ಶ್ರೀ ರಾಮಕೃಷ್ಣರ ಬೋಧನೆ, ಸಾಧನೆಯಲ್ಲಿ ಅಭಿವ್ಯಕ್ತಗೊಂಡು, ಅನ್ಯಾದೃಶವಾಗಿದೆ. ಆ ಸಂದೇಶ ಹಿಂದೂಧರ್ಮಕ್ಕೆ ಅತ್ಯಂತ ಸನಾತನವಾಗಿದ್ದ ಸಂದೇಶವೆ. ಸ್ವಾಮಿ ಘನಾನಂದರು ತೋರಿಸಿಕೊಟ್ಟಂತೆ, ಹಿಂದೂಧರ್ಮವು ಐತಿಹಾಸಿಕ ಸುಪ್ರಸಿದ್ಧ ಧರ್ಮಗಳಲ್ಲಿ ವಿಶಿಷ್ಟವಾದದ್ದು: ಏಕೆಂದರೆ ಅದು ಸಾರುತ್ತದೆ, ಹಿಂದೂ ಧರ್ಮವಾಗಲಿ ಅಥವಾ ಇತರ ಯಾವುದೆ ಧರ್ಮವಾಗಲಿ, ಸತ್ಯ ಸಾಕ್ಷಾತ್ಕಾರಕ್ಕಾಗಲಿ ಮೋಕ್ಷಸಾಧನೆಗಾಗಲಿ, ಏಕೈಕ ಮಾರ್ಗವಲ್ಲ ಎಂದು. ಹಿಂದೂಧರ್ಮದ ದೃಷ್ಟಿಯಲ್ಲಿ ಪ್ರಸಿದ್ಧ ಮಾರ್ಗಗಳೆಲ್ಲವೂ ಸತ್ಯದೃಷ್ಟಿಗಳೆ ಮತ್ತು ಸತ್ಯಮಾರ್ಗಗಳೆ ಮತ್ತು ಅವೆಲ್ಲವೂ ಸರ್ವಸಮವಾಗಿ ಮಾನವವರ್ಗಕ್ಕೆ ಅವಶ್ಯವಾಗಿ ಬೇಕಾದವುಗಳೆ: ಏಕೆಂದರೆ ಒಂದೊಂದೂ ಏಕೈಕ ಸತ್ಯದ ಒಂದೊಂದು ಮುಖವನ್ನು ಪ್ರದರ್ಶಿಸುತ್ತದೆ, ಮತ್ತು ಪ್ರತಿಯೊಂದೂ ಮನುಷ್ಯರ ಸರ್ವಸಾಧನೆಗಳ ಏಕಮಾತ್ರ ಗುರಿಯತ್ತ ಆತನನ್ನು ಬೇರೆ ಬೇರೆ ದಾರಿಗಳಲ್ಲಿ ಕರೆದೊಯ್ಯುತ್ತದೆ. ಆದ್ದರಿಂದ ಪ್ರತಿಯೊಂದು ಮತಕ್ಕೂ ಇತರ ಮತಗಳಲ್ಲಿ ದೊರೆಯಲಾರದ ತನ್ನದೇ ಆದ ಒಂದು ಮೌಲ್ಯ ವಿಶೇಷವಿರುತ್ತದೆ.

ಹೀಗೆಂದು ಅರಿಯುವುದೇನೊ ಒಳ್ಳೆಯದೆ, ಆದರೆ ಅದಷ್ಟೆ ಸಾಲುವುದಿಲ್ಲ. ಧರ್ಮ ಬರಿಯ ಅಧ್ಯಯನ ಮಾತ್ರದ ವಸ್ತುವಲ್ಲ, ಅದು ಅನುಭವದ ವಸ್ತು, ಅದು ಬದುಕಿ ಬಾಳತಕ್ಕದ್ದು. ಶ್ರೀ ರಾಮಕೃಷ್ಣರ ನಿರುಪಮತೆ ಮೈದೋರುವುದು ಈ ಕ್ಷೇತ್ರದಲ್ಲಿಯೆ. ಅವರು ಒಂದಾದ ಮೇಲೆ ಒಂದರಂತೆ ಭಾರತೀಯವಾದ ಮತ ಮತ್ತು ತತ್ತ್ವಗಳೆಲ್ಲವುಗಳನ್ನೂ ಸಾಧಿಸಿದರಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮಸಾಧನೆಗಳನ್ನೂ ಕೈಕೊಂಡರು. ಅವರ ಸಾಧನೆ ಮತ್ತು ಸಿದ್ಧಿಗಳ ವ್ಯಾಪ್ತಿ, ವಾಸ್ತವವಾಗಿ ಎಷ್ಟರಮಟ್ಟಿಗೆ ಸರ್ವಗ್ರಾಸಿಯಾಗಿತ್ತು ಎಂದರೆ, ಬಹುಶಃ ಜಗತ್ತಿನಲ್ಲಿ ಭಾರತದಲ್ಲಾಗಲಿ ಮತ್ತೆಲ್ಲಿಯಾಗಲಿ ಹಿಂದೆಂದೂ ಇನ್ನಾವ ಧಾರ್ಮಿಕ ವಿಭೂತಿಯ ಸಿದ್ಧಿಯೂ ಅದಕ್ಕೆ ಹೆಗಲೆಣೆಯಾಗಲಾರದು.-ಜಗನ್ಮಾತೆಯ ಮೇಲಣ ಅವರ ಸಾಕಾರಸ್ವರೂಪದ ಭಕ್ತಿ ಅವರ ನಿರ್ವಿಕಲ್ಪ ಸಮಾಧಿಗೆ-ಕೇವಲ ನಿರಾಕಾರ ಪರಬ್ರಹ್ಮದ ಕೇವಲ ಅದ್ವೈತ ಸಿದ್ಧಿಗೆ – ತಡೆಯೊಡ್ಡಲಿಲ್ಲ.

ಯಾವ ಕಾಲದಲ್ಲಿ ಮತ್ತು ಯಾವ ದೇಶದಲ್ಲಿ ಅವರ ಸಂದೇಶದ ಆವಶ್ಯಕತೆಯಿತ್ತೊ ಅಲ್ಲಿಯೆ ಶ್ರೀ ರಾಮಕೃಷ್ಣರು ಜನ್ಮವೆತ್ತಿ ತಮ್ಮ ಸಂದೇಶವನ್ನು ಸಾರಿದ್ದಾರೆ. ಹಿಂದೂಧರ್ಮದ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದವನಿಂದಲ್ಲದೆ ಮತ್ತೆ ಬೇರೆ ಯಾರಿಂದಲೂ ಅಂತಹ ಸಂದೇಶ ಹೊಮ್ಮಲು ಸಾಧ್ಯವಿಲ್ಲ. ಶ್ರೀರಾಮಕೃಷ್ಣರು ೧೮೩೬ರಲ್ಲಿ ಬಂಗಾಳದಲ್ಲಿ ಜನ್ಮವೆತ್ತಿದರು. ಅವರು ಅವತರಿಸಿದ ಅಂದಿನ ಪ್ರಪಂಚ, ಅವರ ಜೀವಮಾನದಲ್ಲಿ, ಮೊತ್ತಮೊದಲಾಗಿ, ಅಕ್ಷರಶಃ ಜಗದ್ ವ್ಯಾಪಕ ಪ್ರಮಾಣದಲ್ಲಿ ಒಂದುಗೂಡುತ್ತಿತ್ತು. ನಾವಿನ್ನೂ ಜಗಚ್ಚರಿತ್ರೆಯ ಆ ಪರಿವರ್ತನಶೀಲವಾದ ಸಂಧಿಕಾಲದ ಅಧ್ಯಾಯದಲ್ಲಿಯೆ ಬದುಕುತ್ತಿದ್ದೇವೆ. ಆದರೆ ಈಗಾಗಲೆ ದಿನದಿನಕ್ಕೂ ಹೆಚ್ಚುಹೆಚ್ಚು ಸ್ಪಷ್ಟವಾಗುತ್ತಿರುವ ವಿಷಯವೆಂದರೆ ಆ ಅಧ್ಯಾಯದ ಕೊನೆ ಮಾನವಕುಲದ ಆತ್ಮವಿನಾಶದಲ್ಲಿ ಪರ್ಯವಸಾನ ಹೊಂದದಿರಬೇಕಾದರೆ, ಯಾವುದರ ಮೊದಲು ಪಾಶ್ಚಾತ್ಯದಿಂದ ಪ್ರಾರಂಭವಾಗಿತ್ತೊ ಅದರ ತುದಿ ಭಾರತೀಯದಲ್ಲಿಯೆ ಹಣ್ಣು ಗೊಳ್ಳಬೇಕಾಗುತ್ತದೆ. ಇಂದಿನ ಯುಗದಲ್ಲಿ ಸಮಗ್ರ ಪ್ರಪಂಚವು ಲೌಕಿಕ ಭೂಮಿಕೆಯ ಮಟ್ಟದಲ್ಲಿ ಪಾಶ್ಚಾತ್ಯ ಯಂತ್ರವಿದ್ಯೆಯಿಂದ ಒಂದಾಗಿಬಿಟ್ಟಿದೆ. ಆದರೆ ಆ ಪಾಶ್ಚಾತ್ಯ ಕೌಶಲ್ಯವು ‘ದೂರನಾಶ’ ಮಾಡುವುದರ ಜೊತೆಗೆ ಪರಸ್ಪರ ಪರಿಚಯದಿಂದ ಅರಿವು ಒಲವು ಮೈತ್ರಿ ಮೂಡುವ ಮುನ್ನವೆ ದೂರ ದೂರವಿದ್ದ ಜನಾಂಗಗಳನ್ನು ಹಣಾಹಣಿ ಸಮೀಪಕ್ಕೆ ತಂದು ಅವರ ಕೈಗೆ ಭಯಾನಕವಾದ ಸರ್ವನಾಶಕರ ಮಾರಣಪ್ರಲಯಾಸ್ತ್ರಗಳನ್ನೂ ಕೊಟ್ಟಿದೆ. ಮಾನವೇತಿಹಾಸದಲ್ಲಿಯೆ ಅತೀವ ಅಪಾಯಕರವಾಗಿರುವ ಇಂತಹ ಕಾಲಕೂಟ ಮೂಹೂರ್ತದಲ್ಲಿ ಮನುಷ್ಯ ಜಾತಿ ಉಳಿಯಬೇಕಾದರೆ ಅದಕ್ಕಿರುವುದೊಂದೇ ಮಾರ್ಗ- ಭಾರತೀಯ ಮಾರ್ಗ: ಚಕ್ರವರ್ತಿ ಅಶೋಕನ ಮತ್ತು ಮಹಾತ್ಮಾ ಗಾಂಧೀಜಿಯ ಅಹಿಂಸಾ ತತ್ತ್ವ, ಮತ್ತು ಶ್ರೀ ರಾಮಕೃಷ್ಣರ ಸರ್ವಧರ್ಮ ಸಮನ್ವಯದ ಸಾಕ್ಷ್ಯ: ಇಲ್ಲಿ ದೊರೆಯುತ್ತದೆ ಮಾನವ ಸಮುದಾಯಗಳೆಲ್ಲ ಒಂದು ಕುಟುಂಬವಾಗಿ ಬೆಳೆಯುವುದಕ್ಕೆ ಬೇಕಾಗುವ ಮನಸ್ಸು ಮತ್ತು ಹೃದಯ:-ಅದನ್ನು ಬಿಟ್ಟರೆ, ಈ ಅಣುಶಕ್ತಿಯ ಯುಗದಲ್ಲಿ ನಮಗಿರುವುದೊಂದೇ ಗತಿ – ಸ್ವಯೂಧ ಕಲಹದಿಂದ ಸಂಭವಿಸುವ ಲೋಕಹತ್ಯಾರೂಪದ ಸರ್ವವಿನಷ್ಟಿ.

ಈ ಅಣುಯುಗದಲ್ಲಿ ಈ ಭಾರತೀಯ ಮಾರ್ಗಾವಲಂಬನೆ ಸಮಸ್ತ ಮಾನವಕುಲಕೋಟಿಗೂ ಒಂದು ಲೌಕಿಕ ಪ್ರಯೋಜನೋದ್ದೇಶದ ಮಾರ್ಗವೂ ಆಗುತ್ತದೆ. ಯಾವ ಲೌಕಿಕ ಪ್ರಯೋಜನದ ಉದ್ದೇಶವೂ ತನಗೆತಾನೆ ಅಷ್ಟೇನೂ ಹೆಚ್ಚು ಶ್ರೇಷ್ಠವೂ ಗೌರವಾರ್ಹವೂ ಆಗಲಾರದು. ಆದರೆ ಇಂದು ಮನುಷ್ಯ ಕುಲದ ಉಳಿವಿಗೇ ಸಂಚಕಾರ ಒದಗಿದೆ. ಏನೆ ಆಗಲಿ ಅತ್ಯಂತ ಪ್ರಬಲವೂ ಗೌರವಾನ್ವಿತವೂ ಆದ ಯಾವುದೇ ಲೌಕಿಕ ಪ್ರಯೋಜನದ ಉದ್ದೇಶವಾಗಲಿ ಗೌಣಸ್ಥಾನದಲ್ಲಿ ನಿಲ್ಲುತ್ತದೆ, ಶ್ರೀ ರಾಮಕೃಷ್ಣ, ಮಹಾತ್ಮಾ ಗಾಂಧೀಜಿ ಮತ್ತು ಚಕ್ರವರ್ತಿ ಅಶೋಕ ಇವರ ಬೋಧೆಯನ್ನು ಹೃದಯತಃ ಸ್ವೀಕರಿಸಿ ಅದರಂತೆ ಆಚರಿಸುವುದರ ಮುಂದೆ. ಪ್ರಧಾನ ಕಾರಣವಿರುವುದು ಆ ಬೋಧೆ ಋತಸಮ್ಮತ ಎಂಬುದರಲ್ಲಿ. ಅದು ಏಕೆ ಋತಸಮ್ಮತ ಅಥವಾ ಧರ್ಮ್ಯ ಎಂದರೆ ಅದು ಆಧ್ಯಾತ್ಮಿಕವಾದ ಚಿರಂತನ ಸತ್ಯದ ಸಾಕ್ಷಾತ್ಕಾರದಿಂದಲೆ ಋತದರ್ಶನವಾಗಿ ಹೊಮ್ಮಿದ್ದಾಗಿರುತ್ತದೆ.