ಸಾಹಿತ್ಯ ಭಾವಾಭಿವ್ಯಕ್ತಿ. ಆದರೆ, ವಿಜ್ಞಾನ ವಿಚಾರ ಪ್ರಚೋದಕ. ಇವುಗಳಿಗಿರುವ ಸಂಬಂಧವನ್ನು ಅರಿಯಬೇಕಾದರೆ ಈ ಎರಡು ಕ್ಷೇತ್ರಗಳ ಸಾದೃಶ, ವೈದೃಶಗಳನ್ನು ಅರಿಯಬೇಕಾಗುತ್ತದೆ. ಇದನ್ನು ಅರಿಯುವ ಮೊದಲು ಈ ಎರಡು ಕ್ಷೇತ್ರಗಳೂ ದಿನನಿತ್ಯದ ವ್ಯವಹಾರದ ಮಾತುಕತೆಗಳಿಗಿಂತ ಹೇಗೆ ವಿಭಿನ್ನವಾದುವು ಎಂಬುದನ್ನು ಅರಿಯಬೇಕಾಗುತ್ತದೆ.

ದಿನನಿತ್ಯದ ಮಾತುಕತೆಗೆ ವಿಶೇಷವಾದ ಉದ್ದೇಶವೇನೂ ಇರುವುದಿಲ್ಲ. “ನನಗೆ ಬಾಯಾರಿಕೆಯಾಗಿದೆ; ಕುಡಿಯುವ ನೀರು ಬೇಕು‘’ ಎಂದಾಗ ನೀರನ್ನು ಪಡೆಯುವುದೇ ಉದ್ದೇಶ. ನೀರನ್ನು ತಂದುಕೊಡುವಷ್ಟರ ಮಟ್ಟಿಗೆ ನಮ್ಮ ಸ್ಥಿತಿ ಅರ್ಥವಾಯಿತೆಂದರೆ ಕೆಲಸ ಮುಗಿದಂತೆಯೇ. ಇದರಲ್ಲಿ “ನೀರು ಕುಡಿಯಲು ಯೋಗ್ಯವಾಗಿರಬೇಕು; ಅದು ನನಗೆ ಅವಶ್ಯ‘’ವೆಂಬ ಮಾಹಿತಿಯೂ ಇದೆ. ಹೇಳುವ ಧಾಟಿಯಲ್ಲಿ ದೈನ್ಯತೆಯೋ, ಕೋಪವೋ ಇರಲೂಬಹುದು. ಆದರೆ ಅವು ಪ್ರಾಸಂಗಿಕವಾಗಿ ಬಂದವೇ ವಿನಾ ಪ್ರಧಾನ ಅಂಶಗಳಲ್ಲ. ಆದರೆ ವಿಜ್ಞಾನ, ಸಾಹಿತ್ಯಗಳಲ್ಲಿ ಮಾಹಿತಿ ಇರುವುದಾದರೂ ಉದ್ದೇಶವು ಮಾಹಿತಿಯನ್ನು ಮೀರಿ ಮತ್ತೇನನ್ನೋ ಸಾಧಿಸುವುದು. ಮಾಹಿತಿಗಳ ತಾರ್ಕಿಕ ವಿನ್ಯಾಸ ವಿಜ್ಞಾನವಾದರೆ, ಭಾವ ಸಂಕೀರ್ಣತೆಯ ವಿಸ್ತಾರ ಸಾಹಿತ್ಯವಾಗುತ್ತದೆ. “ಅವನು ಕೋಪದಿಂದ ಕಿಡಿಕಿಡಿಯಾದ‘’ ಎಂದಾಗ ಕಾವ್ಯದ ರೂಪಕವೂ, ಕೆಲವೊಮ್ಮೆ ವೈಜ್ಞಾನಿಕ ವಿಧಾನದ ತುಣುಕುಗಳೂ ಭಾಷೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವುದುಂಟು. ಉಳಿದಂತೆ, ವಿಜ್ಞಾನದ ಖಚಿತತೆಯಾಗಲಿ, ಕಾವ್ಯದ ಆಲಂಕಾರಿಕ ಮಾತುಗಳಾಗಲೀ ಸಾಮಾನ್ಯವಾಗಿ ಭಾಷೆಯಲ್ಲಿ ಕಾಣಬರುವುದಿಲ್ಲ.

ಕಾವ್ಯಕ್ಕಾಗಲಿ ವೈಜ್ಞಾನಿಕ ವಿಶ್ಲೇಷಣೆಗಾಗಲಿ ಇದಮಿತ್ಥಂ ಎಂಬ ವಿವರಣೆ ನೀಡುವುದು ಕಷ್ಟ. ಆ ಗೋಜಲನ್ನು ಪಂಡಿತರಿಗೆ ಬಿಡೋಣ. ಈಗ ಕಾವ್ಯ, ವಿಜ್ಞಾನಗಳ ಸಂಬಂಧವನ್ನು ಸೋದಾಹರಣವಾಗಿ ಪರಿಗಣಿಸುವುದು ಈ ಪ್ರಬಂಧದ ಉದ್ದೇಶ.

ನಿಸರ್ಗವೆಂದರೆ ಮಾನವಸ್ವಭಾವವನ್ನು ಬಿಂಬಿಸುವ ಕನ್ನಡಿಯಾಗಿ ಕವಿಗೆ ತೋರುವುದು. ವಿಜ್ಞಾನಿಗಾದರೋ ನಿಸರ್ಗವು ಅರಿತು ಬಳಸಬೇಕಾದ ಸಾಮಗ್ರಿಗಳ ಉಗ್ರಾಣ. ನಿಸರ್ಗವು ಕವಿಗೆ ವ್ಯಕ್ತಿತ್ವದ ವಿಸ್ತರಣ ತಾಣವಾದರೆ, ವಿಜ್ಞಾನಿಗೆ ಅದು ನಿಸರ್ಗ ಸೂತ್ರದಲ್ಲಿ ಬಂಧಿಸಿ ಆನಂದಿಸಬೇಕಾದ ಗಿಳಿ, ತಂತ್ರಜ್ಞಾನಿಗೆ ಅದು ದುಡಿಮೆಗೆ ನೆರವಾಗಬಲ್ಲ ಕಾಡಾನೆ. ಜೋಗದ ಜಲಪಾತ – ಕವಿ ಡಿ.ವಿ.ಜಿ ಯವರಿಗೆ “ಯಾವ ಪರದೇವತೆಗೋ ಪ್ರಕೃತಿ ನೀಡುತಿರುವ ಪದಾರ್ಘ್ಯ‘’; – ವಿಜ್ಞಾನಿಗೆ ಪ್ರಚ್ಛನ್ನ ಶಕ್ತಿಯು ಚಲನೆ ಶಕ್ತಿಗೆ ರೂಪಾಂತರ ಹೊಂದುವ ಜಾಗ – ತಂತ್ರಜ್ಞಾನಿ ಸರ್ ಎಂ.ವಿ.ಗೆ ಇದು ಬಳಸಿಕೊಳ್ಳಬಹುದಾದ ಶಕ್ತಿಯ ಆಕರ. ಸಂಜೆಯ ಮೋಡದ ಕೆಂಪು, ರತ್ನನಿಗೆ ಜೀವನದ ಕ್ಷಣಿಕತೆಯ ಸಂದೇಶ ನೀಡಿದರೆ, ಎಸ್.ವಿ. ಪರಮೇಶ್ವರ ಭಟ್ಟರಿಗೆ ದಿನವನ್ನು ಹಾಳುಮಾಡಿದ್ದಕ್ಕೆ ಕೋಪಿಸಿಕೊಂಡ ಸೂರ್ಯನ ಕೆಂಗಣ್ಣು; ವಿಜ್ಞಾನಿ ಗೆಲಿಲಿಯೋಗೆ – ಇದು ಸೂರ್ಯ ಕಲೆಗಳನ್ನು ಗುರುತಿಸಲು ಸದವಕಾಶ! ಜ್ಞಾತೃನಿಷ್ಠ ಇಲ್ಲವೇ ವ್ಯಕ್ತಿನಿಷ್ಠ ಅನಿಸಿಕೆಗಳಲ್ಲಿ ವೈವಿಧ್ಯಕ್ಕೆ ಅವಕಾಶವಿರುವುದರಿಂದ ಒಂದೇ ವಸ್ತು ಅನೇಕ ಬಗೆಯ ಅಭಿವ್ಯಕ್ತಿಯಾಗಿ ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ ಕಾವ್ಯವು ನಾನಾರ್ಥಸಹಿತ. ವ್ಯಕ್ತಿಗತ ಅಂಶಗಳನ್ನು ಕನಿಷ್ಠವಾಗಿಸಿ ಸಾರ್ವತ್ರಿಕ ಹಂತದ ಸಾಧಾರಣೀಕರಣದಲ್ಲಿ ನೋಡುವುದರಿಂದ ವಿಜ್ಞಾನವು ಶಾಸ್ತ್ರ. ಪರಿಕ್ಷಣೆಯ ಸತ್ಯ ವಿಜ್ಞಾನದ ಗುರಿಯಾದರೆ, ಪರಿಭಾವನೆಯ ಹೊಳಹುಗಳು ಕಾವ್ಯದ ಸಿದ್ದಿ.

ಸತ್ಯಕ್ಕೂ ವೈಜ್ಞಾನಿಕ ಸತ್ಯಕ್ಕೂ ಅಂತರ ಕಡಿಮೆ. ವೈಜ್ಞಾನಿಕ ಸತ್ಯ ಹೆಚ್ಚು ನಿಖರವೂ, ಸ್ಪಷ್ಟವೂ ಪುನರ್ ಪರಿಶೀಲನೀಯವೂ ಆಗಿರುತ್ತದೆ.

ಆದರೆ ಕಾವ್ಯ ಸತ್ಯದ ರೀತಿ ಬೇರೆ. ಅದು ಸಂಕೇತಗಳ ಮೂಲಕ ಸತ್ಯವನ್ನು ಸೂಚಿಸುತ್ತದೆ / ನಿರ್ದೇಶಿಸುತ್ತದೆ. ಸತ್ಯವನ್ನು ಸೂಚಿಸುವುದರೊಂದಿಗೆ ಅದಕ್ಕೆ ಸಂಬಂಧಿತ ಭಾವ ವಿಶೇಷಗಳನ್ನೂ ಸಹಚರ್ಯೆಗಳ ಮೂಲಕ ಮನವರಿಕೆ ಮಾಡಿಕೊಡುತ್ತದೆ. “ಅರಿವು ಮರೆದಪಕೀರ್ತಿ ನಾರಿಯ ಸೆರಗ ಹಿಡಿದರು‘’ ಎಂದು ಹೇಳುವಾಗ ಅಪಕೀರ್ತಿಯು ಹೆಣ್ಣೇ? ಸೆರಗು ಹಿಡಿದಾಕ್ಷಣ ಅದು ವ್ಯಭಿಚಾರವೆಂದೇ? ಎಂಬುದು ಅಪ್ರಸ್ತುತ. ಇಲ್ಲಿ ಸಂವಹನವಾಗತಕ್ಕದು ಸಾಹಸವಂತನಾಗಬೇಕಾಗಿದ್ದ ಉದಾತ್ತಗಂಡು, ತನ್ನ ಗಂಡಸುತನವನ್ನು ಹೀನಾಯವಾದ ಲಂಪಟತನಕ್ಕೆ ತೊಡಗಿಸುವುದು, ಅದರ ಪರಿಣಾಮವಾಗಿ ಅವನಿಗಾಗುವ ಅವನತಿಯೂ ಈಗ ಎಸಗಿದ ಹೀನಾಯ ಕೃತ್ಯದ ಪರಿಣಾಮವೂ ಒಂದೇ ಎನ್ನುವುದಷ್ಟೇ ಭಾವ. ಕಾವ್ಯ ಯಥಾರ್ಥವನ್ನು ಒಳಗೊಂಡೋ, ಅದನ್ನು ಮೀರಿಯೋ, ಅದನ್ನು ತಿರಸ್ಕರಿಸಿಯೋ ಬೇರೆ ಅರ್ಥ, ಭಾವನೆಗಳನ್ನು ಧ್ವನಿಸುತ್ತದೆ. ಈ ಸೂಚನೆಯನ್ನೇ ಕಾವ್ಯಸತ್ಯವೆನ್ನುವುದು.

ವೈಜ್ಞಾನಿಕ ಸತ್ಯ ಖಚಿತವಿದ್ದಷ್ಟೂ, ನಿಸ್ಸಂದಿಗ್ಧವಿದ್ದಷ್ಟೂ, ಏಕೈಕ ಅರ್ಥಪ್ರತಿಪಾದಿಸಿದಷ್ಟೂ ಹೆಚ್ಚು ವೈಜ್ಞಾನಿಕವಾಗುವುದು. ಇದರ ವಿಶೇಷ, ವಸ್ತುನಿಷ್ಠತೆ. ಇದು ಸಾರ್ವತ್ರಿಕ, ಸಾರ್ವಕಾಲಿಕ, ಸರ್ವತ್ರ ತಾಳೆ ನೋಡಬಲ್ಲ ಅಂಶಗಳನ್ನು ಇಟ್ಟುಕೊಳ್ಳುವುದು. ಆದರೆ ಕಾವ್ಯಸತ್ಯ ಹಾಗಲ್ಲ. ಹೆಚ್ಚು ಅರ್ಥೈಸುವಿಕೆಯನ್ನು ಒಳಗೊಂಡಷ್ಟೂ ಅದು ಹೆಚ್ಚು ಕಾವ್ಯಮಯ. ಅರ್ಥ ಸಾಧ್ಯತೆಯ ಹೆಚ್ಚಳ ಕಾವ್ಯದ ಮೆರುಗಿಗೆ ಮಾನದಂಡ. “ಬಣ್ಣದ ತಗಡಿನ ತುತ್ತೂರಿ‘’ ಶ್ರೀಮಂತನ ಐಶ್ವರ್ಯವನ್ನು, ಯುವಕನ ಯೌವನವನ್ನು, ದೇಹದಾರ್ಢ್ಯತೆಯನ್ನು ಇನ್ಯಾವುದೇ ಕಾಲಮಿತಿಯ ಸ್ವಂತ ಅಂಶವನ್ನು ಒಟ್ಟಿಗೆಯೇ ಪ್ರತಿನಿಧಿಸುವುದು. ಕೆ.ಎಸ್.ನ ಅವರ ಭಾಷೆಯಲ್ಲಿ ಹೇಳುವುದಾದರೆ “ಅಗೆವ ಬುದ್ದಿ‘ಗೆ `ಅನಂತ ಅವಕಾಶ‘ ನೀಡುವುದು ಕಾವ್ಯದ ಮೆರುಗು! ವಿಭಿನ್ನ ರೀತಿಯ ಅರ್ಥೈಕೆ ಸಾಧ್ಯವಿರುವುದರಿಂದ ಇದು ಬೇರೆ ಅರ್ಥಗಳಿಗೆ ಎಡೆಮಾಡುವ ಸಾಧ್ಯತೆ ಇದೆ. ಕೆಲವೊಮ್ಮೆ ಇದು ಸಂವಹನೆಯ ಇತಿಮಿತಿಯಾಗಿ ಬಿಡುವುದೂ ಉಂಟು. ಇಷ್ಟಾದರೂ ಸಾಹಿತ್ಯದಿಂದ ವೈಜ್ಞಾನಿಕ ಅಂಶಗಳನ್ನು ಅರಿಯುವ, ಅರ್ಥೈಸುವ ಪ್ರಯತ್ನಕ್ಕೆ ಆಸ್ಪದ ಉಂಟು.

“ವಿಶ್ವದ ಪ್ರತಿಬಿಂಬ ಮರಳಿನ ಕಣದಲ್ಲಿ‘’ ಎಂಬ ವಾಕ್ಯ ಬ್ಲೇಕನ ಪದ್ಯವೊಂದರಲ್ಲಿದೆ. ವಾಸ್ತವವಾಗಿ ಪರಮಾಣುವಿನ ಒಟ್ಟಾರೆ ರಚನೆ, ಗ್ರಹಗಳನ್ನು ಒಳಗೊಂಡ ಸೂರ್ಯಮಂಡಲದ ವ್ಯವಸ್ಥೆಯನ್ನು ಹೋಲುತ್ತದೆ ಎಂಬುದು ಇತ್ತೀಚೆಗೆ ಕಂಡುಬಂದ ಅಂಶ. ಎರಡು ತೀರ್ಮಾನಗಳಲ್ಲಿನ ಸಾಮ್ಯ ಬೆರಗು ಹುಟ್ಟಿಸುವಂತಹದು. ಹಾಗೆಂದರೆ ಬ್ಲೇಕ್‌ನನ್ನು ವಿಜ್ಞಾನಿ ಎನ್ನಬೇಕಾಗಿಲ್ಲ. ಆದರೆ ವಿವಿಧ ದಿಕ್ಕಿನ ಆಲೋಚನೆ ಕ್ರಮ ಒಂದು ಬಿಂದುವಿನಲ್ಲಿ ಕ್ವಚಿತ್ತಾಗಿ ಸಂಧಿಸಿದೆ ಎನ್ನಬಹುದು.

ವಿಜ್ಞಾನ ಕಲಿತ ಕೆಲವರು ಸಾಹಿತ್ಯವನ್ನು ಅನೇಕ ವೇಳೆ ಅಸಂಬದ್ಧ ಪ್ರಲಾಪವೆನ್ನುವುದುಂಟು. ಸಾಹಿತಿ ಜೊನಾಥನ್ ಸ್ವಿಫ್ಟ್ ತನ್ನ “ಗಲಿವರನ ಯಾತ್ರೆ‘’ ಎಂಬ ಕೃತಿಯಲ್ಲಿ ವಿಜ್ಞಾನಿಗಳನ್ನು ಕುರಿತು ನಗೆಯಾಡಿದ್ದುಂಟು. ಗಲಿವರನು ಹೋದ ಬ್ರಾಬ್ಡಿಂಗ್ನಾಗ್ ಎಂಬಲ್ಲಿ ವಿಜ್ಞಾನಿಗಳನ್ನು ಆತ ಭೇಟಿಯಾಗುತ್ತಾನೆ. ಅಲ್ಲಿನ ವಿಜ್ಞಾನಿಗಳನ್ನು ವಿವರಿಸುವಾಗ ಸ್ವಿಫ್ಟ್ ವಿಜ್ಞಾನಿಗಳು ಅಸಂಬಂದ್ಧ ಕಾರ್ಯದಲ್ಲಿ ತೊಡಗಿದ್ದರು ಎನ್ನುವಂತೆ ವಿವರಿಸುವನು. ಉದಾ : “ಒಬ್ಬ ವಿಜ್ಞಾನಿ ಸೌತೆಕಾಯಿಯಿಂದ ಸೂರ್ಯಕಿರಣದ ಎಳೆಯನ್ನು ಹೊರತೆಗೆಯುತ್ತಿದ್ದ‘’ – ಎಂದು ಆತ ವಿವರಿಸುತ್ತಾನೆ. ಈ ಪಟ್ಟಿಯಲ್ಲಿದ್ದ ಒಂದು ಸಂಗತಿಯೆಂದರೆ ಬ್ರಾಬ್ಡಿಂಗ್ನಾಗ್‌ನ ವಿಜ್ಞಾನಿಯೊಬ್ಬ ಗಾಳಿಯನ್ನು ದ್ರಕರಿಸಲು ಪ್ರಯತ್ನಿಸುತ್ತಿದ್ದನೆಂಬ ಅಂಶ. ಆಗಿನ ಕಾಲಕ್ಕೆ ಅದು ಅಸಂಭಾವ್ಯವಾಗಿದ್ದರಿಂದ ಜನ ಅದನ್ನು ಓದಿ ನಕ್ಕಿರಬೇಕು. ಆದರೆ ಈಗ! ಆಗ ನಕ್ಕವರನ್ನು ನೋಡಿ ನಾವು ನಗಬಹುದು. ಏಕೆಂದರೆ ವಿಜ್ಞಾನಿಗಳು ನೈಟ್ರೋಜನ್ನಿನ ದ್ರಕರಣವನ್ನು ಸಂಭವನೀಯವೆಂದು ಸಾಧಿಸಿ ತೋರಿಸಿದ್ದಾರೆ! ಬ್ಲೇಕನ ಊಹೆ ನಿಜವಾದದ್ದು ಅಚ್ಚರಿಯಾದರೆ; ಸ್ವಿಫ್ಟ್‌ನ ಊಹೆ ಸುಳ್ಳಾಗಿ, ನಗೆಯಾಡಲು ಹೋಗಿ ನಗೆಪಾಟಲಾದ ಪ್ರಸಂಗ.

ಕಾವ್ಯವೆನ್ನುವುದು ಮಾನವರ ವರ್ತನೆಯ ಪ್ರತಿಪಾದನೆಯಷ್ಟೇ. ಇದು ಮನಶ್ಶಾಸ್ತ್ರದ ಅಧ್ಯಯನಕ್ಕೆ ಉತ್ತಮ ಸಾಮಗ್ರಿಯಾಗಬಲ್ಲುದು. ಅಷ್ಟೇಕೆ ಮನಶ್ಶಾಸ್ತ್ರದಲ್ಲಿ ಬಳಕೆಯಾಗುವ ಅನೇಕ ಶಬ್ದಗಳು ಗ್ರೀಕ್ ಪುರಾಣ ಪಾತ್ರಗಳವು (ಉದಾಹರಣೆಗೆ ನಾರ್ಸಿಸಸ್ ಕಾಂಪ್ಲೆಕ್ಸ್, ಈಡಿಪಸ್ ಕಾಂಪ್ಲೆಕ್ಸ್ ಮುಂತಾದ ಶಬ್ದಗಳು) ಮಾತ್ರವಲ್ಲ, ಆ ಪಾತ್ರದ ವರ್ತನೆಯ ಮಾದರಿಯನ್ನು ಆಧರಿಸಿದವುಗಳು.

ಜನಪದ ಸಾಹಿತ್ಯದಲ್ಲಿ, ಪುರಾಣಗಳಲ್ಲಿ ಬರುವ ಕಥೆಗಳನ್ನು ಮನಶ್ಶಾಸ್ತ್ರದ ದೃಷ್ಟಿಯಿಂದ ಅರ್ಥೈಸುವುದು ನಿರಂತರವಾಗಿ ನಡೆದಿದೆ.

ಮಾನವ ಸ್ವಭಾವದ ಸೂಕ್ಷ್ಮ ವಿವರಣೆ ನೀಡುವುದರ ಜೊತೆಗೆ, ನಿಸರ್ಗದ ವಿವರಣೆಯೂ ಕಾವ್ಯದಲ್ಲಿ ಹೇರಳವಾಗಿ ದೊರೆಯುತ್ತದೆ. ಆ ವಿವರಣೆಗಳನ್ನು ವೈಜ್ಞಾನಿಕತತ್ವದ ಆಧಾರದ ಮೇಲೆ ವಿವರಿಸುವುದು ಸ್ವಾರಸ್ಯಕರವಾದದ್ದು. ಸೂಕ್ಷ್ಮ ಅವಲೋಕನದಿಂದ (ಇದೂ ವೈಜ್ಞಾನಿಕ ವಿಧಾನದ ಅಂಗ) ದಾಖಲಿಸಿರುವ ವಿವರಣೆಗಳನ್ನು, ವೈಜ್ಞಾನಿಕ ತತ್ತ್ವಗಳ ಮೂಲಕ ಅಥೈಸಲು ಸಾಧ್ಯ. ಉದಾಹರಣೆಗೆ “ಮಾರಿಗುಬ್ಬಸವತಹೆ‘’ ಎಂಬ ಮಾತು ಕುಮಾರವ್ಯಾಸ ಭಾರತದಲ್ಲಿ ಪ್ರಸ್ತಾಪವಿದೆ. ಶತೃಗಳನ್ನು ಕೊಂದು, ಮಾರಿಗೆ ಹೆಚ್ಚಾಗಿ ಆಹಾರವಾಗಿ ನೀಡಿ ಆಕೆಗೆ ಉಬ್ಬಸವನ್ನುಂಟು ಮಾಡುವೆ ಎಂದು ಇದರರ್ಥ. ಹೆಚ್ಚಾಗಿ ಆಹಾರ ಸೇವಿಸಿದಾಗ ಜಠರದ ಪೊರೆಯ ಚಲನೆಗೆ ಅಡ್ಡಿಯಾಗಿ ಉಸಿರಾಟ ಉಬ್ಬಸದ ರೀತಿಯಲ್ಲಿ ಆಗುತ್ತದೆ. ಜಠರದ ಪೊರೆಯ ಚಲನೆಯನ್ನು ಕುರಿತು ಹೇಳುವಾಗ ಕರ್ನಾಟ ಭಾರತ ಕಥಾ ಮಂಜರಿಯ ವಾಕ್ಯದಿಂದ ಪ್ರಾರಂಭಿಸಿ ಹೇಳುವುದು ಎಷ್ಟು ರಂಜನೀಯ ಅನುಭವವಾದೀತು!

ಇದೇ ರೀತಿ ಜನರ ಆಡುಮಾತಿನ ಪದಗುಚ್ಛಗಳಲ್ಲಿ, ನಂಬಿಕೆಗಳಲ್ಲಿ, ಗಾದೆಗಳಲ್ಲಿ, ಒಗಟುಗಳಲ್ಲಿ, ವಸ್ತುಗಳನ್ನು ಪರಿಭಾವಿಸುವ ಕ್ರಮದಲ್ಲಿ – ವೈಜ್ಞಾನಿಕವಾದ / ಅವೈಜ್ಞಾನಿಕವಾದ ಅನೇಕ ಅಂಶಗಳಿವೆ. ಅವುಗಳನ್ನು ಸ್ವತಃಸಿದ್ಧ ಸತ್ಯಗಳೆಂದು ಭಾವಿಸಿರುವ ಮುಗ್ಧ ಜನರಿಗೆ ಈ ಬಗೆಯ ವೈಜ್ಞಾನಿಕ ವಿಶ್ಲೇಷಣೆ ಒದಗಿಸುವುದರಿಂದ, ವಿಜ್ಞಾನದ ಬಗ್ಗೆ ಈಗಿರುವ ಪರಕೀಯಪ್ರಜ್ಞೆ ಕಡಿಮೆಯಾಗುವುದರಲ್ಲಿ ಸಂದೇಹವೇ ಇಲ್ಲ.

Twinkle twinkle little star
How I wonder what you are
up above the world so high
Like a diamond in the sky

“ಮಿನುಗು ಮಿನುಗೆಲೆ ಓ ನಕ್ಷತ್ರ
ನೀನೇನೆಂಬುದು ನನಗೆ ವಿಚಿತ್ರ
ನಿನ್ನಯ ನೆಲೆಯದು ನೆಲದಿಂದೆತ್ತರ
ಬಾನಲಿ ಕಾಣುವ ಹರಳಿನ ಚಿತ್ತರ‘’

ಪ್ರಸಿದ್ಧವಾದ ಈ ಪದ್ಯಕ್ಕೆ ಒಬ್ಬಾತ ಅಣಕು Uತೆ ರಚಿಸಿದ

Twinkle twinkle little star
I do not wonder what you are
up above in the heaven
you contain nothing but Hydrogen

ಮಿನುಗು ಮಿನುಗೆಲೆ ಕಿರುನಕ್ಷತ್ರ
ನಿನ್ನಿರವೆನಗೀಲ್ಲ ವಿಚಿತ್ರ
ಅಂಬರದಲ್ಲಿಹ ನಿನ್ನೊಡಲನಕ
ತುಂಬಿಕೊಂಡಿದೆ ಜಲಜನಕ

ವಿಜ್ಞಾನವು ಕುತೂಹಲ ಕಳೆದು ಬಿಡುವುದೆಂಬುದನ್ನು ಸೂಚಿಸಲು ಬರೆದ ಪದ್ಯವೆಂದು ಇದನ್ನು ಭಾವಿಸಲಾಗಿತ್ತು. ಆದರೆ ಅನೇಕ ವರ್ಷಗಳ ನಂತರ ಇದನ್ನು ಬೇರೆ ಅರ್ಥದಲ್ಲಿ ಭಾವಿಸಲಾಯಿತು. ವಿಜ್ಞಾನವು ಕುತೂಹಲದ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಲೇ, ಮತ್ತಷ್ಟು ಕುತೂಹಲವನ್ನು ಹುಟ್ಟಿಸಬಲ್ಲದಾದ್ದರಿಂದ ಕುತೂಹಲ ನಷ್ಟವಾಗುತ್ತದೆಂದು ನಂಬಿದವರನ್ನು ಗೇಲಿಮಾಡಲು ಬರೆದ ಚುಟುಕ ಎಂದು ಮಾನ್ಯ ಮಾಡಲಾಯಿತು. ನಕ್ಷತ್ರದಲ್ಲಿ ಏನಿದೆ ಎಂಬುದು ತಿಳಿಯಿತು; ಆದರೆ ಎಷ್ಟಿದೆ? ಏಕಿದೆ? ಹೇಗಿದೆ? ಎಂಬ ಮತ್ತಷ್ಟು ಗಹನ, ಕುತೂಹಲಕರ ಪ್ರಶ್ನೆಗೆ ವಿಜ್ಞಾನದ ಈ ಉತ್ತರ ಎಡೆಮಾಡಿಕೊಟ್ಟಿದೆ ಅಲ್ಲವೇ?

ವಿಜ್ಞಾನದಲ್ಲಿಯೂ ಸಾಹಿತ್ಯಕ ಅಂಶಗಳುಂಟೋ? ವೈಚಾರಿಕ ಸಂಗತಿಗಳಲ್ಲಿ ಭಾವುಕತೆ ಇರುವ ಸಾಧ್ಯತೆ ತೀರಾ ಕಡಿಮೆ. ಕೆಲವು ವಸ್ತುಗಳನ್ನು, ಸಂಗತಿಗಳನ್ನು ಹೆಸರಿಸುವಾಗ ಭಾವುಕ, ಮಾನವಧ್ಯಾರೋಪಿತ (Anthrophomorphic) ವಿಧಾನಗಳು ಕಂಡುಬರುತ್ತದೆ. ಉದಾಹರಣೆಗೆ `Weeping of the Gel’’ ಜೆಲ್ಲಿಯಂತಹ ವಸ್ತು ತಂತಾನೇ ನೀರು ಒಸರುವುದು (ಉದಾ : ಅನ್ನ ಹಳಸುವಂತೆ) ಅದನ್ನು ಜೆಲ್ ಅಳು ಎಂದು ಹೇಳುವುದುಂಟು.

ಇದಲ್ಲದೆ ವಿಜ್ಞಾನಕ್ಕೆ ಸಾಹಿತ್ಯದ ಪಾರಿಭಾಷಿಕಗಳ ಕೊಡುಗೆ ಗಣನೀಯವಾಗಿದೆ. (ಆದರೆ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಕನ್ನಡ ಸಾಹಿತ್ಯದಲ್ಲಿ ಬಳಕೆ ಮಾಡುವ ಕಾರ್ಯ ಇನ್ನೂ ಆಗಬೇಕಾಗಿದೆ). ಟಿ.ಎಸ್. ಇಲಿಯಟ್ ವಿಮರ್ಶೆಯನ್ನು ಕ್ರಿಯಾವರ್ಧನೆ (catalysis)ಗೆ ಹೋಲಿಸುತ್ತಾನೆ. Siphon, Friction, Vacuum, Reflection, Refraction. ಹೀಗೆ ಅನೇಕ ಪದಗಳು ಆಂಗ್ಲ ಸಾಹಿತ್ಯಗಳಲ್ಲಿ ಬಳಕೆಯಾಗಿವೆ. ನೈಸರ್ಗಿಕ ಘಟನೆಗಳು ಸಾಹಿತ್ಯಕ್ಕೆ ದೃಷ್ಟಾಂತಗಳನ್ನು, ರೂಪಕ, ಉಪಮೆಗಳನ್ನು ಒದಗಿಸಿರುವುದುಂಟು. ಖಾಸಗಿ ಅನುಭವ ಸಾರ್ವತ್ರೀಕರಣಗೊಂಡು ಅಮೂರ್ತಗೊಳ್ಳುವ ಕಾವ್ಯವಾಗುವ ಸ್ಥಿತಿಯನ್ನು ನೀರು ಆವಿಯಾಗುವ ಕ್ರಿಯೆಗೆ ಹೋಲಿಸಲಾಗಿದೆ.

ಸಾಹಿತ್ಯ, ವಿಜ್ಞಾನಗಳಲ್ಲಿ ಪರಸ್ಪರ ಒಳಗೊಳ್ಳುವಿಕೆಯನ್ನು ಪರಿಗಣಿಸಲಾಯಿತು. ಸಾಹಿತಿ, ವಿಜ್ಞಾನಿಗಳು ಪರಸ್ಪರ ಗೌರವದಿಂದ ನಡೆದುಕೊಂಡ ಪ್ರಸಂಗಗಳನೇಕ. ಟೆನಿಸನ್ ವಿಜ್ಞಾನದ ಉಪನ್ಯಾಸಗಳಿಗೆ ಹೋಗುತ್ತಿದ್ದುದು, ವಿಜ್ಞಾನಿಗಳೇಕರು ಸ್ವತಃ ಕವಿಗಳು, ಕನಸುಗಾರರೂ ಆಗಿದ್ದುದು ಗೊತ್ತಿರುವ ಅಂಶಗಳೇ. ಹೊಸ ಜಗತ್ತೆಂದರೆ, ಬೇರೊಂದು ಜಗತ್ತಲ್ಲ; ಇರುವ ಜಗತ್ತನ್ನೇ ಹೊಸಕಣ್ಣಿನಿಂದ ಹೊಸ ನೆಲೆಯಿಂದ ನೋಡುವ ಕ್ರಮ / ವಿವರಣೆ.

ಸೃಜನಶೀಲತೆ ಕವಿಗಳಿಗೂ, ವಿಜ್ಞಾನಿಗಳಿಗೂ ಅನ್ವಯವಾಗುವಂತಹದು. ಆರ್ಥರ್ ಕೊಯ್ಲರ್ ಸೃಜನಶೀಲತೆಯ ಬಗ್ಗೆ ಹೇಳುತ್ತಾ ಮೇಲುನೋಟಕ್ಕೆ ಪರಸ್ಪರ ಸಂಬಂಧವಿಲ್ಲದ ಸಂಗತಿಗಳನ್ನು ಸಂಬಂಧದಿಂದ ಬೆಸೆಯುವ ಕ್ರಿಯೆಯೇ ಸೃಜನಶೀಲತೆ ಎಂದು ಹೇಳಿ ಇದು ವಿಜ್ಞಾನಿಗಳಲ್ಲೂ, ಸಾಹಿತಿಗಳಲ್ಲೂ, ಅವರವರ ಕ್ಷೇತ್ರಗಳಲ್ಲಿ ಅವರದೇ ಆದ ರೀತಿಯಲ್ಲಿ ವ್ಯಕ್ತವಾಗುವ ಸಾಮಾನ್ಯ ಅಂಶ ಎಂದು ತನ್ನ “Act of creation’’ ಎಂಬ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾನೆ.

ನೀರಸ ಸಂಗತಿಗಳ ಮೊತ್ತವೆಂಬ ಪೂರ್ವಗ್ರಹ ಮೂಡುವಂತೆ ವಿಜ್ಞಾನವನ್ನು ಕಲಿಸಲಾಗುತ್ತಿದೆ. ಇದನ್ನು ಭಾವುಕವಾಗಿ ಹೇಳಿ ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಸಾಹಿತ್ಯವು ಸಹಜವಾಗಿಯೇ ಉಪಯುಕ್ತವಾಗಬಲ್ಲದು. ಈ ಪ್ರಯತ್ನಕ್ಕೆ ಮಾದರಿಯನ್ನೊದಗಿಸುವ ಸಲುವಾಗಿ ಕೆಲವು ಗಾದೆ, ಒಗಟು, ಸಾಹಿತ್ಯದ ವಾಕ್ಯಗಳು, ಪ್ರಚಲಿತ ನಂಬಿಕೆಗಳು, ನುಡಿಕಟ್ಟುಗಳು ಮುಂತಾದುವುಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಮರುಪರಿಶೀಲಿಸಲು ಅವಕಾಶವಿದೆ.

ಕಾವ್ಯದ ವರ್ಣನೆಗಳನ್ನು ಆಧರಿಸಿ ಕವಿಗೆ ವಿಜ್ಞಾನ, ತಂತ್ರಜ್ಞಾನದ ಅರಿವಿದೆ ಎಂದು ಪ್ರತಿಪಾದಿಸಲು ಆತುರಪಡುವವರು ಅನೇಕ ವೇಳೆ ಬಳಕೆಯಾಗಿರುವ ಒಂದೆರಡು ಶಬ್ದಗಳನ್ನು ಆಧರಿಸುತ್ತಾರೆ. ಹೀಗೆ ಮಾಡಿದಾಗ ಅನೇಕ ವೇಳೆ ಕಾವ್ಯಕ್ಕೂ ವಿಜ್ಞಾನಕ್ಕೂ ಒಟ್ಟಾಗಿಯೇ ಅಪಚಾರವಾಗುವುದುಂಟು. `ವಿಮಾನ‘ ಶಬ್ದದಿಂದ ಹಾರಾಟದ ತಂತ್ರಜ್ಞಾನ ಗೊತ್ತಿತ್ತೆಂದೋ, ಈಶ್ವರನ ಮೂರನೇ ಕಣ್ಣು ಲೇಸರ್ ಉತ್ಪಾದಕವೆಂದೋ ವಾದಿಸುವುದುಂಟು. ಆದರೆ ವಿಮಾನ, ಲೇಸರ್‌ಗಳು ತಿಳಿದಿರಬೇಕಾದರೆ ಇರಬಹುದಾದ ಮೂಲ ಜ್ಞಾನಕ್ಕೆ ಅದೇ ಕವಿಯ ಉಳಿದ ವಿವರಣೆಗಳು ಬೆಂಬಲವಾಗಿರುವುದಿಲ್ಲ. ಹೀಗಾಗಿ ಅನೇಕ ಆಧಾರಗಳು ದೊರೆಯದ ಹೊರತು ಶಬ್ದದ ಅಪರೂಪದ ಸಾಮ್ಯತೆಗಳನ್ನು ಒಪ್ಪಲಾಗುವುದಿಲ್ಲ. ಇದರಿಂದ ಕಾವ್ಯಕ್ಕೂ ಅನ್ಯಾಯವೇ. ಏಕೆಂದರೆ ಕಾವ್ಯಸತ್ಯವನ್ನು ಯಥಾರ್ಥ ಸತ್ಯವೆಂದು ಭಾವಿಸಿರುವುದರಿಂದಲೇ ಈ ದೋಷ ಉಂಟಾಗುವುದು. ಕವಿಯು ಮುಂದಿಡುವುದು ಕಲ್ಪನೆಯನ್ನು. ವಿಜ್ಞಾನಕ್ಕೆ ಬೇಕಾದುದು ಪರಿಕಲ್ಪನೆಯ ಸೂಚನೆ.

ಅಭಿಪ್ರಾಯಗಳೂ ಹೀಗೆಯೇ. “ಪುರಾನಮಿತ್ಯೇವ ನಸಾಧುಸರ್ವಂ‘’ ಎಂದು ಕಾಳಿದಾಸ ಹೇಳುವುದರಿಂದ ಅವನು ವೈಜ್ಞಾನಿಕ ಚಿಂತನೆಕಾರನೆಂದು ಒಬ್ಬರು ವಾದಿಸಿದರು. ಆದರೆ ಅದೇ ಕವಿ “ಸಂತರಾದರ್ಗೆ ತಮ್ಮ ಮನಃಪರಿವರ್ತನೆಯೇ ಪ್ರಮಾಣಮಕ್ಕುಂವರಂ‘’ ಎಂದು ದುಷ್ಯಂತನ ಬಾಯಿಯಿಂದ ಹೇಳಿಸಿದಾಗ ಅವನ ವೈಜ್ಞಾನಿಕತೆಯನ್ನು ಒಪ್ಪಬಹುದೇ? ದುಷ್ಯಂತನಿಗೆ ಶಕುಂತಲೆಯ ಬಗ್ಗೆ ಪ್ರೇಮಾಂಕುರವಾದಾಗ, ಕ್ಷತ್ರಿಯನಾದವನು ಬ್ರಾಹ್ಮಣ ಕನ್ಯೆಯನ್ನು ಪ್ರೇಮಿಸಿದ್ದು ಸರಿಯೇ ಎಂಬ ಸಂದೇಹ ಮೂಡುತ್ತದೆ. (ಪ್ರಶ್ನೆಯೇ ಅವೈಜ್ಞಾನಿಕ) ಅದಕ್ಕೆ ದುಷ್ಯಂತ ಕೊಟ್ಟುಕೊಳ್ಳುವ ಸಮರ್ಥನೆ `ತಾನು ಸಂತನಾಗಿರುವುದರಿಂದ ತನ್ನಲ್ಲಿ ಉಂಟಾದ ಪ್ರೇಮವೇ ಆಕೆ ಬ್ರಾಹ್ಮಣಕನ್ಯೆಯಲ್ಲ ಎನ್ನುವುದಕ್ಕೆ ಸಾಕ್ಷಿ‘ ಎಂಬ ಉತ್ತರ, ಅವನ ಮನಃ ಪರಿವರ್ತನೆಯಿಂದಲೇ ಸತ್ಯವಾದೀತೇ? (ಕಾವ್ಯದಲ್ಲೇನೋ ಅದು ಸತ್ಯವೆಂದು ಸೂಚಿತವಾಗಿದೆ). ಅದನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡರೂ ತಾನು ಸಂತನೆಂದು ತನಗೆ ತಾನೇ ಮಾನ್ಯತೆಕೊಟ್ಟುಕೊಳ್ಳುವುದು (ಅದೂ ಆಗ ತಾನೇ ಪರಸ್ತ್ರೀಯನ್ನು ಕದ್ದು ನೋಡಿ, ಬಯಸಿದಾಗ) ಯಾವ ವೈಜ್ಞಾನಿಕತೆ?

ಹೀಗೆ ಹೇಳಿದಾಗ ನನ್ನ ವಾದ ಕಾಳಿದಾಸನು ಪೂರ್ಣ ಅವೈಜ್ಞಾನಿಕನೆಂದು ಹೇಳಹೊರಡುವುದಿಲ್ಲ. ವೈವಿಧ್ಯಮಯ ಸನ್ನಿವೇಶದಲ್ಲಿ, ವೈವಿಧ್ಯಮಯ ಪಾತ್ರಗಳ ಮೂಲಕ, ಇಲ್ಲವೇ ಕ್ಷಣದ ಉದ್ಗಾರವಾಗಿ, ಅನೇಕ ನಿಲುವಿನ ಮಾತುಗಳನ್ನು ಕವಿ ಬರೆಯುವುದು ಅನಿವಾರ್ಯ. ಅದರಲ್ಲಿ ಒಂದು ಎಳೆಯನ್ನು ಹಿಡಿದು ಇದೇ ಕವಿಯ ನಿಲುವು ಎನ್ನುವುದು `ಅರ್ಧ ದೃಷ್ಟಿಯ ವಿವರ‘ ಎನ್ನುವುದಷ್ಟೇ ನನ್ನ ಉದ್ದೇಶ. ಕಾಳಿದಾಸ `ಪುರಾಣಮಿತ್ಯೇವ ನಸಾಧುಸರ್ವಂ‘ ಎಂದು ಹೇಳಿದ್ದು ಹಿಂದಿನ ಕಾವ್ಯಗಳಿಗೇ ವಿನಾ ಹಿಂದಿನ ಅಭಿಪ್ರಾಯಗಳಿಗಲ್ಲ ಎಂಬುದನ್ನು ಮರೆಯಬಾರದು.

ಕಾವ್ಯದ ಭಾವಸತ್ಯ ಮತ್ತು ವಿಜ್ಞಾನದ ವಿಚಾರ ಸತ್ಯ ಕೆಲವೊಮ್ಮೆ ಕೂಡಿಕೊಳ್ಳುವುದು ಹಾಗೂ ಮತ್ತೆ ಕೆಲವೊಮ್ಮೆ ದೂರ ಸರಿಯುವುದು. ಈ ಸಂಬಂಧವನ್ನು ತಾಳೆನೋಡುವುದು ಆನಂದದಾಯಕ.