ಸಾಕ್ಷರತೆಯನ್ನು ಮೂಲ‌ಅಗತ್ಯವಲ್ಲವೆಂದು ಭಾವಿಸುವುದಾದರೆ, ಜೀವಿಯ ಉಳಿವಿಗೆ ಭಾಷೆಯೂ ಮೂಲ ಅಗತ್ಯವಲ್ಲ. ಇದಕ್ಕೆ ಅನೇಕ ಪ್ರಾಣಿ, ಪಕ್ಷಿಗಳೇ ಸಾಕ್ಷಿ. ಆದರೆ ವೈವಿಧ್ಯಮಯವಾಗಿ, ಪರಿಣಾಮಕಾರಿಯಾಗಿ ಸಂವಹನ ನಡೆಸಲು ಭಾಷೆ ಅನಿವಾರ್ಯ. ಅದೇ ರೀತಿ ದೂರದಿಂದ ಸಂವಹನೆ ಮಾಡಲು, ಸಂವಹನೆಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ದಾಖಲೆ ಮಾಡಲು ಸಾಕ್ಷರತೆ ಅಗತ್ಯ. ಅದಕ್ಕೆಂದೇ ಲಿಖಿತ ಸಂವಹನ ಸಾಧನಗಳಾದ ಪುಸ್ತಕಗಳನ್ನು ಕಾರ್ಲ್ ಸಗನ್ ಬಾಹ್ಯವಂಶವಾಹಿ (External Gene) ಎಂದಿದ್ದಾನೆ.

ಸಾಕ್ಷರತೆಯನ್ನು ಸಾಧಿಸಲು ಕಲಿಸಬೇಕಾದದ್ದೇನು? – ಓದು, ಬರಹ ಮತ್ತು ಗಣಿತ. ಇದನ್ನು “ಮೂರು ಆರ್‘’ಗಳೆಂದು ಗುರುತಿಸಲಾಗಿದೆ. ಇಲ್ಲಿ ವಿಜ್ಞಾನ ಕಲಿಕೆಯ ಭಾಗವಾದ ಗಣಿತವೂ ಸೇರ್ಪಡೆಯಾಗಿರುವುದನ್ನು ಗಮನಿಸಬೇಕು. ಕಲಿಯಬೇಕಾಗಿರುವವರ ಸಂಖ್ಯೆ ಅಗಾಧವಾಗಿರುವುದರಿಂದಲೊ ಕಲಿಯುವವರಲ್ಲಿ ಆಸಕ್ತಿ ಕಡಿಮೆ ಎನ್ನುವುದರಿಂದಲೊ ಸಾಕ್ಷರತೆಯ ಗುರಿಯನ್ನು ಕೇವಲ ಓದುಬರಹಕ್ಕೆ ಅದರಲ್ಲೂ, ಸಹಿ ಹಾಕಲು ಬೇಕಾಗುವಷ್ಟು ಪ್ರಮಾಣದ ಓದುಬರಹದ ಕಲಿಕೆಗೆ ಸೀಮಿತಗೊಳಿಸಲಾಗಿದೆ.

ಕಲಿಯುವಿಕೆಯ ವ್ಯಾಪ್ತಿಯನ್ನು ಸೀಮಿತಗೊಳಿಸಿರುವುದರಿಂದ ಕಲಿಯುವಿಕೆ ವೇಗವಾದ ಬಗ್ಗೆಯಾಗಲೀ, ಕಲಿಯುವವರ ಸಂಖ್ಯೆ ಹೆಚ್ಚಾದ ಬಗ್ಗೆಯಾಗಲೀ ಖಚಿತ ಮಾಹಿತಿ ಇಲ್ಲ. ಬರವಣಿಗೆಯಿಂದಲೇ ಪ್ರಾರಂಭಿಸಿದ ಕಲಿಕೆ ಕಲಿಯುವವರಿಗೆ ಏಕತಾನತೆಯಾಗುವ ಸಾಧ್ಯತೆ ಇದೆ. ಬೆಳೆಯುವ ಮಕ್ಕಳಿಗೆ ಅಕ್ಷರ ತಿದ್ದುವುದು ಕಷ್ಟಕರವಾಗಿ ತೋರುವಾಗ, ರೋಚಕ ಅನುಭವಗಳ ರುಚಿ ಹತ್ತಿದ, ವಿಶಿಷ್ಟ ಅನುಭವಗಳನ್ನು ಹಂಬಲಿಸುವ ವಯಸ್ಕಮಂದಿಗೆ ಇದು ಹೇಗೆನ್ನಿಸಬೇಡ. ಅಕ್ಷರ ಕಲಿಕೆ ಪೂರ್ಣವಾಗುವವರೆಗೆ ಈ ಕಲಿಕೆಯ ಉಪಯೋಗಗಳೂ ಅವರಿಗೆ ದೊರೆಯುವುದಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು. ಕಲಿಕೆಯನ್ನು ಸ್ವಾರಸ್ಯಕರವಾಗಿ ಮಾಡುವುದು ಹೇಗೆ? ಎಂಬ ಪ್ರಶ್ನೆಯಲ್ಲೇ ಸಾಕ್ಷರತೆಯ ಸೋಲಿಗೆ ಪರಿಹಾರವೂ ಇರಬಹುದೆಂದು ತೋರುತ್ತದೆ.

ಸಾಕ್ಷರತೆಯೇ ನಾವು ಮಾಡಬೇಕಾದ ಸಾಧನೆಯ ಗುರಿಯಲ್ಲ. ಜನರು ತಮ್ಮ ಬಗ್ಗೆ, ತಮ್ಮ ಪರಿಸರದ ಬಗ್ಗೆ ಅರಿಯಲು `ಸಾಕ್ಷರತೆ‘ ಒಂದು ಸಾಧನ. ಈ ಸಾಧನವನ್ನು ಬಳಸಿಕೊಂಡು ಅವರು ತಮ್ಮ ಜ್ಞಾನದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಾಗಲೇ ಗುರಿ ಸಾಧನೆಯಾದಂತೆ. ಆದರೆ, ಅಕ್ಷರ ಜ್ಞಾನವಿರುವ ಮಂದಿಯೆಲ್ಲಾ ನಿರೀಕ್ಷಿಸಿದಷ್ಟು ಜ್ಞಾನಗಳಿಸದಿರುವುದು ಹಾಗಿರಲಿ, ಬಹುತೇಕ ಮಂದಿ ಓದುವುದೇ ಇಲ್ಲ. ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರೊಬ್ಬರು ಕೇವಲ ಕಾಲಹರಣಕ್ಕಾಗಿ ಅಂಗಡಿಯನ್ನು ತೆರೆದರಂತೆ. ಈ ಉದಾಹರಣೆಯನ್ನು ಹೇಳಿದ ಪ್ರೊ. ಡಿ.ಎಲ್.ಎನ್. ಅವರು, “ನಮ್ಮ ದೇಶದಲ್ಲಿ ಪದಧರ ಅನಕ್ಷರಸ್ಥರು (ಓದುಬರಹಕ್ಕೆ ಒಗ್ಗಿಕೊಳ್ಳದವರು) ಹೆಚ್ಚುತ್ತಿದ್ದಾರೆ‘’ ಎಂದು ವಿಷಾದಿಸಿದರಂತೆ. ಎಲ್ಲವನ್ನೂ ಮಾತಿನಿಂದಲೇ ಗ್ರಹಿಸ ಹೊರಡುವ ಶ್ರೋತ್ರೀಯರು ನಾವು.

ಅಕ್ಷರ ಕಲಿಕೆಯಷ್ಟೇ ತುರ್ತಾಗಿ, ಜನಗಳಿಗೆ ವಿಜ್ಞಾನ ಕಲಿಕೆಯೂ ಆಗಬೇಕಾಗಿದೆ ಎಂಬುದಕ್ಕೆ ಜನವಿಜ್ಞಾನದ ಚಳುವಳಿಗಳು ಕೈಗೊಂಡಿರುವ ಸಾಕ್ಷರತಾ ಕಾರ್ಯಕ್ರಮವೇ ಸಾಕ್ಷಿ. ಸಾರ್ವಜನಿಕರಿಗೆ ಸರಿಯಾದ ನಾಯಕರನ್ನು ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಕೊಟ್ಟಿರುವ ನಾವು ಅನೇಕ ವೈಜ್ಞಾನಿಕ ವಿಷಯಗಳ ಬಗೆಗೆ ಯಾರ ಅಭಿಪ್ರಾಯ ಸರಿ ಎಂದು ವಿವೇಚಿಸುವ ಸಾಮರ್ಥ್ಯವನ್ನು ನೀಡಬೇಡವೇ? ಗ್ರಾಹಕರಾಗಿ ಶ್ರೀಸಾಮಾನ್ಯರು ಬಳಸುವ ಅನೇಕ ಪದಾರ್ಥಗಳ ಬಳಕೆಯ ವಿಧಾನಗಳು ವೈಜ್ಞಾನಿಕ ತತ್ತ್ವಗಳನ್ನು ಆಧರಿಸಿದವು. ಇವುಗಳ ಬಳಕೆಯನ್ನು ಕುರಿತು ಅವರಿಗೆ ಮಾಹಿತಿ ನೀಡಬೇಡವೇ? ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಯಾವ ಗೊಬ್ಬರವನ್ನು, ಎಷ್ಟು ಪ್ರಮಾಣದಲ್ಲಿ, ಯಾವಾಗ, ಯಾವ ವಿಧಾನದಲ್ಲಿ ಸೇರಿಸಬೇಕೆಂಬುದರ ಬಗೆಗೆ ಮಾಹಿತಿ ಸಿಗುತ್ತಿಲ್ಲವೆನ್ನುವುದೂ ನಿಜ. ಮೂಲ ವೈಜ್ಞಾನಿಕ ಅಂಶಗಳು ಗೊತ್ತಿಲ್ಲದಿರುವುದರಿಂದ ಗ್ರಾಹಕರು ಕಲಬೆರಕೆ ವಸ್ತುಗಳನ್ನು ಕೊಳ್ಳುತ್ತಿದ್ದಾರೆ; ತಾವು ತೆರುತ್ತಿರುವ ಬೆಲೆ ದುಬಾರಿ ಎಂದು ಅವರಿಗೆ ತಿಳಿಯದು. ತಮ್ಮ ಜೀವನ ಕ್ರಮದಿಂದಾಗಿ ಪರಿಸರದ ಮೇಲಾಗುತ್ತಿರುವ ಪರಿಣಾಮವಾಗಲಿ, ಅವರಿಗೇ ಆಗುತ್ತಿರುವ ತೊಂದರೆಗಳಾಗಲಿ ತಿಳಿಯದವರಾಗಿದ್ದಾರೆಂದರೆ ಅದಕ್ಕೆ ವೈಜ್ಞಾನಿಕ ಅನಕ್ಷರತೆ ಕಾರಣ.

ಈ ಸಂದಿಗ್ಧ ಸಮಯದಲ್ಲಿ `ಜನರು ಅಕ್ಷರಸ್ಥರಾಗಲಿ; ಅನಂತರ ಅವರಿಗೆ ವಿಜ್ಞಾನ ಕಲಿಸಿದರಾಯಿತು‘ ಎಂದು ಕೈಕಟ್ಟಿ ಕೂಡುವುದು ಸಾಧ್ಯವೇ? ಸಾಕ್ಷರತಾ ಕಾರ್ಯಕ್ರಮವೇ ನಿಧಾನಗತಿಯಲ್ಲಿರುವುದರಿಂದ ವಿಜ್ಞಾನದ ಕಲಿಕೆ ಪ್ರಾರಂಭವಾಗುವುದು ಯಾವಾಗ?

ಎಲ್ಲ ಸಮಸ್ಯೆಗಳಿಂದಾಗಿ `ವೈಜ್ಞಾನಿಕ ಸಾಕ್ಷರತೆ ಪ್ರಸ್ತುತದ ಅಗತ್ಯವಾಗಿ ಪರಿಣಮಿಸಿದೆ.

ಕಲಿಯುವವರು ಅನಕ್ಷರಸ್ಥರಾಗಿರುವುದರಿಂದ ಅವರಿಗೆ ವಿಜ್ಞಾನದ ಅಗತ್ಯವಿದೆಯೆಂಬ ಕಾರಣದಿಂದ ವಿಜ್ಞಾನ ಕಲಿಸಲು ಹೊರಟರೆ, ಅವರು ಕಲಿಯುವುದು ಸಾಧ್ಯವೇ? ಎಂಬ ಪ್ರಶ್ನೆಗೆ ಬಹಳ ಜನರು ನಕಾರಾತ್ಮಕ ಉತ್ತರ ಹೇಳುವರು. ಆದರೆ ಇದಕ್ಕೆ ಸಕಾರಾತ್ಮಕ ಉತ್ತರವೂ ಸಾಧ್ಯ. ಆಗ ನಾವು ಜನರಿಗೆ ಕಲಿಸಬೇಕಾದ `ವಿಜ್ಞಾನ‘ದ ಸ್ವರೂಪ ಹಾಗೂ ವಿಧಾನಗಳನ್ನು ಸೂಕ್ತವಾಗಿ ಮಾರ್ಪಾಡು ಮಾಡಿಕೊಳ್ಳಬೇಕಾಗುತ್ತದೆ.

ತತ್ತ್ವಶಾಸ್ತ್ರದ ಮೂಲಾಂಶಗಳನ್ನು ಸರಳ ಉದಾಹರಣೆಗಳ ಮೂಲಕ ಕಾವ್ಯ ಭಾಷೆಯ `ಕಾಂತಾ ಸಮ್ಮಿತಿ‘ಯಲ್ಲಿ ಕೇವಲ ಮೌಖಿಕವಾಗಿ ಸಂವಹನ ಮಾಡಬಹುದಾದರೆ ವಿಜ್ಞಾನದ ಮೂಲಾಂಶಗಳನ್ನು ಸಂವಹನದ ಮೂಲಕ ಮಾಡಲು ಸಾಧ್ಯವಿದ್ದೇ ಇದೆ. ನಾವು ಕಲೆ ಹಾಕಿರುವ ಮಾಹಿತಿಯಲ್ಲಿ ಮೌಖಿಕವಾಗಿ ಪಡೆದದ್ದೆಷ್ಟು? ಅಧ್ಯಯನದಿಂದ ಪಡೆದದ್ದೆಷ್ಟು? ಎಂದು ಪ್ರಶ್ನೆ ಹಾಕಿಕೊಂಡರೆ ಸಾಕು; ಮೌಖಿಕ ಸಂವಹನ ನಾವು ಭಾವಿಸಿರುವಷ್ಟು ಅಸಾಧ್ಯವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕರಾವಿಪದ ಚಟುವಟಿಕೆಗಳಲ್ಲಿ ಭಾಗವಹಿಸುವ ಮೊದಲು ನಮಗೂ ಈ ಬಗೆಯ ಸಂದೇಹಗಳು ಇದ್ದಿದ್ದು ನಿಜ. ಆದರೆ ಶ್ರೀಸಾಮಾನ್ಯರಿಗೆ ಮಾಹಿತಿಯನ್ನು ಒದಗಿಸುವಲ್ಲಿನ ಅನೇಕ ಪ್ರಯತ್ನಗಳ ಸಫಲತೆಯ ಪರಿಣಾಮವಾಗಿ ಮೌಖಿಕ ಸಂವಹನವನ್ನು ವಿಜ್ಞಾನಕ್ಕೂ ಅನ್ವಯಿಸುವ ಪ್ರಯತ್ನ ಸಮಸ್ಯೆಯಾಗದೆ ಕಾರ್ಯಸಾಧ್ಯ ಸವಾಲಾಗಿ ತೋರುತ್ತಿದೆ. ವೈಜ್ಞಾನಿಕ ಸಾಕ್ಷರತಾ ಕಾರ್ಯಕ್ರಮವನ್ನು ಸಾಕ್ಷರರಿಗೆ, ಅನಕ್ಷರಸ್ಥರಿಗೆ ಬೇರೆ ಬೇರೆಯಾಗಿ ರೂಪಿಸಬೇಕಾಗುತ್ತದೆ.

ವೈಜ್ಞಾನಿಕ ಸಾಕ್ಷರತೆ ಎಂದರೇನು?

ಅಕ್ಷರಜ್ಞಾನವು ಕಲಿಕೆಗೆ ಪ್ರಾರಂಭ ಬಿಂದು. ಓದುಬರಹದ ಮೂಲಕ ಜ್ಞಾನಾರ್ಜನೆಗೆ ಸಹಕಾರಿ. ಅಂತೆಯೇ ಶ್ರೀಸಾಮಾನ್ಯರು ತಮ್ಮ ಜೀವನಕ್ರಮದಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ, ತಮ್ಮ ವೃತ್ತಿಯಲ್ಲಿ ಕೈಗೊಳ್ಳಲಿರುವ ಅನೇಕ ಕಾರ್ಯಗಳ ಹಿಂದೆ ಅಂತರ್ಗತವಾಗಿರುವ ವೈಜ್ಞಾನಿಕ ತತ್ತ್ವಗಳಿರುವುವು. ಅವುಗಳನ್ನು ಜನರಿಗೆ ತಾಂತ್ರಿಕವಲ್ಲದ ಭಾಷೆಯಲ್ಲಿ ಮನನ ಮಾಡಿಕೊಡುವುದರಿಂದ ಅವರ ಕಾರ್ಯ ದಕ್ಷತೆ ಹೆಚ್ಚುತ್ತದೆ; ಅವರ ಕುತೂಹಲ ಕೆರಳುತ್ತದೆ. ಈ ಕಲಿಕೆ, ಅವರನ್ನು ಮತ್ತಷ್ಟು ಕಲಿಯಲು ಪ್ರಚೋದಕವಾಗಿಯೂ ಪರಿಣಮಿಸಬಹುದು. ಅನೇಕ ವೇಳೆ ಆಗುವ ಅಪವ್ಯಯ, ಅನಾಹುತಗಳನ್ನು ತಪ್ಪಿಸಲು ಇದು ಸಹಾಯವಾಗುವುದಲ್ಲದೆ ಪ್ರಶ್ನಿಸುವ ಪ್ರವೃತ್ತಿಗೆ ಪೂರಕವಾಗುವುದು.

ವೈಜ್ಞಾನಿಕ ಸಾಕ್ಷರತೆಯನ್ನು ಸಾಧಿಸಲು ಆಯ್ಕೆ ಮಾಡುವ ವಿಷಯಗಳು ಕೆಲವೊಮ್ಮೆ ವಿಭಿನ್ನ ವೃತ್ತಿಪರರಿಗೆ ಬೇರೆ ಬೇರೆಯಾಗಿರಬೇಕಾಗುವುದಾದರೂ ಕೆಲವು ಸಾಮಾನ್ಯ ವಿಷಯಗಳೂ ಇರುವುದುಂಟು.

ಕಾರ್ಡ್‌ಬೋರ್ಡ್ ತೆಳ್ಳಗಿದ್ದರೂ ಹಲಗೆಯಷ್ಟೇ ದೃಢವಾಗಿರುವುದೇಕೆ? ಎಂಬುದು ಬಡಗಿ ವೃತ್ತಿಯವರಿಗೆ ಉಪಯುಕ್ತ, ಆದರೆ ಗೃಹಿಣಿಯರಿಗೆ ಅಷ್ಟಾಗಿ ಅಲ್ಲ. ಅದೇ ರೀತಿ ಪಾತ್ರೆ ತೊಳೆಯುವುದು ಎಷ್ಟು ಮುಖ್ಯವೋ ಅದನ್ನು ಒರೆಸಿಡುವುದೂ (ಪಾತ್ರೆಯ ಆಯಸ್ಸನ್ನು ಹೆಚ್ಚಿಸುವ ಸಲುವಾಗಿ) ಅಷ್ಟೇ ಮುಖ್ಯ ಎನ್ನುವುದು ಗೃಹಿಣಿಯರಿಗೆ ಉಪಯುಕ್ತ; ಆದರೆ ಬಡಗಿಗಲ್ಲ.

ಕಲ್ಲು ತಿನ್ನುವುದರಿಂದ ಮೂತ್ರನಾಳದಲ್ಲಿ ಕಲ್ಲು ಕಾಣಿಸಿಕೊಳ್ಳುವುದೆಂಬುದು ನಿಜವೇ? ಸಿಹಿಯನ್ನು ಹೆಚ್ಚಾಗಿ ತಿನ್ನುವುದರಿಂದ ಸಿಹಿ ಮೂತ್ರ ರೋಗ ಬರುವ ಸಾಧ್ಯತೆ ಹೆಚ್ಚಾಗುವುದೇ? ಕೋಳಿ ಉಚ್ಚೆ ಹುಯ್ಯುವುದಿಲ್ಲವೇಕೆ? ಎಂಬ ಪ್ರಶ್ನೆಗಳು ಎಲ್ಲ ವರ್ಗದವರಿಗೂ ಆಕರ್ಷಕವಾಗಿ ತೋರಬಹುದು.

ವಿಷಯದ ಆಯ್ಕೆ

ವೈಜ್ಞಾನಿಕ ಸಾಕ್ಷರತೆಗೆ ವಿಷಯವನ್ನು ಆಯ್ಕೆ ಮಾಡುವಾಗ ಈ ಅಂಶಗಳನ್ನು ಲಕ್ಷ್ಯದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ಅ) ಆಯ್ಕೆ ಮಾಡುವ ವಿಷಯ ಶ್ರೋತೃವಿನ ಅನುಭವದ ವ್ಯಾಪ್ತಿಗೆ ಬರುವಂತಹದಾಗಿರಬೇಕು.

ಆ) ವಿಷಯವನ್ನು ಮೌಖಿಕವಾಗಿ ಕನಿಷ್ಠ ಬರವಣಿಗೆಯೊಂದಿಗೆ ನಿರೂಪಿಸಲು ಸಾಧ್ಯವಾಗುವಂತಿರಬೇಕು.

ಇ) ವಿಷಯ, ಕಲಿತ ವ್ಯಕ್ತಿಯ ಕುತೂಹಲ ತಣಿಸುವಂತಿರಬೇಕು ಅಥವಾ ತನ್ನ ಕಲಿಕೆಯನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅನ್ವಯಿಸಿಕೊಳ್ಳುವಂತಿರಬೇಕು.

ಈ) ಕಲಿಯುವವರ ಅನುಭವವನ್ನು ಆಧರಿಸಿಯೋ ಇಲ್ಲವೇ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಕೆ ಮಾಡಿ ನಡೆಸಿದ ಪ್ರಯೋಗಗಳ ಮೂಲಕವೋ ವಿಷಯದಲ್ಲಿನ ಅಂಶಗಳನ್ನು ಸಮರ್ಥಿಸುವುದು ಸಾಧ್ಯವಾಗಬೇಕು.

ಉ) ತಾಂತ್ರಿಕವಲ್ಲದ ಭಾಷೆ, ಸುಲಭವಾದ ತರ್ಕಗಳಿಂದ ತಿಳಿಯಪಡಿಸಲು ಸಾಧ್ಯವಾಗಬೇಕು.

ಊ) ಅಮೂರ್ತ ಮಟ್ಟದ ವಿಷಯಗಳನ್ನು ಮೂರ್ತಗೊಳಿಸಿ ಜನರು ಚಿಂತನೆಯಲ್ಲಿ ಭಾಗವಹಿಸುವಂತೆ ಮಾಡಬೇಕು.

ಋ) ಸಾಮಾನ್ಯ ಜ್ಞಾನಕ್ಕೆ ಭಿನ್ನವಾದ ಫಲಿತಾಂಶ ಕೊಡುವ ಸರಳ ಪ್ರಯೋಗಗಳಿಂದ ಜನರ ನಂಬಿಕೆಯನ್ನು ಹುಸಿಮಾಡುವ ಪ್ರಯೋಗಗಳು, ಪ್ರಶ್ನೆಗಳು ಜನರ ಮನಸ್ಸನ್ನು ಹಿಡಿದಿಡಲು ಉಪಯುಕ್ತವಾಗಬಲ್ಲವು. ಜನಗಳೇ ಸ್ವತಃ ಮಾಡುವಂತಹ ಸರಳ ಪ್ರಯೋಗಗಳಿದ್ದರೆ ಇನ್ನೂ ಉತ್ತಮ.

ೠ) ತಪ್ಪು ಹೆಜ್ಜೆಗಳ ಮೂಲಕವಾದರೂ ಸರಿ, ಸರಿಯಾದ ತೀರ್ಮಾನವನ್ನು ಚರ್ಚೆಯ ಮುಖಾಂತರ ಬರಬೇಕೇ ವಿನಾ ದಿಡೀರ್ ತೀರ್ಮಾನ ತುರುಕಬಾರದು. ತೀರ್ಮಾನ ಚಿಂತನೆಗೆ ಪೂರ್ಣ ವಿರಾಮ.

ಅನೇಕ ವೇಳೆ ಕೆಲವು ಪ್ರಶ್ನೆಗಳನ್ನು ಆಯ್ಕೆ ಮಾಡಿ ಅವುಗಳಿಗೆ ಉತ್ತರ ನೀಡುತ್ತಾ ಆತ್ಮೀಯ ವಾತಾವರಣವನ್ನು ಸೃಷ್ಟಿಸಿದ್ದೇ ಆದರೆ, ಪ್ರಶ್ನೆಗಳು ಕೇಳುಗರಿಂದಲೇ ಬರತೊಡಗುವುವು. ಅವರೇ ಕೇಳಿದ ಪ್ರಶ್ನೆಯಾದರೆ ಕೇಳುಗರು ಕಾತರದಿಂದ ಕಲಿಯುವರು. ಅನೇಕ ವೇಳೆ ನಾವು ಹೇಳಬೇಕೆಂದಿರುವ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕಲಿಯುವವರಿಂದಲೇ ಪಡೆಯಲು ಸಾಧ್ಯ.

ಉತ್ತರ ಖಚಿತವಾಗಿ ಗೊತ್ತಿಲ್ಲದ ಪಕ್ಷದಲ್ಲಿ ಪ್ರಶ್ನೆಗಳಿಗೆ ಉತ್ತರವನ್ನು ಅನಂತರ ಹೇಳುವುದಾಗಿ ಒಪ್ಪಿಕೊಳ್ಳುವುದು; ಎಂತಹ ಅರ್ಥಹೀನ ಪ್ರಶ್ನೆ ಬಂದಾಗಲೂ ಪ್ರಶ್ನಿಸಿದವರ ಉತ್ಸಾಹ ಭಂಗಮಾಡದಿರುವುದು ಅಗತ್ಯ. ಅವರು ಹಾಗೆ ಅರ್ಥಹೀನ ಪ್ರಶ್ನೆ ಕೇಳಲು ನಾವೇ ಅನೇಕ ವೇಳೆ ಕಾರಣರಾಗಿರುತ್ತೇವೆಂಬುದು ಗಮನಿಸಬೇಕಾದ ಅಂಶ.

ನಿರೂಪಣಾ ತಂತ್ರ

ನಿರೂಪಣಾ ತಂತ್ರವನ್ನು ಈ ರೀತಿ ಸಂಗ್ರಹಿಸಬಹುದು.

ಅ) ಪ್ರಶ್ನೋತ್ತರ ಅಧಿವೇಶನ

ಆ) ಸಾಮೂಹಿಕ ಚರ್ಚೆ

ಇ) ಸೋದಾಹರಣ ಭಾಷಣ

ಈ) ಆಕರ್ಷಕ ಪ್ರಯೋಗಗಳು; ಆಟಿಕೆಗಳು

ಉ)  ಕಲೆ, ಕ್ರೀಡೆ ಮೊದಲಾದ ವಿಧಾನಗಳು

ಊ) ಕನಿಷ್ಠ ಬರಹಗಳಿರುವ ಭಿತ್ತಿ ಚಿತ್ರಗಳು, ಪುಸ್ತಕಗಳು

ವೈಜ್ಞಾನಿಕ ಸಾಕ್ಷರತೆಯೆಂದರೆ ಅನೌಪಚಾರಿಕ ವಿಜ್ಞಾನ ಶಿಕ್ಷಣವಷ್ಟೇ. ಈ ಶಿಕ್ಷಣದ ವಿಷಯಗಳು ಹೇಗೆ ಭಿನ್ನವೋ ನಿರೂಪಣಾಕ್ರಮವೂ ಅಷ್ಟೇ ಭಿನ್ನ. ಇಲ್ಲಿ ಕಲಿಕೆಯಲ್ಲಿ ಭಾಗವಹಿಸುವವರು ಶಾಲಾ ವಿದ್ಯಾರ್ಥಿಗಳಿಗಿಂತ ಹೇಗೆ ಭಿನ್ನರು ಎಂಬುದನ್ನು ತೌಲನಿಕವಾಗಿ ನಿರೂಪಿಸಲಾಗಿದೆ.

ಶಾಲಾ ವಿದ್ಯಾರ್ಥಿಗಳು ಅನೌಪಚಾರಿಕ ಶಿಕ್ಷಣಾರ್ಥಿಗಳು
1.ಕಲಿಯುವ ಆಸಕ್ತಿ ಹೆಚ್ಚು 1. ಆಸಕ್ತಿ ಚದರಿ ಹೋಗಿರುತ್ತದೆ.
2.ಪೂರ್ವಗ್ರಹಗಳು ಕಡಿಮೆ 2. ಕಲಿಸುವ ವಿಷಯದ ಬಗ್ಗೆ ಈಗಾಗಲೇ ಒಂದು ನಿಲುವು ಇರುವ ಸಾಧ್ಯತೆ ಹೆಚ್ಚು.
3.ಇಲ್ಲಿ ಅಭಿಪ್ರಾಯ ಸಂಗ್ರಹವಾಗುವುದು. 3. ಇಲ್ಲಿ ಅಭಿಪ್ರಾಯಗಳ ಪಲ್ಲಟನ; ಇದರಿಂದಾಗಿ ಚರ್ಚೆಗೆ ಆಸ್ಪದ ಇದೆ.
4.ಪರೀಕ್ಷೆಯ ಭಯದಿಂದ ಸ್ವಲ್ಪ ಮಟ್ಟಿಗೆ ಕಲಿಯುವ ಕಾತರವಿರುತ್ತದೆ. 4. ಕಲಿಯುವ ಕಾತರವಿದ್ದರೂ ಆಗಿಂದಾಗ್ಗೆ ಅವರ ಗಮನವನ್ನು ಸೆಳೆಯಬೇಕಾಗುತ್ತದೆ.
5.ವಿದ್ಯಾರ್ಥಿಗಳ ಸಂಖ್ಯೆ, ಪ್ರತಿಕ್ರಿಯೆಯ ವೈವಿಧ್ಯ ಕಡಿಮೆ. 5. ಸಂಖ್ಯೆ, ಅನುಭವ ಹಿನ್ನೆಲೆಯ ಭಿನ್ನತೆಗಳೆರಡೂ ಹೆಚ್ಚು. ಪ್ರತಿಕ್ರಿಯೆ ಸಹಜವಾಗಿಯೇ ವಿಭಿನ್ನ.

ವಿದ್ಯಾರ್ಥಿ ಕೇಂದ್ರಿತ ಕಲಿಕೆಯ ಮಾತು ಔಪಚಾರಿಕ ಶಿಕ್ಷಣದಲ್ಲೂ ಈUಗ ಕೇಳಿಬರುತ್ತಿದೆ. ಅನೌಪಚಾರಿಕ ಶಿಕ್ಷಣದಲ್ಲಿ ಇದು ಅನಿವಾರ್ಯ, ಅನುಭವದಿಂದಲೇ ಎಲ್ಲ ಕಲಿಕೆ ಆರಂಭಗೊಂಡು ಅನುಭವದ ವ್ಯಾಪ್ತಿಯಲ್ಲೇ ತಿಳಿಯುವಂತೆ ಹೇಳಬೇಕಾಗುತ್ತದೆ.

ಈ ನಿರೂಪಣಾ ತಂತ್ರಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ಪರಿಶೀಲಿಸಬಹುದಾಗಿದೆ.

ಪ್ರಶ್ನೋತ್ತರ ಅಧಿವೇಶನಗಳು

ಶೀರ್ಷಿಕೆಯೇ ಹೇಳುವಂತೆ ಈ ಕಾರ್ಯಕ್ರಮದಲ್ಲಿ ಶ್ರೋತೃಗಳನ್ನು ಪ್ರಶ್ನೆಗಳನ್ನು ಕೇಳಲು ಪ್ರೋ‌ಆ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಲಾಗುವುದು. ಆದರೆ ಪ್ರಶ್ನೆ ಕೇಳುವ ಸಲಿಗೆಯಾಗಲೀ, ಪ್ರಶ್ನೆ ಹಾಕಲು ಪ್ರಚೋದನೆಯಾಗಲೀ ಒಮ್ಮೆಗೇ ಬರುವುದಿಲ್ಲ. ಅದಕ್ಕಾಗಿ ಕಾರ್ಯಕ್ರಮದ ಆರಂಭದಲ್ಲಿ ಈ ಹಿಂದೆ ಜನರು ಕೇಳಿದ ಪ್ರಶ್ನೆಗಳನ್ನೋ, ಅಥವಾ ಈಗಾಗಲೇ ಜನಪ್ರಿಯತೆಯನ್ನು ಸಾಧಿಸಿರುವ ನಿತ್ಯಜೀವನಕ್ಕೆ ಪ್ರಸಕ್ತವಾದ ಪ್ರಶ್ನೆಗಳನ್ನೋ ನಾವೇ ಹಾಕಿಕೊಂಡು ಅದನ್ನು ವಿವರಿಸಿ, “ಈ ಮಾದರಿಯ ಪ್ರಶ್ನೆಗಳನ್ನು ನೀವೂ ಕೇಳಬಹುದಲ್ಲವೇ?’’ – ಎಂದು ಆಗಿಂದಾಗ್ಗೆ ಸೂಚನೆ ನೀಡುತ್ತಿದ್ದರೆ ಪ್ರಶ್ನೆಗಳು ಮೊದಮೊದಲು ಕಡಿಮೆ ಪ್ರಮಾಣದಲ್ಲಿ ಆರಂಭವಾಗಿ ಅನಂತರದಲ್ಲಿ ಹೆಚ್ಚಾಗುತ್ತಾ ಹೋಗುವುವು.

ಉತ್ತರ ಹೇಳುವ ಪರಿಣತರು ವೇಷದಲ್ಲಿಯಾಗಲಿ, ಭಾಷೆಯಲ್ಲಾಗಲಿ, ತಮ್ಮವರೆಂದು ಸಾಮಾನ್ಯರು ಗುರುತಿಸಿಕೊಳ್ಳುವಂತೆ ಸರಳವಾಗಿರಬೇಕು – ಉತ್ತರ ನೀಡುವಾಗ ಪಾರಿಭಾಷಿಕ ಪದಗಳೇನಾದರೂ ಬಂದಲ್ಲಿ ಅದನ್ನು ಸರಳವಾದ ಭಾಷೆಯಲ್ಲಿ ವಿವರಿಸಬೇಕು. ಹೇಳುವ ಉತ್ತರವನ್ನು ಹೊಸ ಮಾದರಿ ಪ್ರಶ್ನೆಗಳಿಗೆ ಉತ್ತರಿಸಿದಂತೆ ಒಂದೇ ಸಾಲಿನಲ್ಲಿ ಹೇಳಿ ಮುಗಿಸಬಾರದು. ಆ ಪ್ರಶ್ನೆಗೆ ಸಂಬಂಧಿಸಿದ ವಿವರವನ್ನು ವಿಷಯಕ್ಕೆ ಸಮೀಪಿಸಿರುವ ಇತರ ಮಾಹಿತಿಯನ್ನು ಸರಸವಾದ ಭಾಷೆಯಲ್ಲಿ ನಿರೂಪಿಸಬೇಕು. ನಿರೂಪಣೆಯಲ್ಲಿ ಆಗಿಂದಾಗ್ಗೆ ದಿನನಿತ್ಯದ ಅನುಭವದ ಉದಾಹರಣೆಯನ್ನು ತೆಗೆದುಕೊಳ್ಳಬೇಕು. ಪ್ರಶ್ನೆಯ ಸ್ವಾರಸ್ಯವನ್ನು ವಿವರಿಸಬೇಕು. ಮಾದರಿಗೆ ಒಂದು ಉದಾಹರಣೆಯನ್ನು ಗಮನಿಸೋಣ.

ಪ್ರಶ್ನೆ : ತೆಂಗಿನ್ಮರದಾಗೆ ಅದ್ಹೆಂಗೆ ಕಾಯ್ತುಂಬ ನೀರು ತುಂಬ್ಕೋತದೆ?

ಉತ್ತರ : ಪ್ರಶ್ನೆ ಸ್ವಾರಸ್ಯವಾಗಿದೆ. ಮೇಲಿನಿಂದ ಮಳೆ ಹನಿ ತನಗೆ ತಾನೇ ಕೆಳಗೆ ಬೀಳುವುದೇನೋ ಸರಿ. ಆದರೆ ತನಗೆ ತಾನೇ ಮೇಲೇರಿದ್ದಾದರೂ ಹೇಗೆ? ಇದನ್ನೇ ಸರ್ವಜ್ಞನೂ ಕೇಳಿದ್ದಾನೆ “ಇಂಗಿನೊಳು ನಾತವನು, ತೆಂಗಿನೊಳಗೆಳನೀರ, ಭೃಂಗ ಕೋಕಿಲೆಗಳ ಕಂಠದಿ ಗಾಯನವ ತುಂಬಿದವರಾರು ಸರ್ವಜ್ಞ? ಎಂದು. ಇಲ್ಲಿ ಗಮನಿಸಬೇಕಾಗಿರುವ ಅಂಶ ಮತ್ತೊಂದಿದೆ. ಕೇವಲ ತೆಂಗಿನಮರವೇ ಅಲ್ಲದೆ ಇತರ ಸಸ್ಯಗಳಲ್ಲಿಯೂ ನೀರು ಮೇಲೇರುತ್ತಲೇ ಇರುತ್ತದೆ. ಅದಕ್ಕಾಗಿಯೇ ಸಸ್ಯದ ಎಲೆಗಳು ಬಾಡುವುದಿಲ್ಲ. ಎಳನೀರಿನಲ್ಲಿ ನೀರು ಅಗಾಧವಾಗಿ ಶೇಖರವಾಗಿದೆ; ಅಷ್ಟೇ.

ಇದಕ್ಕೆ ನೀರಿನ ಅಂಟುಗುಣ ಮೊದಲಿನ ಕಾರಣ (ಹಣ ಎಣಿಸುವಾಗ ನೀರನ್ನು ಕೈಗೆ ಮೆತ್ತಿಕೊಳ್ಳುವ ಉದಾಹರಣೆಯನ್ನು ಜ್ಞಾಪಕ ಮಾಡಿ ವಿವರಿಸಬಹುದು). ಎರಡನೆಯದು ಲೋಮನಾಳದ ಏರಿಕೆ (ಬತ್ತಿ ಸ್ವವ್‌ನಲ್ಲಿ ಸೀಮೆ ಎಣ್ಣೆ ಏರುವುದನ್ನು ಉದಾಹರಿಸಬಹುದು). ಮೂರನೆಯದು ಪರಾಸರಣ.

ಪ್ರಶ್ನೋತ್ತರ ಅಧಿವೇಶನವನ್ನು ನಿಯತಕಾಲಿಕವಾಗಿ ನಡೆಸಿದರೆ, ಹಿಂದಿನ ಚರ್ಚೆಗೆ ಪೂರಕವಾಗಿ ಪ್ರಯೋಗಗಳನ್ನು ನಡೆಸಿ ಹೆಚ್ಚಿನ ಮಾಹಿತಿ ನೀಡಿ ಮುಂದುವರಿಯಲು ಅವಕಾಶವಿದೆ.

ಈಗಾಗಲೇ ಸ್ಥಾಪಿತವಾಗಿರುವ ವಯಸ್ಕ ಶಿಕ್ಷಣ ಶಾಲೆಗಳಲ್ಲಿ, ರೈತ ಯುವಕ ಕೇಂದ್ರಗಳಲ್ಲಿ, ಈ ಪ್ರಯತ್ನ ನಡೆಸಬಹುದಾಗಿದೆ. ಸಾಕ್ಷರತಾ ಶಾಲೆಗಳಲ್ಲಿ ಇರುವ ಕಡಿಮೆ ಹಾಜರಿಯ ಪರಿಸ್ಥಿತಿ ಸುಧಾರಿಸಲು ಈ ಬಗೆಯ ವಿಚಾರವಿನಿಮಯ ಪೂರಕವಾಗಬಲ್ಲದೆಂಬುದರಲ್ಲಿ ಸಂದೇಹವೇ ಇಲ್ಲ. ಕರಾವಿಪ ಘಟಕಗಳಿಗೆ ಇದೊಂದು ಕನಿಷ್ಠ ವೆಚ್ಚದ, ಗರಿಷ್ಠ ಆಕರ್ಷಣೆಯ ಕಾರ್ಯಕ್ರಮವಾಗಬಲ್ಲದು.

ಇಂತಹ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಕಲಿಸಹೊರಟವರ ವಿಚಾರ ಕ್ರಮ, ನಿರೂಪಣಾ ಶೈಲಿ, ಜನಪ್ರಿಯವಾಗಿ ನಿರೂಪಿಸಬಲ್ಲ ಸಾಮರ್ಥ್ಯ ಹೆಚ್ಚುತ್ತದೆಂಬುದು ನನ್ನ ಸ್ವಾನುಭವದ ಸಂಗತಿ. ಬೋಧಕ – ಕಲಿಯುವವರು ಒಟ್ಟಿಗೆ ಕಲಿಯಲು ಇಲ್ಲಿ ಆಸ್ಪದವಿರುತ್ತದೆ. ಉದಾ : ಕಬ್ಬಿಣದ ಮಾತ್ರೆ ತಿಂದರೆ ಮಕ್ಕಳು ಕಪ್ಪಗೆ ಹುಟ್ಟುವರೆಂಬ ನಂಬಿಕೆ ಪ್ರಚಲಿತವಿದೆ ಎಂದು ನಾನು ತಿಳಿದದ್ದು ಇಂತಹ ಪ್ರಶ್ನೋತ್ತರದ ಅವಧಿಯಲ್ಲಿಯೇ!

ಅನೇಕ ವೇಳೆ ಕಾರ್ಯಕ್ರಮದ ಗಂಭೀರತೆಯನ್ನು ಕಳೆಯಲು, ಕೇವಲ ವಿಷಯಾಂತರಗೊಳಿಸಲು ಪ್ರಶ್ನೆಗಳನ್ನು ಕೇಳುವುದುಂಟು. ಆಗ ಪ್ರಶ್ನೆಗಳನ್ನು ನಿರಾಕರಿಸದೆ ಬಹಳ ಮುತ್ಸದ್ದಿತನದಿಂದ ಉತ್ತರ ಹೇಳಿ ಮುಂದಿನ ಪ್ರಶ್ನೆಗಳಿಗೆ ಸಾಗಬೇಕಾಗುತ್ತದೆ. ಕೆಲವೊಮ್ಮೆ ಪ್ರಶ್ನೆಗಳು ನೆನೆಗುದಿಗೆ ಬಿದ್ದಾಗಲೂ ಈ ತಂತ್ರವನ್ನೇ ಅನುಸರಿಸಬೇಕಾಗುತ್ತದೆ. ಉದಾಹರಣೆ : ಒಬ್ಬಾತ ದೆವ್ವವನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದಾಗ ನೀವು ಅವನೊಡನೆ ಇಲ್ಲವೆಂದು ವಾದಿಸಿ ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಅದು ಅವನ ಖಾಸಗಿ ಅನುಭವವಾಗಿರುವುದೆಂದು ಬುಡದಿಂದಲೇ ನಿರಾಕರಿಸಲೂ ಬರುವುದಿಲ್ಲ. ಹಾಗೆಂದು ಆತನ ಮುಖ ಮುರಿಯುವಂತೆ ಮಾತನಾಡಿ, ಇಲ್ಲವೆ ಗೇಲಿ ಮಾಡಿ ಕಷ್ಟಪಟ್ಟು ಸಾಧಿಸಿಕೊಂಡಿರುವ ಸಂಬಂಧವನ್ನು ನಷ್ಟಮಾಡಿಕೊಳ್ಳುವುದು ಅಪೇಕ್ಷಣೀಯವಲ್ಲ. ಇಲ್ಲಿಯೇ ಬೋಧಕನ ಜಾಣ್ಮೆ ಇರುವುದು. ನನಗೆ ಇಂತಹ ಸಮಸ್ಯೆ ಎದುರಾದಾಗ `ದೆವ್ವದ ಅನುಭವ ವಿಷಯಾಂತರ ಮಾಡಿರುವುದೂ ಉಂಟು.

ಸಾಮೂಹಿಕ ಚರ್ಚೆ

ಇಲ್ಲಿ ಬೋಧಕ ಕೇವಲ ನಿರ್ವಾಹಕನಂತೆ ಕೆಲಸ ಮಾಡುವನು. ಯಾವುದಾದರೂ ವಿಷಯ ಒಂದನ್ನು ಸೂಚಿಸಿ ಆ ವಿಷಯದ ಪರಿಧಿಯಲ್ಲಿ ಜನರು ತಮಗೆ ಅನಿಸಿದ ಸಂಗತಿಗಳನ್ನು ಹೇಳಗೊಟ್ಟು ಆ ಹೇಳಿಕೆಗಳನ್ನು ನಿಧಾನವಾಗಿ ಚರ್ಚೆಗೊಳಪಡಿಸಿ ಮಾರ್ಪಾಡು ಮಾಡುವುದು. ಇಂತಹ ಚರ್ಚೆಗಳಿಗೆ ಆಯ್ಕೆ ಮಾಡುವ ವಿಷಯ ಮೂರ್ತವೂ, ಪ್ರಸಕ್ತವೂ ಆಗಿರಬಹುದು. ಉದಾಹರಣೆಗೆ ಸಕ್ಕರೆ ಕಾಯಿಲೆ – ಅದಕ್ಕೆ ಸಂಬಂಧಿಸಿದ ಸರಿಯಾದ ತಪ್ಪಾದ ನಂಬಿಕೆಗಳು ಇತ್ಯಾದಿ.

`ಕಸ‘ಕ್ಕೆ ಸಂಬಂಧಿಸಿದ ಚರ್ಚೆಯನ್ನು ಒಂದು ರೂಪಕಕವಾಗಿಸಿದಾಗ ಅದಕ್ಕೆ ದೊರಕಿದ ಪ್ರೋ‌ಈ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ. ಯಾವ ಜನರಿಗಾಗಿ ನಾವು ವಿಷಯವನ್ನು ಸಿದ್ಧಪಡಿಸಬೇಕಾಗಿದೆಯೋ ಅವರೇ ಸಿದ್ಧಪಡಿಸಿದ ವಿಷಯ ಅವರನ್ನು ಸುಲಭವಾಗಿ ತಲುಪುವುದು.

ಸೋದಾಹರಣ ಭಾಷಣ :

ಒಮ್ಮೆ ಗ್ರಾಮವೊಂದರಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಒಂದು ವಿಚಿತ್ರ ಪ್ರಸಂಗ ನಡೆಯಿತು. “ನಾವು …………………. ವಿಷಯದ ಮೇಲೆ ತಿಳಿವಳಿಕೆ ಕೊಡೋಣವೆಂದಿದ್ದೇವೆ ಏನಂತೀರಿ‘’ ಎಂದು ಕೇಳಿದಾಗ ಒಬ್ಬ ಗ್ರಾಮಸ್ಥರು “ಯಾರ್ಯಾರೋ ಏನೇನೋ ಏಳಿ ಓಗ್ತಿರ್ತಾರೆ. ನೀವು ಏಳಿ ಓಗಿಸ್ವಾಮಿ; ನಿಮಗ್ಯಾಕೆ; ಪಾಪ, ಬೇಜಾರು ಮಾಡೋಣ‘’ ಎಂದು ಹೇಳಿದರು. ಮಾತು, ಭಾಷಣವೆಂದರೆ ಎಲ್ಲರಿಗೂ ಬೇಸರವೇ. ಹಾಗೆಂದು ಸಂಭಾಷಣೆಯನ್ನೇ ನಿಲ್ಲಿಸಿ ವ್ಯವಹರಿಸುವುದೂ ಸಾಧ್ಯವಿಲ್ಲ. ಇಂದಿಗೂ ಅನಕ್ಷರಸ್ಥರನ್ನು ತಲುಪಲು (ಅನೇಕ ವೇಳೆ ಇದು ಅಕ್ಷರಸ್ಥರಿಗೂ ಅನ್ವಯಿಸುವುದುಂಟು) ಭಾಷಣದ ಮಾಧ್ಯಮವು ಅನಿವಾರ್ಯ. ಇದು ಸುಲಭ ವಿಧಾನವಲ್ಲದಿದ್ದರೂ ಅಗ್ಗದ ವಿಧಾನ. ಮಾತುಗಾರಿಕೆಯನ್ನು ಹೆಚ್ಚು ಎಚ್ಚರವಾಗಿ, ವಿಚಕ್ಷಣೆಯಾಗಿ ನಡೆಸಬೇಕಾಗುತ್ತದೆ ಎಂಬುದು ನಿರ್ವಿವಾದ.

ವಿಷಯದ ಭಾವುಕ ನಿರೂಪಣೆ, ವಿಷಯದ ಅನ್ವಯಗಳು, ಒಗಟಿನ ಮಾದರಿಯಲ್ಲಿ ಸಮಸ್ಯೆ – ಪರಿಹಾರ, ಸರಳ ಪ್ರಯೋಗಗಳು, ಸಾಹಿತ್ಯದ ಭಾಗಗಳನ್ನು ಉದ್ದರಿಸುವುದು, ಮಾತಿನ ಚಮತ್ಕಾರ – ಮಂತಾದ ಎಲ್ಲ ಸಾಧ್ಯವಿಧಾನಗಳನ್ನು ಬಳಕೆ ಮಾಡಿ ಶ್ರೋತೃಗಳ ಮನ ಸೆಳೆಯುವುದು ಅಗತ್ಯ.

ಪರಸ್ಪರ ಸಂಬಂಧವಿಲ್ಲದಂತೆ ತೋರುವ ವಿಷಯಗಳನ್ನು ಸಮನ್ವಯಗೊಳಿಸಿ ಬೆಡಗಿನ ಮಾದರಿಯಲ್ಲಿ ಹೇಳಿ ಸಮಸ್ಯೆಯನ್ನು ಬಗೆಹರಿಸುವುದು ಸೃಜನಶೀಲತೆಯ ಲಕ್ಷಣ ಎಂದು ಅರ್ಥರ್‌ಕೊಯಲರ್ `ಆಕ್ಟ್ ಆಫ್ ಕ್ರಿಯೇಷನ್‘ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ಆರ್ಕಿಮಿಡೀಸ್‌ನ ಸೃಜನಶೀಲತೆ ಇದ್ದುದು ಚಿನ್ನದ ಪರಿಶುದ್ಧತೆಯನ್ನು ಕಿರೀಟವನ್ನು ವಿರೂಪಗೊಳಿಸದೇ ಸಾಧಿಸುವುದು ಹೇಗೆ ಎಂಬ ಸಮಸ್ಯೆಯ ಅರಿವಿನಲ್ಲೂ ಅಲ್ಲ; ಪಾತ್ರೆಯಲ್ಲಿ ನೀರು ತುಂಬಿ ಮತ್ತೇನನ್ನಾದರೂ ಸೇರಿಸಿದರೆ ನೀರು ಹೊರಚೆಲ್ಲುವುದೆಂಬ ಸಂಗತಿಯಲ್ಲೂ ಅಲ್ಲ; ಆದರೆ ಸ್ನಾನ ಮಾಡಿದಾಗ ನೀರು ಚೆಲ್ಲಿದುದನ್ನು ಗಮನಿಸಿ ಅದನ್ನು ಚಿನ್ನದ ಸಮಸ್ಯೆಗೆ ವಿಸ್ತರಿಸಿದ್ದರಲ್ಲಿ – ಎನ್ನುತ್ತಾರೆ ಅವರು. ಈ ಬಗೆಯ ಸೃಜನಶೀಲತೆ ಕವಿಗೆ, ವಿಜ್ಞಾನಿಗೆ ಸಾಮಾನ್ಯ ಅಂಶ ಎನ್ನುತ್ತಾರೆ ಅವರು. ಜನಪ್ರಿಯ ವಿಜ್ಞಾನ ಉಪನ್ಯಾಸಕರಿಗೂ ಈ ಸೃಜನಶೀಲತೆ ಅಗತ್ಯ.

ಪ್ರಚಲಿತ ನಂಬಿಕೆಗಳು, ಗಾದೆ ಒಗಟು, ಸಾಹಿತ್ಯದ ವಾಕ್ಯಗಳನ್ನು ಉದ್ಧರಿಸಿ ಇವುಗಳ ಹಿಂದಿನ ವಿಜ್ಞಾನದ ತತ್ತ್ವವನ್ನು ವಿವರಿಸುವುದು ಶ್ರೋತೃಗಳ ಮನಸ್ಸನ್ನಾಕರ್ಷಿಸಲು ಒಳ್ಳೆಯ ವಿಧಾನವಾಗಬಲ್ಲದು.

ಕಬ್ಬಿಣವನ್ನು ದ್ರವಿಸಿ ಕಬ್ಬಿಣದಲ್ಲಿದ್ದ ಕೊಳೆಯನ್ನೇ ದಹಿಸಿ ಉಕ್ಕನ್ನು ತಯಾರಿಸುವ ವಿಧಾನವನ್ನು ಬೆಸ್ಸೆಮೆರ್ ರೂಪಿಸಿದ. ಇದರಿಂದ ಇಂಧನದ ಖರ್ಚು ಉಳಿಯಿತು, ಕೊಳೆಯೂ ಹೋಯಿತು. ಹೀಗೆ ಜನರ ತಪ್ಪು ತಿಳುವಳಿಕೆಗಳಿಂದಲೇ ಅವರಿಗೆ ಸ್ಪೂರ್ತಿ ನೀಡುವ ಒಗಟುಗಳನ್ನು ರಚಿಸಲು ಅನೇಕ ಬಾರಿ ಸಾಧ್ಯವಾಗುತ್ತದೆ.

ಪ್ರಯೋಗಗಳು, ಆಟಿಕೆಗಳು

“ಪ್ರಯೋಗಗಳನ್ನು ಮಾಡಲು ಉಪಕರಣಗಳು ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಪ್ರಯೋಗ ವಿಧಾನದ ಮೂಲಕ ವಿಜ್ಞಾನ ಕಲಿಕೆ ಸಾಧ್ಯವಾಗಲಾರದು‘’ – ಪುಣೆಯಲ್ಲಿ ನಡೆದ ಕಮ್ಮಟವೊಂದರಲ್ಲಿ `ಪ್ರಯೋಗ‘ದ ಮೂಲಕ ವಿಜ್ಞಾನ ಪ್ರಸರಣ ಸಾಧ್ಯವೆಂದು ಹೇಳಿದಾಗ ಬಂದ ಪ್ರತಿಕ್ರಿಯೆ.

ಅದೇ ಕಮ್ಮಟದ ಅಂತ್ಯದಲ್ಲಿ ವಿವಿಧ ವಿಧಾನಗಳ ಮೌಲ್ಯಮಾಪನ ನಡೆಸಿದಾಗ ಗರಿಷ್ಠ ಅಂಕಗಳಿಸಿದ ವಿಧಾನವೂ ಪ್ರಯೋಗ ವಿಧಾನವೇ!

ವೈಜ್ಞಾನಿಕ ಸಾಕ್ಷರತೆಗಾಗಿ ನಡೆಸುವ ಪ್ರಯೋಗಗಳು ಗುಣಾತ್ಮಕವಾದವು. ಕೇವಲ ವೈಜ್ಞಾನಿಕ ತತ್ವವನ್ನು ಮನದಟ್ಟುಮಾಡಲು ಬೇಕಾಗುವಂತಹ ಪ್ರಯೋಗಗಳು. ಹೀಗಾಗಿ ನಿಖರತೆಗೆ, ಮಾಪನಕ್ಕೆ ಇಲ್ಲಿ ಅಗತ್ಯ ಕಡಿಮೆ. ಆ ಉಪಕರಣಗಳಿಗೆ ಸ್ಥಳೀಯವಾಗಿ ದೊರಕುವ ವಸ್ತುಗಳು, ಸಾಮಗ್ರಿಗಳನ್ನು ಬಳಕೆ ಮಾಡಿ ಪ್ರಯೋಗ ನಡೆಸಲು ವಿಶಿಷ್ಟ ಪ್ರಯೋಗಗಳನ್ನೇ ರೂಪಿಸಬೇಕಾಗುತ್ತದೆ. ರೂಪಿಸಲು ಸಾಧ್ಯ ಎಂಬುದಕ್ಕೆ ನಾವು ನಡೆಸಿದ ಅನೇಕ ಪ್ರಯೋಗಗಳೇ ಸಾಕ್ಷಿ. ಈ ದಿಸೆಯಲ್ಲಿ ಒಟ್ಟಾರೆಯಾಗಿ ಪ್ರಯತ್ನಿಸಬೇಕಾಗಿದೆ. ಬಿಸಾಕಿದ ವಸ್ತುಗಳನ್ನು ಬಳಸಿ ಪ್ರಯೋಗವನ್ನು ಕೈಕೊಳ್ಳುವ ಕ್ರಮವನ್ನು ಅಧ್ಯಾಪಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಕರಾವಿಪ ಈಗಾಗಲೇ ಕೈಗೊಂಡಿದೆ. ಶಾಲಾ ಶಿಕ್ಷಣದಲ್ಲೇ ಇದು ಸಾಧ್ಯವಾಗುವುದಾದರೆ, ಅನೌಪಚಾರಿಕ ಶಿಕ್ಷಣವಾದ ವೈಜ್ಞಾನಿಕ ಸಾಕ್ಷರತಾ ಕಾರ್ಯಕ್ರಮದಲ್ಲೂ ಇದೂ ಸಾಧ್ಯ. ಪ್ರಯೋಗಗಳನ್ನು ನೋಡಲು, ಸಾಧ್ಯವಾದರೆ ಮಾಡಲು ಜನರಿಗೆ ಆಸಕ್ತಿ ಇದೆ. ಆಟಿಕೆಗಳನ್ನು ಆಡಲು ಬಳಸುವರೇ ವಿನಾ ಆ ಆಟಿಕೆಗಳನ್ನೇ ಬಳಸಿ, ವಿಜ್ಞಾನದ ತತ್ತ್ವಗಳನ್ನು ತಿಳಿಸುವುದಾಗಲೀ, ಅಥವಾ ವಿಜ್ಞಾನ ತತ್ತ್ವಗಳನ್ನು ರೂಪಿಸುವ ಆಟಿಕೆಗಳನ್ನು ತಯಾರಿಸುವುದಾಗಲೀ ಸಾಕಷ್ಟು ಪ್ರಮಾಣದಲ್ಲಿ ನಡೆದಿಲ್ಲ. ಈ ದಿಸೆಯಲ್ಲಿ ಪ್ರಯತ್ನ ನಡೆಸಲು ಸಾಕಷ್ಟು ಆಸ್ಪದ ಇದೆ.

ಉದಾಹರಣೆ : ಪಿಸ್ತೂಲಿನಿಂದ ಹೊರಟ ಕಡ್ಡಿ ನೇರವಾಗಿ ಗೋಡೆಗೆ ತಗುಲಿ ಅಲ್ಲಿಯೇ ಕಚ್ಚಿಕೊಳ್ಳುವ ಆಟಿಕೆ. ಹಲ್ಲಿಯು ಗೋಡೆಗೆ ಬಿಗಿದುಕೊಂಡು ನಡೆಯುವುದು, ಉಡವನ್ನು ಕೋಟೆ ಹತ್ತಲು ಉಪಯೋಗಿಸುತ್ತಿದ್ದುದು ಮುಂತಾದ ಸಂಗತಿಗಳನ್ನು ನಿರೂಪಿಸಲು ಈ ಆಟಿಕೆ ಸಹಕಾರಿ.

ದೊಡ್ಡ ತತ್ತ್ವಗಳನ್ನು ಅರ್ಥ ಮಾಡಿಸಲು ದೊಡ್ಡ ಉದಾಹರಣೆಯೇ ಬೇಕಾಗಿಲ್ಲ. `ಕನ್ನಡಿಯೊಳಗಿನ ಕರಿ‘ಯಂತೆ ಕಿರಿದರೊಳ್ ಪಿರಿದರ್ಥಮಂ‘ ತಿಳಿಸಬಲ್ಲವರಿಗೆ ವೈಜ್ಞಾನಿಕ ಸಾಕ್ಷರತೆ ಒಂದು ಸಾಹಸದ ಸವಾಲು.

ಕಲಾ ಮಾಧ್ಯಮಗಳ ಬಳಕೆ

ಕಲಾ ಮಾಧ್ಯಮಕ್ಕೆ ಜನಪ್ರಿಯವಾಗುವ ವಿಶೇಷ ಸಾಮರ್ಥ್ಯವಿದೆ. ಆದರೆ ಕಲೆಯ ಆಕರ್ಷಣೆಯತ್ತ ಜನರ ಗಮನ ಹೋಗಿ ವೈಜ್ಞಾನಿಕ ಅಂಶಗಳು ಹಿನ್ನೆಲೆಗೆ ಉಳಿದು ಬಿಡುವ ಅಪಾಯವೂ ಇದೆ.

ಕಲಾ ಮಾಧ್ಯಮವು ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ, ಸಾಮಾಜಿಕ ಸಮಸ್ಯೆಗಳತ್ತ ಜನರ ಗಮನ ಸೆಳೆಯುವಲ್ಲಿ ಅತ್ಯುತ್ತಮ ಮಾಧ್ಯಮಗಳು. ವಿಜ್ಞಾನದ ಮಾಹಿತಿಯನ್ನು ಒದಗಿಸುವಲ್ಲಿ, ಏಕಾಗ್ರತೆಯಿಂದ ಪರಿಭಾವಿಸಿ ಚಿಂತನೆ ಮಾಡುವ ಅಗತ್ಯವಿರುವ ಕ್ಷೇತ್ರಗಳಲ್ಲಿ ಕಲಾಮಾಧ್ಯಮವನ್ನು ಸಮರ್ಪಕವಾಗಿ ಬಳಸುವುದು ಕಷ್ಟ.

ಚಿತ್ರ, ಭಿತ್ತಿಪತ್ರಗಳು, ಕನಿಷ್ಠ ಬರವಣಿಗೆಯ ಪುಸ್ತಕಗಳು

ಪತ್ರಿಕೆಯನ್ನೋದುವವರು ವ್ಯಂಗ್ಯ ಚಿತ್ರ, ಕಿರುಚಿತ್ರಗಳಿರುವ ಚುಟುಕುಗಳನ್ನು ಮೊದಲು ಗಮನಿಸುವರಲ್ಲವೇ? ಅಂದ ಮೇಲೆ ಈ ಮಾಧ್ಯಮವನ್ನು ಪ್ರಚಲಿತ ವಿದ್ಯಮಾನಗಳಿಗೆ ಬಳಸಿದಂತೆಯೇ ವಿಜ್ಞಾನದ ಮಾಹಿತಿ ನೀಡಲೂ ಬಳಸಬಹುದು. `ಚತ್ರ ಕಥೆ‘ಗಳು ಮಕ್ಕಳಲ್ಲಿ ಸಾಕಷ್ಟು ಜನಪ್ರಿಯವಾಗಿರುವಾಗ ಓದುಬರಹವನ್ನು ಕುರಿತಂತೆ ಬಹಳ ಶ್ರಮವನ್ನು ಅಪೇಕ್ಷಿಸದ ಈ ಮಾಧ್ಯಮ ವೈಜ್ಞಾನಿಕ ಸಾಕ್ಷರತೆಗೆ ಜನಪ್ರಿಯವಾಗಬಲ್ಲುದು ಎಂಬುದರಲ್ಲಿ ಸಂದೇಹವಿಲ್ಲ. ಈ ವಿಧಾನಕ್ಕೆ ಬೇಕಾದ ಸಾಮಗ್ರಿಯ ತಯಾರಿ ಸ್ವಲ್ಪ ದುಬಾರಿಯಾಗುವುದು.

ಕೊನೆಯದಾಗಿ ವೈಜ್ಞಾನಿಕ ವಿಧಾನವನ್ನು ಕಲಿಸುವ ಪ್ರಯತ್ನಗಳನ್ನು ಗಮನಿಸಬಹುದಾಗಿದೆ. ಸೂಕ್ಷ್ಮ ಅವಲೋಕನೆ, ಸಮಸ್ಯೆಯೊಂದನ್ನು ರೂಪಿಸಿಕೊಂಡು ಪ್ರಶ್ನಿಸುವ ಕ್ರಮ, ಸಮಸ್ಯೆಗಳನ್ನು ಅನೇಕ ಸಾಧ್ಯತೆಗಳಲ್ಲಿ ಪರೀಕ್ಷಿಸುವ ವಿಧಾನ ಮುಂತಾದ ಅಂಶಗಳನ್ನು, ಪ್ರಯೋಗಗಳನ್ನು ತೋರಿಸುವಾಗ ಪ್ರಾಸಂಗಿಕ ಕಲಿಕೆಗೆ ಅವಕಾಶ ಮಾಡಿಕೊಡುವ ಅನೇಕ ಸಾಧ್ಯತೆಗಳಿರುತ್ತವೆ. ಇದಲ್ಲದೆ ಅನೇಕ ವಿಷಯಗಳನ್ನು ಕುರಿತಂತೆ ಚರ್ಚೆ ಪ್ರಾರಂಭಿಸಿ ಆ ಸಮಸ್ಯೆಯ ಜಟಿಲತೆಯನ್ನು ವಿಶ್ಲೇಷಿಸುವ ಸಾಧ್ಯತೆ ಇದೆ. ಆದರೆ ಹೀಗೆ ಮಾಡುವ ಮೊದಲು ಈ ಮನೋಭಾವವನ್ನುಂಟು ಮಾಡುವ ಸಲುವಾಗಿ ಪ್ರಚಲಿತವಿರುವ ಕತೆಗಳ ವಿಶ್ಲೇಷಣೆ (ವಿವಿಧ ದೃಷ್ಟಿ ಕೋನದಿಂದ) ಬಹಳ ಉತ್ತಮ ಫಲಿತಾಂಶಗಳನ್ನು ತಂದುಕೊಡಬಲ್ಲುದು. ಯಾವುದೇ ವಿಶ್ಲೇಷಣೆಯಲ್ಲಿ, ಮಾಹಿತಿ ಯಾವುದು, ತೀರ್ಮಾನ ಯಾವುದು ಎಂಬುದನ್ನು ಬೇರ್ಪಡಿಸುವ ಕ್ರಮ, ಒಂದೇ ಮಾಹಿತಿಯನ್ನು ಅನೇಕ ಸಾಧ್ಯತೆಯಲ್ಲಿ ಪರಿಶೀಲಿಸುವ ಕ್ರಮ, ಒಂದು ವಿವರಣೆಯ ಸತ್ಯಾಸತ್ಯತೆಯನ್ನು ಹೆಚ್ಚು ಹೆಚ್ಚು ಪುರಾವೆಗಳಿಂದ ಪರಿಶೀಲಿಸುವ ಕ್ರಮ, ಕಾರಣ, ಪರಿಣಾಮಗಳ ವಿಶ್ಲೇಷಣೆ – ಮುಂತಾದ ಅಂಶಗಳನ್ನು ಕೇವಲ ಕತೆಗಳ ಮೂಲಕವೇ ಪ್ರೇರಿಸಲು ಸಾಧ್ಯವಿದೆ ಎಂದು ಕಂಡು ಬಂದಿದೆ.

ಸ್ವಲ್ಪ ಮಟ್ಟಿನ ಪ್ರಬುದ್ಧತೆಯನ್ನು ಸಾಧಿಸಿದ ಮೇಲೆ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗೆ ಪ್ರಯತ್ನಿಸಬಹುದು. ಕಥೆಗಳ ವಿಶ್ಲೇಷಣೆಯ ಒಂದು ಸೌಕರ್ಯವೆಂದರೆ, ಅದರಲ್ಲಿ ಪೂರ್ವಗ್ರಹಗಳ ಕಾಟವಿರುವುದಿಲ್ಲ. ಪ್ರಚಲಿತ ವಿದ್ಯಮಾನಗಳನ್ನು ಕಥೆಯ ರೂಪದಲ್ಲಿ ಸಾಂಕೇತಿಕವಾಗಿ ಸೂಚಿಸಿ ವಿಶ್ಲೇಷಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ಈ ಕೆಳಗಿನ ಅಂಶಗಳು ತಮಗೆ ಮನವರಿಕೆಯಾದರೆ ನನ್ನ ಪ್ರಯತ್ನ ಸಾರ್ಥಕವೆಂದುಕೊಳ್ಳುತ್ತೇನೆ.

1.  ವಿಜ್ಞಾನದ ಕಲಿಕೆಗೆ ಓದುಬರಹ ಅನಿವಾರ್ಯ ಅಗತ್ಯವೇನೂ ಅಲ್ಲ.

2. ವಿಜ್ಞಾನದ ಕಲಿಕೆ ಸಾಕ್ಷರತೆಗೆ ಪೂರಕವಾಗಬಲ್ಲದು.

3. ವೈಜ್ಞಾನಿಕ ಸಾಕ್ಷರತೆಯೆಂದರೆ ಎಲ್ಲ ವಿಜ್ಞಾನವನ್ನು ಎಲ್ಲರಿಗೂ ಹೇಳುವುದಲ್ಲ – ಪ್ರಸಕ್ತ ವಿಜ್ಞಾನವನ್ನು ಅಗತ್ಯವಿರುವಷ್ಟು ಹೇಳುವುದು.

4. ವೈಜ್ಞಾನಿಕ ಸಾಕ್ಷರತೆಯಿಂದ – ಸರಿಯಾದ ಚಿಂತನಾಕ್ರಮ, ಪರಿಸರದ ಸಾರ್ಥಕ ಬಳಕೆ, ವಂಚಿತರಾಗುವುದನ್ನು ತಪ್ಪಿಸುವುದು, ಕುತೂಹಲ ತಣಿಸುವಿಕೆ, ಚಿಂತನಾ ಹವ್ಯಾಸ ಬೆಳೆಸುವುದು, ಮನರಂಜನೆ, ನಿತ್ಯಜೀವನದ ಕಾರ್ಯದಕ್ಷತೆ ಹೆಚ್ಚಿಸುವುದು – ಮೊದಲಾದ ಅಂಶಗಳನ್ನು ಸಾಧಿಸಲು ಅವಕಾಶವಿದೆ.

5. ವೈಜ್ಞಾನಿಕ ಸಾಕ್ಷರತೆ ಕಲಿಸುವವರಿಗೆ ಸಾಹಸದ ಸವಾಲು; ಕಲಿಸುವವರ ಶ್ರಮದಿಂದಾಗಿ ಕಲಿಯುವವರಿಗೆ ಕುಶಾಲು.

6. ವೈಜ್ಞಾನಿಕ ಸಾಕ್ಷರತೆಗೆ ಅನೇಕ ಮಾರ್ಗಗಳನ್ನು ಗುರುತಿಸಲಾಗಿದೆ; ಅದರ ಅನ್ವಯವಾಗಬೇಕು ಅಷ್ಟೇ.

7. ವೈಜ್ಞಾನಿಕ ಸಾಕ್ಷರತೆಯಿಂದಾಗಿ ಈ ಬಗೆಯ ಪರಿವರ್ತನೆಗಳನ್ನು ನಿರೀಕ್ಷಿಸಲಾಗುತ್ತದೆ.

ಕೇಳುವಿಕೆ – ಅರ್ಥಪೂರ್ಣ ಗ್ರಹಿಸುವಿಕೆ
ನೋಡುವಿಕೆ – ಸೂಕ್ಷ್ಮಾವಲೋಕನ
ಸಂಭಾಷಣೆ – ಅರ್ಥಪೂರ್ಣ ವಿಚಾರವಿನಿಮಯ
ವಾಗ್ವಾದ – ಚರ್ಚೆಯ ಮೂಲಕ ಸಮರ್ಥನೆ
ಸಂದೇಹ – ವಿಶ್ಲೇಷಣೆ
ಯಾಂತ್ರಿಕ ಕ್ರಿಯೆ – ಪ್ರಜ್ಞಾ ಪೂರ್ವಕ ಚಟುವಟಿಕೆ
ಸಾಮಗ್ರಿಗಳ ಅಪವ್ಯಯ – ದಕ್ಷಬಳಕೆ

ಇತ್ಯಾದಿ.

8. ಕಲಿಯುವವರು ನಿರೀಕ್ಷಿಸುವ ಅಗತ್ಯವನ್ನು (Felt need) ಗುರುತಿಸಿ, ಅದರ ಮೂಲಕವೇ ಅವರ ವಾಸ್ತವ ಅಗತ್ಯ (Real need)ಗಳಾದ ಸಾಕ್ಷರತೆ, ವೈಜ್ಞಾನಿಕ ಸಾಕ್ಷರತೆಗಳನ್ನು ಒಮ್ಮೆಗೇ ಸಾಧಿಸಬಹುದಾಗಿದೆ! 

—-
ದಾವಣಗೆರೆಯಲ್ಲಿ
ನಡೆದ ನಾಲ್ಕನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧ.