ಭಾಗ

. ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ

ವಾಸ್ತವವಾಗಿ ವಿಜಾಪುರ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ರಾಜ್ಯದ ಏಕೀಕರಣದ ನಂತರ ಪ್ರಾಪ್ತವಾಯಿತು. ವಸಹಾತುಶಾಹಿ ಕಾಲಘಟ್ಟದಲ್ಲಿ ಶಿಕ್ಷಣ ಇಲ್ಲಿ ತೀವ್ರ ಬೆಳೆಯುವುದು ಸಾಧ್ಯವಿರಲಿಲ್ಲ. ಬಾಂಬೆ ಪ್ರಾಂತದಲ್ಲಿ ಶಿಕ್ಷಣದ ಬೆಳವಣಿಗೆಗಾಗಿ ಬ್ರಿಟಿಷ್ ಸರ್ಕಾರವು ಸಾಕಷ್ಟ ಪ್ರಯತ್ನ ನಡೆಸಿತು.ಈ ಪ್ರಯತ್ನದ ಪರಿಣಾಮವನ್ನು ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ರಾಜ್ಯಕ್ಕೆ ವರ್ಗಾವಣೆಯಾಗಿ ಬಂದ ಬೆಳಗಾವಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಸಾಕ್ಷರತಾ ಮಟ್ಟ,ಶೈಕ್ಷಣಿಕ ವಾತಾವರಣ, ಸಾರಿಗೆ ಸಂಪರ್ಕದ ಅಭಿವೃದ್ದಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ.

ಬಾಂಬೆ ಪ್ರಾಂತದ ಜಿಲ್ಲೆಗಳಲ್ಲಿ ೧೯೬೧ರಲ್ಲಿ ಸಾಕ್ಷರತೆ ಪ್ರಮಾಣ

ಕೋಷ್ಟಕ .

ಜಿಲ್ಲೆಗಳು

ಒಟ್ಟು

ಪುರುಷರು

ಮಹಿಳೆಯರು

ಬೆಳಗಾವಿ ೩೦.೬೭ ೪೪.೫೭ ೧೬.೦೦
ಧಾರವಾಡ ೩೯.೫೫ ೫೬.೧೩ ೨೨.೦೫
ಉತ್ತರ ಕನ್ನಡ ೩೯.೪೬ ೫೦.೯೮ ೨೭.೧೮
ವಿಜಾಪುರ ೨೮.೮೪ ೪೪.೮೯ ೧೨.೪೧

ಮೂಲ : ಕರ್ನಾಟಕ ಸರ್ಕಾರ, ೧೯೯೯, ಕರ್ನಾಟಕ ಮಾನವ ಅಭಿವೃದ್ಧಿ ೧೯೯೯, ಯೋಜನಾ ಇಲಾಖೆ, ಬೆಂಗಳೂರು

ಈ ಜಿಲ್ಲೆಗಳಂತೆ ವಿಜಾಪುರ ಜಿಲ್ಲೆಯು ಬಾಂಬೆ ಪ್ರಾಂತದಿಂದ ವರ್ಗಾವಣೆಯಾಗಿ ಬಂದರೂ ಅಲ್ಲಿ ಶಿಕ್ಷಣದ ಸ್ಥಿತಿಯು ಆಶಾದಾಯಕವಾಗಿರಲಿಲ್ಲ.ಅದು ವಿಜಾಪುರ ಜಿಲ್ಲೆಯ ವಿಶಿಷ್ಟತೆಯಾಗಿತ್ತು. ಅದು ಮೊದಲನೆಯದಾಗಿ ಬರದ ನಾಡಾಗಿತ್ತು. ಅದು ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಯುದ್ಧದ ಬೀಡಾಗಿತ್ತು. ಪ್ಲೇಗಿನಂತಹ ಮಾರಿ ಜನರನ್ನು ಕಾಡುತ್ತಿತ್ತು. ಇದು ಒಣ ಬೇಸಾಯದ ಭೂಮಿ. ಹಿನ್ನೆಲೆಯಲ್ಲಿ ನಾವು ವಿಜಾಪುರ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯನ್ನು ಪರಿಶೀಲಿಸಬೇಕಾಗಿದೆ.

. ಚಾರಿತ್ರಿ ಹಿನ್ನೆಲೆ

ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯು ವಸಾಹತುಶಾಹಿ ಕಾಲಘಟ್ಟದಲ್ಲಿ ಎದುರಿಸಿದ ಸಮಸ್ಯೆಯನ್ನು ವಿಜಾಪುರ ಜಿಲ್ಲಾ ಗ್ಯಾಸೆಟಿಯರ್ (೧೯೯೯) ಹೀಗೆ ವಿವರಿಸಿದೆ.

ವಿಜಯನಗರ ಪತನಾನಂತರ (ಕ್ರಿ.ಶ. ೧೫೬೫) ಜಿಲ್ಲೆಯಲ್ಲಿ ಮರಾಠರ ಪ್ರಬಾವ ಶೈಕ್ಷಣಿಕ ಕ್ಷೇತ್ರದ ಮೇಲೆ ಸಾಕಶ್ಟಾಯಿತು. ಕರ್ನಾಟಕದ ಈ ಭಾಗದಲ್ಲಿ ಕನ್ನಡೇತರರ ಆಡಳಿತದಿಂದಾಗಿ ಮರಾಠಿ ಒಂದು ಪಠ್ಯ ವಿಷಯಕವಾಗಿಯೂ, ಶಿಕ್ಷಣ ಮಾಧ್ಯಮವಾಗಿಯೂ ಜನಪ್ರಿಯವಾಗಲೇಬೇಕಾಯಿತು. ಮರಾಠರ ಆಡಳಿತದಲ್ಲಿದ್ದ ಪ್ರಾಂತಗಳಲ್ಲಿ ಮರಾಠಿಯು ರಾಜ್ಯ ಭಾಷೆಯಾಯಿತು. ಮೊದಲು ಕೊಲ್ಲಾಪುರದ ಕಲೆಕ್ಟರೇಟ್ ಆಡಳಿತದ ಅಡಿಯಲ್ಲಿದ್ದ ವಿಜಾಪುರ ಜಿಲ್ಲೆಯಲ್ಲಿ ಇದು ಸ್ಪಷ್ಟವಾಗಿದ್ದಿತು. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹುದೇ ವ್ಯತ್ಯಾಸಗಳು ಕಂಡುಬಂದವು. ಶಾಂತಿಯುತ ಜೀವನ ಹಾಗೂ ಸಹಬಾಳ್ವೆಗಾಗಿ ಮತ್ತು ಸರ್ಕಾರು ಉದ್ಯೋಗ ಪಡೆಯಲು ಜನರು ತಮ್ಮ ಆಡಳಿತಗಾರರ ಭಾಷೆನ್ನು ಕಲಿಯುವುದು ಅನಿವಾರ್ಯವಾಗಿದ್ದಿತು. ಕನ್ನಡವನ್ನು ಅಧಿಕೃತ ಭಾಷೆಯೆಂದು ಸರ್ಕಾರವು ೧೮೩೬ರಲ್ಲೇ ಘೋಷಿಸಿದ್ದರೂ ಕನ್ನಡ ಭಾಷೆಯ ಸ್ಥಾನಮಾನಗಳು ದಯನೀಯವಾಗಿದ್ದವು. (ಪು. ೮೧೧).

ಮುಂದುವರಿದು ಗ್ಯಾಸೆಟಿಯರ್‌ನಲ್ಲಿ ಭಾಷೆಯ ಸ್ಥಿತಿಯ ಬಗ್ಗೆ ಹೀಗೆ ಬರೆಯಲಾಗಿದೆ.

“ಮುಂಬೈ ಪ್ರಾಂತದ ಮರಾಠಿ ಹಾಗೂ ಗುಜರಾತಿ ಪ್ರಾಬಲ್ಯದ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಶೈಕ್ಷಣಿಕವಾಗಿ ಬಹು ಹಿಂದುಳಿದಿತ್ತು. ಶಿಕ್ಷಣದ ಮಹತ್ವದ ಅರಿವು ಮೂಡಿ ಜನರು ಶಾಲೆಗಳ ಸ್ಥಾಪನೆಗೆ ಒತ್ತಾಯಿಸಿದರೂ ಅವರು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಉಪಯೋಗ ಮನಗಂಡಿರಲಿಲ್ಲ. ಅಧಿಕಾರ ವರ್ಗದಲ್ಲಿಯೂ ಈ ವಿಷಯದಲ್ಲಿ ಆಸಕ್ತಿಯಿರಲಿಲ್ಲ’’ (ಪು. ೮೧೧)

ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಕಾಲಾವಧಿಯಲ್ಲಿ ವಿಜಾಪುರ ಜಿಲ್ಲೆಯ ಜನರಿಗಾಗಲಿ ಅಥವಾ ಸರ್ಕಾರಕ್ಕಾಗಿಲಿ ಶಿಕ್ಷಣವು ಆಧ್ಯತೆಯ ವಿಷಯವಾಗಿರಲಿಲ್ಲ.ಮರಾಠಿ ಭಾಷೆಯ ದಬ್ಬಾಳಿಕೆಗೆ ವಿಜಾಪುರ ಜಿಲ್ಲೆಯ ಒಳಗಾಗಿತ್ತು. ಇಷ್ಟವಿರಲಿ ಇಲ್ಲದಿರಲಿ ಜನರು ಅನಿವಾರ್ಯವಾಗಿ ಮರಾಠಿಯನ್ನು ಕಲಿಯಬೇಕಾಗಿತ್ತು. ಈ ಪ್ರದೇಶದಲ್ಲಿದ್ದ ಸಂಸ್ಥಾನಗಳೆಲ್ಲವೂ ಮರಾಠಿ ಮನೆತನದ ವಶದಲ್ಲಿದ್ದವು. ಅಲ್ಲಿ ಮರಾಠಿಗೆ ಪ್ರೋತ್ಸಾಹ ದೊರೆಯಿತು. ವಿಜಾಪುರಜ ಜಿಲ್ಲೆಯು ಇಂದು ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಅದಕ್ಕೆ ಕಾರಣವಾದ ಚಾರಿತ್ರಿಕ ಹಿನ್ನೆಲೆಯನ್ನು ನಾವು ಅವಶ್ಯ ಪರಿಗಣಿಸಬೇಕಾಗುತ್ತದೆ. ಪ್ರಸ್ತುತ ಅಧ್ಯಾಯದ ಈ ಭಾಗದಲ್ಲಿ ವಿಜಾಪುರ ಜಿಲ್ಲೆಯಲ್ಲಿ ಪ್ರಾಥಮಿಕ (೧-೧೦) ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬದಲಾವಣೆಗಳನ್ನು ಚರ್ಚಿಸಲಾಗಿದೆ.

ಶಾಲೆಗಳ ಸಂಖ್ಯೆ

ವಿಜಾಪುರ ಜಿಲ್ಲಾ ಗ್ಯಾಸೆಟಿಯರ್ ಸರಿಯಾಗಿ ಗುರುತಿಸಿದಂತೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ ವರ್ಣಭೇದ ಲಿಂಗಭೇದಗಳಿಲ್ಲದೆ ಎಲ್ಲರಿಗೂ ಸಮನಾದ ಕ್ರಮಬದ್ಧ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾಯಿತು. ವಸಾಹತುಶಾಹಿ ಕಾಲಘಟ್ಟಕ್ಕೆ ಪೂರ್ವದಲ್ಲೂ ಶಾಲೆಗಳಿದ್ದವು. ಆದರೆ ಅವು ಸಾರ್ವಜನಿಕ ವಿದ್ಯಾಸಂಸ್ಥೆ ಗಳಾಗಿರಲಿಲ್ಲ. ಇವುಗಳಲ್ಲಿ ನಿರ್ದಿಷ್ಟ ಅಭ್ಯಸ ಕ್ರಮ, ನಿಗದಿತ ಪಠ್ಯ ಅಥವಾ ವೇಳಾಪಟ್ಟಿ ಇರಲಿಲ್ಲ. ವಿಜಾಪುರ ಜಿಲ್ಲೆಯಲ್ಲಿ ೧೮೩೩ ರವರೆಗೆ ಸರಕಾರಿ ಶಾಲೆಗಳಾಗಲಿ ಅಥವಾ ಸರ್ಕಾರದಿಂದ ಮನ್ನಣೆ ಪಡೆದ ಶಾಲೆಗಳಾಗಲಿ ಇರಲಿಲ್ಲ. (ವಿಜಾಪುರ ಜಿಲ್ಲಾ ಗ್ಯಾಸೆಟಿಯರ್, ೧೯೯೯, ಪು. ೮೦೨).

ಈ ಜಿಲ್ಲೆಯಲ್ಲಿ ೧೮೬೬ರಲ್ಲಿ ಒಟ್ಟು ೪೬ ಪ್ರಾಥಮಿಕ ಶಾಲೆಗಳಿದ್ದವು. ಇವುಗಳಲ್ಲಿ ೩೪೭೭ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಮುಂದೆ ೧೮೮೩ರ ವೇಳೆಗೆ ಶಾಲೆಗಳ ಸಂಖ್ಯೆ ೧೫೬ ಕ್ಕೇರಿತು.ಇವಲ್ಲದೆ ೨೫ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದವು.

ಕನ್ನಡ ಗಂಡುಮಕ್ಕಳ ಶಾಲೆ ೧೪೧
ಕನ್ನಡ ಹೆಣ್ಣುಮಕ್ಕಳ ಶಾಲೆ ೦೧
ಕನ್ಡನ ಮತ್ತು ಇಂಗ್ಲಿಷ್ ಕಲಿಸುವ ಹೆಣ್ಣುಮಕ್ಕಳ ಶಾಲೆ ೦೧
ಮರಾಠಿ ಶಾಲೆಗಳು ೦೩
ಉದು ಶಾಲೆಗಳು ೦೪
ಆಂಗ್ಲೋ ವರ್ನಾಕ್ಯುಲರ್ ಶಾಲೆಗಳು ೦೬
ಒಟ್ಟು ೧೫೬

ಮೂಲ : ವಿಜಾಪುರ ಜಿಲ್ಲಾ ಗ್ಯಾಸೆಟಿಯರ್, ೧೯೯೯, ಪು. ೮೦೨

ಈ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ ಸಂಖ್ಯೆ ೧೯೦೦ ರಲ್ಲಿ ೨೦೭ ಇದ್ದಿತು.ಈ ಶಾಲೆಗಳ ಸಂಖ್ಯೆ ೧೯೧೦ರ ವೇಳೆಗೆ ೩೪೨ರಷ್ಟಾಯಿತು.

“ಆರು ವರ್ಷ ತುಂಬಿದ ಎಲ್ಲ ಮಕ್ಕಳಿಗೆ ಒಟ್ಟು ಏಳು ವರ್ಷ ಅವಧಿಯ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದ ಮುಂಬೈನ ಪ್ರಾಥಮಿಕ ಶಿಕ್ಷಣ ಕಾಯ್ದೆಯು ಜಿಲ್ಲೆಯಲ್ಲಿ ೧೯೪೭ರಲ್ಲಿ ಜಾರಿಯಾಯಿತು.’’ (ವಿಜಾಪುರ ಜಿಲ್ಲಾ ಗ್ಯಾಸೆಟಿಯರ್ ೧೯೯೯)

ಸ್ವಾತಂತ್ರ್ಯಾ ನಂತರ – ಏಕೀಕರಣದ ನಂತರ ವಿಜಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣವು ಹೇಗೆ ಬೆಳೆಯಿತು ಎಂಬುದನ್ನು ಗ್ಯಾಸೆಟಿಯರ್ ಹೀಗೆ ಗುರುತಿಸಿದೆ.

“ಜಿಲ್ಲೆಯ ಸರಿಸುಮಾರು ಎಲ್ಲ ಹಳ್ಳಿಗಳಲ್ಲಿ ೧೯೫೦-೧೯೭೦ರ ಅವಧಿಯಲ್ಲಿ ಹೊಸ ಕಟ್ಟಡಗಳೊಂದಿಗೆ ಹೊಸ ಪ್ರಾಥಮಿಕ ಶಾಲೆಗಳು ಪ್ರಾರಂಭಗೊಂಡವು’’ (ಪು.೮೦೨).

ಅವಿಭಜಿತ ವಿಜಾಪುರ ಜಿಲ್ಲೆಯಲ್ಲಿ ೧೯೬೫ ರಲ್ಲಿದ್ದಶಾಲೆಗಳ ವಿವರ ಹೀಗಿದೆ:

ಮುನಿಸಿಫಲ್ ಶಾಲೆಗಳು ೫೪
ಜಿಲ್ಲಾ ಬೋರ್ಡ್ ಶಾಲೆಗಳು ೧೮೨೦
ಅನುದಾನಿತ ಶಾಲೆಗಳು (ಮುನಿಸಿಪಾಲಿಟಿ) ೦೪
ಅನುದಾನಿತ ಶಾಲೆಗಳು (ಜಿಲ್ಲಾ ಬೋರ್ಡ್) ೫೪
ಚೌಕಟ್ಟು ೪.೬ ಒಟ್ಟು ೧೯೩೨

ಮೂಲ : ವಿಜಾಪುರ ಜಿಲ್ಲಾ ಗ್ಯಾಸೆಟಿಯರ್, ೧೯೯೯, ಪು. ೮೦೨.

ಈ ಜಿಲ್ಲೆಯಲ್ಲಿ ೧೯೯೮-೯೯ರಲ್ಲಿದ್ದ ಒಟ್ಟು ಪ್ರಾಥಮಿಕ ಶಾಲೆಗಳ ಸಂಖ್ಯೆ ೧೭೧೪. ಅವುಗಳಲ್ಲಿ ಸರ್ಕಾರಿ ಶಾಲೆಗಳ ಪ್ರಮಾಣ ಶೇ. ೮೫.೪೭. ಈ ಶಾಲೆಗಳ ಸಂಖ್ಯೆ ೨೦೦೫-೦೬ರಲ್ಲಿ ೨೧೦೪ ಕ್ಕೇರಿತು. ಇಲ್ಲಿ ಸರ್ಕಾರಿ ಶಾಲೆಗಳ ಪ್ರಮಾಣವು ಶೇ. ೭೯.೯೦ಕ್ಕಿಳಿಯಿತು. ಇತ್ತೀಚಿಗೆ ಖಾಸಗಿ ಶಾಲೆಗಳ ಪ್ರಮಾಣ ಅಧಿಕವಾಗುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಶಾಲೆಗಳ ವಿವರ ೨೦೦೫೦೬ (ತಾಲ್ಲೂಕುವಾರು)

ವಿಜಾಪುರ ಜಿಲ್ಲೆಯಲ್ಲಿ ೨೦೦೫-೦೬ರಲ್ಲಿದ್ದ ಒಟ್ಟು ಪ್ರಾಥಮಿಕ ಶಾಲೆಗಳ ಸಂಖ್ಯೆ ೨೧೦೪. ಇವುಗಳಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ೧೬೮೧. ಖಾಸಗಿ ಶಾಲೆಗಳ ಸಂಖ್ಯೆ ೩೯೭. ಖಾಸಗಿ ಶಾಲೆಗಳ ಸಂಖ್ಯೆ ೧೯೯೮-೯೯ ರಿಂದ ೨೦೦೫-೦೬ರ ಅವಧಿಯಲ್ಲಿ ೨೪೯ ರಿಂದ ೩೯೭ಕ್ಕೇರಿದೆ. ಈ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಏರಿಕೆ ಪ್ರಮಾಣ ಶೇ. ೧೪.೭೪ರಷ್ಟಾದರೆ ಖಾಸಗಿ ಶಾಲೆಗಳ ಏರಿಕೆ ಪ್ರಮಾಣ ಶೇ. ೫೯.೪೪ರಷ್ಟಾಗಿದೆ.

ಅದೇ ರೀತಿ ಪ್ರೌಢಶಾಲೆಗಳಿಗೆ ಬಂದರೆ ೨೦೦೫-೦೬ರಲ್ಲಿ ಜಿಲ್ಲೆಯಲ್ಲಿ ಒಟ್ಟು ೩೩೬ ಪ್ರೌಢಶಾಲೆಗಳಿದ್ದವು. ಅವುಗಳಲ್ಲಿ ಸರ್ಕಾರಿ ಶಾಲೆಗಳು ೧೦೩ ಮತ್ತು ಖಾಸಗಿ ಶಾಲೆಗಳು ೨೨೨. ಸರ್ಕಾರಿ ಶಾಲೆಗಳಿಗಿಂತ ಖಾಸಗ ಶಾಲೆಗಳ ಸಂಖ್ಯೆ ಅಧಿಕವಾಗಿದೆ. ರಾಜ್ಯಮಟ್ಟದಲ್ಲಿ ಖಾಸಗಿ ಪ್ರೌಢಶಾಲೆಗಳ ಪ್ರಮಾಣ ಶೇ. ೬೩.೧೨ ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿಖಾಸಗಿ ಪ್ರೌಢಶಾಲೆಗಳ ಪ್ರಮಾಣ ಶೇ. ೬೬.೦೭.

ಬಹಳ ಕುತೂಹಲದ ಸಂಗತಿಯೆಂದರೆ ಜಿಲ್ಲೆಯ ಒಟ್ಟು ಪ್ರಾಥಮಿಕ ಶಾಲೆಗಳಲ್ಲಿ ಶೇ. ೩೩.೭೯ರಷ್ಟು ವಿಜಾಪುರ ತಾಲ್ಲೂಕಿನಲ್ಲಿ ನೆಲೆಗೊಂಡಿವೆ. ಜಿಲ್ಲೆಯ ಒಟ್ಟು ಪ್ರೌಢಶಾಲೆಗಳಲ್ಲಿ ಶೇ. ೩೬.೬೧ರಷ್ಟು ವಿಜಾಪುರ ತಾಲ್ಲೂಕಿನಲ್ಲಿ ನೆಲೆಸಿವೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ವಿಜಾಪುರ ತಾಲ್ಲೂಕಿನ ಪಾಲು ಕೇವಲ ಶೇ. ೩೧.೫೧. ಆದರೆ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಅದರ ಪಾಲು ಅಧಿಕವಾಗಿದೆ.

ಶಾಲಾ ದಾಖಲಾತಿ ವಿವರ

‘ಕರ್ನಾಟಕ ಮಾನವ ಅಭಿವೃದ್ದಿ ವರದಿ-೨೦೦೫’ರ ಪ್ರಕಾರ ೧೯೯೮-೯೯ರಲ್ಲಿ ವಿಜಾಪುರ ಜಿಲ್ಲೆಯಲ್ಲಿ ೧ ರಿಂದ ೮ನೇ ಯರಗತಿವರೆಗೆ ದಾಖಲಾತಿ ಪ್ರಮಾಣ ಶೇ. ೯೯.೯೨. ಆದರೆ ಇಂದು ೨೦೦೦-೦೧ರಲ್ಲಿ ಶೇ. ೯೨.೨೫ಕ್ಕೆ ಕುಸಿದಿದೆ. ಮುಂದೆ ೨೦೦೩-೦೪ರಲ್ಲಿ ಅದು ಶೇ. ೧೦೨.೬೦ಕ್ಕೇರಿದೆ. ಅದೇ ರೀತಿ ೧ ರಿಂದ ೧೦ನೆಯ ತರಗತಿ ತೆಗೆದುಕೊಂಡರೆ ಶಾಲಾ ದಾಖಲಾತಿ ೧೯೯೮-೯೯ರಲ್ಲಿ ಶೇ. ೯೨.೪೬ ರಷ್ಟಿದ್ದುದು ೨೦೦೦-೦೧ರಲ್ಲಿ ಶೇ. ೮೫.೨೪ ಕ್ಕಿಳಿದಿದೆ. ಇದು ೨೦೦೩-೦೪ರಲ್ಲಿ ಮತ್ತೆ ಶೇ. ೯೨.೬೪ಕ್ಕೇರಿದೆ. ಈ ಬಗೆಯ ವ್ಯತ್ಯಯಗಳು ರಾಜ್ಯಮಟ್ಟದಲ್ಲಿ ಕಂಡುಬರುವುದಿಲ್ಲ. ವಿಜಾಪುರ ಜಿಲ್ಲೆಯಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ತೀವ್ರ ಏರುಪೇರುಗಳು ಉಂಟಾಗುತ್ತಿವೆ. ದಾಖಲಾತಿ ಪ್ರಮಾಣದಲ್ಲಿ ದೃಢತೆಯಿಲ್ಲ. ಇದೊಂದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯಾಗಿದೆ.

ದಾಖಲಾತಿ ೨೦೦೦೦೧

ವಿಜಾಪುರ ಜಿಲ್ಲೆಯಲ್ಲಿ ೨೦೦೦-೦೧ರಲ್ಲಿ ೧ ರಿಂದ ೭ನೆಯ ತರಗತಿವರೆಗೆ ದಾಖಲಾದ ಮಕ್ಕಳ ಸಂಖ್ಯೆ ೩,೬೫,೩೬೬. ಇವರಲ್ಲಿ ಬಾಲಕರ ಪ್ರಮಾಣ ಶೇ. ೫೪.೪೯ ಮತ್ತು ಬಾಲಕಿಯರ ಪ್ರಮಾಣ ಶೇ. ೪೫.೫೧. ಇದೇ ಅವಧಿಯಲ್ಲಿ ೮ ರಿಂದ ೧೦ನೆಯ ತರಗತಿವರೆಗಿನ ದಾಖಲಾತಿ ಸಂಖ್ಯೆ ೬೦೯೯೦. ಇವರಲ್ಲಿ ಬಾಲಕರ ಪ್ರಮಾಣ ಶೇ. ೬೪.೦೬. ಬಾಲಕಿಯ ಪ್ರಮಾಣ ಶೇ. ೩೫.೯೪. ಒಟ್ಟು ೧ ರಿಂದ ೧೦ನೆಯ ತರಗತಿವರೆಗೆ ದಾಖಲಾದ ಮಕ್ಕಳ ಸಂಖ್ಯೆ ೪೨೬೩೦೭. ಇವರಲ್ಲಿ ಬಾಲಕರ ಪ್ರಮಾಣ ಶೇ. ೫೫.೮೫. ಬಾಲಕಿಯರ ಪ್ರಮಾಣ ಶೇ.೪೪.೧೫.

ಜಿಲ್ಲೆಯಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣ ೧ ರಿಂದ ೭ನೆಯ ತರಗತಿವರೆಗೆ ಅಧಿಕವಾಗಿದ್ದು ತದನಂತರ ಅದು ತೀವ್ರ ಕಡಿಮೆಯಾಗಿದೆ. ಈ ಜಿಲ್ಲೆಯಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣ ೧ ರಿಂದ ೭ನೆಯ ತರಗತಿಗಳ ದಾಖಲಾತಿ ತೆಗೆದುಕೊಂಡರೆ ಬಾಲಕಿಯರ ಪ್ರಮಾಣ ಕೇವಲ ಶೇ. ೩೫.೯೪.

ಈ ಜಿಲ್ಲೆಯ ಒಟ್ಟು ದಾಖಲಾತಿಯಲ್ಲಿ ೨೦೦೦-೦೧ ರಲ್ಲಿ ಪ.ಜಾ. ಮಕ್ಕಳ ದಾಖಲಾತಿ ಪ್ರಮಾಣ ಶೇ. ೨೫.೨೪ (೧ ರಿಂದ ೭). ಈದಾಖಲಾತಿ ಪ್ರಮಾಣ ೮-೧೦ನೆಯ ತರಗತಿಯಲ್ಲಿ ಶೇ. ೧೮.೪೩. ಅದೇ ರೀತಿ ೧ ರಿಂದ ೭ನೆಯ ತರಗತಿವರೆಗೆ ಒಟ್ಟು ದಾಖಲಾತಿಯಲ್ಲಿ ಪ.ಪಂ. ಮಕ್ಕಳ ಪ್ರಮಾಣ ಶೇ. ೧.೫೪. ಅದೇ ರೀತಿ ೮ ರಿಂದ ೧೦ನೆಯ ತರಗತಿವರೆಗೆ ಒಟ್ಟು ದಾಖಲಾತಿಯಲ್ಲಿ ಪ.ಪಂ. ಮಕ್ಕಳ ಪ್ರಮಾಣ ಶೇ. ೨.೦೫.

ದಾಖಲಾತಿಗೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿಬೇಕಾದ ಸಂಗತಿಯೆಂದರೆ ಒಟ್ಟು ದಾಖಲಾತಿಯಲ್ಲಿ ೧ ರಿಂದ ೭ನೆಯ ತರಗತಿವರೆಗಿನ ಒಟ್ಟು ದಾಖಲಾತಿ ಪ್ರಮಾಣಕ್ಕಿಂತ ೮-೧೦ನೆಯ ತರಗತಿವರೆಗಿನ ದಾಖಲಾತಿ ಪ್ರಮಾಣ ಯಾಕೆ ಅಷ್ಟೊಂದು ಕಡಿಮೆಯಿರುತ್ತದೆ ಎಂಬುದಾಗಿದೆ. ಒಟ್ಟು ೧ ರಿಂದ ೧೦ನೆಯ ತರಗತಿ ದಾಖಲಾತಿಯಲ್ಲಿ ೧ ರಿಂದ ೭ನೆಯ ತರಗತಿ ದಾಖಲಾತಿ ಪ್ರಮಾಣ ಶಷೇ. ೮೫.೭೦ ಮತ್ತು ೮-೧೦ನೆಯ ತರಗತಿ ದಾಖಲಾತಿ ಪ್ರಮಾಣ ಕೇವಲ ಶೇ. ೧೪.೩೦. ಈ ಎರಡು ಘಟ್ಟಗಳ ನಡುವೆ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣವು ಅಧಿಕವಿದ್ದಂತೆ ಕಾಣುತ್ತದೆ.

ದಾಖಲಾತಿ ೨೦೦೫೦೬

ವಿಜಾಪುರ ಜಿಲ್ಲಯ ಐದು ತಾಲ್ಲೂಕುಗಳಲ್ಲಿ ೧-೭ನೆಯ ತರಗತಿವರೆಗೆ ದಾಖಲಾತಿಯಾದ ಒಟ್ಟು ಮಕ್ಕಳ ಸಂಖ್ಯೆ ೩೭೯೨೭೬. ಇವರಲ್ಲಿ ಬಾಲಕರ ಪ್ರಮಾಣ ಶೇ. ೫೨.೭೫ ಮತ್ತು ಬಾಲಕಿಯರ ಪ್ರಮಾಣವು ದಾಖಲಾತಿಯಲ್ಲಿ ಶೇ. ೪೫.೫೧ ರಿಂದ ಶೇ. ೪೭.೨೫ಕ್ಕೆ ಏರಿಕೆಯಾಗಿದೆ. ಇದೇ ೨೦೦೫-೦೬ರಲ್ಲಿ ೮ ರಿಂದ ೧೦ನೆಯ ತರಗತಿವರೆಗಿನ ದಾಖಲಾತಿ ಸಂಖ್ಯೆ ೭೯೬೯೯. ಇವರಲ್ಲಿ ಬಾಲಕರ ಪ್ರಮಾಣ ಶೇ. ೫೮.೫೪ ಮತ್ತು ಬಾಲಕಿಯರ ಪ್ರಮಾಣ ಶೇ. ೪೧.೪೬. ಹಿಂದಿನ ೨೦೦೦-೦೧ಕ್ಕೆ ಹೋಲಿಸಿದರೆ ೨೦೦೫-೦೬ರಲ್ಲಿ ೮-೧೦ನೆಯ ತರಗತಿಗಳಲ್ಲಿ ಬಾಲಕಿಯರ ಪ್ರಮಾಣವು ಶೇ. ೩೫.೯೪ ರಿಂದ ಶೇ. ೪೧.೪೬ಕ್ಕೆ ಏರಿಕೆಯಾಗಿದೆ.

ಒಟ್ಟು ೧ ರಿಂದ ೧೦ನೆಯ ತರಗತಿ ದಾಖಲಾತಿ ತೆಗೆದುಕೊಂಡರೆ ಮಕ್ಕಳ ಪ್ರಮಾಣ ೨೦೦೦-೦೧ ರಿಂದ ೨೦೦೫-೦೬ರ ಅವಧಿಯಲ್ಲಿ ೪.೨೬ ಲಕ್ಷದಿಂದ ೪.೫೮ ಲಕ್ಷಕ್ಕೆ ಏರಿಕೆಯಾಗಿದೆ. ಇಲ್ಲಿ ಬಾಲಕರ ಪ್ರಮಾಣವು ಶೇ. ೫೫.೮೫ ರಿಂದ ಶೇ. ೫೩.೭೬ ಕ್ಕೆ ಇಳಿದಿದ್ದರೆ ಬಾಲಕಿಯರ ಪ್ರಮಾಣವು ಶೇ. ೪೪.೧೫ ರಿಂದ ಶೇ. ೪೬.೨೪ಕ್ಕೆ ಏರಿಕೆಯಾಗಿದೆ.

ಲಿಂಗ ಸಂಬಂಧಿ ಸಮಾನತೆಯ ದೃಷ್ಟಿಯಿಂದ ಇದೊಂದು ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ.

ಶೈಕ್ಷಣಿಕ ಸಾಧನೆ ಸೂಚ್ಯಂಕ

ಪ್ರಾದೇಶಿಕ ಅಸಮಾನತೆಯ ಅಧ್ಯಯನದ ಉನ್ತಾಧಿಕಾರ ಸಮಿತಿಯು ರಾಜ್ಯದಲ್ಲಿನ ತಾಲ್ಲೂಕುಗಳ ಶೈಕ್ಷಣಿಕ ಸಾಧನೆ ಸೂಚ್ಯಂಕಗಳನ್ನು ಲೆಕ್ಕ ಹಾಕಿದೆ. ಅದರ ಪ್ರಕಾರ ರಾಜ್ಯದ ೧೭೫ ತಾಲ್ಲೂಕುಗಳಲ್ಲಿ ೧೪೩ ಸಾಪೇಕ್ಷವಾಗಿ ಶೈಕ್ಷಣಿಕವಾಗಿ ಮುಂದುವರಿದ ಸ್ಥಿತಿಯಲ್ಲಿದ್ದರೆ ೩೨ ಹಿಂದುಳಿದ ತಾಲ್ಲೂಕುಗಳಾಗಿವೆ. ವಿಜಾಪುರ ಜಿಲ್ಲೆಯ ಮೂರು ತಾಲ್ಲೂಕುಗಳು ಶೈಕ್ಷಣಿಕವಾಗಿ ಸಾಪೇಕ್ಷವಾಗಿ ಮುಂದುವರಿದ ಗುಂಪಿಗೆ ಸೇರುತ್ತದೆ.

ಶೈಕ್ಷಣಿಕ ಸಾಧನೆ ಸೂಚ್ಯಂಕವನ್ನು ಲೆಕ್ಕ ಹಾಕಲು ಉನ್ನತಾಧಿಕಾರ ಸಮಿತಿಯು ನಾಲ್ಕು ಸೂಚಿಗಳನ್ನು ಬಳಸಿದೆ.

೧. ಸಾಕ್ಷರತಾ ಪ್ರಮಾಣ

೨. ಮಕ್ಕಳು – ಶಿಕ್ಷಕರ ಪರಿಮಾಣ

೩. ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳು

೪. ಪದವಿ ಕಾಲೇಜುಗಳಲ್ಲಿ ದಾಖಲಾತಿ.

ಶೈಕ್ಷಣಿಕ ಸಾಧನೆ ಸೂಚ್ಯಂಕ ೨೦೦೧

ಕೋಷ್ಟಕ .

ತಾಲ್ಲೂಕುಗಳು

ಶೈಕ್ಷಣಿಕ ಸಾಧನೆ

ವರ್ಗೀಕರಣ ಸೂಚ್ಯಂಕ

ರಾಜ್ಯದಲ್ಲಿ ಸ್ಥಾನ

ಬ.ಬಾಗೇವಾಡಿ ೦.೯೪ ಹಿಂದುಳಿದ ತಾಲ್ಲೂಕು ೧೫೦
ವಿಜಾಪುರ ೧.೪೪ ಮುಂದುವರಿದ ತಾಲ್ಲೂಕು ೪೭
ಇಂಡಿ ೦.೯೭ ಹಿಂದುಳಿದ ತಾಲ್ಲೂಕು ೧೪೭
ಮುದ್ದೇಬಿಹಾಳ ೧.೩೪ ಮುಂದುವರಿದ ತಾಲ್ಲೂಕು ೫೬
ಸಿಂದಗಿ ೧.೦೪ ಮುಂದುವರಿದ ತಾಲ್ಲೂಕು ೧೩೨

ಮೂಲ : ಕರ್ನಾಟಕ ಸರ್ಕಾರ : ೨೦೦೨, ಎಚ್ಪಿಸಿ ಎಫ್ಆರ್ಆರ್ . ಪು. ೪೩೯ ರಾಜ್ಯದ ೧೭೫ ತಾಲ್ಲೂಕುಗಳ ಪೈಕಿ ವಿಜಾಪುರ ಜಿಲ್ಲೆಯ ತಾಲ್ಲೂಕುಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ತೋರಿಸುತ್ತದೆ.

ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ

ವಿಜಾಪುರ ಜಿಲ್ಲೆಯಲ್ಲಿ ೨೦೦೫ರಲ್ಲಿ ನಡೆಸಿದ ಮಕ್ಕಳ ಸಮೀಕ್ಷೆಯಲ್ಲಿ ೫೨೯೭ ಮಕ್ಕಳು ಶಾಲೆಯನ್ನು ಮಧ್ಯದಲ್ಲಿ ಬಿಡಲು ಅನೇಕ ಕಾರಣಗಳನ್ನು ನೀಡಿದ್ದಾರೆ. ಅವುಗಳಲ್ಲಿ ಶೇ. ೧೫.೯೭ರಷ್ಟು ಮನೆಗೆಲಸವನ್ನು ಕಾರಣವನ್ನಾಗಿ ನಡಿದರೆ ಶೇ. ೧೫.೦೧ರಷ್ಟು ಬಡತನವನ್ನು ಕಾರಣವಾಗಿ ಕೊಟ್ಟಿದ್ದಾರೆ. ವಲಸೆಯನ್ನು ಕಾರಣವನ್ನಾಗಿ ಕೊಟ್ಟಿರುವ ಮಕ್ಕಳ ಪ್ರಮಾಣ ಶೇ. ೧೧.೯೫. ಇವು ಮೂರು ಕಾರಣಗಳು ಒಟ್ಟು ಸೇರಿ ಶೇ. ೪೨.೯೩ರಷ್ಟು ಕಾರಣವಾಗುತ್ತದೆ. (ವಿವರಗಳಿಗೆ ನೋಡಿ : ಸರ್ವಶಿಕ್ಷಾ ಅಭಿಯಾನ – ವಾರ್ಷಿಕ ಕ್ರಿಯಾಯೋಜನೆ, ೨೦೦೬-೦೭)

ಶಿಕ್ಷಣ ಇಲಾಖೆಯ ವಿಶೇಷ ಕಾರ್ಯಕ್ರಮಗಳ ಮೂಲಕ ಶಾಲೆಬಿಟ್ಟ ಮಕ್ಕಳನ್ನು ಶಾಲಾಧಾರೆಗೆಸೇರಿಸಿದ ಸಂಖ್ಯೆ ೧೬೮೫ (೨೦೦೫-೦೬)

ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ೫೨೯೭ ಮಕ್ಕಳ ಸಾಮಾಜಿಕ ಹಿನ್ನೆಲೆ ಹೀಗಿದೆ:

ಒಟ್ಟು ೫೨೯೭ ೧೦೦.೦೦
ಮುಸ್ಲಿಮರು ೬೩೭ ೧೨.೦೩
ಪ.ಜಾ. ೧೭೦೦ ೩೨.೦೯
ಪ.ಪಂ. ೧೩೬ ೨.೫೭
ಇತರೆ ೨೮೨೪ ೫೩.೩೧
  ಚೌಕಟ್ಟು : ೪.೭

ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ವಿಜಾಪುರ.

ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿವೆ. ವಿಜಾಪುರ ಜಿಲ್ಲಾ ಸರ್ವಶಿಕ್ಷಾ ಅಭಿಯಾನದ ೨೦೦೬-೦೭ರ ವಾರ್ಷಿಕ ಕ್ರಿಯಾಯೋಜನೆಯ ವರದಿಯಲ್ಲಿ ಕೊಟ್ಟಿರುವ ಮಾಹಿತಿ ಪ್ರಾಕರ ೧ ರಿದ ೮ನೆಯ ತರಗತಿವರೆಗೆ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳ ಪ್ರಮಾಣ ಶೇ. ೭೯೬. ಆದರೆ ಸರ್ವಶಿಕ್ಷಾ ಅಭಿಯಾನ ಕರ್ನಾಟಕ ರಾಜ್ಯ ಮಟ್ಟದ ಮಾಹಿತಿ ಪ್ರಕಾರ ೨೦೦೪-೦೫ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ. ೨೫.೮೧.

ಒಂದರಿಂದ ಐದನೆಯ. ತರಗತಿವರೆಗೆ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಪ್ರಮಾಣ ೨೦೦೪-೦೫ರಲ್ಲಿ ಶೇ. ೧೦.೩೧. ಆದರೆ ರಾಜ್ಯ ಯೋಜನಾ ಸಂಸ್ಥೆ ಪ್ರಕಟಿಸಿರುವ ಮಾಹಿತಿಕೋಶದ ಪ್ರಕಾರ ೨೦೦೪-೦೫ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ. ೧೭.೩೪. ಕೇವಲ ಎರಡು ವರ್ಷಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣವು ಇಷ್ಟೊಂದು ತೀವ್ರಗತಿಯಲ್ಲಿ ಕಡಿಮೆಯಾಗುವುದು ಶಕ್ಯವಿಲ್ಲ. ಒಂದರಿಂದ ಎಂಟನೆಯ ತರಗತಿಗೆ ಸಂಬಂಧಿಸಿದಂತೆ ಇದು ಶೇ. ೬೯.೧೫ ರಷ್ಟು ಮತ್ತು ೧ ರಿಂದ ೫ನೆಯ ತರಗತಿ ಸಂಬಂಧಿಸಿದಂತೆ ಶೇ. ೪೦.೫೪ ಇಳಿದಿದೆ ಎಂಬುದನ್ನು ಜಿಲ್ಲೆಯ ಇತರೆ ಶೈಕ್ಷಣಿಕೆ ಸಾಧನೆ ಹಿನ್ನೆಲೆಯಲ್ಲಿ ನಂಬುವುದು ಅಸಾಧ್ಯ.

ಮಕ್ಕಳು ಶಿಕ್ಷಕರ ಅನುಪಾತ

ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಬಹುಮುಖ್ಯ ಸಂಗತಿಯೆಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅನುಪಾತ. ಎಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ಪಾಠ ಬೋಧಿಸಬೇಕು ಎಂಬುದೇ ವಿದ್ಯಾರ್ಥಿ ಶಿಕ್ಷಕ ಅನುಪಾತ. ಇತ್ತೀಚಿಗೆ ಶಿಕ್ಷಕರ ನೇಮಕಾತಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಸದರಿ ಅನುಪಾತವು ನಿರೀಕ್ಷಿಸಿದ ಮಟ್ಟದಲ್ಲಿದೆ.

ವಿಜಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣದ ೧ ರಿಂದ ೭ನೆಯ ತರಗತಿವರೆಗಿನ ಮಕ್ಕಳ ದಾಖಲಾತಿ ೨೦೦೫-೦೬ರಲ್ಲಿ ೩,೬೨,೬೧೦. ಅಲ್ಲಿದ್ದ ಶಿಕ್ಷಕರ ಸಂಖ್ಯೆ ೯೬೩೦. ಆಅಂದರೆ ವಿಜಾಪುರ ಜಿಲ್ಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕರು ಕನಿಷ್ಠ ೩೮ ವಿದ್ಯಾರ್ಥಿಗಳಿಗೆ ಕಲಿಸಬೇಕಾಗುತ್ತದೆ. ಈ ಅನುಪಾತವು ರಾಜ್ಯಮಟ್ಟದಲ್ಲಿ ೩೨. ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಸದರಿ ಅನುಪಾತವು ೪೨ರಷ್ಟಿದೆ. ಅಂದ ಮೇಲೆ ವಿಜಾಪುರ ಜಿಲ್ಲೆಯಲ್ಲಿ ಅನುಪಾತವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಅಧಿಕವಾಗಿದೆ.

ವಿಜಾಪುರ ಜಿಲ್ಲೆಯು ಹಿಂದುಳಿದ ಸ್ಥಿತಿಯಲ್ಲಿದೆ. ಸಾಕ್ಷರತೆ ಮತ್ತು ಶಿಕ್ಷಣದ ದೃಷ್ಟಿಯಿಂದ ಅದು ತೀವ್ರ ದುಸ್ಥಿತಿ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ತೀವ್ರ ಗಮನಹರಿಸಬೇಕಾಗುತ್ತದೆ. ಈ ದಿಶೆಯಲ್ಲಿ ವಿದ್ಯಾರ್ಥಿ ಶಿಕ್ಷಕ ಅನುಪಾತವನ್ನು ಜಿಲ್ಲೆಯಲ್ಲಿ ಕಡಿಮೆ ಮಾಡಲು ಪ್ರಯತ್ನಿಸುವ ಅಗತ್ಯವಿದೆ. ಇಂದು ಪ್ರಾಥಮಿಕ ಶಿಕ್ಷಣವು ಹೆಚ್ಚು ಸಂಕೀರ್ಣವಾಗುತ್ತಿದೆ. ವಿಜ್ಞಾನ ಹಾಗೂ ಸಮಾಜವಿಜ್ಞಾನ ಪಾಠಗಳ ಬೋಧನೆಯಲ್ಲಿ ಉಪಕರಣಗಳನ್ನು ಬಳಸಬೇಕಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೆ ಬೋಧನೆ ಉತ್ತಮವಾಗಿರುವ ಸಾಧ್ಯತೆಯಿದೆ.

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ

ಶಿಕ್ಷಣದ ಸಾರ್ವತ್ರೀಕರಣವನ್ನು ಮಾಪನ ಮಾಡಲು ಇಲ್ಲಿ ‘ಶೈಕ್ಷಿಕ ಪರಿವರ್ತನಾ ಸೂಚ್ಯಂಕ’ವೆಂಬ ಸೂತ್ರವನ್ನು ಇಲ್ಲಿ ಬಳಸಲಾಗಿದೆ. ಈ ಸೂಚ್ಯಂಕವು ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ಸಾಗುವ ಮಕ್ಕಳ ಪ್ರಮಾಣವನ್ನು ತೋರಿಸುತ್ತದೆ. ಈ ಪರಿವರ್ತನೆಯ ಹಂತದಲ್ಲಿ ಅಪಾರ ವಿದ್ಯಾರ್ಥಿಗಳು ಶಾಲಾವಾಹಿನಿಯಿಂದ ಹೊರ ಹೋಗುವುದು ಕಂಡುಬರುತ್ತದೆ. ವಿಜಾಪುರ ಜಿಲ್ಲೆ ಮತ್ತು ಅದರ ಐದು ತಾಲ್ಲೂಕುಗಳಲ್ಲಿ ೨೦೦೪-೦೬ರಲ್ಲಿ ಎಂಟನೆಯ ತರಗತಿಗೆ ಸಾಗಿ ಬಂದಿದ್ದಾರೆ ಎಂಬುದನ್ನು ತೋರಿಸಿದೆ. ಇದಕ್ಕೆ ಸಂಬಂಧಿಸಿದ ಶ್‌ಷಣಿಕ ಪರಿವರ್ತನಾ ಸೂಚ್ಯಂಕಗಳನ್ನು ಲೆಕ್ಕ ಹಾಕಿ ತೋರಿಸಲಾಗಿದೆ.

ವಿಜಾಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ೨೦೦೫-೦೬ರಲ್ಲಿ ೦.೮೩೦. ಆದರೆ ಇದು ರಾಜ್ಯಮಟ್ಟದಲ್ಲಿ ೦.೮೨೯. ಎರಡೂ ಮೌಲ್ಯಗಳು ಸರಿಸುಮಾರು ಸಮವಾಗಿದೆ. ವಿಜಾಪುರ ಜಿಲ್ಲೆಯಲ್ಲಿ ೨೦೦೪-೦೫ ರಿಂದ ೨೦೦೫-೦೬ರಲ್ಲಿ ಪರಿವರ್ತನಾದ ಹಾನಿ ೬೫೪೫ ವಿದ್ಯಾರ್ಥಿಗಳು. ಇದು ಶೇ. ೧೭.೧೪ರಷ್ಟಾಗುತ್ತದೆ. ನಾವು ಗಮನಿಸಬೇಕಾದ ಸಂಗತಿಯೆಂದರೆ ಬಾಲಕಿಯರ ಪರಿವರ್ತನಾ ಸೂಚ್ಯಂಕವು ಬಾಲಕರ ಸೂಚ್ಯಂಕಕ್ಕಿಂತ ಬಳಷ್ಟು ಕಡಿಮೆಯಿದೆ.

ವಿಜಾಪುರ ಜಿಲ್ಲೆಯಲ್ಲಿ ೨೦೦೫-೦೬ರಲ್ಲಿ ೬೫೪೫ ವಿದ್ಯಾರ್ಥಿಗಳ ಶಿಕ್ಷಣವು ಏಳು ವರ್ಷಗಳಿಗೆ ಮೊಟಕಾಗಿ ಹೋಗಿದೆ. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ೩೫೪೭ ಮತ್ತು ಬಾಲಕರ ಸಂಖ್ಯೆ ೨೯೯೮. ಪ್ರತಿ ವಿದ್ಯಾರ್ಥಿಗೂ ಹತ್ತು ವರ್ಷಗಳ ಶಾಲಾ ಶಿಕ್ಷಣದ ಸೌಲಭ್ಯ ದೊರೆಯುವಂತೆ ಮಾಡಬೇಕು. ರಾಜ್ಯಮಟ್ಟದಲ್ಲಿ ಶಾಲಾವಾಹಿನಿಂದ ಹೊರಹೋಗುವ ವಿದ್ಯಾರ್ಥಿಗಳ ಪ್ರಮಾಣ ೨೦೦೫-೦೬ ರಲ್ಲಿ ೧.೭೪ ಲಕ್ಷದಷ್ಟಿದೆ. ಈ ಸಮಸ್ಯೆಯ ಕಡೆಗೆ ಸರ್ಕಾರವು ಗಮನ ನೀಡುವ ಅಗತ್ಯವಿದೆ. ಶಿಕ್ಷಣದ ಸಾರ್ವತ್ರೀಕರಣಕ್ಕೆ ಹತ್ತು ವರ್ಷಗಳು ಶಿಕ್ಷಣದ ಅವಧಿ ಅಗತ್ಯವಾಗಿದೆ.

ತಾಲ್ಲೂಕು ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ; ೨೦೦೪೦೫ ಮತ್ತು ೨೦೦೫೦೬

ಕೋಷ್ಟಕ.

ತಾಲ್ಲೂಕು

೭ನೆಯ ತರಗತಿ ದಾಖಲಾತಿ
೨೦೦೪-೦೫

೮ನೆಯ ತರಗತಿ ದಾಖಲಾತಿ
೨೦೦೫-೦೬

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ
೨೦೦೫-೦೬

ಬಾಲಕ

ಬಾಲಕಿ

ಒಟ್ಟು

ಬಾಲಕ

ಬಾಲಕಿ

ಒಟ್ಟು

ಬಾಲಕ

ಬಾಲಕಿ

ಒಟ್ಟು

ಬ.ಬಾಗೇವಾಡಿ

೩೫೫೩

೨೭೯೭

೬೩೫೦

೨೭೪೯

೨೨೫೮

೫೦೦೭

೦.೭೭೩

೦.೮೦೭

೦.೭೮೯

ವಿಜಾಪುರ

೬೫೦೮

೫೬೭೫

೧೨೧೮೩

೫೯೭೭

೪೭೩೯

೧೦೭೧೬

೦.೯೧೮

೦.೮೩೫

೦.೮೮೦

ಇಂಡಿ

೪೦೭೮

೩೨೫೨

೭೩೩೦

೩೫೨೭

೨೩೬೬

೫೮೯೩

೦.೮೬೫

೦.೭೨೮

೦.೮೦೪

ಮುದ್ದೇಬಿಹಾಳ

೩೨೬೧

೨೬೯೯

೫೯೬೦

೨೭೮೦

೨೨೪೨

೫೦೨೨

೦.೮೫೨

೦.೮೩೧

೦.೮೪೩

ಸಿಂದಗಿ

೩೮೨೪

೨೯೨೧

೬೭೫೫

೩೨೦೨

೨೧೯೨

೫೩೯೪

೦.೮೩೭

೦.೭೫೦

೦.೭೯೯

ಜಿಲ್ಲೆ

೨೧೨೩೪

೧೭೩೪೪

೩೮೫೭೮

೧೮೨೩೬

೧೩೭೯೭

೩೨೦೩೩

೦.೮೫೯

೦.೭೯೫

೦.೮೩೦

ಕರ್ನಾಟಕ

೫೩೦೫೬೫

೪೮೪೪೯೫

೧೦೧೧೫೦೧

೪೪೭೧೦೬

೩೯೩೯೫೫

೮೪೧೦೬೧

೦.೮೪೩

೦.೮೧೩

೦.೮೨೯

ಮೂಲ: ಕರ್ನಾಟಕ ಸರ್ಕಾರ: ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
ಕರ್ನಾಟಕ ಸರ್ಕಾರ: ೨೦೦೬, ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕದ ಪ್ರವೃತ್ತಿ

ಕೋಷ್ಟಕ ೪.೧೦ರಲ್ಲಿ ೨೦೦೪-೦೫ ಹಾಗೂ ೨೦೦೫-೦೬ ಮತ್ತು ೨೦೦೫-೦೬ ಹಾಗೂ ೨೦೦೬-೦೭ನೆಯ ಸಾಲುಗಳಿಗೆ ಸಂಬಂಧಿಸಿದ ವಿಜಾಪುರ ಜಿಲ್ಲಾ ಮಟ್ಟದ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕಗಳನ್ನು ಗಣನೆ ಮಾಡಿ ತೋರಿಸಲಾಗಿದೆ.

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕದ ಪ್ರವೃತ್ತಿ : ವಿಜಾಪುರ ಜಿಲ್ಲೆ

ಕೋಷ್ಠಕ.

ವಿವರ

೭ನೆಯ ತರಗತಿಯಲ್ಲಿ ದಾಖಲಾತಿ

೮ನೆಯ ತರಗತಿಯಲ್ಲಿ ದಾಖಲಾತಿ

ಶೈಕ್ಷಿಕ ಪರಿವರ್ತನಾ ಸೂಚ್ಯಂಕ

೨೦೦೪-೦೫

೨೦೦೫-೦೬

೨೦೦೫-೦೬

೨೦೦೬-೦೭

೨೦೦೫-೦೬

೨೦೦೬-೦೭

ವಿಜಾಪುರ ಜಿಲ್ಲೆ ೩೮೫೭೮ ೪೦೯೩೩ ೩೩೩೫೧ ೦.೮೩೦ ೦.೮೧೫  
ಕರ್ನಾಟಕ ರಾಜ್ಯ ೧೦೧೫೦೬೦ ೯೯೫೮೩೦ ೮೪೧೦೬೧ ೮೯೫೨೦೪ ೦.೮೨೯ ೦.೮೯೯

ಮೂಲ: ಕರ್ನಾಟಕ ಸರ್ಕಾರ೨೦೦೭, ಶೈಕ್ಷಣಿಕ ಮಾಹಿತಿ ೨೦೦೬೦೭, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಬೆಂಗಳೂರು

ಅತ್ಯಂತ ಆತಂಕಕಾರಿಯಾದ ಸಂಗತಿಯೆಂದರೆ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕವು ಏರಿಕೆಯಾಗುತ್ತಿದ್ದರೆ (೨೦೦೫-೦೬ ರ ೦.೮೦೯ ರಿಂದ ೨೦೦೬-೦೭ರ ೦.೮೯೯) ವಿಜಾಪುರ ಜಿಲ್ಲೆಯಲ್ಲಿ ಅದು ೦.೮೩೦ ಯಿಂದ ೦.೮೧೫ಕ್ಕೆ ಇಳಿದಿದೆ. ಈ ಜಿಲ್ಲೆಯಲ್ಲಿ ೨೦೦೫-೦೬ರಲ್ಲಿ ಶಾಲಾವಾಹಿನಿಯಿಂದ ಹೊರಹೋದ ಮಕ್ಕಳ ಸಂಖ್ಯೆ ೬೫೪೫. ಆದರೆ ೨೦೦೬-೦೭ರಲ್ಲಿ ಶಾಲೆಯಿಂದ ಹೊರಹೋದ ಮಕ್ಕಳ ಸಂಖ್ಯೆ ೭೫೮೨. ಜಿಲ್ಲಾ ಮಟ್ಟದಲ್ಲಿ ಕಂಡುಬರುತ್ತಿರುವ ಇಳಿಮುಖ ಪ್ರವೃತ್ತಿಯನ್ನು ತಡೆಯುವ ಅಗತ್ಯವಿದೆ.