. ಪ್ರಸ್ತಾವನೆ

ವರಮಾನವನ್ನು ಪ್ರಧಾನ ಮಾನದಂಡವನ್ನಾಗಿ ಮಾಡಿಕೊಂಡು ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಕ್ರಮಕ್ಕೆ ಪ್ರತಿಯಾಗಿ ಇಂದು ಅಭಿವೃದ್ಧಿಯನ್ನು ಜನರ ಧಾರಣಾ ಸಾಮರ್ಥ್ಯವನ್ನು ಆಧರಿಸಿ ಪರಿಭಾವಿಸಿಕೊಳ್ಳುವ ಕ್ರಮವು ರೂಢಿಗೆ ಬಂದಿದೆ (ಮೆಹಬೂಬ್ ಉಲ್ ಹಕ್ ೧೯೯೬, ಅಮರ್ತ್ಯಸೆನ್ ೨೦೦೦, ಯುಎನ್‌ಡಿಪಿ ೧೯೯೦) ಆದರೂ ಇಂದು ವಿಶ್ವಾದ್ಯಮತ ತಜ್ಞರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು (ವಾಷಿಂಗ್‌ಟನ್ ಕನ್ಸಸೆನ್ಸ್‌ಸ್) ಮತ್ತು ಸರ್ಕಾರಗಳು ಅಭಿವೃದ್ಧಿಯನ್ನು ಜಿಡಿಪಿಯಲ್ಲಿನ (ಒಟ್ಟು ರಾಷ್ಟ್ರೀಯ ಉತ್ಪನ್ನ ಅಥವಾ ರಾಷ್ಟ್ರೀಯ ವರಮಾನ) ಏರಿಕೆಯಲ್ಲಿ ಕಾಣುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ನಮ್ಮ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಡಾ. ಮಾಟೇಕ್ ಸಿಂಗ್ ಅಲೂವಾಲಿಯಾ, ಹಣಸಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಡಾ. ಕೌಶಿಕ್ ಬಸು, ಪ್ರಧಾನಮಂತ್ರಿ ಆರ್ಥಿಕ ಸಲಹೆಗಾರರ ಮಂಡಳಿಯ ಅಧ್ಯಕ್ಷರಾದ ಡಾ. ಸಿ. ರಂಗರಾಜನ್ ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಮುಂತಾದವರೆಲ್ಲ ಇಂದು ಜಿಡಿಪಿ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ, ವಿದೇಶಿ ಬಂಡವಾಳದ ಬಗ್ಗೆ, ವಿದೇಶಿ ತಂತ್ರಜ್ಞಾನದ ಬಗ್ಗೆ ಮಾತ್ರ ಸಲಹೆ ನೀಡುತ್ತಿದ್ದಾರೆ. ಅವರು ಜಿಡಿಪಿಯ ವಾರ್ಷಿಕ ಏರಿಕೆಯ ಪ್ರಮಾಣ ಶೇ. ೯ ರಷ್ಟಿರಬೇಕೋ ಅಥವಾ ಅದು ಎರಡಂಕಿಗಳನ್ನು ದಾಟಬೇಕೋ ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಂತೂ ಇನ್ನು ಮೂರು ವರ್ಷಗಳೊಳಗೆ ರಾಜ್ಯ ಬಜೆಟ್ಟಿನ ಗಾತ್ರವನ್ನು ‘ಒಂದು ಲಕ್ಷ ಕೋಟಿ’ಗೆ ಏರಿಸುವುದಾಗಿ ಸರ್ಕಾರ ಘೋಷಿಸಿದೆ. ಅವರಿಗೆ ಇದು ಅಭಿವೃದ್ಧಿಯಾಗಿದೆ. ಅಭಿವೃದ್ಧಿಯೆಂದರೆ ಇಲ್ಲಿ ಕೇವಲ ವರಮಾನದಲ್ಲಿನ ಏರಿಕೆಯಾಗಿದೆ. ಅಭಿವೃದ್ಧಿಯೆಂದರೆ ಸಂಪತ್ತನ್ನು ಗುಡ್ಡೆ ಹಾಕುವುದು ಎನ್ನುವಂತಾಗಿದೆ. ಕೈಗಾರೀಕರಣಕ್ಕೆ ಇಂದು ಕರ್ನಾಟಕವು ದೊಡ್ಡ ಪ್ರಮಾಣದ ಕಾರ್ಯಕ್ರಮ ಹಾಕಿಕೊಂಡಿದೆ. ಅದಕ್ಕೆ ಅಗತ್ಯವಾದ ಜಮೀನು ಪಡೆದುಕೊಳ್ಳಲು ಜನರಿಗೆ ಇನ್ನಿಲ್ಲದ ಆಮಿಷಗಳನ್ನು ತೊರಿಸಲಾಗುತ್ತಿದೆ. ‘ಜಮೀನು ನೀಡಿರಿ ಉದ್ಯೋಗ ಪಡೆಯಿರಿ’ ಎಂಬ ಘೋಷಣೆಯನ್ನು ನೀಡಲಾಗಿದೆ.

[1] ಇಲ್ಲಿ ಕೈಗಾರೀಕರಣವೇ ಅಭಿವೃದ್ಧಿಯೆನ್ನುವಂತಾಗಿದೆ. ಇದು ಸೀಮಿತವಾದ ಅಭಿವೃದ್ಧಿ ಪರಿಭಾವನೆಯಾಗಿದೆ. ಇಲ್ಲಿ ಅಭಿವೃದ್ಧಿಯ ಸಾಧನಗಳನ್ನೇ ಅಭಿವೃದ್ಧಿಯೆಂದು ಬಿಂಬಿಸಲಾಗುತ್ತಿದೆ. ಈ ಅಭಿವೃದ್ಧಿ ಪ್ರಣಾಳಿಕೆಗೆ ವಿರುದ್ಧವಾಗಿ ಅಥವಾ ಅದಕ್ಕೆ ಪ್ರತಿಯಾಗಿ ಹಕ್ ಮತ್ತು ಸೆನ್ ಅವರು ಅಭಿವೃದ್ಧಿಯನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಮತ್ತು ಮಾಪನ ಮಾಡುವ ಕ್ರಮಗಳ ಬಗ್ಗೆ ಸಿದ್ಧಾಂತಗಳನ್ನು ರೂಪಿಸಿದ್ದಾರೆ.

‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ (೨೦೦೦) ಎಂಬ ತನ್ನ ಪ್ರಸಿದ್ಧ ಕೃತಿಯನ್ನು ಅಮರ್ತ್ಯಸೆನ್ ಹೀಗೆ ಆರಂಭಿಸುತ್ತಾನೆ. ‘ಜನರು ಅನುಭವಿಸುವ ನಿಜವಾದ ಸ್ವಾತಂತ್ರ್ಯಗಳ ವ್ಯಾಪ್ತಿಯನ್ನು ವಿಸ್ತೃತಗೊಳಿಸುವ ಪ್ರಕ್ರಿಯೆಯೇ ಅಭಿವೃದ್ಧಿಯೆಂದು ಪ್ರಸ್ತುತ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಅಭಿವೃದ್ಧಿಯನ್ನು ‘ಒಟ್ಟು ರಾಷ್ಟ್ರೀಯ ಉತ್ಪನ್ನದ ವರ್ಧನೆ’, ‘ಜನರ ತಲಾ ವರಮಾನದಲ್ಲಿನ ಏರಿಕೆ’, ‘ಕೈಗಾರೀಕರಣ’, ‘ತಂತ್ರಜ್ಞಾನದಲ್ಲಿನ ಕ್ರಾಂತಿ’, ‘ಸಾಮಾಜಿಕ ಆಧುನೀಕರಣ’ ಮುಂತಾದ ರೀತಿಯಲ್ಲಿ ನಿರ್ವಚಿಸುವ ಕ್ರಮಗಳಿಗಿಂತ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಎಂಬ ನಿರ್ವಚನವು ಭಿನ್ನವಾಗಿದೆ’ ಮುಂದುವರಿದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿನ ಏರಿಕೆ ಅಥವಾ ತಲಾ ವರಮಾನದಲ್ಲಿ ಏರಿಕೆಯು ಅಭಿವೃದ್ಧಿಗೆ ಬಹಳ ಮುಖ್ಯ ಆದರೆ ಸಮಾಜದಲ್ಲಿ ಜನರು ಅನುಭವಿಸುವ ಸ್ವಾತಂತ್ರ್ಯಗಳನ್ನು ವಿಸ್ತೃತಗೊಳಿಸುವ ಪ್ರಕ್ರಿಯೆಯ ‘ಸಾಧನ’ವಾಗಿ ಮಾತ್ರ ಅವು ಮುಖ್ಯ. ಅದೇ ರೀತಿಯಲ್ಲಿ ಕೈಗಾರೀಕರಣ ಅಥವಾ ತಂತ್ರಜ್ಞಾನದಲ್ಲಿನ ಕ್ರಾಂತಿ ಅಥವಾ ಸಾಮಾಜಿಕ ಆಧುನೀಕರಣ ಮುಂತಾದವು ಜನರ ಸ್ವಾತಂತ್ರ್ಯಗಳ ವ್ಯಾಪ್ತಿಯನ್ನು ಖಚಿತವಾಗಿ ವಿಸ್ತೃತಗೊಳಿಸುತ್ತವೆ. ಆದರೆ ಸ್ವಾತಂತ್ರ್ಯವೆನ್ನುವುದು ಅನೇಕ ಇತರೆ ಸಂಗತಿಗಳ ಮೇಲೂ ಅವಲಂಬಿಸಿದೆ. ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತೃತಗೊಳಿಸುವುದೇ ಅಭಿವೃದ್ಧಿ ಎಂಬ ನಿರ್ವಚನವನ್ನು ಒಪ್ಪಿಕೊಂಡು ಬಿಟ್ಟರೆ ಆಗ ಅಭಿವೃದ್ಧಿಯ ಸಾಧನಗಳಿಗೆ ಅಥವಾ ಉಪಕರಣಗಳಿಗೆ ನೀಡುವ ಆದ್ಯತೆಯು ಕಡಿಮೆಯಾಗಿ ಅದರ ಗುರಿಗಳು ಮುಖ್ಯವಾಗಿ ಬಿಡುತ್ತವೆ ಎಂದು ಹೇಳಿದ್ದಾನೆ (ಪುಟ : ೦೩)

ವರಮಾನದ ಲಭ್ಯತೆಗಿಂತ, ಅದರ ಗಾತ್ರಕ್ಕಿಂತ, ಅದರ ವಾರ್ಷಿಕ ವರ್ಧನೆಗಿಂತ ಲಭ್ಯವಿರುವ ಅವಕಾಶಗಳನ್ನು ಧಾರಣೆ ಮಾಡಿಕೊಳ್ಳುವ ಜನರ ಸಾಮರ್ಥ್ಯದ ವರ್ಧನೆಯನ್ನು ಸೆನ್ ಅಭಿವೃದ್ಧಿಯೆಂದು ಕರೆದಿದ್ದಾನೆ. ಈ ಧಾರಣಾ ಸಾಮರ್ಥ್ಯವು ಜನರಿಗೆ ಸಾಕ್ಷರತೆಯಿಂದ, ಶಿಕ್ಷಣದಿಂದ, ಆರೋಗ್ಯದಿಂದ, ಆಹಾರದ ಹಕ್ಕಿನಿಂದ, ಲಿಂಗ ಸಮಾನತೆಯಿಂದ, ಸ್ವಾತಂತ್ರ್ಯದಿಂದ ಪ್ರಾಪ್ತವಾಗುತ್ತದೆ. ಅಂದ ಮೇಲೆ ಅಭಿವೃದ್ಧಿಯನ್ನು ಏಕಮಾನದಲ್ಲಿ ಅಳೆಯುವುದು ಸರಿಯಾದ ಕ್ರಮವಾಗುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ವರಮಾನ ವರ್ಧನಾ ಅಭಿವೃದ್ಧಿ ಪ್ರಣಾಳಿಕೆ ಧಾರೆಗೆ ಪ್ರತಿಯಾಗಿ ಹಕ್ ಮತ್ತು ಸೆನ್ ರೂಪಿಸಿದ್ದ ಪ್ರಣಾಳಿಕೆಯನ್ನು ‘ಮಾನವ ಅಭಿವೃದ್ಧಿ’ ಎಂದು ಕರೆಯಲಾಗಿದೆ. ಆದರೆ ಇಂದು ಜಗತ್ತಿನಾದ್ಯಮತ ಸರ್ಕಾರಗಳು ಮತ್ತು ಜನರು ಮಾರುಕಟ್ಟೆ ಪ್ರಣೀತ ಅಭಿವೃದ್ಧಿ ಸಿದ್ಧಾಂತಕ್ಕೆ ಮರಳಾಗಿ ಬಿಟ್ಟಿದ್ದಾರೆ. ಅಭಿವೃದ್ಧಿಯ ಜವಾಬುದಾರಿಯನ್ನು ಮಾರುಕಟ್ಟೆ ಶಕ್ತಿಗಳಿಗೆ ವಹಿಸಿಕೊಡುವುದರ ಬಗ್ಗೆ ತಜ್ಞರು ಇಂದು ಒತ್ತಾಯಿಸುತ್ತಿದ್ದಾರೆ. ಈ ಮಾರುಕಟ್ಟೆ ಮೂಲಭೂತವಾದಿತ್ವವು ಬರ್ಲಿನ್ ಗೋಡೆಯನ್ನು ಒಡೆದ ೧೯೮೯ರ ನಂತರ ತೀವ್ರಗತಿಯಲ್ಲಿ ಪ್ರವರ್ಧನಮಾನಕ್ಕೆ ಬಂದಿತು. ಆದರೆ ಅದೂ ಕೂಡ ೨೦೦೮ರಲ್ಲಿ ಬಿಕ್ಕಟ್ಟಿಗೆ ಸಿಕ್ಕಿಬಿಟ್ಟಿತು. ವಿಶ್ವಾದ್ಯಂತ ೨೦೦೮ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಅದು ಮಾರುಕಟ್ಟೆ ವೈಫಲ್ಯವಾಗಿತ್ತು. ಈ ಪ್ರಣಾಳಿಕೆಯಲ್ಲಿ ಜನರು ಅಮುಖ್ಯವಾಗಿ ಸರಕು ಸರಂಜಾಮುಗಳೇ ಅಭಿವೃದ್ಧಿ ಎನಿಸಿಕೊಳ್ಳುತ್ತವೆ. ಈ ಪ್ರಣಾಳಿಕೆಯನ್ನು ಇಂದು ‘ನವ-ಉದಾರವಾದಿ ಅಭಿವೃದ್ಧಿ ಪ್ರಣಾಳಿಕೆ’ ಯೆಂದು ಕರೆಯಲಾಗಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗೆ ಹೋಗುವ ಮೊದಲು ವರಮಾನ ಸಂಬಂಧಿ ಅಭಿವೃದ್ಧಿ ಪ್ರಣಾಳಿಕೆ, ಮಾನವ ಅಭಿವೃದ್ಧಿ ಮತ್ತು ನವ ಉದಾರವಾದಿ ಅಭಿವೃದ್ಧಿ ಪ್ರಣಾಳಿಕೆಗಳ ನಡುವೆ ಇರುವ ಭಿನ್ನತೆಯನ್ನು ತಿಳಿದುಕೊಳ್ಳುವುದು ಲೇಸು.

ಇಲ್ಲಿ ಈ ಮೂರು ಪ್ರಣಾಳಿಕೆಗಳ ನಡುವಿನ ಭಿನ್ನತೆಗಳನ್ನು ಗುರುತಿಸಲಾಗಿದೆ. ಈ ಮೂರರಲ್ಲಿ ನಮ್ಮ ಸಂದರ್ಭದಲ್ಲಿ ಮಾನವ ಅಭಿವೃದ್ಧಿ ಪ್ರಣಾಳಿಕೆಯು ಅತ್ಯಂತ ಪ್ರಸ್ತುತವೆಂದು ಹೇಳಬಹುದಾಗಿದೆ. ಏಕೆಂದರೆ ಅದು ಜನರನ್ನು ಒಳಗೊಳ್ಳುವ ಪ್ರಣಾಳಿಕೆಯಾಗಿದೆ. ಇಂದು ಈ ಎಲ್ಲ ಮೂರು ಅಭಿವೃದ್ಧಿ ಪ್ರಣಾಳಿಕೆಗಳು ಪ್ರಚಲಿತದಲ್ಲಿವೆ.

ಈ ಮೂರು ಅಭಿವೃದ್ಧಿ ವಿಚಾರಧಾರೆಗಳು ಯಾವುವೆಂದರೆ ೧. ಸಾಂಪ್ರದಾಯಿಕ ಅಭಿವೃದ್ಧಿ ಪ್ರಣಾಳಿಕೆ, ೨. ಮಾನವ ಅಭಿವೃದ್ಧಿ ಪ್ರಣಾಳಿಕೆ ಮತ್ತು ೩. ನವ-ಉದಾರವಾದಿ ಅಭಿವೃದ್ಧಿ ಪ್ರಣಾಳಿಕೆ. ಈ ಮುರು ಪ್ರಣಾಳಿಕೆಗಳ ನಡುವೆ ಅನೇಕ ಭಿನ್ನತೆಗಳಿವೆ. ಈ ಭಿನ್ನತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ನಮಗೆ ಮಾನವ ಅಭಿವೃದ್ಧಿ ಪ್ರಣಾಳಿಕೆಯ ಮಹತ್ವವು ತಿಳಿಯುತ್ತದೆ.

.. ವಿವಿಧ ಅಭಿವೃದ್ಧಿ ಪ್ರಣಾಳಿಕೆಗಳ ನಡುವಿನ ಭಿನ್ನತೆಗಳು

. ಅಭಿವೃದ್ಧಿ ವ್ಯಾಖ್ಯೆ

 • ಮೊದಲನೆಯ ಧಾರೆಯಲ್ಲಿ ಅಭಿವೃದ್ಧಿಯನ್ನು ವರಮಾನ ವರ್ಧನೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಅದರ ಪ್ರಕಾರ ಎರಡು ಕಾಘಟ್ಟಗಳ ನಡುವೆ ದೇಶ ಪ್ರದೇಶವೊಂದರ ವರಮಾನದಲ್ಲಿ ಉಂಟಾಗುವ ಏರಿಕೆಯ ಗತಿಯನ್ನು ನಡೆಯನ್ನು ಮತ್ತು ಪ್ರಮಾಣವನ್ನು ಅಭಿವೃದ್ಧಿಯೆಂದು ನಿರ್ವಚಿಸಲಾಗಿದೆ.
 • ಆದರೆ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಜನರ ಧಾರಣಾ ಸಾಮರ್ಥ್ಯವನ್ನು ವರ್ಧಿಸುವ ಪರಿಯನ್ನು ಅಭಿವೃದ್ಧಿಯೆಂದು ಪರಿಗಣಿಸಲಾಗಿದೆ.
 • ಮೂರನೆಯ ನವ ಉದಾರವಾದಿ ಮಾರುಕಟ್ಟೆ ಪ್ರಣೀತ ವಿಚಾರಧಾರೆಯಲ್ಲಿ ಮೊದಲನೆಯ ಧಾರೆಯಲ್ಲಿದ್ದಂತೆ ವರಮಾನದ ಪ್ರಮಾಣದಲ್ಲುಂಟಾಗುವ ಬೆಳವಣಿಗೆಯನ್ನು ಮತ್ತು ಮಾರುಕಟ್ಟೆ ಶಕ್ತಿಗಳಿಗೆ ಇರುವ ಮುಕ್ತ ಅವಕಾಶ ಹಾಗೂ ಅವುಗಳ ಅನಿರ್ಭಂದಿತ ಬೆಳವಣಿಗೆಯನ್ನು ಅಭಿವೃದ್ಧಿಯೆಂದು ಕರೆಯಲಾಗಿದೆ.

. ಜನರನ್ನು ಹೇಗೆ ಪರಿಭಾವಿಸಿಕೊಳ್ಳಲಾಗಿದೆ?

 • ಜನರನ್ನು ಸಂಪನ್ಮೂಲವೆಂದು (ಮಾನವ ಸಂಪನ್ಮೂಲ), ಅಭಿವೃದ್ದಿ ಸಾಧನವೆಂದು ಮೊದಲನೆಯ ಧಾರೆಯಲ್ಲಿ ಪರಿಗಣಿಸಿಕೊಳ್ಳಲಾಗಿದೆ. ಜನರನ್ನು ಸಂಪನ್ಮೂಲದ ಮಟ್ಟಕ್ಕೆ ಇಲ್ಲಿ ಕುಬ್ಜಗೊಳಿಸಲಾಗಿದೆ. ಜಲಸಂಪನ್ಮೂಲ, ಅರಣ್ಯ ಸಂಪನ್ಮೂಲ, ಭೂಸಂಪನ್ಮೂಲ ಮುಂತಾದವಿದ್ದಂತೆ ಮಾನವ ಸಂಪನ್ಮೂಲ. ಅದು ಒಂದು ಉಪಕರಣ.
 • ಆದರೆ ಎರಡನೆಯ ಧಾರೆಯಲ್ಲಿ ಜನರು ಅಭಿವೃದ್ಧಿ ಮೂಲಧಾತುಗಳು ಮತ್ತು ಅವರು ಅದರ ಗುರಿ. ಅಂದರೆ ಇಲ್ಲಿ ಜನರು ಅಭಿವೃದ್ಧಿಯ ಸಾಧನ ಮತ್ತು ಸಾಧ್ಯ. ಜನರು ಅಭಿವೃದ್ಧಿಯ ಸಂಪನ್ಮೂಲವೂ ಹೌದು ಮತ್ತು ಅವರು ಅದರ ಹಕ್ಕುದಾರರು ಹೌದು ಹಾಗೂ ಅದರ ಕರ್ತೃಗಳು ಹೌದು.
 • ಮೊದಲನೆಯದರಲ್ಲಿದ್ದಂತೆ ಇಲ್ಲಿಯೂ ಜನರನ್ನು ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲವೆಂದು ಬಗೆಯಲಾಗಿದೆ. ಈ ಕಾರಣಕ್ಕೆ ಅಮರ್ತ್ಯಸೆನ್ ಮೊದಲನೆಯ ಮತ್ತು ಮೂರನೆಯ ಪ್ರಣಾಳಿಕೆಯನ್ನು ‘ಉಪಕರಣವಾದಿ’ ಪ್ರಣಾಳಿಕೆಯೆಂದು ಕರೆದಿದ್ದಾನೆ.

ಎರಡನೆಯ ಪ್ರಣಾಳಿಕೆಯು ಉಪಕರಣವಾದಿಯೂ ಮತ್ತು ಅಂತರ್ಗತವಾಗಿಯೂ ಆಗಿದೆ.

. ಅಭಿವೃದ್ಧಿಯನ್ನು ಅಳೆಯುವ ಮಾಪನ ಯಾವುದು?

 • ಇಲ್ಲಿ ವರಮಾನವು ಅಭಿವೃದ್ಧಿಯನ್ನು ಅಳೆಯುವ ಏಕಮಾನ ಮಾಪನವಾಗಿದೆ. ಈ ಪ್ರಣಾಳಿಕೆಯಲ್ಲಿ ವರಮಾನದ ವರ್ಧನೆಯೇ ಅಭಿವೃದ್ಧಿಯ ಮಾಪನ.
 • ಆದರೆ ಎರಡನೆಯ ಧಾರೆಯಲ್ಲಿ ಅಭಿವೃದ್ಧಿಯನ್ನು ಬಹುಮುಖಿಧಾರೆಯೆಂದು ಪರಿಭಾವಿಸಿಕೊಂಡು ಅದನ್ನು ಆರೋಗ್ಯಮಟ್ಟ, ಶೈಕ್ಷಣಿಕ ಸಾಧನೆ (ಸಾಕ್ಷರತೆ ಮತ್ತು ದಾಖಲೀಕರಣ) ಮತ್ತು ತಲಾ ವರಮಾನಗಳನ್ನೊಳಗೊಂಡ ಮೂರು ಸೂಚಿಗಳ ಸಂಯುಕ್ತ ಸೂಚ್ಯಂಕವನ್ನು ಆಧರಿಸಿ ಅಳೆಯಲಾಗುತ್ತದೆ.
 • ಮೊದಲನೆಯದರಲ್ಲಿ ಇದ್ದಂತೆ ಇಲ್ಲಿಯೂ ಸಹ ಅಭಿವೃದ್ಧಿಯನ್ನು ವರಮಾನವೆಂಬ ಏಕಮಾನ ಸೂಚಿಯನ್ನು ಆಧರಿಸಿ ಅಳೆಯಲಾಗುತ್ತದೆ. ಮಾರುಕಟ್ಟೆಯು ಮುಕ್ತವಾಗಿದೆಯೋ ಇಲ್ಲವೋ ಎಂಬುದು ಇಲ್ಲಿನ ಅಭಿವೃದ್ಧಿ ಮಾಪನದ ನಿಕಷಒರೆಗಲ್ಲಾಗಿದೆ.

ಮೊದಲನೆಯ ಮತ್ತು ಮೂರನೆಯ ಪ್ರಣಾಳಿಕೆಗಳಲ್ಲಿ ಜಿಡಿಪಿಯು ಅಭಿವೃದ್ಧಿಯನ್ನು ಅಳೆಯುವ ಮಾಪನವಾದರೆ ಎರಡನೆಯ ಪ್ರಣಾಳಿಕೆಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕ (ಎಚ್‌ಡಿಐ) ವು ಅಭಿವೃದ್ಧಿಯ ಮಾಪನವಾಗಿದೆ. ಮೊದಲನೆಯದು (ಜಿಡಿಪಿ) ಏಕಘಟಕ ಮಾಪನವಾದರೆ ಎರಡನೆಯದು (ಎಚ್‌ಡಿಐ) ಸಂಯುಕ್ತ ಮಾಪನವಾಗಿದೆ.

. ಲಿಂಗ ಸಂಬಂಧಿ ನೆಲೆಗಳು

 • ಬಹಳ ಸರಳವಾಗಿ ಹೇಳುವುದಾದರೆ ಇದು ಲಿಂಗ ನಿರಪೇಕ್ಷ ಪ್ರಣಾಲಿಕೆಯಾಗಿದೆ. ಇಲ್ಲಿ ಮಹಿಳೆಯರ ಅಭಿವೃದ್ಧಿ ಪ್ರಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಗುರುತಿಸುವುದಿಲ್ಲ. ಮಹಿಳೆಯರನ್ನು ಜೈವಿಕ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಅವರು ಇಲ್ಲಿ ಇದ್ದಾರೆ ಅಷ್ಟೆ.
 • ಇದು ಲಿಂಗಸ್ಪಂದಿ ವಿಚಾರಧಾರೆಯಾಗಿದೆ. ಇಲ್ಲಿ ಮಹಿಳೆಯರ ಅಭಿವೃದ್ಧಿ ಕಾಣಿಕೆಯನ್ನು ಪರಿಮಾಣಾತ್ಮಕವಾಗಿ ಮಾಪನ ಮಾಡಲಾಗುತ್ತದೆ. ಮಹಿಳೆಯನ್ನು ಇಲ್ಲಿ ಸಾಮಾಜಿಕ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಮಹಿಳೆಯರ ಅಭಿವೃದ್ಧಿ ಸಾಧನೆಯನ್ನು ಅಳೆಯಲು ‘ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ’ವೆಂಬ (ಜಿಡಿಐ) ಮಾಪನವನ್ನು ರೂಪಿಸಲಾಗಿದೆ.
 • ಇಲ್ಲಿ ಮಹಿಳೆಯರು ಅಭಿವೃದ್ಧಿ ಪ್ರಕ್ರಿಯೆಯ ಉಪಾದಿ ಅಥವಾ ಅನುಬಂಧ. ಅವರ ಅಭಿವೃದ್ದಿ ಪಾತ್ರವನ್ನು ನಿರ್ಲಕ್ಷಿಸಲಾಗಿದೆ.

. ವರಮಾನದ ಪ್ರಸರಣ

 • ಏರಿಕೆಯಾದ ವರಮಾನವು ತನ್ನಷ್ಟಕ್ಕೆ ತಾನೆ ಸಹಜವಾಗಿ ಮೇಲಿನಿಂದ ಕೆಳಗೆ ಹರಿದು ಬರುತ್ತದೆಯೆಂದು ಇಲ್ಲಿ ಪ್ರತಿಪಾದಿಸಲಾಗಿದೆ (ಇದನ್ನು ಟ್ರಿಕಲ್ ಡೌನ್ ಅರ್ಥಶಾಸ್ತ್ರವೆಂದು ಕರೆಯಲಾಗಿದೆ)
 • ಆದರೆ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ಏರಿಕೆಯಾದ ವರಮಾನವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಉದ್ದೇಶಪೂರ್ವವಾಗಿ ಕೆಳಮಟ್ಟಿದಲ್ಲಿರುವ ಜನವವರ್ಗಕ್ಕೆ, ಹಿಂದುಳಿದಿರುವ ಪ್ರದೇಶಗಳಿಗೆ ಒದಗುವಂತೆ ಮಾಡಬೇಕಾಗುತ್ತದೆ.
 • ಇಲ್ಲಿ ಮಾರುಕಟ್ಟೆ ಶಕ್ತಿಗಳು ವರಮಾನವು ಯಾರಿಗೆ ಮತ್ತು ಎಷ್ಟು ದೊರೆಯಬೇಕು ಎಂಬುದನ್ನು ನಿರ್ಧರಿಸುತ್ತವೆ. ಮಾರುಕಟ್ಟೆಯು ವರಮಾನ ಪ್ರಸರಣದ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

. ಜನರು ಅಭಿವೃದ್ಧಿಯ ವಸ್ತುವೋ ಅಥವಾ ಅದರ ಗುರಿಯೋ?

 • ಜನರನ್ನು ಇಲ್ಲಿ ಕೇವಲ ಅಭಿವೃದ್ಧಿಯ ವಸ್ತುವೆಂದು (ಅಬ್ಜಕ್ಟ್) ಮಾತ್ರ ಪರಿಭಾವಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಇದನ್ನು ಸರಕು ಸರಂಜಾಮು ಸಿದ್ಧಾಂತವೆಂದು ಅಮರ್ತ್ಯಸೆನ್ ಕರೆಯುತ್ತಾನೆ.
 • ಆದರೆ ಇಲ್ಲಿ ಜನರನ್ನು ಅಭಿವೃದ್ಧಿಯ ವಸ್ತುವೆಂದೂ (ಅಬ್ಜಕ್ಟ್) ಮತ್ತು ಅವರು ಅದರ ಕರ್ತೃಗಳೆಂದು (ಏಜೆಂಟ್ಸ್) ಹಾಗೂ ಅದನ್ನು ಅನುಭವಿಸುವ ವ್ಯಕ್ತಿಗಳೆಂದು (ಸಬ್ಜೆಕ್ಟ್) ಪರಿಭಾವಿಸಿಕೊಳ್ಳಲಾಗಿದೆ. ಜನರು ಇಲ್ಲಿನ ಮೂಲಕಧಾತು
 • ನವ ಉದಾರವಾದಿ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಜನರು ಅಭಿವೃದ್ಧಿಯ ವಸ್ತುಗಳು ಮಾತ್ರ. ಇಲ್ಲಿ ಜನರು ಅಭಿವೃದ್ಧಿಯನ್ನು ಸ್ವೀಕರಿಸುವವರೇ ವಿನಾ ಅಭಿವೃದ್ಧಿಯ ಕರ್ತೃಗಳಲ್ಲ. ಜನರು ಇಲ್ಲಿ ಅನುಷಂಗಿಕ.

. ಅಭಿವೃದ್ಧಿಯ ವ್ಯಾಪ್ತಿ

 • ಅಭಿವೃದ್ಧಿಯನ್ನು ಕೇವಲ ಆರ್ಥಿಕ ಸಂಗತಿಯೆಂದು ಪರಿಗಣಿಸುವುದರಿಂದ ಅಲ್ಲಿ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳಿಗೆ ಯಾವುದೇ ಪಾತ್ರವಿರುವುದಿಲ್ಲ. ಅಭಿವೃದ್ಧಿಯು ಸಾರಸಗಟಾಗಿ ಆರ್ಥಿಕ ಕ್ರಿಯೆಯಾಗಿದೆ. ಅದನ್ನು ಆರ್ಥಿಕ ಅಭಿವೃದ್ಧಿಯೆಂದು ಕರೆಯಲಾಗಿದೆ.
 • ಮಾನವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯನ್ನು ಬಹುಮುಖಿ ಕ್ರಿಯೆಯೆಂದು ಪರಿಗಣಿಸುವುದರಿಂದ ಅಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳಿಗೆ ನಿರ್ಣಾಯಕ ಪಾತ್ರವಿರುತ್ತದೆ.
 • ನವ ಉದಾರವಾದಿ ಅಭಿವೃದ್ದಿ ಸಿದ್ಧಾಂತದಲ್ಲಿ ಅಭಿವೃದ್ಧಿಯು ಸಂಪೂರ್ಣವಾಗಿ ಆರ್ಥಿಕ ಜಗತ್ತಿಗೆ ಸೇರಿದ ಸಂಗತಿಯಾಗಿದೆ. ಅಲ್ಲಿ ಬಂಡವಾಳಕ್ಕೆ, ಉಲಿತಾಯಕ್ಕೆ ಬಡ್ಡಿಗೆ, ಉತ್ಪಾದನೆಗೆ, ಅನುಭೋಗಕ್ಕೆ, ವರಮಾನಕ್ಕೆ ಮತ್ತು ಮಾರುಕಟ್ಟೆಗೆ ಪರಮ ಸ್ಥಾನ ದೊರೆಯುತ್ತದೆ. ಮಾರುಕಟ್ಟೆ ಪೂರೈಕೆ – ಮಾರುಕಟ್ಟೆ ಬೇಡಿಕೆಗಲು ಎಲ್ಲವನ್ನು ನಿರ್ಧರಿಸುವ ಶಕ್ತಿಗಳಾಗಿವೆ. ಮಾರುಕಟ್ಟೇತರ ಸಂಗತಿಗಳು, ಉದಾಹರಣೆಗೆ ಮಾನವ ಹಕ್ಕುಗಳು, ಸ್ವಾತಂತ್ರ್ಯ, ಕುಟುಂಬದೊಳಗಿನ ವರಮಾನದ ಹಂಚಿಕೆ, ಶಿಕ್ಷಣ, ಆರೋಗ್ಯ ಮುಂತಾದ ಸಂಗತಿಗಳು ಇದರ ವ್ಯಾಪ್ತಿಗೆ ಸೇರುವುದಿಲ್ಲ.

. ಅಖಂಡತೆಯ ಸೈದ್ಧಾಂತಿಕ ನೆಲೆಗಳು

 • ಸಾಂಪ್ರದಾಯಿಕ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಆರ್ಥಿಕ ಸಂಗತಿಗಳನ್ನು ಅಖಂಡ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಆರ್ಥಿಕ ಸಂಗತಿಯನ್ನು ಇಡೀ ಆರ್ಥಿಕತೆಗೆ ಸಂಬಂಧಿಸಿದಂತೆ ನೋಡಲಾಗುತ್ತದೆ. ಉದಾಹರಣೆಗೆ ಜನರ ಸಾಕ್ಷರತೆಯನ್ನು ಇಡೀ ಆರ್ಥಿಕತೆಗೆ ಸಂಬಂಧಿಸಿದಂತೆ ಪರಿಭಾವಿಸಿಕೊಳ್ಳುವುದರಿಂದ ಅಲ್ಲಿ ಸಾಕ್ಷರತೆಯ ಲಿಂಗಸಂಬಂಧಿ ಅಸಮಾನತೆಗಳು, ಅದರ ಗ್ರಾಮೀಣ ನಗರ ಅಸಮಾನತೆಗಳು, ಅದರ ಪ್ರಾದೇಶಿಕ ಭಿನ್ನತೆಗಳು, ಜಾತಿ ಸಂಬಂಧಿ ತಾರತಮ್ಯಗಳು ಮುಂತಾದವುಗಳು ಇಲ್ಲಿ ಮೂಲೆ ಗುಂಪಾಗಿ ಬಿಡುತ್ತವೆ.
 • ಆದರೆ ಮಾನವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಆಥರ್ಧಿಕಸಂಗತಿಗಳನ್ನು ಅಖಂಡವಾಗಿ ನೋಡುವುದಕ್ಕೆ ಪ್ರತಿಯಾಗಿ, ಅವುಗಳನ್ನು ಇಡಿಯಾಗಿ ನೋಡುವುದಕ್ಕೆ ಪ್ರತಿಯಾಗಿ ಇಲ್ಲಿ ಅವುಗಳನ್ನು ಬಿಡಿ ಬಿಡಿಯಾಗಿ ನೋಡಲಾಗುತ್ತದೆ. ಸಾಕ್ಷರತೆಗೆ ಬಂದಾಗ ಇಲ್ಲಿ ಅದರ ಗ್ರಾಮೀಣ ನಗರ ನೆಲೆಗಳು, ಪುರುಷ-ಮಹಿಳೆ ಭಿನ್ನತೆಗಳು, ಅದರ ಪ್ರಾದೇಶಿಕ ಅಸಮಾನತೆಗಳು, ಜಾತಿ ಸಂಬಂಧಿ ತಾರತಮ್ಯಗಳು (ಶಿಷ್ಯ – ಪರಿಶಿಷ್ಟ) ಮುಂತಾದವುಗಳು ಮುಖ್ಯವಾಗುತ್ತವೆ.
 • ನವ ಉದಾರವಾದಿ ಪ್ರಣಾಳಿಕೆಯಲ್ಲಿ ಪ್ರತಿಯೊಂದು ಸಂಗತಿಯನ್ನು ಅಖಂಡವಾಗಿ ನೋಡಲಾಗತ್ತದೆ. ಇಲ್ಲಿ ಸಂಗತಿಗಳನ್ನು ಬಿಡಿಸಿ ನೋಡುವ ಕ್ರಮವಿಲ್ಲ. ಆರ್ಥಿಕ ನೀತಿಯನ್ನು ಸಹ ಹೀಗೆ ಅಕಂಡವಾಗಿ ಪರಿಭಾವಿಸಿ ಕೊಳ್ಳಲಾಗುತ್ತದೆ.

ಆದರೆ ನಮ್ಮ ಪ್ರಶ್ನೆಯೆಂದರೆ ಸಮಾಜ ಅಖಂಡವಾಗಿಲ್ಲದಾಗ ಅಭಿವೃದ್ಧಿಯು ಅಖಂಡವಾಗಿರಲು ಸಾಧ್ಯವಿಲ್ಲ. ಅಖಂಡವಾದಿ ಪ್ರಣಾಳಿಕೆಯಲ್ಲಿ ಬಿಡಿಸಿ ಹೇಳುವುದಕ್ಕಿಂತ ಬಚ್ಚಿಡುವ ಸಂಗತಿಗಳು ಅಧಿಕ. ಉದಾಹರಣೆಗೆ ಕರ್ನಾಟಕದಲ್ಲಿ ಸಾಕ್ಷರತೆಯು ಶೇ. ೬೬.೪ (೨೦೦೧) ರಷ್ಟಾಗಿದ್ದರೆ ಅದನ್ನು ಮಹಿಳೆಯರು ಮತ್ತು ಪುರುಷಕರು ಎಂಬ ವರ್ಗೀಕರಣ ಮಾಡಿದರೆ ಕ್ರಮವಾಗಿ ಶೇ. ೫೬ ಮತ್ತು ಶೇ. ೭೧ ಎಂಬ ಚಿತ್ರ ದೊರೆಯುತ್ತದೆ. ಅಥವಾ ರಾಜ್ಯದ ಸಾಕ್ಷರತಾ ಪ್ರಮಾಣ ಶೇ. ೬೬.೪ ರಷ್ಟಾದರೆ ವಿಜಾಪುರ ಜಿಲ್ಲೆಯ ಸಾಕ್ಷರತಾ ಪ್ರಮಾಣ ಕೇವಲ ಶೇ. ೫೬ ಅಂದರೆ ಅಖಂಡವಾದಿ ಪ್ರಣಾಳಿಕೆಯಲ್ಲಿ ಲಿಂಗ ಸಂಬಂಧಿ, ಪ್ರಾದೇಶಿಕ ಮತ್ತು ಜಾತಿ ಸಂಬಂಧಿ ನೆಲೆಗಳು ಮುಂಚೂಣಿಗೆ ಬರುವುದಿಲ್ಲ.

. ಬಡತನದ ಪರಿಭಾವನೆ

 • ಇಲ್ಲಿ ಬಡತನವನ್ನು ಸಾಮಾನ್ಯವಾಗಿ ವರಮಾನದ ಕೊರತೆಯ ರೂಪದಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ಆದ್ದರಿಂದಲೇ ಇಲ್ಲಿ ‘ಬಡತನದ ರೇಖೆ’ ಎಂಬ ಪರಿಕಲ್ಪನೆ ಪ್ರಚಲಿತದಲ್ಲಿದೆ. ವರಮಾನವಿಲ್ಲದಿರುವುದು ಅಥವಾ ಅದು ಕಡಿಮೆಯಿರುವುದು ಇಲ್ಲಿ ಬಡತನದ ಮಾನಂದಡವಾಗಿದೆ.
 • ಅಮರ್ತ್ಯಸೆನ್ ಮತ್ತು ಮೆಹಬೂಬ್ ಉಲ್ ಹಕ್ ಪ್ರಕಾರ ಬಡತನವೆಂಬುದು ಕೇವಲ ವರಮಾನದಲ್ಲಿನ ಕೊರತೆಗೆ ಸಂಬಂಧಿಸಿದ ಸಂಗತಿಯಲ್ಲ. ಹಕ್ ಹೇಳಿದಂತೆ ಜನರ ಬದುಕು ಎಂಬುದು ಕೇವಲ ವರಮಾನದ ಮೊತ್ತವಲ್ಲ. ಅಭಿವೃದ್ಧಿಯನ್ನು ಜನರ ಧಾರಣಾ ಸಾಮರ್ಥ್ಯದ ಕೊರತೆಯಲ್ಲಿ, ಅಸ್ವಾತಂತ್ರ್ಯದ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ಇಲ್ಲಿ ಬಡತನವೆಂಬುದು ಒಂದು ಅಸ್ವಾತಂತ್ರ್ಯಲ್‌ಲಿ ಮಾನವ ಬಡತನದ ಬಗ್ಗೆ ಮಾತನಾಡಲಾಗುತ್ತದೆ.
 • ಇಲ್ಲಿ ಅಭಿಜಾತ ಮತ್ತು ನವ – ಅಭಿಜಾತ ಪ್ರಣಾಳಿಕೆಯಲ್ಲಿದ್ದಂತೆ ಬಡತನವು ಕೇವಲ gವರಮಾನದ ಕೊರತೆಗೆ ಸಂಬಂಧಿಸಿದ ಸಂಗತಿ. ಇಲ್ಲಿ ಬಡತನಕ್ಕೆ ವರಮಾನವೇ ಮಾನದಂಡ. ಇಲ್ಲಿ ವರಮಾನ ಬಡತನದ ಬಗ್ಗೆ ಮಾತನಾಡಲಾಗುತ್ತದೆ.

೧೦. ಏಕಶಿಸ್ತೀಯ ಅಧ್ಯಯನವೋ ಅಥವಾ ಬಹುಶಿಸ್ತೀಯ ಅಧ್ಯಯನವೋ?

 • ಇದು ಏಕಶಿಸ್ತೀಯ ಅಧ್ಯಯನವಾಗಿದೆ. ಇದು ತನ್ನ ಎಲ್ಲ ಸಿದ್ಧಾಂತಗಳನ್ನು ಆರ್ಥಿಕ ನೆಲೆಯಿಂದಲೇ ವಿಶ್ಲೇಷಿಸಬಯಸುತ್ತದೆ. ಇಲ್ಲಿ ಆರ್ಥಿಕೇತರ, ಮಾರುಕಟ್ಟೇತರ ಸಂಗತಿಗಳಿಗೆ ಮನ್ನಣೆಯಿಲ್ಲ. ಇದರಿಂದಾಗಿ ಇದರ ವ್ಯಾಪ್ತಿಯು ತುಂಬಾ ಸೀಮಿತವಾದುದಾಗಿದೆ.
 • ಆದರೆ ಇದು ಬಹುಶಿಸ್ತೀಯ ಅಧ್ಯಯನವಾಗಿದೆ. ಇಲ್ಲಿ ಸಮಸ್ಯೆಗಳನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ಆರ್ಥಿಕೇತರ ಮತ್ತು ಮಾರುಕಟ್ಟೇತರ ಸಂಗತಿಗಳಿಗೆ ಮನ್ನಣೆ ನೀಡಲಾಗುತ್ತದೆ. ಆದ್ದರಿಂದ ಇದರ ವ್ಯಾಪ್ತಿಯು ವಿಸ್ತೃತವಾದುದಾಗಿದೆ.
 • ನವ ಉದಾರಹವಾದಿ ಅಭಿವೃದ್ಧಿ ಪ್ರಣಾಳಿಕೆಯು ಮೂಲಭೂತವಾಗಿ ಏಕಶಿಸ್ತು ಅಧ್ಯಯನವಾಗಿದೆ. ಆದ್ದರಿಂದ ಇದರ ವ್ಯಾಪ್ತಿಯು ಬಹಳ ಸೀಮಿತವಾದುದು.

ಅಭಿವೃದ್ದಿ ಕುರಿತ ಸಾಹಿತ್ಯ, ಅಭಿವೃದ್ಧಿ ಸಿದ್ಧಾಂತಗಳು ಮತ್ತು ಅಭಿವೃದ್ಧಿಯ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಿದರೆ ನಮಗೆ ವರಮಾನ ವರ್ಧನೆ ಯನ್ನು ಕೇಂದ್ರಧಾತುವನ್ನಾಗಿ ಮಾಡಿಕೊಂಡಿರುವ ಪ್ರಧಾನ ಧಾರೆ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಮತ್ತು ಜನರನ್ನು ಮುಖ್ಯಧಾತುವನ್ನಾಗಿ ಮಾಡಿಕೊಂಡ ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯೆಂಬ ಎರಡು ವಿಭಿನ್ನವಾದ ಸೈದ್ಧಾಂತಿಕ ಧಾರೆಗಳು ಎದುರಾಗುತ್ತದೆ. ಪ್ರಸ್ತುತ ವರದಿಯು ವಿಜಾಪುರ ಜಿಲ್ಲೆಯ ಅಭಿವೃದ್ಧಿಯನ್ನು ಕುರಿತದ್ದಾಗಿರುವುದರಿಂದ ಸೈದ್ಧಾಂತಿಕವಾಗಿ ವಿಕಾಸವಾಗುತ್ತಲೇ ನಡೆದಿರುವ ಅತ್ಯಂತ ಗತಿಶೀಲವಾದ ಮಾನವ ಅಭಿವೃದ್ದಿ ಬಗ್ಗೆ ಮತ್ತು ಅದರ ವಿಭಿನ್ನವೃದ್ಧಿಯನ್ನು ವರಮಾನ ವರ್ಧನೆಯ ಪ್ರಣಾಳಿಕೆಯ ಆಧಾರದ ಮೇಲೂ ಮೌಲ್ಯಮಾಪನ ಮಾಡುವುದು ಅಗತ್ಯ.

ಮೆಹಬೂಬ್ ಉಲ್ ಹಕ್ ತನ್ನ ಮಾನವ ಅಭಿವೃದ್ಧಿ ಕುರಿತ ಚಿಂತನಾಭಿವ್ಯಕ್ತಿ (೧೯೯೬) ಎಂಬ ಕೃತಿಯನ್ನು ಹೀಗೆ ಆರಂಭಿಸುತ್ತಾರೆ.

ಬದುಕಿನಲ್ಲಿ ಅತ್ಯಂತ ಕ್ಲಿಷ್ಟವಾದ ಸಂಗತಿಯೆಂದರೆ ಸದಾ ಕಣ್ಣಿಗೆ ಕಾಣುವ ಸಂಗತಿಯನ್ನು ಗುರುತಿಸುವುದು. ಮುಂದುವರಿದು ಅವರ ವಿಚಾರಗಳು ಹೀಗಿದ್ದವು.

ಪ್ರಕೃತಿಯಲ್ಲಿ ಅದರ ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿಯಲು ಒಬ್ಬ ನ್ಯೂಟನ್ ಬೇಕಾದ; ಲೋಕದಲ್ಲಿ ಪ್ರಚಲಿತವಿದ್ದ ಸಾಪೇಕ್ಷತಾವಾದವನ್ನು ಕಂಡು ಹಿಡಿಯಲು ಒಬ್ಬ ಐನ್‌ಸ್ಟೀನ್ ಬೇಕಾದ; ಈ ವಾದವನ್ನು ಅಭಿವೃದ್ಧಿ ಪ್ರಕ್ರಿಯೆಗೆ ವಿಸ್ತಿರಿಸಿದರೆ, ನಮಗೆ ಕಾಣುವ ಸಂಗತಿಯೆಂದರೆ ಮಾನವ ಅಭಿವೃದ್ಧಿಯೆಂಬುದು ನಮ್ಮ ಅನುಭವದ ಸಂಗತಿಯೇ ಆಗಿದ್ದರೂ ಅದನ್ನು ನಾವು ಗುರುತಿಸಿರಲಿಲ್ಲ. ಅಭಿವೃದ್ಧಿ ಕುರಿತ ಅನೇಕ ದಶಕಗಳು ಕಳೆದು ಹೋದ ಮೇಲೆ ವರಮಾನ ವರ್ಧನೆಯೆಂಬುದು ತನ್ನಷ್ಟಕ್ಕೆ ತಾನೇ ಸಹಜವಾಗಿ ಜನರ ಬದುಕಾಗಿ ಪರಿವರ್ತನೆಯಾಗುವುದಿಲ್ಲ ಎಂಬುದನ್ನು ಗುರುತಿಸುವುದು ನಮಗೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿಯೇ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಅಸಾಧಾರಣ ಸಾಧನೆ ಸಾಧಿಸಿಕೊಂಡಿದ್ದರೂ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತವು ಎದುರಿಸುತ್ತಿದ್ದ ದುಸ್ಥಿತಿಗಳಾದ ಹಾಗೂ ಏಕೀಕರಣದ ಸಂದರ್ಭದಲ್ಲಿ ಕರ್ನಾಟಕವು ಎದುರಿಸುತ್ತಿದ್ದ ದುಸ್ಥಿತಿಗಳಾದ ಮೌಢ್ಯ, ಅನಕ್ಷರತೆ, ಪರಿಹರಿಸಬಹುದಾದ ಬಡತನ, ನಿಯಂತ್ರಿಸಬಹುದಾದ ರೋಗಗಳು, ಅಂಗವಿಕಲತೆ, ಅಪ್ರಾಪ್ತ ಸಾವುಗಳು, ಪ್ರಾದೇಶಿಕ ಅಸಮಾನತೆ ಮತ್ತು ಅವಕಾಶಗಳಲ್ಲಿನ ಅನವಶ್ಯಕ ಅಸಮಾನತೆ ಮುಂತಾದವು ಇಂದಿಗೂ ಮುಂದುವರಿದಿವೆ. ಇಷ್ಟಾದರೂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಯೋಜನಾ ತಜ್ಞರು ಅಭಿವೃದ್ಧಿಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ವರ್ಧನೆಯಿಂದ ಮಾಪನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜನರನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ ಮಾನವ ಅಭಿವೃದ್ಧಿ ಮೀಮಾಂಸೆ ಮತ್ತು ವರಮಾನ ವರ್ಧನೆಯನ್ನು ಕೇಂದ್ರ ಧಾತುವನ್ನಾಗಿ ಮಾಡಿಕೊಂಡಿರುವ ಆರ್ಥಿಕ ಅಭಿವೃದ್ಧಿ ಮೀಮಾಂಸೆ ಎರಡೂ ಧಾರೆಗಳ ಮಹತ್ವವನ್ನು ಇಲ್ಲಿ ಚರ್ಚೆ ಮಾಡಲಾಗಿದೆ.

. ವರಮಾನ ವರ್ಧನೆಯು ಧಾತುವಾಗಿರುವ ಅಭಿವೃದ್ಧಿ ಪ್ರಕ್ರಿಯೆ

ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣದ ಕೇಂದ್ರ ಸ್ಥಾನಗಳಾದ ಕೇಂಬ್ರಿಡ್ಜ್, ಯೇಲ್, ಹಾರ್ವವರ್ಡ್‌ಗಳಲ್ಲಿನ ಬಹುಪಾಲು ತಜ್ಞರು ೧೯೫೦ರ ಸಂದರ್ಭದಲ್ಲಿ ನವಅಭಿಜಾತ ಅಭಿವೃದ್ಧಿ ವೈಚಾರಿಕ ನೆಲೆಗಳಿಂದ ಪ್ರಬಾವಿತರಾಗಿದ್ದರು. ಅಭಿವೃದ್ಧಿಯ ಉದ್ದೇಶವೆಂದರೆ ರಾಷ್ಟ್ರೀಯ ವರಮಾನವನ್ನು ಏರಿಸುವುದು ಮತ್ತು ಅದಕ್ಕೆ ಅಗತ್ಯವಾದ ಉಳಿತಾಯ ಮತ್ತು ಹೂಡಿಕೆಗಳನ್ನು ಹೆಚ್ಚು ಮಾಡುವುದು ಎಂದು ನಂಬಿದ್ದರು. ಒಟ್ಟು ಆಂತರಿಕ ಉತ್ಪನ್ನದ ವರ್ಧನೆಯ ಮುಂದೆ ಅಭಿವೃದ್ಧಿಯ ಉಳಿದೆಲ್ಲ ಉದ್ದೇಶಗಳು ಗೌಣವಾಗಿ ಬಿಟ್ಟಿದ್ದವು. ವಿಶ್ವದ ಎರಡೂ ಗೋಳಗಳಲ್ಲಿನ ದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ಅನಭವವೆಂದರೆ ವರಮಾನ ವರ್ಧನೆಯು ಅಗತ್ಯ. ಆದರೆ ಅದೇ ಅಭಿವೃದ್ಧಿಯ ಅಂತಿಮ ಗಂತವ್ಯವಲ್ಲ ಎಂಬುದಾಗಿದೆ. ಈ ಅಭಿವೃದ್ಧಿ ಮೀಮಾಂಸೆಯಲ್ಲಿ ಜನರು ಕಾಣೆಯಾಗಿ ಬಿಟ್ಟಿದ್ದಾರೆ. ವಿಶ್ವ ಅಭಿವೃದ್ಧಿ ವರದಿ (೧೯೯೧)ಯಲ್ಲಿ ಗುರುತಿಸಿರುವಂತೆ ಮಾನವ ಜನಾಂಗವು ಎದುರಿಸುತ್ತಿರುವ ಬಹುದೊಡ್ಡ ಅಭಿವೃದ್ಧಿ ಸವಾಲೆಂದರೆ ಜನರ ಬದುಕನ್ನು ಹೇಗೆ ಉತ್ತಮಪಡಿಸುವುದು ಎಂಬುದಾಗಿದೆ. ನಿರ್ದಿಷ್ಟವಾಗಿ ವಿಶ್ವದ ಬಡದೇಶಗಳಲ್ಲಿಜನರ ಬದುಕನ್ನು ಉತ್ತಮಪಡಿಸಲು ವರಮಾನದ ತೀವ್ರ ವರ್ಧನೆ ಅವಶ್ಯಕವಾಗಿದೆ. ಆದರೆ ಅದನ್ನು ಸಾಧಿಸಲು ವರಮಾನ ವರ್ಧನೆಯ ಜೊತೆ ಬೇರೆ ಸಂಗತಿಗಳನ್ನು ಪರಿಗಣಿಸಿಬೇಕಾಗುತ್ತದೆ. ಅಭಿದ್ಧಿಯು ಒಂದು ಸಾಧ್ಯವಾಗಿದೆ. ಅದು ಜನರಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕು. ಜನರಿಗೆ ಉನ್ನತವಾದ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ನೀಡಬೇಕು, ಬಡತನವನ್ನು ಕಡಿಮೆ ಮಾಡಬೇಕು, ಪರಿಸರ ಮಾಲಿನ್ಯವನ್ನು ನಿವಾರಿಸಬೇಕು. ಅವಕಾಶಗಳಲ್ಲಿ ಸಮಾನತೆಯನ್ನು ಸಾಧಿಸಿಕೊಳ್ಳಬೇಕು. ಜನರಿಗೆ ವಿಸ್ತೃತವಾದ ಸ್ವಾತಂತ್ರ್ಯ ನೀಡಬೇಕು ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾದ ಬದುಕನ್ನು ನೀಡಬೇಕು. ವರಮಾನ ವರ್ಧನಾ ಅಭಿವೃದ್ಧಿ ಸಿದ್ಧಾಂತದಲ್ಲಿ ಬಂಡವಾಳ ಹೂಡಿಕೆ, ಉಳಿತಾಯ, ಬಡ್ಡಿ, ತಂತ್ರಜ್ಞಾನ ಮುಂತಾದವು ಮಹತ್ವದ ಸಂಗತಿಗಳಾಗುತ್ತವೆ. ಉಳಿತಾಯದ ಪ್ರಮಾಣವನ್ನು ಉನ್ನತ ಮಟ್ಟಕ್ಕೆ ಏರಿಸುವುದೇ ಅಭಿವೃದ್ಧಿಯೆಂದು ಹೇಳಲಾಗಿದೆ. ಸದ್ಯ ಭಾರತದಲ್ಲಿ ಉಳಿತಾಯವು ಜಿಡಿಪಿಯ ಶೇ ೩೫ರಷ್ಟಿದೆ. ಇಷ್ಟಾದರೂ ನಮ್ಮಲ್ಲಿ ಬಡತನ, ಹಸಿವು, ಅಸಮಾನತೆ, ರೋಗ ರುಜಿನಗಳು ತಾಂಡವವಾಡುತ್ತಿವೆ.

ವರಮಾನ ವರ್ಧನೆಯನ್ನೇ ಮಾನವ ಅಭಿವೃದ್ಧಿಯೆಂದು ತಿಳಿಯಬಾರದು. ಇವೆರಡರಲ್ಲಿ ಮೊದಲನೆಯದರಲ್ಲಿ ವರಮಾನ ವರ್ಧನೆ ಹಾಗೂ ಅದರ ಬೆಳವಣಿಗೆ ಪ್ರಮಾಣವನ್ನು ಪ್ರದಾನ ಗುರಿಯನ್ನಾಗಿ ಮಾಡಿಕೊಂಡು ಅಭಿವೃದ್ಧಿಯ ಮೂಲಧಾತುವಾದ ಜನರನ್ನು ಮೂಲಗುಂಪು ಮಾಡಲಾಗಿದೆ. ವಿಶ್ವದಲ್ಲಿ ಅನೇಕ ದೇಶಗಳ ಮತ್ತು ಭಾರತದಲ್ಲಿ ಅನೇಕ ರಾಜ್ಯಗಳ ಹಾಗೂ ಜಿಲ್ಲೆಗಳ ಅನುಭವ ಏನನ್ನು ತೋರಿಸುತ್ತಿದೆಯೆಂದರೆ ವರಮಾನ ವರ್ಧನೆ ಮತ್ತು ಮಾನವ ಅಭಿವೃದ್ಧಿಗಳ ನಡುವೆ ನೇರವಾದ ಮತ್ತು ಪ್ಮಾಣಾನುಸಾರದ ಸಂಬಂಧವಿಲ್ಲ ಎಂಬುದಾಗಿದೆ. ಅತ್ಯಂತ ಕೆಳಮಟ್ಟದಲ್ಲಿ ವರಮಾನವಿದ್ದರೂ ಉನ್ನತವಾದ ಮಾನವ ಅಭಿವೃದ್ಧಿ ಸಾಧಿಸಿಕೊಂಡ ಅನೇಕ ದೇಶಗಳಿವೆ. ಭಾರತದಲ್ಲಿ ಅನೇಕ ರಾಜ್ಯಗಳು ಹಾಗೂ ಜಿಲ್ಲೆಗಳು ಇಂತಹ ಸಾಧನೆ ಸಾಧಿಸಿಕೊಂಡಿವೆ. ಇದಕ್ಕೆ ಪ್ರತಿಯಾಗಿ ವರಮಾನದಲ್ಲಿ ಉನ್ನತ ಸ್ಥಾನವನ್ನು ಮಾನವ ಅಭಿವೃದ್ಧಿಯಲ್ಲಿ ಕೆಳಮಟ್ಟವನ್ನು ಸಾಧಿಸಿಕೊಂಡಿರುವ ಉದಾಹರಣೆಗಳೂ ಇವೆ. ಉದಾಹರಣೆಗೆ

ಅ. ಒಟ್ಟು ರಾಷ್ಟ್ರೀಯ ಉತ್ಪನ್ನದ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ, ಬ್ರೆಜಿಲ್, ಗಬಾನ್ ಮತ್ತು ಒಮಾನ್ ದೇಶಗಳು ಚೀನಾ ಮತ್ತು ಶ್ರೀಲಂಕಾ ದೇಶಗಳಿಗಿಂತ ಆರು ಪಟ್ಟು ಆಧಿಕ ತಲಾ ಆದಾಯವನ್ನು ಹೊಂದಿವೆ. ಆದರೆ ವರಮಾನದಲ್ಲಿ ಕೆಳಮಟ್ಟದಲ್ಲಿರುವ ದೇಶಗಳಲ್ಲಿರುವುದಕ್ಕಿಂತ ಅಧಿಕವಾದ ಮರಣ ಪ್ರಮಾಣ ವರಮಾನದಲ್ಲಿ ಉನ್ನತ ಸ್ಥಾನದಲ್ಲಿರುವ ನಾಲ್ಕು ದೇಶಗಳಲ್ಲಿದೆ.

ಆ. ಮೇಲಿನ ಉನ್ನತ ವರಮಾನದ ನಾಲ್ಕು ದೇಶಗಳಿಗಿಂತ ಕೊಸ್ಟರಿಕಾ ದೇಶದ ವರಮಾನ ಅತ್ಯಂತ ಕಡಿಮೆ. ಆದರೆ ಅದು ಮೇಲಿನ ನಾಲ್ಕು ದೇಶಗಳಲ್ಲಿರುವುದಕ್ಕಿಂತ ಅಧಿಕವಾದ ಜೀವನಾಯುಷ್ಯವನ್ನು ಸಾಧಿಸಿಕೊಂಡಿದೆ.

ಇ. ಭಾರತದ ರಾಜ್ಯಗಳ ಪೈಕಿ ಕೇರಳವು ವರಮಾನದಲ್ಲಿ ಕೆಳಮಟ್ಟದಲ್ಲಿದ್ದರೂ (ದೇಶದ ಹದಿನೈದು ರಾಜ್ಯಗಳಲ್ಲಿ ಅದರ ಸ್ಥಾನ ಎಂಟನೆಯದು) ಮಾನವ ಅಭಿವೃದ್ಧಿಯಲ್ಲಿ ಉನ್ನತ ಮಟ್ಟ ಸಾಧಿಸಿಕೊಂಡಿರುವ (ದೇಶದ ಹದಿನೈದು ರಾಜ್ಯಗಳಲ್ಲಿ ಅದರ ಸ್ಥಾನ ಒಂದನೆಯದು) ರಾಜ್ಯವಾಗಿದೆ. ಅಲ್ಲಿನ ಜೀವನಾಯುಷ್ಯ ಅಧಿಕ ಮಟ್ಟದಲ್ಲಿದೆ. ಶಿಶುಗಳ ಮರಣ ಪ್ರಮಾಣ ಕೆಳಮಟ್ಟದಲ್ಲಿದೆ. ಸಾಕ್ಷರತಾ ಪ್ರಮಾಮ, ಅದರಲ್ಲೂ ಮಹಿಳೆಯರ ಸಾಕ್ಷರತಾ ಪ್ರಮಾಣ ಅತ್ಯಧಿಕವಾಗಿದೆ. ಲಿಂಗ ಅನುಪಾತವು ವಿರಕ್ಕಿಂತ ಅಧಿಕವಾಗಿದೆ. ಲಿಂಗ ಸಮಾನತೆಗೆ ಕೇರಳ ಆದರ್ಶ ರಾಜ್ಯವಾಗಿದ್ದರೆ ಅದರ ಅಸಮಾನತೆಗೆ ಹರಿಯಾಣ ಸಾಕ್ಷಿಯಾಗಿದೆ. ಜನರ ಬದುಕು ಅನ್ನುವುದು ವರಮಾನದ ಮೊತ್ತವಲ್ಲ ಎನ್ನುವುದು ಕೇರಳ ಹರಿಯಾಣಗಳ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ವರಮಾನದಲ್ಲಿ ಮಾತ್ರ ಹರಿಯಾಣವು ಶ್ರೀಮಂತವಾಗಿದೆ. ಉಳಿದಂತೆ ಅದು ದುಸ್ಥಿತಿಯನ್ನು ಎದುರಿಸುತ್ತಿದೆ.

ಕೇರಳ ಮತ್ತು ಹರಿಯಾಣ ರಾಜ್ಯಗಳ ಅಭಿವೃದ್ಧಿ ವಿಶಿಷ್ಟತೆ

ಕೋಷ್ಟಕ .

ಕ್ರ.ಸಂ.

ವಿವರಗಳು

ಕೇರಳ

ಹರಿಯಾಣ

೧. ಒಟ್ಟು ತಲಾ ವರಮಾನ (೨೦೦೭-೦೮) (ಚಾಲ್ತಿ ಬೆಲೆಗಳು) ರೂ. ೪೩೧೦೪ ರೂ. ೫೮೫೩೧
೨. ಒಟ್ಟು ಜೀವನಾಯುಷ್ಯ ಮಹಿಳೆಯರು (೨೦೦೧-೦೬) ೭೫
ವರ್ಷಗಳು
೬೯.೩೦ ವರ್ಷಗಳು
೩. ಒಟ್ಟು ಜೀವನಾಯುಷ್ಯ (೨೦೦೧-೦೬) ಪುರುಷರು ೭೧.೬೭ ವರ್ಷಗಳು ೬೪.೬೪ ವರ್ಷಗಳು
೪. ಒಟ್ಟು ಸಂತಾನೋತ್ಪತ್ತಿ ಪ್ರಮಾಣ (೧೯೯೯) ೧.೮ ೩.೨
೫. ಶಿಶು ಮರಣ ಪ್ರಮಾಣ (೨೦೦೮) ೧೨ ೫೪
೬. ಒಟ್ಟು ಸಾಕ್ಷರತಾ ಪ್ರಮಾ (೨೦೦೧) ಶೇ. ೯೦.೯ ಶೇ. ೬೮.೫೯
೭. ಲಿಂಗ ಅನುಪಾತ (೨೦೦೧) ೧೦೩೬ ೮೬೫

ಮೂಲ: ಕರ್ನಾಟಕ ಸರ್ಕಾರ ೨೦೧೦, ಆರ್ಥಿಕ ಸಮೀಕ್ಷೆ ೨೦೦೯೨೦೧೦. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಆದರೆ ಕೇರಳ ರಾಜ್ಯವು ವರಮಾನದಲ್ಲಿ ಹಿಂದಿದ್ದರೂ ಅಲ್ಲಿ ಜನರು ಬದುಕು ಸಮೃದ್ಧವಾಗಿದೆ. ಮೊದಲನೆಯ ಸೂಚಿಯನ್ನು ಬಿಟ್ಟರೆ ಉಳಿದ ಎಲ್ಲಸೂಚಿಗಳಲ್ಲಿ ಅದು ಹರಿಯಾಣಕ್ಕಿಂತ ಬಹಳ ಮುಂದಿದೆ. (ನೋಡಿ ಕೋಷ್ಟಕ ೧.೧)

ಈ. ಕರ್ನಾಟಕದ ಒಟ್ಟು ಜಿಲ್ಲೆಗಳ ಪೈಕಿ (೨೭), ವರಮಾನದಲ್ಲಿ ಉನ್ನತ ಸಾಧನೆಯನ್ನು ಸಾಧಿಸಿಕೊಂಡಿದ್ದರೂ ಮಾನವ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಎಂಟು ಜಿಲ್ಲೆಗಲಿವೆ. ವರಮಾನದಲ್ಲಿ ಕೆಳಮಟ್ಟದಲ್ಲಿದ್ದರೂ ಮಾನವ ಅಭಿವೃದ್ಧಿಯಲ್ಲಿ ಸಾಧಾರಣ ಮಟ್ಟವನ್ನು ಸಾಧಿಸಿಕೊಂಡಿರುವ ೧೨ ಜಿಲ್ಲೆಗಳಿವೆ. ವರಮಾನ ವರ್ಧನೆ ಮತ್ತು ಮಾನವ ಅಭಿವೃದ್ಧಿ ಎರಡರಲ್ಲಿಯೂ ಸಮಾನವಾದ ಉನ್ನತ ಸಾಧನೆ ಸಾಧಿಸಿಕೊಂಡಿರುವ ಮೂರು ಜಿಲ್ಲೆಗಳಿವೆ. ಕೊನೆಯದಾಗಿ ವರಮಾನ ವರ್ಧನೆ ಮತ್ತು ಮಾನವ ಅಭಿವೃದ್ಧಿ ಎರಡರಲ್ಲಿಯೂ ಕೆಳಮಟ್ಟದಲ್ಲಿ ಸಮಾನವಾಗಿದ್ದು ಇಮ್ಮಡಿ ದುಸ್ಥಿತಿ ಅನುಭವಿಸುತ್ತಿರುವ ನಾಲ್ಕ ಜಿಲ್ಲೆಗಳಿವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ೨೦೦-೦೮ರಲ್ಲಿ ತಲಾ ವರಮಾನ ರೂ. ೩೪೬೧೧. ಆದರೆ ೨೦೦೭-೦೮ರಲ್ಲಿ ಬಳ್ಳಾರಿ ಜಿಲ್ಲೆಯ ತಲಾ ವರಮಾನ ರೂ. ೪೭೬೦೭. ಆದರೆ ಶಿವಮೊಗ್ಗ ಜಿಲ್ಲೆಯ (೨೦೦೧) ಸಾಕ್ಷರತಾ ಪ್ರಮಾಣ ಶೇ. ೭೪.೫೨ ರಷ್ಟಾದರೆ ಬಳ್ಳಾರಿ ಜಿಲ್ಲೆಯ ಸಾಕ್ಷರತಾ ಪ್ರಮಾಣ ಕೇವಲ ಶೇ. ೫೭.೪೦. ಬಳ್ಳಾರಿ ಜಿಲ್ಲೆಯಲ್ಲಿನ ೨೦೦೧-೦೨ರಲ್ಲಿ ಜೀವನಾಯುಷ್ಯ ೬೬.೧ ವರ್ಷಗಳಾದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅದು ೬೭.೪ ವರ್ಷಗಳು. ತಲಾ ವರಮಾನದಲ್ಲಿ ಬಲ್ಳಾರಿಯು ಶಿವಮೊಗ್ಗ ಜಿಲ್ಲೆಯಲ್ಲಿ ಅದು ೬೭.೪ ವರ್ಷಗಳು. ತಲಾ ವರಮಾನದಲ್ಲಿ ಬಲ್ಲಾರಿಯು ಶಿವಮೊಗ್ಗ ಜಿಲ್ಲೆಯ ತಲಾ ವರಮಾನದ ಶೇ. ೧೩೭.೫೫ರಷ್ಟು ಪಡೆದಿದೆ. ಆದರೆ ಸಾಕ್ಷರತೆಯಲ್ಲಿ ಬಳ್ಳಾರಿ ಜಿಲ್ಲೆಯದ್ದು ಶಿವಮೊಗ್ಗ ಜಿಲ್ಲೆಯ ಸಾಕ್ಷರತೆಯ ಶೇ. ೭೭.೦೨ರಷ್ಟಿದೆ. ಜೀವನಾಯುಷ್ಯದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಮಟ್ಟದ ಜೀವನಾಯುಷ್ಯದ ಶೇ. ೯೮.೦೭ರಷ್ಟಿದೆ.

I. ಮಾನವ ಅಭಿವೃದ್ಧಿ ಪರವಾಗಿ ವಾಲಿರುವ ಜಿಲ್ಲೆಗಳು ೧೨
(ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಹಾಸನ, ಕೋಲಾರ, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ)
ವರಮಾನದಲ್ಲಿ ಕೆಳಮಟ್ಟ : ಮಾನವ ಅಭಿವೃದ್ಧಿಯಲ್ಲಿ ಉನ್ನತ ಮಟ್ಟ

II. ಆದರ್ಶ ಮಟ್ಟದ ಅಭಿವೃದ್ಧಿ ಜಿಲ್ಲೆಗಳು
(ಬೆಂಗಳೂರು (ನ), ದಕ್ಷಿಣ ಕನ್ನಡ, ಮತ್ತು ಕೊಡಗು)
ವರಮಾನದಲ್ಲಿ ಉನ್ನತ ಮಟ್ಟ: ಮಾನವ ಅಭಿವೃದ್ಧಿಯಲ್ಲಿ ಉನ್ನತ ಮಟ್ಟ

III. ವಿಷಚಕ್ರದಲ್ಲಿ ಸಿಲಿಕಿರುವ ಜಿಲ್ಲೆಗಳು
(ರಾಯಚೂರು, ಗುಲಬರ್ಗಾ ಮತ್ತು ವಿಜಾಪುರ ಮತ್ತು ಮಂಡ್ಯ)
ವರಮಾನದಲ್ಲಿ ಕೆಳಮಟ್ಟ : ಮಾನವ ಅಭಿವೃದ್ದಿಯಲ್ಲಿ ಕೆಳಮಟ್ಟ.

IV. ವರಮಾನ ಅಭಿವೃದ್ಧಿ ಪರವಾಗಿ ವಾಲಿರುವ ಜಿಲ್ಲೆಗಳು
(ಬಳ್ಳಾರಿ, ಚಾಮರಾಜನಗರ, ಬಾಗಲಕೋಟೆ, ಚಿಕ್ಕಮಗಳೂರು, ಧಾರವಾಡ, ಕೊಪ್ಪಳ, ಬೆಂಗಳೂರು (ಗ್ರಾ) ಮತ್ತು ಮೈಸೂರು)
ವರಮಾನದಲ್ಲಿ ಉನ್ನತ ಮಟ್ಟ: ಮಾನವ ಅಭಿವೃದ್ಧಿಯಲ್ಲಿ ಕೆಳಮಟ್ಟ

ಏಕಮುಖಿ ಮತ್ತು ಆದರ್ಶ ಅಭಿವೃದ್ಧಿ ಜಿಲ್ಲೆಗಳು :

ಒಂದು ಪ್ರಸಿದ್ಧ ಅಧ್ಯಯನ ಪ್ರಬಂಧದಲ್ಲಿ ಸಕಿಕೊ ಫುಕುಡ ಫಾರ್ ಅವರು ಮಾನವ ಅಭಿವೃದ್ಧಿ ಮತ್ತು ವರಮಾನ ಅಭಿವೃದ್ಧಿಗಳಿಗೆ ಸಂಬಂಧಿಸಿದ ಆಯ್ದ ದೇಶಗಳ ಅನುಭವಗಳೇನು ಎಂಬುದನ್ನು ಅಲ್ಲಿ ಚರ್ಚಿಸಿದ್ದಾರೆ. ಅವರು ವರಮಾನ ಮತ್ತು ಮಾನವ ಅಭಿವೃದ್ಧಿಗಳಿಗೆ ಸಂಬಂಧಿಸಿದ ಆಯ್ದ ದೇಶಗಳ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಆ ದೇಶಗಳನ್ನು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿದ್ದಾರೆ. ಈ ಬಗೆಯ ವರ್ಗೀಕರಣವ ನೀತಿ ನಿರ್ದೇಶನದ ದೃಷ್ಟಯಿಂದ ಉಪಯುಕ್ತವಾಗಿದೆ. ಮೊದಲನೆಯ ಗುಂಪಿನ ಜಿಲ್ಲೆಗಳಲ್ಲಿ ಅಭಿವೃದ್ಧಿಯು ಸುಸ್ಥಿರಗತಿಯಲ್ಲಿ ನಡೆಯಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ವರಮಾನವು ಎಷ್ಟು ಮಟ್ಟದಲ್ಲಿರಬೇಕೋ ಆ ಮಟ್ಟದಲ್ಲಿಲ್ಲ ಮತ್ತು ಅದು ಯಾವ ಗತಿಯಲ್ಲಿ ವರ್ಧನೆಯಾಗಬೇಕೋ ಆ ಗತಿಯಲ್ಲಿ ಏರಿಕೆ ಆಗುತ್ತಿಲ್ಲ. ಆದ್ದರಿಂದ ಇಲ್ಲಿ ವರಮಾನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಅದೇ ರೀತಿಯಲ್ಲಿ ವಿಷಚಕ್ರದಲ್ಲಿ (ಮೂರನೆಯ ಗುಂಪು) ಸಿಲಿಕಿರುವ ಜಿಲ್ಲೆಗಳಲ್ಲಿ ಒಮದು ಮತ್ತೊಂದನ್ನು ಕೆಳಗೆ ಜಗ್ಗುತ್ತಿರುವುದರಿಂದ ಅಲ್ಲಿಜನರ ಬದುಕು ಅತ್ಯಂತ ದುಸ್ಥಿತಿಯಲ್ಲಿದೆ. ಇಲ್ಲಿ ವರಮಾನ ದುಸ್ಥಿತಿಯು ಧಾರಣಾ ಸಾಮರ್ಥ್ಯದ ದುಸ್ಥಿತಿಯನ್ನು ಮತ್ತು ಧಾರಾಣಾ ಸಾಮರ್ಥ್ಯದ ದುಸ್ಥಿತಿಯು ವರಮಾನ ದುಸ್ಥಿಯು ಪರಸ್ಪರ ಒಂದರ ವಿರುದ್ಧ ಒಂದು ಕೆಲಸ ಮಾಡುವುದು ಸಾಧ್ಯವಿರುವುದರಿಂದ ಅಲ್ಲಿ ಅಭಿವೃದ್ಧಿ ಸುಲಭ ಸಾಧ್ಯವಲ್ಲ. ಈ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಜವಾಬುದಾರಿಯನ್ನು ಆಯಾ ಜಿಲ್ಲೆಗಳಿಗೆ ವಹಿಸಿಕೊಟ್ಟು ಬಿಟ್ಟರೆ ಅಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಅಭಿವೃದ್ಧಿಯು ದೊಡ್ಡ ಸವಾಲಿನ ಸಂಗತಿಯಾಗಿದೆ. ಅದು ಮಾನವ ಅಭಿವೃದ್ಧಿಯನ್ನು ಮತ್ತು ವರಮಾನ ಅಭಿವೃದ್ದಿಯನ್ನುನ್ನು ಏಕಕಾಲಕ್ಕೆ ಸಾಧಿಸಿಕೊಳ್ಳಬೇಕಾದ ಇಮ್ಮಡಿ ಜವಾಬುದಾರಿಯನ್ನು ನಿರ್ವಹಿಸಬೇಕಾಗಿದೆ. ಇಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಾಧಿಕಾರಗಳು ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕಾಗುತ್ತದೆ. ನಾಲ್ಕನೆಯ ಗುಂಪು ಮೊದಲನೆಯ ಗುಂಪಿಗೆ ಪ್ರತಿಯಾದುದಾಗಿದೆ. ಇಲ್ಲಿ ವರಮಾನವು ಉನ್ನತ ಮಟ್ಟದಲ್ಲಿದೆ. ಆದರೆ ಈ ಉನ್ನತ ಮಟ್ಟದಲ್ಲಿರುವ ವರಮಾನವನ್ನು ಜಿಲ್ಲೆಯು ಜನರ ಧಾರಣಾ ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಜಿಲ್ಲೆಗಲು ಮಾನವ ಅಭಿವೃದ್ಧಿಯನ್ನು ನಿರ್ಧರಿಸುವ ಸಂಗತಿಗಳಿಗೆ ಮಹತ್ವದ ಸ್ಥಾನ ನೀಡಬೇಕಾಗುತ್ತದೆ. ಬಂಡವಾಳವನ್ನು ಜನರ ಧಾರಣಾ ಸಾಮರ್ಥ್ಯವನ್ನು ವರ್ಧಿಸುವ ಸಂಗತಿಗಳ ಮೇಲೆ ಹೂಡಬೇಕಾಗುತ್ತದೆ. ಎರಡನೆಯ ಗುಂಪಿನಲ್ಲಿರುವ ಜಿಲ್ಲೆಗಳು ಅಭಿವೃದ್ಧಿಯ ದೃಷ್ಟಿಯಿಂದ ಆದರ್ಶ ಸ್ಥಿತಿಯಲ್ಲಿರುವ ಜಿಲ್ಲೆಗಳಾಗಿವೆ. ಅಲ್ಲಿ ವರಮಾನವು ಉನ್ನತ ಮಟ್ಟದಲ್ಲಿದೆ ಮತ್ತು ಜನರ ಧಾರಣಾ ಸಾಮರ್ಥ್ಯವು ಜನರ ವರಮಾನಕ್ಕೆ ಅನುಗುಣವಾಗಿದೆ. ಈ ಜಿಲ್ಲೆಗಳು ಈಗ ಸುಸ್ಥಿರಗತಿಯಲ್ಲಿ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಮೇಲಿನ ವಿವರಣೆಯಿಂದ ತಿಳಿದುಬರುವ ಸಂಗತಿಯೇನೆಂದರೆ ವರಮಾನದಲ್ಲಿ ಏರಿಕೆಯು ತನ್ನಷ್ಟಕ್ಕೆ ತಾನು ಮಾನವ ಅಭಿವೃದ್ಧಿಯಾಗಿ ಅಥವಾ ಮಾನವ ಅಭಿವೃದ್ದಿಯು ತನ್ನಷ್ಟಕ್ಕೆ ತಾನೆ ಉನ್ನತ ವರಮಾನವಾಗಿ ಪರಿವರ್ತನೆಯಾಗುವುದಿಲ್ಲ ಅದಕ್ಕೆ ರಾಜ್ಯಶಕ್ತಿಯ (ಸರ್ಕಾರ) ಮಧ್ಯ ಪ್ರವೇಶ ಬೇಕಾಗುತ್ತದೆ. ಇದು ಈ ವಿಶ್ಲೇಷಣೆಯಿಂದ ತಿಳಿದು ಬರುವ ನೀತಿ ನಿರ್ದೇಶನವಾಗಿದೆ.

ಈ ಬಗೆಯ ದ್ವಂದ್ವಮಯ ಸನ್ನಿವೇಶಗಳು ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ಅಭಿವೃದ್ದಿ ತಜ್ಞರು ಮತ್ತು ಯೋಜನಾ ತಜ್ಞರು ವರಮಾನ ವರ್ಧನೆಯು ತನ್ನಷ್ಟಕ್ಕೆ ತಾನೇ ಮಾನವ ಅಭಿವೃದ್ಧಿಯಾಗಿ ಪರಿವರ್ತನೆಯಾಗುವುದಿಲ್ಲ ಎಂಬುದನ್ನು ಅರಿತುಕೊಂಡರು. ವರಮಾನ ವರ್ಧನೆಯನ್ನು ಪ್ರಜ್ಞಾಪೂರ್ವಕವಾಗಿ ಜನರ ಧಾರಣಾ ಸಾಮರ್ಥ್ಯವಾಗಿ ಪರಿವರ್ತಿಸದಿದ್ದರೆ ಮತ್ತು ನಿರ್ವಹಿಸದಿದ್ದರೆ ಅದು ಮಾನವ ಅಭಿವೃದ್ಧಿಗೆ ಅಪಾಯ ತರುತ್ತದೆಯೆಂಬ ಜ್ಞಾನೋದಯ ಕೆಲವರಿಗಾದರೂ ಉಂಟಾಯಿತು.

ಇದಕ್ಕಿಂತ ಹೆಚ್ಚಾಗಿ ಮಾನವ ಅಭಿವೃದ್ಧಿಯ ಅವಿಭಾಜ್ಯ ಅಂಗವಾದ ವರಮಾನವು ಅಬಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಾದರೂ ಅದು ಅಭಿವೃದ್ಧಿಯ ಒಂದು ಭಾಗವನ್ನಷ್ಟೇ ಒಳಗೊಳ್ಳುತ್ತಿದೆಯೆಂಬುದು ತಿಳಿದು ಬಂದಿತು. ಇದರಿಂದ ಗಮನವು ವರಮಾನ ವರ್ಧನಾ ಅಭಿವೃದ್ಧಿ ಮೀಮಾಂಸೆಯಿಂದ ಜನರನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ, ಮುಂದಿನ ತಲೆಮಾರಿನ ಬಗ್ಗೆ ಸಹಸ್ಪಂದಿಯಾಗಿರುವ, ಪರಿಸರ ಸ್ಪಂದಿಯಾದ ಲಿಂಗ ಸಂಬಂಧಗಳ ಬಗ್ಗೆ ಜಾಗೃತವಾಗಿರುವ ಮಾನವ ಅಭಿವೃದ್ಧಿ ಕಡೆಗೆ ಹರಿಯುವುದು ಪ್ರಾರಂಭವಾಯಿತು.

. ಅಭಿವೃದ್ಧಿಯ ಸಾಧನಗಳು ಮತ್ತು ಅಭಿವೃದ್ಧಿಯು ಒಳಗೊಳ್ಳುವ ಸಂಗತಿಗಳು

ಅಮರ್ತ್ಯಸೆನ್ ಮತ್ತು ಮೆಹಬೂಬ್ ಉಲ್ ಹಕ್ ರೂಪಿಸಿರುವ ಅಭಿವೃದ್ಧಿ ಮೀಮಾಂಸೆಯಲ್ಲಿ ಮಂಡನೆಯಾಗಿರುವ ಪ್ರಮುಖ ವಾದವೆಂದರೆ ಅಭಿವೃದ್ಧಿ ಸಾಧನಗಲು ಮತ್ತು ಅಭಿವೃದ್ಧಿ ಗುರಿಗಳ ನಡುವಿನ ಭಿನ್ನತೆ. ಇದನ್ನ ಅರ್ತ ಮಾಡಿಕೊಂಡರೆ ನಮಗೆ ಅಭಿವೃದ್ಧಿಯ ಖಚಿತ ನಿರ್ವಚನ ಸಾಧ್ಯವಾಗುತ್ತದೆ. ಸೆನ್ ಪ್ರಕಾರ ವರಮಾನವೆನ್ನುವುದು ಅಭಿವೃದ್ಧಿಯ ಸಾಧನ ಮಾತ್ರವಾಗಿದೆ.ಅದೇ ರೀತಿಯಲ್ಲಿ ಬಂಡವಾಳ, ಉತ್ಪನ್ನ, ಕೈಗಾರಿಕೋತ್ಪಾದನೆ ಮುಂತಾದವುಗಳು ಅಭಿವೃದ್ಧಿಯ ಸಾಧನಗಳು. ಆದರೆ ಸಾಂಪ್ರದಾಯಿಕ ಅಭಿವೃದ್ದಿ ಸಿದ್ಧಾಂತಗಳಲ್ಲಿ ವರಮಾನದಲ್ಲಿನ ವಾರ್ಷಿಕ ಏರಿಕೆಯನ್ನು, ಉತ್ಪನ್ನದಲ್ಲಿನ ಬೆಳವಣಿಗೆಯನ್ನು, ಕೈಗಾರಿಕೋತ್ಪಾದನೆಯಲ್ಲಿನ ಪ್ರಗಿತಯನ್ನು, ಬಂಡವಾಳದ ಹೂಡಿಕೆಯನ್ನೇ ಅಭಿವೃದ್ಧಿಯೆಂದೇ ಬಿಂಬಿಸಿಕೊಂಡು ಬರಲಾಗಿದೆ. ಅವುಗಳಲ್ಲಿನ ವರ್ಧನೆಯನ್ನು ಅಭಿವೃದ್ಧಿಯ ಸೂಚಿಯಾಗಿ ಬಳಸಲಾಗುತ್ತಿದೆ. ಆದರೆ ಅವುಗಳಿಗೆ ಅಭಿವೃದ್ಧಿಯಲ್ಲಿ ಉಪಕರಣವಾದಿ ಪಾತ್ರ ಮಾತ್ರವಿರುತ್ತದೆ. ಅವು ಅಭಿವೃದ್ಧಿಯ ಉಪಕರಣಗಳು ಎಂಬುದನ್ನು ಸೆನ್ ತೋರಿಸಿಕೊಟ್ಟಿದ್ದಾನೆ. ಆದರೆ ಸಾಕ್ಷರತೆ, ಶಿಕ್ಷಣ, ಲಿಂಗಸಮಾನತೆ, ಆರೋಗ್ಯ, ಆಹಾರದ ಹಕ್ಕು, ಸ್ವಾತಂತ್ರ್ಯ ಮುಂತಾದವುಗಳು ಅಬಿವೃದ್ಧಿಯ ಸಾಧನಗಳೂ ಹೌದು ಮತ್ತು ಅದಕಿಕಂತ ಮುಖ್ಯವಾಗಿ ಅವು ಅಭಿವೃದ್ಧಿಯು ಅಂತರ್ಗತ ಮಾಡಿಕೊಂಡಿರುವ ಸಂಗತಿಗಳಾಗಿವೆ. ಇವು ಅಭಿವೃದ್ಧಿಯ ಗುರಿಗಳು. ಸಾಕ್ಷರತೆಯೆನ್ನುವುದು ಅಭಿವೃದ್ಧಿಯ ಸಾಧನವಾಗಿದೆ. ಅದಕ್ಕಿಂತ ಮುಖ್ಯವಾಗಿ ಅದು ಅಭಿವೃದ್ಧಿಯ ಅಂತರ್ಗತ ಭಾಗವಾಗಿದೆ. ಈ ಅಂತರ್ಗತ ಸೂಚಿಗಳು ಅಭಿವೃದ್ಧಿಯ ಸಾಧನಗಳು, ಅವು ಅಭಿವೃದ್ಧಿಯು ಒಳಗೊಳ್ಳಬೇಕಾದ ಸಂಗತಿಗಳು. ಅವು ಅಭಿವೃದ್ಧಿಯ ಮೌಲ್ಯಮಾಪನದ ಸೂಚಿಯಾಗಿವೆ. ವರಮಾನವು ಅಭಿವೃದ್ಧಿಯಲ್ಲಿ ಸಾಧನವಾಗಿ ಮಾತ್ರ ಕೆಲಸ ಮಾಡುತ್ತದೆ. ಅದಕ್ಕೆ ಒಂದೇ ಒಂದು ಪಾತ್ರವಿದೆ. ಆದರೆ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ ಮುಂತಾದವುಗಳಿಗೆ ಸಾಧನವಾಗಿ ಪಾತ್ರವಿದೆ. ಅವು ಅಭಿವೃದ್ಧಿಯ ಮೌಲ್ಯಮಾಪನದ ಸೂಚಿಗಳು. ಅವುಗಳಲ್ಲಿನ ವರ್ಧನೆಯೇ ಅಭಿವೃದ್ಧಿ.

.. ಜನರನ್ನು ಮೂಲಧಾತುವನ್ನಾಗಿ ಹೊಂದಿರುವ ಅಭಿವೃದ್ಧಿ ಮೀಮಾಂಸೆ

ಪ್ರಸ್ತುತ ಬದುಕುತ್ತಿರುವ ತಲೆಮಾರು ಮತ್ತು ಮುಂದೆ ಬರುವ ತಲೆಮಾರಿನ ಜನರನ್ನು ಒಳಗೊಳ್ಳುವ ಜೀವಜಾಲದ ಪ್ರಶ್ನೆಯನ್ನು ಮುಖ್ಯವಾಗಿ ಅಂತರ್ಗತ ಮಾಡಿಕೊಂಡಿರುವ ಮಾನವ ಅಭಿವೃದ್ಧಿ ಕುರಿತ ವಿಚಾರಗಳು ಮೆಹಬೂಬ್ ಉಲ್ ಹಕ್, ಅಮರ್ತ್ಯಸೆನ್, ಜೀನ್‌ಡ್ರೀಜ್ ಮುಂತಾದವರ ಬರಹಗಳಲ್ಲಿ ಹಾಗೂ ಯುಎನ್‌ಡಿಪಿಯ ಮಾನವ ಅಭಿವೃದ್ಧಿ ವರದಿಗಳಲ್ಲಿ ಭಾರತ, ಪಾಕಿಸ್ಥಾನ ಮುಂತಾದ ದೇಶಗಳು ಪ್ರಕಟಿಸಿರುವ ಮಾನವ ಅಭಿವೃದ್ಧಿ ವರದಿಗಳಲ್ಲಿ ಸ್ಪಷ್ಟ ರೂಪವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಅದೊಂದು ಹೊಸದಾಗಿ ಹಾಗೂ ಪ್ರಥಮ ಬಾರಿಗೆ ಶೋಧಿಸಿದ ಸಿದ್ಧಾಂತವೆಂದು ಭಾವಿಸಬೇಕಾಗಿಲ್ಲ. ಅದರ ಅನುಷ್ಠಾನದ ಅಗತ್ಯವನ್ನು ಇಂದು ಒತ್ತಿ ಹೇಳಲಾಗುತ್ತಿದೆ.

ನಾವು ಮಾಡಿಕೊಂಡಿರುವ ವ್ಯವಸ್ಥೆಯ ಮೌಲ್ಯಮಾಪನ ಮಾಡಬೇಕಾದರೆ ಅದು ಎಷ್ಟರಮಟ್ಟಿಗೆ ಮಾನವನ ಒಳಿತನ್ನು ಸಾಧಿಸಿದೆ ಎಂಬುದೇ ಮಾನದಂಡವಾಗಿರಬೇಕೆಂಬ ಸಂಗತಿಯು ಅರಿಸ್ಟಾಟಲ್‌ನಷ್ಟು (ಕ್ರಿ.ಪೂ. ೩೮೪-೩೨೨) ಹಳೆಯದಾಗಿದೆ. ಅರಿಸ್ಟಾಟಲ್‌ನ ಪ್ರಕಾರ ಜನರು ಸಾಧಿಸಿಕೊಳ್ಳಬೇಕಾದ ಸಾಧನೆ ಸಂಪತ್ತಿನ ಸಂಗ್ರಹವಲ್ಲ. ಏಕೆಂದರೆ ಅದೊಂದು ಕೇವಲ ಸಾಧನ. ಒಂದು ರಾಜಕೀಯ ವ್ಯವಸ್ಥೆಯು ಉತ್ತಮವಾಗಿದೆ ಅಥವಾ ಉತ್ತವಾಗಿಲ್ಲ ಎಂಬುದಕ್ಕೆ ರುಜುವಾತಾವುದೆಂದರೆ ಅದು ಜನರಿಗೆ ಸಮೃದ್ಧವಾದ ಬದುಕನ್ನು ಬದುಕಲು ಅವಕಾಶ ಮಾಡಿಕೊಟ್ಟಿದೆಯೋ ಅಥವಾ ಇಲ್ಲವೊ ಎಂಬುದಾಗಿ ಬೇಕೆಂಬುದು ಅವನ ಅಭಿಪ್ರಾಯವಾಗಿದೆ. ಈ ಬಗೆಯ ಚಿಂತನೆಯನ್ನು ಮುಂದುವರಿಸಿದ ಇಮ್ಯಾನುಯಲ್ ಕಾಂಟ್ (ಕ್ರಿ.ಶ. ೧೭೨೪-೧೮೦೪) ಜನರೇ ಎಲ್ಲ ಚಟುವಟಿಕೆಗಳ ಅಂತಿಮ ಗುರಿಯೆಂದು ಹೇಳುತ್ತಾ ಜನರನ್ನು ಸಾಧನವೆಂದು ಪರಿಗಣಿಸುವುದಕ್ಕೆ ಪ್ರತಿಯಾಗಿ ಯಾವಾಗಲೂ ಅವರನ್ನು ಅಂತಿಮ ಗುರಿಯೆಂದು ತಿಳಿಯಬೇಕು ಎಂದು ವಾದಿಸಿದ್ದಾನೆ. ಇದೇ ಬಗೆಯ ಚಿಂತನೆ ಮತ್ತು ಬರಹಗಳನ್ನು ಆಡಂಸ್ಮಿತ್, ಮಾಲ್ಥಸ್, ಕಾರ್ಲ್‌ಮಾರ್ಕ್ಸ್, ಜೆ.ಎಸ್. ಮಿಲ್ ಮುಂತಾದವರಲ್ಲಿ ಕಾಣಬಹುದು.

ಯುಎನ್‌ಡಿಪಿಯು ೧೯೯೪ರ ಮಾನವ ಅಭಿವೃದ್ಧಿ ವರದಿಯಲ್ಲಿ ಮಾನವ ಅಭಿವೃದ್ಧಿಯನ್ನು ಹೀಗೆ ಸ್ಪಷ್ಟವಾಗಿ ನಿರ್ವಚಿಸಿದೆ.

“ಮಾನವ ಅಭಿವೃದ್ಧಿಯೆಂದರೆ ವರಮಾನ ವರ್ಧನೆಯನ್ನು ಮತ್ತು ಅದರ ಫಲಗಳ ಸಮಾನ ವಿತರಣೆಯನ್ನು ಸಾಧಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಅದು ಪರಿಸರವನ್ನು ನಾಶ ಮಾಡದೆ ಪುನರುಜ್ಜೀವನಗೊಳಿಸುತ್ತದೆ. ಅದು ಜನರನ್ನು ನಿಕೃಷ್ಟೀಕರಣಗೊಳಿಸದೆ ಸಶಕ್ತರನ್ನಾಗಿಸುತ್ತದೆ. ಅದು ಬಡವರ ಬದುಕನ್ನು ಉತ್ತಮ ಪಡಿಸುವುದಕ್ಕೆ ಆದ್ಯತೆ ಕೊಡುತ್ತದೆ. ಜನರ ಅವಕಾಶ ಹಾಗೂ ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತೃತಗೊಳಿಸುತ್ತದೆ. ಅವರ ಬದುಕಿನ ಮೇಲೆ ಪ್ರಭಾವ ಬೀರುವ ತೀರ್ಮಾನಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಹಭಾಗಿಗಳಾಗುವ ಅವಕಾಶವನ್ನು ಅದು ಕೊಡುತ್ತದೆ. ಅದು ಜನರ ಪರವಾಗಿರುತ್ತದೆ. ಅದು ಉದ್ಯೋಗದ ಪರವಾಗಿರುತ್ತದೆ. ಅದು ಪರಿಸರದ ಪರವಾಗಿರುತ್ತದೆ ಮತ್ತು ಅದು ಮಹಿಳೆಯರ ಪರವಾಗಿರುತ್ತದೆ.”

ಮೆಹಬೂಬ್ ಉಲ್ ಹಕ್ ಅವರು ಮಾನವ ಅಭಿವೃದ್ಧಿಯ ನಾಲ್ಕು ಅಂಗಗಳ ಬಗ್ಗೆ ಮಾತನಾಡುತ್ತಾರೆ. ಅವುಗಳಾವುವೆಂದರೆ ಸಾಮಾಜಿಕ ನ್ಯಾಯ, ಸುಸ್ಥಿರಗತಿ, ಕಾರ್ಯಕ್ಷಮತೆ ಮತ್ತು ಸಶಕ್ತೀಕರಣ. ಈ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿರುವ ಮಾನವನೆಂಬ ಆಯಾಮವು ಕೇವಲ ಅಭಿವೃದ್ಧಿ ಸಂಕಥನಕ್ಕೆ ಸೇರಿದ ಮತ್ತೊಂದು ಸಂಗತಿಯಲ್ಲ. ಇದೊಂದು ನವೀನ ದೃಷ್ಟಿಕೋನವಾಗಿದೆ. ಹಕ್ ಹೇಳಿದಂತೆ ಜನರು ಅಭಿವೃದ್ಧಿಯಲ್ಲಿ ಅತ್ಯಂತ ಕೊನೆಯಲ್ಲಿ ಪರಿಗಣಿಸುವ ಗುರಿಯಲ್ಲ. ಅವರು ಅಭಿವೃದ್ಧಿಯ ವಸ್ತುವೂ ಹೌದು ಮತ್ತು ಅಭಿವೃದ್ಧಿ ಒಳಗೊಳ್ಳುವ ಜೀವಂತ ವ್ಯಕ್ತಿಗಳೂ ಹೌದು. ಅವರು ಅಮೂರ್ತವಾದ ಆರ್ಥಿಕ ಸೂಚಿಗಳು ಮಾತ್ರವಲ್ಲ. ಅಭಿವೃದ್ಧಿಯಿಂದ ವಂಚಿತರಾದ ಬಲಿಪಶುಗಳಲ್ಲ. ಅವರು ಅಭಿವೃದ್ಧಿಯ ಅರಸರು.

ಈ ಬಗೆಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅಭಿವೃದ್ಧಿಯ ಪ್ರಧಾನ ಉದ್ದೇಶವೆಂದರೆ ಜನರ ಆಯ್ಕೆಯ ವ್ಯಾಪ್ತಿಯನ್ನ ವರ್ಧಿಸುವುದು, ಜನರನ್ನು ಅಭಿವೃದ್ಧಿ ಪ್ರಕ್ರಿಯೆಯ ಕೇಂದ್ರಧಾತುವನ್ನಾಗಿ ಮಾಡುವುದು. ವರಮಾನವನ್ನು ಕೇಂದ್ರವನ್ನಾಗಿ ಮಾಡಿಕೊಂಡಿರುವ ಅಭಿವೃದ್ಧಿ ಮೀಮಾಂಸೆಗೂ ಮತ್ತು ಜನರನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ ಅಭಿವೃದ್ಧಿ ಮೀಮಾಂಸೆಗೂ ಮತ್ತು ಜನರನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ ಅಭಿವೃದ್ಧಿ ಮೀಮಾಂಸೆಗೂ ನಡುವೆ ಇರುವ ಪ್ರಧಾನ ಭಿನ್ನತೆಯೆಂದರೆ, ಮೊದಲನೆಯದು ಜನರಿಗೆ ಅಗತ್ಯವಾದ ಆಯ್ಕೆಗಳಲ್ಲಿ ಒಂದಾದ ವರಮಾನವನ್ನು ಮಾತ್ರ ಒಳಗೊಂಡಿದೆ. ಎರಡೆಯದು ಜನರ ಎಲ್ಲ ಆಯ್ಕೆಗಳ, ಅಂದರೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಆಯ್ಕೆಗಳ ವಿಸ್ತರಣೆಯನ್ನು ಒಳಗೊಂಡಿದೆ. ಆದರೆ ವರಮಾನ ವರ್ಧನೆಯನ್ನು ಮಾನವ ಅಭಿವೃದ್ಧಿಯನ್ನಾಗಿ ಪರಿವರ್ತಿಸಲು ಆರ್ಥಿಕ ಮತ್ತು ರಾಜಕೀಯ ಅಧಿಕಾರವನ್ನು ಪರಿವರ್ತಿಸಬೇಕಾಗುತ್ತದೆ. ಏಕೆಂದರೆ ನಮ್ಮ ಸಮಾಜ, ಆರ್ಥಿಕತೆ ಹಾಗೂ ರಾಜಕಾರಣವು ಶ್ರೇಣೀಕೃತವಾದುದಾಗಿದೆ.

ಪ್ರಪ್ರಥಮವಾಗಿ ಜನರು ಅಭಿವೃದ್ಧಿಯ ಕೇಂದ್ರಬಿಂದುವಾಗಬೇಕು. ಅಭಿವೃದ್ಧಿಯನ್ನು ಜನರ ನೆಲೆಯಿಂದ ಅರ್ಥ ಮಡಿಕೊಳ್ಳುವುದನ್ನು ಶುರು ಮಾಡಬೇಕು. ಪ್ರತಿಯೊಂದು ಆರ್ಥಿಕ ಚಟುವಟಿಕೆಯನ್ನು ಅದು ಎಷ್ಟರಮಟ್ಟಿಗೆ ಜನರನ್ನು ಒಳಗೊಳ್ಳುತ್ತದೆ ಮತ್ತು ಅದು ಎಷ್ಟರಮಟ್ಟಿಗೆ ಜನರಿಗೆ ಫಲ ಒದಗಿಸುತ್ತದೆ ಎಂಬುದರ ಮೇಲೆ ಮೌಲ್ಯಮಾಪನ ಮಾಡಬೇಕು. ಅಭಿವೃದ್ಧಿಯ ಯಶಸ್ಸನ್ನು ತೀರ್ಮಾನಿಸುವ ಸಂಗತಿಯು ಜನರ ಬದುಕು ಉತ್ತಮಗೊಳ್ಳುವ ಪ್ರಕ್ರಿಯೆಯಾಗಬೇಕು. ಅದು ಕೇವಲ ಉತ್ಪಾದನೆಯ ವರ್ಧನೆ, ವರಮಾನದ ವರ್ಧನೆಗೆ ಸೀಮಿತವಾಗಬಾರದು. ಎರಡನೆಯದಾಗಿ ಮಾನವ ಅಭಿವೃದ್ಧಿಯು ಎರಡು ಮುಖಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಉತ್ತಮವಾದ ಆರೋಗ್ಯ, ಉತ್ತಮವಾದ ಜ್ಞಾನ ಮತ್ತು ಉನ್ನತವಾದ ಕುಶಲತೆಗಳನ್ನೊಳಗೊಂಡಂತೆ ಮಾನವನ ಧಾರಣಾ ಸಾಮರ್ಥ್ಯವನ್ನು ವರ್ಧಿಸುವುದು. ಎರಡನೆಯದಾಗಿ ನಿರ್ಮಾಣವಾದ ಧಾರಣಾ ಸಾಮರ್ಥ್ಯವನ್ನು ಜನರು ದಕ್ಕಿಸಿಕೊಳ್ಳುವ ಪರಿ. ಪ್ರತಿಯೊಂದು ಸಮಾಜವೂ ಮಾನವನ ಧಾರಣಾ ಸಾಮರ್ಥ್ಯವನ್ನು ನಿರ್ಮಿಸಬೇಕು ಮತ್ತು ಅದು ಎಲ್ಲರಿಗೂ ಸಮಾನಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಇವರೆಡೂ ಸಂಗತಿಗಳನ್ನು ಸಮಾನವಾದ ಮಟ್ಟದಲ್ಲಿ ಉತ್ತಮಪಡಿಸದಿದ್ದರೆ ಮಾನವದ್ಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಮೂರನೆಯದಾಗಿ ಸಂಪನ್ಮೂಲ ಮತ್ತು ಅಂತಿಮಗುರಿಗಳ ನಡುವ ಸ್ಪಷ್ಟ ಭಿನ್ನತೆಯನ್ನು ಗುರುತಿಸಿಕೊಳ್ಳಬೇಕು. ವರಮಾನವು ಅಭಿವೃದ್ದಿಯ ಸಾಧನ ಮಾತ್ರವಾಗಿದೆ. ಜನರು ಅದರ ಗುರಿಯಾಗಿದ್ದಾರೆ. ನಾಲ್ಕನೆಯದಾಗಿ ಮಾನವ ಅಭಿವೃದ್ಧಿಯು ಇಡೀ ಸಮಾಜವನ್ನು ಒಳಗೊಲ್ಳುತ್ತದೆ.ಅದು ಕೇವಲ ಆರ್ಥಿಕತೆಯನ್ನು ಮಾತ್ರವಲ್ಲ. ಇಲ್ಲಿ ಆರ್ಥಿಕ ಸಂಗತಿಗಳಿಗೆ ನೀಡಿದಷ್ಟೇ ಮಹತ್ವವನ್ನು ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಗತಿಗಳಿಗೂ ನೀಡಲಾಗುತ್ತದೆ. ಐದನೆಯದಾಗಿ ಅದು ಜನರನ್ನು ಅಭಿವೃದ್ಧಿಯ ಸಾಧನವಾಗಿ ಮತ್ತು ಸಾಧ್ಯವಾಗಿ ಪರಿಗಣಿಸುತ್ತದೆ.

ಮಾನವ ಅಭಿವೃದ್ಧಿ ಪರಿಕಲ್ಪನೆಗೆ ಕಾರ್ಯಾಚರಣೆ ರೂಪ ಕೊಡುವ ಉದ್ದೇಶದಿಂದ ಯುಎನ್‌ಡಿಪಿಯು ಮೂರು ಸೂಚಿಗಳನ್ನು ಒಳಗೊಂಡ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರೂಪಿಸಿದೆ.

ಮಾನವ ಅಭಿವೃದ್ಧಿ ಸೂಚ್ಯಂಕವು ಒಳಗೊಳ್ಳುವ ಸೂಚಿಗಳಾವುವೆಂದರೆ

೧. ಜನರ ನಿರೀಕ್ಷಿತ ಆಯಸ್ಸನ್ನು ಆಧರಿಸಿದ ಜೀವನಾಯುಷ್ಯ.

೨. ವಯಸ್ಕರ ಸಾಕ್ಷರತೆ ಮತ್ತು ಪದವಿ ಮತ್ತು ಪದವಿ ಮತ್ತು ಉನ್ನತ ಶಿಕ್ಷಣದ ದಾಖಲಾತಿಗಳನ್ನು ಒಳಗೊಂಡ ಶೈಕ್ಷಣಿಕ ಸಾಧನೆ.

೩. ನೈಜ ಒಟ್ಟು ಆಂತರಿಕ ಉತ್ಪನ್ನವನ್ನು ಆಧರಿಸಿದ ಜೀವನ ಮಟ್ಟ. ಯುಎನ್‌ಡಿಪಿಯು ಎರಡು ಲಿಂಗಸ್ಪಂದಿ ಸೂಚ್ಯಂಕಗಳನ್ನು ರೂಪಿಸಿದೆ.

೧. ಲಿಂಗ ಸಂಬಂಧಿ ಅಭಿವೃದ್ದಿ ಸೂಚ್ಯಂಕ

೨. ಲಿಂಗ ಸಂಬಂಧಿ ಸಶಕ್ತೀಕರಣ ಮಾಪನ.

’ವರಮಾನ ಬಡತನ’ಕ್ಕೆ ಪ್ರತಿಯಾಗಿ ಅದು ಬಡತನವನ್ನು ಮಾಪನ ಮಾಡಲು ’ಮಾನವ ಬಡತನ’ ಸೂಚ್ಯಂಕವನ್ನು ರೂಪಿಸಿದೆ. ಇವೆಲ್ಲವನ್ನೂ ಪ್ರತಿ ತಲಾ ಒಟ್ಟು ದೇಶೀಯ ಉತ್ಪನ್ನಕ್ಕಿಂತ ವಿಸ್ತೃತ ನೆಲೆಯಲ್ಲಿ ಅಭಿವೃದ್ಧಿಯನ್ನು ಮಾಪನ ಮಡುತ್ತವೆ. ಇವೆಲ್ಲವೂ ಅಮರ್ಥ್ಯಸೆನ್‌ನ ’ಸ್ವಾತಂತ್ರ್ಯವಾಗಿ ಅಭಿವೃದ್ಧಿ’ಯೆಂಬ ವೈಚಾರಿಕ ನೆಲೆಯಿಂದ ಉದ್ಭವಿಸಿದ ಪರಿಭಾವನೆಗಳಾಗಿವೆ.

ಮಾನವ ಅಭಿವೃದ್ದಿ ಪರಿಕಲ್ಪನೆಯು ವ್ಯವಸ್ಥಿತವಾಗಿ ವಿಕಾಸಗೊಳ್ಳುತ್ತಾ ನಡೆದಿರುವ ಒಂದು ಧಾರೆಯಾಗಿದೆ. ಈ ವಿಕಾಸದ ಹಾದಿಯಲ್ಲಿ ಅಭಿವೃದ್ದಿಯ ಮಾಪನಗಳು ಮಾತ್ರ ಬದಲಾಗುತ್ತಿಲ್ಲ. ಅಭಿವೃದ್ಧಿಯ ಅರ್ಥ ವ್ಯಾಪ್ತಿಯೂ ವಿಸ್ತೃತಗೊಳ್ಳುತ್ತಿದೆ. ಅದು ಈಗ ಲಿಂಗ ಸಂಬಂಧಿ ಆಯಾಮ, ಮಾನವ ಹಕ್ಕುಗಳ ಆಯಾಮ, ಧಾರಣಾ ಸಾಮರ್ಥ್ಯದ ಆಯಾಮ, ಜನತಾಂತ್ರಿಕ ಸ್ವಾತಂತ್ರ್ಯದ ಆಯಾಮನು ಪಡೆದುಕೊಳ್ಳುತ್ತಿದೆ. ಉದಾಹರಣೆಗೆ ಸೆನ್‌ರ ಧಾರಣಾ ಸಾಮರ್ಥ್ಯ ಪರಿಕಲ್ಪನೆಯು ೧೯೮೦ರಿಂದಲೂ ವಿಕಾಸಗೊಳ್ಳುತ್ತಲೇ ನಡೆದಿದೆ. ಮೊದಲು ಅದನ್ನು ಕಲ್ಯಾಣ ಅರ್ಥಶಾಸ್ತ್ರದ ನೆಲೆಯಲ್ಲಿ ರೂಪಿಸಲಾಯಿತು. ಇಂದು ಅದು ವಿವಿಧ ಹಂತಗಳನ್ನು ಹಾದು ಬಂದು ’ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಎನ್ನುವಲ್ಲಿಗೆ ಬಂದು ನಿಂತಿದೆ. ಡೆಸ್ ಗ್ಯಾಸ್‌ಫಿರ್ ಮತ್ತು ಐರನಿ ವಾನ್ ಸ್ವವೆರನ್ (೨೦೦೬:೧೫೮)ರ ಪ್ರಕಾರ ಇತ್ಯಾತ್ಮಕ ಸ್ವಾತಂತ್ರ್ಯ ಮತ್ತು ಪ್ರತಿ ತಲಾ ಒಟ್ಟು ಆಂತರಿಕ ಉತ್ಪನ್ನಕ್ಕೆ ಪ್ರತಿಯಾದ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಸಂಯುಕ್ತಗೊಳಿಸಿ ಇಂದು ‘ಸ್ವಾತಂತ್ರ್ಯವೇ ಅಭಿವೃದ್ಧಿ’ಯೆಂಬ ಸಮಗ್ರ ಅಭಿವೃದ್ಧಿ ಮೀಮಾಂಸೆಯನ್ನು ಸೆನ್ ಅಭಿವೃದ್ಧಿಪಡಿಸುತ್ತಿರುವಂತೆ ಕಾಣುತ್ತಿದೆ. ಅವರ ಬರಹಗಳಲ್ಲಿ ಧಾರಣಾ ಸಮರ್ಥ್ಯವೆಂಬ ನುಡಿಯ ಸ್ಥಳದಲ್ಲಿ ಇಂದು ಸ್ವಾತಂತ್ರ್ಯವೆಂಬ ನುಡಿ ಬಂದು ಕುಳಿತುಕೊಳ್ಳುತ್ತಿದೆ. ಅವರು ಇಂದು ಸ್ವಾತಂತ್ರ್ಯವು ಅಭಿವೃದ್ಧಿಯ ಪ್ರಧಾನ ಸಾಧನವೆಂದೂ ಮತ್ತು ಪ್ರಾಥಮಿಕ ಗುರಿಯೆಂದೂ ಪ್ರತಿಪಾದಿಸುತ್ತಿದ್ದಾರೆ.

 


[1] ಖಾಸಗಿ ಉದ್ಯಮಿಗಳು ಜಮೀನು ಕೊಟ್ಟ ಜನರಿಗೆ ಯಾವ ಬಗೆಯ ಉದ್ಯೋಗ ಕೊಟ್ಟರು ಎಂಬುದು ಜಮೀನು ನೀಡಿ, ಉದ್ಯೋಗ ಪಡೆಯಿರಿ ಎಂದು ಘೋಷಣೆ ಹಾಕುತ್ತಿರುವವರಿಗೆ ಗೊತ್ತಿದೆ. ಈ ಉದ್ದಿಮೆಗಳೆಲ್ಲವೂ ಉದ್ಯೋಗಕ್ಕೆ ಸಂಬಂಧಿಸಿದಂತೆ ‘ಹೈರ್ ಆಂಡ್ ಫೈರ್ ಪಾಲಿಸಿ’ಯನ್ನು ಅನುಸರಿಸುತ್ತಿವೆ. ಒಂದು ವೇಳೆ ಉದ್ಯೋಗದಿಂದ ಫ್ಯರ್ ಆದ ಮೇಲೆ ಜಮೀನು ಕಳೆದುಕೊಂಡ ರೈತನು ಎಲ್ಲಿಗೆ ಹೋಗಬೇಕು?