ಶ್ರೀಮಧ್ವರ ಪ್ರಕಾರ: ಎಲ್ಲ ಜೀವರೂ ತಮ್ಮ ಸ್ವರೂಪದಲ್ಲಿ ಒಂದೇ ತರದವರಲ್ಲ. ಜೀವನ ಸ್ವರೂಪವು ಅಚಲವಾದದ್ದು, ಬದಲಾವಣೆ ಹೊಂದದ್ದು, ನಿತ್ಯವಾದದ್ದು. ಅದನ್ನು ಬದಲಾಯಿಸುವುದು ಎಂದೆಂದಿಗೂ ಸಾಧ್ಯವೇ ಇಲ್ಲ. ಜೀವನ ಪರಮ ಅಥವಾ ಅಂತಿಮಗಮ್ಯ ಅದರ ಸ್ವರೂಪದಿಂದ ನಿರ್ಧರಿತವಾಗುತ್ತದೆ. ಒಟ್ಟಿನಲ್ಲಿ ಮೂರು ವರ್ಗದ ಜೀವರುಗಳಿದ್ದಾರೆ: (1) ಮುಕ್ತಿಯೋಗ್ಯರು-ಮೋಕ್ಷವೆ ಪರಮ ಅಥವಾ ಅಂತಿಮಗಮ್ಯರಾದವರು. (2) ನಿತ್ಯಸಂಸಾರಿಗಳು-ಸದಾಕಾಲಕ್ಕೂ ಹುಟ್ಟುತ್ತಾ ಸಾಯುತ್ತ ಜನ್ಮ-ಮೃತ್ಯುಗಳ ನಡುವೆ ತೊಳಲುತ್ತಿರುವವರು. (3) ತಮೋಯೋಗ್ಯರು-ನಿತ್ಯನರಕಭಾಜನರು. ಇವರಿಗೆ ಉದ್ಧಾರವೇ ಇಲ್ಲ.

ಯಾವ ಜೀವವೂ ತನ್ನ ಸ್ವರೂಪವನ್ನು ಮೀರುವುದಾಗಲಿ, ಬದಲಾಯಿಸುವುದಾಗಲಿ ಸಾಧ್ಯವಿಲ್ಲ.

[1]

ಲ್ಯಾಬೋರೇಟರಿಯಲ್ಲಿ ನಾವು ಪದಾರ್ಥಗಳನ್ನು ವಿಭಜಿಸುತ್ತೇವಲ್ಲ ಹಾಗೆ! ಮುಕ್ತಿಯೋಗ್ಯರು ಅಂತ ಒಂದು ಗುಂಪಂತೆ; ತಮೋಯೋಗ್ಯರು ಅಂತ ಒಂದು ಗುಂಪು. ಅವರೆ ನರಕಕ್ಕೇ ಹೋಗುವರಂತೆ. ಆ ನಿತ್ಯಸಂಸಾರಿಗಳು ಅಂತ ಒಂದು ಗುಂಪು. ಅವರು ಹುಟ್ಟುವುದು ಸಾಯುವುದು, ಹುಟ್ಟೋದು ಸಾಯೋದು-ಇದರೊಳಗೇ ಸುತ್ತುತ್ತಾ ಇರತಕ್ಕಂಥವರು, ಅವರಿಗೆ ಮುಕ್ತಿ ಇಲ್ಲ. ಇದನ್ನು ಆ ಸ್ವಯಂ ಆಚಾರ್ಯರು ಹೇಳಿಬಿಟ್ಟರೂ ಅಂತ ಎಲ್ಲರೂ ಒಪ್ಪಿಕೊಂಡು, ಅದಕ್ಕೇನು ವ್ಯಾಖ್ಯಾನ ಟೀಕೆ ಟಿಪ್ಪಣಿಗಳನ್ನು ಬರೆದದ್ದೂ ಬರೆದದ್ದೆ! ಈ ಆಚಾರ್ಯರ ದೃಷ್ಟಿ ಲೋಕಜೀವನಕ್ಕೆ ಎಷ್ಟು ಅಪಾಯಕಾರಕ?[2] ನೋಡಿ ಸ್ವಲ್ಪ. ಈಗ ಒಬ್ಬ ತಾನು ಮುಕ್ತಿಯೋಗ್ಯ ಅಂತ ತಿಳಿದುಕೊಂಡುಬಿಟ್ಟ ಅಂದರೆ ಅವನು ಏನೇ ಮಾಡಲಿ, ಕೊಲೆ ಮಾಡಲಿ, ಹಾದರ ಮಾಡಲಿ ಅವನು ಮುಕ್ತಿಯೋಗ್ಯನಾದುದರಿಂದ ಅವನಿಗೆ ಮುಕ್ತಿ ದೊರಕಿಯೇ ದೊರಕುತ್ತದೆ. ಇಷ್ಟು ಖಾತ್ರಿ ಆದಮೇಲೆ ಅವನೇಕೆ ಕೊಲೆ ಮಾಡಬಾರದು? ಹಾದರಮಾಡಿ ಸುಖಪಡಬಾರದು? ಏಕೆಂದರೆ ಮುಕ್ತಿ ಅವನಿಗೆ ಕಟ್ಟಿಟ್ಟ ಬುತ್ತಿ. ಹಾಗೆಯೆ ಈ ನಿತ್ಯನಾರಕಿ. ಇವನು ಕೊನೆಗೆ ನರಕಕ್ಕೇ ಹೋಗುತ್ತಾನೆ! ಏನೇ ಮಾಡಲಿ ಬಿಡಲಿ, ಅವನು ನರಕದಲ್ಲಿ ಎಂದೆಂದಿಗೂ ಬಿದ್ದಿರಬೇಕಾಗುತ್ತದೆ. ಅವನು ತಪಸ್ಸುಮಾಡಿದರೂ ಒಂದೇ, ಕೊಲೆಮಾಡಿದರೂ ಒಂದೇ, ಧ್ಯಾನಮಾಡಿದರೂ ಒಂದೇ, ಹಾದರ ಮಾಡಿದರೂ ಒಂದೇ, ಎಂತಿದ್ದರೂ ನರಕಕ್ಕೇ ಹೋಗುತ್ತಾನೆ. ಆದ್ದರಿಂದ ಎಷ್ಷು ತಪಸ್ಸು ಮಾಡಲಿ, ಏನೇ ಮಾಡಲಿ ಏನೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಅವನು ತಾನು ಇಹದಲ್ಲಿ ಮಜವಾಗಿರಲು ಏನು ಬೇಕಾದರೂ ಮಾಡುತ್ತೀನಿ ಎಂದು ಸುಳ್ಳು, ಮೋಸ, ಕಳವು, ಕೊಲೆ, ಹಾದರ ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ. ಇದೇ ತತ್ವವನ್ನು ನಿತ್ಯಸಂಸಾರಿಗಳೂ ಒಪ್ಪಿ, ಎಂತಿದ್ದರೂ ನಮ್ಮ ಪಾಡು: ಹುಟ್ತೀವಿ, ಸಾಯ್ತೀವಿ. ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಲೇ ಇರುವುದು. ನಾವು ಹೇಗೆ ಬೇಕಾದರೂ ಬದುಕುತ್ತೇವೆ ಎಂದರೆ ಏನು ಗತಿ? ಈ ತತ್ವವನ್ನು ಒಪ್ಪಿ ಅನುಸರಿಸಿದರೆ ಸಮಾಜವೇ ಅಲ್ಲೋಲ ಕಲ್ಲೋಲವಾಗಿ ಬಿಟ್ಟೀತು. ಆದರೆ ಈ ತತ್ವವನ್ನೇ ಅನುಸರಿಸಿಕೊಂಡು ದೊಡ್ಡದೊಂದು ಶಾಸ್ತ್ರ ಗೀಸ್ತ್ರ ಮಾಡಿ, ಮಜಾ ಮಾಡ್ತಾ ಇದ್ದಾರೆ ನೋಡಿ!

ಅದಕ್ಕೋಸ್ಕರ ನೀವು, ಬರಹಗಾರರಾದವರು, ಇವುಗಳನ್ನೆಲ್ಲ ಸ್ವಲ್ಪನೋಡಿ ಓದಿ ತಿಳಿಯಬೇಕು. ಅದನ್ನೆಲ್ಲ ಓದುವುದು ಅನುಸರಿಸುವುದಕ್ಕಲ್ಲ. ಅದನ್ನೆಲ್ಲ ಹೊರತೆಗೆದು ನಮ್ಮ ಜನಗಳಿಗೆ ಹೇಳಬೇಕು, ‘ಇಂಥವರನ್ನೆಲ್ಲ ನಂಬಬೇಡಿ ನೀವು, ಇವರಿಂದ ಹೊರಬನ್ನಿ, ಅಂತ. ‘ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು, ಮನುಜಮತಕ್ಕೆ ಬನ್ನಿ, ಅಲ್ಲಿಂದ ಹೊರಡಿ’ ಅಂತ ತಿಳಿಸಬೇಕು ಏಕೆ ಅಂತ ಹೇಳಿದರೆ ಅವರು ‘ಅಯ್ಯೋ ಇಂಥ ದೊಡ್ಡ ದೊಡ್ಡ ಆಚಾರ್ಯರೇ ಹೀಗೆ ಹೇಳಿದ್ದಾರೆ, ಅದು ಸುಳ್ಳಾದೀತೆ?’ ಎಂದು ಅರಿಯದ ಮಂದಿಯನ್ನು ಬೆದರಿಸಬಹುದು. ನೀವು ಹೇಳಬೇಕು ಜನಕ್ಕೆ ‘ದೊಡ್ಡವರಲ್ಲ, ಏನೂ ಅಲ್ಲ ಅವರು, ಈ ತರದ ಸ್ವಮತ ಭ್ರಾಂತಿಯ ಶಠರೇ ಆಚಾರ್ಯರಾಗಿದ್ದು ಆವಾಗ. ಹೊರಗೆ ಬನ್ನಿ’ ಅಂತ ಹೇಳಬೇಕಾಗುತ್ತದೆ. ಆ ತರದ ಆಚಾರ್ಯರು ಋಷಿಗಳು ಎನ್ನುವ ಗೌರವವನ್ನು ನೀವು ನಿಮ್ಮ ತರುಣರಿಂದ ಮೊದಲು ತೆಗೆದುಹಾಕಬೇಕಾಗುತ್ತದೆ. ಸಂಪೂರ್ಣವಾಗಿ ವಿಚಾರಪೂರ್ವಕವಾಗಿ ಕೆಲಸಮಾಡಿ.

ಹೋದಸಾರಿ ಇಲ್ಲಿಯೇ ಜರುಗಿದ ‘ಜಾತಿವಿನಾಶ ಸಮ್ಮೇಳನ’ದಲ್ಲಿ ನಾನು ಈ ಆಚಾರ್ಯ ಸಮೂಹದ ವಿಷಯದಲ್ಲಿ ಆ ತರದ ಗೌರವ ಇಟ್ಟುಕೊಳ್ಳಬಾರದು, ಸಂಪೂರ್ಣವಾಗಿ ವಿಚಾರಬುದ್ಧಿಯಿಂದ ಅವರನ್ನು ಪರೀಕ್ಷೆ ಮಾಡಬೇಕು ಅಂತ ಹೇಳಿದ್ದೆ. ಇದು ಪತ್ರಿಕೆಗಳಲ್ಲಿ ಬಂತು. ಯಾರೋ ದೂರದವರು ‘ಏನಿದು? ಇವರನ್ನೆಲ್ಲಾ ನಾವು ದೊಡ್ಡವರು ಎಂದು ತಿಳಿದು ವೈಸ್‌ಛಾನ್ಸಲರ್ ಮಾಡಿದರೆ ಇವರು ಹೀಗೆ ಮಾತನಾಡ್ತಾರಲ್ಲಾ’ ಅಂತ ಬರೆದರು. ನನ್ನನ್ನು ವೈಸ್‌ಛಾನ್ಸಲರ್ ಮಾಡಿದ್ದಕ್ಕಾಗಿ ಇವರು ಮಾಡುವ ಅವಿವೇಕಗಳನ್ನೆಲ್ಲಾ ನಾನು ಒಪ್ಪಿಕೊಳ್ಳಬೇಕು, ಅಂತ ಅವರ ಅಭಿಪ್ರಾಯ. ನನ್ನ ದೃಷ್ಟಿಗೆ ಈ ವೈಸ್‌ಛಾನ್ಸಲರ್ ಗಿರಿ, ಅದು, ಇದು, ಎಲ್ಲಾ ಶುದ್ಧ ಅಲ್ಪ, ತುಚ್ಛ, ತಿರಸ್ಕೃತ. ವಿಚಾರಮಾಡಿ ಸರಿಯಾದ ದಾರಿಯಲ್ಲಿ ಹೋಗಬೇಕು.

ಇದು ನೀವು ಬರಿದೆ ಯಾರನ್ನಾದರೂ ದ್ವೇಷ ಮಾಡುವುದರಿಂದ ಹೋಗುವುದಿಲ್ಲ. ನಮ್ಮ ಹುಡುಗರಿಗೆ, ನಮ್ಮ ಯುವಕರಿಗೆ ಇದನ್ನೆಲ್ಲಾ ತಿಳಿಯ ಹೇಳಬೇಕು ನೀವು. ಅವರು “ಓದುವುದಿಲ್ಲ. ಈ ಹಳೆಯದನ್ನೆಲ್ಲ ಯಾತಕ್ಕೆ ಸರಿ ಮಾಡಬೇಕು? ತಿಳಿದುಕೊಳ್ಳಬೇಕು?” ಅಂತ ಕೇಳಿದರೆ ‘ಇದನ್ನೆಲ್ಲಾ ತಿಳಿದುಕೊಂಡು, ಯಾವ ದಾರಿಯಿಂದ ಹೇಗೆ ನಿಮ್ಮನ್ನು ಈ ಬೋನಿನಲ್ಲಿ ಬೀಳಿಸಿದ್ದಾರೆ? ಈ ಬೋನಿನಿಂದ ಹೊರಗೆ ಬರುವ ಮಾರ್ಗ ಯಾವುದು? ಅಂತ ಮೊದಲು ನೀವು ಕಂಡುಹಿಡಿದುಕೊಳ್ಳಬೇಕು’ ಎಂದು ಹೇಳಿ. ಈ ದೇಶದಲ್ಲಿ ಹಿಂದೂಧರ್ಮದ ಪುರೋಹಿತಶಾಹಿ ಎಲ್ಲೋ ಶೇ. ೫ರಷ್ಟು ಇದ್ದಾರೆ. ಅವರಿಗೆಲ್ಲಾ ಬೆಂಬಲ ಎಲ್ಲಿಂದ ಬರುತ್ತದೆ? ಬಾಕಿಯವರಿಂದ ಬರುತ್ತದೆ. ನೀವು ಈ ಬಾಕಿಯವರ ಮನಸ್ಸನ್ನು ತಿದ್ದಿ ತಿರುಗಿಸಿದರೆ ಅದು ತನ್ನಷ್ಟಕ್ಕೆ ತಾನೆ ಒಣಗಿ ಹೋಗುತ್ತದೆ. ಈ ಶೂದ್ರ ಶಕ್ತಿಯ ಬೆಂಬಲ ತಪ್ಪಿ ಆ ಪುರೋಹಿತಶಾಹಿ ತನಗೆ ತಾನೆ ಬಾಡಿಬೀಳುತ್ತದೆ. ಅವರು ಅಡ್ಡ ಪಲ್ಲಕ್ಕಿಯ ಮೇಲೆ ಕುಳಿತುಕೊಂಡು ಬರಬಹುದು. ಆದರೆ ನಾಲ್ಕು ಐದು ಜನ ಅವರವರೇ ಬರಬೇಕು ಎದುರುಗೊಳ್ಳಲು. ಅದುಬಿಟ್ಟು ನೀವು ದೊಡ್ಡದಾಗಿ ಲಕ್ಷಾಂತರ ಜನ ಹೋಗಿ ಕಾಲಿಗೆ ಬೀಳುವುದು ಮಾಡುವುದು ಇದನ್ನೆಲ್ಲ ಮಾಡಿದರೆ ಶುದ್ಧ ಅವಿವೇಕವಾಗುತ್ತದೆ. ಅವರು ಅವರೇ ಮಾಡಿಕೊಳ್ಳಲಿ. ಬೇಡ ಅಂತ ಯಾರು ಹೇಳುತ್ತಾರೆ? ನಿನ್ನ ಮನೆಯಲ್ಲಿ ನೀನು ಚಿನ್ನದ ಕುರ್ಚಿಹಾಕಿ ಕುಳಿತುಕೊ, ಬೇಡ ಅಂತ ಯಾರು ಹೇಳಿದವರು? ಆದರೆ ನಾನು ಬಂದು ನಿನ್ನ ಸಿಂಹಾಸನಕ್ಕೆ ಅಡ್ಡಬೀಳುವುದು ಸುಳ್ಳು! ಪುನಃ ನಾನು ಬರಹಗಾರರ ದೃಷ್ಟಿಯಿಂದ ಮಾತನಾಡುತ್ತೇನೆ. ಏಕೆಂದರೆ ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ. ಆದರೆ ಇದರಿಂದಲೇ ಎಂದರೆ ನಿಮ್ಮ ಬರವಣಿಗೆಯಿಂದಲೆ, ನೀವು ಅವರನ್ನು, ಶೂದ್ರವರ್ಗವನ್ನು, ತಿದ್ದಬೇಕಾಗುತ್ತದೆ. ನೀವು ಇವುಗಳನ್ನೆಲ್ಲಾ ಮನಃಶಾಸ್ತ್ರೀಯವಾಗಿ ವ್ಯಾಖ್ಯಾನ ಮಾಡಬೇಕಾಗಿ ಬರುತ್ತದೆ. ಮನಧರ್ಮಶಾಸ್ತ್ರವನ್ನು ಆ ಕಡೆ ಮೂಲೆಗಿಡಬೇಕಾಗುತ್ತದೆ. ನಾನು ಮೂವತ್ತು ಮೂವತ್ತೈದು ವರ್ಷಗಳ ಹಿಂದೆಯೆ ಮನುಧರ್ಮಶಾಸ್ತ್ರದ ವಿಚಾರವನ್ನು ಒಂದು ಪದ್ಯದಲ್ಲಿ ಹೇಳಿದೆ. ಪದ್ಯದಲ್ಲಿ ಬರೆದೆ. ಅದು ಚಿನ್ನದ ಖಡ್ಗ ಇದ್ದಹಾಗೆ ಎಂದು ತೋರುತ್ತದೆ. ಏನೂ ಕೆಲ್ಸಾನೆ ಮಾಡೊಲ್ಲ ಅಂತ ಕಾಣ್ಸುತ್ತೆ. ಗದ್ಯದಲ್ಲಿ ಬರೆದು ಒರಟಾಗಿ ಹೇಳಿದರೆ ಏನಾದರೂ ಕೇಳ್ತಾರೊ ಏನೋ. ಪದ್ಯದಲ್ಲಿ ಆದಕೂಡಲೆ ಒಳ್ಳೆ ಸೊಗಸಾಗಿ ಹಾಡಿಬಿಟ್ಟು ಅದನ್ನು ಅನುಸರಿಸೋದೆ ಇಲ್ಲ! ಮೂವತ್ತೈದು ವರ್ಷಗಳ ಹಿಂದೆ:

“ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?”

ಅವನ ಕಾಲಕ್ಕೆ ಏನಿತ್ತೋ ಅದನ್ನು ಅವನು ಬರೆದಿಟ್ಟ. ಅದನ್ನು ಈ ಹೊತ್ತು “Law” ಅಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ.

ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!

ಅಂತ ಅವೊತ್ತು ಬರೆದಿದ್ದೆ ನಾನು. ಆಗ ಮನುಧರ್ಮಶಾಸ್ತ್ರ ಓದಿರಲಿಲ್ಲ. ಮನು ಹೇಳಿದ್ದಾನೆ ಹಾಗೆ. ಅದಕ್ಕಿಂತಲೂ ಭಯಂಕರ ಹೇಳಿದ್ದಾನೆ! ಆಗ ನಾನು ಬರೆದಾಗ ಮನುಧರ್ಮಶಾಸ್ತ್ರವನ್ನು ಓದಿರಲಿಲ್ಲ. ಮನು ದೊಡ್ಡವನೆಂದು ಹೇಳುತ್ತಾರೆ. ಹೀಗೆ ಬರೆದಿರಲಾರ ಅಂತ ಊಹಿಸಿದ್ದೆ. ಆದರೆ ಮನು ಅದಕ್ಕಿಂತ ಭಯಂಕರವಾಗಿ ಏನನ್ನೆಲ್ಲಾ ಬರೆದಿದ್ದಾನೆ.

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ!

ಮನುಧರ್ಮಶಾಸ್ತ್ರ ಅವನ್ನೆಲ್ಲಾ ಅತ್ತ ಕಟ್ಟಿಡಿ. ಯಾರೋ ಒಬ್ಬರು ಪಟಗಳನ್ನೆಲ್ಲಾ ಎಸೆಯಿರಿ ಅಂದಿದ್ದಕ್ಕೆ ದೊಡ್ಡ ಗಲಾಟೆ ಎಬ್ಬಿಸಿದರು. ಅದಕ್ಕಿಂತ ಇದು ಬಲವಾದದ್ದೆ ಅಂತ ಇಟ್ಟುಕೊಳ್ಳಿ.

ಸ್ವರ್ಗ ಹೋಗುವುದಿಲ್ಲ; ನರಕ ಬರುವುದು ಇಲ್ಲ;
ಸ್ವರ್ಗನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು: ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ,
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ.

ಈ ವಿಚಾರಪೂರ್ವಕವಾದ ಭಾವಗಳನ್ನು ನಮ್ಮ ತರುಣರ ಎದೆಯಲ್ಲಿ ನೀವು ಬಿತ್ತಬೇಕು. ಪದ್ಯಗಳಲ್ಲಿಯೆ ಬಿತ್ತು; ಆದರೆ ನವ್ಯ ಬರಿತೀವಿ ಅಂತ ಹೇಳಿಬಿಟ್ಟು ಒಬ್ಬರಿಗೂ ಅರ್ಥವಾಗದ್ದನ್ನೆಲ್ಲಾ ತಂದುಹಾಕಿ, ಒಬ್ಬರೂ ಓದಬಾರದು, ಆ ತರಾ ಮಾಡಬೇಡಿ. ಎಲ್ಲರಿಗೂ ಅರ್ಥವಾಗುವಂತೆ, ನವ್ಯವೋ ಪದ್ಯವೋ ಎಲ್ಲರಿಗೂ ಅರ್ಥವಾಗಿ ಅದರಿಂದ ಪರಿಣಾಮಕಾರಿಯಾಗುವಂತೆ ಬರೆಯಿರಿ. ಏನೊ Symbolism ಅಂತ ಹೇಳಿಬಿಟ್ಟು ಒಂದೂ ಅರ್ಥವಾಗಬಾರದು, ಹಾಗೆ ಮಾಡಬೇಡಿ.

ಬಸವಲಿಂಗಪ್ಪನವರು ಅವೋತ್ತೇನೊ ಎಲ್ಲಾ ಸಾಹಿತ್ಯ ಬೂಸಾ ಅಂತ ಹೇಳಿಬಿಟ್ಟರು ಅಂತ ಗಲಾಟೆಯೋ ಗಲಾಟೆ ಮಾಡಿ, ಮಂತ್ರಿಮಂಡಲ ಉರುಳಿ, ದೊಡ್ಡ ರಾಜಕೀಯ ವಿಪ್ಲವವೇ ಆಗಿಹೋಯಿತು. ಆದರೆ ನೋಡಿ, ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ, ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ; ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೆ. ಯಾವುದನ್ನು ನೀವು ಫಸ್ಟ್ ರೇಟ್, ಗ್ರೇಟ್ ಅಂತ ಹೇಳುತ್ತೀರೊ ಅದೆಲ್ಲಾ ಒಂದು ಕಾಲುವಾಸಿ ಇದ್ದರೆ ನಮ್ಮ ಪುಣ್ಯ. ಆದರೆ ದನ ಎಮ್ಮೆ ಸಾಕುವವರಿಗೆ ಗೊತ್ತು, ಬೂಸವೇ ಮುಖ್ಯ ಅಂತ, ಪ್ರಧಾನವಾದ ಆಹಾರ ಅಂತ. ಅವನಿಗೆ ಬೂಸಾ ಹಾಕುವುದು ಬೇಡ, ಹತ್ತಿಕಾಳು ಹಿಂಡೀನೇ ತಂದುಹಾಕು ಎಂದರೆ ಕೆಟ್ಟ ಅವನು. ಹತ್ತೀಕಾಳು ಹಿಂಡೀನೇ ಯಾರು ತಂದುಹಾಕಲಿಕ್ಕೆ ಆಗುತ್ತದೆ? ಬೂಸಾನೇ ಹೊಟ್ಟೆ ತುಂಬಿಸಿಕೊಂಡು ಸ್ವಲ್ಪ ಹತ್ತೀಕಾಳು, ಸ್ವಲ್ಪ ಹಿಂಡೀ ತಿಂತಾವೆ. ನಾವು ಮನುಷ್ಯರು ಕೂಡ ದಿನವೂ ಹೋಳಿಗೆ ಪಾಯಸ ತಿನ್ನುತ್ತೇವೆಯೆ? ಪ್ರಧಾನವಾಗಿ ನಾವು ತಿನ್ನೋದು ಅನ್ನ ತಾನೆ? ಸಾಹಿತ್ಯದಲ್ಲಿಯೂ ಹಾಗೆಯೆ. ಎಲ್ಲಾ ದೇಶದ ಸಾಹಿತ್ಯದಲ್ಲಿಯೂ ಮುಕ್ಕಾಲುಪಾಲು ಇರುವುದು ಬೂಸಾನೇ. ಬೂಸಾನೇ ಇರಬೇಕು, ಇದೆ, ಇರಬೇಕಾದದ್ದೂ! ಆ ಅರ್ಥದಲ್ಲಿ ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದಲ್ಲೂ ಸಹ ನಾವು ಮೂರು ನಾಲ್ಕು ಜನರನ್ನು ಮಹಾಕವಿಗಳು ಅಂತ ಗುರುತಿಸುತ್ತೇವೆ. ದೊಡ್ಡವರು ಅಂತ. ಇನ್ನೂ ಏಳೆಂಟು ಜನ ಕವಿಗಳನ್ನು ಸಮರ್ಥರಾದ ಕವಿಗಳು ಅಂತ ಹೇಳುತ್ತೇವೆ. ಉಳಿದವರು ಸಾವಿರಾರು ಇದ್ದಾರೆ. ಅವರೆಲ್ಲ ಬೂಸಾ ಸಾಹಿತ್ಯದವರೆ. ಅಂದಮಾತ್ರಕ್ಕೆ ಅವರಿಗೆಲ್ಲಾ ಅಗೌರವ ತೋರಿಸಿದಂತೆ ಅಂತ ಹೇಳುವುದು ಶುದ್ಧ ಅವಿವೇಕ. ಇದು ವಿಷಯ.[3] ಸಾಹಿತ್ಯದಲ್ಲಿ ಉತ್ತಮ ಮಧ್ಯಮ ಅಧಮ ಎಂದು ಗೊತ್ತುಮಾಡುವುದು ವಿಮರ್ಶೆಯ ಕರ್ತವ್ಯ. ಸಾಮಾನ್ಯವಾಗಿ ಬಹುಭಾಗ ಇರುವುದೆಲ್ಲಾ ಬೂಸಾ ಸಾಹಿತ್ಯವೆ. ಈಗ ನಾವು ಬರೆಯುತ್ತಿರುವುದರಲ್ಲಿಯೂ ಸಹ ಎಷ್ಟೋ ಬೂಸಾ ಸಾಹಿತ್ಯವೆ. ಅದರಲ್ಲಿ ಸ್ವಲ್ಪಮಟ್ಟಿಗೆ ಹಿಂಡೀ ಸಾಹಿತ್ಯ, ಹತ್ತಿಕಾಳು ಸಾಹಿತ್ಯವಿರುತ್ತದೆ.

ಆಮೇಲೆ ಇನ್ನೊಂದು ವಿಚಾರ: ಬಸವಲಿಂಗಪ್ಪನವರು ಬೂಸಾಸಾಹಿತ್ಯ ಅಂತ ಏಕೆ ಮಾತನಾಡಿದರು? ಕಡೆಗೆ, ಪಾಪ, ಹೇಳಿಕೆ ಕೊಟ್ಟರು. ನಾನು ಕನ್ನಡ ಸಾಹಿತ್ಯವನ್ನೆಲ್ಲಾ ಬೂಸಾ ಸಾಹಿತ್ಯ ಅಂತ ಹೇಳಲಿಲ್ಲ ಅಂತ. ಅದಕ್ಕೆ ಯಾರೂ ಕೇರ್ ಮಾಡಲಿಲ್ಲ. ಆಗುವುದೆಲ್ಲ ಆಗಿಯೆಹೋಯಿತು. ಕೆಲವು ಹಳದಿ ಪತ್ರಿಕೆಗಳಿವೆ. ಅವಕ್ಕೆ ಅದೇ ಕಸುಬು. ಹೀಗೆ ಒಂದು ಸಣ್ಣದನ್ನು ತೆಗೆದುಕೊಂಡು ದೊಡ್ಡದು ಮಾಡಿ ಹಾಳುಮಾಡುವುದು. ಅಂತೂ ಅದು ಆಯಿತು. ಬರೀ ಪತ್ರಿಕೆಗಳನ್ನು ಟೀಕೆ ಮಾಡಿದರೆ ಆಗಲಿಲ್ಲ. ಆ ಪತ್ರಿಕೆಗಳನ್ನು ಓದಿ ಅದರಿಂದ ಪ್ರಭಾವಿತರಾದಂತಹ ಈ ಮಹನೀಯರಿದ್ದಾರಲ್ಲಾ ಅವರೂ ಅದೇ ಹಳದಿ ಮೆದುಳಿನವರೆ! ಅವರು ಹಳದಿ ಮೆದುಳಿನವರಾದ್ದರಿಂದಲೇ ಪತ್ರಿಕೆ ಹಾಗೆಲ್ಲ ಮಾಡಿತು. ಬರೀ ಪತ್ರಿಕೆ ಏನು ಮಾಡುತ್ತದೆ? ಇವರ ಮೆದುಳೂ ಹಳದಿಯಾಗಿರುವುದರಿಂದ ಆ ಹಳದಿ ಬಣ್ಣದ ಸಹಾಯ ತೆಗೆದುಕೊಂಡು ಆ ಕೆಲಸ ಮಾಡಿತು, ಅಷ್ಟೆ.

ಈಗ ಅವರು (ಬಸವಲಿಂಗಪ್ಪನವರು) ಯಾವ ದೃಷ್ಟಿಯಿಂದ ಹಾಗೆ ಹೇಳಿದರು ಎಂದು ವಿಚಾರಮಾಡಿ. ಹರಿಜನರ ಉದ್ಧಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೆ ಹೇಳಿದರು. ಈ ದೃಷ್ಟಿಯಿಂದ ಹೇಳತಕ್ಕಂತಹ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ. ಆದ್ದರಿಂದ ಬೂಸಾಸಾಹಿತ್ಯ ಅಂದರು. ಕನ್ನಡದಲ್ಲೂ ಹರಿಜನೋದ್ಧಾರ ದೃಷ್ಟಿಯಿಂದಲೂ ಬೂಸಾ ಸಾಹಿತ್ಯವಲ್ಲದ ಸಾಹಿತ್ಯ ಸ್ವಲ್ಪ ಹುಟ್ಟಿದೆ. ನನ್ನ ಬರವಣಿಗೆಯಲ್ಲಿಯೆ ಅವರ ದೃಷ್ಟಿಯಿಂದಲೂ ಬರಿಯ ಬೂಸಾ ಅಲ್ಲದ ಸಾಹಿತ್ಯ ಬಂದಿದೆ: ‘ಜಲಗಾರ’ ನಾಟಕದಲ್ಲಿ, ‘ಶೂದ್ರತಪಸ್ವಿ’ಯಲ್ಲಿ, ಕಾನೂರು ಹೆಗ್ಗಡಿತಿಯಲ್ಲಿ, ಮಲೆಗಳಲ್ಲಿ ಮದುಮಗಳಲ್ಲಿ, ಕೆಲವು ಸಣ್ಣ ಕತೆಗಳಲ್ಲಿ, ಅನೇಕ ಕವನಗಳಲ್ಲಿ. ಬಸವಲಿಂಗಪ್ಪನವರೂ ಹೇಳಲಾರದಂತಹದ್ದೂ ಇನ್ನೂ ನೂರು ವರ್ಷದ ಆಚೆಗೆ ಹೋಗಿದೆ. ಗೊತ್ತಾಯಿತೆ? ಈಗ ನಾನು ಓದಿದೆನಲ್ಲಾ ಅದು. ಅಷ್ಟೆ ಅಲ್ಲ ಇನ್ನೊಂದು ಪದ್ಯವೂ ಇದೆ: ‘ಇಂದಿನ ದೇವರು’ ಎಂದು.

“ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ.”

ಎಂದು ಪ್ರಾರಂಭವಾಗುತ್ತದೆ. ಅಲ್ಲಿ ಒಂದು ಕಡೆಯಲ್ಲಿ-

“ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು”

ಅಂತ ಬರುತ್ತದೆ. ಪಟ ಎಸೆಯಿರಿ ಅನ್ನುವ ಇದಕ್ಕಿಂತಲೂ ಭಯಂಕರವಾಗಿ ಇದೆ ಅದು, “ನೂರು ದೇವರನೆಲ್ಲ ನೂಕಾಚೆದೂರ.” ಆದರೆ ಏನು ಮಾಡುವುದು? ಹಿಂದೆ ಆ ಪದ್ಯ ‘ಕಲ್ಕಿ’ ಮುಂತಾದುವನ್ನೆಲ್ಲ ಬರೆದಾಗ ವಿದ್ಯಾರ್ಥಿಗಳು, ಅವರು ಇವರು ಎಲ್ಲೆಲ್ಲಿ ನೋಡಿದರೂ ಅವುಗಳನ್ನು ಹೇಳುತ್ತಾ ಇದ್ದರು, ಘೋಷಿಸುತ್ತಾ ಇದ್ದರು. ಈಗೇನು? ಆ ಕವನಗಳನ್ನು ಯಾರೂ ವಾಚನಮಾಡುವುದಿಲ್ಲ. ಕೆಲವನ್ನು-ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಕಾರಕವಲ್ಲದ ಕೆಲವನ್ನು ಆಕಾಶವಾಣಿಯಲ್ಲಿ ಮಾತ್ರ ಸೋಬಾನೆ ಹಾಡು ಹಾಡಿಸುತ್ತಾರೆ. ಪುರಂದರದಾಸರ ಕೀರ್ತನೆ ಹಾಡಿದ ಹಾಗೆ ಹಾಡುತ್ತಾರೆ. ಈ ತರದ ಕ್ರಾಂತಿಕಾರಕ ವೀರಸಾಹಿತ್ಯವನ್ನು ಯಾರೂ ಈಗ ವೇದಿಕೆಗಳಿಂದ ಘೋಷಿಸುವುದಿಲ್ಲ. ಅವೆಲ್ಲ ಸತ್ತೇಹೋಗಿಬಿಟ್ಟಿವೆ, ಅವರಿಗೆ. ಮೊನ್ನೆ ನೋಡ್ತೀನಿ, “ನೂರುದೇವರನೆಲ್ಲ ನೂಕಾಚೆದೂರ” ಹಾಡಿಸುತ್ತಾ ಇದ್ದಾರೆ ಆಕಾಶವಾಣಿಯಲ್ಲಿ. ಆದರೆ ಯಾವ ತರವಾಗಿ? ಪುರಂದರದಾಸರ ದೈನ್ಯದ ಭಕ್ತಿಗೀತೆ ಇದೆಯಲ್ಲಾ ಆ ತರಾ. ಅದನ್ನು ನನಗೆ ಹೇಳೋಕು ಬರೋದಿಲ್ಲ ಯಾವ ಥರಾ ಹಾಡುತ್ತಾರೆ ಅಂತ. ಅಸಹ್ಯವೋ ಅಸಹ್ಯ. ಅದರಲ್ಲಿಯೂ ಏನು ಮಾಡಿದ್ದಾರೆ? ನೀವು ರೇಡಿಯೋ ವಿಚಾರ ಏನೋ ಹೇಳುತ್ತಾ ಇದ್ದಿರಿ. ಈ ರೇಡಿಯೋ ಕೂಡ ಈ ವಿಚಾರದಲ್ಲಿ ಈ ಹಳದಿ ಪತ್ರಿಕೆಗಳ ವರ್ಗಕ್ಕೆ ಸೇರುತ್ತದೆ. ಅದಿರಲಿ ಅದರಲ್ಲಿ ಏನು ಮಾಡಿದ್ದಾರೆ ಗೊತ್ತೆ? ‘ನೂರುದೇವರನೆಲ್ಲ ನೂಕಾಚೆ ದೂರ’ ಅನ್ನುವ ಹೊತ್ತಿಗೆ ಕಾರ್ಯಕ್ರಮ ನಿರ್ಣಯ ಮಾಡುವವನಿಗೆ ಆಗಲೆ ಎದೆ ಬಡಬಡಾ ಹೊಡೆಯುವುದಕ್ಕೆ ಶುರುವಾಗುತ್ತದೆ. ಅಯ್ಯೋ ನೂರು ದೇವರನೆಲ್ಲನೂಕಾಚೆ ದೂರ ಎಂದುಬಿಟ್ಟರೆ ಏನಾಗಿಬಿಡುತ್ತದೆಯೋ ಅಂತ. ಅದಕ್ಕೋಸ್ಕರ ಅದರ ಬಲವನ್ನು ಆದಷ್ಟು ಕಡಮೆ ಮಾಡಲು ಪುರಂದರದಾಸರ ಕೀರ್ತನೆ ಹಾಡಿದ ಹಾಗೆ ಹಾಡಿದರೆ ಪರವಾಯಿಲ್ಲ ಅಂತ ಹಾಗೆ ಹಾಡಿಸುತ್ತಾರೆ. ಅದು ಎಂಥದ್ದೋ ನನಗೆ ಬರುವುದಿಲ್ಲ ರಾಗ. ಗೊತ್ತಾಗಿದ್ದರೆ ಹೇಳುತ್ತಾ ಇದ್ದೆ. ಅದನ್ನು ಹೇಗೆ ಹೇಳಿದರು ಅಂತ “ನೂರು ದೇವರನೆಲ್ಲ…………” (ಹಾಡುವ ಅನುಕರಣೆ) ಅಂತ ಹೇಳ್ಬಿಟ್ಟು ತಾಳಮದ್ದಳೆ ಎಲ್ಲಾ ಹಾಕಿಕೊಂಡು ಹಾಡಿದರು. ಆಮೇಲೆ ಏನು ಮಾಡಿದ್ದಾರೆ? “ಸತ್ತಕಲ್ಗಳ ಮುಂದೆ ಅತ್ತುಕರೆದುದು ಸಾಕು” ಇಂಥ ಪಂಕ್ತಿ ಪದ್ಯಗಳನ್ನೆಲ್ಲ ಬಿಟ್ಟು, ಅಲ್ಲೊಂದು ಎರಡು ಪದ್ಯಗಳು, ಸ್ವಲ್ಪ ಜೀವವಿಲ್ಲದ ಪದ್ಯಗಳಿವೆ. ಅವನ್ನೇ ತೆಗೆದುಕೊಂಡು ಹಾಡಿ ಮುಗಿಸಿದರು. ನೋಡಿ; ಇವನ್ನೆಲ್ಲ ಸ್ವಾತಂತ್ರ್ಯಪೂರ್ವದಲ್ಲಿ ಆಗ ಹೇಳುತ್ತಾ ಇದ್ದರು. ಹಾಡುತ್ತಾ ಇರಲಿಲ್ಲ, ವಾಚನ ಮಾಡುತ್ತಿದ್ದರು. ಈ ‘ಪಾಂಚಜನ್ಯ’, ‘ಕಲ್ಕಿ’, ‘ರಕ್ತಧುನಿ’ ಇಂಥವುಗಳನ್ನೆಲ್ಲ. ಅವೆಲ್ಲ ಸ್ವಲ್ಪ ಹೆಚ್ಚುಕಡಿಮೆ ಸೈನಿಕ ಪ್ರವೃತ್ತಿಯ ಹಾಡುಗಳು. ಅವಕ್ಕೆ ‘ಹಾಡು ಎಂಬ ಹೆಸರೂ ಒಪ್ಪುವುದಿಲ್ಲ. ಅವು ವೀರಗೀತೆಗಳು, ಅವನ್ನೆಲ್ಲ ಈಗ ಬಿಟ್ಟೇಬಿಟ್ಟಿದ್ದಾರೆ. ಈಗ ಯಾರೂ ಪಠಿಸುವುದಿಲ್ಲ. ನಾನು ಹೇಳಿದೆನಲ್ಲ, ಹಾಡುವ ಕೆಲವು ಭಕ್ತಿಗೀತೆಗಳನ್ನು ಆಕಾಶವಾಣಿಯಲ್ಲಿ ಒಂದಿಷ್ಟು ಸೋಬಾನೆ ಹಾಡಿದ ಹಾಗೆ ರಾಗಹಾಕಿ ಹಾಡುತ್ತಾರೆ. ಈ ರೀತಿ ಭಕ್ತಿಗೀತೆಗಳಿಗೆ ಅಧ್ಯಾತ್ಮಗೀತೆಗಳಿಗೆ ಬೇಕಾದರೆ ಸರಿಹೋಗುತ್ತದೆ. ಆದರೆ ವೀರಗೀತೆಗಳಿಗೆ ಕ್ರಾಂತಿ ಕವನಗಳಿಗೆ ಸರಿಹೋಗುವುದಿಲ್ಲ. ಇಂಥದಕ್ಕೆಲ್ಲ ಸಂಗೀತ ಹಾಕಬಾರದು.

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಬಾರ!

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೆ ದಾಸ್ಯವಾಯ್ತು.

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು.

ನಿದ್ದೆಮಾಡುತ್ತಿಹರು ಹಲವು ದೇವತೆಗಳೆಲ್ಲ;
ಬಿದ್ದವರು ಕಲ್ಲಾಗಿ ಕೆಲವರಿಹರು;
ಕ್ಲೀಬತನದಲಿ ಮರತೊ ತಮ್ಮ ಪೌರುಷವನೆಲ್ಲ
ಸತ್ತೆ ಹೋದಂತಿಹರು ಮತ್ತುಳಿದಮರರು.

ಅವರ ಗುಡಿ ಹಾಳಾಯ್ತು, ಅವರ ನುಡಿ ಮಡಿದು ಹೋಯ್ತು;
ಅವರ ನೆಮ್ಮಿದ ನಮಗೆ ಬೀಳುಗತಿಯಾಯ್ತು!
ಮುಂದಿವಳನಾರಾಧಿಸುವ ಶಕ್ತಿಯಾರ್ಜಿಸುವ:
ಒಂದು ಶತಮಾನವನು ಒಂದೆದಿನ ಜೈಸುವ!

ಸತ್ತಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು!
ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು
ಚಳಿಯ ಮಳೆಯಲಿ ನವೆವ ತಾಯ್ಗೆ ಹಾಕು.

ಭಾರತಿಯೆ ನಮಗಿಂದು ಜೀವನದ ದೇವತೆಯು
ವಿಶ್ವರೂಪಿಣಿಯವಳು ವಿಶ್ವಮುಖಿಯ್ಯೆ;
ನಮ್ಮೆಲ್ಲರಂಗಗಳ ನಮ್ಮಂಬೆಯಂಗವೈ
ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ.

ಇಂದೊ ನಾಳೆಯೊ ದಾಸನೀಶನಾಗಲೆಬೇಕು
ಎಂದಿಂದೆ ಎದ್ದೇಳಿ; ನಾಳೆಯೆನೆ ಹೋಕು.
ನಾವೆ ದೇವತೆಗಳೈ; ಭಾರತವೆ ಸ್ವರ್ಗವೈ;
ಭಾರತಾಂಬೆಯೆ ನಮಗೆ ದೇವಿಯೈ ಜನನಿ!

ಇಂತಹ ಭಯಂಕರವಾದ ಪದ್ಯಗಳನ್ನೆಲ್ಲಾ ಆಗ ಬ್ರಿಟಿಷ್ ಸರ್ಕಾರ ಇದ್ದಾಗ ವಿದ್ಯಾರ್ಥಿಗಳೂ ನಾವೂ ಎಲ್ಲೆಲ್ಲಿಯೂ ಹಾಡುತ್ತ ಇದ್ದೆವು. ಈಗ ಅವನ್ನು ರೇಡಿಯೋ ಆಕಾಶವಾಣಿಯಲ್ಲಿ ಹಾಡಲು ಹೆದರುತ್ತಾರೆ. ನಮ್ಮ ಮನೆಗೆ ಬಂದು ನನ್ನ ಹತ್ತಿರ ಹದಿನೈದು ನಿಮಿಷದ ಒಂದು ರೆಕಾರ್ಡ್ ಮಾಡಿಕೊಂಡು ಹೋದರು. ಅದರಲ್ಲಿ ಯಾರಿಗೂ ತೊಂದರೆ ಕೊಡದಂತಹ ಸೋಬಾನೆ ಮಟ್ಟಿನ ಹಾಡುಗಳನ್ನು ಮಾತ್ರ ರೆಕಾರ್ಡ್ ಮಾಡಿ ಹಾಕಿದರು. ಬಾಕಿಯನ್ನು ಮುಂದಕ್ಕೆ ಹಾಕಲಿಲ್ಲ ‘ಏಕೆ ಹಾಕಲಿಲ್ಲ,’ ಅಂತ ಕೇಳಿದರೆ ಅದು ‘VOICE PRESERVATION’ ಗೋಸ್ಕರ ಡೆಲ್ಲಿಗೆ ಕಳಿಸಿದ್ದೇವೆ ಅಂತ ಹೇಳಿದರು. ಇಲ್ಲಿ ಹಾಕಿಬಿಟ್ಟು ಆಮೇಲೆ ಕಳಿಸಬಹುದಿತ್ತು. ಇಲ್ಲ. ಏಕೆಂದರೆ ಅದರಲ್ಲಿ “ಸಾಕು ಈ ಬಲಾತ್ಕಾರ” ಎಂಬ ಇಂಗ್ಲಿಷ್ ಪೂತನಿಯ ವಿಚಾರವಿತ್ತು. ಅಯ್ಯೊ ನೆಹರೂ ಇದ್ದ ಕಾಲದಲ್ಲಿ ಇಂಗ್ಲಿಷ್ ವಿರುದ್ಧವಾಗಿ ಹೇಳಿದರೆ ದೇವರೇ ಗತಿ; ಏಕೆಂದರೆ ನೆಹರೂ ಈ ವಿಚಾರಗಳಲ್ಲಿ ದೇಶಕ್ಕೆ ಭಯಂಕರವಾದ ಅಪಚಾರಗಳನ್ನು ಮಾಡಿಹೋಗಿದ್ದಾರೆ. ಆದ್ದರಿಂದ ಹಾಕುವುದಿಲ್ಲ. ಹೀಗೆ ರೇಡಿಯೋಗಳು ಕೂಡ ಈ ತರಹ ಎಲ್ಲೂ ಇಂತಹ ಕವನಗಳನ್ನು ಹಾಡಿಸುವುದಿಲ್ಲ. ಅದರ ಜೊತೆಗೆ ನಮ್ಮ ತರುಣರು ಇದ್ದಾರಲ್ಲ, ಅವರೂ ಒಬ್ಬರಿಗೂ ಅರ್ಥವಾಗದ Symbolics ಅಂತ ನವ್ಯಕವಿತೆ ಅಂತ ಬರೆಯುತ್ತಾರೆ. ಅವನ್ನು ಯಾರೂ ಹಾಡುವುದಿಲ್ಲ. ಹಿಂದೆ ನಾವು ಸಾವಿರಾರು ಜನರನ್ನು ಕೂರಿಸಿ ಬಿಟ್ಟು ಮೂರು ನಾಲ್ಕು ಗಂಟೆಗಳ ಕಾಲ ಇಂತಹವುಗಳನ್ನು ಹೇಳುತ್ತಾ ಇದ್ದರೆ, ಸಾಲದು ಇನ್ನೂ ಅಷ್ಟು ಹೇಳಿ, ಇನ್ನೂ ಅಷ್ಟು ಹೇಳಿ ಅಂತ ಕಾಫಿ ತರಿಸಿಕೊಟ್ಟು ಕೇಳುತ್ತಿದ್ದರು. ಈಗ ಇವರು ಹೇಳಲಿ. ಇವರ ಗುಂಪಿನಲ್ಲಿ ಕೂತ್ಕೊಂಡುಬಿಟ್ಟು ಇದು ಅವನದು ಚೆನ್ನಾಗಿದೆ, ಇವನದು ಚೆನ್ನಾಗಿದೆ ಅಂತ ಹೇಳುತ್ತಾರೆಯೆ ಹೊರತು ಖಂಡಿತಾ ಅದು ಜನಸಾಮಾನ್ಯಕ್ಕೆ ಹಿಡಿಸುವುದಿಲ್ಲ. ಅದರಿಂದ ಜೀವನಕ್ಕೆ ಪ್ರಯೋಜನವೂ ಇಲ್ಲ. All art is useless ಎಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದು.

ಇಲ್ಲಿ ಕಲೆಯ ವಿಚಾರವಾಗಿ ಮಾತನಾಡುತ್ತಾ ಒಂದು ಸೂಚನೆಯನ್ನು ಕೊಡಬೇಕು. ಏನೆಂದರೆ ಯಾವ ಆಭರಣವನ್ನೂ ಬಿಸಾಡದೆ ಕರಗಿಸಿ, ನಾವು ನಮಗೆ ಬೇಕಾದಂತೆ ಮಾಡಿಕೊಳ್ಳುತ್ತೇವೆಯೊ ಹಾಗೆಯೆ ಉತ್ತಮ ಕಾವ್ಯಗಳನ್ನು ತಿರಸ್ಕರಿಸದೆ ನಮಗೆ ಒಪ್ಪುವ ರೀತಿಗೆ ಪರಿವರ್ತಿಸಿಕೊಳ್ಳಬೇಕು. ಈಗ ಕುಮಾರವ್ಯಾಸ ಇದ್ದಾನೆ. ಅವನು ಬ್ರಾಹ್ಮಣ. ಅವನು ಬ್ರಾಹ್ಮಣ ಸಂಸ್ಕೃತಿಯನ್ನು ಹೊರತು ಬೇರೆ ಬರೆಯಲಾರ. ಹಾಗೆಂದು ಕುಮಾರವ್ಯಾಸ ಬರೆದದ್ದೆಲ್ಲ ಬೇಡ ಅಂತ ಹೇಳಿಬಿಟ್ಟರೆ ಶುದ್ಧ ಅವಿವೇಕವಾಗುತ್ತದೆ. ಆಗ ಏನು ಮಾಡಬೇಕಾಗುತ್ತದೆ? ನಾನು ಅದಕ್ಕೋಸ್ಕರವೆ ಪ್ರತಿಕೃತಿ ಮತ್ತು ಪ್ರತಿಮಾ ಸಿದ್ಧಾಂತವನ್ನು ತಂದೆ. ಹೇಗಾದರೂ ಮಾಡಿ ಈ ಮಹಾಕಾವ್ಯಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿಕೊಳ್ಳಬೇಕು. ಆದ್ದರಿಂದ ಅವನ್ನು ನೀವು ಪ್ರತಿಕೃತಿ ದೃಷ್ಟಿಯಿಂದ ಓದಬೇಡಿ; ಪ್ರತಿಮಾ ದೃಷ್ಟಿಯಿಂದ ಓದಿ, ಮತ್ತು ದರ್ಶನ ಧ್ವನಿಯಿಂದ ವ್ಯಾಖ್ಯಾನಮಾಡಿ, ಬೇಡವಾದುದನ್ನು ಬಿಟ್ಟುಬಿಟ್ಟು. ಒಳ್ಳೆಯ ಸೊಗಸಾದ ಕಾವ್ಯವನ್ನು ತಿರಸ್ಕರಿಸಬೇಡಿ. ಬರಹಗಾರರು ಬೇರೆ ನೀವು, ವ್ಯಾಖ್ಯಾನ ಮಾಡುವವರಿದ್ದೀರಿ, ಮೇಷ್ಟ್ರುಗಳಿದ್ದೀರಿ, ಉಪನ್ಯಾಸ ಮಾಡುತ್ತೀರಿ, ಪಾಠ ಹೇಳುತ್ತೀರಿ. ಯುದ್ಧ ಮಾಡುವಾಗ ದಿಗ್ದಂತಿಗಳ ವಿಚಾರ ಬರುತ್ತದೆ, ಆದಿಶೇಷನ ವಿಚಾರ ಬರುತ್ತದೆ. ಆದಿಶೇಷನ ತಲೆ ಜರಿದುಹೋಯಿತು ಅಂತ ಬರುತ್ತದೆ. ಓದುವವರಿಗೆ ಗೊತ್ತು, ಭೂಮಿ ಇರುವುದು ಸೂರ್ಯನ ಆಕರ್ಷಣ ಶಕ್ತಿಯಿಂದ, ದಿಗ್ದಂತಿಗಳು ಇಲ್ಲ, ಆದಿಶೇಷನು ಸುಳ್ಳು ಅಂತ ಅವರಿಗೆ ಗೊತ್ತು. ಇಂದು “A child knows it” ಗೊತ್ತಾಯಿತೆ? ಆದ್ದರಿಂದ ಇವನ್ನೆಲ್ಲ ಹೇಗೆ ಪಾಠ ಹೇಳಬೇಕು? ಅಂತ ಕೇಳಿದರೆ, ಅವುಗಳನ್ನು ರೂಪಕವಾಗಿ, ಪ್ರತಿಮೆಯಾಗಿ ಉಪಯೋಗಿಸಿಕೊಂಡು ಅದರಿಂದ ಬರುವ ರಸಾನುಭವವನ್ನು, ಶಕ್ತಿಯನ್ನು ಹೇಗೆ ಅರ್ಜಿಸಿಕೊಳ್ಳಬೇಕು ಅನ್ನುವುದನ್ನು ನೀವು ತಿಳಿದುಕೊಳ್ಳಬೇಕು, ಹೇಳಿಕೊಡಬೇಕು. ಆದ್ದರಿಂದ ಆಭರಣಗಳನ್ನು ಕರಗಿಸಿ ಹೇಗೆ ಬೇರೆ ಮಾಡಿಕೊಳ್ಳುತ್ತೇವೆಯೋ ಹಾಗೆಯೆ ಹಳೆಯದನ್ನು ವ್ಯಾಖ್ಯಾನ ಮಾಡುವಾಗ ಹೊಸದೃಷ್ಟಿಯಿಂದ ವ್ಯಾಖ್ಯಾನ ಮಾಡಬೇಕಾಗಿ ಬರುತ್ತದೆ. ಆ ಉತ್ತಮವಾದ ರಸಘಟ್ಟಗಳನ್ನು ನಾವು ಇಟ್ಟುಕೊಳ್ಳಬೇಕಾಗಿ ಬರುತ್ತದೆ.


[1]       ಭಗವದ್ಗೀತೆಯನ್ನು ಭಗವಂತನ ವಾಣಿ ಎಂದು ಗೌರವಿಸುವ ಈ ಆಚಾರ್ಯರಿಗೆ “ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ” “ನನ್ನ ಒಂದು ಸನಾತನ ಅಂಶವೇ ಜೀವ ಆಗಿದೆ” ಎಂದು ಜೀವರುಗಳ ದಿವ್ಯತ್ವವನ್ನು ಸಾರಿದ ಶ್ರೀಕೃಷ್ಣವಾಕ್ಕಿನಲ್ಲಿಯೂ ಶ್ರದ್ಧೆಯಿಲ್ಲ.

[2]       ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೊ ಭಾಷಣದಲ್ಲಿ ಏನು ಹೇಳಿದ್ದಾರೆ ನೋಡಿ: “ನೇವೆಲ್ಲರೂ ಅಮೃತ ಪುತ್ರರು. ಅಮೃತ ಪುತ್ರರಿರಾ, ಹಿಂದುವು ನಿಮ್ಮನ್ನೆಂದಿಗೂ ಪಾಪಿಗಳೆಂದು ಕರೆಯನು. (ಪಾಪ! ಅವರಿಗೆ ಮಧ್ವಾಚಾರ್ಯರ ಈ ತತ್ವ ಗೊತ್ತಿರಲಿಕ್ಕಿಲ್ಲ!) ನೀವೆಲ್ಲರೂ ಈಶ್ವರನ ಶಿಶುಗಳು, ಆನಂದಾಂಶರು, ನಿತ್ಯ ಪವಿತ್ರರು, ನಿತ್ಯ ಮುಕ್ತರು. ಮಾನವನನ್ನು ಪಾಪಿಯೆಂದು ಕರೆಯುವುದಕ್ಕಿಂತಲೂ ಬೇರೊಂದು ಮಹಾಪಾಪವಿಲ್ಲ. ಹಾಗೆ ಕರೆಯುವುದು ಮನುಷ್ಯತ್ವಕ್ಕೇ ಒಂದು ಮಹಾನಿಂದೆ.”

[3]       “I am afraid it must be confessed that Kanarese writers. highly skilful though they are in the manipulation of their language, and very pleasing to listen to in the original, have as yet contributed extremely little to the stock of the world’s knowledge and inspiration….there is little of original and imperishable thought on the questions of perennial interest to man…….” (A History of Kanarese Literature, P.108) A.D. 1914 — E.P.Rice