‘ಭೂದಾನ’ ಪತ್ರಿಕೆ ಕರ್ಣಾಟಕದ ರಾಜಧಾನಿಯಾಗಿರುವ ಬೆಂಗಳೂರಿನಿಂದ ಹೊರಡುವುದಾಗಿ ಕೇಳಿ ಸಂತೋಷವಾಗಿದೆ. ಹಿಂದೆ ಕನ್ನಡ ಮತ್ತು ನಾಗರಿ ಲಿಪಿಗಳಲ್ಲಿ ಮಿಶ್ರಿತವಾಗಿ ಹೊರಡುತ್ತಿದ್ದುದು ಈಗ ಕನ್ನಡ ಮತ್ತು ನಾಗರಿ ಲಿಪಿಗಳಲ್ಲಿ ಪ್ರತ್ಯೇಕವಾಗಿರುತ್ತವೆ ಎಂಬುದನ್ನು ಕೇಳಿ ಅಷ್ಟೇನೂ ಮನಸ್ಸಿಗೆ ಹಿತವಾಗಲಿಲ್ಲ ಎಂದರೆ ತಾವು ತಪ್ಪು ತಿಳಿದುಕೊಳ್ಳಬಾರದಾಗಿ ಬೇಡಿಕೊಳ್ಳುತ್ತೇನೆ. ಕಾರಣವಿಷ್ಟೆ: ಎರಡು ಲಿಪಿಗಳಲ್ಲಿಯೂ ಒಟ್ಟಾಗಿದ್ದಾಗ ಕನ್ನಡ ಮಾತ್ರ ಬಲ್ಲವರು ಕನ್ನಡದ ಜೊತೆಗೆ ಅನಿವಾರ್ಯವಾಗಿ ನಾಗರಿ ಲಿಪಿಯ ಕಡೆಗೆ ಕಣ್ಣನ್ನಾದರೂ ಹಾಯಿಸುವ ಅವಕಾಶವಿರುತ್ತಿತ್ತು. ಹಾಗೆಯೆ ನಾಗರಿ ಲಿಪಿ ಮಾತ್ರ ಬಲ್ಲವರು ಅನಿವಾರ್ಯವಾಗಿ ಕನ್ನಡ ಲಿಪಿಯನ್ನು ನೋಡುವ ಮತ್ತು ಓದಲು ಮನಸ್ಸು ಮಾಡುವ ಅವಕಾಶವಿರುತ್ತಿತ್ತು. ಎರಡು ಲಿಪಿಯ ಪತ್ರಿಕೆಗಳೂ ಬೇರೆಬೇರೆ ಎರಡು ಪತ್ರಿಕೆಗಳಾಗಿಬಿಟ್ಟರೆ ಆ ಹಿಂದಿದ್ದ ಅನುಕೂಲ ದೊರೆಯದಿರುವುದರಿಂದ ಅವಕಾಶದಿಂದಲೂ ವಂಚಿತರಾಗುತ್ತಾರೆ.

ಶ್ರೀ ವಿನೋಬಾಜಿಯವರೇನೂ, ವಿಶ್ವಮಾನವರಾಗಿ, ಸಮಗ್ರ ಭರತಖಂಡಕ್ಕಾದರೂ ಏಕಲಿಪಿಯನ್ನು ಸಾಧಿಸುವುದರಿಂದ ಭಾವೈಕ್ಯವನ್ನು ಸಾಧಿಸಲು ಸುಲಭವಾಗುತ್ತದೆ ಎಂದು ಹಾರೈಸುತ್ತಾರೆ. ಆದರೆ ಏಕಲಿಪಿ, ಏಕಭಾಷೆ ಮತ್ತು ಏಕಮತ ಇವು ಯಾವುವೂ ಭಾವೈಕ್ಯವನ್ನು ಸಾಧಿಸಲಾರದೆ ಸೋತಿರುವುದಕ್ಕೆ ಇತಿಹಾಸದ ಉದ್ದಕ್ಕೂ ಸಾಕ್ಷ್ಯಗಳು ಚೆಲ್ಲಿಬಿದ್ದಿವೆಯಲ್ಲಾ!? ಯುರೋಪಿನ ಏಕಮತ-ಕ್ರೈಸ್ತಮತ-ಅದರ ಐಕ್ಯಮತ್ಯ ಸಾಧಿಸಲಾರದೆ ಯುದ್ಧಗಳ ಪರಂಪರೆಯನ್ನೆ ಹೊತ್ತಿಸಿತು. ಹಾಗೆಯೆ ಪಾಕಿಸ್ತಾನದ ಏಕಮತವೂ! ಬಂಗಾಳದ ಏಕಭಾಷೆ ಭಾರತದ ವಿಭಜನೆಯ ಕಾಲದಲ್ಲಿ ಅದು ಒಡೆಯುವುದನ್ನು ತಡೆಯಲಿಲ್ಲ. ಮತ ಮತ್ತು ಭಾಷೆಗಳಿಗಿಂತಲೂ ಅನೈಕ್ಯಕ್ಕೆ ಬಲಿಷ್ಠವಾದ ಸಾಕ್ಷಿಯಾಗಿದೆ-ಏಕಲಿಪಿ! ರೋಮನ್ ಲಿಪಿ, ಅರಬ್ಬೀ ಲಿಪಿ, ಮತ್ತು ಸಂಸ್ಕೃತದ ದೇವನಾಗರಿ ಲಿಪಿಗಳೆಲ್ಲ ಒಂದೇ ಕಡೆ ಹೇಳುತ್ತಿವೆ. ಈಗ ನಡೆಯುತ್ತಿರುವ ಆಂಧ್ರ-ತೆಲಂಗಾಣದ ಘರ್ಷಣೆ ಮತ್ತೊಂದು ಸದ್ಯೋಜಾತ ನಿಷ್ಠುರ ನಿದರ್ಶನವಾಗುತ್ತದೆ. ನನಗನ್ನಿಸುತ್ತದೆ: ಭಾಷೆಯೂ ಅಲ್ಲ; ಲಿಪಿಯೂ ಅಲ್ಲ, ಮತವೂ ಅಲ್ಲ; ಸರ್ವೋದಯಕ್ಕೆ ಭದ್ರವಾದ ಆಧಾರ ಮತ್ತು ಬಲಿಷ್ಠ ಆಸ್ತಿಭಾರವಿರುವುದು ‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಎಂಬ ಆರ್ಥಿಕ ಸಮತೆಯಲ್ಲಿ ಎಂದು. ಆದರೂ ಆರ್ಥಿಕ ಸಮತೆಯ ಅನಂತರ ಮತ, ಲಿಪಿ ಮತ್ತು ಭಾಷೆಗಳು ಭಾವೈಕ್ಯಕ್ಕೆ ಸಹಾಯಕ ಕಾರಣಗಳಾಗುತ್ತವೆ. ಆ ದೃಷ್ಟಿಯಿಂದ ನಾಗರಿ ಲಿಪಿಯ ಪ್ರಯೋಗ ಸಾಧುವಾಗುತ್ತದೆ. ಆ ಸಾಧ್ಯತೆ, ಸದ್ಯದ ಭಾರತದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಬಹುದೂರದ ದಿಗಂತ ಧ್ಯೇಯವೋ ಏನೋ ಎನಿಸುತ್ತದೆ.

ಆದರೂ ಒಡನೆಯೆ ವಾಸ್ತವವಾಗಲಿ ಬಿಡಲಿ, ಒಂದು ಒಳ್ಳೆಯ ಧ್ಯೇಯದ ಕಡೆಗೆ ಮಾರ್ಗಕ್ರಮಣ ಮಾಡುವುದು ಪ್ರಗತಿಶೀಲ ಮನುಷ್ಯತ್ವದ ಸಲ್ಲಕ್ಷಣ. ತಮ್ಮ ಪ್ರಯೋಗ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. ಸರ್ವೋದಯಕ್ಕೆ ಜಯವಾಗಲಿ!


[1]       ಭೂದಾನ-ಸರ್ವೋದಯ ಪತ್ರಿಕೆಗೆ ಕೊಟ್ಟ ಸಂದೇಶ.