ಪ್ಲಾಸ್ಟಿಕ್ ಕಟ್ಟಕಲ್ಲು ಮತ್ತು ಮಣ್ಣಿನಿಂದ ತೋಡು ಯಾ ಹೊಳೆಗಳಿಗೆ ಅಡ್ಡ ಕಟ್ಟಗಳನ್ನು ಕಟ್ಟಿ ನೀರು ಶೇಖರಿಸುವುದು ಪಾರಂಪರಿಕ ಕ್ರಮ. ಕಲ್ಲಿನ ಬದಲು ಮರಳಿನ ಚೀಲ ಮತ್ತು ಮಣ್ಣಿನ ಬದಲು ಪ್ಲಾಸ್ಟಿಕ್ ಹಾಳೆಯನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಕಟ್ಟವನ್ನು ನಿರ್ಮಿಸಿದ ಕೀರ್ತಿ ಮೂರ್ತಿಯವರದು. ಸಮೀಪದ ಸೀರೆಹೊಳೆಗೆ ೧೧೫ ಅಡಿ ಉದ್ದ ಮತ್ತು ೧೦ ಅಡಿ ಎತ್ತರದ ಕಟ್ಟವನ್ನು ಕಟ್ಟಿ ಒಂದೂವರೆ ಕಿಲೋಮೀಟರ್ ನೀರು ನಿಲ್ಲಿಸಿರುವುದು ೨೦೦೩ರ ಒಂದು ದೊಡ್ಡ ಸುದ್ದಿ೨೦೦೫ರ ಬೇಸಿಗೆಯಲ್ಲಿ ಕಟ್ಟ ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರುಕಟ್ಟದ ತಳಪಾಯಕ್ಕೆ ಸ್ಥಳದಲ್ಲೇ ಲಭ್ಯವಾದ ಕಲ್ಲು ಮತ್ತು ಚರಳು (ಹುಡಿಕಲ್ಲು) ಇರುವ ಮರಳನ್ನು ಉಪಯೋಗಿಸಿ ಆರು ಅಡಿ ಅಗಲದ ಕಾಂಕ್ರಿಟ್ ಅಡಿಪಾಯ ನಿರ್ಮಿಸಿದರು. ತಳಪಾಯದ ಮೇಲೆ ಪ್ಲಾಸ್ಟಿಕ್ ಶೀಟ್ ಮತ್ತು ಮರಳ ಚೀಲದ ಕಟ್ಟ ಕಟ್ಟುವ ಯೋಚನೆ. ಇದರಿಂದಾಗಿ ತಳದ ನೀರು ಸೋಸಿ ಹೋಗುವುದು ಕಡಿಮೆಯಾಗುತ್ತದೆ. ೫೦೦೦ ಘನ ಅಡಿ ತಳಪಾಯಕ್ಕೆ ಖರ್ಚು ರೂ.೭೫,೦೦೦. ಇದರ ಮೇಲೆ ನಿರ್ಮಿಸುವ ವಾರ್ಷಿಕ ಪ್ಲಾಸ್ಟಿಕ್ ಕಟ್ಟಕ್ಕೆ ರೂ.೨೦,೦೦೦. ಖರ್ಚು. ಇದರ ಬದಲು ಕಿಂಡಿ ಅಣೆಕಟ್ಟು ಮಾಡಿದರೆ ರೂ.೨೦ ಲಕ್ಷ ಬೇಕೇ ಬೇಕು!

ಬಂಟ್ವಾಳ ತಾಲೂಕಿನ ‘ಅಡ್ಯನಡ್ಕ’ವು ಕೃಷಿಕರು ಮರೆಯದ ಊರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯ. ಅಡ್ಯನಡ್ಕವು ಕರ್ನಾಟಕ-ಕೇರಳ ಗಡಿಭಾಗದಲ್ಲಿದೆ. ಕ್ಯಾಂಪ್ಕೋ ಪಿತಾಮಹ, ಪ್ರತಿಷ್ಠಿತ ರಾಷ್ಟ್ರೀಯ ‘ಸಹಕಾರಿತ ರತ್ನ’ ಪ್ರಶಸ್ತಿ ಪುರಸ್ಕೃತ ಶ್ರೀ ವಾರಣಾಶಿ ಸುಬ್ರಾಯ ಭಟ್ಟರ ಊರಿದು.  ಐವತ್ತು ಎಕರೆ ವಿಸ್ತಾರವಿರುವ ಇವರ ‘ವಾರಣಾಶಿ ಫಾರ್ಮ್ಸ್’ನ ಕೃಷಿ ಭೂಮಿಯ ಕಣಕಣವೂ ಈಗ ಸಾವಯವ. ಇಲ್ಲಿ ಅಡಿಕೆ, ಕೊಕ್ಕೋ, ತೆಂಗು, ಬಾಳೆ, ವೆನಿಲ್ಲಾ, ಕಾಳುಮೆಣಸು, ಗೇರು, ಭತ್ತ, ತರಕಾರಿಗಳು ವಿಷರಹಿತವಾಗಿ ಫಲ ನೀಡುತ್ತಿವೆ. ಸಹಜ ಕಾಡು ಮರಗಳೊಂದಿಗೆ ತೇಗ, ಮ್ಯಾಂಜಿಯಂ, ಅಕೇಶಿಯಾ, ಮಹಾಗನಿ, ಬಿದಿರು, ಹಲಸು…..ಇಲ್ಲಿನ ಸಸ್ಯಸಂಪತ್ತು.

ಈ ಕೃಷಿಭೂಮಿ ಈಗ ಸಂಶೋಧನಾ ಕ್ಷೇತ್ರ.  ರೈತನೊಬ್ಬನ ‘ವಿಜ್ಞಾನಿ ಮನಸ್ಸು’ ಇಲ್ಲಿ ಅನಾವರಣಗೊಂಡಿದೆ. ಸುಬ್ರಾಯ ಭಟ್ಟರ ಪುತ್ರ ಡಾ.ವಾರಣಾಶಿ ಕೃಷ್ಣಮೂರ್ತಿಯವರ ವಿವಿಧ ಕೃಷಿ ಸಂಶೋಧನೆಗಳ ಫಲವಾಗಿ ಅಡ್ಯನಡ್ಕವೀಗ ಹತ್ತೂರುಗಳಲ್ಲಿ ಪ್ರಸಿದ್ಧ. ಕಳೆದ ೨೩ ವರುಷಗಳಿಂದ ನಿತ್ಯ ಒಂದಲ್ಲ ಒಂದು ಪ್ರಯೋಗಗಳಿಗೆ ‘ವಾರಣಾಶಿ ಫಾರ್ಮ್ಸ್’ ತನ್ನನ್ನು ಒಡ್ಡಿಕೊಂಡಿದೆ.

ಕೃಷ್ಣಮೂರ್ತಿಯವರು ಎಂ.ಎಸ್ಸಿ.(ಕೃಷಿ)ಪದವೀಧರರು. ಕೃಷಿ ಅವರಿಗೆ ಹಿರಿಯರ ಬಳುವಳಿ. ಕೈತುಂಬಾ ಸಂಬಳ ಪಡೆಯುವ ಆಶೆಯಿಂದ ಅವರು ದೂರ.  ತನ್ನೂರಿನಲ್ಲೇ ಇದ್ದು, ಕೃಷಿಪರ ಕೃಷಿಕಪರ ಕಾರ್ಯವನ್ನು ವೈಜ್ಞಾನಿಕವಾಗಿ ನಡೆಸುವ ಆಶೆ ಹೊತ್ತು ೧೯೮೧ರಲ್ಲಿ ಮನೆಗೆ ಬಂದಾಗ ತೋಟದ ಜವಾಬ್ದಾರಿ ಹೆಗಲೇರಿತು. ತನ್ನೆಲ್ಲಾ ನಿರೀಕ್ಷೆಗಳಿಗೆ ತನ್ನ ತೋಟವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿದರು. ತೋಟದಲ್ಲೇ ನೌಕರಿ ಮಾಡಿದರು. ಯಶ ಪಡೆದರು.

ಪದವಿ ಹಂತದಲ್ಲಿ ಕೃಷ್ಣಮೂರ್ತಿಯವರಿಗೆ ‘ಅಣಬೆ ಕೃಷಿ’ ಅಧ್ಯಯನ ವಿಷಯವಾಗಿತ್ತು. ಅಧ್ಯಯನದಲ್ಲಿದ್ದಾಗಲೇ ಅಣಬೆ ಕೃಷಿಯನ್ನು ಕೈಗೊಂಡು, ಅದರಲ್ಲಾದ ಅನುಭವವು ತನ್ನ ತೋಟದಲ್ಲಿ ಸಾಕಾರಗೊಳ್ಳಬೇಕೆಂಬ ಛಲವು ಮೂರ್ತರೂಪ ಹೊಂದಿತು. ಆರು ವರುಷಗಳ ನಿರಂತರ ಪ್ರಯತ್ನ, ಮಾರಾಟ ಸಮಸ್ಯೆ, ಉತ್ಪಾದನಾ ತೊಡಕುಗಳು, ಪ್ರಾಕೃತಿಕ ವೈಪರೀತ್ಯ, ಬ್ಯಾಂಕ್ ಸಾಲ….ಹೀಗೆ ಹಲವು ಜಂಜಾಟಗಳು.  ‘ಸಮಸ್ಯೆಗಳು ನನ್ನ ಎಲ್ಲಾ ಅನುಭವಗಳನ್ನು ಮೀರಿಸಿತು’ ಎನ್ನುತ್ತಾರೆ.

ಅಣಬೆ ಕೃಷಿಗಾಗಿ ಮಾಡಿದ ಸರ್ವಪ್ರಯತ್ನಗಳು ಉತ್ಪಾದನೆಯಲ್ಲಿ ವಿಫಲಗೊಂಡಾಗ, ಅಣಬೆ ಕೃಷಿಯ ಹೆಚ್ಚಿನ ಅಧ್ಯಯನಕ್ಕೆ ಮನ ಮಾಡಿದರು. ಅಧ್ಯಯನದ ಫಲವಾಗಿ ಪಿ.ಎಚ್.ಡಿ.ಪದವಿ.

ಕೃಷಿಕ ವಿಜ್ಞಾನಿಯ ಸಂಶೋಧನೆ

ಈ ಮಧ್ಯೆ ತೋಟ ವಿಸ್ತಾರವಾಯಿತು. ೧೯೯೨ ರಿಂದ ರಾಸಾಯನಿಕ ರಹಿತವಾಗಿ ತೋಟವನ್ನು ಅಭಿವೃದ್ಧಿಪಡಿಸಿದರು.  ಅನಾವಶ್ಯಕವಾಗಿ ಖರ್ಚುಗಳಿಗೆ ಕಡಿವಾಣ ಹಾಕಿದರು. ವಿವಿಧ ಬೆಳೆಗಳ ಕೃಷಿ ಕೈಗೊಂಡರು. ಅಣಬೆಗೆ ಮಾಡಿದ ಸಾಲ ಶೂಲವಾಗುವ ಮೊದಲೇ, ಸಾಲದ ಮೊತ್ತವನ್ನು ತೋಟದಿಂದಲೇ ತುಂಬಿಸಬೇಕೆಂಬ ಛಲ ತೊಟ್ಟರು.

ಅಡಿಕೆಯೊಂದಿಗೆ ಬೆಳೆದ ಕೃಷ್ಣಮೂರ್ತಿಯವರಿಗೆ ಅಡಿಕೆ ಕೃಷಿ ಬಗ್ಗೆ ಒಲವಿರಲಿಲ್ಲ!  ಯಾಕೆಂದರೆ ಅಡಿಕೆ ಆಹಾರವಸ್ತುವಲ್ಲ. “ಯಾರದೋ ಆಸಕ್ತಿಗೆ, ಚಟಕ್ಕೆ ನಾವ್ಯಾಕೆ ಅಡಿಕೆ ಬೆಳೆಸಬೇಕು?  ಹಾಗಾಗಿ ಅಡಿಕೆಯ ಹೊರತಾಗಿ ಬೇರೇನಾದರೂ ಮಾಡಬೇಕೆಂಬುದು ನನ್ನ ಆಶೆ” ಎನ್ನುವ ಕೃಷ್ಣಮೂರ್ತಿ, ಸಂಶೋಧನಾ ವಿಚಾರಗಳಿಗೆ ಹೆಚ್ಚು ಒತ್ತುಕೊಟ್ಟರು.

ಅಣಬೆ ಕೃಷಿಗೆ ಮಾಡಲಾದ ಕಟ್ಟಡ ‘ವಾರಣಾಶಿ ಸಂಶೋಧನಾ ಪ್ರತಿಷ್ಠಾನ’ವಾಗಿ ೧೯೯೫ರಲ್ಲಿ ರೂಪಾಂತರವಾಯಿತು. ಜೀವ ವೈವಿಧ್ಯವಿರುವ ಕಾಡಿನಲ್ಲಿ ನಡೆಯುವಂತಹ ಸುಸ್ಥಿರ ಕೃಷಿಗೆ ನಮ್ಮ ಕೃಷಿಯನ್ನು ಸಮನಾಗಿಸಬೇಕೆಂಬ ಗುರಿಯನ್ನು ಪ್ರತಿಷ್ಠಾನ ಹೊಂದಿತು. ಐದು ಮಂದಿ ಆಡಳಿತ ಸದಸ್ಯರುಳ್ಳ ಪ್ರತಿಷ್ಠಾನಕ್ಕೆ ಡಾ.ಕೃಷ್ಣಮೂರ್ತಿಯವರೇ ಆಡಳಿತಾಧಿಕಾರಿ.

ನಿರಂತರ ಅನ್ವೇಷಣ ಮತ್ತು ಸಂಶೋಧನೆ ಕೃಷ್ಣಮೂರ್ತಿಯವರಿಗೆ ಸ್ವ-ಭಾವ. “ಎಲ್ಲರೂ ಮಾಡುವ ಕೆಲಸವನ್ನು ನಾನು ಮಾಡುವುದಿಲ್ಲ” ಎಂಬುದು ಅವರ ನಿಲುವು. ಪ್ರತೀ ವರುಷ ಒಂದಲ್ಲ ಒಂದು ಹೊಸತನ್ನು ಮಾಡುತ್ತಾ ಹೋದರು. ಅಣಬೆ ಕೃಷಿ ದೂರದ ಬೆಳಕಾದಾಗ, ‘ತೆಂಸಿ ಗೊಬ್ಬರ’ವೆಂಬ ಹೊಸ ವಿಚಾರ ಅವರಿಗೆ  ಬೆಳಕು ನೀಡಿತು. ಕೃಷಿ ವಲಯ ಚುರುಕಾಯಿತು. ನಾರಿನ ಉದ್ಯಮದಲ್ಲಿ ವ್ಯರ್ಥವಾಗಿ ಹಾಳಾಗುತ್ತಿದ್ದ ತೆಂಗಿನ ಸಿಪ್ಪೆಯ ಹುಡಿಯಿಂದ ಪೌಷ್ಠಿಕ ಗೊಬ್ಬರ ತಯಾರಿಸುವ ತಂತ್ರಜ್ಞಾನಕ್ಕೆ ಒಲವಾದರು.

ತೆಂಸಿ ಗೊಬ್ಬರವು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಆವಿಷ್ಕಾರ. ಅದನ್ನು ಬೇರೆ ಬೇರೆ ಪ್ರಯೋಗಕ್ಕೊಳಪಡಿಸಿ ಕಂಪೋಸ್ಟ್ ಮಾಡಿದರು. ತೇವ ಉಳಿಸುವ, ಕಡಿಮೆ ಖರ್ಚಿನ, ಒಳ್ಳೆಯ ಪೋಷಕಾಂಶ ನೀಡುವ ತೆಂಸಿ ಗೊಬ್ಬರವು ಅವರಿಗೆ ವಾಣಿಜ್ಯ ಯಶಸ್ಸು ತಂದುಕೊಟ್ಟಿತು. ರಾಸಾಯನಿಕ ಗೊಬ್ಬರಗಳಿಗೆ ಇದು ಪರ್ಯಾಯವಾಗುವಷ್ಟು ‘ವಾರಣಾಶಿ ತೆಂಸಿ ಗೊಬ್ಬರ’ ಜನಪ್ರಿಯವಾಯಿತು.

ತನ್ನ ತೋಟದ ಅಡಿಕೆ, ತೆಂಗು, ಕಾಳುಮೆಣಸು, ವೆನಿಲ್ಲಾ, ತರಕಾರಿಗಳಿಗೆ ಮೊದಲು ತೆಂಸಿಗೊಬ್ಬರವನ್ನು ಉಣಿಸಿದ ಬಳಿಕವೇ ಇತರರಿಗೆ ಶಿಫಾರಸು ಮಾಡಿದರು. ತೋಟದ ಬೆಳೆಗಳಿಗೆ ಬೇಕಾದ ಅಧಿಕ ಪೊಟ್ಯಾಶ್ ಹೊಂದಿರುವ ಇದು ಉತ್ತಮ ಸಮತೋಲನ ಗೊಬ್ಬರವಾಯಿತು.

ತೆಂಗು ಬೆಳೆಯುವ ಮುಖ್ಯ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ತೆಂಗಿನ ನಾರು ತೆಗೆಯುವುದೊಂದು ಉದ್ಯಮ. ನಾರು ತೆಗೆದ ನಂತರ ಸಿಪ್ಪೆಯ ಶೇ.೭೦ ಭಾಗ ಹುಡಿಯಾಗಿ ಸಿಗುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದ ತೆಂಗಿನ ನಾರಿನ ಉದ್ಯಮ ವರುಷಕ್ಕೆ ಐದು ಲಕ್ಷ ಟನ್ ತೆಂಸಿ ಹುಡಿ ರಾಶಿಗಳನ್ನು ಸೃಷ್ಟಿಸುತ್ತದೆ. ಇದು ಕಾರ್ಖಾನೆಗಳ ಬಳಿಯ ಜಾಗವನ್ನಾಕ್ರಮಿಸಿ ಪರಿಸರ ಮಾಲಿನ್ಯ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ತೆಂಸಿ ಗೊಬ್ಬರ ತಂತ್ರಜ್ಞಾನವು ಕೃಷಿಕನಿಗೂ, ಪರಿಸರಕ್ಕೂ ಉಪಕಾರಿ. ಕೃಷ್ಣಮೂರ್ತಿಯವರು ಈ ತಂತ್ರಜ್ಞಾನವನ್ನು ಅನುಷ್ಠಾನ ಮಾಡಿ ಕೃಷಿಕರ ಬಳಿಗೆ ಒಯ್ದರು.

ಗೊಬ್ಬರ : ವೃದ್ಧಿಅಭಿವೃದ್ಧಿ

“ನನಗೆ ಕೈಗಾರಿಕೋದ್ಯಮಿ ಆಗಬೇಕೆಂಬ ಆಶೆಯಿತ್ತು. ಅಣಬೆಯು ಅದಕ್ಕೆ ನಿಯಂತ್ರಣ ಹೇರಿತು. ಆದರೆ ‘ಗೊಬ್ಬರ ಮಾರಾಟ ಸಲಹೆಗಾರ’ನಾಗುವಲ್ಲಿ ಯಶಸ್ಸಾದೆ” ಎನ್ನುವಲ್ಲಿ ಅವರಿಗೆ ಸಮಾಧಾನ. ಗಿರಣಿತ್ಯಾಜ್ಯ, ಕೊಕ್ಕೋಸಿಪ್ಪೆ, ಕಾಫಿಹಣ್ಣಿನ ಸಿಪ್ಪೆ ಇತ್ಯಾದಿಗಳಿಂದ ಉತ್ತಮ ಕಂಪೋಸ್ಟ್  ತಯಾರಿಸುವ  ‘ವಿ.ಆರ್.ಎಫ್’ ವಿಧಾನವನ್ನು ವಾರಣಾಶಿಯವರು ಅಭಿವೃದ್ಧಿ ಪಡಿಸಿದರು.

ಡಾ.ಕೃಷ್ಣಮೂರ್ತಿಯವರ ಮತ್ತೊಂದು ಉತ್ಪನ್ನ – “ವಾರಣಾಶಿ – ಟ್ರೈಜೈವಿಕ-ಎಚ್”.  ಇದು ಅತ್ಯಂತ ಶೀಘ್ರವಾಗಿ ಬೆಳೆಯುವ ‘ಟ್ರೈಕೋಡರ್ಮಾ ಹರ್ಜಿಯಾನಂ’ ಎಂಬ ಶಿಲೀಂದ್ರದ ಉತ್ಪನ್ನ. ಮಣ್ಣಿನಿಂದ ಬೇರಿಗೆ ಬರುವ ಹಲವಾರು ರೋಗಕಾರಕ ಶಿಲೀಂದ್ರಗಳನ್ನು ಇದು ನಿಯಂತ್ರಿಸುತ್ತದೆ. ಇದು ರೋಗವನ್ನು ತಡೆಗಟ್ಟುವುದು ಮಾತ್ರವಲ್ಲದೆ, ಸಾವಯವ ಗೊಬ್ಬರ ಕೊಳೆಯಲು ಉತ್ತೇಜಿಸುತ್ತದೆ. ಜೊತೆಗೆ ಸಸ್ಯ ಬೆಳವಣಿಗೆಯ ಪ್ರಚೋದಕಗಳನ್ನು ಉತ್ಪಾದಿಸುತ್ತದೆ. ಕಾಳುಮೆಣಸಿನ ಶೀಘ್ರ ಸೊರಗು ರೋಗಕ್ಕೆ “ಟ್ರೈ-ಜೈವಿಕ-ಎಚ್”ನಿಂದ ನಿಯಂತ್ರಣ ಸಾಧ್ಯ.  ಅಲ್ಲದೆ ಏಲಕ್ಕಿ ಕಾಯಿ ಕೊಳೆತ, ಶುಂಠಿ-ಅರಶಿನ ಗೆಡ್ಡೆಕೊಳೆತ, ಕಿತ್ತಳೆ-ನಿಂಬೆ ಬೇರುಕೊಳೆತ, ರಬ್ಬರ್ ಬೇರುಕೊಳೆತ….ಗಳಿಗೆ ಬಳಕೆ.  ಕಾಳುಮೆಣಸಿಗೆ ಚಿನ್ನದ ಬೆಲೆಯಿದ್ದಾಗ ಟ್ರೈ-ಜೈವಿಕ್ಕೆ ಎಲ್ಲಿಲ್ಲದ ಬೇಡಿಕೆಯಿತ್ತು.  “ಮೂರ್ನಾಲ್ಕು ವರುಷ ಇದು ನಮ್ಮನ್ನು ಸಾಕಿತು” ಎನ್ನುತ್ತಾರೆ ಡಾ.ಕೃಷ್ಣಮೂರ್ತಿ.

“ವಾರಣಾಶಿ ಕಂಪೋಸ್ಟರ್” – ಪ್ರತಿಷ್ಠಾನದ ಮತ್ತೊಂದು ತಯಾರಿ. ಇದು ಅಣುಜೀವಿಗಳ ಮಿಶ್ರಣ (ಜೀವಾಣು ಗೊಬ್ಬರ). ಇದರಿಂದ ಕಂಪೋಸ್ಟ್ ಶೀಘ್ರವಾಗಿ ಪಡೆಯಲು ಸಹಕಾರಿ. ‘ವಿ.ಆರ್.ಎಫ್-ಕಂಪೋಸ್ಟ್’ಗೆ  ಈ ಕಂಪೋಸ್ಟರ್ ಮುಖ್ಯ ಸಂಪನ್ಮೂಲ.

ರಾಸಾಯನಿಕ ರಹಿತ, ಪರಸರ ಸಂರಕ್ಷಿತ ಕೃಷಿಗೆ ಬಳಸುವ ಸಿಂಪಡಣೆ – ‘ವಾರಣಾಶಿ ಬಯೋ ಸ್ಪ್ರೇ’ಯನ್ನು ಪ್ರತಿಷ್ಠಾನ ಸಂಶೋಧಿಸಿದೆ. ಇದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಹಾಗೂ ಹಾರ್ಮೋನುಗಳನ್ನು ಹೊಂದಿರುತ್ತದೆ.

ಕರಿಮೆಣಸಿನ ಶೀಘ್ರ ಸೊರಗುರೋಗವನ್ನು ತಡೆಗಟ್ಟಿ, ಸೂಕ್ತ ಪೋಷಕಾಂಶಗಳನ್ನು ಒದಗಿಸುವ ಗೊಬ್ಬರ – “ವಾರಣಾಶಿ ಪೆಪ್ಪರ್ ಬಯೋಮಿಕ್ಸ’,  ಸಸ್ಯಜನ್ಯ ಪದಾರ್ಥಗಳಿಂದ ತಯಾರಾದ ಕಂಪೋಸ್ಟನ್ನು ಸ್ಟೆರಿಲೈಸ್‌ಗೊಳಿಸಿದ ನಂತರ ವಿವಿಧ ಉಪಯೋಗಿ ಜೀವಣುಗಳನ್ನು ಅಭಿವೃದ್ಧಿ ಪಡಿಸಿದ ಗೊಬ್ಬರ – ‘ವಾರಣಾಶಿ ಸಸ್ಯಾಹಾರ್’, ಅಲ್ಲದೆ ‘ವಾರಣಾಶಿ ಕೋ-ಕಂಪೋಸ್ಟ್,   ‘ವಾರಣಾಶಿ ಬಯೋಕಂಪೋಸ್ಟ್… ಹೀಗೆ ಹಲವು ಬಗೆಯ ಗೊಬ್ಬರಗಳನ್ನು, ಸಿಂಪಡಣೆಗಳನ್ನು ಕೃಷ್ಣಮೂರ್ತಿಯವರು ಅಭಿವೃದ್ಧಿಪಡಿಸಿದ್ದಾರೆ.

ಕೃಷಿಸ್ನೇಹಿ

ಪ್ರತಿಷ್ಠಾನವು ಕೇವಲ ಗೊಬ್ಬರ ತಯಾರಿ ಸಂಶೋಧನಾ ಅಭಿವೃದ್ಧಿಯಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಂಡಿಲ್ಲ. ಕೃಷ್ಣಮೂರ್ತಿ ಹೇಳುತ್ತಾರೆ – “ನಮ್ಮಲ್ಲಿ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆಗೆ ಬೇಕಾದ ವ್ಯವಸ್ಥೆಯಿದೆ. ಪರಿಣತ ಸಹಾಯಕರು ಕೃಷಿ ಭೂಮಿಗೆ ಬಂದು ಮಣ್ಣು ಸಂಗ್ರಹಿಸಿ, ಅದನ್ನು ಪರೀಕ್ಷಿಸಿ, ಬಳಿಕ ಸೂಕ್ತ ಸಲಹೆ ಕೊಡಲು ತಜ್ಞರ ನೆರವು ಸದಾ ಲಭ್ಯವಿದೆ.” ಮಣ್ಣು ಪರೀಕ್ಷೆ ಮಾಡಿ ಕಂಡು ಬಂದ ದೋಷಗಳಿಗೆ ಪರಿಹಾರ ಮತ್ತು ಸಲಹೆಯನ್ನು ನೀಡುವುದು ಇಲ್ಲಿನ ವಿಶೇಷ.

ಕೃಷಿಕನಾಗಿ, ಕೃಷಿಕಪರವಾದ ಚಿಂತನೆಯಲ್ಲಿ, ಸಂಶೋಧನೆಯಲ್ಲಿ ತೊಡಗಿದ ಡಾ.ವಾರಣಾಶಿ ಕೃಷ್ಣಮೂರ್ತಿಯವರು ಸಂಶೋಧನಾ ಪ್ರತಿಷ್ಠಾನ ಸಂಕೀರ್ಣವನ್ನು ‘ಕೃಷಿ ಸ್ನೇಹಿ’ಯಾಗಿ ರೂಪುಗೊಳಿಸಿದ್ದಾರೆ. ಯಾವುದೇ ಹೈಟೆಕ್ ಇಲ್ಲಿಲ್ಲ. ಒಳಹೊಕ್ಕಾಗ ಒಂದು ತರಹದ ಕೃಷಿ ಆಪ್ತತೆ ನಮ್ಮನ್ನು ಆವರಿಸಿಬಿಡುತ್ತದೆ. ಸುಲಭವಾಗಿ ಸಂಶೋಧನಾಲಯವನ್ನು ಹೇಗೆ ನಿರ್ಮಿಸಬಹುದು ಎಂಬುದಕ್ಕೆ ಮಾದರಿ ಡಾ.ಕೃಷ್ಣಮೂರ್ತಿಯವರು.

ಸಂಶೋಧನಾ ವಿದ್ಯಾರ್ಥಿಗಳಿಗೆ ‘ವಾರಣಾಶಿ ಸಂಶೋಧನಾ ಪ್ರತಿಷ್ಠಾನ’ ಒಂದು ವರದಾನ. ಡಾ:ಕೃಷ್ಣಮೂರ್ತಿ ಸಂಪನ್ಮೂಲ ವ್ಯಕ್ತಿಯಾಗಿ ಲಭ್ಯರಿದ್ದು, ಅವರ ಮಾರ್ಗದರ್ಶನದಲ್ಲಿ ಯೋಜನೆಗಳನ್ನು, ಸಂಶೋಧನೆಗಳನ್ನು ಮಾಡಬಹುದು.

ತ್ಯಾಜ್ಯಗಳ ಮರುಬಳಕೆ:

ವಾರಣಾಶಿಯವರು ಎಲ್ಲಾ ರೀತಿಯ ತ್ಯಾಜ್ಯಗಳ ಮರುಬಳಕೆಗೆ ಪ್ರಯತ್ನ ನಡೆಸಿದ್ದಾರೆ. ಅವರ ಕ್ಯಾಂಟೀನ್‌ನಲ್ಲಿ, ವಾಣಿಜ್ಯ ಸಂಕೀರ್ಣದಲ್ಲಿ ತಯಾರಾಗುವ ಎಲ್ಲಾ ಸಾವಯವ ತ್ಯಾಜ್ಯಗಳು ಗೊಬ್ಬರವಾಗಿ ಉಪಯೋಗವಾಗುತ್ತದೆ. ಪ್ಲಾಸ್ಟಿಕ್‌ನ್ನು ಸೂಕ್ತ ರೀತಿಯಲ್ಲಿ ದಹಿಸಲಾಗುತ್ತದೆ. (ಪಿ.ವಿ.ಸಿ. ಮತ್ತು ಗ್ರೀನ್ ಹೋಸ್ ಬಿಟ್ಟು ಉಳಿದವುಗಳನ್ನೆಲ್ಲಾ ಬಿಸಿನೀರು ಕಾಯಿಸಲೂ ಬಳಸಬಹುದು!) ಮಾನವ ಮಲವನ್ನು ಬಯೋಗ್ಯಾಸ್ ಘಟಕದಲ್ಲಿ ಡೈಜೆಸ್ಟ್ ಮಾಡಿ ತೋಟಕ್ಕೆ ಗೊಬ್ಬರವಾಗಿ ಕೊಡುವುದು ವಾರಣಾಶಿಯವರ ಇತ್ತೀಚೆನ ಸಾಧನೆ. ವಿವಿಧ ಮಾದರಿಯ ಐದು ಘಟಕಗಳು ಅವರ ಕೃಷಿ ಕ್ಷೇತ್ರದಲ್ಲಿವೆ. ಐದು ಜನರ ಒಂದು ಕುಟಂಬದ ಮಾನವ ತ್ಯಾಜ್ಯ ಸುಮಾರು ನಾಲ್ಕು ಎಕರೆಗೆ ಗೊಬ್ಬರ ಕೊಡಬಲ್ಲದಂತೆ!

ಮಳೆಕೊಯ್ಲುತನ್ನ ತೋಟವೇ ಮಾದರಿ

ಜಲಮರುಪೂರಣ – ಕೃಷ್ಣಮೂರ್ತಿಯವರ ಮತ್ತೊಂದು ಆಸಕ್ತಿ.  ಬೇಸಿಗೆ ಕೊನೆಗೆ ತನ್ನ ತೋಟಕ್ಕೆ ನೀರಿನ ತತ್ವಾರ. ಸುತ್ತುಮುತ್ತಲಿನ ಕೃಷಿಕರು ಕೊಳವೆ ಬಾವಿಯಿಂದ ನೀರೆತ್ತಿದಾಗ ಇವರಿಗೆ ನೀರಿನ ತೊಂದರೆ. ಪರಿಣಾಮ, ಇಳುವರಿಯಲ್ಲಿ ಕುಸಿತ. ಹಾಗಾಗಿ ೮೦ರ ದಶಕದಲ್ಲೇ ‘ನೆಲ-ಜಲ’ಸಂರಕ್ಷಣೆಯತ್ತ ಒಂದಷ್ಟು ಕೆಲಸ ಮಾಡಿದ್ದಾರೆ.  ಅಡಿಕೆ ಪತ್ರಿಕೆ ಮತ್ತು ‘ಶ್ರೀ’ಪಡ್ರೆಯವರ ‘ನೆಲ-ಜಲ ಅಭಿಯಾನ’ದ ಬಳಿಕ ಡಾ:ಕೃಷ್ಣಮೂರ್ತಿಯವರ ಕೆಲಸಗಳಿಗೆ ಮತ್ತಷ್ಟು ಚಾಲನೆ ದೊರೆಯಿತು.

ನೀರಿನ ಸಂರಕ್ಷಣೆಗಾಗಿ ಕಾಡು ಬೆಳೆಸಿದರು.  ಅದನ್ನು ಸಂರಕ್ಷಿಸಿದರು. ಮರದ ಬುಡಗಳಲ್ಲಿ ‘ತೊಟ್ಟಿಲು ಗುಂಡಿ’ ತೋಡಿದರು.  ಓಡುವ ನೀರನ್ನು ಇಂಗಿಸಲು ‘ತಡೆಕಟ್ಟ’,  ಇಳಿಜಾರಿನಲ್ಲಿ ನೆರವಾಗಿ ರಭಸದಿಂದ ಹರಿವ ನೀರನ್ನು ನಿಧಾನ ಮಾಡಲು ‘ಹರಿವ ನೀರಿಗೆ ಅಂಕುಡೊಂಕು ದಾರಿ’,  ಜಾನುವಾರುಗಳಿಂದ ರಕ್ಷಣೆಗೆ ಹಾಗೂ ಗುರುತಿಗಾಗಿ ಮಾಡಿದ ಅಗಳಿನ ಚರಂಡಿಯಲ್ಲಿ ನೀರಿಂಗಿಸುವಿಕೆ, ರಸ್ತೆ ಚರಂಡಿಯಲ್ಲಿ ನೀರಿಂಗಿಸುವಿಕೆ,  ಗುಡ್ಡದ ಬುಡದಲ್ಲಿ ಇಂಗುಗುಂಡಿ, ಕೆರೆಯ ಮೇಲೆ ನೀರಿಂಗಿಸುವ ಮದಕ, ಕೆರೆಯಿಂದ ಜಿನುಗಿ ಹೊರಹರಿವ ನೀರಿಗೆ ಪುಟ್ಟಕೆರೆ, ಬಾವಿಯ ಹತ್ತಿರ ಇಂಗುಗುಂಡಿ, ಕೊಳವೆ ಬಾವಿಗೆ ಮರುಪೂರಣ, ಬೇಸಿಗೆ ಶುರುವಿಗೆ ಕಣಿಕಟ್ಟಗಳು, ತೊಡಿಗೆ ಕಟ್ಟ….ಇವೆಲ್ಲದರ ಪರಿಣಾಮವಾಗಿ ಬಾವಿ, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿದುವು. ಪಕ್ಕದ ಜಮೀನಿನ ಬಾವಿ-ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಯಿತು.

ಸನಿಹದ ಹೊಳೆಗೆ ಪ್ಲಾಸ್ಟಿಕ್‌ಶೀಟ್ ಹಾಗೂ ಮರಳಚೀಲದ ಕಟ್ಟ – ವಾರಣಾಶಿಯವರ ‘ಅಭಿವೃದ್ಧಿ ಸಂಶೋಧನೆ’. ಕಲ್ಲಿನ ಬದಲು ಮರಳ ಚೀಲವನ್ನು ಹಾಗೂ ಮಣ್ಣ್ಣಿನ ಬದಲು ಪ್ಲಾಸ್ಟಿಕ್ ಹಾಳೆಯನ್ನು ಬಳಸಿದ ಕಡಿಮೆ ವೆಚ್ಚದ ಕಟ್ಟವಿದು.

ಈಗ ವಾರಣಾಶಿ ಕೃಷಿ ಕ್ಷೇತ್ರದಲ್ಲಿ ಸಾಮಾನ್ಯ ಮಳೆ ಬಂದರೆ ನೀರು ಪೂರ್ತಿ ಇಂಗುತ್ತದೆ. ಮಳೆಗಾಲದ ಶುರುವಿಗೆ ವಿವಿಧ ರೀತಿಯ ಗುಂಡಿಗಳಲ್ಲಿ ಹಾಗೂ ಕೆರೆಯಲ್ಲಿ ನೀರು ತುಂಬಿ ಹೊರಹರಿಯಲು ಮೂರು ಯಾ ನಾಲ್ಕು ವಾರ ಬೇಕಾಗುತ್ತದೆ. ಈ ರೀತಿ ಇಂಗಿಸಿದ ನೀರಿನಲ್ಲಿ ಒಂದು ಪಾಲು ಬೇಸಿಗೆಯಲ್ಲಿ ದೊರಕಿ, ಸದ್ಯ ನೀರಿನ ಅಭಾವ ತೊಲಗಿದೆ.

ಪರಿಣಾಮವಾಗಿ, ೧೨೦ ಅಡಿ ಆಳದ ಬಾವಿ ಬೇಸಿಗೆಯಲ್ಲಿ ಪ್ರತಿ ಗಂಟೆಗೆ ೨೨೦೦ ಲೀ. ನೀರು ಕೊಡುತ್ತಿತ್ತು.  ಅದೇ ಬಾವಿ ಈಗ ಬೇಸಿಗೆಯ ಕೊನೆಯ ತಿಂಗಳಲ್ಲಿ ಜನರೇಟರ್ ಉಪಯೋಗಿಸಿ ೨೦ ಗಂಟೆಗೂ ಅಧಿಕ ನೀರ ಎತ್ತಿದರೂ ೨೦೦೪ರ ಕಡು ಬೇಸಿಗೆಯಲ್ಲೂ ಗಂಟೆಗೆ ೪೯೦೦ ಲೀ. ನೀರು ಕೊಟ್ಟಿದೆ.  ಇನ್ನೊಂದು ೨೮೦ ಅಡಿ ಆಳದ ಬಾವಿ ಗಂಟೆಗೆ ೯೦೦೦ ಲೀ. ನೀರು, ಕೊಡುತ್ತದೆ.  ಸಾಕಷ್ಟು ಕೊಳವೆ ಬಾವಿಗಳನ್ನು ತೆಗೆದು ನೀರು ಸಿಗದೆ ನಿರಾಶೆಗೊಂಡ ಪಕ್ಕದ ಜಮೀನಿನ ಕೃಷಿಕರ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಿದೆ. ಒಟ್ಟಿನಲ್ಲಿ ಇಡೀ ವಾರಣಾಶಿ ಕ್ಷೇತ್ರದಲ್ಲಿ ಜಲನಿಧಿ ಅಧಿಕವಾಗಿದೆ.

ನೆಲ-ಜಲ ಸಂರಕ್ಷಣೆಗಾಗಿ ‘ವಾರಣಾಶಿ ಜಲಾನಯನ ಅಭಿವೃದ್ಧಿ ಸಮಿತಿ’ಯನ್ನು ರಚಿಸಲಾಗಿದೆ. ಪ್ರತೀ ತಿಂಗಳು ರೈತರೊಬ್ಬರ ತೋಟದಲ್ಲಿ ಈ ಸಮಿತಿ ಸೇರಿ ನೆಲಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತಿದೆ. ಈಗಾಗಲೇ ಹಲವಾರು ರೈತರು ತಮ್ಮ ಭೂಮಿಯಲ್ಲಿ ನೀರಿಂಗಿಸುವ ವಿಧಾನ ಅಳವಡಿಸುತ್ತಿದ್ದಾರೆ.

ಕೃಷಿಪರಕೃಷಿಕಪರ

ಅಣಬೆ ಕೃಷಿಯ ಅಭಿವೃದ್ಧಿಗಾಗಿ ಹುಟ್ಟಿಕೊಂಡ ‘ವಾರಣಾಶಿ ಫಾರ್ಮ್ಸ್’ ಸಂಸ್ಥೆಯು ತೋಟ ಚಟುವಟಿಕೆ, ಗಿಡಗಳ ಅಭಿವೃದ್ಧಿ, ನರ್ಸರಿ….ಕಾರ್ಯಮಾಡುತ್ತಿದೆ.

ಸಂಶೋಧನಾ ಪ್ರತಿಷ್ಠಾನವು ಅಭಿವೃದ್ಧಿ ಪಡಿಸಿದ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಉದ್ದೇಶದಿಂದ ೧೯೯೬ರಲ್ಲಿ ‘ವಾರಣಾಶಿ ಆಗ್ರೋ ಸಸ್ಟೈನೇಬಲ್ ಟೆಕ್ನಾಲಜಿ ಸೆಂಟರ್’ ಆರಂಭವಾಯಿತು. ಇದು ಹೃಸ್ವವಾಗಿ ‘ವಾಸ್ಟ್ ಸೆಂಟರ್’ ಎಂದೇ ಪ್ರಸಿದ್ಧವಾಯಿತು.

ಡಾ:ಕೃಷ್ಣಮೂರ್ತಿಯವರು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತಾರೆ – ‘ನಾನು ಯಾವುದನ್ನೂ ಸಂಶೋಧಿಸಿಲ್ಲ. ಅಲ್ಲಲ್ಲಿ ಚದುರಿದ್ದ ತಂತ್ರಜ್ಞಾನವನ್ನು ಒಂದುಗೂಡಿಸುವ ಸೇತುವೆಯ ಕೆಲಸವನ್ನಷ್ಟೇ ಮಾಡಿದ್ದೇನೆ’

ಸಂಶೋಧನಾಲಯದ ಆಶ್ರಯದಲ್ಲಿ ವೆನಿಲ್ಲಾ ಕೃಷಿಯ ಪ್ರಚಾರ, ವೆನಿಲ್ಲಾ ಕಾರ್ಯಾಗಾರ, ವೆನಿಲ್ಲಾ ಸಂಸ್ಕರಣೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರಯತ್ನಗಳಾಗುತ್ತಿವೆ. ಈಗಾಗಲೇ ಕೆನಡಾ, ಅಮೇರಿಕಾ, ಕೊರಿಯಾ, ತೈವಾನ್, ಥ್ಯಾಲಾಂಡ್‌ಗೆ ಭೇಟಿಯಿತ್ತಿದ್ದಾರೆ. ‘ನನ್ನ ಎಲ್ಲಾ ಆರ್ಥಿಕ ಸಮಸ್ಯೆಯನ್ನು ವೆನಿಲ್ಲಾ ಸರಿದೂಗಿಸಿತು’ ಎನ್ನುವಲ್ಲಿ ಮೂರ್ತಿಯವರಿಗೆ ಮುಚ್ಚುಮರೆಯಿಲ್ಲ. ತಾವು ಬೆಳೆಸಿದ ವೆನಿಲ್ಲಾ ಜೊತೆ ಇತರ ರೈತರ ವೆನಿಲ್ಲಾವನ್ನು ವಾಸ್ಟ್ ಸೆಂಟರ್‌ನಲ್ಲಿ ಸಂಸ್ಕರಣೆ ಮಾಡಿದ್ದಾರೆ. ಕಡಲಾಚೆ ಮಾರಾಟ ಜಾಲ ನಿರ್ಮಿಸುವತ್ತ ಪ್ರಯತ್ನಗಳಾಗುತ್ತಿವೆ. ದೇಶೀಯ ಮಾರುಕಟ್ಟೆಗೂ ವೆನಿಲ್ಲಾವನ್ನು ಪರಿಚಯಿಸುವ ಪ್ರಯತ್ನ ನಡೆಸಿದ್ದಾರೆ.

ಪ್ರತಿಷ್ಠಾನವು ತನ್ನ ಉತ್ಪನ್ನಗಳನ್ನು ಕೃಷಿಕರಿಗೆ ತಲುಪಿಸಲು ಕೃಷಿಕರ ಬಳಿಗೇ ಹೋಗುತ್ತಿದೆ. ಸಮ್ಮೇಳನ, ಕಾರ್ಯಾಗಾರ, ಪ್ರದರ್ಶನಗಳ ಮೂಲಕ ಕೃಷಿಕರ ಗಮನವನ್ನು ಸೆಳೆಯಲಾಗುತ್ತಿದೆ. ಕೃಷಿ ಸಮ್ಮೇಳನ ಏರ್ಪಡಿಸಿದೆ. ವರುಷಕ್ಕೊಬ್ಬ ಕೃಷಿಕನನ್ನು ಸಂಮಾನಿಸಲಾಗುತ್ತಿದೆ.

ಡಾ.ಕೃಷ್ಣಮೂರ್ತಿಯವರ ಆಲೋಚನೆಗಳನ್ನು ಕಾರ್ಯಕ್ಕಿಳಿಸುವ ಪ್ರಾಮಾಣಿಕ ಸಹಾಯಕರ ತಂಡವಿದೆ. ‘ಇದೇ ನನ್ನ ಯಶಸ್ಸಿನ ಗುಟ್ಟು’ ಎನ್ನುತ್ತಾರೆ ಮೂರ್ತಿ.

೨೦೦೪ರಲ್ಲಿ ಕರ್ನಾಟಕ ಸರಕಾರದ ಪ್ರೋತ್ಸಾಹದೊಂದಿಗೆ ಮೂಡಂಬೈಲು ಸಾವಯವ ಗ್ರಾಮ ರೂಪುಗೊಂಡಿದ್ದು, ಕೆಲಸ ಭರದಿಂದ ನಡೆಯುತ್ತಿದೆ. ಪ್ರತಿಷ್ಠಾನದ ಜವಾಬ್ದಾರಿಯಲ್ಲಿ ಡಾ.ಕೃಷ್ಣಮೂರ್ತಿಯವರ ಸಾರಥ್ಯದಲ್ಲಿ ‘ಸಾವಯವ ಗ್ರಾಮ’ ನಿರ್ವಹಿಸಲ್ಪಡುತ್ತಿದೆ.

“ಮೊದಲು ನಾನು ಬೆಳೆಯಬೇಕು, ನಂತರ ನನ್ನ ಕುಟುಂಬ, ಬಳಿಕ ಸಹಾಯಕರು. ಆಮೇಲೆ ನನ್ನ ಊರು ಅಭಿವೃದ್ಧಿಯಾಗಬೇಕು” ಎಂಬ ಯೋಜನಾ ಜಾಲವನ್ನು ರೂಪುಗೊಳಿಸಿದ ವಾರಣಾಶಿ ಕೃಷ್ಣಮೂರ್ತಿಯವರ ಕನಸು ನನಸಾಗಿದೆ.

ಸಂಶೋಧನಾ ಪ್ರತಿಷ್ಠಾನವು ಭಾರತ ಸರಕಾರದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯಿಂದ ಮಾನ್ಯತೆ ಪಡೆದಿದೆ. ವಾರಣಾಶಿ ಫಾರ್ಮಿನಲ್ಲಿ ಕೆಲವು ವರುಷಗಳಿಂದ ಸಾವಯವ ಕೃಷಿ ನಡೆಯುತ್ತಿದ್ದು, ನೆದರ್‌ಲ್ಯಾಂಡ್‌ನಲ್ಲಿ ಮುಖ್ಯ ಕಚೇರಿ ಹೊಂದಿದ ‘ಸ್ಕಾಲ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಮಾನ್ಯತೆ ಪಡೆದಿದೆ. ಕರ್ನಾಟಕ ಘನ ಸರಕಾರವು ಡಾ.ಕೃಷ್ಣಮೂತಿಯವರ ಕೃಷಿ ಸಾಧನೆಗಾಗಿ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಒಂದು ಯೋಜನೆ ಸೋತಾಗ ಮೂರ್ತಿಯವರು ಅಧೀರರಾಗುವುದಿಲ್ಲ. ಅದು ಮತ್ತೊಂದು ಯೋಜನೆಗೆ ನಾಂದಿಯಾಗುತ್ತದೆ. ಬಹುಶಃ ಅವರ ಈ ಅಚಲ ಗುರಿ ಅವರನ್ನು ಗೆಲ್ಲಿಸಿತು.

ವಾರಣಾಶಿ ಸಂಶೋಧನಾ ಪ್ರತಿಷ್ಠಾನವು ಕೃಷಿಕರಿಗೆ ತೆರೆದ ಬಾಗಿಲು. ಯಾವುದೇ ಹೊತ್ತಿನಲ್ಲಿ ಇದರ ಕದ ತಟ್ಟಬಹುದು. ಬಾಗಿಲು ತೆರೆಯಲು ಕೃಷ್ಣಮೂರ್ತಿ ದಂಪತಿಗಳು ಸದಾ ಸಿದ್ಧ.

ವಾರಣಾಶಿ ಸಂಶೋಧನಾ ಪ್ರತಿಷ್ಠಾನ,
ಅಂಚೆ : ಅಡ್ಯನಡ್ಕ, ಬಂಟ್ವಾಳ ತಾಲೂಕು – ೫೭೪ ೨೬೦
ದೂರವಾಣಿ: ೦೮೨೫೫-೨೭೦೨೫೪)