ಈ ಕೃತಿಯು ನನ್ನ ಸಬಾಟಿಕಲ್ ರಜೆಯ ಅಧ್ಯಯನ ಯೋಜನೆಯಾಗಿದೆ. ಈ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಯನ್ನು ೨೦೦೮-೦೯ರಲ್ಲಿ ಕಲೆಹಾಕಲಾಗಿತ್ತು. ಆದರೆ ಅದನ್ನು ಪ್ರಬಂಧರೂಪಕ್ಕೆ ತರುವುದು ಸಾಧ್ಯವಾಗಿರಲಿಲ್ಲ. ಈಗ ೨೦೧೦ರ ಬೇಸಿಗೆ ರಜೆಯಲ್ಲಿ ಅದರ ರಚನೆಯನ್ನು ಮುಗಿಸಿದ್ದೇನೆ. ಈ ಯೋಜನೆಗೆ ಅಗತ್ಯವಾದ ಮಾಹಿತಿಯನ್ನು ನಾನು ‘ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ’ಯನ್ನು ರಾಜ್ಯ ಸರ್ಕಾರದ ಯೋಜನಾ ಇಲಾಖೆಗಾಗಿ ಸಿದ್ಧಪಡಿಸುವಾಗ ಸಂಗ್ರಹಿಸಿದ್ದೇನೆ. ಈ ಕೃತಿಯನ್ನು ರಚಿಸಲು ನನಗೆ ಕೆಲವು ನಿರ್ದಿಷ್ಟವಾದ ಕಾರಣಗಳಿದ್ದವು. ಮೊದಲನೆಯದಾಗಿ ಕರ್ನಾಟಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆಯನ್ನು ಚರ್ಚಿಸುವಾಗ ಸಾಮಾನ್ಯವಾಗಿ ಅದನ್ನು ಗುಲಬರ್ಗಾ ವಿಭಾಗದ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯು ಇಂತಹ ನಂಬಿಕೆಯನ್ನು ಹುಸುಗೊಳಿಸಿದ್ದರೂ ಚರ್ಚೆ ಮಾತ್ರ ಗುಲಬರ್ಗಾ ವಿಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದೆ. ಈ ಬಗ್ಗೆ ಜನರ, ಸರ್ಕಾರದ ಮತ್ತು ವಿದ್ವಾಂಸರ ಗಮನ ಸೆಳೆಯುವುದು ಈ ಕೃತಿಯ ರಚನೆಯ ಹಿಂದೆ ಕೆಲಸ ಮಾಡಿರುವ ಒಂದು ಸಂಗತಿಯಾಗಿದೆ. ಎರಡನೆಯದಾಗಿ ನಾವು ತಿಳಿದುಕೊಂಡಿರುವುದಕ್ಕಿಂತ ವಿಜಾಪುರ ಜಿಲ್ಲೆಯ ಅಭಿವೃದ್ಧಿ ಸಮಸ್ಯೆಯು ಜಟಿಲವಾದುದಾಗಿದೆ. ಅದು ವರಮಾನದ ವರ್ಧನೆಯ ದೃಷ್ಟಿಯಿಂದಲೂ ಹಿಂದುಳಿದಿದೆ. ಅದು ಮಾನವ ಅಭಿವೃದ್ಧಿ ದೃಷ್ಟಿಯಿಂದಲೂ ಹಿಂದುಳಿದಿದೆ. ಸಾಕ್ಷರತೆಗೆ ಸಂಬಂಧಿಸಿದಂತೆ ಅದು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸ್ಥಿತಿಯಲ್ಲಿ ಜಿಲ್ಲೆಯ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಜಿಲ್ಲಾ ಪಂಚಾಯಿತಿಗೆ ಅಥವಾ ಜಿಲ್ಲಾ ಆಡಳಿತಕ್ಕೆ ವಹಿಸಿಕೊಡುವುದು ಮುತ್ಸದ್ಧಿ ತೀರ್ಮಾನದಂತೆ ಕಾಣುವುದಿಲ್ಲ. ಆದ್ದರಿಂದ ಇಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮಧ್ಯ ಪ್ರವೇಶಿಸಬೇಕಾಗುತ್ತದೆ. ಈ ಸಂಗತಿಯ ಕಡೆಗೆ ರಾಜಕಾರಣಗಳ ಗಮನ ಸೆಳೆಯುವುದು ನನ್ನ ಅಧ್ಯಯನದ ಮತ್ತೊಂದು ಉದ್ದೇಶವಾಗಿದೆ.

ಈ ಕೃತಿಯಲ್ಲಿ ಎತ್ತಿರುವ ಪ್ರಶ್ನೆಗಳು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಯೊಂದನ್ನು ಹುಟ್ಟು ಹಾಕುತ್ತದೆ ಎಂದು ಭಾವಿಸಲಾಗಿದೆ. ಇದು ಜನಪ್ರತಿನಿಧಿಗಳ ಗಮನಕ್ಕೆ ಬರುತ್ತದೆಯೆಂದು ತಿಳಿಯಲಾಗಿದೆ. ಈ ಜಿಲ್ಲೆಯಲ್ಲಿ ಉದ್ಯೋಗ ಅರಸಿಕೊಂಡು ಬೇರೆ ರಾಜ್ಯಗಳಿಗೆ ಮತ್ತು ರಾಜ್ಯದ ಮುಂದುವರಿದ ಜಿಲ್ಲೆಗಳಿಗೆ ಗುಳೆ (ವಲಸೆ) ಹೋಗುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಇದರ ಪರಿಣಾಮ ಅಭಿವೃದ್ಧಿಯ ಮೇಲೆ ವಿನಾಶಕಾರಿಯಾದುದಾಗಿದೆ. ಇದನ್ನು ಎದುರಿಸಲು ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಕ್ರಮ ಜರುಗಿಲ್ಲ. ಅದನ್ನು ಒಂದು ಸಮಸ್ಯೆಯೆಂದು ಗುರುತಿಸುವ ಕೆಲಸ ನಡೆದಿಲ್ಲ.

ಈ ಕೃತಿಯನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ, ಮಾನ್ಯ ಕುಲಪತಿ ಡಾ. ಎ. ಮುರಿಗೆಪ್ಪ ಅವರಿಗೆ, ಮಾನ್ಯ ಕುಲಸಚಿವರು ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಅಧಿಕಾರಿಗಳಿಗೆ, ವಿಜಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶ್ರೀ ಆರ್. ಆರ್. ಪವಾರ್ ಅವರಿಗೆ, ಸಬಾಟಿಕಲ್ ರಜೆಯಾದರೂ ವಿಶ್ವವಿದ್ಯಾಲಯದ ಕೆಲಸಗಳನ್ನು ಮಾಡಲು ಮತ್ತು ಯೋಜನೆಯ ಕೆಲಸಗಳನ್ನು ಮಾಡಲು ಅನುವು ಮಾಡಿಕೊಟ್ಟ ಮಡದಿ ದಾಕ್ಷಾಯಿಣಿಗೆ. ಮಗಳು ಶೋಭಿತಾಳಿಗೆ ನನ್ನ ನಮನಗಳು ಸಲ್ಲಬೇಕು. ಗೆಳೆಯರಾದ ಡಾ. ಎಂ. ವೆಂಕಟೇಶ್, ಶ್ರೀ ಜನಾರ್ದನ್, ಶ್ರೀ ವೀರೇಶ್, ಡಾ. ಜೆ. ಕೃಷ್ಣ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಪಟ್ಟಿ ಎಲ್ಲಾದರೂ ಒಂದು ಕಡೆ ನಿಲ್ಲಬೇಕು ತಾನೆ! ಅದಕ್ಕಾಗಿ ನಿಲ್ಲಿಸುತ್ತೇನೆ. ಈ ಕೃತಿಯನ್ನು ಅಂದವಾಗಿ ವಿನ್ಯಾಸ ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಅಕ್ಷರ ಜೋಡಣೆ ಮಾಡಿದ ಶ್ರೀಮತಿ ನಾಗವೇಣಿ ಅವರಿಗೆ ಮತ್ತು ಪುಟವಿನ್ಯಾಸ ಮಾಡಿದ ಶ್ರೀ ಜೆ ಶಿವಕುಮಾರ ಅವರಿಗೆ ನಾನು ವಂದಿಸುತ್ತೇನೆ.

ಟಿ.ಆರ್. ಚಂದ್ರಶೇಖರ್