ಇದು ರಣಧೀರನನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಅವನ ಉತ್ಸಾಹಶಕ್ತಿಯ ಕತೆ. ಮೊದಲಿನ ಏಳು ದೃಶ್ಯಗಳಲ್ಲಿ ರಣಧೀರನ ಸುಳಿವಿಲ್ಲದಿದ್ದರೂ ಅನೇಕ ಶಕ್ತಿಗಳು ಒಂದು ಗೂಡಿ ಅವನನ್ನು ಮುಗಿಸಲು ಸಜ್ಜಾಗುವುದನ್ನು ಕಾಣುತ್ತೇವೆ. ರಣಧೀರನ ಹೊಸ ಆಡಳಿತ ವ್ಯವಸ್ಥೆಯಿಂದ ಅಸಮಾಧಾನಗೊಂಡ ಮನ್ನಮರಾಜಗೌಡ, ತಿರುಚನಾಪಳ್ಳಿಯ ಅರಸ ರಣಧೀರನಿಂದ ತನಗಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಕಳಿಸಿದ ಕರುವಿಯನ್‌ಹಾಗೂ ಆತನ ಜಟ್ಟಿಗಳು ತನ್ನ ಅಣ್ಣ ವೀರಮಲ್ಲನನ್ನು ಕೊಂದ ಹಗೆಯನ್ನು ತೀರಿಸಿಕೊಳ್ಳಲು ಸಮಯಕಾಯುತ್ತಿರುವ ಶೇಂದಲೈಮಲ್ಲ, ರಣಧೀರ ಪ್ರಬಲನಾಗುವುದನ್ನು ತಪ್ಪಿಸಿ ಅವನನ್ನು ಮುಗಿಸಲು ಬಿಜಾಪುರದಿಂದ ಕಳಿಸಲ್ಪಟ್ಟ ಹಮೀದಖಾನ, ಚಂದ್ರಗಿರಿಯಿಂದ ಇದೇ ಕೆಲಸಕ್ಕಾಗಿ ಬಂದಿರುವ ಜೀವನ್ನಪಂತ ಮುಂತಾದವರೆಲ್ಲ ಸೇರಿ ಹೇಗಾದರೂ ರಣಧೀರನನ್ನು ಕೊಲ್ಲಬೇಕೆಂದು ಹೊಂಚು ಹಾಕುತ್ತಿರುತ್ತಾರೆ. ಈ ಬೆಳವಣಿಗೆಗಳ ಜೊತೆಗೆ ವಿಕ್ರಮರಾಯನ ಆಪ್ತರಾದ ತುಂಗರಾಯ ಅಲಗರಾಜ, ರಣಧೀರನನ್ನು ಕೊಂದು ತಮ್ಮ ಸ್ವಾಮಿಭಕ್ತಿಯನ್ನು ಮೆರೆಯಬೇಕೆನ್ನುತ್ತಾರೆ. ಅರಮನೆಯ ಒಳವಿದ್ಯಮಾನಗಳು ಕೂಡ ಶತ್ರುಗಳಿಗೆ ಅನುಕೂಲವಾಗುವಂತೆ ಮಾರ್ಪಡುತ್ತವೆ. ರಣಧೀರನೊಮದಿಗೆ ಗರಡಿಯಲ್ಲಿದ್ದ ಬಸವಮಲ್ಲ ಗುಪ್ತದ್ರೋಹಿಯಾಗಿ ಈಗ ಅವನ ಸಜ್ಜೆವಳನಾಗಿ ವೈರಿಗಳಿಗೆ ಸಹಾಯಕನಾಗುತ್ತಾನೆ. ಈ ಎಲ್ಲ ಬೆಳವಣಿಗೆಗಳೂ ಮೊದಲಿನ ಏಳು ಪ್ರವೇಶಗಳಲ್ಲಿ ನಡೆಯುತ್ತವೆ. ತಂದೆ ಕೂಡಿಟ್ಟ ನಿಕ್ಷೇಪದೊರೆತು ರಣಧೀರ ಕಂಠೀರವ ನಾಣ್ಯವನ್ನು ಟಂಕಿಸಿ ಚಲಾವಣೆಗೆ ತರುತ್ತಾನೆ. ವೈರಿಗಳ ತಂತ್ರಗಳಿಗೆ ಅವನ ಸಂಗಡಿಗರು ಪ್ರತಿತಂತ್ರವನ್ನು ಹೂಡಿ ಅವರ ಯೋಜನೆಯನ್ನು ವಿಫಲಗೊಳಿಸುತ್ತಾರೆ. ಕೊನೆಗೊಮ್ಮೆ ರಣಧೀರನಿಗೂ ಅವನ ವಿರೋಧಿಗಳಿಗೂ ನೇರ ಸಂಘರ್ಷ ಏರ್ಪಡುತ್ತದೆ. ರಹಸ್ಯವಾಗಿ ತನನ್ನು ಕೊಲ್ಲಲು ಬಂದಿದ್ದ ಅವರನ್ನು ರಣಧೀರ ವಿಜಯನಾರಸಿಂಹ ಖಡ್ಗದ ನೆರವಿನಿಂದ ಸಂಹರಿಸುತ್ತಾನೆ. ಹೀಗೆ ವಿಜಯನಾರಸಿಂಹ ನಾಟಕದಲ್ಲಿ ರಣಧೀರ ಏಕಾಂಗ ವೀರತ್ವವನ್ನು ಮೆರೆಯುವ ಅವಕಾಶ ಕಲ್ಪಿಸಲಾಗಿದೆ. ಈ ಘರ್ಷಣೆಯಲ್ಲಿ ಅವನಿಗೇ ಜಯಲಭಿಸಿದ್ದರೂ ಮನ್ನಮಗೌಡ, ನಿರೀಶ ಮೊದಲಾದ ರಾಜಭಕ್ತರನ್ನು ಕಳೆದುಕೊಂಡ ದುಃಖ ಅವನಲ್ಲಡಗಿದೆ. ಜೊತೆಗೆ, ತನ್ನ ಜೊತೆ ಗರಡಿಯಾಳು ಬಸವಮಲ್ಲ ವಿಶ್ವಾಸದ್ರೋಹಿಯಾದುದು ಅವನಿಗೆ ಅಪಾರ ನೋವನ್ನು ತರುತ್ತದೆ.