ಅಂತರರಾಷ್ಟ್ರೀಯ ಪುಸ್ತಕವರ್ಷದ ಅಂಗವಾಗಿ ವಯಸ್ಕರ ಶಿಕ್ಷಣ ಸಮಿತಿ ಪುಸ್ತಕ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹ. ಈ ಪ್ರದರ್ಶನ ಶ್ರೀಸಾಮಾನ್ಯರ ಆವಶ್ಯಕತೆಗೆ ಅನುರೂಪವಾಗಿರುತ್ತದೆ ಎಂದು ಭಾವಿಸುತ್ತೇನೆ.

ಭಾರತ ತನ್ನ ಸ್ವಾತಂತ್ರ್ಯದ ರಜತೋತ್ಸವವನ್ನು ನಡೆಸುತ್ತಿರುವ ಈ ಸಮಯದಲ್ಲಿ ನಾವು ಬಡತನವನ್ನು ಎಷ್ಟರಮಟ್ಟಿಗೆ ಪರಿಹರಿಸಿದ್ದೇವೆ? ಜಾತಿಮತಗಳ ಭೇದಬುದ್ಧಿಯನ್ನು ಎಷ್ಟರಮಟ್ಟಿಗೆ ತೊಡೆದು ಹಾಕಿದ್ದೇವೆ? ಉಳ್ಳವರ ಇಲ್ಲದವರ ನಡುವಣ ಅಂತರವನ್ನು ಎಷ್ಟು ಕಡಿಮೆ ಮಾಡಿದ್ದೇವೆ? ಸಾಮಾನ್ಯರಲ್ಲಿ ಸಮಾಜವಾದೀ ಪ್ರಜಾಪ್ರಭುತ್ವದ ಜ್ಞಾನೋದಯವಾಗಲು ಏನೇನು ಕ್ರಮ ಕೈಗೊಂಡಿದ್ದೇವೆ? ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಇವುಗಳನ್ನು ಸಾರ್ವಜನಿಕ ಮನಸ್ಸಿನಲ್ಲಿ ಯಾವ ಪ್ರಮಾಣದಲ್ಲಿ ಬೆಳೆಸಿದ್ದೇವೆ? ಎಂಬ ವಿಚಾರವಾಗಿ ಸಿಂಹಾವಲೋಕನ ಮಾಡುವುದರ ಜೊತೆಗೆ ಅನಕ್ಷರತೆಯನ್ನು ಎಷ್ಟರಮಟ್ಟಿಗೆ ನಿವಾರಿಸಿದ್ದೇವೆ? ಅಕ್ಷರಸ್ಥರನ್ನಾಗಿ ಮಾಡಿದವರಿಗೆ ಓದಲು ಉಚಿತವಾಗುವಂತೆ ಎಂತಹ ಪುಸ್ತಕಗಳನ್ನು ಎಷ್ಟೆಷ್ಟು ಒದಗಿಸಿದ್ದೇವೆ? ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ. ಈ ಕೊನೆಯ ವಿಷಯದ ಪರಿಶೀಲನೆಗೆ ವಯಸ್ಕರ ಶಿಕ್ಷಣಸಮಿತಿ ಕೈಗೊಂಡಿರುವ ಪುಸ್ತಕ ಪ್ರದರ್ಶನ ಉತ್ತರ ಹೇಳಬೇಕಾಗುತ್ತದೆ.

“ಉತ್ತಮ ಸಾಹಿತ್ಯಕೃತಿ ಒಂದು ಆಚಾರ್ಯಚೇತನದ ಜೀವಿತ ಸಮಸ್ತದ ಸಾರಸರ್ವಸ್ವ; ಅದು ಐತಿಕಕ್ಕೆ ಮಾತ್ರವಲ್ಲದೆ, ಆಮುಷ್ಮಿಕ ಕಲ್ಯಾಣಕ್ಕೂ ಮಾರ್ಗದರ್ಶಿಯಾಗುತ್ತದೆ.” ಎಂದು ಆಂಗ್ಲೇಯ ಮಹಾಕವಿಯೊಬ್ಬನು ಸತ್ಕಾವ್ಯಗಳನ್ನು ಕುರಿತು ಬಣ್ಣಿಸಿದ್ದಾನೆ. ಅದನ್ನೇ ಇನ್ನೊಂದು ರೀತಿಯಲ್ಲಿ ಭಾರತೀಯ ಕಾವ್ಯ ಮೀಮಾಂಸೆಯೂ ಸಮರ್ಥಿಸುತ್ತದೆ.

“ಸಂಸರದ ವಿಷವೃಕ್ಷದಿ
ಹಣ್ಣೆರಡಿವೆ ಅಮೃತೋಪ:
ಕಾವ್ಯಾಮೃತದಾಸ್ವಾದನ
ಮೇಣ್ ಸಜ್ಜನ ಸಲ್ಲಾಪ!”

ಬುದ್ಧಿಗೆ ಚಿಂತನಜ್ಯೋತಿಯನ್ನು ದಯಪಾಲಿಸುವುದರ ಜೊತೆಗೆ ಹೃದಯಕ್ಕೆ ಧೈರ್ಯಸ್ಥೈರ್ಯಕಾರಕವಾದ ಮತ್ತು ಆಶಾಪ್ರಚೋದಕವಾದ ರಸಾನಂದವನ್ನೂ ದಾನ ಮಾಡುತ್ತದೆ.

ಇತರ ಎಲ್ಲಾ ವಿಷಯಗಳಲ್ಲಿಯೂ ಇರುವಂತೆ ಪುಸ್ತಕಗಳಲ್ಲಿಯೂ ಸತ್ ಮತ್ತು ಅಸತ್ ಎರಡೂ ಇರುತ್ತವೆ. ಈ ಸತ್ಕಾವ್ಯ ನಮ್ಮನ್ನು ಊರ್ಧ್ವಮುಖ ಪ್ರವಾಸದತ್ತ ಕೊಂಡೊಯ್ದರೆ, ದುಷ್ಕಾವ್ಯ ನಮ್ಮನ್ನು ಅಧೋಮುಖ ಪ್ರವಾಸಿಗಳನ್ನಾಗಿ ಮಾಡುತ್ತದೆ. ಕೆಳಕ್ಕೆ ತಳ್ಳುವ ಆಸುರೀ ಪುಸ್ತಕಗಳನ್ನು ಸಂಹರಿಸಿ, ಮೇಲಕ್ಕೆ ಒಯ್ಯುವ ದೈವೀ ಪುಸ್ತಕಗಳನ್ನು ಗುರುತಿಸಬೇಕು. ಅಕ್ಷರಾಭ್ಯಾಸದಿಂದ ಓದುವ ಹೊಸ ರುಚಿಯನ್ನು ಸಂಪಾದಿಸಿರುವ ಶ್ರೀಸಾಮಾನ್ಯನಿಗೆ ಮೊದ ಮೊದಲು, ಕ್ಯಾಬರೆ ನೃತ್ಯದಂತೆ, ಪಶುರುಚಿಗೆ ಆಕರ್ಷಣೀಯವಾಗಿ ತೋರಿದರೂ ತುದಿಗೆ ಕ್ಯಾನ್ಸರಿಗಿಂತಲೂ ಕ್ರೂರವಾಗುವ ಪುಸ್ತಕ ಸಾಮಗ್ರಿಯಿಂದ ಅಪಾಯವಾಗದಂತೆ ನೋಡಿಕೊಳ್ಳಬೇಕಾದುದು ಅನಕ್ಷರರನ್ನು ಸಾಕ್ಷರರನ್ನಾಗಿ ಮಾಡಿದವರ ಪವಿತ್ರ ಹೊಣೆಗಾರಿಕೆಯಾಗಿರುತ್ತದೆ. ಆದ್ದರಿಂದ ಪ್ರದರ್ಶನದಲ್ಲಿ ಅಸುರರಿಗೆ ಸ್ಥಾನವಿರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹಾರೈಸುತ್ತೇನೆ.

ಸಮನ್ವಯ ದೃಷ್ಟಿಯ ಸೆಕ್ಯೂಲರ್ ಅಥವಾ ಸಾರ್ವ ಲೌಕಿಕ ಕ್ಷೇಮರಾಷ್ಟ್ರ ಎಂದು ಘೋಷಿತವಾಗಿದೆ, ನಮ್ಮ ಭಾರತ. ಆದ್ದರಿಂದ ಆ ಘೋಷಣೆ ಕಾರ್ಯಕಾರಿಯಾಗಿ ಸಫಲವಾಗಬೇಕಾದರೆ ನಮ್ಮ ಶ್ರೀಸಾಮಾನ್ಯರಲ್ಲಿ ಮತದ ಮೌಢ್ಯತೆಗಳು ಮಾತ್ರವಲ್ಲದೆ, ಮತಭಾವದ ಮೌಢ್ಯತೆಯೂ ತೊಲಗಬೇಕು. ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು. ಮತ ಮತ್ತು ರಾಜಕೀಯಗಳ ಅಂಧಕಾರವು ವಿಜ್ಞಾನ ಮತ್ತು ಅಧ್ಯಾತ್ಮಗಳ ಸೂರ್ಯೋದಯಕ್ಕೆ ಶರಣಾಗಿ, ತೊಲಗಿ, ಸರ್ವೋದಯದ ಕಾಂತಿ ಹಬ್ಬಿ, ಶಾಂತಿ ಮೈದೋರಲಿ ಎಂಬ ಅಭೀಪ್ಸೆ ಸರ್ವರ ಹೃದಯದ ಪ್ರಾರ್ಥನೆಯಾಗಿ, ಅತೀತ ಕಲ್ಯಾಣ ಶಕ್ತಿಗಳ ಅವತರಣಕ್ಕೆ ಹಾದಿಯಾಗಲಿ ಎಂದು ಹಾರೈಸುತ್ತೇನೆ.


[1]       ೧೫-೮-೧೯೭೨ರ ಸ್ವಾತಂತ್ರ್ಯದ ಬೆಳ್ಳಿಹಬ್ಬದ ಸಂದರ್ಭದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ಏರ್ಪಡಿಸಿದ್ದ ಪುಸ್ತಕ ಪ್ರದರ್ಶನಕ್ಕೆ ನೀಡಿದ ಕುವೆಂಪು ಸಂದೇಶ.