. ಪ್ರಸ್ತಾವನೆ

ಪ್ರಸ್ತುತ ಅಧ್ಯಯನದಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿ ಮತ್ತು ದುಸ್ಥಿತಿ ಪ್ರಕ್ರಿಯೆಯನ್ನು ಚರ್ಚೆ ಮಾಡಲಾಗಿದೆ. ಈ ಕೃತಿಯನ್ನು ‘ಅಭಿವೃದ್ಧಿ ಮತ್ತು ದುಸ್ಥಿತಿ ಅಧ್ಯಯನ’ ಎಂದು ಕರೆಯಲಾಗಿದೆ. ಏಕೆಂದರೆ ಈ ಜಿಲ್ಲೆಯ ಅಭಿವೃದ್ಧಿಯನ್ನು ಮತ್ತು ದುಸ್ಥಿತಿಯನ್ನು ಏಕಕಾಲಕ್ಕೆ ಅನುಭವಿಸುತ್ತಿದೆ. ಅಭಿವೃದ್ಧಿಯ ದಾರಿಯಲ್ಲಿ ಜಿಲ್ಲೆಯು ಒಂದು ಹೆಜ್ಜೆ ಮುಂದಿಟ್ಟರೆ ದುಸ್ಥಿತಿಯು ಅದನ್ನು ಎರಡು ಹೆಜ್ಜೆ ಹಿಂದೆ ತಳ್ಳುತ್ತಿದೆ. ಇಡೀ ರಾಜ್ಯದಲ್ಲಿ ಈ ಜಿಲ್ಲೆಯು ದುಸ್ಥಿತಿಯು ದೃಷ್ಟಿಯಿಂದ ನಾಲ್ಕನೆಯ ಸ್ಥಾನದಲ್ಲಿದೆ (ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿ: ೨೦೦೨: ಪು.೮೧೮) ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದ ೨೭ ಜಿಲ್ಲೆಗಳ ಪೈಕಿ ವಿಜಾಪುರವು ಇಪ್ಪತ್ಮೂರನೆಯ ಸ್ಥಾನದಲ್ಲಿದೆ. ತಲಾ ವರಮಾನದಲ್ಲಿ ಅದರ ಸ್ಥಾನ ಇಪ್ಪತ್ಮೂರನೆಯದು ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಅದರ ಸ್ಥಾನ ಇಪ್ಪತ್ಮೂರನೆಯದು (ನೋಡಿ: ‘ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೦೮’). ಈ ಕಾರಣದಿಂದ ಜಿಲ್ಲೆಯ ಅಭಿವೃದ್ಧಿ ಮತ್ತು ದುಸ್ಥಿತಿ ಅಧ್ಯಯನವು ಕುತೂಹಲಕಾರಿಯಾಗಿದೆ. ಈ ಜಿಲ್ಲೆಯ ಅಭಿವೃದ್ಧಿ ಜಡವಾಗಿ ನಿಂತು ಬಿಟ್ಟಿಲ್ಲ. ಅಭಿವೃದ್ಧಿ ನಡೆದಿದೆ. ಈ ಜಿಲ್ಲೆಯ ಒಟ್ಟು ಜಿಲ್ಲಾ ತಲಾ ಆಂತರಿಕ ಉತ್ಪನ್ನವು (ಚಾಲ್ತಿ ಬೆಲೆಗಳಲ್ಲಿ) ೧೯೯೦-೯೧ರಲ್ಲಿ ರೂ. ೪೮೦೧ ರಷ್ಟಿದ್ದುದು ೧೯೯೯-೨೦೦೦ದಲ್ಲಿ ಅದು ರೂ. ೧೪೮೮೮ರಷ್ಟಾಯಿತು. ಇದು ೨೦೦೭-೨೦೦೮ರಲ್ಲಿ ರೂ. ೨೬೭೩೫ರಷ್ಟಾಗಿದೆ. ವರಮಾನದ ವರ್ಧನೆ ನಡೆದಿದೆ. ಅದೇನು ಸ್ಥಿರಗತಿಯಲ್ಲಿ ನಡೆಯುತ್ತಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಏರಿಕೆ ನಡೆದಿದೆ. ಅದು ೧೯೯೧ರಲ್ಲಿ ೦.೫೦೪ರಷ್ಟಿದ್ದುದು ೨೦೦೧ರಲ್ಲಿ ೦.೫೮೯ ರಷ್ಟಾಗಿದೆ. ಮತ್ತೆ ೨೦೦೬ರಲ್ಲಿ ಅದು ೦.೬೩೦ ರಷ್ಟಾಗಿದೆ (ನೋಡಿ: ಕೋಷ್ಟಕ ೫.೭) ಆದರೆ ಇವೆರಡರ ಬೆಳವಣಿಗೆ ಗತಿ ರಾಜ್ಯಮಟ್ಟದಲ್ಲಿನ ಗತಿಗಿಂತ ಕೆಳಮಟ್ಟದಲ್ಲಿದೆ. ಸಾಕ್ಷರತೆಯ ಪ್ರಮಾಣ ಏರಿಕೆಯಾಗುತ್ತಿಲ್ಲ. ಅದು ೧೯೯೧ರಲ್ಲಿ ಶೇ.೫೬.೪೬ರಷ್ಟಿದ್ದುದು ೨೦೦೧ರಲ್ಲಿ ಶೇ.೫೭.೦೧ರಷ್ಟಾಗಿದೆ. ಇದು ದೊಡ್ಡ ಆತಂಕಕಾರಿ ಸಂಗತಿಯಾಗಿದೆ. ಇದು ದುಸ್ಥಿತಿಯ ಕಥೆ. ಈ ಜಿಲ್ಲೆಯಲ್ಲಿ ಶೇ.೪೩ರಷ್ಟು ಹೆಣ್ಣು ಮಕ್ಕಳು ಹದಿನೆಂಟು ವರ್ಷವಾಗುವುದಕ್ಕೆ ಮೊದಲೇ ಮದುವೆಯಾಗಿ ಬಿಡುತ್ತಾರೆ (೨೦೦೭-೦೮) ಇದು ದುಸ್ಥಿತಿಯ ಇನ್ನೊಂದು ಸೂಚಿ. ಅನೇಕ ಬಗೆಯ ದುಸ್ಥಿತಿಗಳನ್ನು ಜಿಲ್ಲೆಯು ಅನುಭವಿಸುತ್ತಿದೆ. ಅಭಿವೃದ್ಧಿಯೆನ್ನುವುದು ಅತ್ಯಂತ ಮಂದಗತಿಯಲ್ಲಿ ನಡೆದಿದೆ.

ಪ್ರಸ್ತುತ ಅಧ್ಯಯನದಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿಯನ್ನು ವರಮಾನ ವರ್ಧನಾ ಅಭಿವೃದ್ಧಿ ಪ್ರಣಾಳಿಕೆ ಮತ್ತು ಮಾನವ ಅಭಿವೃದ್ಧಿ ಪ್ರಣಾಳಿಕೆಗಳ ನೆಲೆಯಲ್ಲಿ ಪರಿಗಣಿಸಲಾಗಿದೆ. ವರಮಾನ ಸಂವರ್ಧನಾ ಪ್ರಣಾಳಿಕೆಯ ಪ್ರಕಾರ ವಿಜಾಪುರ ಜಿಲ್ಲೆಯ ಅಭಿವೃದ್ಧಿಯ ಸ್ವರೂಪವೇನು ಮತ್ತು ಮಾನವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಅನುಭವಗಳೇನು ಎಂಬುದನ್ನು ಚರ್ಚಿಸಲಾಗಿದೆ. ಬಹಳ ಮುಖ್ಯವಾಗಿ ಈ ಅಧ್ಯಯನದಲ್ಲಿ ಪ್ರತಿಪಾದಿಸುತ್ತಿರುವ ಪ್ರಮೇಯವೇನೆಂದರೆ ವಿಜಾಪುರ ಜಿಲ್ಲೆಯ ಅಭಿವೃದ್ಧಿಯು ಎರಡೂ ಪ್ರಣಾಳಿಕೆಗಳ ನೆಲೆಗಳಲ್ಲೂ ತೀವ್ರ ‘ಹಿಂದುಳಿದಿದೆ’ ಎಂಬುದಾಗಿದೆ. ವರಮಾನದ ದೃಷ್ಟಿಯಿಂದಲೂ ಅದರ ಅಭಿವೃದ್ಧಿ ಕೆಳಮಟ್ಟದಲ್ಲಿದೆ. ಮಾನವ ಅಭಿವೃದ್ಧಿ ಪ್ರಣಾಳಿಕೆಯ ದೃಷ್ಟಿಯಿಂದಲೂ ಅದು ದುಸ್ಥಿತಿಯನ್ನು ಅನುಭವಿಸುತ್ತಿದೆ. ಈ ಅಧ್ಯಯನದಲ್ಲಿ ವಿಜಾಪುರ ಜಿಲ್ಲೆಯ ಹಿಂದುಳಿದಿರುವಿಕೆಯ ಮೂಲದಲ್ಲಿನ ಕಾರಣಗಳನ್ನು ಸ್ಥೂಲವಾಗಿ ಮಾತ್ರ ಪರಿಗಣಿಸಲಾಗಿದೆ. ಇಲ್ಲಿ ಹಿಂದುಳಿದಿರುವಿಕೆಯನ್ನು, ಅದರ ತೀವ್ರತೆಯನ್ನು, ಅದರ ಲಿಂಗ ಸಂಬಂಧಿ ಆಯಾಮವನ್ನು ಮತ್ತು ಪರಿಶಿಷ್ಟ ನೆಲೆಗಳನ್ನು ಹಿಡಿದಿಡುವುದಕ್ಕೆ ಆದ್ಯತೆಯನ್ನು ನೀಡಲಾಗಿದೆ. ಒಟ್ಟಾರೆ ಇದರ ಉದ್ದೇಶವೆಂದರೆ ವಿಜಾಪುರ ಜಿಲ್ಲೆಯ ಅಭಿವೃದ್ಧಿಯು ಕೆಲವು ಮೂಲಭೂತ ಸಮಸ್ಯೆಗಳಿಂದ ನರಳುತ್ತಿದೆ. ಅವು ಅತ್ಯಂತ ಜಟಿಲವಾಗಿವೆ ಮತ್ತು ವಿರಾಟ್ ಸ್ವರೂಪದಲ್ಲಿವೆ. ಈ ಸವಾಲನ್ನು ಜಿಲ್ಲಾ ಆಡಳಿತವಾಗಲಿ ಅಥವಾ ಜಿಲ್ಲಾ ಪಂಚಾಯಿತಿಯಾಗಲಿ ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯ ಕಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನ ನೀಡಬೇಕಾಗಿದೆ. ಈ ಜಿಲ್ಲೆಯ ಅಭಿವೃದ್ಧಿ ಪ್ರಕ್ರಿಯೆಯು ೨೦೦೦ ದಿಂದ ಒಂದು ರೀತಿಯಲ್ಲಿ ಮಂದಗತಿಗೆ ಒಳಗಾಗಿದೆ. ಇದು ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದೆ. ಈ ಸಂಗತಿಗಳನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ.

.. ಅಧ್ಯಯನದ ವಿಷಯ

ಈ ಅಧ್ಯಯನ ಒಳಗೊಳ್ಳುವ ಅಧ್ಯಯನ ವಿಷಯವನ್ನು ಪರಿಭಾವಿಸಿಕೊಂಡಿರುವ ರೀತಿ ಹಾಗೂ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆ ಸವಾಲುಗಳನ್ನು ಹೇಗೆ ರೂಪಿಸಿಕೊಳ್ಳಲಾಗಿದೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಈ ಜಿಲ್ಲೆಯ ಅಭಿವೃದ್ಧಿಯನ್ನು ಕೇವಲ ವರಮಾನದ ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದರಿಂದ ನಮಗೆ ಸಮಸ್ಯೆಯ ಆಳ-ಹರವು ಅರ್ಥವಾಗುವುದಿಲ್ಲ. ಅಭಿವೃದ್ಧಿಯ ಕರ್ತೃಗಳಾದ ಮತ್ತು ಅದನ್ನು ಅನುಭವಿಸುವವರಾದ ಜನರ ನೆಲೆಯಿಂದ ಅದನ್ನು ಪರಿಭಾವಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣವೆಂದು ಭಾವಿಸಲಾಗಿದೆ. ಈ ಅಧ್ಯಯನದಲ್ಲಿ ವರಮಾನದ ಜೊತೆಯಲ್ಲಿ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಆರೋಗ್ಯಭಾಗ್ಯ, ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳು, ಪರಿಶಿಷ್ಟರ ಸ್ಥಿತಿಗತಿ ಮತ್ತು ಆಡಳಿತದ ಪಾತ್ರ ಮುಂತಾದವುಗಳನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ ಕೇಳಿಕೊಂಡಿರುವ ಪ್ರಶ್ನೆಗಳೆಂದರೆ ಯಾಕೆ ಈ ಜಿಲ್ಲೆಯ ಅಭಿವೃದ್ಧಿಯು ಮಂದಗತಿಯಲ್ಲಿ ನಡೆದಿದೆ? ಈ ಜಿಲ್ಲೆಯ ಸಾಧನೆಯು ಸಾಕ್ಷರತೆಗೆ ಸಂಬಂಧಿಸಿದಂತೆ ಯಾಕೆ ಆತಂಕಕಾರಿಯಾಗಿದೆ? ಈ ಜಿಲ್ಲೆಯ ಅಭಿವೃದ್ಧಿ ಸೂಚಿಗಳ ಬೆಳವಣಿಗೆ ೨೦೦೦ದ ನಂತರ ಯಾಕೆ ತೀವ್ರ ಮಂದವಾಗಿವೆ? ವಸಾಹತುಶಾಹಿ ಕಾಲದಲ್ಲಿ ಮುಂಬೈ ಕರ್ನಾಟಕದ ಭಾಗವಾಗಿದ್ದ ವಿಜಾಪುರವು ಯಾಕೆ ಅಭಿವೃದ್ಧಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಸಂವಾದಿಯಾಗಿದೆ? ಇಡೀ ರಾಜ್ಯದಲ್ಲಿ ಸಾಕ್ಷರತೆಯಲ್ಲಿ ಈ ಜಿಲ್ಲೆಯಷ್ಟು ಹಿಂದುಳಿದಿರುವ ಜಿಲ್ಲೆ ಮತ್ತೊಂದು ಇಲ್ಲ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣಕ್ಕಿಂತ ಕೆಳಮಟ್ಟದ ಸಾಕ್ಷರತಾ ಜಿಲ್ಲೆಗಳಿವೆ. ಆದರೆ ೧೯೯೧-೨೦೦೧ರ ಅವಧಿಯಲ್ಲಿ ರಾಜ್ಯದಲ್ಲಿ ಮತ್ತು ಜಿಲ್ಲೆಗಳಲ್ಲಿ ಸರಾಸರಿ ಸಾಕ್ಷರತೆ ಪ್ರಮಾಣದಲ್ಲಿ ಶೇ. ೧೦ ಅಂಶಗಳಷ್ಟು ಏರಿಕೆಯಾಗಿದ್ದರೆ ವಿಜಾಪುರದಲ್ಲಿ ಮಾತ್ರ ಅದರ ಏರಿಕೆಯು ಕೇವಲ ಶೇ ೧ ಕ್ಕಿಂತ ಕಡಿಮೆಯಾಗಿದೆ. ಇದರ ಮೂಲವನ್ನು ನಾವು ಬೇಧಿಸಬೇಕಾಗಿದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಒಂದು ಜಿಲ್ಲೆಯೊಳಗಿನ ಎಲ್ಲ ತಾಲ್ಲೂಕುಗಳು ಹಿಂದುಳಿದಿರುವ ಸ್ಥಿತಿಯಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ನಾಲ್ಕು. ಅವುಗಳಲ್ಲಿ ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ ವಿಜಾಪುರ ಜಿಲ್ಲೆ ಮಾತ್ರ ಬಾಂಬೆ ಕರ್ನಾಟಕ ಪ್ರದೇಶಕ್ಕೆ ಸೇರಿದೆ. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ಅಳೆಯಲು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ‘ಸಂಚಯಿತ ದುಸ್ಥಿತಿ ಸೂಚ್ಯಂಕ’ (ಸಿಡಿಐ) ಎಂಬ ಮಾಪನವನ್ನು ರೂಪಿಸಿದೆ. ಈ ದುಸ್ಥಿತಿ ಸೂಚ್ಯಂಕದಲ್ಲಿ ರಾಜ್ಯದಲ್ಲಿ ವಿಜಾಪುರ ಜಿಲ್ಲೆಯ ಸ್ಥಾನ (೨೦೦೧) ನಾಲ್ಕನೆಯದು. ಮೊದಲನೆಯ ಸ್ಥಾನದಲ್ಲಿ ಗುಲಬರ್ಗಾ (ಸಿಡಿಐ: ೩೩೮) ಜಿಲ್ಲೆಯಿದ್ದರೆ ಎರಡನೆಯ ಸ್ಥಾನದಲ್ಲಿ ತುಮಕೂರು (ಸಿಡಿಐ : ೧.೭೭) ಜಿಲ್ಲೆಯಿದೆ. ರಾಯಚೂರು (ಸಿಡಿಐ : ೧.೫೦) ಜಿಲ್ಲೆ ಮೂರನೆಯ ಸನದಲ್ಲಿದ್ದರೆ ವಿಜಾಪುರ ನಾಲ್ಕನೆಯ ಸ್ಥಾನದಲ್ಲಿದೆ (ಸಿಡಿಐ : ೧.೪೦). ರಾಜ್ಯದ ಒಟ್ಟು ಸಂಚಯಿತ ದುಸ್ಥಿತಿ ಸೂಚ್ಯಂಕದಲ್ಲಿ (೨೦.೨೬) ಈ ನಾಲ್ಕು ಜಿಲ್ಲೆಗಳ ಒಟ್ಟು ಪಾಲು ಶೇ. ೪೦ ಕುತೂಹಲದ ಸಂಗತಿಯೆಂದರೆ ಗುಲಬರ್ಗಾ ವಿಭಾಗದ ಬೀದರ್ (ಸಿಡಿಐ : ೧.೧೯) ಕೊಪ್ಪಳ (ಸಿಡಿಐ : ೦.೯೯) ಮತ್ತು ಬಳ್ಳಾರಿ (ಸಿಡಿಐ :೧.೦೦) ಜಿಲ್ಲೆಗಳ ಸ್ಥಾನಮಾನ ವಿಜಾಪುರ ಜಿಲ್ಲೆಗಿಂತ ಉತ್ತಮವಾಗಿದೆ. ಒಟ್ಟಾರೆ ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳು ಮತ್ತು ವಿಜಾಪುರ ಜಿಲ್ಲೆ ಹೀಗೆ ಆರು ಜಿಲ್ಲೆಗಳನ್ನು ಸೇರಿಸಿಕೊಂಡರೆ ರಾಜ್ಯದ ದುಸ್ಥಿತಿ ಸೂಚ್ಯಂಕದಲ್ಲಿ ಅವುಗಳ ಪಾಲು ಶೇ ೪೬.೬೪ ರಷ್ಟಾಗುತ್ತದೆ. ಇದೇ ರೀತಿಯಲ್ಲಿ ಮಾನವ ಅಭಿವೃದ್ಧಿಯಲ್ಲಿ ಅದರ ಸ್ಥಾನ ರಾಜ್ಯದ ಇಪ್ಪತ್ತೇಳು ಜಿಲ್ಲೆಗಳ (೨೦೦೧) ಪೈಕಿ ಇಪ್ಪತ್ಮೂರನೆಯದಾಗಿದೆ.

ಈ ಜಿಲ್ಲೆಯ ಅಭಿವೃದ್ಧಿಯನ್ನು ನಿರ್ವಹಿಸುವುದು ಮತ್ತು ದುಸ್ಥಿತಿಯನ್ನು ನಿವಾರಿಸುವುದು ಸರಳವಾದ ಸಂಗತಿಯಲ್ಲ. ದುಸ್ಥಿತಿಯು ಯಾವ ಗತಿಯಲ್ಲಿ ನಡೆದಿದೆಯೋ ಅದಕ್ಕಿಂತ ಹೆಚ್ಚಿನ ಗತಿಯಲ್ಲಿ ಅಭಿವೃದ್ಧಿ ನಡೆಯಬೇಕು. ಆಗ ಮಾತ್ರ ಇಲ್ಲಿ ಜನರ ಬದುಕು ಸಮೃದ್ಧವಾಗುವುದು ಸಾಧ್ಯ. ಅಭಿವೃದ್ಧಿ ಎನ್ನುವುದು ವರಮಾನದ ಏರಿಕೆ, ಬಂಡವಾಳದ ಹೂಡಿಕೆ, ಉಳಿತಾಯ, ಕೈಗಾರಿಕೀಕರಣ ಮುಂತಾದ ಸಂಗತಿಗಳನ್ನಲ್ಲದೆ ಮಾನವ ಹಕ್ಕುಗಳು, ಸ್ವಾತಂತ್ರ್ಯ, ಲಿಂಗ ಸಮಾನತೆ, ಘನತೆಯಿಂದ ಬದುಕುವುದು, ಸಾಮಾಜಿಕ ನ್ಯಾಯ ಮುಂತಾದ ಸಂಗತಿಗಳನ್ನು ಒಳಗೊಂಡಿದೆ. ಈ ಜಿಲ್ಲೆಯ ಎದುರಿಗಿರುವ ಸವಾಲು ಯಾವುದೆಂದರೆ ವರಮಾನ ವರ್ಧನೆಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಮತ್ತು ಧಾರಣಾ ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಏಕಕಾಲಕ್ಕೆ ಸಾಧಿಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಈ ಜಿಲ್ಲೆಯು ಏಕಕಾಲಕ್ಕೆ ಆರ್ಥಿಕ ಅಭಿವೃದ್ಧಿಯನ್ನು ಮತ್ತು ಮಾನವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಬೇಕಾಗಿದೆ.

ಈ ಸವಾಲು ಹಿಮಾಲಯ ಸದೃಶವಾದುದು. ಇದನ್ನು ಜಿಲ್ಲಾ ಪಂಚಾಯಿತಿಯಾಗಲಿ ಅಥವಾ ಜಿಲ್ಲಾ ಆಡಳಿತವಾಗಲಿ ಏಕಾಂಗಿಯಾಗಿ ಎದುರಿಸುವುದು ಸಾಧ್ಯವಿಲ್ಲ. ಎರಡನೆಯದಾಗಿ ಅಭಿವೃದ್ಧಿಯನ್ನು ನಿರ್ವಹಿಸಲು ಅಗತ್ಯವಾದ ಮಾನವ ಸಂಪನ್ಮೂಲ ಅಲ್ಲಿ ಇಲ್ಲ. ಸಾಹನ ಪ್ರವೃತ್ತಿಯಿರುವ ಮಾನವ ಸಂಪನ್ಮೂಲ ಅಲ್ಲಿ ಅಗತ್ಯವಾಗಿದೆ. ನೌಕರಶಾಹಿಯಿಂದ ಜಿಲ್ಲೆಯ ಅಭಿವೃದ್ಧಿಯ ಗತಿಯನ್ನು ಉತ್ತಮಪಡಿಸುವುದು ಸಾಧ್ಯವಿಲ್ಲ. ಯಾವುದನ್ನು ಉದ್ಯಮ ಸಾಹಸವೆಂದು ಕರೆಯುತ್ತೇವೆಯೋ ಅದೇ ರೀತಿಯಲ್ಲಿ ಇಲ್ಲಿ ನಮಗೆ ಅಭಿವೃದ್ಧಿ ಸಾಹಸಿಗಳು ಬೇಕು. ನೌಕರಶಾಹಿಯು ಕೇವಲ ಈಗ ನಡೆದಿರುವ ಅಭಿವೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಆದರೆ ನಮಗೆ ಅಗತ್ಯವಾಗಿರುವುದು ಜಿಲ್ಲೆಯು ಎದುರಿಸುತ್ತಿರುವ ದುಸ್ಥಿತಿಯನ್ನು ನಿವಾರಿಸಬಲ್ಲಂತಹ ಆಡಳಿತಗಾರರು ಮತ್ತು ಅಭಿವೃದ್ಧಿ ನಾಯಕತ್ವ ಈ ಜಿಲ್ಲೆಯು ಅಭಿವೃದ್ಧಿ ನಾಯಕತ್ವದ ಕೊರತೆಯಿಂದ ನರಳುತ್ತಿದೆ.

.. ಅಧ್ಯಯನದ ಉದ್ದೇಶಗಳು

ಮೇಲೆ ಚರ್ಚಿಸಿರುವ ಅಧ್ಯಯನ ವಿಷಯದ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನದ ಉದ್ದೇಶಗಳನ್ನು ಇಲ್ಲಿ ಗುರುತಿಸಲಾಗಿದೆ. ವಾಸ್ತವವಾಗಿ ಉದ್ದೇಶಗಳು ಮೇಲೆ ಚರ್ಚಿಸಿರುವ ಸಮಸ್ಯೆಗಳಲ್ಲಿ ಅಂತರ್ಗತವಾಗಿವೆ. ಅವುಗಳನ್ನು ಇಲ್ಲಿ ನಿರ್ದಿಷ್ಟವಾಗಿ ಗುರುತಿಸಲಾಗಿದೆ.

೧. ಈ ಜಿಲ್ಲೆಯ ಅಭಿವೃದ್ಧಿಯ ಚಾರಿತ್ರಿಕ ನೆಲೆಗಳನ್ನು ಚರ್ಚೆಗೆ ಒಳಪಡಿಸುವುದು.

೨. ಅಧ್ಯಯನದ ಮತ್ತೊಂದು ಉದ್ದೇಶವೆಂದರೆ ವಿಜಾಪುರ ಜಿಲ್ಲೆಯ ಅಭಿವೃದ್ಧಿಯ ನೆಲೆಗಳನ್ನು ವರಮಾನ ಪ್ರಣಾಳಿಕೆ ಮತ್ತು ಮಾನವ ಧಾರಣಾ ಸಾಮರ್ಥ್ಯ ಪ್ರಣಾಳಿಕೆ ಮೂಲಕ ಅರ್ಥ ಮಾಡಿಕೊಳ್ಳುವುದು.

೩. ಜಿಲ್ಲೆಯ ಜನರ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯ ಸೂಚಿಗಳಾದ ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಿದ್ಧಿ ಸಾಧನೆಗಳನ್ನು ಚರ್ಚೆಗೆ ಒಳಪಡಿಸುವುದು.

೪. ಈ ಜಿಲ್ಲೆಯ ಅಭಿವೃದ್ಧಿಯ ಲಿಂಗ ಸಂಬಂಧಿ ನೆಲೆಗಳಣ್ನು ಅನಾವರಣ ಮಾಡುವುದು.

೫. ಜಿಲ್ಲೆಯಲ್ಲಿನ ಪರಿಶಿಷ್ಟರ ಸ್ಥಿತಿಗತಿಗಳನ್ನು ದಾಖಲಿಸುವುದು.

೬. ಈ ಜಿಲ್ಲೆಯ ಅಭಿವೃದ್ಧಿಯ ಸವಾಲು ಗುರುತರವಾದುದು. ಅದನ್ನು ಎದುರಿಸಲು ಬೃಹತ್ ಪ್ರಯತ್ನ ಮಾಡಬೇಕಾಗುತ್ತದೆ. ಈ ಎಚ್ಚರವನ್ನು ಉಂಟು ಮಾಡುವುದು ಪ್ರಸ್ತುತ ಅಧ್ಯಯನದ ಒಂದು ಉದ್ದೇಶವಾಗಿದೆ.

.. ಅಧ್ಯಯನ ವಿಧಾನ

ಅಧ್ಯಯನ ವಿಷಯವನ್ನು ಪರಿಭಾವಿಸಿಕೊಂಡಿರುವ ಪರಿ ಹಾಗೂ ಅದರ ಉದ್ದೇಶಗಳನ್ನು ರೂಪಿಸಿಕೊಂಡಿರುವ ಪ್ರಕಾರ ಇಲ್ಲಿ ಅಧ್ಯಯನ ವಿಧಾನವನ್ನು ಕಟ್ಟಿಕೊಳ್ಳಲಾಗಿದೆ. ವರದಿಗೆ ಅಗತ್ಯವಾದ ಅಂಕಿ-ಸಂಖ್ಯೆಗಳನ್ನು ಅನುಷಂಗಿಕ ಮೂಲಗಳಿಂದ ಪಡೆದುಕೊಳ್ಳಲಾಗಿದೆ. ಮುಖ್ಯವಾಗಿ ಈಗಾಗಲೆ ಪ್ರಕಟವಾಗಿರುವ ಐದು ವರದಿಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

೧. ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಪ್ರಕಟಿಸಿರುವ ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ’ಗಳನ್ನು (೧೯೯೯ ಮತ್ತು ೨೦೦೫) ಇಲ್ಲಿ ಬಳಸಿಕೊಳ್ಳಲಾಗಿದೆ.

೨. ಕೇಂದ್ರ ಯೋಜನಾ ಆಯೋಗವು ಪ್ರಕಟಿಸಿರುವ ‘ಕರ್ನಾಟಕ ಅಭಿವೃದ್ಧಿ ವರದಿ’ (೨೦೦೬)ಯನ್ನು ಕೂಡ ಆಕರವನ್ನಾಗಿ ಉಪಯೋಗಿಸಲಾಗಿದೆ.

೩. ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮಾನತೆ ನಿವಾರಣಾ ಅಧ್ಯಯನದ ಉನ್ನತಾಧಿಕಾರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ (೨೦೦೨) ಅಂತಿಮ ವರದಿಯನ್ನು ಇಲ್ಲಿ ಬಳಸಲಾಗಿದೆ.

೪. ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಪ್ರಕಟಿಸಿರುವ ‘ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ’ಯನ್ನು ಇಲ್ಲಿ ಮೂಲ ಆಕರವಾಗಿ ಬಳಸಲಾಗಿದೆ (ಈ ವರದಿಯು ತುಂಬಾ ತಾಂತ್ರಿಕ ಸ್ವರೂಪದಲ್ಲಿದೆ. ಅಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಲೆಕ್ಕ ಹಾಕುವುದಕ್ಕೆ ಕೇಂದ್ರ ಗಮನ ನೀಡಲಾಗಿದೆ. ಪ್ರಸ್ತುತ ಕೃತಿಯಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ)

೫. ಸೆನ್ಸಸ್ ಆಫ್ ಇಂಡಿಯಾ ನಿರ್ದೇಶನಾಲಯವು ಪ್ರಕಟಿಸಿರುವ ೨೦೦೧ರ ‘ಕರ್ನಾಟಕ : ಪ್ರೈಮರಿ ಸೆನ್ಸಸ್ ಅಬ್‌ಸ್ಟಾಕ್ಟ್’ ವರದಿ.

೬. ಕರ್ನಾಟಕ ಸರ್ಕಾರವು ಪ್ರಕಟಿಸಿರುವ ವಿವಿಧ ವರ್ಷಗಳ ಆರ್ಥಿಕ ಸಮೀಕ್ಷೆ ವರದಿಗಳು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ. ಅಭಿವೃದ್ಧಿ ಇಲಾಖೆಗಳು, ರೆವಿನ್ಯೂ ಇಲಾಖೆ, ಜಿಲ್ಲಾ ಸಾಂಖ್ಯಿಕ ಕಚೇರಿ ಮುಂತಾದ ಮೂಲಗಳಿಂದ ಮಾಹಿತಿ ಸಂಗ್ರಹಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಸಾಂಖ್ಯಿಕ ಮತ್ತು ಆರ್ಥಿಕ ನಿರ್ದೇಶನಾಲಯವು ಕಾಲಕಾಲಕ್ಕೆ ಪ್ರಕಟಿಸುವ ‘ಕರ್ನಾಟಕ ಅಂಕಿ ಅಂಶಗಳ ನೋಟ’ ಎಂಬ ವರದಿಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ಅಧ್ಯಯನದಲ್ಲಿ ಜಿಲ್ಲೆಯ ಅಭಿವೃದ್ಧಿಯ ಲಿಂಗಸಂಬಂಧಿ ಆಯಾಮವನ್ನು ಗುರುತಿಸಲಾಗಿದೆ. ಇದೊಂದು ಲಿಂಗಸ್ಪಂದಿ ಅಧ್ಯಯನವಾಗಿದೆ. ಜಿಲ್ಲೆಯಲ್ಲಿನ ಪರಿಶಿಷ್ಟರ ಸ್ಥಿತಿಗತಿಗಳನ್ನು ತುಲನಾತ್ಮಕವಾಗಿ ಇಲ್ಲಿ ಪರಿಗಣಿಸಲಾಗಿದೆ.

ಅಭಿವೃದ್ಧಿ ನೀತಿಗೆ ಸಂಬಂಧಿಸಿದಂತೆ ಎರಡು ನೆಲೆಗಳನ್ನು ಸೆನ್ ಗುರುತಿಸುತ್ತಾ ಬಂದಿದ್ದಾರೆ. ಮೊದಲನೆಯದು ವರಮಾನ ವರ್ಧನಾ ಮಾರ್ಗ. ಅಂದರೆ ವರಮಾನ ವರ್ಧನೆಯಾಗಿ ಬಿಟ್ಟರೆ ಅದು ಉಳಿದ ಅಭಿವೃದ್ಧಿ ಸಮಸ್ಯೆಗಳಾದ ಬಡತನ, ಹಸಿವು, ಅಪೌಷ್ಟಿಕತೆ, ಲಿಂಗ ಅಸಮಾನತೆ, ಅಸ್ವಾತಂತ್ರ್ಯ ಮುಂತಾದವುಗಳನ್ನು ಬಗೆಹರಿಸಿಬಿಡುತ್ತದೆ ಎಂದು ನಂಬುವ ನೀತಿಯೇ ವರಮಾನ ವರ್ಧನಾ ಮಾರ್ಗ. ಎರಡನೆಯದು ಪ್ರಜ್ಞಾಪೂರ್ವಕವಾಗಿ ಸರ್ಕಾರದ ಮಧ್ಯಪ್ರವೇಶಿ ಪಾತ್ರದ ಮಾರ್ಗ. ಇಲ್ಲಿ ಏರಿಕೆಯಾದ ವರಮಾನವು ತನ್ನಷ್ಟಕ್ಕೆ ಜನರಿಗೆ ಒದಗುವುದಿಲ್ಲ. ಅದು ತನ್ನಷ್ಟಕ್ಕೆ ಜನರ ಬದುಕಾಗಿ ಪರಿವರ್ತನೆಯಾಗುವುದಿಲ್ಲ. ಈ ಪರಿವರ್ತನೆಗೆ ಸರ್ಕಾರ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಬೇಕಾಗುತ್ತದೆ ಎಂಬುದೇ ಸರ್ಕಾರದ ಮಧ್ಯಪ್ರವೇಶಿ ಮಾರ್ಗದ ಅರ್ಥ. ಮೊದಲನೆಯ ಮಾರ್ಗದಲ್ಲಿ ವರಮಾನವನ್ನು, ಉತ್ಪಾದನೆಯನ್ನು, ಬಂಡವಾಳದ ಹೂಡಿಕೆಯನ್ನು ಹೆಚ್ಚಿಸುವ ಕ್ರಮಗಳಿಗೆ ಒತ್ತು ನೀಡಿದರೆ ಎರಡನೆಯದರಲ್ಲಿ ಜನರ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಸ್ವಾತಂತ್ರ್ಯ, ಮಾನವ ಹಕ್ಕುಗಳು, ಲಿಂಗಸಂಬಂಧಗಳು, ಅಭಿವೃದ್ಧಿಯ ಪರಿಶಿಷ್ಟ ನೆಲೆಗಳು ಮುಂತಾದ ಅಭಿವೃದ್ಧಿಯ ಅಂತರ್ಗತ ಭಾಗಗಳ ವರ್ಧನೆಗೆ ಒತ್ತು ದೊರೆಯುತ್ತದೆ. ವಿಜಾಪುರ ಜಿಲ್ಲೆಯು ತೀವ್ರ ಹಿಂದುಳಿದಿರುವ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಸರ್ಕಾರಿ ಬೆಂಬಲದ ಕ್ರಮಗಳಿಗೆ ಅಭಿವೃದ್ಧಿ ನೀತಿಯಲ್ಲಿ ಆದ್ಯತೆ ನೀಡಬೇಕಾಗುತ್ತದೆ. ಇದನ್ನು ಇಲ್ಲಿ ಪ್ರಧಾನವಾಗಿ ತೋರಿಸಲು ಪ್ರಯತ್ನಿಸಲಾಗಿದೆ.

.. ಅಧ್ಯಯನದ ಮಹತ್ವ

ವಿಜಾಪುರ ಜಿಲ್ಲೆಯ ಅಭಿವೃದ್ಧಿ ಹಾಗೂ ದುಸ್ಥಿತಿ ಕುರಿತಂತೆ ಪ್ರಸ್ತುತ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಈ ಬಗೆಯ ಚರ್ಚೆಗಳಲ್ಲಿ ಸೈದ್ಧಾಂತಿಕ ಸಂಗತಿಗಳಿಗೂ ಮಹತ್ವ ನೀಡಲಾಗುತ್ತದೆ. ಭೌಗೋಳಿಕವಾಗಿ ವಿಜಾಪುರ ಜಿಲ್ಲೆಯನ್ನು ಅಧ್ಯಯನವು ಒಳಗೊಂಡಿದೆ. ವಿಸ್ತೀರ್ಣದ ದೃಷ್ಟಿಯಿಂದ ಇದು ೧೦೫೩೬.೨೩ ಚ.ಕಿ.ಮೀ. ಪ್ರದೇಶವನ್ನು ಒಳಗೊಂಡಿದೆ (ವಿಜಾಪುರ ಗ್ಯಾಸೆಟಿಯರ್ ೧೯೯೯) ಇದು ಭಾರತದ ದಕ್ಷಿಣ ಪ್ರಸ್ಥ ಭೂಮಿಯಲ್ಲಿರುವ ಒಣ ಪ್ರದೇಶವಾಗಿದೆ. ಜನಸಂಖ್ಯೆಯ ದೃಷ್ಟಿಯಿಂದ ೧೮.೦೬ ಲಕ್ಷ (೨೦೦೧) ಜನರನ್ನು ಅಧ್ಯಯನದಲ್ಲಿ ಪರಿಗಣಿಸಲಾಗಿದೆ. ಲಿಂಗ ಸಂಬಂಧಗಳ ದೃಷ್ಟಿಯಿಂದ ೯.೨೬ ಲಕ್ಷ ಪುರುಷರು ಹಾಗೂ ೮.೮೦ ಲಕ್ಷ ಮಹಿಳೆಯರನ್ನು ಅಧ್ಯಯನವು ಒಳಗೊಂಡಿದೆ (೨೦೦೧). ದುಸ್ಥಿತಿ ಸ್ವರೂಪವನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ. ಇದು ಬಹಳ ಮುಖ್ಯ. ಏಕೆಂದರೆ ಸಾಮಾನ್ಯವಾಗಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಧನೆಗಳನ್ನು ಮಾತ್ರ ಗುರುತಿಸುವ ಕ್ರಮ ಪ್ರಚಲಿತದಲ್ಲಿದೆ. ಇದು ಸರಿಯಾದ ಕ್ರಮ, ಹೌದು. ಆದರೆ ಈ ಬಗೆಯ ಮಾಪನಗಳಲ್ಲಿ ಸಾಧಿಸದ ಸಂಗತಿಯು ದಾಖಲಾಗುತ್ತದೆ. ಇಲ್ಲಿ ಜಿಲ್ಲೆಯು ಇನ್ನೂ ಸಾಧಿಸಬೇಕಾಗಿರುವ ಸಂಗತಿಯನ್ನು ಗುರುತಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ದುಸ್ಥಿತಿಯನ್ನು ಗುರುತಿಸುವ ಕ್ರಮವೂ ಬಹಳ ಮುಖ್ಯ. ಉದಾಹರಣೆಗೆ ೨೦೦೧ರಲ್ಲಿ ವಿಜಾಪುರ ಜಿಲ್ಲಾ ಸಾಕ್ಷರತಾ ಪ್ರಮಾಣ ಶೇ. ೫೬. ಇದು ಸಾಧನೆ. ಆದರೆ ಇನ್ನು ಸಾಧಿಸಬೇಕಾಗಿರುವುದು ಶೇ. ೪೪ ರಷ್ಟಿದೆ. ಇದು ದುಸ್ಥಿತಿಯ ಪ್ರಮಾಣ. ಈ ದುಸ್ಥಿತಿಯು ಅಭಿವೃದ್ಧಿ ಸಮಸ್ಯೆಯು ಎಷ್ಟು ಅಗಾಧವಾಗಿದೆ ಎಂಬುದನ್ನು ಸೂಚಿಸುತ್ತದೆ. ಅದು ಅಭಿವೃದ್ಧಿಯ ದಾರಿಯಲ್ಲಿ ಸಾಗಿರುವ ದೂರ ಎಷ್ಟು ಎಂಬುದನ್ನು ತೋರಿಸುತ್ತದೆ.

ಅಭಿವೃದ್ಧಿ ಸಮಸ್ಯೆಗಳನ್ನು ಹಾಗೂ ಅಭಿವೃದ್ಧಿ ಆದ್ಯತೆಗಳನ್ನು ತಳಮಟ್ಟದಲ್ಲಿ ಗುರುತಿಸುವ ಪ್ರಯತ್ನವನ್ನು ಅಧ್ಯಯನದಲ್ಲಿ ಮಾಡಲಾಗಿದೆ. ಇದು ಜಿಲ್ಲಾ ಯೋಜನಾ ಸಮಿತಿಗೆ ಅಭಿವೃದ್ಧಿ ಯೋಜನೆ ಮತ್ತು ಅಭಿವೃದ್ಧಿ ನೀತಿಯನ್ನು ರೂಪಿಸಲು ಕೈಪಿಡಿಯಾಗಿ ಉಪಯೋಗಕ್ಕೆ ಬರುತ್ತದೆ. ಈ ಜಿಲ್ಲೆಯ ಅಭಿವೃದ್ಧಿಯ ಮತ್ತು ದುಸ್ಥಿತಿಯ ನಿರ್ವಹಣೆಯ ಮಹತ್ವವನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಜಿಲ್ಲೆಯ ಅಭಿವೃದ್ಧಿಯ ಸವಾಲು ಅಗಾಧವಾದುದಾಗಿದೆ. ಅದನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಈ ಸಮಸ್ಯೆಯ ಗಂಭೀರತೆಯನ್ನು ಇಲ್ಲಿ ದಾಖಲಿಸಲಾಗಿದೆ. ಈ ಜಿಲ್ಲೆಯ ಅಭಿವೃದ್ಧಿಯು ಕೇವಲ ಬಂಡವಾಳದ ಸಂಗತಿಯಲ್ಲ. ಬಂಡವಾಳ ಬೇಕು. ಅದಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಅದೇ ಅಭಿವೃದ್ಧಿಯಲ್ಲ. ಈ ಜಿಲ್ಲೆಯ ಅಭಿವೃದ್ಧಿ ಜವಾಬುದಾರಿ ಹೊತ್ತಿರುವವರಿಗೆ ಆ ಜವಾಬುದಾರಿ ಎಷ್ಟು ಅಗಾಧವಾದುದು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ಅಗಾಧ ಪ್ರಮಾನದ ಜವಾಬುದಾರಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನೆರವಾಗಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ.

.. ಅಧ್ಯಯನ ವರದಿ ವಿನ್ಯಾಸ

ಈ ಅಧ್ಯಯನವನ್ನು ಒಟ್ಟು ಹತ್ತು ಅಧ್ಯಾಯಗಳಲ್ಲಿ ಸಿದ್ಧಪಡಿಸಲಾಗಿದೆ. ಸಮಾಜ ವಿಜ್ಞಾನ ಅಧ್ಯಯನಗಳಲ್ಲಿ ಪ್ರಚಲಿತದಲ್ಲಿರುವಂತೆ ಮೊದಲನೆಯ ಅಧ್ಯಾಯದಲ್ಲಿ ಅಧ್ಯಯನ ವಿಷಯವನ್ನು ಪರಿಭಾವಿಸಿಕೊಂಡಿರುವ ಕ್ರಮ, ಅಧ್ಯಯನದ ಉದ್ದೇಶ, ಅಧ್ಯಯನ ವಿಧಾನ ಮತ್ತು ಅಧ್ಯಯನದ ಮಹತ್ವವನ್ನು ವಿವರಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಮಾನವ ಅಭಿವೃದ್ಧಿ ಪ್ರಣಾಳಿಕೆಯ ವಿವಿಧ ನೆಲೆಗಳನ್ನು ಅನಾವರಣ ಮಾಡಲಾಗಿದೆ. ಮೂರನೆಯದರಲ್ಲಿ ಜಿಲ್ಲೆಯ ಚಾರಿತ್ರಿಕೆಯ ಹಿನ್ನಲೆ ಮತ್ತು ವಸಾಹತುಶಾಹಿ ಆಡಳಿತದ ಅನುಭವಗಳನ್ನು ವಿವರಿಸಲಾಗಿದೆ. ಪ್ರಾಕೃತಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲದ ಚರ್ಚೆಯನ್ನು ನಾಲ್ಕನೆಯ ಅಧ್ಯಾಯದಲ್ಲಿ ಮಾಡಲಾಗಿದೆ. ಪ್ರಕೃತಿಯು ಜಿಲ್ಲೆಯ ದೃಷ್ಟಿಯಿಂದ ಹೇಗೆ ನಿಷ್ಕರುಣಿಯಾಗಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಐದನೆಯ ಅಧ್ಯಾಯದಲ್ಲಿ ಜಿಲ್ಲೆಯ ವರಮಾನದ ಬೆಳವಣಿಗೆ ಪ್ರವೃತ್ತಿ (೧೯೯೯-೨೦೦೦ ರಿಂದ ೨೦೦೭-೦೮)ಯನ್ನು ವಿವರಿಸುವುದರ ಜೊತೆಯಲ್ಲಿ ಜಿಲ್ಲೆಯು ಮಾನವ ಅಭಿವೃದ್ಧಿಯಲ್ಲಿ (೧೯೯೧ ನಿಂದ ೨೦೦೬) ಸಾಧಿಸಿಕೊಂಡಿರುವ ಸಾಧನೆಯನ್ನು ವಿಶ್ಲೇಷಿಸಲಾಗಿದೆ.

ಆರನೆಯ ಅಧ್ಯಾಯವನ್ನು ಬಿಜಾಪುರ ಜಿಲ್ಲೆಯ ಅಭಿವೃದ್ಧಿ ಮತ್ತು ಲಿಂಗ ಸಂಬಂಧಗಳ ನಡುವಿನ ಸಂಬಂಧದ ವಿಶ್ಲೇಷಣೆಗೆ ಮೀಸಲಿಡಲಾಗಿದೆ. ಏಳನೆಯ ಅಧ್ಯಾಯದಲ್ಲಿ ಜಿಲ್ಲೆಯ ಸಾಕ್ಷರತೆಯ ಪ್ರವೃತ್ತಿ ಮತ್ತು ಪ್ರಾಥಮಿಕ ಶಿಕ್ಷಣದ ಪ್ರಗತಿಯನ್ನು ಚರ್ಚಿಸಲಾಗಿದೆ. ನಮ್ಮ ರಾಜ್ಯದ ಸಂದರ್ಭದಲ್ಲಿ ಅಭಿವೃದ್ಧಿಗೆ ಪರಿಶಿಷ್ಟ ನೆಲೆಗಳಿವೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಎಂಟನೆಯ ಅಧ್ಯಾಯದಲ್ಲಿ ಬಿಜಾಪುರ ಜಿಲ್ಲೆಯ ಅಭಿವೃದ್ಧಿಯ ಶಿಷ್ಟ ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಜಿಲ್ಲೆಯ ಆರೋಗ್ಯ ಭಾಗ್ಯದ ನೆಲೆಗಳನ್ನು ಒಂಬತ್ತನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಈ ಅಧ್ಯಯನದ ಸಾರಾಂಶವನ್ನು ಕೊನೆಯ ಅಧ್ಯಾಯದಲ್ಲಿ ನೀಡಲಾಗಿದೆ. ಈ ಅಧ್ಯಯನದಲ್ಲಿ ಕಂಡುಕೊಂಡ ಕೆಲವು ಫಲಿತಗಳ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿಯನ್ನು ಉತ್ತಮಪಡಿಸಲು ಕೆಲವು ಶಿಫಾರಸ್ಸುಗಳನ್ನು ನೀಡಲಾಗಿದೆ.