ಇಂದಿನ ಈ ಸಮಾರಂಭ ನಿಜವಾಗಿಯೂ ಕನ್ನಡ ವಾಗ್ದೇವಿ ತನ್ನ ಸಹಸ್ರಾರು ಬಾಹುಗಳ ರೂಪದ ಅನೇಕ ವ್ಯಕ್ತಿಗಳಲ್ಲಿ ಇಂದು ನಮ್ಮ ನಾಡಿನಲ್ಲಿ ಅವತರಿಸಿದ್ದಾಳೆ ಎಂಬುದಕ್ಕೆ ಸಾಕ್ಷಿ. ಅದರ ಸಂಕೇತವಾಗಿ ಇಂತಹ ಮಹತ್ಕೃತಿಗಳೂ ಮಹತ್ಕಾರ್ಯಗಳೂ ನಡೆಯುತ್ತಿವೆ. ಈ ಬಿಡುಗಡೆಯ ಕಾರ್ಯವನ್ನು ನಾನು ಮಾಡಬೇಕೆಂದು ಕೇಳಿಕೊಳ್ಳಲು ಹಾ.ಮಾ. ನಾಯಕರು ಬಂದಾಗ ನಾನು ಅವರು ಹೇಳಿದಂತೆ ವರ್ಷಕ್ಕೊಮ್ಮೆ ಬರುವ ಕರಾರಿನ ಪ್ರಕಾರ, ತಕರಾರಿಲ್ಲದೆ ಒಪ್ಪಿಕೊಂಡೆ. ಅದರ ಜೊತೆಗೆ ವರ್ಷಕ್ಕೆ ಒಮ್ಮೆಯಾದರೂ ನನ್ನ ಸಾಹಿತ್ಯಚೇನತದ ತವರಾದ ಈ ಮಾನಸಗಂಗೋತ್ರಿಗೆ ಬಂದು ಇಲ್ಲಿ ಕೆಲಸ ಮಾಡುತ್ತಿರುವ ವಾಗ್ದೇವಿಯ ಪುತ್ರರನ್ನೆಲ್ಲ ಸಂದರ್ಶಿಸುವ ಒಂದು ಅವಕಾಶ ದೊರೆಯುತ್ತದೆ ಎಂದೂ ನನ್ನ ಅನಿಸು.

ಆಮೇಲೆ, ನಾನು ಬಿಡುಗಡೆ ಮಾಡಬೇಕಾದರೆ ಏನಾದರೂ ಒಂದು ನಾಲ್ಕು ಮಾತು ಹೇಳಬೇಕಷ್ಟೆ. ಅವರೊಡನೆ ಮಾತಾಡಿದೆ. ಅವರು ಪ್ರಕಟಿಸಲಿರುವ ಗ್ರಂಥದ ಹರವು ವ್ಯಾಪ್ತಿ ಅದನ್ನು ಕುರಿತು ಆಲೋಚಿಸಿದೆ. ನಾಲ್ಕಾರು ಟಿಪ್ಪಣಿ ಹಾಕಿಕೊಂಡೆ.

ನಿನ್ನೆ ಇವರು ಅಚ್ಚಾದ ಬಿಡಿ ಬಿಡಿ ಹಾಳೆಗಳ ಒಂದು ಪ್ರತಿ ಕಳಿಸಿಕೊಟ್ಟರು. ಕಳಿಸಿಕೊಟ್ಟಾಗ ಅದನ್ನು ಎಲ್ಲೆಲ್ಲಿ ನೋಡಬೇಕೋ ಅಲ್ಲೆಲ್ಲ ಸ್ವಲ್ಪ ನೋಡಿದೆ. ನೋಡಿದ ಮೇಲೆ ನನ್ನ ಟಿಪ್ಪಣಿಯೆಲ್ಲ ಅಪ್ರಕೃತ ಎನ್ನಿಸಿಬಿಟ್ಟಿತು.

ಕನ್ನಡ ಅಧ್ಯಯನ ಸಂಸ್ಥೆ ಸಮರ್ಥರಾದ ಅಧ್ಯಾಪಕರ ನೇತೃತ್ವದಲ್ಲಿ ಅದ್ಭುತದ ಮೇಲೆ ಅದ್ಭುತದ ಕಾರ್ಯ ನೆರವೇರಿಸುತ್ತಾ ಇದೆ. ಕೆಲವು ವರ್ಷಗಳ ಹಿಂದೆ ವಿಶ್ವಕೋಶದ ಮೊದಲನೆ ಸಂಪುಟವನ್ನು ನಾನು ಬಿಡುಗಡೆ ಮಾಡಿದೆ. ಆಗ ಹೇಳಿದ್ದೆ: ವಿಶ್ವಕೋಶದ ಕೊನೆಯ ಸಂಪುಟವನ್ನೂ ನಾನೆ ಬಿಡುಗಡೆ ಮಾಡಬೇಕು ಅಂತ ನನ್ನ ಇಷ್ಟ ಎಂದು. ಹಾಗೆಯೆ ಇವತ್ತೂ ಕೇಳಿಕೊಳ್ಳುತ್ತೇನೆ: ಕನ್ನಡ ಸಾಹಿತ್ಯ ಚರಿತ್ರೆಯ ಹತ್ತನೆಯ ಕೊನೆಯ ಸಂಪುಟವನ್ನೂ ಬಿಡುಗಡೆ ಮಾಡುವುದಕ್ಕೆ ನನ್ನನ್ನೆ ಕರೆಯಿರಿ ಎಂದು. ಪರಲೋಕದಲ್ಲಿದ್ದರೂ ಕರೆಯುವುದನ್ನು ಬಿಡಬೇಡಿ.

ಆದರೆ ಆ ಕಾರ್ಯಚಕ್ರ ಉರುಳುತ್ತಿರುವ ವೇಗವನ್ನು ಗಮನಿಸಿದರೆ ನಾನು ಇಹಲೋಕದಲ್ಲಿಯೆ ಇದ್ದು ಆ ಕೆಲಸವನ್ನು ಮಾಡುತ್ತೇನೆ ಅಂತ ಭಾವಿಸುತ್ತೇನೆ. ನಾನು ಇದನ್ನು ಅಲ್ಲಲ್ಲೆ ಸುಮ್ಮನೆ ತಿರುವಿಹಾಕಿ ನೋಡಿದೆ: ನನಗೆ ತುಂಬ ಹೆಮ್ಮೆಯಾಯಿತು. ಸ್ವಲ್ಪ ಕಾಲದ ಹಿಂದೆ ನಮ್ಮ ವಯೋವೃದ್ಧರಾದ ಪಂಡಿತಸಾಹಿತಿಗಳಲ್ಲಿ ಪ್ರಸಿದ್ಧರೊಬ್ಬರು ಒಂದು ಅರ್ಥ ಬರುವಂತೆ ಮಾತನಾಡಿದರೆಂದು ಗೊತ್ತಾಯಿತು. ಏನೆಂದರೆ ‘ಈ ತರಹದ ವಿದ್ವತ್ತು, ಪಾಂಡಿತ್ಯ, ಸಂಶೋಧನಾ ವಿಚಕ್ಷಣತೆ-ಇವೆಲ್ಲಾ ಹಳೆಯ ಮಾತಾಯಿತು. ಹಿಂದಿನ ಪೀಳಿಗೆಗೇ ಇದೆಲ್ಲಾ ಮುಗಿದುಹೋಯಿತು. ಈಗ ಇರುವವರು ಮತ್ತು ಮುಂದೆ ಬರುವವರೂ ಎಲ್ಲಾ ಬರೀ ತೇಲು ತೇಲು ವಿದ್ವಾಂಸರು; ತೆಳ್ಳೆ ನೀರು ಹೊರತು ಆಳವೇನೂ ಇಲ್ಲ ಅಲ್ಲಿ.’ ಎಂಬ ಅರ್ಥ ಬರುವಂತೆ ಮಾತನಾಡಿದರಂತೆ. ಆದರೆ ವಿಶ್ವಕೋಶವನ್ನಾಗಲಿ ಇಂಥ ಕೃತಿಗಳನ್ನಾಗಲಿ ನಾವು ನೋಡಿದಾಗ ಆ ತರದ ಅಭಿಪ್ರಾಯ ತುಂಬಾ ವೃದ್ಧ ಮೆದುಳಿನ ನಿರ್ಣಯದ ಅಭಿಪ್ರಾಯ ಅಂತ ಹೇಳಬೇಕಾಗುತ್ತೆ. ಹಳೆಯ ಪೀಳಿಗೆಯ ಪಾಂಡಿತ್ಯ, ಅದರ ವಿದ್ವತ್ತು ಮತ್ತು ಇತರ ವಿಚಾರಗಳಲ್ಲಿ ಅವರಿಗೇ ಆಗ ಲಭಿಸದಿದ್ದ ಕೆಲವು ಹೊಸ ದೃಷ್ಟಿಗಳು ಹೊಸ ಸೌಕರ್ಯಗಳು ಹೊಸ ವೈಜ್ಞಾನಿಕ ಸೌಲಭ್ಯಗಳು-ಇವುಗಳೆಲ್ಲಾ ಈಗಿನ ತರುಣ ವಿದ್ವಾಂಸರಿಗೆ ಲಭಿಸಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಇದು ಕನ್ನಡ ಅಧ್ಯಯನ ಸಂಸ್ಥೆಗೆ ಮತ್ತು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇವರು ಆಗಲೆ ಹೇಳಿದಂತೆ, ಬೆಂಗಳೂರು ವಿಶ್ವವಿದ್ಯಾನಿಲಯದವರೂ ಒಂದು “ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ” ಎಂಬ ಹೆಸರಿನಲ್ಲಿ ಅವರದೂ ಮೊದಲನೆ ಸಂಪುಟ ಈ ತಿಂಗಳು ಮೂವತ್ತನೆಯ ತಾರೀಖಿನಂದು ಬಿಡುಗಡೆ ಆಗುತ್ತದೆ ಎಂದು ನನಗೊಂದು ಆಹ್ವಾನ ಪತ್ರಿಕೆ ಬಂದಿದೆ. ಅವರು ಯಾವ ಯಾವ ದೃಷ್ಟಿಕೋನಗಳಿಂದ ಅದನ್ನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಏಕೆಂದರೆ ನೀವು ಮಾಡುತ್ತಿರುವುದರ ಪಡಿ ಅಚ್ಚನ್ನೇ ಅವರೂ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಅವರದು ಬೇರೆ ಬೇರೆ ದೃಷ್ಟಿಕೋನಗಳಿಂದ ಬೇರೆ ಬೇರೆ ರೀತಿಯಲ್ಲಿ ಇರಬಹುದು. ಹೀಗೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳೆಲ್ಲಾ ಇಂತಹ ಕೆಲಸ ಮಾಡುತ್ತಾ ಇವೆ.

ಕನ್ನಡದ ಸರ್ವತೋಮುಖ ಏಳಿಗೆಗೆ ವಿಶ್ವವಿದ್ಯಾನಿಲಯಗಳ ಜೊತೆಗೆ ಇತರರೂ ದುಡಿಯುತ್ತಿದ್ದಾರೆ-ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಈಗ ಕನ್ನಡ ಅಧಿಕೃತ ಭಾಷೆಯಾಗಬೇಕು, ನ್ಯಾಯಾಲಯದ ಭಾಷೆ ಆಗಬೇಕು, ಅದಾಗಬೇಕು ಇದಾಗಬೇಕು ಎಂದು ಹೇಳುತ್ತಾ ಇದ್ದಾರೆ-ಅವರಿಗೂ ಸಹಕಾರವಿತ್ತು, ಅವರ ಸಹಕಾರವನ್ನೂ ಸಂಪಾದಿಸಬೇಕು. ಏಕೆಂದರೆ ಅವರ ಧ್ಯೇಯದಲ್ಲಿ ಆದರ್ಶದಲ್ಲಿ ಏನೂ ನ್ಯೂನತೆಯಿಲ್ಲ, ಚ್ಯುತಿಯಿಲ್ಲ. ಆದರೆ, ಕಾರ್ಯ ನಿರ್ವಹಿಸುವುದರಲ್ಲಿ ಸ್ವಲ್ಪ ತಡವಾಗಬಹುದು ಅನ್ನುವ ಅಭಿಪ್ರಾಯ ಆಗಾಗ ಬರುತ್ತಾ ಇರುತ್ತದೆ, ಅಷ್ಟೆ.

ನಾನು ಹಾಕಿಕೊಂಡ ಟಿಪ್ಪಣಿಗಳಲ್ಲಿ ಅನೇಕವು ಅಪ್ರಕೃತ ಎಂದು ಹೇಳಿದೆನಲ್ಲ. ಆದರೂ ಪ್ರಕೃತ ಎಂದು ತೋರುವ ಒಂದೆರಡು ವಿಷಯಗಳನ್ನು ಇಲ್ಲಿ ಸೂಚಿಸಬಹುದು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮಾತ್ರ ನಾವು ಗಮನಿಸುವಾಗ ನಾನು ಸೂಚಿಸುವುದು ಅಪ್ರಕೃತ ಎಂದು ತೋರಬಹುದು. ಆದರೆ ಪ್ರಕೃತವೋ ಅಪ್ರಕೃತವೋ ವಿಚಾರಿಸಿ ನೀವು ಮುಂದೆ ಕೆಲಸ ಮಾಡಬೇಕು ಅಷ್ಟೆ.

ನಾನು ಕನ್ನಡ ಪಾಠ ಹೇಳುತ್ತಿದ್ದಾಗ-ಆನರ್ಸ್ ಕ್ಲಾಸ್‌ನಲ್ಲಾಗಲಿ ಎಂ.ಎ. ಕ್ಲಾಸ್‌ನಲ್ಲಾಗಲಿ ಸಾಹಿತ್ಯದ ವಿಚಾರ ಬಂದಾಗ-ನಮ್ಮ ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ಒತ್ತಿ ಒತ್ತಿ ತರಲು ಪ್ರಯತ್ನಿಸುತ್ತಿದ್ದೆ. ಅವರ ಪ್ರಜ್ಞೆ ಹೊತ್ತಿಕೊಳ್ಳಲು ಬೆಂಕಿಕಡ್ಡಿಯನ್ನು ಉಜ್ಜಿ ಉಜ್ಜಿ ಗೀಚುತ್ತಿದ್ದೆ. ನಮಗೆ ಆಗ ಪ್ರತಿಸ್ಪರ್ಧಿಯಾಗಿದ್ದದ್ದು ಜಗತ್ತಿನ ಒಂದು ಮಹೋನ್ನತ ಸಾಹಿತ್ಯ-ಇಂಗ್ಲಿಷ್. ಆ ಆನೆಯ ಮುಂದೆ ನಾವು ಅಜಗಳಾಗಿ ಕಾಣುತ್ತಾ ಇದ್ದೆವು. ಅವರ ಸಾಹಿತ್ಯಚರಿತ್ರೆಗಳನ್ನು ನೋಡಿದರೆ-ಅವು ಆ ವಿಷಯದಲ್ಲಿ ಸ್ವಲ್ಪ ಹೆಚ್ಚುಕಡಮೆ ವಿಶ್ವಕೋಶಗಳೆ ಆಗಿರುತ್ತಿದ್ದುವು. ಆ ಸಾಹಿತ್ಯಚರಿತ್ರೆಗಳೊ-ಅಲ್ಲಿಯ ವಿವರ, ಅಲ್ಲಿಯ ರೀತಿ ಇವೆಲ್ಲದರ ಜಗತ್ತು ನಮ್ಮನ್ನು ಚಕಿತಗೊಳಿಸುತ್ತಿತ್ತು. ಅದರ ಮುಂದೆ ಕನ್ನಡ ಸಾಹಿತ್ಯ ಮತ್ತು ಅದರ ಚರಿತ್ರೆ ಎರಡೂ ವಿದ್ವಜ್ಜನರಲ್ಲಿ ಮಾತ್ರವಲ್ಲದೆ ನಮ್ಮ ಸಾಮಾನ್ಯ ಜನಗಳಲ್ಲಿಯೂ ತುಂಬ ಸಾಧಾರಣದ್ದಾಗಿ ನಾಚಿಕೆಪಟ್ಟುಕೊಳ್ಳುವಷ್ಟು ಕೀಳುಮಟ್ಟದ್ದಾಗಿ ತೋರುತ್ತಿತ್ತು. ಹೀಗೆ ಆ ತರಹದ ನೈಚ್ಯಾನುಸಂಧಾನ, ನೀಚೋಹಂ ಭಾವನೆ, ರಕ್ತಗತವಾಗಿ ಹೋಗಿಬಿಟ್ಟಿದೆಯೋ ನಮಗೆ ಎನ್ನುವಷ್ಟು ಮಟ್ಟಿಗಿತ್ತು. ಆದ್ದರಿಂದ ಈ ಕನ್ನಡದ ವಿಶೇಷ ವಿದ್ಯಾರ್ಥಿಗಳಿದ್ದಾರಲ್ಲ ಇವರಲ್ಲಾದರೂ ಈ ನೈಚ್ಯಭಾವ ತೊಲಗಿ ತಮ್ಮ ಸಾಹಿತ್ಯ ತಮ್ಮ ಕಾವ್ಯಕೃತಿಗಳು-ಈ ವಿಚಾರದಲ್ಲಿ ಹೆಮ್ಮೆ ಬರುವಂತೆ ಹೇಳಬೇಕಾಗಿತ್ತು. ಅದಕ್ಕೋಸ್ಕರವಾಗಿ, ನಾವು ಇನ್ನೇನಲ್ಲದೆ ಇದ್ದರೂ-ವಯಸ್ಸಿನಲ್ಲಾದರೂ ಹಿರಿಯರಾಗಿದ್ದೇವೆ ಎಂಬ ಹೆಮ್ಮೆಗೆ ಹಕ್ಕುದಾರರು ಎಂಬುದನ್ನು ತೋರಿಸಬೇಕಾಗಿತ್ತು. ಮನುಷ್ಯ ಸಾಮಾನ್ಯರೂ ಇವನು ನೂರು ವರ್ಷ ಬದುಕಿದ್ದಾನೆ, ನೂರೈವತ್ತು ವರ್ಷ ಬದುಕಿದ್ದಾನೆ ಅಂದರೆ-ಸ್ವಲ್ಪ ಗಮನಕ್ಕೆ ಬರುತ್ತಾರೆ ಅಲ್ಲವೆ? ಅಂಥವರು ತೀರಿಕೊಂಡಾಗ ವಾರ್ತೆ ಪತ್ರಿಕೆಗಳಲ್ಲಿ ಕೂಡ ಬರುತ್ತದೆ. ಆದ್ದರಿಂದ ನೂರಾರು ನೂರೇಳು ವರ್ಷ ಬದುಕಿದರೆ ಅದು ಏನೋ ಒಂದು ಹಿರಿತನ ಪ್ರಾಪ್ತವಾಗಿ ಗೌರವಕ್ಕೆ ಕಾರಣವಾಗುತ್ತದೆ. ಬಹುಶಃ ನಾವೂ ಬದುಕೇವೋ ಎಂಬ ಆಸೆಯೆ ಕಾರಣ ಎಂದು ತೋರುತ್ತದೆ. ಆದ್ದರಿಂದ ಈ ಪ್ರಾಚೀನತೆ ಏನು ನಾವು ಅಷ್ಟರಮಟ್ಟಿಗೆ ತಿರಸ್ಕರಿಸುವ ವಸ್ತು ಅಲ್ಲ: ಅದಕ್ಕೋಸ್ಕರ ನಾನು ಸಾಹಿತ್ಯಚರಿತ್ರೆ ಪಾಠ ಹೇಳುವುದಕ್ಕೆ ಮುಂಚೆ, ನಮ್ಮ ಸಾಹಿತ್ಯ ಎಷ್ಟು ಪ್ರಾಚೀನವಾದುದು; ಎಷ್ಟು ಹಿರಿದಾದುದು, ಅನ್ನುವುದನ್ನು ತಿಳಿಸಿಕೊಡುವುದಕ್ಕೆ ಇಂಗ್ಲಿಷ್ ಸಾಹಿತ್ಯದೊಡನೆ-ಈ ವಯಸ್ಸಿನ ಮಟ್ಟದಲ್ಲಿ-ಹೋಲಿಸಿ ಮಾತಾಡುತ್ತಿದ್ದೆ:

“ಛಾಸರ್ ಇಂಗ್ಲಿಷ್ ಕಾವ್ಯದ ಪಿತಾಮಹ ಅಂತ ಹೇಳುತ್ತಾರೆ. ಅವನ ಕಾಲ ೧೩೪೦ ರಿಂದ ೧೪೦೦. ಪಂಪ ಹುಟ್ಟಿದ್ದು ಕ್ರಿ.ಶ.೯೦೨, ಚಾಸರನಿಗೆ ಸುಮಾರು ನಾಲ್ಕು ಶತಮಾನಗಳ ಪೂರ್ವದಲ್ಲಿ. ಅಂದರೆ, ಇಂಗ್ಲಿಷ್ ಭಾಷೆ – ಆ ಛಾಸರನ ಪದ್ಯ ನಾನು ಈಗ ಓದಿದರೆ ನನಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಅದನ್ನು ಹಳೇ ಇಂಗ್ಲಿಷ್ ಎನ್ನಬಹುದು, ಹಳಗನ್ನಡ ಎಂದಂತೆ. ಇಂಗ್ಲಿಷ್ ಸಾಹಿತ್ಯ ಪ್ರಾರಂಭ ಆಗಿದ್ದು ಆ ಕಾಲದಲ್ಲಿ. ಆದರೆ ಅದಕ್ಕಿಂತಲೂ ನಾನೂರು ವರ್ಷಗಳ ಹಿಂದೆಯೆ ಕನ್ನಡದಲ್ಲಿ ಜಗತ್ತಿನ ಯಾವ ಮಹಾಕಾವ್ಯಕ್ಕೂ ಸರಿದೂಗಬಲ್ಲಂಥ ಪಂಪನ ಕೃತಿ ಸಿದ್ಧವಾಗಿತ್ತು. ಆದ್ದರಿಂದ ನಿಮ್ಮ ಸಾಹಿತ್ಯದ ಮಹೋನ್ನತಿಯನ್ನು ಮಾತ್ರವಲ್ಲದೆ, ಅದರ ಪ್ರಾಚೀನತೆಯನ್ನೂ ಕೂಡ ಗಮನಕ್ಕೆ ತೆಗೆದುಕೊಂಡು ನೀವು ಗೌರವ ಕೊಡಬೇಕಾಗಿ ಬರುತ್ತದೆ. ಷೇಕ್ಸ್‌ಪಿಯರ್ ಕಾಲ ೧೫೬೪ ರಿಂದ ೧೬೧೬. ನಮ್ಮಲ್ಲಿ ಆಗಲೇ ರನ್ನ ಕ್ರಿ.ಸ.೯೯೩, ಜನ್ನ ಕ್ರಿ.ಶ.೧೨೩೦, ರತ್ನಾಕರ ಕ್ರಿ.ಶ.೧೫೫೭-ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವು ರತ್ನಾಕರನ ಹತ್ತಿರಕ್ಕೆ ಬರುವ ಹೊತ್ತಿಗೆ, ಅವನು ಈಚೀಚಿನವನು ಅನ್ನುವಹಾಗೆ ಆಗುತ್ತದೆ. ‘ಭರತೇಶ ವೈಭವ’ ಬರುವಷ್ಟು ಹೊತ್ತಿಗೆ, ನಮ್ಮ ಮನಸ್ಸಿನಲ್ಲಿ, ಪ್ರಾಚೀನತೆಯೆಲ್ಲ ಆಗಿಹೋಗಿ, ಹಳಗನ್ನಡ ನಡುಗನ್ನಡ ಮುಗಿದು ನವೀನತೆಗೇ ಕಾಲಿಡುತ್ತೇವೆ. ಆದರೆ ವಾಸ್ತವವಾಗಿ ರತ್ನಾಕರ ೧೫೫೭ರಲ್ಲಿದ್ದರೂ ನಮಗೆ ನವೀನನಾಗುತ್ತಾನೆ-ಷೇಕ್ಸ್‌ಪಿಯರನ ಕಾಲ ಅದು, ಇಂಗ್ಲಿಷ್ ಸಾಹಿತ್ಯಕ್ಕೆ ಅದು ಪ್ರಾಚೀನ ಕಾಲವೇ! ಛಾಸರನ ಕಾಲ ಪ್ರಪ್ರಾಚೀನಕಾಲ. ನಮಗದು ಪ್ರಾಚೀನ ಕಾಲವಲ್ಲ, ಮಧ್ಯಯುಗ, ಅಷ್ಟೇನೆ; ಆ ಅರ್ಥದಲ್ಲಿ. ಮಿಲ್ಟನ್‌ನದು ಇಂಗ್ಲಿಷ್ ಸಾಹಿತ್ಯದ ಮೊದಲನೆಯ ಮಹಾಕಾವ್ಯ. ಅದರ ಕಾಲ ಕ್ರಿ.ಶ.೧೬೦೮ರ ತರುವಾಯದ್ದು. ಅಂದರೆ ನಮ್ಮ ಅಳತೆಗೆ ತುಂಬ ಇತ್ತೀಚಿನದು; ಹುಡುಗ! ಡ್ರೈಡನ್ ೧೬೩೧. ಇನ್ನು ಬಿಡಿ, ಗೋಲ್ಡ್‌ಸ್ಮಿತ್ ವರ್ಡ್ಸ್‌ವರ್ತ್ ಇವರೆಲ್ಲ ತುಂಬಾ ಇತ್ತೀಚಿನ ತರುಣರು, ಕನ್ನಡ ವಾಗ್ದೇವಿಯ ವಯಸ್ಸಿನ ಮುಂದೆ.

ನಾನು ಯೋಚನೆ ಮಾಡಿದೆ, ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಓದುವವರು ಆಧುನಿಕ ಕಾಲಕ್ಕೆ ಬರುವವರೆಗೆ ಇಂಗ್ಲಿಷ್ ಸಾಹಿತ್ಯಕ್ಕೂ ನಮಗೂ ಏನೂ ಸಂಬಂಧವಿಲ್ಲ, ಪ್ರಭಾವದಲ್ಲಿ….ಆದರೂ ನಮ್ಮ ಪ್ರಮುಖ ಕವಿಗಳನ್ನಾದರೂ ಕುರಿತು ಬರೆಯುವಾಗ, ಅಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ತುಲನಾತ್ಮಕವಾಗಿ ತಮ್ಮ ಸಾಹಿತ್ಯದ ಈ ಪ್ರಾಚೀನತೆಯ ಪ್ರಜ್ಞೆ ಮನದಟ್ಟಾಗುವಂತೆ ಮಾಡಬೇಕಾದುದು ಆವಶ್ಯಕ. ಹಾಗೆ ಮಾಡಿದರೆ, ನಮ್ಮವರಿಗೆ ನಮ್ಮ ಸಾಹಿತ್ಯದ ಪ್ರಾಚೀನತೆಯನ್ನು ಗಮನಿಸಿ ಅದರ ಮಹೋನ್ನತಿಯನ್ನು ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ.

ಇಷ್ಟು ಇಂಗ್ಲಿಷ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಯಿತು. ಹಾಗೆಯೆ ನನ್ನ ಇನ್ನೊಂದು ಸೂಚನೆ ಏನು ಅಂದರೆ ಭಾರತೀಯ ಸಾಹಿತ್ಯಕ್ಕೆ ಸಂಬಂಧಪಟ್ಟದ್ದು. ಇಂಗ್ಲಿಷ್ ಸಾಹಿತ್ಯದ ಹಿನ್ನೆಲೆ ಸ್ವಲ್ಪ ಮಟ್ಟಿಗೆ ಜಾಗತಿಕವಾಗುತ್ತದೆ; ಪ್ರಭಾವಕ್ಕಿಂತಲೂ ಹೆಚ್ಚಾಗಿ ಪ್ರಾಚೀನತೆಗೆ ಸಂಬಂಧಪಡುತ್ತದೆ. ಆದರೆ ಭಾರತೀಯ ಹಿನ್ನೆಲೆ ಇದೆಯಲ್ಲ ಅದು ಬರಿಯ ವಯಸ್ಸಿಗಲ್ಲದೆ ಪ್ರಭಾವಕ್ಕೂ ಒಳಗಾಗುತ್ತದೆ. ಏಕೆಂದರೆ,-ಸಂಸ್ಕೃತವೂ ಸೇರಿದಂತೆ ಭಾರತೀಯ ಭಾಷೆಗಳ ಸಾಹಿತ್ಯದ ಹಿನ್ನೆಲೆಯಂತೂ ನಮ್ಮ ಕನ್ನಡ ಸಾಹಿತ್ಯದ ಮೇಲೆ ಪ್ರಭಾವಬೀರಿಯೆ ಬೀರುತ್ತದೆ; ನಿಶ್ಚಯ ಅದು. ಆ ಪ್ರಭಾವ ಇಂದಿನಂತೆ ಶೀಘ್ರಗಾಮಿಯಾಗಿರುತ್ತಿರಲಿಲ್ಲ, ನಿಜ. ಸುದ್ದಿ ಸಂಚರಿಸಬೇಕಾದರೆ ಒಮ್ಮೊಮ್ಮೆ ವರ್ಷಗಳೆ ಹಿಡಿಯುತ್ತಿದ್ದುವೊ ಏನೊ! ಇಂದು ಎಲ್ಲಾದರೂ ಒಂದು ಘಟನೆ, ಕ್ಯಾಲಿಫೋರ್ನಿಯಾದಲ್ಲಿಯೋ ಚಿಲಿಯಲ್ಲಿಯೋ ನಡೆದರೆ, ನಾಳೆ ಬೆಳಿಗ್ಗೆ-ನಾಳೆ ಬೆಳಿಗ್ಗೆಯೂ ಅಲ್ಲ, ಆ ಘಟನೆ ನಡೆದ ಸ್ವಲ್ಪ ಹೊತ್ತಿನೊಳಗೇ-ನಮಗೆ ರೇಡಿಯೋದಲ್ಲಿ ಸುದ್ದಿ ಬರುತ್ತದೆ. ಆಗ ಹಾಗಲ್ಲ. ಬಹುಶಃ ಆಗ ಪ್ರಯಾಣ ಮಾಡಬೇಕಾದರೆ ಎರಡು ಶತಮಾನ ಬೇಕಿತ್ತು. ಆ ಗ್ರಾಮದಲ್ಲಿ ಸತ್ತವರ ವಾರ್ತೆ ಬರಬೇಕಾದರೆ ಆ ಸತ್ತವರು ಮತ್ತೊಂದು ಜನ್ಮ ಎತ್ತಿರುತ್ತಿದ್ದರೋ ಏನೋ! ಅಲ್ಲಿಯವರೆಗೆ ವಾರ್ತೆ ಬರುತ್ತಿರಲಿಲ್ಲ. ಆದ್ದರಿಂದ ಆ ದೂರದ ಘಟನೆ ನಮ್ಮ ಮೇಲೆ ‘ಪ್ರಭಾವ’ ಆಗುವುದಕ್ಕೆ ಸಾಧ್ಯವಿರಲಿಲ್ಲ. ಇನ್ನು ಆ ಘಟನೆಗಳನ್ನು ವಸ್ತುವಾಗಿಸಿಕೊಂಡ ಸಾಹಿತ್ಯ ಕೃತಿಗಳೋ ಅವು ಲಿಖಿತಗೊಳ್ಳುವುದಕ್ಕೇ ಎಷ್ಟೋ ಕಾಲ ಹಿಡಿಯುತ್ತಿತ್ತು. ಇನ್ನು ಅವುಗಳ ಪಯಣದ ಮಾತೆಲ್ಲಿ ಬಂತು! ಆದರೂ ನಮ್ಮ ರಾಷ್ಟ್ರೀಯ ಹಿನ್ನೆಲೆಯಂತೂ ಅತ್ಯಂತ ಆವಶ್ಯಕವಾಗುತ್ತದೆ. ಏಕೆಂದರೆ, ನಮ್ಮ ಅಧ್ಯಾತ್ಮ ಮತ ಧರ್ಮ ತತ್ತ್ವ ಇವುಗಳೇ ವಿಶೇಷವಾಗಿ ನಮ್ಮ ಸಾಹಿತ್ಯದಲ್ಲಿರುವುದರಿಂದ, ಅದನ್ನು ಕೊಡಬೇಕಾಗುತ್ತದೆ.

ಅದರ ಜೊತೆಯಲ್ಲಿ ನಾವು ಇದುವರೆಗೆ ಹೆಚ್ಚು ಗಮನಿಸದೆ ಇರುವುದೊಂದಿದೆ, ನಮ್ಮ ಸೋದರ ಸಾಹಿತ್ಯಗಳು. ತಮಿಳು, ಮಲೆಯಾಳಿ, ತೆಲುಗು ಮೊದಲಾದುವು ನಮ್ಮ ಸುತ್ತ ಇರುವುವು. ಅದೂ ಬಹಳ ಹತ್ತಿರ ಇರುವುವು. ಆದ್ದರಿಂದ ಅವುಗಳ ಸಮಕಾಲೀನದ ಹಿನ್ನೆಲೆಯನ್ನೂ ತುಸು ಗಮನಿಸಬೇಕಾಗುತ್ತದೆ. ಎಲ್ಲ ಕವಿಗಳ ವಿಚಾರದಲ್ಲಿಯೂ ಹಾಗೆ ಹೇಳುವುದು ಬೇಡ. ಆದರೆ ದೊಡ್ಡದೊಡ್ಡ ಕವಿಗಳನ್ನು ತೆಗೆದುಕೊಂಡಾಗ, ಅಲ್ಲಿಯೂ ಏನಾದರೂ ಇಂಥ ಕೆಲಸಗಳು ನಡೆಯುತ್ತ ಇದ್ದರೆ, ಮೂಡುತ್ತಿದ್ದರೆ, ಅದನ್ನೂ ಸ್ವಲ್ಪ ಸೂಚಿಸಬೇಕಾಗುತ್ತದೆ. ಓದುವವನಿಗೆ “ಓಹೋ ಆ ಸಮಯದಲ್ಲಿ ಈ ಕೆಲಸ ನಡೆಯುತ್ತಾ ಇತ್ತು ಅಲ್ಲಿಯೂ.” ಎಂದು ಕುತೂಹಲಕ್ಕಾದರೂ ತಿಳಿಯಬೇಕು.

ಹತ್ತಿರದ ಸೋದರ ಸಾಹಿತ್ಯಗಳನ್ನಲ್ಲದೆ ತುಸು ದೂರದ ಸೋದರ ಸಾಹಿತ್ಯಗಳ ಹಿನ್ನೆಲೆಯನ್ನೂ ಗಮನಿಸಬೇಕಾಗುತ್ತದೆ. ನಿದರ್ಶನಕ್ಕಾಗಿ ಬಂಗಾಳಿ ಹಿಂದಿಗಳನ್ನೆ ತೆಗೆದುಕೊಳ್ಳಿ. ತೊರವೆ ರಾಮಾಯಣದ ಕವಿಯ ಕಾಲ ವಿಚಾರ ಹೇಳುವಾಗ ಬಂಗಾಳಿಯ ಕೃತ್ತಿವಾಸ ರಾಮಾಯಣ, ಹಿಂದಿಯ ತುಲಸೀದಾಸ ರಾಮಾಯಣಗಳನ್ನೂ ತುಸು ತುಲನಾತ್ಮಕವಾಗಿ ಪರಿಶೀಲಿಸಬಹುದು. ಇದನ್ನೆಲ್ಲ ಏತಕ್ಕೆ ಹೇಳುತ್ತಿದ್ದೇನೆ ಎಂದರೆ ನಾವು ನಮ್ಮದನ್ನೇ ಮಾತ್ರ ನೋಡುತ್ತ ಕುಳಿತಿದ್ದರೆ ನಮಗೆ ಪ್ರಜ್ಞಾವಿಸ್ತಾರ ಲಭಿಸುವುದಿಲ್ಲ. ಇತರರೊಡನೆ ನಮ್ಮನ್ನು ತೂಗಿಕೊಳ್ಳದಿದ್ದರೆ ನಮ್ಮದರ ಸರಿಯಾದ ಬೆಲೆಯೂ ನಮಗೆ ತಿಳಿಯುವುದಿಲ್ಲ. ಹಾಗಾಗಿ ನಾವು ಹೊಗಳಿಕೆಯ ಅಥವಾ ತೆಗಳಿಕೆಯ ಉತ್‌ಪ್ರೇಕ್ಷೆಗೆ ವಶವಾಗುವ ಸಂಭವವೊದಗುತ್ತದೆ. ಪೂರ್ಣದೃಷ್ಟಿಯ ಪರಿಪೂರ್ಣ ವಿಮರ್ಶೆಗೆ ಇಂದು ಜಗತ್‌ಪ್ರಜ್ಞೆಯ ಅಥವಾ ವಿಶ್ವಪ್ರಜ್ಞೆಯ ನಿಕಷ ಆವಶ್ಯಕ.

ಅಂದರೆ, ನಾವು ನಮ್ಮ ಕೆಲಸಗಳನ್ನು ಕವಿಗಳನ್ನು ಕೃತಿಗಳನ್ನೆಲ್ಲ ಜಾಗತಿಕ ಮೌಲ್ಯದ ಒರೆಗಲ್ಲಿಗೆ ಉಜ್ಜಿ ಅಲ್ಲಿ ಅದು ತೇರ್ಗಡೆ ಹೊಂದಿದರೇನೇ ಇಲ್ಲಿಯೂ ಅದು ತೇರ್ಗಡೆ ಹೊಂದುತ್ತೆ ಎಂಬ ಭಾವನೆ ಬಹಳ ತಪ್ಪಾಗುತ್ತದೆ. ಅಂತಹ ತಪ್ಪಿಗೆ ಕಾಲುಜಾರಿ ಬಿದ್ದ ಒಬ್ಬ ಸಮರ್ಥ ವ್ಯಕ್ತಿಯ ನಿದರ್ಶನವನ್ನು ಇಲ್ಲಿ ನೆನೆಯಬಹುದು.

ಈ.ಪಿ.ರೈಸ್ ಸಾಹೇಬರು ಕನ್ನಡಕ್ಕಾಗಿ ಬಹಳ ದುಡಿದವರು. ಇಂಗ್ಲಿಷಿನವರಾದ್ದರಿಂದ ಇಂಗ್ಲಿಷ್ ಚನ್ನಾಗಿ ಗೊತ್ತಿತ್ತು. ಆದರೆ ನಮ್ಮ ಸಾಹಿತ್ಯದ ಒಂದು ಮೌಲ್ಯನಿರ್ಣಯ ಮಾಡುವ ಸಂದರ್ಭ ಬಂದಾಗ ಹೀಗೆ ಬರೆದಿದ್ದಾರೆ: I am afraid it must be confessed that Kanarese writers, highly skillful though they are in the manipulation of their language, and very pleasing to listen too in the original, have as yet contributed extremely little to the stock of the world’s knowledge and inspiration. There is little of original and imperishable thought on the questions of perennial interest to man. ಈಗ ಯಾರೊ ಒಬ್ಬರು, ಕನ್ನಡ ಸಾಹಿತ್ಯವನ್ನು ಅಷ್ಟೇನೂ ತಿಳಿಯದವರು, ಅಂತಹ ಅಧ್ಯಯನ ಏನನ್ನೂ ಮಾಡದೆ ಲೋಕಾಭಿರಾಮವಾಗಿ ಮಾತಾಡುವವರು, ಕನ್ನಡ ಸಾಹಿತ್ಯವನ್ನೆಲ್ಲ ‘ಬೂಸಾ’ ಅಂದುಬಿಟ್ಟರು ಎಂದು ಎಲ್ಲರೂ ಗುಲ್ಲೆಬ್ಬಿಸಿದರು. ಆದರೆ ರೈಸ್ ಮಹಾಶಯ ಮಾಡಿದ ಈ ಟೀಕೆಗೆ ಯಾರೂ ಪ್ರತಿಭಟಿಸಲು ಚಕಾರವನ್ನೂ ಎತ್ತಲಿಲ್ಲ. ಯಾರೂ ಗಲಾಟೆ ಮಾಡಲೂ ಇಲ್ಲ ಆಗ. ಅಷ್ಟೇ ಅಲ್ಲ ಅದನ್ನ ಹಾಗೆಯೆ ಒಪ್ಪಿಕೊಂಡೂ ಬಿಟ್ಟಿದ್ದರು, ಮೌನಸಮ್ಮತಿಯಿಂದ: ಮುಂದೆ ಕನ್ನಡ ಸಾಹಿತ್ಯ ಚರಿತ್ರೆ ಬರೆಯುವವರು ಇದನ್ನೆಲ್ಲ ಗಮನಿಸಬೇಕು. ಏಕೆಂದರೆ ಆ ಸಾಹೇಬನ ವಿಮರ್ಶೆಯ ನಿಕಷ ಯಾವುದಾಗಿತ್ತೊ ನನಗೆ ಗೊತ್ತಿಲ್ಲ. ಆದರೆ ಅದು ತುಂಬ ಅನುದಾರವಾದ ಟೀಕೆ; ಅವಿವೇಕದ್ದು ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಅವರು ಅದೇ ಮಾತನ್ನು ಕನ್ನಡಕ್ಕೆ ಅನ್ವಯಿಸಿದಂತೆ ನಮ್ಮ ಇಡೀ ಭಾರತೀಯ ಸಾಹಿತ್ಯಕ್ಕೂ ಹೇಳಬೇಕಾಗಿ ಬರುತ್ತದೆ! ಏಕೆಂದರೆ, ಅವರು ಹೇಳಿದ Original imperishable thought ಎಂಬುದು ಭಾರತೀಯವಾದ Original imperishable thought ಏನಿದೆಯೊ ಅದಕ್ಕೆ ಅನ್ವಯವಾಗಿ ಬಿಡುತ್ತದೆ. ಕಾರಣ, ಯಾವುದು ಭಾರತೀಯವಾದ ‘ಸೃಜನಶೀಲ ಅವಿನಾಶಿ ಚಿಂತನಾಂಶ’ ಆಗಿದೆಯೊ ಅದೇ ನಮ್ಮ ಕನ್ನಡ ಸಾಹಿತ್ಯದಲ್ಲಿಯೂ ಸ್ಪಂದಿಸುತ್ತದೆ. ಒಂದು ವೇಳೆ, ಅವರ ಅಭಿಪ್ರಾಯ ಭಾರತೀಯವಲ್ಲದ, ತನ್ನದೇ ಕನ್ನಡದ್ದು ಮಾತ್ರವೇ ಆದ ಮತ್ತೊಂದೇನನ್ನಾದರೂ ಕೊಡಬೇಕಾಗಿತ್ತು ಎಂದು ಆಲೋಚನೆ ಮಾಡಿದ್ದರೆ, ಸ್ವಲ್ಪಮಟ್ಟಿಗೆ ಆಂಶಿಕವಾಗಿ ಒಪ್ಪಿಕೊಳ್ಳಬಹುದಾಗಿತ್ತು. ಏಕೆಂದರೆ, ಅವರು ಹೇಳಬಹುದು! ಪಂಪ ಆದಿಪುರಾಣ ಬರೆದ ಅಥವಾ ವಿಕ್ರಮಾರ್ಜುನ ವಿಜಯ ಬರೆದ-ಇವೆಲ್ಲಾ contribution-(ಕೊಡುಗೆ) ಅಲ್ಲೇ ಸಂಸ್ಕೃತದಲ್ಲಿಯೆ ಇರೋದು ತಾನೆ? ಆದ್ದರಿಂದ ಇವರೇನು ಹೊಸದಾಗಿ ಕೊಟ್ಟಹಾಗಾಯಿತು? ಅಂದರೆ, ಕನ್ನಡಿಗರಾಗಿ ಕನ್ನಡದವರೇ ಹೊಸದಾಗಿ ಕೊಟ್ಟಿದ್ದು ಏನಿದೆ ಅಂದರೆ ನಾವು ಬಹುಶಃ ‘ಗೋವಿನ ಕಥೆ’ಗೆ ಹೋಗಬೇಕಾಗುತ್ತದೆ. ಗೋವಿನ ಕಥೆ ಬಹುಶಃ ಕನ್ನಡಿಗರದ್ದೇ ಎಂದು ಭಾವಿಸುತ್ತೇನೆ. ಅಥವಾ ಆ ಗೋವಿನ ಕಥೆಗೂ ಬೇರೆ ಎಲ್ಲಿಯಾದರೂ ಆಕರ ಇದ್ದರೂ ಇರಬಹುದು, ನನಗೆ ಗೊತ್ತಿಲ್ಲ. ಆದ್ದರಿಂದ ಕನ್ನಡಿಗರು ಭಾರತೀಯವಲ್ಲದ್ದು ಬರೀ ಕನ್ನಡದ್ದೇ ಆಗಿರತಕ್ಕಂಥದ್ದು ಅಂತ ಏನಾದರೂ ರೈಸ್ ಅವರು ಅಭಿಪ್ರಾಯ ಕೊಟ್ಟರೋ ಏನೋ ಗೊತ್ತಿಲ್ಲ. ಆದರೆ ಹಾಗಲ್ಲದೆ ಹೋದಪಕ್ಷದಲ್ಲಿ ಅವರು ಹೇಳಿದ್ದು ಬಹಳ ತಪ್ಪು; ಬಹಳ ಸುಳ್ಳು. ಯಾಕೆಂದರೆ ಭರತಖಂಡದ ಸಂಸ್ಕೃತ ಸಾಹಿತ್ಯದಲ್ಲಿ ಮತ್ತು ಇತರ ಸಾಹಿತ್ಯದಲ್ಲಿ ಯಾವ original and imperishable thought ಇದೆಯೋ ಅದು ಕನ್ನಡದಲ್ಲಿಯೂ ಇದ್ದೇ ಇದೆ. ಅಷ್ಟೇ ಅಲ್ಲ, ಈಗ ಆದಿಪುರಾಣದಲ್ಲಿ, ಒಂದು ಜೀವ ತನ್ನ ವಿಕಾಸ ಮಾರ್ಗದಲ್ಲಿ ಜನ್ಮ ಜನ್ಮಾಂತರಗಳಲ್ಲಿ ಬೇರೆ ಬೇರೆ ಅನುಭವಗಳನ್ನು ಪಡೆದುಕೊಂಡು, ಪಡೆದುಕೊಂಡು, ಪಡೆದುಕೊಂಡು, ಕೊನೆಯಲ್ಲಿ ಪರಿಪೂರ್ಣ ಸ್ಥಿತಿಯನ್ನು ಪಡೆಯುತ್ತದೆ ಎನ್ನುವುದೊಂದು ತತ್ತ್ವ ಇದೆಯಲ್ಲ-ಇಂಥ ತತ್ತ್ವ ಮತ್ತು ಅದಕ್ಕೆ ಸಂಬಂಧಪಟ್ಟಂಥ ಕಾವ್ಯ ಯಾವ ಬೇರೆ ಸಾಹಿತ್ಯದಲ್ಲಿದೆ? ಭಾರತೀಯ ಸಾಹಿತ್ಯ ಬಿಟ್ಟುಬಿಡಿ, ನಾನು ಕೇಳುವುದು world’s contribution ಅಂತ. ಗೊತ್ತಾಯಿತೆ? ಆದ್ದರಿಂದ, ಇಷ್ಟೇ ಅಲ್ಲ, ಕಡೆಗೆ ನಮ್ಮ ಐದಾರು ಮಹಾಕವಿಗಳಲ್ಲಿ ಜಗತ್ತಿನ ಯಾವ ಮಹಾಕವಿಗೂ ಕಡಮೆಯಾಗದ, ಸ್ಪರ್ಧೆಯಲ್ಲಿ ಗೆಲ್ಲಬಹುದಾದಂಥ ಕಾವ್ಯಸಾಹಿತ್ಯವೂ ಇದೆ, ಸಾಹಿತ್ಯ ಭಾಗಗಳೂ ಇವೆ. ಅದಕ್ಕಾಗಿಯೆ, ಸಾಹಿತ್ಯ ಚರಿತ್ರೆ ಬರೆಯುವವರು ಈ ವಿಚಾರಗಳನ್ನೆಲ್ಲ ಗಮನಿಸಿ ವಿದ್ಯಾರ್ಥಿಯ ಕುತೂಹಲವನ್ನು ಕೆರಳಿಸಿ ಅವನ ಪ್ರಜ್ಞೆ ಜಾಗತಿಕ ಮಟ್ಟಕ್ಕೇರುವಂತೆ ಮಾಡಬೇಕು.

ನಾನು ಸಾಹಿತ್ಯ ಚರಿತ್ರೆಯ ವಿಷಯ ಮಾತ್ರ ಹೇಳುತ್ತಾ ಇದ್ದೇನೆ. ಅಷ್ಟೇ ಸಾಲದು. ಸಾಹಿತ್ಯಗಳಿಗೆ ಪ್ರೇರಕವಾಗುವ ಜಗತ್ತಿನ ಬೇರೆ ಚರಿತ್ರೆಯ ಐತಿಹಾಸಿಕ ಮಹದ್ ಘಟನೆಗಳು ನಡೆಯುತ್ತವೆಯಲ್ಲ ಅವುಗಳ ಸಂಕ್ಷೇಪ ಭಿತ್ತಿಯನ್ನೂ ನಮ್ಮವರು ಕೊಡಬೇಕಾಗುತ್ತದೆ. ಉದಾಹರಣೆಗೆ, ನೆಪೋಲಿಯನ್ ರಷ್ಯಕ್ಕೆ ನುಗ್ಗಿದ್ದಾಗಿನ ಯಾವುದೊ ಒಂದು ಕದನ ನಡೆಯುತ್ತಾ ಇದೆ ಎಂದಿಟ್ಟುಕೊಳ್ಳೋಣ. (ಟಾಲ್‌ಸ್ಟಾಯ್‌ನ ‘ವಾರ್ ಅಂಡ್ ಪೀಸ್’ ಕಾದಂಬರಿಯ ‘ಸ್ಮೋಲೆನ್ಕ್ ಬ್ಯಾಟ್ಲ್’ ಅಂತ ಇಟ್ಟುಕೊಳ್ಳಿ.) ನಮ್ಮಲ್ಲಿ ಕುತೂಹಲ ಇರುವವರು ಆ ಇಸವಿ ಆ ತಾರೀಖು ತೆಗೆದುಕೊಂಡು, ಆ ಕಾಲದಲ್ಲಿ ಇಂಡಿಯಾದಲ್ಲಿ ಎಲ್ಲಿ, ಹೆಚ್ಚಿಗೆ ಏನು ಅಂಥ ಘಟನೆಗಳು ನಡೆಯುತ್ತಾ ಇದ್ದುವು ಎಂಬುದನ್ನು ಗುರುತಿಸಬಹುದು. ಯಾಕೆಂದರೆ ಜಗತ್ತನ್ನು ನಾವು ವಿಭಜಿಸಿದ್ದೇವೆಯೆ ಹೊರತು, ಕಾಲಪುರುಷ ಏನೂ ವಿಭಜಿಸಿಲ್ಲ. ಆದ್ದರಿಂದ ಆ ವಿಶ್ವಪ್ರಜ್ಞೆ ನಮ್ಮವರಿಗೆ ಸ್ವಲ್ಪಮಟ್ಟಿಗೆ ಒದಗುವಂತೆ ನಮ್ಮ ಸಾಹಿತ್ಯಚರಿತ್ರೆಯಲ್ಲಿ ಸ್ಥಳ ಕೊಡಬಹುದು. ಹೆಚ್ಚು ಭಾಗ ಕೊಡಬೇಕು ಎಂದು ನಾನು ಹೇಳುವುದಿಲ್ಲ, ಹತ್ತೆ ಪಂಕ್ತಿ ಸಾಕು, ಅಥವಾ ಒಂದೇ ಪುಟ ಸಾಕು: ಕ್ರಿ.ಶ.೯೪೨ರಲ್ಲಿ ಪಂಪ ತನ್ನದೊಂದು ಮಹಾಕಾವ್ಯ ಬರೀತಾ ಇದ್ದಾನೆ. ಅದೇ ಸಮಯದಲ್ಲಿ ಇಂಗ್ಲೆಂಡ್‌ನಲ್ಲೊ ಅಥವಾ ಫ್ರಾನ್ಸ್‌ನಲ್ಲೊ ಅಥವಾ ಗ್ರೀಸಿನಲ್ಲೊ ಅಥವಾ ರೋಮಿನಲ್ಲೊ ಎಲ್ಲಿಯಾದರೂ ಬೇರೆ ಕಡೆಗಳಲ್ಲಿ ಬೇರೆ ಸಾಹಿತ್ಯಕವಾದ ಮಹತ್ತಾದ ಘಟನೆಗಳು ನಡೆಯುತ್ತಾ ಇದ್ದರೆ-ಇದರಿಂದ ನಮ್ಮ ಪ್ರಜ್ಞೆಗೆ ವಿಶಾಲತೆ, ವ್ಯಾಪ್ತಿ, ಉಂಟಾಗುತ್ತದೆ. ಅದನ್ನೂ ಸ್ವಲ್ಪ ಸೂಚಿಸಿ ಎಂದು ಹೇಳಬಹುದು.

……….ಅದರ ಜೊತೆಗೆ ಈ ತರದ ವಿಮರ್ಶೆಗಳಿರುತ್ತವೆ. ಈ ತರದ ವಿಮರ್ಶೆ ಬರೆಯುವಾಗ ಅನೇಕ ವಿಮರ್ಶೆಗಳ ವಿಮರ್ಶೆಗಳನ್ನೂ ಸೇರಿಸಬೇಕಾಗಿ ಬರುತ್ತದೆ. ಪಂಪನ ವಿಚಾರ ಬರೆಯುವಾಗ ನೀವು ಬೇಕಾದಷ್ಟು ಬರೆಯಬೇಕಾಗಿ ಬರುತ್ತದೆ, ಸೇರಿಸಬೇಕಾಗಿ ಬರುತ್ತದೆ. ಆದ್ದರಿಂದ ಅಲ್ಲಿ ಇಂಥ ವಿಮರ್ಶೆಗಳನ್ನೂ ತೆಗೆದುಕೊಂಡು-ಅದನ್ನು ಹೌದು ಅನ್ನುವುದಾದರೆ ಹೌದು, ಅಲ್ಲ ಅನ್ನುವುದಾದರೆ ಅಲ್ಲ ಅಥವಾ ಏಕಲ್ಲ-ಇದನ್ನೂ ಸ್ವಲ್ಪ ಸೇರಿಸಬೇಕಾಗುತ್ತದೆ.

ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್‌ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ-ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ – ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ. ಅನೇಕ ಇಂಗ್ಲಿಷ್ ಕವಿಗಳು ಜಗತ್ಕವಿಗಳಾಗುವುದಕ್ಕೆ ಕಾರಣ, ಇಂಗ್ಲೆಂಡ್ ದೇಶ ಜಗತ್ತಿನಲ್ಲೆಲ್ಲ ವ್ಯಾಪಿಸಿದ್ದು, ಆ ಕಾರಣದಿಂದಲೆ ಆದದ್ದು. ಆದ್ದರಿಂದ ನಾವು ಆ ತರಹದ ಕೀರ್ತಿಯನ್ನು-ಅದನ್ನೇ ನಾನು ಕೀರ್ತಿಶನಿ ಎಂದು ಕರೆದದ್ದು – ಅಂದರೆ ನಮ್ಮವರನ್ನು ಇನ್ನು ಯಾರೋ ಹೊಗಳದ ಹೊರತು, ಇನ್ಯಾರೋ ಗಗನಕ್ಕೆತ್ತದ ಹೊರತು, ನಾವು ಅವರನ್ನು ಗಮನಿಸುವುದೇ ಇಲ್ಲ, ನೋಡುವುದೇ ಇಲ್ಲ. ರವೀಂದ್ರನಾಥ ಠಾಕೂರರಿಗೆ ನೊಬೆಲ್ ಬಹುಮಾನ ಬಂದಮೇಲೆಯೆ “ಓಹೋ ಇವರು ನಮ್ಮ ಟಾಗೋರ!” ಅಂತ, ವಿವೇಕಾನಂದರಿಗೆ, ಅವರಿಗೆ ಅಮೆರಿಕಾ ದೇಶದವರು ಮಣಿದುದನ್ನು ಕಂಡಮೇಲೆ ಇಲ್ಲಿ ‘ಜೈ ವಿವೇಕಾನಂದ!’ ಅಂತ ಶ್ಲಾಘಿಸುತ್ತೇವೆ. ಈ ತರದ ಮನೋಧರ್ಮವನ್ನು ತಪ್ಪಿಸಬೇಕು. ನಾವು ಜಗತ್ತಿನ ಸಾಹಿತ್ಯವನ್ನೂ ನೋಡಬೇಕು, ನಮ್ಮದರ ಮಿತಿ ಏನು ಅಂತಲೂ ತಿಳಿದುಕೊಳ್ಳಬೇಕು; ಎಲ್ಲಾ ತಿಳಿದುಕೊಳ್ಳಬೇಕು. ಆದರೆ ಈ ತರದ ಒಂದು ಪರಪ್ರಶಂಸಾಧೀನತೆ-ಪರಪ್ರತ್ಯಯನೇಯ ಬುದ್ಧಿ ಅಂತ ಹೇಳುತ್ತಾರಲ್ಲ ಅದು-ಅತಿಯಾಗಬಾರದು ಅಂತ ನಾನು ಹೇಳುತ್ತಾ ಇರುವುದು.

ಮತ್ತೊಂದು ವಿಷಯ – ಇತ್ತೀಚಿನ ಕುಬುದ್ಧಿ ವಿಮರ್ಶೆಯನ್ನು ಅನುಲಕ್ಷಿಸಿ ಹೇಳುತ್ತಿದ್ದೇನೆ: ಯಾವುದಾದರೂ ಒಂದು ಭಾವಗೀತೆಯೊ ಕಾವ್ಯವೊ ನಮಗೆ ಮೊತ್ತಮೊದಲು ಎದುರಾದಾಗ, ಅದರ ಪ್ರಥಮಸ್ಪಂದನ ನಮಗೆ, ನಮ್ಮ ಹೃದಯಕ್ಕೆ, ಒಂದು ವಿಶೇಷ ರಸಾನುಭವಕ್ಕೆ ಕಾರಣವಾಗುತ್ತದೆ ಎಂದು ಇಟ್ಟುಕೊಳ್ಳೋಣ. ಬರ ಬರುತ್ತಾ ಅತಿಪರಿಚಯದಿಂದ ಅದು ಅವಜ್ಞೆಗೆ ಎಡೆ ಕೊಡಬಹುದು. ಆಗ ಅದನ್ನು ರೋಮ್ಯಾಂಟಿಕ್ ಎಂದು ಅವಹೇಳನ ಮಾಡುವುದು ಅವಿವೇಕವಾಗುತ್ತದೆ. ಅಲ್ಲಯ್ಯಾ, ನಿನಗೆ ಈಗ ‘ಡಾಫೋಡಿಲ್ಸ್’ ಅನ್ನುವ ಕವನವನ್ನು ಓದಿ, ಕೇಳಿ, ಪರೀಕ್ಷೆಗೆಲ್ಲಾ ಬರೆದು, ಬೇಜಾರಾಗಿ, ಹಾಳುಪದ್ಯ ಇದು ಅನ್ನುವಷ್ಟು ಮಟ್ಟಿಗೆ ಆಗಿ, ಥತ್ ವರ್ಡ್ಸ್‌ವರ್ತ್ ಏನು ಮಹಾ? ಅಂತಾ ಆಗಿರಬಹುದು. ಆದರೆ ನನ್ನ ಹಾಗೆ ನೀನೂ ಹೊಚ್ಚ ಹೊಸ ಹುಡುಗನಾಗಿ ಇಂಗ್ಲಿಷ್ ಭಾಷೆಯನ್ನು ಕಲಿತು ಮೊದಲು ಆ ಕವನವನ್ನು ಓದಿದೆಯಲ್ಲಾ ಆಗ ಆದ ಅನುಭವ ಏನು ಅನ್ನುವುದನ್ನು ಮರೆತುಬಿಟ್ಟಿರುತ್ತೀಯೆ. ಬರುತ್ತಾ ಬರುತ್ತಾ ಅನುಭವ ಹಳಸಿಹೋಗಿ ನಿನಗೆ ಈಗ ಆ ಪದ್ಯಾನೇ ಹಾಗೆ ಅಂತ ಆಗಿಬಿಟ್ಟಿರಬಹುದು. ಆದರೆ ಈಗಲೂ ಕೂಡ ಆ ಕವನವನ್ನು ಯಾವನಾದರೂ ಒಬ್ಬ ತರುಣನ ಸದ್ಯಃಪ್ರಫುಲ್ಲ ಪ್ರಜ್ಞೆ ಮೊತ್ತಮೊದಲಿಗೆ ಸಹೃದಯಭಾವದಿಂದ ಆಸ್ವಾದಿಸಿ ಸ್ಪಂದಿಸುತ್ತದೆಯೋ ಆ ಪ್ರಜ್ಞೆಗೆ ಅದೇ-ನಿನಗೆ ಉಂಟಾಯಿತಲ್ಲ ಹಿಂದೆ-ಅದೇ ಒಂದು ಸ್ಪಂದನ, ಅದೇ ಒಂದು ಭಾವೋನ್ಮೀಲನ ಈಗಲೂ ಉಂಟಾಗುತ್ತದೆ. ಆದ್ದರಿಂದ ಆ ಕವನ ನಿತ್ಯವಾಗಿಯೂ ಹೊಚ್ಚ ಹೊಸದಾದಂಥ ಕವನವೇ ಆಗುತ್ತದೆ, ಆತನಿಗೆ ಮತ್ತು ಮುಂಬರುವ ಅಂತಹ ತರುಣರಿಗೆ.

ನಿಮ್ಮ ಮನೆಯ ಮುಂದೆ ಒಂದು ಒಳ್ಳೆಯ ಹೂವಿನ ಮರ ನೆಟ್ಟಿದ್ದೀರಿ ಅಂತಾ ಇಟ್ಟುಕೊಳ್ಳಿ. ಅದಕ್ಕೆ ಚೆನ್ನಾಗಿ ತಳಿರು ಬಂದಿದೆ. ನಿಮಗೆ ಅದು ದಿನಾದಿನಾ ಕಣ್ಣಿಗೆ ಬಿದ್ದರೂ ಅದನ್ನು ಸೌಂದರ್ಯ ಪ್ರಜ್ಞೆಯಿಂದ ನೋಡುವುದಿಲ್ಲ. ಅದಕ್ಕೆ ಬದಲಾಗಿ ಇನ್ನೆಲ್ಲೋ ದೂರದ ಬೇರೆಕಡೆಗೆ ಹೋಗಿ, ಟೂರಿಸ್ಟ್ ಬಸ್ಸು ಹತ್ತಿಕೊಂಡು ಅಲ್ಲಿ ಇಲ್ಲಿ ಅಲೆದು ಬರುತ್ತೀರಿ. ಮನೆ ಎದುರುಗಡೇನೇ ಇರುವ ಸೌಂದರ್ಯವನ್ನು ಅನುಭವಿಸಲಾರಿರಿ. ಆದರೆ ಯಾರೊ ಒಬ್ಬ ಹೊಸಬ ‘ಕಣ್ಣಿರುವವನು’ ಯಾವಾಗಲಾದರೂ ನಿಮ್ಮ ಮನೆಗೆ ಬಂದಾಗ, ಆಹಾ ಏನು ಅದ್ಭುತವಾಗಿದೆ ಅಂತಂದಾಗ, ನೀವೂನೂ ಕಣ್ಣು ತೆರೆದಂತಾಗಿ ಓಹೋ ಹೌದು ಅಂತ ಕಾಣುತ್ತದೆ ಎಂದು ಹೇಳುತ್ತೀರೇನೋ? ಇದು ಒಂದು ತರದ ಹೃದಯದಾರಿದ್ರ್ಯ. ಈ ಹೃದಯದಾರಿದ್ರ್ಯದಿಂದ ನಾವು ಪಾರಾಗಬೇಕು.

ಆ ಕವನ, ಅವೊತ್ತು ಅದನ್ನು ಓದಿದಾಗ, ಯಾವ ಭಾವನೆ ಇತ್ತೋ ಆಗಿನ ಜನಗಳಿಗೆ ಅದೇ ಭಾವನೆ ಬರುತ್ತದೆ ಈಗಿನವರಿಗೂ. ಅಂದರೆ ಹೊಸಬರಾದ ನೀವು, ಹೊಸದು ಬರೆಯುತ್ತೇನೆ ಎಂದರೆ ಬರೆಯಬೇಡಿ ಅಂತ ಹೇಳುವುದಿಲ್ಲ. ಆದರೆ ಆ ಹಳೆಯದನ್ನು ಯಾಕೆ ಬಯ್ಯಬೇಕು? ನೀನು ಬರೆದದ್ದು ಮುಂದೆ ಏನಾಗುತ್ತದೆ ಅನ್ನುವುದು ಬೇರೆ ವಿಚಾರ. ಅದನ್ನ ಮುಂದಿನವರು ನೋಡಿಕೊಳ್ಳುತ್ತಾರೆ. ಆದರೆ ಹಿಂದಿನ ಅದನ್ನ ಯಾಕೆ ಬಯ್ಯುತ್ತೀಯೆ? ಅದರ ಹೊಸತನವನ್ನು ನೀನು ಯಾಕೆ ಪ್ರಶ್ನಿಸುತ್ತೀಯೆ? ನಿನಗೆ, ಮುದುಕನಾಗಿ ಹಲ್ಲೆಲ್ಲ ಬಿದ್ದುಹೋಗಿ, ಚುಂಬನ ಅನ್ನುವುದು ಶುದ್ಧ ಕೆಲಸಕ್ಕೆ ಬಾರದ್ದು ಅನಿಸಿ, ವೈರಾಗ್ಯ ಬಂದು ನೀನು ಹಾಳಾದ ಮಾತ್ರಕ್ಕೆ ಎಲ್ಲರಿಗೂ ನೀನು ವೈರಾಗ್ಯ ಬೋಧಿಸುವುದಕ್ಕೆ ಹೋದರೆ?

ನಾವೆಲ್ಲಾ ಹೊಸದಾಗಿ ಕವಿತೆ ಬರೆಯುತ್ತಿದ್ದ ಕಾಲದಲ್ಲಿ ನಮ್ಮನ್ನೆಲ್ಲ ಕೆಲವರು ‘ಇವರು ಕನ್ನಡದ ಷೆಲ್ಲಿ, ಇವರು ಕನ್ನಡದ ವರ್ಡ್ಸ್‌ವರ್ತ್ ಎಂದು ಏನೇನೊ ಹೆಸರಿಟ್ಟು ಕರೆಯುತ್ತಿದ್ದರು. ಅದೊಂದು ತರಾ ಚಟ ಹಿಡಿದಿತ್ತು ಆವಾಗ. ಆಮೇಲೆ ನಮ್ಮ ಕೃತಿ ಇಂಗ್ಲಿಷಿಗೆ ಭಾಷಾಂತರ ಆಗಿ, ಯಾವುದೊ ಅಲ್ಲಿಯ ಮ್ಯಾಗಜಿನ್‌ನಲ್ಲಿ ಬಂತು, ಇಲ್ಲಿಯ ಮ್ಯಾಗಜಿನ್‌ನಲ್ಲಿ ಬಂತು, ಎಂದು ಯಾರೋ ಅಂದಕೂಡಲೆ ಇವರಿಗೆ ತಲೆಗೆ ಕೋಡೋ ಕಿರೀಟವೋ ಬಂದಂತಾಗುತಿತ್ತು. ನನ್ನ ‘ನೇಗಿಲಯೋಗಿ’ ಅನ್ನುವ ಕವನವನ್ನು ರಾಜಾರಾವ್ ಎಂಬುವರು (ಈಗ ಹೆಸರಾಂತ ದೊಡ್ಡ ಕಾದಂಬರಿಕಾರರಾಗಿದ್ದಾರೆ ಅವರು) ಆಗ ನಲವತ್ತು ವರ್ಷದ ಹಿಂದೆ, ಪ್ಯಾರಿಸ್ಸಿನ ಒಂದು ಮ್ಯಾಗಜಿನ್‌ನಲ್ಲಿ ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ, ಏನೋ ಒಂದು ನೋಟ್ ಹಾಕಿ ಪ್ರಕಟಿಸಿದ್ದರು. ನೋಡಿ, ಅವರು ತಮಗೆ ವಿಶಿಷ್ಟವೆಂದು ತೋರಿದ ಒಂದು ಸಣ್ಣ ಕವನ ಅನುವಾದ ಮಾಡಿದ್ದಾರೆ. ಅದಕ್ಕೋಸ್ಕರವಾಗಿ, ಅಯ್ಯಯ್ಯೊ ಇವರ ಕವನ ಪ್ಯಾರಿಸ್‌ನಲ್ಲಿ ಬಂದುಬಿಟ್ಟದೆ ಅಂತಾ ಹೇಳಿಬಿಟ್ಟು ಅದಕ್ಕೆ ಬೆಲೆ ಕೊಡುವುದು? ತಾನೇ ಅದನ್ನು ಓದಿ ಏನನ್ನು ಅನುಭವಿಸಿದೆ ಅನ್ನುವುದು ಮುಖ್ಯವಲ್ಲ ಅವನಿಗೆ! ಅದಕ್ಕೇ ನಾನು ಆಗ ಒಂದು ಸಾನೆಟ್ ಬರೆದೆ- ‘ಕವಿಯ ತೃಪ್ತಿ’ ಎಂಬ ಹೆಸರಿಟ್ಟು:

ಬಳಿಯಿರುವ ವೆಂಕಯ್ಯ ಕಂಠಯ್ಯ ಕಸ್ತೂರಿ
ಶ್ರೀನಿವಾಸರು ಮೆಚ್ಚಿದರೆ ಸಾಕೆನಗೆ ತೃಪ್ತಿ!

(ಈ ಹೆಸರುಗಳು ವೆಂಕಣ್ಣಯ್ಯನವರು, ಶ್ರೀಕಂಠಯ್ಯನವರು, ಕಸ್ತೂರಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಇವರೇ.)

ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ
ಲಂಡನ್ನಿನೊಳಗೂದಬೇಕಿಲ್ಲ ತುತ್ತೂರಿ!

(ಅಲ್ಲಿ ಹೋಗಿ ಲಂಡನ್ನಿನಲ್ಲಿ ಊದಿದರೇನೇ ಇಲ್ಲಿಯೂ ಯಶಸ್ವಿಯಾಗುತ್ತದೆ ಎಂಬ ಭ್ರಾಂತಿ)

ನಮ್ಮ ಸೊಡರಿಗೆ ಮನೆಯ ಬೆಳಗುವುದೆ ಮೊದಲ ಗುರಿ;
ದೂರದ ನೆಲವ ಬೆಳಗಲಿಲ್ಲೆಂದು ಕೊರಗುವರೆ?
ಬೇಡವೆನ್ನುವುದಿಲ್ಲ, ಸಂತೋಷ, ಬೆಳಗಿದರೆ!
ಅದರದಕಾಗಿ ಮರುಗುವ ಮಂದಿ ಮಂಕೆ ಸರಿ!
ಹಿರಿಯ ಕವಿ ಯಾವನೂ ಹೊನಲುಲು ಹವಾಯ್ಗಳಲಿ

(ಹೊನಲುಲು ಹವಾಯಿ ಅಂತ ಎರಡು ದ್ವೀಪಗಳು. ಹೆಸರು ಕೂಡ ಆವಾಗ ಗೊತ್ತಾಗಿರಲಿಲ್ಲ. ಈಗ ಸ್ವಲ್ಪ ಗೊತ್ತಾಗಿದೆ)

ಹಿರಿಯ ಕವಿ ಯಾವನೂ ಹೊನಲುಲು ಹವಾಯ್ಗಳಲಿ
ಕೇಳಿಸುವುದೆಂದೆಣಿಸಿ ತನ್ನ ಕಾವ್ಯದ ವೀಣೆ
ಮಿಡಿಯನೈ, ಬಹುದೂರದಿಲ್ಲಿ ಮೈಸೂರಿನಲಿ
ಕುಳಿತು. ತಂತಿಲಿಯಂಚೆ…

(ಅಂದರೆ ರೇಡಿಯೋ, ತಂತಿಲಿ-ತಂತಿ ಇಲ್ಲದ ಅಂಚೆ)

….ತಂತಿಲಿಯಂಚೆ ನೆರವಾಗಿ ಈ ವಾಣಿ
ಅಲ್ಲಿಯೂ ಕೇಳ್ದುದೆಂದರಿಯೆ ಸೊಗಸುವನಿಲ್ಲಿ:
ಅದರಳನೆಂದಿಗೂ ಕೇಳ್ದುದಿಲ್ಲೆಂದಲ್ಲಿ!

(ಅಂದರೆ ಅಲ್ಲಿ ಕೇಳಲಿಲ್ಲ ಅಂತ ಇಲ್ಲಿ ಅಳುವುದೇ ಕುಳಿತುಕೊಂಡು? ಎಂಬು ತಾತ್ಪರ್ಯ)

ಹಾಗೆಯೆ ಇತ್ತೀಚೆಗೆ ನಡೆದ ಇನ್ನೊಂದು ನಿದರ್ಶನ ನೆನಪಿಗೆ ಬರುತ್ತದೆ. ನನ್ನ ‘ಬಾ ಶ್ರೀ ಗುರುದೇವನೆ ಬಾ’ ಎಂಬ ಶೀರ್ಷಿಕೆಯ ಪ್ರಾರ್ಥನಾಕವನವನ್ನು ಕ್ಯಾಲಿಫೋರ್ನಿಯಾದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಒಂದು ಹೊಸ ಮಂದಿರದ ಉದ್ಘಾಟನೆಯ ಕಾಲಕ್ಕೆ ಅಮೆರಿಕಾದ ಭಕ್ತರೆ ಹಾಡಿದರಂತೆ. ಬೆಂಗಳೂರಿನಿಂದ ಅಲ್ಲಿಗೆ ಅಧ್ಯಕ್ಷರಾಗಿ ಹೋಗಿದ್ದ ಕನ್ನಡಿಗ ಸ್ವಾಮಿಗಳೊಬ್ಬರು ತಾವು ಅಲ್ಲಿಗೆ ಹೋಗುವ ಮುನ್ನ ನಮ್ಮ ದೇಶದ ಭಾಷೆಗಳ-ಸಂಸ್ಕೃತ, ಬಂಗಾಲಿ, ಮಲೆಯಾಳಂ, ತಮಿಳು, ತೆಲುಗು, ಹಿಂದಿ ಇತ್ಯಾದಿ-ಹಾಡುಗಳನ್ನು ಟೇಪ್‌ರಿಕಾರ್ಡ್ ಮಾಡಿಕೊಂಡು ಹೋಗಿದ್ದರಂತೆ. ಇಂಗ್ಲಿಷ್ ಭಾಷೆಯನ್ನಾಡುವ ಅಲ್ಲಿಯ ಯೂರೋಪಿಯನ್ ಭಕ್ತರು ಹೊಸಮಂದಿರದ ಉದ್ಘಾಟನೆಯ ಸಮಯದಲ್ಲಿ ಒಂದು ಭಾರತೀಯ ಪ್ರಾರ್ಥನೆಯನ್ನೆ ಯಾವುದಾದರೂ ಹಾಡಬೇಕು ಅಂತ ಕೇಳಿಕೊಂಡರಂತೆ. ಅದಕ್ಕೆ ಇವರು “ನಾನು ಸುಮಾರು ಎಂಟು ಹತ್ತು ಭಾರತೀಯ ಭಾಷೆಗಳಲ್ಲಿ ಗೀತೆಗಳನ್ನು ರಿಕಾರ್ಡ್ ಮಾಡಿಕೊಂಡು ಬಂದಿದ್ದೇನೆ; ಅವುಗಳನ್ನೆಲ್ಲ ಒಂದೊಂದನ್ನೆ ಈಗ ಹಾಕುತ್ತೇನೆ; ನಿಮಗೆ ಯಾವುದು ಹಿಡಿಸುತ್ತದೆಯೊ ಅದನ್ನು ಆಯ್ದುಕೊಳ್ಳಿ. ಆಮೇಲೆ ಅದನ್ನು ನೀವೇ ಕಲಿತುಬಿಟ್ಟು ಸಾಮೂಹಿಕವಾಗಿ ಹಾಡಬಹುದು. ಅಂತ ಸಲಹೆ ಇತ್ತರಂತೆ. ಅವರು ಬಂಗಾಲಿ ತಮಿಳು ತೆಲುಗು ಮಲೆಯಾಳಂ ಮರಾಠಿ ಹಿಂದಿ ಎಲ್ಲಾ ಭಾಷೆಗಳದ್ದೂ ತೆಗೆದುಕೊಂಡು ಹೋಗಿದ್ದರು. ಕನ್ನಡದ್ದೂ ತೆಗೆದುಕೊಂಡು ಹೋಗಿದ್ದರು. ಎಲ್ಲವನ್ನೂ ಹಾಕಿದರಂತೆ. ಕಡೆಗೆ ಆ ಭಕ್ತರೆಲ್ಲ ಆರಿಸಿ ಒಪ್ಪಿ ಸೆಲೆಕ್ಟ್ ಮಾಡಿದ್ದು ‘ಬಾ ಶ್ರೀ ಗುರುದೇವನೆ ಬಾ’ ಅನ್ನುವುದನ್ನು. ಅದನ್ನು ಭಾರತೀಯ ರೀತಿಯಲ್ಲಿಯೆ ಹಾಡಲು ಅಭ್ಯಾಸಮಾಡಿ ಆಮೇಲೆ ಉದ್ಘಾಟನೆ ಸಮಯದಲ್ಲಿ ಸಾಮೂಹಿಕವಾಗಿ ಹಾಡಿದರಂತೆ. ತುಂಬ ಚೆನ್ನಾಗಿ ಬಂತು ಅಂತ ಯಾರೋ ಸ್ನೇಹಿತರು ಬಂದು ನನಗೆ ಹೇಳಿದರು. ನನಗೆ ತುಂಬಾ ಸಂತೋಷ ಆಯಿತು: ಇಲ್ಲ ಅನ್ನುವುದಿಲ್ಲ. ಆದರೆ ನನ್ನ ಆ ಪ್ರಾರ್ಥನಾ ಕವನ ಕ್ಯಾಲಿಫೋರ್ನಿಯಾದಲ್ಲಿ ಮೊಳಗಲಿಲ್ಲ ಎಂದು ಮನನೊಂದುಕೊಂಡರೆ, ಅಥವಾ ಅದರ ಯೋಗ್ಯತೆಯನ್ನು ನಾನು ಆ ಘಟನೆಯಿಂದಲೆ ಅಳೆಯುವುದಾದ ಪಕ್ಷದಲ್ಲಿ ನನ್ನಂಥ ಅವಿವೇಕಿ ಮತ್ತೊಬ್ಬನಿಲ್ಲ ಎಂದು ಹೇಳಬೇಕಾಗುತ್ತದೆ. ಆದ್ದರಿಂದ ನಮ್ಮ ಆತ್ಮಪ್ರತ್ಯಯವನ್ನು ಈ ಅನ್ಯಹೃದಯ ನಿಕಷಗಳಿಗೆ ಒಪ್ಪಿಸಿಬಿಡಬಾರದು. ನಮ್ಮ ಆತ್ಮಪ್ರತ್ಯಯವನ್ನು ನಾವು ಧೈರ್ಯವಾಗಿ ಸಮರ್ಥಿಸಿ ಹೇಳಬೇಕಾಗುತ್ತದೆ.

ಯಾಕೆಂದರೆ ಈ.ಪಿ.ರೈಸ್‌ ಸಾಹೇಬ ನನ್ನೆದುರು ಇದ್ದಿದ್ದರೆ, ಆತನಿಗೆ, ‘ಯಶೋಧರ ಚರಿತೆ’ಯನ್ನು ಕೊಟ್ಟು-‘ಯಾವ ಇಂಗ್ಲಿಷ್ ಕಾವ್ಯದಲ್ಲಿ ಇದೆಲ್ಲ ಬರುತ್ತದೆ?’ ಎಂದು ಸವಾಲು ಹಾಕುತ್ತಿದ್ದೆ. ಬಹುಶಃ ಮುಂದೆ ನಾವು ಅದನ್ನು ಸಮರ್ಥವಾಗಿ ಬೇರೆ ಭಾಷೆಗಳಿಗೆ ಭಾಷಾಂತರಿಸಿ ಕೊಟ್ಟರೆ ಆಗ ಅದರ ಮಹಿಮೆ ಏನು ಅನ್ನುವುದು ಗೊತ್ತಾಗುತ್ತದೆ ಅಂತಾ ಕಾಣುತ್ತದೆ. ಇಂಗ್ಲಿಷ್ ಭಾಷೆಗೆ ಭಾಷಾಂತರಿಸದಿದ್ದರೆ ಆಗುವುದಿಲ್ಲ; ಅದರ ಸರ್ಟಿಫಿಕೇಟ್ ಇಲ್ಲದಿದ್ದರೆ ಆಗುವುದಿಲ್ಲ, ಅನ್ನುವುದಕ್ಕೆ ನನ್ನ ಸ್ವಂತ ಜೀವನದಲ್ಲಿ ಒಂದು ಅನುಭವ ಆಯಿತು. ಈಗ ಅವರು ಯಾರೂ ಇಲ್ಲ. ಆದ್ದರಿಂದ ಅವರ ಹೆಸರುಗಳನ್ನೆಲ್ಲಾ ಹೇಳುತ್ತೇನೆ ಎನ್.ಎಸ್. ಸುಬ್ಬರಾಯರು ನಮ್ಮ ವೈಸ್‌ಛಾನ್ಸಲರ್ ಆಗಿದ್ದರು. ಅವರ ಅಣ್ಣ ಒಬ್ಬರು ನರಸಿಂಹಮೂರ್ತಿ ಅಂತಾ ಹೇಳಿ ಅವರು ಲೈಬ್ರರಿಯನ್ ಆಗಿದ್ದರು, ಯೂನಿವರ್ಸಿಟಿ ಲೈಬ್ರರಿಯನ್. ಮತ್ತೊಬ್ಬರು ಪ್ರೊ. ವೆಂಕಣ್ಣಯ್ಯನವರು. ಇವರೆಲ್ಲ ಆಗತಾನೆ ನಾನು ಬರೆದಿದ್ದ ‘ಶ್ಮಶಾನ ಕುರುಕ್ಷೇತ್ರ’ವನ್ನು-ಅದನ್ನು ಆಗಲೆ ನಾನು ಎಲ್ಲಿಯೋ ಒಂದೆರಡು ಕಡೆ ಕಿಕ್ಕಿರಿದ ಸಭೆಗಳಿಗೆ ವಾಚನ ಮಾಡಿದ್ದೆ. ಅದರ ಪ್ರಸಿದ್ಧಿಯನ್ನು ಕೇಳಿ, ಅದನ್ನು ತಮಗೆ ಓದಬೇಕು, ಬನ್ನಿ ಅಂತ ಹೇಳಿ ಕಳಿಸಿದರು. ಸರಿ, ಆಗಿನ ಯೂನಿವರ್ಸಿಟಿ ಲೈಬ್ರರಿಯಲ್ಲಿ ಒಂದು ಸಂಜೆ ನಾಲ್ಕು ಜನರೂ ಸೇರಿದ್ದರು. ಓದಿದೆ. ಅದು ಬಹಳ ಪ್ರಭಾವಕಾರಿಯಾಗಿತ್ತು. ಎಷ್ಟುಮಟ್ಟಿಗೆ ಎಂದರೆ, ಎನ್.ಎಸ್. ಸುಬ್ಬರಾಯರು ಬೊಂಬಾಯಿನಲ್ಲಿ ನಡೆದ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಗ ಅವರು- ಎಕನಾಮಿಕ್ಸ್ ತಾನೆ ಅವರದು?-ತಮ್ಮ ಅಂದಿನ ಅಧ್ಯಕ್ಷ ಭಾಷಣದ ಕೊನೆಯಲ್ಲಿ,

ಸರ್ವಸಮತ್ವಂ….ಜಗತ್‌ಕಲ್ಯಾಣಂ….
ದೂರದೊಳ್, ಬಹುದೂರದೊಳ್, ಕಾಲಗರ್ಭದೊಳ್….
ಸಾಮಾನ್ಯ ಮಾನವ ಸಂಸಾರಂ, ಸತಿಪತಿಗಳ ಶೃಂಗಾರಂ,
ಮಕ್ಕಳಾಟಂ, ನೋಟಂ, ಕಾವ್ಯಂ, ಕಲಿಯುಗ ಮಹಾಕಾವ್ಯಂ,
ಸುಮಧುರಂ ದಿವ್ಯಂ ಸುಶ್ರಾವ್ಯಂ!

ಎಂದು ಕೊನೆಯಾಗುತ್ತದಲ್ಲ, ಆ ಪಂಕ್ತಿಗಳನ್ನ ಉದ್ಧರಿಸಿ, ತಮ್ಮ ಭಾಷಣ ಕೊನೆ ಮಾಡಿದ್ದರು. ನಮ್ಮ ಅರ್ಥಶಾಸ್ತ್ರದ ಗುರಿ ಎಲ್ಲಿಯವರೆಗೆ ಮುಂಬರಿಯಬೇಕು ಎಂದರೆ, ಇಲ್ಲಿಗೆ ಹೋಗಿ ಮುಟ್ಟಬೇಕು:

ಸಾಮಾನ್ಯ ಮಾನವ ಸಂಸಾರಂ, ಸತಿಪತಿಗಳ ಶೃಂಗಾರಂ,
ಮಕ್ಕಳಾಟಂ, ನೋಟಂ, ಕಾವ್ಯಂ, ಕಲಿಯುಗ ಮಹಾಕಾವ್ಯಂ,
ಸುಮಧುರಂ….ದಿವ್ಯಂ….ಸುಶ್ರಾವ್ಯಂ……

ಹಾಗೆ ಶುರುವಾಗುತ್ತದೆ, ‘ಕಲಿಯುಗ ಮಹಾಕಾವ್ಯ’ ಅಂತ ಹೇಳಿದರೆ, ಶ್ರೀಸಾಮಾನ್ಯರದು, ಸಾಮಾನ್ಯ ಜನರ ಸುಖೀರಾಜ್ಯ ಸ್ಥಾಪನೆ, ಶ್ರೀಮಂತರ ಮತ್ತು ಉಚ್ಚಜಾತಿಯವರ ಉಚ್ಛಾಟನೆ. ವಿಶೇಷ ಜನ ನಾವು ಜೆಟ್ ವಿಮಾನಗಳನ್ನ ಹತ್ತು ಇಟ್ಟಿದ್ದೇವೆ, ನಾವು ೧೪೦೦ ಕೋಟಿ ರೂಪಾಯಿ ಖರ್ಚುಮಾಡಿ ಪೆಟ್ರೋಲ್ ತರಿಸಿ, ನಮ್ಮ ಆಹಾರಧಾನ್ಯಗಳು ಮೀನು ಮೊಟ್ಟೆ ಇನ್ನೂ ಏನೇನು ಬೇಕೊ ಅದನ್ನೆಲ್ಲಾ ವಿದೇಶಿ ವಿನಿಮಯಕ್ಕೆ ಕಳಿಸಿ, ಅವರ ಪೆಟ್ರೋಲ್ ಇಲ್ಲಿಗೆ ತರಿಸಿ, ನಾಲ್ಕಾರು ಸರ್ಕಾರಿ ಅಧಿಕಾರಿಗಳು ಆ ಪೆಟ್ರೋಲನ್ನ ಸಮಾನವಾಗಿ ಉರಿಸಿ, ಸಾಮಾನ್ಯರಿಗೆ ಹೊಟ್ಟೆಗಿಲ್ಲ, ಬಟ್ಟೆಗಿಲ್ಲ, ಈ ತರದ ಎಕನಾಮಿಕ್ಸ್ ಅಲ್ಲ. ಅದಕ್ಕೆ ಗುರಿ ಸಾಮಾನ್ಯ ಮಾನವ ಸಂಸಾರದ್ದು. ಎಕ್ಸ್‌ಟ್ರಾರ್ಡಿನರಿ ಜನರಿಗಲ್ಲ ಇದು. ಅದನ್ನ ‘ಕೋಟ್’ ಮಾಡಿದ್ದರು.

ಅಂದು ಯೂನಿವರ್ಸಿಟಿ ಲೈಬ್ರರಿಯಲ್ಲಿ “ಶ್ಮಶಾನ ಕುರುಕ್ಷೇತ್ರಂ” ಅನ್ನು ಓದಿ ಹೊರಗೆ ಬಂದೆವು. ಹೊರಗೆ ಬಂದಮೇಲೆ ನಮ್ಮ ನರಸಿಂಹಮೂರ್ತಿಗಳು “ಖಂಡಿತ ಇದನ್ನ ಇಂಗ್ಲಿಷಿಗೆ ಭಾಷಾಂತರ ಮಾಡಿದರೆ ನೊಬೆಲ್ ಬಹುಮಾನ ಸಿಕ್ಕೇಸಿಕ್ತದೆ” ಎಂದು ಮೆಚ್ಚುಗೆ ಸೂಚಿಸಿದರು. ಅವರಿಗೆ ಬಹಳ ವಿಶ್ವಾಸ ನನ್ನನ್ನು ಕಂಡರೆ. ನನಗೆ ಒಂದು Oxford Lectures on Poetry ಎಂಬ ಬ್ರಾಡ್ಲೆಯ ಆಗತಾನೆ ಬಂದಿದ್ದ ಒಂದು ಹೊಸ ಪುಸ್ತಕ ಕೊಂಡು ಬಹುಮಾನ ಕೊಟ್ಟಿದ್ದರು. ನನ್ನ ಕವಿತೆಗಳಲ್ಲಿ ಅಷ್ಟು ವಿಶ್ವಾಸ ಅವರಿಗೆ.-ಆದರೆ ನನಗೆ ನನ್ನ ಕಾವ್ಯದ ಬೆಲೆಯನ್ನು ಇವರ ಯಾವ ಬಹುಮಾನವೂ ಕಟ್ಟಲಾರದು ಎಂಬ ಆತ್ಮಪ್ರತ್ಯಯ. ಯಾಕೆಂದರೆ, ನನ್ನ ಆಗಿನ ಯುವ ಮನೋಧರ್ಮದಲ್ಲಿ ನೊಬೆಲ್ ಬಹುಮಾನ ಕೂದ ಯಃಕಶ್ಚಿತವಾಗಿತ್ತು. ಅಂತಹ ಬಹುಮಾನಗಳಿಗೆ ನನ್ನ ಕಾವ್ಯವನ್ನು ಒರೆಗಲ್ಲಿಗೆ ಹಚ್ಚುವುದು ಅಂದರೆ ನನಗೆ ಆಗುತ್ತಿರಲಿಲ್ಲ. ಚೆನ್ನಾಗಿದೆ ಅಂತ ಒಪ್ಪಿಕೊಂಡಿದ್ದಾರೆ. ಆದರೆ ನೊಬೆಲ್ ಬಹುಮಾನದಿಂದ ಅದರ ಮಹತ್ತನ್ನು ಅಳೆಯಬೇಕು ಎನ್ನುವ ಮಾತು ನನಗೆ ಅಹಿತವಾಗಿತ್ತು. ನಾನು ಆಶ್ರಮದಲ್ಲಿದ್ದವನು ಕುಕ್ಕನಹಳ್ಳಿ ಕೆರೆಯ ಮೇಲೆ ಎಂದಿನಂತೆ ಮರುದಿವಸ ಪ್ರಾತಃ ಸಂಚಾರ ಹೋಗಿದ್ದೆ. – ಆಗ ಇಲ್ಲೆಲ್ಲಾ ಜೋಳದ ಹೊಲಗಳು ಈಚಲು ಮರಗಳು ಅವೆಲ್ಲಾ ಇದ್ದುವು – ವಾಕ್ ಹೋಗುತ್ತಾ ಇದ್ದೆ. ಹೋಗುತ್ತಾ ಇದ್ದಾಗ ದೂರದಲ್ಲಿ ಒಂದು ಕೋಗಿಲೆ ಕೂಗಿತು. “ಕುಹೂ! ಕುಹೂ!” ಆ ಉಷಃ ಕಾಲದ ಹಿನ್ನೆಲೆಯಲ್ಲಿ ಅದನ್ನು ಆಲಿಸಿದ ನನಗೆ ಮೈ ಜುಂ ಎಂದಿತು. ಹಿಂದಿನ ದಿನದ ನೊಬೆಲ್ ಬಹುಮಾನದ ವಸ್ತು ಗುಪ್ತವಾಗಿತ್ತೆಂದು ತೋರುತ್ತದೆ, ನನ್ನ ಸುಪ್ತ ಚಿತ್ತದಲ್ಲಿ. ಇದ್ದಕ್ಕಿದ್ದಂತೆ ನನ್ನ ಪ್ರತಿಭಟನೆ ವಿಡಂಬನಾತ್ಮಕ ಕವನವಾಗಿ ಹೊರಚಿಮ್ಮಿತು:

“ಕುಹೂ! ಕುಹೂ!”-ಕೋಕಿಲವಾಣಿ!
ಜಗ ಜುಮ್ಮೆಂದುದು ಅದ ಕೇಳಿ!
ನೀರವ ಪರ್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ-
ಗಾನವ ಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತಿತ್ತು;
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತ್ತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
“ಕುಹೂ! ಕುಹೂ!!” ಕೂಗಿತ್ತು!

ಆಲಿಸಿದೊರ್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು:
“ಮಲೆಗಳಲುಲಿಯುವ ಓ ಕೋಗಿಲೆಯೇ,
ಬಲು ಚೆಲುವಿದೆ ನಿನ್ನೀ ಗಾನ:
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೋಬೆಲ್ ಬಹುಮಾನ!
ಅರಣ್ಯ ರೋದನ! ಸುಮ್ಮನೆ ಹಾಡುವೆ!
ಕೇಳುವರಾರಿಲ್ಲಿ?”-
ಕೂಗಿತು ಕೋಗಿಲೆ “ಕುಹೂ” ಎಂದು!
ತಲ್ಲಣಿಸಿತು ಜಗ ಜುಮ್ಮೆಂದು!

ಅದೇ ಉತ್ತರ! ಜಗ ಜುಮ್ಮೆಂದು ತಲ್ಲಣಿಸಿತ್ತಲ್ಲ ಅದು ಮುಖ್ಯ ಹೊರತು, ನೊಬೆಲ್ ಬಹುಮಾನ ಬರುವುದೂ ಲಂಡನ್ ಪತ್ರಿಕೆಯಲ್ಲಿ ಪದ್ಯ ಅಚ್ಚಾಗುವುದೂ-ಈ ತರಹ ನಿಕಷ ನಮಗೆ ಅನಾವಶ್ಯಕ. ಕನ್ನಡ ಸಾಹಿತ್ಯದಲ್ಲಿಯೂ ಪಾಶ್ಚಾತ್ಯ ಸಾಹಿತ್ಯದ ಔನ್ನತ್ಯಗಳನ್ನೂ ಮೀರುವ ಸಾಹಿತ್ಯ ಸೃಷ್ಟಿಯಾಗಿದೆ, ಆಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ-ನಾನು ಹಿಂದೆ ಒಂದು ಭಾಷಣದಲ್ಲಿ ಹೇಳಿದಂತೆ – ‘ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆದರೂ ರಿಕ್ತರಂತೆ ಕುಗ್ಗಿ ನಡೆಯುವುದು ಬೇಡ’…..

ಆಮೇಲೆ ಇನ್ನೊಂದು ಸಲಹೆ: ಸಾಹಿತ್ಯಚರಿತ್ರೆ ಸಂಕ್ಷೇಪ ತಲಸ್ಪರ್ಶಿ ಸೂಕ್ಷ್ಮ ವಿಮರ್ಶೆಯನ್ನೂ ಒಳಗೊಂಡಿರಬೇಕಾಗುತ್ತದೆ. ಬಿ.ಎಂ.ಶ್ರೀಕಂಠಯ್ಯನವರು ನಮಗೆಲ್ಲಾ ಪಾಠ ಹೇಳುವಾಗ, ಯಶೋಧರ ಚರಿತ್ರೆಯನ್ನು ತೆಗೆದುಕೊಂಡು ತುಲನಾತ್ಮಕವಾಗಿ ವಿಮರ್ಶಿಸುತ್ತಿದ್ದರು. ಯಶೋಧರ ಚರಿತ್ರೆಯ ವಸ್ತುವನ್ನು Rime of the Ancient Mariner ಮತ್ತೆ ‘ಗೋವಿನ ಕಥೆ’ ಗಳಿಗೆ ಹೋಲಿಸುತ್ತಿದ್ದರು. ವಿಷಯ, ಅಲ್ಲಿ Rime of the Ancient Mariner ನಲ್ಲಿ ಒಂದು ಅಲ್ಬಟ್ರಾಸ್ ಕಡಲ ಹಕ್ಕಿಯನ್ನು ಹೊಡೆಯುತ್ತಾನೆ ಆ ನಾವಿಕ. ಅಂದಿನಿಂದಲೆ ಶುರುವಾಗುತ್ತದೆ ಅವರ ಗೋಳು. ಅಂದರೆ ಅಲ್ಲಿ ಹಿಂಸೆ ಮಾಡಿದ್ದಾನೆ. ಹಿಂಸೆಯ ಪರಿಣಾಮವಾಗಿ ಕರ್ಮಫಲ ಶುರುವಾಗುತ್ತದೆ. ಇಲ್ಲಿಯೂ ಹಾಗೇ. ನಿಜವಾದ ಕೋಳಿ ಕೊಲ್ಲುವುದಿರಲಿ, ಹಿಟ್ಟಿನ ಕೋಳಿಯನ್ನು ಕೊಂದಿದ್ದರೂ ಭಾವಹಿಂಸೆ ಆಯಿತು ಅಂತ ಹೇಳಿಬಿಟ್ಟು ಇಲ್ಲಿ ನಡೆಯುತ್ತದೆ ಕರ್ಮಫಲದ ಶಿಕ್ಷೆ. ಹಾಗೆಯೆ ಅಹಿಂಸೆಯ ಪ್ರಭಾವ, ಗೋವಿನ ಕಥೆಯಲ್ಲಿ ಬರುತ್ತದೆ. ಸತ್ಯ ಅಹಿಂಸೆಯ ಪ್ರಭಾವ ಅಲ್ಲಿಯೂ ಬರುತ್ತದೆ. ಇಲ್ಲಿ ಗೋವು ಸತ್ಯವ್ರತಿ. ಆದರೆ ಅದರ ಪ್ರಭಾವ ಹಿಂಸೆಯನ್ನು ದಮನಗೈಯುವ ಅಹಿಂಸೆ.

(ಹುಲಿ ಮೇಲೆ ಹಾರಿಬಿದ್ದು ಸತ್ತುಹೋಯಿತು ಅಂತ ನಾವು ಹುಡುಗರಾಗಿದ್ದಾಗ ಓದಿದ್ದೆವು. ಆದರೆ ಈಗ ಅದನ್ನೆಲ್ಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ….ಯಾರೋ ಹೇಳಿದರು: ಗೋವಿನ ಕಥೆ ಮಕ್ಕಳಿಗೆ ಹಾಕಬಾರದು, ಅವರಿಗೆ ದುಃಖವಾಗುತ್ತದೆ ಅಂತ. ನಾನು ಹೇಳಿದೆ: ಅವರಿಗೆ ರಸಾನುಭವ ಅನ್ನುವುದು ಏನೂ ಗೊತ್ತಿಲ್ಲ; ಅದರ ಪ್ರಯೋಜನವೂ ಗೊತ್ತಿಲ್ಲ; ಹಾಗೆ ಹೇಳೋದಾದ ಪಕ್ಷದಲ್ಲಿ ಎಲ್ಲಾ Tragedy ಗಳನ್ನೂ ತೆಗೆದುಹಾಕಬೇಕಾಗುತ್ತದೆ; ಯಾಕೇಂದ್ರೆ, Tragedy ನಮಗೂ ದುಃಖ ಉಂಟುಮಾಡುತ್ತದೆ ಅಂತ.) ಅಂತೂ ಸಾಹಿತ್ಯ ಚರಿತ್ರೆಯಲ್ಲಿ ಹೀಗೆ ಸಾಮ್ಯವಿರತಕ್ಕ ಕೆಲವು ಕೃತಿಗಳನ್ನು ಹೋಲಿಕೆಗೆ ಸೂಚಿಸಿದರೆ ವಿದ್ಯಾರ್ಥಿಗಳು ಓದಿಕೊಳ್ಳಲು ಅನುಕೂಲವಾಗುತ್ತದೆ.

ಆಮೇಲೆ ಮತ್ತೂ ಒಂದು ವಿಷಯ: ಅದನ್ನು ನೀವು ಯಾವ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೀರೊ ಗೊತ್ತಿಲ್ಲ. ಅದು ಮುಂದೆ ಬರತಕ್ಕಂತಹ ಸಾಹಿತ್ಯ ಚರಿತ್ರೆಗೆ ಅನ್ವಯಿಸುತ್ತದೆ. ನಮ್ಮ ಹಿಂದಿನ ಮಹಾಕವಿಗಳನ್ನು ಇಂದಿನ ದೃಷ್ಟಿಯಿಂದ ಅಳೆದು ಟೀಕಿಸುವುದಕ್ಕೆ ಹೋಗುವುದು ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಾರ್ಕ್ಸಿಸಂ ಸಿದ್ಧಾಂತ ಅಲ್ಲಿಲ್ಲ ಎಂದು ಟೀಕಿಸುವುದರಲ್ಲಿ ಅರ್ಥವಿಲ್ಲ; ಪ್ರಯೋಜನವೂ ಇಲ್ಲ. ಈ ರೀತಿಯ ಕೆಲವು ನವ್ಯರ ವಿಮರ್ಶೆ ಬಹಳ ಅವಿವೇಕವಾದದ್ದು ಅಂತ ತೋರುತ್ತದೆ ನನಗೆ. ಯಾಕಂದ್ರೆ, ಯಾವುದೋ ಒಂದು ವಿಚಾರಗೋಷ್ಠಿಯ ವರದಿ ಬಂತು. ಅದನ್ನು ನೋಡುವಾಗ, ಪಂಪನ ವಿಚಾರದಲ್ಲಿ ಈಗಿನ ಹುಡುಗರು ಕೆಲವರು ಬೇಜವಾಬ್ದಾರಿಯಾಗಿ ನಮ್ಮ ಈಗಿನ ಕಾಲದ ರಾಜಕೀಯ ಸಮಾಜವಾದ ಸಮತಾವಾದ ಇತ್ಯಾದಿಗಳೆಲ್ಲ ಪಂಪನಲ್ಲಿ ಇಲ್ಲವೆಂದು ಅವನ ಕಾವ್ಯವನ್ನೇ ಹೀಗಳೆದಿದ್ದರು. ಪಂಪನಲ್ಲಿ ಆಧುನಿಕರಾದ ನಾವು ಯಾವ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳನ್ನು ಒಲಿದಿದ್ದೇವೆಯೊ ಅವು ಇಲ್ಲ ಅಂತಾ ಟೀಕಿಸುವುದು ಅವಿವೇಕ ಮಾತ್ರವಲ್ಲ, ಮೂರ್ಖತ್ವ ಎಂದು ಹೇಳಬೇಕಾಗುತ್ತದೆ. ಪ್ರತಿ ಕವಿಯನ್ನೂ ಸ್ವಲ್ಪಮಟ್ಟಿಗೆ ಅವನ ಹಿನ್ನೆಲೆಯಲ್ಲಿಯೆ ನೋಡಿ ಬೆಲೆ ಕಟ್ಟಬೇಕು. ಹಾಗೆ ನೋಡುವುದಕ್ಕೆ ಹೋದರೆ, ಈಗ ಡಾಂಟೆಯ Divine Comedyಯನ್ನು ತೆಗೆದುಕೊಳ್ಳಿ. ಅಲ್ಲಿರುವುದೆಲ್ಲ Roman Catholic Eschatologyಯ ಸಾಮಗ್ರಿಯ ಆಧಾರದ ಮೇಲೆ ರಚಿತವಾಗಿದೆ. ಅಂದರೆ, ನಮ್ಮ ಅದ್ವೈತ ಸಿದ್ಧಾಂತಾದಿ ವೇದಾಂತ ದರ್ಶನಕ್ಕೂ ಅದಕ್ಕೂ ಸ್ವಲ್ಪವೂ ಹೊಂದಿಕೆಯಿಲ್ಲದ್ದು; ನಮ್ಮ ‘ಗರುಡ ಪುರಾಣ’ದ ಸಾಮಗ್ರಿಗೆ ಸಮೀಪವಾದದ್ದು. ನಮ್ಮ ಪೂರ್ಣದೃಷ್ಟಿಗೆ ಅದೆಲ್ಲ ಕಗ್ಗವಾಗುತ್ತದೆ. ‘ಅದನ್ನೆಲ್ಲಾ ಮಹಾಕಾವ್ಯ ಎನ್ನುವುದೆ?’ ಎಂದು ನಾವು ತಿರಸ್ಕರಿಸಿದರೆ ರಸವಂಚಿತರಾಗುತ್ತೇವೆ. ಆದ್ದರಿಂದ ಅಲ್ಲಿ ಕಾವ್ಯತ್ವ ಹೇಗೆ ಮೂಡಿದೆ ಅನ್ನೋದು ನೋಡಿ, ಅದರ ರಸಾಸ್ವಾದನೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಅದುಬಿಟ್ಟು ಈ ತರದ ಸಾಹಿತ್ಯೇತರ ತತ್ತ್ವಗಳನ್ನು ತಂದು ಅದನ್ನು ಟೀಕಿಸುವುದು ಆ ಕಾವ್ಯಕ್ಕೆ ಅಪಚಾರವಾಗುತ್ತದೆ.

ಸಾಹಿತ್ಯ ಚರಿತ್ರೆಯಲ್ಲಿ ಸ್ವಲ್ಪಮಟ್ಟಿಗೆ ಈ ರೀತಿಯ ವಿಮರ್ಶೆಯ ವಿಮರ್ಶೆಗೂ ಸ್ಥಳವಿರಲಿ. – ಅದಕ್ಕೇನು ಹೆಚ್ಚು ಜಾಗ ತೆಗೆದುಕೊಳ್ಳಬೇಡಿ. ಒಂದು ಪುಟ, ಹತ್ತು ಪಂಕ್ತಿ ಇಷ್ಟು ತೆಗೆದುಕೊಂಡರೆ ಸಾಕು – ರೀತಿಯ ಒಂದು ಸಹೃದಯ ಪ್ರಜ್ಞೆ ಉಂಟಾಗುವಂತೆ ಕೆಲವು ಸೂಚನೆಗಳನ್ನು ಕೊಡಬಹುದು. ಎಷ್ಟರಮಟ್ಟಿಗೆ ಸಮರ್ಪಕವೋ ನೀವೇ ಆಲೋಚಿಸಿ ಸ್ವೀಕರಿಸಿ, ಇಲ್ಲವೆ ಬಿಡಿ.


[1]       ಕನ್ನಡ ಅಧ್ಯಯನ ಸಂಸ್ಥೆ ‘ಕನ್ನಡ ಸಾಹಿತ್ಯ ಚರಿತ್ರೆ’ಯ ಮೊದಲನೆಯ ಸಂಪುಟವನ್ನು ಬಿಡುಗಡೆ ಮಾಡಿದಾಗ ಮಾಡಿದ ಭಾಷಣ, ೨೫-೧೦-೧೯೭೪ ರಲ್ಲಿ.