ನಮ್ಮ ದೇಶದಲ್ಲಿ ಈಗ ನಿರುದ್ಯೋಗ ಬಹಳ ಅಂತ ಹೇಳುತ್ತಿದ್ದಾರೆ. ಆವೊತ್ತು ಒಂದು ದಿವಸ ಪತ್ರಿಕೆಯಲ್ಲಿ ಓದಿದೆ. ಬದರೀನಾಥದಲ್ಲಿ ಅದೇನೋ ಮಂಜೆಲ್ಲ ಹೋದಕೂಡಲೆ, ಅಲ್ಲೊಂದು ಮಂಜಿನರಾಶಿ ಇದೆಯಂತೆ, ಅದೇ ದೊಡ್ಡ ಬದರೀನಾರಾಯಣ. ಮಂಜಿನರಾಶಿ ಅಂಥವು ಹಿಮಾಲಯದಲ್ಲಿ ಬೇಕಾದಷ್ಟಿವೆ. ಆದರೆ ಅದನ್ನು ನೋಡಲು ಸಾವಿರಾರು ಜನ ಕಷ್ಟಪಟ್ಟುಕೊಂಡು ಬಸ್ಸು ಕಮರಿಗೆ ಬಿದ್ದುಹೋದರೂ ಚಿಂತೆಯಿಲ್ಲ ಅಂತ ಹೇಳಿಬಿಟ್ಟು ಹೋಗುತ್ತಾರೆ. ಏನೋ ಪ್ರಕೃತಿಸೌಂದರ್ಯ, ಅದರ ಅನುಭವ, ಆ ತರವೇ ಇದ್ದರೆ ಪರವಾಯಿಲ್ಲ. ಮೊನ್ನೆ ನೋಡ್ತಿನಿ;ಮೂವತ್ತೈದು ಲಕ್ಷ ಜನ ಹರಿದ್ವಾರದಲ್ಲಿ ಸ್ನಾನ ಮಾಡಿದರಂತೆ, ಪೂಜೆ ಮಾಡಿದರಂತೆ. ಅಂದರೆ ೩೫ ಲಕ್ಷ ಜನ ಸೋಮಾರಿಗಳು. ನಮ್ಮ ದೇಶದಲ್ಲಿ ಮಾಡಲು ಕೆಲಸವಿಲ್ಲ. ನಿರುದ್ಯೋಗಿಗಳು. ಆದ್ದರಿಂದ ನೀವೊಂದು ಪ್ರಶ್ನೆ ಕೇಳಬಹುದು, ಅವರು ಅಲ್ಲಿಗೆ ಹೋಗುವುದರಿಂದ ಸದ್ಯ ರಕ್ಷಣೆಯಾಯಿತು. ಅಲ್ಲಿಗೆ ಹೋಗದೆ ಇದ್ದರೆ ಅವರು ಗುಜರಾತಿನಲ್ಲಿ ಇಲ್ಲವೆ ಬಿಹಾರಿನಲ್ಲಿ ಮಾಡಿದಹಾಗೆ ಮಾಡುತ್ತಿದ್ದರು ಅಂತ. ಈ ಮುವತ್ತೈದು ಲಕ್ಷ ಜನರನ್ನು ಈ ಉಪಾಯದಿಂದ ಮೆಲ್ಲಗೆ ಹರಿದ್ವಾರದ ಕಡೆ ತಿರುಗಿಸಿದರೆ ನಮ್ಮ ಸರ್ಕಾರಕ್ಕೆ ಸ್ವಲ್ಪ ಅನುಕೂಲ. ಏಕೆಂದರೆ ಅವರಿಗೆ ಕೆಲಸ ಕೊಡಬೇಕು, ಸರಿಯಾದ ತಿಳುವಳಿಕೆ ಕೊಡಬೇಕು. ಅದೂ ಇಲ್ಲ, ಇದೂ ಇಲ್ಲ ಅಂದರೆ ಇನ್ನೂ ದಂಗೆ ಏಳುತ್ತದೆ, ಗಲಾಟೆಯಾಗುತ್ತದೆ. ರೈಲು ಸುಡುತ್ತಾರೆ. ಅದರ ಬದಲು ಹರಿದ್ವಾರಕ್ಕೆ ಹೋಗಿ ಸ್ನಾನ ಮಾಡಿದರೆಂದರೆ ನಮಗೇನೂ ತೊಂದರೆ ಇಲ್ಲ ಎಂದು ಬಸ್ಸುಗಳನ್ನು ಕಲ್ಪಿಸಿ ಅನುಕೂಲಗಳನ್ನು ಮಾಡಿಕೊಡುತ್ತಾರೆ, ಅಲ್ಲಿಗಾದರೂ ಹೋಗಿ ತೊಲಗಲಿ ಎಂದು.

ನೋಡಿ, ನೀವು ಬರಹಗಾರರು ನೀವೇನು ತಮಾಷೆಗೆ ಹೊರಟಿಲ್ಲ. ಇಂಥವುಗಳನ್ನೆಲ್ಲ ಬರೆದು ತಿಳಿಸಿ ಕೆಲಸಮಾಡಬೇಕು. ಇಷ್ಟು ಕೆಲಸ ಮಾಡಿದ್ರೂನೂ ಈ ಮೌಢ್ಯ, ಅವಿದ್ಯೆ ಎನ್ನುವುದು ತಲೆಮೇಲೆ ಹಿಮಾಲಯ ಸದೃಶವಾಗಿ ಚಪ್ಪಡಿ ಕುಳಿತಿರುತ್ತದೆ. ನೋಡಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಬರ್ಟ್ರಾಂಡ್‌ರಸಲ್, ಹಕ್‌ಸ್ಲಿ ಮುಂತಾದವರು ಎಷ್ಟು ಬರೆದರುಲ ಏನು ಕೆಲಸ ಮಾಡಿದ್ದಾರೆ; ಆದರೂ ಈ ಪುರೋಹಿತಶಾಹಿ ವರ್ಗದವರಿದ್ದಾರಲ್ಲ ಅವರು ತಮ್ಮ ತಮ್ಮ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಅಷ್ಟೇನೂ ಹಿಂದಿನಂತೆ ಆಗುತ್ತಾ ಇಲ್ಲ. ಆದರೆ ನೀವು ಇನ್ನೂ ಅದಕ್ಕಿಂತಲೂ ಭಯಂಕರ ಕೆಲಸ ಮಾಡಬೇಕಾಗಿದೆ. ಏಕೆಂದರೆ ನಮ್ಮ ಈ ಅಜ್ಞಾನ, ಮೌಢ್ಯ ಸಾವಿರಾರು ವರ್ಷಗಳಿಂದ ತುಂಬಿದೆ. ಅದೇನು ದುರದೃಷ್ಟ ಎಂದರೆ, ಉಪನಿಷತ್ತಿನಲ್ಲಿ ಪ್ರಣೀತವಾದಂತಹ ದಿವ್ಯಜ್ಞಾನವಿದೆಯಲ್ಲ ಅದು ಬರಲಿಲ್ಲ ನಮ್ಮವರಿಗೆ; ಅದನ್ನು ಅನುಸರಿಸಲಿಲ್ಲ. ಪುರಾಣಗಳಲ್ಲಿ ಅಲ್ಲಿ ಇಲ್ಲಿ ಇರುವ ಲೋಕಾಚಾರ, ಕಾಲಾಚಾರ ಇವುಗಳನ್ನು ಅನುಸರಿಸಿಕೊಂಡು ಬಂದು ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಅದಕ್ಕೋಸ್ಕರ ನೀವು ಬರಹಗಾರರು, ಇದನ್ನೆಲ್ಲ ಮಾಡಬೇಕಾದರೆ, ನೀವು ತಂದಿಟ್ಟಿದ್ದಾರೆ. ಅದಕ್ಕೋಸ್ಕರ ನೀವು ಬರಹಗಾರರು, ಇದನ್ನೆಲ್ಲ ಮಾಡಬೇಕಾದರೆ, ನೀವು ಎಷ್ಟು ಅಧ್ಯಯನ ಮಾಡಬೇಕು ಅಂತ ನೋಡಿ. ಬರೀ ಪತ್ರಿಕೆಯಲ್ಲಿ ಅಲ್ಲೊಂದು ಇಲ್ಲೊಂದು ಕಾಗದ ಬರೆದ ಮಾತ್ರಕ್ಕೆ ಪ್ರಯೋಜನವಿಲ್ಲ. ಮೊದಲು ಟೀಕೆ ಮಾಡಬೇಕೆಂದರೆ ಇವನ್ನೆಲ್ಲ ಚೆನ್ನಾಗಿ ಅರಿತಿರಬೇಕು. ಈ ಮೌಢ್ಯದಿಂದ ಪಾರುಮಾಡಲು ಎರಡು ಪ್ರಯತ್ನಗಳು ನಡೆದುವು. ಒಂದು Buddhism, ಬುದ್ಧದೇವ ಬಹಳ ಪ್ರಯತ್ನಮಾಡಿದ, ಈ ಮೌಢ್ಯದಿಂದ ನಮ್ಮನ್ನು ಪಾರುಮಾಡಬೇಕೆಂದು. ಕಡೆಗೆ ಏನಾಯಿತು? ಒಂದಷ್ಟು ದೂರ ಅದು ನಡೆಯಿತು. ಆಮೇಲೆ ಬಿದ್ದುಹೋಯಿತು. ೧೨ನೆಯ ಶತಮಾನದಲ್ಲಿ ಜಾತಿವಿನಾಶ ಮಾಡಬೇಕೆಂದು ಹೇಳಿ ಬಸವೇಶ್ವರರು ಜಗತ್ತಿನಲ್ಲಿ ಯಾರೂ ಮಾಡದೆ ಇರುವ ಪ್ರಯತ್ನ ಪ್ರಾರಂಭ ಮಾಡಿದರು. ಅದನ್ನು ಕೂಡ ಹಿಮ್ಮೆಟ್ಟಿಸಿದರು. ತಿಪ್ಪೇರುದ್ರಸ್ವಾಮಿಗಳ “ಕರ್ತಾರನ ಕಮ್ಮಟ” ಎನ್ನುವ ಕಾದಂಬರಿ, ಪುಟ್ಟಸ್ವಾಮಯ್ಯ ಬರೆದಿರುವ “ಕ್ರಾಂತಿಕಲ್ಯಾಣ”ದಲ್ಲಿ ಕೊನೆಗೊಂಡಿರುವ ಆರು ಕಾದಂಬರಿಗಳನ್ನು ನೀವು ಸರಿಯಾಗಿ ಓದಿದರೆ ಅಲ್ಲಿ ನಿಮಗೆ ಗೊತ್ತಾಗುತ್ತದೆ, ಹೇಗೆ ಈ ಪುರೋಹಿತ ವರ್ಗ ಈ ಕ್ರಾಂತಿಗಳನ್ನು ಹಿಮ್ಮೆಟ್ಟಿಸಿತು ಅಂತ. ಹೇಗೆ ತುಳಿಯಿತು? ಹೇಗೆ ಅನ್ಯಾಯ ಮಾಡಿತು? ಹೇಗೆ ಕೊಲೆಮಾಡಿತು? ಎಲ್ಲಾ ಮಾಡಿತು. ಅದು ಗೊತ್ತಾಗುತ್ತದೆ.

[1]

ಅದನ್ನೆ ಕುರಿತು ಸ್ವಾಮಿ ವಿವೇಕಾನಂದರು ಒಂದು ಭಾಷಣದಲ್ಲಿ ಪುರೋಹಿತ ವರ್ಗವನ್ನು ಹೀಗೆ ಖಂಡಿಸಿದ್ದಾರೆ:

“ಶೂದ್ರ ಸಮಾಜವನ್ನು ತನ್ನ ಕಬ್ಬಿಣದ ಕರಾಳ ಮುಷ್ಟಿಯ ಸಹಸ್ರ ಪಾಶಗಳಿಂದ ಬಿಗಿದು ಬಂಧಿಸಿಟ್ಟುಕೊಳ್ಳುವ ಉದ್ದೇಶದಿಂದ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಬಾಹ್ಯಸಾಧನಗಳೆಂಬ ನೆವದಲ್ಲಿ ತನ್ನ ಸುತ್ತಲೂ ಸುತ್ತಿಕೊಂಡ ಅನಂತ ಸಂಖ್ಯೆಯ ಕರ್ಮ, ಕ್ರಿಯೆ ಮತ್ತು ಆಚಾರಸಮೂಹ ರೂಪದ ಕೊನೆಗಾಣದ ಕಣ್ಣಿಯ ಬಲೆಯಲ್ಲಿ ಸಿಕ್ಕಿಕೊಂಡು, ಪುರೋಹಿತ ಷಾಹಿ, ಉದ್ಧಾರದ ಆಶಾಲವಲೇಶವಿಲ್ಲದೆ, ಅಪಾದಮಸ್ತಕ ಗೋಜು ಬಿಗಿದುಕೊಂಡು, ಈಗ ಸುಸ್ತಾಗಿ, ಸಂಪೂರ್ಣ ಹತಾಶವಾಗಿ, ಮೃತಪ್ರಾಯವಾಗಿ ಪತಿತವಾಗಿ ನಿದ್ದೆಹೋಗುತ್ತಿದೆ. ಈಗ ಆ ಬಲೆಯಿಂದ ಅದಕ್ಕೆ ಬಿಡುಗಡೆಯೆ ಇಲ್ಲವಾಗಿದೆ. ಆ ಬಲೆಯನ್ನೇನಾದರೂ ಹರಿದರೆ ಸಾಕು, ಆ ಪುರೋಹಿತರ ಪುರೋಹಿತಷಾಹಿ ಬುಡಮುಟ್ಟ ಅಲ್ಲಾಡಿ ಹೋಗುತ್ತದೆ!….

“ಪ್ರತಿಯೊಬ್ಬ ಮಾನವನಲ್ಲಿಯೂ ಪ್ರಗತಿಯ ಆಕಾಂಕ್ಷೆ ಸ್ವಾಭಾವಿಕವಾಗಿಯೆ ಬೇರೂರಿರುತ್ತದೆ….

“ಭರತಖಂಡದ ಪತನಕ್ಕೆ ಮುಖ್ಯ ಕಾರಣವೆಂದರೆ, ರಾಜವರ್ಗದವರ ಮತ್ತು ಪುರೋಹಿತವರ್ಗದವರ ಅಧಿಕಾರ ಬಲದಿಂದ ವಿದ್ಯಾ ಬುದ್ಧಿಗಳ ಸರ್ವ ಸ್ವಾಮ್ಯವೂ ಅತ್ಯಲ್ಪ ಸಂಖ್ಯೆಯ ಕೆಲವೇ ಕೆಲವು ಬ್ರಾಹ್ಮಣರ ಹಸ್ತಗತವಾದದ್ದು.

“ಪುರೋಹಿತ ವರ್ಗದ ಪತನಕ್ಕೆ ಯಾವನಾದರೊಬ್ಬ ವ್ಯಕ್ತಿಯ ಅಥವಾ ಯಾವುದಾದರೂ ಒಂದು ಗುಂಪಿನ ಹೊಣೆ ಹೊರಿಸುವ ಯಾರೇ ಆಗಲಿ ತಿಳಿಯಬೇಕು, ಕರ್ಮತತ್ವದ ಅನಿವಾರ್ಯ ನಿಯತಿಗೆ ವಿಧೇಯವಾಗಿ, ಬ್ರಾಹ್ಮಣ ಜಾತಿ ತನ್ನ ಗೋರಿಯನ್ನು ತಾನೆ ತನ್ನ ಕೈಯಿಂದಲೆ ಕಟ್ಟಿಕೊಳ್ಳುತ್ತಿದೆ ಎಂದು, ಮತ್ತು ಹಾಗಾಗತಕ್ಕದ್ದೆ ಸರಿ ಎಂದೂ. ಉಚ್ಚ ವರ್ಣದ ಮತ್ತು ಉಚ್ಚ ವರ್ಗದ ಪ್ರತಿಕಯೊಂದು ಜಾತಿಯೂ ತನ್ನ ಕೈಯಿಂದಲೇ ತನ್ನ ಶ್ಮಶಾನಚಿತೆಯನ್ನು ರಚಿಸಿಕೊಳ್ಳುವುದು ಅದರ ಪ್ರಧಾನ ಕರ್ತವ್ಯವೆ ಆಗಬೇಕಾಗುತ್ತದೆ!”

ನೀವು ಇದಕ್ಕೆಲ್ಲ ಸಿದ್ಧರಾಗಿರಬೇಕು. ಹುಲಿಯನ್ನು ಕೊಲ್ಲುತ್ತೇನೆ ಎಂದು ಹುಲಿ ಅಲ್ಲಿ ಇರುವಾಗ ಒಂದಿಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ ಗುರಿಯಿಟ್ಟು ಹೊಡೆಯುತ್ತೇನೆಂದರೆ ಏಟು ಬಿದ್ದ ಕೂಡಲೆ ಅದು ಬಂದು ಆಮ್ ಅಂತ ನಿಮ್ಮನ್ನು ಅಪ್ಪಳಿಸಿ ಒಂದೇ ಬಾರಿಗೆ ಪೂರೈಸುತ್ತದೆ. ಅದನ್ನು ಹೊಡೆಯಬೇಕಾದರೆ ನೀವು ಜೊಡುನಳಿಗೆ ತೋಟಾ ಕೋವಿ ಇಟ್ಟುಕೊಂಡು ಬಿಲ್ಲೆತ್ತಿ ಎಳೆದುಕೊಳ್ಳಬೇಕು. ಹಾಗೆ ಗುರಿಕಟ್ಟಿ ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು. ಅದುಬಿಟ್ಟು ಗಾಯ ಮಾಡಿ ಬಿಡೋದಲ್ಲ. ಹಾಗೆಯೆ ಈ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದುಗುಂಡುಗಳನ್ನೆ ತಯಾರು ಮಾಡಬೇಕು. ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತ ಇಟ್ಟುಕೊಳ್ಳೋಣ. ವಾಚ್ಯವಾಗಿಯೆ ಗುಂಡಿನಲ್ಲಿ ಹೊಡೆಯಬೇಕು ಅಂತ ಅಲ್ಲ. ಆದರೆ ಈ ವಿಚಿತ್ರ ಬೇಟೆಯಲ್ಲಿ (ಈ ಸಂದರ್ಭದಲ್ಲಿ) ಮೊದಲಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ……..ತಲೆ………ತಲೆ, ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು. ಅವರಿಗಲ್ಲ. ಆ ಪುರೋಹಿತ ವರ್ಗದವರಿಗಲ್ಲ. ನಿಮಗೆ! ‘ನೀವು’ ಅಂತ ಹೇಳಿದೆ. ನನ್ನ ಮಟ್ಟಿಗೆ ನಾನೇನೋ ಅವರಿಂದ ಸಂಪೂರ್ಣ ಪಾರಾಗಿದ್ದೇನೆ. ಆದ್ದರಿಂದ ನನಗೇನೂ ರಗಳೆ ಇಲ್ಲ, ಗೊತ್ತಾಯಿತೇ? ನಾನು ಯಾವ ದೇವಸ್ಥಾನಕ್ಕಾಗಲಿ ಪೂಜೆ ಮಾಡಿಸಲು ಹೋಗದೆ ಬಹುಶಃ ಐವತ್ತು ವರುಷಗಳ ಮೇಲೆ ಆಗಿದೆ. ಯಾವ ಭಟ್ಟನಾಗಲಿ, ಯಾವ ಪುರೋಹಿತನಾಗಲಿ, ಯಾವ ಪಂಚಾಂಗವಾಗಲಿ ನನ್ನ ಬಳಿ ಸುಳಿಯಗೊಡುವುದಿಲ್ಲ. ನಮ್ಮ ಮದುವೆಗಿದುವೆಗೆ ಯಾವ ಹಾರುವನನ್ನಾಗಲಿ ಪೌರೋಹಿತ್ಯಕ್ಕೆ ಕರೆಸುವುದಿಲ್ಲ. ಕರೆಸಲೂ ಇಲ್ಲ. ಆದರೆ ಬೇರೆ ಬೇರೆ ಜನರಿಗೆ ಇದನ್ನೆಲ್ಲ ಹೇಳಿದರೆ ‘ಏನಿದು? ನೀವು ಹೇಳುವುದು ಭಯಂಕರವಾಗಿ ಕಾಣಿಸುತ್ತದೆ’ ಎನ್ನುತ್ತಾರೆ. ಅಂದರೇನು ಅದರ ಅರ್ಥ? ಅಜ್ಞಾನದ ಇಲ್ಲಣ ತಲೆಯೊಳಗೆ ತುಂಬಿದೆ. ಮೊದಲು ನಿಮ್ಮವರ ತಲೆಯೊಳಗಿರುವ ಅಜ್ಞಾನದ ಇಲ್ಲಣ, ಅದನ್ನು ನೀವು ತೆಗೆಯಬೇಕು. ಅದಕ್ಕೆ ಎಷ್ಟು ಕೆಲಸ ಮಾಡಬೇಕಾಗುತ್ತದೆ ಗೊತ್ತೇ? ಆ ಅರ್ಥದಲ್ಲಿ ನಾನು ಹೇಳಿದ್ದು-ಈ ವಿಚಿತ್ರ ಬೇಟೆಯಲ್ಲಿ ಮೊದಲ ಗುಂಡು ತಗುಲಬೇಕಾದ್ದು ನಿಮ್ಮ ತಲೆಗೇ ಎಂದು.

ಈ ಅಜ್ಞಾನ ಎಲ್ಲಿ ಹೊರಟುಹೋಗಿಬಿಡುತ್ತದೊ ಎಂದು ರಾಷ್ಟ್ರೋತ್ಥಾನ ಸಾಹಿತ್ಯ ಮೊದಲಾದವರು ಅದನ್ನು ರಕ್ಷಣೆಮಾಡುವುದಕ್ಕೋಸ್ಕರ ಬೇರೆ ಸಣ್ಣ ಸಣ್ಣ ಪುಸ್ತಕಗಳನ್ನು ಮಾಡಿ ಪ್ರಕಟಿಸುತ್ತಾ ಇದ್ದಾರೆ. ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗಳನ್ನೆಲ್ಲಾ ದೊಡ್ಡ ದೊಡ್ಡ ಋಷಿಗಳ ವಿಚಾರದಲ್ಲಿ ಬರೆಯುತ್ತಾರೆ. ಬರೆದು ನಮ್ಮ ಮಕ್ಕಳನ್ನು ಕೆಡಿಸುತ್ತಾ ಇದ್ದಾರೆ.[2]  ನನಗೊಂದು ಪುಸ್ತಕ ಬಂತು, ಜಯತೀರ್ಥರು ಅಂತ ಮೂಲದಲ್ಲಿ ಆತ ಮಧ್ವಾಚಾರ್ಯರ ಕೃತಿಗಳಿಗೆ ಟೀಕೆ ಬರೆದಿದ್ದಾರಂತೆ. ಮಧ್ವಾಚಾರ್ಯರು ಏನು ಅನ್ನುವುದನ್ನು ನಾನು ನಿಮಗಾಗಲೆ ಸೂಚ್ಯವಾಗಿ ಹೇಳಿದ್ದೇನೆ. ಅದು ಅವರ ಶಿಷ್ಯರಿಗೆ ಭಾರಿ ದೊಡ್ಡದಾಗಿರಬಹುದು. I don’t think that there is any worse philosophy than Madhwa’s.[3]

ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಗಳಿಂದ ಪರಿಶೀಲಿಸಿದರೆ, ಮಧ್ವ ಸಿದ್ಧಾಂತಕ್ಕಿಂತ ಕಳಪೆ ಸಿದ್ಧಾಂತ ಮತ್ತೊಂದಿಲ್ಲ-ಈ ಅರ್ಥದಲ್ಲಿ! ಅದಕ್ಕೇನೆ ಆ ಮಾರ್ಗದ ಅನುಯಾಯಿಗಳಾದವರಿಗೆ ರಾಮಾಯಣದರ್ಶನದಂತಹ ಕೃತಿಗಳನ್ನು ಕಂಡರೆ ಆಗುವುದಿಲ್ಲ. ಏಕೆಂದರೆ ರಾಮಾಯಣದರ್ಶನದಲ್ಲಿರುವುದು ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ನಿತ್ಯನಾರಕಿ, ಮುಕ್ತಿಯೋಗ್ಯ, ತಮೋಯೋಗ್ಯ, ನಿತ್ಯಸಂಸಾರಿ-ಇದನ್ನೆಲ್ಲ ನಂಬಿದವರಿಗೆ ಶ್ರೀ ರಾಮಾಯಣದರ್ಶನವನ್ನು ಅಪ್ರೀಸಿಯೇಟ್ (appreciate) ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೆ ಅವರು, ಆ ಗುಂಪಿಗೆ ಸೇರಿದ ವಿಮರ್ಶಕ ಮನ್ಯರು, ಇಡೀ ಕಾವ್ಯವನ್ನೇ ಹಳಿಯುತ್ತಾ ಕುಳಿತುಕೊಳ್ಳುತ್ತಾರೆ.[4] ಇದೆಲ್ಲ ಏನು ಏಕೆ ಅನ್ನುವುದನ್ನು ನಮ್ಮ ಹುಡುಗರಿಗೆ ನೀವು ತಿಳಿಸಿಕೊಡಬೇಕು. ಅವರು ಏಕೆ ಹೀಗೆ ಟೀಕೆ ಮಾಡುತ್ತಾರೆ? ನೀವು ಏಕೆ ಪ್ರತಿಭಟಿಸುತ್ತೀರಿ ಎನ್ನುವುದೂ ಆ ಮಕ್ಕಳಿಗೆ ಗೊತ್ತಾಗಬೇಕು. ಇಲ್ಲದಿದ್ದರೆ ಸರ್ವೋದಯ ಭಾವನೆಯನ್ನು ಗ್ರಹಿಸುವುದಕ್ಕೆ ಸಾಧ್ಯವೇ ಇಲ್ಲ. ಈ ಸಿದ್ಧಾಂತವನ್ನು ಒಪ್ಪಿಕೊಂಡವರಿಗೂ ಅದನ್ನು ತಿಳಿಯಹೇಳಬೇಕು. If revolution takes place here then nobody can withstand. ಇಲ್ಲಿ ಕಲೆಯಲ್ಲಿ ಕ್ರಾಂತಿಯುಂಟಾದರೆ ಯಾರೂ ತಡೆಯುವುದಕ್ಕೆ ಆಗುವುದಿಲ್ಲ. ನೀವು ಬರೀ ಗುಂಡು ಹೊಡೆಯುವುದು, ಕೊಲ್ಲುವುದು ಅದೆಲ್ಲ ಪ್ರಯೋಜನವಿಲ್ಲ. ಹಿಂದೆ ಅದನ್ನೆಲ್ಲ ಮಾಡಿ ಸೋತಿದ್ದಾರೆ. ತಲೆ……..ತಲೆ………ತಲೆಯನ್ನು ಕ್ಲೀನ್ ಮಾಡಬೇಕು. ಉಳಿದಿರುವುದು ಅದು. ಬರಹಗಾರರ ಕೆಲಸ ಅಷ್ಟೆ ಅಲ್ಲ. ನೀವು ಓದಿಯೂ ಹೇಳಬೇಕು, ವಾಚನಮಾಡಿಯೂ ತಿಳಿಸಬೇಕು. ಸಭೆಗಳನ್ನು ಕರೆಯಬೇಕು. ಹೋಗಿ ‘ಶೂದ್ರ ತಪಸ್ವಿ’ ನಾಟಕದ ಮೇಲೆ ಭಾಷಣ ಮಾಡಿ. ಹಿಂದಿನ ಕತೆ ಏನು? ಈಗಿನ ಕತೆ ಏನು? ಏಕೆ ಹೀಗೆ ಮಾಡಿದರು ಅಂತ ಹೇಳಿ, ಬೇಕಾದಷ್ಟಿದೆ, ಅದನ್ನು ಬಿಟ್ಟು ಸೋಬಾನೆ ಹಾಡುತ್ತಾ ಕುಳಿತುಕೊಳ್ಳಬೇಡಿ.

(ಜಯತೀರ್ಥರನ್ನು ಕುರಿತು ಏನೋ ಹೇಳುತ್ತಾ ಇದ್ದಿರಿ ಎಂದ ಪಾಟೀಲರ ಸೂಚನೆಗೆ ಮುಂದುವರಿಯುತ್ತಾ)

ಅದೇ? ಪುಸ್ತಕವನ್ನು ಓದಿದೆ: ಹೋಗಲಿ ಸಾಮಾಜಿಕವಾಗಿಯಾಗಲಿ, ಅಧ್ಯಾತ್ಮಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ ಏನಾದರೂ ಒಂದು ದೊಡ್ಡದನ್ನು ಮಾಡಿದ್ದಾರೇನು? ಅವರ ಶಿಷ್ಯರು ಹೇಳುವುದೆಂದರೆ ಮಧ್ವಾಚಾರ್ಯರ ಕೃತಿಗಳಿಗೆ ಟೀಕೆ ಬರೆದಿದ್ದಾರಂತೆ, ಟೀಕಾಚಾರ್ಯರೋ ಏನೋ ಎಂದು ಹೇಳುತ್ತಾರೆಂದು ತೋರುತ್ತದೆ. ಹೋಗಲಿ, ಜೀವನಚರಿತ್ರೆಯನ್ನು ನೋಡೋಣವೆಂದು ಹೋದರೆ, ಕಾಗಕ್ಕ ಗುಬ್ಬಕ್ಕನ ಕತೆಗಿಂತಲೂ ಭಯಂಕರವಾಗಿದೆ. ಅವರು ಇಬ್ಬರು ಹೆಂಡಿರನ್ನು ಮದುವೆಯಾಗಿದ್ದರಂತೆ. ಅವರು ಒಂದು ದಿವಸ ಕುದುರೆಯ ಮೇಲೆ ಹೋಗುತ್ತಾ, ಹೊಳೆ ಏರಿತ್ತಂತೆ. ಕುದುರೆ ಮೇಲೆ ಕುಳಿತು ಇವರು ಕೂಡಾ ಕುದುರೆ ಕುಡಿದ ಹಾಗೆ ನೀರು ಕುಡಿದರಂತೆ. ಆಗ ಎದುರುಗಡೆ ಇದ್ದ ಒಬ್ಬ ಸನ್ಯಾಸಿ “ನೀನೇನು ಪಶುವಿನ ಹಾಗೆ ನೀರು ಕುಡಿಯುತ್ತಿದ್ದೀಯಲ್ಲ, ಪಶು ಅಂಥ ಕಾಣುತ್ತದೆ” ಅಂದರಂತೆ. ಅದಕ್ಕೆ ಅವರು “ಅಯ್ಯೊ ಪಶುವಿನ ಹಾಗೆ ಏನು? ನಾನು ನಿಜವಾಗಿಯೂ ಪಶು. ನನಗೆ ದೀಕ್ಷೆ ಕೊಡಿ” ಎಂದು ಹೇಳಿಬಿಟ್ಟು ಸನ್ಯಾಸಿಯಾಗಿಬಿಟ್ಟರಂತೆ. ಅವರು ಇಬ್ಬರು ಹೆಂಡಿರನ್ನು ಮದುವೆಯಾಗಿದ್ದರಲ್ಲ ಅವರಿಗೆ ಪ್ರಸ್ಥ ಆಗಿರಲಿಲ್ಲವಂತೆ. ಅವರ ತಂದೆ ಒ‌ಬ್ಬ ಪಾಳೆಯಗಾರರು. ಪಾಳೆಯಗಾರರೆಂದರೆ ಆಗಿನಕಾಲದ ಒಬ್ಬ ಪುಟ್ಟ ರಾಜ. ಅವನೂ ಅವನ ಪತ್ನಿಯೂ ಇಬ್ಬರೂ ಬಂದು ಆ ಸನ್ಯಾಸಿಗೆ “ನೀನು ಒಳ್ಳೆಯ ಮಾತಿನಲ್ಲಿ ಅವನನ್ನು ಹಿಂದಕ್ಕೆ ಕಳಿಸುತ್ತೀಯೊ? ಕತ್ತೀಲಿ ಕಡಿದುಹಾಕಿಬಿಡುತ್ತೇವೆ.” ಎಂದು ಗದರಿಸಿದರಂತೆ. ಅವರೇನೋ ಇವರು ಸನ್ಯಾಸಿ ಗಿನ್ಯಾಸಿ ಅಂತ ನೋಡಲಿಲ್ಲ. ಕಡಿದುಹಾಕಿಯೆ ಬಿಡುತ್ತಿದ್ದರು. ಅದಕ್ಕೇ ಅವನನ್ನು ಹಿಂದಕ್ಕೆ ಕಳಿಸಲಾಯಿತು. ಜಯತೀರ್ಥ ಸನ್ಯಾಸಿಯಾಗಿದ್ದನಲ್ಲ ಆ ಸನ್ಯಾಸತ್ವವನ್ನು ತೆಗೆಯುವುದಕ್ಕೆ ಇವರೊಂದು ಪ್ರಾಯಶ್ಚಿತ್ತ ಮಾಡಿದರು. ಆಮೇಲೆ ರಾತ್ರಿ ಅವನ ಕೋಣೆಗೆ ಆ ಇಬ್ಬರು ಹೆಣ್ಣುಮಕ್ಕಳನ್ನು ಕಳಿಸಿದರಂತೆ. ಅಷ್ಟು ಹೊತ್ತಿಗೆ ಆ ಹೆಣ್ಣುಮಕ್ಕಳು ಕಿಟ್ಟನೆ ಕಿರುಚಿಕೊಂಡರಂತೆ. ಏನು ಅಂತ ಎಲ್ಲರೂ ನೋಡಿದಾಗ ಆದಿಶೇಷ ಹೆಡೆ ಎತ್ತಿ ನಿಂತುಕೊಂಡಿತ್ತಂತೆ. ಆಮೇಲೆ ಬೇಡಪ್ಪಾ ನೀನು ಅಂತ ಕರೆದುಕೊಂಡು ಹೋಗಿ ಗುರುವಿಗೆ ಒಪ್ಪಿಸಿ ಬಂದರಂತೆ. ಹೀಗೆಯೇ ಎಲ್ಲ. ಇದನ್ನೂ ಸ್ವಲ್ಪ ವೈಚಾರಿಕವಾಗಿ ಬರೆಯಬಹುದಿತ್ತು. ವಾಸ್ತವವಾಗಿ ಇವನು ಮನಃಪೂರ್ವಕವಾಗಿ ಸನ್ಯಾಸಧರ್ಮವನ್ನು ಸ್ವೀಕರಿಸಿದ್ದರೆ, ಬಲಾತ್ಕಾರವಾಗಿ ಅಲ್ಲಿಗೆ ಎಳೆದುತಂದು ಕೂರಿಸಿದಾಗ ಆ ಹೆಣ್ಣುಮಕ್ಕಳೇ ಈತನನ್ನು ನೋಡಿ, ನೀವು ಈ ತರದಲ್ಲಿರುವವರು, ನಿಮ್ಮನ್ನು ಕೆಡಿಸುವುದಕ್ಕೆ ನಾವು ಬರಲಿಲ್ಲ ಅಂತ, ಹೇಗೆ ಶಾರದಾಮಣಿದೇವಿ ಶ್ರೀ ರಾಮಕೃಷ್ಣರಿಗೆ ಹೇಳಿದರೋ ಹಾಗೆ ಹೇಳಬಹುದಿತ್ತು. ರಾಮಕೃಷ್ಣರು ಏನು ಹೇಳಿದರು? ನಾನು ಎಲ್ಲವನ್ನು ತ್ಯಜಿಸಿ ಎಲ್ಲದರಲ್ಲಿಯೂ ತಾಯಿಯನ್ನು ನೋಡತಕ್ಕಂತಹವನು. ಆದರೆ ನೀನು ನಾನು ಈ ಲೌಕಿಕಕ್ಕೆ ಮತ್ತೆ ಬರಬೇಕೆಂದು ಅಪೇಕ್ಷೆ ಪಟ್ಟರೆ ಅದಕ್ಕೂ ಸಿದ್ಧನಾಗಿದ್ದೇನೆ ಅಂದುಬಿಟ್ಟರು. ಆಕೆ ಹೇಳಿದರು-ಅಯ್ಯಯ್ಯೋ ನಾನೇಕೆ ನಿಮ್ಮನ್ನು ಈ ಲೌಕಿಕಕ್ಕೆ ಎಳೆಯಲಿ? ನೀವು ಹೀಗಿರುವುದಾದರೆ ನಾನು ನಿಮ್ಮ ಸೇವೆಯನ್ನು ಮಾಡಿಕೊಂಡಿರುತ್ತೇನೆ ಎಂದರು. ಹಾಗೆ ಆದಿಶೇಷ ಪಾದಿಶೇಷ ಕಟ್ಟುಕತೆಯನ್ನೆಲ್ಲ ತರುವುದಕ್ಕೆ ಬದಲಾಗಿ ಬೇರೆ ತರದಲ್ಲಿ ನಿಜ ಹೇಳಬಹುದಿತ್ತು. ಇಲ್ಲ. ಇದೆಲ್ಲ ನಮಗೆ ಆಗುವುದಿಲ್ಲ. ಆದಿಶೇಷನೆ ಆಗಬೇಕು. ಆಮೇಲೆ ಇನ್ನೊಂದೇನು ಗೊತ್ತೇನು? ಇವರು ಯಾರು ಅಂತ? ಇವರ Origin (ಮೂಲ) ಏನೂ ಅಂತ? ಮಧ್ವಾಚಾರ್ಯರ ಪುಸ್ತಕ ಹೊರುವುದಕ್ಕೆ ಒಂದು ನಂದಿ ಇತ್ತಂತೆ. ಒಂದು ಎತ್ತಿನ ಮೇಲೆ ಪುಸ್ತಕಗಳನ್ನೆಲ್ಲ ಹೊರಿಸಿಕೊಂಡು ಹೋಗುತ್ತಿದ್ದರಂತೆ. ಎತ್ತು ಒಂದುಕಡೆ ಮಲಗಿತ್ತಂತೆ. ಅದು ಯಾರೊ ಅವರ ಶಿಷ್ಯವರ್ಗವಂತೆ. ಸ್ವಾಮೀ, ಮಧ್ವಾಚಾರ್ಯರೇ, ನೀವು ಇಷ್ಟು ಅದ್ಭುತವಾದ ಕೃತಿಗಳನ್ನು ಬರೆದಿದ್ದೀರಿ. ಅದೇ ಮುಕ್ತಿಯೋಗ್ಯರು; ಅದೇ ನಿತ್ಯನಾರಕಿಗಳು. ಅದ್ಭುತ ಕೃತಿಕಾರರಾಗಿದ್ದೀರಿ. ಹೋಗಲಿ ಅದ್ಭುತ ಅಂತ ನಾವು ಇಟ್ಟುಕೊಳ್ಳೋಣ. ಆದರೆ ಇದಕ್ಕೆ ಯಾರು ವ್ಯಾಖ್ಯಾನ ಮಾಡುವವರು ಎಂದು ಕೇಳಿದರಂತೆ. ‘ಈ ಎತ್ತೇ ಮಾಡುತ್ತದೆ’ ಎಂದರಂತೆ. ಆ ಎತ್ತೇ ಈಗ ಜಯತೀರ್ಥರಾಗಿ ಹುಟ್ಟಿದರಂತೆ.. ಪಾಪ, ಇದನ್ನೆಲ್ಲ ಬರೆಯುವ ವ್ಯಕ್ತಿ ಎಷ್ಟು ಸಂತೋಷದಿಂದ, ಎಷ್ಟು ಉತ್ಸಾಹದಿಂದ, ನಾನೇನೋ ಜಯತೀರ್ಥರಿಗೆ ಮಹತ್ಕಾರ್ಯ ಮಾಡುತ್ತಿದ್ದೇನೆಂದು ಬರೆಯುತ್ತಿದ್ದಾರೆ. ಸ್ವಲ್ಪ ವಿಚಾರ ತಲೆಯಲ್ಲಿದ್ದರೆ, ಏನು ಅವಿವೇಕ? ಈ ತರ ಹೀಗೆ. ಇಂಥವನ್ನೆಲ್ಲ ಕಟ್ಟುಕತೆ ಮಾಡದೆ ವೈಚಾರಿಕವಾಗಿ ವೈಜ್ಞಾನಿಕವಾಗಿ ಬರೆಯಬೇಕು ಎನ್ನುವುದಿಲ್ಲ. ನೀವೇನಾದರೂ ಸಣ್ಣ ಸಣ್ಣ ಪುಸ್ತಕಗಳನ್ನು ಬರೆದು ಜನರಿಗೆ ಕೊಡುವುದಾದರೆ ಸ್ವಲ್ಪ ವೈಚಾರಿಕವಾಗಿ ಇಂಥದನ್ನೆಲ್ಲ ಬರೆದುಕೊಡಿ. ಅಷ್ಟೆ.

ಆಮೇಲೆ ಇನ್ನೊಂದೇನೆಂದರೆ ಕರ್ನಾಟಕ, ಕನ್ನಡ ಇಷ್ಟೇ ಸಂಕುಚಿತದಲ್ಲಿ ನಿಮ್ಮ ಪ್ರಜ್ಞೆ ಇಟ್ಟುಕೊಳ್ಳುವುದು ಬೇಡ. ನಾನೂ ಕರ್ನಾಟಕಕ್ಕಾಗಿ ಕನ್ನಡಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಪ್ರಜ್ಞೆ ವಿಶ್ವಪ್ರಜ್ಞೆ. ಈವೊತ್ತು ಚಿಲಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತು. ಈವೊತ್ತು ವಿಯಟ್ನಾಂನಲ್ಲಿ ಏನು ನಡೆಯುತ್ತಿದೆ ಎನ್ನುವುದೂ ಗೊತ್ತು. ಅಲ್ಲಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಪತ್ರಿಕೆಗಳಲ್ಲಿ ಮಾತ್ರವಲ್ಲ ಬೇರೆ ಬೇರೆ ಕಡೆಗಳಿಂದಲೂ ತಿಳಿದಿದ್ದೇನೆ. ಈ ಹೋರಾಟ ಎಲ್ಲಿ ಏನೇ ನಡೆಯುತ್ತಾ ಇರಲಿ, ಇದೇ ಹೋರಾಟ. ಅದೆಲ್ಲದರ ಮೂಲ ಇದೇ. ಯಾವುದಕ್ಕಾಗಿ ಹೊರಟಿದ್ದೀರೋ ಆ ಮೂಲ. ಅದೇ ಮೂಲದ ಹೋರಾಟವೇ ನಾನಾ ರೂಪಗಳಲ್ಲಿ ನಾನಾ ಕಡೆಗಳಲ್ಲಿ ಯುದ್ಧ ರೂಪದಲ್ಲಿಯೂ ನಡೆಯುತ್ತಾ ಇದೆ. ಮುಷ್ಕರ ರೂಪದಲ್ಲಿಯೂ ನಡೆಯುತ್ತಾ ಇದೆ. ಹರತಾಳ ಆದಿಯಾಗಿ ನಾನಾ ರೂಪಗಳಲ್ಲಿ ನಡೆಯುತ್ತಾ ಇದೆ. ಆದ್ದರಿಂದ ನಿಮ್ಮ ಪ್ರಜ್ಞೆ ಬರೀ ಕರ್ನಾಟಕ, ಬರಿ ಇಂಡಿಯಾ ಮಾತ್ರ ಅಲ್ಲದೆ ವಿಶ್ವಪ್ರಜ್ಞೆಯಗಿರಲಿ. ನೀವು ಬರೆಯುವ ಬರಹಗಳಲ್ಲಿ ಈ ವಿಶ್ವಪ್ರಜ್ಞೆ ಕಾಣುತ್ತಾ ಇರಬೇಕು. ಸಂಕುಚಿತ ಭಾವದಿಂದ ಬರೀ ನಮ್ಮದಷ್ಟನ್ನೆ ಕೊಡಬೇಡಿ. ಮಾಸ್ಕೋದಿಂದ ಹೊರಡುವಂತಹ ಕೆಲವು ಪತ್ರಿಕೆಗಳಿವೆ. “ಮಾಸ್ಕೋ ನ್ಯೂಸ್” “ನ್ಯೂ ಟೈಂಸ್” ಪತ್ರಿಕೆಗಳಲ್ಲಿ ಇಡೀ ಪ್ರಪಂಚದಲ್ಲಿ ವಾರಾವಾರ ನಡೆಯುವಂತಹುದೆಲ್ಲ ಸಿಕ್ಕುತ್ತದೆ. ಎಷ್ಟರಮಟ್ಟಿಗೆ ನಿಮ್ಮದು ವಿಶ್ವಪ್ರಜ್ಞೆಯಾಗುತ್ತದೆಯೋ ಅಷ್ಟರಮಟ್ಟಿಗೆ ನಿಮ್ಮ ಸಾಹಿತ್ಯ ವಿಶ್ವ ಸಾಹಿತ್ಯವಾಗುತ್ತದೆ. ಅದನ್ನು ಬಿಟ್ಟು ಈ ಕಟ್ಟುಕತೆ, ಈ ಬುರ್ನಾಸುಗಳನ್ನೆ ಪುರಾಣ, ಹರಿಕಥೆ ಹೇಳುತ್ತಾ, ಹೇಳಿದ ಬುರ್ನಾಸುಗಳನ್ನೆ ಬಯ್ಯುತ್ತಾ ಕೂಡುವುದು ಕಾಲನಷ್ಟ. ಯಾರುಯಾರೊ ಹೇಳಿದ ಮತ್ತು ಹೇಳುವ ಅವಿವೇಕವನ್ನೆ ತಿದ್ದುವುದರಲ್ಲಿಯೆ ಜೀವಮಾನ ಕಳೆದರೆ ಏನು ಗತಿ? ಅದಕ್ಕೋಸ್ಕರ ಪ್ರಜ್ಞೆಯನ್ನು ಸ್ವಲ್ಪ ವಿಶಾಲ ಮಾಡಿಕೊಳ್ಳಿ ಎಂದು ನಾನು ಹೇಳಿದ್ದು.

ಕೊನೆಯದಾಗಿ ನಾನು ನಿಮಗೆ ಹೇಳುವುದೊಂದಿದೆ. ಸಾಮಾನ್ಯವಾಗಿ ನೀವು ಒಂದು “ಪಕ್ಷ”. ರಾಜಕೀಯದಲ್ಲೇನೊ ಹೌದು. ಒಂದು ಪಕ್ಷ ಕಟ್ಟಿದ್ದೀರಿ. ಸಮಾಜವಾದಿಪಕ್ಷ ಅಂತ ಇಟ್ಟುಕೊಳ್ಳೋಣ. ಕಾಂಗ್ರೆಸ್ ಪಕ್ಷಕ್ಕೆ ನೀವು ವಿರೋಧಿಗಳು. ಸಮಾಜವಾದಿಪಕ್ಷ ಏನು ಧ್ಯೇಯಗಳನ್ನು ಇಟ್ಟುಕೊಂಡಿದೆಯೋ ಅದೇ ಧ್ಯೇಯಕ್ಕೋಸ್ಕರವಾಗಿ ಕಾಂಗ್ರೆಸ್ ನವರೇನಾದರೂ ಮಾಡಿದರೆ ಅದನ್ನು ವಿರೋಧಿಸುತ್ತೀರಿ. ಏಕೆಂದರೆ, ವಿರೋಧ ಪಕ್ಷದವರು ಏನುಮಾಡಿದರೂ ಅದನ್ನು ವಿರೋಧಿಸಲೇಬೇಕು ಅಂತ. ‘ಅಲ್ಲಯ್ಯ, ನೀವೇನು ಮಾಡಬೇಕು ಅಂತ ಇದ್ದೀರೋ ಅದನ್ನೆ ತಾನೇ ಅವರೂ ಮಾಡುತ್ತಿರುವುದು. ಅದನ್ನು ಸಪೋರ್ಟು ಮಾಡಿ’ ಎಂದರೆ, ಆಗುವುದಿಲ್ಲ. ವಿರೋಧ ಪಕ್ಷವನ್ನು ಬೀಳಿಸಲೆಬೇಕಷ್ಟೆ! ನೀವು ಮಾತ್ರ ಆ ಕೆಲಸಕ್ಕೆ ಹೋಗಬೇಡಿ. ನೀವು ಒಪ್ಪಿರುವ ತತ್ವಗಳನ್ನು ಲೋಕಕ್ಕೆ ಒಳ್ಳೆಯದು ಮಾಡುವ ಯಾರೇ ಮಾಡಿದರೂ ನೀವು ಅದಕ್ಕೆ ಬೆಂಬಲ ಕೊಡಬೇಕು, ಸಹಕರಿಸಬೇಕು. ನೀವು ಒಪ್ಪಿರುವ ತತ್ವಗಳನ್ನೆ ಆಚರಿಸ ಹೊರಡುವವರನ್ನು ವಿರೋಧಿಗಳೆಂದು ಹೇಳವುದು ಅವಿವೇಕ. ಒಳ್ಳೆಯ ಕೆಲಸ ಎಲ್ಲಿ ನಡೆಯುತ್ತದೆಯೋ ಅದನ್ನು ನೀವು ಒಪ್ಪಿಕೊಳ್ಳಬೇಕು. ಬೆಂಬಲ ಕೊಡಬೇಕು. ಅದನ್ನು ಪ್ರಚೋದಿಸಬೇಕು. ಪ್ರಚಾರಮಾಡಬೇಕು. ಯಾವುದನ್ನೂ ವಿರೋಧಪಕ್ಷವೆಂದು ಮಾಡಿಕೊಳ್ಳಬೇಡಿ. ಅದು ವಿರೋಧ ತತ್ವಕ್ಕೆ ಮಾತ್ರ ಸೀಮಿತವಾಗಿರಲಿ ಅಷ್ಟೆ. ವಿರೋಧ ತತ್ವವನ್ನು ವಿರೋಧಿಸಿ.

ಈಗ ಅಕ್ಷರ ಪ್ರಚಾರ ಇದೆ. ಬ್ರಾಹ್ಮಣ ಅಕ್ಷರ ಪ್ರಚಾರ ಮಾಡುತ್ತಿದ್ದಾನೆಂದು ಅದಕ್ಕೆ ವಿರೋಧವಾಗಿ ಹೋಗುತ್ತೀರಾ? ಅಕ್ಷರ ಪ್ರಚಾರ ಮಾಡುವುದು ಮುಖ್ಯ. ಬ್ರಾಹ್ಮಣನಾದರೂ ಮಾಡಲಿ, ಮುಸಲ್ಮಾನನಾದರೂ ಮಾಡಲಿ, ಯಾರಾದರೂ ಮಾಡಲಿ, ಅಂತಹುದನ್ನೆಲ್ಲ ನೀವು ವಿರೋಧಿಸಬಾರದು. ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಎಲ್ಲೆಲ್ಲಿ ಒಳ್ಳೆಯ ಕೆಲಸ ನಡೆಯುತ್ತಾ ಇದೆಯೋ ಯಾವ ಪಕ್ಷದಿಂದ ನಡೆಯುತ್ತಾ ಇದೆಯೋ ಅದಕ್ಕೆಲ್ಲ ನಿಮ್ಮ ಬೆಂಬಲ ಇರಬೇಕು. ಏಕೆಂದರೆ ನೀವು ಎಲ್ಲವನ್ನೂ ವಿರೋಧಿಸುವ ಮತ್ತೊಂದು ವಿರೋಧ ಪಕ್ಷವಾಗಿ ಉಳಿಯಬಾರದು. Get away from this negative attitude. ಯಾವಾಗಲೂ ಸೃಜನ ಕಾರ್ಯ, ಸೃಷ್ಟಿಕಾರ್ಯ ವಿಧ್ಯುಕ್ತವಾಗಿ ನಡೆಯಲಿ; ಬರಿಯ ನಿಷೇಧ ಅನಾವಶ್ಯಕ.

ನಾನು ಎಷ್ಟು ಹೊತ್ತು ಮಾತನಾಡಿದೆನೋ ದೇವರಿಗೇ ಗೊತ್ತು; ಇಷ್ಟನ್ನು ಹೇಳಿ ನನ್ನ ಭಾಷಣವನ್ನು ಮುಗಿಸುತ್ತೇನೆ. ಅಂದರೆ ನಾನು ನಿಮ್ಮನ್ನು ಒಲಿಸಿಕೊಳ್ಳಬೇಕು ಅಂತ ಯೋಚನೆ ಮಾಡಿಲ್ಲ. ನನಗೆ ಸರಿ ಎಂದು ತೋರಿದ್ದನ್ನು ಹೇಳಿದ್ದೇನೆ. ಈ ದ್ವೇಷ ಈ ಅಸೂಯೆ ಇಂಥದನ್ನೆಲ್ಲ ಬಿಟ್ಟು, ಒಳ್ಳೆಯದು ಎಲ್ಲೆಲ್ಲಿ ನಡೆಯುತ್ತಿದೆಯೋ ಅದಕ್ಕೆ ಸಹಾಯಮಾಡುವ ರೀತಿಯಲ್ಲಿ ಮಾಡಿ, ಬರೆಯಿರಿ, ಪಕ್ಷಗಿಕ್ಷ ಅಂತಹದನ್ನೆಲ್ಲ ಯೋಚನೆ ಮಾಡಬೇಡಿ. ಇಷ್ಟನ್ನು ಹೇಳಿ ಮುಗಿಸುತ್ತೇನೆ.


[1]           Caught in endless thread of the net of infinite rites, ceremonies, and customs, which it spread on all sides as external means for purification of the body and the mind with a view to keeping the society with the iron grasp of these innumerable bonds–the priestly power, thus hopelessly entangled from head to foot, is now asleep in despair. There is no escape out of it now. Tear the net and the priesthood of the priest is shaken to its foundation! There is implanted in every man, naturally a strong desire for progress……The chief cause of India’s ruin has been the monopolising of the whole education and intelligence of the land, by dint of pride and royal authority, among a handful of men…….Those who lay the fault of attempting to bring down the priestly class at the door of any particular person, or body of persons, other than themselves, ought to know that, in obedience to the inevitable law of nature, the Brahmin caste is erecting with its own hands, its own sepulehur: and that is what ought to be. It is good and appropriate that every caste of high birth and privileged nobility should make it its principal duty to raise it’s own funeral pyre with it’s own hands.

–Swami Vivekananda
Complete works: Vol.IV. pp.456,458,482

[2]       ಆ ದಿನ ನನ್ನ ಉದ್ಘಾಟನಾ ಭಾಷಣದಲ್ಲಿ ಪ್ರಕಾಶಕರ ಹೆಸರುಗಳನ್ನು ಪಟ್ಟಿ ಹೇಳುತ್ತಾ ಹೋಗುವುದಕ್ಕೆ ಬದಲಾಗಿ ಸುಪ್ರಸಿದ್ಧ ಪ್ರಕಾಶನ ಸಂಸ್ಥೆಯ ಒಂದು ಹೆಸರನ್ನು ಹೇಳಿ ಅದಕ್ಕೆ “ಮೊದಲಾದವರು” ಎಂದು ಮಾತ್ರ ಸೇರಿಸಿದೆ. ವಾಸ್ತವವಾಗಿ ಅಂದು ನನ್ನ ವಿಮರ್ಶೆಗೆ ಗುರಿಯಾದ ಪುಸ್ತಕ ‘ಜಯತೀರ್ಥರು’ ಎಂಬುದು ಐ.ಬಿ.ಹೆಚ್. ಪ್ರಕಾಶನದ್ದು. ಪತ್ರಿಕೆಗಳಲ್ಲಿ ರಾಷ್ಟ್ರೋತ್ಥಾನ ಒಂದನ್ನೆ ನಾನು ಖಂಡಿಸಿದೆ ಎಂಬಂತೆ ಸುದ್ದಿ ಪ್ರಕಟವಾಯಿತು. ರಾಷ್ಟ್ರೋತ್ಥಾನ ಸಂಸ್ಥೆಯವರೇ ನನಗೆ ಏನೂ ಕಾಗದ ಬರೆಯಲಿಲ್ಲ. ಬದಲಾಗಿ ಅವರ ಎಲ್ಲ ೧೧೦ ಪ್ರಕಟಣೆಗಳನ್ನೂ ಕಳಿಸಿ ಮಾರ್ಗದರ್ಶನ ಮಾಡಲು ಕೇಳಿಕೊಂಡರು. ರಾಷ್ಟ್ರೋತ್ಥಾನದ ಮೊತ್ತಮೊದಲು ಹತ್ತು ಪುಸ್ತಕಗಳನ್ನು ನಾನೆ ಬಿಡುಗಡೆಮಾಡಿದ್ದೆ. ಆಗಲೂ ನಾನು ಮಕ್ಕಳಿಗೆ ನಾವು ಒದಗಿಸುವ ಸಾಹಿತ್ಯ ಬರಿಯ ಭಾವಾವೇಶಪೂರ್ಣವಾಗಿದ್ದರೆ ಸಾಲದು, ಅವರಲ್ಲಿ ವೈಜ್ಞಾನಿಕ ದೃಷ್ಟಿಯನ್ನೂ ವೈಚಾರಿಕ ಬುದ್ಧಿಯನ್ನೂ ಪ್ರಚೋದಿಸುವಂತಿರಬೇಕು ಎಂದು ಭಾಷಣ ಮಾಡಿದ್ದೆ. ಈಗಲೂ ಅದನ್ನೆ ಬೇರೆ ರೀತಿಯಿಂದ ತುಸು ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದೆನಷ್ಟೆ.

ನನ್ನ ಟೀಕೆ ರಾಷ್ಟ್ರೋತ್ಥಾನ ಅಥವಾ ಐ.ಬಿ.ಎಚ್. ಪ್ರಕಾಶನದ ಅಥವಾ ಇನ್ನಾವ ಬೇರೆ ಪ್ರಕಾಶನದ ಎಲ್ಲ ಪ್ರಕಟಣೆಗಳನ್ನೂ ಕುರಿತು ಆಗಿರಲಿಲ್ಲ. ಉದಾಹರಣೆಗೆ ರಾಷ್ಟ್ರೋತ್ಥಾನದ ಪ್ರಕಟಣೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳು, ದೇಶಭಕ್ತ ವ್ಯಕ್ತಿಗಳು, ಸ್ವಾತಂತ್ರ್ಯ ಸಂಗ್ರಾಮದ ವ್ಯಕ್ತಿಗಳು, ವಿಜ್ಞಾನದ ವ್ಯಕ್ತಿಗಳು ಇಂತಹ ವ್ಯಕ್ತಿಗಳನ್ನು ಕುರಿತು ಪ್ರಸಿದ್ಧ ಲೇಖಕರು ಬರೆದಿರುವ ಪುಸ್ತಕಗಳ ವಿಚಾರವಾಗಿ ನಾನು ಅಂದು ಟೀಕಿಸಲಿಲ್ಲ. ನನ್ನ ಭಾಷಣ ಧ್ವನಿಮುದ್ರಿತದಲ್ಲಿ ಹೀಗಿದೆ: ‘ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗಳನ್ನೆಲ್ಲ ದೊಡ್ಡ ದೊಡ್ಡ ಋಷಿಗಳ ವಿಚಾರದಲ್ಲಿ ಬರೆಯುತ್ತಾರೆ.’ ಅಂದರೆ, ಧಾರ್ಮಿಕ ವಲಯಕ್ಕೂ ಆಧ್ಯಾತ್ಮಿಕ ವಲಯಕ್ಕೂ ಸೇರಿದ ವ್ಯಕ್ತಿಗಳನ್ನು ಕುರಿತು ಬರೆಯುವಾಗ ಆಧುನಿಕ ವೈಜ್ಞಾನಿಕ ದೃಷ್ಟಿಗೆ ಕಾಗಕ್ಕ ಗುಬ್ಬಕ್ಕನ ಕತೆಗಳಂತೆ ತೋರುವ (ಇಂಗ್ಲೀಷಿನಲ್ಲಿ ‘ಫೇರೀ ಟೇಲ್ಸ್’ ಅನ್ನುತ್ತಾರೆ) ಹಾಸ್ಯಾಸ್ಪದವಾದ ವಿಷಯಗಳನ್ನು ಬರೆಯುತ್ತಾರೆ ಎಂದೆನಷ್ಟೆ.

ಅಂದು ‘ಜಯತೀರ್ಥರು’ ಎಂಬ ಪುಸ್ತಕವನ್ನು ಟೀಕಿಸಿದ್ದೆ ಮಾತ್ರ. ಆದರೆ ರಾಷ್ಟ್ರೋತ್ಥಾನದವರು ಅವರ ಪುಸ್ತಕಗಳನ್ನೆಲ್ಲ ಕಳಸಿದ ಮೇಲೆ ನೋಡುತ್ತೇನೆ: ನನ್ನ ಟೀಕೆ ‘ಜಯತೀರ್ಥ’ರಿಗಿಂತಲೂ ಹೆಚ್ಚಾಗಿ ‘ವಾದಿರಾಜ’ರಿಗೆ ಅನ್ವಯವಾಗುವಂತೆ ತೋರಿತು. ಅಂದರೆ ಏನು ತೋರುತ್ತದೆ? ನಿಜವಾಗಿಯೂ ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ ವಿಭೂತಿ ವ್ಯಕ್ತಿಗಳ ವಿಚಾರದಲ್ಲಿ ಬರೆಯಲು ಬೇಕಾದಷ್ಟು ವಾಸ್ತವವಾದ ಸತ್ಯ ಸಂಗತಿಗಳ ಇರುವುದರಿಂದ ಅಲ್ಲಿ ಲೇಖಕ ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗೆ ಶರಣಾಗುವ ಆವಶ್ಯಕತೆಯೂ ಇರುವುದಿಲ್ಲ, ಅವಕಾಶವೂ ಇರುವುದಿಲ್ಲ. ಹಾಗಲ್ಲದೆ ಬರಿಯ ಒಂದು ಕೋಮಿಗೆ ಸೇರಿ, ಸಾರ್ವಜನಿಕ ಸೇವೆಯ ಸ್ವರೂಪದ ಯಾವ ಕೆಲಸವನ್ನೂ ಮಾಡದ ಸ್ಥಳೀಯಮಾತ್ರದವರನ್ನು ಅಟ್ಟಕ್ಕೇರಿಸುವ ಅಥವಾ ಆಕಾಶಕ್ಕೇರಿಸುವ ಸ್ವಜಾತಿ ಸ್ತೋತ್ರಕ್ಕೆ ಹೊರಟರೆ ಬರಿಯ ಸುಳ್ಳು ಸುಳ್ಳು ಪವಾಡಗಳನ್ನೂ ಅಲ್ಲದ ಸಲ್ಲದ ಹೊಗಳಿಕೆಗಳನ್ನೂ ಬರೆದು ಸ್ವಮತ ಪ್ರಚಾರ ಮಾಡಬೇಕಾಗುತ್ತದೆ. ಈ ಜಯತೀರ್ಥ ಮತ್ತು ವಾದಿರಾಜರಂಥವರು ಬರಿಯ ಒಂದು ಕೋಮಿಗೆ ಪೂಜ್ಯರೂ ಗೌರವಾರ್ಹರೂ ಆಗುತ್ತಾರೆಯೆ ಹೊರತು ಉಳಿದವರಿಗೆ ನಗೆಪಾಟಲಾಗುತ್ತಾರೆ. [ನಾನು ಜಯತೀರ್ಥರನ್ನು ಅಪಹಾಸ್ಯ ಮಾಡಿದೆನೆಂದೂ ಅದರಿಂದ ಮಾಧ್ವರಾದ ತಮ್ಮ ಕಕ್ಷಿದಾರರೊಬ್ಬರು ಬಹಳ ಮನ ನೊಂದಿದ್ದಾರೆಂದೂ ನನಗೆ ಒಬ್ಬ ಮಾಧ್ವ ಲಾಯರು ನೋಟೀಸು ಕಳಿಸಿದ್ದಾರೆ. ಲಾಯರು ಮತ್ತು ಅವರ ಕಕ್ಷಿದಾರರು ಇಬ್ಬರೂ ಬಿ.ಎಸ್ಸಿ., ಬಿ.ಎಲ್., ಪಾಸುಮಾಡಿದವರು. ಅಂದರೆ ವಿಜ್ಞಾನವನ್ನೇ ವಿಶೇಷ ಅಧ್ಯಯನ ಮಾಡಿದವರು. ಆದರೂ ಅವರಿಗೆ ವೈಜ್ಞಾನಿಕದೃಷ್ಟಿ ದಕ್ಕಿಲ್ಲ. ನಾನು ಜಯತೀರ್ಥರ ವ್ಯಕ್ತಿತ್ವ ವಿಚಾರವಾಗಿ ಮಾತಾಡಲಿಲ್ಲ. ಅವರನ್ನು ಕುರಿತು ಮಕ್ಕಳಿಗಾಗಿ ಬರೆದ ಪುಸ್ತಕದ ವಿಮರ್ಶೆ ಮಾಡುತ್ತಿದ್ದೆ. ಈಗಿರುವಂತೆ ಆ ಪುಸ್ತಕದಲ್ಲಿ ಜಯತೀರ್ಥರನ್ನು ನಗೆಪಾಟಲು ಮಾಡಲಾಗಿದೆ. ನಾನು ಹೇಳಿದ್ದು: ಈಗಿನವರ ವೈಜ್ಞಾನಿಕ ವಿಚಾರಕ್ಕೆ ಆ ಅವಾಸ್ತವ ಪವಾಡರೂಪದ ಬರವಣಿಗೆ ಹಾಸ್ಯಾಸ್ಪದವಾಗುತ್ತದೆ. ಅದನ್ನು ಇತರ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಬರೆಯುವಂತೆ ವೈಜ್ಞಾನಿಕ ದೃಷ್ಟಿಗೆ ಭಂಗ ಬರದಂತೆ ವಿಚಾರ ಸಮ್ಮತವಾಗಿ ವಾಸ್ತವ ಜೀವಿತಕ್ಕೆ ಸಮೀಪವಾಗುವಂತೆ ಬರೆದರೆ ಗೌರವಾಸ್ಪದವಾಗುತ್ತದೆ ಎಂದು. ನಿಜವಾಗಿ ನಾನು ಜಯತೀರ್ಥರ ವ್ಯಕ್ತಿತ್ವಕ್ಕೆ ಆ ಪುಸ್ತಕದಲ್ಲಿ ಆಗಿರುವ ಅಪಹಾಸ್ಯವನ್ನು ಪರಿಹರಿಸುವ ಸಲಹೆ ಕೊಡುತ್ತಿದ್ದೆನೆ ಹೊರತು ಅವರನ್ನೇ ಕುರಿತು ಮಾತಾಡಲೆ ಇಲ್ಲ. ನನ್ನ ವಿಮರ್ಶೆ ಬರಹಗಾರರಿಗೆ ಕೊಡುತ್ತಿದ್ದ ಸಲಹೆಯಾಗಿತ್ತೆ ಹೊರತು ಯಾವ ವ್ಯಕ್ತಿಯನ್ನೂ ಕುರಿತು ಆಡಿದ ಮಾತಾಗಿರಲಿಲ್ಲ.] ಇವರೇನು ರಾಷ್ಟ್ರವ್ಯಕ್ತಿಗಳಲ್ಲ. ನಾರಾಯಣಗುರು ಅಥವಾ ಅಂಬೇಡಕರ ಅಥವಾ ಬಸವೇಶ್ವರ ಅಥವಾ ಸ್ವಾಮಿ ವಿವೇಕಾನಂದ ಮೊದಲಾದವರಂತೆ. ಇವರು ಒಪ್ಪಿರುವ ತತ್ವಗಳೂ ಜನತಾಘಾತಕವಾದುವು; ನಮ್ಮ ರಾಜ್ಯಾಂಗಕ್ಕೂ ವಿರುದ್ಧವಾದುವು; ವಿವೇಕಿಗಳೆಲ್ಲರ ಖಂಡನೆಗೂ ಒಳಗಾಗುವಂಥವು; ಉಚ್ಛಾಟನಾರ್ಹವಾದುವು.

ಆದ್ದರಿಂದ ಈ ಪ್ರಕಾಶನ ಸಂಸ್ಥೆಗಳಿಗೆ ನನ್ನ ಸಲಹೆ: ಧಾರ್ಮಿಕ ಮತ್ತು ಅಧ್ಯಾತ್ಮಿಕ ವರ್ಗದ ವ್ಯಕ್ತಿಗಳನ್ನು ಕುರಿತು ಬರೆಯಿಸುವಾಗ ಕ್ಷುದ್ರ ಕೋಮುವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ: ವಿಶ್ವವ್ಯಕ್ತಿಗಳನ್ನೂ ರಾಷ್ಟ್ರವ್ಯಕ್ತಿಗಳನ್ನೂ ಮಾತ್ರ ಆರಿಸಿಕೊಳ್ಳಿ. ಮೌಢ್ಯ ಪ್ರಚೋದಕವಾಗುವಂತಹ ತೀರ್ಥಕ್ಷೇತ್ರಗಳ ಪವಾಡದ ಸುಳ್ಳುಸುಳ್ಳು ಕತೆಗಳನ್ನೆಲ್ಲ ನಿಜ ಎಂದು ಹೇಳಿ ಮಕ್ಕಳನ್ನೂ ಮೂಢರನ್ನಾಗಿ ಮಾಡಬೇಡಿ. ವೈಜ್ಞಾನಿಕ ದೃಷ್ಟಿಯ ವಿಚಾರವಂತರನ್ನಾಗಿ ಮಾಡಿ.

[3]       In fact it is not Philiosophy at all; it is mere Theology.

[4]       ನಾನು ವಿಮರ್ಶಕರನ್ನು ಕುರಿತು ಹೇಳುತ್ತಿದ್ದೆನೆ ಹೊರತು ಗಮಕಿಗಳನ್ನು ಕುರಿತಲ್ಲ. ಮಾಧ್ವರೊಬ್ಬರು ನನಗೆ ಕಾಗದ ಬರೆದು, ನಾನೆ ಮೆಚ್ಚಿಕೊಂಡಿರುವ ಗಮಕಿಗಳಲ್ಲಿ ಅಗ್ರಗಣ್ಯರಾದ ಶ್ರೀ ಕೃಷ್ಣಗಿರಿ ಕೃಷ್ಣರಾಯರು ಮತ್ತು ಶ್ರೀಮತಿ ಶಕುಂತಲಾ ಬಾಯಿ ಪಾಂಡುರಂಗರಾಯರು ಮಾಧ್ವರೆಂದೂ ಅವರಿಬ್ಬರಿಂದಲೆ ಚಿತ್ರಾಂಗದಾ ಮತ್ತು ಶ್ರೀರಾಮಾಯಣದರ್ಶನಂ ಕಾವ್ಯ ಮತ್ತು ಮಹಾಕಾವ್ಯಗಳು ಜನಪ್ರಿಯವಾದುವೆಂದೂ ಬರೆದಿದ್ದಾರೆ. ತುಂಬ ನಿಜ. ಆದರೆ ಅವರು ಬ್ರಾಹ್ಮಣರೆಂದು ಮಾತ್ರ ನನಗೆ ಗೊತ್ತಿತ್ತೇ ಹೊರತು ‘ಮಾಧ್ವ’ರೆಂದು ತಿಳಿದದ್ದು ಅವರ ಕಾಗದದಿಂದಲೆ! ದಿವಂಗತ ಕೃಷ್ಣಗಿರಿ ಕೃಷ್ಣರಾಯರು ದಿವಂಗತ ‘ಆನಂದ’ ಎ. ಸೀತಾರಾಂರೊಡನ ನನ್ನ ಕಾವ್ಯಗಳು ಹಸ್ತಪ್ರತಿಯಲ್ಲಿದ್ದಾಗಲೆ ನಮ್ಮ ಮನೆ ‘ಉದಯರವಿ’ಗೆ ಬಂದು ಗಂಟೆಗಟ್ಟಲೆ ನನಗೆ ತಮ್ಮ ಅನಾದೃಶ ಗಮಕದಿಂದ ರಸದೂಟ ಉಣಬಡಿಸಿ, ನಾವು ಕೊಟ್ಟ ಕಾಫಿ ತಿಂಡಿ. ಹೋಳಿಗೆ, ತುಪ್ಪ, ಪಾಯಸ ಎಲ್ಲ ಸ್ವೀಕರಿಸುತ್ತಿದ್ದರು! ಅಂಥಾ ‘ಮಾಧ್ವ’ರೂ ಇದ್ದಾರಲ್ಲಾ!