ವಿಜಯನಗರ ವ್ಯಾಪ್ತಿಯ ಇತರೆಡೆಗಳಲ್ಲಿಯೂ ಹಲವಾರು ರಾಮಾನುಜ ಕೂಟಗಳಿದ್ದವು. ವಿಜಯನಗರದ ಅವದಿಯಲ್ಲಿ ತಿರುಮಲೈ, ತಿರುಪತಿ, ಕಂಚಿ, ಶ್ರೀರಂಗಂ, ಅಹೋಬಿಲಂ, ಶ್ರೀಪೆರಂಬದೂರ್ ಮೊದಲಾದ ಪ್ರಮುಖ ಶ್ರೀವೈಷ್ಣವ ಧಾರ್ಮಿಕ ಸ್ಥಾನಗಳಲ್ಲಿ ರಾಮಾನುಜಕೂಟಗಳನ್ನು ನಡೆಸಲಾಗುತ್ತಿತ್ತು. ಇವುಗಳ ಸಂರಕ್ಷಣೆಗಾಗಿ ರಾಜರು, ರಾಣಿಯರು, ಅದಿಕಾರಿಗಳು, ಸಾಮಂತರು, ಶ್ರೀಮಂತರು, ಆಸ್ತಿಕರು ಮೊದಲಾದವರು ನಾನಾ ವಿಧದಲ್ಲಿ ದತ್ತಿ-ದಾನಗಳನ್ನು ನೀಡುವುದರೊಡನೆ ಇತರ ಸೌಲಭ್ಯಗಳನ್ನೂ ಒದಗಿಸುತ್ತಿದ್ದರು. ಈ ಕುರಿತು ಅಸಂಖ್ಯಾತ ಶಾಸನಗಳು ಪ್ರಸ್ತಾಪಿಸುತ್ತವೆ.

ಸಂಗಮ ಅರಸರು ತಮ್ಮ ಆಡಳಿತದಲ್ಲಿ ಧರ್ಮಸಹಿಷ್ಣುತಾ ಧೋರಣೆಯನ್ನು ಅಳವಡಿಸಿಕೊಂಡಿದ್ದರೆಂಬುದನ್ನು ಈಗಾಗಲೇ ಗಮನಿಸಲಾಗಿದೆ. ಇಂಥಾ ಧರ್ಮ ಸಮನ್ವತೆಯ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದವನೆಂದರೆ ಇಮ್ಮಡಿ ಪ್ರೌಢದೇವರಾಯ. ಈತನೂ ತನ್ನ ಹಿಂದಿನ ಅರಸರಂತೆಯೇ ಶ್ರೀವೈಷ್ಣವ ದೇವಾಲಯ ಗಳಿಗೂ ರಾಮಾನುಜಕೂಟಗಳಿಗೂ ಪೋಷಣೆ ಒದಗಿಸಿದ. ತನ್ನ ವಿಜಯಸಾಧನೆ, ದೀರ್ಘಾಯುಷ್ಯ ಹಾಗೂ ನೆಮ್ಮದಿಗಳಿಗೆಂದು ಶ್ರೀರಂಗಂನ ಶ್ರೀರಂಗನಾಥ ದೇವಾಲಯಕ್ಕೆ ಉತ್ತಮನಚೇರಿ ಕಿಳಿಯೂರು ಎಂಬ ಗ್ರಾಮವನ್ನು ದತ್ತಿಯಾಗಿ ಬಿಡುವುದರೊಡನೆ, ಈ ದೇವಾಲಯಕ್ಕೆ ಹೊಂದಿಕೊಂಡ ರಾಮಾನುಜಕೂಟದಲ್ಲಿ ನಿತ್ಯವೂ ೬೦ ಮಂದಿ ಶ್ರೀವೈಷ್ಣವರಿಗೆ ಊಟದ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಆಜ್ಞಾಪಿಸಿದ (ಎಪಿ.ಇಂಡಿಕಾ, xvi, ಪು. ೩೪೫).

ಸಾಳುವ ನರಸಿಂಹನು ವೆಂಕಟೇಶ್ವರನ ಮಹಾಭಕ್ತನಾಗಿದ್ದು, ತಿರುಮಲೈ-ತಿರುಪತಿಗಳ ದೇವಾಲಯಗಳ ಘನತೆಮತ್ತು ಪ್ರತಿಷ್ಠೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ದತ್ತಿ-ದಾನಗಳನ್ನಿತ್ತು ಪ್ರೋತ್ಸಾಹಿಸಿದರು. ತಿರುಮಲೈ ಮತ್ತು ತಿರುಪತಿಗಳಲ್ಲಿ ಈ ಅರಸನು ವೆಂಕಟೇಶ್ವರನ ಉತ್ಸವ, ಆಚರಣೆ, ಹೂದೋಟಗಳ ಸಂರಕ್ಷಣೆ, ರಾಮಾನುಜಕೂಟಗಳ ಸ್ಥಾಪನೆ, ದೇವಾಲಯದ ವಿಸ್ತರಣೆ, ಕೊಳ ಮತ್ತು ಹೊಸ ದೇವಾಲಯಗಳ ನಿರ್ಮಾಣ ಮುಂತಾದ ಸೇವಾಕಾರ್ಯಗಳನ್ನು ಮುಂದುವರೆಸಿದ. ತಿರುಮಲೈ ಮತ್ತು ತಿರುಪತಿಗಳಲ್ಲಿ ಈ ಸಾಳುವ ನರಸಿಂಹನ ಪ್ರಧಾನ ಪ್ರತಿನಿದಿ ಯಾಗಿದ್ದವರು ತೊಂಡೈಮಂಡಲಕ್ಕೆ ಸೇರಿದ ಕಂದಾಡೈ ಅಥವಾ ಕಂದಾಡೆ ರಾಮಾನುಜೈಯ್ಯಂಗಾರ್. ಇವರು ಈ ಅರಸನ ಆಧ್ಯಾತ್ಮಗುರುವೂ ಆಗಿದ್ದವರು. ಇವರ ಗುರು ಅಳಗೀಯ ಮನವಾಳಜೀಯರ್. ಕಂದಾಡೆ ರಾಮಾನುಜೈಯ್ಯಂಗಾರರು ಶ್ರೀರಂಗಂ, ತಿರುಮಲೈ ಮತ್ತು ಕಂಚಿಗಳನ್ನೊಳಗೊಂಡಂತೆ, ಉತ್ತರದ ಬದರಿಕಾಶ್ರಮ ದಿಂದ ದಕ್ಷಿಣದ ಧನುಷ್ಕೋಟಿಯವರೆಗಿನ ೧೦೬ (೧೦೮?) ದಿವ್ಯದೇಶಗಳಲ್ಲಿರುವ ದೇವಾಲಯಗಳನ್ನು ಸಂದರ್ಶಿಸಿದಂಥವರು. ಈ ಆಚಾರ್ಯರು ತಿರುಪತಿಯನ್ನು ಯಾವ ವರ್ಷದಲ್ಲಿ ಸಂದರ್ಶಿಸಿದರೆಂಬುದು ತಿಳಿದುಬಂದಿಲ್ಲವಾದರೂ ೧೪೬೭ರಲ್ಲಿ ಸಾಳುವ ನರಸಿಂಹನಿಂದ ತಿರುಪತಿಯಲ್ಲಿಯ ರಾಮಾನುಜಕೂಟಗಳ ಕರ್ತರಾಗಿ (Manager) ನೇಮಿಸಲ್ಪಡುವ ಮುನ್ನವೇ ಅಲ್ಲಿಗೆ ಭೇಟಿಕೊಟ್ಟಿದ್ದಿರಬಹುದೆನ್ನಲಾಗುತ್ತದೆ.

೧೪೬೭ ಡಿಸೆಂಬರ್ ೨೭ ಭಾನುವಾರದಂದು ಹಾಕಿಸಲಾದ ಸಾಳುವ ನರಸಿಂಹನ (ಸಾಳುವ ಮಹಾಮಂಡಲೇಶ್ವರ ನರಸಿಂಗಯ್ಯದೇವ ಮಹಾಅರಸು) ಶಾಸನವನ್ನು (ಕಇಆಂ. ೨೬೯) ತಿರುಪತಿಯ ಗೋವಿಂದ ಪೆರುಮಾಳ್ ದೇವಾಲಯದ ಉತ್ತರದಿಕ್ಕಿನ ಬಿತ್ತಿಯ ಮೇಲೆ ಕಂಡರಿಸಲಾಗಿದ್ದು, ಇದರಲ್ಲಿ ರಾಮಾನುಜಕೂಟ ಸ್ಥಾಪನೆಯ ಪ್ರಸ್ತಾಪ ಬಂದಿದೆ. ತಿರುಮಲೆಬೆಟ್ಟದ ತಿರುವೇಂಗಳನಾಥ ದೇವಾಲಯದಲ್ಲಿರು ವಂತೆಯೇ ತಿರುಪತಿಯಲ್ಲಿಯೂ ಪೂಜಾಕಾರ್ಯ ಮತ್ತು ಪ್ರಸಾದ ವಿತರಣೆಗಳು ನಡೆಯಬೇಕೆಂದು ನರಸಿಂಹನು ತನ್ನ ಶಾಸನದಲ್ಲಿ ಆದೇಶಿಸುತ್ತಾನೆ. ತಿರುಪತಿಯಲ್ಲಿ ಈತನೇ ಸ್ವತಃ ನೂತನವಾಗಿ ರಾಮಾನುಜಕೂಟವನ್ನು ಸ್ಥಾಪಿಸಿದ್ದು, ಗೋವಿಂದರಾಜನ ಸನ್ನಿದಿಯಲ್ಲಿ ಕಂಡಾಲ ರಾಮಾನುಜಯ್ಯ (ಕಂದಾಡೆ ರಾಮಾನುಜೈಯ್ಯಗಾರ್?) ಮತ್ತು ಅವರ ಶಿಷ್ಯರು ಹೊರಗಿನಿಂದ ಬರುವ ಮತ್ತು ಸ್ಥಳೀಯ ಶ್ರೀವೈಷ್ಣವರಿಗೆ ಊಟೋಪಚಾರದ (ಪ್ರಸಾದ ವಿತರಣೆಯ) ಮೇಲ್ವಿಚಾರಣೆಯನ್ನು ಕೈಗೊಳ್ಳುವಂತೆ ವ್ಯವಸ್ಥೆಗೊಳಿಸುತ್ತಾನೆ. ಅಲ್ಲದೆ, ಈ ಶಾಸನದಲ್ಲೆ ನಿರೂಪಿತಗೊಂಡಂತೆ, ನರಸಿಂಹನು ತಿರುಪತಿಬೆಟ್ಟದ ಮೇಲೆ ಇನ್ನೊಂದು ರಾಮಾನುಜಕೂಟವನ್ನು ಸ್ಥಾಪಿಸುವುದರೊಡನೆ ತಿರುವೇಂಕಟನಾಥದೇವರಿಗೆ ಪೂಜೆ-ನೈವೇದ್ಯಗಳ ಪ್ರಮಾಣವನ್ನು ನಿರ್ಧರಿಸುತ್ತಾನೆ; ಹಾಗೂ ಕಂಡಾಲ ರಾಮಾನುಜಯ್ಯ ಮತ್ತು ಅವರ ಶಿಷ್ಯರೇ ಇದರ ಮೇಲ್ವಿಚಾರಣೆ ಮಾಡುವಂತೆಯೂ ಆದೇಶಿಸುತ್ತಾನೆ.

ಶ್ರೀರಂಗಂ ಮತ್ತು ಕಂಚಿಗಳಲ್ಲಿ ರಾಮಾನುಜಕೂಟಗಳನ್ನು ಸ್ಥಾಪಿಸಿದವರು ಈ ರಾಮಾನುಜೈಯ್ಯಂಗಾರರೇ ಎಂದು ತಿರುಮಲೈ-ತಿರುಪತಿ ದೇವಾಲಯದ ಶಾಸನಗಳು ಸೂಚಿಸುತ್ತವೆ (ಶಾಸನಗಳ ಸಂಖ್ಯೆ ೧೩, ೧೫, ೩೧, ೪೦ ಮತ್ತು ೪೪). ಇವರ ಅವದಿಯಲ್ಲಿ ಶಾಟ್ಟಾದ ಶ್ರೀವೈಷ್ಣವ ಪಂಗಡದವರು ತಿರುಪತಿ ದೇವಾಲಯದ ಪೂಜಾದಿ ಕಾರ್ಯಕ್ರಮಗಳಲ್ಲಿ ವಿದಿವತ್ತಾಗಿ ಭಾಗವಹಿಸುತ್ತಿದ್ದರೆಂದು ವ್ಯಕ್ತಪಡುತ್ತದೆ. ರಾಮಾನುಜೈಯ್ಯಂಗಾರರ ಶಿಷ್ಯರೆನಿಸಿದ್ದ ಈ ಶಾಟ್ಟಾದ ಏಕಾಕಿ ಶ್ರೀವೈಷ್ಣವರು ತಿರುಮಲೈನಲ್ಲಿ ಸ್ಥಾಪನೆಗೊಂಡ ರಾಮಾನುಜಕೂಟಮ್‌ಗೆ ಶ್ರೀಗಂಧ, ಕಸ್ತೂರಿ, ಕರ್ಪೂರ, ತಾಂಬೂಲಾದಿ ವಸ್ತುಗಳನ್ನು ಸರಬರಾಜು ಮಾಡುವ ಹಕ್ಕನ್ನು ಹೊಂದಿದ್ದರು. ಕಂದಾಡೆ ರಾಮಾನುಜೈಯ್ಯಂಗಾರರ ತರುವಾಯ ತಿರುಮಲೈ ಮತ್ತು ತಿರುಪತಿಗಳಲ್ಲಿಯ ರಾಮಾನುಜಕೂಟಗಳ ಕರ್ತರಾಗಿ ನೇಮಕಗೊಂಡವರೇ ಕಂದಾಡೆ ಮಾಧವಯ್ಯಂಗಾರ್. ಇವರು ತಿರುಮಲೈನ ವೆಂಕಟೇಶ್ವರ ದೇವಾಲಯದ ಬಂಗಾರದ ಖಜಾನೆಯ ಮೇಲ್ವಿಚಾರಕರಾಗಿಯೂ ಕಾರ್ಯನಿರ್ವಹಿಸಿದರು. ಇವರ ನಂತರ ತಿರುಮಲೈ-ತಿರುಪತಿಗಳ ರಾಮಾನುಜಕೂಟಗಳ ಮತ್ತು ತಿರುಮಲೈನ ಬಂಗಾರದ ಖಜಾನೆಯ ಮೇಲ್ವಿಚಾರಕರಾದವರು ಕಂದಾಡೆ ಕುಮಾರ ರಾಮಾನು ಜೈಯ್ಯಂಗಾರ್.

ಸಾಳುವರ ನಂತರ ವಿಜಯನಗರ ಅದಿಪತಿಗಳೆನಿಸಿದ ತುಳುವವಂಶದವರು ಈ ತಿರುಮಲೈ-ತಿರುಪತಿ ದೇವಾಲಯಗಳ ಬಗೆಗೆ ಅಪಾರ ಅಬಿಮಾನವಿರಿಸಿ ಕೊಂಡಿದ್ದರಲ್ಲದೆ, ಕೃಷ್ಣದೇವರಾಯ ಮತ್ತು ಅಚ್ಯುತದೇವರಾಯರ ಆಡಳಿತಾವದಿಯಲ್ಲಿ ಈ ಅಬಿಮಾನ ಪರಾಕಾಷ್ಠೆ ತಲುಪಿತು. ಅದರಲ್ಲೂ ಕೃಷ್ಣದೇವರಾಯನು ವ್ಯಕ್ತಪಡಿಸಿದ ಭಕ್ತ್ಯಾತಿಶಯಗಳು ವಿಶೇಷವಾದವು. ಈತನು ತನ್ನ ಆಳ್ವಿಕೆಯ ಅವದಿಯಲ್ಲಿ ಸುಮಾರು ೭ ಸಾರಿ ತಿರುಮಲೆಯಾತ್ರೆಯನ್ನು ಕೈಗೊಂಡಿದ್ದ. ಹೀಗೆ ಭೇಟಿನೀಡಿದಾಗಲೂ ಇತರ ಸಂದರ್ಭಗಳಲ್ಲೂ ಈತ ವೆಂಕಟೇಶ್ವರ ದೇವರಿಗೆ ಅರ್ಪಿಸಿದ ದತಿ್ತ-ದಾನ ಗಳಿಗೆ ಲೆಕ್ಕವಿಲ್ಲ. ದೇವಾಲಯದ ಅಬಿವೃದ್ಧಿಯಮಟ್ಟಿಗೆ ರಾಯನು ಕೈಗೊಂಡ ದುರಸ್ತಿಕಾರ್ಯ ಹಾಗೂ ಹೊಸ ನಿರ್ಮಾಣಕಾರ್ಯಗಳೂ ಸಾಕಷ್ಟಿವೆ. ಈತ ಇಲ್ಲಿ ಹಾಕಿಸಿರುವ ವೈಯಕ್ತಿಕ ಶಾಸನಗಳ ಸಂಖ್ಯೆ ಸುಮಾರು ೩೦. ಈತನ ರಾಣಿಯರಾದ ತಿರುಮಲದೇವಿ ಮತ್ತು ಚಿನ್ನಾದೇವಿಯರ ಹೆಸರಿನಲ್ಲಿಯೂ ತಲಾ ೧೩ ಶಾಸನಗಳಿವೆ. ಕೃಷ್ಣದೇವರಾಯನ ಶಾಸನಗಳಲ್ಲಿ ಬ್ರಾಹ್ಮಣರಿಗೆ, ಅಂದರೆ ಇಲ್ಲಿ ಶ್ರೀವೈಷ್ಣವರಿಗೆ ಮೀಸಲಾದ ದೇವಾಲಯದ ಭೋಜನಾಲಯಕ್ಕೆ ಅಪಾರ ದೇಣಿಗೆಯನ್ನು ಬಿಟ್ಟುಕೊಟ್ಟ ವಿಚಾರ ಮೇಲಿಂದ ಮೇಲೆ ಪ್ರಸ್ತಾಪಗೊಳ್ಳುತ್ತದೆ. ಈ ದೇವಾಲಯದ ಭೋಜನಾಲ ಯವು ರಾಮಾನುಜಕೂಟವಲ್ಲದೆ ಬೇರೆಯಲ್ಲವೆಂಬುದಕ್ಕೆ ಶಾಸನಗಳಲ್ಲಿಯೇ ಸೂಚನೆ ಗಳಿವೆ.

ಕೃಷ್ಣದೇವರಾಯನಿಗೆ ಒಳಿತಾಗಲೆಂದು ಹಾರೈಸಿ ತಿರುಪತಿಯ ದೇವಾಲಯಗಳಿಗೆ ಈತನ ಸಾಮಂತರು, ಅದಿಕಾರಿಗಳು, ಭಕ್ತರು ಮೊದಲಾದವರು ಬಿಟ್ಟ ದತ್ತಿಗಳ ವಿವರಗಳುಳ್ಳ ಶಾಸನಗಳಲ್ಲಿ ರಾಮಾನುಜಕೂಟಗಳ ನೇರ ಪ್ರಸ್ತಾಪ ಕಂಡುಬರುತ್ತದೆ. ಉದಾಹರಣೆಗೆ, ತಿರುಪತಿಯ ಗೋವಿಂದರಾಜಸ್ವಾಮಿ ದೇವಾಲಯದ ಮೊದಲನೇ ಪ್ರಾಕಾರದಲ್ಲಿರುವ ಕೈಕ್ಕಾಲರೆಡ್ಡಿ ಕೊಠಡಿಯ ಉತ್ತರದಿಕ್ಕಿನ ಗೋಡೆಯ ಒಳಬದಿಯಲ್ಲಿರುವ ಶಾಸನವು (ಐಕೆಟಿ. , ೧೯೯), ಶ್ರೀವೈಷ್ಣವರ ಭೋಜನಕ್ಕಾಗಿ ಇಲ್ಲಿಯ ರಾಮಾನುಜಕೂಟಕ್ಕೆ ವ್ಯವಸ್ಥೆ ಮಾಡಿದುದನ್ನು ತಿಳಿಸುತ್ತದೆ. ಅಪ್ಪನ್ ಎಂಬವನ ಹೆಸರಿನಲ್ಲಿ ಹಾಕಿಸಲಾಗಿರುವ ಈ ಶಾಸನವು, ದಾನಿಯ ೮೦೦ ಪಣಂಗಳ ಮೊತ್ತವನ್ನು ದೇವಾಲಯಕ್ಕೆ ಸಂಬಂದಿಸಿದ ಗ್ರಾಮಗಳ ಕೆರೆ ಮತ್ತು ಕಾಲುವೆಗಳಲ್ಲಿ ಶೇಖರಗೊಂಡ ಹೂಳನ್ನೆತ್ತಿಸಲು ಬಳಸಿಕೊಳ್ಳಬೇಕೆಂದೂ ಇಲ್ಲಿಯ ಹುಟ್ಟುವಳಿಯನ್ನು ರಾಮಾನುಜಕೂಟದ ವ್ಯವಸ್ಥಾಪಕರಿಗೆ ಸಲ್ಲಿಸಬೇಕೆಂದೂ ಇದು ನಿರಂತರವಾಗಿ ಮುಂದುವರೆಯುತ್ತಿರಬೇಕೆಂದೂ ನಿರೂಪಿಸುತ್ತದೆ.

ಅದೇ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಮೇಲೆ ಸೂಚಿಸಿರುವ ಸ್ಥಳದಲ್ಲಿಯೇ (ಆದರೆ ಅದೇ ಗೋಡೆಯ ಹೊರಪಾರ್ಶ್ವದಲ್ಲಿ) ಹಾಕಿಸಲಾಗಿರುವ ೧೫೧೬ರ ಇನ್ನೊಂದು ಶಾಸನವು (ಅದೇ, ೧೦೯), ಕೃಷ್ಣದೇವರಾಯನಿಗೆ ಒಳಿತನ್ನು ಹಾರೈಸಿ ಊಡಿಯಂ ಎಲ್ಲಪ್ಪನಾಯಕ್ಕರ್ ಎಂಬಾತನ ಹೆಸರಿನಲ್ಲಿ ಹಾಕಿಸಿರುವಂಥಾದ್ದು. ದಾನಿಯು ತನ್ನ ಈ ಶಾಸನದಲ್ಲಿ, ವೆಂಕಟೇಶ್ವರದೇವರಿಗೆ ಈಗ ದಾನಪೂರ್ವಕ ಅರ್ಪಿಸುತ್ತಿರುವ ೩ ಗ್ರಾಮಗಳ ಉತ್ಪತ್ತಿಯನ್ನು ದೇವರ ನಿತ್ಯಪೂಜೆ-ಪ್ರಸಾದಗಳಿಗೆ ಬಳಸಿಕೊಳ್ಳಬೇಕೆಂದೂ (ಪ್ರಸಾದವು ಒಳಗೊಳ್ಳಬೇಕಾದ ಪದಾರ್ಥಗಳ ವಿವರವಿದೆ) ನೈವೇದ್ಯದ ನಂತರ ದಾನಿಗಳ ಪಾಲಿನ ಪೂರ್ಣ ಪ್ರಸಾದವನ್ನು ದೇವಾಲಯದ ರಾಮಾನುಜಕೂಟಕ್ಕಷ್ಟೆ ನೀಡಬೇಕೆಂದೂ ಉಳಿದ ಪ್ರಸಾದವನ್ನು ತಮ್ಮ ಇಚ್ಛಾನುಸಾರ ವಿತರಿಸಲು ನೀಡಬೇಕೆಂದೂ ಸೂಚಿಸಿರುತ್ತಾನೆ. ಈ ಶಾಸನದ ವೈಶಿಷ್ಟ್ಯವೆಂದರೆ, ಶ್ರೀವೈಷ್ಣವರ ಒಳಿತಿಗಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆಯೆಂಬುದನ್ನು ಸ್ಪಷ್ಟಪಡಿಸಿ ರುವುದು.

೧೫೨೧ರ ಶಾಸನವು (ಅದೇ, ೧೪೭) ಕಂಡುಬಂದಿರುವುದು ತಿರುಮಲೈ ದೇವಾಲಯದ ಮೊದಲನೇ ಪ್ರಾಕಾರದಲ್ಲಿರುವ ಶ್ರೀವರದರಾಜಸ್ವಾಮಿಗುಡಿಯ ಪೂರ್ವದಿಕ್ಕಿನ ಗೋಡೆಯ ಹೊರಪಾರ್ಶ್ವದಲ್ಲಿ. ಇದೊಂದು ಬಹುಮುಖ್ಯವಾದ ಶಾಸನ. ಇದನ್ನು ಹಾಕಿಸಿದವರು ಯುದ್ಧಪೂರ್ವದಲ್ಲಿ ಕಳಿಂಗ(ಒರಿಸಾ್ಸ)ದ ಅದಿಪತಿ ಪ್ರತಾಪರುದ್ರ ಗಜಪತಿರಾಯನಲ್ಲಿ ಸೇವೆಸಲ್ಲಿಸುತ್ತಿದ್ದ ಸುಬುದ್ಧಿ ರಾಮದಾಸರ್ ಮತ್ತು ಅಂಬಿಕಾಮುದುಶಿಲಾ ಎಂಬೀರ್ವರು ಅದಿಕಾರಿಗಳು. ಸುಬುದ್ಧಿಯು ಗಜಪತಿ ರಾಯನ ಸೇನಾಪತಿಯಾಗಿದ್ದರೆ, ಅಂಥದೇ ಸಮಾನ ಅದಿಕಾರ ಹೊಂದಿದ್ದವನು ಅಂಬಿಕಾಮುದುಶಿಲಾ. ಆ ನಂತರ  ಕೃಷ್ಣದೇವರಾಯನು ಇವರೀರ್ವರನ್ನೂ ತನ್ನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಅಲ್ಲದೆ, ಇವರೀರ್ವರಿಗೂ ಕ್ರಮವಾಗಿ ತಂಡಲಮ್ ಮತ್ತು ತಡಪಾಡಿ ಎಂಬ ಗ್ರಾಮಗಳನ್ನು ಜಹಗೀರಾಗಿ ಬಿಟ್ಟುಕೊಡುತ್ತಾನೆ. ಸ್ವಲ್ಪ ಸಮಯದ ನಂತರ, ಇವರೀರ್ವರೂ ತಮ್ಮ ತಮ್ಮ ಗ್ರಾಮಗಳನ್ನು ವೆಂಕಟೇಶ್ವರನಿಗೆ ದಾನವಾಗಿ ನೀಡಬಯಸಿ, ಶಾಸನದಲ್ಲಿ ಕೆಲವು ನಿಬಂಧನೆಗಳನ್ನು ವಿದಿಸುತ್ತಾರೆ. ಅದರಂತೆ, ಈ ಎರಡು ಗ್ರಾಮಗಳ ಹುಟ್ಟುವಳಿಯಿಂದ ಸಂಗ್ರಹಗೊಳ್ಳುವ ಹಣದಲ್ಲಿ ವೆಂಕಟೇಶ್ವರನ ನಿತ್ಯಪೂಜೆ-ಪ್ರಸಾದಗಳಿಗೆ ವ್ಯವಸ್ಥೆಮಾಡುವುದು; ನಿತ್ಯವೂ ೩ ಭಾಗದಷ್ಟು ತಿರುಪ್ಪೋಣಕಮ್ (ಪವಿತ್ರ ಅಡಿಗೆ)ಅನ್ನು ದೇವರಿಗೆ ನೈವೇದ್ಯಮಾಡುವುದು; ಇದರಲ್ಲಿ ೩ ನಾಳಿಗಳಷ್ಟು ಪ್ರಸಾದವನ್ನು ತಿರುಮಲೈನಲ್ಲಿನ ತಮ್ಮ ಹೂದೋಟಗಳನ್ನು ಪೋಷಿಸುತ್ತಿರುವ ರಾಮಾನುಜಕೂಟದ ವ್ಯವಸ್ಥಾಪಕರಿಗೆ ಸಲ್ಲಿಸುವುದು; ಹಾಗೂ ಉಳಿದ ಪ್ರಸಾದವನ್ನು ತಮ್ಮ ವಶಕ್ಕೆ ನೀಡುವುದು ಇತ್ಯಾದಿ.

ಆ ನಂತರದಲ್ಲಿ ಅರವೀಡುವಂಶದವರೂ ಇಂಥದೇ ಸೇವಾಕಾರ್ಯವನ್ನು ಮುಂದುವರೆಸಿದರು. ಹಾಗೆ ನೋಡಿದರೆ, ಶ್ರೀವೈಷ್ಣವಪಂಥಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಡನೆ, ಆಳ್ವಾರ್-ಆಚಾರ್ಯ ಪರಂಪರೆಯನ್ನು ಬೆಳೆಸಿದವರೆಂದರೆ ಅರವೀಡುವಂಶದ ಅರಸರು ಮತ್ತು ಸಾಮಂತರು. ತುಳುವ ಸದಾಶಿವರಾಯನು ಶ್ರೀವೈಷ್ಣವ ದೇವಾಲಯಗಳಿಗೆ ದತ್ತಿ-ದಾನಗಳನ್ನು ನೀಡುವುದರೊಡನೆ ತನ್ನ ನಿಷ್ಠೆಯನ್ನು ವ್ಯಕ್ತಪಡಿಸಿದ. ಬ್ರಿಟಿಷ್ ಮ್ಯೂಸಿಯಂ ತಾಮ್ರಪತ್ರಗಳು (ಎಪಿ.ಇಂಡಿಕಾ, iv,              ಪು. ೧೫) ವರ್ಣಿಸುವಂತೆ, ಸದಾಶಿವರಾಯನು ‘ಹರಿಭಕ್ತಿ ಸುಧಾನಿದಿ’ಯೆನಿಸಿ ಕೊಂಡಿದ್ದ.

ಅಳಿಯ ರಾಮರಾಜ ಹಾಗೂ ಈತನ ಸಹೋದರ ವೆಂಕಟಾದ್ರಿಯರ ಶಾಸನಗಳು ಸೂಚಿಸುವಂತೆ, ಈ ಈರ್ವರೂ ಆಳ್ವಾರರ ಆರಾಧನೆ ಬಗೆಗೆ ವಿಶೇಷ ಕಾಳಜಿ ವಹಿಸಿದರು. ಅಳಿಯ ರಾಮರಾಜನು ಅರವೀಡು ಆಳ್ವಿಕೆಗಾರರಲ್ಲಿ ಅಗ್ರಗಣ್ಯ ಶ್ರೀವೈಷ್ಣವನಾಗಿದ್ದನೆಂದು ಶಾಸನಗಳು ಹೇಳುತ್ತವೆ. ೧೫೪೫ರ ಈತನ ಶಾಸನವೊಂದು (ಟಿಟಿಡಿಐ.v, ೧೫೫), ಸದಾಶಿವರಾಯನಿಗೆ ಒಳಿತಾಗಲೆಂದು ಹಾರೈಸಿ, ತಿರುಮಲೈ- ತಿರುಪತಿಗಳ ವೆಂಕಟೇಶ್ವರ ಮತ್ತು ಗೋವಿಂದರಾಜ ದೇವಾಲಯಗಳಿಗೆ ನಿತ್ಯನೈವೇದ್ಯ ಇನ್ನಿತರ ಸೇವೆಗಳಿಗಾಗಿ; ಹಾಗೂ ‘ಮುಕ್ಕೋಟಿ ದೇವದಾಸಿ ಉತ್ಸವ’ವನ್ನು ಏರ್ಪಡಿಸುವ ಉದ್ದೇಶಕ್ಕಾಗಿ ‘ಪುದುಪಟ್ಟು’ ನೀಡಿದುದನ್ನು ದಾಖಲಿಸಿದೆ. ವೆಂಕಟೇಶ್ವರನಿಗೆ ನಿತ್ಯವೂ ಅರ್ಪಿಸುವ ‘ಮುದಲ್‌ಪ್ರಸಾದಂ’ ತನ್ನ ಹೆಸರಿನಲ್ಲಿಯೇ ನಡೆಯಬೇಕೆಂದು ಆ ದೇವರಿಗೆ ನಾಲ್ಕು ಗ್ರಾಮಗಳನ್ನು ದತ್ತಿಯಾಗಿ ನೀಡುತ್ತಾನೆ. ಈ ಮೊದಲ ಪ್ರಸಾದದಲ್ಲಿ ಕಾಲುಭಾಗದಷ್ಟು ನಿತ್ಯವೂ ತನ್ನ ಹೆಸರಿನಲ್ಲಿ ತಿರುಪತಿಯಲ್ಲಿ ಸ್ಥಾಪಿಸಲಾದ ನಮ್ಮಾಳ್ವಾರ್ ರಾಮಾನುಜಕೂಟಕ್ಕೆ ನೀಡಲು ವ್ಯವಸ್ಥೆ ಮಾಡುತ್ತಾನೆ. ಅಂದರೆ, ನಿತ್ಯವೂ ಸಿದ್ಧಪಡಿಸಲಾಗುತ್ತಿದ್ದ ೨೦೦ ತಳಿಗೆ(ಹರಿವಾಣ)ಗಳ ಪ್ರಸಾದದಲ್ಲಿ ೫೦ ತಳಿಗೆಗಳಷ್ಟು ಪ್ರಸಾದವು ನಮ್ಮಾಳ್ವಾರ್ ದೇವಾಲಯದ ರಾಮಾನುಜಕೂಟದಲ್ಲಿ ಭೋಜನಮಾಡುವ ಶ್ರೀವೈಷ್ಣವರಿಗೆ ಸರಬರಾಜಾಗುವಂತೆ ಕ್ರಮಕೈಗೊಳ್ಳಲಾಗುತ್ತದೆ.

ಕೋನೇಟಿರಾಜನ ಈರ್ವರು ಪುತ್ರರಾದ ಔಬಳರಾಜು ಮತ್ತು ಶ್ರೀರಂಗಯ್ಯರು ಸಹಾ ಆಳ್ವಾರರ ದೇವಾಲಯಗಳಿಗೆ ಹಾಗೂ ರಾಮಾನುಜಕೂಟಗಳಿಗೆ ಉದಾರವಾಗಿ ದತ್ತಿ-ದಾನಗಳನ್ನು ಬಿಟ್ಟುಕೊಟ್ಟರು. ಈ ಸಹೋದರರು ಅಂದಿನ ಅತ್ಯಂತ ಪ್ರಭಾವಶಾಲಿ ಶ್ರೀವೈಷ್ಣವ ಆಚಾರ್ಯರ ಶಿಷ್ಯರಾಗಿದ್ದವರು. ಔಬಳರಾಜನು ತಿರುಮಲ ಆವುಕು ತಾತಾಚಾರ್ಯರ ಶಿಷ್ಯನಾಗಿದ್ದರೆ, ಕೊಂಡರಾಜ ಮತ್ತು ತಿಮ್ಮರಾಜರು ಕಂಡಾಲ ಶ್ರೀರಂಗಾಚಾರ್ಯರ ಶಿಷ್ಯರೆನಿಸಿದ್ದರು. ಇತಿಹಾಸ ತಿಳಿಸುವಂತೆ, ಕೋನೇಟಿರಾಜನ ತಂದೆ ಪೆದಕೊಂಡರಾಜನು ಅಳಿಯ ರಾಮರಾಜನಿಗೆ ಪೈತೃಕ ಚಿಕ್ಕಪ್ಪ(Paternal Uncle)ನಾಗಿದ್ದವನು. ಕೋನೇಟಿರಾಜನ ನಾಲ್ವರು ಪುತ್ರರೆಂದರೆ ಔಬಳರಾಜ, ಕೊಂಡರಾಜ, ತಿಮ್ಮರಾಜ ಮತ್ತು ರಂಗರಾಜ. ಇವರಲ್ಲಿ ಎರಡನೆಯವನಾದ ಅರವೀಟಿ/ಅರವೀಡು ಕೊಂಡರಾಜನು ತಿರುಪತಿಯ ನಮ್ಮಾಳ್ವಾರ್ ದೇವಾಲಯದಲ್ಲಿ ರಾಮಾನುಜಕೂಟವನ್ನು ನಿರ್ಮಿಸಿದನಲ್ಲದೆ, ಇದಕ್ಕೆ ೧೦ ಗ್ರಾಮಗಳನ್ನು ಬಿಟ್ಟುಕೊಟ್ಟ. ಈ ರಾಮಾನುಜಕೂಟಕ್ಕೆಂದು ಸದಾಶಿವರಾಯನಿಂದ ವಿಜಯನಗರದ ೧೬ ಪ್ರಾಂತ್ಯಗಳ ೧೨ ಬಗೆಯ ತೆರಿಗೆಗಳನ್ನು ಸಹಾ ಪಡೆದುಕೊಳ್ಳುತ್ತಾನೆ. ಸದಾಶಿವರಾಯನು ಹೊರಡಿಸಿದ ಶಾಸನಗಳಲ್ಲಿ ೧೫೫೨ರ ಶಾಸನವು (ಅದೇ, ೧೩೩) ಇಂಥಾ ತೆರಿಗೆಗಳ ಬಗೆಗೆ ಪ್ರಸ್ತಾಪಿಸಿದರೆ, ೧೫೫೪ರ ಶಾಸನವು (ಅದೇ, ೧೫೪) ಇಂಥಾ ತೆರಿಗೆಗಳ ಪಟ್ಟಿಯನ್ನೊದಗಿಸುತ್ತದೆ. ಇದರಿಂದ ಕೊಂಡರಾಜನು ತಾನು ಸ್ಥಾಪಿಸಿದ ರಾಮಾನುಜ ಕೂಟವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು.

ಗಮನಾರ್ಹ ಅಂಶವೆಂದರೆ, ಮೇಲೆ ಪ್ರಸ್ತಾಪಿಸಿದ ಬ್ರಿಟಿಷ್ ಮ್ಯೂಸಿಯಂ ತಾಮ್ರಪತ್ರಗಳು ವಿವರಿಸುವಂತೆ, ಇದೇ ಕೊಂಡರಾಜನು ಸದಾಶಿವರಾಯನಿಂದ ಶ್ರೀಪೆರಂಬದೂರಿನಲ್ಲಿ ತಾನು ನಿರ್ಮಿಸಿದ ರಾಮಾನುಜ ದೇವಾಲಯಕ್ಕೆ ೩೧ ಗ್ರಾಮಗಳ ದತ್ತಿಯನ್ನು ಪಡೆದುಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾನೆ. ಶ್ರೀವೈಷ್ಣವರು ದಿನನಿತ್ಯದಲ್ಲಿ ಹಾಗೂ ಪವಿತ್ರದಿನಗಳಲ್ಲಿ ವಿಷ್ಣುವಿಗೆ ಪೂಜೆಸಲ್ಲಿಸಲು, ಪೂಜಾಸಾಮಗ್ರಿ ಇತ್ಯಾದಿಗಳನ್ನು ಒದಗಿಸಿಕೊಳ್ಳಲು, ನೃತ್ಯ-ಸಂಗೀತ-ಮೆರವಣಿಗೆ ಇತ್ಯಾದಿಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಈ ದತ್ತಿಯನ್ನು ಬಳಸಿಕೊಳ್ಳಲು ಆದೇಶಿಸಲಾಗುತ್ತದೆ. ಈ ದೇವಾಲಯದ ವಿಶಾಲ ಮಂದಿರದಲ್ಲಿ ಶ್ರೀವೈಷ್ಣವ ಕುಟುಂಬಗಳಿಗೆ ಉಚಿತ ಪ್ರಸಾದ/ಊಟವನ್ನು ವಿತರಿಸುವ ಏರ್ಪಾಟು ಮಾಡಲಾಗುತ್ತದೆ. ಇದು ಸಹಾ ರಾಮಾನುಜಕೂಟದಂತೆಯೇ ಕಾರ್ಯನಿರ್ವಹಿಸುತ್ತಿದ್ದಿರ ಬಹುದು.

ಅರವೀಟಿ ಕೊಂಡರಾಜನು ಸ್ಥಾಪಿಸಿದ ರಾಮಾನುಜಕೂಟದ ಪರಿಸ್ಥಿತಿಯ ಬಗೆಗೆ ಒಂದು ದೃಷ್ಟಿ ಹಾಯಿಸಬಹುದು. ಈ ರಾಮಾನುಜಕೂಟಕ್ಕೆ ಸರಬರಾಜಾಗುತ್ತಿದ್ದ ಪ್ರಸಾದವು ಶುದ್ಧವೂ ಪವಿತ್ರವೂ ಆಗಿರುತ್ತಿದ್ದಿತೆಂಬುದಕ್ಕೆ ತಿರುಪತಿಯ ದೇವಾಲಯದಲ್ಲಿ ‘ಅಲಂಕಾರಮ್’ ಅಥವಾ ‘ಶುದ್ಧಾನ್ನ ತಿರುಪ್ಪೋಣಕಮ್’ ಎಂಬ ಹೆಸರಿನಲ್ಲಿ ಸಿದ್ಧಗೊಂಡು ದೇವರಿಗೆ ನೈವೇದ್ಯಗೊಳ್ಳುತ್ತಿದ್ದ ಅಡಿಗೆಯೇ ಸಾಕ್ಷಿ. ೧೦ನೇ ಶತಮಾನದಲ್ಲೆ ಆಚರಣೆಯಲ್ಲಿದ್ದ ಈ ಪದ್ಧತಿಯನ್ನು ೧೬ನೇ ಶತಮಾನದಲ್ಲಿಯೂ ಇಲ್ಲಿ ಮತ್ತೆ ಅನುಸರಿಸಲಾಯಿತೆಂಬುದು ಗಮನಾರ್ಹ. ವಿಶೇಷವೆಂದರೆ, ಇಂಥಾ ಪವಿತ್ರ ಅಡಿಗೆಯನ್ನು ಶ್ರೀವೈಷ್ಣವ ಭಕ್ತರಿಗೆ ವಿನಿಯೋಗಿಸಲು ರಾಮಾನುಜಕೂಟಕ್ಕೆ ಕಳುಹಿಸಿ ಕೊಡಲಾಗುತ್ತಿತ್ತು. ಈ ಬಗೆಯ ವಿಶಿಷ್ಟ ಅಡಿಗೆಯನ್ನು ತಯಾರಿಸಲೆಂದೇ ಎಟ್ಟೂರು ಸೊಟ್ಟೈ ತಿರುಮಲೈ ನಂಬಿ ಶ್ರೀನಿವಾಸೈಯಂಗಾರ್ ಮತ್ತು ಶಿವರಾಮ ರಾಮಚಂದ್ರ ಯಡಮಟರಾವ ಎಂಬವರು ದತ್ತಿಗಳನ್ನು ಬಿಟ್ಟುಕೊಡುತ್ತಾರೆ. ಕೊಂಡರಾಜನು ತನ್ನ ನಮ್ಮಾಳ್ವಾರ್ ದೇವಾಲಯದಲ್ಲೂ ಇಂಥದೇ ಪವಿತ್ರ ಪ್ರಸಾದವನ್ನು ಒದಗಿಸಲು ವ್ಯವಸ್ಥೆ ಮಾಡುತ್ತಾನೆ.

ನಮ್ಮಾಳ್ವಾರ್ ದೇವಾಲಯದ ರಾಮಾನುಜಕೂಟದಲ್ಲಿ ಶ್ರೀವೈಷ್ಣವ ಯಾತ್ರಾರ್ಥಿ ಗಳಿಗೆ ಒದಗಿಸಲಾಗುತ್ತಿದ್ದ ಪ್ರಸಾದದಲ್ಲಿ, ಅಂದರೆ ಪಾಕಶಾಲೆಯಲ್ಲಿ ಸಿದ್ಧಗೊಳಿಸಿದ ಅಡಿಗೆಯಲ್ಲಿ, ಯಾವೊಂದು ಬಗೆಯ ಪದಾರ್ಥವೂ ತಪ್ಪಿಹೋಗದಂತೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದಿತು. ಇಲ್ಲಿ ಸಿದ್ಧಪಡಿಸಿದ ಆಹಾರವನ್ನು ಮೊದಲಿಗೆ ನಮ್ಮಾಳ್ವಾರ್‌ರಿಗೆ ನೈವೇದ್ಯ ಮಾಡಿದನಂತರ, ಈ ಆಹಾರ ಬಿಸಿಯಾಗಿರುವಂತೆಯೇ ಪ್ರತಿನಿತ್ಯವೂ ಸುಮಾರು ೨೦೦೦ ಶ್ರೀವೈಷ್ಣವ ಭಕ್ತರಿಗೆ ಅಥವಾ ಯಾತ್ರಾರ್ಥಿಗಳಿಗೆ ಬಡಿಸಲಾ ಗುತ್ತಿದ್ದಿತು. ಈ ಪ್ರಸಾದವು ಅನ್ನ, ತುಪ್ಪ, ರಸಂ, ಕುಳಂಬು, ಪರುಪುïŒ, ನಾಲ್ಕವಿಧದ ಪೊರಿಕ್ಕಾರಿ, ಕುಟ್ಟುಕ್ಕಾರಿ, ಪಾಯಸ, ಅಂಬಲಿ, ಮೊಸರು ಮತ್ತು ಉಪ್ಪಿನಕಾಯಿ ವ್ಯಂಜನಗಳನ್ನು ಒಳಗೊಂಡಿದ್ದ ಶ್ರೀಮಂತ ‘ಅಲಂಕಾರಮ್’ ಭೋಜನವಾಗಿರುತ್ತಿದ್ದಿತು. ಇದರೊಡನೆ ಊಟದ ತರುವಾಯ ಲೇಪಿಸಿಕೊಳ್ಳಲು ನಾದಿದ ಶ್ರೀಗಂಧದ ಹಿಟ್ಟು, ಮೆಲ್ಲಲು ತಾಂಬೂಲ ಮುಂತಾದುವನ್ನೂ ಇಡಲಾಗಿರುತ್ತಿದ್ದಿತು. ದೀರ್ಘಯಾತ್ರೆಯನ್ನು ಕೈಗೊಂಡು ತಿರುಪತಿಗೆ ಆಗಮಿಸುತ್ತಿದ್ದ ಶ್ರೀವೈಷ್ಣವ ಯಾತ್ರಾರ್ಥಿಗಳಿಗೆ ಇಂಥಾ ರಾಮಾನುಜಕೂಟಗಳಲ್ಲಿ ರಾಜೋಪಚಾರವೇ ದೊರೆಯುತ್ತಿತ್ತು.

ಇಲ್ಲಿಯೇ ಪ್ರಸ್ತಾಪಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಸದಾಶಿವರಾಯನ ಆಡಳಿತಾವದಿಯಲ್ಲಿ, ಅಂದರೆ ೧೫೪೭ರಲ್ಲಿ, ತಿರುಪತಿಯಲ್ಲಿ ರಾಮಾನುಜಕೂಟದ ಆಡಳಿತ ವ್ಯವಸ್ಥೆ ಹೇಗಿದ್ದಿತೆಂಬುದರ ಬಗೆಗೆ ಶಾಸನವೊಂದು (ಅದೇ, ೫, ೮೯) ಬೆಳಕು ಚೆಲ್ಲುತ್ತದೆ. ೧೫೪೭ ಮಾರ್ಚ್ ತಿಂಗಳಿನಲ್ಲಿ ಉದಯಗಿರಿ ದೇವರಾಜಭಟ್ಟಾರ್ ಎಂಬಾತನು ತಿರುಪತಿಯ ದೇವಾಲಯವೊಂದರಲ್ಲಿ ವಿಠ್ಠಲೇಶ್ವರ ಪೆರುಮಾಳ್ ದೇವರನ್ನು ಪ್ರತಿಷ್ಠಾಪಿಸಿದನಲ್ಲದೆ, ಈ ಸಂಬಂಧದಲ್ಲಿ ಶಾಸನಕಲ್ಲನ್ನೂ ನೆಡಿಸುತ್ತಾನೆ. ಇದರ ಮಹತ್ವವೆಂದರೆ, ಈ ದೇವಾಲಯದ ಸಂಪೂರ್ಣ ಆಯ-ವ್ಯಯ ಕುರಿತು ಇದು ನಿರೂಪಿಸುತ್ತದೆ. ಈ ದೇವಾಲಯದಲ್ಲಿ ನಡೆಸಲಾಗುತ್ತಿದ್ದ ರಾಮಾನುಜಕೂಟದ ವ್ಯವಸ್ಥೆಯನ್ನು ಮಾತ್ರವೇ ಇಲ್ಲಿ ಗಮನಿಸುವುದಾದರೆ, ಇದರ ಮೇಲುಸ್ತುವಾರಿ ಕೈಗೊಂಡಿದ್ದ ವ್ಯಕ್ತಿಗೆ ವಾರ್ಷಿಕವಾಗಿ ಸಂದಾಯಮಾಡಲಾಗುತ್ತಿದ್ದ ಸಂಭಾವನೆಯೆಂದರೆ ೫೦ ಪಣಂಗಳು. (೧೯೮೦ರ ವೇಳೆಗೆ ಇದರ ಮೌಲ್ಯವು ಸುಮಾರು ೧೨ ರೂಪಾಯಿ ಗಳಷ್ಟಿದ್ದಿತು). ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಾವದಿ ಅಡಿಗೆಯ ಕೆಲಸದವರಿಗೆ ತಿಂಗಳಿಗೆ ೧ ಪಣಂಅನ್ನು ಕೊಡುವುದರೊಡನೆ ನಿತ್ಯವೂ ಅವರ ಪಾಲಿನ ಪ್ರಸಾದ ವನ್ನೂ ಒದಗಿಸಲಾಗುತ್ತಿತ್ತು. ಪ್ರತಿದಿನವೂ ಸುಮಾರು ೨೦೦೦ ಶ್ರೀವೈಷ್ಣವರು ಭೋಜನ ಸ್ವೀಕರಿಸುತ್ತಿದ್ದ ಈ ರಾಮಾನುಜಕೂಟದಲ್ಲಿ ಊಟವನ್ನು ಬಡಿಸುವುದಕ್ಕಾಗಿ ನೇಮಿಸಿಕೊಳ್ಳಲಾಗಿದ್ದ ಈರ್ವರಿಗೆ ವರುಷವೊಂದಕ್ಕೆ ತಲಾ ೬೨೧/೨ ಪಣಂಗಳು (ತಿಂಗಳಿಗೆ ಸುಮಾರು ೧ ರೂಪಾಯಿ, ೪ ಆಣೆಗಳು); ಕಾವಲುಗಾರನಿಗೆ ತಿಂಗಳಿಗೆ ೫ ಪಣಂಗಳು (೧ ರೂಪಾಯಿ, ೩ ಆಣೆಗಳು); ಭೋಜನಾಲಯವನ್ನು ಶುಚಿ ಮಾಡುತ್ತಿದ್ದ ಸೇವಕರಿಗೆ ತಿಂಗಳೊಂದಕ್ಕೆ ತಲಾ ೩ ಪಣಂಗಳು (೧೧ ಆಣೆ, ೩ ಕಾಸುಗಳು); ಪ್ರಸಾದ ಸ್ವೀಕರಿಸುವ ಸಮಯದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪ್ರತಿಯೊಬ್ಬರಿಗೂ ತಿಂಗಳಿಗೆ ೪ ಪಣಂಗಳು (೧೫ ಆಣೆಗಳು); ಹಾಗೂ ರಾಮಾನುಜಕೂಟದ ಇಡೀ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಅದಿಕಾರಿಗೆ ತಿಂಗಳಿಗೆ ೨೦ ಪಣಂಗಳು (೬ ರೂಪಾಯಿ, ೧೧ ಆಣೆಗಳು) – ಹೀಗೆ ವ್ಯವಸ್ಥೆ ಮಾಡಲಾಗಿದ್ದಿತು.

ತಿರುಮಲೈ-ತಿರುಪತಿ ದೇವಸ್ಥಾನದ ಶಾಸನವೊಂದು (ಅದೇ, v, ೧೫೬), ಸದಾಶಿವರಾಯನು ತಿರುಮಲೈ ಮತ್ತು ತಿರುಪತಿಗಳಲ್ಲಿ ಪೂಜಾದಿ ಕಾರ್ಯಗಳು ಸುಗಮವಾಗಿ ನಡೆಯುವಂತೆ; ಹಾಗೂ ತಿರುಪತಿಯ ನಮ್ಮಾಳ್ವಾರ್ ರಾಮಾನುಜ ಕೂಟವು ಮುಂದುವರಿಯಲು ಸಾಧ್ಯವಾಗುವಂತೆ ೨೦೦ ಆಕಳುಗಳನ್ನು ಸೇವಾರ್ಥ ದಾನಮಾಡಿದುದನ್ನು ತಿಳಿಸುತ್ತದೆ. ಹೀಗೆ ರಾಮಾನುಜಕೂಟಗಳಿಗೆ ಪೋಷಣೆ ಒದಗಿಸುವ ನಿಟ್ಟಿನಲ್ಲಿ ಸದಾಶಿವರಾಯ ಸಲ್ಲಿಸಿದ ಸೇವೆ ಪ್ರಶಂಸಾರ್ಹವಾದರೂ ಆ ವೇಳೆಗೆ ದೇವಾಲಯದ ಆಡಳಿತದಲ್ಲಿ ಸ್ವಲ್ಪಮಟ್ಟಿನ ಶಿಥಿಲತೆ ಕಂಡುಬರುತ್ತಲಿತ್ತು. ತಿರುಪತಿ ದೇವಾಲಯ ಹಾಗೂ ರಾಮಾನುಜಕೂಟಗಳ ಮೇಲುಸ್ತುವಾರಿ ವಹಿಸಿದ್ದ ಮತ್ತು ನಿತ್ಯಗಟ್ಟಳೆ ವೆಚ್ಚದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದ ಸ್ಥಾನಿಕರಿಗೇ ದಾನ-ದತ್ತಿಗಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿದ್ದಿತು. ತೆರಿಗೆ ಸಂಗ್ರಹಣೆಯ ಕಾರ್ಯವೂ ಅವರದೇ ಆಗಿದ್ದಿತು. ಈ ವಿಚಾರದಲ್ಲಿ ಅವರು ಸ್ವತಂತ್ರವಾಗಿ ತೀರ್ಮಾನಗಳನ್ನು ಕೈಗೊಳ್ಳಬಹುದಿತ್ತು. ಕೆಲವೊಮ್ಮೆ ಇಂಥಾ ಹಣ ದುರುಪಯೋಗಗೊಳ್ಳುತ್ತಿದ್ದ ಬಗೆಗೆ ಶಂಕೆಗಳಿರುತ್ತಿದ್ದವು. ಈ ಕಾರಣಕ್ಕಾಗಿಯೇ ಈ ಸಂಬಂಧದಲ್ಲಿ ಸದಾಶಿವರಾಯನಿಗೆ ಬದಲಾವಣೆಯೊಂದನ್ನು ತರುವುದು ಅನಿವಾರ್ಯವೆನಿಸಿತು. ದಾನಗಳಿಂದ ಹಾಗೂ ತೆರಿಗೆಗಳಿಂದ ಸಂಗ್ರಹಗೊಂಡ ಹಣವನ್ನು ದೇವಾಲಯದ ಸ್ಥಾನಿಕರಿಗೆ ಸಲ್ಲುವ ಬದಲು ನಮ್ಮಾಳ್ವಾರ್ ದೇವಾಲಯದ ‘ರಾಮಾನುಜಕೂಟಛತ್ರ’ದ ವ್ಯವಸ್ಥಾಪಕರಿಗೆ ಸಲ್ಲುವಂತೆ ಕಟ್ಟಳೆ ಮಾಡುತ್ತಾನೆ.

ಒಟ್ಟಿನಲ್ಲಿ, ವಿಜಯನಗರದರಸರು ಹಾಗೂ ಶ್ರೀಮಂತರ ಉದಾರ ದಾನ-ದತ್ತಿ-ಪೋಷಣೆಗಳ ಕಾರಣವಾಗಿ ವೈಭವದಿಂದ ಕಾರ್ಯನಿರ್ವಹಿಸುತ್ತಿದ್ದ ರಾಮಾನುಜ ಕೂಟಗಳು, ಆ ಕಾಲದ ಧಾರ್ಮಿಕ ಚಟುವಟಿಕೆಗಳ ಅಂಗವಾಗಿ ಅಸ್ತಿತ್ವಕ್ಕೆ ಬಂದಂಥವು. ಶ್ರೀವೈಷ್ಣವಪಂಥಾನುಯಾಯಿಗಳಿಗೆ ಪೋಷಣೆ-ಪ್ರೋತ್ಸಾಹ ನೀಡುವ ಮಟ್ಟಿಗೆ ಇವು ಪರಿಣಾಮಕಾರಿ ಪಾತ್ರನಿರ್ವಹಿಸಿದವು. ಆದರೆ ವಿಷಾದದ ಸಂಗತಿಯೆಂದರೆ, ೧೫೬೫ರ ರಕ್ಕಸಗಿ-ತಂಗಡಗಿ ನಿರ್ಣಾಯಕ ಯುದ್ಧಾನಂತರ ಈ ವೈಭವವೆಲ್ಲ ಮರೆಯಾಯಿತೆನ್ನ ಬೇಕು. ೧೬೩೮ರಲ್ಲಿ ವಿಜಯನಗರದ ಮುಮ್ಮಡಿ ವೆಂಕಟನ ಆಳ್ವಿಕೆಯಲ್ಲಿ, ತಿರುಪತಿ ದೇವಾಲಯ ಮತ್ತು ರಾಮಾನುಜಕೂಟಗಳ ಮೇಲ್ವಿಚಾರಕರಾಗಿದ್ದ ಸ್ಥಾನಿಕರ ಸಂಖ್ಯೆಯು ೬ ರಿಂದ ೪ಕ್ಕೆ ಇಳಿಯಿತು. ೧೬೮೪ರ ವೇಳೆಗೆ ವಿಜಯನಗರ ಅರಸರ ಪ್ರಭಾವವು ಅಂತಿಮವಾಗಿ ಮರೆಯಾಗುತ್ತಿರುವಂತೆಯೇ ದೇವಾಲಯಗಳಿಂದ ರಾಮಾನುಜಕೂಟಗಳಿಗೆ ಕೇವಲ ಸಾಂಕೇತಿಕ ಪಾಲು ಮಾತ್ರವೇ ಸಲ್ಲುವಂತಾಯಿತು.

ಈ ಸಮಯಕ್ಕಾಗಲೇ ಈ ಪ್ರದೇಶವು ಗೋಲ್ಕೊಂಡದ ಮುಸ್ಲಿಂ ಅರಸರು ಮತ್ತು ಆರ್ಕಾಟು ನವಾಬ-ಇವರ ಅದೀನಕ್ಕೊಳಪಟ್ಟಿದ್ದರಿಂದ, ಇಲ್ಲಿಯ ಆಡಳಿತ ಸ್ವರೂಪದಲ್ಲೂ ಬದಲಾವಣೆ ಬಂದುದು ಸಹಜ. ೧೬೮೪ರಲ್ಲಿ ಶಿವಾಜಿಯ ಮರಾಠಾ ಅದಿಕಾರಿಗಳಲ್ಲೊಬ್ಬನಾಗಿದ್ದ ಯಡಮಟರಾವ ರಾಮಚಂದ್ರ ಡಾಬಿರ್ಸನು ತಿರುಮಲೈಗೆ ಯಾತ್ರೆ ಕೈಗೊಂಡ ಸಂದರ್ಭದಲ್ಲಿ, ಅಲ್ಲಿ ನೆಲೆಗೊಂಡಿದ್ದ ಅಭಾವ ಪರಿಸ್ಥಿತಿಯನ್ನು ಕಣ್ಣಾರೆ ನೋಡುತ್ತಾನೆ. ನಗದಿಗೆ ಬದಲಾಗಿ ತನ್ನಲ್ಲಿದ್ದ ಬಂಗಾರದ ಆಭರಣವನ್ನು ದಾನವಾಗಿ ನೀಡುವುದರೊಡನೆ ದೇವಾಲಯ/ರಾಮಾನುಜಕೂಟದ ವ್ಯವಸ್ಥೆಗೆ ಇನ್ನೂ ಅಂಟಿಕೊಂಡಿದ್ದ ಅಲ್ಲಿಯ ಕೆಲವು ನೌಕರರ ಊಟೋಪಚಾರಕ್ಕೆ ವ್ಯವಸ್ಥೆ ಮಾಡುತ್ತಾನೆ.

ರಾಮಾನುಜಕೂಟಗಳನ್ನು ಕುರಿತ ಕೆಲವು ಶಾಸನೋಕ್ತ ಸಂಗತಿಗಳು

ಕೆಲವಾರು ಕನ್ನಡ ಶಾಸನ, ದಾಖಲೆ ಹಾಗೂ ಸ್ಥಳಪುರಾಣಗಳಲ್ಲಿ ರಾಮಾನುಜ ಕೂಟವನ್ನು ರ(ರಾ)ಮಾನುಜಗೂಟ, ರಾಮಾಂಜಕೂಟ, ರಾಮಾಂಜಿಗೂಟ, ರಾಮಾಜಿಕೂಟ ಛತ್ರ/ಸತ್ರ ಇತ್ಯಾದಿಯಾಗಿಯೂ ಗುರುತಿಸಿದೆ. ಈಗಾಗಲೇ ನೋಡಿದಂತೆ, ಕರ್ನಾಟಕದಲ್ಲಿ ೧೩ನೇ ಶತಮಾನದ ಶಾಸನಗಳಲ್ಲಿ ಮೊದಲಿಗೆ ಉಲ್ಲೇಖಿಸಲ್ಪಟ್ಟ ರಾಮಾನುಜಕೂಟವು, ೧೫ ಮತ್ತು ೧೬ನೇ ಶತಮಾನಗಳಲ್ಲಿ ವ್ಯಾಪಕವಾಗಿ ಪ್ರಸ್ತಾಪಗೊಳ್ಳುತ್ತದೆ. ೧೯ನೇ ಶತಮಾನದಲ್ಲಿ, ಅಂದರೆ ಮೈಸೂರು ಒಡೆಯರ ಆಡಳಿತಾವದಿಯಲ್ಲಿಯೂ ರಾಮಾನುಜಕೂಟಗಳ ಪ್ರಸ್ತಾಪಗಳು ದೊರಕುತ್ತವೆ. ಹಾಗೆಯೇ, ಹಾಸನ, ಮಂಡ್ಯ, ಚಿತ್ರದುರ್ಗ, ಮೈಸೂರು ಮೊದಲಾದ ಜಿಲ್ಲೆಗಳಲ್ಲಿ ಶ್ರೀವೈಷ್ಣವ ಆರಾಧನಾಕ್ಷೇತ್ರಗಳಿರುವುದರಿಂದ, ಇಲ್ಲಿ ದೊರೆತಿರುವ ಈ ಪಂಥಕ್ಕೆ ಸಂಬಂಧಿಸಿದ ಕೆಲವು ದಾನಶಾಸನಗಳಲ್ಲಿ ರಾವಾನುಜಕೂಟದ ಪ್ರಸ್ತಾಪ ವಿರುವುದುಂಟು.

ವಿಶಿಷ್ಟಾದ್ವೈತ ಸಿದ್ಧಾಂತದ ವಿಷ್ಣುತತ್ವವನ್ನು ಕರ್ನಾಟಕಕ್ಕೆಲ್ಲಾ ಪರಿಚಯಿಸಿ ಪ್ರಚಾರಕ್ಕೆ ತರುವ ಮಹತ್ಕಾರ್ಯವನ್ನು ನೆರವೇರಿಸಿದ ರಾಮಾನುಜಾಚಾರ್ಯರ ಪ್ರಭಾವದಿಂದಾಗಿ ಕಾಲಕಾಲಕ್ಕೆ ಇಲ್ಲಿ ರಾಮಾನುಜಕೂಟಗಳು ಅಸ್ತಿತ್ವ ಕಂಡುಕೊಂಡವೆಂಬುದು ವಾಸ್ತವ. ಈ ರಾಮಾನುಜಕೂಟಗಳು ಮೊದಲಿಗೆ ತೊಣ್ಣೂರು (೧೧ನೇ ಶ.), ಆ ನಂತರ ಮೇಲುಕೋಟೆ(೧೩ನೇ ಶ.)ಗಳಲ್ಲಿ ಸ್ಥಾಪನೆಗೊಂಡವು. ಶ್ರೀವೈಷ್ಣವ ಆಚಾರ್ಯರನ್ನು ಯತಿರಾಜರೆಂದೂ ಕರೆಯುವ ಸಂಪ್ರದಾಯವಿದ್ದು, ಇಂಥವರು ವಾಸಿಸುತ್ತಿದ್ದ ಸ್ಥಳಕ್ಕೆ ಯತಿರಾಜಮಠವೆನ್ನಲಾಗುತ್ತದೆ. ೧೨೫೬ರ ವೇಳೆಗೆ ಮೇಲುಕೋಟೆಯಲ್ಲಿ ರಾಮಾನುಜರಿಗಾಗಿ ಒಂದು ಗುಡಿ (ಭಾಷ್ಯಕಾರರ ಸನ್ನಿದಿ) ಹಾಗೂ ರಾಮಾನುಜಕೂಟ ಗಳನ್ನು ನಿರ್ಮಿಸಲಾಯಿತು. ಈ ಯತಿರಾಜಮಠದ ನೆಲದಲ್ಲಿ ಹಾಸಿರುವ ಕಲ್ಲಿನ ಮೇಲೆ ಕಂಡರಿಸಲಾಗಿರುವ ೧೨೫೬ರ ಶಾಸನವು (ಎಕ. ೬, ಪಾಂಡವಪುರ ೧೮೨) ಹೇಳುವಂತೆ, ಈ ರಾಮಾನುಜಕೂಟಕ್ಕೆ ತೆರಕಣಾಂಬಿಯ ಚೆನ್ನಪ್ಪಶೆಟ್ಟಿಯ ಮಗ ಕೇತಿಯಪ್ಪಶೆಟ್ಟಿಯು ಎರಡು ಗ್ರಾಮಗಳನ್ನೂ ಗದ್ದೆಗಳನ್ನೂ ದಾನಮಾಡುತ್ತಾನೆ.

ವಿಜಯನಗರದ ಇಮ್ಮಡಿ ಪ್ರೌಢದೇವರಾಯನ ಮಹಾಪ್ರಧಾನನೂ ನಾಗಮಂಗಲದ ಮಹಾಪ್ರಭುವೂ ಆಗಿದ್ದ ತಿಮ್ಮಣ್ಣ ದಂಡನಾಯಕನ ಧರ್ಮಪತ್ನಿ ರಂಗಮ್ಮ(ರಂಗಾಂಬಿಕಾ/ರಂಗನಾಯಕಿ)ಳು ೧೪೫೮ರಲ್ಲಿ ಮೇಲುಕೋಟೆಯ ರಂಗಮಂಟಪ(ರಂಗಮಠವೆಂಬ ದೇಶಾಂತರಿಮಠ)ವೊಂದನ್ನು ಕಟ್ಟಿಸುತ್ತಾಳೆ. ಈ ವಿಚಾರ ಪ್ರಸ್ತಾಪಗೊಂಡಿರುವುದು ಜೀಯರ ದೇವಸ್ಥಾನದ ಕೈಸಾಲೆಯ ಎಡಪಾರ್ಶ್ವದಲ್ಲಿ ನೆಟ್ಟಿರುವ ಕಲ್ಲಿನಲ್ಲಿ (ಅದೇ, ಪಾಂಪು. ೧೭೯). ಇದರಿಂದ ತಿಳಿದುಬರುವಂತೆ, ರಂಗಮ್ಮಳು ತನ್ನ ಹೆಸರಿನಲ್ಲಿ ರಂಗಸಮುದ್ರವೆಂಬ ತಟಾಕವನ್ನು ತೋಡಿಸುತ್ತಾಳೆ ಮಾತ್ರವಲ್ಲ, ಹೊಯಿಸಳರಾಜ್ಯದ ಕುರುವಂಕನಾಡಿಗೆ ಸೇರಿದ ಮೇಲುಕೋಟೆಯ ಕಾಲುವಳಿಗಳಾದ ಬಾಳೇನಹಳ್ಳಿ (ಬಲೇನಹಳಿ್ಳ) ಮತ್ತು ಯಲವದಹಳ್ಳಿಗಳಿಗೆ ಸೇರಿದ ಎಲ್ಲ ಹೊಲ, ಗದ್ದೆ, ತೋಟಗಳನ್ನು ಸುಂಕಗಳಿಂದ ಬರುವ ಆದಾಯ, ದ್ರವ್ಯರೂಪದಲ್ಲಿ ಬರುವ ಆದಾಯ ಮುಂತಾದವುಗಳನ್ನೆಲ್ಲ ಈಕೆ ೨೪ ಜನ ಶ್ರೀವೈಷ್ಣವರಿಗೆ (ಪರಮ ವೈದಿಕ ವೈಷ್ಣವ ಬ್ರಾಹ್ಮಣರಿಗೆ) ಭೋಜನಕ್ಕಾಗಿ ಸ್ಥಾಪಿಸಲಾದ ರಾಮಾನುಜಕೂಟಕ್ಕೆ ದಾನಮಾಡುತ್ತಾಳೆ.

ಆದರೆ ರಂಗಮ್ಮಳು ದಾನಮಾಡಿದ ಗ್ರಾಮಗಳಿಂದ ಬರುತ್ತಿದ್ದ ೮೦ ವರಹಗಳ ಆದಾಯವು ರಾಮಾನುಜಕೂಟವನ್ನು ನಡೆಸಿಕೊಂಡು ಹೋಗಲು ಸಾಕಾಗುವಷ್ಟಿರಲಿಲ್ಲ. ಏಕೆಂದರೆ ಈಕೆ ತಾನು ಅರಸನಿಂದ ಪಡೆದುಕೊಂಡಿದ್ದ ಮೇಲ್ಕಂಡ ದಾನದಲ್ಲಿ ಈ ಮೊದಲೇ ರಂಗಸಮುದ್ರಕೆರೆಯ ಕೆಳಗೆ ಕೃಷಿಗೊಳಪಟ್ಟಿದ್ದ ಗದ್ದೆಗಳು ಸೇರಿರಲಿಲ್ಲ. ಅಲ್ಲದೆ, ಅವುಗಳಿಂದ ಬರುವ ಉತ್ಪನ್ನದಲ್ಲಿ ಅರ್ಧಭಾಗವನ್ನು ವಾರದ ಮೇಲೆ ಚೆಲ್ಲಪಿಳ್ಳೆರಾಯರ ದೇವಸ್ಥಾನದ ಶ್ರೀಭಂಡಾರಕ್ಕೆ ಕೊಡಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ೪೦ ವರಹಗಳ ಆದಾಯ ತರುವ ಹಾಗೂ ತೆರಿಗೆಗಳಿಂದ ಮಾನ್ಯ ಮಾಡಿದ ಇನ್ನಷ್ಟು ಭೂಮಿಯನ್ನು ೪೦೦ ವರಹಗಳಿಗೆ ಕೊಂಡು ಅದನ್ನೂ ರಾಮಾನುಜಕೂಟದ ವ್ಯವಸ್ಥೆಗಾಗಿ ದಾನಮಾಡಲಾಗುತ್ತದೆ. ಮುಖ್ಯವಾಗಿ, ಈ ಸಂಬಂಧದಲ್ಲಿ, ‘ರಾಮಾನುಜ ಕೂಟದ ಕಟ್ಟಳೆ’ಯನ್ನೂ ರೂಪಿಸಲಾಗುತ್ತದೆ. ಅದರ ಪ್ರಕಾರ, ಈ ದಾನಗಳ ಪ್ರತಿಗ್ರಹಿಯಾಗಿದ್ದ ಹಾಗೂ ‘ಸಂಪತ್ಕುಮಾರ ಸಕಲವಿಧ ಕೈಂಕರ್ಯ ಧರ್ಮಬೋಧಕ’ ನೆನಿಸಿದ್ದ ರಾಮಾನುಜಜೀಯರ್ ಎಂಬ ಅದಿಕಾರಿ ಮಠದಲ್ಲಿಯೇ ಇದ್ದುಕೊಂಡು ರಾಮಾನುಜಕೂಟದ ಆಡಳಿತವನ್ನು ನೋಡಿಕೊಳ್ಳಲು; ಆ ಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಲಕ್ಷ್ಮೀದೇವಿಗೆ ನೈವೇದ್ಯ ಒದಗಿಸಲು; ಮಠದಲ್ಲಿ ಬೃಂದಾವನ, ಅಡಿಗೆಯವರು, ಪರಿಚಾರಕರಿಗೆ ನೀಡುವ ಸಂಬಳ ಇತ್ಯಾದಿ ವೆಚ್ಚಗಳ ನಂತರವೂ ಉಳಿಯಬಹುದಾದ ಹಣವನ್ನು ಮಠದ ಜೀರ್ಣೋದ್ಧಾರ, ಸ್ವಚ್ಫತೆ ಹಾಗೂ ಸುಣ್ಣಬಣ್ಣಗಳಿಗಾಗಿ ಬಳಸಲು ಕಟ್ಟಳೆ ವಿದಿಸಲಾಗುತ್ತದೆ. ಮೇಲುಕೋಟೆಯಂಥಾ ಶ್ರೀವೈಷ್ಣವಕ್ಷೇತ್ರದಲ್ಲಿ ರಾಮಾನುಜ ಕೂಟದ ವ್ಯವಸ್ಥೆಗೆ ದೊರೆತಿದ್ದ ಭಕ್ತಿಪೂರ್ವಕ ಆದ್ಯತೆಯು ಈ ಸಂದರ್ಭದಿಂದ ಮನದಟ್ಟಾಗುತ್ತದೆ.

ಮೇಲುಕೋಟೆಯಲ್ಲಿರುವ ವಿಜಯನಗರದ ಕೃಷ್ಣದೇವರಾಯನ ಕಾಲದ ಶಾಸನಗಳ ಪೈಕಿ ಆಚಿರಾಜ ಔಭಳರಾಜನ ಮಗ ವೆಂಕಟಾದ್ರಿಯ ೧೫೨೬-೨೭ರ ದಾನಶಾಸನವೂ ಒಂದು (ಅದೇ, ಪಾಂಪು. ೧೬೨). ಇದಿರುವುದು ನಮ್ಮಾಳ್ವಾರ್ ದೇವಸ್ಥಾನದ ಬಲಭಾಗದಲ್ಲಿ. ಔಭಳಪುರವೆಂಬ ಪ್ರತಿನಾಮ ಪಡೆದಿರುವ ಗ್ರಾಮವೊಂದನ್ನು ದಾನಮಾಡಿದ ಪ್ರಸ್ತಾಪವಿದೆ ಈ ಶಾಸನದಲ್ಲಿ. ದಾನದ ವಿವರಗಳು ತಿಳಿದುಬರುವುದಿಲ್ಲವಾದರೂ ಇದರಲ್ಲಿ ಅಲ್ಲಿ ನಡೆಯುತ್ತಿದ್ದ ರಾಮಾನುಜಕೂಟದ ಪ್ರಸ್ತಾಪವಿದೆ. ಆದ್ದರಿಂದ ಅದರ ವ್ಯವಸ್ಥೆಗಾಗಿಯೇ ಈ ದಾನಕಾರ್ಯ ನಡೆದಿದೆಯೆನ್ನಲಡ್ಡಿಯಿಲ್ಲ.

ಹಾಗೆಯೇ, ನಾರಾಯಣಸ್ವಾಮಿ ದೇವಾಲಯದ ಉತ್ತರಕ್ಕೆ ಹೊಸಬಾಗಿಲಿನ ಎಡಗಡೆ ಇಡಲಾಗಿರುವ ಕೃಷ್ಣದೇವರಾಯನ ಕಾಲದ ಇನ್ನೊಂದು ಶಾಸನವು, ಸಾಕಷ್ಟು ಒಡೆದು ಬಿನ್ನವಾಗಿರುವುದರಿಂದ ಇದರ ಉದ್ದೇಶ ಸ್ಪಷ್ಟವಾಗುವುದಿಲ್ಲ. ಆದರೆ ಇದರಲ್ಲಿ ರಾಮಾನುಜಕೂಟದ ಉಲ್ಲೇಖವಿರುವುದರಿಂದ, ಇದನ್ನು ನಡೆಸಿ ಕೊಂಡು ಹೋಗಲು ಬಹುಶಃ ದೇವಾಲಯದ ಭೂಮಿಯನ್ನು ಮಾರಿದಾಗ ಶ್ರೀಭಂಡಾರದವರು ರಾಮಾನುಜೈಯ್ಯಂಗಾರ್ಯರಿಗೆ ಬರೆಯಿಸಿಕೊಟ್ಟ ಕ್ರಯಪತ್ರವಿದ್ದಿರು ವಂತಿದೆ. ಆ ಉದ್ದೇಶಕ್ಕೆಂದು ಈ ಅಯ್ಯಂಗಾರ್ಯರ ಹೆಸರಿನಲ್ಲಿ ಬಹುಶಃ ಭೂಮಿಯನ್ನು ಕ್ರಯವಾಗಿ ಕೊಟ್ಟು, ದೇವಸ್ಥಾನದಲ್ಲಿ ರಾಮಾನುಜಕೂಟದ ವೆಚ್ಚಕ್ಕಾಗಿ ಅದನ್ನು ದಾನವಾಗಿ ಪಡೆದು ಶ್ರೀವೈಷ್ಣವರಿಗೆ ಆರೋಗಣೆಗಾಗಿ ಭಂಡಾರದಿಂದ ಎರಡು ಕುಳ ಅಕ್ಕಿ ನೀಡಿದುದನ್ನು ಈ ಶಾಸನ ನಿರೂಪಿಸುತ್ತದೆ. ವಿದ್ವಾಂಸರು ಭಾವಿಸುವಂತೆ, ಇಲ್ಲಿಯ ರಾಮಾನುಜೈಯ್ಯಂಗಾರ್ಯರು ಕಂಚಿ, ತಿರುಪತಿ ಮತ್ತು ಶ್ರೀರಂಗಂನ ಹಲವಾರು ಶಾಸನಗಳಲ್ಲಿ ಕಾಣಿಸಿಕೊಳ್ಳುವ ಕಂದಾಡೈ/ಕಂದಾಡೆ ರಾಮಾನುಜೈಯ್ಯಂಗಾರ್ಯರೇ ಆಗಿದ್ದಿರಬಹುದು. ಏಕೆಂದರೆ ಈಗಾಗಲೇ ಗಮನಿಸಿ ದಂತೆ, ಅಲ್ಲಿಯ ರಾಮಾನುಜಕೂಟಗಳ ಮೇಲುಸ್ತುವಾರಿಯನ್ನು ಕೈಗೊಂಡವರು ಇದೇ ಕಂದಾಡೆ ರಾಮಾನುಜೈಯ್ಯಂಗಾರ್.

ವಿಜಯನಗರದ ಸದಾಶಿವರಾಯನ ಕಾಲದ ಶಾಸನಗಳು ಮೇಲುಕೋಟೆಯಲ್ಲಿದ್ದು, ಅವುಗಳಲ್ಲೊಂದು ರಾಮಾನುಜಕೂಟದ ಬಗೆಗೆ ಪ್ರಸ್ತಾಪಿಸುತ್ತದೆ (ಅದೇ, ಪಾಂಪು. ೧೩೨). ನಾರಾಯಣಸ್ವಾಮಿ ದೇವಸ್ಥಾನದ ಪ್ರಾಕಾರದಲ್ಲಿ ಪಶ್ಚಿಮಕಡೆ ಗೋಡೆಯ ಮೇಲಿರುವ ಈ ಶಾಸನದ ಕಾಲ ೧೫೩೦. ಇದು ಅರುಹುವಂತೆ, ವೆಲುಗೋಡು ಮನೆತನಕ್ಕೆ ಸೇರಿದ ವಸಂತರಾಯನು ಮೊದಲಿಗೆ ಎರಡು ಗ್ರಾಮಗಳನ್ನು ಕ್ರಯಕ್ಕೆ ಪಡೆದಿದ್ದು ಅವುಗಳನ್ನು ದೇವಾಲಯಕ್ಕೆ ಸಮರ್ಪಿಸಿದ್ದ. ಆದರೆ ಕಾರಣಾಂತರಗಳಿಂದ ಆ ದಾನ ಊರ್ಜಿತಗೊಳ್ಳಲಿಲ್ಲವಾಗಿ, ಈಗ ಅದೇ ಮನೆತನದ ಚಿತ್ರಕೊಂಡಮ ನಾಯಕನ ಮಗ ರಾಯಪನಾಯಕನು ಜಿಲೇಳ ರಂಗಪತಿರಾಜಯ್ಯನಿಗೆ ಹೇಳಿ ಆತನ ಮೂಲಕ ದೇವಾಲಯದ ಐವತ್ತಿಬ್ಬರೊಡನೆ ಒಪ್ಪಂದ ಮಾಡಿಕೊಂಡು, ಅದರಂತೆ ಮೂಲದಾನವನ್ನು ನವೀಕರಿಸುತ್ತಾನೆ. ವಸಂತರಾಯನ ಪ್ರತಿನಿದಿಯಾದ ಅನಂತಯ್ಯನಿಗೆ ಪ್ರಸಾದದಲ್ಲಿ ನೀಡಲಾಗುತ್ತಿದ್ದ ಪಾಲನ್ನು ಈಗ ಆತನ ಮೊಮ್ಮಗ ಆಳ್ವಾರು ಸಿಂಗಯ್ಯನಿಗೆ ಕೊಡುವುದೆಂದು ನಿರ್ಧರಿಸಲಾಗುತ್ತದೆ. ಈ ಆಳ್ವಾರು ಸಿಂಗಯ್ಯನು ಬಹುಶಃ ರಾಮಾನುಜಕೂಟದ ಧರ್ಮಕರ್ತನಾಗಿ ನೇಮಕಗೊಳ್ಳುತ್ತಾನೆ.

ಸದಾಶಿವರಾಯನ ಆಳ್ವಿಕೆಯ ಅವದಿಯ ಇನ್ನೊಂದು ಶಾಸನವು ೧೫೪೫ರ ದಾಗಿದ್ದು (ಅದೇ, ಪಾಂಪು. ೧೨೯), ಇದು ನಾರಾಯಣಸ್ವಾಮಿ ದೇವಾಲಯದ ಪ್ರಾಕಾರದ ದಕ್ಷಿಣಬಾಗಿಲ ಬಲಗಡೆಯಲ್ಲಿದೆ. ಇದನ್ನು ಹಾಕಿಸಿದವನು ಈ ಅರಸನಿಂದ ಶ್ರೀರಂಗಪಟ್ಟಣ ಸೀಮೆಯ ನಾಯಕತನವನ್ನು ಪಡೆದಿದ್ದ ಮಹಾಮಂಡಳೇಶ್ವರ ನಾರಯದೇವ; ನಂದ್ಯಾಲ ನಾರಸಿಂಗಯದೇವನ ಮಗ. ಈ ನಂದ್ಯಾಲ ನಾರಯದೇವನು ಶ್ರೀರಂಗಪಟ್ಟಣ ಸೀಮೆಯ ಬಲ್ಲಾಳಪುರ ಮತ್ತು ಕಣಂಬಾಡಿ ಸೀಮೆಯ ಮೊಳನಾಡುಸ್ಥಳಕ್ಕೆ ಸೇರಿದ ವರಾಹನಕಲಹಳ್ಳಿ ಗ್ರಾಮಗಳನ್ನು ದೇವಾಲಯದ ಹಲವಾರು ಸೇವೆಗಳಿಗಾಗಿ ದಾನಮಾಡುತ್ತಾನೆ. ಈ ಗ್ರಾಮಗಳಿಂದ ಬರಬೇಕಿದ್ದ ಒಟ್ಟು ಆದಾಯ ೨೦೦೦ ವರಹಗಳಾಗಿದ್ದರೂ ಕ್ಷಾಮದ ಕಾರಣವಾಗಿ ಈ ಆದಾಯ ವನ್ನು ೧೨೦೦ ವರಹಗಳಿಗೆ ನಿಗದಿಪಡಿಸಲಾಗುತ್ತದೆ. ಇದನ್ನು ಪುಲಿಯೂಟಾಗಿ (ದತ್ತಿಯಾಗಿ)ಟ್ಟುಕೊಂಡು ಕೈಂಕರ್ಯಗಳನ್ನು ನಡೆಸಬೇಕೆಂದಿರುತ್ತದೆ. ವಿನಿಯೋಗ ವಾಗುವ ಅಮೃತಪಡಿ ಅಥವಾ ಪ್ರಸಾದದಲ್ಲಿ ಒಂದು ಭಾಗವನ್ನು ವೇದಾಂತಿ ರಾಮಾನುಜಜೀಯರ್‌ರ ಮಠಕ್ಕೂ ಇನ್ನೊಂದನ್ನು ಬಹುಶಃ ದಾನಿಯಾದ ನಾರಯದೇವನೇ ಸ್ಥಾಪಿಸಿದ ರಾಮಾನುಜಕೂಟಕ್ಕೂ ಕೊಡಬೇಕೆಂದು ಈ ಶಾಸನದಲ್ಲಿ ಆದೇಶಿಸಲಾಗಿದೆ.

ನಾರಾಯಣಸ್ವಾಮಿ ದೇವಾಲಯ ಪ್ರಾಕಾರದ ಬಾಗಿಲಿನ ಎಡಗಡೆಯಿರುವ ಶಾಸನ ಸಹಾ (ಅದೇ, ಪಾಂಪು. ೧೨೮) ಸದಾಶಿವರಾಯನ ಕಾಲದ್ದು, ಅಂದರೆ ೧೫೬೪ರದು. ಈ ಶಾಸನದ ವಿಶೇಷವೆಂದರೆ, ಇದು ಮೂಲ ತಾಮ್ರಶಾಸನವೊಂದರ ಪ್ರತಿ; ಇದನ್ನು ಈ ಶಾಸನದ ಕೊನೆಯ ಸಾಲಿನಲ್ಲಿಯೇ ಉಲ್ಲೇಖಿಸಿದೆ. ಮುಖ್ಯವಾಗಿ, ರಾಮಾನುಜಕೂಟಕ್ಕೆ ದ್ರವ್ಯಸಹಾಯ ಮಾಡಿದುದನ್ನು ಇದರಲ್ಲಿ ಹೇಳಿದೆ. ಹಿರಿಯ ಕೊಂಡರಾಜಯದೇವನ ಮೊಮ್ಮಗ ಹಾಗೂ ಕೋನೇಟಿ ರಾಜಯನ ಮಗ ಮಹಾಮಂಡಳೇಶ್ವರ ಕೊಂಡರಾಜಯದೇವನು ಅರಸನಲ್ಲಿ ಬಿನ್ನವಿಸಿಕೊಂಡು ತಾಮ್ರಶಾಸನದ ಮೂಲಕ ಪಡೆದುಕೊಂಡ ಚನ್ನಪಟ್ಟಣಸ್ಥಳಕ್ಕೆ ಸೇರಿದ ಹೊಂಗನೂರು ಗ್ರಾಮ ಮತ್ತು ಅದರ ಉಪಗ್ರಾಮಗಳು, ಗೂಳೂರುಸ್ಥಳಕ್ಕೆ ಸೇರಿದ ಹೊನ್ನುಡಿಕೆ ಗ್ರಾಮ ಮತ್ತು ಅದರ ಉಪಗ್ರಾಮಗಳನ್ನು ದೇವಾಲಯಕ್ಕೆ ದಾನಮಾಡಿದುದನ್ನು ಈ ಶಾಸನವು ಪ್ರಸ್ತಾಪಿಸುತ್ತದೆ. ಆಳ್ವಾರರುಗಳ ಹುಟ್ಟುಹಬ್ಬ(ತಿರುನಕ್ಷತ್ರ)ಗಳು, ರಾಮಾನುಜಾಚಾರ್ಯರ ರಥೋತ್ಸವ, ಚೂಡಿಕುಡುತ್ತನಾಚ್ಚಿಯಾರ್ (ಗೋದಾದೇವಿ) ಮತ್ತು ಪೆರಿಯಜೀಯರ್ (ಮಣವಾಳ ಮಹಾಮುನಿ) ತಿರುನಕ್ಷತ್ರಗಳನ್ನು ನಡೆಸಲು ಈ ದಾನ ಮಾಡಲಾಗುತ್ತದೆ. ಇದರಲ್ಲಿ ರಾಮಾನುಜಕೂಟಕ್ಕೆ ವೆಚ್ಚಮಾಡಬೇಕಾದ ಮರ್ಯಾದೆ(ಧನಸಹಾಯ)ಯನ್ನೂ ಸೇರಿಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯದ ಉತ್ತರಕಡೆ ತಳಪಾದಿಯ ಕಲ್ಲಿನಲ್ಲಿರುವ ಬರಹವನ್ನು ಕಂಡರಿಸಿರುವುದು ವಿಜಯನಗರ ಪತನಗೊಂಡ ವರುಷದಲ್ಲಿ, ಅಂದರೆ ೧೫೬೫ರಲ್ಲಿ (ಅದೇ, ೯, ಬೇಲೂರು ೧೦೪). ಇಡೀ ಶಾಸನವು ಬೇಲೂರು ಚೆಂನಿಗರಾಯ ದೇವಾಲಯದ ರಾಮಾನುಜ ಕೂಟದ ವ್ಯವಸ್ಥೆಯನ್ನು ಕುರಿತು ನಿರೂಪಿಸುವುದು ವಿಶೇಷ. ಬೇಲೂರ ಹಿರಿಯನಂಬಿ ಲಕ್ಷ್ಮಣಯ್ಯನ ಕರ್ತ ಚೆನ್ನರಾಯನು ಎರ್ರಪ್ಪನಾಯಕನಿಗೂ ತನ್ನ ತಂದೆ-ತಾಯಿಯರಿಗೂ ತನ್ನ ಹೆಂಡತಿ ಚವಾಯಿಗೂ ಪುಣ್ಯವಾಗಬೇಕೆಂದು; ಹಾಗೂ ಹಿಂದಿನಿಂದಲೂ ನಡೆದುಬಂದ ತನ್ನ ಹಕ್ಕಿನಂತೆ (ಕಾಣಾಚಿಯಂತೆ) ಶ್ರೀವೈಷ್ಣವರ ರಾಮಾನುಜಕೂಟದ ವ್ಯವಸ್ಥೆಗೆಂದು ಅಕ್ಕಿಯನ್ನೂ ೨೫ ಗದ್ಯಾಣಗಳನ್ನೂ ತಿಮ್ಮಪ್ಪನಾಯಕನ ಮಗ ಹಡಪದ ಯೆರಪ್ಪನಾಯಕನಿಗೆ ಸಲ್ಲಿಸುತ್ತಾನೆ. ಇನ್ನು ಮುಂದೆಯೂ ಇದನ್ನು ತಪ್ಪದಂತೆ ನಡೆಸಬೇಕೆಂಬ ಕಟ್ಟಳೆಯನ್ನೂ ವಿದಿಸುತ್ತಾನೆ.

ವಿಜಯನಗರಕಾಲೀನ ನಾಯಕ ಪಾಳೆಯಗಾರರಲ್ಲಿ ಶ್ರೀವೈಷ್ಣವಪಂಥಕ್ಕೆ ಸೇರಿದವರೇ ಅದಿಕ. ಬಹುತೇಕ ಬೇಡ ನಾಯಕರನ್ನು ಈ ವರ್ಗಕ್ಕೆ ಸೇರಿಬಹುದು. ಈ ಮಟ್ಟಿಗೆ ಚಿತ್ರದುರ್ಗ ನಾಯಕ ಅರಸರನ್ನು ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬಹುದು. ಈ ನಾಯಕರು ಮೂಲತಃ ಶ್ರೀವೈಷ್ಣವಪಂಥಾನುಯಾಯಿಗಳು. ವಿಜಯನಗರ ಅರಸರಂತೆಯೇ ಈ ಪಂಥದ ಆಚಾರ್ಯರನ್ನೂ ದೇವನೆಲೆಗಳನ್ನೂ ಸಮಾನವಾಗಿ ಪುರಸ್ಕರಿಸಿದವರು. ಶ್ರೀವೈಷ್ಣವರ ಪ್ರಮುಖ ಕ್ಷೇತ್ರವೆನಿಸಿರುವ ಅಹೋಬಿಲದ ನರಸಿಂಹ ಈ ನಾಯಕರ ಮೂಲ ಮನೆದೇವರು. ಅಲ್ಲದೆ, ಅಹೋಬಿಲಂ ಮತ್ತು ತಿರುಪತಿಗಳು ಒಂದೇ ಬೆಟ್ಟಸಾಲಿನಲ್ಲಿ ನೆಲೆಸಿದ್ದು, ಪರಸ್ಪರ ಸಂಬಂಧ ಹೊಂದಿರುವ ಕ್ಷೇತ್ರಗಳು; ಹಾಗೂ ಈ ಎರಡೂ ಕ್ಷೇತ್ರಗಳ ಬಗೆಗೆ ಚಿತ್ರದುರ್ಗ ನಾಯಕ ಅರಸರು ಸಮಾನ ಭಕ್ತಿಯನ್ನಿರಿಸಿಕೊಂಡಿದ್ದವರು. ಈ ಅರಸರ ಪೈಕಿ ಮೊದಲನೆಯವನಾದ ಮತ್ತಿ ತಿಮ್ಮಣ್ಣನಾಯಕ (೧೫೬೮-೧೫೮೯), ಆರನೇ ಅರಸ ಕಸ್ತೂರಿ ಚಿಕ್ಕಣ್ಣನಾಯಕ (೧೬೭೫-೧೬೮೬)  ಮತ್ತು ಹತ್ತನೇ ಅರಸ ಬಿಚ್ಚುಗತ್ತಿ ಭರಮಣ್ಣನಾಯಕ(೧೬೮೯-೧೭೨೧)ರು ಶ್ರೀವೈಷ್ಣವ ಗುರುಗಳಿಗೆ ದತ್ತಿಗಳನ್ನು ನೀಡಿ ಗೌರವಿಸಿದರು; ರಾಮಾನುಜ ಕೂಟಗಳ ಪೋಷಣೆಗೆ ನೆರವಾದರು.

ಹಿರಿಯೂರು ತಾಲ್ಲೂಕು ರಂಗಸಮುದ್ರದಲ್ಲಿ ದೊರೆತ ತೆಲುಗುಭಾಷೆಯಲ್ಲಿರುವ ಮತ್ತಿ ತಿಮ್ಮಣ್ಣನಾಯಕನ ೧೫೮೩ರ ದತ್ತಿಶಾಸನವು (ಅದೇ, ೧೧, ಹಿರಿಯೂರು ೭೫), ವಿಜಯನಗರದ ರಾಮರಾಜಯ್ಯ ಮತ್ತು ತಿರುಮಲರಾಜಯ್ಯರಿಗೆ ಪುಣ್ಯ ವಾಗಲೆಂದು ತಿಮ್ಮಣ್ಣನಾಯಕನು ತುಂಗಭದ್ರಾತೀರದ ಹಂಪಿ ವಿರೂಪಾಕ್ಷದೇವರ ಸನ್ನಿದಿಯಲ್ಲಿ ಶ್ರೀಮಾಲ್ಯವಂತಂ ರಾಮಾನುಜಜೀಯರ್‌ರಿಗೆ ರಂಗಸಮುದ್ರ ಗ್ರಾಮವನ್ನು ದಾನಮಾಡಿದುದನ್ನು ದಾಖಲಿಸಿದೆ; ಹಾಗೂ ಇದೇ ಶಾಸನಕಲ್ಲಿನ ಎಡಭಾಗದಲ್ಲಿರುವ ಪಾಠದಲ್ಲಿ (ಅದೇ, ಹಿರಿಯೂರು ೭೬), ಈತನು ತನ್ನ ತಂದೆ ಹನುಮಿನಾಯಕನಿಗೆ ಪುಣ್ಯವಾಗಲೆಂದು ಇದೇ ರಾಮಾನುಜಜೀಯರ್‌ರಿಗೆ ಅರಕೆರೆ ಗ್ರಾಮವನ್ನು ಧಾರಾಪೂರ್ವಕ ನೀಡಿದುದನ್ನು ಹೇಳುತ್ತದೆ. ಇದು ಈ ಪ್ರದೇಶದಲ್ಲಿ ರಾಮಾನುಜಕೂಟ ನಡೆಯುತ್ತಿದ್ದುದನ್ನು ಪರೋಕ್ಷವಾಗಿ ಸೂಚಿಸುತ್ತದೆ.

ಈ ರಂಗಸಮುದ್ರ ಶಾಸನದಲ್ಲಿ ಉಲ್ಲೇಖಿತರಾದ ಮಾಲ್ಯವಂತಂ ರಾಮಾನುಜ ಜೀಯರ್‌ರು ಮೇಲುಕೋಟೆಯ ವೇದಾಂತಂ ರಾಮಾನುಜಜೀಯರ್‌ರೇ ಆಗಿದ್ದಿರ ಬಹುದೆಂಬ ವಿಚಾರವಿದೆ. ರಂಗಸಮುದ್ರವು ಹಿರಿಯೂರು ತಾಲ್ಲೂಕಿನಲ್ಲಿದ್ದರೂ ಅರಕೆರೆಯು ಆ ಪ್ರದೇಶದಲ್ಲಿಲ್ಲ. ಈ ಶಾಸನಪಾಠಗಳ ಮರುಪರಿಶೀಲನೆಯ ನಂತರ ನಂದನ.ಸೋಮಸ್ಥಲವೆಂಬುದು (ಪ್ರಕಟಿತ ಶಾಸನಪಾಠದಲ್ಲಿ ಈ ಸಾಲು ತ್ರುಟಿತವಾಗಿರವಂತೆ ಕಾಣಿಸಿದೆ) ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರುಸ್ಥಳವೆಂಬುದಾಗಿ ಖಚಿತಪಡಿಸಲಾಗಿದ್ದು, ಅರಕೆರೆಯೆಂಬುದು ಹಿಂದೆ ನಂದನಹೊಸೂರು ಸ್ಥಳಕ್ಕೆ ಸೇರಿದ ಇಂದಿನ ಬೇಚರಾಕ್ ಗ್ರಾಮವೆಂಬುದು ಸ್ಪಷ್ಟಪಡುತ್ತದೆ. ಮುಖ್ಯ ವಿಚಾರವೆಂದರೆ, ನಂದನಹೊಸೂರು ಗ್ರಾಮವಿರುವುದು ಇದೇ ತಾಲ್ಲೂಕಿನ ಪ್ರಸಿದ್ಧ ಶ್ರೀವೈಷ್ಣವಕ್ಷೇತ್ರವಾದ ಹೊರಕೆರೆದೇವರಪುರದ ಪಕ್ಕದಲ್ಲಿ. ಇದು ಉದ್ಭವ ನರಸಿಂಹಕ್ಷೇತ್ರ. ಇದನ್ನು ಲಕ್ಷ್ಮೀನರಸಿಂಹನೆಂದು ಕರೆದಿದ್ದರೆ, ಉತ್ಸವಮೂರ್ತಿಯನ್ನು ಲಕ್ಷ್ಮೀರಂಗನಾಥ ಸ್ವಾಮಿಯೆಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಹಿಂದೆ ನಡೆಯುತ್ತಿದ್ದಿರ ಬಹುದಾದ ರಾಮಾನುಜಕೂಟವನ್ನು ನೆನಪಿಸುವಂತೆ, ಈಗಲೂ ಹನ್ನೆರಡು ವರುಷ ಗಳಿಗೊಮ್ಮೆ ‘ಅನ್ನದಕೋಟೆ’ ಸೇವೆ ಈ ದೇವರಿಗೆ ಸಲ್ಲುತ್ತಿರುವುದು ಗಮನಾರ್ಹ.

ಆರನೇ ದೊರೆ ಚಿಕ್ಕಣ್ಣನಾಯಕನು ತನ್ನ ತಂದೆ-ತಾಯಿಯರಿಗೆ ಪುಣ್ಯವಾಗಲೆಂದು ೧೬೭೮ರಲ್ಲಿ ಹಿರಿಯೂರು ತಾಲ್ಲೂಕಿನ ತೊರೆ(ಸಾಲು)ನಾಗೇನಹಳ್ಳಿಯನ್ನು ರಾಮಾನುಜ ಕೂಟಕ್ಕೆ ಧಾರಾದತ್ತವಾಗಿ ಅರ್ಪಿಸುತ್ತಾನೆ (ಅದೇ, ಹಿರಿಯೂರು ೫೯). ಈ ಗ್ರಾಮವನ್ನು ದಾನವಾಗಿ ಸ್ವೀಕರಿಸುವವರು ತಿರುಪತಿ ಪೆದಜೀಯರೈಯ್ಯನವರು. ಹಾಗೆಯೇ, ತ್ರುಟಿತವಾಗಿರುವ ಎರಡನೇ ಶಾಸನವು (ಅದೇ, ದಾವಣಗೆರೆ ೧೬೦), ತಿರುವೆಂಗಳಾಚಾರ್ಯರಿಗೆ ಈ ನಾಯಕನು ಹಾಲುವರ್ತಿ ಗ್ರಾಮವನ್ನು ದಾನ ಮಾಡಿದುದನ್ನು ತಿಳಿಸುತ್ತದೆ. ಈ ನಾಯಕನು ಪೋಷಿಸಿದ ರಾಮಾನುಜಕೂಟದ ಬಗೆಗಾಗಲೀ, ಗ್ರಾಮಗಳನ್ನು ದಾನವಾಗಿ ಪಡೆದುಕೊಂಡ ಜೀಯರ್-ಆಚಾರ್ಯರ ಬಗೆಗಾಗಲೀ ಸರಿಯಾದ ವಿವರ ದೊರೆಯುವುದಿಲ್ಲ. ಆದರೆ ಶಾಸನದಲ್ಲಿ ಪ್ರಸ್ತಾಪ ಗೊಂಡಿರುವ ರಾಮಾನುಜಕೂಟವು ತಿರುಪತಿಯ ರಾಮಾನುಜಕೂಟವೇ ಆಗಿದ್ದು, ಅಲ್ಲಿಯವರೇ ಆಗಿದ್ದ ತಿರುಪತಿಯ ಪೆದಜೀಯರ್‌ರೇ ಅದರ ಮೇಲ್ವಿಚಾರಕರಾಗಿದ್ದಿರ ಬೇಕೆಂದು ಭಾವಿಸಬಹುದಾಗಿದೆ.

ವಿಜಯನಗರದಲ್ಲಿ ವೆಂಕಟಪತಿರಾಯನ ಆಳ್ವಿಕೆ ಮುಂದುವರೆದಿರುವಾಗ ಮೈಸೂರಿ ನಲ್ಲಿ ಒಡೆಯರ ಮನೆತನವು ಊರ್ಜಿತಗೊಳ್ಳುತ್ತಿರುತ್ತದೆ. ಶ್ರೀವೈಷ್ಣವ ಆಚಾರ್ಯರು, ಮಠಗಳು ಮತ್ತು ದೈವಗಳಿಗೆ ಈ ಮನೆತನದವರು ನಿಷ್ಠಾವಂತರಾಗಿದ್ದು, ಹಲವು ವಿಧದಲ್ಲಿ ಪೋಷಣೆ ನೀಡತೊಡಗುತ್ತಾರೆ. ಬೆಳಗೊಳದ ಜನಾರ್ದನಸ್ವಾಮಿ ಪಾಳು ದೇವಾಲಯಕ್ಕೆ ಆಗ್ನೇಯದಲ್ಲಿ ಬಾವಿಗೆ ಮುಚ್ಚಿರುವ ಕಲ್ಲಿನ ಮೇಲಿರುವ ೧೫೯೮ರ ಬರಹವು (ಅದೇ, ೬, ಶ್ರೀರಂಗಪಟ್ಟಣ ೭೧) ರಾಮಾನುಜಕೂಟದ ಬಗೆಗೆ ಪ್ರಸ್ತಾಪಿಸುತ್ತದೆ. ಈ ಶಾಸನ ಹೇಳುವಂತೆ, ವೆಂಕಟಪತಿರಾಯನ ಅಣ್ಣ ರಾಮರಾಜ ಯನ ಮಗ ತಿರುಮಲರಾಯನು ಮೈಸೂರು ಒಡೆಯರ ಮನೆತನಕ್ಕೆ ಸೇರಿದ ಚಾಮರಸ ಒಡೆಯನ ಮಗ ಬೆಟ್ಟದ ಚಾಮರಸ ಒಡೆಯನಿಗೆ ಸತ್ತಿಗನಹಳವನ್ನು ಕೊಡುಗೆಯಾಗಿ ನೀಡುತ್ತಾನೆ; ಹಾಗೂ ಚಾಮರಸ ಒಡೆಯನು ಆ ಗ್ರಾಮವನ್ನು ಮಹಾಜನರಿಂದ ಕ್ರಯವಾಗಿ ಪಡೆದ ಮಜ್ಜಿಗೆಪುರವಾದ ಶಂಕರಪುರ ಗ್ರಾಮವನ್ನು ಬೆಳಗೊಳದ ಜನಾರ್ದನ ದೇವಾಲಯದ ರಾಮಾನುಜಕೂಟಕ್ಕೆ ದಾನವಾಗಿ ನೀಡುತ್ತಾನೆ. ಈ ಶಾಸನವು ಜನಾರ್ದನದೇವರ ಸನ್ನಿದಿಯಲ್ಲಿ ೨೦ ಮಂದಿ ಶ್ರೀವೈಷ್ಣವರಿಗೆ, ೩೦ ಮಂದಿ ವೈದಿಕರಿಗೆ-ಒಟ್ಟು ೫೦ ಮಂದಿಗೆ ‘ರಾಮಾನುಜಕೂಟಛತ್ರ’ ನಡೆಯಲೋಸುಗ ಬಿಟ್ಟಂಥಾ ಕ್ಷೇತ್ರಗಳ ವಿವರವನ್ನೊಳಗೊಂಡಿದೆ.

ಮೈಸೂರು ಅರಮನೆಯ ಕೋಟೆಯೊಳಗಿನ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯವನ್ನು ೧೮೨೯ರಲ್ಲಿ ಕಟ್ಟಿಸಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್. ಈ ಸಂದರ್ಭದಲ್ಲಿ ಇವರು ದೇವರಿಗೆ ನವರತ್ನಗಳೆಂಬ ವಿಶಿಷ್ಟ ಸೇವೆಗಳನ್ನು ಸಲ್ಲಿಸಿದುದನ್ನು ಈ ದೇವಸ್ಥಾನದ ಮುಂದಿರುವ ಶಾಸನದಲ್ಲಿ (ಅದೇ, ೫, ಮೈಸೂರು ೩೭) ಹೇಳಿದೆ. ಈ ಮೂಲಕ ಕೃಷ್ಣರಾಜರು ಮಹತ್ಕಾರ್ಯವೊಂದನ್ನು ಮಾಡಿದರೆಂದು ಭಾವಿಸ ಲಾಗುತ್ತದೆ. ದೇವರ ಪ್ರತಿಷ್ಠಾಪನೆ, ಪೂಜೆ-ಪುನಸ್ಕಾರ ಇತ್ಯಾದಿಗಳಿಗೆಂದು ವೆಚ್ಚಮಾಡಲು ಈ ಒಡೆಯರು ವರ್ಷಂಪ್ರತಿ ೫೦೦೦ ಕಂಠೀರಾಯಿ ವರಹಗಳನ್ನು ನಿಷ್ಕರ್ಷೆ ಮಾಡುತ್ತಾರೆ. ಮುಖ್ಯಾಂಶವೆಂದರೆ, ಇದರಲ್ಲಿ ಶ್ರೀವೈಷ್ಣವರಿಗೆ ಭೋಜನ ಒದಗಿಸಲು ರಾಮಾನುಜಕೂಟವನ್ನು ವ್ಯವಸ್ಥೆ ಮಾಡಲಾಗಿದ್ದಿತು.

ಹಾಗೆಯೇ, ‘ಅಷ್ಟಗ್ರಾಮಗಳ ಕೈಪಿಯತ್ತು’ ಒದಗಿಸುವ ಮಾಹಿತಿಯ ಪ್ರಕಾರ (ಕಕೈ. ೨೦), ಮೈಸೂರು ಒಡೆಯರ ಕಾಲದಲ್ಲಿ ಅರಹೆನಸ್ಥಳಕ್ಕೆ ಸೇರಿದ ಕ್ಯಾತನಹಳ್ಳಿಯಲ್ಲಿ ರಾಮಾಂಜಕೂಟ(ರಾಮಾನುಜಕೂಟ)ವಿದ್ದ ಪ್ರಸ್ತಾಪ ಬರುತ್ತದೆ. ಇದಕ್ಕೆ ಬಿಟ್ಟ ಭೂದತ್ತಿಯು ಒಳಗೊಂಡಿದ್ದುದು ‘ಗದ್ದೆ ಖ ೪ || ’. ಇಲ್ಲಿಯ ಕ್ಯಾತನಹಳ್ಳಿಯಿರುವುದು ಮಂಡ್ಯಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ.