ವೈಜ್ಞಾನಿಕ ಚಿಂತನೆ ಎಂದರೆ ವಿಜ್ಞಾನ ಕ್ಷೇತ್ರದಲ್ಲಿ ಬಳಕೆಯಾಗುವ, ಆ ಕ್ಷೇತ್ರಕ್ಕಷ್ಟೇ ಉಪಯುಕ್ತವಾದ ಚಿಂತನೆ ಎಂಬ ನಂಬಿಕೆ ಶ್ರೀ ಸಾಮಾನ್ಯರಲ್ಲಿ ಅಷ್ಟೇ ಅಲ್ಲ, ವಿಜ್ಞಾನ ಪದಧರರಲ್ಲಿಯೂ ಕಂಡುಬರುತ್ತಿರುವುದು ವಿಷಾದನೀಯ ಸಂಗತಿ. ಯಾವುದೇ ವಿಷಯ ವಿಶ್ಲೇಷಣೆಗಾಗಲೀ ವೈಜ್ಞಾನಿಕ ವಿಧಾನಕ್ಕೆ ಪರ್ಯಾಯವಾಗಬಲ್ಲ ಇನ್ನೊಂದು ಬಗೆಯ ಚಿಂತನಾ ಕ್ರಮ ಇಲ್ಲದೇ ಹೋದಾಗ್ಯೂ ವೈಜ್ಞಾನಿಕ ಚಿಂತನೆ ಅನೇಕ ಕ್ಷೇತ್ರಗಳಲ್ಲಿ ಕಂಡುಬರದೇ ಹೋಗುವುದು ಸಾಮಾನ್ಯ ಸಂಗತಿ. ಹೀಗೇಕೆ ಎನ್ನುವುದನ್ನು ಮೂರುಸ್ತರಗಳಲ್ಲಿ ವಿಶ್ಲೇಷಿಸಬಹುದಾಗಿದೆ. ವೈಜ್ಞಾನಿಕ ಚಿಂತನೆ ಎಲ್ಲ ಕ್ಷೇತ್ರಗಳಲ್ಲೂ ಅನ್ವಯಗೊಳ್ಳದೇ ಹೋಗಲು ವೈಜ್ಞಾನಿಕ ಚಿಂತನೆಯ ಇತಿಮಿತಿಗಳೇ ಕಾರಣವಿರಬಹುದು ಇಲ್ಲವೇ ವೈಜ್ಞಾನಿಕ ಚಿಂತನೆಗೆ ಒಳಪಡದ ವಿಷಯದ ತೊಡಕು ಇಲ್ಲವೇ ಅನ್ವಯಕಾರನ ಇತಿಮಿತಿಗಳೂ ಪೂರ್ವಗ್ರಹಗಳೂ ಕಾರಣವಿರಬಹುದು. ಈ ಪ್ರಬಂಧದಲ್ಲಿ ಇಂತಹ ಕೆಲವು ವಿಷಯಗಳತ್ತ ಗಮನ ಹರಿಸೋಣ.

ವೈಜ್ಞಾನಿಕ ಚಿಂತನೆಯ ಇತಿಮಿತಿಗಳಿಂದಲೇ ಪ್ರಾರಂಭಿಸೋಣ. ವೈಜ್ಞಾನಿಕ ಚಿಂತನೆಗೆ ಒಳಪಡುವ ವಿಷಯದಲ್ಲಿ ಕೆಲವು ನಿರ್ಬಂಧಗಳಿವೆ. ಅವುಗಳಲ್ಲಿ ವಿಷಯದ ವಸ್ತು ಸಾಂತವಾಗಿರಬೇಕು, ಅಳತೆಗೆ ಅಳಪಡುವಂತಹದಾಗಿರಬೇಕು, ಸಾರ್ವತ್ರಿಕ ಅನುಭವವಾಗಿರಬೇಕು. ಪುನರ್‌ಸ್ಥಾಪನೆಗೆ ಒಳಪಡುವಂತಿರಬೇಕು – ಎಂಬ ಅಂಶಗಳು ಗಮನಿಸಬೇಕಾದವು. ಈ ಇತಿಮಿತಿಗಳು ಕೆಲವೊಮ್ಮೆ ವಿಜ್ಞಾನ ಕ್ಷೇತ್ರದಲ್ಲೇ ವಾದ ಮಂಡಿಸಲು ಬಿಕ್ಕಟ್ಟನ್ನುಂಟುಮಾಡುವುದುಂಟು. ಉದಾಹರಣೆಗೆ ವಿದ್ಯುಲ್ಲೇಪನವನ್ನು ಕುರಿತಂತೆ ಅನೇಕ ಪ್ರಯೋಗಗಳು, ಸಿದ್ದಾಂತಗಳು ಬಂದಿವೆಯಾದರೂ ಆಕರ್ಷಕ ವಿದ್ಯುಲ್ಲೇಪನ ಇಂದಿಗೂ ಕಲೆಯೋ, ಕಸುಬುಗಾರಿಕೆಯೋ ಆಗಿ ಉಳಿದಿದೆ. ಇದಕ್ಕೆ ಕಾರಣ – ಪ್ರಯೋಗವು ಅನೇಕ ಸೂಕ್ಷ್ಮ ಸಂಗತಿಗಳಿಂದ ಪ್ರಭಾವಿತವಾಗಿ ಪ್ರಯೋಗದ ಫಲಿತಾಂಶಗಳನ್ನು ಪುನರ್‌ಸ್ಥಾಪಿಸಲು ಸಾಧ್ಯವಾಗದೇ ಇರುವುದು. ವಿಜ್ಞಾನದ ಕ್ಷೇತ್ರದಲ್ಲೇ ಕಂಡುಬರುವ ಈ ಬಗೆಯ ತೊಂದರೆಗಳು ಜನಸಾಮಾನ್ಯರು ಉತ್ತರ ಬಯಸುವ ಅನೇಕ ಪ್ರಶ್ನೆಗಳಲ್ಲಿ ಕಂಡುಬರುವುದೇನಾಶ್ಚರ್ಯ? ಜನಪ್ರಿಯ ವಿಜ್ಞಾನದ ಉಪನ್ಯಾಸ ನೀಡುವವರಿಗೆ ಇಂಥ ಸವಾಲುಗಳು ಸರ್ವೇಸಾಮಾನ್ಯ ಅನುಭವ.

ದೇವರ ಇರುವಿಕೆ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯವೇನು? ಇದು ಅಂತಹ ಪ್ರಶ್ನೆಗಳಲ್ಲಿ ಒಂದು. ದೇವರನ್ನು ವಾಖ್ಯಾನಿಸುವಾಗಲೇ ಅವನನ್ನೂ ಅನಂತ ಎಂದು ಹೇಳಲಾಗುತ್ತದೆ. ಸಾಂತವನ್ನು ಕುರಿತಾದ ನಿಯಮಗಳು ವಿಜ್ಞಾನಕ್ಕೆ ಸಂಬಂಧಿಸಿದವು. ಆದ್ದರಿಂದ ದೇವರ ಬಗೆಗೆ ವಿಜ್ಞಾನ ಮೌನವಹಿಸುತ್ತದೆ. ಆದರೆ ಅನಂತನಾದ ದೇವರು ಸಾಂತವಾದ ಕೆಲವು ಪ್ರಾಪಂಚಿಕ ವ್ಯವಹಾರಗಳಲ್ಲಿ ಭಾಗವಹಿಸುತ್ತಾನೆಂದಾಗ ವಿಶೇಷ ಸಾಮರ್ಥ್ಯ ಪ್ರದರ್ಶಿಸುವನೆಂದಾಗ ವಿಜ್ಞಾನ ಆ ಬಗ್ಗೆ ಕುತೂಹಲ ತಳೆಯುತ್ತದೆ. ಒಬ್ಬ ಕಮ್ಮಾರ ಸುತ್ತಿಗೆಯಿಂದ ಬಡಿಯುವಾಗ ಯಾವ ಭೌತಶಾಸ್ತ್ರದ ನಿಯಮ ಅನ್ವಯವಾಗುವುದೋ ಅದೇ ನಿಯಮವು ಹಿಂದಿನವರು ಸ್ವರ್ಗದ ಸ್ಥಾನವೆಂದು ಭಾವಿಸಿದ್ದ ಆಕಾಶದಲ್ಲಿರುವ ಆಕಾಶಕಾಯಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ವಿಶ್ವದ ಒಂದು ತುಂಡಾದ ಭೂಮಿಯ ಕೆಲವು ಸಾಂತ ಘಟನೆಗಳಲ್ಲಿ ದೇವರು ನೈಸರ್ಗಿಕ ನಿಯಮವನ್ನು ಮೀರಿ ತನ್ನ ಅಸ್ತಿತ್ವವನ್ನು ಅನಂತಕೋಟಿ ಜೀವರಾಶಿಯಲ್ಲಿ ಮಾನವನೊಬ್ಬನಿಗೇ ಅರ್ಥವಾಗುವಂತೆ ಸ್ಥಾಪಿಸುವನೇ? ಇಂತಹ ಪ್ರಶ್ನೆಗೆ ಪ್ರಶ್ನೆಯಲ್ಲೇ ಉತ್ತರಿಸುವುದುಂಟು. ಕೂಡುವ, ಕಳೆಯುವ ನಿಯಮಗಳೂ ಕೂಡಾ ಅನಂತಕ್ಕೆ ಅನ್ವಯವಾಗುವುದಿಲ್ಲ. 1 + 1 = 2 ಆದರೆ ¥ + ¥  = ¥ ಆದ್ದರಿಂದ ದೇವರ ಚರ್ಚೆ ವಿಜ್ಞಾನದ ವ್ಯಾಪ್ತಿಗೆ ಸೇರಿದ್ದೇ? `ಸಾಂತ‘ವನ್ನು ಅರಿಯುವ ವಿಜ್ಞಾನಿ `ಅನಂತ‘ವನ್ನು ಕುರಿತು ದೇವರ ವಾದಕ್ಕೆ ನಿಲ್ಲಬೇಕೇಕೆ?

ಅದೇ ರೀತಿ ಅನಿರೀಕ್ಷಿತವಾದ, ವೈಯಕ್ತಿಕ ಅನುಭವವಾದ ದೆವ್ವ, ದೇವರ ಸಾಕ್ಷಾತ್ಕಾರ ಮುಂತಾದ ಸಂಗತಿಗಳೂ ವಿಜ್ಞಾನದ ವ್ಯಾಪ್ತಿಗೆ ಒಳಪಡುವಂತಹುದಲ್ಲ. ಇಂತಹ ಅನುಭವಗಳು ಸಾರ್ವತ್ರಿಕವೂ ಆಗಲಾರವು. ಅನೇಕವೇಳೆ ಪುನರ್‌ಸ್ಥಾಪನೆ ಇಲ್ಲದಂತಹವು. ಅದೇಕೋ ಅವುಗಳೆಲ್ಲಾ ಏಕಾಂತದಲ್ಲಿಯೇ, ಕೆಲವರಿಗೆ ಸಂಭವಿಸಿ ನಿಗೂಢವಾಗಿರಲು ಯತ್ನಿಸುತ್ತವೆ. ಅನೇಕ ವೇಳೆ ಅನೇಕ ಜನರ ಗಮನಕ್ಕೆ ಬಂದ ಸಂಗತಿಗಳೂ ವಿಶ್ಲೇಷಣೆಗೆ ಅನನುಕೂಲವಾಗಿರುವುವು. ಏಕೆಂದರೆ ಅವು ಮತ್ತೆ ಮತ್ತೆ ಜರುಗದೆ ಒಮ್ಮೆ ನಡೆದ ದಾಖಲೆ ಮಾತ್ರ ಇರುವುದು. ಚಹರೆಯಿಲ್ಲದ ಹಾರುವ ವಸ್ತುಗಳು ಈ ಗುಂಪಿನ ಅನುಭವಗಳಿಗೆ ಒಂದು ಉದಾಹರಣೆ. ಆ ಅನುಭವ ಒಮ್ಮೆಲೇ ಅನೇಕರಿಗೆ ಆಗಿದ್ದಾಗ ಘಟನೆಯನ್ನು ನಿರಾಕರಿಸಲು ಕಷ್ಟ. ಆದರೆ ಅದು ವಾತಾವರಣದಲ್ಲಿ ನಡೆದ ನೈಸರ್ಗಿಕ ಘಟನೆಯೇ? ಇಲ್ಲವೇ ಜನರು ಭಾವಿಸುವ ವಿಶೇಷ ಅತಿಥಿಗಳ ಆಗಮನವೇ? ಇದರ ಬಗ್ಗೆ ಅನೇಕರ ಅನುಭವವನ್ನು ಸಂಗ್ರಹಿಸುವಾಗ ಭಿನ್ನಾಭಿಪ್ರಾಯ ಬರುವುದೂ ಸಾಮಾನ್ಯ. ಅನ್ಯಲೋಕದ ಜೀವಿಗಳೇ ಬಂದಿರಬೇಕೆಂದು ಭಾವಿಸುವುದಾದರೆ ಅನೇಕ ಸಂದೇಹಗಳೇಳುತ್ತವೆ. ಉದಾಹರಣೆಗೆ ಜೀವಿಗಳು ಅನೇಕ ಜ್ಯೋತಿರ್ವರ್ಷಗಳಾಚೆಯಿಂದ ಬರಬೇಕು. ಅವರ ವಾಹನದ ವೇಗ ಬಹಳವಾಗಿರಬೇಕು. ಹಾಗೆ ಚಲಿಸುವಾಗ ವಾಹನ ವಾತಾವರಣದ ಗಾಳಿಯೊಂದಿಗೆ ಘರ್ಷಣೆಹೊಂದಿದರೆ ಸುಟ್ಟುಹೋದೀತು, ಇತ್ಯಾದಿ ಇತ್ಯಾದಿ. ಘಟನೆಯ ಅನುಭವವನ್ನು ನಿರಾಕರಿಸದಿದ್ದರೂ ಅನ್ಯಲೋಕದ ಜೀವಿಗಳ ಬಗ್ಗೆ ವಿಜ್ಞಾನಿಗಳು ಸಂದೇಹ ವ್ಯಕ್ತಪಡಿಸುವ ಕಾರಣ ಆ ಘಟನೆ ನಡೆಯಲು ಇರುವ ಅನೇಕ ನೈಸರ್ಗಿಕ ನಿಯಮಗಳ ಅಡ್ಡಿ – ಆದರೆ ಇದನ್ನು ಸಾಮಾನ್ಯರು ಮೊಂಡುವಾದವೆಂದೂ ದೂಷಿಸುವುದುಂಟು.

ಅಳತೆಗೆ ಒಳಪಡುವ ಸಂಗತಿಗಳ ಮೂಲಕವೂ ಕೆಲವೊಮ್ಮೆ ಜನರು ಅತಿಮಾನುಷ ಸಂಗತಿಗಳು ಇರುವ ಬಗೆಗೆ ಆಧಾರ ನೀಡುವುದುಂಟು. ಅಂತಹ ಸಂದರ್ಭದಲ್ಲಿ ವೈಜ್ಞಾನಿಕ ಪರಿಶೀಲನೆಗೆ ಅವರು ಅವಕಾಶ ನೀಡುವುದಿಲ್ಲ. ಹಾಗೆ ನೀಡಿದರೂ ವಿಶ್ಲೇಷಣೆ ನೀಡಿದ ವಿಜ್ಞಾನಿಯ ವಿವರಣೆಗೆ ಗುಮಾನಿಯ ಕಾಟ ತಪ್ಪಿದ್ದಲ್ಲ. ಉದಾಹರಣೆಗೆ ಫರೀದಪುರದಲ್ಲಿ ಒಂದು ಖರ್ಜೂರದ ಮರ (ದೇವಾಲಯದ ಮುಂದೆ ಇದ್ದದ್ದು) ದಿನಕ್ಕೆರಡುಬಾರಿ ಬಾಗುತ್ತಿತ್ತು. ಅದು ದೇವರಿಗೆ ನಮಸ್ಕಾರ ಮಾಡುತ್ತಿದೆ ಎಂಬ ಪ್ರತೀತಿ ಜನಗಳಲ್ಲಿ ಇತ್ತು. ಅದನ್ನು ತಮ್ಮ ಅನೇಕ ಪ್ರಯೋಗಗಳಿಂದ ಪರಿಶೀಲಿಸಿದ ವಿಜ್ಞಾನಿ ಜಗದೀಶಚಂದ್ರಬೋಸರು ಆ ಕ್ರಿಯೆಗೆ ಕಾರಣವನ್ನು ನೈಸರ್ಗಿಕ ನಿಯಮಗಳಿಂದ ವಿವರಿಸಿದರು. ಆದರೆ ಅಕಸ್ಮಾತ್ ಇವರು ವಿವರಣೆ ನೀಡಿದ ಕೆಲವೇದಿನಗಳಲ್ಲಿ ಆ ಮರ ಬಿದ್ದುಹೋಯಿತು. ಜನರು ಆ ಮರ ಸಾಯಲು ಬೋಸರ ಪ್ರಯೋಗವೇ ಕಾರಣ ಎಂದು ತೀರ್ಮಾನಿಸಿದರು.

ನಿಖರವಾದ ಮಾಹಿತಿ ಲಭ್ಯವಿಲ್ಲದೇ, ವೈಜ್ಞಾನಿಕ ವಿವರಣೆ ದೊರೆಯದ ಅನೇಕ ಸಂಗತಿಗಳಿಗೆ ಅತೀಂದ್ರಿಯ ಶಕ್ತಿ ಆರೋಪಿಸಲ್ಪಟ್ಟು, ಅನಂತರದಲ್ಲಿ ದೊರೆತ ಮಾಹಿತಿಯಿಂದಾಗಿ ಅವುಗಳಿಗೆ ವೈಜ್ಞಾನಿಕ ವಿವರಣೆ ದೊರೆತು ಅವುಗಳ ಅತೀಂದ್ರಿಯತ್ವ ಕಳಚಿಬಿದ್ದ ಸಂಗತಿಗಳಿಗೆ ವಿಜ್ಞಾನದ ಇತಿಹಾಸದಲ್ಲಿ ಕೊರತೆ ಏನಿಲ್ಲ. ಆದರೆ ಮಾನವನ ಕರಣಗಳಿಗೆ (sense organs) ಹಾಗೂ ಉಪಕರಣಗಳಿಗೆ (instruments) ತನ್ನದೇ ಆದ ಇತಿಮಿತಿಗಳು ಇರುವುದರಿಂದ ಇವುಗಳಿಗೆ ಮೀರಿದ ಸಂಗತಿಗಳಿಗೆ ಅತಿಮಾನುಷತ್ವ ಆರೋಪಿಸುವ ಅವಕಾಶ ಇದ್ದೇ ಇರುತ್ತದೆ. Metaphysics starts where physics ends ಅಂದರೆ ಭೌತಶಾಸ್ತ್ರ ಮುಗಿದಾಗ ಅತೀಂದ್ರಿಯ ಶಾಸ್ತ್ರ ಆರಂಭವಾಗುತ್ತದೆ ಎಂಬ ನಾಣ್ಣುಡಿಯೇ ಇದನ್ನು ಸಂಗ್ರಹವಾಗಿ ಹೇಳುತ್ತದೆ.

ವೈಜ್ಞಾನಿಕ ಚಿಂತನದ ಬಗೆಗೆ ದಾರ್ಶನಿಕರು ಎತ್ತುವ ಅಕ್ಷೇಪಣೆಗಳು ಬೇರೆ ಬಗೆಯವು. ತರ್ಕಪಾರಮ್ಯ (panlogism) ವಿಜ್ಞಾನದ ಮಹಾದೋಷವೆಂದು ಅವರು ವಾದಿಸುತ್ತಾರೆ. ವೈಜ್ಞಾನಿಕ ವಿಧಾನದ ಮೂಲಬೇರುಗಳಾದ ಅನುಗಮನ (Induction) ನಿಗಮನ (Deduction) ಕಾರ್ಯಕಾರಣ ಸಂಬಂಧ (Cause effect relationship)ಗಳಿಗೆಲ್ಲಾ ತಾರ್ಕಿಕ ವಿವರಣೆ ಸಾಧ್ಯವಿಲ್ಲ. ಹೀಗಾಗಿ ವಿಜ್ಞಾನದ ಬೇರುಗಳನ್ನು ಅತಾರ್ಕಿಕವೆಂದು ಸಾಧಿಸುತ್ತಾರೆ. ವಿಜ್ಞಾನಿಗಳು ಜಗತ್ತನ್ನು ವಿಶ್ಲೇಷಿಸುತ್ತಿಲ್ಲ – ಇಂದ್ರಿಯಗಳ ಮೂಲಕ ಪಡೆದ ಜಗತ್ತಿನ ಪಡಿನೆಳಲನ್ನು ವಿಶ್ಲೇಷಿಸುತ್ತಾರೆ. ಅರಿಸ್ಟಾಟಲನು ಸೂಚಿಸಿದ ಅಂತಿಮಕಾರಣ (Final cause) ವಿಜ್ಞಾನಿಗಳ ಉಪೇಕ್ಷೆಗೆ ತುತ್ತಾಗಿದೆ ಎನ್ನುತ್ತಾರೆ. ಅವರ ಅನೇಕ ಅಕ್ಷೇಪಣೆಗೆ ವಿವರ ನೀಡುವುದು ಕಷ್ಟ. ಅದಾಗ್ಯೂ ಆ ಇತಿಮಿತಿಗಳಲ್ಲಿಯೂ ವಿಜ್ಞಾನದ ಸಾಧನೆಯನ್ನು ನಿರಾಕರಿಸುವಂತಿಲ್ಲ. ಮೇಲಿನ ಅಕ್ಷೇಪಣೆಗಳು ವಿಜ್ಞಾನದ ಉಪಯುಕ್ತತೆಗೆ ಅಡ್ಡಿಯಾಗುತ್ತಿಲ್ಲವೆಂಬುದನ್ನು ಮಾತ್ರ ಇಲ್ಲಿ ಸ್ಮರಿಸಬಹುದಾಗಿದೆ.

ವೈಜ್ಞಾನಿಕ ವಿಶ್ಲೇಷಣೆ ಬಹಳ ಪ್ರಾಮಾಣಿಕವಾಗಿ ಎಚ್ಚರ ವಹಿಸಿ ಮಾಡಬೇಕಾದ ಕಾರ್ಯ. ಸರಳವಾದ ಪ್ರಶ್ನೆಗೂ ಉತ್ತರ ತೊಡಕಾಗಿರುತ್ತದೆ. ಕಾರ್ಯವೊಂದರ ಹಿಂದೆ ಕಾರಣಗಳನೇಕವಿರುತ್ತವೆ. ಅವುಗಳನ್ನು ಗ್ರಹಿಸುವುದಾಗಲೀ, ಅವುಗಳ ಪ್ರಭಾವವನ್ನು ನಿಷ್ಕರ್ಷಿಸುವುದಾಗಲೀ, ಸುಲಭಸಾಧ್ಯವಲ್ಲ – ಅದಕ್ಕೆ ಬೇಕಾಗುವ ಸಹನೆಯಾಗಲೀ, ಉತ್ಸಾಹವಾಗಲೀ, ವ್ಯವಧಾನವಾಗಲೀ, ಕಷ್ಟಸಹಿಷ್ಣುತೆಯಾಗಲಿ ಇರುವುದು ಅಪರೂಪ. ಆದ್ದರಿಂದ ಸರಳೀಕೃತ ಪರಿಹಾರಗಳು ಸಿದ್ದರೂಪದಲ್ಲಿ ದೊರೆಯುವಾಗ ಆ ತೊಂದರೆ ಯಾರಿಗೆ ಬೇಕು? ಎನ್ನುವವರೆ ಹೆಚ್ಚು. ಆದರೆ ಅವರಿಗೆ (one who simplifies simply lies) ಎಲ್ಲವನ್ನು ಸರಳಗೊಳಿಸುವವನು ಸುಳ್ಳನೇ ಸರಿ (ಸುಲಭಗೊಳಿಸುವಾತ ಸುಳ್ಳು ಹೇಳುವ) ಎಂಬ ಆಂಗ್ಲ ನಾಣ್ಣುಡಿಯು ತಿಳಿದಿರಬೇಕಾದದ್ದು ಅವಶ್ಯಕ. ಸರಳತೆಗೆ ಮಾರುಹೋದರೆ ಸುಳ್ಳನ್ನು ಒಪ್ಪುವ ಸಾಧ್ಯತೆ ಹೆಚ್ಚು.

ಪ್ರಯೋಗಗಳಿಂದ ರುಜುವಾತಾದ ವಾದವನ್ನೂ ಮತ್ತೆ ಮತ್ತೆ ಸಂದೇಹಿಸುವುದು ವಿಜ್ಞಾನಿಗಳ ವಾಡಿಕೆ. ವಿಜ್ಞಾನದ ತೀರ್ಪಿನಲ್ಲಿ ಅಖೈರು ತೀರ್ಪು ಎಂಬುದೇ ಇಲ್ಲ. ಆದ್ದರಿಂದ ವಿಜ್ಞಾನಿಗಳು ತೀರ್ಮಾನವನ್ನು ಖಚಿತ ಭಾಷೆಯಲ್ಲಿ ಹೇಳುವುದಿಲ್ಲ. ಇದನ್ನೇ (suspension of judgement) ತೀರ್ಪನ್ನು ಅಮಾನತ್ತಿನಲ್ಲಿಡುವುದು ಎನ್ನುವುದು. ಇದು ವೈಜ್ಞಾನಿಕ ವಿಧಾನದ ಒಂದು ಅಂಗ. ಐನ್‌ಸ್ಟಿನ್ ಒಮ್ಮೆ ಹೀಗೆ ಹೇಳಿದ್ದಾರೆ “ಸಾವಿರ ಪ್ರಯೋಗಗಳು ನನ್ನ ವಾದವನ್ನು ಸಮರ್ಥಿಸಿರಬಹುದು ಆದರೆ ಧೀಮಂತನೊಬ್ಬಾತ ಮಾಡುವ ಒಂದು ಜಾಣ್ಮೆಯ ಪ್ರಯೋಗ ನನ್ನ ವಾದವನ್ನು ಸುಳ್ಳಾಗಿಸಲಿಕ್ಕೆ ಸಾಕು‘’ ಎಂದು. ಪ್ರತಿಯೊಂದು ಪ್ರಶ್ನೆಗೂ ಖಚಿತ ಉತ್ತರವನ್ನು ನಿರೀಕ್ಷಿಸುವ, ಖಚಿತ ಉತ್ತರ ಇದ್ದೇ ಇರುವುದೆಂದು ಭ್ರಮಿಸುವ ಶ್ರೀಸಾಮಾನ್ಯ ಈ ಬಗೆಯ ಅಮಾನತ್ತಿನಿಂದ ಗೊಂದಲಕ್ಕೆ ಒಳಗಾಗುವುದೇ ಅಲ್ಲದೇ ವಿಜ್ಞಾನದ ಸಮಗ್ರತೆಯನ್ನು ಸಂದೇಹಿಸುತ್ತಾನೆ.

ಕೆಲವೊಮ್ಮೆ ವಿಜ್ಞಾನದಲ್ಲಿ ಬರುವ ತೀರ್ಮಾನಗಳು ಶ್ರೀಸಾಮಾನ್ಯನ ಸಾಮಾನ್ಯಜ್ಞಾನಕ್ಕೆ ವಿರುದ್ಧವಾಗಿರುವುದುಂಟು. ಅಂತಹ ಸಂದರ್ಭದಲ್ಲಿ ವಿಜ್ಞಾನವನ್ನೂ ನಂಬದಿರುವ ಸಾಧ್ಯತೆ ಹೆಚ್ಚು. ಆಗ ವಿಜ್ಞಾನದ ಪ್ರಗತಿಯ ಗತಿ ಕುಂಠಿತನಾಗುವುದುಂಟು. ನ್ಯೂಟನ್ನನ ಮೊದಲನೇ ನಿಯಮ ತೆಗೆದುಕೊಳ್ಳೋಣ. ಸ್ಥಿರವಾದ ವಸ್ತು ಸ್ಥಿರವಾಗಿಯೇ ಮುಂದುವರೆಯುತ್ತದೆ ಎನ್ನುವುದನ್ನು ಒಪ್ಪಿದಷ್ಟು ಸರಾಗವಾಗಿ ಚಲಿಸುವ ವಸ್ತು ಚಲಿಸುತ್ತಲೇ ಹೋಗುತ್ತದೆ ಎಂದು ನಂಬುವುದು ಕಷ್ಟ ಎಂದು ಜನ ಹೇಳಿಯಾರು. ಅದೇ ರೀತಿ ಕ್ವಾಂಟಂ ಚಲನಶಾಸ್ತ್ರದಲ್ಲಿ ಬರುವ ಭೇದನ (tunneling), ಕ್ಷೇತ್ರ ಪರಿಕಲ್ಪನೆ (field concept) ಮುಂತಾದುವುಗಳು ಸಾಮಾನ್ಯ ಅನುಭವಕ್ಕೆ ಅಸಂಗತವಾಗಿ ಕಾಣುವುದರಿಂದ ಅದಕ್ಕೆ ಸಮಜಾಯಿಷಿ ನೀಡುವುದು ಕಷ್ಟ.

ವೈಜ್ಞಾನಿಕದ ವಿಧಾನದ ಬಗ್ಗೆ ಇರುವ ಅಜ್ಞಾನವೂ ಕೆಲವೊಮ್ಮೆ ವಿಜ್ಞಾನಿಗಳ ಬಗೆಗೆ, ಪ್ರಯೋಗಗಳ ಬಗೆಗೆ ಆಕ್ಷೇಪಣೆಗೆ ದಾರಿ ಮಾಡುವುದುಂಟು. ಉದರದ ಹುಣ್ಣಿನ ಚಿಕಿತ್ಸೆಗಾಗಿ ಇಲಿಗಳನ್ನು ಬಳಸಿ ಅವುಗಳಿಗೆ ಕೃತಕವಾಗಿ ಉದರಹುಣ್ಣು ಉಂಟುಮಾಡಿ ಪ್ರಯೋಗ ನಡೆಸಿದ ಬಗೆಗೆ ಒಮ್ಮೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದರ ಬಗ್ಗೆ ನನ್ನ ಮಿತ್ರರೊಬ್ಬರು ತೀವ್ರ ಅಕ್ಷೇಪವೆತ್ತಿದರು. ಉದರಹುಣ್ಣಿನ ಅನೇಕ ರೋಗಿಗಳಿರುವಾಗ ಇಲಿಗಳನ್ನೇಕೆ ವಿಜ್ಞಾನಿಗಳು ಹಿಂಸಿಸಬೇಕು? ಎಂದು ಅವರ ಸಂದೇಹ. ಮಾನವರ ಮೇಲೆ ನೇರ ಪ್ರಯೋಗ ಮಾಡಲು ಇರುವ ಇತಿಮಿತಿಗಳು, ನಿಯಂತ್ರಿತ ಪ್ರಯೋಗವನ್ನು (controlled experiment) ಮಾಡಲು ಇರುವ ತೊಂದರೆಗಳನ್ನೂ ಅವರಿಗೆ ವಿವರಿಸಬೇಕಾಗಿ ಬಂತು. ವೈಜ್ಞಾನಿಕ ವಿಧಾನದ ಬಗೆಗಿನ ಅವರ ಅಜ್ಞಾನವೇ ತೊಡಕಾದ ಸಂಗತಿ.

ಇದೇ ರೀತಿ ವೈಜ್ಞಾನಿಕ ಸತ್ಯಗಳ ಬಗೆಗೂ ಶ್ರೀಸಾಮಾನ್ಯರ ತಪ್ಪು ಪರಿಕಲ್ಪನೆ ಗೊಂದಲಕ್ಕೆಡೆ ಮಾಡುವುದುಂಟು. ಸಂಭವನೀಯ ಸತ್ಯ (probable truth) ಮತ್ತು ನಿರಪೇಕ್ಷ ಸತ್ಯ (Absolute truth) – ಇವುಗಳ ವ್ಯತ್ಯಾಸ ಅರಿಯದೇ ಹೋಗುವುದು. ಇಂತಹ ಸಂದರ್ಭಕ್ಕೆ ಒಂದು ಉದಾಹರಣೆ. ಅಂಕಿ‌ಅಂಶಗಳಿಂದ ಧೂಮಪಾನಿಗಳಲ್ಲಿ ಹತ್ತು ಜನರಲ್ಲಿ ಏಳು ಮಂದಿ ವಿವಿಧ ರೋಗಗಳಿಗೆ ಬಲಿಯಾಗಿರುವರೆಂಬ ಸಂಗತಿ ವಿಜ್ಞಾನ ಲೇಖನದಲ್ಲಿದೆ ಎನ್ನೋಣ. ಆಗ ಜನರು ಕೇಳುವ ಪ್ರಶ್ನೆ ಒಂದೇ. ಮೂವರು ಹೇಗೆ ತಪ್ಪಿಸಿಕೊಂಡರು? – ಎಂದು. ಅಂಕಿ‌ಅಂಶಗಳ ಸಂಭವನೀಯ ಸತ್ಯವನ್ನು ನಿರಪೇಕ್ಷವೆಂದು ಭಾವಿಸುವುದೇ ಈ ಗೊಂದಲಕ್ಕೆ ಕಾರಣವಲ್ಲವೆ? ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದಾದರೂ ಕೇವಲ ಮಾದರಿಗಾಗಿ ಒಂದನ್ನು ಸೂಚಿಸಲಾಗಿದೆ. ಅನೇಕ ವಿಷಯಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸುವುದು ಕಷ್ಟಕರ ಸಂಗತಿ. ಅದಕ್ಕೆ ಕಾರಣಗಳೂ ಅನೇಕವಿರಲು ಸಾಧ್ಯ. ನಿಖರವಾದ ಮಾಹಿತಿಯ ಕೊರತೆ, ನಿಷ್ಪಕ್ಷಪಾತ ಅಧ್ಯಯನ, ವೈವಿಧ್ಯಕರ ಪ್ರಭಾವಬೀರಬಲ್ಲ ಅನೇಕ ಸಂಗತಿಗಳು, ಪೂರ್ವಗ್ರಹಗಳು ಇತ್ಯಾದಿ. ಅದರಲ್ಲೂ ಮಾನವರ ವರ್ತನೆಗೆ ಸಂಬಂಧಿಸಿದ ವಿಚಾರಗಳಲ್ಲಿ ತೆರೆದ ಮನಸ್ಸಿನ ವಿಶ್ಲೇಷಣೆಯಾಗಲೀ, ವಿಶ್ಲೇಷಣೆ ಮಾಡಿದ ತೀರ್ಮಾನದ ಅನ್ವಯವಾಗಲೀ, ನಿಯಂತ್ರಿತ ಪ್ರಯೋಗವಾಗಲಿ, ಪುನರ್‌ಸ್ಥಾಪಕತ್ವವಾಗಲಿ ಕಷ್ಟಕರ. ಇಂತಹ ತೀರ್ಮಾನಗಳು ಜನಸಮೂಹದ ಯಾವುದೇ ವರ್ಗಕ್ಕೆ ಅನುಕೂಲಕರವಾಗಲೀ, ಅನನುಕೂಲಕರವಾಗಲೀ ಆಗಿ ಪರಿಣಮಿಸಿದಾಗ ತೀರ್ಮಾನ ವಿಕೃತಗೊಳ್ಳುವ ಸಾಧ್ಯತೆಯೇ ಹೆಚ್ಚು.

ಮಿಶ್ರತಳಿಗಳು (hybrids) ಉತ್ತಮಫಲಗಳನ್ನು ನೀಡಬಲ್ಲವು ಎಂಬುದನ್ನು ಒಪ್ಪಿದಷ್ಟು ಸುಲಭವಾಗಿ, ಮಾನವರಲ್ಲಿಯೂ ವಿವಿಧ ಜನಾಂಗದ ಮಿಶ್ರತಳಿಗಳ ಬಗ್ಗೆ ಜನ ಒಪ್ಪಿಯಾರೆ? ಆನುವಂಶೀಯತೆ ಅಥವಾ ಸಾಮಾಜಿಕ ಪರಿಸರ ಇವುಗಳಲ್ಲಿ ಯಾವುದನ್ನು ಎತ್ತಿಹಿಡಿದರೂ ಸಮಾಜದ ಕೆಲವರ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದರಿಂದ ಇಂತಹ ಸಂಗತಿಗಳನ್ನು ತಿರುಚಿ ತಮಗೆ ಬೇಕಾದಂತೆ ವಿವರಿಸಲಾಗುತ್ತದೆ.

ಮೇಲೆ ಸೂಚಿಸಿದ ಉದಾಹರಣೆಗಳು ವೈಜ್ಞಾನಿಕ ತೀರ್ಮಾನವನ್ನು ಅನ್ವಯಿಸುವಲ್ಲಿ ಇರುವ ಅನ್ವಯದ ಸಮಸ್ಯೆಯನ್ನು ಕುರಿತು ಹೇಳುತ್ತವೆ. ಈಗ ವೈಜ್ಞಾನಿಕ ವಿಶ್ಲೇಷಣೆಯ ಸಮಸ್ಯೆಗೂ ಉದಾಹರಣೆಗಳನ್ನು ಗಮನಿಸಬಹುದಾಗಿದೆ. ಮಾನವ ಜನಾಂಗದ ಯಾವುದೇ ಸಮಸ್ಯೆಗೆ ಭೌತಿಕ ಪರಿಸರ, ಸಾಮಾಜಿಕ ಪರಿಸರ, ಐತಿಹಾಸಿಕ ಕಾರಣಗಳು, ಸಾಂಸ್ಕೃತಿಕ ನಂಬಿಕೆಗಳು, ವ್ಯಕ್ತಿಗತ ದೌರ್ಬಲ್ಯಗಳು, ಪ್ರಚಲಿತ ನಂಬಿಕೆಗಳು, ಆಚರಣೆಗಳು, ಹೀಗೆ ಬಹುದೊಡ್ಡ ಪಟ್ಟಿಯೇ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲೆಲ್ಲಾ ಪ್ರಮುಖವೆಂದು ತೋರಿದ ಕೆಲವೊಂದು ಕಾರಣಗಳನ್ನು ಆಶ್ರಯಿಸಿ ಉಳಿದ ಕಾರಣಗಳನ್ನು ಕಡೆಗಣಿಸುವುದು ಸರ್ವೇಸಾಮಾನ್ಯ. ಕಾಲಕ್ರಮದಲ್ಲಿ ಕಡೆಗಣಿಸಿದ ಸಂಗತಿಗಳೇ ಪ್ರಮುಖವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ. ಮಾನವನ ಚಂಚಲಮನಸ್ಸನ್ನು ಸೂತ್ರೀಕರಿಸುವುದು ಕಷ್ಟ. ಈ ಕಾರಣಗಳಿಗಾಗಿಯೇ ಮಾನಯ ಅಧ್ಯಯನಗಳು ಎಷ್ಟೇ ವೈಜ್ಞಾನಿಕವಾಗಿ ವಿಶ್ಲೇಷಿಸಿದರೂ ಭೌತವಿಜ್ಞಾನದ ನಿಖರತೆಯನ್ನು ಸಾಧಿಸಲಾರವು. ಮಾನವ ಸಂಬಂಧಿ ವಿಷಯಗಳ ಪರಿಮಾಣಾತ್ಮಕ ಮಾಪನೆಯೂ ಕಷ್ಟಕರ.

ವೈಜ್ಞಾನಿಕ ವಿಚಾರವಂತಿಕೆಗೆ ವಿದ್ಯಾವಂತರ, ಅಕ್ಷರಸ್ಥರ ಕೊರತೆಯೂ ಕಾರಣವೆನ್ನಬಹುದಾದರೂ, ಅವರಿಗೆ ಮಾರ್ಗದರ್ಶನ ನೀಡಬಲ್ಲ ವಿದ್ಯಾವಂತರಲ್ಲೂ ಇರುವ ಈ ಕೊರತೆ ಇನ್ನೂ ಗಂಭೀರವಾದದ್ದು. ನಮ್ಮ ಶೈಕ್ಷಣಿಕ ಪದ್ಧತಿಯಲ್ಲಿ ವಿದ್ಯಾರ್ಥಿ ಕಲಿಯುವುದು ವಾಕ್ಯಗಳನ್ನು. ಪರೀಕ್ಷೆಯಲ್ಲಿ ಬರೆಯುವುದೂ ವಾಕ್ಯಗಳನ್ನು. ಹೀಗಾಗಿ ಇತಿಹಾಸದ ವಿದ್ಯಾರ್ಥಿಗೆ ಐತಿಹಾಸಿಕ ಪ್ರಜ್ಞೆಯಾಗಲೀ, ನೈಸರ್ಗಿಕ ವಿಜ್ಞಾನದ ವಿದ್ಯಾರ್ಥಿಗೆ ನಿಸರ್ಗದ ಬೆಡಗು ಬೆರಗಾಗಲೀ ಅನುಭವದ ಅಂಗವಾಗುವುದೇ ಇಲ್ಲ. ಇನ್ನು ವೈಜ್ಞಾನಿಕ ವಿಧಾನದ ಬಗೆಗೆ ಸ್ಪಷ್ಟ ಕಲ್ಪನೆ ನಿರೀಕ್ಷಿಸುವುದು ಈಗಿನ ಸಂದರ್ಭದಲ್ಲಿ ಕಷ್ಟ.

“ವಿಜ್ಞಾನದ ಆವಿಷ್ಕಾರಗಳೆಲ್ಲದಕ್ಕಿಂತ ವೈಜ್ಞಾನಿಕ ವಿಧಾನದ ಆವಿಷ್ಕಾರ ಪ್ರಮುಖವಾದದ್ದು. ಏಕೆಂದರೆ ಎಲ್ಲ ಆವಿಷ್ಕಾರಗಳ ಹಿಂದೆ ಜೀವವಾಹಿನಿಯಾಗಿರುವುದು ಈ ವಿಧಾನ ತಾನೇ‘’ ಎನ್ನುತ್ತಾರೆ ಎ.ಎನ್. ವೈಟ್‌ಹೆಡ್. ಆದರೆ ಆ ವಿಧಾನವೇ ಉಪೇಕ್ಷೆಗೆ ಒಳಪಟ್ಟು ಕೇವಲ ಆ ವಿಧಾನದ ಉತ್ಪನ್ನಗಳು ಭೋಗ ಸಾಮಗ್ರಿಗಳಾಗಿರುವುದು ದುರಂತವೇ ಸರಿ.

ಒಂದಾನೊಂದು ಕಾಲದಲ್ಲಿ ಹೀನಾಯವಾಗಿ ಬಳಕೆಯಾಗುತ್ತಿದ್ದ “ವೈಜ್ಞಾನಿಕ‘’ ಎಂಬ ಗುಣವಾಚಕ ಈಗ ಫ್ಯಾಷನ್ ಆಗಿ ಪರಿಣಮಿಸಿದೆ. ಧಾರ್ಮಿಕ ಮುಂದಾಳುಗಳೂ ತಮ್ಮ ವಾದವನ್ನು ವೈಜ್ಞಾನಿಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಸಿದ್ದ ವಸ್ತುಗಳಿಗೆ ನಕಲಿ ಮಾಲಿನ ಕಾಟ ತಪ್ಪಿದ್ದಲ್ಲ. `ವೈಜ್ಞಾನಿಕ ವಿಚಾರ‘ಕ್ಕೂ ಕೃತ್ರಿಮವಾಗಿ ವೈಜ್ಞಾನಿಕವೆಂದು ತೋರುವಂತೆ ಮಾಡುವ ವಿಚಾರಗಳಿಗೂ ಅಂತರ ತಿಳಿಯದೇ ಸಾಮಾನ್ಯ ಜನ ತಬ್ಬಿಬ್ಬಾಗಿದ್ದಾರೆ. ಹೀಗಾಗಿ ಸುಳ್ಳಿನೊಂದಿಗೆ ಸತ್ಯವೂ ಅಪನಂಬಿಕೆಗೆ ಗುರಿಯಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ, ವಿಜ್ಞಾನಿಗಳು, ವಿಜ್ಞಾನ ಬೋಧಕರೂ ಅಜ್ಞಾನದಿಂದಲೋ, ಉಪೇಕ್ಷೆಯಿಂದಲೋ ಅಥವಾ ಬೇರೆ ಯಾವುದೋ ಲಾಭದೃಷ್ಟಿಯಿಂದಲೋ ಎಚ್ಚರ ತಪ್ಪಿ ನಡೆದುಕೊಳ್ಳುವ ರೀತಿ ಜನರ ಸಂಶಯಕ್ಕೆ ಮತ್ತಷ್ಟು ಇಂಬುನೀಡಿದೆ.

ವಿಚಾರ ಮಾಡಲು ಸಮರ್ಥವಾದ ಮಿದುಳಿಗೆ ಭಾವುಕಶಕ್ತಿ ಕಲ್ಪನಾ ಶಕ್ತಿ ಮುಂತಾದ ಇತರೇ ಸಾಮರ್ಥ್ಯಗಳೂ ಇವೆ. ಹೀಗಾಗಿ ಅವನು ವಿಚಾರ ಮಾಡಹೊರಟಾಗ, ವಿಚಾರ ಮಾಡಿದ್ದನ್ನು ಅಭಿವ್ಯಕ್ತಗೊಳಿಸ ಹೊರಟಾಗ ಈ ಇತರೇ ಸಾಮರ್ಥ್ಯಗಳು ತಾರ್ಕಿಕ ಚಿಂತನೆಗೆ ಪೂರಕವಾಗಿ ಇಲ್ಲವೇ ವಿಕೃತಕಾರಕಗಳಾಗಿ ಪರಿಣಮಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ ಕಾರಣಗಳಿಂದಾಗಿಯೇ ಮಾನವನು ವಿಚಾರಮಾಡಬಲ್ಲ ಪ್ರಾಣಿ (rational animal) ಎಂಬ ಹೆಗ್ಗಳಿಕೆಯ ಜೊತೆಯಲ್ಲಿಯೇ ವೈಚಾರೀಕರಿಸಬಲ್ಲ ಪ್ರಾಣಿ (rationalising animal) – ತನಗೆ ಸರಿತೋರಿದ್ದಕ್ಕೆ ವೈಚಾರಿಕತೆ ಹೊದೆಸಿ ಸಮರ್ಥಿಸಿಕೊಳ್ಳುವವ ಎಂಬ ಅಕ್ಷೇಪಣೆಗೂ ಗುರಿಯಾಗಿದ್ದಾನೆ. ಇದೂ ಅಲ್ಲವೆ ಮಾನವನ ವೈಚಾರಿಕ ಸಾಮರ್ಥ್ಯದೊಂದಿಗೆ ಅವನಿಗೆ ನಿರಂತರವಾಗಿ ಅತೀಂದ್ರಿಯವಾದ ಶಕ್ತಿಯೊಂದರ ಅಸ್ತಿತ್ವದ ಬಗೆಗೂ ಪ್ರಬಲವಾದ ಒಲವಿರುವಂತೆ ಕಾಣುತ್ತದೆ. ಆ ಒಲವು ಇವನ ಅಸಹಾಯಕ ಪರಿಸ್ಥಿತಿಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಬಿಡುತ್ತದೆ.

ವೈಜ್ಞಾನಿಕ ವಿಧಾನವು ಒಮ್ಮೆಗೇ ಅನ್ವಯಿಸಿ ಮುಗಿಸುವಂತಹ ಕೆಲಸವಲ್ಲ. ಅದನ್ನು ಹಂತಹಂತವಾಗಿ ಅನೇಕ ಸಾಧ್ಯಕ್ಷೇತ್ರಗಳಿಗೆ ವಿಸ್ತರಿಸಬೇಕೆಂಬ ಸಂಗತಿ ವಿಜ್ಞಾನದ ಇತಿಹಾಸದಿಂದ ತಿಳಿದುಬರುವಂತಹದು.

ಅದೇರೀತಿ ವಿಜ್ಞಾನದ ವಿಧಾನವನ್ನು ಎಲ್ಲ ನಡೆವಳಿಕೆಗಳಿಗೂ ಅನ್ವಯಿಸುವುದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಆನೆಗೂ ಚಡ್ಡಿಹೊಲಿಸಬೇಕೆಂಬ ಅತಿ ಶೀಲವಂತರ ಹಟ ಅದು. ಲೇಖಕ ಡೆಸ್ಮಾಂಡ್ ಮಾರಿಸ್ ಹೇಳುತ್ತಾರೆ, “ವೈಜ್ಞಾನಿಕ ಲೆಕ್ಕಾಚಾರದಲ್ಲಿ ಆನಂದಿಸುವಾತನೇ ಒಮ್ಮೊಮ್ಮೆ ಬೇಸರಗೊಂಡು ಮೀನುಹಿಡಿಯಲು ಅನೇಕ ಮೈಲಿ ವಿಮಾನದಲ್ಲಿ ಹೋಗುವನು‘’. ರೂಢಿ ಮೂಲಕಾರ್ಯದಲ್ಲಿ, ಅವೈಜ್ಞಾನಿಕ ಅಂಶಗಳನ್ನು ಹುಡುಕಿ ಕಸಿವಿಸಿಕೊಳ್ಳಲು ಕಾರಣವಿಲ್ಲ. ಆ ಬಗೆಯ ಆಚರಣೆಯಿಂದ ತೀವ್ರಪರಿಣಾಮವೇನಾದರೂ ಆಗುತ್ತಿದ್ದಲ್ಲಿ ಅದರತ್ತ ಗಮನ ಹರಿಸಬೇಕಾಗುತ್ತದೆ. ತೀವ್ರಪರಿಣಾಮ ಬೀರುವ ಅವೈಜ್ಞಾನಿಕ ಸಾಮೂಹಿಕ ನಂಬಿಕೆಗಳೇ ಬೇಕಾದಷ್ಟು ಇರುವಾಗ ವೈಯಕ್ತಿಕ ನಿರುಪದ್ರವಕರ ಭ್ರಮೆಗಳನ್ನು ಖಂಡಿಸಿ ಇರುವ ವ್ಯಕ್ತಿ ಸಂಬಂಧವನ್ನು ಕಳೆದುಕೊಳ್ಳುವುದು ಯುಕ್ತವಾಗಲಾರದು.

ವೈಜ್ಞಾನಿಕ ವಿಧಾನವನ್ನು ಸಂದೇಹಿಸುವವರ ಬಗ್ಗೆ ಅಷ್ಟೇನೂ ಚಿಂತಿಸಬೇಕಿಲ್ಲ. ಅವರಿಂದ ಸೂರ್ತಿಯನ್ನೇ ಪಡೆಯಲು ಸಾಧ್ಯವಿದೆ. ಅವರ ಸಂದೇಹಪ್ರವೃತ್ತಿಯೂ ವೈಜ್ಞಾನಿಕ ವಿಧಾನದ ಒಂದು ಅಂಗವೇ. ದಾಸರು ಹೇಳುವಂತೆ “ನಿಂದಕರಿರಬೇಕು ಸಜ್ಜನರಿಗೆ‘’. ಇಂದಿನ ಕೊರತೆಯೆಂದರೆ ವೈಜ್ಞಾನಿಕ ವಿಧಾನವನ್ನು ಅನ್ವಯಿಸಿ ಸಾಮಾಜಿಕ ದೋಷಗಳತ್ತ ದನಿ ಎತ್ತಬಲ್ಲ ಸಜ್ಜನರದ್ದು; ಹಾಗೆ ದನಿ‌ಎತ್ತಿದ ಸಜ್ಜನರೊಡನೆ ದನಿಗೂಡಿಸಬಲ್ಲ ಜನತೆಯದು. ಈ ದಿಶೆಯಲ್ಲಿ ನಮ್ಮ ಹೊಣೆ ಸಾಕಷ್ಟಿದೆ. ನಾವು ನಮ್ಮ ವ್ಯಾಪ್ತಿ, ಇತಿಮಿತಿ, ಸ್ವಸಾಮರ್ಥ್ಯದ ಪೂರ್ಣ ಪರಿಜ್ಞಾನದೊಂದಿಗೆ ಕಾರ್ಯಪ್ರವೃತ್ತರಾಗೋಣ.

ವೈಜ್ಞಾನಿಕ ಚಿಂತನೆಯಿಂದ ಉತ್ಪನ್ನನಾದ ಸರಕುಗಳು ಜನಜೀವನವನ್ನು ಸುಧಾರಿಸಿದ ರೀತಿಯಲ್ಲಿಯೇ ವೈಜ್ಞಾನಿಕ ಚಿಂತನಕ್ರಮವು ಎಲ್ಲವರ್ಗದ ಜನರಿಗೂ ತಲುಪಿ, ವೈಜ್ಞಾನಿಕ ವಿಧಾನವೂ ಅವರ ಚಿಂತನಾ ಕ್ರಮದ ಒಂದು ಭಾಗವಾಗಿ ಪರಿಣಮಿಸಲಿ. ವೈಜ್ಞಾನಿಕ ಪ್ರವೃತ್ತಿಯನ್ನು ಬೆಳೆಯಿಸುವುದು ನಮ್ಮ ಸಾಮಾಜಿಕ ಹೊಣೆಯೂ, ಸಂವಿಧಾನದಲ್ಲಿನ ಬಾಧ್ಯತೆಯೂ ಆಗಿದೆಯಲ್ಲವೆ?