. ಪ್ರಸ್ತಾವನೆ

ಪ್ರಸ್ತುತ ವಿಜಾಪುರ ಜಿಲ್ಲೆಯ ಅಭಿವೃದ್ಧಿಯ ಕಥೆಯನ್ನು ಮತ್ತು ದುಸ್ಥಿತಿಯ ವ್ಯಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಅದರ ಚರಿತ್ರೆಯನ್ನು ಮತ್ತು ಅದರ ವಸಾಹತು ಆಡಳಿತದ ಅನುಭವಗಳನ್ನು ಗಮನಿಸಬೇಕಾಗುತ್ತದೆ. ಚಾರಿತ್ರಿಕವಾಗಿ ವಿಜಾಪುರವು ಮಹತ್ವದ ಸ್ಥಾನವನ್ನು ಪಡೆದಿದೆ. ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾದ ಬಹಮನಿ ಮತ್ತು ವಿಜಯನಗರ ಅರಸರ ನಡುವಿನ ನಿರ್ಣಾಯಕ ಯುದ್ಧ ನಡೆದದ್ದು ವಿಜಾಪುರ ಜಿಲ್ಲೆಯ ತಾಳೀಕೋಟೆ ಹತ್ತಿರ ರಕ್ಕಸಗಿ – ತಗ್ಗಡಗಿ ಎಂಬಲ್ಲಿ ಎಂಬುದು ಮುಖ್ಯ. ಹನ್ನೆರಡನೆಯ ಶತಮಾನದಲ್ಲಿ ವಚನ ಸಂಸ್ಕೃತಿಯ ನೇತಾರನಾಗಿದ್ದ ಬಸವಣ್ಣನು ಜನಿಸಿದ್ದು ಇದೇ ಜಿಲ್ಲೆಯ ಬಸವನಬಾಗೇವಾಡಿಯ ಹತ್ತಿರದ ಒಂದು ಗ್ರಾಮದಲ್ಲಿ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಜಿಲ್ಲೆಯ ಚರಿತ್ರೆಯು ಬಹಳ ಶ್ರೀಮಂತವಾದುದೇನೋ, ನಿಜ. ಆದರೆ ಅದರ ಚರಿತ್ರೆಯು ಇಂದು ಅದಕ್ಕೆ ಹೆಣಬಾರವಾಗಿ ಪರಿಣಮಿಸಿದೆ. ಈ ಪ್ರದೇಶದ ಚರಿತ್ರೆಯನ್ನು ಇತಿಹಾಸ ಪೂರ್ವ ಕಾಲಕ್ಕೆ ಒಯ್ಯಬಹುದಾಗಿದೆ. ನಮ್ಮ ಅಧ್ಯಯನದ ದೃಷ್ಟಿಯಿಂದ ಇದರ ಚರಿತ್ರೆಯನ್ನು ಬ್ರಿಟಿಶರ ವಸಾಹತುಶಾಹಿ ಕಾಲಕ್ಕೆ ಮತ್ತು ಅದರ ನಂತರದ ಕಾಲಾವಧಿಗೆ ಸಿಮೀತಗೊಳಿಸಿಕೊಳ್ಳಲಾಗಿದೆ.

. ಬ್ರಿಟಿಶ್‌ ಪೂರ್ವ ವಿಜಾಪುರ

ಬ್ರಿಟಿಷರ ಆಡಳಿತವು ಜಿಲ್ಲೆಯಲ್ಲಿ ಕ್ರಿ.ಶ. ೧೮೧೮ರಲ್ಲಿ ಆರಂಭವಾಯಿತು. ಇದಕ್ಕೆ ಪೂರ್ವದಲ್ಲಿ ಜಿಲ್ಲೆಯು ಅನೇಕ ರಾಜರ, ಪಾಳೆಗಾರರ, ನವಾಬರ ಆಕ್ರಮಣದ ಪ್ರದೇಶವಾಗಿತ್ತು.

ಸರಿಸುಮಾರು ೧೭, ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಈ ಪ್ರದೇಶವು ನಾನಾ ರೀತಿಯ ಯುದ್ಧಗಳ ಕೇಂದ್ರವಾಗಿತ್ತು. ಈ ಕಾಲಾವಧಿಯಲ್ಲಿ ಇದು ಮೊಗಲರು, ಹೈದರಾಬಾದಿನ ನಿಜಾಮ, ಮೈಸೂರಿನ ಹೈದರಾಲಿ ಟಿಪ್ಪೂಸುಲ್ತಾನ, ಮರಾಠರು ಮತ್ತು ಬಿಟಿಷರು ಮುಂತಾದವರು ಆಕ್ರಮಣದ ಪ್ರದೇಶವಾಗಿತ್ತು. ಈ ಬಗೆಯ ಆಕ್ರಮಣ, ಯುದ್ಧ, ಪಾಳೆಗಾರಿಕೆಗಳಿಂದಾಗಿ ಜನರ ಬದುಕು ಮೂರಾಬಟ್ಟೆಯಾಗಿತ್ತು. ಯುದ್ಧಗಳಿಂದ, ತೆರಿಗೆಗಳಿಂದ, ಲೂಟಿಯಿಂದ, ಮೇಲಿಂದ ಮೇಲೆ ಸಂಭವಿಸುತ್ತಿದ್ದ ಬರಗಳಿಂದ ಮತ್ತು ಪ್ಲೇಗುಮಾರಿಯಿಂದ ಜನರ ಬದುಕು ಜರ್ಜರಿತವಾಗಿತ್ತು.

ನಮಗೆಲ್ಲ ಗೊತ್ತಿರುವಂತೆ ಸುಮಾರು ೧೮೦೦ರ ವೇಳೆಗೆ ಭಾರತದಲ್ಲಿ ಬ್ರಿಟಿಷರು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದ್ದರು. ವಸಾಹತುಶಾಹಿ ಆಡಳಿತವು ಮರಾಠರನ್ನು ಸದೆಬಡಿಯಿತು. ಹೈದರಾಬಾದಿನ ನಿಜಾಮನ ಶಕ್ತಿಯನ್ನು ಬ್ರಿಟಿಷರು ಹತ್ತಿಕ್ಕಿದರು. ಜನರಲ್ ಥಾಮಸ್ ಮನ್ರೋನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯವು ೧೮೧೮, ಮೇ ೧೭ರಂದು ವಿಜಾಪುರವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಒಂದು ಕೇಂದ್ರಾಡಳಿತ ಇಲ್ಲವಾದಾಗ, ಸಾಮ್ರಾಜ್ಯಗಳೆಲ್ಲ ಪತನವಾದಾಗ ವಿಜಾಪುರ ಪ್ರದೇಶದಲ್ಲಿ ಅರಾಜಕತೆ ಅನಿವಾರ್ಯವಾಗಿಬಿಟ್ಟಿತು. ಈ ಪ್ರದೇಶದಲ್ಲಿ ೧೭ ಮತ್ತು ೧೮ನೆಯ ಶತಮಾನಗಳಲ್ಲಿ ಯಾವ ಬಗೆಯ ರಾಜಕೀಯ ಅಸ್ಥಿರತೆ ಅರಾಜಕತೆ ಅಭದ್ರತೆಯಿತ್ತು ಎಂಬುದನ್ನು ಕೆಳಗಿನ ಮಾತುಗಳು ಸ್ಪಷ್ಟಪಡಿಸುತ್ತವೆ.

ಆದಿಲ್‌ಷಾಹಿಗಳ ವಿಜಾಪುರವು ೧೬೮೬ರಲ್ಲಿ ಮೊಗಲರ ವಶವಾಯಿತು. ಮೊಗಲರ ದೊರೆ ಔರಂಗಜೇಬವನು ದಖನ್ ಮೇಲೆ ದಾಳಿಯ ಮೇಲೆ ದಾಳಿ ಮಾಡಿ ಕೊನೆಗೂ ಆದಿಲ್‌ಷಾಹಿಗಳ ಸಾಮ್ರಾಜ್ಯವನ್ನು ಕೊನೆಗೊಳಿಸಿದನು. ಆದಿಳ್‌ಷಾಹಿಗಳ ೨೦೦ ವರ್ಷಗಳ ಆಳ್ವಿಕೆಯು ಹೀಗೆ ಕೊನೆಗೊಂಡಿತು. ಅವರು ಕಟ್ಟಿದ್ದ ಸಾಂಸ್ಕೃತಿಕ ಪರಿಸರವನ್ನು ಮೊಗಲರು ಕದಡಿದರು. ಈ ಪ್ರದೇಶದಲ್ಲಿ ನೆಲೆನಿಂತು ಆಳ್ವಿಕೆ ನಡೆಸುವುದು ಔರಂಗಜೇಬನಿಗೆ ಸಾಧ್ಯವಿರಲಿಲ್ಲ. ಈ ಪ್ರದೇಶವು ಅಂದು ಮರಾಠರ ಹಾವಳಿಯಿಂದ ತತ್ತರಿಸತೊಡಗಿತ್ತು. ಔರಂಗಜೇಬನಿಂದಲೂ ಮರಾಠರ ಹಾವಳಿಯನ್ನು ನಿಲ್ಲಿಸಲಾಗಲಿಲ್ಲ. ಈ ಪ್ರಾಂತದಲ್ಲಿ ೧೭ನೆಯ ಶತಮಾನ ಮುಗಿಯುತ್ತಿದ್ದಂತೆಯೇ ಅರಾಜಕತೆ ಉಲ್ಪಣಿಸಿತು. ನೆಲೆ ನಿಂತು ಆಳುವ ಪ್ರಭುತ್ವಗಳಿರಲಿಲ್ಲ. ದಾಳಿಗಳ ಮೇಲೆ ದಾಳಿಗಳು ನಡೆದವು. ಜೊತೆಗೆ ಬರಗಾಲ ಹಾಗೂ ಪ್ಲೇಗು ಒಟ್ಟಿಗೆ ಬಂದು ಇಡೀ ಪ್ರಾಂತವು ದುಸ್ಥಿತಿಗೆ ಈಡಾಯಿತು. ವಿಜಾಪುರ ನಗರವು ಪಾಳು ಬೀಳುವಂತಾಯಿತು. ಮೊಗಲರ ಆಕ್ರಮಣದ ಕಾಲಾವಧಿಯಲ್ಲಿ ವ್ಯಾಪಾರ ವಹಿವಾಟು ನಿರ್ಲಕ್ಷ್ಯಕ್ಕೆ ಗುರಿಯಾದವು (ಅಮರೇಶ ನುಗಡೋಣಿ : ೨೦೦೪: ೩೩-೩೪).

ಹೀಗೆ ವಿಜಾಪುರ ಪ್ರದೇಶವು ೧೮೧೮ರಲ್ಲಿ ಬ್ರಿಟಿಷರ ವಶವಾಗುವವರೆಗೆ ಮತ್ತು ನಂತರದ ವಸಾಹತುಶಾಹಿ ಕಾಲಘಟ್ಟದಲ್ಲೂ ರಾಜಕೀಯ ಅಸ್ಥಿರತೆ, ಆಡಳಿತಾತ್ಮಕ ಗೊಂದಲ, ಬರಗಾಲ, ದಂಗೆ ದರೋಡೆ, ಪ್ಲೇಗುಮಾರಿ ಮುಂತಾದವುಗಳನ್ನು ಎದುರಿಸಿತು, ಸಮಾಜದಲ್ಲಿ ಸ್ಥಿರತೆ ಇರಲಿಲ್ಲ. ಜನರಿಗೆ ಭದ್ರತೆಯಿರಲಿಲ್ಲ. ಈ ಕಾಲಘಟ್ಟದಲ್ಲಿ ದೆಹಲಿಯ ಮೊಗಲರು, ಹೈದರಾಬಾದಿನ ನಿಜಾಮ, ಮರಾಠ ಪೇಶ್ವೆಗಳು, ಮೈಸೂರಿನ ಹೈದರ್ ಟಿಪ್ಪೂಸುಲ್ತಾನ್ ಮತ್ತು ಬ್ರಿಟಿಷರ ನಡುವಿನ ಸಂಘರ್ಷದ ನೆಲೆ ವಿಜಾಪುರ ಪ್ರೇದಶವಾಗಿತ್ತು. ವಿಜಾಪುರ ಪ್ರದೇಶವು ಕ್ರಿ.ಶ. ೧೬೮೬ರಲ್ಲಿ ದೆಹಲಿಯ ಮೊಗಲರ ಸುಲ್ತಾನ ಔರಂಗಜೇಬನ ಆಕ್ರಮಣಕ್ಕೆ ತುತ್ತಾಯಿತು. ಈ ಪ್ರದೇಶವು ೧೬೮೭ ರಿಂದ ೧೭೨೩ ರವರೆಗೆ ಮೊಗಲರ ವಶದಲ್ಲಿತ್ತು. ಮುಂದೆ ೧೭೨೪ರಲ್ಲಿ ಇದು ಹೈದರಾಬಾದ್‌ನ ಆಸಿಫ್ ಮನೆತನದ ವಶವಾಯಿತು. ಆದರೆ ಕ್ರಿ.ಶ. ೧೭೪೬ರಲ್ಲಿ ಇದು ಮರಾಠ ಪೇಶ್ವೆಗಳ ವಶವಾಯಿತು. ಈ ಅವಧಿಯಲ್ಲಿ ಜನರು ತೀವ್ರ ಸಂಕಷ್ಟ ಅನುಭವಿಸಿದರು. ಈ ಕಾಲಾವಧಿಯಲ್ಲಿ ಅಂದರೆ ೧೮ನೆಯ ಶತಮಾನದ ಕೊನೆಯ ಭಾಗದಲ್ಲಿ ವಿಜಾಪುರ ಪ್ರದೇಶದ ಜನತೆ ಯಾವ ಬಗೆಯ ಬವಣೆ ಶೋಷಣೆ ಅನುಭವಿಸಿದರು ಎಂಬುದನ್ನು ವಿಜಾಪುರ ಜಿಲ್ಲಾ ಗ್ಯಾಸೆಟಿಯರ್ (೧೯೯೯) ಹೀಗೆ ಹಿಡಿದಿಟ್ಟಿದೆ.

“……………. ೧೭೯೦-೯೧ರಲ್ಲಿ ಮತ್ತೊಮ್ಮೆ ಬರಗಾಲಕ್ಕೆ ತುತ್ತಾದ ವಿಜಾಪುರ ಪ್ರದೇಶವು ಅಶಾಂತಿಯ ಆಗರವಾಗಿತ್ತು. ಮರಾಠ ಪೇಶ್ವೆಗಳು ೧೭೯೫ರಲ್ಲಿ ಹೈದರಾಬಾದ್ ನಿಜಾಮನನ್ನು ಸೋಲಿಸಿ ಹುನುಗುಂದ ಪ್ರದೇಶವನ್ನು ವಶಪಡಿಸಿಕೊಂಡರು. ಮರಾಠರ ಅಧೀನಕ್ಕೆ ಒಳಪಟ್ಟ ಇದು ಅವರ ತೆರಿಗೆ ಭಾರಕ್ಕೆ ಕುಸಿಯಿತು. ತೆರಿಗೆಯ ಹೊಡೆತಕ್ಕೆ ಹೆದರಿ ರೈತರು ಗುಳೆ ಹೋದರು… ಈ ಅವಧಿಯಲ್ಲಿಸುಲಿಗೆ, ಲೂಟಿಗಳು, ದೈನಂದಿನ ಚಟುವಟಿಕೆಗಳಾಗಿದದವು. ಅಲ್ಲಿ ಅಶಾಂತಿ ತಾಂಡವವಾಡುತ್ತಿತ್ತು… ಪೇಶ್ವೆಗಳ ಅಧೀನರಾಗಿದ್ದ ಜಾಗೀರುದಾರರು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿದ್ದರು. ಬಾದಾಮಿಯ ಮಾಧವರಾಯ ರಾಸ್ತಿಯ, ಅಲಮೇಲ, ಇಂಡಿ, ತಂಬಗಳ ಮಾಲಾಜಿ ಘೋರ್ಪಡೆ, ಬಾಗೇವಾಡಿ, ವಿಜಾಪುರಗಳ ಪರಶುರಾಮ ಪಂಡಿತ ಪ್ರತಿನಿಧಿ, ಮುದಕವಿ, ಹುನುಗುಂದಗಳ ಗಣಪತ್‌ರಾವ್ ಪೆನ್ಸೆ ಹಾಗೂ ಗಜೇಂದ್ರಗಡದ ದೌಲತ್ ರಾವ್ ಘೋರ್ಪಡೆ ಅವರುಪರಸ್ಪರ ಕಚ್ಚಾಟದಲ್ಲಿ ನಿರತರಾಗಿದ್ದರು. (ಪು.೧೬೩)

ಈ ಪ್ರಾಂತದಲ್ಲಿ ಅರಾಜಕತೆ, ಅಭದ್ರತೆ, ಹಾಹಾಕಾರವು ೧೮ನೆಯ ಶತಮಾನದಲ್ಲಿ ಎಷ್ಟು ತೀವ್ರವಾಗಿತ್ತು ಎಂಬುದನ್ನು ಖ್ಯಾತ ಇತಿಹಾಸಜ್ಞ ಬಿ. ಶೇಖ್‌ಅಲಿ ಅವರು ಹೀಗೆ ಹಿಡಿದಿಟ್ಟಿದ್ದಾರೆ.

“ನಿರಂತರವಾಗಿ ರಾಜಕೀಯ ತಂತ್ರಗಳು ಹಾಗೂ ದೈಹಿಕ ಬಲ ಇವುಗಳನ್ನು ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳನ್ನು ಅಡಗಿಸಲು ಬಳಸುತ್ತಿದ್ದವು. ಪರಿಣಾಮವಾಗಿ ಇಡೀ ದೇಶವೇ ಕುದಿಯುವ ಕುಲುಮೆಯಾಗಿತ್ತು. ದೇಶವಿಡಿ ರಣರಂಗವಾಗಿ ಪರಿವರ್ತನೆಗೊಂಡು ಅಲ್ಲಿ ಒಂದಿಷ್ಟು ನೆಲವೂ ಶಾಂತಿ ನೆಮ್ಮದಿಯಾಗಿ ಉಳಿಯದಂತಾಯಿತು. ಈ ಪಕ್ಷಗಳಿಗೆ ಅವರು ಮರಾಠರಾಗಲಿ, ನಿಜಾಮನಾಗಲಿ, ಫ್ರೆಂಚರಾಗಲಿ, ಇಂಗ್ಲಿಷರಾಗಲಿ ಅಥವಾ ಹೈದರ್ ಟಿಪ್ಪೂ ಆಗಲಿ ಅವರ ವರಮಾನದ ಮೂಲವೆಂದರೆ ಯುದ್ಧ ವಿಜಯಗಳಿಂದ ದೊರೆಯುತ್ತಿದ್ದ ಸಂಪತ್ತು, ಯಾರಾದರೂ ಒಬ್ಬರು ಶಾಂತಿಯಿಂದ ಇರಬಯಸಿದರೂ ಮಿಕ್ಕವರು ಆ ಸುಖವನ್ನು ಸವಿಯಲು ಅವರನ್ನು ಬಿಡುತ್ತಿರಲಿಲ್ಲ. ಇಬ್ಬರಲ್ಲೂ ಒಂದು ಹುಚ್ಚು ಆವೇಶ, ಸಾಧ್ಯವಾದಷ್ಟು ಭೂಮಿಯನ್ನು ಕಸಿದುಕೊಳ್ಳಬೇಕು, ಕೊಳ್ಳೆ ಹೊಡೆಯಬೇಕು, ಸಾಧ್ಯವಾದಷ್ಟು ಸಂಪಾದಿಸಬೇಕು ಎಂಬ ಸಂಗತಿಗಳು ಮೆರೆಯುತ್ತಿದ್ದವು. ಅಧಿಕಾರದ ಕಿತ್ತಾಟದಿಂದ ಅಲ್ಲಿ ಯಾವುದೇ ಬಗೆಯ ರಚನಾತ್ಮಕ ಅಥಧವಾ ಸಾಂಸ್ಕೃತಿಕ ಬೆಳವಣಿಗೆ ಎನ್ನುವುದು ಸಾಧ್ಯವೇ ಇಲ್ಲದ ವಿಚಾರವಾಗಿತ್ತು. ಇಡೀ ಶತಮಾನವೇ ಒಂದು ಬೇಗುದಿಯ ಸುದೀರ್ಘ ಅವಧಿಯಾಗಿತ್ತು. ದಂಗೆ ಕ್ರಾಂತಿ ಇವು ದಿನದ ಮಾತಾಗಿದ್ದವು. ಯುದ್ಧವೆನ್ನುವುದು ಆ ಕಾಲದ ಸಾಮಾನ್ಯ ಚಟುವಟಿಕೆಯೆ ಆಗಿಹೋಗಿತ್ತು (೧೯೯೭, ಪು. ೩-೪).

ಈ ಪ್ರದೇಶದಲ್ಲಿ ೧೯ನೆಯ ಶತಮಾನದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಗ್ಯಾಸೆಟಿಯರ್ ಹೀಗೆ ಗುರುತಿಸಿದೆ.

“ಪೇಶ್ವೆಗಳ ಆಡಳಿತದಲ್ಲಿ ಮರಾಠರ ಲೂಟಿ, ಜಹಗೀರುದಾರರ ಸುಲಿಗೆ, ಕಂದಾಯ ಗುತ್ತಿಗೆದಾರರ ಕಾಟ, ಕಳ್ಳಕಾಕರಿಂದ ದರೋಡೆ ಮುಂತಾದ ಅಹಿತಕರ ಚಟುವಟಿಕೆಗಳ ಸುಳಿಯಲ್ಲಿ ವಿಜಾಪುರ ಪ್ರದೇಶವು ಬಳಲಿ ಬಸವಳಿದಿತ್ತು’’ (೧೯೯೯, ಪು. ೧೪೬).

ಈ ಪ್ರದೇಶದಲ್ಲಿ ಒಂದು ಕೇಂದ್ರ ಪ್ರಭುತ್ವವಿರಲಿಲ್ಲ. ಅಲ್ಲಿ ದೊಡ್ಡ ಸಾಮ್ರಾಜ್ಯವಿರಲ್ಲಿಲ. ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ಜಮಖಂಡಿ, ಮುಧೋಳ ಮತ್ತು ಸವಣೂರು ಮುಖ್ಯವಾಗಿದ್ದವು. ಇವುಗಳಲ್ಲದೆ ಅವಿಭಜಿತ ಜಿಲ್ಲೆಯ ತೇರದಾಳ, ರಬಕವಿ ಸೇರಿದಂತೆ ೧೩ ಗ್ರಾಮಗಳು ಸಾಂಗಲಿ ಸಂಸ್ಥಾನಕ್ಕೆ, ೧೭ ಹಳ್ಳಿಗಳು ಜಾಂದ್ ಸಂಸ್ಥಾನಕ್ಕೆ, ಒಂಬತ್ತು ಗ್ರಾಮಗಳು ಹಿರಿಯ ಕುಂದರವಾಡ ಸಂಸ್ಥಾನಕ್ಕೆ ಮತ್ತು ಕೆಲವುಭಾಗ ರಾಮದುರ್ಗಾ ಸಂಸ್ಥಾನಕ್ಕೂ ಸೇರಿದ್ದವು. ಇವೆಲ್ಲವೂ ಮರಾಠಿ ಮೂಲದ ಸಂಸ್ಥಾನಗಳಾಗಿದ್ದವು. ಸಹಜವಾಗಿ ಅಲ್ಲಿ ಮರಾಠಿ ಭಾಷೆಯು ಆಳುವ ವರ್ಗದ ಭಾಷೆಯಾಗಿತ್ತು. ರಾಜಕೀಯ ಅಸ್ಥಿರತೆ, ಆರ್ಥಿಕ ಅಭದ್ರತೆಗಳ ಜೊತೆ ವಿಜಾಪುರ ಪ್ರದೇಶವು ಭಾಷಾ ದಬ್ಬಾಳಿಕೆಗೂ ಒಳಗಾಯಿತು.

. ವಸಾಹತುಶಾಹಿ ಕಾಲಘಟ್ಟ

ಈ ಪ್ರದೇಶವು ಕ್ರಿ.ಶ. ೧೮೧೮ರಲ್ಲಿ ಬ್ರಿಟಿಷರ ವಶವಾಯಿತು. ವಸಾಹತುಶಾಹಿ ಆಳ್ವಿಕೆಯಲ್ಲೂ ವಿಜಾಪುರ ಪ್ರದೇಶವು ಅನೇಕ ಬಗೆಯರಾಜಕೀಯ ಮತ್ತು ಆಡಳಿತಾತ್ಮಕ ಬದಲಾವಣೆಗಳಿಗೆ ಒಳಗಾಗಬೇಕಾಯಿತು. ಆಡಳಿತದ ಅನುಕೂಲದ ಹೆಸರಿನಲ್ಲಿ ಬ್ರಿಟಿಷರು ೧೮೬೪ರಲ್ಲಿ ಕಲಾದಗಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರು. ಇದರಿಂದಾಗಿ ಅನೇಕ ಶತಮಾನಗಳಿಂದ ಕೇಂದ್ರ ಸ್ಥಳವಾಗಿದ್ದ ವಿಜಾಪುರ ನಗರವು ನಿರ್ಲಕ್ಷ್ಯಕ್ಕೆ ಒಳಗಾಯಿತು. ಆದರೆ ಮುಂದೆ ೧೮೮೫ರಲ್ಲಿ ವಿಜಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು.

ವಸಾಹತುಶಾಹಿ ಕಾಲಾವಧಿಯಲ್ಲಿ ವಿಜಾಪುರವು ಬಾಂಬೆ ಪ್ರಾಂತದ ಭಾಗವಾಗಿತ್ತು ಬ್ರಿಟಿಷರ ನೇರ ಆಳ್ವಿಕೆಯಲ್ಲಿತ್ತು. ಈ ಜಿಲ್ಲೆಯಲ್ಲಿ ಜೊತೆಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಮತ್ತು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಬಾಂಬೆ ಪ್ರಾಂತದ ಭಾಗಗಳಾಗಿದ್ದವು. ಈ ಬಗೆಯ ಚಾರಿತ್ರಿಕ ಹಿನ್ನೆಲೆಯ ಕಾರಣಗಳಿಂದಾಗಿ ಇಂದಿಗೂ ಈ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ಬಾಂಬೆ ಕರ್ನಾಟಕ ವೆಂದು ಕರೆಯಲಾಗುತ್ತದೆ. ಬ್ರಿಟಿಷರ ಅಧಿಕಾರಾವಧಿಯಲ್ಲಿ ವಿಜಾಪುರವನ್ನು ಅನೇಕ ಕಲೆಕ್ಟರ್‌ಗಳ ವಶಕ್ಕೆ ನೀಡಲಾಯಿತತು. ಅನೇಕ ಆಡಳಿತಾತ್ಮಕ ಬದಲಾವಣೆಗಳಿಗೆ ಇದು ಒಳಗಾಗಬೇಕಾಯಿತು. ಇದರ ಗಡಿರೇಖೆಗಳು ಬದಲಾದವು. ಈ ಅವಧಿಯಲ್ಲಿ ಮರಾಠಿ ಭಾಷೆಯನ್ನು ಜನರ ಮೇಲೆ ಹೇರಲಾಯಿತು. ಆಡಳಿತ, ಭಾಷೆ, ವ್ಯಾಪಾರ, ಬರಗಾಲ, ಪ್ಲೇಗು ಮುಂತಾದ ಸಂಗತಿಗಳಿಂದಾಗಿ ಜಿಲ್ಲೆಯು ಅನಾಥವಾಯಿತು.

ಅರಾಜಕತೆ, ಅಸ್ಥಿರತೆ, ಸಂಘರ್ಷ, ಅಭದ್ರತೆ, ಬರಗಾಲ, ಪ್ಲೇಗುಮಾರಿ, ಮರಾಠಿ ಭಾಷೆಯ ದಬ್ಬಾಳಿಕೆ ಮುಂತಾದ ಸಂಗತಿಗಳಿಂದಾಗಿ ಅಬಿವೃದ್ಧಿಗೆ ಅಲ್ಲಿ ಅವಕಾಶವೇ ಇಲ್ಲದಂತಾಗಿತ್ತು. ಈ ಕಾಲಾವಧಿಯಲ್ಲಿ ದಕ್ಷಿಣ ಕರ್ನಾಟಕದ ಮೈಸೂರು ಸಂಸ್ಥಾನದಲ್ಲಿ ಅಭಿವೃದ್ಧಿಯು ಆಳುವ ವರ್ಗದ ಆದ್ಯತೆಯ ಸಂಗತಿಯಾಗಿತ್ತು. ಅಲ್ಲಿ ರಾಜಕೀಯ ಸ್ಥಿರತೆಯಿತ್ತು. ಪ್ರಗತಿಪರವಾದ ಆಡಳಿತವಿತ್ತು. ಜನಪರವಾಗಿ ಪ್ರಭುತ್ವವಿತ್ತು. ಶಿಕ್ಷಣ, ಆರೋಗ್ಯ, ಸಾರಿಗೆ, ಉದ್ದಿಮೆ, ಸಂಪರ್ಕ, ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಮೈಸೂರು ಸಂಸ್ಥಾನವು ೨೦ನೆಯ ಶತಮಾನದ ಆದಿಭಾಗದಲ್ಲಿ ತೀವ್ರ ಪ್ರಗತಿ ಸಾಧಿಸಿಕೊಂಡಿತು. ಆದರೆ ವಿಜಾಪುರ ಜಿಲ್ಲೆಯು ಅಂದು ದುಸ್ಥಿ ತಿಗೆ ಒಳಗಾಗಿತ್ತು.

ಈ ಬಗೆಯ ಅಸ್ಥಿರತೆ-ಅರಾಜಕತೆ, ಭಾಷಾ ದಬ್ಬಾಳಿಕೆಯಿಂದಾಗಿ ಉಂಟಾದ ಪರಿಣಾಮಗಳನ್ನು ಖ್ಯಾತ ಬರಹಗಾರ ಅಮರೇಶ ನುಗಡೋಣಿ ಹೀಗೆ ವಿವರಿಸಿದ್ದಾರೆ.

“ಪೇಶ್ವೆಗಳ ಆಡಳಿತವನ್ನು ಕೊನೆಗೊಳಿಸಿ ೧೮೧೮ರಲ್ಲಿ ವಿಜಾಪುರ ಪ್ರದೇಶವನ್ನು ಬ್ರಿಟಿಷರು ತಮ್ಮ ವಶಪಡಿಸಿಕೊಂಡರು. ಬ್ರಿಟಿಷರು ಅಲ್ಲಿ ಅಸ್ತಿತ್ವದಲ್ಲಿದ್ದ ಸಣ್ಣಪುಟ್ಟ ಸಂಸ್ಥಾನಗಳನ್ನು ಪೋಷಿಸಿದರು. ಮರಾಠ ಪೇಶ್ವೆಗಳ ವಂಶಸ್ಥರನ್ನೂ, ಸಂಬಂಧಿಕರನ್ನೂ ಸಂಸ್ಥಾನಗಳಲ್ಲಿ ಅಧಿಕಾರಕ್ಕೆ ಕೂಡಿಸಿದರು. ಕನ್ನಡ ಮಾತನಾಡುವ ಪ್ರದೇಶಗಳಾದ ಅಕ್ಕಲಕೋಟೆ, ಕುಂದರವಾಡ, ಜತ್ತು, ಕಿರುಮಿರಜು, ಮುಧೋಳ, ರಾಮದುರ್ಗ, ಸಾಂಗಲಿ, ಸವಣೂರು ಮುಂತಾದವು ಸಂಸ್ಥಾನಗಳಾದವು. ಸಂಸ್ಥಾನಗಳ ಒಡೆತನವು ಮರಾಠಿಗಳ ವಶದಲ್ಲಿದ್ದುದರಿಂದ ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಒತ್ತಡಕ್ಕೆ ಸ್ಥಳೀಯ ಕನ್ನಡಿಗರು ಒಳಗಾದರು. ಒಂದ, ಕೊಲ್ಲಾಪುರ, ಮೀರಜ್, ಜಮಖಂಡಿ, ಸಂಸ್ಥಾನಗಳಲ್ಲಿ ಬಹುಸಂಖ್ಯಾತರಾಗಿ ಕನ್ನಡಿಗರೇ ಇದ್ದರು. ಬ್ರಿಟಿಷರ ಆಳ್ವಿಕೆಗೆ ಪೂರ್ವದಿಂದಲೂ ಪೇಶ್ವೆಗಳು ಇಲ್ಲಿ ಅಧಿಕಾರದಲ್ಲಿದ್ದುರು. ಅಂದಿನಿಂದಲೇ ಮರಾಠಿ ಭಾಷೆ ಸಂಸ್ಕೃತಿಗಳನ್ನು ಅನುಸರಿಸಲು ಸ್ಥಳೀಯರು ಒಗ್ಗಿಹೋದರು. ವೈದಿಕರಂತೂ ಮರಾಠಿ ಭಾಷೆ ಸಂಸ್ಕೃತಿಯನ್ನು ತಮ್ಮದೆಂಬಂತೆ ಸ್ವೀಕರಿಸಿದ್ದರು” (೧೯೯೯).

ಈ ಚಾರಿತ್ರಿಕ ಹಿನ್ನೆಲೆಯಲ್ಲಿ ವಿಜಾಪುರ ಜಿಲ್ಲೆಯ ಸ್ಥಿತಿಗತಿಯನ್ನು, ಅದರ ಅಭಿವೃದ್ಧಿ ಸ್ವರೂಪವನ್ನು ಪರಿಶೀಲಿಸಬೇಕಾಗುತ್ತದೆ. ಈ ಜಿಲ್ಲೆಯಲ್ಲಿ ಅಭಿವೃದ್ಧಿಯೆಂಬುದು ನಿಜವಾದ ಅರ್ಥದಲ್ಲಿ ೧೯೫೬ರ ನಂತರ ಆರಂಭಗೊಂಡಿತೆಂದು ಹೇಳಬೇಕಾಗುತ್ತದೆ. ವಸಾಹತುಶಾಹಿ ಪೂರ್ವ ಹಾಗೂ ವಸಾಹತುಶಾಹಿ ಕಾಲಘಟ್ಟಗಳಲ್ಲಿ ಜಿಲ್ಲೆಯು ಅನುಭವಿಸಿದ ಸಂಕಷ್ಟ ಸಂಘರ್ಷಗಳ ಹಿನ್ನೆಲೆಯಲ್ಲಿ ಏಕೀಕರಣೋತ್ತರ ವಿಜಾಪುರ ಜಿಲ್ಲೆಯ ಅಭಿವೃದ್ಧಿಯನ್ನು ಚರ್ಚಿಸಬೇಕಾಗುತ್ತದೆ.

.೪. ಬರಪೀಡಿತ ಜಿಲ್ಲೆ ವಿಜಾಪುರ

ವಸಾಹತುಶಾಹಿ ಕಾಲಘಟ್ಟಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವಿಜಾಪುರ ಪ್ರದೇಶವನ್ನು ಬಾಂಬೆ ಸಂಸ್ಥಾನದಲ್ಲೊಂದು ಕಪ್ಪು ಚುಕ್ಕೆ ಎಂದೂ, ಬಾಂಬೆ ಸಂಸ್ಥಾನದಲ್ಲಿ ಅತ್ಯಂತ ಕ್ಷಾಮ ಬರ ಪೀಡಿತ ಪ್ರದೇಶ ಎಂದು ಮತ್ತೆ ಮತ್ತೆ ಬಣ್ಣಿಸಲಾಗಿದೆ (ವಿವರಗಳಿಗೆ ನೋಡಿ : ಎ.ಆರ್. ವಾಸವಿ, ೧೯೯೯). ಆಕೆ ತನ್ನ ಕೃತಿಯಲ್ಲಿ ಪಟ್ಟಿ ಮಾಡಿರುವಂತೆ ೧೯ ಮತ್ತು ೨೦ನೆಯ ಶತಮಾನದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಬರಗಾಲಗಳ ವಿವರ ಹೀಗಿದೆ :

೧೮೧೮-೧೯, ೧೮೨೪-೨೫, ೧೮೫೩-೫೪, ೧೮೬೩-೬೪, ಮತ್ತು ೧೮೭೬-೭೭: ಇವು ತೀವ್ರ ಆಹಾರ ಕೊರತೆಯ ಮತ್ತು ಸಂಕಷ್ಟದ ಬರಗಾಲದ ವರ್ಷಗಳು. ಮುಂದೆ ೧೮೯೧-೯೨, ೧೮೯೬-೯೭ ಮತ್ತು ೧೮೯೮-೯೯: ಇವು ಬರ ಕ್ಷಾಮ ಮತ್ತು ಪ್ಲೇಗುಮಾರಿ ಮುಪ್ಪುರಿಗೊಂಡ ವರ್ಷಗಳು.

ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಬರಗಳು: ೧೯೦೧, ೧೯೦೫-೦೬, ೧೯೧೧-೧೨ ಮತ್ತು ೧೯೪೨-೪೩.

ಈ ಜಿಲ್ಲೆಯು ೧೮೧೮ರಲ್ಲಿ ಬ್ರಿಟಿಷರ ವಶವಾದ ಮೇಲೆ ಜಿಲ್ಲೆಯಲ್ಲಿ ಬರಬೀಳುವುದು ಹೆಚ್ಚಾಯಿತು. ಈ ಪ್ರದೇಶದಲ್ಲಿ ೧೭೯೧ರಲ್ಲಿ ಸಂಭವಿಸಿದ ಬರವನ್ನು ‘ಡೋಗಿ ಬರ’ವೆಂದು, ೧೮೭೬ರಲ್ಲಿ ಆಕ್ರಮಣ ಮಾಡಿದ ಬರವನ್ನು ’ಪಡಿ ಬರ’ವೆಂದು ಮತ್ತು ೧೯೪೨-೪೩ರಲ್ಲಿ ಸಂಭವಿಸಿದ ಬರವನ್ನು ‘ಸಜ್ಜಿ ಬರ’ವೆಂದು ಕರೆಯಲಾಗಿದೆ. ಬರ ಪರಿಹಾರವೆನ್ನುವ ಸರ್ಕಾರಿ ಕಾರ್ಯಕ್ರಮ ಹುಟ್ಟಿಕೊಂಡ್ಡದ್ದೆ ಇಲ್ಲಿ ಎಂದು ಹೇಳಲಾಗಿದೆ. ಇದರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮೌಖಿಕ ಹಾಡು ಹೀಗಿದೆ:

‘ಊರಿಗೆ ದಾರಿ ಬರಗಾಲ ಕಾಮಗಾರಿ
ಸರ್ಕಾರ ತಂದು ಹರಿವಿತೋ
ಬರಗಲಾದ ಬವಣೆಯೆಲ್ಲ ನೀಗಿತೋ (ಎ.ಆರ್. ವಾಸವಿ. ಪು: ೨೫, ೧೯೯೯).

ಬರಗಾಲವೆನ್ನುವುದು ವಿಜಾಪುರ ಜಿಲ್ಲೆಯಲ್ಲಿ ಜನಪದದ ಅವಿಭಾಜ್ಯ ಅಂಗವಾಗಿದೆ. ಈ ಪ್ರದೇಶವನ್ನು ಒಂದು ಕಾಲಕ್ಕೆ ಕರಿನಾಡು (ಫಲವತ್ತಾದ ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರೆ ಈಗ ಅದನ್ನು ‘ಬರಪೀಡಿತ ಪ್ರದೇಶ’ವೆಂದೂ, ‘ಬರಗಾಲ ದೇಶ’ವೆಂದೂ, ‘ಬಡದೇಶ’ವೆಂದೂ ಕರೆಯಲಾಗುತ್ತದೆ.ಅದು ವಿಜಾಪುರ ಜಿಲ್ಲೆಯ ಜನರ ವ್ಯಕ್ತಿಗತ ಮತ್ತು ಸಾಮುದಾಯಿಕ ಚರಿತ್ರೆಗಳ ವಿಶಿಷ್ಟ ಗುರುತಾಗಿದೆ.ಚ ಇದಕ್ಕೆ ಜನರು ಅಲ್ಲಿ ಕಂಡುಕೊಂಡಿರುವ ಪರಿಹಾರವೆಂದರೆ ಗುಳೆ ಹೋಗುವುದು (ಈ ಬಗ್ಗೆ ವಿವರಗಳಿಗೆ ನೋಡಿ : ಎ.ಆರ್. ವಾಸವಿ ೧೯೯೯). ಬರವು ವಿಜಾಪುರದಲ್ಲಿ ಯಾವ ರೀತಿಯ ಸಾಮಾಜಿಕ ಸಾಂಸ್ಕೃತಿಕ ಬದಲಾವಣೆಗಳನ್ನು ತಂದಿದೆ ಎಂಬುದನ್ನು ಎ.ಆರ್. ವಾಸವಿ ಅವರು ತಮ್ಮ ಕೃತಿಯಲ್ಲಿ ಚರ್ಚಿಸಿದ್ದಾರೆ. ಸಾಂಸ್ಕೃತಿಕವಾಗಿ ಅರ್ಥಪೂರ್ಣವಾಗಿದ್ದ ಒಕ್ಕಲುತನವೆನ್ನುವುದು ಈಗ ಕೇವಲ ತಿರಸ್ಕಾರಕ್ಕೆ ಒಳಗಾಗಿರುವ ಸಂಗತಿಯನ್ನು ಅವರು ಅಲ್ಲಿ ವಿವರಿಸಿದ್ದಾರೆ. ಒಂದು ಕಾಲಕ್ಕೆ ಬರ ಬಿದ್ದಾಗ ಜನರು ‘ಮೋಡ’ ಬರುತ್ತಿದೆಯೇ ಹೇಗೆ ಎಂದು ಆಕಾಶಕ್ಕೆ ಮುಖ ಮಾಡುತ್ತಿದ್ದವರು ಇಂದು ಬರಬಿದ್ದಾಗ ಬರ ಪರಿಹಾರ ಕಾಮಗಾರಿಯ ಸರ್ಕಾರಿ ಜೀಪಿನ್ನು ಎದುರು ನೋಡುವುದು ಕಂಡುಬರುತ್ತದೆ.

. ಏಕೀಕರಣೋತ್ತರ ವಿಜಾಪುರ ಜಿಲ್ಲೆ

ಮುಂಬೈ ಪ್ರಾಂತದ ಭಾಗವಾಗಿದ್ದ ವಿಜಾಪುರ ಜಿಲ್ಲೆಯು ೧೯೫೬ರಲ್ಲಿ ಕರ್ನಾಟಕಕ್ಕೆ ವರ್ಗಾವಣೆಯಾಯಿತು. ಆಡಳಿತಾತ್ಮಕವಾಗಿ ಅದನ್ನು ಬೆಳಗಾವಿ ವಿಭಾಗಕ್ಕೆ ಸೇರಿಸಲಾಯಿತು. ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ಏಕೀಕರಣದ ನಂತರ ರಾಜ್ಯದಲ್ಲಿ ವಿಜಾಪುರವು ಅತಿ ದೊಡ್ಡ ಜಿಲ್ಲೆಯಾಗಿತ್ತು. ಇದರ ಬೌಗೋಳಿಕ ವಿಸ್ತೀರ್ಣವೇ ಇದರ ಅಭಿವೃದ್ಧಿಗೆ ಕಂಟಕವಾಗಿದೆ ಎಂಬ ಅಭಿಪ್ರಾಯವಿತ್ತು. ಈ ಜಿಲ್ಲೆಯು ಯಾವುದೇ ದೃಷ್ಟಿಯಿಂದಲೂ ಬೆಳಗಾವಿ ವಿಭಾಗದ ಲಕ್ಷಣಗಳನ್ನು ಹೊಂದಿಲ್ಲ. ಹೀಗೆ ಸಂಬಂಧವಿಲ್ಲ, ಸಮಾನವಾದ ಗುಣಲಕ್ಷಣವಿಲ್ಲದ ವಿಭಾಗಕ್ಕೆ ಜಿಲ್ಲೆಯನ್ನು ಸೇರಿಸಲಾಗಿದೆ ಚಾರಿತ್ರಿಕ ದೃಷ್ಟಿಯಿಂದ ಇದು ಸರಿಯಿರಬಹುದು.ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಇದು ಸರಿಕಾಣುವುದಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನ ಸಂಪರ್ಕವು ಇಂದಿಗೂ ಜಿಲ್ಲೆಗೆ ಕಷ್ಟದ ಸಂಗತಿಯಾಗಿದೆ.

ಈ ಹಿನ್ನೆಲೆಯಲ್ಲಿ ಒಟ್ಟು ಹನ್ನೊಂದು ತಾಲ್ಲೂಕುಗಳನ್ನು ಹೊಂದಿದ್ದ ವಿಜಾಪುರ ಜಿಲ್ಲೆಯನ್ನು ೧೯೯೭ರಲ್ಲಿ ವಿಭಜಿಸಲಾಯಿತು. ಬಸವನಬಾಗೇವಾಡಿ, ವಿಜಾಪುರ, ಇಂಡಿ, ಮುದ್ದೇಬಿಹಾಳ ಮತ್ತು ಸಿಂದಗಿ ತಾಲ್ಲೂಕುಗಳನ್ನು ಸೇರಿಸಿ ವಿಜಾಪರ ಜಿಲ್ಲೆಯನ್ನು ಉಳಿದ ಬಾದಾಮಿ, ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ ಮತ್ತು ಬಾಗಲಕೋಟೆ ತಾಲ್ಲೂಕುಗಳನ್ನು ಸೇರಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ರಚಿಸಲಾಯಿತು. ಅವಿಭಜಿತ ಅವಧಿಯಲ್ಲಿ ಮುಂದುವರಿದ ಜಮಖಂಡಿ, ಬಾಗಲಕೋಟೆ, ಮುಧೋಳ ತಾಲ್ಲೂಕುಗಳು ಜಿಲ್ಲೆಯಲ್ಲಿ ಇದ್ದುದರಿಂದ ಜಿಲ್ಲೆಯ ಸ್ಥಿತಿಗತಿಯು ಹೇಳಿಕೊಳ್ಳುವ ಸ್ಥಿತಿಯಲ್ಲಿತ್ತು. ಆದರೆ ಜಿಲ್ಲೆಯ ವಿಭಜನೆಯ ನಂತರ ಮುಂದುವರಿದ ತಾಲ್ಲೂಕುಗಳೆಲ್ಲ ಬಾಗಲಕೋಟೆ ಜಿಲ್ಲೆಗೆ ಸೇರಿದ್ದರಿಂದ ವಿಜಾಪುರ ಜಿಲ್ಲೆಯ ಅಭಿವೃದ್ದಿ ಸ್ಥಿತಿಯ ನಿಜ ಬಣ್ಣ ಬಯಲಾಯಿತು. ಡಾ.ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಬೆಳಗಾವಿ ವಿಭಾಗದಲ್ಲಿ ಒಟ್ಟು ಐದು ಅತ್ಯಂತ ಹಿಂದುಳಿದ ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ವಿಜಾಪುರ ಜಿಲ್ಲೆಗೆ ಸೇರಿದ್ದರೆ ಒಂದು (ಬೀಳಗಿ) ಬಾಗಲಕೋಟೆ ಜಿಲ್ಲೆಗೆ ಸೇರಿದೆ. ವಿಜಾಪುರ ತಾಲ್ಲೂಕು ಮಾತ್ರ ಹಿಂದುಳಿದ ಗುಂಪಿಗೆ ಸೇರಿದೆ.

ತಾಲ್ಲೂಕುವಾರು ಭೌಗೋಳಿಕ ವಿಸ್ತೀಣ ಮತ್ತು ಜನಸಂಖ್ಯೆ: ೨೦೦೧

ಕೋಷ್ಟಕ .

 

ತಾಲ್ಲೂಕುಗಳು

ಭೌಗೋಳಿಕ ವಿಸ್ತೀರ್ಣ (.ಕಿ.ಮೀ)

ಶೇಕಡ ಪ್ರಮಾಣ

ಜನಸಂಖ್ಯೆ ಪ್ರಮಾಣ

ಶೇಕಡ

ಬಸವನಬಾಗೇವಾಡಿ ೧೯೪೪.೬೧ ೧೮.೫೬ ೩೦೩೨೯೦ ೧೬.೭೮
ವಿಜಾಪುರ ೨೬೩೪.೩೨ ೨೫.೧೪ ೫೬೯೩೪೮ ೩೧.೫೧
ಇಂಡಿ ೨೨೨೧.೪೦ ೨೧.೨೦ ೩೫೩೯೮೭ ೧೯.೫೯
ಮುದ್ದೇಬಿಹಾಳ ೧೫೦೧.೪೧ ೧೪.೩೩ ೨೫೩೬೩೮ ೧೪.೦೪
ಸಿಂದಗಿ ೨೧೭೬.೭೨ ೨೦.೭೭ ೩೨೬೬೫೫ ೧೮.೦೮
ಜಿಲ್ಲೆ ೧೦೪೭೮.೪೬ ೧೦೦.೦೦ ೧೮೦೬೯೧೮ ೧೦೦.೦೦
ರಾಜ್ಯ ೧೯೧೧೭೭೯೧.೦೦ (೫.೪೬) ೫೨೮೫೦೫೬೨ (೩.೪೨)

ಮೂಲ: ಸೆನ್ಸಸ್ ಆಫ್ ಇಂಡಿಯಾ, ೨೦೦೧, ಕರ್ನಾಟಕ ಸೀರೀಸ್೩೦ ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್, ಡೈರೆಕ್ಟೋರೇಟ್ ಆಫ್ ಸೆನ್ಸ್ಸ್ ಆಫರೇಶನ್ಸ್, ಕರ್ನಾಟಕ

ಟಿಪ್ಪಣಿ: ಆವರಣದಲ್ಲಿ ಕೊಟ್ಟಿರುವ ಅಂಕಿಗಳು ಜಿಲ್ಲೆಯು ರಾಜ್ಯಮಟ್ಟದ ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಪಡೆದಿರುವ ಪಾಲನ್ನು ತೋರಿಸುತ್ತದೆ.

ವಿಜಾಪುರ ಜಿಲ್ಲೆಯಲ್ಲಿ ವಿಭಜನೆ ಮಾಡಿದ್ದರಿಂದ ಸಮೃದ್ಧವಾದ ಜಲ ಸಂಪನ್ಮೂಲ, ಖನಿಜ ಸಂಪನ್ಮೂಲ, ನದಿ ಸಂಪನ್ಮೂಲ, ಕೈಗಾರಿಕೆಗಳು ಹೀಗೆ ಎಲ್ಲವೂ ಬಾಗಲಕೋಟೆ ಜಿಲ್ಲೆಗೆ ಸೇರಿ ಬಿಟ್ಟವು. ಈಗ ಉಳಿದಿರುವ ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳು ತೀವ್ರ ದುಸ್ಥಿಯಿಂದ ನರಳುತ್ತಿದೆ. ಅವಿಭಜಿತ ಜಿಲ್ಲೆಯ ಜಿಲ್ಲಾ ಕೇಂದ್ರವೊಂದು ವಿಜಾಪುರ ಜಿಲ್ಲೆಗೆ ಉಳಿದುಕೊಂಡಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಸಂಬಂಧಿ ಅಸಮತೋಲನದ ಬಗ್ಗೆ ಚರ್ಚೆ ಮಾಡುವಾಗ ಅದನ್ನು ಕೇವಲ ಗುಲಬರ್ಗಾ ವಿಭಾಗದ ಜಿಲ್ಲೆಗಳಿಗೆ ಸೀಮತಗೊಳಿಸಿದರೆ ಅದು ತಪ್ಪಾಗುತ್ತದೆ. ಅವುಗಳಷ್ಟೇ ಹಿಂದುಳಿದ ವಿಜಾಪುರ ಜಿಲ್ಲೆಯನ್ನು ಸೇರಿಸಿಕೊಂಡು ನಾವು ಪ್ರಾದೇಶಿಕ ಅಸಮತೋಲನವನ್ನು ಚರ್ಚಿಸಬೇಕಾಗುತ್ತದೆ.ಹಾಗೆ ನೋಡಿದರೆ ರಾಜ್ಯದ ಒಟ್ಟು ಹಿಂದುಳಿದಿರುವಿಕೆಯಲ್ಲಿ ವಿಜಾಪುರದ ಪಾಲು ಶೇ. ೬.೯೧ರಷ್ಟಿದೆ. ಡಾ.ಡಿ.ಎಂ. ನಂಜುಂಡಪ್ಪ ಸಮಿತಿಯು ತೋರಿಸಿರುವಂತೆ ಈ ಜಿಲ್ಲೆಯ ಎಲ್ಲ ಐದು ತಾಲೂಕುಗಳು ಐದು ವಲಯಗಳಲ್ಲೂ ಹಿಂದುಳಿದಿವೆ. ಉದಾಹರಣೆಗೆ ಕೃಷಿಯಲ್ಲಿ ಸೂಚ್ಯಂಕ ಐದು ತಾಲ್ಲೂಕುಗಳಲ್ಲಿ ೦.೮೦ ರಿಂದ ೦.೫೯ರ ನಡುವೆ ಇರುವುದನ್ನು ನೋಡಬಹುದು (ಇಲ್ಲಿ ರಾಜ್ಯದ ಅಭಿವೃದ್ಧಿಯನ್ನು ಒಂದು ಎಂದು ಮಾನದಂಡವನ್ನಾಗಿಸಿಕೊಂಡು ಹಿಂದುಳಿದಿರುವಿಕೆನ್ನು ಮಾಪನ ಮಾಡಲಾಗಿದೆ). ಇದೇ ರೀತಿಯಲ್ಲಿ ಉಳಿದ ವಲಯಗಳ ಸ್ಥಿತಿಗತಿ ಇದೆ. ಆದ್ದರಿಂದ ಈ ಜಿಲ್ಲೆಯ ಅಭಿವೃದ್ಧಿಯು ದೊಡ್ಡ ಪ್ರಮಾಣದ ಪ್ರಯತ್ನವನ್ನು ಬಯಸುತ್ತದೆ. ಪ್ರಸ್ತುತ ಅಧ್ಯಯನದ ಮೂಲ ಉದ್ದೇಶವೆಂದರೆ ಜಿಲ್ಲೆಯ ದುಸ್ಥಿತಿಯ ಅಗಾಧತೆಯನ್ನು ಸಂಬಂಧಿಸಿದವರ ಗಮನಕ್ಕೆ ತರುವುದಾಗಿದೆ. ಇಂದು ಎಲ್ಲರೂ ಅಭಿವೃದ್ಧಿಯನ್ನು ಕುರಿತಂತೆ ರಾಜ್ಯಮಟ್ಟದಲ್ಲಿ ಅಖಂಡತೆಯ ಪರಿಭಾಷೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದರ ಅರ್ಥಹೀನತೆಯು ಸಿದ್ಧವಾಗಿ ಅನೇಕ ದಶಕಗಳೇ ಕಳೆದಿದ್ದರೂ ನಮ್ಮಲ್ಲಿ ಜನರು ಮತ್ತು ತಜ್ಞರು ಅಖಂಡವಾದಿ ನೆಲೆಯಲ್ಲಿ ಯೋಚಿಸುತ್ತಿದ್ದಾರೆ. ಅದು ಬಿಟ್ಟು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಯನ್ನು ನಿರ್ವಹಿಸುವುದು ಹೇಗೆ ಮತ್ತು ಏಕೆ ಎಂಬುದರ ಮಹತ್ವವನ್ನು ಇಲ್ಲಿ ತೋರಿಸಲಾಗಿದೆ.