ಈಗಾಗಲೇ ತಿಳಿಸಿರುವಂತೆ ಪ್ರಸ್ತುತ ಕೃತಿಯಲ್ಲಿ ಸಾರಾಂಶದ ಭಾಗವನ್ನು ಸೇರಿಸಿಕೊಂಡು ಹತ್ತು ಅಧ್ಯಾಯಗಳಿವೆ. ಸಮಾಜ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಕಂಡುಬರುವಂತೆ ಇಲ್ಲಿನ ಮೊದಲನೆಯ ಅಧ್ಯಾಯದಲ್ಲಿ ಅಧ್ಯಯನದ ವಿಷಯವಸ್ತುವನ್ನು ಪರಿಭಾವಿಸಿಕೊಂಡಿರುವ ಕ್ರಮ, ಅಳವಡಿಸಿಕೊಂಡಿರುವ ವಿಧಾನ, ಅಧ್ಯಯನದ ಉದ್ದೇಶಗಳನ್ನು ವಿವರಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಅಭಿವೃದ್ಧಿ ಮೀಮಾಂಸೆಯ ಎರಡು ಧಾರೆಗಳಾದ ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ದಿಗಳ ಅರ್ಥ ಹಾಗೂ ಭಿನ್ನತೆಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಜಾಗತಿಕ ಮಟ್ಟದ, ಅಖಿಲ ಭಾರತ ಮಟ್ಟದ ಮತ್ತು ಕರ್ನಾಟಕ ರಾಜ್ಯದ ನಿದರ್ಶನಗಳನ್ನು ಆಧಾರವಾಗಿಟ್ಟುಕೊಂಡು ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಳ ನಡುವಣ ಭಿನ್ತೆಯನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಅಗತ್ಯವಾದ ಸೈದ್ಧಾಂತಿಕ ಚೌಕಟ್ಟನ್ನು ಇಲ್ಲಿ ಕಟ್ಟಿಕೊಳ್ಳಲಾಗಿದೆ.

ಮೂರನೆಯ ಅಧ್ಯಾಯದಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಗಳನ್ನು ಚಾರಿತ್ರಿಕವಾಗಿ ದಾಖಲಿಸಲಾಗಿದೆ. ವಸಾಹತುಪೂರ್ವ ಕಾಲಾವಧಿ. ವಸಾಹತುಶಾಹಿ ಆಡಳಿತಾವಧಿ ಮತ್ತು ವಸಾಹತೋತ್ತರ ಕಾಲಾವಧಿ ಹೀಗೆ ಮೂರು ಕಾಲಾವಧಿಗಳಲ್ಲಿ ಬಿಜಾಪುರ ಜಿಲ್ಲೆಯು ಅನುಭವಿಸಿದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಸ್ವರೂಪವನ್ನು ಇಲ್ಲಿ ಹಿಡಿದಿಡಲಾಗಿದೆ. ಈ ಅಧ್ಯಯನದ ನಾಲ್ಕನೆಯ ಅಧ್ಯಾಯದಲ್ಲಿ ಬಿಜಾಪುರ ಜಿಲ್ಲೆಯ ಭೌಗೋಳಿಕ ಮತ್ತು ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಂಗತಿಗಳ ವಿವರಗಳನ್ನು ನೀಡಲಾಗಿದೆ.

ಐದನೆಯ ಅಧ್ಯಾಯದಲ್ಲಿ ಬಿಜಾಪುರ ಜಿಲ್ಲೆಯ ವರಮಾನದಲ್ಲಿ ಉಂಟಾದ ಬೆಳವಣಿಗೆಗಳನ್ನು ಮತ್ತು ಮಾನವ ಅಭಿವೃದ್ದಿ ಸಂಗತಿಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಇಲ್ಲಿನ ಚರ್ಚೆಯನ್ನು ನಿರ್ದಿಷ್ಟ ಕಾಲಾವಧಿಯನ್ನು ಆಧಾರವಾಗಿಟ್ಟುಕಂಡು ನಡೆಸಲಾಗಿದೆ. ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯು ಸಾಧಿಸಿಕೊಂಡ ಸಾಧನೆಯನ್ನು ಇಲ್ಲಿ ದಾಖಲಿಸಲಾಗಿದೆ.

ಆರನೆಯ ಅಧ್ಯಾಯದಲ್ಲಿ ಬಿಜಾಪುರ ಜಿಲ್ಲೆಯ ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳನ್ನು ಗುರುತಿಸುವ ಕೆಲಸಕ್ಕೆ ಮೀಸಲಿಡಲಾಗಿದೆ. ಅನೇಕ ಸೂಚಿಗಳನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿ ಪ್ರಕ್ರಿಯೆಯ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬುದನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

ಪ್ರಸ್ತುತ ಕೃತಿಯು ಬಹುಮುಖ್ಯವಾದ ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣಗಳ ವಿಷಯವನ್ನು ಏಳನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಬಿಜಾಪುರ ಜಿಲ್ಲೆಯ ತೀವ್ರ ದುಸ್ಥಿತಿಯನ್ನು ಅನುಭವಿಸುತ್ತಿರುವುದನ್ನು ಗುರುತಿಸಲಾಗಿದೆ.

ಎಂಟನೆಯ ಅಧ್ಯಾಯದಲ್ಲಿ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಸ್ಥಿತಿಗತಿಗಳನ್ನು ಚರ್ಚಿಸಲಾಗಿದೆ. ಪರಿಶಿಷ್ಟ ಸಮುದಾಯವು ಜಿಲ್ಲೆಯ ಅಭಿವೃದ್ಧಿಗೆ ಯಾವ ಪ್ರಮಾಣದಲ್ಲಿ ಕಾಣಿಕೆ ನೀಡುತ್ತಿದೆ ಮತ್ತು ಅದು ಯಾವ ಪ್ರಮಾಣದಲ್ಲಿ ಪ್ರತಿಫಲ ಪಡೆಯುತ್ತದೆ ಎಂಬುದು ವಿವರವನ್ನು ಇಲ್ಲಿ ನೀಡಲಾಗಿದೆ.

ಒಂಬತ್ತನೆಯ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ಆದರೆ ನಿರ್ದಿಷ್ಟವಾಗಿ ಜಿಲ್ಲೆಯಲ್ಲಿ ಜನರು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಧಿಸಿಕೊಂಡಿರುವ ಸಾಧನೆಯನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಒತ್ತನ್ನು ಸಂತಾನೋತ್ಪತ್ತಿ ಆರೋಗ್ಯಕ್ಕೆ ನೀಡಲಾಗಿದೆ.

ಪ್ರಸ್ತುತ ಹತ್ತನೆಯ ಅಧ್ಯಾಯದಲ್ಲಿ ಅಧ್ಯಯನದ ಸಾರಾಂಶವನ್ನು ಹಾಗೂ ಅಧ್ಯಯನದಿಂದ ಕಂಡುಕೊಂಡ ತಥ್ಯಗಳ ಆಧಾರದ ಮೇಲೆ ಕೆಲವು ನೀತಿ ನಿರ್ದೇಶನ ಶಿಫಾರಸ್ಸುಗಳನ್ನು ನೀಡಲಾಗಿದೆ.

ಈ ಕೃತಿಯ ಸೈದ್ಧಾಂತಿಕ ನೆಲೆಯನ್ನು ವಿವರಿಸುವಾಗ ‘ವರಮಾನದ ಏರಿಕೆಯೇ ಅಭಿವೃದ್ಧಿಯಲ್ಲ’ ಎಂಬುದನ್ನು ಪ್ರತಿಪಾದಿಸಲಾಗಿದೆ. ಆದರೆ ನಾವು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ ವರಮಾನದ ಏರಿಕೆಯಿಲ್ಲದೆ ಅಭಿವೃದ್ದಿಯನ್ನು ಸಾಧಿಸುವುದು ಸಾಧ್ಯವಿಲ್ಲ. ವಿಜಾಪುರ ಜಿಲ್ಲೆಗೆ ಇದು ಅತ್ಯಂತ ಸೂಕ್ತವಾಗಿ ಅನ್ವಯವಾಗುತ್ತದೆ. ಈ ದ್ವಂದವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ‘ವರಮಾನದ ಏರಿಕೆಯೇ ಅಭಿವೃದ್ಧಿಯಲ್ಲ, ವರಮಾನದ ಏರಿಕೆಯಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ’ ಎಂಬ ಪ್ರಮೇಯವನ್ನು ನಾವು ಬಿಡಿಸಿಕೊಳ್ಳಬೇಕಾಗಿದೆ. ಇದರಲ್ಲಿ ಒಗಟು ಎಂಬುದೇನಿಲ್ಲ ಅಥವಾ ವಿಚಿತ್ರವೇನೂ ಇಲ್ಲ. ವರಮಾನವು ಅಭಿವೃದ್ಧಿಯ ಸಾಧನ. ಅದು ಅಭಿವೃದ್ಧಿಗೆ ಅಗತ್ಯ. ಆದರೆ ಅದರ ಏರಿಕೆಯನ್ನೇ ಅಭಿವೃದ್ಧಿಯೆಂದು ತಪ್ಪಾಗಿ ಭಾವಿಸಲಾಗುತ್ತಿದೆ. ಏಕೆಂದರೆ ಅಭಿವೃದ್ಧಿಯ ಗುರಿ ಅದಲ್ಲ. ಅದು ಕೇವಲ ಅಭಿವೃದ್ಧಿಯ ಸಾಧನ. ಅದರ ಗುರಿ ಯಾವುದೆಂದರೆ ಜನರ ಬದುಕು ಸಮೃದ್ಧವಾಗುವುದು. ಈ ಅಧ್ಯಯನದಲ್ಲಿ ಪ್ರತಿಪಾದಿಸಿರುವ ಮುಖ್ಯ ಪ್ರಮೇಯವೆಂದರೆ ವಿಜಾಪುರ ಜಿಲ್ಲೆಯು ವರಮಾನದಲ್ಲಿ ಮತ್ತು ಜನರ ಧಾರಣಾ ಸಾಮರ್ಥ್ಯದಲ್ಲಿ ಎರಡೂ ನೆಲೆಗಳಲ್ಲಿ ಹಿಂದುಳಿದಿದೆ. ಇದು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಎರಡೂ ಬಗೆಯ ಅಭಿವೃದ್ಧಿಯನ್ನು ಅದು ಏಕಕಾಲಕ್ಕೆ ಸಾಧಸಿಕೊಳ್ಳಬೇಕಾಗಿದೆ. ಎರಡರಲ್ಲಿ ಒಂದನ್ನು ಬಿಟ್ಟರೂ ಅಲ್ಲಿ ಜನರ ಬದುಕು ಸಮೃದ್ಧವಾಗುವುದಿಲ್ಲ. ಇಲ್ಲಿ ಸಾಕ್ಷರತೆಯು ಕೆಳಮಟ್ಟದಲ್ಲಿದೆ ಮತ್ತು ಅದರ ಬೆಳವಣಿಗೆ ಗತಿ ಮಂದವಾಗಿದೆ. ಮಂದವಾಗಿದೆ ಎಂಬುದಕ್ಕಿಂತ ಅದು ಒಂದು ರೀತಿಯಲ್ಲಿ ಸ್ಥಗಿತಗೊಂಡು ಬಿಟ್ಟಿದೆ ಎಂದರೆ ಸರಿಯಾದೀತು. ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಯು ಹೇಳಿಕೊಳ್ಳುವಂತಿಲ್ಲ. ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೇನೆಂದರೆ ಲಿಂಗ ಸಂಬಂಧಿ ಸಂಗತಿಗಳು. ಈ ದೃಷ್ಟಿಯಿಂದ ಈ ಜಿಲ್ಲೆಯಲ್ಲಿ ಸ್ಥಿತಿಯು ಗುಲಬರ್ಗಾ ವಿಭಾಗದ ಜಿಲ್ಲೆಗಳಿಗಿಂತ ಬಹಳ ಭಿನ್ನವಾಗಿಲ್ಲ. ಉದಾಹರಣೆಗೆ ಈ ಜಿಲ್ಲೆಯಲ್ಲಿನ ಪ್ರೌಢಶಾಲೆಗಳಲ್ಲಿನ ಒಟ್ಟು ಶಿಕ್ಷಕರಲ್ಲಿ ಮಹಿಳಾ ಶಿಕ್ಷಕಿಯರ ಪ್ರಮಾಣ ಶೇ. ೨೫ ಮೀರುವುದಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಸ್ಥಿತಿಯು ಉತ್ತಮವಾಗೇನು ಇಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಆತಂಕಕಾರಿ ಸಂಗತಿಗಳನ್ನು ಕೃತಿಯ ಒಂಬತ್ತನೆಯ ಅಧ್ಯಾಯದಲ್ಲಿ ಡಿ.ಎಲ್.ಎಚ್.ಎಸ್ ಮಾಹಿತಿ ಕೋಶದಿಂದ ಆಯ್ದ ಸೂಚಿಗಳ ಆಧಾರದ ಮೇಲೆ ತೋರಿಸಲಾಗಿದೆ.

ರಾಚನಿಕವಾಗಿಯೂ ಜಿಲ್ಲೆಯಲ್ಲಿ ಬದಲಾವಣೆಯು ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ. ಈ ಜಿಲ್ಲೆಯಲ್ಲಿ ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ. ೪೦ಮೀರುತ್ತದೆ. ಅದೇ ರೀತಿಯಲ್ಲಿ ದಿನಗೂಲಿ ದುಡಿಮೆಗಾರರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ. ೫೭ ಮೀರುತ್ತದೆ. ಇವೆಲ್ಲವೂ ರಾಚನಿಕವಾಗಿ ವಿಜಾಪುರ ಆರ್ಥಿಕತೆಯು ಬದಲಾವಣೆಗೆ ಒಳಗಾಗುತ್ತಿಲ್ಲ ವೆಂಬುದನ್ನು ದೃಢಪಡಿಸುತ್ತವೆ. ಇಂದಿಗೂ ಇಲ್ಲಿ ಕೃಷಿಯು ಶೇ. ೭೦ರಷ್ಟು ದುಡಿಮೆಗಾರರಿಗೆ ಜೀವನಾಧಾರವಾಗಿದೆ.ಈ ಪ್ರಮಾಣ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಶೇ. ೮೦ ಮೀರುತ್ತದೆ. ಅದೇ ರೀತಿಯಲ್ಲಿ ಜಿಲ್ಲೆಯ ನಗರ ಪ್ರದೇಶದಲ್ಲಿ ವಾಸಿಸುವುದರ ಪ್ರಮಾಣ ಬಹಳ ಕಡಿಮೆ. ಅದು ೨೦೦೧ರಲ್ಲಿ ಶೇ. ೨೨ರಷ್ಟಿದೆ. ನಗರೀಕರಣವನ್ನು ಬದಲಾವಣೆಯ, ಆಧುನೀಕರಣದ ಮತ್ತು ಅಭಿವೃದ್ದಿಯ ಮಾನದಂಡವಾಗಿ ಬಳಸಲಾಗುತ್ತಿದೆ. ಈ ದೃಷ್ಟಿಯಿಂದ ವಿಜಾಪುರ ಜಿಲ್ಲೆಯು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವುದು ಸ್ಪಷ್ಟವಾಗುತ್ತದೆ.

ಈ ಜಿಲ್ಲೆಯಲ್ಲಿ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳ ವ್ಯಾಪ್ತಿಯು ಸೀಮಿತವಾಗಿದೆ ಮತ್ತು ಅದರಲ್ಲಿ ಆಯ್ಕೆ ಮಾಡಿಕೊಳ್ಳಲು ವಿಕಲ್ಪಗಳೇ ಇಲ್ಲ. ಇದನ್ನೇ ಅಮರ್ತ್ಯಸೆನ್ ಬಡತನವೆಂದು ನಿರ್ವಚಿಸಿದ್ದಾನೆ. ಈ ಎಲ್ಲ ಕಾರಣಗಳಿಗಾಗಿ ನಮ್ಮ ಅಧ್ಯಯನದಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ, ಮಾನವ ಸಂಪನ್ಮೂಲ, ತಂತ್ರಜ್ಞಾನ, ನಾಯಕತ್ವಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒದಗಿಸಬೇಕಾಗುತ್ತದೆ. ಬಂಡವಾಳಕ್ಕಿಂತ ಅತ್ಯಂತ ಅಗತ್ಯವಾಗಿ ಈ ಜಿಲ್ಲೆಗೆ ಜರೂರಾಗಿ ಅಗತ್ಯವಾಗಿರುವ ಸಂಗತಿಯೆಂದರೆ ತರಬೇತಿ ಪಡೆದ, ತಂತ್ರಜ್ಞಾನದಲ್ಲಿ ಕುಶಲತೆ ಹೊಂದಿದ ಆಡಳಿತ ಸಾಹಸಿಗಳು.

ಈ ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗಿರುವ ಬಹು ಮುಖ್ಯ ಸಂಗತಿಯೆಂದರೆ ಮಧ್ಯಮ ಮತ್ತು ಕೆಳಹಂತದ ಅಧಿಕಾರಿಗಳಲ್ಲಿ ಕುಶಲತೆ ಇಲ್ಲ. ಯಾವುದನ್ನು ಅತ್ಯಂತ ಸೀಮಿತ ವ್ಯಾಪ್ತಿಯಲ್ಲಿ ರಾಜಕೀಯಡವೆಂದು ಕರೆಯುತ್ತೇವೆಯೋ ಆ ರಾಜಕೀಯ ಒತ್ತಡವನ್ನ ಮೀರುವ ಸಾಮರ್ಥ್ಯ ಮಧ್ಯಮ ಮತ್ತು ಕೆಳ ಹಂತದ ನೌಕರಶಾಹಿಗಿಲ್ಲ. ಈ ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಅಭಿವೃದ್ಧಿ ಆಡಳಿತವನ್ನು ‘ಜಮೀನ್ದಾರಿ’ ಪದ್ಧತಿಯಲ್ಲಿ ನಡೆಸುವಂತೆ ನಡೆಸಲಾಗುತ್ತಿದೆ.ಊಳಿಗಮಾನ್ಯದ ಪಳೆಯುಳಿಕೆಗಳನ್ನು ಯಾರಾದರೂ ನೋಡಬೇಕೆಂದು ಬಯಸಿದ್ದರೆ ಇಲ್ಲಿಗೆ ಬಂದು ಜಿಲ್ಲಾ ಪಂಚಾಯಿತಿಯ ಆಡಳಿತ ವೈಖರಿಯನ್ನು ನೋಡಿ ದೃಢಪಡಿಸಿಕೊಳ್ಳಬಹುದು. ಈ ಬಗೆಯ ಅಭಿವೃದ್ಧಿ ಆಡಳಿತಗಾರರನ್ನು ಕಟ್ಟಿಕೊಂಡು ಈ ಜಿಲ್ಲೆಯ ಅಭಿವೃದ್ಧಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಇಲ್ಲಿ ಕಾಯಿದೆಶೀರ ಕೆಲಸ ಮಾಡುವುದಿದ್ದರೆ ನಿಮ್ಮ ಅಗತ್ಯವಿಲ್ಲವೆಂದು ಇಲ್ಲಿನ ರಾಜಕೀಯ ನಾಯಕತ್ವವು ಮಧ್ಯಮ ಹಂತದ ಮತ್ತು ಕೆಳಹಂತದ, ಅಧಿಕಾರಿಗಳಿಗೆ ಯಾವುದೇ ಬಿಡೆಯಿಲ್ಲದೇ ಒತ್ತಾಯಿಸುತ್ತಿದೆ. ಈ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವು ಅತ್ಯಂತ ಶೈಶಾವಸ್ಥೆಯಲ್ಲಿದೆ. ಗ್ರಾಮ ಪಂಚಾಯಿತಿಯಲ್ಲಿ ಉಳ್ಳವರ ಆಡಳಿತ ನಡೆದಿದೆ. ಅಲ್ಲಿ ಆಡಳಿತ ಅನ್ನುವುದು ಹೆಸರಿಗೆ ಮಾತ್ರ ಎನ್ನುವಂತಿದೆ.

ಈ ಕಾರಣದಿಂದಲೇ ಜಿಲ್ಲೆಯ ದುಡಿಮೆಗಾರ ಮಂದಿ ವಲಸೆಯಲ್ಲಿ ತಮ್ಮ ಬಡನತದ ನಿವಾರಣೆಗೆ ದಾರಿಯನ್ನು ಕಂಡುಕೊಂಡು ಬಿಟ್ಟಿದ್ದಾರೆ. ಈ ಜಿಲ್ಲೆಯಲ್ಲಿ ವಲಸೆಯು ಒಂದು ಖಾಯಂ ವೃತ್ತಿಯಾಗಿಬಿಟ್ಟಿದೆ. ಕರ್ನಾಟಕದಲ್ಲಿ ವಲಸೆಗೆ ಸಂಬಂಧಿಸಿದಂತೆ ದೀರ್ಘ ಇತಿಹಾಸ ವಿಜಾಪುರ ಜಿಲ್ಲೆಗಿದೆ. ಬರಗಾಲ ಪರಿಹಾರ ಕಾಮಗಾರಿಗೆ ಜಿಲ್ಲೆಯಲ್ಲಿ ಯಾವ ಬಗೆಯ ಇತಿಹಾಸವಿದೆಯೋ ಅದೇ ರೀತಿಯ ಇತಿಹಾಸ ಜಿಲ್ಲೆಯ ವಲಸೆ ಪ್ರಕ್ರಿಯೆಗಿದೆ. ವಲಸೆ ಅನ್ನುವುದು ಜನರು ದುಸ್ಥಿತಿಯನ್ನು ಎದುರಿಸಲು ಕಂಡುಕೊಂಡಿರುವ ತಂತ್ರವಾಗಿದೆ. ವಲಸೆಯು ತೀವ್ರ ಬಡತನದ ಸಂಕೇತವಾಗಿದೆ. ಅದರಿಂದ ವಲಸೆ ಹೋದ ಕುಟುಂಬಗಳಿಗೆ ಅದರಿಂದ ಅನುಕೂಲವಾಗಿರಬಹುದು. ವಲಸೆ ಕುಟುಂಬಗಳ ಆರ್ಥಿಕ ಸ್ಥಿತಿಗತಿಯು ವಲಸೆಯಿಂದ ಉತ್ತಮವಾಗಿರಬಹುದು. ಆದರೆ ಅದು ಘನತೆಯಿಂದ ಕೂಡಿದ ಬದುಕನ್ನು ನೀಡುವುದುಸಾಧ್ಯವಿಲ್ಲ.

ವಿಶೇಷ ಅಭಿವೃದ್ಧಿ ಅಭಿಯಾನ (ಶಿಫಾರಸ್ಸುಗಳು)

ಈ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅಭಿಯಾನವನ್ನೇ ಸಂಘಟಿಸಬೇಕಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇದಕ್ಕೆ ಪ್ರಯತ್ನಗಳು ನಡೆಯಬೇಕು. ಅರ್ಜುನ್‌ಸೆನ್‌ಗುಪ್ತ ಸಮಿತಿಯು ಸಲಹೆ ಮಾಡಿರುವಂತೆ ವಿಜಾಪುರದಂತಹ ಜಿಲ್ಲೆಗಳಿಗೆ ಉದ್ಯೋಗವನ್ನು ಆಧರಿಸಿದ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಬೇಕು. ಇದಕ್ಕೆ ಅಗತ್ಯವಾದ ಅಭಿವೃದ್ದಿ ಆಡಳಿತಗಾರರನ್ನು ಒದಗಿಸಬೇಕಾಗುತ್ತದೆ. ಇಲ್ಲಿ ತಕ್ಷಣ ಆಗಬೇಕಾದ ಕಾರ್ಯಗಳೆಂದರೆ :

೧. ಸಾಕ್ಷರತೆಯ ಮಟ್ಟವನ್ನು ಅಭಿಯಾನದ ರೂಪದಲ್ಲಿ ಉತ್ತಮಪಡಿಸಲು ಪ್ರಯತ್ನಿಸಬೇಕು. ಅದರಲ್ಲಿ ಮಹಿಳೆಯರ ಸಾಕ್ಷರತೆಯನ್ನು ಉತ್ತಮಪಡಿಸಲು ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಬೇಕು.

೨. ಪ್ರಾಥಮಿಕ ಶಿಕ್ಷಣವನ್ನು ಸುಭದ್ರಗೊಳಿಸಬೇಕು. ಜಿಲ್ಲೆಯಲ್ಲಿ ೭ ರಿಂದ ೧೪ ವಯೋಮಾನದ ಎಲ್ಲ ಮಕ್ಕಳಿಗೂ ಕನಿಷ್ಠ ಹತ್ತು ವರ್ಷದ ಶಿಕ್ಷಣ ದೊರೆಯುವಂತೆ ಮಾಡಬೇಕು.

೩. ಈ ಜಿಲ್ಲೆಯಲ್ಲಿ ಅನೇಕ ಅಧ್ಯಯನಗಳು ತೋರಿಸಿರುವಂತೆ ಕೃಷಿಯು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದನ್ನು ಬಲಪಡಿಸಬೇಕಾಗಿದೆ. ಇಲ್ಲಿ ಒಣಬೇಸಾಯ ವ್ಯಾಪಕವಾಗಿದೆ. ಅದಕ್ಕೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸಬೇಕು.

೪. ಮಹಿಳೆಯರ ಸ್ಥಿತಿಗತಿಯು ಅತ್ಯಂತ ಕೆಳಮಟ್ಟದಲ್ಲಿದೆ. ಎಲ್ಲ ಬಗೆಯ ಅಸಮಾನತೆಯಿಂದ ಅವರು ನರಳುತ್ತಿದ್ದಾರೆ. ಈ ಕೃತಿಯ ಒಂಬತ್ತನೆಯ ಅಧ್ಯಾಯದಲ್ಲಿ ಈ ಜಿಲ್ಲೆಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಲಾಗಿದೆ. ಹಾಸನ ಜಿಲ್ಲೆಗೆ ಹೋಲಿಸಿದರೆ ವಿಜಾಪುರ ಜಿಲ್ಲೆಯ ಮಹಿಳೆಯರು ಯಾವ ರೀತಿಯಲ್ಲಿ ಹಿಂದುಳಿದಿದ್ದಾರೆಂಬುದು ಅರಿವಾಗುತ್ತದೆ. ಈ ದಿಶೆಯಲ್ಲಿ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಬಿಜಾಪುರ ನಗರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದಿದೆ. ಅದು ಸಾಂಪ್ರದಾಯಿಕ ರೀತಿಯಲ್ಲಿ ಪದವಿಗಳನ್ನು ನೀಡುತ್ತದೆ. ಅದರ ಜೊತೆಗೆ ಜಿಲ್ಲೆಗೆ ನಿರ್ದಿಷ್ಟ ಪಡಿಸಿಕೊಂಡು ಮಹಿಳೆಯರ ಅಭಿವೃದ್ಧಿ ಕುರಿತಂತೆ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ.

೫. ಈ ಜಿಲ್ಲೆಯಲ್ಲಿ ಜನರ ಧಾರಣ ಸಾಮರ್ಥ್ಯವನ್ನು ಉತ್ತಮ ಪಡಿಸಲು ಇರುವ ಒಂದು ಮರ್ಗಾವೆಂದರೆ ಇಲ್ಲಿನ ಗ್ರಾಮಗಳಲ್ಲಿ ಕೃಷಿಯೇತರ ಉದ್ಯೋಗಗಳನ್ನು ಬೆಳೆಸುವುದು. ಇದು ವಲಸೆಯನ್ನು ತಡೆಯಲು ನೆರವಾಗುತ್ತದೆ.

೫. ಜಿಲ್ಲಾ ಪಂಚಾಯಿತಿಯ ಯೋಜನಾ ಇಲಾಖೆಯನ್ನು ಬಲಪಡಿಸಿಬೇಕಾಗಿದೆ. ಅಲ್ಲಿ ಕೆಲಸವು ಯೋಜಿತ ರೀತಿಯಲ್ಲಿ ನಡೆಯುತ್ತಿಲ್ಲ. ಒತ್ತಡಕ್ಕೆ ತಕ್ಕಂತೆ ಅಲ್ಲಿ ಕೆಲಸ ನಡೆಯುತ್ತಿದೆ.

೭. ಈ ಜಿಲ್ಲೆಯ ವರಮಾನದ ವಾರ್ಷಿಕ ಏರಿಕೆಯೂ ಮಂದ ಗತಿಯಲ್ಲಿ ನೆಡಯುತ್ತಿದೆ. ಅದನ್ನು ಸರಿಪಡಿಸುವ ದಿಶೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

೭. ಈಗಾಗಲೆ ಮತ್ತೆ ಮತ್ತೆ ತಿಳಿಸಿರುವಂತೆ ಇಲ್ಲಿ ಅಭಿವೃದ್ದಿಯ ಸವಾಲು ಬೃಹದಾಕಾರವಾಗಿದೆ. ವರಮಾನ ಅಭಿವೃದ್ಧಿಯನ್ನು ಮತ್ತು ಮಾನವ ಅಭಿವೃದ್ಧಿಯನ್ನು ಏಕಕಾಲದಲ್ಲಿ ನೆರವೇರಿಸಿಕೊಳ್ಳಲು ಸಂಘಟಿತ ಪ್ರಯತ್ನ ನಡೆಯಬೇಕು.

೮. ನಮ್ಮ ಸಮಾಜದ ಸಂದರ್ಭದಲ್ಲಿ ಅತ್ಯಂತ ದುಸ್ಥಿತಿಯನ್ನು ಅನುಭವಿಸುತ್ತಿರುವವರೆಂದರೆ ಪರಿಶಿಷ್ಟರು. ಈ ಜಿಲ್ಲೆಯ ಅಭಿವೃದ್ದಿ ಯೋಜನೆಯಲ್ಲಿ ಪರಿಶಿಷ್ಟರ ಅಭಿವೃದ್ಧಿಯ ಭಾಗಕ್ಕೆ ವಿಶೇಷ ಆದ್ಯತೆಯು ದೊರೆಯಬೇಕಾಗುತ್ತದೆ.

೯. ಈ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಮೇಜರ್ ಸರ್ಜರಿಯಾಗಬೇಕು. ಅಲ್ಲಿ ಅಭಿವೃದ್ದಿ ಆಡಳಿತಗಾರ ಸಿಬ್ಬಂದಿಯನ್ನು ಸಿದ್ಧಪಡಿಸಬೇಕಾಗುತ್ತದೆ. ಮಾನವ ಸಂಪನ್ಮಲೂದ ಸಾಮರ್ಥ್ಯವು ಅಭಿವೃದ್ಧಿ ಸವಾಲಿಗೆ ಸಮನಾಗಿರಬೇಕಾಗುತ್ತದೆ.