆ ಶ್ರೀರಾಮಕೃಷ್ಣರ ವಿಶಿಷ್ಟವಾದ ಕೊಡುಗೆಯಾಗಿತ್ತು. ಶ್ರೀ ಗುರುವಿನಿಂದ ಯಾವುದನ್ನು ಕಲಿತಿದ್ದರೋ ಅದನ್ನೆ ಬಾಳಿದರು ಮತ್ತು ಹೇಳಿದರು. ಎಲ್ಲ ಮತಗಳಲ್ಲಿಯೂ ಎಲ್ಲ ಪಥಗಳಲ್ಲಿಯೂ ಅವರಿಗೆ ಸರ್ವಸಮಾನವಾದ ಗೌರವವಿತ್ತು-ಜ್ಞಾನಮಾರ್ಗವಾಗಲಿ, ಭಕ್ತಿಮಾರ್ಗವಾಗಲಿ, ಕರ್ಮಮಾರ್ಗವಾಗಲಿ ಅಥವಾ ಯೋಗಮಾರ್ಗವಾಗಲಿ, ಅವರ ಬದುಕೇ ಒಂದು ಅದ್ಭುತ ಸಮನ್ವಯವಾಗಿತ್ತು-ಅವರ ಗುರುವಿನದು ಎಂತೊ ಅಂತೆ, ಒಂದು ಅಸಾಧಾರಣ ಸುಸಂಗತ ಸ್ವರಮೇಳದಂತೆ.

ವಿದೇಶಗಳಲ್ಲಿ ನಾಲ್ಕು ವರ್ಷಗಳ ಕಾಲ ಜಯಪ್ರದವಾಗಿ ವೇದಾಂತ ಪ್ರಸಾರಮಾಡಿ ಸ್ವಾಮಿ ವಿವೇಕಾನಂದರು ೧೮೯೭ರಲ್ಲಿ ಭಾರತಕ್ಕೆ ಹಿಂದಿರುಗಿದರು; ಮತ್ತು ತಮ್ಮ ಸೋದರ ಸನ್ಯಾಸಿಗಳನ್ನೆಲ್ಲ ಒಟ್ಟುಗೂಡಲು ಕರೆದು ಶ್ರೀ ರಾಮಕೃಷ್ಣರು ಕಲಿಸಿದಂತೆ ವೇದಾಂತ ಬೋಧೆಗೆ ತೊಡಗಿದರು. ಸ್ವಾಮಿಜಿಯ ಅಪೇಕ್ಷೆಯಂತೆ ಶಿವಾನಂದರು ಸಿಂಹಳ ದ್ವೀಪಕ್ಕೆ ತೆರಳಿ ಅಲ್ಲಿ ವೇದಾಂತ ಜ್ಞಾನಬೋಧೆ ಮಾಡಿದರು. ಭಗವದ್ಗೀತೆ ಮತ್ತು ರಾಜಯೋಗಗಳ ಮೇಲೆ ಪ್ರವಚನ ಕೊಟ್ಟರು. ಅನೇಕ ಹಿಂದೂಗಳೂ ಯೂರೋಪಿಯನ್ನರೂ ಅವರ ಉಪನ್ಯಾಸಗಳಿಗೆ ಬಂದು ಧನ್ಯರಾಗಿ ಹೋಗುತ್ತಿದ್ದರು. ಶಿವಾನಂದರ ಬೋಧನೆ ತುಂಬ ಸಾರ್ಥಕಗೊಂಡಿತು. ಕೊಲಂಬೋದಲ್ಲಿ ಒಂದು ‘ವಿವೇಕಾನಂದ ಸಂಘ’ ಸ್ಥಾಪನೆ ಮಾಡಿದರು. ಸುಮಾರು ಒಂದು ವರ್ಷಕಾಲ ಅಲ್ಲಿದ್ದು, ವೇದಾಂತ ಬೋಧನ ಕಾರ್ಯವನ್ನು ಜಯಪ್ರದವಾಗಿ ನಿರ್ವಹಿಸಿ, ಭಾರತದ ಪ್ರಧಾನ ಕೇಂದ್ರಕ್ಕೆ ಹಿಂತಿರುಗಿ, ತಮ್ಮ ನಾಯಕ ಸ್ವಾಮಿ ವಿವೇಕಾನಂದರ ಧರ್ಮಪ್ರಚಾರ ಕಾರ್ಯದಲ್ಲಿ ನೆರವಾದರು.

ಸ್ವಾಮಿ ಶಿವಾನಂದರು ಒಬ್ಬ ಆಧ್ಯಾತ್ಮಿಕ ಮಹಾವಿಭೂತಿಯಾಗಿದ್ದರು. ಮಾತ್ರವಲ್ಲ, ಒಬ್ಬ ಶ್ರೇಷ್ಠಾತಿಶ್ರೇಷ್ಠ ಧರ್ಮಗುರುವೂ ಆಗಿದ್ದರು. ಭಗವತ್ ಸಾಧಕರಿಗೆ ಧರ್ಮಜಾಗ್ರತಿ ಉಂಟುಮಾಡುವ ಶಕ್ತಿಯುಳ್ಳ ಅತಿಮಾನವರಾಗಿದ್ದ ಅವರು ಸ್ಪರ್ಶಮಾತ್ರದಿಂದಲೊ ದೃಷ್ಟಿಮಾತ್ರದಿಂದಲೊ ಜೀವರ ಸಂದೇಹಗಳನ್ನು ಪರಿಹರಿಸಿ ಚೇತನಗಳಿಗೆ ಜ್ಯೋತಿಃಪ್ರದಾನ ಮಾಡಬಲ್ಲವರಾಗಿದ್ದರು. ಅವರು ಎಂತಹ ದಿವ್ಯಭಾವೋನ್ಮತ್ತರಾಗಿದ್ದರೆಂದರೆ ಅವರ ದರ್ಶನ ಮಾತ್ರದಿಂದಲೆ ಜೀವರಿಗೆ ಭಗವತ್ ಸಾನ್ನಿಧ್ಯದ ಆನುಭವವಾಗುತ್ತಿತ್ತು. ಆದ್ದರಿಂದಲೆ ಬದುಕಿನ ಬೇರೆ ಬೇರೆ ವಲಯಗಳಿಗೆ ಸೇರಿದ ಸ್ತ್ರೀ ಪುರುಷರಾದಿಯಾಗಿ ಸರ್ವರೂ ಭಾರತದ ನಾನಾ ಕಡೆಗಳಿಂದಲೂ ಸಿಂಹಳ, ಬರ್ಮಾ, ಯೂರೋಪ್, ಅಮೇರಿಕಾ, ಬ್ರೆಜಿಲ್, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್‌ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಅವರಿಂದ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದು ದೀಕ್ಷಿತರಾಗಿ ಸಂಸಾರದ ಶೋಕ ಸಂಕಟಗಳಿಂದ ಪಾರಾಗುವ ದಾರಿಯನ್ನರಿತು ಧನ್ಯರಾಗಿ ಹೋಗುತ್ತಿದ್ದರು. ಅವರು ಯಾರೊಬ್ಬರಿಗೂ ‘ಇಲ್ಲ’ ಎಂದುದಿಲ್ಲ. ಪರಮ ಪಾಪಿಗಳೂ ಪರಿಪೂರ್ಣರೂ ಪರಿಶುದ್ಧರೂ ಆಗುತ್ತಿದ್ದರು. ಅವರ ಕರ್ಮದ ಹೊರೆಯನ್ನೆಲ್ಲ ತಾವೇ ಹೊತ್ತುಕೊಂಡು ಅವರನ್ನು ಉದ್ಧಾರ ಮಾಡುತ್ತಿದ್ದರು.

ಸ್ವಾಮಿ ವಿವೇಕಾನಂದರಿಗೆ ವಾರಣಾಸಿಯಲ್ಲಿ ವೇದಾಂತ ಪ್ರಚಾರ ಮಾಡಲು ಒಂದು ಕೇಂದ್ರವನ್ನು ತೆರೆಯಬೇಕೆಂಬ ಅಪೇಕ್ಷೆಯಿತ್ತು. ಆ ಕೆಲಸವನ್ನು ಸ್ವಾಮಿ ಶಿವಾನಂದರಿಗೆ ವಹಿಸಿದರು. ಪರಿಣಾಮವಾಗಿ ಅವರ ೧೯೦೨ರಲ್ಲಿ ವಾರಣಾಸಿಯಲ್ಲಿ ಒಂದು ಶ್ರೀರಾಮಕೃಷ್ಣ ಅದ್ವೈತಾಶ್ರಮವನ್ನು ಪ್ರಾರಂಭಿಸಿದರು. ಅಲ್ಲೆ ಅವರು ಸುಮಾರು ಆರು ವರ್ಷಗಳ ಕಾಲ, ಪ್ರಧಾನವಾಗಿ ವೇದಾಂತವನ್ನು ಬಾಳಿಯೆ, ವೇದಾಂತ ಬೋಧೆ ಮಾಡಿದರು. ಅವರ ಕಠೋರ ತಪಸ್ಯೆ, ತ್ಯಾಗ ಮತ್ತು ಶಿಸ್ತಿನ ಜೀವನವನ್ನು ಕಂಡು ಪವಿತ್ರ ವಾರಣಾಸಿಯ ಇತರ ಅನ್ಯಮಠಕ್ಕೆ ಸೇರಿದ ಸಾಧುಗಳೂ ಅವರನ್ನು ಮಹಾಗೌರವದಿಂದ ಕಾಣತೊಡಗಿದ್ದರು. ಅವರ ಜೀವನವೆಲ್ಲವೂ ಒಂದು ಸಶರೀರ ಸಜೀವ ವೇದಾಂತವೆ ಆಗಿತ್ತು.

ಸ್ವಾಮಿಜಿ ೧೮೯೮ರಲ್ಲಿ ಶಿವಾನಂದರನ್ನು ಬೇಲೂರು ಮಠದ ಒಬ್ಬ ಟ್ರಸ್ಟಿಯನ್ನಾಗಿಯೂ ಶ್ರೀರಾಮಕೃಷ್ಣ ಮಿಶನ್ನಿನ ಆಡಳಿತ ಮಂಡಲಿಯ ಒಬ್ಬ ಸದಸ್ಯರನ್ನಾಗಿಯೂ ನೇಮಿಸಿದರು. ಅಂದಿನಿಂದ ಅವರು ಆ ಮಹಾ ಸಂಸ್ಥೆಗೆ ಅನೇಕ ರೀತಿಗಳಲ್ಲಿ ಅನೇಕ ಅಧಿಕಾರ ಸ್ಥಾನಗಳಲ್ಲಿದ್ದುಕೊಂಡು ಸೇವೆ ಸಲ್ಲಿಸಿದರು. ಉಪ ಪ್ರಧಾನಾಧ್ಯಕ್ಷರಾಗಿಯೂ, ೧೯೨೨ರಲ್ಲಿ ಅವರು ಶ್ರೀರಾಮಕೃಷ್ಣ ಮಠ ಮತ್ತು ಮಿಶನ್ನಿಗೆ ಅದರ ಎರಡನೆಯ ಪ್ರಧಾನಾಧ್ಯಕ್ಷರಾಗಿ ಆರಿಸಲ್ಪಟ್ಟರು. ಆ ಸ್ಥಾನದಲ್ಲಿ ಅವರು ೧೯೩೪ರಲ್ಲಿ ಸಂಭವಿಸಿದ ತಮ್ಮ ಮಹಾಸಮಾಧಿಯ ಅವಧಿಯವರೆಗೂ ಶ್ರೀರಾಮಕೃಷ್ಣ ಮಹಾಸಂಸ್ಥೆಗೂ ಮತ್ತು ವಿಶಾಲ ಜಗತ್ತಿಗೂ ಅವಿರತವಾಗಿ ಸೇವೆಸಲ್ಲಿಸಿದರು. ಅವರ ರಕ್ಷಣೆಯ ಮತ್ತು ಪೋಷಣೆಯ ನೇತೃತ್ವದಲ್ಲಿ ಮತ್ತು ಸಮರ್ಥ ಮಾರ್ಗದರ್ಶನದಲ್ಲಿ ಅನೇಕಾನೇಕ ನೂತನ ಕೇಂದ್ರಗಳು ದೇಶದಲ್ಲಿಯೂ ಮತ್ತು ವಿದೇಶಗಳಲ್ಲಿಯೂ ಪ್ರಾರಂಭವಾದುವು; ಮತ್ತು ಸಂಸ್ಥೆಯ ಸನ್ಯಾಸಿಗಳ ಸಂಖ್ಯೆ ಸಮಧಿಕ ಪ್ರಮಾಣದಲ್ಲಿ ಹೆಚ್ಚಿತಲ್ಲದೆ ಅದರ ನಾನಾ ರೂಪದ ಕ್ರಿಯಾವ್ಯಾಪ್ತಿಯೂ ಸುವಿಸ್ತಾರವಾಯಿತು.

ಪ್ರಪ್ರಥಮ ಪ್ರಧಾನಾಧ್ಯಕ್ಷರಾಗಿದ್ದು ಸ್ವಾಮಿ ಬ್ರಹ್ಮಾನಂದರ ಆಜ್ಞಾಪೇಕ್ಷೆಗೆ ತಲೆಬಾಗಿ ಸ್ವಾಮಿ ಶಿವಾನಂದರು, ಮನಸ್ಸಿಲ್ಲದ ಮನಸ್ಸಿನಿಂದ, ಹಿಮಾಲಯದ ತಮ್ಮ ತಪೋಜೀವನದ ಐಕಾಂತಿಕತೆಯನ್ನು ತ್ಯಜಿಸಿ ೧೯೧೬ರಲ್ಲಿ ಬೇಲೂರು ಮಠದ ಮಹಂತರಾಗಿ ಸೇವೆ ಸಲ್ಲಿಸಲು ಬಂದರು. ಅವೊತ್ತಿನಿಂದ ಅವರೆಲ್ಲಿಗೂ ಹೊರಗೆ ಹೋಗಲಿಲ್ಲ, ತಪಸ್ಯೆಗಾಗಿ. ಅವರು ಜೀವನ್ಮುಕ್ತರಾಗಿದ್ದರು. ಅವರ ಸ್ವಾನುಭವಪೂರ್ವಕವಾದ ಜ್ಞಾನಮಯ ಉಪದೇಶ ವಾಕ್ಯಗಳು ಅನೇಕ ಭಕ್ತರ ಹೃದಯಕ್ಕೆ ಸಾಂತ್ವನವನ್ನೂ ಬದುಕಿಗೆ ಆಶಾಧೈರ್ಯವನ್ನೂ ತಂದುಕೊಟ್ಟುವು. ಅವರು ಹೇಳುತ್ತಿದ್ದರು-“ಮಾನವನ ಹೃದಯ ಭಗವಂತನ ಮನೆ, ಪರಿಶುದ್ಧ ಹೃದಯದಲ್ಲಿ ಅವನು ವಾಸಿಸುತ್ತಾನೆ; ಅದೇ ನಿಜವಾದ ವೈಕುಂಠ, ಗೋಲೋಕ, ಶಿವಲೋಕ.” ಸ್ವಾಮಿ ಶಿವಾನಂದರಿಗೆ ಪ್ರತಿಯೊಬ್ಬ ಮಾನವನೂ ಭಗವಂತನ ಬೀಡಾಗಿದ್ದನು.

ಸ್ವಾಮಿಜಿ ಹೆಚ್ಚು ಮಾತಿನ ವ್ಯಕ್ತಿಯಾಗಿರಲಿಲ್ಲ; ಅವರೊಬ್ಬ ಅಸಾಧಾರಣವಾದ ನೀರವವ್ಯಕ್ತಿಯಾಗಿದ್ದರೆಂದೇ ಹೇಳಬಹುದಾಗಿತ್ತು: ತಮ್ಮ ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಸ್ವರೂಪದ ‘ಅನುಭಾವ’ಗಳನ್ನು ಕುರಿತು ಹೆಚ್ಚಿಗೆ ಯಾರೊಡನೆಯೂ ಪ್ರಸ್ತಾಪಿಸುತ್ತಿರಲಿಲ್ಲ. ಆದರೂ ಅವರು ಒಬ್ಬ ಬ್ರಹ್ಮಜ್ಞ ಪುರುಷರು ಎಂಬ ಖ್ಯಾತಿ ಹೇಗೆಯೋ ಹಬ್ಬಿಬಿಟ್ಟಿತ್ತು. ದೂರದಿಂದಲೂ ಎಷ್ಟೋ ಜನ ಸತ್ಯಾನ್ವೇಷಕರು ಹುಡುಕಿಕೊಂಡು ಬಂದು ಅವರನ್ನು ಮುತ್ತಿದರು: ಮಹಾರಾಜರುಗಳು ಬಂದರು, ರಾಜಕಾರಣಿಗಳು, ಕವಿಗಳು, ಡಾಕ್ಟರುಗಳು, ತತ್ತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯರು, ಭಿಕ್ಷುಕರು ಮತ್ತು ಪತಿತರಾದಿಯಾಗಿ, ಎಲ್ಲರೂ ಬಂದರು. ಸರ್ವರನ್ನೂ ಸಮದೃಷ್ಟಿಯಿಂದ ಬರಮಾಡಿಕೊಂಡು ಬೋಧನಾಮೃತವನ್ನು ನೀಡಿ ತೃಪ್ತಿಪಡಿಸಿದರು. ಎಲ್ಲರಿಗೂ ಶಾಂತಿ ಲಭಿಸಿತ್ತು ಅವರ ಸನ್ನಿಧಿಯಲ್ಲಿ.

ಮಹಾಧ್ಯಕ್ಷರಾದ ತರುವಾಯ, ಅವರು ತಮ್ಮೆಡೆಗೆ ಬಂದ ಧರ್ಮ ಪಿಪಾಸುಗಳಿಗೆ ಮುಕ್ತಹಸ್ತರಾಗಿ ದೀಕ್ಷಾಪ್ರದಾನ ಮಾಡತೊಡಗಿದರು. ಸಹಸ್ರಾರು ದೀಕ್ಷಾರ್ಥಿಗಳು ಅವರ ಆಶೀರ್ವಾದ ಪಡೆದು ಧನ್ಯರಾದೆವು ಎಂದುಕೊಂಡರು. ಆದರೆ ಸ್ವಾಮಿ ಶಿವಾನಂದರಲ್ಲಿ ‘ಗುರುಬುದ್ಧಿ’ ಲವಲೇಶವೂ ಇರಲಿಲ್ಲ. ಅವರು ಹೇಳುತ್ತಿದ್ದರು: “….ನಾನು ಯಾರಿಗಾದರೂ ದೀಕ್ಷೆ ಕೊಡುತ್ತೇನೆ ಎಂಬ ಬುದ್ಧಿ ನನ್ನ ಮನಸ್ಸಿನಲ್ಲಿ ಇರುವುದೇ ಇಲ್ಲ. ಶ್ರೀ ಠಾಕೂರರ ಕೃಪೆಯಿಂದ ನನ್ನಲ್ಲಿ ಗುರುಬುದ್ಧಿ ಯಾವತ್ತೂ ತಲೆಹಾಕಿಲ್ಲ. ಜಗದ್ಗುರುವಾಗಿದ್ದಾನೆ ಆ ಶಂಕರ ಮಹಾದೇವ;- ಈ ಯುಗದಲ್ಲಿ ಶ್ರೀ ರಾಮಕೃಷ್ಣದೇವ. ಆತನೆ ಭಕ್ತರ ಹೃದಯದಲ್ಲಿ ಪ್ರೇರಣೆಯಾಗಿ ಇಲ್ಲಿಗೆ ಅವರನ್ನು ಕಳಿಸುತ್ತಾನೆ. ಇತ್ತ ಆತನೆ ನನ್ನಲ್ಲಿ ಕುಳಿತು ಏನು ಹೇಳಿಸುತ್ತಾನೊ ಅದನ್ನು ಮಾಡುತ್ತೇನೆ. ಶ್ರೀ ಠಾಕೂರರೆ ನನ್ನ ಆತ್ಮದ ಆತ್ಮವಾಗಿದ್ದಾರೆ….ಭಕ್ತರು ಭಗವಂತನನ್ನು ಪತ್ರ ಪುಷ್ಪ ಫಲಾದಿಗಳಿಂದ ಪೂಜಿಸುವಂತೆಯೆ ನಾನೂ ನನ್ನಲ್ಲಿಗೆ ಬಂದ ಚೇತನಗಳನ್ನು ಶ್ರೀ ಶ್ರೀಠಾಕೂರರ ಪಾದಾರವಿಂದಗಳಿಗೆ ಸಮರ್ಪಿಸುತ್ತೇನೆ; ನನ್ನ ಅರ್ಪಣೆಯನ್ನು ಅವರು ಸ್ವೀಕರಿಸುವುದನ್ನೂ ನಾನು ಕಾಣುತ್ತೇನೆ. ಅಲ್ಲಿಗೆ ನನ್ನ ಭಾರ ಮುಗಿಯಿತು. ಮತ್ತೆ ಶ್ರೀ ಠಾಕೂರರೇ ಅವರನ್ನು ನೋಡಿಕೊಳ್ಳುತ್ತಾರೆ.” ಅವರಿಂದ ದೀಕ್ಷೆ ತೆಗೆದುಕೊಂಡ ಶಿಷ್ಯರ ಹೆಸರುಗಳನ್ನೂ ಅವರು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ: ಅಲ್ಲದೆ ಅವರಿಂದ ಯಾವ ತೆರನಾದ ಗುರುದಕ್ಷಿಣೆಯನ್ನೂ, ಅದು ಎಷ್ಟೇ ದೊಡ್ಡದಾಗಲಿ, ಚಿಕ್ಕದಾಗಲಿ ಅವರು ಸ್ವೀಕರಿಸುತ್ತಿರಲಿಲ್ಲ. “ನಾನಲ್ಲ ನಿಮ್ಮ ಗುರು. ಶ್ರೀ ಠಾಕೂರರೇ ನಿಮ್ಮ ಗುರುವಾಗಿದ್ದಾರೆ” ಎಂದು ತಮಗೆ ದಕ್ಷಿಣೆ ಕೊಡಲು ಬಂದ ಶಿಷ್ಯರಿಗೆ ಬುದ್ಧಿ ಹೇಳುತ್ತಿದ್ದರು.

ಸ್ವಾಮಿ ಶಿವಾನಂದರ ಜೀವನದ ಕೊನೆಯ ಹನ್ನೆರಡು ವರ್ಷಗಳು ಆಧ್ಯಾತ್ಮಿಕ ಉದ್ಭೋಧನೆಗೆ ಮೀಸಲಾಗಿದ್ದುವು. ಶ್ರೀ ರಾಮಕೃಷ್ಣರಿಂದ ಅವರು ಏನೆಲ್ಲವನ್ನು ಪಡೆದಿದ್ದರೋ ಅದನ್ನೆಲ್ಲ ಅವರು ಮುಕ್ತಹಸ್ತರಾಗಿ ವಿನಿಯೋಗಿಸಿದರು. ಅವರು ಗಂಗಾಮಾತೆಯಂತೆ ತಮ್ಮೆಡೆಗೆ ಬಂದವರನ್ನೆಲ್ಲ ಪವಿತ್ರಗೊಳಿಸುತ್ತಿದ್ದರು. ಸ್ಪರ್ಶಮಣಿಯಂತೆ ಅವರು ಮುಟ್ಟಿದ್ದನ್ನೆಲ್ಲ ಚಿನ್ನವಾಗಿಸಿದರು; ತಮ್ಮ ದಿವ್ಯ ಹಸ್ತದಿಂದ ಪರಿಶುದ್ಧವನ್ನಾಗಿ ಮಾಡಿದರು.

ಒಂದು ರೀತಿಯಲ್ಲಿ ಅವರು “ವಿದೇಹ” ಸ್ಥಿತಿಯಲ್ಲಿದ್ದರು. ಆರೋಗ್ಯ ಕೆಡುತ್ತಿದ್ದರೂ, ದೇಹ ಯಾತನಾಕ್ಲಿಷ್ಟವಾಗಿದ್ದರೂ, ಅವರು ಸ್ವಲ್ಪವೂ ಆಯಾಸ ಪ್ರದರ್ಶನ ಮಾಡದೆ ತಮ್ಮ ಬಳಿಗೆ ಬರುತ್ತಿದ್ದ ಭಕ್ತರನ್ನೆಲ್ಲ ಅಕ್ಕರೆಯ ಸವಿನುಡಿಗಳಿಂದ ಸ್ವಾಗತಿಸಿ, ಸರ್ವರನ್ನೂ ಸಮಾನ ದೃಷ್ಟಿಯಿಂದ ಸಂಭಾವಿಸಿ, ದೀಕ್ಷೆ ನೀಡುತ್ತಿದ್ದರು. ಮತ್ತು ಧರ್ಮ ಜಾಗ್ರತಿ ಉಂಟುಮಾಡುತ್ತಿದ್ದರು. ಯಾರೊಬ್ಬರೂ ಖಿನ್ನರಾಗಿಯಾಗಲಿ ಖಾಲಿಯಾಗಿಯಾಗಲಿ ಹಿಂತಿರುಗುತ್ತಿರಲಿಲ್ಲ. ಅವರಲ್ಲಿ ಅಹಂಕಾರ ಎಂಬುದು ಹುಡುಕಿದರೂ ಸಿಗುತ್ತಿರಲಿಲ್ಲ. ಅವರ ಅಹಂ ಪರಮಾತ್ಮ ವಿಲೀನವಾಗಿತ್ತು. ಶ್ರೀ ಗುರುದೇವರೇ ಸಾಕ್ಷಾತ್ತಾಗಿ ತಮ್ಮ ಹೃದಯದಲ್ಲಿದ್ದುಕೊಂಡು ಭಕ್ತರನ್ನು ಆಶೀರ್ವದಿಸುತ್ತಾರೆಂದೂ ಶ್ರೀರಾಮಕೃಷ್ಣರೇ ತಮ್ಮ ಸರ್ವಸ್ವವೆಂದೂ ಅವರು ಹೇಳುತ್ತಿದ್ದರು.

ಅವರ ಇಹಲೋಕ ಯಾತ್ರೆಯ ಕೊನೆಯ ಭಾಗದಲ್ಲಂತೂ ತಮ್ಮ ಸಾಧಕ ಶಿಶುಗಳ ಮೇಲೂ ಅವರ ಅಕ್ಕರೆಯ ಅಭಿವ್ಯಕ್ತಿ ನಿರ್ದಿಗಂತವಾಗಿತ್ತು. ಅವರನ್ನು ಸಮಾಧಾನ ಪಡಿಸುತ್ತಾ ಹೀಗೆಂದು ಹೇಳುತ್ತಿದ್ದರು: “ಖಿನ್ನ ಮನಸ್ಕರಾಗಬೇಡಿ: ಭಯಪಟ್ಟುಕೊಳ್ಳಬೇಡಿ. ನಿಮ್ಮಲ್ಲಿ ಯಾರೊಬ್ಬರೂ ಹೆದರಿಕೊಳ್ಳಬೇಕಾಗಿಲ್ಲ. ನಿಮಗಾಗಿ ನಾನೆಲ್ಲವನ್ನೂ ಏರ್ಪಡಿಸಿಟ್ಟಿದ್ದೇನೆ. ಎಂದಿಗೂ ನಿಮಗೆ ಏನೊಂದೂ ಕೊರತೆ ಉಂಟಾಗುವುದಿಲ್ಲ. ನಿಮಗೆಲ್ಲ ಉದ್ಧಾರ ಕಟ್ಟಿಟ್ಟ ಬುತ್ತಿ.”

ಬದುಕಿನ ಕೊನೆಯ ನಾಲ್ಕು ವರ್ಷಗಳಲ್ಲಂತೂ ಸ್ವಾಮಿಗಳು ವಾಸ್ತವವಾಗಿ ಬೇರೊಂದು ಲೋಕದಲ್ಲಿಯೆ ಇರುತ್ತಿದ್ದು, ನಾನಾ ತೆರನಾದ ಅತೀಂದ್ರಿಯವಾದ ಅನುಭಾವಿಕ ದರ್ಶನಗಳನ್ನು ಕಾಣುತ್ತಲೆ ಇರುತ್ತಿದ್ದರು.

ಒಮ್ಮೊಮ್ಮೆ “ಅವನ ಕರೆಗೆ ನಾನು ಸಿದ್ಧನಾಗಿದ್ದೇನೆ” ಎನ್ನುತ್ತಿದ್ದರು. ಕೊನೆಗೂ ಆ ಕರೆ ಬಂದೇಬಿಟ್ಟಿತು; ಅವರು ಹೇಳುತ್ತಿದ್ದಂತೆ ಅಮ್ಮನ ಮಡಿಲಿಗೆ ನೆಗೆದೇಬಿಟ್ಟರು!” ೧೯೩೪ನೆಯ ಫೆಬ್ರವರಿ ೨೦ನೆಯ ದಿನದಂದು ‘ಶಾಶ್ವತ ಜೀವನಕ್ಕೆ’ ಸಂದರು. ಅವರ ಪರಮಪೂಜ್ಯ ಗುರುವೂ ದೇವರೂ ಆದ ಶ್ರೀರಾಮಕೃಷ್ಣರಲ್ಲಿ ಐಕ್ಯವಾದರು. ಪವಿತ್ರ ಗಂಗೆ ತನ್ನ ಪ್ರತ್ಯೇಕತೆಯನ್ನು ವಿಸರ್ಜಿಸಿ ವಿಲೀನಗೊಂಡಿತು ಸೀಮಾವಿಹೀನ ಸನಾತನ ಸಚ್ಚಿದಾನಂದ ಬ್ರಹ್ಮ ಸಾಗರದಲ್ಲಿ.

ಹರಿಃ ಓಂ ತತ್ ಸತ್