[ತಾ|| ೨೦-೪-೧೯೭೪ ಶನಿವಾರ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಮರಣೀಯ ದಿನ. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವು ೫೦೦೦ ವರ್ಷಗಳಿಂದ ನಡೆದು ಬಂದಿರುವ ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸಾಹಿತ್ಯ, ಕಲೆ, ವೃತ್ತಪತ್ರಿಕೆ, ರೇಡಿಯೊ, ಸಿನಿಮಾ ಜನಸಾಮಾನ್ಯವಾಗಬೇಕು, ಬೌದ್ಧಿಕ ವಿಕೇಂದ್ರೀಕರಣವಾಗಬೇಕೆಂದು ಹೋರಾಡಲು ಪಣತೊಟ್ಟ ದಿನ. ಕರ್ನಾಟಕದ ಬದುಕಿನಲ್ಲಿ ಕ್ರಾಂತಿಯ ಕಹಳೆಯನ್ನೂದಿದ ದಿನ. ಅಂದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ ಕಿಕ್ಕಿರಿದು ತುಂಬಿತ್ತು. ಕ್ರಾಂತಿ ಸಭೆಯನ್ನು ಉದ್ಘಾಟಿಸುತ್ತಾ ರಾಷ್ಟ್ರಕವಿ ಕುವೆಂಪು ಈ ರೀತಿ ನುಡಿದರು.]

ಎಲ್ಲರಿಗೂ ನಮಸ್ಕಾರ.

ಶ್ರೀಮಾನ್ ಚಂದ್ರಶೇಖರ ಪಾಟೀಲರು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಧ್ಯೇಯಗಳನ್ನು ಕುರಿತು ಮಾತನಾಡಿದ್ದಾರೆ. ನಾನು ಕಾರ್ಯರಂಗದಿಂದ ನಿವೃತ್ತನಾಗಿ ಮೂಲೆ ಸೇರಿದವನು. ನನ್ನನ್ನು ಏಕೆ ಈ ಒಕ್ಕೂಟದ ಉದ್ಘಾಟನೆಗೆ ಕರೆದರೋ ನಾನರಿಯೆ. ಆದರೆ ಆ ಯುವಕ ಮತ್ತು ತರುಣ ವರ್ಗದವರು ನಮ್ಮ ಮನೆಗೆ ಬಂದು ನನ್ನೊಡನೆ ಅನೇಕ ವಿಚಾರಗಳನ್ನು ಮಾತನಾಡಿ ಯಾವುದೋ ಒಂದು ಮಹದುದ್ದೇಶದಿಂದ ನಾವು ಈ ಒಕ್ಕೂಟವನ್ನು ಸ್ಥಾಪಿಸುತ್ತಿದ್ದೇವೆ, ಅದನ್ನು ನೀವು ಉದ್ಘಾಟಿಸಬೇಕೆಂದು ಕೇಳಿದನು. ನಾನು ಒಪ್ಪಿಕೊಂಡೆ.

ಆದರೆ ನಾನು ಅವರಿಗೆ ಸೂಚಕವಾಗಿ ಹೇಳಿದ್ದೆ. ನಾನು ನಿಮಗೆ ಆಪ್ಯಾಯಮಾನವಾಗುವಂತೆಯೆ ಮಾತನಾಡುತ್ತೇನೆ ಎಂದು ಭಾವಿಸಬೇಡಿ ಎಂದು. ಅಲ್ಲಿ ನೆರೆದಿದ್ದವರೆಲ್ಲ ಸ್ವಲ್ಪ ರೇಗಿದಂತೆ ತೋರಿತು. ಯಾವುದೋ ಒಂದು ಅನ್ಯಾಯ ಆಗಿದೆ. ಅದನ್ನು ಪ್ರತಿಭಟಿಸಬೇಕು ಎಂಬಂತೆ ಮಾತನಾಡಿದರು. ಈ ತರಹದ ಪ್ರತಿಭಟನೆ, ಕ್ರಾಂತಿ, ಜಗಜ್ಜೀವನದಲ್ಲಿ ಬಹುಶಃ ಆದಿಕಾಲದಿಂದಲೂ ನಡೀತಾ ನಡೀತಾ ಇದೆ. ಈ ಕ್ಷಣದಲ್ಲಿಯೂ, ಈ ದೇಶಕ್ಕಿಂತಲೂ ಅಧಿಕವಾಗಿ, ಬೇರೆ ದೇಶಗಳಲ್ಲಿ ತರತರವಾದ ಕ್ರಾಂತಿಗಳು-ಸಾಹಿತ್ಯ ಕ್ರಾಂತಿ, ಕಲೆಯ ಕ್ರಾಂತಿ, ರಾಜಕೀಯ ಕ್ರಾಂತಿ ನಾನಾ ರೀತಿಯ ಕ್ರಾಂತಿ ನಡೀತಾ ಇವೆ. ಹಿಂಸಾಮಯವಾಗಿಯೂ ಕೆಲವು ನಡೀತಾ ಇವೆ.

ನಾನು ಏಕೆ ಇದಕ್ಕೆ ಒಪ್ಪಿಕೊಂಡೆ? ನನ್ನ ದೃಷ್ಟಿಯ ಸ್ವರೂಪ ಏನು? ಎನ್ನುವುದನ್ನು ನಾನು ಒಂದೆರಡು ಮಾತುಗಳಲ್ಲಿ ಪರಿಚಯ ಮಾಡಿಕೊಟ್ಟು ಮುಂದುವರಿಯಬೇಕಾಗಿದೆ. ಈಗತಾನೆ ಮಾತನಾಡುತ್ತಾ ಇವರು-ಅವರ ಆಹ್ವಾನಪತ್ರಿಕೆಯಲ್ಲಯೇ ಪ್ರಾರಂಭ ಮಾಡಿದ್ದಾರೆ: “ಸಾವಿರಾರು ವರ್ಷಗಳಿಂದ ಬೌದ್ಧಿಕ ದಬ್ಬಾಳಿಕೆ ನಡೆಸಿ, ಜನತೆಗೆ ತಿಳಿಯದ ಭಾಷೆಯ ಮೂಲಕ, ಆಡಳಿತಸೂತ್ರಗಳ ಮೂಲಕ, ನಮ್ಮ ಜನರನ್ನು ಮೂಕರನ್ನಾಗಿಸಿದ ಉಚ್ಚ ವರ್ಗದ ಮತ್ತು ವರ್ಣಗಳ ಹತೋಟಿಯಿಂದ…………” ಅಂತಾ ಪ್ರಾರಂಭ ಮಾಡುತ್ತಾರೆ. ಇದು ಇತಿಹಾಸಕ್ಕೆ ಬಹಳ ಸುಲಭವಾಗಿ ವ್ಯಾಖ್ಯಾನ ಮಾಡುವ ರೀತಿ. ಈ ವ್ಯಾಖ್ಯಾನ ತುಂಬ ಸರಳವಾಗಿ ಬಿಡುತ್ತದೆ. ನಡೆದದ್ದೇನೋ ಇರಬಹುದು. ಆದರೆ ಇತಿಹಾಸಕಾರನಾದವನು ಇದು ಹೇಗೆ ನಡೆಯಿತು? ಏಕೆ ನಡೆಯಿತು? ಎನ್ನುವುದನ್ನೂ ಕುರಿತು ಆಲೋಚಿಸುತ್ತಾನೆ. ಯಾವುದನ್ನು ನೀವು ಬೌದ್ಧಿಕ ದಬ್ಬಾಳಿಕೆ ಎಂದು ಕರೆಯುತ್ತೀರೋ ಅದನ್ನೆ ಆ ದಬ್ಬಾಳಿಕೆ ನಡೆಸಿದವರು, ಅಥವಾ ಯಾರು ನಡೆಸಿದರು ಎಂದು ನೀವು ಊಹಿಸುತ್ತಿರೋ ಅವರು, ಇದಕ್ಕೆ ಮಾಡುವ ವ್ಯಾಖ್ಯಾನ ಬೇರೆ ರೀತಿಯಾಗಿರಬಹುದು: “ನೀವೆಲ್ಲರೂ ಅಜ್ಞಾನಿಗಳಾಗಿದ್ದಿರಿ. ಒರಟರಾಗಿದ್ದಿರಿ, ಅನಾಗರಿಕರಾಗಿದ್ದಿರಿ. ನಾವು ನಿಮಗೆ ನಾಗರಿಕತೆ ತಂದುಕೊಟ್ಟೆವು. ನಿಮ್ಮನ್ನು ನಯಗೊಳಿಸಿದೆವು. ನಿಮಗೆ ದೇವರು ಧರ್ಮ ಇದರ ವಿಚಾರದಲ್ಲಿ ಇದ್ದಂತಹ ಕಾಡು ಭಾವನೆಗಳನ್ನು ತೆಗೆದು ನಿಮ್ಮನ್ನು ಉತ್ತಮ ಸ್ಥಿತಿಗೆ ಏರಿಸಿದೆವು. ಅದಕ್ಕಾಗಿ ಬಹಳ ಪ್ರಯತ್ನ ಮಾಡಿದೆವು. ಆದರೆ ಅದಕ್ಕೆ ಉಪಯೋಗಿಸಿದ ಭಾಷೆ, ಆಗ ನಮ್ಮ ಭಾಷೆ ಸಂಸ್ಕೃತ ಭಾಷೆಯಾಗಿದ್ದುದರಿಂದ ಅದನ್ನೆ ಉಪಯೋಗಿಸಿದೆವು. ತರುವಾಯ ಆಯಾ ದೇಶಭಾಷೆಗಳಲ್ಲಿಯೂ ಸಹ ಆಯಾ ಭಾವನೆಗಳನ್ನೆಲ್ಲಾ ಹರಡಿದೆವು. ಅದನ್ನು ನೀವು ಸ್ವೀಕರಿಸಿ ಒಪ್ಪಿಕೊಂಡಿದ್ದೀರಿ”-ಎಂದು ತಿಳಿದು ಅವರು ವ್ಯಾಖ್ಯಾನ ಮಾಡಬಹುದು. ಆದ್ದರಿಂದ, ನಾನು ಏತಕ್ಕಾಗಿ ಒಪ್ಪಿಕೊಂಡೆ ಅಂದರೆ, ಒಂದು ಚಳವಳಿಯ ರೂಪದಿಂದ, ಉದ್ರೇಕದಿಂದ ಯಾವುದನ್ನಾದರೂ ಮಾಡಲು ಹೊರಟರೆ ಅದು ಶಾಶ್ವತವಾಗಿ ಸಫಲವಾಗುವುದು ಕಷ್ಟವಾಗುತ್ತದೆ. ಅದಕ್ಕೇ ನಾನು ಹೇಳಿದೆ, ನಾನು ಹೇಳುವುದೆಲ್ಲವೂ ನಿಮಗೆ ರುಚಿಸುತ್ತದೆಯೊ ಇಲ್ಲವೊ ಎಂದು. ಆದರೆ ಇಲ್ಲಿ ನಾನು ಯಾವ ಪೂರ್ವ ಆಗ್ರಹ ಪರನಾಗದೆ ನಿರ್‌ದ್ವೇಷನಾಗಿ ಮಾತನಾಡಲು ಬಂದಿದ್ದೇನೆ.

ಬೇರೆ ದೇಶಗಳಲ್ಲಾದರೆ ವರ್ಗಗಳ ಹೆಸರನ್ನು ಹೇಳುತ್ತಾರೆ. ಬೂರ್ಷ್ವಾ ಅಂತ ಹೇಳುತ್ತಾರೆ, ಪ್ರೊಲಿಟೇರಿಯಟ್ ಅಂತ ಹೇಳುತ್ತಾರೆ. ಆದರೆ ನಮ್ಮಲ್ಲಿ ಬೂರ್ಷ್ವಾ ಪ್ರೊಲಿಟೇರಿಯಟ್ ವಿಭಜನೆಗೆ ಬದಲಾಗಿ ನಾವು ಜಾತಿಗಳನ್ನು ಹೇಳಬೇಕಾಗಿದೆ. ಈ ರೀತಿ ನಡೆದುಕೊಂಡು ಬಂದಿದೆ. ಆ ದೇಶಗಳಲ್ಲಿ “The Priest” “The Priestly Class” ಎಂದುಬಿಟ್ಟರು. ಅಂದರೆ ಒಂದು ಪುರೋಹಿತ ವರ್ಗ, ಪುರೋಹಿತಶಾಹಿ, ಎನ್ನುವ ಮಾತನ್ನು ಉಪಯೋಗಿಸಿದರು. ನಮ್ಮ ದೇಶದಲ್ಲಿ ಪುರೋಹಿತಶಾಹಿ, ಪುರೋಹಿತವರ್ಗ ಎಂದರೆ ಸಾಮಾನ್ಯವಾಗಿ ಬ್ರಾಹ್ಮಣವರ್ಗ ಅಂತ. ಆದರೆ ವಾಸ್ತವವಾಗಿ ಪುರೋಹಿತಶಾಹಿ, ಪುರೋಹಿತವರ್ಗ ಎಂದರೆ ಬರೀ ಬ್ರಾಹ್ಮಣವರ್ಗವಲ್ಲ. ಹಿಂದೂಗಳಲ್ಲಿ ಬ್ರಾಹ್ಮಣವರ್ಗವಾಗುತ್ತದೆ. ಕ್ರೈಸ್ತರಲ್ಲೂ ಪುರೋಹಿತಶಾಹಿ ಇದೆ. ಅಲ್ಲಿ ಅದನ್ನು ಯಾವ ಜಾತಿ ಎಂದು ಕರೆಯುವುದು? ಮುಸ್ಲಿಮರಲ್ಲೂ ಪುರೋಹಿತಶಾಹಿ ಇದೆ. ಬೌದ್ಧರಲ್ಲೂ ಪುರೋಹಿತಶಾಹಿ ಇದೆ. ಎಲ್ಲಾ ಮತಗಳಲ್ಲೂ ಪುರೋಹಿತಶಾಹಿ ಇದ್ದೇ ಇದೆ.

ಯೂರೋಪಿನಲ್ಲಿ ನಡೆದ ಹೋರಾಟ ಒಂದು ಜಾತಿಯ ಮೇಲಲ್ಲ. ಅದು ಒಂದು ಪುರೋಹಿತಶಾಹಿಯ ಮೇಲೆ ನಡೆಯಿತು. ಇಂದಿಗೂ ನಡೆಯುತ್ತಲೆ ಇದೆ. ಆದರೆ ನಾನು ಯಾವ ಜಾತಿಯ ವಿರುದ್ಧವಾಗಿ ಅಥವಾ ದ್ವೇಷದಿಂದ ಯಾವ ಮಾತನ್ನೂ ಆಡಲಾರೆ. ಏಕೆಂದರೆ ನನಗೆ ಯಾವ ಜಾತಿಯೂ ಇಲ್ಲ. ಆದ್ದರಿಂದ ಜಾತಿದ್ವೇಷವೂ ಇಲ್ಲ. ಆದರೆ ಇಲ್ಲಿ ಒಂದು ಆಗುತ್ತದೆ. ಪುರೋಹಿತಶಾಹಿಯ ವಿಚಾರವಾಗಿ ಮಾತನಾಡುವಾಗ ನಾನು ಯಾವುದಾದರೂ ಒಂದು ಜಾತಿಯನ್ನು ನಿರ್ದೇಶಿಸುತ್ತಿದ್ದೇನೆ ಎಂದು ಭಾವಿಸಬಾರದು. ಅದು ಅನೇಕ ಮತಗಳಲ್ಲಿರುವ ಆ ವರ್ಗದ ಜನಕ್ಕೆ ಅನ್ವಯವಾಗುತ್ತದೆ. ಹಾಗೆಯೆ ನನ್ನ ಜೀವನ ದೃಷ್ಟಿ ಒಂದು ರೀತಿಯಲ್ಲಿ ಸಮಾನತಾವಾದಿಯ ದೃಷ್ಟಿ. ನೀವು ಸಮಾಜವಾದಿ, ಸಮತಾವಾದಿ ಎಂದೆಲ್ಲ ವ್ಯಾಖ್ಯಾನ ಮಾಡಬಹುದು. ಆದರೆ ನಾನು ಸಮಾನತಾವಾದಿ. ಆದ್ದರಿಂದ ನಾನು ಮಾಡುವ ಟೀಕೆ, ಖಂಡನೆ, ಶ್ಲಾಘನೆ, ಪ್ರಶಂಸೆ ಏನಿದ್ದರೂ ಅವು ಈ ಸಮಾನತಾವಾದಿಯ ದೃಷ್ಟಿಯಿಂದ ಹೊಮ್ಮುತ್ತವೆಯೆ ಹೊರತು ಯಾವ ಜಾತಿದ್ವೇಷದಿಂದಾಗಲಿ ಹೊಮ್ಮುವುದಿಲ್ಲ.

ಇಷ್ಟನ್ನು ಹೇಳಿ ನಾನು ಮುಂದೆ ಹೊರಡುತ್ತೇನೆ. ಏಕೆಂದರೆ ನಾನು ಹೇಳುವ ಮಾತುಗಳು ಇಲ್ಲಿ ಪುರೋಹಿತಶಾಹಿ ಎಂದರೆ ಹೆಚ್ಚಾಗಿ ಬ್ರಾಹ್ಮಣ ವರ್ಗವನ್ನೆ ನಿರ್ದೇಶಿಸುತ್ತದೆ. ಆದ್ದರಿಂದ ಇವನು ಬ್ರಾಹ್ಮಣದ್ವೇಷಿಯೇ ಎಂದುಬಿಟ್ಟರೆ ಅದು ಸುಳ್ಳು. ನಾನು ಯಾವ ಒಂದು ವ್ಯಕ್ತಿಯನ್ನು ಮಹೋನ್ನತ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದೇನೆಯೊ ಆ ವ್ಯಕ್ತಿ ಬ್ರಾಹ್ಮಣರಾಗಿದ್ದರು, ಹುಟ್ಟುತ್ತಾ. ಶ್ರೀರಾಮಕೃಷ್ಣ ಪರಮಹಂಸರು ಬ್ರಾಹ್ಮಣರಾಗಿದ್ದರು. ಆತ ತನ್ನ ಬ್ರಾಹ್ಮಣ್ಯದ ಅಜ್ಞಾನದಿಂದ, ಅವಿದ್ಯೆಯಿಂದ, ಪಾರಾಗುವುದಕ್ಕೋಸ್ಕರವಾಗಿ ಭಯಂಕರವಾದ ತಪಸ್ಸನ್ನೆ ಕೈಗೊಂಡು ಮುಖಮಂಡಿಯನ್ನು ಮಣ್ಣಿನಲ್ಲಿ ತೀಡಿ ಕಷ್ಟಪಟ್ಟರು. ಜನಿವಾರವನ್ನು ತೆಗೆದು ಬಿಸಾಡಿದರು. ಯಾಕಪ್ಪಾ ಜನಿವಾರ ಬಿಸಾಡ್ತೀಯಾ ಅಂತ ಕೇಳಿದರೆ, ಅಯ್ಯೋ ನಾವು ಹುಟ್ಟುತ್ತಲೆ ಅಷ್ಟಪಾಶಗಳಿಂದ ಬದ್ಧರಾಗಿ ಬರುತ್ತೇವೆ. ಅದರ ಜೊತೆಗೆ ನಾನು ಉತ್ತಮ ವರ್ಗಕ್ಕೆ ಸೇರಿದವನು ಅಂದುಬಿಟ್ಟು ಒಂದು ದಾರ ಹಾಕಿಕೊಂಡು ಮತ್ತೊಂದು ಪಾಶಕ್ಕೆ ಒಳಗಾಗಿ ಬ್ರಾಹ್ಮಣ ಅಂತ ಆಗಬಾರದು. ಅದಕ್ಕೋಸ್ಕರವಾಗಿ ನಾನು ಅದನ್ನು ತೆಗೆದುಹಾಕಿದೆ ಅಂತ ಹೇಳಿದರು. ಬಹಳ ಕಷ್ಟಪಟ್ಟರು. ಅವರು ಬ್ರಾಹ್ಮಣ್ಯದಿಂದ ಪಾರಾಗುವುದಕ್ಕೆ ಎಷ್ಟು ಕಷ್ಟಪಟ್ಟರೋ ಅಷ್ಟು ಕಷ್ಟಪಡಬೇಕಾಗಿಲ್ಲ ನಾವು. ಸುಲಭವಾಗಿ ನಾವು ಪಾರಾಗುತ್ತೇವೆ. ಏಕೆಂದರೆ ಹುಟ್ಟುತ್ತಲೆ ನಾವು ಬ್ರಾಹ್ಮಣರಲ್ಲ. ಇನ್ನೊಬ್ಬರು ನನ್ನ ವಿದ್ಯಾಗುರುಗಳಾಗಿ, ಯಾರಿಗೆ ನನ್ನ ರಾಮಾಯಣದರ್ಶನ ಮೇರುಕೃತಿಯನ್ನು ಅರ್ಪಿಸಿದ್ದೇನೆಯೋ ಆ ಶ್ರೀ ವೆಂಕಣ್ಣಯ್ಯನವರು, ಅವರೂ ಬ್ರಾಹ್ಮಣರೆ. ಆದ್ದರಿಂದ ನಾನು ಮಾತನಾಡುವುದು ಬ್ರಾಹ್ಮಣ ದ್ವೇಷದಿಂದ ಎನ್ನುವುದು ಬಹಳ ಹುಸಿ. ಹಾಗೆ ಭಾವಿಸುವುದು ತಪ್ಪು, ಹಾಗಲ್ಲ. ನಾನು ಮಾತನಾಡುತ್ತಿರುವ ಪುರೋಹಿತಶಾಹಿ ಅಂದರೆ, ನನ್ನ ಮಾತುಗಳು ಹಿಂದೂ ಮತಕ್ಕೂ ಅನ್ವಯಿಸುತ್ತವೆ, ಮುಸ್ಲಿಮರ ಮತಕ್ಕೂ ಅನ್ವಯಿಸುತ್ತವೆ, ಕ್ರಿಶ್ಚಿಯನ್ ಮತಕ್ಕೂ ಅನ್ವಯಿಸುತ್ತವೆ. ಏಕೆಂದರೆ ಎಲ್ಲೆಲ್ಲೂ ಈ ಪುರೋಹಿತಶಾಹಿ ಇದೇ ಕೆಲಸವನ್ನೆ ಮಾಡುತ್ತಾ ಬಂದಿದೆ. ಅದಕ್ಕೆ ವಿರುದ್ಧ ಹೋರಾಟ ನಡೆದಿದೆ. ಆ ಹೋರಾಟದಲ್ಲಿ ಸ್ವಲ್ಪ ಮಟ್ಟಿಗೆ ಜಯಶೀಲರಾದವರೆಂದರೆ ಸೋವಿಯತ್ ದೇಶದವರು. ಅಲ್ಲಿಯೂ ಕೂಡ ಪೂರ್ತಿಯಾಗಿದೆಯೆಂದು ಹೇಳುವಂತಿಲ್ಲ. ಅವರನ್ನು ಬಿಟ್ಟರೆ ಚೀಣಾದವರು ಸ್ವಲ್ಪಮಟ್ಟಿಗೆ ಪುರೋಹಿತಶಾಹಿಯಿಂದ ಬಿಡಿಸಿಕೊಂಡಿದ್ದಾರೆಂದು ಕಾಣುತ್ತದೆ. ನನಗೆ  ಅಷ್ಟು ವಿವರ ಗೊತ್ತಿಲ್ಲ. ಬಾಕಿಯವರೆಲ್ಲ ಇನ್ನೂ ಅದರಡಿಗೆ ಸಿಕ್ಕಿಕೊಂಡು ಹೋರಾಡುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಅಮೆರಿಕಾದಲ್ಲಿ ಮಹಾ ಮಹಾ ಲೇಖಕರು, ಜನತಾವಾದಿಗಳು, ನಾಸ್ತಿಕವಾದಿಗಳು, ಬರ್ಟ್ರಾಂಡ್‌ರಸಲ್, ಇಂಗರ‍್ಸಾಲ್ ಮುಂತಾದ ಅನೇಕರು ಇದಕ್ಕೋಸ್ಕರವಾಗಿ ಸಾಹಿತ್ಯ ಸೃಷ್ಟಿಮಾಡಿ ತುಂಬಾ ಶ್ರಮಪಟ್ಟಿದ್ದಾರೆ. ಆ ಶ್ರಮದಫಲ ನಿಜವಾಗಿ ತಕ್ಕಮಟ್ಟಿಗೆ ಕೈಗೂಡಿದೆ. ಆದರೂ ಇನ್ನೂ ನಡೀತಾನೆ ಇದೆ, ಈ ಪುರೋಹಿತಶಾಹಿಯ ಆಧಿಪತ್ಯ.

ನನ್ನ ಮಾತುಗಳಲ್ಲಿ “ನಾವು” “ನೀವು” “ಅವರು” ಅಂತ ಮೂರು ಸರ್ವನಾಮಗಳನ್ನು ಉಪಯೋಗಿಸುತ್ತಿದ್ದೇನೆ. ನಾವು, ನೀವು, ಅವರು ಅಂದರೆ ಏನು ಎನ್ನುವುದನ್ನು ವಿವರಿಸಿಬಿಡುತ್ತೇನೆ. ಮುಂದಕ್ಕೆ ಏನೂ ತೊಂದರೆಯಾಗುವುದಿಲ್ಲ. ಈ “ನೀವು” ಎಂದರೆ, ಯಾರು ಒಕ್ಕೂಟಕ್ಕೋಸ್ಕರ ನನ್ನನ್ನಿಲ್ಲಿಗೆ ಕರೆಸಿದ್ದೀರೊ ಆ ಮನೋಧರ್ಮವುಳ್ಳವರು-ನೀವು. “ಅವರು” ಎಂದರೆ, ಯಾರ ವಿರುದ್ಧವಾಗಿ ನೀವು ಈ ಒಕ್ಕೂಟವನ್ನು ಮಾಡುತ್ತಿದ್ದೇವೆ ಅಂತ ಹೇಳುತ್ತೀದ್ದೀರೊ ಅವರು. “ನಾವು” ಎಂದರೆ ನೀವೂ ಅವರೂ ಇಬ್ಬರೂ ಸೇರಿ ಬೇರೆ ಬೇರೆ ಕಾರಣಗಳಿಗಾಗಿ ಯಾರನ್ನು ದೂರುತ್ತಿದ್ದೀರೋ, ಯಾರನ್ನು ಬೈಯ್ಯುತ್ತಿದ್ದೀರೋ ಅವರು-“ನಾವು”. ಆದ್ದರಿಂದ ಈ ಮೂರು ಸರ್ವನಾಮಗಳನ್ನು ನಾನು ಪಾರಿಭಾಷಿಕ ಪದಗಳನ್ನಾಗಿ ಉಪಯೋಗಿಸುತ್ತಿದ್ದೇನೆ. ನೀವು ಅಂದಾಗ “ನೀವು”. ಅವರು ಅಂದಾಗ “ಅವರು”. ನಾವು ಅಂದಾಗ “ನಾವು”.

ನೀವು ಹಳೆಯ ಸಾಹಿತ್ಯ, ಹಳೆಯ ಇದು ಅದು, ಹಳೆಯ ಧರ್ಮ ಇದೆಲ್ಲವೂ ನಮ್ಮನ್ನು ಇದುವರೆಗೂ ಅಡಿಯಾಳುಗಳನ್ನಾಗಿ ಮಾಡಿ ನಮ್ಮನ್ನು ತುಳಿದುಬಿಟ್ಟಿದೆ, ಆದ್ದರಿಂದ ಇದನ್ನೆಲ್ಲ ಸಂಪೂರ್ಣವಾಗಿ ತಿರಸ್ಕರಿಸಿಬಿಡುತ್ತೇವೆ, ಅಂತ ಹೊರಟರೆ ತುಂಬಾ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನನ್ನನ್ನೊಮ್ಮೆ ದ್ರಾವಿಡ ಕಜಗಂನವರು ಯಾವುದೋ ಒಂದು ಅಧ್ಯಕ್ಷ ಸ್ಥಾನಕ್ಕೆ ಕರೆಯಲು ಬಂದಿದ್ದರು. ನಾನು ಅವರನ್ನು “ನಿಮ್ಮ ಈ ಚಳುವಳಿ ಇದೆಲ್ಲ ಸರಿಯೆ. ಆದರೆ ಏತಕ್ಕೆ ನೀವು ನಮ್ಮ ಹಿಂದಿನ ಮಹಾಕಾವ್ಯಗಳನ್ನು ಸುಟ್ಟುಹಾಕುತ್ತೀರಿ? ಅಥವಾ ಅಲ್ಲಿ ನಾವು ಗೌರವಿಸುವಂತಹ ವ್ಯಕ್ತಿಗಳಿಗೆ ಅವಮಾನ ಮಾಡುತ್ತೀರಿ?” ಅಂತ ಕೇಳ್ದೆ. ಅದಕ್ಕವರು “ಅವೆಲ್ಲ ಬ್ರಾಹ್ಮಣರಿಗಾಗಿ, ಆ ಬ್ರಾಹ್ಮಣ ವರ್ಗದಿಂದ ಮಾತ್ರ ಆದದ್ದು. ಅವರು ಕಥೆಗಳನ್ನೆಲ್ಲ ಕಟ್ಟಿ, ಮಾಡಿ, ಆ ಋಷಿಗಳು ಈ ಋಷಿಗಳು ಅಂತ ಹೇಳಿಬಿಟ್ಟು, ರಾಮಾಯಣದಲ್ಲಿ ನಮ್ಮನ್ನೆಲ್ಲ ಹೀಗಳೆದಿದ್ದಾರೆ. ಆದ್ದರಿಂದ ನಾವು ಅವುಗಳನ್ನೆಲ್ಲ ತಿರಸ್ಕರಿಸುವುದಕ್ಕೋಸ್ಕರ ಜನಗಳನ್ನು ಈ ರೀತಿ ಎತ್ತಿಕಟ್ಟುತ್ತಿದ್ದೇವೆ”- ಅಂತ ಹೇಳಿದರು. ನಾನು ಅವರಿಗೊಂದು ಪ್ರಶ್ನೆ ಕೇಳಿದೆ. “ನೀವು ಆಧುನಿಕರು – ಅಲ್ಲಿ ಬಂದಿದ್ದವರು – ನಿಮ್ಮ ಹೆಂಡತಿ ಅತ್ಯಂತ ಆಧುನಿಕ ಸ್ತ್ರೀ. ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಿ ಹಾಕುತ್ತಿದ್ದಂತಹ ಚಿನ್ನದ ಆಭರಣಗಳು, ಬುಗುಡಿಯೋ ಬೆಂಡೋಲೆಯೋ ಅವೆಲ್ಲ ಇರುತ್ತವಲ್ಲ, ಆ ಆಭರಣಗಳನ್ನೆಲ್ಲ ನಿಮ್ಮ ಹೆಂಡತಿ ತೆಗೆದು ಒಲೆಗೆ ಹಾಕಿದರೇನು? ಬಿಸಾಕಿದರೇನು?….” “ಇಲ್ಲ. ಇಲ್ಲ. ಯಾಕೆ ಬಿಸಾಕ್ತಾರೆ?….” “ಮತ್ತೇನು ಮಾಡಿದರು….?” “ಏನು ಮಾಡಿದರೂ ಅಂದ್ರೆ ಅದನ್ನೆಲ್ಲ ಕರಗಿಸಿ ಆ ಚಿನ್ನಾನ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಬೇರೆ ರೀತಿಯಲ್ಲಿ ಆಭರಣ ಮಾಡಿಸಿಕೊಂಡು ಉಪಯೋಗಿಸುತ್ತಿದ್ದೇವೆ.” ಅಂದರೆ, ಆಭರಣದ ರೂಪ ಯಾವುದಾದರೂ ಇರಲಿ ಆಭರಣದ ವಸ್ತು ಇದೆಯಲ್ಲಾ ಅದು ತುಂಬಾ ಬೆಲೆಯುಳ್ಳದ್ದು, ಅದನ್ನು ಎಸೆದರೆ ಮೂರ್ಖರಾಗುತ್ತೀರಿ. ಹಾಗೆಯೆ ರಾಮಾಯಣ ಮಹಾಭಾರತ ಇತರ ಯಾವುದೇ ಕತೆಗಳಾಗಿರಲಿ ಅವನ್ನು ಬಿಸಾಡು\ವುದಲ್ಲ, ಅವನ್ನು ಕರಗಿಸಿ ನಮ್ಮ ಹೊಸ ಧ್ಯೇಯ ಹೊಸ ಇಷ್ಟಗಳಿಗೆ ಅನುಸಾರವಾಗಿ ಅವುಗಳನ್ನು ನೀವು ನಿಮ್ಮ ಸಾಹಿತ್ಯದಲ್ಲಿ ಎರಕ ಹೊಯ್ಯಬೇಕು. ಏಕೆಂದರೆ ಆ ಎರಕಗಳ ಮೂಲಕ, ಆ ಕಥಾವ್ಯಕ್ತಿಗಳ ಮೂಲಕ ನೀವು ನಿಮ್ಮ ಧ್ಯೇಯಗಳನ್ನು ಪ್ರಸಾರ ಮಾಡಲು ತುಂಬಾ ಸುಲಭವಾಗುತ್ತದೆ. ಬೇಗ ಬೇಗ ಹಿಡಿಸುತ್ತದೆ ಜನಗಳಿಗೆ. ಆದ್ದರಿಂದಲೆ ನಾನು ಈ ನಿದರ್ಶನ ಕೊಟ್ಟೆ.

ಈಗ ನಾನು ಶ್ರೀರಾಮಾಯಣ ದರ್ಶನಂ ಬರೆದಿದ್ದೇನೆ. ಅದನ್ನು ನೋಡಿ. ಸಂಪೂರ್ಣವಾಗಿ, ಹಿಂದಿನ ಮನೋಧರ್ಮಕ್ಕೂ ಈ ಮಹಾಕಾವ್ಯದಲ್ಲಿ ಅಭಿವ್ಯಕ್ತಗೊಂಡಿರುವ ದಾರ್ಶನಿಕ ಧರ್ಮಕ್ಕೂ ಒಂದು ಚೂರೂ ಸಂಬಂಧವಿಲ್ಲ. ಪ್ರಾರಂಭದಲ್ಲಿಯೆ ಶುರುವಾಗುತ್ತದೆ “ಬುಧರೊಲಿದ ಸಮದರ್ಶನವನೊಪ್ಪಿ”-ದಶರಥನ ಯಾಗ ಶುರುವಾಗುತ್ತದೆ. ಮೇಲುಜಾತಿ ಕೀಳುಜಾತಿ ಭೇದವನ್ನೆಲ್ಲ ಲೆಕ್ಕಿಸದೆ ಅಂತಲೆ ಶುರುವಾಗುತ್ತದೆ. ಹಾಗೆಯೆ ಉದ್ದಕ್ಕೂ ಆ ಕಾವ್ಯದಲ್ಲಿ ಎಲ್ಲಿಯೂ ಹಳೆಯ ಸಂಕುಚಿತ ಮನೋಧರ್ಮದ ಭಾವನೆಗಳು ಸುಳಿಯುವುದಕ್ಕೇ ಸಾಧ್ಯವಿಲ್ಲದಂತೆ ಮುಂದುವರಿಯುತ್ತದೆ. ಹಾಗೆಯೇ ನಾನು ಅವರಿಗೆ ಇನ್ನೊಂದು ಉದಾಹರಣೆಯನ್ನೂ ಕೊಟ್ಟೆ. “ಶೂದ್ರತಪಸ್ವಿ” ಎಂಬ ನನ್ನ ನಾಟಕವನ್ನು. ಶಂಭೂಕ ತಪಸ್ಸು ಮಾಡುತ್ತಾ ಇದ್ದ ಅಂತ, ಅವನು ತಪಸ್ಸು ಮಾಡಿದ್ದಕ್ಕೆ ತನ್ನ ಮಗ ಸತ್ತುಹೋದ ಅಂತ, ಅವನನ್ನು ಕೊಲ್ಲಲು ಒಬ್ಬ ಬ್ರಾಹ್ಮಣ ರಾಮನನ್ನು ಕರೆದುಕೊಂಡು ಹೋಗುತ್ತಾನೆ. ಅದು ಹಿಂದಿನ ಕಥೆ. ಆ ಕಥೆಯನ್ನೇ ನಾನು ‘ಶೂದ್ರತಪಸ್ವಿ’ ನಾಟಕದಲ್ಲಿ ಬಳಸಿಕೊಂಡಿದ್ದೇನೆ. ಆದರೆ ಸಂಪೂರ್ಣವಾಗಿ, ಬ್ರಾಹ್ಮಣ ಏನು ಅವಿವೇಕ ಮಾಡಿದ? ಆ ಅವಿವೇಕವನ್ನು ರಾಮ ಹೇಗೆ ತಿದ್ದಿದ? ಎಂಬುದು ಚಿತ್ರಿತವಾಗಿದೆ. ತಪಸ್ಸು ಬಹಳ ದೊಡ್ಡದು, ಯೋಗ್ಯವಾದದ್ದು. ಯಾರು ಮಾಡಿದರೂ ಅದು ದೊಡ್ಡದೆ-ಅನ್ನುವ ಭಾವನೆ ಅಲ್ಲಿ ಬರುತ್ತದೆ. ಹೀಗೆ ಆ ಹಿಂದಣ ಅಮೂಲ್ಯ ಸಾಹಿತ್ಯವನ್ನೆಲ್ಲ ನೀವು ಎಸೆಯುವುದಕ್ಕೆ ಹೋಗದೆಯೆ, ಆ ಚಿನ್ನದ ಆಭರಣಗಳನ್ನೆಲ್ಲ ಕರಗಿಸಿ ನಮ್ಮ ಧ್ಯೇಯಕ್ಕೆ, ನಮ್ಮ ಇಷ್ಟಕ್ಕೆ ಅನುಸಾರವಾಗಿ ಅವುಗಳನ್ನು ಎರಕ ಹೊಯ್ದುಕೊಳ್ಳಬೇಕು. ಹೊನ್ನನ್ನು ಎಸೆಯುವ ಗಾಂಪತನದ ಆ ನಷ್ಟಕ್ಕೆ ಒಳಗಾಗಬಾರದು. ಮತ್ತೆ ಹೊಸದಾಗಿ ಸೃಷ್ಟಿಸಿರಿ. ಯಾರು ಬೇಡವೆನ್ನುತ್ತಾರೆ. ಹೊಸ ಕಾದಂಬರಿಗಳು, ಹೊಸದನ್ನು ಬರೆಯುವಾಗ ಸಂಪೂರ್ಣವಾಗಿ ಹೊಸ ದೃಷ್ಟಿಯೇ ಬರುತ್ತಾ ಇದೆ. ಅದನ್ನೂ ಸೇರಿಸಿ. ಆದರೆ ಹಳೆಯದೆಲ್ಲ ತಿರಸ್ಕಾರವಾದುದು ಅಂತ ಹೇಳಿಬಿಟ್ಟು ಅದನ್ನು ಎಸೆದುಬಿಡುವಂತಹ ಮನೋಧರ್ಮದಿಂದ ನಮ್ಮ ಸಂಸ್ಕೃತಿಗೆ ನಷ್ಟವಾಗುತ್ತದೆ. ಹಾಗೆ ದುಡುಕದೆ ಸ್ವಲ್ಪ ವಿವೇಚನೆಯಿಂದ ಮುಂದುವರಿಯಿರಿ ಎನ್ನುವುದು ನನ್ನದೊಂದು ಸಲಹೆ, ಈ ಬರಹಗಾರರ ಒಕ್ಕೂಟಕ್ಕೆ. ಏಕೆಂದರೆ ಹಳೆಯದನ್ನೆಲ್ಲ ತೆಗೆದು ಬಿಸಾಡುತ್ತೇವೆ ಎನ್ನುವುದೆಲ್ಲ ಸ್ವಲ್ಪ ರಭಸಮತಿ ಮತ್ತು ರೋಷವರ್ತನೆಯಿಂದ ಪ್ರಚೋದಿತವಾಗಿದ್ದರೆ ಅದು ತಪ್ಪಾಗುತ್ತದೆ.

ನಮ್ಮ ಜಾತಿಪದ್ಧತಿ ವರ್ಣಾಶ್ರಮ ಇವುಗಳೆಲ್ಲ ಯಾವತ್ತಿನಿಂದ ಪ್ರಾರಂಭವಾಯಿತೆಂದರೆ ಮೊದಲಿನಿಂದ ಅಲ್ಲ. ಅದು ಈ ಪುರಾಣಗಳು ಪ್ರಾರಂಭವಾದುವಲ್ಲ ಆವಾಗಿನಿಂದ ಶುರುವಾಯಿತು. ಪ್ರಾರಂಭದಲ್ಲಿ ಜಾತಿ ಅನ್ನೋ ಭಾವನೆಯೇ ಇಲ್ಲ. ನೀವು ಉಪನಿಷತ್ತಿನ ಮಟ್ಟಕ್ಕೆ ಹೋದರೆ ಅಲ್ಲಿ ವಿಶ್ವತತ್ತ್ವಗಳಿವೆಯೇ ಹೊರತು ಅವು ಯಾವುದೋ ಒಂದು ದೇಶಕ್ಕೆ, ಒಂದು ಕಾಲಕ್ಕೆ, ಒಂದು ಮತಕ್ಕೆ ಸಂಬಂಧ ಪಡತಕ್ಕಂತಹವಲ್ಲ. ಅಂತಹ ವಿಶ್ವತತ್ತ್ವಗಳನ್ನು ನಾವು ಮಾತ್ರವಲ್ಲ, ಪ್ರಪಂಚದ ಜನತೆ, ಬುದ್ಧಿವಂತ ಜನತೆಯೆಲ್ಲ ಮಾನ್ಯಮಾಡುತ್ತದೆ. ಆದ್ದರಿಂದ ಅಂತಹ ಸತ್ವವಿರತಕ್ಕಂತಹ ವಸ್ತುವನ್ನು ನಾವು ತಿರಸ್ಕರಿಸದೆ ಅವುಗಳನ್ನು ಸ್ವೀಕರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಒಕ್ಕೂಟದ ಉದ್ದೇಶವನ್ನು ಹೇಳುತ್ತಾ, ಅರ್ಧ ರಾಜಕೀಯದ ಉದ್ದೇಶಗಳನ್ನು ಹೇಳಿದಿರಿ. ಆದರೆ ನಾನು ನೀವು ಬರಹಗಾರರು ಮತ್ತು ಕಲಾವಿದರು ಎನ್ನುವ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಏಕೆಂದರೆ ಸಾಹಿತ್ಯಸೃಷ್ಟಿ ಮೊದಲಾದುವುಗಳಿಂದಲೇ ನೀವು ಜನತೆಯನ್ನು ಎಚ್ಚರಿಸಬೇಕಾಗುತ್ತದೆ, ವಿಚಾರದತ್ತ ಒಯ್ಯಬೇಕಾಗುತ್ತದೆ. ಹಿಂದೆ ಒಮ್ಮೆ ನಾನು ಜಾತಿವಿನಾಶ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದ್ದೆ: ಹೀಗೆ ಸುಮ್ಮನೆ ನೀವು ಯಾವುದಾದರೊಂದು ಪುರೋಹಿತ ವರ್ಗವನ್ನು ಬರೀ ಬೈದರೆ, ದೂಷಣೆ ಮಾಡಿದರೆ, ಏನೂ ಪ್ರಯೋಜನವಿಲ್ಲ. ಏಕೆಂದರೆ ಈಗ್ಗೆ ಐವತ್ತು ವರ್ಷಗಳ ಹಿಂದೆಯಾದರೂ ಕೂಡ ಈ ಜಾತಿಪದ್ಧತಿ ಎಷ್ಟು ಬಿಗಿಯಾಗಿತ್ತೆಂದರೆ ಬಹಿಷ್ಕಾರ ಹಾಕುವುದು, ಮಾಡುವುದು ಭಯಂಕರವಾಗಿರುತ್ತಿತ್ತು. ಈಗ ನೀವು ಯಾರನ್ನು ಯಾರುಬೇಕಾದರೂ ಮದುವೆಯಾಗಿ, ಯಾರೂ ಬಹಿಷ್ಕಾರ ಹಾಕುವುದಿಲ್ಲ.[2] ನಿಮ್ಮ ಮನೆಯಲ್ಲೋ ಸಮಾಜದಲ್ಲೋ ಸಣ್ಣ ಸಣ್ಣ ದೂಷಣೆಗಳಿರಬಹುದೇ ಹೊರತು, ಯಾವ ಗುರುವೂ ಬಹಿಷ್ಕಾರ ಹಾಕಲು ಬಂದರೆ ಅವನು ದೋಷಿಯಾಗುತ್ತಾನೆಯೇ ಹೊರತು ಬೇರೆಯವರಲ್ಲ. ಆದ್ದರಿಂದ ಯಾವ ಬ್ರಾಹ್ಮಣನಾಗಲಿ, ಯಾವ ಪೂಜಾರಿಯಾಗಲಿ, ಯಾವ ದೇವಸ್ಥಾನವಾಗಲಿ, ಯಾವ ಭಟ್ಟರಾಗಲಿ ಅವರೇ ನಿಮ್ಮನ್ನೇನೂ ಕರೆಯುವುದಿಲ್ಲ. ನೀವೆ ಹೋಗಿ ಕರೆದು ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಿಮ್ಮ ಬೆಲೆಯನ್ನೆ ತೆತ್ತು, ಅವರಿಗೆ ಬೆಲೆಕೊಟ್ಟು ಬರುತ್ತೀರಿ. ಆದ್ದರಿಂದ ನೀವು ಏನಮಾಡಬೇಕಾಗುತ್ತದೆ ಎಂದರೆ, ನಿಮ್ಮ ಯುವಕವರ್ಗ ಇದೆಯಲ್ಲ ಅವರನ್ನು ಆಲೋಚನಾಪರರನ್ನಾಗಿ ಮಾಡಬೇಕಾಗುತ್ತದೆ. ಅವನಿಗೆ ಈ ಸ್ವತಂತ್ರ ವಿಚಾರವನ್ನು ಕೊಡಬೇಕಾಗಿ ಬರುತ್ತದೆ. ನಲವತ್ತು ವರ್ಷಗಳ ಹಿಂದೆಯೇ ನಾನು ‘ನಿರಂಕುಶಮತಿಗಳಾಗಿ’ ಎಂದು ಒಂದು ಭಾಷಣಮಾಡಿ ಪತ್ರಿಕೆಗಳಲ್ಲೆಲ್ಲ ಬೈಸಿಕೊಂಡಿದ್ದೇನೆ. ಆದರೆ ಕೆಲವು ಕಾಲದ ಮೇಲೆ, ‘ನಿರಂಕುಶಮತಿಗಳಾಗಿ’ ಎನ್ನುವುದಕ್ಕೆ, ಅದರ ಬರಿಯ ನಿಷೇಧಾರ್ಥವನ್ನೇ ಹುಡುಗರು ಗಮನಕ್ಕೆ ತೆಗೆದುಕೊಳ್ಳಬಾರದೆಂದು ಅದರಲ್ಲಿರುವ ಆ ನಾಲ್ಕು ಪ್ರಬಂಧಗಳಲ್ಲಿ ಕೊನೆಯ ಉಪನ್ಯಾಸದ ಶೀರ್ಷಿಕೆ ‘ವಿದ್ಯಾರ್ಥಿಗಳಿಗೇಕೆ ಆತ್ಮಶ್ರೀ’ ಎಂದಿರುವುದನ್ನೂ ತೆಗೆದುಕೊಂಡು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಅಂತ-ಸೃಜನಾತ್ಮಕವಾಗಿಯೂ ಇರಲಿ ಎಂದು ಸ್ವಲ್ಪ ಬದಲಾಯಿಸಿದೆ, ಆ ಗ್ರಂಥದ ಶೀರ್ಷಿಕೆಯನ್ನು. ಏಕೆಂದರೆ ನಿಮಗೆ ಎಲ್ಲಾ ಶ್ರೀಗಳೂ -ದೇಹಶ್ರೀ, ಭಾವಶ್ರೀ, ಬುದ್ಧಿಶ್ರೀ, ಆತ್ಮಶ್ರೀ-ಆವಶ್ಯಕ. ಎಲ್ಲಕ್ಕೂ ಮೂಲವಾದ ಶ್ರೀ ಆತ್ಮಶ್ರೀ. ನನ್ನ ದೃಷ್ಟಿಯಲ್ಲಿ ಆತ್ಮಶ್ರೀ ಸರ್ವತೋಮುಖವಾದುದು. ಅದನ್ನು ನೀವು ಮರೆಯಬಾರದು.

ಇಲ್ಲಿಯೂ ಯಾವ ತತ್ವವಾಗಲಿ ನಿಮ್ಮಿಂದ ಸ್ವೀಕಾರವಾಗುವುದಕ್ಕೆ ಅರ್ಹತೆ ಪಡೆಯಬೇಕಾದರೆ ಅದು ವಿಶ್ವಕ್ಕೆ, ವಿಶ್ವಜನತೆಗೆಲ್ಲ ಅನ್ವಯವಾಗುವಂತಿದ್ದರೆ ಮಾತ್ರ ಗ್ರಾಹ್ಯ. ಬರೀ ಹಿಂದೂಗಳಿಗೆ, ಹಿಂದೂ ದೇಶಕ್ಕೆ, ಅವರಿಗೆ ಇವರಿಗೆ ಅಂತ ಅಲ್ಲ. ವಿಶ್ವಕ್ಕೆಲ್ಲ ಅನ್ವಯವಾಗುವಂತಿದ್ದರೆ ಅದನ್ನು ನೀವು ಮಾನ್ಯಮಾಡಲೇ ಬೇಕು. ಅದು ವೈಜ್ಞಾನಿಕ ಸತ್ಯದಂತೆ ಶಾಶ್ವತ ಸತ್ಯ. ಇಂತಹ ಶಾಶ್ವತ ಸತ್ಯದ ಕೇಂದ್ರಗಳು ನಮ್ಮ ಪ್ರಾಚೀನ ಸಾಹಿತ್ಯ ಸಂಸ್ಕೃತಿಗಳಲ್ಲಿವೆ. ಆ ಕೇಂದ್ರಗಳನ್ನು ನಾವು ರಕ್ಷಿಸಿಕೊಳ್ಳಬೇಕಾಗಿ ಬರುತ್ತದೆ. ಹಳೆಯದಕ್ಕೆ ಹೊಸ ವ್ಯಾಖ್ಯಾನಗಳನ್ನು ಏಕೆ ಮಾಡಬೇಕಾಗಿ ಬರುತ್ತದೆ ಎಂದರೆ, ಒಂದು ನಿದರ್ಶನ ತೆಗೆದುಕೊಳ್ಳಿ. ಚಾತುರ್ವರ್ಣ್ಯ: ಗೀತೆಯಲ್ಲಿ ಚಾತುರ್ವರ್ಣ್ಯದ ವಿಚಾರ ಬರುತ್ತದೆ. ಗೀತೆಯನ್ನು ಪ್ರಪಂಚದಾದ್ಯಂತ ಅತ್ಯಂತ ಮಹೋನ್ನತವಾದ ಆಧ್ಯಾತ್ಮಿಕ ಕೃತಿಯೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ಶ್ರೀ ಕೃಷ್ಣ “ಚಾತುರ್ವರ್ಣ್ಯಂ ಮಹಾ ಸೃಷ್ಟಂ” “ನಾಲ್ಕು ವರ್ಣಗಳನ್ನು ನಾನೆ ಸೃಷ್ಟಿಸಿದ್ದೇನೆ” ಅಂತ ಹೇಳಿಬಿಟ್ಟನಲ್ಲಾ ಎಂದು ಇಡೀ ಗೀತೆಯನ್ನು ಎಸೆಯುವುದಕ್ಕೆ ಹೋಗಬಾರದು. ಅದಕ್ಕೆ ಬೇರೆ ವ್ಯಾಖ್ಯಾನ ಮಾಡಬೇಕು, ಸರಿಯಾದ ಸರ್ವಸಮ್ಮತವಾದ ರೀತಿಯಲ್ಲಿ, ವಿಶ್ವಕ್ಕೆಲ್ಲ ಅನ್ವಯವಾಗುವಂತೆ.[3]

ಆ ವ್ಯಾಖ್ಯಾನ ಮಾಡುವವರು ಯಾರು? ಲೇಖಕರು, ಬರಹಗಾರರು, ನೀವು. ನಮ್ಮ ಹಿಂದಿನ ಆಚಾರ್ಯ ವರ್ಗವೆಲ್ಲ ಅದನ್ನು ತೆಗೆದುಕೊಂಡು ಅತ್ಯಂತ ಅವಿವೇಕವಾಗಿ ವ್ಯಾಖ್ಯಾನ ಮಾಡಿದ್ದಾರೆ. ಚಾತುರ್ವರ್ಣ್ಯ ಎನ್ನುವುದನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಬೇರೆ ಬೇರೆ ಜಾತಿ ಮಾಡಿಟ್ಟರು. ತಾವೇ ಮಾಡಿದ್ದನ್ನು ದೇವರಿಗೆ ಆರೋಪಿಸಿದರು. ಪಾಪ, ದೇವರಾದರೂ ಏನು ಮಾಡುತ್ತಾನೆ ಈ ಮಾನವರ ಬುದ್ಧಿಮಾಂದ್ಯಕ್ಕೆ? ಆದ್ದರಿಂದಲೆ ಈಚಿನವರು, ಶ್ರೀ ಅರವಿಂದರಂಥವರು, ಈ ಚಾತುರ್ವರ್ಣ್ಯ ಎನ್ನುವುದು ಮನಃಶಾಸ್ತ್ರಕ್ಕೆ ಸಂಬಂಧಪಟ್ಟುದೆ ಹೊರತು ಮನಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟುದಲ್ಲ ಎಂದಿದ್ದಾರೆ.

ಚಾತುರ್ವರ್ಣ್ಯವು ಮನುಷ್ಯ ಮಾಡಿದ ಚತುರ್ವರ್ಣ ಅಲ್ಲ. ಅದು ನಿಸರ್ಗವೆ ಮಾಡಿದ ಮನಸ್ಸಿನ ಶಾಸ್ತ್ರವಿದೆಯಲ್ಲ ಅದಕ್ಕೆ ಸಂಬಂಧಪಟ್ಟದ್ದು. ಅದು ಭರತಖಂಡಕ್ಕೆ ಮಾತ್ರವಲ್ಲ, ಹಿಂದೂಗಳಿಗೆ ಮಾತ್ರವಲ್ಲ, ಅಮೆರಿಕನ್ನರಿಗೂ, ಯೂರೋಪಿಯನ್ನರಿಗೂ, ಆಫ್ರಿಕನ್ನರಿಗೂ, ಜಗತ್ತಿನಲ್ಲಿ ಇರುವವರಿಗೆಲ್ಲ ಅನ್ವಯವಾಗುಬೇಕು.[4] ಚಾತುರ್ವರ್ಣ್ಯ ಎಂದರೆ ಏನು ಅರ್ಥ? “ಮಯಾ ಸೃಷ್ಟಂ” ಎಂದರೆ, ಶ್ರೀಕೃಷ್ಣ, ಅವರೇ ಹೇಳಿರುವಂತೆ ಅವನು ಭಗವಂತನಾದ್ದರಿಂದ, ಭಗವಂತನೇ ಸೃಷ್ಟಿಮಾಡಿದ್ದೇ ಹೊರತು ಮನು ಮುಂತಾದ ಧರ್ಮಶಾಸ್ತ್ರಜ್ಞರು ಸೃಷ್ಟಿಮಾಡಿದ್ದು ಅಂತ ಆಗುವುದಿಲ್ಲ. ಆದರೆ ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ.

ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದ ವರ್ಣಭೇದಗಳು ಸಾಲದೆಂದು ಅವರು ಜೀವಗಳನ್ನೆಲ್ಲ ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು ಅಥವಾ ನಿತ್ಯನಾರಕಿಗಳು ಅಂತ ವಿಭಜಿಸಿ ಬಿಟ್ಟಿದ್ದಾರೆ.[5]


[1]       ತಾರೀಖು ೨೦-೪-೧೯೭೪ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿದ ಶ್ರೀ ಕುವೆಂಪುರವರ ಭಾಷಣದ ಪೂರ್ಣ ವರದಿ.

[2]       ಆದರೆ ಬ್ರಾಹ್ಮಣರಲ್ಲಿ, ಅದರಲ್ಲಿಯೂ ಮಾಧ್ವರಲ್ಲಿ, ಈಗಲೂ ಕಿರುಕುಳ ಕೊಡುತ್ತಾರಂತೆ. ಒಬ್ಬ ವಿಭಾಗಾಧಿಕಾರಿ ಮತ್ತು ಒಬ್ಬ ಜಿಲ್ಲಾಧಿಕಾರಿ ಮಾಧ್ವರು ಮಾಧ್ವರಲ್ಲದ ಗುರು ರಾಮದಾಸ ಸ್ವಾಮಿಗಳಿಂದ ‘ರಾಮಮಂತ್ರ’ ದೀಕ್ಷೆ ತೆಗೆದುಕೊಂಡಿದ್ದಕ್ಕೆ ಅವರಿಗೆ ಅವರ ಜಾತಿಯ ಸಂಪ್ರದಾಯ ಮಠಾಧೀಶ್ವರರು ತುಂಬ ಕಿರುಕುಳ ಕೊಟ್ಟರಂತೆ. ಅವರ ಹೆಣ್ಣು ಮಕ್ಕಳಿಗೆ ಜಾತಿಯಲ್ಲಿ ಗಂಡು ಸಿಗುವುದಕ್ಕೂ ತೊಂದರೆಯಾಯಿತಂತೆ!

ಇನ್ನೂ ಆಶ್ಚರ್ಯದ ಸಂಗತಿಯೂ ಉಂಟು: ಇಬ್ಬರು ಮಾಧ್ವಸ್ವಾಮಿಗಳು ತಮಗೆ ನಿಜವಾಗಿ ವೈರಾಗ್ಯ ಪ್ರವೃತ್ತಿಯಿಲ್ಲ ಎಂದು ಪೀಠತ್ಯಾಗ ಮಾಡಿದರೆಂಬ ಸ್ತುತ್ಯವಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತಷ್ಟೆ. ಉಳಿದ ಅನೇಕ ಸಂಪ್ರದಾಯಸ್ಥ ಮಾಧ್ವರು ಅವರಿಗೆ ಬೇಕಾದಷ್ಟು ಕಿರುಕುಳ ಕೊಟ್ಟರು ಎಂಬ ವದಂತಿಯೂ ಹಬ್ಬಿದೆ!

[3]       ಇಲ್ಲಿ ಗೀತೆಯದೇನೂ ತಪ್ಪಿಲ್ಲ. ಅದು ವಿಶ್ವಜನತೆಗೆ ಅನ್ವಯವಾಗುವಂತೆ ಮನಃಶಾಸ್ತ್ರೀಯ ಸಮ್ಮತವಾಗಿ ಗುಣ ಕರ್ಮ ವಿಭಾಗಶಃ ವರ್ಣಗಳು ಸೃಷ್ಟಿಯಾಗಿವೆ ಎಂದೇ ಹೇಳುತ್ತದೆ. ಅಂದರೆ ವರ್ಣನಿರ್ಣಯ ಹುಟ್ಟಿನಿಂದಲ್ಲ, ಜೀವದಸ್ವರೂಪ ಸ್ವಭಾವ ಜನ್ಮಾಂತರ ಸಂಸ್ಕಾರ ಮತ್ತು ಅದಕ್ಕೆ ಅನುಸಾರವಾಗಿ ಅದು ಸಹಜವಾಗಿಯೆ ಕೈಕೊಳ್ಳುವ ಕರ್ಮ ಇವುಗಳಿಂದ ಸಿದ್ಧವಾಗುತ್ತದೆ. ಇದು ಸರ್ವಮಾನವರಿಗೂ ಅನ್ವಯವಾಗುವ ವಿಶ್ವತತ್ತ್ವ: ಹಿಂದೂಗಳಿಗೆ ಮಾತ್ರವೇ ಅಲ್ಲ. ಹೀಗೆ ಹೇಳಿದ್ದಾರೆ ಸ್ವಾಮಿ ವಿವೇಕಾನಂದರು “ಪ್ರಪಂಚದಲ್ಲಿರುವ ಪ್ರತಿಯೊಬ್ಬರಲ್ಲಿಯೂ ಇಂದ್ರಿಯವನ್ನು ಮೀರಿಹೋಗುವ ಶಕ್ತಿ ಸುಪ್ತವಾಗಿದೆ. ಒಂದು ಸಣ್ಣ ಕೀಟ ಕೂಡ ಒಂದಲ್ಲ ಒಂದು ದಿನ, ಇಂದ್ರಿಯವನ್ನು ಮೀರಿ ದೇವರನ್ನು ಸೇರುವುದು. ಯಾವ ಜೀವನವೂ ನಿರರ್ಥಕವಾಗುವುದಿಲ್ಲ. ಪ್ರಪಂಚದಲ್ಲಿ ನಿರರ್ಥಕ ಎನ್ನುವುದು ಇಲ್ಲ. ಮನುಷ್ಯ ನೂರುವೇಳೆ ಹಿಂಸೆಗೆ ಒಳಗಾಗಬಹುದು, ಸಾವಿರವೇಳೆ ಬೀಳಬಹುದು. ಆದರೂ ಕೊನೆಗೆ ತಾನು ದೇವರೆಂಬುದನ್ನು ತಿಳಿದುಕೊಳ್ಳುವನು. ಸರಳರೇಖೆಯಲ್ಲಿ ಅಭಿವೃದ್ಧಿ ಎನ್ನುವುದು ಇಲ್ಲವೆಂಬುದು ನಿಮಗೆ ಗೊತ್ತಿದೆ. ಪ್ರತಿಯೊಂದು ಜೀವವೂ ಒಂದು ವೃತ್ತದೊಳಗೆ ಸಂಚರಿಸುವಂತೆ ತೋರುವುದು. ಅದನ್ನು ಎಲ್ಲರೂ ಪೂರ್ಣಮಾಡಬೇಕು, ಎಂದಾದರೊಂದುದಿನ. ಮೇಲಕ್ಕೆ ಏಳದೆ ಇರುವ ಅಧಃಪಾತಾಳಕ್ಕೆ ಯಾರೂ ಬೀಳಲಾರರು. ಯಾರೂ ನಾಶವಾಗುವುದಿಲ್ಲ. ನಾವೆಲ್ಲ ಒಂದು ಸಾಮಾನ್ಯ ಕೇಂದ್ರವಾದ ದೇವರಿಂದ ಬಂದಿರುವೆವು. ದೇವರಿಂದ ಬಂದಿರುವ ಅತಿಕ್ಷುದ್ರ ಅಥವಾ ಕೀಳು ಪ್ರಾಣಿಯೂ ಎಲ್ಲ ಜೀವಿಗಳ ಪಿತನೆಡೆಗೆ ಕೊನೆಗೆ ಬರಲೇಬೇಕು. ಯಾರಿಂದ ಎಲ್ಲ ಬಂದಿದೆಯೊ, ಯಾರಲ್ಲಿ ಎಲ್ಲ ಜೀವಿಸಿದೆಯೊ, ಎಲ್ಲಿಗೆ ಎಲ್ಲವೂ ತೆರಳುವುದೊ ಅದೇ ದೇವರು.”

[4]       ಹಿಂದೂಗಳಿಗೆ ಮಾತ್ರ ಎಂದು ಅವರು ಹೇಳಿದರೆ ನೀವು ಹೇಳಬೇಕಾಗುತ್ತದೆ: “ಹಾಗಾದರೆ ನಿಮ್ಮ ಶ್ರೀಕೃಷ್ಣ ಭಗವಂತನಲ್ಲ, ಅವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ. ಅಲ್ಲದೆ, ರಣರಂಗದ ಮಧ್ಯೆ ಶ್ಲೋಕ ರಚಿಸಿ ಹದಿನೆಂಟು ಅಧ್ಯಾಯ ಪದ್ಯದಲ್ಲಿ ಹೇಳುವುದಕ್ಕೆ ಅದೇನು ಯುದ್ಧರಂಗವೊ ಭೋಜನಕೂಟವೊ? ಯಾವನೊ ಪದ್ಯ ರಚನಾಸಾಮರ್ಥ್ಯವುಳ್ಳ ಹಾರುವನೆ ಬರೆದಿರಬೇಕು ಗೀತೆಯನ್ನು. ಇಂತಹ ಅವಿವೇಕವನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ಒಂದುವೇಳೆ, ನೀವು ಹೇಳುವಂತೆ, ವರ್ಣ ಜಾತಿ ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸಮಾಡಿ ಸಮಾಜ ಕ್ಷೇಮವನ್ನು ಸಾಧಿಸಿಯೆ ಸಾಧಿಸುತ್ತೇವೆ” ಎಂದು.

[5]       According to Sri Madhva, all the souls are not alike in their intrinsie nature. The nature of the soul is a fixity and it is Unalterable. The destiny of the soul is determined by its ಸ್ವರೂಪ. In all there are three kinds of souls. (1) Mukti Yogyas (ಮುಕ್ತಿಯೋಗ್ಯರು) destined to attain Moksha (2) Those that eternally dangle between death and birth called nitya-samsarins (ನಿತ್ಯ ಸಂಸಾರಿಗಳು) (3) The last class called tamo-yogyas (ತಮೋಯೋಗ್ಯರು) destined to eternal hell. There is no hope for them.

No soul can outstrip and change its nature (ಸ್ವರೂಪ).- P.Nagaraj Rao. The Concept of God in Madhwa’s Vedanta’. Hiriyanna Birth Centenary Commemoration Volume 1972 P.170.