ನಿಸರ್ಗದ ನಿಯಮಗಳನ್ನು ವೈಜ್ಞಾನಿಕವಾಗಿ ಅರಿಯುವುದರ ಮೂಲಕ, ನಿಸರ್ಗದಲ್ಲಿ ಲಭ್ಯವಿರುವ ವಸ್ತುಗಳನ್ನು ತನ್ನ ಅಗತ್ಯಕ್ಕೆ ಪರಿವರ್ತಿಸಿಕೊಳ್ಳುವುದರ ಮೂಲಕ ಜೀವನಕ್ರಮದ ಸುಧಾರಣೆಯನ್ನು ಮಾಡಿರುವುದೇ ಅಲ್ಲದೆ ಮಾನವನು ನಿಸರ್ಗದ ಬಹುತೇಕ ಅಂಶಗಳನ್ನು ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ. ಇವನ ಕೈಚಳಕಕ್ಕೆ ಒಳಗಾಗದ ವಸ್ತುವೇ ಇಲ್ಲವೇನೋ ಎನ್ನುವ ಮಟ್ಟಿಗೆ ಇವನ ಪ್ರಭಾವ ವ್ಯಾಪಿಸಿದೆ; ವಾಯುಮಂಡಲದ ಹೊರಪೊರೆಯಾದ ಓಜೋನ್ ಕವಚವೂ ಇವನ ಪ್ರಭಾವಕ್ಕೆ ಒಳಗಾಗಿದೆ. ನಿಸರ್ಗವನ್ನು ಅರಿಯುವುದಕ್ಕೆ ಮಾನವ, ವೈಜ್ಞಾನಿಕ ವಿಧಾನ ರೂಪಿಸಿಕೊಂಡಿದ್ದಾನೆ. ವೈಜ್ಞಾನಿಕ ವಿಧಾನದಿಂದ ಅರಿತ ನಿಸರ್ಗವನ್ನು ಪರಿವರ್ತಿಸಿದ್ದಾನೆ.

ಈ ಪರಿವರ್ತನೆಗೆ ಹೋಲಿಸಿದರೆ, ಮಾನವನ ಚಿಂತನಾಕ್ರಮದಲ್ಲಿ ಆಗಿರುವ ಬದಲಾವಣೆ ನಗಣ್ಯವೆನಿಸುವಷ್ಟು ಕಡಿಮೆ. ಮಾನವ ಸಮುದಾಯದ ನಂಬಿಕೆಗಳು, ಆಶೋತ್ತರಗಳು ಆಚರಣೆಗಳು ವೈಜ್ಞಾನಿಕ ವಿಧಾನದ ಆಮ್ಲ ಪರೀಕ್ಷೆಗೆ ಒಳಪಟ್ಟಿಲ್ಲ. ಒಂದು ರೀತಿಯಲ್ಲಿ ಇದು ವೈದ್ಯನಿಗೇ ಹತ್ತಿದ ವ್ಯಾಧಿ. ವ್ಯಕ್ತಿಗತವಾದ, ಸಾಮೂಹಿಕವಾದ ತಪ್ಪುನಂಬಿಕೆಗಳು ಪಟ್ಟಿ ಮಾಡುವುದೇ ಕಷ್ಟವೆನ್ನುವಷ್ಟು ಅಪಾರ. ಈ ನಂಬಿಕೆಯಿಂದ ಬಿಡುಗಡೆಯಾಗಿರುವ ಏಕೈಕ ಪರಿಹಾರ ವೈಜ್ಞಾನಿಕ ಚಿಂತನೆಯೆಂದು ತಿಳಿದಿದ್ದೂ ಅನ್ವಯದಲ್ಲಿ ತೊಂದರೆಯೇಕೆ?

ಒಂದು ಉದಾಹರಣೆಯನ್ನು ಗಮನಿಸುವುದು ಅಪ್ರಸ್ತುತವಾಗಲಾರದು. ಸಂಕರಿತ (ಹೈಬ್ರಿಡ್) ತಳಿಗಳ ಉತ್ಪನ್ನಗಳು ಹೆಚ್ಚು ಉಪಯುಕ್ತ, ಲಾಭದಾಯಕ ವಿಧಾನವೆಂಬುದನ್ನು ಜನ ಒಪ್ಪಿದಷ್ಟು ಸರಾಗವಾಗಿ ಇದೇ ತತ್ವದ ವಿಸ್ತರಣೆಯಿಂದ ಅಂತರ್‌ಜಾತೀಯ ವಿವಾಹವನ್ನು, ಅಂತರಜನಾಂಗ ವಿವಾಹವನ್ನು ಬೆಂಬಲಿಸಿಯಾರೆ?

“ವೈಜ್ಞಾನಿಕ ವಿಧಾನದ ನಿರನ್ವಯಕ್ಕೆ ಕಾರಣವೇನು?’’ ಎಂಬುದು ಕುತೂಹಲಕರ ಅಂಶ. ನಿಸರ್ಗದ ಅಧ್ಯಯನದಲ್ಲಿ ತೋರಿಸುವ ಸತ್ಯಬದ್ಧತೆ, ವಸ್ತುನಿಷ್ಠತೆ ಮಾನವಕುಲದ ಅಧ್ಯಯನದಲ್ಲಿ ಕಷ್ಟ. ಬೆಳಕನ್ನು ಅಲೆಯೆಂದು ಭಾವಿಸಿದರಾಗಲಿ, ಕಣವೆಂದು ಭಾವಿಸಿದರಾಗಲಿ ಅದು ಮಾನವಕುಲದಮೇಲೆ ಬೀರುವ ಪ್ರತ್ಯಕ್ಷ ಪ್ರಭಾವ ಕಡಿಮೆ. ಹಾಗೆ ಉಂಟಾಗುವ ಪ್ರಭಾವವಿದ್ದರೂ ಅದು ಇಡೀ ಮನುಜಸಂಕುಲದ ಮೇಲೆ ಹೆಚ್ಚುಕಡಿಮೆ ಒಂದೇ ಬಗೆಯ ಪರಿಣಾಮ ಬೀರೀತು. ಆದರೆ ಆನುವಂಶೀಯತೆಯನ್ನು, ಪರಿಸರವನ್ನು ಕುರಿತಂತೆ ತೆಗೆದುಕೊಳ್ಳುವ ನಿರ್ಣಯಗಳು ವಿಭಿನ್ನ ವರ್ಗದವರಿಗೆ ವಿಭಿನ್ನ ರೀತಿ ಪರಿಣಾಮ ಬೀರುವಂತಹವು.

ಇದುವರೆಗೆ ಮಾನವ ಕುಲದ ಸಮಸ್ಯೆಗಳಿಗೆ ವೈಜ್ಞಾನಿಕ ಚಿಂತನೆಯನ್ನು ಅನ್ವಯಿಸಲು ವ್ಯಕ್ತಿಗತ ಅಡ್ಡಿಯನ್ನು ಗಮನಿಸಲಾಯಿತು.

ಮಾನವ ಸಮಾಜವನ್ನು ಕುರಿತ ವೈಜ್ಞಾನಿಕ ಅಧ್ಯಯನವನ್ನು ನೇರವಾಗಿಯೇ ಕೈಗೊಳ್ಳಬಾರದೇಕೆ? ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತ. ಮಾನವರ ಸಮಸ್ಯೆಗಳನ್ನು ಜ್ಞೇಯನಿಷ್ಠ (ವಸ್ತುನಿಷ್ಠ)ವಾಗಿ ನೋಡುವುದು ಹೇಗೆ ಕಷ್ಟವೋ ಹಾಗೆಯೇ ಮನುಷ್ಯನ ವಿಚಾರಕ್ರಮವೂ, ವರ್ತನೆಯೂ ವಿಶ್ಲೇಷಣೆಗೆ ಕಷ್ಟಕರವಾದದ್ದು. ಇದಕ್ಕೆ ಕಾರಣಗಳು ಹಲವಾರು:

1. ಮನುಷ್ಯರನ್ನು / ಸಮಾಜವನ್ನು ಕುರಿತಂತೆ ನಿಯಂತ್ರಿತ ಪ್ರಯೋಗವನ್ನು ಮಾಡುವುದು ಕಷ್ಟ.

ಯಾವುದೇ ಒಂದು ಬದಲಾವಣೆಯನ್ನು ಕುರಿತು ಅಭ್ಯಾಸ ಮಾಡಬೇಕಾಗಿದೆಯೆನ್ನೋಣ. ಆ ಬದಲಾವಣೆಗೆ ಕಾರಣವಾದ ಅಂಶಗಳನ್ನು ಗುರುತಿಸಿ, ಆ ಅಂಶಗಳ ಪೈಕಿ ಒಂದನ್ನು ಮಾತ್ರ ಬದಲಾಯಿಸಿ, ಉಳಿದ ಅಂಶಗಳು ಬದಲಾವಣೆಯಾಗದಂತೆ ನೋಡಿಕೊಂಡು ಅಧ್ಯಯನ ನಡೆಸುವುದು ನಿಯಂತ್ರಿತ ಪ್ರಯೋಗವೆನಿಸುವುದು. ಉಷ್ಣತೆ, ಅನಿಲದ ಪ್ರಮಾಣ, ಒತ್ತಡ ಈ ಅಂಶಗಳು ಅನಿಲದ ಗಾತ್ರವನ್ನು ನಿರ್ಧರಿಸುವುವು. ಅನಿಲದ ಗಾತ್ರದಮೇಲೆ ಒತ್ತಡದ ಪ್ರಭಾವವನ್ನು ಅಳೆಯುವಾಗ ಉಷ್ಣತೆ, ಅನಿಲದ ಪ್ರಮಾಣವನ್ನು ಒಂದೇ ಪ್ರಮಾಣದಲ್ಲಿರಿಸಿ ಪ್ರಯೋಗ ನಡೆಸಲಾಗುವುದು. ಅದೇ ರೀತಿ ಉಷ್ಣತೆಯ ಪ್ರಭಾವವನ್ನು ಉಳಿದೆರಡು ಅಂಶಗಳನ್ನು ಬದಲಾಯಿಸದೆ ಕಂಡು ಹಿಡಿಯಲಾಗುವುದು.

ಇದೇ ಬಗೆಯ ಅಧ್ಯಯನವನ್ನು ನಿರುದ್ಯೋಗ ಕುರಿತಂತೆ, ಬೆಲೆ ಏರಿಕೆ ಕುರಿತಂತೆ, ಮನುಷ್ಯರ ಸ್ವಭಾವ ಕುರಿತಂತೆ ನಡೆಸುವುದು ಕಷ್ಟ. ಏಕೆಂದರೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಭಾವ ಬೀರಬಲ್ಲ ಅಂಶಗಳು ನಮ್ಮ ನಿಯಂತ್ರಣದಲ್ಲಿಲ್ಲ. ಹೀಗಾಗಿ ಅವುಗಳನ್ನು ಸ್ಥಿರವಾಗಿರಿಸುವುದಾಗಲಿ, ಬದಲಾಯಿಸುವುದಾಗಲಿ ಮಾಡಿ ಪ್ರಯೋಗ ಕೈಗೊಳ್ಳುವುದು ಅಸಾಧ್ಯ. ಇವುಗಳನ್ನು ಕುರಿತಂತೆ ಯಾವುದೇ ವಾದವನ್ನು ತಾಳೆನೋಡುವುದು ಕಷ್ಟ.

2. ವೈಜ್ಞಾನಿಕ ಅಧ್ಯಯನವೆಂದರೆ – ಮಾನವ ವರ್ತನೆಯ ತಾರ್ಕಿಕ ವಿನ್ಯಾಸವನ್ನು ಗುರುತಿಸುವುದು. ಮನುಷ್ಯನ ಆಲೋಚನಾ ಕ್ರಮವೇ ಸದಾ ತಾರ್ಕಿಕವಲ್ಲ; ಮಿಗಿಲಾಗಿ ಒಬ್ಬನೇ ವ್ಯಕ್ತಿ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿ ವರ್ತಿಸುತ್ತಾನೆ; ವ್ಯಕ್ತಿಯು ನಿರ್ಣಯ ತೆಗೆದುಕೊಳ್ಳುವಾಗ ಗಣನೆಗೆ ತೆಗೆದುಕೊಳ್ಳುವ ಅನೇಕ ಅಂಶಗಳನ್ನು ಗುರುತಿಸುವುದೂ ಕಷ್ಟ. (ಉದಾ : ಅವನ ಹಿಂದಿನ ಅನುಭವಗಳು, ಕಲಿಕೆಯ ಅಂಶಗಳು) ಹೀಗಾಗಿ ನಿರ್ಣಯವನ್ನು ಊಹೆ ಮಾಡುವಷ್ಟು ಖಚಿತವಾದ ಚಿತ್ರ ದೊರೆಯುವುದಿಲ್ಲ. ಒಬ್ಬನೇ ವ್ಯಕ್ತಿ ಅನುಭವ ಮಾಗಿದಂತೆಲ್ಲಾ ತನ್ನ ನಿಲುವನ್ನು ಬದಲಾಯಿಸುತ್ತಾನೆ. ಅದನ್ನು ಅಭಿಪ್ರಾಯಗಳ ಏರಿಳಿತ ಎನ್ನಲಾಗುತ್ತದೆ.

3. ಅನೇಕ ವೇಳೆ ಸೂಕ್ಷ್ಮ ಅಂಶಗಳೂ ವರ್ತನೆಯ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡುವುವು. ಸಮಯೋಚಿತವಾದ ಶಹಭಾಸ್‌ಗಿರಿ ಯುದ್ಧವನ್ನೇ ತಪ್ಪಿಸಬಲ್ಲದು ಎಂದು ಹೇಳುವುದುಂಟು. ಇಷ್ಟು ಚಂಚಲವಾದ ಸ್ವಭಾವದಲ್ಲಿ ಪುನರ್‌ಸ್ಥಾಪನೀಯತೆ (Reproducibility) ಕಡಿಮೆ.

ಕರುಳುಹುಣ್ಣಿನ ಮೇಲೆ ತರಕಾರಿ ಬೀರುವ ಪರಿಣಾಮವನ್ನು ಮಾಡಿದ ವಿವರ ಅಧ್ಯಯನ, ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಪ್ರಕಾರ, ಇಲಿಗಳಿಗೆ ಗಾಜಿನ ಪುಡಿ ತಿನ್ನಿಸಿ, ಕರುಳಿನಲ್ಲಿ ಕೃತಕ ಹುಣ್ಣು ಉಂಟುಮಾಡಿ, ಆ ಹುಣ್ಣಿನಮೇಲೆ ತರಕಾರಿ ಬೀರುವ ಪ್ರಭಾವವನ್ನು ಅಭ್ಯಾಸ ಮಾಡಿದುದಾಗಿ ವರದಿಯಾಗಿತ್ತು. ಆಗ ಪ್ರಾಣಿದಯಾಸಂಘದವರು ಈ ಬಗ್ಗೆ ತೀವ್ರ ಪ್ರತಿಭಟಿಸಿದರು. “ಕರುಳು ಹುಣ್ಣಿನಿಂದ ನರಳುವ ರೋಗಿಗಳು ಅಗಾಧ ಸಂಖ್ಯೆಯಲ್ಲಿರುವಾಗ ಇಲಿಗಳಿಗೇಕೆ ಕೃತಕವಾಗಿ ರೋಗವನ್ನುಂಟುಮಾಡಬೇಕು?’’ ಎಂಬುದು ಅವರ ಆಕ್ಷೇಪಣೆ.

ಗಮನಿಸಬೇಕಾದ ಅಂಶವೆಂದರೆ ಇಲಿಗಳ ಮೇಲೆ ನಿಯಂತ್ರಿತ ಪ್ರಯೋಗ ಕೈಕೊಂಡಷ್ಟು ಸುಲಭವಾಗಿ ಮಾನವರ ಮೇಲೆ ಕೈಕೊಳ್ಳಲು ಬರುವುದಿಲ್ಲ. ಉದಾಹರಣೆಗೆ ತರಕಾರಿ ರಸವನ್ನು ಸೇವಿಸಿದ ರೋಗಿಯನ್ನು ಪರಿಶೀಲಿಸುತ್ತಿದ್ದಾಗ ಬೇರೇನೋ ಕಾರಣಕ್ಕಾಗಿ ರೋಗಿಯು ಉದ್ವಿಗ್ನನಾದರೆ ವೇದನೆ ಉಲ್ಬಣಗೊಳ್ಳುವುದು. ಆತನ ಉದ್ವಿಗ್ನತೆ, ಅದರಿಂದ ದೇಹದ ಮೇಲಾಗುವ ಪರಿಣಾಮ ಮೊದಲಾದ ಅಂಶಗಳನ್ನು ಅಂದಾಜು ಮಾಡುವುದು ಹೇಗೆ?

4. ಮಾನವರ ವರ್ತನೆಯ ಪ್ರಕ್ರಿಯೆಯಲ್ಲಿ ವ್ಯಕ್ತಿಗತ ಅಂತರಗಳು ಹೆಚ್ಚು. ಇದರಿಂದಾಗಿ ನಿಯಮಗಳ ಸಾರ್ವತ್ರೀಕರಣ ಕಷ್ಟ.

ಉದಾಹರಣೆಗೆ : ಸಣ್ಣ ನಗೆಹನಿಗೂ ಕೆಲವರು ಗಹಗಹಿಸಿ ನಗುವರು. ದೊಡ್ಡ ಹಾಸ್ಯಪ್ರಸಂಗದಲ್ಲೂ ಕೆಲವರು ಸುಮ್ಮನೆ ಮುಗುಳ್ನಕ್ಕುಬಿಡುವರು. ಹೀಗಾಗಿ ಕ್ರಿಯೆ, ಪ್ರತಿಕ್ರಿಯೆಗಳ ನಡುವೆ ಒಂದು ಸಾರ್ವತ್ರಿಕ ಅನುಪಾತ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಮನಃಶಾಸ್ತ್ರದಲ್ಲಿ ಉಳಿದ ವಿಜ್ಞಾನ ಶಾಖೆಗಳಷ್ಟು ಖಚಿತ ಅಭಿಪ್ರಾಯಗಳನ್ನು ಒದಗಿಸಲು ಅನೇಕ ವೇಳೆ ತೊಂದರೆ.

5. ವ್ಯಕ್ತಿಯ ವರ್ತನೆಯನ್ನು ನೈಸರ್ಗಿಕ ಪರಿಸರ, ದೇಹದ ಸ್ಥಿತಿಗತಿಗಳು ನಿರ್ಣಯಿಸುವ ರೀತಿಯಲ್ಲೆ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳು ನಿಯಂತ್ರಿಸುವುವು. ವ್ಯಕ್ತಿಯ ವರ್ತನೆ ಆತ ಒಂಟಿಯಾಗಿದ್ದಾಗ ಗುಂಪಿನಲ್ಲಿದ್ದಾಗ ಬೇರೆಯೇ ಆಗುವುದು.

ಒಟ್ಟಿನಲ್ಲಿ, ಕಾರಣ – ಪರಿಣಾಮಗಳ ಗುಣಾತ್ಮಕ, ಪರಿಮಾಣಾತ್ಮಕ ಸಂಬಂಧಗಳನ್ನು ನಿರ್ಣಯಿಸುವ ವಿಜ್ಞಾನ ಮಾನವ ಕೇಂದ್ರಿತ ಅಧ್ಯಯನಗಳಲ್ಲಿ ಖಚಿತ ಅಧ್ಯಯನ ನಡೆಸುವುದು ಕಷ್ಟ. ಸೃಜನಶೀಲ ಮನಸ್ಸಿನ ಸ್ಥಿತಿಯನ್ನು ಸೂತ್ರದಲ್ಲಿ ಬಂಧಿಸಿಡುವುದು ಕಷ್ಟ. ಸುಲಭವಾಗಿ `ಅಳತೆಗೆ ಅಳವಡದ ಮನಸ್ಸು‘, ಹಾಗೂ ಅದರ ನಿರ್ಧಾರಗಳು, ಮಾನವ ಕೇಂದ್ರಿತ ಅಧ್ಯಯನಗಳ ನಿಖರತೆಗೆ ಸವಾಲು! ಈ ಹಿನ್ನಲೆಯ ಇತಿಮಿತಿಗಳಲ್ಲಿ ಪರಿಶೀಲಿಸಿದರೆ ಮಾನವಿಕ ಅಧ್ಯಯನಗಳ ಸಾಧನೆ ಗಣನೀಯವಾದದ್ದು.

ಅನುಬಂಧ

ಮಾನವ ಸ್ವಭಾವವನ್ನು ಅಳವಡಿಸಿಕೊಂಡ ಅಧ್ಯಯನವಾದ ಅರ್ಥಶಾಸ್ತ್ರದ ಒಂದು ಉದಾಹರಣೆಯನ್ನು ಗಮನಿಸೋಣ. ಯಾವುದೇ ವಸ್ತುವಿನ ಬೆಲೆಯನ್ನು ನಿರ್ಧರಿಸುವ ಅಂಶಗಳು ಎರಡು 1. ಬೇಡಿಕೆ 2. ಪೂರೈಕೆ.

1. ಬೇಡಿಕೆ : ಇದು ಮಾನವರ ಧೋರಣೆಯನ್ನು ಆಧರಿಸಿದ್ದು. ಇಡೀ ಸಮುದಾಯ ಒಂದು ವಸ್ತುವನ್ನು ಪಡೆಯಲು ಎಷ್ಟರ ಮಟ್ಟಿಗೆ ತಹತಹಿಸುತ್ತದೆ ಎಂಬುದು ಬೇಡಿಕೆಯನ್ನು ನಿರ್ಧರಿಸುತ್ತದೆ. ಇದನ್ನು ಪರಿಮಾಣಾತ್ಮಕವಾಗಿ ನಿರ್ಣಯಿಸಲು ಈ ಕೆಳಗಿನ ಅಡ್ಡಿಗಳಿವೆ.

ಅ) ಬೇಡಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವ್ಯಕ್ತಿಗಳ ಬೇಡಿಕೆಯನ್ನು ಬಿಡಿಬಿಡಿಯಾಗಿ ಅಂದಾಜು ಮಾಡಿ ಒಟ್ಟು ಬೇಡಿಕೆ ನಿರ್ಧರಿಸುವುದು ಕಷ್ಟ.

ಆ) ಬೇಡಿಕೆ ಪೂರೈಕೆಯನ್ನು ಅವಲಂಬಿಸಿರುತ್ತದೆ.

ಇ) ಕಾಲಬದಲಾದಂತೆ ಒಬ್ಬನೇ ವ್ಯಕ್ತಿಯ ಬೇಡಿಕೆಯೂ ಬದಲಾಗುವುದು.

ಈ) ಬೇಡಿಕೆಯು ಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿರುವುದು. ಕೊಳ್ಳುವ ಸಾಮರ್ಥ್ಯ ಬದಲಾಗುವುದು.

ಉ) ಬೇಡಿಕೆಯು ವಸ್ತು ಮತ್ತು ಅದರ ಲಭ್ಯತೆಯನ್ನು ಅವಲಂಬಿಸಿರುವುದು.

ಊ) ವಸ್ತುವಿನ ಬೇಡಿಕೆ ಸಮಾಜದ ಗತಿಶೀಲತೆಯನ್ನು ಆಧರಿಸಿರುವುದು.

ಋ) ವಿಜ್ಞಾನ ತಂತ್ರಜ್ಞಾನದ ಪ್ರಗತಿ ಮತ್ತು ಜೀವನಶೈಲಿಯ ಬದಲಾವಣೆ ಬೇಡಿಕೆಯ ಮೇಲೆ ತನ್ನ ಪ್ರಭಾವವನ್ನು ಬೀರಬಹುದು.

ಇದರಂತೆಯೇ ಪೂರೈಕೆಯ ಪರಿಮಾಣವನ್ನು ಅಂದಾಜಿಸುವುದು ಮತ್ತು ಮುನ್ಸೂಚಿಸುವುದು ಅತ್ಯಂತ ಗೋಜಲಿನ ಸಂಗತಿಯೆಂಬುದನ್ನು ವಿವರಿಸಬೇಕಾಗಿಲ್ಲ.