ತಮಿಳುನಾಡಿನ ಆಳ್ವಾರರೆಂದರೆ ಶ್ರೀ ಮಹಾವಿಷ್ಣು ಅಥವಾ ಶ್ರೀ ಮನ್ನಾರಾಯಣನ ದಿವ್ಯಕಟಾಕ್ಷಕ್ಕೆ ಪಾತ್ರರಾದಂಥವರೆಂದು ಪ್ರತೀತಿ. ಇವರನ್ನು ತಮಿಳಿನಲ್ಲಿ ಆಳ್ವಾವಾರ್, ಅಂದರೆ ಮುಳುಗುವವರು, ದೇವತ್ವದಲ್ಲಿ ಮುಳುಗಿದವರು ಎಂದು ಗುರುತಿಸ ಲಾಗುತ್ತದೆ. ದೈವಪ್ರೇಮದಲ್ಲಿ ಐಕ್ಯರಾದವರು, ಆಧ್ಯಾತ್ಮರೂಪಿಯಾದ ಸಮುದ್ರದಲ್ಲಿ ಸ್ನಾನಮಾಡಿದವರು, ಭಗವಂತನ ಅನುಭವದಲ್ಲಿ ಯಾವಾಗಲೂ ಆಳವಾಗಿ ಮುಳುಗಿ ರುವವರು, ಪರಮಾತ್ಮನಲ್ಲಿ ಅಸದೃಶ ಭಕ್ತಿ-ಪ್ರೇಮಗಳನ್ನು ಹೊಂದಿರುವವರೆಂತಲೂ ವ್ಯಾಖ್ಯಾನಿಸಲಾಗುತ್ತದೆ. ಇವರನ್ನು ಆಳುವವರು ಎಂತಲೂ ಗುರುತಿಸುವುದುಂಟು. ಅಂದರೆ ರಾಜರು ಮತ್ತು ಶ್ರೇಷ್ಠಕುಲದವರನ್ನು ಆಳುವವರೆಂದರ್ಥ. ಆಳ್ವಾರರ ಒಟ್ಟು ಸಂಖ್ಯೆ ೧೨. ಪೊಯ್‌ಹೈ ಆಳ್ವಾರ್, ಪೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳಿಶೈಆಳ್ವಾರ್, ನಮ್ಮಾಳ್ವಾರ್, ಮಧುರಕವಿಯಾಳ್ವಾರ್, ಕುಲಶೇಖರಾಳ್ವಾರ್, ಪೆರಿಯಾಳ್ವಾರ್, ಆಂಡಾಳ್ ಆಳ್ವಾರ್, ತೊಂಡರಡಿಪ್ಪೊಡಿಯಾಳ್ವಾರ್, ತಿರುಪ್ಪಾ ಣಾಳ್ವಾರ್ ಮತ್ತು ತಿರುಮಂಗೈಯಾಳ್ವಾರ್– ಇವರೇ ಆ ೧೨ ಮಂದಿ. ಇವರು ವಿವಿಧ ಜಾತಿ-ಪಂಥಗಳಿಗೆ ಸೇರಿದವರು. ಇವರಲ್ಲಿ ಆಂಡಾಳ್ ಆಳ್ವಾರ್ ಅಥವಾ ಗೋದಾದೇವಿ ಮಹಿಳೆಯಾಗಿದ್ದರೆ, ಉಳಿದ ೧೧ ಆಳ್ವಾರರು ಪುರುಷರು. ಇವರು ಜೀವಿಸಿದ್ದ ಕಾಲಾವಧಿ ೩ ರಿಂದ ೯ನೇ ಶತಮಾನ. ದಕ್ಷಿಣಭಾರತದ ಪಲ್ಲವ, ಚೇರ, ಚೋಳ ಮತ್ತು ಪಾಂಡ್ಯ ಎಂಬ ತಮಿಳುರಾಜ್ಯಗಳು ಇವರು ನೆಲೆಸಿದ್ದ ಪ್ರದೇಶಗಳು.

ಈ ಆಳ್ವಾರರನ್ನು ದಿವ್ಯಪ್ರಬಂಧಗಳನ್ನು ಸಾಕ್ಷಾತ್ಕರಿಸಿದ ಅಥವಾ ಉಪದೇಶಿಸಿದ ತಮಿಳುವೇದಋಷಿಗಳೆನ್ನುತ್ತಾರೆ. ಈ ಆಳ್ವಾರರು ರಚಿಸಿದ ದಿವ್ಯಪ್ರಬಂಧವೆಂಬ ಗೀತೆಗಳು ಒಳಗೊಂಡಿರುವುದು, ವಿಷ್ಣು ಮತ್ತು ಅವನ ಅವತಾರಗಳ, ಮುಖ್ಯವಾಗಿ ಶ್ರೀಕೃಷ್ಣನ ವಿಷಯ. ಭಕ್ತಿಪಂಥವನ್ನು ರೂಢಿಸಿ, ವಿಶಿಷ್ಟಾದ್ವೈತಸಿದ್ಧಾಂತಕ್ಕೆ ಅಗತ್ಯವಿರುವ ಸಂಪ್ರದಾಯದ ಚೌಕಟ್ಟನ್ನು ಒದಗಿಸಿದವರು ಈ ಆಳ್ವಾರರು.

ಶ್ರೀವೈಷ್ಣವಪಂಥದ ವೈಶಿಷ್ಟ್ಯತೆಯೆಂದರೆ, ಈ ಮೇಲೆ ಪ್ರಸ್ತಾಪಿಸಿದ ತಮಿಳು ಶ್ರೀವೈಷ್ಣವ ಆಳ್ವಾರರು (Saints) ಮತ್ತು ಆಚಾರ್ಯರ (Preceptors) ಆರಾಧನೆ. ಶ್ರೀವೈಷ್ಣವಪಂಥವು ತಮಿಳುನಾಡಿನಲ್ಲಿ ಉನ್ನತಿ ಹೊಂದಿದರೂ ಆ ನಂತರ ಕಾಲ ಪ್ರಭಾವದಿಂದ ಅದರ ಬೆಳವಣಿಗೆ ಕುಂಠಿತಗೊಳ್ಳುವ ಲಕ್ಷಣಗಳು ಗೋಚರಿಸಿದವು. ಆದ್ದರಿಂದ ವೇದ-ಪ್ರಬಂಧಗಳ ಪುನರುತ್ಥಾನಕ್ಕಾಗಿ ಸಂಘಟನೆಗೊಂಡುದೇ ಆಚಾರ್ಯ ಪರಂಪರೆ. ಈ ಆಚಾರ್ಯರು ಶ್ರೀವೈಷ್ಣವಪಂಥದ ಉಪದೇಶ ಮತ್ತು ಕೃತಿರಚನೆಗಳ ಕೈಂಕರ್ಯ ಕೈಗೊಂಡರು. ‘‘ಈ ಆಚಾರ್ಯರು ಪಂಡಿತ, ವಿಮರ್ಶಕ, ಭಕ್ತ, ಉದಾರಿಗಳಾಗಿದ್ದು, ಸಂಸ್ಕೃತ, ತಮಿಳು ಎರಡರಲ್ಲಿಯೂ ನಿಪುಣರಾಗಿ, ವೈದಿಕ ಸಂಸ್ಕೃತ ವೇದಾಂತಶಾಸ್ತ್ರದ ಕರ್ಮ ಮತ್ತು ಜ್ಞಾನ ಸಂಪ್ರದಾಯ ಹಾಗೂ ಆಳ್ವಾರುಗಳ ತಮಿಳು ಪ್ರಬಂಧಗಳ ಭಕ್ತಿ ಸಂಪ್ರದಾಯ ಎರಡಕ್ಕೂ ಸುಂದರ ಸಮನ್ವಯ ಸಾಮರಸ್ಯವನ್ನುಂಟುಮಾಡಿ, ಆ ಮೂಲಕ ಉಭಯವೇದಾಂತ ಪ್ರವರ್ತಕರೆನಿಸಿ ಕೊಂಡರು. ವಿಶಿಷ್ಟಾದ್ವೈತಸಿದ್ಧಾಂತ ಮತ್ತು ಪ್ರಪತ್ತಿಮಾರ್ಗಗಳನ್ನು ಸ್ಥಾಪಿಸಿ, ಇದನ್ನು ಪ್ರಪ್ರಥಮವಾಗಿ ಪ್ರವರ್ತನಗೊಳಿಸಿದ ಮಹಾಲಕ್ಷ್ಮಿ ಅಥವಾ ಶ್ರೀಯ ಹೆಸರಿನಲ್ಲಿ ಶ್ರೀವೈಷ್ಣವಮತವೆಂದು ಕರೆದರು… ತಮಿಳುನಾಡಿನಲ್ಲಿ ವಿಷ್ಣುಭಕ್ತಿಯನ್ನು ಪ್ರಚಾರ ಮಾಡುವ ಶ್ಲಾಘ್ಯಪ್ರಯತ್ನಗಳ ಮೂಲಕ ಬೇರ್ಪಟ್ಟ ಜೀವಾತ್ಮ-ಪರಮಾತ್ಮರನ್ನು ಒಂದುಗೂಡಿಸಲೆತ್ನಿಸಿದ ನಮ್ಮ ಆಚಾರ್ಯರುಗಳೂ ಆಳ್ವಾರುಗಳಂತೆ ದೈವಾಂಶ ಸಂಭೂತರು, ಅವತಾರಪುರುಷರು ಎಂದು ಪರಿಗಣಿಸಲ್ಪಟ್ಟಿದ್ದಾರೆ (ಶ್ರೀವೈಷ್ಣವ ಆಚಾರ್ಯಪರಂಪರೆ, ಪು. ೩೫-೩೬). ಅಲ್ಲದೆ, ಪಂಚಸಂಸ್ಕಾರ ಅರ್ಥಪಂಚಕ, ಪಂಚಸ್ವರೂಪ, ಪಂಚಕಾಲಕರ್ಮ- ಇವುಗಳಿರುವ ವಿಶಿಷ್ಟಾದ್ವೈತಿಗಳು ಅಥವಾ ಶ್ರೀವೈಷ್ಣವರು ತಮ್ಮನ್ನು ಐಯಂಗಾರ್ ಎಂದು ಕರೆದುಕೊಂಡರು. ಈ ಪರಂಪರೆಯಲ್ಲಿ ೧೧ನೆಯ ವಿಶಿಷ್ಟಾದ್ವೈತದ ವಿಶ್ವಾಚಾರ್ಯರಾಗಿ ಅವತರಿಸಿದವರೇ ರಾಮಾನುಜಾ ಚಾರ್ಯರು (೧೦೧೭-೧೧೩೭).

ಆಳ್ವಾರರನ್ನು ಪೂಜಿಸುವ ಹಾಗೂ ಅವರಿಗೆ ದೇವಾಲಯಗಳನ್ನು ನಿರ್ಮಿಸುವ ಸಂಪ್ರದಾಯ ಆರಂಭಗೊಂಡುದು ಈ ರಾಮಾನುಜಾಚಾರ್ಯರ ಪ್ರಭಾವದ ಫಲವಾಗಿ.  ಈ ಆಚಾರ್ಯರ ಎಲ್ಲ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದುದು ತಿರುಚಿರಪಳ್ಳಿ ಬಳಿಯಿರುವ ಶ್ರೀರಂಗಂ. ರಾಮಾನುಜರು ತಿರುಪತಿಯ ಗೋವಿಂದ ರಾಜ ದೇವಾಲಯದಲ್ಲಿ ಈ ಆಳ್ವಾರುಗಳ ಮೂರ್ತಿಗಳನ್ನು ಸ್ಥಾಪಿಸಿದರೆನ್ನಲಾಗುತ್ತದೆ. ಇದಾದ ನಂತರವೇ ಶ್ರೀವೈಷ್ಣವ ಆಚಾರ್ಯರನ್ನೂ ದೈವೀಕರಿಸಿ ಆರಾದಿಸುವ ಪದ್ಧತಿ ಹುಟ್ಟಿಕೊಂಡಿತು. ಶ್ರೀರಂಗಂ, ತಿರುಪತಿ, ಕಂಚಿ ಮೊದಲಾದೆಡೆಗಳಲ್ಲಿ ಇಂಥಾ ದೇವಾಲಯಗಳು ಅಸ್ತಿತ್ವಕ್ಕೆ ಬಂದವು. ಇತಿಹಾಸಕಾರರು ಸಹಾ ಗುರುತಿಸು ವಂತೆ, ದಕ್ಷಿಣಭಾರತದ ಮೂರು ಪ್ರಸಿದ್ಧ ಶ್ರೀವೈಷ್ಣವ ದೇವಾಲಯಗಳೆಂದರೆ ಕೋಯಿಲ್ (ಶ್ರೀರಂಗಂ), ತಿರುಮಲೈ ಮತ್ತು ಪೆರುಮಾಳ್ ಕೋಯಿಲ್ (ಕಂಚೀಪುರಂ). ವಿಜಯನಗರದಲ್ಲೂ ಈ ಪರಂಪರೆ ಮುಂದುವರೆಯಿತು. ರಾಮಾನುಜರ ಶಿಷ್ಯರು ಅವರ ಬಗೆಗೆ ಅಪಾರ ಪೂಜ್ಯಭಾವನೆ ಹೊಂದಿದ್ದರಿಂದ, ಅವರ ಗೌರವಾರ್ಥ ಗುಡಿಗಳನ್ನು ನಿರ್ಮಿಸಿದರು. ಅಲ್ಲದೆ, ರಾಮಾನುಜತ್ರಿವಿದಿ, ಉಡೈಯಾವರ್ ಕಾಲ್‌ವೈ ಪಟ್ಟಡೈ ಹಾಗೂ ರಾಮಾನುಜಕೂಟಮ್‌ಗಳು ರಾಮಾನುಜರ ಗಾಢ ಪ್ರಭಾವದ ಫಲವಾಗಿಯೇ ಪ್ರತ್ಯಕ್ಷವಾಗಿ ಕಾಣುವಂಥಾ ಕುರುಹುಗಳೆನಿಸಿದವು.

ಶ್ರೀವೈಷ್ಣವ ದೇವಾಲಯಗಳು ಹಾಗೂ ಮಠಗಳಿಗೆ ಹೊಂದಿಕೊಂಡಂತೆ ರಾಮಾನುಜಕೂಟಗಳಿರುತ್ತಿದ್ದವು. ಶ್ರೀವೈಷ್ಣವರು ತಂಗಲು ಹಾಗೂ ಅವರಿಗೆ ಆಹಾರ ಒದಗಿಸಲು ನಿರ್ಮಾಣಗೊಂಡಂಥಾ ಮನೆಗಳಿವು. ಸಮೀಪದ ಅಥವಾ ದೂರದ ಶ್ರೀವೈಷ್ಣವ ಭಕ್ತರಿಗಾಗಿ ತೆರೆಯಲಾದ ಪ್ರಸಾದನಿಲಯಗಳು. ಸತ್ರವೆಂತಲೂ ಕರೆಯಲಾಗಿದೆ. ದೇವರ ಉಪಯೋಗಕ್ಕಾಗಿ ಹೂದೋಟಗಳನ್ನು ಬೆಳೆಸುವುದು, ಅದಕ್ಕಾಗಿ ವಿಶೇಷ ದತ್ತಿಗಳನ್ನು ಬಿಡುವುದು, ದೇವರನ್ನು ಹೂಗಳಿಂದ ಶೃಂಗರಿಸುವುದು, ರಾಮಾನುಜರ ಭಕ್ತರಾದ ಶ್ರೀವೈಷ್ಣವರಿಗೆ ಉಚಿತ ಅಶನಕ್ಕಾಗಿ ರಾಮಾನುಜರ ಹೆಸರಿನಲ್ಲಿ ರಾಮಾನುಜಕೂಟಗಳನ್ನು ಏರ್ಪಡಿಸುವುದು ಇತ್ಯಾದಿಯನ್ನು ತಮ್ಮ ಗುರುಗಳಿಗೆ ಭಕ್ತಿಪೂರ್ವಕ ಸಲ್ಲಿಸುವ ಸೇವೆಯೆಂದೇ ಭಾವಿಸಲಾಗಿದ್ದಿತು. ಕೆಲವೊಮ್ಮೆ ಇಂಥಾ ರಾಮಾನುಜಕೂಟಗಳು ಶ್ರೀವೈಷ್ಣವ ಭಕ್ತರು ತಮ್ಮ ಪ್ರಮುಖ ಧಾರ್ಮಿಕ ಸಂಗತಿಗಳನ್ನು ಚರ್ಚಿಸಲು ಅವಕಾಶ ಕಲ್ಪಿಸುವ ಎಡೆಗಳಾಗಿರುತ್ತಿದ್ದವು.

ರಾಮಾನುಜರು ತಮ್ಮ ಮೂಲನೆಲೆ ಶ್ರೀರಂಗಂಅನ್ನು ತೊರೆದು ಕೆಲಕಾಲ ಕರ್ನಾಟಕದಲ್ಲಿ, ಅಂದರೆ ಅಂದಿನ ಮೈಸೂರು ಪ್ರಾಂತ್ಯದಲ್ಲಿ ನೆಲೆಸಿದ್ದರೆಂದು ಇತಿಹಾಸ ಹೇಳುತ್ತದೆ. ಆ ಕಾಲಕ್ಕೇ ಅವರು ಸಂಚರಿಸಿದ ಹಾಗೂ ನೆಲೆಸಿದ ಸ್ಥಳಗಳಲ್ಲಿ ರಾಮಾನುಜಕೂಟಗಳು ಸಹಾ ಅಸ್ತಿತ್ವಕ್ಕೆ ಬಂದವೆಂಬುದು ಗಮನಾರ್ಹ. ರಾಮಾನುಜರು ಶ್ರೀರಂಗಂಅನ್ನು ಬಿಟ್ಟುಬರಲು ಇದ್ದ ಕಾರಣವೆಂದರೆ, ಆಗಿನ ಚೋಳ ಅರಸ ಇಮ್ಮಡಿ ಕುಲೋತ್ತುಂಗನ ಧಾರ್ಮಿಕ ನೀತಿ. ಈತನೊಬ್ಬ ಶ್ರೀವೈಷ್ಣವ ಪಂಥದ ವಿರೋದಿ. ರಾಮಾನುಜರು ಸುಮಾರು ೧೦೯೬ರಲ್ಲಿ ಮೈಸೂರು ಪ್ರಾಂತ್ಯಕ್ಕೆ ಬಂದರಲ್ಲದೆ, ೧೦೯೮ರಲ್ಲಿ ಹೊಯ್ಸಳ ಬಿಟ್ಟಿದೇವ ಅಥವಾ ವಿಷ್ಣುವರ್ಧನನನ್ನು ಮತಾಂತರಗೊಳಿಸಿದರು. ಮೊದಲು ತೊಂಡನೂರು (ತೊಣ್ಣೂರು-ಕೆರೆತೊಣ್ಣೂರು), ಆ ನಂತರ ಮೇಲುಕೋಟೆಗಳು ಅವರ ಚಟುವಟಿಕೆಗಳ ಕೇಂದ್ರಗಳೆನಿಸಿದವು. ಸುಮಾರು ೧೧೦೦ರಲ್ಲಿ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವರನ್ನು ಪ್ರತಿಷ್ಠಾಪಿಸಿದರು. ಅವರು ಕರ್ನಾಟಕದಲ್ಲಿದ್ದುದು ೧೨ ಅಥವಾ ೨೦ ವರ್ಷಗಳ ಕಾಲ. ಈ ಕಾರಣಕ್ಕಾಗಿಯೇ ಶ್ರೀವೈಷ್ಣವಪಂಥವು ಮೈಸೂರು ಪ್ರದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿತು. ಹಾಗೆ ನೋಡಿದರೆ, ಕರ್ನಾಟಕದಲ್ಲಿ ವಿಷ್ಣುಪೂಜೆ ವೈಷ್ಣವಭಕ್ತಿಗಳು ಹಿಂದಿನಿಂದಲೂ ನಡೆದುಬಂದಿದ್ದರೂ ಸಾಕಷ್ಟು ವೈಷ್ಣವ ದೇವಾಲಯಗಳಿದ್ದರೂ ರಾಮಾನುಜರು ಕರ್ನಾಟಕದ ಈ ಭಾಗಕ್ಕೆ ಬಂದ ತರುವಾಯ ಇಲ್ಲಿ ಶ್ರೀವೈಷ್ಣವ ಪಂಥವು ವ್ಯಾಪಕವಾಗಿ ಹರಡಿಕೊಂಡಿತು. ಶ್ರವಣಬೆಳಗೊಳದ ಸ್ಥಳಪುರಾಣದ ಪ್ರಕಾರ, ಹೊಯ್ಸಳ ರಾಜಧಾನಿಗಳಲ್ಲೊಂದಾಗಿದ್ದ ತೊಣ್ಣೂರಿನಲ್ಲಿ ವಿಷ್ಣುವರ್ಧನನು ಕೆರೆಯನ್ನು ಕಟ್ಟಿಸುವುದರೊಡನೆ ರಾಮಾನುಜಕೂಟವನ್ನೂ ಸ್ಥಾಪಿಸಿದ. ಕರ್ನಾಟಕದ ಮಟ್ಟಿಗೆ, ಮೊದಲನೇ ರಾಮಾನುಜಕೂಟ ಇದೇ ಆಗಿರುವಂತಿದೆ. ಈ ನಿಟ್ಟಿನಲ್ಲಿ ಎರಡನೇ ಉದಾಹರಣೆಯಾಗಿ, ೧೨೫೬ ನವೆಂಬರ್ ೩೦ರಂದು ಮೇಲುಕೋಟೆಯ ಯತಿರಾಜಮಠದಲ್ಲಿ ಹಾಕಿಸಲಾದ ಕಲ್ಲುಬರಹದ ಉಲ್ಲೇಖವನ್ನು (..,vi, ಪಾಂಡವಪುರ ೧೮೨) ಇಲ್ಲಿ ತೋರಿಸಬಹುದು. ತೆರಕಣಾಂಬಿ ಚೆನ್ನಪ್ಪಸೆಟ್ಟಿಯ ಮಗ ಕೇತಿಯಪ್ಪಸೆಟ್ಟಿಯು ರಾಮಾನುಜರ ಗುಡಿಯಲ್ಲಿಯ ರಾಮಾನುಜಕೂಟ ನಡೆಸಿಕೊಂಡು ಬರಲು ಎರಡು ಗ್ರಾಮಗಳನ್ನೂ ಸ್ವಲ್ಪ ಭೂಮಿಯನ್ನೂ ದಾನಮಾಡಿದ. ಈ ಎರಡೂ ರಾಮಾನುಜಕೂಟಗಳು ಹೊಯ್ಸಳರ ಅವದಿಗೆ ಸಂಬಂದಿಸಿದವು; ರಾಮಾನುಜರ ಪ್ರೇರಣೆಯಿಂದ ಅಸ್ತಿತ್ವಕ್ಕೆ ಬಂದಂಥವು.

ವಿಜಯನಗರದ ಅರಸರು ಮತ್ತು ಶ್ರೀವೈಷ್ಣವಪಂಥ

ವಿಜಯನಗರದ ಧಾರ್ಮಿಕ ಇತಿಹಾಸದಲ್ಲಿ ಕಂಡುಬರುವ ಸ್ಥಿತ್ಯಂತರಗಳು ಆಶ್ಚರ್ಯ ಹುಟ್ಟಿಸುವಂಥವು. ವಿಜಯನಗರ ಸಾಮ್ರಾಟರು ಧರ್ಮಸಹಿಷ್ಣುತೆಗೆ ಹೆಸರಾದಂತೆಯೇ ಹಿಂದೂಧರ್ಮದ, ಅದರಲ್ಲೂ ವೈದಿಕಧರ್ಮದ ರಕ್ಷಣೆ ಮತ್ತು ಉದ್ಧಾರಗಳಿಗೆ, ಕಟ್ಟಾಳುಗಳಾಗಿ ಶ್ರಮಿಸಿದುದು ಕಂಡಂತೆಯೇ ಇದೆ. ‘ಶ್ರೀವಿರೂಪಾಕ್ಷ’ನ  ಅಂಕಿತದೊಡನೆ ತಮ್ಮ ರಾಜ್ಯಭಾರವನ್ನು ನಿರ್ವಹಿಸಿದವರು ಸಂಗಮ ಅರಸರಾದರೆ, ಆ ನಂತರದವರು ವಿರೂಪಾಕ್ಷನ ಅಂಕಿತದೊಡನೆ ‘ಶ್ರೀವೆಂಕಟೇಶ’ನ ಅಂಕಿತವನ್ನೂ ಹಾಕಿಸುವುದರೊಡನೆ ಸಾಮ್ರಾಜ್ಯವನ್ನು ಪಾಲಿಸಿದರು. ಸಂಗಮ ಅರಸರು ಕಾಳಾಮುಖ-ಪಾಶುಪತದ ಪಂಥಾನುಯಾಯಿಗಳಾಗಿ ತಮ್ಮ ಕುಲಗುರು ಕಾಶಿವಿಲಾಸ ಕ್ರಿಯಾಶಕ್ತಿಯನ್ನು ಆರಾಧಿಸಿದಂತೆಯೇ ಶೃಂಗೇರಿಪೀಠದ ವಿದ್ಯಾತೀರ್ಥರು ಮತ್ತು ವಿದ್ಯಾರಣ್ಯರಿಗೂ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು. ಒಂದನೇ ಹರಿಹರ (೧೩೩೬-೧೩೫೬) ಮತ್ತು ಒಂದನೇ ಬುಕ್ಕ (೧೩೫೬-೧೩೭೭) ಮಾತ್ರವೇ ಅಲ್ಲ, ಇಮ್ಮಡಿ ಹರಿಹರನೂ (೧೩೭೭-೧೪೦೪) ವಿದ್ಯಾರಣ್ಯರ ಶಿಷ್ಯನಾಗಿದ್ದ. ಆತನ ಮಕ್ಕಳಲ್ಲೊಬ್ಬನಾದ ಒಂದನೇ ವಿರೂಪಾಕ್ಷನೂ (೧೪೦೪-೧೪೦೫) ವಿದ್ಯಾರಣ್ಯರ ಕೃಪೆಗಾಗಿ ಹಾತೊರೆಯುತ್ತಿದ್ದ. ಈತ ತನ್ನ ‘ಬಾಹುಬಲ’ದಿಂದ ಸಿಂಹಾಸನವನ್ನು ಪರಿಗ್ರಹಿಸುತ್ತಿದ್ದಂತೆಯೇ ವಿಜಯನಗರದ ಧಾರ್ಮಿಕ ಸ್ಥಿತಿ-ಗತಿಯಲ್ಲಿ ಬದಲಾವಣೆ ತೋರಲಾರಂಭವಾಯಿತು.

ಇಮ್ಮಡಿ ಪ್ರೌಢದೇವರಾಯ (೧೪೨೪-೧೪೪೬) ಮತ್ತು ಆ ನಂತರದ ಅರಸರು ಶೈವಪಂಥಾನುಯಾಯಿಗಳಾಗಿದ್ದರೂ ಪರಮತ ಸಹಿಷ್ಣುತೆಯ ಅವರ ಕಾರ್ಯನೀತಿ ಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ೧೫ನೇ ಶತಮಾನದ ಮಧ್ಯಾವದಿ ಯಿಂದೀಚೆಗೆ ವಿಜಯನಗರದ ಅರಸರು ಕ್ರಮೇಣ ಶ್ರೀವೈಷ್ಣವಪಂಥದತ್ತ ಒಲವು ತೋರತೊಡಗಿದುದು ಸ್ಪಷ್ಟ. ಸಾಳುವ ಅರಸರಂತೂ ಸಂಪೂರ್ಣ ಶ್ರೀವೈಷ್ಣವಪಂಥಾನುಯಾಯಿಗಳಾಗಿದ್ದು, ಅಹೋಬಿಲಂನ ನರಸಿಂಹ ಮತ್ತು ತಿರುಪತಿಯ ವೆಂಕಟೇಶ್ವರ ದೈವಗಳಿಗೆ ಸಮಾನ ಭಕ್ತಿಯನ್ನು ಸಮರ್ಪಿಸಿದರು. ಇಷ್ಟಾದರೂ ಶೈವಪಂಥಕ್ಕೆ ಅವರ ಪ್ರೋತ್ಸಾಹ ಕಡಿಮೆಯದಾಗಿರಲಿಲ್ಲ. ಅವರು ನೀಡಿದ ‘ಮಹಾದಾನ’ ಗಳು ಶೈವ ಮತ್ತು ಶ್ರೀವೈಷ್ಣವಪಂಥೀಯರಿಗೆ ಸಮಾನವಾಗಿದ್ದರೂ ಶ್ರೀವೈಷ್ಣವಪಂಥದ ದೇವಾಲಯಗಳನ್ನು ಉದಾರವಾಗಿಯೇ ಪೋಷಿಸಿದುದು ಕಂಡುಬರುತ್ತದೆ. ಹಂಪಿಯ ಶ್ರೀವಿರೂಪಾಕ್ಷನು ಸಾಳುವ ಅರಸರಿಗೂ ಆರಾಧ್ಯದೈವವಾಗಿಯೇ ಉಳಿದುಕೊಂಡು ಬಂದ.

ತುಳುವವಂಶದ ಕೃಷ್ಣದೇವರಾಯ (೧೫೧೦-೧೫೨೯), ಅಚ್ಯುತದೇವರಾಯ (೧೫೨೯-೧೫೪೨) ಮತ್ತು ಸದಾಶಿವರಾಯರ (೧೫೪೨-೧೫೬೫) ಅವದಿಯಲ್ಲಿ ಶ್ರೀವೈಷ್ಣವಪಂಥಕ್ಕೆ ಹೆಚ್ಚಿನ ಆದ್ಯತೆ ದೊರೆತುದು ಸಹಜ. ನಿಷ್ಠಾವಂತ ಶ್ರೀವೈಷ್ಣವ ಪಂಥಾನುಯಾಯಿಯಾಗಿದ್ದವನು ಕೃಷ್ಣದೇವರಾಯ. ಈತ ಶೈವ ದೇವಾಲಯಗಳಿಗೂ ಉದಾರವಾಗಿ ದತ್ತಿ-ದಾನಗಳನ್ನು ನೀಡಿದ. ೧೫೧೭-೧೮ರಲ್ಲಿ ಚೋಳಮಂಡಲದ ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ೧೦,೦೦೦ ವರಹಗಳಷ್ಟು ಮೊತ್ತದ ತೆರಿಗೆ ಯನ್ನು ಬಿಟ್ಟುಕೊಟ್ಟ. ೧೫೧೭ರಲ್ಲಿಯೇ ಚಿದಂಬರಂನ ಪೊನ್ನಂಬಳನಾಥ ದೇವಾಲಯದ ಉತ್ತರದಿಕ್ಕಿನ ಗೋಪುರವನ್ನು ನಿರ್ಮಿಸಿಕೊಟ್ಟ. ಕಾಳಹಸ್ತಿ ಮತ್ತು ತಿರುವಣ್ಣಾಮಲೈಗಳ ಶಿವದೇವಾಲಗಳ ಅಬಿವೃದ್ಧಿಯತ್ತಲೂ ಗಮನಹರಿಸಿದ. ತನ್ನ ರಾಜಧಾನಿಯಲ್ಲಿಯೇ ಗಣಪತಿ ದೇವಾಲಯಕ್ಕೆ ದತ್ತಿಯನ್ನು ನೀಡಿದನಲ್ಲದೆ, ವಿರೂಪಾಕ್ಷ ದೇವಾಲಯದ ಆವರಣದಲ್ಲಿ ರಂಗಮಂಟಪ ಮತ್ತು ಅದರ ಮುಂದಿನ ಗೋಪುರಗಳನ್ನು ಮಾಡಿಸಿಕೊಟ್ಟ. ವಿರೂಪಾಕ್ಷದೇವರಿಗೆ ಈತ ಕೊಡಮಾಡಿದ ಅಮೂಲ್ಯವಸ್ತುಗಳಿಗೆ ಮಿತಿಯೇ ಇಲ್ಲ.

ಹಾಗೆಯೇ, ಶ್ರೀವೈಷ್ಣವಪಂಥದ ಹಿರಿಮೆಯನ್ನು ಸಾದಿಸುವ ನಿಟ್ಟಿನಲ್ಲಿ ಕೃಷ್ಣದೇವರಾಯನು ಹಲವಾರು ಕಾರ್ಯಗಳನ್ನು ನಿರ್ವಹಿಸಿದ. ಇವುಗಳಲ್ಲಿ ೧೫೧೫ರಲ್ಲಿ ಉದಯಗಿರಿಕೋಟೆಯನ್ನು ತನ್ನ ವಶಪಡಿಸಿಕೊಂಡ ಸಂದರ್ಭದಲ್ಲಿ ಅಲ್ಲಿದ್ದ ಬಾಲಕೃಷ್ಣನ ಮೂರ್ತಿಯನ್ನು ವಿಜಯನಗರಕ್ಕೆ ಸಾಗಿಸಿ ತಂದುದೂ ಒಂದು. ಬಾಲಕೃಷ್ಣನಿಗಾಗಿಯೇ ವಿಜಯನಗರದಲ್ಲಿ ಬೃಹತ್ ದೇವಾಲಯವನ್ನು ನಿರ್ಮಿಸಲು ಈತ ಕಾರಣನೆನಿಸಿದ. ಪ್ರಸಿದ್ಧ ವಿಠ್ಠಲ ದೇವಾಲಯದ ಕೆಲವು ಭಾಗಗಳನ್ನು ನಿರ್ಮಿಸಲು ಈತ ತೋರಿದ ಆಸಕ್ತಿ ಮೆಚ್ಚುವಂಥಾದ್ದು. ೧೫೧೪ರಲ್ಲಿ ಈ ರಾಯನು ತಿರುಪತಿಗೆ ಹೋಗಿದ್ದಾಗ ವೆಂಕಟೇಶ್ವರನಿಗೆ ೩೦,೦೦೦ ಚಿನ್ನದನಾಣ್ಯ ಗಳಿಂದ ಮಜ್ಜನಮಾಡಿಸಿದುದು ವಿಶೇಷ. ಹಾಗೆಯೇ, ವಜ್ರ – ವೈಢೂರ್ಯ – ಮುತ್ತು – ರತ್ನ – ಹವಳಗಳ ದಾನವನ್ನೂ ಸಮರ್ಪಿಸಿ ಕೃತಾರ್ಥನಾದ. ೧೫೧೫ರಲ್ಲಿ ಅಹೋಬಿಲಂನ ನರಸಿಂಹದೇವರಿಗೆ ಅಪಾರ ಮೊತ್ತದ ವಜ್ರ ಮತ್ತಿತರ ಅಮೂಲ್ಯ ಮಣಿಗಳ ಒಡವೆ-ವಸ್ತುಗಳನ್ನು ಮಾಡಿಸಿಕೊಟ್ಟುದು ಸಹಾ ಕೃಷ್ಣದೇವರಾಯನಲ್ಲಿದ್ದ ಶ್ರೀವೈಷ್ಣವಪಂಥದ ನಿಷ್ಠೆಗೆ ಸಾಕ್ಷಿ. ಕಾಂಚೀಪುರಂನ ವರದರಾಜಸ್ವಾಮಿ ದೇವಾಲಯದ ಸುಧಾರಣೆಯತ್ತಲೂ ಗಮನಹರಿಸಿದ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬಿದ್ದ ವಿಠೋಬಪಂಥದ ಪ್ರಭಾವವು ಸ್ವಯಂ ಶ್ರೀವೈಷ್ಣವನಾಗಿದ್ದ ಕೃಷ್ಣದೇವರಾಯನ ಮೇಲೆ ಉಂಟಾದುದು ಸಹಜ.

ಕೃಷ್ಣದೇವರಾಯನು ಶ್ರೀವೈಷ್ಣವಪಂಥವನ್ನು ನಾನಾಮುಖವಾಗಿ ಪ್ರೋತ್ಸಾಹದಂತೆಯೇ, ಈ ಪಂಥದ ಗುರುಗಳನ್ನೂ ಅಪಾರವಾಗಿ ಮನ್ನಿಸಿದ. ಚಕ್ರವರ್ತಿಯ ಇಂಥಾ ಗೌರವಕ್ಕೆ ಪಾತ್ರರಾದವರು ಶ್ರೀವೈಷ್ಣವ ಆಚಾರ್ಯರಾಗಿದ್ದ ವೆಂಕಟತಾತಾ ಚಾರ್ಯರು. ರಾಯನು ಈ ಆಚಾರ್ಯರನ್ನು ವಿಜಯನಗರ ಸಾಮ್ರಾಜ್ಯದ ಎಲ್ಲ ಶ್ರೀವೈಷ್ಣವರ ಗುರುಗಳೆಂದು ಮಾನ್ಯಮಾಡಿದ್ದ. ರಾಯನು ೧೫೨೩ರಲ್ಲಿ ರಾಜಶಾಸನ ವೊಂದನ್ನು ಹೊರಡಿಸಿ, ಈ ಆಚಾರ್ಯರಿಗೆ ಕಂಚಿಯ ದೇವಸ್ಥಾನದಲ್ಲಿ ಅಗ್ರ ತೀರ್ಥ-ಪ್ರಸಾದ ಸಿಗುವಂತೆ ಆಜ್ಞಾಪಿಸಿದ. ಅಷ್ಟೇ ಅಲ್ಲ, ಧಾರ್ಮಿಕ ಮತ್ತು ಸಾಮಾಜಿಕ ಅಪರಾಧಗಳನ್ನು ವಿಚಾರಣೆಗೊಳಪಡಿಸಿ ನ್ಯಾಯತೀರ್ಮಾನ ಮಾಡುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆನೀಡುವ ದಂಡನಾದಿಕಾರವನ್ನೂ ಈ ಆಚಾರ್ಯರಿಗೆ ನೀಡಿದ. ಇಂಥದೇ ಗೌರವಕ್ಕೆ ಪಾತ್ರರಾದ ಇನ್ನೋರ್ವ ಗುರುಗಳೆಂದರೆ ದ್ವೈತಸಿದ್ಧಾಂತಿ ವ್ಯಾಸರಾಯರು ಅಥವಾ ವ್ಯಾಸತೀರ್ಥಯತೀಂದ್ರರು. ಇವರು ಮಹಾನ್ ವಿದ್ವಾಂಸರೂ ಆಗಿದ್ದು, ರಾಯನಿಂದ ಹಲವಾರು ಹಳ್ಳಿಗಳ ದತ್ತಿಗಳನ್ನೂ ದಾನಗಳನ್ನೂ ಸ್ವೀಕರಿಸಿದರು.

ಕೃಷ್ಣದೇವರಾಯನ ತರುವಾಯ ವಿಜಯನಗರದಲ್ಲಿ ಶ್ರೀವೈಷ್ಣವಪಂಥವನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸಿದವನೆಂದರೆ ಅಚ್ಯುತದೇವರಾಯ. ಈತ ಸ್ವಯಂ ಶ್ರೀವೈಷ್ಣವಪಂಥೀಯನಾಗಿದ್ದರೂ ಇತರ ಪಂಥಗಳನ್ನು ಗೌರವಿಸುವಲ್ಲಿ ಶ್ರದ್ಧೆ ತೋರಿದ. ತನ್ನ ಹದಿಮೂರು ವರ್ಷಗಳ ಆಳ್ವಿಕೆಯ ಆರಂಭದ ಕೆಲವು ವರ್ಷಗಳಲ್ಲಿ ಶೈವ ಮತ್ತು ಶ್ರೀವೈಷ್ಣವಪಂಥಗಳನ್ನು ಸಮಾನವಾಗಿ ಪುರಸ್ಕರಿಸಿದ ಅಚ್ಯುತದೇವರಾಯ, ತನ್ನ ಆಳ್ವಿಕೆಯ ಉಳಿದರ್ಧ ಅವದಿಯಲ್ಲಿ ಶ್ರೀವೈಷ್ಣವಪಂಥಕ್ಕೇ ಆದ್ಯತೆ ನೀಡಿದ. ೧೫೩೪ರಲ್ಲಿ ಕಾಂಚೀಪುರಂನ ವರದರಾಜ ಮತ್ತು ಏಕಾಂಬ್ರನಾಥ ದೇವಾಲಯಗಳಿಗೆ ಕೆಲವು ಗ್ರಾಮಗಳನ್ನು ದತ್ತಿಯಾಗಿ ನೀಡಿದ. ವರದರಾಜಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಡನೆ ತನ್ನ ಶ್ರೀವೈಷ್ಣವಪಂಥದ ನಿಷ್ಠೆಯನ್ನು ವ್ಯಕ್ತಪಡಿಸಿದ. ಕಂಚಿಯಲ್ಲಿ ಮುತ್ತು-ರತ್ನಗಳಿಂದ ತುಲಾಭಾರ ಮಾಡಿಸಿ ಕೊಂಡ ಅಚ್ಯುತದೇವರಾಯ, ವರದರಾಜಸ್ವಾಮಿಗೆ ಹೇರಳ ದಾನ ದಕ್ಕುವಂತೆ ಮಾಡಿದ್ದು ಗಮನಾರ್ಹ. ವಿಜಯನಗರದ ವಿಠ್ಠಲ ದೇವಾಲಯಕ್ಕೂ ಈತನಿಂದ ಸಾಕಷ್ಟು ದತ್ತಿ-ದಾನಗಳು ಲಭ್ಯವಾದವು. ೧೫೩೪ರಲ್ಲಿಯೇ ವಿಠ್ಠಲ ದೇವಾಲಯದಲ್ಲಿ ಪುರಾಣವನ್ನು ವಾಚಿಸುವ ಈರ್ವರು ಶ್ರೀವೈಷ್ಣವರಿಗೆ ಭೂಮಿಯನ್ನೂ ಮನೆಗಳನ್ನೂ ದಾನವಾಗಿತ್ತ. ೧೫೩೯ರಲ್ಲಿ ‘ಆನಂದನಿದಿ’ ಎಂಬ ದಾನವನ್ನು ಕೊಟ್ಟುದು ವಿಶೇಷ. ಭಾಸ್ಕರಕ್ಷೇತ್ರದ (ಹಂಪಿಯ) ತುಂಗಭದ್ರಾತೀರದ ವಿಠಲೇಶ್ವರನ ಸನ್ನಿದಿಯಲ್ಲಿ ಮಾಧವನ (ವಿಷ್ಣುವಿನ) ಪ್ರೀತಿಗೆ ಪಾತ್ರನಾಗಲು ಅಚ್ಯುತದೇವರಾಯನು ಸಮಸ್ತ ಭೂಸುರರಿಗೆ ಈ ಆನಂದನಿದಿ ದಾನ ನೀಡಿದನೆಂದಿದೆ. ಪ್ರಮುಖ ಯುದ್ಧವೊಂದರಲ್ಲಿ ಜಯಶಾಲಿಯಾದ ಪ್ರಯುಕ್ತ ಈ ರಾಯನು ತನ್ನ ಸಂತೋಷಕ್ಕಾಗಿ ಆನಂದನಿದಿ ದಾನವನ್ನು ನೀಡಿದ್ದಿರಬೇಕೆಂಬ ಅಬಿಪ್ರಾಯವಿದೆ (ವಿಜಯನಗರ ಅಧ್ಯಯನ, ಪು. ೧೪೧-೧೪೨). ೧೫೩೯ ಮೇ ತಿಂಗಳಿನಲ್ಲಿ ವೈಖಾನಸಸೂತ್ರದನ್ವಯ ಚಿದಂಬರಂನಲ್ಲಿ ತಿಲ್ಲೈಗೋವಿಂದಾಜಮೂರ್ತಿಯನ್ನು ಸ್ಥಾಪಿಸಿದನಲ್ಲದೆ, ಈ ದೇವರ ನಿತ್ಯಪೂಜಾ ಕಾರ್ಯಕ್ಕೆಂದು ೫೦೦ ಹೊನ್ನುಗಳನ್ನು ದಾನಮಾಡಿದ.

ಅರವೀಡು ಸಂತತಿಯ ಆಳ್ವಿಕೆ ಮೊದಲಿಟ್ಟನಂತರವೂ ವಿಜಯನಗರದಲ್ಲಿ ಶ್ರೀವೈಷ್ಣವಪಂಥಕ್ಕೆ ಮೊದಲಿನಂತೆಯೇ ಪ್ರೋತ್ಸಾಹ-ಮನ್ನಣೆಗಳು ಮುಂದುವರೆದವು. ತುಳುವ ವಂಶದ ಸದಾಶಿವರಾಯ ಮತ್ತು ಅರವೀಡು ವಂಶದ ರಾಮರಾಜರು ನಿಷ್ಠಾವಂತ ಶ್ರೀವೈಷ್ಣವಪಂಥಾನುಯಾಯಿಗಳಾಗಿದ್ದರು. ಇವರ ಆಡಳಿತಾವದಿಯಲ್ಲಿ ಶ್ರೀವೈಷ್ಣವ ಆಚಾರ್ಯರಿಗೆ ಸಾಕಷ್ಟು ಪೋಷಣೆ-ಪ್ರೋತ್ಸಾಹ ದೊರೆತವು. ತಿರುಮಲೈ ಮತ್ತು ತಿರುಪತಿಗಳು ಮಾತ್ರವಲ್ಲದೆ, ಶ್ರೀಪೆರಂಬದೂರ್ ಮತ್ತು ಶ್ರೀಮುಷ್ಣಮ್‌ಗಳಲ್ಲಿಯ ದೇವಾಲಯಗಳಿಗೆ ವಿಶೇಷ ದಾನಗಳನ್ನು ಸಮರ್ಪಿಸ ಲಾಯಿತು. ಶ್ರೀವೈಷ್ಣವ ಆಚಾರ್ಯರಲ್ಲಿ ತಾಳ್ಳಪಾಕಂ ಪಂಗಡಕ್ಕೆ ಸೇರಿದ ಅನ್ನಮಾಚಾರ್ಯ, ತಿರುಮಲಾಚಾರ್ಯ, ತಾಳ್ಳಪಾಕಂ ತಿರುವೇಂಗಳನಾಥರಂಥವರು ರಾಮರಾಜನಿಂದ ಬಹುವಾಗಿ ಗೌರವಿಸಲ್ಪಟ್ಟರು. ಕೃಷ್ಣದೇವರಾಯನ ಅವದಿಯಲ್ಲಿ ಆಸ್ಥಾನ ಆಚಾರ್ಯರಾಗಿದ್ದ ಗೋವಿಂದದೇಶಿಕರು ಪ್ರಸಿದ್ಧ ಶ್ರೀವೈಷ್ಣವ ಆಚಾರ್ಯ ತಾತಾಚಾರ್ಯರಿಂದ ಸ್ಥಾನಾಂತರಗೊಂಡರು. ಇದೇ ಅವದಿಯಲ್ಲಿ, ದೊಡ್ಡಾ ಚಾರ್ಯರು ಚಿದಂಬರಂ(ಚಿತ್ರಕೂಟ)ನಲ್ಲಿ ಏರ್ಪಟ್ಟ ವಾದದಲ್ಲಿ ಶೈವ ವಿದ್ವಾಂಸರನ್ನು ಜಯಿಸುವುದರೊಡನೆ, ತಾತಾಚಾರ್ಯ ಮತ್ತು ರಾಮರಾಜರ ನೆರವಿನೊಡನೆ ಅದೇ ಸ್ಥಳದಲ್ಲಿ ಗೋವಿಂದರಾಜದೇವರ ಆರಾಧನೆ ಆರಂಭಗೊಳ್ಳಲು ಕಾರಣ ಕರ್ತರೆನಿಸಿದರು. ಕಂಡಾಲ ಶ್ರೀರಂಗಾಚಾರ್ಯರೆಂಬ ಇನ್ನೋರ್ವ ಶ್ರೀವೈಷ್ಣವ ಆಚಾರ್ಯರು ಶ್ರೀಪೆರಂಬದೂರಿನಲ್ಲಿ ರಾಮಾನುಜಕೂಟ ನಡೆಸುವುದಕ್ಕಾಗಿ ೩೧ ಗ್ರಾಮಗಳ ದತ್ತಿಯನ್ನು ಹಾಕಿಕೊಟ್ಟುದು ಸಹಾ ಇದೇ ಅವದಿಯಲ್ಲಿ.

ಒಂದನೇ ತಿರುಮಲನು (೧೫೬೫-೧೫೬೭) ಕಂಚಿ, ಶ್ರೀರಂಗ, ತಿರುಪತಿ (ಶೇಷಾಚಲ), ಚಿದಂಬರಂ (ಕನಕಸಭಾ) ಮತ್ತು ಅಹೋಬಲಾದ್ರಿಗಳಲ್ಲಿ ತುಲಾಪುರುಷ ಮತ್ತಿತರ ದಾನ-ದತ್ತಿಗಳನ್ನು ನೆರವೇರಿಸಿದ. ಒಂದನೇ ಶ್ರೀರಂಗನೂ ನಿಷ್ಠಾವಂತ ಶ್ರೀವೈಷ್ಣವಪಂಥಾನುಯಾಯಿಯಾಗಿದ್ದು, ಅಹೋಬಿಲಂನ ನರಸಿಂಹ ದೇವಾಲಯದಲ್ಲಿ ಪೂಜಾಕೈಂಕರ್ಯಗಳು ಮೊದಲಿನಂತೆ ನಡೆಯಲು ಕಾರಣನೆನಿಸಿದ. ಇದಕ್ಕೆ ಮುನ್ನ ಈ ಪ್ರದೇಶವು ಇಬ್ರಾಹಿಂ ಖುತ್ಬಾಷಾದ್ ಮತ್ತು ಹಂಡೆ ಅನಂತಪುರದ ಆಡಳಿತ ನೋಡಿಕೊಳ್ಳುತ್ತಿದ್ದ ಮಲಕಪ್ಪ-ಇವರ ಅದೀನದಲ್ಲಿದ್ದು, ದಿನನಿತ್ಯದ ಪೂಜಾದಿಗಳು ವ್ಯತ್ಯಸ್ತಗೊಂಡಿದ್ದವು. ಶ್ರೀರಂಗನು ಇವರನ್ನು ಸೋಲಿಸುವುದರೊಡನೆ, ಈ ದೇವಾಲಯದ ಮೇಲ್ವಿಚಾರಕರಾಗಿದ್ದ ಜಿಯ್ಯಂಗಾರ್‌ರಿಗೆ ಇವುಗಳನ್ನು ವಹಿಸಿಕೊಟ್ಟ. ಕರ್ನಾಟಕದ ಮೇಲುಕೋಟೆ, ತಮಿಳುನಾಡಿನ ಶ್ರೀಪೆರಂಬದೂರ್, ಶ್ರೀಮುಷ್ಣಮ್ ಮತ್ತು ತಿರುವಳ್ಳಿಕೇಣಿಗಳ ಶ್ರೀವೈಷ್ಣವ ದೇವಾಲಯಗಳಿಗೆ ಈತನಿಂದ ಹಲವಾರು ದತ್ತಿ-ದಾನಗಳು ಸಲ್ಲಿಸಲ್ಪಟ್ಟವು. ಶ್ರೀವೈಷ್ಣವ ವಿದ್ವಾಂಸ ಎಟ್ಟೂರು ಕುಮಾರ ತಿರುಮಲತಾತಾಚಾರ್ಯರು ಈತನ ಆಸ್ಥಾನದಲ್ಲಿ ಆಶ್ರಯ ಪಡೆದುಕೊಂಡರು. ಶ್ರೀರಂಗನು ಕಂಚಿಯ ವಿಷ್ಣುದೇವಾಲಯವನ್ನೂ ಅಬಿವೃದ್ಧಿಪಡಿಸಿದನಲ್ಲದೆ, ಇದಕ್ಕಾಗಿ ತಿರುಪ್ಪಾಣಿ ಶಿಂಗಾರೈಯ್ಯಂಗಾರ್ ಎಂಬವರನ್ನು ತನ್ನ ಪರವಾಗಿ ನೇಮಿಸಿದ. ಶ್ರೀರಂಗಂನಲ್ಲಿಯೂ ವಾಮನ ದೇವಾಲಯದ ಗರ್ಭಗೃಹ, ಅರ್ಧಮಂಟಪ, ಮಹಾಮಂಟಪ ಮತ್ತು ಗೋಪುರಗಳನ್ನು ನಿರ್ಮಿಸಿಕೊಟ್ಟ. ಈತನ ಅವದಿಯಲ್ಲಿ ರಾಮಾನುಜರನ್ನು ಆರಾದಿಸುವ ಪದ್ಧತಿಗೆ ಇನ್ನಷ್ಟು ಚಾಲನೆ ದೊರೆಯಿತು. ೧೫೭೫ರ ಶಾಸನದ ಪ್ರಕಾರ, ಈತನ ಗುರುಗಳಾಗಿದ್ದ ತಾತಾಚಾರ್ಯ ಮತ್ತಿತರರು, ಮೇಲುಕೋಟೆಯಲ್ಲಿ ರಾಮಾನುಜರನ್ನು ಕೀರ್ತಿಸುವ ವೇದಾಂತದೇಶಿಕರ ‘ಯತಿರಾಜಸಪ್ತತಿ’ಯನ್ನು ವಾಚಿಸಿದರೆನ್ನಲಾಗುತ್ತದೆ. ತನ್ನ ಹಿಂದಿನ ಅರಸರಂತೆಯೇ ಶ್ರೀರಂಗನೂ ಶಿವನನ್ನು ಗೌರವಿಸುತ್ತಿದ್ದು, ತನ್ನ ಶಾಸನಗಳ ಆರಂಭದಲ್ಲಿ ಶಿವ- ವಿಷ್ಣು-ಗಣೇಶರನ್ನು ಸ್ತುತಿಸಿದ್ದಾನೆ.

ತಿರುಮಲ ಮತ್ತು ಒಂದನೇ ಶ್ರೀರಂಗರ ಕಾಲದವರೆಗೆ, ವಿಜಯನಗರ ಸಾಮ್ರಾಟರು ವಿರೂಪಾಕ್ಷದೇವರ ಕೃಪಾಕಟಾಕ್ಷವನ್ನೆ ನಂಬಿಕೊಂಡು ಬಂದುದು ಸ್ಪಷ್ಟ. ಆದರೆ ಇಮ್ಮಡಿ ವೆಂಕಟ ಅಥವಾ ಪೆದ್ದವೆಂಕಟನ (೧೫೮೬-೧೬೧೪) ಕಾಲದಿಂದ ವಿಜಯನಗರದ ಧಾರ್ಮಿಕ ನೀತಿಯಲ್ಲಿ ಬದಲಾವಣೆ ಕಂಡುಬರಲಾರಂಬಿಸಿತು. ‘ಶ್ರೀವಿರೂಪಾಕ್ಷ’ ಅಂಕಿತದ ಸ್ಥಾನದಲ್ಲಿ ‘ಶ್ರೀವೆಂಕಟೇಶ’ ಅಂಕಿತ ಕಾಣಿಸತೊಡಗಿತು. ಈ ಅರಸನ ಶಾಸನಪಾಠಗಳ ಆರಂಭದ ಸ್ತುತಿಗಳಲ್ಲಿ ಶ್ರೀವೆಂಕಟೇಶ ಅಥವಾ ಶ್ರೀರಾಮ ಅಥವಾ ವಿಷ್ಣುವಿನ ಹೆಸರುಗಳು ಕಂಡುಬಂದವು. ತಿರುಪತಿಯ ವೆಂಕಟೇಶ್ವರನ ಸನ್ನಿದಿಯಲ್ಲಿಯೇ ದಾನಗಳು ನೀಡಲಾರಂಭವಾದವು. ಹೀಗೆ ವಿಜಯನಗರದವರು ದಕ್ಷಿಣದಿಕ್ಕಿಗೆ-ಮೊದಲಿಗೆ ವಿದ್ಯಾನಗರದಿಂದ ಪೆನುಗೊಂಡೆ ಯತ್ತಲೂ ಆ ನಂತರ ಚಂದ್ರಗಿರಿಯತ್ತಲೂ ಸೆಳೆದೊಯ್ಯಲ್ಪಟ್ಟರು. ಅಂದರೆ ವಿರೂಪಾಕ್ಷನ ಸನ್ನಿದಿಯಿಂದ ವೆಂಕಟೇಶ್ವರನ ಸನ್ನಿದಿಗೆ-ಶೈವಪಂಥದಿಂದ ಶ್ರೀವೈಷ್ಣವ ಪಂಥದತ್ತ ವಾಲಿಕೊಂಡರು.

ಇಮ್ಮಡಿ ವೆಂಕಟನ ಗುರುಗಳಾಗಿದ್ದ ತಾತಾಚಾರ್ಯರು ಆಸ್ಥಾನ ಆಚಾರ್ಯರಾಗಿ ಅಪಾರ ಪ್ರಭಾವ ಬೀರಿದರು. ತಿರುಮಲ ಶ್ರೀನಿವಾಸಾಚಾರ್ಯ, ಕಂದಾಡೆ ಅಪ್ಪಳಾಚಾರ್ಯ, ತಾಳ್ಳಪಾಕಂ ತಿರುಮಲಾಚಾರ್ಯ ಮೊದಲಾದವರು ಈ ಅವದಿ ಯಲ್ಲಿದ್ದ ಅತ್ಯಂತ ಪ್ರಭಾವಶಾಲಿ ಶ್ರೀವೈಷ್ಣವ ಆಚಾರ್ಯರು. ತಿರುಪತಿ, ಅಹೋಬಿಲಂ ಮೊದಲಾದ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇಮ್ಮಡಿ ವೆಂಕಟನ ನಾಣ್ಯಗಳು ಸಹಾ ಆತನಲ್ಲಿದ್ದ ವಿಷ್ಣುಭಕ್ತಿಗೆ ತಕ್ಕ ಉದಾಹರಣೆಯಂತಿವೆ. ಈತ ಠಂಕಿಸಿದ ನಾಣ್ಯಗಳ ಪೈಕಿ ಬಂಗಾರದ ನಾಣ್ಯವನ್ನು ‘ವೆಂಕಟ ಪಗೋಡ’ ಅಥವಾ ‘ವೆಂಕಟರಾಯ ವರಹ’ವೆಂದು ಕರೆದಿದೆ. ಇದರ ಮೇಲ್ಮುಖದಲ್ಲಿ ಬಿಂದುಗಳಿಂದ ಅಲಂಕೃತವಾದ ವೃತ್ತದೊಳಗೆ ನಿಂತಿರುವ ವೆಂಕಟೇಶ್ವರ; ಅಕ್ಕಪಕ್ಕದಲ್ಲಿ ಶ್ರೀದೇವಿ-ಭೂದೇವಿಯರು; ಆತ ತನ್ನ ಮೇಲಿನ ಕೈಗಳಲ್ಲಿ ಶಂಖ-ಚಕ್ರಗಳನ್ನು ಹಿಡಿದಿರುವ ಚಿತ್ರವಿದೆ. ಹಿಮ್ಮುಖದಲ್ಲಿ ಎರಡು ಸಾಲುಗಳಲ್ಲಿರುವ ‘ಶ್ರೀವೆಂಕಟೇಶ್ವರಾಯ ನಮಃ’ ಎಂಬ ನಾಗರಿಲಿಪಿಯ ಬರಹವೂ ಇದೆ. ಈ ನಾಣ್ಯವನ್ನು ಠಂಕಿಸಿದವನು ಮುಮ್ಮಡಿ ವೆಂಕಟಪತಿರಾಯನೆಂತಲೂ ಹೇಳಲಾಗಿದೆ. ನಾಲ್ವಡಿ ಶ್ರೀರಂಗರಾಯನ ಚಿನ್ನದ ನಾಣ್ಯಗಳೂ ಇಂಥವೇ ಚಿಹ್ನೆ ಮತ್ತು ಬರಹಗಳನ್ನು ಒಳಗೊಂಡಿವೆ.

ವಿಜಯನಗರ ಇತಿಹಾಸದಲ್ಲಿ ಆ ನಂತರ ಕಾಣಿಸಿಕೊಳ್ಳುವ ಅರವೀಡುವಂಶದ ಇತರ ಅರಸರಲ್ಲಿ ಇಮ್ಮಡಿ ರಾಮ(ದೇವ), ಮುಮ್ಮಡಿ ವೆಂಕಟ ಮತ್ತು ಮುಮ್ಮಡಿ ಶ್ರೀರಂಗರೂ ಶ್ರದ್ಧಾವಂತ ಶ್ರೀವೈಷ್ಣವಪಂಥೀಯರೆನಿಸಿದ್ದರು. ಆದರೆ ಹಿಂದಿನಂತೆಯೇ ಇತರ ಪಂಥಗಳ ಬಗೆಗೆ ಈ ಅರಸರು ಅನುಸರಿಸಿದ ಸಹಿಷ್ಣುತಾ ನೀತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಮುಮ್ಮಡಿ ಶ್ರೀರಂಗನು ಶ್ರೀವೈಷ್ಣವಪಂಥದ ಪ್ರಚಾರಕ್ಕಾಗಿ ಸಮಯಾಚಾರ್ಯರನ್ನು, ಅಂದರೆ ಸಂಪ್ರದಾಯದಂತೆ ನಡೆದುಕೊಳ್ಳುವ ವರನ್ನು ಬಳಸಿಕೊಂಡ. ೧೬೪೧ರಲ್ಲಿ ಈ ಅರಸನು ‘ಸ್ವಯಮಾಚಾರ್ಯ ಪುರುಷ’ರಲ್ಲೊಬ್ಬರಾದ ನಲ್ಲಾನ ಚಕ್ರವರ್ತಿ ವೆಂಕಟಾಚಾರ್ಯರಿಗೆ ಭೂದತ್ತಿಯನ್ನು ಹಾಕಿಕೊಟ್ಟ. ಚಿದಂಬರಂನ ಗೋವಿಂದರಾಜ ದೇವಾಲಯದ ಅಬಿವೃದ್ಧಿಯತ್ತಲೂ ಈತ ಗಮನಹರಿಸಿದ. ಏನೇ ಇದ್ದರೂ ವಿಜಯನಗರ ಸಾಮ್ರಾಟರ ಆಳ್ವಿಕೆಯ ಉದ್ದಕ್ಕೂ ಶೈವರ ವಿರೋಧವಿದ್ದರೂ ಶ್ರೀವೈಷ್ಣವಪಂಥವು ರಾಜಪೋಷಣೆ ಪಡೆದು ಕೊಳ್ಳುವುದರೊಡನೆ ಜನಪ್ರಿಯಪಂಥವಾಗಿ ಬೆಳೆಯಿತು.

ವಿಜಯನಗರದ ರಾಮಾನುಜಕೂಟಗಳು

ಈಗಾಗಲೇ ಗಮನಿಸಿದಂತೆ, ವಿಜಯನಗರದರಸರು ಶ್ರೀವೈಷ್ಣವಪಂಥವನ್ನೂ ಅನುಸರಿಸಿದರು, ಪ್ರೋತ್ಸಾಹಿಸಿದರು. ರಾಮಾನುಜಪಂಥವು ವಿಜಯನಗರದಲ್ಲಿಯೂ ತನ್ನ ಪ್ರಭಾವ ಬೀರಿದ್ದಿತು. ರಾಮಾನುಜರ ತತ್ವ-ಸಿದ್ಧಾಂತಗಳಿಗನುಸಾರವಾಗಿಯೇ ಶ್ರೀವೈಷ್ಣವ ದೇವಾಲಯಗಳು ಹಾಗೂ ರಾಮಾನುಜಕೂಟಗಳು ಇಲ್ಲಿ ಅಸ್ತಿತ್ವಕ್ಕೆ ಬಂದವು. ಸಾಳುವ ಮತ್ತು ತುಳುವ ಅರಸರ ಅವದಿಯಲ್ಲಿ ವಿಜಯನಗರದಲ್ಲಿ ಶ್ರೀವೈಷ್ಣವಪಂಥದ ಚಟುವಟಿಕೆಗಳು ಅದಿಕಗೊಂಡವು. ಅರವೀಡುವಂಶದ ಸದಾಶಿವರಾಯ ಮತ್ತು ರಾಮರಾಜರು ಈ ಪಂಥವನ್ನು ಸಾಕಷ್ಟು ಪ್ರೋತ್ಸಾಹಿಸಿದರು. ಆರಂಭದ ಸಂಗಮ ಅರಸರು ಧಾರ್ಮಿಕ ಸಹಿಷ್ಣುತೆಗೆ ಹೆಸರಾದಂತೆಯೇ, ತಮ್ಮ ಸಾಮ್ರಾಜ್ಯದ ಕೆಲವು ವೈಷ್ಣವ-ಶ್ರೀವೈಷ್ಣವ ದೇವಾಲಯಗಳನ್ನು ಪೋಷಿಸಿದುದಕ್ಕೆ ಹಲವಾರು ಶಾಸನಗಳಿವೆ. ಬನ್ನೂರುಘಟ್ಟದ ದಾಮೋದರ ದೇವಾಲಯವನ್ನು ಇವರು ಸಂರಕ್ಷಿಸಿದುದು ಪ್ರಮುಖವಾಗಿದೆ. ಒಟ್ಟಿನಲ್ಲಿ, ೧೬ನೇ ಶತಮಾನದ ಆರಂಭದ ಕಾಲಾವದಿಯಿಂದ ಶ್ರೀವೈಷ್ಣವಪಂಥವು ವಿಜಯನಗರದಲ್ಲಿ ರಾಜಾಶ್ರಯ ಪಡೆದುಕೊಳ್ಳು ವುದರೊಡನೆ ಬಲಗೊಂಡುದು ವಾಸ್ತವ.

ವಿಜಯನಗರದಲ್ಲಿ ಶ್ರೀವೈಷ್ಣವಪಂಥದ ಪ್ರಮುಖ ಕೇಂದ್ರವಾಗಿದ್ದುದು ವಿಠಲಾಪುರ. ೧೬ನೇ ಶತಮಾನದ ವೇಳೆಗೆ ವಿಠಲಾಪುರದಲ್ಲಿ ಅಸಂಖ್ಯಾತ ದೇವಾಲಯಗಳು, ಮಂಟಪಗಳು, ಕೊಳಗಳು, ಮಹಾದ್ವಾರಗಳು, ಮುಖ್ಯವೀದಿಗಳು ನಿರ್ಮಾಣ ಗೊಂಡಂತೆಯೇ ಇವುಗಳೊಡನೆ ರಾಮಾನುಜಕೂಟಗಳೂ ಅಸ್ತಿತ್ವಕ್ಕೆ ಬಂದವು.  ವಿಠ್ಠಲ ದೇವಾಲಯ ಸಂಕೀರ್ಣದಲ್ಲಿ ಹಲವಾರು ಹೊಸ ದೇವಾಲಯಗಳು ನಿರ್ಮಾಣಗೊಂಡವು. ಕೃಷ್ಣದೇವರಾಯನ ಗುರುಗಳಾದ ವ್ಯಾಸತೀರ್ಥರ ಜೀವಿತಾವಧಿಯಲ್ಲಿ, ಅಂದರೆ ೧೫೩೪ರಲ್ಲಿ, ವಿಠ್ಠಲ ದೇವಾಲಯದ ಸಂಕೀರ್ಣದಲ್ಲಿಯೇ ೧೩ ಮಂದಿ ಆಳ್ವಾರರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು; ಆಳ್ವಾರರಿಗೆ ಕೆಲವು ಮಂದಿರಗಳನ್ನೂ ನಿರ್ಮಿಸಲಾಯಿತು. ಆಳ್ವಾರರು ಮತ್ತು ಆಚಾರ್ಯರ ಆರಾಧನೆಯೊಡನೆ ವಿಠಲಾಪುರದಲ್ಲಿ ರಾಮಾನುಜಕೂಟಗಳನ್ನು ಸ್ಥಾಪಿಸಿದುದೂ ಶ್ರೀವೈಷ್ಣವ ಪಂಥವು ಪಡೆದ ಪ್ರಾಮುಖ್ಯತೆಗೆ ಸಾಕ್ಷಿ.

ವಿಠಲಾಪುರದಲ್ಲಿ ಮುದಲ್‌ಆಳ್ವಾರರು, ಅಂದರೆ ಮೊದಲ ಮೂವರು ಆಳ್ವಾರರಾದ ಪೊಯ್‌ಹೈ ಆಳ್ವಾರ್, ಪೂದತ್ತಾಳ್ವಾರ್ ಮತ್ತು ಪೇಯಾಳ್ವಾರ್‌ರಿಗೇ ಅಲ್ಲದೆ, ನಮ್ಮಾಳ್ವಾರ್ (ಶಠಕೋಪ), ತಿರುಮಳಿಶೈಯಾಳ್ವಾರ್ ಮತ್ತು ರಾಮಾನುಜರಿಗಾಗಿಯೂ ದೇವಾಲಯಗಳನ್ನು ನಿರ್ಮಿಸಲಾಯಿತು. ಪ್ರತ್ಯೇಕ ನೆಲೆಗಳನ್ನೊಳಗೊಂಡ ಮುದಲ್ ಆಳ್ವಾರ್ ದೇವಾಲಯದ ಬಗೆಗೆ ೧೫೪೩ ಮತ್ತು ೧೫೫೯ರ ಶಾಸನಗಳಲ್ಲಿ ಪ್ರಸ್ತಾಪಿಸ ಲಾಗಿದೆ. ವಿಠ್ಠಲ ದೇವಾಲಯದ ಎದುರಿನಲ್ಲಿರುವ ರಥವೀದಿಯ ಕಡೆಯಲ್ಲಿ ದಕ್ಷಿಣಾಬಿಮುಖನಾಗಿರುವ ರಾಮಾನುಜರ ದೇವಾಲಯದ ಬಗೆಗೆ ಸದಾಶಿವರಾಯನ ಕಾಲದ ಶಾಸನವು (೧೫೫೬) ಅರಹುತ್ತದೆ. ೧೫೫೬ರಲ್ಲೆ ಅಳಿಯ ರಾಮರಾಜನು ವಿಠ್ಠಲ ದೇವಾಲಯದ ಬಳಿಯ ನಮ್ಮಾಳ್ವಾರ್ ದೇವಾಲಯಕ್ಕೆ ದತ್ತಿಯೊಂದನ್ನು ನೀಡಿದ. ವಿಠ್ಠಲ ದೇವಾಲಯದ ಗರುಡಮಂಟಪದ ಸಮೀಪ ಜೀರ್ಣಸ್ಥಿತಿಯಲ್ಲಿರುವ ದೇವಾಲಯವನ್ನು ತಿರುಮಳಿಶೈಆಳ್ವಾರರದೆನ್ನಲಾಗುತ್ತದೆ. ವಿಠ್ಠಲ ದೇವಾಲಯದ ವಾಯವ್ಯದಿಕ್ಕಿನಲ್ಲಿ, ಕೋನೇಟಿರಾಜನ ಮಗ ಔಬಳರಾಜು ೧೫೫೬ರಲ್ಲಿ ಕಟ್ಟಿಸಿದ ತಿರುಮಂಗೈಯಾಳ್ವಾರ್‌ರ ದೇವಾಲಯವಿದೆ. ಮುದಲ್‌ಆಳ್ವಾರ್ ಮತ್ತು ತಿರುಮಂಗೈ ಯಾಳ್ವಾರ್ ದೇವಾಲಯಗಳಲ್ಲಿ ರಾಮಾನುಜಕೂಟಗಳಿದ್ದವು. ರಾಮಾನುಜರ ದೇವಾಲಯದಲ್ಲೂ ಇನ್ನೊಂದು ರಾಮಾನುಜಕೂಟವಿದ್ದಿತೆಂಬ ಅಭಿಪ್ರಾಯವಿದೆ.

ತಿರುಮಂಗೈಯಾಳ್ವಾರ್, ಮುದಲ್‌ಆಳ್ವಾರ್ ಮತ್ತು ರಾಮಾನುಜರ ದೇವಾಲಯ ಗಳಲ್ಲಿಯ ರಾಮಾನುಜಕೂಟಗಳ ಸ್ವರೂಪವನ್ನು ಅವುಗಳ ಸ್ಥಾನ, ಅಲ್ಲಿಯ ಒಳವ್ಯವಸ್ಥೆ, ಒಲೆಗಳು, ಮಸಿಯಿಡಿದ ಛಾವಣಿ, ಹೊಗೆಗೂಡು, ಜಾಲಾಂಧ್ರ ಇತ್ಯಾದಿ ಆಧಾರಗಳನ್ನನುಸರಿಸಿ ನಿರೂಪಿಸಲಾಗುತ್ತದೆ. ಸರಳ ಮಂಟಪಗಳಂತೆ ತೋರುವ ಈ ರಾಮಾನುಜಕೂಟಗಳು, ಯಾವುದೇ ಅಲಂಕಾರಗಳನ್ನು ಪಡೆಯದ ‘ಪವಿತ್ರ’ ಪ್ರಸಾದತಾಣಗಳಾಗಿರುತ್ತಿದ್ದುದು ವಾಸ್ತವ. ಆದರೆ ಇವು ಇತರೆಡೆಗಳಲ್ಲಿರುವ ಪಾಕಶಾಲೆಗಳಂತಿರದೆ, ಶ್ರೀವೈಷ್ಣವರಿಗೆ ಮಾತ್ರ ಸೀಮಿತಗೊಂಡಂತ್ತಿದ್ದವೆಂಬುದು ವಿಶೇಷ.

ವಿಜಯನಗರದ ಶಾಸನಗಳಲ್ಲಿ ರಾಮಾನುಜಕೂಟದ ವ್ಯವಸ್ಥೆ ಮತ್ತು ಅವುಗಳಿಗೆ ಬಿಡಲಾದ ದಾನ-ದತ್ತಿಗಳನ್ನು ಕುರಿತು ಅನೇಕ ಉಲ್ಲೇಖಗಳಿವೆ. ವೈಷ್ಣವ/ಶ್ರೀವೈಷ್ಣವ ದೇವಾಲಯಗಳು ಹಾಗೂ ಪೇಟೆಗಳನ್ನು ಕಟ್ಟಿಸುವಂಥಾ ಸಂದರ್ಭಗಳಲ್ಲೂ ದಾನಿಗಳು ರಾಮಾನುಜಕೂಟವನ್ನೂ ಲಕ್ಷಿಸುತ್ತಿದ್ದರೆಂಬುದು ಸ್ಪಷ್ಟಪಡುವ ಅಂಶ. ೧೫೩೪ರ ಶಾಸನವು (ಹಂಪಿ ಶಾಸನಗಳು, ೧೩೨) ಹೇಳುವಂತೆ, ಅಚ್ಯುತದೇವರಾಯನು ಅರಸನಾಗಿದ್ದಾಗ ಆತನ ಮಂಡಳೇಶ್ವರ ಕಾಶ್ಯಪಗೋತ್ರ, ರುಕುಶಾಖೆಯ ಸಲಕರಾಜ ಒಡೆಯನ ಮಗ ಹಿರಿಯ ತಿರುಮಲರಾಜ ಒಡೆಯನು ತುಂಗಭದ್ರಾತೀರದಲ್ಲಿ ಶ್ರೀತಿರುವೆಂಗಳನಾಥದೇವರ ಪ್ರತಿಷ್ಠೆಯನ್ನು ಮಾಡಿಸುತ್ತಾನೆ. ಈ ಸಂದರ್ಭದಲ್ಲಿ ಅಚ್ಯುತದೇವರಾಯನು ದೇವರಿಗೆ ಆಭರಣಗಳನ್ನೂ ಪೂಜೆಗಳಿಗಾಗಿ ಹೊರಮಲೆ ನಾಡಿಗೆ ಸೇರಿದ ಅಚ್ಚುತಾಪುರವೆಂದು ಪ್ರತಿನಾಮ ಹೊಂದಿದ ಚೋರಮನೂರು ಗ್ರಾಮವನ್ನೂ ನೀಡುತ್ತಾನೆ. ಈ ಪೇಟೆಯ ಪರಿಸರದಲ್ಲಿ ರಾಮಾನುಜಕೂಟವಿದ್ದುದನ್ನೂ ಈ ದಾನವು ಅದನ್ನೂ ಒಳಗೊಂಡಿದ್ದಿತೆಂಬುದನ್ನೂ ಈ ಶಾಸನವು ಹೇಳುತ್ತದೆ.

ಸದಾಶಿವರಾಯನು ರಾಜ್ಯಭಾರ ಮಾಡುತ್ತಿದ್ದಾಗ, ಶಠಮರುಶಣಗೋತ್ರ, ಆಪಸ್ತಂಭ ಸೂತ್ರದ ಯಜುಶಾಖಾಧ್ಯಾಯರಾದ ತಿರುಮಲ ಆವುಕು ತಾತಾಚಾರ್ಯರ ಮಗ ತಿರುವೆಂಗಳಾಚಾರ್ಯರು, ಶ್ರೀವಿಠ್ಠಲದೇವರ ಅಮೃತಪಡಿಗೆ ಹಾಗೂ ಮಧ್ಯ ಏಕಾದಶಿ, ದ್ವಾದಶಿ ಪುಣ್ಯಕಾಲಗಳ ನೈವೇದ್ಯಕ್ಕೆಂದು ಈ ಅರಸನಿಂದ ತೆಕ್ಕಲಕೋಟೆ ಸೀಮೆ ಯೊಳಗಣ ನಿಟ್ಟೂರು, ಆನೆಗೊಂದಿಯ ಅಡವಿಗೆರೆಗಳನ್ನು ದಾನವಾಗಿ ಪಡೆದು ಕೊಳ್ಳುತ್ತಾರೆ (ಅದೇ, ೧೯೬); ಹಾಗೂ ಇದರೊಳಗೆ ಬರುವ ಎರಡು ಖಂಡುಗ ಗದ್ದೆ ಮತ್ತು ಲಿಂಗರಸನ ತೋಟ-ಇಷ್ಟನ್ನು ದೇವರಿಗೆ ಸಮರ್ಪಿಸುತ್ತಾರೆ. ಮುಖ್ಯಾಂಶವೆಂದರೆ, ದೇವರ ನೈವೇದ್ಯ ಕಟ್ಟಳೆಯ ವಿವರಗಳಿಂದ ತಿಳಿದುಬರುವಂತೆ, ಎಂಟು ಹರಿವಾಣಕ್ಕೆ, ಪಂಚಪರ್ವದ ಸುಖಿಪಡಿ ನೈವೇದ್ಯ, ತಿರುನಾಳು, ಉಟಿತಿರು ನಾಳು, ರಾಮಾನುಜಕೂಟ ಮುಂತಾದವುಗಳಿಗೆ ಪಡಿತರ ನೀಡುವುದಲ್ಲದೆ, ಮೇಲುವೆಚ್ಚಕ್ಕೂ ಹಣವನ್ನು ನಿಗದಿಪಡಿಸಲಾಗಿರುತ್ತದೆ. ತಿರುವೆಂಗಳಾಚಾರ್ಯರನ್ನೂ ಒಳಗೊಂಡಂತೆ ಇತರರಿಗೆ ಸಲ್ಲಬೇಕಾದ ಪಾಲುಗಳ ವಿವರವೂ ಇದರಲ್ಲಿ ದೊರಕುತ್ತದೆ. ಇಂಥಾ ಪಾಲು ಪಡೆದುಕೊಳ್ಳುವವರಲ್ಲಿ ಸ್ವಯಂಪಾಕಿಗಳೂ ಕಂಡುಬರುತ್ತಾರೆ.

೧೫೫೬ರ ಸದಾಶಿವರಾಯನ ಕಾಲದ ತೆಲುಗು ಶಾಸನವೊಂದು (ಅದೇ, ೨೦೯), ಆತ್ರೇಯಗೋತ್ರ, ಸೋಮವಂಶದ ಮಹಾಮಂಡಳೇಶ್ವರ ರಾಮರಾಜ ಕೋನೇಟಯ್ಯನ ಮಗನಾದ ಅವುಬಳ ಮಹಾರಾಜನು ಶ್ರೀವಿಠ್ಠಲೇಶ್ವರ ದೇವಾಲಯದ ಪ್ರಾಕಾರದ ಒಳಗೆ ವಾಯವ್ಯದಲ್ಲಿ ತಿರುಮಂಗೈಯಾಳ್ವಾರರಿಗೆ ಗರ್ಭಗೃಹ, ಶುಕನಾಸಿ, ಅಂತರಾಳ, ರಂಗಮಂಟಪ ಮುಂತಾದವುಗಳನ್ನು ಕಟ್ಟಿಸಿ, ಅವುಗಳಿಗೆ ಗ್ರಾಮಗಳನ್ನು ದತ್ತಿ ನೀಡಿದ ವಿಚಾರವನ್ನು ಅರಹುತ್ತದೆ. ಇದಕ್ಕೆ ಸಂಬಂದಿಸಿದ ಕಟ್ಟಳೆಗಳಲ್ಲಿ, ಶ್ರೀವೈಷ್ಣವರಿಗೆ ರಾಮಾನುಜಕೂಟವನ್ನು ನಡೆಸಲು ತಿರುಪತಿಯಿಂದ ಬಂದ ಸ್ವಯಂಪಾಕದ ಪರಿಚಾರಕರ ನೇಮಕವು ಮುಖ್ಯವಾದುದು.

ಶ್ರೀವೈಷ್ಣವ ಭಕ್ತರಿಗಾಗಿ ರಾಮಾನುಜಕೂಟಗಳಲ್ಲಿ ಆಹಾರವನ್ನು ಸಿದ್ಧಪಡಿಸುವ ವರನ್ನು ‘ಸ್ವಯಂಪಾಕಿಗಳು’ ಅಂದರೆ ವಿಶೇಷ ಅಥವಾ ಶುದ್ಧವಾದ ಅಡಿಗೆ ಮಾಡುವವರೆಂದು ಶಾಸನಗಳಲ್ಲಿ ಗುರುತಿಸಲಾಗಿದೆ. ದೇವಾಲಯಗಳ ಛತ್ರಗಳಲ್ಲಿ ಅಥವಾ ರಾಮಾನುಜಕೂಟಗಳಲ್ಲಿ ಅಡಿಗೆಮಾಡುವ ಹಾಗೂ ಅದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವ ಸಂಬಂಧದಲ್ಲಿ ಶಾಸನಗಳು ವಿವರವನ್ನು ಒದಗಿಸುತ್ತವೆ. ಉದಾಹರಣೆಗೆ, ಸದಾಶಿವರಾಯನ ೧೫೫೪ರ ಶಾಸನವೊಂದು (ಅದೇ, ೧೮೬), ವಿಠ್ಠಲ ದೇವಾಲಯಕ್ಕೆಂದು ವಿವಿಧ ರೀತಿಯ ನೈವೇದ್ಯ ತಿನಿಸುಗಳಿಗಾಗಿ ನೀಡುತ್ತಿದ್ದ ಪಡಿಯ ವಿವರ; ಈ ತಿನಿಸುಗಳನ್ನು ತಯಾರಿಸುವಾಗ ಕುಟ್ಟುವ, ಬೀಸುವ ಕೂಲಿಗೆ ತಗಲುವ ವೆಚ್ಚ ಇತ್ಯಾದಿ ವಿವರಗಳನ್ನು ಒದಗಿಸುತ್ತದೆ.

೧೫೬೩ರ ಇನ್ನೊಂದು ಶಾಸನವು (ಅದೇ, ೧೮೫), ನೈವೇದ್ಯಕ್ಕಾಗಿ ದಿನವೊಂದಕ್ಕೆ ನೀಡಬೇಕಾದ ಪಡಿತರವನ್ನು ವಿವರಿಸಿದೆ. ಈ ಉದಾಹರಣೆಗಳು, ವಿಜಯನಗರಕಾಲದ ರಾಮಾನುಜಕೂಟಗಳೂ ಸೇರಿದಂತೆ ದೇವಾಲಯಗಳ ಪಾಕಶಾಲೆಗಳ ನಿರ್ವಹಣೆಯ ವಿಧಾನವನ್ನು ತಿಳಿಸಿಕೊಡುತ್ತವೆ. ರಾಮಾನುಜಕೂಟಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದ ಆಹಾರವನ್ನು ಶ್ರೀವೈಷ್ಣವರಿಗೆ ‘ನೈವೇದ್ಯ’ವೆಂತಲೂ ಇತರರಿಗೆ ‘ಪ್ರಸಾದ’ವೆಂತಲೂ ವಿತರಿಸಲಾಗುತ್ತಿತ್ತು. ಪ್ರಸಾದವನ್ನು ‘ಭೋಗ’ವೆಂತಲೂ ಕರೆದಿರುವುದರಿಂದ, ಭೋಜನಾಲ ಯವನ್ನು ಭೋಗಮಂಟಪವೆಂತಲೂ ಕರೆದಿದೆ. ವಿಜಯನಗರದಲ್ಲಿ ಹಿಂದಿನಿಂದಲೂ ಉಚಿತ ಪ್ರಸಾದನಿಲಯಗಳಿದ್ದುದಕ್ಕೆ ಶಾಸನಾಧಾರಗಳಿವೆ. ಆಗ ಇವುಗಳನ್ನು ಛತ್ರ, ಹಿರಿಯಕಾಲುವೆಯಛತ್ರ (ಅದೇ, ೮೩ ಮತ್ತು ೮೪ : ೧೫೪೫), ಭೋಜನಶಾಲಾ ಇತ್ಯಾದಿಯಾಗಿ  ಕರೆದಿದೆ. ಮಾದಲಾಪುರ ಗ್ರಾಮದ ಕೆರೆಯೊಳಗಿರುವ ‘ಊಟ(ದ) ಕಾಲುವೆ’ಯ ಪ್ರಸ್ತಾಪವೂ ಇದೆ (ಅದೇ, ೩೨೬ : ೧೫೪೦).

ಹಲವಾರು ಶಾಸನಗಳು ಉಲ್ಲೇಖಿಸುವಂತೆ, ವಿಜಯನಗರದ ಅವದಿಯಲ್ಲಿ ದಾನ-ದತ್ತಿ-ಸೇವಾಕಾರ್ಯಗಳು ಅರಸರು, ಅದಿಕಾರಿಗಳು ಮತ್ತು ಎಷ್ಟೋ ಮಂದಿ ದಾನಿಗಳಿಂದ ನೆರವೇರಿಸಲ್ಪಡುತ್ತಿದ್ದವು. ಇವುಗಳು ಮುಖ್ಯವಾಗಿ ದೇವರುಗಳ ನೈವೇದ್ಯ, ಪ್ರಸಾದ ವಿನಿಯೋಗ, ಉತ್ಸವ, ಹಬ್ಬಾಚರಣೆ, ಹೂದೋಟಗಳ ಸಂರಕ್ಷಣೆ ಗಳೇ ಅಲ್ಲದೆ, ಮಂಟಪ, ಗೋಪುರ, ದೇವಾಲಯ ಮತ್ತು ರಾಮಾನುಜಕೂಟಗಳ ನಿರ್ಮಾಣಗಳಿಗೆ ಸಂಬಂದಿಸಿದವು. ಹಬ್ಬ- ಉತ್ಸವಗಳ ಆಚರಣೆ ಮತ್ತು ಅನ್ನಸಂತರ್ಪಣೆಗಳಿಗಾಗಿ ಭೂದತ್ತಿ, ಗ್ರಾಮದತ್ತಿಗಳೇ ಅಲ್ಲದೆ, ಹಣ ಮತ್ತು ಬಂಗಾರ ಗಳನ್ನೂ ದಾನವಾಗಿ ನೀಡಲಾಗುತ್ತಿದ್ದಿತು.

ವಿಠಲಾಪುರದಲ್ಲಿ ಮುದಲ್‌ಆಳ್ವಾರ್ ಮತ್ತು ತಿರುಮಂಗೈಯಾಳ್ವಾರ್‌ಗಳಂಥಾ ಪ್ರಮುಖ ದೇವಾಲಯಗಳಿದ್ದು, ಶ್ರೀವೈಷ್ಣವಪಂಥದ ಚಟುವಟಿಕೆಗಳ ತಾಣವಾಗಿದ್ದರೂ ಇಲ್ಲಿ ಶ್ರೀವೈಷ್ಣವಮಠವಿದ್ದ ಬಗೆಗೆ ಯಾವುದೇ ಸಾಕ್ಷ್ಯವಿಲ್ಲವೆಂಬುದು ಗಮನಾರ್ಹ. ಇದಕ್ಕೆ ಕಾರಣವಾದರೂ ಮಾಧ್ವಪಂಥದ ಗುರುಗಳಂತೆಯೇ, ಶ್ರೀವೈಷ್ಣವಪಂಥದ ಆಚಾರ್ಯರು ಸಹಾ ವಿಜಯನಗರದಲ್ಲಿ ನೆಲೆಸಿರಲಿಲ್ಲ. ಆದರೆ ಈ ಆಚಾರ್ಯರು ಸಂದರ್ಭಾನುಸಾರ ವಿಜಯನಗರಕ್ಕೆ ಭೇಟಿಕೊಟ್ಟಾಗಲೆಲ್ಲ ಶ್ರೀವೈಷ್ಣವಪಂಥದ ದೇವಾಲಯಗಳಿಗೆ ಹೊಂದಿಕೊಂಡಂತೆ ಇದ್ದ ರಾಮಾನುಜಕೂಟಗಳಲ್ಲೊ ಅಥವಾ ಬೇರೆಯೆಡೆಯಲ್ಲೊ ವಾಸ್ತವ್ಯ ಮಾಡುತ್ತಿದ್ದರೆಂದು ವ್ಯಕ್ತಪಡುತ್ತದೆ. ಯಾವುದೇ ಪ್ರಸಿದ್ಧ ಶ್ರೀವೈಷ್ಣವ ಆಚಾರ್ಯರು ವಿಜಯನಗರದಲ್ಲಿ ಶಾಶ್ವತೆಲೆಯನ್ನು ಹೊಂದಿರಲಿಲ್ಲ ವೆಂಬುದನ್ನು ರಾಮಾನುಜಕೂಟಗಳ ಅಸ್ತಿತ್ವವೇ ದೃಢಪಡಿಸುತ್ತದೆನ್ನಲಾಗು್ತದೆ. ಆದ್ದರಿಂದ ರಾಮಾನುಜಕೂಟಗಳು ಹೊರಗಡೆಯ ಧಾರ್ಮಿಕಕೇಂದ್ರಗಳಿಂದ ವಿಜಯನಗರಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿ ಅಥವಾ ಸಂಚಾರಿ ಶ್ರೀವೈಷ್ಣವರಿಗೆ ನೈವೇದ್ಯವನ್ನು ಒದಗಿಸುವಂಥಾ ಭೋಜನಾಲಯಗಳಾಗಿದ್ದುದು ಸ್ಪಷ್ಟ. ನಮ್ಮಾಳ್ವಾರ್ ದೇವಾಲಯದ ಹೊರಬಿತ್ತಿಯಲ್ಲಿ ಕೆಲವು ಶ್ರೀವೈಷ್ಣವ ಆಚಾರ್ಯರ ಶಿಲ್ಪಗಳನ್ನು ಬಿಡಿಸಲಾಗಿದೆ.

ರಾಮಾನುಜಕೂಟಗಳಂಥಾ ಭೋಜನಾಲಯಗಳು ವಿಜಯನಗರದ ಇತರ ದೇವಾಲಯಗಳಲ್ಲೂ ಇದ್ದವು. ಅವು ಸಹಾ ಬ್ರಾಹ್ಮಣರಿಗೆ ಅನ್ನ-ಪಾನಾದಿಗಳನ್ನು ಒದಗಿಸುತ್ತಿದ್ದವು. ಉದಾಹರಣೆಗೆ, ಹೊಯ್ಸಳ ಚಕ್ರವರ್ತಿ ವೀರ ಸೋಮೇಶ್ವರನ ೧೨೩೬ರ ಶಾಸನವು (ಅದೇ, ೫೪), ಶ್ರೀವಿರೂಪಾಕ್ಷದೇವರಿಗೆ ಅಂದಂದಿನ ಅಮೃತಪಡಿಗೋಸ್ಕರ ಆ ಕ್ಷೇತ್ರದಲ್ಲಿಯ ೧೦ ಬ್ರಾಹ್ಮಣರಿಗಿಕ್ಕುವ ಸತ್ರಕ್ಕೋಸ್ಕರ ಧಾರಾಪೂರ್ವಕ ಕೊಟ್ಟ ದತ್ತಿಯ ಬಗೆಗೆ ಪ್ರಸ್ತಾಪಿಸುತ್ತದೆ. ವಿಠ್ಠಲ ದೇವಾಲಯ ದಲ್ಲಿರುವಂತೆ ಬಾಲಕೃಷ್ಣನ ದೇವಾಲಯದಲ್ಲಿಯೂ ಮಂಟಪವಿದ್ದು, ಇದು ಪಾಕಶಾಲೆಯಾಗಿರುವಂತಿದೆಯೆಂಬ ಅಬಿಪ್ರಾಯವಿದೆ. ಆದರೆ ದಕ್ಷಿಣಭಾರತದಲ್ಲಿ ಶ್ರೀವೈಷ್ಣವ ದೇವಾಲಯಗಳಲ್ಲಿಯ ಭೋಜನಾಲಯಗಳನ್ನು ರಾಮಾನುಜಕೂಟವೆಂದು ಕರೆದಂತೆಯೇ, ಶೈವ ದೇವಾಲಯಗಳ ಭೋಜನಾಲಯಗಳನ್ನು ಶಿವಕೂಟವೆಂದು ಕರೆಯಲಾಗುತ್ತಿದ್ದಿತ್ತೆನ್ನಲಾಗಿದೆ. ಎಲ್ಲ ಪಾಕಶಾಲೆಗಳು ಭೋಜನಾಲಯಗಳೂ ಆಗಿದ್ದವೆನ್ನುವುದರಲ್ಲಿ ಸಂಶಯವಿಲ್ಲ.